ಯೆಹೋವನ ಕುಟುಂಬವು ಅಮೂಲ್ಯವಾದ ಐಕ್ಯವನ್ನು ಅನುಭವಿಸುತ್ತದೆ
“ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”—ಕೀರ್ತನೆ 133:1.
1. ಇಂದು ಅನೇಕ ಕುಟುಂಬಗಳ ಪರಿಸ್ಥಿತಿ ಹೇಗಿದೆ?
ಕುಟುಂಬವು ಇಂದು ವಿಷಮಸ್ಥಿತಿಯಲ್ಲಿದೆ. ಅನೇಕ ಕುಟುಂಬಗಳಲ್ಲಿ, ವಿವಾಹ ಬಂಧಗಳು ಮುರಿಯುವ ಬಿಂದುವಿನಲ್ಲಿವೆ. ವಿವಾಹವಿಚ್ಛೇದವು ಅಧಿಕಾಧಿಕವಾಗಿ ಸಾಮಾನ್ಯವಾಗುತ್ತಾ ಇದೆ, ಮತ್ತು ವಿಚ್ಫೇದಿತ ದಂಪತಿಗಳ ಅನೇಕ ಮಕ್ಕಳು ಬಹಳ ದುಃಖವನ್ನು ಅನುಭವಿಸುತ್ತಿದ್ದಾರೆ. ಕೋಟ್ಯಂತರ ಕುಟುಂಬಗಳು ಅಸಂತೋಷವಿರುವವುಗಳೂ ಅನೈಕ್ಯವುಳ್ಳವುಗಳೂ ಆಗಿವೆ. ಆದರೂ, ನಿಜ ಸಂತೋಷವನ್ನು ಮತ್ತು ಸಾಚ ಐಕ್ಯವನ್ನು ತಿಳಿದಿರುವ ಒಂದು ಕುಟುಂಬವಿದೆ. ಅದು ಯೆಹೋವ ದೇವರ ವಿಶ್ವಕುಟುಂಬ. ಅದರಲ್ಲಿ ಕೋಟ್ಯನುಕೋಟಿ ಅದೃಶ್ಯ ದೇವದೂತರು ತಮ್ಮ ನೇಮಿತ ಕೆಲಸಗಳನ್ನು ದೈವಿಕ ಚಿತ್ತಕ್ಕೆ ಹೊಂದಿಕೆಯಲ್ಲಿ ನಿರ್ವಹಿಸುತ್ತಾರೆ. (ಕೀರ್ತನೆ 103:20, 21) ಆದರೆ ಅಂತಹ ಐಕ್ಯವನ್ನು ಅನುಭವಿಸುವ ಒಂದು ಕುಟುಂಬವು ಭೂಮಿಯಲ್ಲಿದೆಯೆ?
2, 3. (ಎ) ಇಂದು ಯಾರು ದೇವರ ವಿಶ್ವಕುಟುಂಬದ ಭಾಗವಾಗಿದ್ದಾರೆ, ಮತ್ತು ಯೆಹೋವನ ಸಾಕ್ಷಿಗಳೆಲ್ಲರನ್ನು ಇಂದು ನಾವು ಯಾವುದಕ್ಕೆ ಹೋಲಿಸಬಹುದು? (ಬಿ) ಯಾವ ಪ್ರಶ್ನೆಗಳನ್ನು ನಾವು ಚರ್ಚಿಸುವೆವು?
2 ಅಪೊಸ್ತಲ ಪೌಲನು ಬರೆದುದು: “ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ [“ಕುಟುಂಬವೂ,” NW] ಹೆಸರು ತೆಗೆದುಕೊಳ್ಳುತ್ತದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊ”ಳ್ಳುತ್ತೇನೆ. (ಎಫೆಸ 3:14, 15) ಭೂಮಿಯ ಮೇಲಿರುವ ಪ್ರತಿಯೊಂದು ಕುಟುಂಬದ ಬುಡಕಟ್ಟು, ತನ್ನ ಹೆಸರಿಗಾಗಿ ದೇವರಿಗೆ ಋಣಿಯಾಗಿರುತ್ತದೆ ಯಾಕಂದರೆ ಆತನು ಅದರ ನಿರ್ಮಾಣಿಕನು. ಪರಲೋಕದಲ್ಲಿ ಮಾನವ ಕುಟುಂಬಗಳು ಇರದಿದ್ದರೂ, ಸಾಂಕೇತಿಕವಾಗಿ ಹೇಳುವಲ್ಲಿ, ದೇವರು ತನ್ನ ಸ್ವರ್ಗೀಯ ಸಂಸ್ಥೆಗೆ ವಿವಾಹಿತನಾಗಿರುತ್ತಾನೆ, ಮತ್ತು ಯೇಸುವಿಗೆ ಸ್ವರ್ಗದಲ್ಲಿ ತನ್ನೊಂದಿಗೆ ಐಕ್ಯವಾಗಲಿರುವ ಒಂದು ಆತ್ಮಿಕ ವಧುವು ಇರುವಳು. (ಯೆಶಾಯ 54:5; ಲೂಕ 20:34, 35; 1 ಕೊರಿಂಥ 15:50; 2 ಕೊರಿಂಥ 11:2) ಭೂಮಿಯಲ್ಲಿರುವ ನಂಬಿಗಸ್ತ ಅಭಿಷಿಕ್ತ ಜನರು ಈಗ ದೇವರ ವಿಶ್ವಕುಟುಂಬದ ಭಾಗವಾಗಿರುತ್ತಾರೆ, ಮತ್ತು ಭೂನಿರೀಕ್ಷೆಗಳುಳ್ಳ ಯೇಸುವಿನ “ಬೇರೆ ಕುರಿಗಳು” ಅದರ ಭಾವೀ ಸದಸ್ಯರಾಗಿರುತ್ತಾರೆ. (ಯೋಹಾನ 10:16; ರೋಮಾಪುರ 8:14-17; ಕಾವಲಿನಬುರುಜು, ಜನವರಿ 15, 1996, ಪುಟ 31) ಆದರೂ, ಇಂದಿರುವ ಯೆಹೋವನ ಸಾಕ್ಷಿಗಳೆಲ್ಲರನ್ನು ಒಂದು ಐಕ್ಯವಾದ ಲೋಕವ್ಯಾಪಕ ಕುಟುಂಬಕ್ಕೆ ಹೋಲಿಸಸಾಧ್ಯವಿದೆ.
3 ನೀವು ದೇವರ ಸೇವಕರ ಆ ಆಶ್ಚರ್ಯಕರ ಅಂತಾರಾಷ್ಟ್ರೀಯ ಕುಟುಂಬದ ಭಾಗವಾಗಿದ್ದೀರೊ? ಆಗಿರುವಲ್ಲಿ, ಯಾರೂ ಹೊಂದಸಾಧ್ಯವಿರುವ ಅತ್ಯಂತ ಮಹತ್ತಾದ ಆಶೀರ್ವಾದಗಳಲ್ಲೊಂದನ್ನು ನೀವು ಅನುಭವಿಸುತ್ತೀರಿ. ಯೆಹೋವನ ಭೌಗೋಲಿಕ ಕುಟುಂಬವು—ಆತನ ದೃಶ್ಯ ಸಂಸ್ಥೆಯು—ಸಂಕ್ಷೋಭೆ ಮತ್ತು ಅನೈಕ್ಯದ ಒಂದು ಲೌಕಿಕ ಮರುಭೂಮಿಯಲ್ಲಿ ಶಾಂತಿಯೂ ಐಕ್ಯವೂ ಇರುವ ಒಂದು ತಂಪುಸ್ಥಳವಾಗಿರುತ್ತದೆ ಎಂದು ಲಕ್ಷಾಂತರ ಜನರು ದೃಢೀಕರಿಸುವರು. ಯೆಹೋವನ ಜಗದ್ವ್ಯಾಪಕ ಕುಟುಂಬದ ಐಕ್ಯವನ್ನು ಹೇಗೆ ವರ್ಣಿಸಸಾಧ್ಯವಿದೆ? ಮತ್ತು ಅಂತಹ ಐಕ್ಯವನ್ನು ಪ್ರವರ್ಧಿಸುವ ವಿಷಯಾಂಶಗಳು ಯಾವುವು?
ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!
4. ಸಹೋದರ ಐಕ್ಯದ ಕುರಿತು ಕೀರ್ತನೆ 133 ಹೇಳುವುದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ನೀವು ಹೇಗೆ ವ್ಯಕ್ತಪಡಿಸುವಿರಿ?
4 ಸಹೋದರ ಐಕ್ಯವನ್ನು ಕೀರ್ತನೆಗಾರನಾದ ದಾವೀದನು ಆಳವಾಗಿ ಗಣ್ಯಮಾಡಿದನು. ಅದರ ಕುರಿತು ಹಾಡುವಂತೆಯೂ ಅವನು ಪ್ರೇರಿಸಲ್ಪಟ್ಟನು! ಕಿನ್ನರಿನುಡಿಸುತ್ತಾ ಅವನು ಹೀಗೆ ಹಾಡಿದ್ದನ್ನು ಕಲ್ಪಿಸಿಕೊಳ್ಳಿ: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು! ಅದು ಆರೋನನ ತಲೆಯ ಮೇಲೆ ಹಾಕಲ್ಪಟ್ಟು ಅವನ ಗಡ್ಡದ ಮೇಲೆಯೂ ಅಲ್ಲಿಂದ ಅವನ ಅಂಗಿಗಳ ಕೊರಳಪಟ್ಟಿಯ ವರೆಗೂ ಹರಿದುಬರುವ ಶ್ರೇಷ್ಠತೈಲದಂತೆಯೂ ಹೆರ್ಮೋನ್ ಪರ್ವತದಲ್ಲಿ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆಯೂ [“ಇಬ್ಬನಿಯಂತೆಯೂ,” NW] ಇದೆ. ಅಲ್ಲಿ ಆಶೀರ್ವಾದವೂ ಜೀವವೂ ಸದಾಕಾಲ ಇರಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.”—ಕೀರ್ತನೆ 133:1-3.
5. ಕೀರ್ತನೆ 133:1, 2ರ ಆಧಾರದಲ್ಲಿ, ಇಸ್ರಾಯೇಲ್ಯರ ಮತ್ತು ದೇವರ ಇಂದಿನ ಸೇವಕರ ಮಧ್ಯೆ ಯಾವ ಹೋಲಿಕೆಯನ್ನು ಮಾಡಸಾಧ್ಯವಿದೆ?
5 ಆ ಮಾತುಗಳು ದೇವರ ಪುರಾತನ ಜನರಾದ ಇಸ್ರಾಯೇಲ್ಯರಿಂದ ಅನುಭವಿಸಲ್ಪಟ್ಟ ಸಹೋದರ ಐಕ್ಯಕ್ಕೆ ಅನ್ವಯಿಸಿದವು. ತಮ್ಮ ಮೂರು ವಾರ್ಷಿಕ ಹಬ್ಬಗಳಿಗಾಗಿ ಯೆರೂಸಲೇಮಿನಲ್ಲಿದ್ದಾಗ, ಅವರು ನಿಶ್ಚಯವಾಗಿಯೂ ಐಕ್ಯದಲ್ಲಿ ಒಟ್ಟಿಗೆ ವಾಸಿಸಿದರು. ಅನೇಕ ಕುಲಗಳಿಂದ ಅವರು ಬಂದವರಾದಾಗ್ಯೂ, ಅವರು ಒಂದು ಕುಟುಂಬವಾಗಿದ್ದರು. ಆಹ್ಲಾದಕರ ಸುವಾಸನೆಯುಳ್ಳ ಚೈತನ್ಯದಾಯಕ ಅಭಿಷೇಕದ ತೈಲದಂತೆ, ಒಂದಾಗಿ ಕೂಡಿಬರುವುದು ಅವರ ಮೇಲೆ ಹಿತಕರವಾದ ಪರಿಣಾಮವನ್ನು ಬೀರಿತ್ತು. ಅಂತಹ ತೈಲವನ್ನು ಆರೋನನ ತಲೆಯ ಮೇಲೆ ಹೊಯ್ದಾಗ, ಅದು ಅವನ ಗಡ್ಡದ ಮೇಲಿಂದ ಅವನ ಉಡುಪಿನ ಕೊರಳಪಟ್ಟಿಯ ವರೆಗೂ ಹರಿದುಬಂತು. ಇಸ್ರಾಯೇಲ್ಯರಿಗೆ ಒಂದಾಗಿ ಕೂಡಿಬರುವುದು ಸತ್ಪರಿಣಾಮವನ್ನು ಬೀರುತ್ತಾ, ಇಡೀ ಜನಸಮೂಹವನ್ನೇ ಅದು ವ್ಯಾಪಿಸಿತು. ತಪ್ಪಭಿಪ್ರಾಯಗಳು ಪರಿಹರಿಸಲ್ಪಟ್ಟವು, ಮತ್ತು ಐಕ್ಯವು ಪ್ರವರ್ಧಿಸಲ್ಪಟ್ಟಿತು. ತದ್ರೀತಿಯ ಐಕ್ಯವು ಇಂದು ಯೆಹೋವನ ಭೌಗೋಲಿಕ ಕುಟುಂಬದಲ್ಲಿ ಅಸ್ತಿತ್ವದಲ್ಲಿದೆ. ಜೊತೆ ವಿಶ್ವಾಸಿಗಳೊಂದಿಗೆ ಒಂದು ಕುಟುಂಬದಂತೆ ಕ್ರಮವಾಗಿ ಕೂಡಿಬರುವುದು ಅದರ ಸದಸ್ಯರ ಮೇಲೆ ಹಿತಕರವಾದ ಆತ್ಮಿಕ ಪ್ರಭಾವವನ್ನು ಬೀರುತ್ತದೆ. ದೇವರ ವಾಕ್ಯದ ಬುದ್ಧಿವಾದವು ಅನ್ವಯಿಸಲ್ಪಟ್ಟ ಹಾಗೆ, ಯಾವುದೇ ತಪ್ಪಭಿಪ್ರಾಯಗಳು ಅಥವಾ ತೊಂದರೆಗಳು ನೀಗಿಸಲ್ಪಡುತ್ತವೆ. (ಮತ್ತಾಯ 5:23, 24; 18:15-17) ತಮ್ಮ ಸಹೋದರ ಐಕ್ಯದಿಂದ ಬರುವ ಪರಸ್ಪರ ಪ್ರೋತ್ಸಾಹವನ್ನು ಯೆಹೋವನ ಜನರು ಬಹಳವಾಗಿ ಗಣ್ಯಮಾಡುತ್ತಾರೆ.
6, 7. ಇಸ್ರಾಯೇಲಿನ ಐಕ್ಯವು ಹೆರ್ಮೋನ್ ಪರ್ವತದ ಇಬ್ಬನಿಯಂತಿದ್ದುದು ಹೇಗೆ, ಮತ್ತು ಇಂದು ದೇವರ ಆಶೀರ್ವಾದವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
6 ಇಸ್ರಾಯೇಲು ಐಕ್ಯದಲ್ಲಿ ಒಂದಾಗಿರುವುದು, ಹೆರ್ಮೋನ್ ಪರ್ವತದ ಇಬ್ಬನಿಯಂತೆಯೂ ಇದ್ದುದು ಹೇಗೆ? ಒಳ್ಳೇದು, ಈ ಪರ್ವತದ ಶಿಖರವು ಸಮುದ್ರಮಟ್ಟದಿಂದ 2,800 ಮೀಟರ್ಗಳಿಗಿಂತಲೂ ಹೆಚ್ಚು ಉನ್ನತವಾಗಿರುವುದರಿಂದ, ಬಹಳಮಟ್ಟಿಗೆ ವರ್ಷವಿಡೀ ಇದು ಹಿಮದಿಂದ ಮುಚ್ಚಿರುತ್ತದೆ. ಹೆರ್ಮೋನಿನ ಹಿಮಾವೃತ ಶಿಖರವು ಇರುಳ ಹಬೆಗಳನ್ನು ಸಾಂದ್ರೀಕರಿಸುವಂತೆ ಮಾಡುತ್ತದೆ ಮತ್ತು ಹೀಗೆ ದೀರ್ಘವಾದ ಶುಷ್ಕ ಋತುವಿನಲ್ಲಿ ಸಸ್ಯಗಳನ್ನು ಕಾಪಾಡಿ ಉಳಿಸುವ ಹೇರಳ ಇಬ್ಬನಿಯನ್ನು ಉತ್ಪಾದಿಸುತ್ತದೆ. ಹೆರ್ಮೋನ್ ಪರ್ವತ ಶ್ರೇಣಿಯಿಂದ ಬೀಸುವ ತಂಗಾಳಿಯ ಹೊನಲುಗಳು ಅಂತಹ ಹಬೆಗಳನ್ನು, ಎಲ್ಲಿ ಅವು ಇಬ್ಬನಿಯಾಗಿ ಸಾಂದ್ರೀಕರಿಸುತ್ತವೆಯೊ ಆ ಯೆರೂಸಲೇಮಿನ ಕ್ಷೇತ್ರದಷ್ಟು ದೂರ ದಕ್ಷಿಣಕ್ಕೆ ಒಯ್ಯಬಲ್ಲವು. ಆದುದರಿಂದ ‘ಹೆರ್ಮೋನಿನಲ್ಲಿ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ಇಬ್ಬನಿ’ ಎಂದು ಕೀರ್ತನೆಗಾರನು ಸರಿಯಾಗಿಯೆ ಹೇಳಿದ್ದಾನೆ. ಯೆಹೋವನ ಆರಾಧಕರ ಕುಟುಂಬದ ಐಕ್ಯವನ್ನು ಪ್ರವರ್ಧಿಸುವ ಚೈತನ್ಯದಾಯಕ ಪ್ರಭಾವದ ಎಂತಹ ಉತ್ತಮ ಮರುಜ್ಞಾಪನ!
7 ಕ್ರೈಸ್ತ ಸಭೆಯು ಸ್ಥಾಪನೆಗೊಳ್ಳುವ ಮುಂಚೆ, ಚೀಯೋನ್ ಅಥವಾ ಯೆರೂಸಲೇಮು ಸತ್ಯಾರಾಧನೆಯ ಕೇಂದ್ರವಾಗಿತ್ತು. ಆದುದರಿಂದ, ಆಶೀರ್ವಾದವು ಅಲ್ಲಿಯೆ ನೆಲೆಸಿರುವಂತೆ ದೇವರು ಆಜ್ಞಾಪಿಸಿದನು. ಸಕಲ ಆಶೀರ್ವಾದಗಳ ಮೂಲವು ಯೆರೂಸಲೇಮಿನ ದೇವಾಲಯದಲ್ಲಿ ಪ್ರತಿನಿಧಿರೂಪವಾಗಿ ನೆಲೆಸಿದುದರಿಂದ, ಅಲ್ಲಿಂದಲೆ ಆಶೀರ್ವಾದಗಳು ಹೊರಹೊರಡಲಿದ್ದವು. ಆದರೂ, ಇನ್ನು ಮುಂದೆ ಸತ್ಯಾರಾಧನೆಯು ಯೆರೂಸಲೇಮಿನಂತಹ ಯಾವುದೇ ಒಂದು ಸ್ಥಳಕ್ಕೆ ನಿರ್ಬಂಧಿಸಲ್ಪಡದಿದ್ದುದರಿಂದ, ದೇವರ ಸೇವಕರ ಆಶೀರ್ವಾದ, ಪ್ರೀತಿ ಮತ್ತು ಐಕ್ಯವು ಇಂದು ಭೂಮ್ಯಾದ್ಯಂತ ಕಂಡುಬರಸಾಧ್ಯವಿದೆ. (ಯೋಹಾನ 13:34, 35) ಈ ಐಕ್ಯವನ್ನು ಪ್ರವರ್ಧಿಸುವ ಕೆಲವು ವಿಷಯಾಂಶಗಳು ಯಾವುವು?
ಐಕ್ಯವನ್ನು ಪ್ರವರ್ಧಿಸುವ ವಿಷಯಾಂಶಗಳು
8. ಯೋಹಾನ 17:20, 21ರಲ್ಲಿ ಐಕ್ಯದ ಕುರಿತು ನಾವೇನನ್ನು ಕಲಿಯುತ್ತೇವೆ?
8 ಯೆಹೋವನ ಆರಾಧಕರ ಐಕ್ಯವು, ಯೇಸು ಕ್ರಿಸ್ತನ ಬೋಧನೆಗಳೂ ಸೇರಿ, ಸರಿಯಾಗಿ ಅರ್ಥಮಾಡಿಕೊಳ್ಳಲ್ಪಟ್ಟ ದೇವರ ವಾಕ್ಯಕ್ಕೆ ವಿಧೇಯತೆಯ ಮೇಲೆ ಆಧಾರಿಸಿದೆ. ಸತ್ಯಕ್ಕೆ ಸಾಕ್ಷಿಕೊಡುವುದಕ್ಕಾಗಿ ಮತ್ತು ಒಂದು ಯಜ್ಞಾರ್ಪಣೆಯ ಮರಣವನ್ನು ಅನುಭವಿಸುವುದಕ್ಕಾಗಿ ತನ್ನ ಮಗನನ್ನು ಯೆಹೋವನು ಈ ಲೋಕಕ್ಕೆ ಕಳುಹಿಸಿದುದರ ಮೂಲಕ, ಐಕ್ಯ ಕ್ರೈಸ್ತ ಸಭೆಯ ರೂಪುಗೊಳ್ಳುವಿಕೆಗೆ ದಾರಿ ತೆರೆಯಲ್ಪಟ್ಟಿತು. (ಯೋಹಾನ 3:16; 18:37) ಅದರ ಸದಸ್ಯರ ನಡುವೆ ನಿಜ ಐಕ್ಯವು ಇರಲಿತ್ತೆಂಬುದು ಯೇಸು ಹೀಗೆ ಪ್ರಾರ್ಥಿಸಿದಾಗ ಸ್ಪಷ್ಟಮಾಡಲ್ಪಟ್ಟಿತು: “ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ.” (ಯೋಹಾನ 17:20, 21) ದೇವರ ಮತ್ತು ಆತನ ಮಗನ ನಡುವೆ ಅಸ್ತಿತ್ವದಲ್ಲಿರುವ ತದ್ರೀತಿಯ ಒಂದು ಐಕ್ಯವನ್ನು ಯೇಸುವಿನ ಹಿಂಬಾಲಕರು ನಿಶ್ಚಯವಾಗಿ ಗಳಿಸಿಕೊಂಡಿದ್ದರು. ಅವರು ದೇವರ ವಾಕ್ಯಕ್ಕೆ ಮತ್ತು ಯೇಸುವಿನ ಬೋಧನೆಗಳಿಗೆ ವಿಧೇಯರಾದುದರಿಂದಲೇ ಇದು ಸಂಭವಿಸಿತು. ಇದೇ ಮನೋಭಾವವು ಇಂದು ಯೆಹೋವನ ಜಗದ್ವ್ಯಾಪಕ ಕುಟುಂಬದ ಐಕ್ಯದಲ್ಲಿ ಒಂದು ಪ್ರಧಾನ ವಿಷಯಾಂಶವಾಗಿರುತ್ತದೆ.
9. ಯೆಹೋವನ ಜನರ ಐಕ್ಯದಲ್ಲಿ ಪವಿತ್ರಾತ್ಮವು ಯಾವ ಪಾತ್ರವನ್ನು ವಹಿಸುತ್ತದೆ?
9 ಯೆಹೋವನ ಜನರನ್ನು ಏಕೀಕೃತಗೊಳಿಸುವ ಮತ್ತೊಂದು ವಿಷಯಾಂಶವು, ನಾವು ದೇವರ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿಯನ್ನು ಹೊಂದಿರುವುದೆ ಆಗಿದೆ. ಅದು ದೇವರ ವಾಕ್ಯದ ಪ್ರಕಟಮಾಡಲ್ಪಟ್ಟ ಸತ್ಯವನ್ನು ತಿಳಿದುಕೊಳ್ಳಲು ಮತ್ತು ಹೀಗೆ ಐಕ್ಯದಿಂದ ಆತನನ್ನು ಸೇವಿಸಲು ನಮ್ಮನ್ನು ಶಕ್ತರನ್ನಾಗಿಮಾಡುತ್ತದೆ. (ಯೋಹಾನ 16:12, 13) ಆತ್ಮವು ನಮಗೆ ಜಗಳ, ಹೊಟ್ಟೇಕಿಚ್ಚು, ಕೋಪೋದ್ರೇಕ, ಕಲಹದಂತಹ ಅನೈಕ್ಯಗೊಳಿಸುವ ಶರೀರಭಾವದ ಕರ್ಮಗಳನ್ನು ವರ್ಜಿಸಲು ಸಹಾಯಮಾಡುತ್ತದೆ. ಅದರ ಬದಲಿಗೆ, ಐಕ್ಯಗೊಳಿಸುವ ಫಲಗಳಾದ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯತೆ ಮತ್ತು ಆತ್ಮಸಂಯಮವನ್ನು ವಿಕಸಿಸುವಂತೆ ದೇವರಾತ್ಮವು ನಮಗೆ ಸಾಧ್ಯಗೊಳಿಸುತ್ತದೆ.—ಗಲಾತ್ಯ 5:19-23.
10. (ಎ) ಒಂದು ಐಕ್ಯ ಮಾನವ ಕುಟುಂಬದಲ್ಲಿ ಇರುವ ಪ್ರೀತಿ ಮತ್ತು ಯೆಹೋವನ ದೃಢ ನಿಷ್ಠೆಯುಳ್ಳ ಜನರಲ್ಲಿ ತೋರಿಬರುವ ಪ್ರೀತಿಯ ನಡುವೆ ಯಾವ ಹೋಲಿಕೆಗಳನ್ನು ಮಾಡಸಾಧ್ಯವಿದೆ? (ಬಿ) ತನ್ನ ಆತ್ಮಿಕ ಸಹೋದರರೊಂದಿಗೆ ಕೂಡಿಬರುವುದರ ಕುರಿತು ಆಡಳಿತ ಮಂಡಳಿಯ ಒಬ್ಬ ಸದಸ್ಯರು ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಿದರು?
10 ಒಂದು ಐಕ್ಯ ಕುಟುಂಬದ ಸದಸ್ಯರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ಮತ್ತು ಒಂದುಗೂಡಿರಲು ಸಂತೋಷಪಡುತ್ತಾರೆ. ತುಲನಾತ್ಮಕವಾಗಿ, ಯೆಹೋವನ ಆರಾಧಕರ ಐಕ್ಯಗೊಳಿಸಲ್ಪಟ್ಟಿರುವ ಕುಟುಂಬದಲ್ಲಿರುವವರು, ಆತನನ್ನು, ಆತನ ಪುತ್ರನನ್ನು, ಮತ್ತು ಜೊತೆ ವಿಶ್ವಾಸಿಗಳನ್ನು ಪ್ರೀತಿಸುತ್ತಾರೆ. (ಮಾರ್ಕ 12:30; ಯೋಹಾನ 21:15-17; 1 ಯೋಹಾನ 4:21) ಒಂದು ಪ್ರೀತಿಪರ ಪ್ರಾಕೃತಿಕ ಕುಟುಂಬವು ಒಂದುಗೂಡಿ ಊಟಗಳನ್ನು ಮಾಡುವುದರಲ್ಲಿ ಹೇಗೆ ಆನಂದಿಸುತ್ತದೋ ಹಾಗೆಯೇ, ದೃಢ ನಿಷ್ಠೆಯುಳ್ಳ ಜನರು ಕ್ರೈಸ್ತ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಮತ್ತು ಅಧಿವೇಶನಗಳಲ್ಲಿ ಹಾಜರಾಗಿ, ಉತ್ತಮ ಸಹವಾಸ ಹಾಗೂ ಅತ್ಯುತ್ತಮ ಆತ್ಮಿಕ ಆಹಾರದಿಂದ ಪ್ರಯೋಜನಹೊಂದಲು ಉಲ್ಲಾಸಪಡುತ್ತಾರೆ. (ಮತ್ತಾಯ 24:45-47; ಇಬ್ರಿಯ 10:24, 25) ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಒಬ್ಬ ಸದಸ್ಯರು ವಿಷಯವನ್ನು ಒಮ್ಮೆ ಈ ರೀತಿಯಾಗಿ ಹೇಳಿದರು: “ನನಗೊ, ಸಹೋದರರೊಂದಿಗೆ ಕೂಡಿಬರುವುದು ಜೀವಿತದ ಅತಿ ಮಹತ್ತಾದ ಉಲ್ಲಾಸಗಳಲ್ಲೊಂದು ಮತ್ತು ಪ್ರೋತ್ಸಾಹನೆಯ ಒಂದು ಮೂಲ. ಸಾಧ್ಯವಿದ್ದಲ್ಲಿ, ನಾನು ರಾಜ್ಯ ಸಭಾಗೃಹಕ್ಕೆ ಬರುವವರಲ್ಲಿ ಮೊದಲಿಗನೂ, ಮತ್ತು ಬಿಟ್ಟುಹೋಗುವವರಲ್ಲಿ ಕಡೆಯವನೂ ಆಗಿರಲು ಇಷ್ಟಪಡುತ್ತೇನೆ. ದೇವಜನರೊಂದಿಗೆ ಮಾತನಾಡುವಾಗ ಒಂದು ಆಂತರಿಕ ಸಂತೋಷವು ನನಗಾಗುತ್ತದೆ. ನಾನು ಅವರ ನಡುವೆ ಇರುವಾಗ ನನ್ನ ಕುಟುಂಬದೊಂದಿಗಿದ್ದೇನೊ ಎಂಬಂತೆ ಹಿತವೆನಿಸುತ್ತದೆ.” ನಿಮಗೂ ಹಾಗೆನಿಸುತ್ತದೊ?—ಕೀರ್ತನೆ 27:4.
11. ಯಾವ ಕೆಲಸದಲ್ಲಿ ಯೆಹೋವನ ಸಾಕ್ಷಿಗಳು ವಿಶೇಷವಾದ ಸಂತೋಷವನ್ನು ಕಂಡುಕೊಳ್ಳುತ್ತಾರೆ, ಮತ್ತು ದೇವರ ಸೇವೆಯನ್ನು ನಮ್ಮ ಜೀವಿತಗಳ ಕೇಂದ್ರಬಿಂದುವಾಗಿ ಮಾಡಿಕೊಳ್ಳುವುದರಿಂದ ಏನು ಪರಿಣಮಿಸುತ್ತದೆ?
11 ವಿಷಯಗಳನ್ನು ಒಂದುಗೂಡಿ ಮಾಡುವುದರಲ್ಲಿ ಒಂದು ಐಕ್ಯ ಕುಟುಂಬವು ಸಂತೋಷವನ್ನು ಕಂಡುಕೊಳ್ಳುತ್ತದೆ. ತದ್ರೀತಿಯಲ್ಲಿ, ಯೆಹೋವನ ಆರಾಧಕರ ಕುಟುಂಬದಲ್ಲಿರುವವರು, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಯ ಕಾರ್ಯವನ್ನು ಐಕ್ಯದಿಂದ ಮಾಡುತ್ತ ಇರುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. (ಮತ್ತಾಯ 24:14; 28:19, 20) ಅದರಲ್ಲಿ ಕ್ರಮದ ಭಾಗವಹಿಸುವಿಕೆಯು, ನಮ್ಮನ್ನು ಯೆಹೋವನ ಇತರ ಸಾಕ್ಷಿಗಳಿಗೆ ಹೆಚ್ಚು ನಿಕಟವಾಗಿ ಸೆಳೆಯುತ್ತದೆ. ದೇವರ ಸೇವೆಯನ್ನು ನಮ್ಮ ಜೀವಿತಗಳ ಕೇಂದ್ರಬಿಂದುವಾಗಿ ಮಾಡುವುದು ಮತ್ತು ಆತನ ಜನರ ಚಟುವಟಿಕೆಗಳೆಲ್ಲವನ್ನು ಬೆಂಬಲಿಸುವುದು ಸಹ ನಮ್ಮಲ್ಲಿ ಕೌಟುಂಬಿಕ ಆತ್ಮವನ್ನು ಪ್ರವರ್ಧಿಸುತ್ತದೆ.
ದೇವಪ್ರಭುತ್ವ ಕ್ರಮವು ಅತ್ಯಾವಶ್ಯಕ
12. ಸಂತೋಷವುಳ್ಳ ಮತ್ತು ಐಕ್ಯ ಕುಟುಂಬವೊಂದರ ಗುಣಲಕ್ಷಣಗಳು ಯಾವುವು, ಮತ್ತು ಒಂದನೆಯ ಶತಮಾನದ ಕ್ರೈಸ್ತ ಸಭೆಗಳಲ್ಲಿ ಯಾವ ಏರ್ಪಾಡು ಐಕ್ಯವನ್ನು ಪ್ರವರ್ಧಿಸಿತು?
12 ಬಲವಾದ ಆದರೆ ಪ್ರೀತಿಪರ ನಾಯಕತ್ವವಿರುವ ಮತ್ತು ಕ್ರಮಬದ್ಧವಾಗಿರುವ ಕುಟುಂಬವು ಐಕ್ಯವಾಗಿಯೂ ಸಂತೋಷವುಳ್ಳದ್ದೂ ಆಗಿರುವುದು ಸಂಭವನೀಯ. (ಎಫೆಸ 5:22, 33; 6:1) ಯೆಹೋವನು ಶಾಂತಿಭರಿತ ಸುವ್ಯವಸ್ಥೆಯ ಒಬ್ಬ ದೇವರು, ಮತ್ತು ಆತನ ಕುಟುಂಬದಲ್ಲಿರುವವರೆಲ್ಲರೂ ಆತನನ್ನು ‘ಸರ್ವಶ್ರೇಷ್ಠನಾಗಿ’ ಪರಿಗಣಿಸುತ್ತಾರೆ. (ದಾನಿಯೇಲ 7:18, 22, 25, 27; 1 ಕೊರಿಂಥ 14:33) ಆತನು ತನ್ನ ಮಗನಾದ ಯೇಸು ಕ್ರಿಸ್ತನನ್ನು ಸಕಲ ವಿಷಯಗಳಿಗೆ ಬಾಧ್ಯಸ್ಥನಾಗಿ ಮಾಡಿ, ಭೂಪರಲೋಕಗಳಲ್ಲಿರುವ ಸಮಸ್ತ ಅಧಿಕಾರವನ್ನು ಅವನಿಗೆ ವಹಿಸಿಕೊಟ್ಟಿದ್ದಾನೆಂಬುದನ್ನೂ ಅವರು ಅಂಗೀಕರಿಸುತ್ತಾರೆ. (ಮತ್ತಾಯ 28:18; ಇಬ್ರಿಯ 1:1, 2) ಕ್ರಿಸ್ತನು ಅದರ ಶಿರಸ್ಸಾಗಿರಲಾಗಿ, ಕ್ರೈಸ್ತ ಸಭೆಯು ಒಂದು ಕ್ರಮಬದ್ಧವಾದ, ಐಕ್ಯವುಳ್ಳ ಸಂಸ್ಥೆಯಾಗಿದೆ. (ಎಫೆಸ 5:23) ಒಂದನೆಯ ಶತಮಾನದ ಸಭೆಗಳ ಚಟುವಟಿಕೆಗಳ ಮೇಲ್ವಿಚಾರ ನಡಸಲು, ಅಪೊಸ್ತಲರಿಂದ ಮತ್ತು ಆತ್ಮಿಕವಾಗಿ ಪಕ್ವರಾದ ಇತರ “ಹಿರಿಯ”ರಿಂದ ರಚಿತವಾದ ಒಂದು ಆಡಳಿತ ಮಂಡಳಿಯು ಅಲ್ಲಿತ್ತು. ಒಂದೊಂದು ಸಭೆಗಳಲ್ಲಿ ನಿಯಮಿತ ಮೇಲ್ವಿಚಾರಕರು ಅಥವಾ ಹಿರಿಯರು, ಮತ್ತು ಶುಶ್ರೂಷಾ ಸೇವಕರಿದ್ದರು. (ಅ. ಕೃತ್ಯಗಳು 15:6; ಫಿಲಿಪ್ಪಿ 1:1) ನಾಯಕತ್ವ ವಹಿಸುತ್ತಿರುವವರಿಗೆ ವಿಧೇಯರಾಗುವುದು ಐಕ್ಯವನ್ನು ವರ್ಧಿಸಿತು.—ಇಬ್ರಿಯ 13:17.
13. ಯೆಹೋವನು ಜನರನ್ನು ಹೇಗೆ ಆಕರ್ಷಿಸುತ್ತಾನೆ, ಮತ್ತು ಇದರಿಂದ ಏನು ಪರಿಣಮಿಸುತ್ತದೆ?
13 ಆದರೆ ಈ ಎಲ್ಲ ಕ್ರಮವು, ಯೆಹೋವನ ಆರಾಧಕರ ಐಕ್ಯವು ಒಂದು ಪ್ರಬಲವಾದ, ನಿರ್ಭಾವನೆಯ ನಾಯಕತ್ವದಿಂದಾಗಿಯೆ ಉಂಟಾಗಿದೆಯೆಂದು ಸೂಚಿಸುತ್ತದೊ? ಖಂಡಿತವಾಗಿಯೂ ಇಲ್ಲ! ದೇವರ ಅಥವಾ ಆತನ ಸಂಸ್ಥೆಯ ಕುರಿತಾಗಿ ಯಾವುದೇ ಅಪ್ರಿಯ ವಿಷಯವು ಇರುವುದಿಲ್ಲ. ಯೆಹೋವನು ಪ್ರೀತಿತೋರಿಸುವ ಮೂಲಕ ಜನರನ್ನು ಸೆಳೆಯುತ್ತಾನೆ, ಮತ್ತು ಪ್ರತಿ ವರ್ಷ ಲಕ್ಷಾಂತರ ಜನರು ದೇವರಿಗೆ ತಮ್ಮ ಪೂರ್ಣಹೃದಯದ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವ ಮೂಲಕ ಸ್ವಇಚ್ಛೆ ಮತ್ತು ಸಂತೋಷದಿಂದ ಯೆಹೋವನ ಸಂಸ್ಥೆಯ ಭಾಗವಾಗುತ್ತಿದ್ದಾರೆ. ಅವರ ಮನೋಭಾವವು ಯೆಹೋಶುವನ ಮನೋಭಾವದಂತಿದೆ, ಅವನು ಜೊತೆ ಇಸ್ರಾಯೇಲ್ಯರನ್ನು ಪ್ರಚೋದಿಸಿದುದು: “ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. . . . ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.”—ಯೆಹೋಶುವ 24:15.
14. ಯೆಹೋವನ ಸಂಸ್ಥೆಯು ದೇವಪ್ರಭುತ್ವವಾಗಿದೆಯೆಂದು ನಾವೇಕೆ ಹೇಳಬಲ್ಲೆವು?
14 ಯೆಹೋವನ ಕುಟುಂಬದ ಒಂದು ಭಾಗದೋಪಾದಿ, ನಾವು ಸಂತೋಷಭರಿತರು ಮಾತ್ರವಲ್ಲ ಸುರಕ್ಷಿತರೂ ಹೌದು. ಇದು ಯಾಕೆಂದರೆ ಆತನ ಸಂಸ್ಥೆಯು ದೇವಪ್ರಭುತ್ವವಾಗಿದೆ. ದೇವರ ರಾಜ್ಯವು ದೇವಪ್ರಭುತ್ವ (ಗ್ರೀಕ್ನಿಂದ ತಿಯೋಸ್, ದೇವರು, ಮತ್ತು ಕ್ರಾಟೊಸ್, ಒಂದು ಆಳಿಕೆ) ಆಗಿರುತ್ತದೆ. ಅದು ದೇವರಿಂದ ನಿಯಮಿಸಲ್ಪಟ್ಟ ಮತ್ತು ಸ್ಥಾಪಿಸಲ್ಪಟ್ಟ ಒಂದು ದೇವರಾಳಿಕೆಯಾಗಿದೆ. ಯೆಹೋವನ ಅಭಿಷಿಕ್ತ ‘ಪವಿತ್ರ ಜನಾಂಗ’ವು ಆತನ ಆಳಿಕೆಗೆ ಅಧೀನವಾಗಿದೆಯಾದುದರಿಂದ ಅದೂ ದೇವಪ್ರಭುತ್ವವಾಗಿರುತ್ತದೆ. (1 ಪೇತ್ರ 2:9) ಮಹಾ ದೇವಪ್ರಭುತ್ವಾಧಿಪತಿಯಾದ ಯೆಹೋವನು ನಮ್ಮ ನ್ಯಾಯಾಧಿಪತಿಯೂ, ಧರ್ಮವಿಧಾಯಕನೂ, ರಾಜನೂ ಆಗಿರಲಾಗಿ ನಾವು ಸುರಕ್ಷಿತರಾಗಿರಲೇಬೇಕು. (ಯೆಶಾಯ 33:22) ಆದರೂ, ಯಾವುದಾದರೂ ವಾಗ್ವಾದವು ಉದ್ಭವಿಸಿ, ನಮ್ಮ ಸಂತೋಷವನ್ನು, ಸುರಕ್ಷೆಯನ್ನು, ಮತ್ತು ಐಕ್ಯವನ್ನು ಬೆದರಿಸುವುದಾದರೆ ಆಗೇನು?
ಆಡಳಿತ ಮಂಡಳಿಯು ಕ್ರಮ ಕೈಕೊಳ್ಳುತ್ತದೆ
15, 16. ಒಂದನೆಯ ಶತಮಾನದಲ್ಲಿ ಯಾವ ವಾಗ್ವಾದವು ಎದ್ದಿತು, ಮತ್ತು ಯಾಕೆ?
15 ಒಂದು ಕುಟುಂಬದ ಐಕ್ಯವನ್ನು ಕಾಪಾಡಲಿಕ್ಕಾಗಿ, ಒಮ್ಮೊಮ್ಮೆ ಒಂದು ವಾಗ್ವಾದವನ್ನು ಬಗೆಹರಿಸಬೇಕಾದೀತು. ಹಾಗಾದರೆ, ಸಾ.ಶ. ಒಂದನೆಯ ಶತಮಾನದಲ್ಲಿ, ದೇವರ ಆರಾಧಕರ ಕುಟುಂಬದ ಐಕ್ಯವನ್ನು ಕಾಪಾಡಲಿಕ್ಕಾಗಿ ಒಂದು ಆತ್ಮಿಕ ಸಮಸ್ಯೆಯನ್ನು ಬಗೆಹರಿಸಲಿಕ್ಕಿತ್ತೆಂದು ಎಣಿಸೋಣ. ಆಗ ಏನು ಮಾಡಬೇಕಿತ್ತು? ಆತ್ಮಿಕ ವಿಷಯಗಳ ಕುರಿತಾಗಿ ನಿರ್ಣಯಗಳನ್ನು ಮಾಡುತ್ತಾ, ಆಡಳಿತ ಮಂಡಳಿಯು ಕ್ರಮ ಕೈಕೊಂಡಿತು. ಕೈಕೊಂಡ ಅಂತಹ ಕ್ರಮದ ಒಂದು ಶಾಸ್ತ್ರೀಯ ದಾಖಲೆಯು ನಮಗಿದೆ.
16 ಸುಮಾರು ಸಾ.ಶ. 49ರಲ್ಲಿ, ಆ ಆಡಳಿತ ಮಂಡಳಿಯು ಒಂದು ಗಂಭೀರವಾದ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ ಮತ್ತು ಆ ಮೂಲಕ “ದೇವರ ಮನೆಯವರ” ಐಕ್ಯವನ್ನು ಕಾಪಾಡಲಿಕ್ಕಾಗಿ ಯೆರೂಸಲೇಮಿನಲ್ಲಿ ಕೂಡಿಬಂತು. (ಎಫೆಸ 2:19) ಸುಮಾರು 13 ವರ್ಷಗಳ ಮುಂಚಿತವಾಗಿ, ಅಪೊಸ್ತಲ ಪೇತ್ರನು ಕೊರ್ನೇಲ್ಯನಿಗೆ ಸಾರಿದ್ದನು, ಮತ್ತು ಅನ್ಯಜನರಲ್ಲಿ ಮೊದಲಿಗರು ಅಥವಾ ರಾಷ್ಟ್ರಗಳ ಜನರು, ಸ್ನಾತ ವಿಶ್ವಾಸಿಗಳಾದರು. (ಅ. ಕೃತ್ಯಗಳು ಅಧ್ಯಾಯ 10) ಪೌಲನ ಮೊದಲನೆಯ ಮಿಷನೆರಿ ಸಂಚಾರದ ಸಮಯದಲ್ಲಿ, ಅನೇಕ ಅನ್ಯಜನರು ಕ್ರೈಸ್ತತ್ವವನ್ನು ಅಂಗೀಕರಿಸಿದರು. (ಅ. ಕೃತ್ಯಗಳು 13:1–14:28) ವಾಸ್ತವಿಕವಾಗಿ, ಅನ್ಯ ಕ್ರೈಸ್ತರ ಒಂದು ಸಭೆಯು ಸಿರಿಯದ ಅಂತಿಯೋಕ್ಯದಲ್ಲಿ ಸ್ಥಾಪಿತವಾಗಿತ್ತು. ಈ ಅನ್ಯ ಮತಾವಲಂಬಿಗಳು ಸುನ್ನತಿಮಾಡಿಸಿಕೊಂಡು, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸಬೇಕು ಎಂದು ಕೆಲವು ಕ್ರೈಸ್ತ ಯೆಹೂದ್ಯರು ಭಾವಿಸಿದರು, ಆದರೆ ಇತರರು ಅಸಮ್ಮತಿ ಸೂಚಿಸಿದರು. (ಅ. ಕೃತ್ಯಗಳು 15:1-5) ಈ ವಾಗ್ವಾದವು ಪರಿಪೂರ್ಣ ಅನೈಕ್ಯಕ್ಕೆ, ಯೆಹೂದ್ಯರ ಮತ್ತು ಅನ್ಯಜನರ ಪ್ರತ್ಯೇಕ ಸಭೆಗಳನ್ನು ರಚಿಸುವುದಕ್ಕೂ ನಡಿಸಸಾಧ್ಯವಿತ್ತು. ಆದುದರಿಂದ ಕ್ರಿಸ್ತೀಯ ಐಕ್ಯವನ್ನು ಕಾಪಾಡಲಿಕ್ಕಾಗಿ, ಆಡಳಿತ ಮಂಡಳಿಯು ತಡಮಾಡದೆ ಕ್ರಮ ಕೈಕೊಂಡಿತು.
17. ಅಪೊಸ್ತಲರ ಕೃತ್ಯಗಳು 15ನೆಯ ಅಧ್ಯಾಯದಲ್ಲಿ ಯಾವ ಸುಸಂಗತವಾದ ದೇವಪ್ರಭುತ್ವ ಕಾರ್ಯವಿಧಾನವು ವರ್ಣಿಸಲ್ಪಟ್ಟಿದೆ?
17 ಅಪೊಸ್ತಲರ ಕೃತ್ಯಗಳು 15:6-22ಕ್ಕೆ ಅನುಸಾರವಾಗಿ, “ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವುದಕ್ಕೆ ಕೂಡಿ” ಬಂದರು. ಅಂತಿಯೋಕ್ಯದಿಂದ ಬಂದ ಪ್ರತಿನಿಧಿಗಳೂ ಸೇರಿ, ಇತರರು ಸಹ ಅಲ್ಲಿ ಉಪಸ್ಥಿತರಿದ್ದರು. ‘ಅನ್ಯಜನರು ತನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಿದರು’ ಎಂದು ಪೇತ್ರನು ಮೊದಲಾಗಿ ವಿವರಿಸಿದನು. ಅನಂತರ ಬಾರ್ನಬ ಮತ್ತು ಪೌಲರು “ತಮ್ಮ ಮೂಲಕವಾಗಿ ದೇವರು ರಾಷ್ಟ್ರಗಳಲ್ಲಿ” (NW) ಅಥವಾ ಅನ್ಯಜನರಲ್ಲಿ “ಮಾಡಿದ್ದ ಎಲ್ಲಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ” ವಿವರಿಸಿದಂತೆ, “ಗುಂಪುಕೂಡಿದ್ದವರೆಲ್ಲರು” ಕಿವಿಗೊಟ್ಟು ಕೇಳಿದರು. ಆಮೇಲೆ ಯಾಕೋಬನು ಆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದಾಗಿತ್ತೆಂದು ಸಲಹೆಯಿತ್ತನು. ಆಡಳಿತ ಮಂಡಳಿಯು ಒಂದು ನಿರ್ಣಯವನ್ನು ಮಾಡಿದ ಮೇಲೆ, “ಅಪೊಸ್ತಲರೂ ಸಭೆಯ ಹಿರಿಯರೂ ಸರ್ವ ಸಭೆಯ ಸಮ್ಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವದು ಯುಕ್ತವೆಂದು ತೀರ್ಮಾನಿಸಿದರು” ಎಂಬುದಾಗಿ ನಮಗೆ ಹೇಳಲಾಗುತ್ತದೆ. ಆ “ಆರಿಸಿಕೊಂಡ” ಪುರುಷರಾದ ಯೂದ ಮತ್ತು ಸೀಲ, ಜೊತೆವಿಶ್ವಾಸಿಗಳಿಗಾಗಿ ಒಂದು ಪ್ರೋತ್ಸಾಹನೆಯ ಪತ್ರವನ್ನು ಒಯ್ದರು.
18. ಮೋಶೆಯ ಧರ್ಮಶಾಸ್ತ್ರವನ್ನೊಳಗೊಂಡ ಯಾವ ತೀರ್ಮಾನವನ್ನು ಆಡಳಿತ ಮಂಡಳಿಯು ಮಾಡಿತು, ಮತ್ತು ಇದು ಯೆಹೂದಿ ಮತ್ತು ಅನ್ಯ ಕ್ರೈಸ್ತರ ಮೇಲೆ ಹೇಗೆ ಪ್ರಭಾವಬೀರಿತು?
18 ಆಡಳಿತ ಮಂಡಳಿಯ ತೀರ್ಮಾನವನ್ನು ಪ್ರಕಟಪಡಿಸಿದ ಆ ಪತ್ರವು ಈ ಮಾತುಗಳಿಂದ ಆರಂಭಗೊಂಡಿತು: “ಸಹೋದರರಾಗಿರುವ ಅಪೊಸ್ತಲರೂ ಹಿರಿಯರೂ ಅಂತಿಯೋಕ್ಯ ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೆ ಮಾಡುವ ವಂದನೆ.” ಇತರ ಸಹೋದರರು ಈ ಚಾರಿತ್ರಿಕ ಕೂಟಕ್ಕೆ ಹಾಜರಾದರೂ, ಆಡಳಿತ ಮಂಡಳಿಯು “ಅಪೊಸ್ತಲರೂ ಹಿರಿಯರೂ” ಆದವರನ್ನು ಒಳಗೊಂಡಿತ್ತೆಂಬುದು ಸ್ಪಷ್ಟ. ದೇವರ ಆತ್ಮವು ಅವರನ್ನು ಮಾರ್ಗದರ್ಶಿಸಿತು, ಯಾಕಂದರೆ ಆ ಪತ್ರವು ಹೇಳುವುದು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವದು ಅವಶ್ಯವಾಗಿದೆ. ಇದಕ್ಕೆ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ವಿಹಿತವಾಗಿ ತೋರಿತು.” (ಓರೆಅಕ್ಷರಗಳು ನಮ್ಮವು.) (ಅ. ಕೃತ್ಯಗಳು 15:23-29) ಕ್ರೈಸ್ತರಿಗೆ ಸುನ್ನತಿಮಾಡಿಸಿಕೊಂಡು, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದು ಅವಶ್ಯವಿರಲಿಲ್ಲ. ಈ ತೀರ್ಮಾನವು, ಯೆಹೂದಿ ಮತ್ತು ಅನ್ಯ ಕ್ರೈಸ್ತರಿಗೆ ಐಕ್ಯದಿಂದ ಕ್ರಿಯೆನಡಿಸಲು ಮತ್ತು ಮಾತನಾಡಲು ಸಹಾಯಮಾಡಿತು. ಸಭೆಗಳು ಸಂತೋಷಪಟ್ಟವು ಮತ್ತು ಅಮೂಲ್ಯವಾದ ಐಕ್ಯವು ಮುಂದುವರಿಯಿತು, ಇಂದು ಸಹ ಅದು ದೇವರ ಭೂವ್ಯಾಪಕ ಕುಟುಂಬದಲ್ಲಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಆತ್ಮಿಕ ಮಾರ್ಗದರ್ಶನದ ಕೆಳಗೆ ಮುಂದುವರಿಯುವಂತೆಯೆ.—ಅ. ಕೃತ್ಯಗಳು 15:30-35.
ದೇವಪ್ರಭುತ್ವ ಐಕ್ಯದಲ್ಲಿ ಸೇವೆಸಲ್ಲಿಸಿರಿ
19. ಯೆಹೋವನ ಆರಾಧಕರ ಕುಟುಂಬದಲ್ಲಿ ಐಕ್ಯವು ಸಮೃದ್ಧವಾಗಿರುವುದೇಕೆ?
19 ಕುಟುಂಬದ ಸದಸ್ಯರು ಒಬ್ಬರೊಂದಿಗೊಬ್ಬರು ಸಹಕರಿಸುವಾಗ ಐಕ್ಯವು ಪ್ರವರ್ಧಿಸುತ್ತದೆ. ಇದೇ ವಿಷಯವು ಯೆಹೋವನ ಆರಾಧಕರ ಕುಟುಂಬದಲ್ಲಿಯೂ ನಿಜವಾಗಿದೆ. ದೇವಪ್ರಭುತ್ವವಾದಿಗಳಾಗಿದ್ದು, ಒಂದನೆಯ ಶತಮಾನದ ಸಭೆಯ ಹಿರಿಯರು ಮತ್ತು ಇತರರು, ಆಡಳಿತ ಮಂಡಳಿಯೊಂದಿಗೆ ಪೂರ್ಣ ಸಹಕಾರದಿಂದ ದೇವರಿಗೆ ಸೇವೆಸಲ್ಲಿಸುತ್ತಾ, ಅದರ ನಿರ್ಣಯಗಳನ್ನು ಸ್ವೀಕರಿಸಿದರು. ಆಡಳಿತ ಮಂಡಳಿಯ ಸಹಾಯದಿಂದ, ಹಿರಿಯರು ‘ದೇವರ ವಾಕ್ಯವನ್ನು ಸಾರಿದರು’ ಮತ್ತು ಸಭೆಗಳ ಸದಸ್ಯರು ಸಾಮಾನ್ಯವಾಗಿ ‘ಏಕಾಭಿಪ್ರಾಯದಿಂದ ಮಾತಾಡಿದರು.’ (2 ತಿಮೊಥೆಯ 4:1, 2; 1 ಕೊರಿಂಥ 1:10) ಹೀಗೆ ಯೆರೂಸಲೇಮ್, ಅಂತಿಯೋಕ್ಯ, ರೋಮ್, ಕೊರಿಂಥದಲ್ಲಿಯಾಗಲಿ, ಬೇರೆಲ್ಲಿಯಾದರೂ ಆಗಲಿ, ಶುಶ್ರೂಷೆಯಲ್ಲಿ ಮತ್ತು ಕ್ರೈಸ್ತ ಕೂಟಗಳಲ್ಲಿ ಒಂದೇ ರೀತಿಯ ಶಾಸ್ತ್ರೀಯ ಸತ್ಯಗಳು ಸಾದರಪಡಿಸಲ್ಪಟ್ಟವು. ಅಂತಹ ದೇವಪ್ರಭುತ್ವ ಐಕ್ಯವು ಇಂದು ಅಸ್ತಿತ್ವದಲ್ಲಿದೆ.
20. ನಮ್ಮ ಕ್ರೈಸ್ತ ಐಕ್ಯವನ್ನು ಕಾಪಾಡಿಕೊಳ್ಳಲು ನಾವೇನು ಮಾಡಬೇಕು?
20 ನಮ್ಮ ಐಕ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ, ಯೆಹೋವನ ಭೌಗೋಲಿಕ ಕುಟುಂಬದ ಭಾಗವಾಗಿರುವ ನಾವೆಲ್ಲರು ದೇವಪ್ರಭುತ್ವ ಪ್ರೀತಿಯನ್ನು ಪ್ರದರ್ಶಿಸಲು ಪ್ರಯಾಸಪಡಬೇಕು. (1 ಯೋಹಾನ 4:16) ದೇವರ ಚಿತ್ತಕ್ಕೆ ನಮ್ಮನ್ನು ಅಧೀನಪಡಿಸಿಕೊಂಡು, ‘ನಂಬಿಗಸ್ತ ಆಳಿಗೂ’ ಮತ್ತು ಆಡಳಿತ ಮಂಡಳಿಗೂ ಆಳವಾದ ಗೌರವವನ್ನು ತೋರಿಸುವ ಅಗತ್ಯವಿದೆ. ದೇವರಿಗೆ ನಮ್ಮ ಸಮರ್ಪಣೆಯಂತೆ, ನಮ್ಮ ವಿಧೇಯತೆಯು ಸಹ, ನಿಶ್ಚಯವಾಗಿಯೂ ಸ್ವಐಚ್ಛಿಕವೂ ಆನಂದಭರಿತವೂ ಆಗಿದೆ. (1 ಯೋಹಾನ 5:3) ಎಷ್ಟು ಯುಕ್ತವಾಗಿಯೆ ಕೀರ್ತನೆಗಾರನು ಆನಂದ ಮತ್ತು ವಿಧೇಯತೆಯನ್ನು ಜೊತೆಗೂಡಿಸಿದ್ದಾನೆ! ಅವನು ಹಾಡಿದ್ದು: “ಯಾಹುವಿಗೆ ಸ್ತೋತ್ರ! ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದ ಪಡುವನೋ ಅವನೇ ಧನ್ಯನು.”—ಕೀರ್ತನೆ 112:1.
21. ನಾವು ನಮ್ಮನ್ನು ದೇವಪ್ರಭುತ್ವವಾದಿಗಳಾಗಿ ಹೇಗೆ ರುಜುಪಡಿಸಿಕೊಳ್ಳಬಲ್ಲೆವು?
21 ಸಭೆಯ ಶಿರಸ್ಸಾದ ಯೇಸುವು, ಸಂಪೂರ್ಣವಾಗಿ ದೇವಪ್ರಭುತ್ವವಾದಿಯೂ ಯಾವಾಗಲೂ ತಂದೆಯ ಚಿತ್ತವನ್ನು ಮಾಡುವವನೂ ಆಗಿದ್ದಾನೆ. (ಯೋಹಾನ 5:30) ಆದುದರಿಂದ ನಾವೆಲ್ಲರೂ, ಯೆಹೋವನ ಚಿತ್ತವನ್ನು ಆತನ ಸಂಸ್ಥೆಯೊಂದಿಗೆ ಪೂರ್ಣ ಸಹಕಾರದಲ್ಲಿ, ದೇವಪ್ರಭುತ್ವವಾಗಿಯೂ ಐಕ್ಯದಿಂದಲೂ ಮಾಡುವ ಮೂಲಕ ನಮ್ಮ ಆದರ್ಶಪ್ರಾಯನನ್ನು ಅನುಸರಿಸೋಣ. ಆಗ ಹೃದಯಪೂರ್ವಕವಾದ ಆನಂದ ಮತ್ತು ಕೃತಜ್ಞತೆಯಿಂದ ಕೀರ್ತನೆಗಾರನ ಹಾಡನ್ನು ನಾವು ಪ್ರತಿಧ್ವನಿಸಬಲ್ಲೆವು: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”
ನೀವು ಹೇಗೆ ಉತ್ತರಿಸುವಿರಿ?
▫ ನಮ್ಮ ಕ್ರಿಸ್ತೀಯ ಐಕ್ಯವು ಕೀರ್ತನೆ 133ಕ್ಕೆ ಹೇಗೆ ಸಂಬಂಧಿಸಸಾಧ್ಯವಿದೆ?
▫ ಐಕ್ಯವನ್ನು ಪ್ರವರ್ಧಿಸುವ ಕೆಲವು ವಿಷಯಾಂಶಗಳು ಯಾವುವು?
▫ ದೇವಜನರ ಐಕ್ಯಕ್ಕಾಗಿ ದೇವಪ್ರಭುತ್ವ ಕ್ರಮವು ಯಾಕೆ ಅತ್ಯಾವಶ್ಯಕ?
▫ ಒಂದನೆಯ ಶತಮಾನದ ಆಡಳಿತ ಮಂಡಳಿಯು ಐಕ್ಯವನ್ನು ಕಾಪಾಡಿಕೊಳ್ಳಲು ಹೇಗೆ ಕ್ರಿಯೆನಡಿಸಿತು?
▫ ದೇವಪ್ರಭುತ್ವ ಐಕ್ಯದಲ್ಲಿ ಸೇವೆಮಾಡುವುದು ನಿಮಗೆ ಯಾವ ಅರ್ಥದಲ್ಲಿದೆ?
[ಪುಟ 13 ರಲ್ಲಿರುವ ಚಿತ್ರ]
ಐಕ್ಯವನ್ನು ಕಾಪಾಡಲು ಆಡಳಿತ ಮಂಡಳಿಯು ಕ್ರಮ ಕೈಕೊಂಡಿತು