ಸತ್ಯವು ಜೀವಿತಗಳನ್ನು ಪರಿವರ್ತಿಸುತ್ತದೆ
ಇಂದು ಅನೇಕ ಜನರ ಜೀವಿತಗಳು ಕಷ್ಟಕರವೂ ಅಪಾಯಸಂಭವದಲ್ಲಿಯೂ ಇವೆ ಎಂಬುದು ದುಃಖಕರ ಸಂಗತಿಯಾದರೂ ಸತ್ಯವಾಗಿದೆ. ಅಂಥ ಜನರಿಗೆ ಸಂತೋಷವನ್ನು ಕಂಡುಕೊಳ್ಳುವುದು ಸಾಧ್ಯವೋ? ಕೆಲವರು ಪಾತಕಿಗಳಾಗಿದ್ದು, ತಮ್ಮ ಜೊತೆಮಾನವರನ್ನು ಸುಲಿಗೆಮಾಡುತ್ತಾರೆ. ಅವರು ಎಂದಾದರೂ ಸಮಾಜದ ಪ್ರಾಮಾಣಿಕ ಸದಸ್ಯರಾಗಿ ಪರಿಣಮಿಸಸಾಧ್ಯವೋ? ಈ ಎರಡೂ ಪ್ರಶ್ನೆಗಳಿಗೆ ಉತ್ತರವು ಹೌದು ಎಂದಾಗಿದೆ. ಜನರು ಬದಲಾಗಸಾಧ್ಯವಿದೆ. ಜೀವಿತಗಳು ಪರಿವರ್ತನೆಗೊಳ್ಳಸಾಧ್ಯವಿದೆ. ಇದನ್ನು ಹೇಗೆ ಸಾಧಿಸಸಾಧ್ಯವೆಂಬುದನ್ನು ಅಪೊಸ್ತಲ ಪೌಲನು ಹೀಗೆ ಬರೆದಾಗ ತೋರಿಸಿದನು: “ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವ ಮೂಲಕ ಪರಿವರ್ತಿತರಾಗಿರಿ; ಹೀಗೆ ದೇವರ ಒಳ್ಳೆಯ, ಸ್ವೀಕಾರಯೋಗ್ಯವಾದ ಮತ್ತು ಪರಿಪೂರ್ಣ ಚಿತ್ತವನ್ನು ನೀವು ನಿಮಗೆ ರುಜುಪಡಿಸಿಕೊಳ್ಳಬಹುದು.”—ರೋಮಾಪುರ 12:2, NW.
“ದೇವರ ಪರಿಪೂರ್ಣ ಚಿತ್ತ”ದ ಉಲ್ಲೇಖವು, ಈ ಮೇಲಿನ ಪದಗಳನ್ನು ಪೌಲನು ಬರೆಯುವುದಕ್ಕೆ 20ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಯೇಸು ತನ್ನ ಶಿಷ್ಯರಿಗೆ ಏನನ್ನು ಹೇಳಿದನೋ ಅದನ್ನು ಜ್ಞಾಪಿಸಬಹುದು. ಯೇಸು ಹೇಳಿದ್ದು: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:31, 32) “ಸತ್ಯ” ಎಂದು ಹೇಳುವ ಮೂಲಕ ಯೇಸು, ನಮಗಾಗಿ ಬೈಬಲಿನಲ್ಲಿ ಸುರಕ್ಷಿತವಾಗಿಡಲ್ಪಟ್ಟಿರುವ ದೈವಿಕವಾಗಿ ಪ್ರೇರಿತಗೊಂಡಿರುವ—ವಿಶೇಷವಾಗಿ ದೇವರ ಚಿತ್ತದ ಕುರಿತಾದ—ಮಾಹಿತಿಯನ್ನು ಅರ್ಥೈಸಿದನು. (ಯೋಹಾನ 17:17) ಬೈಬಲ್ ಸತ್ಯವು ಜನರನ್ನು ನಿಜವಾಗಿಯೂ ಬಿಡುಗಡೆಗೊಳಿಸುತ್ತದೋ? ದೇವರ ಚಿತ್ತಕ್ಕನುಸಾರ ಜೀವಿಸುವುದು ಜೀವಿತಗಳನ್ನು ನಿಜವಾಗಿಯೂ ಪರಿವರ್ತಿಸುತ್ತದೋ? ನಿಶ್ಚಯವಾಗಿಯೂ ಪರಿವರ್ತಿಸುತ್ತದೆ. ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.
ಜೀವಿತದಲ್ಲಿ ಒಂದು ಉದ್ದೇಶ
ಸ್ವಲ್ಪ ಸಮಯಕ್ಕೆ ಮೊದಲು, ಜಿಬ್ರಾಲ್ಟರ್ನಲ್ಲಿರುವ ಮೊಯ್ಸೆಸ್ ಒಬ್ಬ ತೀರ ಅಸಂತುಷ್ಟ ವ್ಯಕ್ತಿಯಾಗಿದ್ದ. ಅವನು ಹೇಳವುದು: “ನಾನು ಕುಡುಕನಾಗಿದ್ದು, ರಸ್ತೆಯಲ್ಲಿ ಮಲಗುತ್ತಿದ್ದೆ. ನಾನು ದಿಕ್ಕುಕಾಣದವನಾದೆ. ನನ್ನ ಮೇಲೆ ದಯೆ ತೋರಿ, ಮತ್ತೊಂದು ದಿನವನ್ನು ನೋಡದಂತೆ ಮಾಡಲು ನಾನು ಪ್ರತಿ ರಾತ್ರಿ ದೇವರಲ್ಲಿ ಬೇಡಿಕೊಂಡೆ. ಪ್ರಯೋಜನಕ್ಕೆ ಬಾರದವನಾಗಿ, ನಿರುದ್ಯೋಗಿಯಾಗಿ, ಕುಟುಂಬವಿಲ್ಲದೆ ಹಾಗೂ ನನಗೆ ಸಹಾಯಮಾಡಲು ಯಾರೂ ಇಲ್ಲದಿರುವಾಗ ನಾನು ಹುಟ್ಟಿದ್ದಾದರೂ ಏಕೆ ಎಂದು ದೇವರನ್ನು ಕೇಳಿದಂತೆ ನಾನು ಅತ್ತುಬಿಟ್ಟೆ. ನಾನು ಏಕೆ ಜೀವಂತವಾಗಿರಬೇಕು?” ಆಗ ಏನೋ ಸಂಭವಿಸಿತು.
ಮೊಯ್ಸೆಸ್ ಮುಂದುವರಿಸುವುದು: “ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದ ರೋಬೆರ್ಟೋನನ್ನು ನಾನು ಸಂಧಿಸಿದಾಗ, ದೇವರು ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದನೆಂಬುದು ನನಗೆ ತಿಳಿದಿತ್ತು. ರೋಬೆರ್ಟೋ ನನಗೆ ಒಂದು ಬೈಬಲನ್ನೂ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬೈಬಲ್ ಅಧ್ಯಯನ ಸಹಾಯಕದ ಒಂದು ಪ್ರತಿಯನ್ನೂ ನೀಡಿದನು.a ನಾನು ರಾತ್ರಿ ಹೊತ್ತಿನಲ್ಲಿ ಮಲಗುತ್ತಿದ್ದ ಬೆಂಚಿನ ಮೇಲೆ ಪ್ರತಿ ದಿನ ನಾವು ಒಟ್ಟುಗೂಡಿ ಬೈಬಲನ್ನು ಅಧ್ಯಯನಮಾಡಿದೆವು. ಒಂದು ತಿಂಗಳಿನ ನಂತರ ರೋಬೆರ್ಟೋ ನನ್ನನ್ನು ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ನಡೆಯುವ ಕೂಟವೊಂದಕ್ಕೆ ಕರೆದುಕೊಂಡುಹೋದನು. ಬೇಗನೆ, ಬೈಬಲ್ ಸತ್ಯವು ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಮಾರ್ಪಡಿಸಿತ್ತು. ನಾನು ಈಗ ಹೊರಗಡೆ ಮಲಗುವುದಿಲ್ಲ, ಇಲ್ಲವೇ ಕುಡಿಯುವುದಿಲ್ಲ ಅಥವಾ ಧೂಮಪಾನ ಮಾಡುವುದಿಲ್ಲ. ನನ್ನ ಜೀವಿತವು ಬದಲಾಗಿದೆ ಮತ್ತು ನಾನು ಸಂತುಷ್ಟನಾಗಿದ್ದೇನೆ. ನಾನು ಬೇಗನೆ ದೀಕ್ಷಾಸ್ನಾನಪಡೆದುಕೊಂಡು, ಯೆಹೋವನನ್ನು ಆತನ ಸಾಕ್ಷಿಗಳಲ್ಲಿ ಒಬ್ಬನಾಗಿ ಸೇವಿಸಲು ಆಶಿಸುತ್ತೇನೆ.”
ಎಂಥ ಒಂದು ಪರಿವರ್ತನೆ! ಜನರು ನಿರೀಕ್ಷಾಹೀನರಾಗಿರುವಾಗ, ಕಾರಣವು ಅನೇಕ ವೇಳೆ ಜ್ಞಾನದ ಕೊರತೆಯಾಗಿದೆ. ಅವರಿಗೆ ದೇವರ ಅಥವಾ ಆತನ ಅದ್ಭುತಕರವಾದ ಉದ್ದೇಶಗಳ ಕುರಿತು ತಿಳಿದಿರುವುದಿಲ್ಲ. ಮೊಯ್ಸೆಸ್ನ ಸಂಬಂಧದಲ್ಲಿ, ಅವನು ಆ ಜ್ಞಾನವನ್ನು ಪಡೆದುಕೊಂಡಾಗ, ಅದು ಅವನ ಜೀವನ ಶೈಲಿಯನ್ನು ಬದಲಾಯಿಸಲು ಅವನಿಗೆ ಬಲವನ್ನೂ ಧೈರ್ಯವನ್ನೂ ನೀಡಿತು. ದೇವರಿಗೆ ಕೀರ್ತನೆಗಾರನು ಮಾಡಿದ ಪ್ರಾರ್ಥನೆಯು ಮೊಯ್ಸೆಸ್ನ ಸಂಬಂಧದಲ್ಲಿ ಉತ್ತರಿಸಲ್ಪಟ್ಟಿತು: “ನಿನ್ನ ಸತ್ಯಪ್ರಸನ್ನತೆಗಳನ್ನು [ದೂತರನ್ನೋ ಎಂಬಂತೆ] ಕಳುಹಿಸು; ಅವೇ ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಸೇರಿಸಲಿ.”—ಕೀರ್ತನೆ 43:3.
ಬೆಲೀಸ್ನಲ್ಲಿರುವ ಡ್ಯಾನ್ಯಲ್ಗೆ ಒಂದು ತುಲನಾತ್ಮಕವಾದ ಅನುಭವವಿತ್ತು. ಡ್ಯಾನ್ಯಲ್ ಮನೆಯಿಲ್ಲದವನಾಗಿರಲಿಲ್ಲ—ಅವನಿಗೆ ಒಂದು ಪ್ರತಿಷ್ಠಾನ್ವಿತ ಉದ್ಯೋಗವಿತ್ತು. ಆದರೆ ಅವನು 20 ವರ್ಷಗಳ ತನಕ ಅಮಲೌಷಧ ಹಾಗೂ ಮದ್ಯವ್ಯಸನದೊಂದಿಗೆ ಹೋರಾಡುತ್ತಾ, ಒಂದು ಅನೈತಿಕ ಜೀವನವನ್ನು ನಡೆಸಿದನು. ಒಬ್ಬ ಕ್ಯಾತೊಲಿಕನಾಗಿ ಬೆಳೆಸಲ್ಪಟ್ಟಿದ್ದನಾದರೂ, ಡ್ಯಾನ್ಯಲ್ ಜೀವಿತದಲ್ಲಿ ಯಾವುದೇ ಅರ್ಥವನ್ನು ಕಾಣಲಿಲ್ಲ ಹಾಗೂ ಅವನು ದೇವರ ಅಸ್ತಿತ್ವವನ್ನು ಸಂದೇಹಿಸಿದನು. ಅವನು ಸಹಾಯವನ್ನು ಹುಡುಕುತ್ತಾ ವಿಭಿನ್ನ ಚರ್ಚುಗಳಿಗೆ ಹೋದನಾದರೂ, ಚರ್ಚಿಗೆ ಹೋಗುವ ತನ್ನ ಅನೇಕ ಮಿತ್ರರು ಹಾಗೂ ವೈದಿಕ ಮಿತ್ರರಲ್ಲಿಯೂ ಕೆಲವರು ಅಮಲೌಷಧ ಅಥವಾ ಮದ್ಯವನ್ನು ದುರುಪಯೋಗಿಸುತ್ತಿದ್ದರು ಎಂಬುದನ್ನು ಕಂಡುಕೊಂಡನು. ಏತನ್ಮಧ್ಯೆ, ಅವನ ಪತ್ನಿ ಅವನಿಗೆ ವಿವಾಹವಿಚ್ಛೇದನವನ್ನು ನೀಡಲಿದ್ದಳು.
ಹತಾಶೆಗೊಂಡವನಾಗಿ ಡ್ಯಾನ್ಯಲ್ ಒಂದು ಪುನರುದ್ಧಾರ ಕೇಂದ್ರಕ್ಕೆ ಸೇರಿಕೊಂಡನು. ಆದರೂ ತಾನು ಅಲ್ಲಿಂದ ಹೊರಬಂದ ಮೇಲೆ, ತನಗೆ ಸಹಾಯವು ಸಿಗದಿದ್ದಲ್ಲಿ ಪುನಃ ಅಮಲೌಷಧಗಳನ್ನು ಉಪಯೋಗಿಸುವುದಕ್ಕೆ ಹಿಂದಿರುಗುವೆನೆಂಬುದು ಅವನಿಗೆ ತಿಳಿದಿತ್ತು. ಆದರೆ ಯಾವ ರೀತಿಯ ಸಹಾಯ? 1996ರ ಮೇ ತಿಂಗಳಿನಲ್ಲಿ, ಪುನರುದ್ಧಾರ ಕೇಂದ್ರವನ್ನು ಬಿಟ್ಟು ಹೊರಬಂದ ಎರಡು ದಿವಸಗಳ ಅನಂತರ, ಡ್ಯಾನ್ಯಲ್ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನನ್ನು ಸಮೀಪಿಸಿ, “ನನ್ನೊಂದಿಗೆ ದಯವಿಟ್ಟು ಬೈಬಲನ್ನು ಅಭ್ಯಾಸಿಸಿರಿ” ಎಂಬ ಶ್ರದ್ಧಾಪೂರ್ವಕ ಬೇಡಿಕೆಯಿಂದ ಅವನನ್ನು ದಂಗುಬಡಿಸಿದನು. ಆ ಸಾಕ್ಷಿಯು ಡ್ಯಾನ್ಯಲ್ನೊಂದಿಗೆ ವಾರಕ್ಕೆ ಎರಡು ಬಾರಿ ಬೈಬಲನ್ನು ಅಭ್ಯಾಸಿಸಲು ಏರ್ಪಾಡುಮಾಡಿದನು ಹಾಗೂ ಡ್ಯಾನ್ಯಲ್ ಬೇಗನೆ ತನ್ನ ಜೀವನವನ್ನು ದೇವರ ಚಿತ್ತಕ್ಕನುಸಾರ ಹೊಂದಿಸಿಕೊಳ್ಳಲು ಪ್ರಾರಂಭಿಸಿದನು. ತನ್ನ ಹಳೆಯ ಮಿತ್ರರ ಸ್ಥಾನದಲ್ಲಿ, ಅಮಲೌಷಧ ಅಥವಾ ಮದ್ಯವನ್ನು ದುರುಪಯೋಗಿಸದ ಹಾಗೂ ಅನೈತಿಕತೆಯನ್ನು ತೊರೆದುಬಿಟ್ಟ ಕ್ರೈಸ್ತ ಮಿತ್ರರನ್ನು ಸ್ಥಾನಪಲ್ಲಟಗೊಳಿಸಿದನು. ಹೀಗೆ ಡ್ಯಾನ್ಯಲ್, ಬೈಬಲ್ ಏನು ಹೇಳುತ್ತದೋ ಅದು ಸತ್ಯವೆಂಬುದಾಗಿ ಕಂಡುಕೊಂಡನು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ಅವನು ಹೇಳಿದ್ದು: “ನನ್ನ ಜೀವಮಾನದಲ್ಲೇ ಒಂದು ಶುದ್ಧವಾದ ಮನಸ್ಸಾಕ್ಷಿಯನ್ನು ಪಡೆದಿರುವುದರ ಅರ್ಥವೇನೆಂಬುದನ್ನು ನಾನು ತಿಳಿದುಕೊಂಡಿರುವುದು ಇದೇ ಪ್ರಥಮ ಬಾರಿ.” ಡ್ಯಾನ್ಯಲ್ನ ಜೀವಿತವು ಕೂಡ ಪರಿವರ್ತಿಸಲ್ಪಟ್ಟಿತು.
ಪೋರ್ಟ ರೀಕೋದಲ್ಲಿ ಮತ್ತೊಬ್ಬ ವ್ಯಕ್ತಿಯು ಒಂದು ಗಮನಾರ್ಹವಾದ ಪರಿವರ್ತನೆಯನ್ನು ಅನುಭವಿಸಿದನು. ಅವನು ಸೆರೆಮನೆಯಲ್ಲಿದ್ದನು ಮತ್ತು ಅನೇಕ ಜನರನ್ನು ಕೊಂದಿದ್ದರಿಂದ ಒಬ್ಬ ತೀರ ಅಪಾಯಕಾರಿಯಾದ ವ್ಯಕ್ತಿಯೋಪಾದಿ ಪರಿಗಣಿಸಲ್ಪಟ್ಟನು. ಬೈಬಲಿನ ಸತ್ಯವು ಅವನನ್ನು ಬದಲಾಯಿಸಸಾಧ್ಯವಿತ್ತೋ? ಹೌದು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಕೆಲವು ಪ್ರತಿಗಳನ್ನು ಅವನಿಗೆ ನೀಡಲು ಶಕ್ತನಾದನು ಮತ್ತು ಅವನು ಹೆಚ್ಚಿನ ಪ್ರತಿಗಳಿಗಾಗಿ ತಕ್ಷಣವೇ ಕೇಳಿದನು. ಅವನೊಂದಿಗೆ ಒಂದು ಬೈಬಲ್ ಅಭ್ಯಾಸವು ಪ್ರಾರಂಭಿಸಲ್ಪಟ್ಟಿತು ಮತ್ತು ಬೈಬಲ್ ಸತ್ಯವು ಅವನ ಹೃದಯವನ್ನು ಪ್ರಭಾವಿಸಿದ ಹಾಗೆ ಅವನು ಮಾಡಿದ ಬದಲಾವಣೆಗಳು ಎಲ್ಲರಿಗೂ ಕಾಣುವಂತಿದ್ದವು. ಅವನ ಬದಲಾವಣೆಯ ಪ್ರಥಮ ಪುರಾವೆಗಳಲ್ಲಿ ಒಂದು, ಅವನು ತನ್ನ ಉದ್ದ ಕೂದಲನ್ನು ಚಿಕ್ಕದಾಗಿ ಕತ್ತರಿಸಿ, ಪೊದೆಯಂತೆ ಹರಡಿಕೊಂಡಿದ್ದ ತನ್ನ ಗಡ್ಡವನ್ನು ಕ್ಷೌರಮಾಡಿಕೊಂಡಾಗ ಕಂಡುಬಂತು.
ನಿಜವಾಗಿಯೂ ಪಶ್ಚಾತ್ತಾಪಪಟ್ಟು, ತಮ್ಮ ಜೀವನ ಶೈಲಿಗಳನ್ನು ಬದಲಾಯಿಸಿಕೊಳ್ಳುವ ಪಾಪಿಗಳನ್ನು ದೇವರು ಕ್ಷಮಿಸುತ್ತಾನೆಂದು ಬೈಬಲು ಹೇಳುತ್ತದೆ. ಪೌಲನು ಬರೆದುದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? . . . ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ . . . ತೊಳೆದುಕೊಂಡಿರಿ [“ತೊಳೆಯಲ್ಪಟ್ಟಿದ್ದೀರಿ,” NW].” (1 ಕೊರಿಂಥ 6:9, 11) ನಿಸ್ಸಂದೇಹವಾಗಿಯೂ, ಈ ಮಾತುಗಳು, ಅ. ಕೃತ್ಯಗಳು 24:15ರ ಮಾತುಗಳಂತೆ ಈ ವ್ಯಕ್ತಿಯನ್ನು ಸಂತೈಸಿದವು: ‘ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ ಅವನು ಹೇಳಿದ್ದು: “ಮೃತರ ಪುನರುತ್ಥಾನವಾಗುವಾಗ ನಾನು ಅಲ್ಲಿರಲು ಬಯಸುತ್ತೇನೆ, ಹೀಗೆ ಯಾರ ಜೀವಗಳನ್ನು ಬಲಿತೆಗೆದುಕೊಂಡೆನೋ ಅವರಲ್ಲಿ ನಾನು ಕ್ಷಮಾಪಣೆಯನ್ನು ಕೇಳಿಕೊಳ್ಳಬಲ್ಲೆ.”
ಒಂದು ಹೊಸ ಕುಟುಂಬ
ಆರ್ಜಂಟೀನದಲ್ಲಿರುವ ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಸೌವಾರ್ತಿಕನಾದ ಲೂಯೀಸ್, ಒಂದು ದಿವಸ ದುಃಖಕರವಾದೊಂದು ಇತಿಹಾಸವಿದ್ದ ಒಬ್ಬ ಯುವ ಮನುಷ್ಯನಿಗೆ ಪರಿಚಯಿಸಲ್ಪಟ್ಟನು. ಹುಟ್ಟಿದಾಗಲೇ ತನ್ನ ಹೆತ್ತವರಿಂದ ತೊರೆಯಲ್ಪಟ್ಟವನಾಗಿ, ಅವನು ಹಲವಾರು ಆಶ್ರಮಗಳಲ್ಲಿ ಬೆಳೆದು ದೊಡ್ಡವನಾದನು. ಅವನು ಸುಮಾರು 20 ವರ್ಷ ಪ್ರಾಯದವನಾಗಿದ್ದಾಗ, ಅವನು ತನ್ನ ತಾಯಿ ಎಲ್ಲಿದ್ದಾಳೆಂಬುದನ್ನು ತಿಳಿದುಕೊಂಡನು ಮತ್ತು ಅವಳ ಹತ್ತಿರದಲ್ಲಿಯೇ ವಾಸಿಸಲು ನಿರ್ಣಯಿಸಿದನು. ಅವನು ಕಷ್ಟಪಟ್ಟು ಕೆಲಸಮಾಡಿ, ಬಹಳಷ್ಟು ಹಣವನ್ನು ಉಳಿತಾಯಮಾಡಿ, ತನ್ನ ತಾಯಿ ವಾಸಿಸುತ್ತಿದ್ದ ನಗರಕ್ಕೆ ಪ್ರಯಾಣ ಬೆಳೆಸಿದನು. ಅವಳು ಅವನನ್ನು ಅಲ್ಲಿ ಇರಿಸಿಕೊಂಡಳಾದರೂ ಅವನ ಹಣವು ಖರ್ಚಾದ ಮೇಲೆ ಮನೆಯನ್ನು ಬಿಟ್ಟುಹೋಗುವಂತೆ ಹೇಳಿದಳು. ಈ ತಿರಸ್ಕಾರವು ಅವನನ್ನು ಆತ್ಮಹತ್ಯೆಮಾಡಿಕೊಳ್ಳುವ ಮನೋಭಾವಕ್ಕೆ ತಂದಿತು.
ಆದರೆ, ಲೂಯೀಸ್ ಈ ಯುವ ವ್ಯಕ್ತಿಯೊಂದಿಗೆ ಬೈಬಲ್ ಸತ್ಯವನ್ನು ಹಂಚಿಕೊಳ್ಳಲು ಶಕ್ತನಾದನು. ಆ ಸತ್ಯವು ಈ ಆಶ್ವಾಸನೆಯನ್ನು ಒಳಗೊಳ್ಳುತ್ತದೆ: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ತನ್ನನ್ನು ಎಂದಿಗೂ ತೊರೆಯದ ಒಬ್ಬ ಸ್ವರ್ಗೀಯ ಪಿತನಿದ್ದನೆಂಬುದನ್ನು ಆ ಯುವ ವ್ಯಕ್ತಿಯು ಕಂಡುಕೊಂಡನು. ಒಂದು ಹೊಸ ಕುಟುಂಬದ, ಯೆಹೋವನ ಕುಟುಂಬದ ಭಾಗವಾಗಿರಲು ಅವನು ಈಗ ಸಂತುಷ್ಟನಾಗಿದ್ದಾನೆ.
ಅದೇ ದೇಶದಲ್ಲಿರುವ ಮತ್ತೊಬ್ಬ ವ್ಯಕ್ತಿಯು ತಾನು ಕಾವಲಿನಬುರುಜು ಪತ್ರಿಕೆಯನ್ನು ಇಷ್ಟಪಟ್ಟೆನೆಂದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಿಗೆ ಹೇಳಿದನು. ಏಕೆ? ಏಕೆಂದರೆ ಅದು ಅವನ ವಿವಾಹವನ್ನು ಕಾಪಾಡಿತ್ತು. ಈ ವ್ಯಕ್ತಿಯು ಒಂದು ದಿನ ತನ್ನ ಕೆಲಸದ ಸ್ಥಳದಿಂದ ಬರುತ್ತಿರುವಾಗ, ದಪ್ಪ ಅಕ್ಷರಗಳಲ್ಲಿ “ವಿವಾಹವಿಚ್ಛೇದನ” ಎಂಬ ಶೀರ್ಷಿಕೆಯುಳ್ಳ ಕಾವಲಿನಬುರುಜು ಪತ್ರಿಕೆಯನ್ನು ಕಸದಡಬ್ಬಿಯಲ್ಲಿ ಕಂಡುಕೊಂಡನಂತೆ. ಅವನ ವಿವಾಹವು ಸಂಕಷ್ಟದಲ್ಲಿದ್ದು, ಅವನು ಮತ್ತು ಅವನ ಪತ್ನಿಯು ಕಾನೂನುಬದ್ಧ ಪ್ರತ್ಯೇಕವಾಸಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರಿಂದ ಅವನು ಆ ಪತ್ರಿಕೆಯನ್ನು ಕಸದಡಬ್ಬಿಯಿಂದ ತೆಗೆದು, ಓದಲಾರಂಭಿಸಿದನು. ಅವನು ಅದನ್ನು ಮನೆಗೆ ತೆಗೆದುಕೊಂಡು ಹೋಗಿ, ತನ್ನ ಪತ್ನಿಯೊಂದಿಗೆ ಓದಿದನು. ಆ ಪತ್ರಿಕೆಯಲ್ಲಿದ್ದ ಬೈಬಲ್ ಆಧಾರಿತ ಸಲಹೆಯನ್ನು ಆ ದಂಪತಿಗಳು ಅನ್ವಯಿಸಿಕೊಳ್ಳಲು ಪ್ರಯತ್ನಿಸಿದರು. (ಎಫೆಸ 5:21–6:4) ಬೇಗನೆ, ಅವರ ಸಂಬಂಧವು ಸುಧಾರಿಸಿತು. ಅವರು ಪ್ರತ್ಯೇಕವಾಸದ ಕಾನೂನು ಕ್ರಮಗಳನ್ನು ನಿಲ್ಲಿಸಿದರು ಮತ್ತು ಈಗ ಅವರು ಒಬ್ಬ ಐಕ್ಯ ವಿವಾಹಿತ ದಂಪತಿಗಳೋಪಾದಿ ಬೈಬಲನ್ನು ಅಭ್ಯಾಸಿಸುತ್ತಿದ್ದಾರೆ.
ಯುರಗ್ವೇಯಲ್ಲಿ, ಲೂಯಿಸ್ ಎಂಬ ಮತ್ತೊಬ್ಬ ವ್ಯಕ್ತಿ ಸಂತುಷ್ಟನಾಗಿರಲಿಲ್ಲ. ಅಮಲೌಷಧ ವ್ಯಸನ, ಪ್ರೇತಾತ್ಮವಾದ, ವಿಗ್ರಹಾರಾಧನೆ, ಮದ್ಯದ ದುರುಪಯೋಗ—ಇವು ಅವನ ಜೀವಿತವನ್ನು ಅಸ್ತವ್ಯಸ್ತಗೊಳಿಸಿದ ವಿಷಯಗಳಲ್ಲಿ ಕೆಲವಾಗಿದ್ದವು. ಕೊನೆಯದಾಗಿ, ಲೂಯಿಸ್ ಪೂರಾ ಹತಾಶೆಗೊಂಡವನಾಗಿ ಒಬ್ಬ ನಾಸ್ತಿಕನಾಗಿ ಪರಿಣಮಿಸಿದನು. ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಎಂಬ ಪುಸ್ತಕವನ್ನು ಮಿತ್ರನೊಬ್ಬನು ಅವನಿಗೆ ಕೊಟ್ಟನು.b ಇದು ಯೆಹೋವನ ಸಾಕ್ಷಿಗಳೊಂದಿಗೆ ಸಂಕ್ಷಿಪ್ತ ಸಂಪರ್ಕದಲ್ಲಿ ಫಲಿಸಿತು, ಆದರೆ ಲೂಯಿಸ್ ಬೇಗನೆ ಮದ್ಯಪಾನ ಹಾಗೂ ಅಮಲೌಷಧಗಳಿಗೆ ಮತ್ತೆ ದಾಸನಾದನು. ತೀರ ದುಃಖದ ಕ್ಷಣದಲ್ಲಿ, ಕಸದಿಂದ ತುಂಬಿದ್ದ ಗುಂಡಿಯಲ್ಲಿ ತಾನು ಕುಳಿತಿರುವುದನ್ನು ಕಂಡುಕೊಂಡಾಗ, ಅವನು “ಯೇಸು ಕ್ರಿಸ್ತನ ತಂದೆ”ಗೆ ತನ್ನ ಪ್ರಾರ್ಥನೆಯನ್ನು ಸಲ್ಲಿಸಿದನು. ಏಕೆಂದರೆ ದೇವರ ಹೆಸರಿನ ಕುರಿತಾಗಿ ಅವನಿಗೆ ಖಚಿತವಾಗಿ ಗೊತ್ತಿರಲಿಲ್ಲ.
ತಾನು ಈ ಲೋಕದಲ್ಲಿರುವುದಕ್ಕೆ ಏನಾದರೂ ಕಾರಣವಿದ್ದರೆ ಅದನ್ನು ತೋರಿಸುವಂತೆ ಅವನು ದೇವರಲ್ಲಿ ಕೇಳಿಕೊಂಡನು. “ಅದರ ಮರುದಿನವೇ, ನನಗೆ ಗೊತ್ತಿರುವ ಒಬ್ಬ ವ್ಯಕ್ತಿಯು ತನಗೆ ಇನ್ನು ಮುಂದೆ ಉಪಯೋಗವಿಲ್ಲದಿರುವ ಒಂದು ಪುಸ್ತಕವನ್ನು ನನಗೆ ಕೊಟ್ಟನು” ಎಂದು ಲೂಯಿಸ್ ವರದಿಸುತ್ತಾನೆ. “ಅದರ ಶೀರ್ಷಿಕೆಯೇನಾಗಿತ್ತು? ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!”c ಅವನಿಗಿದ್ದ ಪ್ರಶ್ನೆಗೆ ಉತ್ತರವನ್ನು ನೀಡಲು ಆ ಪುಸ್ತಕವು ಸಹಾಯಮಾಡಿತು. ದೇವರಿಗೆ ಹೇಗೆ ಸೇವೆಸಲ್ಲಿಸುವುದೆಂಬುದನ್ನು ತನಗೆ ತೋರಿಸುವಂಥ ಒಂದು ಧರ್ಮವನ್ನು ಕಂಡುಕೊಳ್ಳುವುದರಲ್ಲಿ ಸಹಾಯಕ್ಕಾಗಿ ಲೂಯಿಸ್ ಪುನಃ ಪ್ರಾರ್ಥಿಸಿದನು. ಎಂಥ ಒಂದು ಆಶ್ಚರ್ಯಕರ ಸಂಗತಿ! ಕರೆಗಂಟೆಯ ಸದ್ದಾಯಿತು ಮತ್ತು ಹೊರಗಡೆ ಯೆಹೋವನ ಸಾಕ್ಷಿಗಳಲ್ಲಿ ಇಬ್ಬರು ನಿಂತಿದ್ದರು. ಲೂಯಿಸ್ ತತ್ಕ್ಷಣವೇ ಅವರೊಂದಿಗೆ ಬೈಬಲನ್ನು ಅಭ್ಯಾಸಿಸಲು ಪ್ರಾರಂಭಿಸಿದನು. ಅವನು ತೀವ್ರಗತಿಯಲ್ಲಿ ಪ್ರಗತಿಯನ್ನು ಮಾಡಿದನು ಮತ್ತು ಒಬ್ಬ ದೀಕ್ಷಾಸ್ನಾನಿತ ಸಾಕ್ಷಿಯಾಗಿರಲು ಆಶೀರ್ವದಿತನೆಂದು ಈಗ ನೆನಸುತ್ತಾನೆ. ಅವನು ಒಂದು ಶುದ್ಧವಾದ ಜೀವಿತವನ್ನು ನಡೆಸುತ್ತಾನೆ ಹಾಗೂ ಇತರರೂ ಅವರ ಜೀವಿತಗಳಿಗಾಗಿ ಒಂದು ಉದ್ದೇಶವನ್ನು ಕಂಡುಕೊಳ್ಳುವಂತೆ ಅವನು ಸಹಾಯಮಾಡುತ್ತಾನೆ. ಅವನಿಗಾದರೋ ಕೀರ್ತನೆ 65:2ರ ಮಾತುಗಳು ಸತ್ಯವಾಗಿ ಪರಿಣಮಿಸಿವೆ: “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.”
ಫಿಲಿಪ್ಪೀನ್ಸ್ನಲ್ಲಿರುವ ಆ್ಯಲನ್ ಒಬ್ಬ ವಿದ್ಯಾರ್ಥಿ ಕ್ರಿಯಾವಾದಿಯಾಗಿದ್ದನು. “ಮುಂದಿನ ಪೀಳಿಗೆಗಳು ಸಮಾನತೆಯನ್ನು ಅನುಭವಿಸಶಕ್ತರಾಗುವಂತೆ ಈಗಿನ ಸರಕಾರವನ್ನು ಉರುಳಿಸುವ” ಉದ್ದೇಶವಿದ್ದ ಒಂದು ಸಂಸ್ಥೆಗೆ ಅವನು ಸೇರಿಕೊಂಡಿದ್ದನು. ಆದರೆ ಒಂದು ದಿನ, ಯೆಹೋವನ ಸಾಕ್ಷಿಗಳು ಅವನನ್ನು ಸಂಪರ್ಕಿಸಿದರು ಮತ್ತು ಮಾನವಕುಲಕ್ಕಾಗಿರುವ ದೇವರ ಉದ್ದೇಶವನ್ನು ಅವನು ಬೈಬಲಿನಿಂದ ತಿಳಿದುಕೊಂಡನು. ಆ ಉದ್ದೇಶವು ಈ ಪ್ರೇರಿತ ವಾಗ್ದಾನವನ್ನು ಒಳಗೊಳ್ಳುತ್ತದೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:10, 11) ಆ್ಯಲನ್ ಹೇಳಿದ್ದು: “ಯಾವುದಕ್ಕಾಗಿ ನಮ್ಮ ಚಳುವಳಿಯು ಹೆಣಗಾಡುತ್ತಿತ್ತೋ ಅದು ಬಹಳ ಕಾಲದ ಹಿಂದೆಯೇ ಬೈಬಲಿನಲ್ಲಿ ವಾಗ್ದಾನಿಸಲ್ಪಟ್ಟಿತ್ತೆಂಬುದನ್ನು ನಾನು ಬೇಗನೆ ಕಂಡುಕೊಂಡೆ. ನಾವು ಅತ್ಯುತ್ಸಾಹದಿಂದ ಬಯಸಿದಂಥ ಎಲ್ಲ ವಿಷಯಗಳು ದೇವರ ರಾಜ್ಯದಲ್ಲಿ ಕೊಡಲ್ಪಡುವವು.” ಆ್ಯಲನ್ ಈಗ ದೇವರ ರಾಜ್ಯವನ್ನು ಬೆಂಬಲಿಸುತ್ತಾನೆ ಹಾಗೂ ಬೈಬಲ್ ಸತ್ಯದಲ್ಲಿ ನಂಬಿಕೆಯನ್ನಿಡುವಂತೆ ಇತರರಿಗೆ ಸಹಾಯಮಾಡುತ್ತಾನೆ.
ಹೌದು, ದೇವರ ವಾಕ್ಯವಾದ ಬೈಬಲಿನ ಸತ್ಯವನ್ನು ಜನರು ಪಾಲಿಸುವಾಗ ಜೀವಿತಗಳು ಪರಿವರ್ತನೆಗೊಳ್ಳುತ್ತವೆ. ನಿಶ್ಚಯವಾಗಿಯೂ, ಪಾರಾಗಿ ಉಳಿಯುವ ಸಕಲ ಮಾನವಕುಲವು ದೇವರ ಚಿತ್ತದೊಂದಿಗೆ ತಮ್ಮ ಜೀವಿತಗಳನ್ನು ಸರಿಹೊಂದಿಸಿಕೊಂಡಿರುವ ಒಂದು ಸಮಯವು ಬರುತ್ತಿದೆ. ಎಂಥ ಒಂದು ಪರಿವರ್ತನೆಯು ಅದಾಗಿರುವುದು! ಆಗ ಈ ಪ್ರವಾದನೆಯು ನೆರವೇರುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:9.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.