ಅಧ್ಯಯನ ಲೇಖನ 14
“ಆತನ ತರ ನಡಿಬೇಕು”
“ಕ್ರಿಸ್ತನೂ ನಿಮಗೋಸ್ಕರ ಕಷ್ಟ ಅನುಭವಿಸಿದನು. ನೀವು ನಂಬಿಗಸ್ತರಾಗಿದ್ದು ಆತನ ತರ ನಡಿಬೇಕು ಅಂತಾನೇ ಆತನು ನಿಮಗೋಸ್ಕರ ಮಾದರಿ ಇಟ್ಟಿದ್ದಾನೆ.”—1 ಪೇತ್ರ 2:21.
ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು
ಕಿರುನೋಟa
1-2. ಒಂದನೇ ಪೇತ್ರ 2:21ರಲ್ಲಿರೋ ಮಾತನ್ನು ಅರ್ಥ ಮಾಡಿಕೊಳ್ಳೋಕೆ ಯಾವ ಉದಾಹರಣೆ ಸಹಾಯ ಮಾಡುತ್ತೆ?
ಅಪಾಯಕಾರಿ ಪ್ರದೇಶದಲ್ಲಿ ನೀವು ಮತ್ತು ಇನ್ನು ಕೆಲವರು ನಡಕೊಂಡು ಹೋಗ್ತಾ ಇದ್ದೀರಿ ಅಂತ ನೆನಸಿ. ಆ ಪ್ರದೇಶದಲ್ಲೆಲ್ಲ ಹಿಮ ತುಂಬಿಕೊಂಡಿದೆ. ನಿಮ್ಮ ಜೊತೆ ದಾರಿ ಚೆನ್ನಾಗಿ ಗೊತ್ತಿರೋ ಒಬ್ಬ ಗೈಡ್ ಕೂಡ ಇದ್ದಾನೆ. ಅವನು ಮುಂದೆಮುಂದೆ ಹೋಗ್ತಾ ಇದ್ದಾನೆ. ನೀವು ಅವನ ಹಿಂದೆಹಿಂದೆ ಹೋಗ್ತಾ ಇದ್ದೀರಿ. ಸ್ವಲ್ಪ ದೂರ ಹೋದ ಮೇಲೆ ಆ ಗೈಡ್ ಕಾಣಿಸೋದಿಲ್ಲ. ಆದರೆ ಆ ಗೈಡ್ನ ಹೆಜ್ಜೆ ಗುರುತು ಆ ಹಿಮದ ಮೇಲೆ ಇರುತ್ತೆ. ಹಾಗಾಗಿ ನಿಮಗೆ ಗಾಬರಿ ಆಗಲ್ಲ. ನೀವು ಮತ್ತು ನಿಮ್ಮ ಜೊತೆ ಇರುವವರು ಆ ಗೈಡ್ನ ಹೆಜ್ಜೆ ಗುರುತನ್ನು ನೋಡಿಕೊಂಡು ಅವನು ನಡೆದ ದಾರಿಯಲ್ಲೇ ಹೋಗೋಕೆ ಪ್ರಯತ್ನಿಸ್ತೀರಿ.
2 ಇವತ್ತು ನಿಜ ಕ್ರೈಸ್ತರಾದ ನಾವು ಸಹ ಅಪಾಯಕಾರಿ ಪ್ರದೇಶದಂತೆ ಇರೋ ಈ ಕೆಟ್ಟ ಲೋಕದಲ್ಲಿ ನಡಕೊಂಡು ಹೋಗ್ತಾ ಇದ್ದೀವಿ. ಸಂತೋಷದ ವಿಷಯ ಏನಂದ್ರೆ, ನಮಗೆ ದಾರಿ ತೋರಿಸೋಕೆ ಒಬ್ಬ ಒಳ್ಳೇ ಗೈಡನ್ನು ಯೆಹೋವ ಕೊಟ್ಟಿದ್ದಾನೆ. ಅವನೇ ಯೇಸು ಕ್ರಿಸ್ತ. ನಾವು ಯೇಸುವಿನ ಹೆಜ್ಜೆ ಗುರುತು ನೋಡಿಕೊಂಡು ನಡೆಯೋಕೆ ಪ್ರಯತ್ನಿಸಬೇಕು. ಅಂದರೆ ಅವನ ಮಾದರಿಯನ್ನು ಅನುಕರಿಸಬೇಕು. (1 ಪೇತ್ರ 2:21) ಬೈಬಲ್ ಬಗ್ಗೆ ವಿವರಿಸೋ ಒಂದು ಪುಸ್ತಕದ ಪ್ರಕಾರ ಈ ವಚನದಲ್ಲಿ ಪೇತ್ರ ಯೇಸುವನ್ನು ಒಬ್ಬ ಗೈಡ್ಗೆ ಹೋಲಿಸಿದ್ದಾನೆ. ಗೈಡ್ ಹೇಗೆ ತನ್ನ ಹೆಜ್ಜೆ ಗುರುತನ್ನು ಬಿಟ್ಟು ಹೋಗ್ತಾನೋ ಅದೇ ತರ ಯೇಸು ನಮಗೋಸ್ಕರ ತನ್ನ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾನೆ. ಅಂದರೆ ನಮಗೆ ಮಾದರಿ ತೋರಿಸಿಕೊಟ್ಟಿದ್ದಾನೆ. ಯೇಸು ನಮಗೆ ಯಾವ ಮಾದರಿ ತೋರಿಸಿದ್ದಾನೆ? ನಾವು ಆತನ ಮಾದರಿಯನ್ನು ಯಾಕೆ ಅನುಕರಿಸಬೇಕು? ನಾವು ಆತನ ಮಾದರಿಯನ್ನು ಹೇಗೆ ಅನುಕರಿಸಬಹುದು? ಈ ಮೂರು ಪ್ರಶ್ನೆಗಳಿಗೆ ನಾವೀಗ ಉತ್ತರ ನೋಡೋಣ.
ಯೇಸು ನಮಗೆ ಯಾವ ಮಾದರಿ ತೋರಿಸಿದ್ದಾನೆ?
3. ಒಬ್ಬ ವ್ಯಕ್ತಿಯ ‘ಹೆಜ್ಜೆ ಗುರುತಲ್ಲೇ ನಡೆಯೋದು’ ಅನ್ನೋದರ ಅರ್ಥ ಏನು?
3 ಒಬ್ಬ ವ್ಯಕ್ತಿಯ ‘ಹೆಜ್ಜೆ ಗುರುತಲ್ಲೇ ನಡೆಯೋದು’ ಅನ್ನೋದರ ಅರ್ಥ ಏನು? ಬೈಬಲಿನ ಕೆಲವು ವಚನಗಳಲ್ಲಿ ಒಬ್ಬ ವ್ಯಕ್ತಿಯ ಜೀವನ ರೀತಿ ಬಗ್ಗೆ ಹೇಳುವಾಗ ‘ನಡೆಯೋದು’ ಅಥವಾ “ಹೆಜ್ಜೆ” ಅನ್ನೋ ಪದಗಳನ್ನು ಬಳಸಲಾಗಿದೆ. (ಆದಿ. 6:9; ಜ್ಞಾನೋ. 4:26) ಒಬ್ಬ ವ್ಯಕ್ತಿಯ ಹೆಜ್ಜೆ ಗುರುತಲ್ಲೇ ನಡೆಯೋದು ಅಂದರೆ ಆ ವ್ಯಕ್ತಿ ಜೀವಿಸಿದ ರೀತಿಯಲ್ಲೇ ನಾವು ಜೀವಿಸೋದು ಅಥವಾ ಆ ವ್ಯಕ್ತಿ ತೋರಿಸಿದ ಮಾದರಿಯನ್ನು ನಾವು ಅನುಕರಿಸೋದು ಅಂತ ಅರ್ಥ.
4. ಯೇಸುವಿನ ಹೆಜ್ಜೆ ಗುರುತಲ್ಲೇ ನಡೆಯಬೇಕು ಅನ್ನೋದರ ಅರ್ಥ ಏನು?
4 ಯೇಸುವಿನ ‘ಹೆಜ್ಜೆ ಗುರುತಲ್ಲೇ ನಡೆಯಬೇಕು’ ಅನ್ನೋದರ ಅರ್ಥ ಏನು? ಸರಳವಾಗಿ ಹೇಳಿದ್ರೆ ಆತನ ಮಾದರಿಯನ್ನು ಅನುಕರಿಸಬೇಕು ಅಂತ ಅರ್ಥ. ಈ ಲೇಖನದ ಮುಖ್ಯ ವಚನದಲ್ಲಿ ಅಪೊಸ್ತಲ ಪೇತ್ರ ಕಷ್ಟಗಳನ್ನು ತಾಳಿಕೊಳ್ಳುವ ವಿಷಯದಲ್ಲಿ ಯೇಸು ನಮಗೆ ಒಳ್ಳೇ ಮಾದರಿ ತೋರಿಸಿದ್ದಾನೆ ಅಂತ ಹೇಳಿದ್ದಾನೆ. ಆದರೆ ಬೇರೆಷ್ಟೋ ವಿಷಯಗಳಲ್ಲಿ ಯೇಸು ನಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. (1 ಪೇತ್ರ 2:18-25) ನಿಜಕ್ಕೂ ಯೇಸುವಿನ ಇಡೀ ಜೀವನದಿಂದ ಅಂದರೆ ಆತನು ಹೇಳಿದ ಪ್ರತಿ ಮಾತಿಂದ, ಮಾಡಿದ ಪ್ರತಿ ವಿಷಯದಿಂದ ಒಂದಲ್ಲ ಒಂದು ಪಾಠ ಕಲಿಬಹುದು.
5. ಅಪರಿಪೂರ್ಣರಾದ ನಮಗೆ ಯೇಸುವಿನ ಮಾದರಿಯನ್ನು ಅನುಕರಿಸೋಕೆ ಆಗುತ್ತಾ? ವಿವರಿಸಿ.
5 ಅಪರಿಪೂರ್ಣರಾದ ನಮಗೆ ಯೇಸುವಿನ ಮಾದರಿಯನ್ನು ಅನುಕರಿಸೋಕೆ ಆಗುತ್ತಾ? ಹೌದು ಆಗುತ್ತೆ. ನಾವು ಅಪರಿಪೂರ್ಣರಾಗಿ ಇರೋದರಿಂದ ಆತನ ಹೆಜ್ಜೆ ಗುರುತಲ್ಲೇ ಪೂರ್ಣವಾಗಿ ನಡೆಯೋಕೆ ಆಗದೇ ಇರಬಹುದು. ಆದರೆ ನಮ್ಮಿಂದಾದಷ್ಟು ಪ್ರಯತ್ನಿಸಿದಾಗ ಅಪೊಸ್ತಲ ಯೋಹಾನ ಹೇಳಿದ ಹಾಗೆ ‘ಯೇಸು ತರಾನೇ ನಡಿಯೋಕೆ’ ನಮ್ಮಿಂದ ಆಗುತ್ತೆ.—1 ಯೋಹಾ. 2:6.
ನಾವು ಯೇಸುವಿನ ಮಾದರಿಯನ್ನು ಯಾಕೆ ಅನುಕರಿಸಬೇಕು?
6-7. ಯೇಸುವನ್ನು ಅನುಕರಿಸಿದರೆ ಯೆಹೋವನಿಗೆ ಆಪ್ತರಾಗ್ತೀವಿ ಅಂತ ಹೇಗೆ ಹೇಳಬಹುದು?
6 ನಾವು ಯೇಸುವಿನ ಮಾದರಿಯನ್ನು ಅನುಕರಿಸಿದರೆ ಯೆಹೋವನಿಗೆ ಆಪ್ತರಾಗ್ತೀವಿ. ಯಾಕೆ ಹಾಗೆ ಹೇಳಬಹುದು? ಇದಕ್ಕೆ ಒಂದು ಕಾರಣ ಏನಂದ್ರೆ ದೇವರನ್ನು ಸಂತೋಷಪಡಿಸೋಕೆ ನಾವು ಹೇಗೆ ಜೀವನ ಮಾಡಬೇಕು ಅಂತ ಯೇಸು ಚೆನ್ನಾಗಿ ತೋರಿಸಿಕೊಟ್ಟಿದ್ದಾನೆ. (ಯೋಹಾ. 8:29) ನಾವು ಯೇಸು ತರ ಜೀವಿಸಿದ್ರೆ ಯೆಹೋವನಿಗೆ ಖುಷಿ ಆಗುತ್ತೆ. ಯಾರೆಲ್ಲ ಯೆಹೋವನಿಗೆ ಆಪ್ತರಾಗೋಕೆ ಶ್ರಮಪಡ್ತಾರೋ ಅವರಿಗೆಲ್ಲ ದೇವರು ಆಪ್ತನಾಗ್ತಾನೆ.—ಯಾಕೋ. 4:8.
7 ಎರಡನೇ ಕಾರಣ, ಯೇಸು ಯೆಹೋವ ದೇವರನ್ನು ಪೂರ್ಣವಾಗಿ ಅನುಕರಿಸಿದನು. ಅದಕ್ಕೇ ಯೇಸು ಹೀಗೆ ಹೇಳಿದನು: “ನನ್ನನ್ನ ನೋಡಿದವನು ನನ್ನ ಅಪ್ಪನನ್ನೂ ನೋಡಿದ್ದಾನೆ.” (ಯೋಹಾ. 14:9) ಯೇಸು ಭೂಮಿಯಲ್ಲಿದ್ದಾಗ ಕುಷ್ಠ ರೋಗಿಯನ್ನು ನೋಡಿ ಅವನ ಮನಸ್ಸು ಕರಗಿತು, ದೊಡ್ಡ ಕಾಯಿಲೆಯಿಂದ ನರಳುತ್ತಿದ್ದ ಮಹಿಳೆಗೆ ಅನುಕಂಪ ತೋರಿಸಿದನು, ಆಪ್ತರನ್ನು ಕಳಕೊಂಡ ಮನೆಯವರಿಗೆ ಕಾಳಜಿ ತೋರಿಸಿದನು. (ಮಾರ್ಕ 1:40, 41; 5:25-34; ಯೋಹಾ. 11:33-35) ಯೇಸುವಿನ ಇಂಥ ಗುಣಗಳನ್ನು ನಾವು ಅನುಕರಿಸೋದಾದರೆ ಯೆಹೋವ ದೇವರನ್ನು ಅನುಕರಿಸಿದ ಹಾಗೆ ಆಗುತ್ತೆ. ನಾವು ಯೆಹೋವ ದೇವರನ್ನು ಹೆಚ್ಚು ಅನುಕರಿಸಿದರೆ ಆತನಿಗೆ ಹೆಚ್ಚು ಆಪ್ತರಾಗ್ತೀವಿ.
8. ನಾವು ಯೇಸುವನ್ನು ಅನುಕರಿಸಿದರೆ ಈ ಲೋಕವನ್ನು “ಗೆಲ್ಲೋಕೆ” ಆಗುತ್ತಾ? ವಿವರಿಸಿ.
8 ನಾವು ಯೇಸುವನ್ನು ಅನುಕರಿಸಿದರೆ ಲೋಕದ ವಿಷಯಗಳ ಕಡೆಗೆ ಗಮನ ಕೊಡಲ್ಲ, ಯೆಹೋವನ ಸೇವೆಗೆ ಪೂರ್ತಿ ಗಮನ ಕೊಡ್ತೀವಿ. ಈ ಲೋಕ ತನ್ನ ಮೇಲೆ ಪ್ರಭಾವ ಬೀರೋಕೆ ಯೇಸು ಬಿಡಲಿಲ್ಲ. ಆತನ ಯೋಚನೆ, ಗುರಿಗಳು, ನಡಕೊಳ್ತಿದ್ದ ರೀತಿ ಈ ಲೋಕದ ಜನರ ತರ ಇರಲಿಲ್ಲ. ಯೆಹೋವ ಯಾಕೆ ತನ್ನನ್ನು ಭೂಮಿಗೆ ಕಳಿಸಿದನು ಅನ್ನೋದನ್ನೂ ಯೇಸು ಮರೆತಿರಲಿಲ್ಲ. ಯೆಹೋವನ ಹೆಸರನ್ನು ಪವಿತ್ರೀಕರಿಸಬೇಕು, ಯೆಹೋವನ ಅಧಿಕಾರನೇ ಸರಿ ಅಂತ ಸಾಬೀತು ಮಾಡಬೇಕು ಅನ್ನೋದನ್ನು ಯೇಸು ಮರಿಲಿಲ್ಲ. ಅದಕ್ಕೇ ಯೇಸು, ತಾನು ಸಾಯೋ ಹಿಂದಿನ ರಾತ್ರಿ “ನಾನು ಈ ಲೋಕವನ್ನ ಗೆದ್ದಿದ್ದೀನಿ” ಅಂತ ಹೇಳೋಕೆ ಆಯ್ತು. (ಯೋಹಾ. 16:33) ಇವತ್ತು ನಮ್ಮ ಗಮನವನ್ನು ಕೂಡ ಬೇರೆ ಕಡೆಗೆ ಸೆಳೆಯುವಂಥ ವಿಷಯಗಳು ಈ ಲೋಕದಲ್ಲಿ ತುಂಬಾ ಇದೆ. ಆದರೆ ಯೆಹೋವನ ಸೇವೆಗೆ ಪೂರ್ತಿ ಗಮನ ಕೊಟ್ಟರೆ ನಾವು ಕೂಡ ಯೇಸು ತರ ಈ ಲೋಕವನ್ನು ‘ಗೆಲ್ಲಬಹುದು.’—1 ಯೋಹಾ. 5:5.
9. ನಾವು ಶಾಶ್ವತ ಜೀವ ಸಿಗೋ ದಾರಿಯಲ್ಲೇ ನಡೆಯುತ್ತಾ ಇರಬೇಕಂದರೆ ಏನು ಮಾಡಬೇಕು?
9 ಯೇಸು ನಡೆದ ದಾರಿಯಲ್ಲೇ ನಾವೂ ನಡೆದ್ರೆ ನಮಗೆ ಶಾಶ್ವತ ಜೀವ ಸಿಗುತ್ತೆ. ಒಂದು ಸಲ ಒಬ್ಬ ಶ್ರೀಮಂತ ಯುವಕ ಯೇಸು ಹತ್ರ ಬಂದು ಶಾಶ್ವತ ಜೀವ ಸಿಗಬೇಕಾದರೆ ಏನು ಮಾಡಬೇಕು ಅಂತ ಕೇಳಿದ. ಅದಕ್ಕೆ ಯೇಸು “ನನ್ನ ಶಿಷ್ಯನಾಗು” ಅಂತ ಹೇಳಿದನು. (ಮತ್ತಾ. 19:16-21) ತನ್ನನ್ನು ಕ್ರಿಸ್ತ ಅಂತ ನಂಬದಿದ್ದ ಕೆಲವು ಯೆಹೂದಿಗಳಿಗೆ ಯೇಸು ಹೀಗಂದನು: “ನನ್ನ ಕುರಿಗಳು . . . ನನ್ನ ಹಿಂದೆ ಬರ್ತವೆ. ಅವುಗಳಿಗೆ ಶಾಶ್ವತ ಜೀವ ಕೊಡ್ತೀನಿ.” (ಯೋಹಾ. 10:24-29) ಹಿರೀಸಭೆಯ ಸದಸ್ಯನಾಗಿದ್ದ ನಿಕೊದೇಮ ಯೇಸುವಿನಿಂದ ಹೆಚ್ಚು ಕಲಿಯೋಕೆ ಅವನ ಹತ್ರ ಬಂದಾಗ ಯೇಸು ಅವನಿಗೆ ‘ನನ್ನ ಮೇಲೆ ನಂಬಿಕೆ ಇಡುವವನಿಗೆ ಶಾಶ್ವತ ಜೀವ ಸಿಗುತ್ತೆ’ ಅಂದನು. (ಯೋಹಾ. 3:16) ಶಾಶ್ವತ ಜೀವಕ್ಕೆ ನಡೆಸೋ ದಾರಿಯಲ್ಲಿ ನಾವು ನಡೆಯುತ್ತಾ ಇರಬೇಕಂದರೆ ಯೇಸು ಮೇಲೆ ನಂಬಿಕೆ ಇಡಬೇಕು. ಅಂದರೆ ಯೇಸು ಕಲಿಸಿದ ವಿಷಯಗಳನ್ನು ಒಪ್ಪಿಕೊಂಡು ಆತನ ಮಾದರಿಯನ್ನು ಅನುಕರಿಸುತ್ತಾ ಇರಬೇಕು.—ಮತ್ತಾ. 7:14.
ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಹುದು?
10. ನಾವು ಯೇಸು ಬಗ್ಗೆ ಚೆನ್ನಾಗಿ ‘ತಿಳುಕೊಳ್ಳಬೇಕಂದರೆ’ ಏನು ಮಾಡಬೇಕು? (ಯೋಹಾನ 17:3)
10 ನಾವು ಯೇಸುವನ್ನು ಅನುಕರಿಸಬೇಕಂದರೆ ಆತನ ಬಗ್ಗೆ ಚೆನ್ನಾಗಿ ತಿಳುಕೊಳ್ಳಬೇಕು. (ಯೋಹಾನ 17:3 ಓದಿ.) ಒಂದೇ ಸಲಕ್ಕೆ ಯೇಸು ಬಗ್ಗೆ ಎಲ್ಲಾ ತಿಳುಕೊಳ್ಳೋಕೆ ಆಗುತ್ತಾ? ಇಲ್ಲ, ಅದಕ್ಕೆ ಸಮಯ ಹಿಡಿಯುತ್ತೆ, ನಮ್ಮ ಪ್ರಯತ್ನನೂ ಬೇಕು. ಯೇಸುವಿನ ಗುಣಗಳ ಬಗ್ಗೆ, ಯೋಚನೆಗಳ ಬಗ್ಗೆ, ಆತನು ನಡಕೊಳ್ಳುತ್ತಿದ್ದ ರೀತಿ ಬಗ್ಗೆ ನಾವು ಕಲಿತಾ ಹೋದರೆ ಆತನನ್ನು ಇನ್ನೂ ಚೆನ್ನಾಗಿ ತಿಳುಕೊಳ್ಳೋಕೆ ಆಗುತ್ತೆ. ನಾವು ಎಷ್ಟೇ ವರ್ಷಗಳಿಂದ ಸತ್ಯದಲ್ಲಿದ್ರೂ ಯೆಹೋವನ ಬಗ್ಗೆ, ಯೇಸು ಬಗ್ಗೆ ಹೆಚ್ಚೆಚ್ಚು ಕಲಿತಾ ಇರಬೇಕು.
11. ನಾಲ್ಕು ಸುವಾರ್ತಾ ಪುಸ್ತಕದಲ್ಲಿ ಏನಿದೆ?
11 ಯೇಸು ಕ್ರಿಸ್ತನ ಬಗ್ಗೆ ಚೆನ್ನಾಗಿ ತಿಳುಕೊಳ್ಳೋಕೆ ಯೆಹೋವ ದೇವರು ಬೈಬಲಲ್ಲಿ ನಾಲ್ಕು ಸುವಾರ್ತಾ ಪುಸ್ತಕಗಳನ್ನು ಬರೆಸಿದ್ದಾನೆ. ಈ ಪುಸ್ತಕಗಳಲ್ಲಿ ಯೇಸುವಿನ ಜೀವನ ಮತ್ತು ಸೇವೆ ಬಗ್ಗೆ ಇದೆ. ಅಷ್ಟೇ ಅಲ್ಲ, ಯೇಸು ಹೇಳಿದ ಮಾತುಗಳು, ಆತನು ಮಾಡಿದ ಕೆಲಸಗಳು, ಆತನಿಗಾದ ಭಾವನೆಗಳ ಬಗ್ಗೆನೂ ಇದೆ. ಯೇಸುಗೆ ‘ಪೂರ್ತಿ ಗಮನ ಕೊಡೋಕೆ’ ನಮಗೆ ಈ ನಾಲ್ಕು ಪುಸ್ತಕಗಳು ಸಹಾಯ ಮಾಡುತ್ತೆ. (ಇಬ್ರಿ. 12:3) ಈ ಪುಸ್ತಕಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡರೆ ಯೇಸು ಬಗ್ಗೆ ಚೆನ್ನಾಗಿ ತಿಳುಕೊಳ್ಳೋಕೆ ಆಗುತ್ತೆ. ಇದರಿಂದ ಆತನನ್ನು ಅನುಕರಿಸೋಕೆ ಸುಲಭ ಆಗುತ್ತೆ.
12. ಸುವಾರ್ತಾ ಪುಸ್ತಕಗಳಿಂದ ಪ್ರಯೋಜನ ಪಡಕೊಳ್ಳಬೇಕಾದರೆ ನಾವೇನು ಮಾಡಬೇಕು?
12 ಈ ನಾಲ್ಕು ಪುಸ್ತಕಗಳನ್ನು ಬರೀ ಓದಿದರೆ ಸಾಕಾಗಲ್ಲ, ಅಧ್ಯಯನ ಮಾಡಿ ಚೆನ್ನಾಗಿ ಧ್ಯಾನಿಸಬೇಕು. ಅದಕ್ಕಾಗಿ ಸಮಯ ಮಾಡಿಕೊಳ್ಳಬೇಕು. (ಯೆಹೋಶುವ 1:8 ಹೋಲಿಸಿ.) ಈ ಸುವಾರ್ತಾ ಪುಸ್ತಕಗಳನ್ನು ಓದಿದ ಮೇಲೆ ಅದನ್ನು ಧ್ಯಾನಿಸಿ ಅನ್ವಯಿಸಿಕೊಳ್ಳೋದು ಹೇಗೆ ಅನ್ನೋದರ ಬಗ್ಗೆ ನಾವೀಗ ಎರಡು ಸಲಹೆಗಳನ್ನು ನೋಡೋಣ.
13. ಸುವಾರ್ತಾ ಪುಸ್ತಕಗಳಿಗೆ ಜೀವ ತುಂಬೋಕೆ ನೀವೇನು ಮಾಡಬೇಕು?
13 (1) ಸುವಾರ್ತಾ ಪುಸ್ತಕಗಳಿಗೆ ಜೀವತುಂಬಿ. ಆ ಪುಸ್ತಕಗಳಲ್ಲಿ ಇರೋ ಒಂದು ಘಟನೆ ಬಗ್ಗೆ ನೀವು ಓದುತ್ತಾ ಇರುವಾಗ ಆ ಜಾಗದಲ್ಲಿ ನೀವಿದ್ದೀರಿ, ಆ ಘಟನೆಗಳನ್ನು ಕಣ್ಣಾರೆ ನೋಡ್ತಾ ಇದ್ದೀರಿ, ಕೇಳಿಸಿಕೊಳ್ಳುತ್ತಾ ಇದ್ದೀರಿ, ಅನುಭವಿಸುತ್ತಾ ಇದ್ದೀರಿ ಅಂತ ಚಿತ್ರಿಸಿಕೊಳ್ಳಿ. ಆ ಘಟನೆ ಬಗ್ಗೆ ಇರೋ ವಚನಗಳ ಹಿಂದೆ ಮತ್ತು ಮುಂದೆ ಇರೋ ವಚನಗಳನ್ನು ಕೂಡ ಓದಿ. ಅಲ್ಲಿ ತಿಳಿಸಿರೋ ಜಾಗಗಳ ಬಗ್ಗೆ, ಜನರ ಬಗ್ಗೆ ಧ್ಯಾನಿಸಿ. ಅಷ್ಟೇ ಅಲ್ಲ, ನಮ್ಮ ಸಂಘಟನೆ ಕೊಟ್ಟಿರೋ ಪುಸ್ತಕ-ಪತ್ರಿಕೆಗಳಲ್ಲಿ ಅದರ ಬಗ್ಗೆ ಸಂಶೋಧನೆ ಮಾಡಿ. ಅದೇ ಘಟನೆ ಬಗ್ಗೆ ಬೇರೆ ಸುವಾರ್ತಾ ಪುಸ್ತಕದಲ್ಲಿ ಇದ್ದರೆ ಅದನ್ನೂ ಓದಿ. ಯಾಕಂದರೆ ಕೆಲವೊಮ್ಮೆ ಅದರಲ್ಲಿ ಹೆಚ್ಚಿನ ಮಾಹಿತಿ ಸಿಗುತ್ತೆ.
14-15. ಸುವಾರ್ತಾ ಪುಸ್ತಕಗಳಿಂದ ಕಲಿತ ವಿಷಯಗಳನ್ನು ನಾವು ಅನ್ವಯಿಸಿಕೊಳ್ಳಬೇಕಂದ್ರೆ ಏನು ಮಾಡಬೇಕು?
14 (2) ಸುವಾರ್ತಾ ಪುಸ್ತಕದಲ್ಲಿ ಕಲಿತ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿ. (ಯೋಹಾ. 13:17) ಸುವಾರ್ತಾ ಪುಸ್ತಕದಲ್ಲಿ ಇರೋ ಒಂದು ಘಟನೆ ಬಗ್ಗೆ ಚೆನ್ನಾಗಿ ಓದಿ ಅಧ್ಯಯನ ಮಾಡಿದ ಮೇಲೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ಈ ಘಟನೆಯಿಂದ ನಾನು ಯಾವ ಪಾಠ ಕಲಿಬಹುದು? ಬೇರೆಯವರಿಗೆ ಸಹಾಯ ಮಾಡೋಕೆ ಈ ಘಟನೆಯನ್ನು ಹೇಗೆ ಉಪಯೋಗಿಸಬಹುದು? ಯಾರಿಗೆ ಇದರಿಂದ ಪ್ರಯೋಜನ ಆಗಬಹುದು ಅಂತ ಚೆನ್ನಾಗಿ ಯೋಚನೆ ಮಾಡಿ. ಆಮೇಲೆ ಸರಿಯಾದ ಸಮಯ ನೋಡಿಕೊಂಡು ಪ್ರೀತಿಯಿಂದ ನೋವಾಗದ ಹಾಗೆ ನೀವು ಕಲಿತ ಪಾಠಗಳನ್ನು ಅವರ ಹತ್ರ ಹಂಚಿಕೊಳ್ಳಿ.
15 ಈ ಎರಡೂ ಸಲಹೆಗಳನ್ನು ಅನ್ವಯಿಸೋದು ಹೇಗೆ ಅಂತ ತಿಳುಕೊಳ್ಳೋಕೆ ಈಗ ಒಂದು ಉದಾಹರಣೆ ನೋಡೋಣ. ಅದು, ಯೇಸು ದೇವಾಲಯದಲ್ಲಿ ನೋಡಿದ ಬಡ ವಿಧವೆಯ ಉದಾಹರಣೆ.
ಬಡ ವಿಧವೆಯ ಕತೆ
16. ಮಾರ್ಕ 12:41ರಲ್ಲಿರೋ ದೃಶ್ಯವನ್ನು ವಿವರಿಸಿ.
16 ಈ ಕತೆಗೆ ಜೀವತುಂಬಿ. (ಮಾರ್ಕ 12:41 ಓದಿ.) ಅಲ್ಲಿ ಏನೆಲ್ಲಾ ಘಟನೆಗಳು ನಡೆದಿರಬಹುದು ಅಂತ ಕಣ್ಮುಂದೆ ತನ್ನಿ. ಆ ದಿನ ಕ್ರಿಸ್ತ ಶಕ 33ರ ನೈಸಾನ್ 11ನೇ ತಾರೀಕು. ಯೇಸು ತೀರಿಹೋಗೋಕೆ ಒಂದು ವಾರನೂ ಉಳಿದಿರಲಿಲ್ಲ. ಆತನು ಆ ಇಡೀ ದಿನ ಜನರಿಗೆ ಕಲಿಸ್ತಾ ದೇವಾಲಯದಲ್ಲೇ ಇದ್ದನು. ಧರ್ಮಗುರುಗಳು ಆತನ ಹತ್ರ ಆಗಾಗ ಬಂದು ತೊಂದರೆ ಕೊಡುತ್ತಿದ್ದರು. ಕೆಲವರು ‘ಯಾವ ಅಧಿಕಾರದ ಮೇಲೆ ಅವನು ಇದನ್ನೆಲ್ಲ ಮಾಡ್ತಿದ್ದಾನೆ’ ಅಂತ ಪ್ರಶ್ನಿಸಿದರು. ಇನ್ನು ಕೆಲವರು ಆತನನ್ನು ಮಾತಿನಲ್ಲಿ ಸಿಕ್ಕಿಸಿಹಾಕೋಕೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ಇದ್ದರು. (ಮಾರ್ಕ 11:27-33; 12:13-34) ಆಮೇಲೆ ಯೇಸು ಕಾಣಿಕೆ ಪೆಟ್ಟಿಗೆಗಳನ್ನು ಇಟ್ಟಿದ್ದ ಹೆಂಗಸರ ಅಂಗಳಕ್ಕೆ ಬಂದ. ಅಲ್ಲಿ ಕೂತು ಕಾಣಿಕೆ ಹಾಕುತ್ತಿದ್ದವರನ್ನು ಗಮನಿಸೋಕೆ ಶುರುಮಾಡಿದ. ಅನೇಕ ಶ್ರೀಮಂತರು ತುಂಬ ಹಣವನ್ನು ಪೆಟ್ಟಿಗೆಗೆ ಸುರಿಯುತ್ತಾ ಇದ್ದಿದ್ದನ್ನು ಯೇಸು ನೋಡಿದನು. ಆತನು ಬಹುಶಃ ತುಂಬ ಹತ್ತಿರದಲ್ಲೇ ಕೂತಿದ್ದಿರಬೇಕು. ಅದಕ್ಕೆ ನಾಣ್ಯಗಳ ಝಣಝಣ ಸದ್ದು ಆತನಿಗೆ ಚೆನ್ನಾಗಿ ಕೇಳಿಸ್ತಾ ಇತ್ತು.
17. ಮಾರ್ಕ 12:42ರಲ್ಲಿ ತಿಳಿಸಿರೋ ಬಡ ವಿಧವೆ ಏನು ಮಾಡಿದಳು?
17 ಮಾರ್ಕ 12:42 ಓದಿ. ಸ್ವಲ್ಪ ಸಮಯ ಆದಮೇಲೆ ಯೇಸು ಒಬ್ಬ ಸ್ತ್ರೀಯನ್ನು ಗಮನಿಸುತ್ತಾನೆ. ಆಕೆ “ಬಡ ವಿಧವೆ.” (ಲೂಕ 21:2) ಆಕೆ ತುಂಬ ಕಷ್ಟದ ಜೀವನ ನಡೆಸುತ್ತಿದ್ದಳು. ಮುಖ್ಯವಾಗಿ ಬೇಕಾಗಿದ್ದ ವಸ್ತುಗಳನ್ನು ತಗೊಳ್ಳೋಕೂ ಆಕೆ ಹತ್ರ ಹಣ ಇರಲಿಲ್ಲ ಅನಿಸುತ್ತೆ. ಆದರೂ ಕಾಣಿಕೆ ಪೆಟ್ಟಿಗೆ ಹತ್ರ ಬಂದು ಯಾರಿಗೂ ಕಾಣದೇ ಇರೋ ತರ ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು. ಆ ನಾಣ್ಯಗಳ ಸದ್ದು ಯಾರಿಗೂ ಕೇಳಿಸಿರೋದೂ ಇಲ್ಲ. ಆದರೆ ಯೇಸುಗೆ ಅವಳು ಯಾವ ನಾಣ್ಯ ಹಾಕಿದಳು ಅಂತ ಗೊತ್ತಾಯಿತು. ಅವಳು ಹಾಕಿದ್ದು ಎರಡು ಲೆಪ್ಟ ನಾಣ್ಯಗಳು. ಆ ಕಾಲದಲ್ಲಿ ತುಂಬ ಕಡಿಮೆ ಬೆಲೆಯ ನಾಣ್ಯಗಳಂದ್ರೆ ಈ ಲೆಪ್ಟ ನಾಣ್ಯಗಳು. ಆ ಹಣದಲ್ಲಿ ಊಟಕ್ಕಾಗಿ ಚಿಕ್ಕ ಗುಬ್ಬಿಗಳನ್ನೂ ತಗೊಳ್ಳೋಕೆ ಆಗ್ತಿರಲಿಲ್ಲ.
18. ಮಾರ್ಕ 12:43, 44ರ ಪ್ರಕಾರ ವಿಧವೆಯ ಕಾಣಿಕೆ ಬಗ್ಗೆ ಯೇಸು ಏನು ಹೇಳಿದನು?
18 ಮಾರ್ಕ 12:43, 44 ಓದಿ. ಆ ಬಡ ವಿಧವೆ ಹಾಕಿದ ಕಾಣಿಕೆ ನೋಡಿ ಯೇಸುಗೆ ತುಂಬ ಖುಷಿ ಆಯ್ತು. ಕೂಡಲೇ ತನ್ನ ಶಿಷ್ಯರನ್ನು ಕರೆದು ಆ ವಿಧವೆಯನ್ನು ತೋರಿಸುತ್ತಾ ಹೀಗೆ ಹೇಳಿದನು: “ಅವ್ರೆಲ್ಲರಿಗಿಂತ ಈ ಬಡ ವಿಧವೆ ಹೆಚ್ಚು ಕಾಣಿಕೆ ಹಾಕಿದ್ದಾಳೆ. ಯಾಕಂದ್ರೆ ಅವ್ರೆಲ್ಲ [ಮುಖ್ಯವಾಗಿ ಶ್ರೀಮಂತರು] ತಮ್ಮ ಹತ್ರ ಇದ್ದ ಜಾಸ್ತಿ ಹಣದಿಂದ ಕಾಣಿಕೆ ಹಾಕಿದ್ರು. ಆದ್ರೆ ಈ ವಿಧವೆ ಜೀವನ ನಡಿಸೋಕೆ ಬೇಕಾಗಿದ್ದ ಎಲ್ಲಾ ಹಣ ಹಾಕಿಬಿಟ್ಟಳು. ತನ್ನ ಹತ್ರ ಇದ್ದದನ್ನೆಲ್ಲ ಹಾಕಿಬಿಟ್ಟಳು.” ತನ್ನ ಕೈಯಲ್ಲಿದ್ದ ಹಣವನ್ನೆಲ್ಲ ಕಾಣಿಕೆ ಹಾಕಿ ಯೆಹೋವ ತನ್ನನ್ನು ನೋಡಿಕೊಳ್ಳುತ್ತಾನೆ ಅನ್ನೋ ಭರವಸೆ ಇದೆ ಅಂತ ಆಕೆ ತೋರಿಸಿಕೊಟ್ಟಳು.—ಕೀರ್ತ. 26:3.
19. ಬಡ ವಿಧವೆಯಿಂದ ನಾವು ಯಾವ ಮುಖ್ಯ ಪಾಠ ಕಲಿಬಹುದು?
19 ಕಲಿತದ್ದನ್ನು ಜೀವನದಲ್ಲಿ ಅನ್ವಯಿಸಿ. ಈ ಪ್ರಶ್ನೆ ಕೇಳಿಕೊಳ್ಳಿ: ‘ಬಡ ವಿಧವೆ ಬಗ್ಗೆ ಯೇಸು ಹೇಳಿದ ಮಾತುಗಳಿಂದ ನಾನು ಯಾವ ಪಾಠ ಕಲಿಬಹುದು?’ ಆ ವಿಧವೆ ಬಗ್ಗೆ ಯೋಚಿಸಿ. ಯೆಹೋವ ದೇವರಿಗೆ ಹೆಚ್ಚು ಕಾಣಿಕೆ ಕೊಡಬೇಕು ಅಂತ ಅವಳು ಖಂಡಿತ ಇಷ್ಟ ಪಟ್ಟಿರಬೇಕು. ಆದರೂ ತನ್ನ ಕೈಯಲ್ಲಿದ್ದ ಎಲ್ಲವನ್ನೂ ಯೆಹೋವ ದೇವರಿಗೆ ಕೊಟ್ಟಳು. ತಾನು ಹಾಕಿದ ಕಾಣಿಕೆಯನ್ನು ತನ್ನ ತಂದೆ ತುಂಬ ಅಮೂಲ್ಯವಾಗಿ ನೋಡುತ್ತಾನೆ ಅಂತ ಯೇಸುಗೆ ಗೊತ್ತಿತ್ತು. ಇದರಿಂದ ನಾವು ಒಂದು ಮುಖ್ಯವಾದ ಪಾಠ ಕಲಿತೀವಿ. ಅದೇನಂದರೆ, ನಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಅಂದರೆ ಪೂರ್ಣ ಹೃದಯದಿಂದ ಮತ್ತು ಪೂರ್ಣ ಪ್ರಾಣದಿಂದ ಯೆಹೋವನ ಸೇವೆ ಮಾಡಿದರೆ ಆತನಿಗೆ ತುಂಬ ಸಂತೋಷ ಆಗುತ್ತೆ. (ಮತ್ತಾ. 22:37; ಕೊಲೊ. 3:23) ಸೇವೆಗಾಗಿ ಕೂಟಗಳಿಗಾಗಿ ಸಮಯ, ಶಕ್ತಿ ಕೊಡೋಕೆ ನಮ್ಮ ಕೈಯಲ್ಲಿ ಆದಷ್ಟು ಪ್ರಯತ್ನಿಸಿದರೆ ಯೆಹೋವನಿಗೆ ಖುಷಿ ಆಗುತ್ತೆ.
20. ವಿಧವೆಯ ಕತೆಯಿಂದ ಕಲಿತ ಪಾಠವನ್ನು ನೀವು ಹೇಗೆ ಅನ್ವಯಿಸಿಕೊಳ್ಳಬಹುದು? ಒಂದು ಉದಾಹರಣೆ ಕೊಡಿ.
20 ಬಡ ವಿಧವೆಯಿಂದ ಕಲಿತ ಪಾಠವನ್ನು ನೀವು ಹೇಗೆ ಅನ್ವಯಿಸಬಹುದು? ‘ನಾನು ಮಾಡೋ ಸೇವೆ ನೋಡಿ ಯೆಹೋವನಿಗೆ ನಿಜವಾಗಲೂ ಖುಷಿ ಆಗುತ್ತಾ’ ಅಂತ ಸಂಶಯ ಪಡುವವರು ಯಾರಾದ್ರೂ ನಿಮಗೆ ಗೊತ್ತಿದ್ದಾರಾ? ಅಂಥವರಿಗೆ ನಿಮ್ಮ ಸಹಾಯ ಬೇಕು. ಉದಾಹರಣೆಗೆ, ವಯಸ್ಸಾದ ಒಬ್ಬ ಸಹೋದರಿ ಬಗ್ಗೆ ನಿಮಗೆ ಗೊತ್ತಿರಬಹುದು. ಅವರಿಗೆ ಆರೋಗ್ಯ ಸಮಸ್ಯೆ ಇರೋದರಿಂದ ಅಥವಾ ಹೆಚ್ಚು ಶಕ್ತಿ ಇಲ್ಲದೆ ಇರೋದರಿಂದ ಮುಂಚಿನಷ್ಟು ಸೇವೆ ಮಾಡೋಕೆ ಆಗದೇ ಇರಬಹುದು. ಇದರಿಂದಾಗಿ ಅವರು ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಕೊರಗುತ್ತಾ ಇರಬಹುದು. ಅಥವಾ ತುಂಬ ಸಮಯದಿಂದ ಕಾಯಿಲೆ ಬಿದ್ದಿರೋ ಒಬ್ಬ ಸಹೋದರನ ಬಗ್ಗೆ ನಿಮಗೆ ಗೊತ್ತಿರಬಹುದು. ಅವರಿಗೆ ಮಧ್ಯಮಧ್ಯ ಕೂಟಗಳಿಗೆ ಹೋಗೋಕೆ ಆಗದೇ ಇರಬಹುದು. ಅದಕ್ಕೆ ಅವರು ಬೇಜಾರಲ್ಲಿ ಇರಬಹುದು. ಅಂಥವರಿಗೆ ಸಹಾಯ ಮಾಡೋಕೆ “ಬಲಪಡಿಸೋ ಒಳ್ಳೇ ಮಾತುಗಳನ್ನ” ಹೇಳಿ. (ಎಫೆ. 4:29) ಬಡ ವಿಧವೆಯ ಕತೆಯಿಂದ ಕಲಿತ ಪಾಠವನ್ನು ನೀವು ಅವರ ಹತ್ರ ಹಂಚಿಕೊಳ್ಳಿ. ‘ನಮ್ಮ ಕೈಯಲ್ಲಿ ಆಗುವಷ್ಟು ಸೇವೆಯನ್ನು ಮಾಡುವಾಗ ಯೆಹೋವನಿಗೆ ಖುಷಿ ಆಗುತ್ತೆ’ ಅಂತ ಹೇಳಿ ಅವರನ್ನು ಪ್ರೋತ್ಸಾಹಿಸಿ. (ಜ್ಞಾನೋ. 15:23; 1 ಥೆಸ. 5:11) ಅಂಥವರು ತಮ್ಮ ಕೈಯಲ್ಲಿ ಆಗುವಷ್ಟು ಯೆಹೋವನ ಸೇವೆಯನ್ನು ಅದು ಎಷ್ಟೇ ಚಿಕ್ಕದಿರಲಿ ಮಾಡೋದನ್ನು ನೋಡಿ ನೀವು ಹೊಗಳಿದರೆ ಯೇಸುವನ್ನು ಅನುಕರಿಸಿದಂತೆ ಆಗುತ್ತೆ.
21. ನೀವೇನು ಮಾಡಬೇಕು ಅಂತ ಇದ್ದೀರಿ?
21 ಸುವಾರ್ತಾ ಪುಸ್ತಕಗಳು ಸಿಕ್ಕಿರೋದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ. ಅದರಲ್ಲಿ ಯೇಸುವಿನ ಜೀವನದ ಬಗ್ಗೆ ತುಂಬ ವಿಷಯ ಇದೆ. ಅದು, ನಾವು ಯೇಸುವನ್ನು ಅನುಕರಿಸೋಕೆ, ಆತನ ಹೆಜ್ಜೆ ಗುರುತಲ್ಲೇ ಆದಷ್ಟು ನಡೆಯೋಕೆ ಸಹಾಯ ಮಾಡುತ್ತೆ. ವೈಯಕ್ತಿಕ ಅಧ್ಯಯನದಲ್ಲಿ ಅಥವಾ ಕುಟುಂಬ ಆರಾಧನೆಯಲ್ಲಿ ಈ ಸುವಾರ್ತಾ ಪುಸ್ತಕಗಳ ಬಗ್ಗೆ ಹೆಚ್ಚು ಕಲಿಬಹುದು. ಹಾಗೆ ಕಲಿಯುವಾಗ ಅದರಿಂದ ಪೂರ್ಣ ಪ್ರಯೋಜನ ಪಡಕೊಳ್ಳೋಕೆ ಅದರಲ್ಲಿ ಇರೋ ಘಟನೆಗಳಿಗೆ ಜೀವ ತುಂಬಬೇಕು. ಕಲಿತದ್ದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಈ ಲೇಖನದಲ್ಲಿ, ನಾವು ಯೇಸುವನ್ನು ಹೇಗೆ ಅನುಕರಿಸಬಹುದು ಅಂತ ಕಲಿತ್ವಿ. ಮುಂದಿನ ಲೇಖನದಲ್ಲಿ, ಯೇಸು ತನ್ನ ಜೀವನದ ಕೊನೇ ಕ್ಷಣಗಳಲ್ಲಿ ಹೇಳಿದ ಮಾತುಗಳಿಂದ ಏನು ಕಲಿಬಹುದು ಅಂತ ನೋಡೋಣ.
ಗೀತೆ 109 ಯೆಹೋವನ ಜ್ಯೇಷ್ಠ ಪುತ್ರನಿಗೆ ಜೈ!
a ನಿಜ ಕ್ರೈಸ್ತರಾದ ನಾವು ಯೇಸುವಿನ ಮಾದರಿಯನ್ನು ಅನುಕರಿಸಬೇಕು. ಯೇಸು ನಮಗೆ ಯಾವ ಮಾದರಿ ಇಟ್ಟಿದ್ದಾನೆ? ಈ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಇದೆ. ಜೊತೆಗೆ, ನಾವು ಯಾಕೆ ಯೇಸುವಿನ ಮಾದರಿಯನ್ನು ಅನುಕರಿಸಬೇಕು ಮತ್ತು ಹೇಗೆ ಅನುಕರಿಸಬಹುದು ಅಂತನೂ ಈ ಲೇಖನದಲ್ಲಿ ಕಲಿತೇವೆ.
b ಚಿತ್ರ ವಿವರಣೆ: ಬಡ ವಿಧವೆ ಬಗ್ಗೆ ಯೇಸು ಹೇಳಿದ ಮಾತುಗಳನ್ನು ಒಬ್ಬ ಸಹೋದರಿ ಧ್ಯಾನಿಸುತ್ತಾ ಇದ್ದಾಳೆ. ಆಮೇಲೆ ಒಬ್ಬ ವಯಸ್ಸಾದ ಸಹೋದರಿ ಮಾಡುತ್ತಿರೋ ಪೂರ್ಣಪ್ರಾಣದ ಸೇವೆಯನ್ನು ನೋಡಿ ಹೊಗಳುತ್ತಾ ಇದ್ದಾಳೆ.