ಅಧ್ಯಾಯ 6
ಸತ್ತ ಮೇಲೆ ಏನಾಗುತ್ತದೆ?
1-3. (ಎ) ಸಾವಿನ ಕುರಿತು ಜನರಿಗೆ ಯಾವೆಲ್ಲ ಪ್ರಶ್ನೆಗಳು ಬರುತ್ತವೆ? (ಬಿ) ಈ ಪ್ರಶ್ನೆಗಳಿಗೆ ಬೇರೆಬೇರೆ ಧರ್ಮದವರು ಯಾವ ಬೇರೆಬೇರೆ ಉತ್ತರ ಕೊಡುತ್ತಾರೆ?
‘ಮರಣವೇ ಇಲ್ಲದ’ ಕಾಲ ಬರಲಿದೆ ಎಂದು ದೇವರು ಬೈಬಲಿನಲ್ಲಿ ಮಾತುಕೊಟ್ಟಿದ್ದಾನೆ. (ಪ್ರಕಟನೆ 21:4) ಯೇಸು ನಮಗಾಗಿ ತನ್ನ ಜೀವ ಕೊಟ್ಟದ್ದರಿಂದ ಮುಂದೆ ನಮಗೆ ಸಾವೇ ಇಲ್ಲದ ಜೀವನ ಸಿಗಲಿದೆ ಎಂದು ಕಲಿತೆವು. ಆದರೆ ಸಾವು ಅನ್ನುವುದು ಈಗಲೂ ಇರುವುದರಿಂದ, ‘ಸತ್ತ ಮೇಲೆ ನಿಜವಾಗಿಯೂ ಏನಾಗುತ್ತದೆ?’ ಎನ್ನುವ ಪ್ರಶ್ನೆ ನಮಗೆ ಬರುತ್ತದೆ.—ಪ್ರಸಂಗಿ 9:5.
2 ನಮ್ಮ ಕುಟುಂಬದವರು, ಸ್ನೇಹಿತರು ಯಾರಾದರೂ ತೀರಿಹೋದರಂತೂ ಈ ಪ್ರಶ್ನೆ ನಮ್ಮನ್ನು ತುಂಬ ಕಾಡುತ್ತದೆ, ಉತ್ತರ ಬೇಕೇ ಬೇಕು ಅಂತ ಅನಿಸುತ್ತದೆ. ಅಷ್ಟೇ ಅಲ್ಲ, ‘ಅವರು ಈಗ ಎಲ್ಲಿದ್ದಾರೆ? ನಮ್ಮನ್ನು ನೋಡುತ್ತಾ ಇದ್ದಾರಾ? ನಮಗೆ ಸಹಾಯ ಮಾಡುತ್ತಾರಾ? ಅವರನ್ನು ಮತ್ತೆ ನೋಡಲು ಆಗುತ್ತಾ?’ ಎನ್ನುವ ಪ್ರಶ್ನೆಗಳೂ ನಮ್ಮ ಮನಸ್ಸಿಗೆ ಬರುತ್ತವೆ.
3 ಈ ಪ್ರಶ್ನೆಗಳಿಗೆ ಒಂದೊಂದು ಧರ್ಮದವರು ಒಂದೊಂದು ರೀತಿ ಉತ್ತರ ಕೊಡುತ್ತಾರೆ. ಒಳ್ಳೆಯವರಾದರೆ ಸ್ವರ್ಗಕ್ಕೆ ಹೋಗುತ್ತಾರೆ, ಕೆಟ್ಟವರಾದರೆ ನರಕಕ್ಕೆ ಹೋಗುತ್ತಾರೆ ಅಂತ ಕೆಲವರು ಹೇಳುತ್ತಾರೆ. ಇನ್ನು ಕೆಲವರು, ಸತ್ತವರು ಆತ್ಮವಾಗಿ ಈಗಾಗಲೇ ತೀರಿಹೋಗಿರುವ ತಮ್ಮ ಕುಟುಂಬದವರ ಆತ್ಮಗಳೊಂದಿಗೆ ಜೀವಿಸುತ್ತಾರೆ ಎಂದು ಹೇಳುತ್ತಾರೆ. ಮತ್ತೆ ಕೆಲವರು, ಸತ್ತವರಿಗೆ ಇನ್ನೊಂದು ಜನ್ಮ ಸಿಗುತ್ತದೆ, ಆಗ ಅವರು ಮನುಷ್ಯರಾಗಿ ಹುಟ್ಟಬಹುದು ಇಲ್ಲವೆ ಪ್ರಾಣಿಗಳಾಗಿ ಹುಟ್ಟಬಹುದು, ಇದು ಅವರು ಮಾಡಿದ ಪಾಪಪುಣ್ಯದ ಮೇಲೆ ಹೊಂದಿಕೊಂಡಿದೆ ಎಂದು ಹೇಳುತ್ತಾರೆ.
4. ಸಾವಿನ ಕುರಿತು ಯಾವ ಒಂದು ವಿಷಯವನ್ನು ಹೆಚ್ಚಿನ ಧರ್ಮದವರು ಒಪ್ಪಿಕೊಳ್ಳುತ್ತಾರೆ?
4 ಬೇರೆಬೇರೆ ಧರ್ಮದವರ ನಂಬಿಕೆ ಬೇರೆಬೇರೆ ಆಗಿದ್ದರೂ ಒಂದು ವಿಷಯವನ್ನು ಅವರೆಲ್ಲರೂ ಒಪ್ಪಿಕೊಳ್ಳುತ್ತಾರೆ. ನಾವು ಸತ್ತರೂ ನಮ್ಮಲ್ಲಿರುವ ಆತ್ಮ ಸಾಯುವುದಿಲ್ಲ, ಅದು ಬದುಕಿರುತ್ತದೆ ಎಂದು ಅವರು ನಂಬುತ್ತಾರೆ. ಇದರ ಬಗ್ಗೆ ನಿಮಗೇನು ಅನಿಸುತ್ತದೆ?
ಸತ್ತ ಮೇಲೆ ನಾವು ಎಲ್ಲಿಗೆ ಹೋಗುತ್ತೇವೆ?
5, 6. ಸತ್ತ ಮೇಲೆ ನಮಗೆ ಏನಾಗುತ್ತದೆ?
5 ಸತ್ತ ಮೇಲೆ ನಮಗೆ ಏನಾಗುತ್ತದೆ ಎಂದು ನಮ್ಮ ದೇವರಾದ ಯೆಹೋವನಿಗೆ ಚೆನ್ನಾಗಿ ಗೊತ್ತು. ಒಬ್ಬ ವ್ಯಕ್ತಿ ಸತ್ತಾಗ ಅವನ ಜೀವನ ಅಲ್ಲಿಗೆ ಮುಗಿದುಹೋಗುತ್ತದೆ ಎಂದು ಆತನು ಹೇಳಿದ್ದಾನೆ. ಇದರರ್ಥ ಸತ್ತ ಮೇಲೆ ಅವನಿಗೆ ಯಾವುದೇ ಭಾವನೆಗಳಾಗಲಿ, ನೆನಪುಗಳಾಗಲಿ ಇರುವುದಿಲ್ಲ.a ಇದಲ್ಲದೆ ಸತ್ತ ವ್ಯಕ್ತಿಗೆ ನೋಡಲು, ಕೇಳಿಸಿಕೊಳ್ಳಲು ಆಗುವುದಿಲ್ಲ. ಯೋಚಿಸಲು ಸಹ ಆಗುವುದಿಲ್ಲ.
6 ‘ಸತ್ತವರಿಗೆ ಯಾವ ತಿಳುವಳಿಕೆಯೂ ಇಲ್ಲ,’ ಸತ್ತವರು ಯಾರನ್ನೂ ಪ್ರೀತಿಸಲಿಕ್ಕಾಗಲಿ ದ್ವೇಷಿಸಲಿಕ್ಕಾಗಲಿ ಆಗುವುದಿಲ್ಲ. ‘ಲೋಕದೊಳಗೆ ನಡೆಯುವ ಯಾವ ಕೆಲಸದಲ್ಲಿಯೂ ಅವರಿಗೆ ಪಾಲಿಲ್ಲ’ ಎಂದು ಬೈಬಲಿನಲ್ಲಿದೆ. (ಪ್ರಸಂಗಿ 9:5, 6 ಓದಿ.) ವ್ಯಕ್ತಿಯೊಬ್ಬನು ಸತ್ತಾಗ ಅವನ “ಸಂಕಲ್ಪಗಳೆಲ್ಲಾ” ಅಂದರೆ ಆಲೋಚನೆಗಳೆಲ್ಲ ಹಾಳಾಗುತ್ತವೆ ಎಂದು ಕೀರ್ತನೆ 146:4 ತಿಳಿಸುತ್ತದೆ.
ಸಾವಿನ ಬಗ್ಗೆ ಯೇಸು ಹೇಳಿದ ಸತ್ಯ
7. ಸಾವನ್ನು ಯೇಸು ಯಾವುದಕ್ಕೆ ಹೋಲಿಸಿದನು?
7 ಯೇಸುವಿನ ಆಪ್ತ ಸ್ನೇಹಿತ ಲಾಜರನು ಸತ್ತಾಗ ಯೇಸು ತನ್ನ ಶಿಷ್ಯರಿಗೆ ‘ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಿದ್ದಾನೆ’ ಎಂದು ಹೇಳಿದನು. ಇದರರ್ಥ ಲಾಜರ ವಿಶ್ರಾಂತಿ ಮಾಡುತ್ತಿದ್ದನು ಎಂದಾಗಿರಲಿಲ್ಲ. ಬದಲಿಗೆ ‘ಲಾಜರನು ಸತ್ತುಹೋಗಿದ್ದನು’ ಎಂದಾಗಿತ್ತು. (ಯೋಹಾನ 11:11-14, ಸತ್ಯವೇದ ಬೈಬಲ್) ಇಲ್ಲಿ ಯೇಸು ಸಾವನ್ನು ನಿದ್ದೆಗೆ ಹೋಲಿಸಿದನು. ಯೇಸು ಲಾಜರನ ಬಗ್ಗೆ ಹೇಳುವಾಗ ಅವನು ಸ್ವರ್ಗಕ್ಕೆ ಹೋಗಿದ್ದಾನೆ ಅಂತಾಗಲಿ, ನರಕದಲ್ಲಿ ನರಳುತ್ತಿದ್ದಾನೆ ಅಂತಾಗಲಿ ಅಥವಾ ಆತ್ಮವಾಗಿ ಪೂರ್ವಜರ ಬಳಿ ಹೋಗಿದ್ದಾನೆ ಅಂತಾಗಲಿ ಹೇಳಲಿಲ್ಲ. ಲಾಜರನಿಗೆ ಪುನರ್ಜನ್ಮವಿದೆ, ಆಗ ಮನುಷ್ಯನಾಗಿ ಅಥವಾ ಪ್ರಾಣಿಯಾಗಿ ಹುಟ್ಟಿ ಬರುತ್ತಾನೆ ಎಂದು ಸಹ ಆತನು ಹೇಳಲಿಲ್ಲ. ಬದಲಿಗೆ ಯೇಸುವಿನ ಮಾತಿನ ಅರ್ಥ, ಲಾಜರನು ಗಾಢ ನಿದ್ರೆ ಮಾಡುತ್ತಿದ್ದಾನೆ ಎಂದಾಗಿತ್ತು. ಬೈಬಲಿನಲ್ಲಿರುವ ಬೇರೆ ಕೆಲವು ವಚನಗಳು ಸಹ ಸಾವನ್ನು ಗಾಢ ನಿದ್ರೆಗೆ ಹೋಲಿಸುತ್ತವೆ. ಉದಾಹರಣೆಗೆ, ಸ್ತೆಫನ ಎಂಬ ದೇವಭಕ್ತನ ಕೊಲೆಯ ಬಗ್ಗೆ ತಿಳಿಸುವಾಗ ಅವನು “ಮರಣದಲ್ಲಿ ನಿದ್ರೆಹೋದನು” ಎಂದು ಹೇಳಲಾಗಿದೆ. (ಅಪೊಸ್ತಲರ ಕಾರ್ಯಗಳು 7:60) ಅಪೊಸ್ತಲ ಪೌಲನು ಸಹ ಕೆಲವು ಕ್ರೈಸ್ತರ ಬಗ್ಗೆ ಮಾತಾಡುತ್ತಾ ಅವರು “ಮರಣದಲ್ಲಿ ನಿದ್ರೆಹೋಗಿದ್ದಾರೆ” ಎಂದು ಹೇಳಿದನು.—1 ಕೊರಿಂಥ 15:6.
8. ನಾವು ಸಾಯಬೇಕೆಂದು ದೇವರು ನಮ್ಮನ್ನು ಸೃಷ್ಟಿಮಾಡಲಿಲ್ಲ ಅಂತ ನಮಗೆ ಹೇಗೆ ಗೊತ್ತು?
8 ಆದಾಮ ಮತ್ತು ಹವ್ವಳನ್ನು ಸೃಷ್ಟಿಸುವಾಗ ಅವರು ಸ್ವಲ್ಪ ಕಾಲ ಬದುಕಿ ಆಮೇಲೆ ಸತ್ತು ಹೋಗಬೇಕು ಎಂದು ದೇವರು ಬಯಸಿದನಾ? ಇಲ್ಲ. ಅವರಿಗೆ ಒಳ್ಳೇ ಆರೋಗ್ಯ ಇರಬೇಕು, ಅವರು ಸಾವಿಲ್ಲದೆ ಸದಾಕಾಲ ಜೀವಿಸಬೇಕು ಎಂದು ದೇವರು ಬಯಸಿದನು. ಆ ಬಯಕೆಯನ್ನು ಅವರಲ್ಲೂ ಇಟ್ಟನು. (ಪ್ರಸಂಗಿ 3:11) ಯೋಚಿಸಿ, ತಮ್ಮ ಮಕ್ಕಳು ಕಾಯಿಲೆ ಬಿದ್ದು ತಮ್ಮ ಕಣ್ಣಮುಂದೆ ಸಾಯಬೇಕು ಅಂತ ಯಾವ ಹೆತ್ತವರಾದರೂ ಬಯಸುತ್ತಾರಾ? ಇಲ್ಲ. ಅದೇರೀತಿ ನಾವು ಸಾಯಬೇಕೆಂದು ಯೆಹೋವ ದೇವರು ಬಯಸುವುದಿಲ್ಲ. ಹಾಗೆಂದ ಮೇಲೆ ಸಾವು ಅನ್ನುವುದು ಹೇಗೆ ಬಂತು?
ನಾವೇಕೆ ಸಾಯುತ್ತೇವೆ?
9. ಯೆಹೋವನ ಆಜ್ಞೆಯನ್ನು ಪಾಲಿಸುವುದು ಆದಾಮ ಮತ್ತು ಹವ್ವಳಿಗೆ ಕಷ್ಟವಾಗಿತ್ತಾ? ವಿವರಿಸಿ.
9 ಏದೆನ್ ತೋಟದಲ್ಲಿ ಯೆಹೋವ ದೇವರು ಆದಾಮನಿಗೆ ಈ ಆಜ್ಞೆಯನ್ನು ಕೊಟ್ಟನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:9, 16, 17) ಯೆಹೋವ ದೇವರು ಕೊಟ್ಟ ಆ ಸ್ಪಷ್ಟ ಆಜ್ಞೆಯನ್ನು ಪಾಲಿಸುವುದು ಆದಾಮ ಹವ್ವರಿಗೆ ಕಷ್ಟದ ಕೆಲಸವಾಗಿರಲಿಲ್ಲ. ಯಾವುದು ಸರಿ ಯಾವುದು ತಪ್ಪೆಂದು ಅವರಿಗೆ ಹೇಳುವ ಸಂಪೂರ್ಣ ಹಕ್ಕು ಯೆಹೋವ ದೇವರಿಗಿತ್ತು. ಅವರು ದೇವರ ಮಾತನ್ನು ಕೇಳಿದ್ದರೆ ಆತನ ಅಧಿಕಾರಕ್ಕೆ ಗೌರವ ತೋರಿಸಿದಂತೆ ಆಗುತ್ತಿತ್ತು ಮತ್ತು ತಮಗೆ ಬೇಕಾಗಿದ್ದ ಎಲ್ಲವನ್ನು ಕೊಟ್ಟಂಥ ಯೆಹೋವ ದೇವರಿಗೆ ಕೃತಜ್ಞತೆ ತೋರಿಸಿದಂತೆ ಆಗುತ್ತಿತ್ತು.
10, 11. (ಎ) ಆದಾಮ ಮತ್ತು ಹವ್ವಳಿಗೆ ಸೈತಾನನು ಹೇಗೆ ಮೋಸಮಾಡಿದ? (ಬಿ) ಅವರು ಮಾಡಿದ ತಪ್ಪಿಗೆ ಕ್ಷಮೆ ಇತ್ತಾ? ವಿವರಿಸಿ.
10 ದುಃಖದ ವಿಷಯ ಏನೆಂದರೆ ಆದಾಮ ಮತ್ತು ಹವ್ವ ದೇವರಿಗೆ ಅವಿಧೇಯರಾಗುವ ಆಯ್ಕೆ ಮಾಡಿದರು. ಸೈತಾನನು ಹವ್ವಳಿಗೆ: “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ” ಎಂದು ಕೇಳಿದನು. ಅದಕ್ಕೆ ಹವ್ವಳು “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ—ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ” ಅಂದಳು.—ಆದಿಕಾಂಡ 3:1-3.
11 ನಂತರ ಸೈತಾನನು, “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ” ಎಂದು ಹೇಳಿದನು. (ಆದಿಕಾಂಡ 3:4-6) ಯಾಕೆಂದರೆ ಯಾವುದು ಸರಿ ಯಾವುದು ತಪ್ಪು ಎಂದು ತಾನೇ ನಿರ್ಣಯಿಸಬಹುದು ಎಂದು ಹವ್ವಳು ಯೋಚಿಸುವಂತೆ ಮಾಡುವುದೇ ಸೈತಾನನ ಗುರಿಯಾಗಿತ್ತು. ಅಲ್ಲದೆ, ‘ದೇವರ ಮಾತು ಮೀರಿ ನೀವು ಹಣ್ಣನ್ನು ತಿಂದರೂ ಸಾಯುವುದಿಲ್ಲ’ ಎಂದು ಅವನು ಹವ್ವಳಿಗೆ ಸುಳ್ಳು ಸಹ ಹೇಳಿದನು. ಆಗ ಅವಳು ಹಣ್ಣನ್ನು ತಿಂದಳು, ತನ್ನ ಗಂಡನಿಗೂ ಕೊಟ್ಟಳು. ಆ ಹಣ್ಣನ್ನು ತಿನ್ನಬಾರದೆಂದು ದೇವರು ಹೇಳಿದ್ದಾನೆ ಅಂತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಅವರು ಆ ಹಣ್ಣನ್ನು ತಿಂದರು. ಹೀಗೆ ಅವರು ದೇವರ ಸ್ಪಷ್ಟವಾದ, ಸುಲಭವಾದ ಆಜ್ಞೆಯನ್ನು ಮುರಿದರು. ತಮ್ಮ ತಂದೆಯಾಗಿದ್ದ ಯೆಹೋವ ದೇವರು ತೋರಿಸಿದ ಅಪಾರ ಪ್ರೀತಿಯನ್ನು ಮರೆತು ಆತನಿಗೆ ಅಗೌರವವನ್ನು ತೋರಿಸಿದರು. ಅವರು ಮಾಡಿದ ಆ ತಪ್ಪಿಗೆ ಕ್ಷಮೆ ಅನ್ನುವುದೇ ಇರಲಿಲ್ಲ.
12. ಆದಾಮ ಮತ್ತು ಹವ್ವ ದೇವರಿಗೆ ತಿರುಗಿಬಿದ್ದ ಬಗ್ಗೆ ಯೋಚಿಸುವಾಗ ನಮಗೆ ಯಾಕೆ ಬೇಜಾರಾಗುತ್ತದೆ?
12 ಸೃಷ್ಟಿಕರ್ತ ದೇವರಿಗೆ ಆದಾಮ ಮತ್ತು ಹವ್ವ ಸ್ವಲ್ಪವೂ ಗೌರವ ತೋರಿಸದಿದ್ದ ಬಗ್ಗೆ ಯೋಚಿಸುವಾಗ ನಮಗೆಷ್ಟು ಬೇಜಾರು ಆಗುತ್ತದೆ ಅಲ್ವಾ? ಯೋಚಿಸಿ, ಅಪ್ಪಅಮ್ಮ ಕಷ್ಟಪಟ್ಟು ದುಡಿದು ಮಗ ಮತ್ತು ಮಗಳನ್ನು ಬೆಳೆಸಿರುತ್ತಾರೆ. ಮುಂದೊಂದು ದಿನ ಅದೇ ಮಕ್ಕಳು ಅವರ ಮಾತು ಕೇಳದೆ ತಿರುಗಿಬಿದ್ದರೆ ಆ ಅಪ್ಪಅಮ್ಮನಿಗೆ ಹೇಗೆ ಅನಿಸುತ್ತದೆ? ಹೃದಯ ಒಡೆದು ಹೋಗುತ್ತದೆ ತಾನೆ?
13. ‘ನೀನು ಪುನಃ ಮಣ್ಣಿಗೆ ಸೇರುತ್ತೀ’ ಎಂದು ಯೆಹೋವನು ಹೇಳಿದ್ದರ ಅರ್ಥವೇನಾಗಿತ್ತು?
13 ಆದಾಮ ಮತ್ತು ಹವ್ವ ದೇವರ ಮಾತನ್ನು ಮೀರಿದ ಕ್ಷಣವೇ ಸದಾಕಾಲ ಜೀವಿಸುವ ಸೌಭಾಗ್ಯವನ್ನು ಕಳೆದುಕೊಂಡರು. ಯೆಹೋವ ದೇವರು ಆದಾಮನಿಗೆ, ‘ನೀನು ಮಣ್ಣೇ; ಪುನಃ ಮಣ್ಣಿಗೆ ಸೇರುತ್ತೀ’ ಎಂದು ಹೇಳಿದನು. (ಆದಿಕಾಂಡ 3:19 ಓದಿ.) ಅದರರ್ಥ ಆದಾಮನು ಮತ್ತೆ ಮಣ್ಣಾಗಲಿದ್ದನು. ಅವನನ್ನು ಸೃಷ್ಟಿಸಿಯೇ ಇಲ್ಲವೇನೋ ಅನ್ನುವಂಥ ರೀತಿಯಲ್ಲಿ ಆಗಲಿದ್ದನು. (ಆದಿಕಾಂಡ 2:7) ಆದಾಮನು ಪಾಪ ಮಾಡಿದ ನಂತರ ಸತ್ತು ಹೋದನು, ಅವನ ಜೀವನ ಅಲ್ಲಿಗೇ ಮುಗಿದು ಹೋಯಿತು.
14. ನಾವೇಕೆ ಸಾಯುತ್ತೇವೆ?
14 ಒಂದುವೇಳೆ ಆದಾಮ ಮತ್ತು ಹವ್ವ ದೇವರ ಮಾತು ಕೇಳಿರುತ್ತಿದ್ದರೆ ಈಗಲೂ ಬದುಕಿರುತ್ತಿದ್ದರು. ಆದರೆ ಅವರು ದೇವರಿಗೆ ಅವಿಧೇಯರಾದರು. ದೇವರ ವಿರುದ್ಧ ಪಾಪಮಾಡಿದರು. ಈ ಕಾರಣದಿಂದ ಕೊನೆಗೆ ಸತ್ತು ಹೋದರು. ಅವರ ಪಾಪ ರೋಗದಂತೆ ನಮಗೂ ಬಂತು. ನಾವೆಲ್ಲರೂ ಪಾಪಿಗಳಾಗಿ ಹುಟ್ಟಿದೆವು. ಹಾಗಾಗಿ ನಾವೂ ಸಾಯುತ್ತೇವೆ. (ರೋಮನ್ನರಿಗೆ 5:12) ಆದರೆ ಮನುಷ್ಯರಿಗೆ ಸಾವು ಬರಲಿ ಎಂದು ದೇವರು ಯಾವತ್ತೂ ಬಯಸಿರಲಿಲ್ಲ. ಹಾಗಾಗಿಯೇ ಸಾವನ್ನು ಬೈಬಲಿನಲ್ಲಿ “ಶತ್ರು” ಎಂದು ಕರೆಯಲಾಗಿದೆ.—1 ಕೊರಿಂಥ 15:26.
ಸುಳ್ಳು ನಂಬಿಕೆಗಳಿಂದ ಬಿಡುಗಡೆ
15. ಸಾವಿನ ಕುರಿತಾದ ಸತ್ಯ ನಮ್ಮನ್ನು ಯಾವೆಲ್ಲ ಸುಳ್ಳು ನಂಬಿಕೆಗಳಿಂದ ಬಿಡಿಸುತ್ತದೆ?
15 ಸತ್ತಾಗ ಏನಾಗುತ್ತದೆ ಎನ್ನುವುದರ ಬಗ್ಗೆ ಅನೇಕ ಸುಳ್ಳು ನಂಬಿಕೆಗಳಿವೆ. ಸಾವಿನ ಕುರಿತು ಸತ್ಯ ತಿಳಿದುಕೊಂಡಾಗ ಆ ಎಲ್ಲ ಸುಳ್ಳು ನಂಬಿಕೆಗಳಿಂದ ನಮಗೆ ಬಿಡುಗಡೆ ಸಿಗುತ್ತದೆ. ಸತ್ತವರು ಯಾವುದೇ ರೀತಿಯ ನೋವು ದುಃಖ ಅನುಭವಿಸುವುದಿಲ್ಲ ಎಂದು ಬೈಬಲ್ ಕಲಿಸುತ್ತದೆ. ಸತ್ತವರೊಂದಿಗೆ ನಾವಾಗಲಿ ನಮ್ಮೊಂದಿಗೆ ಸತ್ತವರಾಗಲಿ ಮಾತಾಡಲು ಆಗುವುದಿಲ್ಲ. ಅವರು ನಮಗೆ, ನಾವು ಅವರಿಗೆ ಸಹಾಯ ಮಾಡಲು ಆಗುವುದಿಲ್ಲ. ಅವರು ದೆವ್ವವಾಗಿ ನಮಗೆ ಕಾಟವನ್ನೂ ಕೊಡುವುದಿಲ್ಲ. ಹಾಗಾಗಿ ನಾವು ಅವರಿಗೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಅನೇಕ ಧರ್ಮಗಳವರು ಇದಕ್ಕೆ ವಿರುದ್ಧವಾದ ವಿಷಯವನ್ನು ಕಲಿಸುತ್ತಾರೆ. ಸತ್ತವರು ಎಲ್ಲೋ ಬದುಕಿರುತ್ತಾರೆ, ಧರ್ಮಗುರುಗಳಿಗೆ ದುಡ್ಡು ಕೊಟ್ಟರೆ ಸತ್ತವರ ಆತ್ಮಕ್ಕೆ ಶಾಂತಿ ಮಾಡಿಸುತ್ತಾರೆ ಅಂತ ಹೇಳುತ್ತಾರೆ. ಆದರೆ ಸತ್ಯ ಏನೆಂದು ನಾವು ತಿಳಿದುಕೊಂಡಾಗ ಇಂಥ ಸುಳ್ಳುಗಳಿಂದ ಮೋಸ ಹೋಗುವುದಿಲ್ಲ.
16. ಸತ್ತವರ ಬಗ್ಗೆ ಅನೇಕ ಧರ್ಮಗಳವರು ಯಾವ ಸುಳ್ಳನ್ನು ಕಲಿಸುತ್ತಾರೆ?
16 ಸೈತಾನನು ಸುಳ್ಳು ಧರ್ಮಗಳನ್ನು ಬಳಸಿ ಸತ್ತವರ ಕುರಿತು ನಮಗೆ ಸುಳ್ಳು ಹೇಳುತ್ತಾನೆ. ಉದಾಹರಣೆಗೆ, ನಾವು ಸತ್ತರೂ ನಮ್ಮಲ್ಲಿರುವ ಆತ್ಮ ಸಾಯುವುದಿಲ್ಲ, ಅದು ಬದುಕಿರುತ್ತದೆ ಅಂತ ಕೆಲವು ಧರ್ಮಗಳಲ್ಲಿ ಕಲಿಸುತ್ತಾರೆ. ಸತ್ತವರ ಬಗ್ಗೆ ನಿಮ್ಮ ಧರ್ಮದಲ್ಲಿ ಕಲಿಸುವಂಥ ವಿಷಯಗಳು ಮತ್ತು ಬೈಬಲಿನಲ್ಲಿ ಹೇಳುವಂಥ ವಿಷಯಗಳು ಒಂದೇ ಆಗಿವೆಯಾ? ಜನರನ್ನು ಹೇಗಾದರೂ ಮಾಡಿ ಯೆಹೋವ ದೇವರಿಂದ ದೂರ ಮಾಡಬೇಕೆನ್ನುವುದೇ ಸೈತಾನನ ಉದ್ದೇಶ. ಹಾಗಾಗಿ ಅವನು ಇಂಥ ಸುಳ್ಳುಗಳನ್ನು ಹೇಳುತ್ತಾನೆ.
17. ಕೆಟ್ಟ ಜನರನ್ನು ನರಕದಲ್ಲಿ ನಿತ್ಯಕ್ಕೂ ಸುಡಲಾಗುತ್ತದೆ ಎಂದು ಹೇಳಿದರೆ ದೇವರಿಗೆ ಅವಮಾನ ಮಾಡಿದಂತೆ. ಯಾಕೆ?
17 ಸತ್ತವರ ಬಗ್ಗೆ ಕೆಲವು ಧರ್ಮಗಳಲ್ಲಿ ಕಲಿಸುವ ವಿಷಯಗಳನ್ನು ಕೇಳಿಸಿಕೊಳ್ಳುವಾಗಲೇ ಭಯವಾಗುತ್ತದೆ. ಉದಾಹರಣೆಗೆ, ಕೆಟ್ಟ ಜನರು ಸತ್ತ ಮೇಲೆ ನರಕಕ್ಕೆ ಹೋಗುತ್ತಾರೆ, ಅಲ್ಲಿ ಅವರನ್ನು ನಿತ್ಯಕ್ಕೂ ಬೆಂಕಿಯಲ್ಲಿ ಸುಡುತ್ತಾ ಚಿತ್ರಹಿಂಸೆ ಕೊಡಲಾಗುತ್ತದೆ ಎಂದು ಕಲಿಸುತ್ತಾರೆ. ಯೋಚಿಸಿ, ಈ ಸುಳ್ಳಿನಿಂದ ದೇವರಿಗೆಷ್ಟು ಅವಮಾನ ಆಗಬಹುದು! ಜನರು ಈ ರೀತಿ ನರಳುವಂತೆ ಆತನು ಖಂಡಿತ ಬಿಡುವುದಿಲ್ಲ. (1 ಯೋಹಾನ 4:8 ಓದಿ.) ಯಾರಾದರೂ ತಮ್ಮ ಮಗು ತಪ್ಪು ಮಾಡಿದ್ದಕ್ಕಾಗಿ ಅದರ ಕೈಯನ್ನು ಬೆಂಕಿಯಲ್ಲಿ ಸುಟ್ಟರೆ ನಿಮಗೆ ಹೇಗೆ ಅನಿಸುತ್ತದೆ? ಹಾಗೆ ಮಾಡುವವರು ಎಂಥ ಕ್ರೂರಿ ಎಂದು ಅನಿಸುತ್ತದಲ್ವಾ? ನೀವು ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಷ್ಟಪಡುತ್ತೀರಾ? ಇಲ್ಲ ತಾನೆ. ನಾವು ಯೆಹೋವ ದೇವರ ಬಗ್ಗೆ ಇದೇರೀತಿ ಯೋಚಿಸಬೇಕಂತ ಸೈತಾನನ ಬಯಕೆ.
18. ಸತ್ತವರಿಗೆ ನಾವು ಹೆದರುವ ಅವಶ್ಯಕತೆ ಇಲ್ಲ ಯಾಕೆ?
18 ಸತ್ತವರು ದೆವ್ವ ಆಗುತ್ತಾರೆ ಎಂದು ಕೆಲವು ಧರ್ಮಗಳಲ್ಲಿ ಕಲಿಸುತ್ತಾರೆ. ಅಷ್ಟೇ ಅಲ್ಲ, ಆ ದೆವ್ವಗಳು ನಮಗೆ ಸಹಾಯಮಾಡುವ ಸ್ನೇಹಿತರಾಗಬಹುದು ಅಥವಾ ನಮ್ಮ ಕಡು ಶತ್ರುಗಳಾಗಬಹುದು ಹಾಗಾಗಿ ಆ ದೆವ್ವಗಳಿಗೆ ಗೌರವ ಕೊಡಬೇಕು ಮತ್ತು ಹೆದರಬೇಕು ಎಂದು ಸಹ ಹೇಳುತ್ತಾರೆ. ಈ ಸುಳ್ಳನ್ನು ನಂಬಿ ಅನೇಕರು ಸತ್ತವರಿಗೆ ಹೆದರುತ್ತಾರೆ. ಹಾಗಾಗಿ ಯೆಹೋವನನ್ನು ಬಿಟ್ಟು ಸತ್ತವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ ಮತ್ತು ಅವರಿಗೆ ಆರಾಧನೆ ಸಹ ಮಾಡುತ್ತಾರೆ. ಆದರೆ, ಈಗಾಗಲೇ ನಾವು ಕಲಿತಂತೆ ಸತ್ತವರಿಗೆ ಯಾವುದೇ ಪ್ರಜ್ಞೆಯಾಗಲಿ ಭಾವನೆಯಾಗಲಿ ಇಲ್ಲ. ಹಾಗಾಗಿ ನಾವು ಅವರಿಗೆ ಹೆದರುವ ಅವಶ್ಯಕತೆಯೇ ಇಲ್ಲ. ನಾವು ಮೆಚ್ಚಿಸಬೇಕಾಗಿರುವುದು ಮತ್ತು ಆರಾಧಿಸಬೇಕಾಗಿರುವುದು ಯೆಹೋವನನ್ನು ಮಾತ್ರ. ಯಾಕೆಂದರೆ ಆತನೇ ನಮ್ಮ ಸೃಷ್ಟಿಕರ್ತ. ಆತನೇ ನಿಜವಾದ ದೇವರು.—ಪ್ರಕಟನೆ 4:11.
19. ಸಾವಿನ ಕುರಿತಾದ ಸತ್ಯ ತಿಳಿದುಕೊಂಡರೆ ನಮಗೆ ಯಾವೆಲ್ಲ ಪ್ರಯೋಜನಗಳಿವೆ?
19 ಸಾವಿನ ಕುರಿತಾದ ಸತ್ಯವನ್ನು ನಾವು ತಿಳಿದುಕೊಂಡರೆ ಧರ್ಮಗಳು ಹೇಳುವ ಇಂಥ ಸುಳ್ಳುಗಳಿಂದ ನಮಗೆ ಬಿಡುಗಡೆ ಸಿಗುತ್ತದೆ. ಅಷ್ಟೇ ಅಲ್ಲ, ನಮ್ಮ ಜೀವನದ ಬಗ್ಗೆ ಮತ್ತು ಭವಿಷ್ಯತ್ತಿನ ಬಗ್ಗೆ ಯೆಹೋವ ದೇವರು ಕೊಟ್ಟಿರುವ ಮಾತನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯವಾಗುತ್ತದೆ.
20. ಮುಂದಿನ ಅಧ್ಯಾಯದಲ್ಲಿ ನಾವು ಏನನ್ನು ಕಲಿಯಲಿದ್ದೇವೆ?
20 ದೇವಭಕ್ತನಾಗಿದ್ದ ಯೋಬ ಎಂಬ ವ್ಯಕ್ತಿ ತುಂಬ ವರ್ಷಗಳ ಹಿಂದೆ ಈ ಪ್ರಶ್ನೆಯನ್ನು ಕೇಳಿದನು, ‘ಮನುಷ್ಯನು ಸತ್ತು ಪುನಃ ಬದುಕುವನೇ?’ (ಯೋಬ 14:14) ಈ ಪ್ರಶ್ನೆಗೆ ದೇವರು ಬೈಬಲಿನಲ್ಲಿ ಕೊಟ್ಟಿರುವ ಉತ್ತರವನ್ನು ನೋಡುವಾಗ ನಮಗೆ ನಿಜಕ್ಕೂ ಖುಷಿಯಾಗುತ್ತದೆ. ಸತ್ತು ಹೋಗಿರುವ ಜನರು ನಿಜವಾಗಿಯೂ ಮತ್ತೆ ಬದುಕಿ ಬರಲು ಸಾಧ್ಯನಾ? ಇದಕ್ಕೆ ಉತ್ತರವನ್ನು ನಾವು ಮುಂದಿನ ಅಧ್ಯಾಯದಲ್ಲಿ ನೋಡೋಣ.
a ಒಬ್ಬನು ಸತ್ತ ಮೇಲೆ ಅವನ ಆತ್ಮ ಬದುಕಿ ಉಳಿಯುತ್ತದೆ ಅಂತ ಕೆಲವರು ನಂಬುತ್ತಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟಿಪ್ಪಣಿ 17ನ್ನು ನೋಡಿ.