ಅಧ್ಯಾಯ 81
ಯೇಸುವನ್ನು ಕೊಲ್ಲಲು ಇನ್ನಷ್ಟು ಪ್ರಯತ್ನಗಳು
ಅದು ಚಳಿಗಾಲವಾಗಿದ್ದುದರಿಂದ, ಯೇಸುವು ಸೊಲೊಮೋನನ ಮಂಟಪವೆಂದು ಕರೆಯಲ್ಪಡುವ ಸುರಕ್ಷಿತವಾದ ಪ್ರದೇಶದಲ್ಲಿ ತಿರುಗಾಡುತ್ತಿದ್ದನು. ಇದು ದೇವಾಲಯದ ಪಕ್ಕದಲ್ಲಿದೆ. ಇಲ್ಲಿ ಯೆಹೂದ್ಯರು ಅವನನ್ನು ಸುತ್ತಿಕೊಂಡು, ಅವನನ್ನು ಪ್ರಶ್ನಿಸಲು ಆರಂಭಿಸಿದರು: “ಇನ್ನು ಎಷ್ಟು ಕಾಲ ನಮ್ಮಲ್ಲಿ ಅನುಮಾನ ಹುಟ್ಟಿಸುತ್ತೀ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು.”
“ನಿಮಗೆ ಹೇಳಿದೆನು,” ಯೇಸುವು ಉತ್ತರಿಸುವದು, “ಆದರೆ ನೀವು ನಂಬದೆ ಇದ್ದೀರಿ.” ಬಾವಿಯ ಬಳಿಯಲ್ಲಿ ಸಮಾರ್ಯದ ಹೆಂಗಸಿಗೆ ಹೇಳಿದಂತೆ, ತಾನು ಕ್ರಿಸ್ತನು ಎಂದು ಅವರಿಗೆ ನೇರವಾಗಿ ಯೇಸುವು ಹೇಳಿರಲಿಲ್ಲ. ಆದರೂ, ಪರೋಕ್ಷವಾಗಿ, ನಾನು ಮೇಲಿನ ಲೋಕದಿಂದ ಬಂದವನು ಮತ್ತು ಅಬ್ರಹಾಮನಿಗಿಂತಲೂ ಮೊದಲು ಅಸ್ತಿತ್ವದಲ್ಲಿದ್ದೆನು ಎಂದು ಅವನು ವಿವರಿಸುವಾಗ ತನ್ನ ಗುರುತನ್ನು ಪ್ರಕಟಿಸಿದ್ದನು.
ಆದಾಗ್ಯೂ, ಕ್ರಿಸ್ತನು ಏನನ್ನು ಪೂರೈಸುವನೋ ಅದರ ಕುರಿತು ಬೈಬಲು ಮುನ್ನುಡಿದಿರುವದನ್ನು ಅವನ ಕಾರ್ಯಚಟುವಟಿಕೆಗಳೊಂದಿಗೆ ಅವರು ಹೋಲಿಸಿ, ಯೇಸುವು ಕ್ರಿಸ್ತನು ಎಂದು ಜನರು ಸ್ವತಃ ಒಂದು ತೀರ್ಮಾನಕ್ಕೆ ಬರುವಂತೆ ಯೇಸುವು ಬಯಸಿದ್ದನು. ಆದುದರಿಂದ ಅವನು ಕ್ರಿಸ್ತನು ಎಂದು ಯಾರಿಗೂ ತಿಳಿಸಬಾರದೆಂದು ಯೇಸುವು ತನ್ನ ಶಿಷ್ಯರಿಗೆ ಈ ಮುಂಚೆ ಹೇಳಿದ್ದನು. ಮತ್ತು ಈಗಲೂ ಅವನನ್ನು ವಿರೋಧಿಸುವ ಈ ಯೆಹೂದ್ಯರಿಗೆ ಅವನು ಹೇಳುತ್ತಾ ಮುಂದರಿಸುವದು: “ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನಗೆ ಸಾಕ್ಷಿಯಾಗಿವೆ. ಆದರೂ ನೀವು ನಂಬದೆ ಇದ್ದೀರಿ.”
ಅವರು ಯಾಕೆ ನಂಬಲಿಲ್ಲ? ಯೇಸುವು ಕ್ರಿಸ್ತನು ಎಂಬ ವಿಷಯದಲ್ಲಿ ರುಜುವಾತಿನ ಕೊರತೆಯ ಕಾರಣದಿಂದಲೋ? ಅಲ್ಲ, ಯೇಸುವು ಅವರಿಗೆ ಹೇಳಿದ್ದರಲ್ಲಿ ಆ ಕಾರಣವು ಇದೆ: “ನೀವು ನನ್ನ ಕುರಿಗಳಿಗೆ ಸೇರಿದವರಲ್ಲ. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು. ನನ್ನ ತಂದೆಯು ನನಗೆ ಕೊಟ್ಟದ್ದು ಎಲ್ಲಾದ್ದಕ್ಕಿಂತ ದೊಡ್ಡದು; ಅದನ್ನು ತಂದೆಯ ಕೈಯೊಳಗಿಂದ ಯಾರೂ ಕಸಕೊಳ್ಳಲಾರರು.”
ಯೇಸುವು ತದನಂತರ, ಅವನ ತಂದೆಯೊಂದಿಗೆ ಅವನಿಗಿರುವ ನಿಕಟ ಸಂಬಂಧವನ್ನು ವರ್ಣಿಸುತ್ತಾ, ವಿವರಿಸುವದು: “ನಾನೂ ತಂದೆಯೂ ಒಂದಾಗಿದ್ದೇವೆ.” ಯೇಸುವು ಭೂಮಿಯ ಮೇಲಿರುವದರಿಂದ ಮತ್ತು ಅವನ ತಂದೆಯು ಪರಲೋಕದಲ್ಲಿರುವದರಿಂದ, ಅವನೂ ಅವನ ತಂದೆಯೂ ಅಕ್ಷರಶಃ ಇಲ್ಲವೇ ಶಾರೀರಿಕವಾಗಿ ಒಂದಾಗಿದ್ದೇವೆ ಎಂದವನು ಹೇಳುವದಿಲ್ಲ. ಬದಲಾಗಿ, ಅವರು ಉದ್ದೇಶದಲ್ಲಿ ಒಂದಾಗಿದ್ದಾರೆ, ಅವರು ಐಕ್ಯತೆಯಲ್ಲಿದ್ದಾರೆ ಎಂದವನ ಅರ್ಥವಾಗಿತ್ತು.
ಯೇಸುವಿನ ಮಾತುಗಳಿಂದ ಸಿಟ್ಟುಗೊಂಡು, ಯೆಹೂದ್ಯರು ಅವನನ್ನು ಕೊಲ್ಲಲು ಕಲ್ಲುಗಳನ್ನು ಕೈಗೆತ್ತಿಗೊಂಡರು, ಪರ್ಣಶಾಲೆಗಳ ಜಾತ್ರೆಯ ಸಮಯದಲ್ಲೂ ಅವರು ಈ ಮೊದಲು ಹೀಗೆಯೇ ಮಾಡಿದ್ದರು. ಅವನ ಭಾವೀ ಕೊಲೆಗಾರರನ್ನು ಧೈರ್ಯದಿಂದ ಎದುರಿಸುತ್ತಾ ಯೇಸುವು ಹೇಳುವದು: “ತಂದೆಯ ಕಡೆಯಿಂದ ನಾನು ಅನೇಕ ಒಳ್ಳೆಯ ಕ್ರಿಯೆಗಳನ್ನು ನಿಮಗೆ ತೋರಿಸಿದೆನು; ಅವುಗಳಲ್ಲಿ ಯಾವ ಕ್ರಿಯೆಯ ದೆಸೆಯಿಂದ ನನ್ನ ಮೇಲೆ ಕಲ್ಲೆಸೆಯುತ್ತೀರಿ?”
“ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯದ ದೆಸೆಯಿಂದಲ್ಲ,” ಅವರು ಉತ್ತರಿಸುವದು, “ದೇವದೂಷಣೆಯ ದೆಸೆಯಿಂದಲೂ, ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ.” ತಾನು ಒಬ್ಬ ದೇವರು ಎಂದು ಯೇಸುವು ಎಂದೂ ಹೇಳಿಕೊಳ್ಳದಿದ್ದರೂ, ಯೆಹೂದ್ಯರು ಇದನ್ನು ಯಾಕೆ ಹೇಳುತ್ತಾರೆ?
ದೇವರಲ್ಲಿ ಮಾತ್ರ ಇರುತ್ತವೆ ಎಂದು ಅವರು ನಂಬುವ ಶಕ್ತಿಗಳನ್ನು ಯೇಸುವು ತನಗೆ ಅನ್ವಯಿಸಿಕೊಳ್ಳುತ್ತಿದ್ದ ಕಾರಣ ಇದಾಗಿರಬಹುದು. ಉದಾಹರಣೆಗೆ, “ಕುರಿಗಳ” ಮತ್ತು “ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ” ಎಂಬುದರ ಕುರಿತು ಈಗಾಗಲೇ ಯೇಸುವು ಮಾತಾಡಿದ್ದನು, ಇದನ್ನು ಯಾವನೇ ಮನುಷ್ಯನು ಮಾಡಲು ಶಕ್ತನಲ್ಲ. ಆದಾಗ್ಯೂ, ಅವನ ತಂದೆಯಿಂದ ಅಧಿಕಾರವನ್ನು ಪಡೆಯುವದನ್ನು ಯೇಸುವು ಅಂಗೀಕಾರ ಮಾಡುವ ವಾಸ್ತವಾಂಶವನ್ನು ಯೆಹೂದ್ಯರು ನೋಡಲು ತಪ್ಪುತ್ತಾರೆ.
ದೇವರಿಗಿಂತಲೂ ತಾನು ಕಡಿಮೆಯವನು ಎಂದು ಯೇಸುವು ಹೇಳುವದನ್ನು ಅವನ ನಂತರದ ಪ್ರಶ್ನೆಯು ತೋರಿಸುತ್ತದೆ. “ನೀವು ದೇವರುಗಳೇ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ [ಕೀರ್ತನೆ 82:6ರಲ್ಲಿ] ಬರೆದದೆಯಲ್ಲಾ; . . . ಹಾಗಾದರೆ ದೇವರ ವಾಕ್ಯವನ್ನು ಹೊಂದಿದವರನ್ನು ದೇವರುಗಳೆಂದು ಆತನು ಹೇಳಿರುವಲ್ಲಿ ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆ ಎಂದು ಹೇಳಿದ್ದಕ್ಕೆ ನೀನು ದೇವದೂಷಣೆ ಮಾಡುತ್ತೀ ಅನ್ನುತ್ತೀರೋ?”
ಅನ್ಯಾಯಿಗಳಾದ ಮಾನವ ನ್ಯಾಯಾಧಿಪತಿಗಳನ್ನು ಕೂಡ ಧರ್ಮಶಾಸ್ತ್ರದಲ್ಲಿ “ದೇವರುಗಳು” ಎಂದು ಕರೆಯಲ್ಪಟ್ಟಿರುವಲ್ಲಿ, “ನಾನು ದೇವರ ಮಗನಾಗಿದ್ದೇನೆ” ಎಂದು ಯೇಸುವು ಹೇಳುವದರಲ್ಲಿ ಈ ಯೆಹೂದ್ಯರು ಯಾವ ತಪ್ಪನ್ನು ಕಂಡುಕೊಳ್ಳಬಹುದು? ಯೇಸುವು ಕೂಡಿಸುವದು: “ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನ ಮಾತನ್ನು ನಂಬಬೇಡಿರಿ; ಮಾಡಿದರೆ ನನ್ನ ಮಾತನ್ನು ನಂಬದೆ ಇದ್ದರೂ ಆ ಕ್ರಿಯೆಗಳ ಸಾಕ್ಷಿಯನ್ನಾದರೂ ನಂಬಿರಿ; ಆಗ ತಂದೆಯು ನನ್ನಲ್ಲಿ ಇದ್ದಾನೆಂತಲೂ ತಂದೆಯಲ್ಲಿ ನಾನು ಇದ್ದೇನೆಂತಲೂ ನೀವು ತಿಳುಕೊಂಡು ಮನನಮಾಡಿಕೊಳ್ಳುವಿರಿ.”
ಯೇಸುವು ಇದನ್ನು ಹೇಳುವಾಗ, ಯೆಹೂದ್ಯರು ಅವನನ್ನು ಹಿಡಿಯುವದಕ್ಕೆ ನೋಡಿದರು. ಆದರೆ, ಅವನು ಈ ಮುಂಚೆ ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ಮಾಡಿದಂತೆ, ಅವರ ಕೈಗೆ ತಪ್ಪಿಸಿಕೊಂಡು ಹೋದನು. ಅವನು ಯೆರೂಸಲೇಮನ್ನು ಬಿಟ್ಟು ಸುಮಾರು ನಾಲ್ಕು ವರ್ಷಗಳ ಹಿಂದೆ ಯೋಹಾನನು ಸ್ನಾನಮಾಡಿಸುತ್ತಿದ್ದ ಆರಂಭದ ಸ್ಥಳಕ್ಕೆ, ಯೊರ್ದನ್ ಹೊಳೆಯ ಆಚೇ ಪಕ್ಕಕ್ಕೆ ಹೋದನು. ಇದು ಗಲಿಲಾಯ ಸಮುದ್ರದ ದಕ್ಷಿಣ ತೀರದಿಂದ ಅನತಿ ದೂರದಲ್ಲಿ, ಯೆರೂಸಲೇಮಿನಿಂದ ಸುಮಾರು ಎರಡು ದಿನಗಳ ಪ್ರಯಾಣದಷ್ಟಿತ್ತು.
ಈ ಸ್ಥಳಕ್ಕೆ ಅನೇಕರು ಯೇಸುವಿನ ಬಳಿ ಬಂದು, ಹೀಗೆ ಹೇಳಲು ತೊಡಗಿದರು: “ಯೋಹಾನನು ಒಂದು ಸೂಚಕ ಕಾರ್ಯವನ್ನೂ ಮಾಡಲಿಲ್ಲ; ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ನಿಜವಾಗಿತ್ತು.” ಈ ರೀತಿ ಇಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆಯನ್ನಿಟ್ಟರು. ಯೋಹಾನ 10:22-42; 4:26; 8:23, 58; ಮತ್ತಾಯ 16:20.
▪ ಜನರು ಅವನನ್ನು ಕ್ರಿಸ್ತನೆಂದು ಯಾವ ವಿಧದಲ್ಲಿ ಗುರುತಿಸಬೇಕೆಂದು ಯೇಸುವು ಬಯಸಿದನು?
▪ ಯೇಸು ಮತ್ತು ಅವನ ತಂದೆಯು ಒಂದಾಗಿರುವದು ಹೇಗೆ?
▪ ಯೇಸುವು ತನ್ನನ್ನು ದೇವರನ್ನಾಗಿ ಮಾಡಿಕೊಳ್ಳುತ್ತಾನೆಂದು ಯೆಹೂದ್ಯರು ಹೇಳಿದ್ದು ಪ್ರಾಯಶಃ ಯಾಕಿರಬಹುದು?
▪ ದೇವರಿಗೆ ತಾನು ಸರಿಸಮಾನನಾಗಿದ್ದೇನೆಂದು ಅವನು ವಾದಿಸುವದಿಲ್ಲವೆಂದು ಕೀರ್ತನೆಯಿಂದ ಯೇಸುವಿನ ಉಲ್ಲೇಖವು ಹೇಗೆ ತೋರಿಸುತ್ತದೆ?