ಅವರ ನಂಬಿಕೆಯನ್ನು ಅನುಕರಿಸಿರಿ
“ನಾನು ವಿಶ್ವಾಸವಿಟ್ಟಿದ್ದೇನೆ”
ಮಾರ್ಥಳಿಗೆ ತನ್ನ ಸೋದರನ ಸಮಾಧಿಯ ದೃಶ್ಯ ಕಣ್ಮುಂದೆಯೇ ಇತ್ತು. ಅದೊಂದು ಗುಹೆಯಾಗಿತ್ತು. ಅದರ ಬಾಯಿಯನ್ನು ದೊಡ್ಡ ಕಲ್ಲಿನಿಂದ ಮುಚ್ಚಲಾಗಿತ್ತು. ಆಕೆಯ ಹೃದಯದಲ್ಲಿದ್ದ ದುಃಖವು ಆ ಕಲ್ಲಿನಷ್ಟೇ ಭಾರವಾಗಿತ್ತು. ತನ್ನ ಪ್ರೀತಿಯ ಸೋದರ ಲಾಜರನು ಇನ್ನಿಲ್ಲವೆಂಬದನ್ನು ಆಕೆಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಅವನು ಕೊನೆಯುಸಿರೆಳೆದ ನಂತರದ ಈ ನಾಲ್ಕು ದಿನಗಳು ದುಃಖಶೋಕದಿಂದ ತುಂಬಿದ್ದವು. ಬಂಧುಮಿತ್ರರು ಮತ್ತಿತರರು ತಮ್ಮನ್ನು ಕಾಣಲು ಬಂದು, ಸಂತಾಪಸೂಚಕ ಮಾತುಗಳನ್ನು ಆಡುತ್ತಿದ್ದ ನೆನಪುಗಳು ಆಕೆಯ ಮನಸ್ಸಿನಲ್ಲಿ ಮಸುಮಸುಕಾಗಿ ತುಂಬಿಕೊಂಡಿದ್ದವು.
ಈಗ ಮಾರ್ಥಳ ಮುಂದೆ ಬಂದು ನಿಂತವನು ಲಾಜರನಿಗೆ ಅತಿ ಪ್ರಿಯನಾದ ವ್ಯಕ್ತಿ ಯೇಸು. ಆತನನ್ನು ನೋಡಿ ಮಾರ್ಥಳಿಗೆ ಪುನಃ ದುಃಖ ಉಮ್ಮಳಿಸಿ ಬಂತು ಯಾಕೆಂದರೆ ಇಡೀ ಲೋಕದಲ್ಲಿ ಆಕೆಯ ಸೋದರನನ್ನು ಉಳಿಸಶಕ್ತನಾಗಿದ್ದ ಏಕೈಕ ವ್ಯಕ್ತಿ ಆತನೇ ಆಗಿದ್ದ. ಹಾಗಿದ್ದರೂ ಈಗ, ಬೆಟ್ಟದ ಪಕ್ಕದಲ್ಲಿದ್ದ ಚಿಕ್ಕ ಊರಾದ ಬೇಥಾನ್ಯದ ಹೊರಗೆ ಯೇಸುವನ್ನು ಸಂಧಿಸಿದ್ದು ಮಾರ್ಥಳಿಗೆ ತುಸು ಸಾಂತ್ವನ ತಂದಿತು. ಆತನೊಂದಿಗೆ ಆಕೆ ಕಳೆದ ಕೆಲವೇ ಕ್ಷಣಗಳಲ್ಲಿ ಆತನ ದಯಾಭರಿತ ಮುಖಭಾವ ಮತ್ತು ಯಾವಾಗಲೂ ಉತ್ತೇಜನೀಯವಾಗಿದ್ದ ತೀವ್ರ ಅನುಕಂಪವು ಆಕೆಯನ್ನು ಸಂತೈಸಿದವು. ಆತನು ಆಕೆಗೆ ಕೇಳಿದಂಥ ಪ್ರಶ್ನೆಗಳು ಆಕೆಯ ವಿಶ್ವಾಸ ಮತ್ತು ಪುನರುತ್ಥಾನದ ಕುರಿತ ನಂಬಿಕೆಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ನೆರವಾದವು. ಈ ಸಂಭಾಷಣೆಯೇ ಮಾರ್ಥಳು ನುಡಿದ ಮಾತುಗಳಲ್ಲೇ ಅತ್ಯಂತ ಪ್ರಾಮುಖ್ಯವಾದ ಈ ಮಾತನ್ನು ಹೇಳುವಂತೆ ನಡೆಸಿತು: “ಲೋಕಕ್ಕೆ ಬರಲಿರುವ ದೇವರ ಮಗನಾದ ಕ್ರಿಸ್ತನು ನೀನೇ ಎಂದು ನಾನು ವಿಶ್ವಾಸವಿಟ್ಟಿದ್ದೇನೆ.”—ಯೋಹಾನ 11:27.
ಮಾರ್ಥಳು ಅಸಾಧಾರಣ ನಂಬಿಕೆಯ ಮಹಿಳೆಯಾಗಿದ್ದಳು. ಬೈಬಲಿನಲ್ಲಿ ಆಕೆಯ ಬಗ್ಗೆ ಕೆಲವೇ ಸಂಗತಿಗಳನ್ನು ತಿಳಿಸಲಾಗಿವೆಯಾದರೂ, ನಮ್ಮ ಸ್ವಂತ ನಂಬಿಕೆಯನ್ನು ಬಲಪಡಿಸುವ ಗಹನವಾದ ಪಾಠಗಳನ್ನು ಅವು ಕಲಿಸುತ್ತವೆ. ಹೇಗೆಂದು ತಿಳಿಯಲಿಕ್ಕಾಗಿ, ಮಾರ್ಥಳ ಕುರಿತು ಬೈಬಲಿನಲ್ಲಿರುವ ಮೊದಲ ವೃತ್ತಾಂತವನ್ನು ಪರಿಗಣಿಸೋಣ.
“ಚಿಂತಿತಳಾಗಿದ್ದಿ ಮತ್ತು ಗಲಿಬಿಲಿಗೊಂಡಿದ್ದಿ”
ಇದು ಲಾಜರನು ಸಾಯುವುದಕ್ಕೆ ಕೆಲವು ತಿಂಗಳ ಹಿಂದೆ ನಡೆದಂಥ ಸಂಗತಿ. ಆಗ ಲಾಜರನು ಕ್ಷೇಮವಾಗಿದ್ದನು. ಬೇಥಾನ್ಯದ ಅವನ ಮನೆಗೆ ಅತಿ ಗಣ್ಯ ಅತಿಥಿಯೊಬ್ಬನು ಬರಲಿದ್ದನು. ಆತನು ಯೇಸು ಕ್ರಿಸ್ತನೇ. ಲಾಜರ, ಮಾರ್ಥ, ಮರಿಯರು ಒಡಹುಟ್ಟಿದವರಾಗಿದ್ದರು. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ಮಾರ್ಥಳೇ ಹಿರಿಯಳೆಂದು ಕೆಲವು ಸಂಶೋಧಕರು ಹೇಳುತ್ತಾರೆ. ಯಾಕಂದರೆ ಅವಳು ಆತಿಥೇಯಳಾಗಿ ಕೆಲಸಮಾಡಿದ್ದನ್ನು ಬೈಬಲಿನಲ್ಲಿ ತಿಳಿಸಲಾಗಿದೆ ಮತ್ತು ಕೆಲವೊಂದು ಕಡೆ ಆಕೆಯ ಹೆಸರನ್ನೇ ಮೊದಲು ಪ್ರಸ್ತಾಪಿಸಲಾಗಿದೆ. (ಯೋಹಾನ 11:5) ಅವರಲ್ಲಿ ಯಾರಿಗಾದರೂ ಮದುವೆಯಾಗಿತ್ತೊ ಇಲ್ಲವೊ ಎಂದು ನಮಗೆ ತಿಳಿಯುವ ಸಾಧ್ಯತೆ ಇಲ್ಲ. ಏನೇ ಆಗಿರಲಿ, ಈ ಮೂವರೂ ಯೇಸುವಿನ ಆಪ್ತ ಸ್ನೇಹಿತರಾದದ್ದಂತೂ ನಿಶ್ಚಯ. ಹೆಚ್ಚಿನ ವಿರೋಧ ಮತ್ತು ದ್ವೇಷವನ್ನು ಎದುರಿಸಿದ್ದ ಯೂದಾಯದಲ್ಲಿ ಶುಶ್ರೂಷೆ ನಡೆಸುತ್ತಿದ್ದ ಸಮಯ ಯೇಸು ಬೇಥಾನ್ಯದ ಅವರ ಮನೆಯಲ್ಲಿ ತಂಗುತ್ತಿದ್ದ. ಅವರ ಮನೆಯಲ್ಲಿ ಅವನಿಗೆ ಸಿಗುತ್ತಿದ್ದ ಸಮಾಧಾನ ಹಾಗೂ ಬೆಂಬಲವನ್ನು ಖಂಡಿತ ತುಂಬ ಗಣ್ಯಮಾಡುತ್ತಿದ್ದನು.
ಮನೆಗೆ ಬರುವವರ ಆರಾಮ ಹಾಗೂ ಅತಿಥಿಸತ್ಕಾರದ ಉಸ್ತುವಾರಿ ಮಾರ್ಥಳದ್ದೇ ಆಗಿತ್ತು. ಸದಾ ಕಾರ್ಯಮಗ್ನಳೂ, ಶ್ರಮಜೀವಿಯೂ ಆಗಿದ್ದ ಆಕೆ ಏನಾದರೊಂದು ಕೆಲಸ ಮಾಡಿಕೊಂಡೆ ಇರುತ್ತಿದ್ದಳೆಂದು ತೋರುತ್ತದೆ. ಯೇಸು ಅವರ ಮನೆಗೆ ಬಂದ ಸಂದರ್ಭದಲ್ಲೂ ಹೀಗೆಯೇ ಆಯಿತು. ತನ್ನ ಈ ಪ್ರತಿಷ್ಠಿತ ಅತಿಥಿಗಾಗಿ ಮತ್ತು ಬಹುಶಃ ಆತನೊಂದಿಗೆ ಸಂಚರಿಸುತ್ತಿದ್ದವರಲ್ಲಿ ಕೆಲವರಿಗಾಗಿ ಆಕೆ ಅನೇಕ ಭಕ್ಷ್ಯಗಳ ವಿಶೇಷ ಊಟವನ್ನು ತಯಾರಿಸಲು ಕೂಡಲೇ ಯೋಜಿಸಿದಳು. ಆ ಕಾಲದಲ್ಲಿ ಅತಿಥಿಸತ್ಕಾರಕ್ಕೆ ತುಂಬ ಮಹತ್ವಕೊಡಲಾಗುತ್ತಿತ್ತು. ಅತಿಥಿ ಮನೆಗೆ ಬಂದ ಕೂಡಲೇ ಅವನಿಗೆ ಮುದ್ದಿಟ್ಟು, ಅವನ ಕೆರಗಳನ್ನು ತೆಗೆದು ಪಾದಗಳನ್ನು ತೊಳೆದು, ಅವನ ತಲೆಗೆ ಚೈತನ್ಯಕರ ಸುಗಂಧಭರಿತ ಎಣ್ಣೆ ಹಚ್ಚಿ ಸ್ವಾಗತಿಸಲಾಗುತ್ತಿತ್ತು. (ಲೂಕ 7:44-47) ಅವನ ಊಟ ಮತ್ತು ವಸತಿಯಲ್ಲಿ ಸ್ವಲ್ಪವೂ ಕೊರತೆಯಾಗದ ಹಾಗೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿತ್ತು.
ತಮ್ಮ ಈ ಮುಖ್ಯ ಅತಿಥಿಯ ಸತ್ಕಾರಮಾಡಲು ಮಾರ್ಥ, ಮರಿಯಳಿಗೆ ಒಂದು ರಾಶಿ ಕೆಲಸವಿತ್ತು. ಇವರಿಬ್ಬರಲ್ಲಿ ಹೆಚ್ಚು ಸೂಕ್ಷ್ಮವೇದಿ ಹಾಗೂ ವಿಚಾರಪರಳೆಂದು ಕೆಲವೊಮ್ಮೆ ಹೇಳಲಾಗುವ ಮರಿಯಳು ಖಂಡಿತವಾಗಿ ಆರಂಭದಲ್ಲಿ ಮಾರ್ಥಳ ಜೊತೆ ಕೆಲಸದಲ್ಲಿ ಕೈಜೋಡಿಸಿದ್ದಿರಬೇಕು. ಆದರೆ ಯೇಸು ಬಂದ ನಂತರ ಸನ್ನಿವೇಶ ಬದಲಾಯಿತು. ಏಕೆಂದರೆ ಯೇಸು ಆ ಸಂದರ್ಭವನ್ನು ಬಳಸಿ ಅಲ್ಲಿದ್ದವರಿಗೆ ಬೋಧಿಸಲಾರಂಭಿಸಿದ್ದನು. ಆತನು ಆ ಕಾಲದ ಧಾರ್ಮಿಕ ಮುಖಂಡರಂತಿರಲಿಲ್ಲ. ಸ್ತ್ರೀಯರನ್ನೂ ಗೌರವಿಸುತ್ತಿದ್ದನು. ಆದ್ದರಿಂದ ಅವರಿಗೆ ತನ್ನ ಶುಶ್ರೂಷೆಯ ಮುಖ್ಯ ವಿಷಯವಾದ ದೇವರ ರಾಜ್ಯದ ಕುರಿತು ಕಲಿಸಿದನು. ಮರಿಯಳು ತನಗೆ ಸಿಕ್ಕಿದ ಈ ಅವಕಾಶದಿಂದ ಪುಳಕಿತಳಾಗಿ ಆತನ ಪಾದದ ಬಳಿ ಕೂತುಕೊಂಡು ಮೈಯೆಲ್ಲಾ ಕಿವಿಯಾಗಿಸಿ ಆತನು ಹೇಳುತ್ತಿದ್ದ ಒಂದೊಂದು ಪದವನ್ನೂ ಆಲಿಸಿದಳು.
ಇತ್ತ ಮಾರ್ಥಳಲ್ಲಿ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದ ಉದ್ವೇಗವನ್ನು ನಾವು ಊಹಿಸಿಕೊಳ್ಳಬಹುದು. ಅತಿಥಿಗಳಿಗಾಗಿ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸಲಿಕ್ಕಿತ್ತು, ಇನ್ನೆಷ್ಟೋ ಕೆಲಸಗಳು ಬಾಕಿ ಇದ್ದವು. ಆದ್ದರಿಂದ ಆಕೆಯ ಚಿಂತೆ, ಕಾತರ ಹೆಚ್ಚೆಚ್ಚಾಗುತ್ತಾ ಇತ್ತು. ಆಕೆ ತನ್ನ ಕೆಲಸದಲ್ಲಿ ಆಚೀಚೆ ಹೋಗುತ್ತಿದ್ದಾಗ ಮರಿಯಳು ತನಗೆ ಸಹಾಯಮಾಡುವುದನ್ನು ಬಿಟ್ಟು ಅಲ್ಲಿ ಸುಮ್ಮನೆ ಕೂತಿದ್ದದ್ದನ್ನು ನೋಡಿ ಆಕೆಯ ಮುಖ ಸಿಟ್ಟಿನಿಂದ ಕೆಂಪೇರಿತೊ, ಆಯಾಸದಿಂದ ನಿಟ್ಟುಸಿರುಗರೆದಳೊ ಇಲ್ಲವೆ ಹುಬ್ಬುಗಂಟಿಕ್ಕಿಕೊಂಡಳೊ? ಹಾಗೆ ಮಾಡಿದ್ದರೂ ಅದರಲ್ಲಿ ಆಶ್ಚರ್ಯವೇನಿಲ್ಲ. ಪಾಪ, ಆಕೆ ಒಬ್ಬಳೇ ಆ ಎಲ್ಲ ಕೆಲಸ ಹೇಗೆ ಮಾಡಿಯಾಳು?
ಮಾರ್ಥಳಿಗೆ ತನ್ನ ಸಿಟ್ಟನ್ನು ತಡೆದುತಡೆದು ಸಾಕಾಯಿತು. ಕೊನೆಗೆ, ಮಾತಾಡುತ್ತಿದ್ದ ಯೇಸುವನ್ನು ಮಧ್ಯೆ ತಡೆದು ಹೀಗೆ ಹೇಳಿಯೇ ಬಿಟ್ಟಳು: “ಕರ್ತನೇ, ನಾನೊಬ್ಬಳೇ ಎಲ್ಲ ಕೆಲಸಗಳನ್ನು ಮಾಡುವಂತೆ ನನ್ನ ಸಹೋದರಿಯು ಬಿಟ್ಟಿರುವುದಕ್ಕೆ ನಿನಗೆ ಚಿಂತೆಯಿಲ್ಲವೆ? ನನಗೆ ಸಹಾಯಮಾಡುವಂತೆ ಅವಳಿಗೆ ಹೇಳು.” (ಲೂಕ 10:40) ಇವು ತೀಕ್ಷ್ಣ ಮಾತುಗಳು. ಹಲವಾರು ಬೈಬಲ್ಗಳು ಆಕೆಯ ಈ ಮಾತುಗಳನ್ನು ಸಾಧಾರಣ ಹೀಗೆ ಭಾಷಾಂತರಿಸುತ್ತವೆ: “ಕರ್ತನೇ . . . ನಿನಗೇನೂ ಅನಿಸುವುದೇ ಇಲ್ವಾ?” ನಂತರ ಆಕೆ, ತನ್ನೊಂದಿಗೆ ಕೆಲಸಮಾಡಲು ಮರಿಯಳಿಗೆ ಬುದ್ಧಿಹೇಳುವಂತೆ ಯೇಸುವಿಗೆ ತಿಳಿಸುತ್ತಾಳೆ.
ಯೇಸು ಕೊಟ್ಟ ಉತ್ತರವು ಮಾರ್ಥಳನ್ನು ಅಚ್ಚರಿಗೊಳಿಸಿದಂತೆ ಅನೇಕ ಬೈಬಲ್ ವಾಚಕರನ್ನೂ ಅಚ್ಚರಿಗೊಳಿಸಿದೆ. ಆತನು ಸೌಮ್ಯವಾಗಿ ಹೇಳಿದ್ದು: “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳ ಬಗ್ಗೆ ಚಿಂತಿತಳಾಗಿದ್ದಿ ಮತ್ತು ಗಲಿಬಿಲಿಗೊಂಡಿದ್ದಿ. ಆದರೆ ಬೇಕಾಗಿರುವುದು ಕೆಲವು ಮಾತ್ರ, ಅಥವಾ ಬರೀ ಒಂದೇ. ಮರಿಯಳಾದರೋ ಒಳ್ಳೆಯ ಭಾಗವನ್ನು ಆರಿಸಿಕೊಂಡಳು ಮತ್ತು ಅದು ಅವಳಿಂದ ತೆಗೆಯಲ್ಪಡುವುದಿಲ್ಲ.” (ಲೂಕ 10:41, 42) ಯೇಸುವಿನ ಮಾತಿನ ಅರ್ಥವೇನಾಗಿತ್ತು? ಮಾರ್ಥಳು ಪ್ರಾಪಂಚಿಕ ಸ್ವಭಾವದವಳೆಂದು ಹೇಳುತ್ತಿದ್ದನೊ? ಅವನಿಗಾಗಿ ಒಳ್ಳೇ ಊಟ ತಯಾರಿಸಿಕೊಡಲು ಅವಳು ಮಾಡುತ್ತಿದ್ದ ಅಷ್ಟೆಲ್ಲ ಶ್ರಮ ವ್ಯರ್ಥವೆಂದು ಹೇಳುತ್ತಿದ್ದನೊ?
ಇಲ್ಲ. ಮಾರ್ಥಳ ಹೇತುಗಳು ಶುದ್ಧವೂ, ಪ್ರೀತಿಪರವೂ ಆಗಿದ್ದವೆಂದು ಯೇಸುವಿಗೆ ಸ್ಪಷ್ಟವಾಗಿ ತಿಳಿದಿತ್ತು. ಅಷ್ಟುಮಾತ್ರವಲ್ಲ, ಬಗೆಬಗೆಯ ಭಕ್ಷ್ಯಭೋಜನ ತಯಾರಿಸಿ ಅತಿಥಿಸತ್ಕಾರ ಮಾಡುವುದು ತಪ್ಪೆಂದು ಆತನಿಗನಿಸಲಿಲ್ಲ. ಸ್ವಲ್ಪ ಸಮಯದ ಹಿಂದೆ ಮತ್ತಾಯನು ಆತನಿಗಾಗಿ “ಒಂದು ದೊಡ್ಡ ಔತಣವನ್ನು” ಏರ್ಪಡಿಸಿದ್ದಾಗ ಸಂತೋಷದಿಂದ ಅಲ್ಲಿಗೆ ಹೋಗಿದ್ದನು. (ಲೂಕ 5:29) ಹೀಗಿರುವುದರಿಂದ ಇಲ್ಲಿ ಸಮಸ್ಯೆ, ಮಾರ್ಥಳು ತಯಾರಿಸುತ್ತಿದ್ದ ಊಟ ಅಲ್ಲ ಬದಲಾಗಿ ಆಕೆಯ ತಪ್ಪಾದ ಆದ್ಯತೆಯೇ ಆಗಿತ್ತು. ಭರ್ಜರಿ ಊಟದ ತಯಾರಿಯಲ್ಲೇ ಅವಳೆಷ್ಟು ತಲ್ಲೀನಳಾಗಿದ್ದಳೆಂದರೆ ಅತಿ ಮುಖ್ಯ ವಿಷಯವನ್ನೇ ಅಲಕ್ಷಿಸಿದ್ದಳು. ಅದೇನಾಗಿತ್ತು?
ಯೆಹೋವ ದೇವರ ಏಕೈಕ ಮಗನಾದ ಯೇಸು ಮಾರ್ಥಳ ಮನೆಗೆ ಬಂದದ್ದು ಸತ್ಯವನ್ನು ಕಲಿಸಲಿಕ್ಕಾಗಿ. ಇದಕ್ಕಿಂತ ಆಕೆಯ ಸ್ವಾದಿಷ್ಟ ಊಟವಾಗಲಿ ಅದಕ್ಕಾಗಿ ಆಕೆ ಮಾಡುತ್ತಿದ್ದ ತಯಾರಿಯಾಗಲಿ ಹೆಚ್ಚು ಮುಖ್ಯವಾಗಿರಲಿಲ್ಲ. ನಂಬಿಕೆಯನ್ನು ಬಲಪಡಿಸಲು ಇದ್ದ ಈ ಅವಕಾಶವನ್ನು ಮಾರ್ಥಳು ಕೈಜಾರಿ ಹೋಗುವಂತೆ ಬಿಡುವುದನ್ನು ನೋಡಿ ಯೇಸುವಿಗೆ ಖಂಡಿತ ದುಃಖ ಆಗಿರಬೇಕು. ಹಾಗಿದ್ದರೂ ಆಕೆಯೇ ಆಯ್ಕೆಮಾಡಲೆಂದು ಯೇಸು ಬಿಟ್ಟನು. ಆದರೆ ಮರಿಯಳು ಸಹ ಆ ಅವಕಾಶವನ್ನು ಕೈಬಿಡುವಂತೆ ಒತ್ತಾಯಿಸಬೇಕೆಂದು ಮಾರ್ಥಳು ಯೇಸುವಿಗೆ ಹೇಳಿದ್ದು ಆತನಿಗೆ ಸರಿಯನಿಸಲಿಲ್ಲ.
ಆದ್ದರಿಂದ ಆತನು ಮಾರ್ಥಳನ್ನು ನಯವಾಗಿ ತಿದ್ದಿದನು. ಉದ್ವೇಗಗೊಂಡಿದ್ದ ಆಕೆಯನ್ನು ‘ಮಾರ್ಥ, ಮಾರ್ಥ’ ಎಂದು ಎರಡೆರಡು ಸಲ ಹೆಸರು ಕರೆದು ಸಮಾಧಾನಪಡಿಸಿದನು. ‘ಅನೇಕ ವಿಷಯಗಳ ಬಗ್ಗೆ ಚಿಂತಿತಳಾಗಿರುವ, ಗಲಿಬಿಲಿಗೊಂಡಿರುವ’ ಅಗತ್ಯವಿಲ್ಲವೆಂದೂ ಬರೇ ಒಂದೆರಡು ಭಕ್ಷ್ಯಗಳಿರುವ ಸಾದಾ ಊಟ ಸಾಕಾಗಿತ್ತೆಂದು ಯೇಸು ಹೇಳಿದನು. ಏಕೆಂದರೆ ಅಲ್ಲೊಂದು ಆಧ್ಯಾತ್ಮಿಕ ಔತಣವೇ ಇತ್ತಲ್ಲವೇ? ಆದ್ದರಿಂದ, ಮರಿಯಳು ಆಯ್ಕೆಮಾಡಿದ್ದ “ಒಳ್ಳೆಯ ಭಾಗ” ಅಂದರೆ ಯೇಸುವಿನಿಂದ ಕಲಿಯುವ ಅವಕಾಶವನ್ನು ಯಾವ ಕಾರಣಕ್ಕೂ ಆಕೆಯಿಂದ ತೆಗೆದುಬಿಡಲು ಆತನು ಸಿದ್ಧನಿರಲಿಲ್ಲ!
ಮಾರ್ಥಳ ಮನೆಯಲ್ಲಿ ನಡೆದದ್ದನ್ನು ವರ್ಣಿಸುವ ಈ ಚಿಕ್ಕ ವೃತ್ತಾಂತದಲ್ಲಿ ಇಂದು ಕ್ರಿಸ್ತನ ಹಿಂಬಾಲಕರಿಗಾಗಿ ಹಲವಾರು ಪಾಠಗಳಿವೆ. ನಮ್ಮ “ಆಧ್ಯಾತ್ಮಿಕ ಅಗತ್ಯವನ್ನು” ಪೂರೈಸುವುದನ್ನು ನಾವೆಂದೂ ಅಲಕ್ಷಿಸಬಾರದು. (ಮತ್ತಾಯ 5:3) ನಾವು ಮಾರ್ಥಳ ಉದಾರಭಾವ, ಶ್ರಮಜೀವಿ ಸ್ವಭಾವವನ್ನು ಅನುಕರಿಸಬೇಕು ನಿಜ. ಆದರೆ ಅದೇ ಸಮಯದಲ್ಲಿ ನಾವು ಅತಿಥಿಸತ್ಕಾರ ಮಾಡುವಾಗ ಅಡಿಗೆ ಮುಂತಾದ ಕಡಿಮೆ ಮಹತ್ವದ ವಿಷಯಗಳ ಕುರಿತೇ ಅತಿಯಾಗಿ ಚಿಂತಿತರಾಗಿರದೆ, ನಿಜವಾಗಿಯೂ ಹೆಚ್ಚು ಪ್ರಾಮುಖ್ಯವಾದ ಅಂಶವನ್ನು ಮನಸ್ಸಿನಲ್ಲಿಡಬೇಕು. ಯಾಕೆಂದರೆ ನಾವು ಜೊತೆ ವಿಶ್ವಾಸಿಗಳೊಂದಿಗೆ ಸಹವಾಸ ಮಾಡುವುದು ಬರೇ ಭರ್ಜರಿ ಊಟ ಬಡಿಸಲಿಕ್ಕಾಗಿ ಇಲ್ಲವೆ ಸೇವಿಸಲಿಕ್ಕಾಗಿ ಅಲ್ಲ ಬದಲಾಗಿ ಆಧ್ಯಾತ್ಮಿಕ ವರಗಳನ್ನು ಕೊಡಲಿಕ್ಕಾಗಿ ಹಾಗೂ ಉತ್ತೇಜನದ ಪರಸ್ಪರ ವಿನಿಮಯಕ್ಕಾಗಿಯೇ. (ರೋಮನ್ನರಿಗೆ 1:11, 12) ಸಾದಾ ಊಟವಿದ್ದರೂ ಇಂಥ ಸಂದರ್ಭಗಳು ಭಕ್ತಿವರ್ಧಕವಾಗಿರಬಲ್ಲವು.
ಪ್ರಿಯ ಸೋದರನು ಸತ್ತನು, ಪುನಃ ಬದುಕಿದನು
ಯೇಸು ಕೊಟ್ಟ ಸೌಮ್ಯ ಗದರಿಕೆಯನ್ನು ಮಾರ್ಥಳು ಸ್ವೀಕರಿಸಿ, ಪಾಠವನ್ನು ಕಲಿತಳೊ? ಅದರ ಬಗ್ಗೆ ಸಂದೇಹವಿಲ್ಲ. ಯಾಕಂದರೆ ಯೇಸುವಿನ ಈ ಭೇಟಿಯ ಹಲವಾರು ತಿಂಗಳ ಬಳಿಕ ಮಾರ್ಥಳ ಸೋದರನಿಗೆ ಸಂಬಂಧಪಟ್ಟ ಘಟನೆಯ ಕುರಿತು ಶಿಷ್ಯ ಯೋಹಾನನು ಬರೆದ ವೃತ್ತಾಂತವು ಆರಂಭದಲ್ಲೇ ನಮಗೆ ಜ್ಞಾಪಕಹುಟ್ಟಿಸುವುದು: “ಯೇಸುವಿಗೆ ಮಾರ್ಥ, ಅವಳ ಸಹೋದರಿ ಮತ್ತು ಲಾಜರನ ಮೇಲೆ ಪ್ರೀತಿ ಇತ್ತು.” (ಯೋಹಾನ 11:5) ಯೇಸು ಪ್ರೀತಿಯಿಂದ ಸಲಹೆ ಕೊಟ್ಟಾಗ ಮಾರ್ಥಳು ಮುನಿಸಿಕೊಂಡು ಮುಖ ಊದಿಸಿಕೊಂಡಿರಲಿಲ್ಲ, ಇಲ್ಲವೆ ಮನಸ್ಸಲ್ಲೇ ಅಸಮಾಧಾನ ಇಟ್ಟುಕೊಂಡಿರಲಿಲ್ಲ ಎಂಬುದು ಸ್ಪಷ್ಟ. ಆತನ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿ, ಅನ್ವಯಿಸಿದ್ದಳು. ಈ ವಿಷಯದಲ್ಲೂ ಆಕೆ ನಮಗಾಗಿ ನಂಬಿಕೆಯ ಉತ್ತಮ ಮಾದರಿ. ಏಕೆಂದರೆ ನಮ್ಮಲ್ಲಿ ಎಲ್ಲರಿಗೂ ಆಗಾಗ್ಗೆ ತಿದ್ದುಪಾಟು ಸಿಗುತ್ತದಲ್ಲವೇ?
ಮಾರ್ಥಳ ಸೋದರ ಅಸ್ವಸ್ಥನಾದಾಗ, ಅವಳು ಅವನ ಆರೈಕೆಯಲ್ಲೇ ತಲ್ಲೀನಳಾದಳು. ಅವನ ನೋವನ್ನು ಶಮನಗೊಳಿಸಿ, ಗುಣಮುಖನಾಗುವಂತೆ ಕೈಲಾದದ್ದೆಲ್ಲವನ್ನೂ ಮಾಡಿದಳು. ಆದರೂ ಲಾಜರನ ಅಸ್ವಸ್ಥತೆ ಹೆಚ್ಚುತ್ತಾ ಹೋಯಿತು. ದಿನರಾತ್ರಿಯೆನ್ನದೆ ಪ್ರತಿ ತಾಸೂ ಅವನ ಶುಶ್ರೂಷೆ ಮಾಡುತ್ತಾ ಅವನ ಸೋದರಿಯರು ಪಕ್ಕದಲ್ಲೇ ಇದ್ದರು. ಮಾರ್ಥಳು ತನ್ನ ಸೋದರನ ಕಳೆಗುಂದಿದ ಮೋರೆಯನ್ನು ಎಷ್ಟೋ ಸಲ ದಿಟ್ಟಿಸುತ್ತಾ, ಅವರು ಅನೇಕ ವರ್ಷಗಳ ಕಾಲ ಹಂಚಿಕೊಂಡಿದ್ದ ಸುಖದುಃಖದ ಸಮಯಗಳನ್ನು ನೆನಸಿಕೊಂಡಿರಬೇಕಲ್ಲವೇ?
ಲಾಜರನಿಗೆ ಇನ್ನು ಮುಂದೆ ತಾವು ಯಾವ ಸಹಾಯವನ್ನೂ ಮಾಡಲಾರೆವೆಂದು ಮಾರ್ಥ, ಮರಿಯಳಿಗೆ ಅನಿಸಿದಾಗ ಅವರು ಯೇಸುವಿಗೆ ಸುದ್ದಿ ಕಳುಹಿಸಿದರು. ಆತನು ಬೇಥಾನ್ಯದಿಂದ ಎರಡು ದಿನಗಳ ಪ್ರಯಾಣದಷ್ಟು ದೂರದ ಸ್ಥಳದಲ್ಲಿ ಸಾರುತ್ತಿದ್ದನು. “ಕರ್ತನೇ, ನಿನಗೆ ಯಾರ ಮೇಲೆ ಮಮತೆಯಿದೆಯೋ ಅವನು ಅಸ್ವಸ್ಥನಾಗಿದ್ದಾನೆ” ಎಂಬ ಚುಟುಕಾದ ಸುದ್ದಿ ಕಳುಹಿಸಿದರು. (ಯೋಹಾನ 11:1, 3) ತಮ್ಮ ಸೋದರನ ಮೇಲೆ ಯೇಸುವಿಗೆ ತುಂಬ ಪ್ರೀತಿಯಿದೆಯೆಂದು ಅವರಿಗೆ ತಿಳಿದಿತ್ತು. ತನ್ನ ಮಿತ್ರನ ಸಹಾಯಕ್ಕಾಗಿ ತನ್ನಿಂದಾದದ್ದೆಲ್ಲವನ್ನು ಮಾಡುವನೆಂಬ ನಂಬಿಕೆಯೂ ಇತ್ತು. ಕಾಲ ಮಿಂಚಿ ಹೋಗುವ ಮುಂಚೆ ಯೇಸು ತಮ್ಮಲ್ಲಿಗೆ ತಲಪುವನೆಂದು ನೆನಸುತ್ತಾ ಆತನ ದಾರಿ ಕಾಯುತ್ತಿದ್ದರೋ? ಹಾಗಿದ್ದಲ್ಲಿ ಅವರ ಆ ನಿರೀಕ್ಷೆ ನುಚ್ಚುನೂರಾಯಿತು. ಲಾಜರನು ಸತ್ತು ಹೋದನು.
ಮಾರ್ಥ, ಮರಿಯ ತಮ್ಮ ಸೋದರನ ಮರಣಕ್ಕಾಗಿ ಶೋಕಿಸಿದರು. ಅವನ ಹೂಳುವಿಕೆಗಾಗಿ ತಯಾರಿಗಳನ್ನು ಮಾಡಿದರು. ಬೇಥಾನ್ಯ ಹಾಗೂ ಸುತ್ತಮುತ್ತಲಿನ ಸ್ಥಳಗಳಿಂದ ಬಂದ ಅನೇಕ ಬಂಧುಮಿತ್ರರು, ಪರಿಚಯಸ್ಥರನ್ನು ಬರಮಾಡಿದರು. ಇಷ್ಟೆಲ್ಲ ಆದರೂ ಯೇಸುವಿನ ಸುದ್ದಿಯೇ ಇಲ್ಲ. ಯಾಕೆ ಎಂಬ ಪ್ರಶ್ನೆ ಸಮಯ ದಾಟಿದಂತೆ ಖಂಡಿತವಾಗಿ ಮಾರ್ಥಳ ಮನಸ್ಸಲ್ಲಿ ದೈತ್ಯಾಕಾರ ತಾಳಿತು. ಕೊನೆಗೆ ಲಾಜರನು ಸತ್ತು ನಾಲ್ಕು ದಿನಗಳ ಬಳಿಕ ಯೇಸು ತಮ್ಮ ಊರಿಗೆ ಸಮೀಪವಾಗುತ್ತಿದ್ದಾನೆಂಬ ಸುದ್ದಿ ಮಾರ್ಥಳಿಗೆ ಸಿಕ್ಕಿತು. ಯಾವಾಗಲೂ ಪಾದರಸದಂತೆ ಚುರುಕಾಗಿರುವ ಈಕೆ ಈ ದುಃಖದ ಸಮಯದಲ್ಲೂ ಯೇಸುವನ್ನು ಎದುರುಗೊಳ್ಳಲು ಓಡಿದಳು. ಮರಿಯಳಿಗೂ ಹೇಳಲಿಲ್ಲ.—ಯೋಹಾನ 11:20.
ಅನೇಕ ದಿನಗಳಿಂದ ತನ್ನ ಹಾಗೂ ಮರಿಯಳ ಮನಸ್ಸನ್ನು ಕೊರೆಯುತ್ತಿದ್ದ ಈ ವಿಚಾರವನ್ನು ಕರ್ತನಾದ ಯೇಸುವನ್ನು ಕಂಡಾಕ್ಷಣ ಬಾಯಿಬಿಟ್ಟು ಹೇಳಿದಳು: “ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ.” ಹಾಗಿದ್ದರೂ ಮಾರ್ಥಳಿಗಿದ್ದ ನಿರೀಕ್ಷೆ, ನಂಬಿಕೆ ಬತ್ತಿಹೋಗಿರಲಿಲ್ಲ. ಅವಳು ಮತ್ತೂ ಹೇಳಿದ್ದು: “ಆದರೆ ಈಗಲೂ ದೇವರಿಂದ ನೀನು ಏನೆಲ್ಲ ಬೇಡಿಕೊಳ್ಳುತ್ತೀಯೋ ಅದೆಲ್ಲವನ್ನು ಆತನು ನಿನಗೆ ಕೊಡುವನೆಂದು ಬಲ್ಲೆನು.” ಆಗ ಯೇಸು ಆಕೆಯ ಆ ನಿರೀಕ್ಷೆಯನ್ನು ಬಲಪಡಿಸುವ ಮಾತನ್ನಾಡುತ್ತಾ ಹೇಳಿದ್ದು: “ನಿನ್ನ ಸಹೋದರನು ಎದ್ದುಬರುವನು.”—ಯೋಹಾನ 11:21-23.
ಭವಿಷ್ಯದಲ್ಲಾಗಲಿರುವ ಪುನರುತ್ಥಾನದ ಬಗ್ಗೆ ಯೇಸು ಹೇಳುತ್ತಿದ್ದಾನೆಂದು ನೆನಸಿ ಮಾರ್ಥಳು ಉತ್ತರಿಸಿದ್ದು: “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು.” (ಯೋಹಾನ 11:24) ಆ ಬೋಧನೆಯಲ್ಲಿನ ಆಕೆಯ ನಂಬಿಕೆ ಗಮನಾರ್ಹವಾಗಿತ್ತು. ಏಕೆಂದರೆ ಆ ಬೋಧನೆಯು ದೇವಪ್ರೇರಿತ ಹೀಬ್ರು ಶಾಸ್ತ್ರಗ್ರಂಥದಲ್ಲಿ ಸ್ಪಷ್ಟವಾಗಿ ತಿಳಿಸಲ್ಪಟ್ಟಿದ್ದರೂ ಸದ್ದುಕಾಯರೆಂದು ಕರೆಯಲ್ಪಡುತ್ತಿದ್ದ ಕೆಲವು ಯೆಹೂದಿ ಧಾರ್ಮಿಕ ಮುಖಂಡರು ಪುನರುತ್ಥಾನವೇ ಇಲ್ಲವೆಂದು ಹೇಳುತ್ತಿದ್ದರು. (ದಾನಿಯೇಲ 12:13; ಮಾರ್ಕ 12:18) ಆದರೆ ಯೇಸು ಪುನರುತ್ಥಾನದ ನಿರೀಕ್ಷೆಯ ಕುರಿತು ಬೋಧಿಸಿದ್ದನು ಮಾತ್ರವಲ್ಲ ಪುನರುತ್ಥಾನಗಳನ್ನೂ ನಡೆಸಿದ್ದನೆಂದು ಮಾರ್ಥಳಿಗೆ ಗೊತ್ತಿತ್ತು. ಹಾಗಿದ್ದರೂ ಸತ್ತು ನಾಲ್ಕು ದಿನಗಳಾಗಿರುವ ಯಾವ ವ್ಯಕ್ತಿಯನ್ನೂ ಯೇಸು ಅಷ್ಟರ ತನಕ ಜೀವಂತಗೊಳಿಸಿರಲಿಲ್ಲ. ಹೀಗಿರಲಾಗಿ ತನ್ನ ಸೋದರನ ವಿಷಯದಲ್ಲಿ ಏನಾಗಲಿದೆಯೆಂದು ಆಕೆಗೆ ಗೊತ್ತಿರಲಿಲ್ಲ.
ಆಗ ಯೇಸು “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ಎಂಬ ಅವಿಸ್ಮರಣೀಯ ಮಾತನ್ನು ಹೇಳಿದನು. ಇದರರ್ಥ ತನ್ನ ಪುತ್ರ ಯೇಸುವಿಗೆ ಭವಿಷ್ಯದಲ್ಲಿ ಭೂಮ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪುನರುತ್ಥಾನಗಳನ್ನು ನಡೆಸುವ ಅಧಿಕಾರವನ್ನು ಯೆಹೋವನು ಕೊಟ್ಟಿದ್ದಾನೆ. ಯೇಸು ಮಾರ್ಥಳಿಗೆ “ನೀನು ಇದನ್ನು ನಂಬುತ್ತೀಯೊ?” ಎಂದು ಕೇಳಿದನು. ಆಗಲೇ ಮಾರ್ಥ ಹೌದೆಂದು ಉತ್ತರ ಕೊಟ್ಟಿದ್ದಳು. ಯೇಸುವೇ ಕ್ರಿಸ್ತನು ಅಥವಾ ಮೆಸ್ಸೀಯನು, ಯೆಹೋವ ದೇವರ ಪುತ್ರನು, ಪ್ರವಾದಿಗಳು ಮುಂತಿಳಿಸಿದಂತೆ ಈ ಲೋಕಕ್ಕೆ ಬಂದವನೆಂಬ ನಂಬಿಕೆ ಆಕೆಗಿತ್ತು.—ಯೋಹಾನ 5:28, 29; 11:25-27.
ಆ ರೀತಿಯ ನಂಬಿಕೆಗೆ ಯೆಹೋವ ದೇವರ ಮತ್ತು ಆತನ ಪುತ್ರ ಯೇಸು ಕ್ರಿಸ್ತನ ದೃಷ್ಟಿಯಲ್ಲಿ ಏನಾದರೂ ಬೆಲೆಯಿದೆಯೇ? ಅನಂತರ ಮಾರ್ಥಳ ಕಣ್ಮುಂದೆ ಒಂದೊಂದಾಗಿ ನಡೆದ ಘಟನೆಗಳು ಇದಕ್ಕೆ ಅತಿ ಸ್ಪಷ್ಟ ಉತ್ತರ ಕೊಡುತ್ತವೆ. ಅವಳು ಓಡಿಹೋಗಿ ತನ್ನ ಸೋದರಿಯನ್ನು ಕರಕೊಂಡು ಬಂದಳು. ಬಳಿಕ, ಯೇಸು ಮರಿಯಳೊಂದಿಗೆ ಹಾಗೂ ಅಲ್ಲಿ ಶೋಕಿಸುತ್ತಿದ್ದ ಅನೇಕರೊಂದಿಗೆ ಮಾತಾಡುವಾಗ ತುಂಬ ಭಾವುಕನಾದದ್ದನ್ನು ನೋಡಿದಳು. ಸಾವು ತರುವ ನೋವಿನಿಂದಾಗಿ ತನಗಾದ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತಾ ಅವನು ಸಂಕೋಚವಿಲ್ಲದೆ ಅತ್ತುಬಿಟ್ಟದ್ದನ್ನೂ ನೋಡಿದಳು. ನಂತರ ಯೇಸು, ಲಾಜರನ ಸಮಾಧಿಗೆ ಹಾಕಲಾಗಿದ್ದ ಕಲ್ಲನ್ನು ಸರಿಸುವಂತೆ ಅಪ್ಪಣೆ ಕೊಡುವುದನ್ನು ಕೇಳಿಸಿಕೊಂಡಳು.—ಯೋಹಾನ 11:28-39.
ವ್ಯವಹಾರಜಾಣೆ ಮಾರ್ಥ ಇದಕ್ಕೆ ಆಕ್ಷೇಪಿಸುತ್ತಾ, ಲಾಜರನು ಸತ್ತು ನಾಲ್ಕು ದಿನಗಳಾಗಿರುವ ಕಾರಣ ಶವವು ನಾರುತ್ತಿರಬೇಕೆಂದು ಹೇಳಿದಳು. ಆಗ ಯೇಸು ಆಕೆಗೆ “ನೀನು ನಂಬುವುದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೊ” ಎಂದು ನೆನಪಿಸಿದನು. ಆಕೆ ನಂಬಿದಳು. ಯೆಹೋವ ದೇವರ ಮಹಿಮೆಯನ್ನು ನೋಡಿದಳು. ಏಕೆಂದರೆ ದೇವರು ತನ್ನ ಪುತ್ರನಿಗೆ ಶಕ್ತಿಕೊಟ್ಟು ಲಾಜರನನ್ನು ಆಗಲೇ ಅಲ್ಲಿಯೇ ಜೀವಂತಗೊಳಿಸಿದನು! ಮಾರ್ಥಳು ಸಾಯುವ ವರೆಗೂ ಅವಳ ಸ್ಮರಣೆಯಲ್ಲಿ ಮುದ್ರೆಯೊತ್ತಿದಂತೆ ಇದ್ದ ಈ ಕ್ಷಣಗಳ ಕುರಿತು ಯೋಚಿಸಿ: “ಲಾಜರನೇ, ಹೊರಗೆ ಬಾ” ಎಂದು ಯೇಸು ಆಜ್ಞಾಪಿಸಿ ಕರೆದದ್ದು; ಲಾಜರನು ಎದ್ದು, ಇನ್ನೂ ಶವ-ಬಟ್ಟೆಗಳಿಂದ ಸುತ್ತಿದ್ದವನಾಗಿ ಗುಹೆಯ ಪ್ರವೇಶದ್ವಾರದೆಡೆಗೆ ನಿಧಾನವಾಗಿ ನಡೆಯುತ್ತಾ ಬರುವಾಗ ಗುಹೆಯೊಳಗಿಂದ ಕೇಳಿಬರುತ್ತಿದ್ದ ಸರಬರ ಸದ್ದು; “ಅವನನ್ನು ಬಿಚ್ಚಿರಿ, ಅವನು ಹೋಗಲಿ” ಎಂದು ಯೇಸು ಆದೇಶಿಸಿದ್ದು; ಮತ್ತು ಮಾರ್ಥ ಮರಿಯರು ಭಾವಪರವಶರಾಗಿ ಓಡಿಹೋಗಿ ಸಂತಸದಿಂದ ತಮ್ಮ ಸೋದರನ ತೋಳತೆಕ್ಕೆಗೆ ಬಿದ್ದದ್ದು. (ಯೋಹಾನ 11:40-44) ಮಾರ್ಥಳ ಹೃದಯದ ಭಾರ ತೆಗೆಯಲ್ಪಟ್ಟಿತ್ತು!
ಈ ವೃತ್ತಾಂತವು ತೋರಿಸಿಕೊಡುವಂತೆ ಸತ್ತವರ ಪುನರುತ್ಥಾನ ಬರೇ ಕಾಲ್ಪನಿಕವಲ್ಲ ಬದಲಾಗಿ ಬೈಬಲಿನ ಒಂದು ಸಾಂತ್ವನದಾಯಕ ಬೋಧನೆ ಹಾಗೂ ನೈಜ ಐತಿಹಾಸಿಕ ಘಟನೆಯಾಗಿದೆ. ನಂಬಿಕೆಯಿಡುವವರಿಗೆ ಯೆಹೋವನೂ ಆತನ ಪುತ್ರನೂ ಪ್ರತಿಫಲ ಕೊಡಲಿಚ್ಛಿಸುತ್ತಾರೆ. ಅವರು ಮಾರ್ಥ, ಮರಿಯ ಹಾಗೂ ಲಾಜರನ ವಿಷಯದಲ್ಲಿ ಅದನ್ನೇ ಮಾಡಿದರು. ಮಾರ್ಥಳಿಗಿದ್ದಷ್ಟು ಬಲವಾದ ನಂಬಿಕೆಯನ್ನು ನೀವೂ ಬೆಳೆಸಿಕೊಂಡರೆ ಖಂಡಿತವಾಗಿ ನಿಮಗೂ ಅಂಥ ಪ್ರತಿಫಲಗಳನ್ನು ಕೊಡುವರು.a
“ಮಾರ್ಥಳು ಉಪಚರಿಸುತ್ತಿದ್ದಳು”
ಬೈಬಲ್ ದಾಖಲೆಯು ಮಾರ್ಥಳ ಬಗ್ಗೆ ಪುನಃ ಒಂದೇ ಬಾರಿ ಪ್ರಸ್ತಾಪಿಸುತ್ತದೆ. ಅದು ಯೇಸುವಿನ ಭೂಜೀವಿತದ ಕೊನೆ ವಾರದ ಆರಂಭವಾಗಿತ್ತು. ತನ್ನ ಮುಂದೆ ಕಾದಿದ್ದ ಕಷ್ಟಗಳ ಬಗ್ಗೆ ಚೆನ್ನಾಗಿ ತಿಳಿದಿದ್ದ ಯೇಸು ಪುನಃ ಒಮ್ಮೆ ಬೇಥಾನ್ಯದಲ್ಲಿ ತಂಗಲು ಆರಿಸಿಕೊಂಡನು. ಅಲ್ಲಿಂದ 3 ಕಿ.ಮೀ. ದೂರದಲ್ಲಿದ್ದ ಯೆರೂಸಲೇಮ್ಗೆ ಆತನು ನಡೆದುಕೊಂಡು ಹೋಗಲಿದ್ದನು. ಯೇಸು ಮತ್ತು ಲಾಜರನು ಕುಷ್ಠರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಊಟಕ್ಕಾಗಿ ಕೂತಿದ್ದರು. ಆಗ, ನಮ್ಮ ಚರ್ಚೆಯ ವಿಷಯವಾಗಿರುವಾಕೆಯ ಈ ಕೊನೆಯ ನಸುನೋಟ ಸಿಗುತ್ತದೆ: “ಮಾರ್ಥಳು ಉಪಚರಿಸುತ್ತಿದ್ದಳು.”—ಯೋಹಾನ 12:2.
ಆ ಶ್ರಮಜೀವಿ ಮಹಿಳೆಯ ಲಕ್ಷಣವೇ ಅದಲ್ಲವೇ? ಬೈಬಲಿನಲ್ಲಿ ನಾವು ಮೊದಲ ಬಾರಿ ಆಕೆಯ ಬಗ್ಗೆ ಓದುವಾಗ ಆಕೆ ಕೆಲಸಮಾಡುತ್ತಿದ್ದಳು. ಈಗ ಆಕೆಯ ಕೊನೆಯ ಪ್ರಸ್ತಾಪದಲ್ಲೂ ಆಕೆ ಕೆಲಸಮಾಡುತ್ತಿದ್ದಾಳೆ. ತನ್ನ ಸುತ್ತಲಿದ್ದವರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ತನ್ನಿಂದಾದುದೆಲ್ಲವನ್ನು ಮಾಡುತ್ತಿದ್ದಾಳೆ. ಇಂದು ಕ್ರಿಸ್ತನ ಹಿಂಬಾಲಕರ ಸಭೆಗಳಲ್ಲೂ ಮಾರ್ಥಳಂಥ ಸ್ತ್ರೀಯರಿದ್ದಾರೆ. ಅವರು ದೃಢಮನಸ್ಕರೂ ಉದಾರಿಗಳೂ ಆಗಿದ್ದು ನಂಬಿಕೆಯನ್ನು ಯಾವಾಗಲೂ ಕ್ರಿಯೆಯಲ್ಲಿ ತೋರಿಸುತ್ತಾ ಇತರರಿಗಾಗಿ ತಮ್ಮ ಸಮಯ, ಶಕ್ತಿಯನ್ನು ಕೊಡುತ್ತಾರೆ. ಮಾರ್ಥಳು ಅದನ್ನೇ ಮಾಡುತ್ತಾ ಮುಂದುವರಿದಿದ್ದಿರಬೇಕು. ಹಾಗೆ ಮಾಡಿದ್ದಿರುವಲ್ಲಿ ಆಕೆ ವಿವೇಕದಿಂದ ಕ್ರಿಯೆಗೈದಳೆಂದು ಹೇಳಬಹುದು. ಏಕೆಂದರೆ ಅವಳು ಮುಂದೆ ಇನ್ನೂ ಕೆಲವೊಂದು ಕಷ್ಟಗಳನ್ನು ಎದುರಿಸಲಿದ್ದಳು.
ಕೆಲವೇ ದಿನಗಳ ಬಳಿಕ ಮಾರ್ಥಳು ತನ್ನ ಪ್ರೀತಿಯ ಕರ್ತನಾದ ಯೇಸುವಿನ ಘೋರ ಮರಣದ ದುಃಖವನ್ನು ಸಹಿಸಿಕೊಳ್ಳಬೇಕಾಯಿತು. ಅಲ್ಲದೆ, ಆತನನ್ನು ಕೊಂದುಹಾಕಿದ ಅದೇ ಕೊಲೆಗಡುಕ ಕಪಟಿಗಳು ಲಾಜರನನ್ನೂ ಕೊಂದುಹಾಕಲು ಪಣತೊಟ್ಟಿದ್ದರು. ಏಕೆಂದರೆ ಅವನ ಪುನರುತ್ಥಾನವು ಅನೇಕಾನೇಕರ ನಂಬಿಕೆಗೆ ಪುಷ್ಟಿಕೊಟ್ಟಿತ್ತು. (ಯೋಹಾನ 12:9-11) ಕಟ್ಟಕಡೆಗೆ ಮರಣವು ಮಾರ್ಥಳನ್ನು ತನ್ನ ಒಡಹುಟ್ಟಿದವರೊಂದಿಗೆ ಹೆಣೆದುಕೊಂಡಿದ್ದ ಪ್ರೀತಿಯ ಬಂಧಗಳನ್ನೂ ಕಡಿದುಹಾಕಿತು. ಇದು ಹೇಗೆ ಅಥವಾ ಯಾವಾಗ ಆಯಿತೆಂದು ನಮಗೆ ಗೊತ್ತಿಲ್ಲದಿದ್ದರೂ, ಮಾರ್ಥಳಿಗಿದ್ದ ಅಮೂಲ್ಯ ನಂಬಿಕೆಯು ಆಕೆ ಕೊನೆ ತನಕ ತಾಳಿಕೊಳ್ಳಲು ಸಹಾಯ ಮಾಡಿತೆಂಬುದಂತೂ ನಿಶ್ಚಯ. ಆದ್ದರಿಂದ ಇಂದು ಕ್ರೈಸ್ತರು ಮಾರ್ಥಳ ನಂಬಿಕೆಯನ್ನು ಅನುಕರಿಸುವುದು ಉತ್ತಮ. (w11-E 04/01)
[ಪಾದಟಿಪ್ಪಣಿ]
a ಪುನರುತ್ಥಾನದ ಕುರಿತ ಬೈಬಲ್ ಬೋಧನೆಯ ಬಗ್ಗೆ ಹೆಚ್ಚನ್ನು ಕಲಿಯಲು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 7ನೇ ಅಧ್ಯಾಯ ನೋಡಿ.
[ಪುಟ 23ರಲ್ಲಿರುವ ಚಿತ್ರ]
ಮಾರ್ಥ ಮರಣಶೋಕದಲ್ಲಿದ್ದಾಗಲೂ, ನಂಬಿಕೆಯನ್ನು ಬಲಪಡಿಸುವ ವಿಷಯಗಳ ಮೇಲೆ ಮನಸ್ಸಿಡುವಂತೆ ಯೇಸು ಕೊಟ್ಟ ಮಾರ್ಗದರ್ಶನ ಸ್ವೀಕರಿಸಿದಳು
[ಪುಟ 24ರಲ್ಲಿರುವ ಚಿತ್ರ]
ಮಾರ್ಥ ಚಿಂತಿತಳೂ ಗಲಿಬಿಲಿಗೊಂಡವಳೂ ಆಗಿದ್ದರೂ ಕೊಡಲಾದ ಗದರಿಕೆಯನ್ನು ನಮ್ರತೆಯಿಂದ ಸ್ವೀಕರಿಸಿದಳು
[ಪುಟ 27ರಲ್ಲಿರುವ ಚಿತ್ರ]
ಮಾರ್ಥ ಯೇಸುವಿನಲ್ಲಿಟ್ಟಿದ್ದ ನಂಬಿಕೆಗೆ ಪ್ರತಿಫಲ ಸಿಕ್ಕಿದ್ದು ಆಕೆ ತನ್ನ ಸೋದರನ ಪುನರುತ್ಥಾನವನ್ನು ಕಂಡಾಗ