ಅಧ್ಯಯನ ಲೇಖನ 4
‘ದೇವರಾತ್ಮವೇ ಸಾಕ್ಷಿಹೇಳುತ್ತದೆ’
“ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ.”—ರೋಮ. 8:16.
ಗೀತೆ 147 ದೇವರ ಅಮೂಲ್ಯ ಪುತ್ರರು
ಕಿರುನೋಟa
1-2. ಕ್ರಿಸ್ತ ಶಕ 33 ರ ಪಂಚಾಶತ್ತಮ ದಿನದಂದು ಯಾವ ಅಮೋಘ ಘಟನೆ ನಡೆಯಿತು?
ಅದೊಂದು ಭಾನುವಾರದ ಬೆಳಗಿನ ಸಮಯ. ಕ್ರಿ.ಶ. 33 ರ ಪಂಚಾಶತ್ತಮ ದಿನವಾಗಿತ್ತು. ನೂರಿಪ್ಪತ್ತು ಮಂದಿ ಶಿಷ್ಯರಿದ್ದ ಗುಂಪೊಂದು ಯೆರೂಸಲೇಮಿನಲ್ಲಿದ್ದ ಒಂದು ಮನೆಯ ಮೇಲಂತಸ್ತಿನ ಕೋಣೆಯಲ್ಲಿ ಕೂಡಿ ಬಂದಿತ್ತು. (ಅ. ಕಾ. 1:13-15; 2:1) ಕೆಲವು ದಿನಗಳ ಹಿಂದಷ್ಟೇ ಯೇಸು, ಅವರೊಂದು ವಿಶೇಷ ಉಡುಗೊರೆ ಪಡೆಯಲಿದ್ದಾರೆ, ಹಾಗಾಗಿ ಯೆರೂಸಲೇಮಿನಲ್ಲೇ ಉಳುಕೊಳ್ಳಬೇಕೆಂದು ತಿಳಿಸಿದ್ದನು. (ಅ. ಕಾ. 1:4, 5) ಹೀಗೆ ಅವ್ರು ಕೂಡಿಬಂದಾಗ ಏನಾಯಿತು?
2 ‘ಆಗ ರಭಸವಾಗಿ ಗಾಳಿಯು ಬೀಸುತ್ತಿದೆಯೋ ಎಂಬಂತೆ ಒಂದು ಶಬ್ದವು ಆಕಾಶದಿಂದ ಥಟ್ಟನೆ ಉಂಟಾಯಿತು.’ ಆ ಶಬ್ದವು ಇಡೀ ಮನೆಯನ್ನೇ ತುಂಬಿಕೊಂಡಿತು. ನಂತರ ಪ್ರತಿಯೊಬ್ಬ ಶಿಷ್ಯರ ತಲೆಯ ಮೇಲೆ “ಬೆಂಕಿಯ ಉರಿಯಂತಿದ್ದ ನಾಲಿಗೆಗಳು” ಕಾಣಿಸಿಕೊಂಡವು. ‘ಅವರೆಲ್ರೂ ಪವಿತ್ರಾತ್ಮದಿಂದ ತುಂಬಿದರು.’ (ಅ. ಕಾ. 2:2-4) ಈ ಅಮೋಘ ರೀತಿಯಲ್ಲಿ ಯೆಹೋವನು ಆ ಗುಂಪಿನ ಮೇಲೆ ತನ್ನ ಪವಿತ್ರಾತ್ಮವನ್ನು ಸುರಿಸಿದನು. (ಅ. ಕಾ. 1:8) ಪವಿತ್ರಾತ್ಮದಿಂದ ಅಭಿಷಿಕ್ತರಾಗಿb ಯೇಸುವಿನ ಜೊತೆ ಸ್ವರ್ಗದಲ್ಲಿ ಆಳುವ ನಿರೀಕ್ಷೆಯನ್ನು ಪಡೆದವ್ರಲ್ಲಿ ಇವ್ರೇ ಮೊದಲಿಗರು.
ಒಬ್ಬ ವ್ಯಕ್ತಿ ಹೇಗೆ ಅಭಿಷಿಕ್ತನಾಗುತ್ತಾನೆ?
3. ಪಂಚಾಶತ್ತಮ ದಿನದಂದು ಸೇರಿಬಂದಿದ್ದವರಿಗೆ ತಾವು ಪವಿತ್ರಾತ್ಮದಿಂದ ಅಭಿಷಿಕ್ತರಾಗಿದ್ದೇವೆ ಅನ್ನೋದ್ರಲ್ಲಿ ಯಾಕೆ ಒಂಚೂರು ಸಂಶಯವಿರಲಿಲ್ಲ?
3 ಆ ದಿನ ಮೇಲಂತಸ್ತಿನ ಕೋಣೆಯಲ್ಲಿ ನೀವೂ ಇದ್ದಿದ್ದರೆ ಆ ದಿನಾನ ಯಾವತ್ತಿಗೂ ಮರಿತಿರ್ಲಿಲ್ಲ. ಬೆಂಕಿಯ ನಾಲಿಗೆ ತರ ಇದ್ದ ಏನೋ ಒಂದು ನಿಮ್ಮ ತಲೆಯ ಮೇಲೆ ಬಂದು ನಿಂತಾಗ ನೀವು ಬೇರೆ-ಬೇರೆ ಭಾಷೆಯಲ್ಲಿ ಮಾತಾಡೋಕೆ ಶುರುಮಾಡಿದ್ದಿದ್ರೆ ಹೇಗಿರುತ್ತಿತ್ತು ಸ್ವಲ್ಪ ಯೋಚಿಸಿ! (ಅ. ಕಾ. 2:5-12) ನಿಮಗೆ ಪವಿತ್ರಾತ್ಮದಿಂದ ಅಭಿಷೇಕವಾಗಿದೆ ಅನ್ನೋದ್ರಲ್ಲಿ ಒಂದು ಸ್ವಲ್ಪನೂ ಸಂಶಯ ಇರುತ್ತಿರಲಿಲ್ಲ. ಆದ್ರೆ ಎಲ್ಲಾ ಅಭಿಷಿಕ್ತರಿಗೂ ಪವಿತ್ರಾತ್ಮದಿಂದ ಇದೇ ರೀತಿ ಅಭಿಷೇಕವಾಗುತ್ತಾ ಮತ್ತು ಎಲ್ರಿಗೂ ಒಂದೇ ಸಮಯದಲ್ಲಿ ಅಭಿಷೇಕವಾಗುತ್ತಾ? ಇಲ್ಲ. ನಮಗೆ ಹೇಗೆ ಗೊತ್ತು?
4. ಒಂದನೇ ಶತಮಾನದಲ್ಲಿದ್ದ ಎಲ್ಲಾ ಅಭಿಷಿಕ್ತರಿಗೂ ಒಂದೇ ಸಮಯದಲ್ಲಿ ಪವಿತ್ರಾತ್ಮದಿಂದ ಅಭಿಷೇಕವಾಯಿತಾ? ವಿವರಿಸಿ.
4 ಮೊದ್ಲು ನಾವು, ಎಲ್ಲಾ ಅಭಿಷಿಕ್ತರಿಗೂ ಒಂದೇ ಸಮಯದಲ್ಲಿ ಅಭಿಷೇಕವಾಗುತ್ತಾ ಎಂದು ನೋಡೋಣ. ಕ್ರಿ.ಶ. 33 ರ ಪಂಚಾಶತ್ತಮ ದಿನದಂದು ಬರೀ 120 ಕ್ರೈಸ್ತರಿಗಷ್ಟೇ ಪವಿತ್ರಾತ್ಮದ ಅಭಿಷೇಕವಾಗಲಿಲ್ಲ. ಅದೇ ದಿನದಲ್ಲಿ, ಸುಮಾರು 3,000 ಜನ ದೀಕ್ಷಾಸ್ನಾನ ತಗೊಂಡಾಗ ಪವಿತ್ರಾತ್ಮದಿಂದ ಅಭಿಷಿಕ್ತರಾದ್ರು. (ಅ. ಕಾ. 2:37, 38, 41) ಆದರೆ ನಂತರದ ವರ್ಷಗಳಲ್ಲಿ ಎಲ್ಲಾ ಕ್ರೈಸ್ತರು ದೀಕ್ಷಾಸ್ನಾನ ಪಡಕೊಂಡಾಗಲೇ ಅಭಿಷಿಕ್ತರಾಗಲಿಲ್ಲ. ಸಮಾರ್ಯದವರಿಗೆ ದೀಕ್ಷಾಸ್ನಾನ ಆಗಿ ಸ್ವಲ್ಪ ಸಮಯದ ನಂತ್ರ ಅಭಿಷೇಕವಾಯಿತು. (ಅ. ಕಾ. 8:14-17) ಆದ್ರೆ ಕೊರ್ನೇಲ್ಯ ಮತ್ತು ಅವನ ಮನೆಯವ್ರು ಮಾತ್ರ ಬೇರೆಯವರೆಲ್ಲರಿಗಿಂತ ವಿಶೇಷವಾದ ರೀತಿಯಲ್ಲಿ ಅಭಿಷಿಕ್ತರಾದ್ರು. ಅವ್ರಿಗೆ ದೀಕ್ಷಾಸ್ನಾನ ಆಗುವ ಮುಂಚೆನೇ ಪವಿತ್ರಾತ್ಮದಿಂದ ಅಭಿಷೇಕವಾಯಿತು.—ಅ. ಕಾ. 10:44-48.
5. ಎರಡನೇ ಕೊರಿಂಥ 1:21, 22 ರ ಪ್ರಕಾರ ಒಬ್ಬ ವ್ಯಕ್ತಿಗೆ ಪವಿತ್ರಾತ್ಮದಿಂದ ಅಭಿಷೇಕವಾದಾಗ ಏನಾಗುತ್ತೆ?
5 ಒಬ್ಬ ವ್ಯಕ್ತಿಗೆ ಪವಿತ್ರಾತ್ಮದಿಂದ ಅಭಿಷೇಕವಾದಾಗ ಏನಾಗುತ್ತೆ ಅನ್ನೋದನ್ನೂ ನೋಡೋಣ. ಕೆಲವ್ರಿಗೆ ತಾವು ಅಭಿಷಿಕ್ತರಾದ ಹೊಸತರಲ್ಲಿ ಯೆಹೋವನು ತಮ್ಮನ್ನು ಆರಿಸಿದ್ದಾನೆ ಅನ್ನೋದನ್ನ ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ. ಅವ್ರು ‘ದೇವರು ಯಾಕೆ ನನ್ನನ್ನ ಆರಿಸಿದ್ದಾನೆ?’ ಅಂತನೂ ಯೋಚಿಸಬಹುದು. ಇನ್ನು ಕೆಲವ್ರಿಗೆ ಆ ರೀತಿ ಏನೂ ಅನಿಸದೇ ಇರಬಹುದು. ಆದ್ರೆ ಎಲ್ಲಾ ಅಭಿಷಿಕ್ತರಿಗೆ ಏನಾಗುತ್ತೆ ಅನ್ನೋದನ್ನು ಅಪೊಸ್ತಲ ಪೌಲನು ಹೀಗೆ ವಿವರಿಸಿದ್ದಾನೆ: “ನೀವು ನಂಬಿಕೆಯಿಟ್ಟ ಬಳಿಕ ಅವನ ಮೂಲಕವಾಗಿಯೇ ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮದಿಂದ ಮುದ್ರೆಹೊಂದಿದಿರಿ.c ಅದು ನಮಗೆ ದೊರಕಲಿರುವ ಬಾಧ್ಯತೆಯ ಮುಂಗಡ ಗುರುತಾಗಿದೆ.” (ಎಫೆ. 1:13, 14) ಹೀಗೆ ಯೆಹೋವನು ತಾನು ಆ ಕ್ರೈಸ್ತರನ್ನು ಆರಿಸಿಕೊಂಡಿದ್ದೇನೆ ಅನ್ನೋದನ್ನು ಅವ್ರಿಗೆ ಖಚಿತಪಡಿಸಲು ಪವಿತ್ರಾತ್ಮ ಉಪಯೋಗಿಸುತ್ತಾನೆ. ಈ ರೀತಿಯಲ್ಲಿ ಆ ಕ್ರೈಸ್ತರು ಭವಿಷ್ಯದಲ್ಲಿ ಈ ಭೂಮಿಯಲ್ಲಲ್ಲ, ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸುವರು ಅನ್ನುವುದಕ್ಕೆ ಪವಿತ್ರಾತ್ಮವು ಒಂದು “ಮುಂಗಡ ಗುರುತಾಗಿದೆ” ಅಥವಾ ಒಂದು ಗ್ಯಾರಂಟಿಯಾಗಿದೆ.—2 ಕೊರಿಂಥ 1:21, 22 ಓದಿ.
6. ಒಬ್ಬ ಅಭಿಷಿಕ್ತ ಕ್ರೈಸ್ತನು ಸ್ವರ್ಗದ ಬಹುಮಾನವನ್ನು ಪಡೀಬೇಕಂದ್ರೆ ಏನು ಮಾಡಲೇಬೇಕು?
6 ಒಬ್ಬ ಕ್ರೈಸ್ತನು ಅಭಿಷಿಕ್ತನಾದ್ರೆ ಅವನು ಸ್ವರ್ಗಕ್ಕೆ ಹೋಗೇ ಹೋಗ್ತಾನೆ ಎಂದರ್ಥನಾ? ಅಲ್ಲ. ಸ್ವರ್ಗಕ್ಕೆ ಹೋಗುವುದಕ್ಕೆ ತನ್ನನ್ನು ಆರಿಸಲಾಗಿದೆ ಅನ್ನೋದು ಅವನಿಗೆ ಗೊತ್ತು. ಆದ್ರೂ ಅವನು ಈ ಸಲಹೆಯನ್ನು ನೆನಪಲ್ಲಿಟ್ಟುಕೊಳ್ಳಬೇಕು. ಅದೇನೆಂದ್ರೆ, “ಸಹೋದರರೇ, ನಿಮ್ಮ ಕರೆಯುವಿಕೆಯನ್ನು ಮತ್ತು ಆರಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ; ನೀವು ಈ ವಿಷಯಗಳನ್ನು ಮಾಡುತ್ತಾ ಇರುವುದಾದರೆ ಎಂದಿಗೂ ವಿಫಲವಾಗುವುದೇ ಇಲ್ಲ.” (2 ಪೇತ್ರ 1:10) ಹಾಗಾಗಿ, ಒಬ್ಬ ಕ್ರೈಸ್ತನನ್ನು ಸ್ವರ್ಗಕ್ಕೆ ಹೋಗಲು ಆರಿಸಲಾಗಿದ್ರೂ ಅಥವಾ ಅವನಿಗೆ ಆಮಂತ್ರಣ ಸಿಕ್ಕಿದ್ರೂ ಅವನು ಕೊನೇ ತನಕ ನಂಬಿಗಸ್ತನಾಗಿ ಉಳಿದ್ರೆ ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ.—ಫಿಲಿ. 3:12-14; ಇಬ್ರಿ. 3:1; ಪ್ರಕ. 2:10.
ಒಬ್ಬನಿಗೆ ತಾನು ಅಭಿಷಿಕ್ತನೆಂದು ಹೇಗೆ ಗೊತ್ತಾಗುತ್ತೆ?
7. ಅಭಿಷಿಕ್ತರಿಗೆ ತಮಗೆ ಸ್ವರ್ಗಕ್ಕೆ ಹೋಗಲು ಆಮಂತ್ರಣ ಸಿಕ್ಕಿದೆ ಅನ್ನೋದು ಹೇಗೆ ಗೊತ್ತಾಗುತ್ತೆ?
7 ಆದ್ರೆ ಒಬ್ಬನಿಗೆ ಅಥವಾ ಒಬ್ಬಳಿಗೆ ತಮಗೆ ಸ್ವರ್ಗಕ್ಕೆ ಹೋಗುವ ಆಮಂತ್ರಣ ಸಿಕ್ಕಿದೆ ಅನ್ನೋದು ಹೇಗೆ ಗೊತ್ತಾಗುತ್ತೆ? ಇದಕ್ಕೆ ಉತ್ತರ ಪವಿತ್ರ ಜನರಾಗಿರಲು ಕರೆಯಲ್ಪಟ್ಟ ರೋಮ್ನ ಅಭಿಷಿಕ್ತ ಸಹೋದರರಿಗೆ ಪೌಲನು ಹೇಳಿದ ಮಾತುಗಳಿಂದ ಗೊತ್ತಾಗುತ್ತೆ. ಆತನು ಅವ್ರಿಗೆ ಹೇಳಿದ್ದು: “ದೇವರ ಪವಿತ್ರಾತ್ಮವು ನಮ್ಮನ್ನು ದಾಸತ್ವಕ್ಕೆ ನಡೆಸುವುದಿಲ್ಲ ಮತ್ತು ಅದು ಭಯವನ್ನು ಉಂಟುಮಾಡುವುದಿಲ್ಲ, ಆದರೆ ಅದು ನಮ್ಮನ್ನು ಪುತ್ರರಂತೆ ದತ್ತುತೆಗೆದುಕೊಳ್ಳುವುದಕ್ಕೆ ನಡೆಸುತ್ತದೆ. ಈ ಪವಿತ್ರಾತ್ಮದಿಂದಲೇ ನಾವು ‘ಅಪ್ಪಾ, ತಂದೆಯೇ!’ ಎಂದು ಕರೆಯುತ್ತೇವೆ. ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ.” (ರೋಮ. 1:7; 8:15, 16) ಹೀಗೆ ಒಬ್ಬ ಅಭಿಷಿಕ್ತ ಕ್ರೈಸ್ತನಿಗೆ ಸ್ವರ್ಗಕ್ಕೆ ಆಮಂತ್ರಣ ಸಿಕ್ಕಿದೆ ಅನ್ನೋದನ್ನು ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಖಚಿತಪಡಿಸುತ್ತಾನೆ.—1 ಥೆಸ. 2:12.
8. ಒಬ್ಬ ಅಭಿಷಿಕ್ತನಿಗೆ ‘ನೀವು ಅಭಿಷಿಕ್ತರಾಗಿದ್ದೀರಿ’ ಎಂದು ಬೇರೆಯವ್ರು ಖಚಿತಪಡಿಸುವ ಅವಶ್ಯಕತೆ ಇಲ್ಲ ಅನ್ನೋದನ್ನ 1 ಯೋಹಾನ 2:20, 27 ಹೇಗೆ ತೋರಿಸಿಕೊಡುತ್ತೆ?
8 ಯಾರಿಗೆ ಸ್ವರ್ಗಕ್ಕೆ ಹೋಗುವ ಆಮಂತ್ರಣ ಸಿಗುತ್ತೋ ಅವರಿಗೆ ಈ ವಿಷಯದಲ್ಲಿ ಒಂಚೂರು ಸಂಶಯ ಇಲ್ಲದಿರುವಂತೆ ಯೆಹೋವನು ನೋಡಿಕೊಳ್ಳುತ್ತಾನೆ. (1 ಯೋಹಾನ 2:20, 27 ಓದಿ.) ಹಾಗಿದ್ದರೂ ಬೇರೆ ಎಲ್ಲರ ತರ ಅಭಿಷಿಕ್ತ ಕ್ರೈಸ್ತರು ಸಹ ಸಭೆಯ ಮೂಲಕ ಯೆಹೋವನಿಂದ ಕಲಿಯಲೇಬೇಕು. ಆದ್ರೆ ಅವ್ರಿಗೆ ‘ನೀವು ಅಭಿಷಿಕ್ತರು’ ಎಂದು ಬೇರೆಯವ್ರು ಖಚಿತಪಡಿಸುವ ಅಗತ್ಯ ಇರುವುದಿಲ್ಲ. ಯಾಕೆಂದರೆ ಯೆಹೋವನು ಇಡೀ ವಿಶ್ವದಲ್ಲೇ ಅತೀ ಶಕ್ತಿಶಾಲಿಯಾದ ತನ್ನ ಪವಿತ್ರಾತ್ಮವನ್ನ ಉಪಯೋಗಿಸಿ ಅವರು ಅಭಿಷಿಕ್ತರಾಗಿದ್ದಾರೆ ಅನ್ನೋದನ್ನ ಈಗಾಗಲೇ ಸ್ಪಷ್ಟಪಡಿಸಿರುತ್ತಾನೆ.
‘ಪುನಃ ಹುಟ್ಟಿದ್ದಾರೆ’
9. ಎಫೆಸ 1:18, 19 ರಲ್ಲಿರುವಂತೆ ಒಬ್ಬ ವ್ಯಕ್ತಿ ಅಭಿಷಿಕ್ತನಾದಾಗ ಅವನಲ್ಲಿ ಯಾವ ಬದಲಾವಣೆ ಆಗುತ್ತೆ?
9 ದೇವರು ಯಾರನ್ನಾದ್ರೂ ಪವಿತ್ರಾತ್ಮದಿಂದ ಅಭಿಷೇಕಿಸಿದಾಗ ಆ ವ್ಯಕ್ತಿಗೆ ಏನಾಗುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಇಂದಿನ ಅನೇಕ ದೇವಸೇವಕರಿಗೆ ಕಷ್ಟವಾಗುತ್ತೆ. ಯಾಕೆಂದ್ರೆ ಅವ್ರು ಅಭಿಷಿಕ್ತರಾಗಿಲ್ಲ. ದೇವರು ಮನುಷ್ಯರನ್ನು ಸೃಷ್ಟಿ ಮಾಡಿದ್ದು ಸ್ವರ್ಗದಲ್ಲಿ ಜೀವಿಸಲಿಕ್ಕಾಗಿ ಅಲ್ಲ, ಬದಲಿಗೆ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಲಿಕ್ಕಾಗಿ. (ಆದಿ. 1:28; ಕೀರ್ತ. 37:29) ಆದ್ರೆ ಕೆಲವರನ್ನು ಸ್ವರ್ಗದಲ್ಲಿ ಜೀವಿಸಲು ಆತನು ಆರಿಸಿದ್ದಾನೆ. ಹಾಗಾಗಿ ಆತನು ಯಾರನ್ನಾದರೂ ಅಭಿಷೇಕಿಸಿದಾಗ ಅವ್ರ ನಿರೀಕ್ಷೆ ಮತ್ತು ಯೋಚನಾರೀತಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಾನೆ. ಈ ಕಾರಣದಿಂದ ಅವ್ರು ಸ್ವರ್ಗದ ಜೀವನಕ್ಕಾಗಿ ಎದುರುನೋಡುತ್ತಾರೆ.—ಎಫೆಸ 1:18, 19 ಓದಿ.
10. ‘ಪುನಃ ಹುಟ್ಟುವುದು’ ಅಂದರೇನು? (ಪಾದಟಿಪ್ಪಣಿ ಸಹ ನೋಡಿ.)
10 ಕ್ರೈಸ್ತರು ಪವಿತ್ರಾತ್ಮದಿಂದ ಅಭಿಷೇಕ ಹೊಂದಿದಾಗ ‘ಪುನಃ ಹುಟ್ಟಿದವರಾಗುತ್ತಾರೆ.’d ‘ಪುನಃ ಹುಟ್ಟಿದಾಗ’ ಅಥವಾ ‘ಪವಿತ್ರಾತ್ಮದಿಂದ ಹುಟ್ಟಿದಾಗ’ ಹೇಗನಿಸುತ್ತೆ ಅನ್ನೋದನ್ನ ಅಭಿಷಿಕ್ತನಲ್ಲದ ವ್ಯಕ್ತಿಗೆ ಪೂರ್ತಿಯಾಗಿ ವಿವರಿಸೋದು ಅಸಾಧ್ಯ ಅಂತ ಯೇಸುವಿನ ಮಾತುಗಳಿಂದ ಗೊತ್ತಾಗುತ್ತೆ.—ಯೋಹಾ. 3:3-8.
11. ಯಾರಾದರೊಬ್ಬರು ಅಭಿಷಿಕ್ತರಾದಾಗ ಅವರ ಯೋಚನೆಯಲ್ಲಾಗುವ ಬದಲಾವಣೆಗಳನ್ನ ವಿವರಿಸಿ.
11 ಕ್ರೈಸ್ತರು ಅಭಿಷಿಕ್ತರಾದಾಗ ಅವ್ರ ಯೋಚನೆಯಲ್ಲಿ ಎಂಥ ಬದಲಾವಣೆಗಳಾಗುತ್ತವೆ? ಅಭಿಷಿಕ್ತರಾಗುವ ಮುಂಚೆ ಅವ್ರಿಗೂ ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿತ್ತು. ಯೆಹೋವನು ಎಲ್ಲಾ ದುಷ್ಟತನವನ್ನು ತೆಗೆದುಹಾಕಿ ಈ ಇಡೀ ಭೂಮಿಯನ್ನು ಪರದೈಸನ್ನಾಗಿ ಮಾಡುವ ಸಮಯಕ್ಕಾಗಿ ಅವರು ತವಕದಿಂದ ಎದುರುನೋಡಿದ್ದರು. ತೀರಿಹೋದ ತಮ್ಮ ಕುಟುಂಬದ ಸದಸ್ಯರೋ ಅಥವಾ ಸ್ನೇಹಿತರೋ ಪುನರುತ್ಥಾನವಾಗಿ ಬರುವಾಗ ತಾವು ಪ್ರೀತಿಯಿಂದ ಅವರನ್ನು ಬರಮಾಡಿಕೊಳ್ಳುವ ಕಲ್ಪನೆಯನ್ನೂ ಅವರು ಮಾಡಿಕೊಂಡಿದ್ದಿರಬಹುದು. ಆದರೆ ಅಭಿಷಿಕ್ತರಾದ ಮೇಲೆ ಅವ್ರ ಯೋಚನೆನೇ ಪೂರ್ತಿ ಬದಲಾಗಿಬಿಡುತ್ತೆ. ಯಾಕೆ ಆ ರೀತಿ? ಭೂಮಿ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಷ್ಟೇ ಸಾಕಾಗಲ್ಲ, ಇನ್ನೂ ಏನೋ ಬೇಕು ಅಂತನಾ ಅಥವಾ ಜೀವನಪೂರ್ತಿ ಕಣ್ಣೀರಲ್ಲೇ ಕೈತೊಳೆದು ಈ ಭೂಮಿ ಮೇಲಿನ ಜೀವನ ಸಾಕಪ್ಪಾ ಅಂತ ಅವ್ರಿಗೆ ಅನಿಸಿರುವುದರಿಂದನಾ ಇಲ್ಲವೇ, ಭೂಮಿ ಮೇಲೆ ಸದಾಕಾಲ ಜೀವಿಸುವುದು ನಿಜವಾಗ್ಲೂ ಬೋರಿಂಗ್ ಅಂತ ಯೋಚಿಸೋದರಿಂದನಾ? ಇದ್ಯಾವುದರಿಂದನೂ ಅಲ್ಲ. ಬದಲಿಗೆ ಯೆಹೋವನು ತನ್ನ ಪವಿತ್ರಾತ್ಮ ಉಪಯೋಗಿಸಿ ಅವ್ರ ಯೋಚನಾರೀತಿಯನ್ನ, ಅವ್ರು ಹಿಂದೆಯಿಟ್ಟಿದ್ದ ನಿರೀಕ್ಷೆಯನ್ನ ಬದಲಾಯಿಸಿರೋದರಿಂದನೇ ಆ ರೀತಿ ಆಗಿರೋದು.
12. ಒಂದನೇ ಪೇತ್ರ 1:3, 4 ರ ಪ್ರಕಾರ ಅಭಿಷಿಕ್ತ ಕ್ರೈಸ್ತರಿಗೆ ತಮಗಿರುವ ನಿರೀಕ್ಷೆಯ ಬಗ್ಗೆ ಹೇಗನಿಸುತ್ತದೆ?
12 ಅಭಿಷಿಕ್ತರಾದಾಗ ಕೆಲವ್ರಿಗೆ, ‘ನನಗೆ ಈ ಅರ್ಹತೆ ಇಲ್ಲ’ ಅಂತ ಅನಿಸಬಹುದು. ಆದ್ರೆ ‘ಯೆಹೋವನು ನಿಜವಾಗಲೂ ನನ್ನನ್ನು ಆರಿಸಿದ್ದಾನಾ’ ಅನ್ನೋ ಸಂಶಯವಂತೂ ಯಾವತ್ತಿಗೂ ಬರಲ್ಲ. ಅವರಿಗಿರೋ ನಿರೀಕ್ಷೆ ಬಗ್ಗೆ ಯೋಚಿಸುವಾಗೆಲ್ಲಾ ಅವ್ರ ಹೃದಯ ಸಂತೋಷ ಮತ್ತು ಕೃತಜ್ಞತಾಭಾವದಿಂದ ತುಂಬಿಬರುತ್ತೆ.—1 ಪೇತ್ರ 1:3, 4 ಓದಿ.
13. ಅಭಿಷಿಕ್ತರಿಗೆ ಈಗ ಅವರು ಭೂಮಿಯ ಮೇಲೆ ನಡೆಸುತ್ತಿರುವ ಜೀವನದ ಬಗ್ಗೆ ಹೇಗನಿಸುತ್ತೆ?
13 ಇದರರ್ಥ ಅಭಿಷಿಕ್ತರು ಸಾಯಬೇಕೆಂದು ಬಯಸುತ್ತಾರೆ ಅಂತನಾ? ಈ ಪ್ರಶ್ನೆಗೆ ಅಪೊಸ್ತಲ ಪೌಲನು ಉತ್ತರ ಕೊಡುತ್ತಾನೆ. ಆತನು ಮಾನವ ದೇಹವನ್ನು ಗುಡಾರಕ್ಕೆ ಹೋಲಿಸುತ್ತಾ ಹೀಗೆ ಹೇಳಿದನು: “ವಾಸ್ತವದಲ್ಲಿ ಈ ಗುಡಾರದಲ್ಲಿರುವವರಾದ ನಾವು ಭಾರದಿಂದ ಕುಗ್ಗಿದವರಾಗಿ ನರಳುತ್ತಿದ್ದೇವೆ; ನಾವು ಇದನ್ನು ಕಳಚಿಹಾಕಲು ಬಯಸುವುದಿಲ್ಲ, ಬದಲಾಗಿ ನಶ್ವರವಾದದ್ದು ಜೀವದಿಂದ ನುಂಗಲ್ಪಡುವಂತೆ ಇನ್ನೊಂದನ್ನು ಧರಿಸಿಕೊಳ್ಳಲು ಬಯಸುತ್ತೇವೆ.” (2 ಕೊರಿಂ. 5:4) ಅಭಿಷಿಕ್ತ ಕ್ರೈಸ್ತರು ‘ಈ ಭೂಮಿ ಮೇಲಿನ ಜೀವನ ಬೋರಾಗಿದೆ, ಸತ್ತರೆ ಚೆನ್ನಾಗಿರುತ್ತೆ’ ಅಂತ ಯೋಚಿಸೋದಿಲ್ಲ. ಬದಲಿಗೆ, ಅವ್ರು ತಮ್ಮ ಜೀವನವನ್ನ ಆನಂದಿಸ್ತಾರೆ. ತಮ್ಮ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಪ್ರತಿದಿನವನ್ನು ಯೆಹೋವನ ಸೇವೆಯಲ್ಲಿ ಕಳೆಯಲು ಬಯಸ್ತಾರೆ. ಹೀಗಿದ್ರೂ, ಭವಿಷ್ಯಕ್ಕಾಗಿ ಅವರಿಗಿರುವ ಆ ಅದ್ಭುತ ನಿರೀಕ್ಷೆಯನ್ನು ಯಾವಾಗ್ಲೂ ಮನಸ್ಸಲ್ಲಿಡುತ್ತಾರೆ.—1 ಕೊರಿಂ. 15:53; 2 ಪೇತ್ರ 1:4; 1 ಯೋಹಾ. 3:2, 3; ಪ್ರಕ. 20:6.
ಯೆಹೋವನು ನಿಮ್ಮನ್ನು ಆರಿಸಿದ್ದಾನಾ?
14. ಒಬ್ಬನು ಪವಿತ್ರಾತ್ಮದಿಂದ ಅಭಿಷಿಕ್ತನಾಗಿದ್ದಾನೆಂದು ಯಾವ ವಿಷಯಗಳನ್ನು ನೋಡಿ ತೀರ್ಮಾನಿಸಬಾರದು?
14 ‘ನನಗೂ ಪವಿತ್ರಾತ್ಮದಿಂದ ಅಭಿಷೇಕ ಆಗಿದ್ಯಾ?’ ಅನ್ನೋ ಯೋಚನೆ ನಿಮಗೆ ಯಾವತ್ತಾದರೂ ಬಂದಿದ್ಯಾ? ಹಾಗಿದ್ರೆ ಈ ಪ್ರಾಮುಖ್ಯ ಪ್ರಶ್ನೆಗಳ ಬಗ್ಗೆ ಯೋಚಿಸಿ. ಯೆಹೋವನಿಗೆ ಏನಿಷ್ಟನೋ ಅದನ್ನೇ ಮಾಡಬೇಕು ಅನ್ನೋ ಆಸೆ ನಿಮಗೆ ತುಂಬ ಜಾಸ್ತಿ ಇದ್ಯಾ? ಸಾರುವ ಕೆಲಸದಲ್ಲಿ ನಿಮಗೆ ತುಂಬ ಉತ್ಸಾಹ ಇದೆ ಅಂತ ಅನ್ಸುತ್ತಾ? ಬೈಬಲನ್ನು ಮತ್ತು ‘ದೇವರ ಅಗಾಧವಾದ ವಿಷಯಗಳನ್ನು’ ಕಲಿಯೋದು ನಿಮಗೆ ತುಂಬ ಇಷ್ಟ ಆಗುತ್ತಾ? (1 ಕೊರಿಂ. 2:10) ಸಾರುವ ಕೆಲಸದಲ್ಲಿ ಯೆಹೋವನ ಆಶೀರ್ವಾದದಿಂದ ತುಂಬ ಪ್ರತಿಫಲ ಸಿಕ್ಕಿದ್ಯಾ? ‘ಯೆಹೋವನ ಬಗ್ಗೆ ಬೇರೆಯವ್ರಿಗೆ ಕಲಿಸುವ ಜವಾಬ್ದಾರಿ ನನಗಿದೆ’ ಅಂತ ನಿಮಗನಿಸುತ್ತಾ? ನಿಮ್ಮ ಜೀವನದಲ್ಲಿ ಯೆಹೋವನು ಅನೇಕ ರೀತಿಯಲ್ಲಿ ಸಹಾಯ ಮಾಡಿರೋದನ್ನ ನೀವು ನೋಡಿದ್ದೀರಾ? ಈ ಪ್ರಶ್ನೆಗಳಿಗೆ ನೀವು ಹೌದು ಅಂತ ಉತ್ತರಿಸೋದಾದ್ರೆ ಅದರರ್ಥ ನಿಮ್ಮನ್ನು ಸ್ವರ್ಗಕ್ಕೆ ಹೋಗಲು ಆರಿಸಲಾಗಿದೆ ಅಂತನಾ? ಅಲ್ಲ. ಯಾಕೆ? ಯಾಕಂದ್ರೆ ಯೆಹೋವನ ಎಲ್ಲಾ ಸೇವಕರಿಗೂ ಅವ್ರು ಅಭಿಷಿಕ್ತರಾಗಿರಲಿ ಅಲ್ಲದಿರಲಿ ಅವರೆಲ್ಲರಿಗೂ ಈ ರೀತಿ ಅನ್ಸುತ್ತೆ. ಅಷ್ಟೇ ಅಲ್ಲದೆ, ಯೆಹೋವನು ತನ್ನ ಸೇವಕರಲ್ಲಿ ಯಾರಿಗೆ ಬೇಕಾದ್ರೂ ಪವಿತ್ರಾತ್ಮ ಶಕ್ತಿಯನ್ನು ಕೊಡುತ್ತಾನೆ. ಇದಕ್ಕೂ ಅವ್ರ ನಿರೀಕ್ಷೆಗೂ ಯಾವುದೇ ಸಂಬಂಧ ಇಲ್ಲ. ‘ಯೆಹೋವನು ನನ್ನನ್ನು ಪವಿತ್ರಾತ್ಮದಿಂದ ಅಭಿಷೇಕಿಸಿರಬಹುದಾ?’ ಅಂತ ಯೋಚಿಸುತ್ತಿರುವುದಾದರೆ ಅದರರ್ಥ ನೀವು ಅಭಿಷಿಕ್ತರಲ್ಲ ಅಂತ. ಯಾಕೆಂದರೆ ಅಭಿಷಿಕ್ತರಾಗಿರುವವರಿಗೆ ‘ನಂಗೆ ನಿಜವಾಗಿಯೂ ಪವಿತ್ರಾತ್ಮದಿಂದ ಅಭಿಷೇಕ ಆಗಿರಬಹುದಾ?’ ಅನ್ನೋ ಯೋಚನೆನೇ ಬರಲ್ಲ. ಅವರಿಗೆ ಆಗಿದೆ ಅಂತ ಚೆನ್ನಾಗಿ ಗೊತ್ತಿರುತ್ತೆ!
15. ಪವಿತ್ರಾತ್ಮವನ್ನು ಪಡೆದಿರುವವರೆಲ್ಲರೂ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ನಮಗೆ ಹೇಗೆ ಗೊತ್ತು?
15 ದೇವರ ಪವಿತ್ರಾತ್ಮ ಶಕ್ತಿಯನ್ನು ಪಡೆದ, ಆದ್ರೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇಲ್ಲದ ಅನೇಕ ನಂಬಿಗಸ್ತ ಸೇವಕರ ಉದಾಹರಣೆಗಳು ಬೈಬಲಿನಲ್ಲಿವೆ. ಉದಾಹರಣೆಗೆ, ದಾವೀದನಿಗೆ ಪವಿತ್ರಾತ್ಮದಿಂದ ಮಾರ್ಗದರ್ಶನ ಸಿಕ್ಕಿತು. (1 ಸಮು. 16:13) ಯೆಹೋವನ ಬಗ್ಗೆ ಅಗಾಧ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬೈಬಲಿನ ಕೆಲವು ಭಾಗಗಳನ್ನು ಬರೆಯಲು ಪವಿತ್ರಾತ್ಮ ಅವನಿಗೆ ಸಹಾಯ ಮಾಡಿತು. (ಮಾರ್ಕ 12:36) ಆದ್ರೂ ದಾವೀದನು “ಸ್ವರ್ಗಕ್ಕೆ ಏರಿಹೋಗಲಿಲ್ಲ” ಎಂದು ಪೇತ್ರನು ಹೇಳಿದ್ದಾನೆ. (ಅ. ಕಾ. 2:34) ಸ್ನಾನಿಕನಾದ ಯೋಹಾನನು ಸಹ ‘ಪವಿತ್ರಾತ್ಮಭರಿತನಾಗಿದ್ದನು.’ (ಲೂಕ 1:13-16) ಯೇಸು ಯೋಹಾನನ ಬಗ್ಗೆ ‘ಮನುಷ್ಯರಲ್ಲಿ ಅವನಿಗಿಂತ ದೊಡ್ಡವನು ಯಾರೂ ಇಲ್ಲ’ ಅಂತ ಹೇಳಿದನು. ಆದ್ರೆ ಅವನು ಸ್ವರ್ಗಕ್ಕೆ ಹೋಗಲ್ಲ ಅಂತನೂ ಹೇಳಿದನು. (ಮತ್ತಾ. 11:10, 11) ಇವ್ರು ಅದ್ಭುತ ಕೆಲಸಗಳನ್ನು ಮಾಡಲಿಕ್ಕೆ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಶಕ್ತಿ ಕೊಟ್ಟನು. ಆದ್ರೆ ಅವರನ್ನು ಸ್ವರ್ಗಕ್ಕೆ ಆಮಂತ್ರಿಸಲಿಲ್ಲ. ಹಾಗಾದ್ರೆ ಅದರರ್ಥ, ಇವ್ರು ಸ್ವರ್ಗದಲ್ಲಿ ಆಳಲಿಕ್ಕಾಗಿ ಆರಿಸಲ್ಪಟ್ಟವರಷ್ಟು ನಂಬಿಗಸ್ತರಾಗಿರಲಿಲ್ಲ ಅಂತನಾ? ಅಲ್ಲ. ಬದಲಿಗೆ, ಯೆಹೋವನು ಅವ್ರಿಗೆ ಇಡೀ ಭೂಮಿ ಸುಂದರ ತೋಟ ಆಗುವಾಗ ಪುನಃ ಜೀವ ಕೊಡುತ್ತಾನೆ ಅಂತ ಅಷ್ಟೇ.—ಯೋಹಾ. 5:28, 29; ಅ. ಕಾ. 24:15.
16. ಇಂದಿನ ದೇವರ ಸೇವಕರಲ್ಲಿ ಹೆಚ್ಚಿನವರಿಗೆ ಯಾವ ನಿರೀಕ್ಷೆ ಇದೆ?
16 ಇಂದು ಭೂಮಿಯ ಮೇಲಿರೋ ದೇವರ ಸೇವಕರಲ್ಲಿ ಹೆಚ್ಚಿನವರಿಗೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇಲ್ಲ. ಬೈಬಲ್ ಕಾಲದಲ್ಲಿದ್ದ ಅಬ್ರಹಾಮ, ಸಾರ, ದಾವೀದ, ಸ್ನಾನಿಕನಾದ ಯೋಹಾನ ಮತ್ತು ಇನ್ನೂ ಅನೇಕ ಸ್ತ್ರೀ-ಪುರುಷರಂತೆ ಇವ್ರು ಸಹ ದೇವರ ಸರಕಾರ ತಮ್ಮ ಮೇಲೆ ಆಳುವಾಗ ಭೂಮಿಯಲ್ಲಿ ಜೀವಿಸಲು ಎದುರುನೋಡುತ್ತಾರೆ.—ಇಬ್ರಿ. 11:10.
17. ಮುಂದಿನ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
17 ಇಂದು ಸಹ ನಮ್ಮ ಮಧ್ಯೆ ಕೆಲವು ಅಭಿಷಿಕ್ತರು ಇರೋದರಿಂದ ನಮ್ಮ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಬರಬಹುದು. (ಪ್ರಕ. 12:17) ಉದಾಹರಣೆಗೆ, ಅಭಿಷಿಕ್ತರಾಗಿರುವವರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು? ಸ್ಮರಣೆಯ ಸಮಯದಲ್ಲಿ ನಮ್ಮ ಸಭೆಯಲ್ಲಿರುವ ಯಾರಾದ್ರೂ ದ್ರಾಕ್ಷಾಮದ್ಯ, ರೊಟ್ಟಿಯನ್ನು ತೆಗೆದುಕೊಳ್ಳಲು ಶುರುಮಾಡೋದಾದ್ರೆ ನಾವು ಅವ್ರ ಜೊತೆ ಹೇಗೆ ನಡಕೊಳ್ಳಬೇಕು? ತಾವು ಅಭಿಷಿಕ್ತರು ಅಂತ ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗೋದಾದ್ರೆ ಏನು ಮಾಡಬೇಕು? ನಾವು ಅದ್ರ ಬಗ್ಗೆ ಚಿಂತೆ ಮಾಡಬೇಕಾ? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ.
a ಕ್ರಿಸ್ತ ಶಕ 33 ರ ಪಂಚಾಶತ್ತಮದಿಂದ ಯೆಹೋವನು ಕೆಲವು ಕ್ರೈಸ್ತರಿಗೆ ಒಂದು ಅದ್ಭುತ ನಿರೀಕ್ಷೆಯನ್ನು ಕೊಡುತ್ತಾ ಬಂದಿದ್ದಾನೆ. ತನ್ನ ಮಗನೊಟ್ಟಿಗೆ ಸ್ವರ್ಗದಲ್ಲಿ ಆಳುವ ನಿರೀಕ್ಷೆಯೇ ಅದಾಗಿದೆ. ಆದರೆ ಈ ಅದ್ಭುತ ಸುಯೋಗಕ್ಕಾಗಿ ದೇವರು ತಮ್ಮನ್ನು ಆರಿಸಿದ್ದಾನೆಂದು ಆ ಕ್ರೈಸ್ತರಿಗೆ ಹೇಗೆ ಗೊತ್ತಾಗುತ್ತದೆ? ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಯಾರಿಗಾದ್ರೂ ಸಿಕ್ಕಿದಾಗ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳುಕೊಳ್ಳಲಿದ್ದೇವೆ. ಈ ಲೇಖನವು ಜನವರಿ 2016 ರ ಕಾವಲಿನಬುರುಜು ವಿನಲ್ಲಿ ಬಂದ ಲೇಖನದ ಆಧರಿತವಾಗಿದೆ.
b ಪದ ವಿವರಣೆ: ಪವಿತ್ರಾತ್ಮದಿಂದ ಅಭಿಷಿಕ್ತರಾಗುವುದು: ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳಲಿಕ್ಕಾಗಿ ಒಬ್ಬ ವ್ಯಕ್ತಿಯನ್ನು ಆರಿಸಲು ಯೆಹೋವನು ತನ್ನ ಪವಿತ್ರಾತ್ಮವನ್ನು ಉಪಯೋಗಿಸುತ್ತಾನೆ. ಈ ಪವಿತ್ರಾತ್ಮದ ಮೂಲಕ ಯೆಹೋವನು ಆ ವ್ಯಕ್ತಿಗೆ ಭವಿಷ್ಯದ ಬಗ್ಗೆ ಗ್ಯಾರಂಟಿ ಕೊಡುತ್ತಾನೆ ಅಥವಾ ಒಂದು ‘ಮುಂಗಡ ಗುರುತನ್ನು’ ಕೊಡುತ್ತಾನೆ. (ಎಫೆ. 1:13, 14) ಹಾಗಾಗಿ, ಅಭಿಷಿಕ್ತ ಕ್ರೈಸ್ತರು ತಮಗೆ ಬಹುಮಾನವು ಸ್ವರ್ಗದಲ್ಲಿ ಸಿಗುತ್ತದೆ ಅನ್ನೋದನ್ನ ಪವಿತ್ರಾತ್ಮವು ‘ಸಾಕ್ಷಿ ಹೇಳಿತು’ ಅಥವಾ ಸ್ಪಷ್ಟಪಡಿಸಿತು ಅಂತ ಹೇಳಬಹುದು.—ರೋಮ. 8:16.
c ಪದ ವಿವರಣೆ: ಮುದ್ರೆ. ಒಬ್ಬ ಅಭಿಷಿಕ್ತನು ಸಾಯೋವರೆಗೆ ಅಥವಾ ಮಹಾಸಂಕಟ ಶುರುವಾಗುವ ಸ್ವಲ್ಪ ಮುಂಚಿನವರೆಗೆ ನಂಬಿಗಸ್ತನಾಗಿದ್ದರೆ ಮಾತ್ರ ಈ ಮುದ್ರೆ ಕಾಯಂ ಆಗುತ್ತದೆ.—ಎಫೆ. 4:30; ಪ್ರಕ. 7:2-4; 2016 ರ ಏಪ್ರಿಲ್ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ನೋಡಿ.
d ‘ಪುನಃ ಹುಟ್ಟುವುದರ’ ಅರ್ಥವೇನು ಎಂಬ ವಿವರಣೆಗಾಗಿ ಏಪ್ರಿಲ್ 1, 2009 ಕಾವಲಿನಬುರುಜು (ಇಂಗ್ಲಿಷ್) ಪುಟ 3-12 ನೋಡಿ.
ಗೀತೆ 151 ದೇವ ಪುತ್ರರ ಪ್ರಕಟ
e ಚಿತ್ರ ವಿವರಣೆ: ನಾವು ನಮ್ಮ ನಂಬಿಕೆಯಿಂದಾಗಿ ಜೈಲಿನಲ್ಲೇ ಇರ್ಲಿ ಅಥವಾ ನಮಗೆ ಸುವಾರ್ತೆ ಸಾರುವ, ಸತ್ಯವನ್ನು ಕಲಿಸುವ ಸ್ವಾತಂತ್ರ್ಯನೇ ಇರ್ಲಿ ದೇವರ ಸರಕಾರ ನಮ್ಮನ್ನು ಆಳುವಾಗ ಭೂಮಿಯ ಮೇಲೆ ಜೀವಿಸುವ ನಿರೀಕ್ಷೆ ನಮ್ಮೆಲ್ರಿಗೂ ಇದ್ದೇ ಇದೆ.