ಅವರು ಯೆಹೋವನ ಚಿತ್ತವನ್ನು ಮಾಡಿದರು
ಯೇಸುವಿನ ಬೀಳ್ಕೊಡುವ ಮಾತುಗಳಿಗೆ ಲಕ್ಷ್ಯಕೊಡುವುದು
ಸಾ.ಶ. 33, ನೈಸಾನ್ 14ರ ಸಂಜೆಯಂದು, ಯೇಸು ಕ್ರಿಸ್ತನು ಮತ್ತು ಆತನ 11 ನಂಬಿಗಸ್ತ ಅಪೊಸ್ತಲರು ಯೆರೂಸಲೇಮಿನಲ್ಲಿ, ಒಂದು ಮೇಲಿನ ಕೋಣೆಯಲ್ಲಿ ಒಂದು ಮೇಜಿನ ಮೇಲೆ ಒರಗಿಕೊಂಡಿದ್ದರು. ತನ್ನ ಮರಣವು ಸನ್ನಿಹಿತವಾಗಿದೆ ಎಂಬುದನ್ನು ಅರಿತವನಾಗಿ, ಆತನು ಅವರಿಗೆ ಹೇಳಿದ್ದು: “ಇನ್ನು ಸ್ವಲ್ಪಕಾಲವೇ ನಿಮ್ಮ ಸಂಗಡ ಇರುತ್ತೇನೆ.” (ಯೋಹಾನ 13:33) ವಾಸ್ತವದಲ್ಲಿ, ಯೇಸುವನ್ನು ಕೊಂದುಹಾಕಲು ಬಯಸುತ್ತಿದ್ದ ದುಷ್ಟ ಮನುಷ್ಯರೊಂದಿಗೆ ಸಂಚು ಹೂಡಲು ಇಸ್ಕಾರಿಯೋತನಾದ ಯೂದನು ಈಗಾಗಲೇ ಹೊರಟು ಹೋಗಿದ್ದನು.
ಆ ಮೇಲಿನ ಕೋಣೆಯಲ್ಲಿ ಯಾರೊಬ್ಬರೂ, ಪರಿಸ್ಥಿತಿಯ ತುರ್ತನ್ನು, ಯೇಸು ಗ್ರಹಿಸಿದಷ್ಟು ಹೆಚ್ಚಾಗಿ ಗ್ರಹಿಸಲಿಲ್ಲ. ತಾನು ಸ್ವಲ್ಪದರಲ್ಲೇ ಕಷ್ಟಾನುಭವಿಸಲಿದ್ದೇನೆಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಅದೇ ರಾತ್ರಿಯಂದು ತನ್ನ ಅಪೊಸ್ತಲರು ತನ್ನನ್ನು ತೊರೆಯುವರೆಂದೂ ಯೇಸುವಿಗೆ ತಿಳಿದಿತ್ತು. (ಮತ್ತಾಯ 26:31; ಜೆಕರ್ಯ 13:7) ತನ್ನ ಮರಣಕ್ಕಿಂತ ಮುಂಚೆ ತನ್ನ ಅಪೊಸ್ತಲರೊಂದಿಗೆ ಮಾತಾಡಲು ಇದು ಯೇಸುವಿನ ಕೊನೆಯ ಅವಕಾಶವಾಗಿದ್ದುದರಿಂದ, ಆತನ ಬೀಳ್ಕೊಡುವ ಮಾತುಗಳು ಅತೀ ಪ್ರಾಮುಖ್ಯವಾಗಿದ್ದ ವಿಷಯಗಳ ಮೇಲೆ ಕೇಂದ್ರೀಕರಿಸಿದವೆಂದು ನಾವು ಖಚಿತರಾಗಿರಸಾಧ್ಯವಿದೆ.
“ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ”
ಯೆಹೂದಿ ಪಸ್ಕಾಚರಣೆಯನ್ನು ಸ್ಥಾನಪಲ್ಲಟಗೊಳಿಸಲಿದ್ದ ಒಂದು ಹೊಸ ಆಚರಣೆಯನ್ನು ಯೇಸು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಸ್ಥಾಪಿಸಿದನು. ಅಪೊಸ್ತಲ ಪೌಲನು ಅದನ್ನು “ಕರ್ತನ ಸಂಧ್ಯಾ ಭೋಜನ” ಎಂದು ಕರೆದನು. (1 ಕೊರಿಂಥ 11:20, NW) ಹುಳಿಯಿಲ್ಲದ ರೊಟ್ಟಿಯನ್ನು ತೆಗೆದುಕೊಳ್ಳುತ್ತಾ, ಯೇಸು ಒಂದು ಪ್ರಾರ್ಥನೆಯನ್ನು ನುಡಿದನು. ಅನಂತರ ಆತನು ಆ ರೊಟ್ಟಿಯನ್ನು ಮುರಿದು, ತನ್ನ ಅಪೊಸ್ತಲರಿಗೆ ಕೊಟ್ಟನು. “ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು. ಆ ಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು—ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ ಅಂದನು.”—ಮತ್ತಾಯ 26:26-28.
ಈ ಘಟನೆಯ ಮಹತ್ತ್ವವೇನಾಗಿತ್ತು? ಯೇಸು ಸೂಚಿಸಿದಂತೆ, ರೊಟ್ಟಿಯು ಆತನ ಪಾಪರಹಿತ ದೇಹವನ್ನು ಪ್ರತಿನಿಧಿಸಿತು. (ಇಬ್ರಿಯ 7:26; 1 ಪೇತ್ರ 2:22, 24) ದ್ರಾಕ್ಷಾರಸವು, ಪಾಪಗಳ ಕ್ಷಮಾಪಣೆಯನ್ನು ಸಾಧ್ಯಮಾಡಲಿದ್ದ ಯೇಸುವಿನ ಸುರಿದ ರಕ್ತವನ್ನು ಸಂಕೇತಿಸಿತು. ಆತನ ಯಜ್ಞಾರ್ಪಣೆಯ ರಕ್ತವು, ಯೆಹೋವ ದೇವರ ಮತ್ತು, ಯೇಸುವಿನೊಂದಿಗೆ ಕಟ್ಟಕಡೆಗೆ ಸ್ವರ್ಗದಲ್ಲಿ ಆಳಲಿರುವ 1,44,000 ಮಾನವರ ನಡುವಿನ ಹೊಸ ಒಡಂಬಡಿಕೆಯನ್ನೂ ಸ್ಥಿರೀಕರಿಸಲಿತ್ತು. (ಇಬ್ರಿಯ 9:14; 12:22-24; ಪ್ರಕಟನೆ 14:1) ಈ ಊಟದಲ್ಲಿ ಭಾಗವಹಿಸಲು ತನ್ನ ಅಪೊಸ್ತಲರನ್ನು ಆಮಂತ್ರಿಸುವ ಮೂಲಕ, ಅವರು ಸ್ವರ್ಗೀಯ ರಾಜ್ಯದಲ್ಲಿ ತನ್ನೊಂದಿಗೆ ಪಾಲಿಗರಾಗುವರು ಎಂಬುದನ್ನು ಯೇಸು ಸೂಚಿಸಿದನು.
ಈ ಸ್ಮಾರಕ ಊಟದ ಕುರಿತಾಗಿ ಯೇಸು ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ.” (ಲೂಕ 22:19) ಹೌದು, ಕರ್ತನ ಸಂಧ್ಯಾ ಭೋಜನವು, ಪಸ್ಕಾಚಾರಣೆಯು ಇದ್ದಂತೆ ಒಂದು ವಾರ್ಷಿಕ ಘಟನೆಯಾಗಿರಲಿತ್ತು. ಪಸ್ಕಾಚಾರಣೆಯು, ಐಗುಪ್ತದಲ್ಲಿನ ದಾಸತ್ವದಿಂದ ಇಸ್ರಾಯೇಲ್ಯರ ಬಿಡುಗಡೆಯ ಸ್ಮಾರಕವಾಗಿದ್ದಂತೆ, ಕರ್ತನ ಸಂಧ್ಯಾ ಭೋಜನವು ಹೆಚ್ಚು ಮಹತ್ತಾದ ಬಿಡುಗಡೆ—ಪಾಪ ಮತ್ತು ಮರಣಕ್ಕೆ ದಾಸತ್ವದಿಂದ ವಿಮೋಚಿಸಸಾಧ್ಯವಿರುವ ಮಾನವ ಕುಲದ ಬಿಡುಗಡೆಯ ಮೇಲೆ ಕೇಂದ್ರೀಕರಿಸಲಿತ್ತು. (1 ಕೊರಿಂಥ 5:7; ಎಫೆಸ 1:7) ಇನ್ನೂ ಹೆಚ್ಚಾಗಿ ಈ ಕುರುಹಾತ್ಮಕ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತೆಗೆದುಕೊಳ್ಳುವವರಿಗೆ, ದೇವರ ಸ್ವರ್ಗೀಯ ರಾಜ್ಯದಲ್ಲಿ ರಾಜರು ಮತ್ತು ಯಾಜಕರಾಗಿ ತಮ್ಮ ಭವಿಷ್ಯತ್ತಿನ ಸುಯೋಗಗಳ ಕುರಿತಾಗಿ ನೆನಪಿಸಲಾಗುವುದು.—ಪ್ರಕಟನೆ 20:6.
ಯೇಸು ಕ್ರಿಸ್ತನ ಮರಣವು ನಿಜವಾಗಿಯೂ ಮಾನವ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯ ಘಟನೆಯಾಗಿತ್ತು. ಯೇಸು ಏನನ್ನು ಮಾಡಿದನೋ ಅದನ್ನು ಗಣ್ಯಮಾಡುವವರು, ಕರ್ತನ ಸಂಧ್ಯಾ ಭೋಜನದ ಕುರಿತಾದ ಆತನ ಆಜ್ಞೆಗೆ ವಿಧೇಯರಾಗುತ್ತಾರೆ: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡಿರಿ.” ನೈಸಾನ್ 14ಕ್ಕೆ ಸರಿಹೊಂದುವ ತಾರೀಖಿನಂದು, ಯೆಹೋವನ ಸಾಕ್ಷಿಗಳು ಪ್ರತಿ ವರ್ಷ ಯೇಸುವಿನ ಮರಣವನ್ನು ಸ್ಮರಿಸುತ್ತಾರೆ. 1996ರಲ್ಲಿ ಈ ತಾರೀಖು ಸೂರ್ಯಾಸ್ತಮಾನದ ನಂತರ, ಎಪ್ರಿಲ್ 2 ಆಗಿರುತ್ತದೆ. ನಿಮ್ಮ ಕ್ಷೇತ್ರದಲ್ಲಿರುವ ರಾಜ್ಯ ಸಭಾಗೃಹವೊಂದರಲ್ಲಿ ಹಾಜರಾಗಲಿಕ್ಕಾಗಿ ನಿಮ್ಮನ್ನು ಹೃದಯೋಲ್ಲಾಸದಿಂದ ಆಮಂತ್ರಿಸಲಾಗುತ್ತದೆ.
“ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ”
ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸುವ ಹೊರತು, ತನ್ನ ಅಪೊಸ್ತಲರಿಗಾಗಿ ಯೇಸುವಿನಲ್ಲಿ ಬೀಳ್ಕೊಳ್ಳುವಿಕೆಯ ಸಲಹೆಯಿತ್ತು. ಅವರ ಉತ್ತಮ ತರಬೇತಿಯ ಹೊರತೂ, ಈ ಪುರುಷರಿಗೆ ಕಲಿಯಲಿಕ್ಕೆ ತುಂಬ ಇತ್ತು. ಯೇಸುವಿಗಾಗಿ, ತಮಗಾಗಿ, ಅಥವಾ ಭವಿಷ್ಯತ್ತಿಗಾಗಿರುವ ದೇವರ ಉದ್ದೇಶವನ್ನು ಅವರು ಪೂರ್ಣವಾಗಿ ವಿವೇಚಿಸಲಿಲ್ಲ. ಆದರೆ ಯೇಸು ಈ ಎಲ್ಲಾ ವಿಷಯಗಳನ್ನು ಈ ಸಮಯದಲ್ಲಿ ಸ್ಪಷ್ಟಪಡಿಸಲು ಪ್ರಯತ್ನಿಸಲಿಲ್ಲ. (ಯೋಹಾನ 14:26; 16:12, 13) ಬದಲಾಗಿ ತುಂಬ ಮಹತ್ವದ ಒಂದು ವಿಷಯದ ಕುರಿತಾಗಿ ಆತನು ಮಾತಾಡಿದನು. ಆತನು ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ.” ಅನಂತರ ಯೇಸು ಕೂಡಿಸಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:34, 35.
ಇದು ಯಾವ ರೀತಿಯಲ್ಲಿ “ಒಂದು ಹೊಸ ಆಜ್ಞೆ”ಯಾಗಿತ್ತು? ಒಳ್ಳೇದು, ಮೋಶೆಯ ನಿಯಮಶಾಸ್ತ್ರವು ಆಜ್ಞಾಪಿಸಿದ್ದು: “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು.” (ಯಾಜಕಕಾಂಡ 19:18) ಆದಾಗಲೂ, ಯೇಸು ತನ್ನ ಹಿಂಬಾಲಕರಿಗೆ, ಜೊತೆ ಕ್ರೈಸ್ತರ ಪರವಾಗಿ ಒಬ್ಬನ ಜೀವವನ್ನು ಕೊಡುವಷ್ಟರ ಮಟ್ಟಿಗೆ ಮುಂದುವರಿಯುವ ಸ್ವ-ತ್ಯಾಗದ ಪ್ರೀತಿಯನ್ನು ತೋರಿಸುವಂತೆ ಕೋರಿದನು. ಈ ‘ಪ್ರೀತಿಯ ನಿಯಮವು’ ಕಡಿಮೆ ಸಂಕಟಮಯ ಪರಿಸ್ಥಿತಿಗಳಲ್ಲೂ ಅನ್ವಯಿಸುವುದೆಂಬುದು ನಿಶ್ಚಯ. ಎಲ್ಲಾ ಸನ್ನಿವೇಶಗಳಲ್ಲಿ ಯೇಸು ಕ್ರಿಸ್ತನ ಒಬ್ಬ ಹಿಂಬಾಲಕನು ಇತರರಿಗೆ ಆತ್ಮಿಕವಾಗಿ ಮತ್ತು ಬೇರೆ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಪ್ರೀತಿಯನ್ನು ಪ್ರದರ್ಶಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವನು.—ಗಲಾತ್ಯ 6:10.
ಯೇಸುವಿನ ಭೂಜೀವಿತದ ಈ ಕೊನೆಯ ರಾತ್ರಿಯಂದು, ತನ್ನ ಶಿಷ್ಯರ ಪರವಾಗಿ ಯೆಹೋವ ದೇವರಿಗೆ ಪ್ರಾರ್ಥಿಸುವಂತೆ, ಪ್ರೀತಿಯು ಯೇಸುವನ್ನು ಪ್ರಚೋದಿಸಿತು. ಭಾಗಶಃ ಆತನು ಹೀಗೆ ಪ್ರಾರ್ಥಿಸಿದನು: “ಅವರು ಲೋಕದಲ್ಲಿ ಇರುತ್ತಾರೆ, ನಾನು ನಿನ್ನ ಬಳಿಗೆ ಬರುತ್ತೇನೆ. ಪವಿತ್ರನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಯಬೇಕು.” (ಯೋಹಾನ 17:11) ತನ್ನ ತಂದೆಗೆ ಮಾಡಿಕೊಂಡ ಈ ಬೇಡಿಕೆಯಲ್ಲಿ, ಯೇಸು ತನ್ನ ಹಿಂಬಾಲಕರ ಪ್ರೀತಿಪೂರ್ಣ ಐಕ್ಯಕ್ಕಾಗಿ ಪ್ರಾರ್ಥಿಸಿದ್ದು ಗಮನಾರ್ಹವಾಗಿದೆ. (ಯೋಹಾನ 17:20-23) ‘ಯೇಸು ಅವರನ್ನು ಪ್ರೀತಿಸಿದ ಮೇರೆಗೆ ಅವರು ಒಬ್ಬರನ್ನೊಬ್ಬರು ಪ್ರೀತಿಸುವ’ ಅಗತ್ಯವಿತ್ತು.—ಯೋಹಾನ 15:12.
ಆ ನಂಬಿಗಸ್ತ ಅಪೊಸ್ತಲರು ಯೇಸುವಿನ ಬೀಳ್ಕೊಡುವ ಮಾತುಗಳಿಗೆ ಲಕ್ಷ್ಯಕೊಟ್ಟರು. ನಾವೂ ಆತನ ಆಜ್ಞೆಗಳನ್ನು ನಡಸಬೇಕು. ಈ ಕಠಿನವಾದ “ಕಡೇ ದಿವಸಗಳ”ಲ್ಲಿ ಸತ್ಯಾರಾಧಕರ ನಡುವೆ ಪ್ರೀತಿ ಮತ್ತು ಐಕ್ಯವು ಇರುವುದು ಹಿಂದೆಂದಿಗಿಂತಲೂ ಹೆಚ್ಚು ಪ್ರಾಮುಖ್ಯ. (2 ತಿಮೊಥೆಯ 3:1) ಖಂಡಿತವಾಗಿಯೂ, ನಿಜ ಕ್ರೈಸ್ತರು ಯೇಸುವಿನ ಆಜ್ಞೆಗಳಿಗೆ ವಿಧೇಯರಾಗುತ್ತಾರೆ ಮತ್ತು ಸಹೋದರ ಪ್ರೀತಿಯನ್ನು ಪ್ರದರ್ಶಿಸುತ್ತಾರೆ. ಇದರಲ್ಲಿ, ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವ ಆತನ ಆಜ್ಞೆಗೆ ವಿಧೇಯರಾಗುವುದು ಸೇರಿರುತ್ತದೆ.