ಆದಿ ಕ್ರೈಸ್ತರು ಮತ್ತು ಲೋಕ
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಒಂದು ಅತ್ಯಂತ ಆಶ್ಚರ್ಯಕರವಾದ ಘಟನೆಯು ಮಧ್ಯ ಪೂರ್ವದಲ್ಲಿ ನಡೆಯಿತು. ದೇವರ ಏಕ-ಜಾತ ಪುತ್ರನು, ಸ್ವಲ್ಪ ಕಾಲದ ತನಕ ಮಾನವ ಕುಲದ ಲೋಕದಲ್ಲಿ ಜೀವಿಸಲು, ತನ್ನ ಸ್ವರ್ಗೀಯ ನಿವಾಸ ಸ್ಥಾನದಿಂದ ಕಳುಹಿಸಲ್ಪಟ್ಟನು. ಹೆಚ್ಚಿನ ಮಾನವರು ಹೇಗೆ ಪ್ರತಿಕ್ರಿಯಿಸಿದರು? ಅಪೊಸ್ತಲ ಯೋಹಾನನು ಉತ್ತರಿಸುವುದು: “ಆತನು [ಯೇಸು] ಲೋಕದಲ್ಲಿ ಇದ್ದನು; ಮತ್ತು ಲೋಕವು ಆತನ ಮೂಲಕವಾಗಿ ಉಂಟಾಯಿತು; ಆದರೂ ಲೋಕವು ಆತನನ್ನು ಅರಿಯಲಿಲ್ಲ. ಅವನು ತನ್ನ ಸ್ವಾಸ್ಥ್ಯಕ್ಕೆ [ಇಸ್ರಾಯೇಲಿಗೆ] ಬಂದನು; ಆದರೆ ಸ್ವಂತ ಜನರು ಆತನನ್ನು ಅಂಗೀಕರಿಸಲಿಲ್ಲ.”—ಯೋಹಾನ 1:10, 11.
ದೇವರ ಕುಮಾರನಾದ ಯೇಸುವನ್ನು ಲೋಕವು ನಿಜವಾಗಿ ಸ್ವೀಕರಿಸದೆ ಹೋಯಿತು. ಯಾಕೆ ಸ್ವೀಕರಿಸಲಿಲ್ಲ? ಅದರ ಒಂದು ಕಾರಣವನ್ನು ವಿವರಿಸುವಾಗ ಯೇಸು ಅಂದದ್ದು: “ಲೋಕವು . . . ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿಹೇಳುವದರಿಂದ ನನ್ನನ್ನು ಹಗೆಮಾಡುತ್ತದೆ.” (ಯೋಹಾನ 7:7) ಕಟ್ಟಕಡೆಗೆ ಇದೇ ಲೋಕವು—ಕೆಲವು ಯೆಹೂದ್ಯ ಧಾರ್ಮಿಕ ಮುಖಂಡರಿಂದ, ಒಬ್ಬ ಇದೋಮ್ಯ ಅರಸನಿಂದ, ಮತ್ತು ಒಬ್ಬ ರೋಮನ್ ರಾಜಕೀಯಸ್ಥನಿಂದ ಪ್ರತಿನಿಧಿಸಲ್ಪಟ್ಟದ್ದಾಗಿ—ಯೇಸುವನ್ನು ಮರಣಕ್ಕೆ ಒಪ್ಪಿಸಿಕೊಟ್ಟಿತು. (ಲೂಕ 22:66–23:25; ಅ. ಕೃತ್ಯಗಳು 3:14, 15; 4:24-28) ಯೇಸುವಿನ ಹಿಂಬಾಲಕರ ಕುರಿತಾಗಿ ಏನು? ಲೋಕವು ಅವರನ್ನು ಸ್ವೀಕರಿಸಲು ಹೆಚ್ಚು ಸಿದ್ಧವಾಗಿರುವುದೋ? ಇಲ್ಲ. ಆತನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ, ಯೇಸು ಅವರನ್ನು ಎಚ್ಚರಿಸಿದ್ದು: “ನೀವು ಲೋಕದ ಭಾಗವಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು. ಆದರೆ ನೀವು ಭಾಗವಾಗಿರದೆ ಇರುವುದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.”—ಯೋಹಾನ 15:19, NW.
ಅಪೊಸ್ತಲಿಕ ಕಾಲಗಳಲ್ಲಿ
ಯೇಸುವಿನ ಮಾತುಗಳು ಸತ್ಯವಾಗಿ ರುಜುವಾದವು. ಆತನ ಮರಣದ ನಂತರ ಕೆಲವೇ ವಾರಗಳಲ್ಲಿ ಅವನ ಅಪೊಸ್ತಲರು ಕೈದುಮಾಡಲ್ಪಟ್ಟರು, ಬೆದರಿಸಲ್ಪಟ್ಟರು ಮತ್ತು ಹೊಡೆಯಲ್ಪಟ್ಟರು. (ಅ. ಕೃತ್ಯಗಳು 4:1-3; 5:17, 18, 40) ತದನಂತರ ಬೇಗನೆ, ಹುರುಪಿನ ಸೆಫ್ತನನನ್ನು ಯೆಹೂದ್ಯ ಹಿರೀಸಭೆಯ ಮುಂದೆ ಎಳೆದುತಂದರು, ಆಮೇಲೆ ಕಲ್ಲುಹೊಡೆದು ಕೊಲ್ಲಲ್ಪಟ್ಟನು. (ಅ. ಕೃತ್ಯಗಳು 6:8-12; 7:54, 57, 58) ತರುವಾಯ, ಅಪೊಸ್ತಲ ಯಾಕೋಬನು ಅರಸ 1 ನೆಯ ಹೆರೋದ ಅಗ್ರಿಪ್ಪನಿಂದ ಕೊಲ್ಲಲ್ಪಟ್ಟನು. (ಅ. ಕೃತ್ಯಗಳು 12:1, 2) ಪೌಲನು ತನ್ನ ಮಿಷನೆರಿ ಪ್ರಯಾಣಗಳಲ್ಲಿ, ಚದರಿಹೋದ [ಡೈಆಸ್ಪರ] ಯೆಹೂದ್ಯರ ಚಿತಾವಣೆಯಿಂದಾಗಿ ಹಿಂಸಿಸಲ್ಪಟ್ಟನು.—ಅ. ಕೃತ್ಯಗಳು 13:50; 14:2, 19.
ಅಂಥ ವಿರೋಧಕ್ಕೆ ಆದಿ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದರು? ಯೇಸುವಿನ ಹೆಸರಿನಲ್ಲಿ ಸಾರಕೂಡದೆಂದು ಧಾರ್ಮಿಕ ಅಧಿಕಾರಿಗಳು ಅಪೊಸ್ತಲರಿಗೆ ಅಪ್ಪಣೆ ಮಾಡಿದಾಗ, ಅಪೊಸ್ತಲರು ಹೇಳಿದ್ದು: “ಮನುಷ್ಯರಿಗಿಂತಲೂ [ಅಧಿಪತಿಯಾಗಿರುವ, NW] ದೇವರಿಗೆ ಹೆಚ್ಚಾಗಿ ನಾವು ವಿಧೇಯರಾಗಬೇಕಲ್ಲಾ.” (ಆ. ಕೃತ್ಯಗಳು 4:19, 20; 5:29) ವಿರೋಧವು ಎದ್ದಾಗಲ್ಲೆಲ್ಲಾ ಇದು ಅವರ ಮನೋಭಾವವಾಗಿ ಮುಂದುವರಿಯಿತು. ಆದರೂ ಅಪೊಸ್ತಲ ಪೌಲನು, “[ಸರಕಾರಿ] ಮೇಲಧಿಕಾರಿಗಳಿಗೆ ಅಧೀನರಾಗಿ” ಇರುವಂತೆ ರೋಮಿನ ಕ್ರೈಸ್ತರಿಗೆ ಬುದ್ಧಿವಾದವನ್ನಿತನ್ತು. ಅವರಿಗೆ ಈ ಹಿತೋಪದೇಶವನ್ನೂ ಆವನು ಕೊಟ್ಟನು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:18; 13:1) ಆದುದರಿಂದ, ಆದಿ ಕ್ರೈಸ್ತರಿಗೆ ಒಂದು ಕಷ್ಟಕರವಾದ ಸಮತೂಕವನ್ನು ಗಳಿಸಲಿಕ್ಕಿತ್ತು. ತಮ್ಮ ಪ್ರಧಾನ ಅಧಿಪತಿಯಾಗಿ ಅವರು ದೇವರಿಗೆ ವಿಧೇಯರಾದರು. ಅದೇ ಸಮಯದಲ್ಲಿ, ಅವರು ರಾಷ್ಟ್ರೀಯ ಅಧಿಕಾರಿಗಳಿಗೆ ಅಧೀನರಾಗಿದ್ದರು ಮತ್ತು ಎಲ್ಲಾ ಜನರೊಂದಿಗೆ ಸಮಾಧಾನದಿಂದ ಜೀವಿಸಲು ಪ್ರಯತ್ನಿಸಿದ್ದರು.
ರೋಮನ್ ಲೋಕದಲ್ಲಿ ಕ್ರೈಸ್ತರು
ರೋಮನ್ ಸಾಮ್ರಾಜ್ಯದ ಒಂದನೆಯ ಶತಕದ ಜಗತ್ತಿನಲ್ಲಿ, ರೋಮನ್ ಸೇನೆಯಿಂದ ಕಾಪಾಡಲ್ಪಟ್ಟ ಪ್ಯಾಕ್ಸ್ ರೊಮಾ ಅಥವಾ ರೋಮನ್ ಶಾಂತಿಯಿಂದಾಗಿ ಕ್ರೈಸ್ತರು ನಿಸ್ಸಂದೇಹವಾಗಿ ಪ್ರಯೋಜನ ಪಡೆದಿದ್ದರು. ನ್ಯಾಯ ಪರಿಪಾಲನೆ ಮತ್ತು ಶಿಸ್ತಿನ ಸ್ಥಿರವಾದ ಆಳಿಕೆ, ಒಳ್ಳೇ ರಸ್ತೆಗಳು, ಮತ್ತು ಸಾಧಾರಣವಾಗಿ ಸುರಕ್ಷಿತವಾದ ಕಡಲಪ್ರಯಾಣವು ಕ್ರೈಸ್ತತ್ವದ ವಿಸ್ತಾರ್ಯಕ್ಕೆ ಹಿತಕರವಾದ ಪರಿಸರವನ್ನು ನಿರ್ಮಿಸಿತ್ತು. ಸಮಾಜಕ್ಕೆ ತಮ್ಮ ಋಣವನ್ನು ಆದಿ ಕ್ರೈಸ್ತರು ಪ್ರತ್ಯಕ್ಷವಾಗಿ ಅಂಗೀಕರಿಸಿದ್ದರು ಮತ್ತು “ಕೈಸರನದನ್ನು ಕೈಸರನಿಗೆ ಕೊಡು” ವಂತೆ ಯೇಸು ಕೊಟ್ಟ ಆಜ್ಞೆಯನ್ನು ಪಾಲಿಸಿದ್ದರು. (ಮಾರ್ಕ 12:17) ರೋಮನ್ ಸಾಮ್ರಾಟ ಎಂಟೋನಿಯಸ್ ಪೈಅಸ್ (ಸಾ.ಶ. 138-161) ಗೆ ಬರೆಯುತ್ತಾ, ಜಸ್ಟಿನ್ ಮಾರ್ಟರ್ ವಾದಿಸಿದ್ದೇನಂದರೆ ಕ್ರೈಸ್ತರು ತಮ್ಮ ತೆರಿಗೆಗಳನ್ನು “ಬೇರೆಲ್ಲಾ ಮನುಷ್ಯರಿಗಿಂತ ಹೆಚ್ಚು ಸಿದ್ಧಮನಸ್ಕರಾಗಿ” ಕೊಡುತ್ತಿದ್ದರು. (ಫಸ್ಟ್ ಅಪಾಲಜಿ, ಅಧ್ಯಾಯ 17) ಸಾ.ಶ. 197 ರಲ್ಲಿ ಟೆರ್ಟುಲ್ಯನನು ರೋಮನ್ ಅಧಿಪತಿಗಳಿಗೆ ಹೇಳಿದ್ದೇನಂದರೆ ಅವರ ತೆರಿಗೆ ವಸೂಲುಗಾರರು, ಮನಸ್ಸಾಕ್ಷಿಪೂರ್ವಕವಾಗಿ ತಮ್ಮ ತೆರಿಗೆಗಳನ್ನು ಕೊಟ್ಟ “ಕ್ರೈಸ್ತರಿಗೆ ಕೃತಜ್ಞತೆಯನ್ನು ಸಲ್ಲಿಸ” ಲಿಕ್ಕಿದೆ. (ಅಪಾಲಜಿ, ಅಧ್ಯಾಯ 42) ಇದು, ಮೇಲಧಿಕಾರಿಗಳಿಗೆ ಅಧೀನರಾಗಿರಬೇಕೆಂಬ ಪೌಲನ ಬುದ್ಧಿವಾದವನ್ನು ಅವರು ಅನುಸರಿಸಿದ್ದ ಒಂದು ವಿಧಾನವಾಗಿತ್ತು.
ಅದಲ್ಲದೆ, ಅವರ ಕ್ರೈಸ್ತ ಸೂತ್ರಗಳು ಎಷ್ಟರ ಮಟ್ಟಿಗೆ ಅನುಮತಿಸುತ್ತವೋ ಆ ತನಕ, ಆದಿ ಕ್ರೈಸ್ತರು ತಮ್ಮ ನೆರೆಹೊರೆಯವರೊಂದಿಗೆ ಸಮಾಧಾನದಿಂದ ಜೀವಿಸಲು ಪ್ರಯತ್ನಿಸಿದ್ದರು. ಆದರೆ ಇದು ಸುಲಭವಾಗಿರಲಿಲ್ಲ. ಅವರ ಸುತ್ತುಮುತ್ತಲಿನ ಲೋಕವು ಬಹುಮಟ್ಟಿಗೆ ಅನೈತಿಕವಾಗಿತ್ತು ಮತ್ತು ಯಾವುದಕ್ಕೆ ಇತ್ತೀಚೆಗೆ ಸಾಮ್ರಾಟನ ಆರಾಧನೆಯು ಕೂಡಿಸಲ್ಪಟ್ಟಿತ್ತೋ ಆ ಗ್ರೀಕೊ-ರೋಮನ್ ವಿಗ್ರಹಾರಾಧನೆಯಲ್ಲಿ ಆಳವಾಗಿ ಒಳಗೂಡಿತ್ತು. ವಿಧರ್ಮಿ ರೋಮನ್ ಧರ್ಮವು ಮೂಲತಃ ರಾಜ್ಯ ಧರ್ಮವಾಗಿತ್ತಾದರ್ದಿಂದ, ಅದನ್ನಾಚರಿಸಲು ಯಾವುದೇ ನಿರಾಕರಣೆಯು ರಾಜ್ಯಕ್ಕೆ ವೈರವಾಗಿ ವೀಕ್ಷಿಸಲ್ಪಡ ಸಾಧ್ಯವಿತ್ತು. ಇದು ಕ್ರೈಸ್ತರನ್ನು ಎಲ್ಲಿ ನಿಲ್ಲಿಸಿತ್ತು?
ಆಕ್ಸಫರ್ಡ್ ಪ್ರೊಫೆಸರ್ ಇ.ಜಿ. ಹಾರ್ಡಿ ಬರೆದದ್ದು: “ಒಬ್ಬ ಶುದ್ಧಾಂತಃಕರಣವುಳ್ಳ ಕ್ರೈಸ್ತನಿಗೆ ಅಶಕ್ಯವಾಗಿದ್ದಂಥ, ವಿಗ್ರಹಾರಾದನೆಯು ಒಳಗೂಡಿದ್ದಾಗಿದ್ದ ಅನೇಕ ವಿಷಯಗಳನ್ನು ಟೆರ್ಟುಲ್ಯನ್ ನಮೂದಿಸಿದ್ದಾನೆ: ಉದಾಹರಣೆಗೆ, ಒಪ್ಪಂದಗಳಲ್ಲಿ ವಾಡಿಕೆಯಾಗಿದ್ದ ಪ್ರಮಾಣ; ಹಬ್ಬಗಳಲ್ಲಿ ಮನೆಬಾಗಲುಗಳ ದೀಪಾಲಂಕಾರ ಇತ್ಯಾದಿಗಳು; ಎಲ್ಲಾ ಅನ್ಯ ಧರ್ಮ ಸಂಸ್ಕಾರಗಳು; ಆಟಗಳು ಮತ್ತು ಸರ್ಕಸ್ಗಳು; ವಿಧರ್ಮಿ ಶಾಸ್ತ್ರೀಯ ಸಾಹಿತ್ಯಗಳನ್ನು ಕಲಿಸುವ ಕಸುಬು; ಮಿಲಿಟರಿ ಸೇವೆ; ಸಾರ್ವಜನಿಕ ಅಧಿಕಾರ ಸ್ಥಾನಗಳು.”—ಕ್ರಿಶ್ಚಿಆ್ಯನಿಟಿ ಆ್ಯಂಡ್ ದ ರೋಮನ್ ಗವರ್ನ್ಮೆಂಟ್.
ಹೌದು, ಕ್ರೈಸ್ತ ನಂಬಿಕೆಗೆ ದ್ರೋಹವೆಸಗದ ಹೊರತು ರೋಮನ್ ಜಗತ್ತಿನಲ್ಲಿ ಜೀವಿಸುವುದು ಕಷ್ಟಕರವಾಗಿತ್ತು. ಫ್ರೆಂಚ್ ಕ್ಯಾತೊಲಿಕ್ ಗ್ರಂಥಕರ್ತ ಎ. ಅಮಾನ್ ಬರೆದದ್ದು: “ಒಂದು ದೇವತ್ವಕ್ಕೆ ಎದುರುಬೀಳದ ಹೊರತು ಯಾವುದನ್ನಾದರೂ ಮಾಡುವುದು ಅಶಕ್ಯವಾಗಿತ್ತು. ಕ್ರೈಸ್ತನ ನಿಲುವು ಅವನಿಗೆ ದೈನಂದಿನ ಸಮಸ್ಯೆಗಳನ್ನು ತಂದಿತ್ತು; ಅವನು ಸಮಾಜದ ಹೊರಅಂಚಿನಲ್ಲಿ ಜೀವಿಸಿದ್ದನು . . . ಮನೆಯಲ್ಲಿ, ರಸ್ತೆಗಳಲ್ಲಿ, ಮತ್ತು ಮಾರ್ಕೆಟಿನಲ್ಲಿ ಮರುಕೊಳಿಸುವ ಸಮಸ್ಯೆಗಳನ್ನು ಅವನು ಎದುರಿಸಿದ್ದನು. . . . ದಾರಿಯಲ್ಲಿ ಒಂದು ದೇವಾಲಯವನ್ನು ಅಥವಾ ಮೂರ್ತಿಯನ್ನು ದಾಟಿಹೋಗುವಾಗ, ಅವನು ರೋಮನ್ ನಾಗರಿಕನಾಗಿರಲಿ, ಅಲ್ಲದಿರಲಿ, ಕ್ರೈಸ್ತನು ತನ್ನ ತಲೆಯನ್ನು ಬರಿದಾಗಿ ಇರಿಸಬೇಕಿತ್ತು. ಸಂಶಯವನ್ನೆಬ್ಬಿಸದ ಹೊರತು ಅವನದನ್ನು ಮಾಡದೆ ಇರುವುದಾದರೂ ಹೇಗೆ ಸಾಧ್ಯ, ಆದರೂ ರಾಜನಿಷ್ಠೆಯ ಒಂದು ಕ್ರಿಯೆಯನ್ನು ಗೈಯದ ಹೊರತು ಅವನು ಹೊಂದಿಕೆಯಾಗಿರುವುದಾದರೂ ಹೇಗೆ? ಅವನು ಒಂದು ವ್ಯಾಪಾರದಲ್ಲಿದ್ದರೆ ಮತ್ತು ಹಣವನ್ನು ಸಾಲವಾಗಿ ಪಡೆಯುವ ಅಗತ್ಯ ಅವನಿಗಿದ್ದರೆ, ಅವನು ಸಾಲಗಾರನಿಗೆ ದೇವರುಗಳ ಹೆಸರಿನಲ್ಲಿ ಪ್ರಮಾಣ ಮಾಡಬೇಕಾಗಿತ್ತು. . . . ಸಾರ್ವಜನಿಕ ಅಧಿಕಾರ ಸ್ಥಾನವನ್ನು ಅವನು ಸ್ವೀಕರಿಸಿದ್ದಾದರೆ, ಒಂದು ಯಜ್ಞವನ್ನು ಮಾಡುವಂತೆ ಅವನಿಂದ ಅಪೇಕ್ಷಿಸಲಾಗುತ್ತಿತ್ತು. ಒಂದುವೇಳೆ ಸೇರಿಸಲ್ಪಟ್ಟಲ್ಲಿ, ಶಪಥ ತಕ್ಕೊಳ್ಳುವುದರಿಂದ ಮತ್ತು ಮಿಲಿಟರಿ ಸೇವೆಯ ಸಂಸ್ಕಾರಗಳಲ್ಲಿ ಭಾಗವಹಿಸುವುದರಿಂದ ಅವನು ಹೇಗೆ ತಪ್ಪಿಸಿಕೊಂಡಾನು?”—ಲಾ ವೈ ಕ್ವಾಟಿಡಿಯೈನ್ ಡೆಸ್ ಪ್ರೀಮಿಯರ್ಸ್ ಚ್ರೇಟಿಯನ್ಸ್ (95-197) (ಆದಿ ಕ್ರೈಸ್ತರ ನಡುವೆ ದೈನಂದಿನದ ಜೀವನ, ಸಾ.ಶ. 95-197.)
ಒಳ್ಳೇ ನಾಗರಿಕರು, ಆದರೂ ದೂಷಿಸಲ್ಪಟ್ಟರು
ಸಾ.ಶ. 60 ಅಥವಾ 61 ರ ಸುಮಾರಿಗೆ, ಪೌಲನು ರೋಮಿನಲ್ಲಿ ಸಾಮ್ರಾಟ ನೀರೊನಿಂದ ವಿಚಾರಣೆಯನ್ನು ಕಾಯುತ್ತಿದ್ದಾಗ, ಪ್ರಮುಖ ಯೆಹೂದ್ಯರು ಆದಿ ಕ್ರೈಸ್ತರ ಕುರಿತು ಅಂದದ್ದು: “ಆ ಮತದ ವಿಷಯ ಜನರು ಎಲ್ಲೆಲ್ಲಿಯೂ ವಿರೋಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:22) ಕ್ರೈಸ್ತರು ವಿರೋಧವಾಗಿ ಮಾತಾಡಲ್ಪಟ್ಟಿದ್ದರು—ಆದರೆ ಹಾಗೆ ಅನ್ಯಾಯವಾಗಿ, ಎಂದು ಐತಿಹಾಸಿಕ ದಾಖಲೆಯು ದೃಢೀಕರಿಸುತ್ತದೆ. ರೈಸ್ ಆಫ್ ಕ್ರಿಶ್ಚಿಆ್ಯನಿಟಿ ಎಂಬ ತನ್ನ ಪುಸ್ತಕದಲ್ಲಿ, ಇ. ಡಬ್ಲ್ಯೂ. ಬಾರ್ನ್ಜ್ ತಿಳಿಸುವುದು: “ಅದರ ಆರಂಭದ ಅಧಿಕೃತ ದಾಖಲೆಗಳಲ್ಲಿ ಕ್ರೈಸ್ತ ಪರಂಪರೆಯು ಮೂಲತಃ ನೀತಿನಿಯಮದ ಮತ್ತು ನ್ಯಾಯಾನುಸರಣೆಯದ್ದಾಗಿ ಪ್ರತಿನಿಧಿಸಲ್ಪಟ್ಟಿದೆ. ಅದರ ಸದಸ್ಯರು ಒಳ್ಳೇ ನಾಗರಿಕರಾಗಿರಲು ಮತ್ತು ನಿಷ್ಠಾವಂತ ಪ್ರಜೆಗಳಾಗಿರಲು ಬಯಸಿದ್ದರು. ವಿಧರ್ಮಿಗಳ ಕುಂದುಗಳನ್ನು ಮತ್ತು ದುಶ್ಚಟಗಳನ್ನು ಅವರು ವರ್ಜಿಸುತ್ತಿದ್ದರು. ಖಾಸಗಿ ಜೀವನದಲ್ಲಿ ಅವರು ಶಾಂತಿಭರಿತ ನೆರೆಯವರಾಗಿರಲು ಮತ್ತು ನಂಬಲರ್ಹ ಮಿತ್ರರಾಗಿರಲು ಪ್ರಯತ್ನಿಸಿದ್ದರು. ಅವರು ಸಮಮನಸ್ಸಿನವರೂ, ಉದ್ಯೋಗಶೀಲರೂ, ಮತ್ತು ಶುದ್ಧವಾದ ಜೀವನ ನಡಸುವವವರೂ ಆಗಿರುವಂತೆ ಕಲಿಸಲ್ಪಟ್ಟಿದ್ದರು. ನೆಲೆಸಿದ್ದ ಭ್ರಷ್ಟತೆ ಮತ್ತು ವಿಷಯಲಂಪಟತೆಯ ನಡುವೆ ಅವರು ತಮ್ಮ ತತ್ವಗಳೆಡೆಗೆ ನಿಷ್ಠಾವಂತರು, ಪ್ರಾಮಾಣಿಕರು ಮತ್ತು ಸತ್ಯವಂತರು ಆಗಿದ್ದರು. ಅವರ ಲೈಂಗಿಕ ಮಟ್ಟಗಳು ಉಚ್ಛತರದ್ದಾಗಿದ್ದವು: ವಿವಾಹ ಸಂಬಂಧವು ಗೌರವಿಸಲ್ಪಟ್ಟಿತ್ತು ಮತ್ತು ಕುಟುಂಬ ಜೀವನವು ನಿರ್ಮಲವಾಗಿತ್ತು. ಇಂಥ ಸದ್ಗುಣಗಳೊಂದಿಗೆ ಅವರು, ಒಬ್ಬನು ನೆನಸುವಂತೆ, ಕಿರುಕುಳದ ನಾಗರಿಕರಾಗಿರ ಶಕ್ತರಲ್ಲ. ಆದರೂ, ಅವರು ಬಹಳ ಸಮಯದ ತನಕ ಹೀನೈಸಲ್ಪಟ್ಟಿದ್ದರು, ದೂಷಿಸಲ್ಪಟ್ಟಿದ್ದರು ಮತ್ತು ದ್ವೇಷಿಸಲ್ಪಟ್ಟಿದ್ದರು.”
ಪ್ರಾಚೀನ ಲೋಕವು ಹೇಗೆ ಯೇಸುವನ್ನು ತಿಳುಕೊಳ್ಳಲಿಲ್ಲವೋ ಹಾಗೆಯೇ ಅದು ಕೈಸ್ತರನ್ನೂ ತಿಳುಕೊಳ್ಳಲಿಲ್ಲ, ಆದಕಾರಣ ಅವರನ್ನು ಹಗೆಮಾಡಿತು. ಅವರು ಸಾಮ್ರಾಟನನ್ನು ಮತ್ತು ವಿಧರ್ಮಿ ದೇವತೆಗಳನ್ನು ಆರಾಧಿಸಲು ನಿರಾಕರಿಸಿದರಿಂದ, ನಾಸ್ತಿಕತೆಯನ್ನು ಅವರಿಗೆ ಆರೋಪಿಸಲಾಯಿತು. ಯಾವುದಾದರೊಂದು ವಿಪತ್ತು ಸಂಭವಿಸಿದ್ದಾದರೆ, ದೇವರುಗಳನ್ನು ಕುಪಿತಗೊಳಿಸಿದಕ್ಕಾಗಿ ಅವರನ್ನು ದೂರಲಾಗುತ್ತಿತ್ತು. ಅನೈತಿಕ ನಾಟಕಗಳನ್ನು ಅಥವಾ ಕ್ರೂರ ಖಡ್ಗಮಲ್ಲ ಪ್ರದರ್ಶನಗಳನ್ನು ಹಾಜರಾಗದೆ ಇದದ್ದರಿಂದ, ಅವರನ್ನು ಸಮಾಜ ವಿರೋಧಿಗಳು, ‘ಮಾನವ ಕುಲದ ದ್ವೇಷಕರು’ ಎಂದೂ ಪರಿಗಣಿಸಲಾಗಿತ್ತು. ಕುಟುಂಬಗಳು ಈ ಕ್ರೈಸ್ತ “ಮತ” ದಿಂದಾಗಿ ಛಿದ್ರಗೊಳಿಸಲ್ಪಟ್ಟಿವೆಯೆಂದೂ ಮತ್ತು ಆ ಕಾರಣದಿಂದಾಗಿ ಅದು ಸಮಾಜ ಸ್ಥಿರತೆಗೆ ಕಂಟಕಪ್ರಾಯವೆಂದೂ ಅವರ ಶತ್ರುಗಳು ವಾದಿಸಿದ್ದರು. ತಮ್ಮ ಪತ್ನಿಯರು ಕ್ರೈಸ್ತರಾಗುವುದಕ್ಕಿಂತ ವ್ಯಭಿಚಾರ ನಡಿಸುವುದನ್ನು ಇಷ್ಟೈಸಿದ ವಿಧರ್ಮಿ ಗಂಡಂದಿರ ಕುರಿತು ಟೆರ್ಟುಲ್ಯನ್ ಮಾತಾಡಿದ್ದನು.
ಆ ಸಮಯದಲ್ಲಿ ವಿಸ್ತಾರವಾಗಿ ನಡಿಸಲ್ಪಡುತ್ತಿದ್ದ ಗರ್ಭಪಾತದ ವಿರುದ್ಧವಾಗಿ ಕ್ರೈಸ್ತರಿದ್ದ ಕಾರಣ, ಟೀಕಿಸಲ್ಪಟ್ಟಿದ್ದರು. ಆದರೂ, ಅವರ ಮೇಲೆ ಮಕ್ಕಳನ್ನು ಹತಿಸುವ ದೋಷವನ್ನು ಅವರ ವೈರಿಗಳು ಹೊರಿಸಿದ್ದರು. ಬಲಿಯರ್ಪಿಸಲ್ಪಟ್ಟ ಮಕ್ಕಳ ರಕ್ತವನ್ನು ಅವರು ತಮ್ಮ ಕೂಟಗಳಲ್ಲಿ ಕುಡಿಯುತ್ತಿದ್ದರೆಂದು ಆಪಾದಿಸಲಾಗಿತ್ತು. ಅದೇ ಸಮಯದಲ್ಲಿ ಅವರ ಶತ್ರುಗಳು ಅವರನ್ನು, ಅದು ಅವರ ಮನಸ್ಸಾಕ್ಷಿಗೆ ವಿರುದ್ಧವೆಂದು ತಿಳಿದಿದ್ದರೂ, ರಕ್ತ ಸಾಸೆಜ್ಗಳನ್ನು ತಿನ್ನುವಂತೆ ಬಲಾತ್ಕರಿಸಲು ಪ್ರಯತ್ನಿಸಿದ್ದರು. ಹೀಗೆ ಈ ವಿರೋಧಕರು ತಮ್ಮ ಸ್ವಂತ ಆರೋಪವನ್ನು ಪ್ರತಿಷೇಧ ಮಾಡಿದರು.—ಟೆರ್ಟುಲ್ಯನ್, ಅಪಾಲಜಿ, ಅಧ್ಯಾಯ 9.
ಒಂದು ಹೊಸ ಮತವಾಗಿ ಹೀನೈಸಲ್ಪಟ್ಟದ್ದು
ಇತಿಹಾಸಗಾರ ಕೆನೆತ್ ಸ್ಕಾಟ್ ಲಾಟೊರೆಟ್ ಬರೆದದ್ದು: “ಕ್ರೈಸ್ತತ್ವವನ್ನು ಗುರಿಪಡಿಸಿದ ಆರೋಪಗಳ ಪಟ್ಟಿಯಲ್ಲಿ ಇನ್ನೊಂದು—ಅದರ ಇತ್ತೀಚಿಗಿನ ಪ್ರಾರಂಭವನ್ನು ಕುಚೋದ್ಯಮಾಡಿ, ಅದನ್ನು ಅದರ ಪ್ರತಿದ್ವಂದಿಗಳಾದ [ಯೆಹೂದ್ಯ ಧರ್ಮ ಮತ್ತು ಗ್ರೀಕೊ-ರೋಮನ್ ಅನ್ಯ ಧರ್ಮಗಳ] ಪುರಾತನತ್ವದೊಂದಿಗೆ ವೈದೃಶ್ಯ ತೋರಿಸುವುದಾಗಿತ್ತು.” (ಎ ಹಿಸ್ಟರಿ ಆಫ್ ದ ಎಕ್ಸ್ಪ್ಯಾನ್ಷನ್ ಆಫ್ ಕ್ರಿಶ್ಚಿಆ್ಯನಿಟಿ, ಸಂಪುಟ 1, ಪುಟ 131) ಸಾ.ಶ. ಎರಡನೆಯ ಶತಕದ ಆರಂಭದಲ್ಲಿ ರೋಮನ್ ಚರಿತ್ರೆಗಾರ ಸೆಟ್ವೋನಿಯಸ್ ಕ್ರೈಸ್ತತ್ವವನ್ನು, “ಒಂದು ಹೊಸತಾದ ಮತ್ತು ಕಿರುಕುಳದ ಮೂಢಭಕ್ತಿ” ಎಂದು ಕರೆದನು. ಕ್ರೈಸ್ತ ಎಂಬ ಹೆಸರು ತಾನೇ ದ್ವೇಷಿಸಲ್ಪಟ್ಟಿತ್ತು ಮತ್ತು ಕ್ರೈಸ್ತರು ಒಂದು ಅಪ್ರಿಯ ಪಂಥವಾಗಿದ್ದರು ಎಂಬದನ್ನು ಟೆರ್ಟುಲ್ಯನ್ ದೃಢೀಕರಿಸಿದ್ದಾನೆ. ರೋಮನ್ ಸಾಮ್ರಾಜ್ಯದ ಅಧಿಕಾರಿಗಳು ಎರಡನೆಯ ಶತಮಾನದಲ್ಲಿ ಕ್ರೈಸ್ತರನ್ನು ವೀಕ್ಷಿಸಿದ್ದ ರೀತಿಯನ್ನು ತಿಳಿಸುತ್ತಾ, ರಾಬರ್ಟ್ ಎಮ್. ಗ್ರಾಂಟ್ ಬರೆದದ್ದು: “ಕ್ರೈಸ್ತತ್ವವು ಸರಳವಾಗಿ ಒಂದು ಅನಾವಶ್ಯಕವಾದ, ಹಾನಿಕರವಾಗಿಯೂ ಇರಸಾಧ್ಯವಿರುವ ಧರ್ಮ ಎಂಬದೇ ಮೂಲ ನೋಟವಾಗಿತ್ತು.”—ಅರ್ಲಿ ಕ್ರಿಶ್ಚಿಆ್ಯನಿಟಿ ಆ್ಯಂಡ್ ಸೊಸೈಟಿ.
ಆಕ್ರಮಣಕಾರಿ ಮತಾಂತರಿಸುವಿಕೆಗೆ ಆರೋಪಿಸಲ್ಪಟ್ಟದ್ದು
ಲಾ ಪ್ರಮಾಯೆ ಸ್ಯಾಕಲ್ ಡೆ ಲ್ಯಾಗ್ಲೆಸ್ (ಚರ್ಚಿನ ಪ್ರಾರಂಭದ ಶತಮಾನಗಳು) ಎಂಬ ತನ್ನ ಪುಸ್ತಕದಲ್ಲಿ, ಸಾರ್ಬೊನ್ ಯೂನಿವರ್ಸಿಟಿಯ ಜಾಹನ್ ಬರ್ನಾರ್ಡೆ ಬರೆದದ್ದು: “[ಕ್ರೈಸ್ತರು] ಹೊರಗೆ ಹೋಗಿ ಎಲ್ಲಾ ಕಡೆಗಳಲ್ಲಿ ಮತ್ತು ಪ್ರತಿಯೊಬ್ಬರೊಂದಿಗೆ ಮಾತಾಡಬೇಕಿತ್ತು. ಹೆದ್ದಾರಿಗಳಲ್ಲಿ ಮತ್ತು ನಗರಗಳಲ್ಲಿ, ಸಾರ್ವಜನಿಕ ಚೌಕಗಳಲ್ಲಿ ಮತ್ತು ಮನೆಗಳಲ್ಲಿ. ಸ್ವಾಗತಿಸಲ್ಪಡಲಿ, ಸ್ವಾಗತಿಸಲ್ಪಡದಿರಲಿ. ಬಡವರಿಗೆ, ಮತ್ತು ಸೊತ್ತುಗಳಿಂದ ಪ್ರತಿಬಂಧಿಸಲ್ಪಟ್ಟ ಧನಿಕರಿಗೆ. ಅಲ್ಪರಿಗೆ ಮತ್ತು ರೋಮನ್ ಪ್ರಾಂತ್ಯಗಳ ಗವರ್ನರುಗಳಿಗೆ. . . . ಅವರಿಗೆ ದಾರಿ ಪ್ರಯಾಣ ನಡಿಸಬೇಕಾಗಿತ್ತು, ಹಡಗಗಳನ್ನು ಹತ್ತಬೇಕಾಗಿತ್ತು, ಮತ್ತು ಭೂಮಿಯ ಕಟ್ಟಕಡೆಯ ವರೆಗೆ ಹೋಗಬೇಕಾಗಿತ್ತು.”
ಅವರು ಇದನ್ನು ಮಾಡಿದ್ದರೋ? ಮಾಡಿದ್ದರೆಂಬದು ವ್ಯಕ್ತ. ಆದಿ ಕ್ರೈಸ್ತರ “ಉತ್ಸಾಹಪೂರಿತ ಮತಾಂತರಿಸುವಿಕೆ” ಯ ಕಾರಣ ಸಾರ್ವಜನಿಕ ಅಭಿಪ್ರಾಯವು ಆದಿ ವಿರುದ್ಧವಾಗಿತ್ತೆಂದು ಪ್ರೊಫೆಸರ್ ಲಾವೊನ್ ಒಮೊ ತಿಳಿಸುತ್ತಾರೆ. ಯೆಹೂದ್ಯರು ಮತಾಂತರದಲ್ಲಿ ತಮ್ಮ ಹುರುಪನ್ನು ಕಳಕೊಂಡಿರುವಾಗ, “ಕ್ರೈಸ್ತರಾದರೋ, ಇನ್ನೊಂದು ಕಡೆ, ಆಕ್ರಮಣಕಾರಿ ಮಿಷನೆರಿಗಳಾಗಿದ್ದರು ಮತ್ತು ಅದರಿಂದಾಗಿ ತೀವ್ರ ಅಸಮಾಧಾನವನ್ನು ಎಬ್ಬಿಸಿದ್ದರು” ಎಂದು ಪ್ರೊಫೆಸರ್ ಲಾಟೊರೆಟ್ ಹೇಳುತ್ತಾರೆ.
ಸಾ.ಶ. ಎರಡನೆಯ ಶತಮಾನದಲ್ಲಿ, ರೋಮನ್ ತತ್ವಜ್ಞಾನಿ ಸೆಲ್ಸಸ್, ಕ್ರೈಸ್ತರ ಸಾರುವ ವಿಧಾನಗಳನ್ನು ಟೀಕಿಸಿದ್ದನು. ಕ್ರೈಸ್ತತ್ವವು ಅವಿದ್ಯಾವಂತರಿಗಾಗಿತ್ತು ಮತ್ತು ಅದು ‘ಕೇವಲ ಮೂರ್ಖರನ್ನು, ದಾಸರನ್ನು, ಸ್ತ್ರೀಯರನ್ನು ಮತ್ತು ಚಿಕ್ಕ ಮಕ್ಕಳನ್ನು ಮಾತ್ರವೇ ಮನಗಾಣಿಸ’ ಬಲ್ಲದು ಎಂದು ಅವನು ಹೇಳಿದನು. ಅವರು “ಮಂಕರಾದ ಜನರಿಗೆ” ಬೋಧಿಸುತ್ತಾ, ಅವರನ್ನು “ವಿಚಾರ ಶಕಿಯ್ತಿಲ್ಲದೆ ನಂಬು” ವಂತೆ ಮಾಡುತ್ತಾರೆಂದು ಕ್ರೈಸ್ತರನ್ನು ಅವನು ಆರೋಪಿಸಿದನು. ಹೊಸ ಶಿಷ್ಯರಿಗೆ ಅವರು ಹೀಗಂದರೆಂದು ಅವನು ವಾದಿಸಿದನು: “ಪ್ರಶ್ನೆಗಳನ್ನು ಕೇಳಬೇಡಿರಿ; ಬರೇ ನಂಬಿರಿ.” ಆದರೂ, ಒರಿಗನ್ಗೆ ಅನುಸಾರವಾಗಿ, “ಯೇಸುವಿನ ಬೋಧನೆಯಿಂದ ಸೆಳೆಯಲ್ಪಟ್ಟು ಆತನ ಧರ್ಮವನ್ನು ಸ್ವೀಕರಿಸಿದವರು ಅವಿದ್ಯಾವಂತರು ಮತ್ತು ಕೆಳದರ್ಜೆಯವರು ಮಾತ್ರವೇ ಅಲ್ಲ” ಎಂದು ಸ್ವತಃ ಸೆಲ್ಸಸ್ ತಾನೇ ಒಪ್ಪಿಕೊಂಡಿದ್ದಾನೆ.
ಸಾರ್ವತ್ರಿಕತೆ ಇಲ್ಲ
ಒಬ್ಬನೇ ಸತ್ಯ ದೇವರ ಸತ್ಯವು ತಮ್ಮಲ್ಲಿದೆ ಎಂದು ವಾದಿಸಿದ ಕಾರಣ ಆದಿ ಕ್ರೈಸ್ತರು ಇನ್ನಷ್ಟು ಟೀಕಿಸಲ್ಪಟ್ಟಿದ್ದರು. ಅವರು ಸಾರ್ವತ್ರಿಕತೆಗೆ, ಅಥವಾ ಮಧ್ಯನಂಬಿಕೆಗೆ ಎಡೆಗೊಡುತ್ತಿರಲಿಲ್ಲ. ಲಾಟೊರೆಟ್ ಬರೆದದ್ದು: “ಆ ಕಾಲದ ಧರ್ಮಗಳಲ್ಲಿ ಹೆಚ್ಚಿನವುಗಳಿಗೆ ಅಸದೃಶವಾಗಿ, ಅವರು [ಕ್ರೈಸ್ತರು] ಬೇರೆ ಧರ್ಮಗಳಿಗೆ ವಿರುದ್ಧವಾಗಿದ್ದರು. . . . ಬೇರೆ ಪಂಥಗಳನ್ನು ಗುರುತಿಸಿದ್ದ ಸಾಧಾರಣ ವಿಶಾಲವಾದ ಸಹಿಷ್ಣುತೆಗೆ ವ್ಯತ್ಯಾಸದಲ್ಲಿ, ತಮ್ಮಲ್ಲಿ ಅಲ್ಲಗಳೆಯಲಾರದ ಸತ್ಯವಿತ್ತೆಂದು ಅವರು ಘೋಷಿಸಿದ್ದರು.”
ಸಾ.ಶ. 202 ರಲ್ಲಿ, ಸಾಮ್ರಾಟ ಸೆಪ್ಟಮಿಯಸ್ ಸೆವರಸ್, ಕ್ರೈಸ್ತರು ಮತಾಂತರಗಳನ್ನು ಮಾಡಕೂಡದೆಂದು ಆಜ್ಞಾಪಿಸಿದ ರಾಜಶಾಸನವನ್ನು ಹೊರಡಿಸಿದನು. ಆದರೂ, ಇದು ಅವರನ್ನು ತಮ್ಮ ನಂಬಿಕೆಯ ಕುರಿತು ಸಾಕ್ಷಿಕೊಡುವುದನ್ನು ನಿಲ್ಲಿಸಲಿಲ್ಲ. ಫಲಿತಾಂಶವನ್ನು ಲಾಟೊರೆಟ್ ವರ್ಣಿಸುತ್ತಾನೆ: “ಪ್ರಚಲಿತ ಮೂರ್ತಿಪೂಜಕ ಧರ್ಮದೊಂದಿಗೆ ಮತ್ತು ಆ ಕಾಲದ ಅನೇಕ ಸಾಮಾಜಿಕ ಆಚರಣೆಗಳು ಮತ್ತು ನೈತಿಕ ಪದ್ಧತಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅದರ ನಿರಾಕರಣೆಯಲ್ಲಿ ಅದು [ಆದಿ ಕ್ರೈಸ್ತತ್ವವು] ತನ್ನನ್ನು ಸಮಾಜದ ವಿರೋಧಿಯಾಗಿ ನಿಲ್ಲಿಸಿದ ಒಂದು ಸಂಯುಕ್ತತೆ ಮತ್ತು ವ್ಯವಸ್ಥಾಪನೆಯನ್ನು ವಿಕಾಸಮಾಡಿತು. ಅದನ್ನು ಸೇರಲು ಅವಶ್ಯವಿದ್ದ ವಿಚ್ಛೇದವು ತಾನೇ, ಅದರ ಅವಲಂಬಿಗಳಿಗೆ ಹಿಂಸೆಯ ವಿರುದ್ಧವಾಗಿ ಮತ್ತು ಮತಾಂತರಿಗಳನ್ನು ಗೆಲ್ಲುವ ಹುರುಪಿಗೆ ಬಲದ ಮೂಲವಾದ ಮನವರಿಕೆಯನ್ನು ಕೊಟ್ಟಿತು.”
ಚಾರಿತ್ರಿಕ ದಾಖಲೆಯು, ಹೀಗೆ, ಸುಸ್ಪಷ್ಟವಾಗಿಗಿದೆ. ಮುಖ್ಯವಾಗಿ, ಆದಿ ಕ್ರೈಸ್ತರು ಒಳ್ಳೇ ನಾಗರಿಕರಾಗಿರಲು ಮತ್ತು ಎಲ್ಲಾ ಮನುಷ್ಯರೊಂದಿಗೆ ಸಮಾಧಾನದಿಂದ ಜೀವಿಸಲು ಪ್ರಯತ್ನಿಸಿದರೂ, “ಲೋಕದ ಭಾಗವಾಗಿ” ಇರಲು ಮಾತ್ರ ನಿರಾಕರಿಸಿದ್ದರು. (ಯೋಹಾನ 15:19) ಅವರು ಅಧಿಕಾರಿಗಳನ್ನು ಗೌರವಪೂರ್ವಕವಾಗಿ ನೋಡುತ್ತಿದ್ದರು. ಆದರೆ ಅವರು ಸಾರಕೂಡದು ಎಂದು ಕೈಸರನು ಆಜ್ಞಾಪಿಸಿದಾಗ, ಸಾರುತ್ತಾ ಇರುವುದೇ ಹೊರತು ಬೇರೆ ಯಾವ ಉಪಾಯವೂ ಅವರಿಗಿರಲಿಲ್ಲ. ಅವರು ಎಲ್ಲಾ ಮನುಷ್ಯರೊಂದಿಗೆ ಸಮಾಧಾನದಿಂದ ಜೀವಿಸಲು ಪ್ರಯತ್ನಿಸಿದ್ದರು, ಆದರೆ, ನೈತಿಕ ಮಟ್ಟಗಳು ಮತ್ತು ಅನ್ಯರ ವಿಗ್ರಹಾರಾಧನೆಯ ವಿಷಯದಲ್ಲಿ ಒಪ್ಪಂದ ಮಾಡಲು ನಿರಾಕರಿಸಿದರು. ಇವೆಲ್ಲವುಗಳಿಗಾಗಿ ಅವರು, ಹಾಗಾಗುವುದೆಂದು ಕ್ರಿಸ್ತನು ಮುಂತಿಳಿಸಿದ ಪ್ರಕಾರವೇ, ಹೀನೈಸಲ್ಪಟ್ಟರು, ದೂಷಿಸಲ್ಪಟ್ಟರು, ದ್ವೇಷಿಸಲ್ಪಟ್ಟರು, ಮತ್ತು ಹಿಂಸಿಸಲ್ಪಟ್ಟರು.—ಯೋಹಾನ 16:33.
ಲೋಕದಿಂದ ಅವರ ಪ್ರತ್ಯೇಕವಾಗಿರುವಿಕೆಯು ಮುಂದುವರಿಯಿತೋ? ಅಥವಾ ಕಾಲದ ದಾಟುವಿಕೆಯೊಂದಿಗೆ, ಕ್ರೈಸ್ತತ್ವವನ್ನು ಪಾಲಿಸುವವರೆಂದು ವಾದಿಸಿದ್ದ ಆ ಜನರು ಈ ವಿಷಯದಲ್ಲಿ ತಮ್ಮ ಮನೋಭಾವವನ್ನು ಬದಲಾಯಿಸಿದರೋ?
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಕ್ರೈಸ್ತನ ನಿಲುವು ಅವನಿಗೆ ದೈನಂದಿನ ಸಮಸ್ಯೆಗಳನ್ನು ತಂದಿತ್ತು; ಅವನು ಸಮಾಜದ ಹೊರಅಂಚಿನಲ್ಲಿ ಜೀವಿಸಿದ್ದನು”
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಕ್ರೈಸ್ತತ್ವವು ಅದರ ಇತ್ತೀಚಿಗಿನ ಪ್ರಾರಂಭಕ್ಕಾಗಿ ಕುಚೋದ್ಯಕ್ಕೆ [ಈಡಾಗಿತ್ತು] ಮತ್ತು ಅದರ ಪ್ರತಿದ್ವಂದಿಗಳ ಪುರಾತನತ್ವದೊಂದಿಗೆ . . . ವೈದೃಶ್ಯ ಮಾಡಲ್ಪಟ್ಟಿತ್ತು”
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: Alinari/Art Resource, N.Y.
[ಪುಟ 3 ರಲ್ಲಿರುವ ಚಿತ್ರ]
ಕ್ರೈಸ್ತರು ರೋಮನ್ ಸಾಮ್ರಾಟನನ್ನು ಮತ್ತು ವಿಧರ್ಮಿ ದೇವರುಗಳನ್ನು ಆರಾಧಿಸಲು ನಿರಾಕರಿಸಿದರಿಂದ, ನಾಸ್ತಿಕತೆಯನ್ನು ಅವರಿಗೆ ಆರೋಪಿಸಲಾಗಿತ್ತು
[ಕೃಪೆ]
Museo della Civiltà Romana, Roma
[ಪುಟ 7 ರಲ್ಲಿರುವ ಚಿತ್ರ]
ಪ್ರಥಮ ಶತಕದ ಕ್ರೈಸ್ತರು ರಾಜ್ಯ ಸಂದೇಶದ ಹುರುಪಿನ ಸಾರುವವರೆಂದು ಪ್ರಖ್ಯಾತರಾಗಿದ್ದರು