ಬೈಬಲ್ ವಚನಗಳ ವಿವರಣೆ
ಯೋಹಾನ 3:16—‘ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟನು’
“ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.”—ಯೋಹಾನ 3:16, ಹೊಸ ಲೋಕ ಭಾಷಾಂತರ.
“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16, ಸತ್ಯವೇದವು.
ಯೋಹಾನ 3:16—ಅರ್ಥ
ದೇವರು ನಮ್ಮನ್ನು ಪ್ರೀತಿಸುತ್ತಾನೆ. ನಾವು ಶಾಶ್ವತವಾಗಿ ಬದುಕಬೇಕು ಅಂತ ಇಷ್ಟಪಡುತ್ತಾನೆ. ಅದಕ್ಕೇ ಆತನು ತನ್ನ ಮಗನಾದ ಯೇಸು ಕ್ರಿಸ್ತನನ್ನು ಈ ಭೂಮಿಗೆ ಕಳುಹಿಸಿದನು. ಯೇಸು ಭೂಮಿಯಲ್ಲಿ ಇದ್ದಾಗ ತುಂಬ ಮುಖ್ಯವಾದ ಕೆಲಸಗಳನ್ನ ಮಾಡಿದನು. ಅದರಲ್ಲಿ ಒಂದು ಯಾವುದೆಂದ್ರೆ, ಯೇಸು ತನಗೆ ದೇವರಾಗಿದ್ದ, ತಂದೆಯಾಗಿದ್ದ ಯೆಹೋವನ ಬಗ್ಗೆ ತನ್ನ ಶಿಷ್ಯರಿಗೆ ಕಲಿಸಿದನು. (1 ಪೇತ್ರ 1:3) ಇನ್ನೊಂದು ಯಾವುದೆಂದ್ರೆ, ಎಲ್ಲ ಮಾನವರಿಗೋಸ್ಕರ ತನ್ನ ಜೀವವನ್ನೇ ಕೊಟ್ಟನು. ನಾವು ಶಾಶ್ವತ ಜೀವ ಪಡೆಯಬೇಕಾದರೆ ಯೇಸು ಮೇಲೆ ನಂಬಿಕೆ ಇಡಬೇಕು.
ದೇವರು “ತನ್ನ ಒಬ್ಬನೇ ಮಗನನ್ನa ನಮಗೋಸ್ಕರ ಕೊಟ್ಟನು” ಅನ್ನೋ ಮಾತಲ್ಲಿ ಆತನಿಗೆ ನಮ್ಮ ಮೇಲೆ ಎಷ್ಟೊಂದು ಪ್ರೀತಿ ಇದೆ ಅಂತ ಗೊತ್ತಾಗುತ್ತೆ. ವಚನದಲ್ಲಿ, ಯೇಸು ದೇವರ ಮಗ ಅಂತ ಯಾಕಿದೆ? ಯಾಕಂದ್ರೆ ದೇವರು ಒಬ್ಬನೇ ಯೇಸುವನ್ನು ಸೃಷ್ಟಿಮಾಡಿದನು. ಈ ರೀತಿ ಸೃಷ್ಟಿ ಆಗಿದ್ದು ಯೇಸು ಮಾತ್ರ. ಹಾಗಾಗಿ ಆತನು ದೇವರ ವಿಶೇಷ ಮಗ. (ಕೊಲೊಸ್ಸೆ 1:17) ಆತನು “ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದವನು.” (ಕೊಲೊಸ್ಸೆ 1:15) ದೇವದೂತರು ಮತ್ತು ಬೇರೆ ಎಲ್ಲ ಸೃಷ್ಟಿ ಯೇಸುವಿನ ಮೂಲಕನೇ ಸೃಷ್ಟಿ ಆಯ್ತು. ಹಾಗಿದ್ರೂ ಯೆಹೋವb ದೇವರು ತನ್ನ ಮುದ್ದು ಮಗನನ್ನು ‘ಸೇವೆ ಮಾಡೋಕೆ, ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ’ ಮನಸಾರೆ ಕಳುಹಿಸಿದನು. (ಮತ್ತಾಯ 20:28) ಮೊದಲ ಮನುಷ್ಯ ಆದಾಮನಿಂದ ನಾವು ಪಾಪ, ಮರಣವನ್ನ ಪಡೆದುಕೊಂಡಿದ್ದೇವೆ. ಇವೆರಡರಿಂದ ನಮ್ಮನ್ನು ಬಿಡಿಸಲಿಕ್ಕೆ ಯೇಸು ನರಳಿ ಸತ್ತನು.—ರೋಮನ್ನರಿಗೆ 5:8, 12.
ಯೇಸು ಮೇಲೆ ನಂಬಿಕೆ ಇಡುವುದು ಅಂದರೇನು? ಸುಮ್ಮನೆ ಆತನನ್ನು ನಂಬುವುದು ಅಥವಾ ಆತನು ನಮಗೋಸ್ಕರ ಏನೇನು ಮಾಡಿದ್ದಾನೆ ಅಂತ ತಿಳಿದುಕೊಳ್ಳುವುದು ಅಷ್ಟೇ ಅಲ್ಲ. ದೇವರ ಮಗನಾದ ಯೇಸು ಹೇಳಿದ್ದನ್ನು ಮಾಡಬೇಕು, ಆತನನ್ನು ಅನುಕರಿಸಬೇಕು. ಹೀಗೆ ಯೇಸು ಮೇಲೆ ನಮಗೆ ನಂಬಿಕೆ ಇದೆ ಅಂತ ತೋರಿಸಬೇಕು. (ಮತ್ತಾಯ 7:24-27; 1 ಪೇತ್ರ 2:21) “ಮಗನ ಮೇಲೆ ನಂಬಿಕೆ ಇಡೋ ಪ್ರತಿಯೊಬ್ಬನೂ ಶಾಶ್ವತ ಜೀವ ಪಡಿತಾನೆ. ಮಗನ ಮಾತು ಕೇಳದವನು ಶಾಶ್ವತ ಜೀವ ಪಡಿಯಲ್ಲ” ಅನ್ನುತ್ತದೆ ಬೈಬಲ್.—ಯೋಹಾನ 3:36.
ಯೋಹಾನ 3:16—ಸಂದರ್ಭ
ಯೆಹೂದಿ ಧರ್ಮದ ನಾಯಕ ನಿಕೊದೇಮನ ಹತ್ತಿರ ಯೇಸು ಮಾತಾಡುವಾಗ ಆ ಮಾತುಗಳನ್ನು ಹೇಳಿದನು. (ಯೋಹಾನ 3:1, 2) ಈ ಮಾತುಕತೆಯಲ್ಲಿ ದೇವರ ಆಳ್ವಿಕೆc ಬಗ್ಗೆ ಮತ್ತು ‘ಮತ್ತೆ ಹುಟ್ಟೋದರ’ ಬಗ್ಗೆ ಹೆಚ್ಚು ವಿವರ ಕೊಟ್ಟನು. (ಯೋಹಾನ 3:3) ಮುಂದೆ ಆತನು ಯಾವ ರೀತಿ ಸಾಯುತ್ತಾನೆ ಅಂತನೂ ಹೇಳಿದನು. “ಮನುಷ್ಯಕುಮಾರನನ್ನ ಕಂಬಕ್ಕೆ ಏರಿಸಲಾಗುತ್ತೆ [ನೇತುಹಾಕಲಾಗುತ್ತೆ]. ಇದ್ರಿಂದಾಗಿ ಆತನಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬರು ಶಾಶ್ವತ ಜೀವ ಪಡ್ಕೊಬಹುದು.” (ಯೋಹಾನ 3:14, 15) ಈ ಮಾತು ಹೇಳಿದ ಮೇಲೆನೇ ಯೇಸು ದೇವರಿಗೆ ಎಲ್ಲ ಜನರ ಮೇಲೆ ತುಂಬ ತುಂಬ ಪ್ರೀತಿ ಇದೆ ಅಂತ ಹೇಳಿದನು. ಹಾಗಾಗಿನೇ ಎಲ್ಲರೂ ಜೀವ ಪಡೆದುಕೊಳ್ಳಲು ಆತನು ದಾರಿ ತೆರೆದಿದ್ದಾನೆ ಅಂತ ಒತ್ತಿಹೇಳಿದನು. ಕೊನೆಯಲ್ಲಿ ಯೇಸು ವಿವರಿಸಿದ್ದೇನೆಂದ್ರೆ, ಜೀವ ಪಡೆಯಬೇಕಾದರೆ ನಂಬಿಕೆ ಇದೆ ಅಂತ ತೋರಿಸಬೇಕು ಮತ್ತು ದೇವರಿಗೆ ಇಷ್ಟ ಆಗೋದನ್ನೇ ಮಾಡಬೇಕು.—ಯೋಹಾನ 3:17-21.
a “ಒಬ್ಬನೇ” ಅನ್ನೋದಕ್ಕಿರುವ ಗ್ರೀಕ್ ಪದ ಮೊನೊಜಿನೇಸ್. ಅದರ ಅರ್ಥ “ಒಬ್ಬನೇ ಒಬ್ಬ, ... ಆ ತರ ಇರೋದು ಆತನೊಬ್ಬನೇ, ಆತನಿಗೆ ಸಾಟಿ ಯಾರೂ ಇಲ್ಲ, ವಿಶಿಷ್ಟ ವ್ಯಕ್ತಿ.”—ಎ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆಫ್ ದ ನ್ಯೂ ಟೆಸ್ಟಮೆಂಟ್ ಆಂಡ್ ಅದರ್ ಅರ್ಲಿ ಕ್ರಿಸ್ಟಿಯನ್ ಲಿಟ್ರೇಚರ್, ಪು. 658.
b ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.
c ದೇವರ ಆಳ್ವಿಕೆ ಒಂದು ಸ್ವರ್ಗೀಯ ಸರ್ಕಾರವಾಗಿದೆ. ಇದಕ್ಕೆ “ಸ್ವರ್ಗದ ಆಳ್ವಿಕೆ” ಅನ್ನೋ ಹೆಸರು ಕೂಡ ಇದೆ. (ಮತ್ತಾಯ 10:7; ಪ್ರಕಟನೆ 11:15) ಯೇಸುವನ್ನು ದೇವರು ರಾಜನಾಗಿ ನೇಮಿಸಿದ್ದಾನೆ. ಭೂಮಿಯನ್ನು ದೇವರು ಯಾವ ಉದ್ದೇಶಕ್ಕಾಗಿ ಸೃಷ್ಟಿಮಾಡಿದನೋ ಆ ಉದ್ದೇಶವನ್ನು ದೇವರ ಆಳ್ವಿಕೆ ಕೈಗೂಡಿಸುತ್ತೆ. (ದಾನಿಯೇಲ 2:44; ಮತ್ತಾಯ 6:10) ಹೆಚ್ಚು ವಿಷಯ ತಿಳಿಯಲು “ದೇವರ ಆಳ್ವಿಕೆ ಅಂದರೇನು?” ಅನ್ನೋ ಲೇಖನ ನೋಡಿ.