ಬೈಬಲಿನ ದೃಷ್ಟಿಕೋನ
“ಈ ಲೋಕದ ಭಾಗವಲ್ಲ” ಇದು ಏನನ್ನು ಅರ್ಥೈಸುತ್ತದೆ?
ಸಾಮಾನ್ಯ ಶಕ ನಾಲ್ಕನೆಯ ಶತಮಾನದಲ್ಲಿ, ಸಾವಿರಾರು ತೋರಿಕೆಯ ಕ್ರೈಸ್ತರು ಈಜಿಪ್ಟಿನ ಮರುಭೂಮಿಗಳಲ್ಲಿ ಪ್ರತ್ಯೇಕವಾಗಿ ವಾಸಿಸಲಿಕ್ಕಾಗಿ ತಮ್ಮ ಸ್ವತ್ತುಗಳನ್ನು, ಸಂಬಂಧಿಕರನ್ನು ಮತ್ತು ಜೀವನ ಶೈಲಿಯನ್ನು ಹಿಂದೆ ಬಿಟ್ಟುಹೋದರು. ಅವರು ಆ್ಯಂಕರೈಟ್ಸ್ (ವಿರಕ್ತರು) ಎಂದು ಪ್ರಸಿದ್ಧರಾದರು. ಇದು ಆ್ಯನಾಕಾರಿಯೋ ಎಂಬ ಗ್ರೀಕ್ ಪದದಿಂದ ಬಂದದ್ದಾಗಿದ್ದು, ಇದಕ್ಕೆ “ನಾನು ಹೊರಟುಹೋಗುತ್ತೇನೆ” ಎಂಬ ಅರ್ಥವಿದೆ. ಅವರನ್ನು ಒಬ್ಬ ಇತಿಹಾಸಕರನು, ತಮ್ಮ ಸಮಕಾಲೀನರಿಂದ ತಮ್ಮನ್ನು ದೂರ ಇರಿಸಿಕೊಳ್ಳುವ ಜನರಾಗಿ ವರ್ಣಿಸುತ್ತಾನೆ. ಮಾನವ ಸಮಾಜದಿಂದ ಹೊರಟುಹೋಗುವುದರ ಮೂಲಕ, ‘ಈ ಲೋಕದ ಭಾಗವಾಗಿರಬಾರ’ದಾದ ಕ್ರೈಸ್ತ ಆವಶ್ಯಕತೆಗೆ ತಾವು ವಿಧೇಯರಾಗುತ್ತಿದ್ದೇವೆಂದು ವಿರಕ್ತರು ನೆನಸಿದರು.—ಯೋಹಾನ 15:19, NW.
“ಲೋಕದಿಂದ ನಿಷ್ಕಳಂಕರು” (NW) ಆಗಿ ಇರಬೇಕೆಂದು ಬೈಬಲು ಕ್ರೈಸ್ತರಿಗೆ ಬುದ್ಧಿವಾದವನ್ನು ಕೊಡುತ್ತದೆ ನಿಜ. (ಯಾಕೋಬ 1:27) ಶಾಸ್ತ್ರವಚನಗಳು ಸ್ಫುಟವಾಗಿ ಎಚ್ಚರಿಸುವುದು: “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ಆದರೂ ಕ್ರೈಸ್ತರು ಅಕ್ಷರಾರ್ಥ ವಿಧದಲ್ಲಿ ಇತರರಿಂದ ಬೇರೆಯಾಗುತ್ತಾ ವಿರಕ್ತರಾಗಿ ಪರಿಣಮಿಸಲು ನಿರೀಕ್ಷಿಸಲ್ಪಟ್ಟಿದ್ದಾರೆಂಬುದನ್ನು ಇದು ಅರ್ಥೈಸುತ್ತದೋ? ಅವರು ತಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಪಾಲಿಗರಾಗದ ಜನರಿಂದ ಪ್ರತ್ಯೇಕವಾಗಿರಬೇಕೋ?
ಕ್ರೈಸ್ತರು ಸಮಾಜ ವಿರೋಧಿಗಳಲ್ಲ
ದೇವರಿಂದ ವಿಮುಖರಾಗಿರುವ ಮಾನವ ಸಮಾಜದ ಗುಂಪಿನಿಂದ ಕ್ರೈಸ್ತರು ತಮ್ಮನ್ನು ಪ್ರತ್ಯೇಕಿಸಿಕೊಳ್ಳುವ ಅಗತ್ಯವನ್ನು ಎತ್ತಿತೋರಿಸುವ ಹಲವಾರು ಬೈಬಲ್ ವೃತ್ತಾಂತಗಳಲ್ಲಿ, ಲೋಕದ ಭಾಗವಾಗಿರದೇ ಇರುವ ವಾದವು ಚರ್ಚಿಸಲ್ಪಟ್ಟಿದೆ. (ಹೋಲಿಸಿರಿ 2 ಕೊರಿಂಥ 6:14-17; ಎಫೆಸ 4:18; 2 ಪೇತ್ರ 2:20.) ಆದಕಾರಣ, ಸತ್ಯ ಕ್ರೈಸ್ತರು ಐಶ್ವರ್ಯ, ಪ್ರಖ್ಯಾತಿಯ ಹಿಂದೆ ಲೋಕದ ಅತ್ಯಾಶೆಯ ಬೆನ್ನಟ್ಟುವಿಕೆ ಹಾಗೂ ಸುಖಾನುಭೋಗಗಳಲ್ಲಿ ಅತಿಯಾದ ಲೋಲುಪತೆಯಂಥ, ಯೆಹೋವನ ನೀತಿಯ ಮಾರ್ಗಗಳೊಂದಿಗೆ ಸಂಘರ್ಷಿಸುವ ಮನೋಭಾವ ಮತ್ತು ನಡೆನುಡಿಗಳಿಂದ ವಿವೇಕಯುತವಾಗಿ ದೂರವಿರುತ್ತಾರೆ. (1 ಯೋಹಾನ 2:15-17) ಅವರು ಯುದ್ಧ ಹಾಗೂ ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿ ಉಳಿಯುವುದರ ಮೂಲಕ ಸಹ ಲೋಕದಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೆ.
ತನ್ನ ಶಿಷ್ಯರು “ಈ ಲೋಕದ ಭಾಗ”ವಾಗಿರುವುದಿಲ್ಲ ಎಂದು ಯೇಸು ಕ್ರಿಸ್ತನು ಹೇಳಿದನು. ಆದರೆ ಅವನು ದೇವರಿಗೆ ಹೀಗೂ ಪ್ರಾರ್ಥಿಸಿದನು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.” (ಯೋಹಾನ 17:14-16) ಸ್ಫುಟವಾಗಿಯೇ, ಯೇಸು ತನ್ನ ಶಿಷ್ಯರು ಕ್ರೈಸ್ತೇತರರೊಂದಿಗೆ ಎಲ್ಲ ಸಂಪರ್ಕವನ್ನು ಕಡಿದುಹಾಕಿ, ಸಮಾಜವಿರೋಧಿಗಳಾಗಿ ಪರಿಣಮಿಸಬೇಕೆಂದು ಬಯಸಲಿಲ್ಲ. ವಾಸ್ತವವಾಗಿ, ಪ್ರತ್ಯೇಕತೆಯು ಕ್ರೈಸ್ತನೊಬ್ಬನನ್ನು “ಬಹಿರಂಗವಾಗಿಯೂ ಮನೆಮನೆಯಲ್ಲಿಯೂ” ಸಾರುವ ಹಾಗೂ ಕಲಿಸುವ ತನ್ನ ನೇಮಕವನ್ನು ಪೂರೈಸುವುದರಿಂದ ತಡೆಗಟ್ಟುವುದು.—ಅ. ಕೃತ್ಯಗಳು 20:20; ಮತ್ತಾಯ 5:16; 1 ಕೊರಿಂಥ 5:9, 10.
ಲೋಕದಿಂದ ನಿಷ್ಕಳಂಕರಾಗಿ ಉಳಿಯುವ ಸಲಹೆಯು, ಕ್ರೈಸ್ತರಿಗೆ ಇತರರಿಗಿಂತ ತಾವು ಶ್ರೇಷ್ಠರೆಂದು ಭಾವಿಸಿಕೊಳ್ಳುವುದಕ್ಕಾಗಿ ಯಾವುದೇ ಆಧಾರವನ್ನು ಕೊಡುವುದಿಲ್ಲ. ಯೆಹೋವನಿಗೆ ಭಯಪಡುವವರು “ಗರ್ವ”ವನ್ನು ದ್ವೇಷಿಸುತ್ತಾರೆ. (ಜ್ಞಾನೋಕ್ತಿ 8:13) “ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ” ಎಂದು ಗಲಾತ್ಯ 6:3 ಹೇಳುತ್ತದೆ. ತಾವು ಶ್ರೇಷ್ಠರೆಂದು ಭಾವಿಸಿಕೊಳ್ಳುವವರು ತಮ್ಮನ್ನು ಮೋಸಗೊಳಿಸಿಕೊಳ್ಳುತ್ತಾರೆ, ಏಕೆಂದರೆ “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.”—ರೋಮಾಪುರ 3:23.
“ಯಾರನ್ನೂ ದೂಷಿಸ”ದಿರಿ
ಯೇಸುವಿನ ದಿನದಲ್ಲಿ ತಮ್ಮ ಏಕಮಾತ್ರ ಧಾರ್ಮಿಕ ಗುಂಪುಗಳಿಗೆ ಸೇರದವರೆಲ್ಲರನ್ನು ತೃಣೀಕರಿಸಿದ ಜನರಿದ್ದರು. ಇವರಲ್ಲಿ ಫರಿಸಾಯರು ಸೇರಿದ್ದರು. ಅವರು ಮೋಶೆಯ ನಿಯಮದೊಂದಿಗೆ ಹಾಗೂ ಯೆಹೂದಿ ಸಂಪ್ರದಾಯದ ಅತಿಸೂಕ್ಷ್ಮ ವಿವರಗಳೊಂದಿಗೆ ಸುಪರಿಚಿತರಾಗಿದ್ದರು. (ಮತ್ತಾಯ 15:1, 2; 23:2) ಅನೇಕ ಧಾರ್ಮಿಕ ಸಂಸ್ಕಾರಗಳನ್ನು ತೀರ ಜಾಗರೂಕತೆಯಿಂದ ಅನುಸರಿಸುವುದರಲ್ಲಿ ಅವರಿಗೆ ಅಹಂಭಾವವಿತ್ತು. ಕೇವಲ ತಮ್ಮ ಬೌದ್ಧಿಕ ಸಾಧನೆಗಳು ಹಾಗೂ ಧಾರ್ಮಿಕ ಸ್ಥಾನಮಾನಗಳ ಕಾರಣಮಾತ್ರದಿಂದ ಫರಿಸಾಯರು ಇತರರಿಗಿಂತ ಶ್ರೇಷ್ಠರಾಗಿದ್ದರೋ ಎಂಬಂತೆ ನಡೆದುಕೊಂಡರು. “ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ” ಎಂದು ಹೇಳುವ ಮೂಲಕ ಅವರು ತಮ್ಮ ವಂಚನೆಯ ಹಾಗೂ ದುರಹಂಕಾರದ ಮನೋಭಾವವನ್ನು ವ್ಯಕ್ತಪಡಿಸಿದರು.—ಯೋಹಾನ 7:49.
ಫರಿಸಾಯರು, ಫರಿಸಾಯೇತರ ಜನರನ್ನು ಹೀನೈಸುವ ಶಬ್ದವನ್ನೂ ಹೊಂದಿದ್ದರು. ಆ್ಯಮ್ಹಾರೆಟ್ಸ್ ಎಂಬ ಹೀಬ್ರೂ ಪದವು, ಮೂಲತಃ ಸಮಾಜದ ನಿತ್ಯದ ಸದಸ್ಯರನ್ನು ಹೆಸರಿಸಲಿಕ್ಕಾಗಿ ಒಂದು ಸಕರಾತ್ಮಕವಾದ ರೀತಿಯಲ್ಲಿ ಉಪಯೋಗಿಸಲ್ಪಟ್ಟಿತು. ಆದರೆ ಸಕಾಲದಲ್ಲಿ ಯೂದಾಯದ ಆ ದುರಹಂಕಾರಿ ಧಾರ್ಮಿಕ ಮುಖಂಡರು, ಆ್ಯಮ್ಹಾರೆಟ್ಸ್ ಎಂಬ ಪದಕ್ಕೆ ತಿರಸ್ಕಾರದ ಅರ್ಥವನ್ನು ಕೊಡುತ್ತಾ, ಆ ಪದದ ಅರ್ಥವನ್ನು ಬದಲಾಯಿಸಿದರು. ಇತರ ಗುಂಪುಗಳು—ಹೊರತೋರಿಕೆಯ ಕ್ರೈಸ್ತರನ್ನೂ ಸೇರಿಸಿ—ತಮ್ಮ ಧಾರ್ಮಿಕ ನಂಬಿಕೆಗಳಿಗಿಂತ ಭಿನ್ನವಾದ ನಂಬಿಕೆಗಳಿರುವ ಜನರನ್ನು ಹೆಸರಿಸಲು, ಅನುಚಿತವಾದ ವಿಧದಲ್ಲಿ “ವಿಧರ್ಮಿ” ಹಾಗೂ “ಅನ್ಯರು” ಎಂಬಂಥ ಪದಗಳನ್ನು ಉಪಯೋಗಿಸಿವೆ.
ಆದರೂ ಕ್ರೈಸ್ತತ್ವವನ್ನು ಸ್ವೀಕರಿಸದಿದ್ದ ಜನರನ್ನು ಪ್ರಥಮ ಶತಮಾನದ ಕ್ರೈಸ್ತರು ಹೇಗೆ ವೀಕ್ಷಿಸಿದರು? ಯೇಸುವಿನ ಶಿಷ್ಯರು ಅವಿಶ್ವಾಸಿಗಳನ್ನು “ಸೌಮ್ಯಭಾವದಿಂದ” (NW) ಹಾಗೂ “ತೀರ ಗೌರವ”ದಿಂದ ಉಪಚರಿಸಬೇಕೆಂದು ತಿಳಿಹೇಳಲ್ಪಟ್ಟಿದ್ದರು. (2 ತಿಮೊಥೆಯ 2:25; 1 ಪೇತ್ರ 3:15) ಈ ಸಂಬಂಧದಲ್ಲಿ ಅಪೊಸ್ತಲ ಪೌಲನು ಒಂದು ಒಳ್ಳೆಯ ಮಾದರಿಯನ್ನು ಇಟ್ಟನು. ಅವನು ದುರಹಂಕಾರಿಯಾಗಿರಲಿಲ್ಲ, ಸ್ನೇಹಶೀಲ ವ್ಯಕ್ತಿಯಾಗಿದ್ದನು. ಇತರರಿಗಿಂತ ತನ್ನನ್ನು ದೊಡ್ಡವನನ್ನಾಗಿ ಮಾಡಿಕೊಳ್ಳುವ ಬದಲು ಅವನು ನಮ್ರನೂ ಆತ್ಮೋನ್ನತಿಮಾಡುವವನೂ ಆಗಿದ್ದನು. (1 ಕೊರಿಂಥ 9:22, 23) ತೀತನಿಗೆ ಬರೆದ ತನ್ನ ಪ್ರೇರಿತ ಪತ್ರದಲ್ಲಿ ಪೌಲನು, “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರ”ಬೇಕೆಂಬ ಬುದ್ಧಿವಾದವನ್ನು ನೀಡುತ್ತಾನೆ.—ತೀತ 3:2.
ಬೈಬಲಿನಲ್ಲಿ “ಅವಿಶ್ವಾಸಿ” ಎಂಬ ಪದವು ಕೆಲವೊಮ್ಮೆ ಕ್ರೈಸ್ತೇತರರನ್ನು ಹೆಸರಿಸಲು ಉಪಯೋಗಿಸಲ್ಪಟ್ಟಿದೆ. ಆದರೂ “ಅವಿಶ್ವಾಸಿ” ಎಂಬ ಪದವು, ಅಧಿಕೃತ ಹೆಸರು ಅಥವಾ ಲೇಬಲ್ ಆಗಿ ಉಪಯೋಗಿಸಲ್ಪಟ್ಟಿರುವುದಕ್ಕೆ ಯಾವ ಆಧಾರವೂ ಇಲ್ಲ. ನಿಶ್ಚಯವಾಗಿಯೂ, ಇದು ಕ್ರೈಸ್ತೇತರರನ್ನು ಹೀನೈಸಲು ಅಥವಾ ಅವರ ಹೆಸರನ್ನು ಕೆಡಿಸಲು ಉಪಯೋಗಿಸಲ್ಪಡಲಿಲ್ಲ, ಏಕೆಂದರೆ ಇದು ಬೈಬಲ್ ತತ್ತ್ವಗಳಿಗೆ ವಿರುದ್ಧವಾಗಿರುತ್ತಿತ್ತು. (ಜ್ಞಾನೋಕ್ತಿ 24:9) ಇಂದು ಯೆಹೋವನ ಸಾಕ್ಷಿಗಳು ಅವಿಶ್ವಾಸಿಗಳೊಂದಿಗೆ ಕಟುಭಾವದವರು ಅಥವಾ ದುರಹಂಕಾರಿಗಳು ಆಗಿರುವುದರಿಂದ ದೂರವಿರುತ್ತಾರೆ. ಕಳಂಕಮಯ ಪದಗಳಿಂದ ಸಾಕ್ಷಿಗಳಾಗಿರದ ಸಂಬಂಧಿಗಳನ್ನು ಅಥವಾ ನೆರೆಹೊರೆಯವರನ್ನು ಹೆಸರಿಸುವುದು ಅಸಭ್ಯತನ ಎಂದು ಅವರು ಪರಿಗಣಿಸುತ್ತಾರೆ. ಅವರು ಹೀಗೆ ಹೇಳುವ ಬೈಬಲ್ ವಚನವನ್ನು ಅನುಸರಿಸುತ್ತಾರೆ: “ಕರ್ತನ ದಾಸನು . . . ಎಲ್ಲರೊಂದಿಗೂ ಸೌಮ್ಯಭಾವದವನಾಗಿರಬೇಕು” (NW).—2 ತಿಮೊಥೆಯ 2:24.
‘ಎಲ್ಲರಿಗೆ ಒಳ್ಳೇದನ್ನು ಮಾಡಿರಿ’
ಲೋಕದೊಂದಿಗಿನ, ವಿಶೇಷವಾಗಿ ದೈವಿಕ ಮಟ್ಟಗಳಿಗೆ ಸಂಪೂರ್ಣ ಅಗೌರವವನ್ನು ತೋರಿಸುವವರೊಂದಿಗಿನ ಅನ್ಯೋನ್ಯತೆಯ ಅಪಾಯಗಳನ್ನು ಗ್ರಹಿಸುವುದು ಅತ್ಯಾವಶ್ಯಕವಾಗಿದೆ. (1 ಕೊರಿಂಥ 15:33ನ್ನು ಹೋಲಿಸಿರಿ.) ಆದರೂ, ‘ಎಲ್ಲರಿಗೆ ಒಳ್ಳೇದನ್ನು ಮಾಡಿರಿ’ ಎಂಬುದಾಗಿ ಬೈಬಲು ಸಲಹೆ ನೀಡುವಾಗ, “ಎಲ್ಲರಿಗೆ” ಎಂಬ ಪದವು ಕ್ರೈಸ್ತ ನಂಬಿಕೆಗಳಲ್ಲಿ ಪಾಲಿಗರಾಗದವರನ್ನೂ ಒಳಗೊಳ್ಳುತ್ತದೆ. (ಗಲಾತ್ಯ 6:10) ಸುವ್ಯಕ್ತವಾಗಿಯೇ, ಕೆಲವು ಸಂದರ್ಭಗಳಲ್ಲಿ ಪ್ರಥಮ ಶತಮಾನದ ಕ್ರೈಸ್ತರು ಅವಿಶ್ವಾಸಿಗಳೊಂದಿಗೆ ಊಟದಲ್ಲಿ ಪಾಲಿಗರಾದರು. (1 ಕೊರಿಂಥ 10:27) ಆದಕಾರಣ, ಇಂದು ಕ್ರೈಸ್ತರು ಅವಿಶ್ವಾಸಿಗಳನ್ನು ತಮ್ಮ ಜೊತೆಮಾನವರಂತೆ ವೀಕ್ಷಿಸುತ್ತಾ, ಅವರನ್ನು ಒಂದು ಸಮತೂಕದ ವಿಧದಲ್ಲಿ ಉಪಚರಿಸುತ್ತಾರೆ.—ಮತ್ತಾಯ 22:39.
ಒಬ್ಬ ವ್ಯಕ್ತಿ ಕೇವಲ ಬೈಬಲ್ ಸತ್ಯಗಳೊಂದಿಗೆ ಪರಿಚಿತನಾಗಿಲ್ಲವೆಂಬ ಕಾರಣಕ್ಕಾಗಿ ಅವನು ಅಸಭ್ಯನು ಅಥವಾ ಅನೀತಿವಂತನೆಂದು ಭಾವಿಸುವುದು ತಪ್ಪಾಗಿರುವುದು. ಸಂದರ್ಭಗಳೂ ಭಿನ್ನವಾಗಿವೆ ಹಾಗೆಯೇ ಜನರೂ ಭಿನ್ನರಾಗುತ್ತಾರೆ. ಆದುದರಿಂದ, ಅವಿಶ್ವಾಸಿಗಳೊಂದಿಗಿನ ಸಂಪರ್ಕವನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಿಕೊಳ್ಳುವನೆಂಬುದನ್ನು ಪ್ರತಿಯೊಬ್ಬ ಕ್ರೈಸ್ತನು ನಿರ್ಧರಿಸಬೇಕು. ಆದರೂ ವಿರಕ್ತರು ಮಾಡಿದ ಹಾಗೆ ತಮ್ಮನ್ನು ಶಾರೀರಿಕವಾಗಿ ಪ್ರತ್ಯೇಕಿಸಿಕೊಳ್ಳುವುದು ಅಥವಾ ಫರಿಸಾಯರ ಹಾಗೆ ಸ್ವತಃ ಶ್ರೇಷ್ಠರೆಂದು ಭಾವಿಸಿಕೊಳ್ಳುವುದು ಕ್ರೈಸ್ತನೊಬ್ಬನಿಗೆ ಅನಾವಶ್ಯಕವೂ ಅಶಾಸ್ತ್ರೀಯವೂ ಆದ ವಿಷಯವಾಗಿರುವುದು.