ಅಧ್ಯಾಯ 118
ಹಿಡುಕೊಡುವಿಕೆ ಮತ್ತು ಕೈದುಮಾಡುವಿಕೆ
ಯೂದನು ಸೈನಿಕರ, ಮಹಾ ಯಾಜಕರ, ಫರಿಸಾಯರ ಮತ್ತು ಇತರರ ಒಂದು ದೊಡ್ಡ ಗುಂಪನ್ನು ಗೆತ್ಸೇಮನೆ ತೋಟದೊಳಗೆ ನಡಿಸಿದಾಗ, ಮಧ್ಯ ರಾತ್ರಿ ಕಳೆದಿತ್ತು. ಯೇಸುವನ್ನು ಹಿಡುಕೊಡಲು ಯೂದನಿಗೆ 30 ಬೇಳ್ಳಿ ನಾಣ್ಯಗಳನ್ನು ಕೊಡುತ್ತೇವೆಂದು ಯಾಜಕರು ಒಪ್ಪಿದ್ದರು.
ಈ ಮುಂಚೆ ಪಸ್ಕ ಹಬ್ಬದ ಊಟದ ನಂತರ ಯೂದನನ್ನು ಬಿಟ್ಟುಹೋಗುವಂತೆ ಹೇಳಿದ ಮೇಲೆ, ಅವನು ನೇರವಾಗಿ ಮಹಾ ಯಾಜಕರ ಬಳಿಗೆ ಹೋಗಿದ್ದನು ಎಂದು ತಿಳಿಯುತ್ತದೆ. ಇವರು ಬಲುಬೇಗನೇ ತಮ್ಮ ಸ್ವಂತ ಅಧಿಕಾರಿಗಳನ್ನು ಮತ್ತು ಸೈನಿಕರ ಒಂದು ದಳವನ್ನು ಒಟ್ಟುಗೂಡಿಸಿದರು. ಬಹುಶಃ ಯೂದನು ಮೊದಲು ಅವರನ್ನು ಯೇಸು ಮತ್ತು ಅವನ ಅಪೊಸ್ತಲರು ಪಸ್ಕ ಹಬ್ಬವನ್ನು ಆಚರಿಸುವ ಸ್ಥಳಕ್ಕೆ ನಡಿಸಿದಿರ್ದಬಹುದು. ಅವರು ಅಲ್ಲಿಂದ ತೆರಳಿದ್ದಾರೆಂದು ಕಂಡುಕೊಂಡಾದ ನಂತರ, ಆಯುಧಗಳನ್ನು, ದೀವಟಿಗಳನ್ನು ಮತ್ತು ಪಂಜುಗಳನ್ನು ಹಿಡಿದುಕೊಂಡು ಬರುತ್ತಿದ್ದ ಈ ದೊಡ್ಡ ಗುಂಪು, ಯೂದನನ್ನು ಯೆರೂಸಲೇಮ್ನಿಂದ ಹೊರಗಡೆ, ಕಿದ್ರೋನ್ ಹಳ್ಳದ ಆಚೆಗೆ ಹಿಂಬಾಲಿಸಿತು.
ಯೇಸುವನ್ನು ಎಲ್ಲಿ ಕಂಡುಕೊಳ್ಳಬಹುದು ಎಂಬ ನಿಶ್ಚಿತ ಭಾವದಿಂದ, ಯೂದನು ಎಣ್ಣೇಮರಗಳ ಗುಡ್ಡದ ಮೇಲೆ ತಂಡವನ್ನು ಕೊಂಡೊಯ್ಯುತ್ತಿದ್ದನು. ಕಳೆದ ವಾರದಲ್ಲಿ ಯೇಸುವು ಮತ್ತು ಅಪೊಸ್ತಲರು ಬೇಥಾನ್ಯ ಮತ್ತು ಯೆರೂಸಲೇಮಿನ ನಡುವೆ ಹಿಂದೆ ಮುಂದೆ ಸಂಚರಿಸುತ್ತಿದ್ದರಿಂದ, ಅವರು ವಿಶ್ರಾಂತಿ ಪಡೆಯಲು ಮತ್ತು ಸಂಭಾಷಣೆ ನಡಿಸಲು ಆಗಾಗ್ಯೆ ಗೆತ್ಸೇಮನೆ ತೋಟದಲ್ಲಿ ತಂಗುತ್ತಿದ್ದರು. ಆದರೆ, ಈಗ, ಎಣ್ಣೇಮರಗಳ ಕೆಳಗೆ ಕತ್ತಲೆಯಲ್ಲಿ ಯೇಸುವು ಪ್ರಾಯಶಃ ಮರೆಯಾಗಿದ್ದುದರಿಂದ, ಸೈನಿಕರು ಅವನ ಗುರುತನ್ನು ಮಾಡುವದು ಹೇಗೆ? ಅವರು ಅವನನ್ನು ಈ ಮುಂಚೆ ಎಂದೂ ನೋಡಿರಲಿಕ್ಕಿಲ್ಲ. ಆದುದರಿಂದ ಯೂದನು ಒಂದು ಸಂಕೇತವನ್ನು ಕೊಡುತ್ತಾ, ಹೇಳುವದು: “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ.”
ಯೂದನು ದೊಡ್ಡ ಗುಂಪನ್ನು ತೋಟದೊಳಗೆ ನಡಿಸುತ್ತಾನೆ, ಅಲ್ಲಿ ಯೇಸುವನ್ನು ಅವನ ಅಪೊಸ್ತಲರೊಂದಿಗೆ ಕಂಡುಕೊಳ್ಳುತ್ತಾನೆ ಮತ್ತು ನೇರವಾಗಿ ಅವನ ಬಳಿಗೆ ಹೋಗುತ್ತಾನೆ. “ಗುರುವೇ, ನಮಸ್ಕಾರ,” ಎಂದವನು ಹೇಳುತ್ತಾನೆ ಮತ್ತು ಅವನನ್ನು ಮೃದುವಾಗಿ ಮುದ್ದಿಡುತ್ತಾನೆ.
“ಗೆಳೆಯನೇ, ನೀನು ಬಂದ ಕೆಲಸ ಇದೇಯೋ?” ಯೇಸುವು ಎದುರುತ್ತರ ಕೊಡುತ್ತಾನೆ. ಅನಂತರ, ಅವನ ಸ್ವಂತ ಪ್ರಶ್ನೆಗೆ ಉತ್ತರವನ್ನೀಯುತ್ತಾ, ಅವನಂದದ್ದು: “ಯೂದನೇ, ಮುದ್ದಿಟ್ಟು ಮನುಷ್ಯ ಕುಮಾರನನ್ನು ಹಿಡುಕೊಡುತ್ತೀಯಾ?” ಆದರೆ ಅವನನ್ನು ಹಿಡುಕೊಟ್ಟವನ ಕುರಿತು ಅಷ್ಟೇ ಸಾಕು! ಯೇಸುವು ಈಗ ಉರಿಯುತ್ತಿರುವ ಪಂಜುಗಳ ಮತ್ತು ದೀವಟಿಗಳ ಪ್ರಕಾಶಕ್ಕೆ ಬರಲು ಮುಂದಡಿಯಿಡುತ್ತಾನೆ ಮತ್ತು ಕೇಳುತ್ತಾನೆ: “ನೀವು ಯಾರನ್ನು ಹುಡುಕುತ್ತೀರಿ?”
“ನಜರೇತಿನ ಯೇಸುವನ್ನು ಹುಡುಕುತ್ತೇವೆ,” ಎಂದು ಉತ್ತರ ಬರುತ್ತದೆ.
“ನಾನೇ ಅವನು,” ಯೇಸುವು ಉತ್ತರಿಸುತ್ತಾ, ಅವರೆಲ್ಲರ ಮುಂದೆ ಧೈರ್ಯದಿಂದ ನಿಲ್ಲುತ್ತಾನೆ. ಅವನ ಧೈರ್ಯದಿಂದ ಬೆರಗಾಗಿ, ಏನು ನಿರೀಕ್ಷಿಸಬಹುದು ಎಂದು ತಿಳಿಯದೆ, ಅವರು ಹಿಂದಕ್ಕೆ ಸರಿದು, ನೆಲದ ಮೇಲೆ ಬಿದ್ದರು.
“ನಾನೇ ಅವನೆಂದು ನಿಮಗೆ ಹೇಳಿದೆನಲ್ಲಾ,” ಯೇಸುವು ಶಾಂತತೆಯಿಂದ ಮುಂದುವರಿಸುತ್ತಾನೆ. “ನೀವು ನನ್ನನ್ನೇ ಹುಡುಕುವವರಾದರೆ ಇವರು ಹೋಗಬಿಡಿರಿ.” ಸ್ವಲ್ಪ ಸಮಯದ ಮೊದಲು, ಮೇಲಂತಸ್ತಿನ ಕೋಣೆಯಲ್ಲಿ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ, ಅವನು ತನ್ನ ನಂಬಿಗಸ್ತ ಅಪೊಸ್ತಲರನ್ನು ಕಾಪಾಡಿದ್ದಾನೆಂದೂ, “ನಾಶಕ್ಕೆ ಗುರಿಯಾದ ಮನುಷ್ಯನ ಹೊರತಾಗಿ” ಮತ್ತಾರೂ ನಾಶವಾಗಲಿಲ್ಲ ಎಂದೂ ಅವನು ಹೇಳಿದ್ದನು. ಆದುದರಿಂದ, ಅವನ ಮಾತು ನೆರವೇರುವಂತೆ, ಅವನ ಹಿಂಬಾಲಕರನ್ನು ಹೋಗಗೊಡುವಂತೆ ಅವನು ಕೇಳುತ್ತಾನೆ.
ಈಗ ಸೈನಿಕರು ತಮ್ಮ ಚಿತ್ತಸ್ವ್ಯಾಸ್ಥವನ್ನು ಮರಳಿ ಪಡೆದರು, ಎದ್ದು ನಿಂತರು ಮತ್ತು ಯೇಸುವನ್ನು ಬಂಧಿಸಿದರು, ಆಗ ಅಪೊಸ್ತಲರಿಗೆ ಸಂಭವಿಸುತ್ತಿರುವದೇನು ಎಂಬ ಅರಿವಾಯಿತು. “ಸ್ವಾಮೀ, ನಾವು ಕತ್ತಿಯಿಂದ ಹೊಡೆಯೋಣೋವೂ?” ಅವರು ಕೇಳುತ್ತಾರೆ. ಯೇಸುವು ಉತ್ತರಿಸುವ ಮೊದಲೇ, ಅಪೊಸ್ತಲರು ತಂದಿದ್ದ ಎರಡು ಕತ್ತಿಗಳಲ್ಲಿ ಒಂದನ್ನು ಹಿಡಿದುಕೊಂಡಿದ್ದ ಪೇತ್ರನು, ಮಲ್ಕನೆಂಬ ಮಹಾ ಯಾಜಕನ ಆಳನ್ನು ಹೊಡೆಯುತ್ತಾನೆ. ಪೇತ್ರನ ಹೊಡೆತವು ಆಳಿನ ತಲೆಯನ್ನು ತಪ್ಪುತ್ತದಾದರೂ, ಅವನ ಬಲಗಿವಿಯನ್ನು ಕತ್ತರಿಸಿ ಹಾಕುತ್ತದೆ.
“ಇಷ್ಟಕ್ಕೇ ಬಿಡಿರಿ,” ಎಂದು ಯೇಸುವು ಹೇಳುತ್ತಾ, ಮಧ್ಯ ಪ್ರವೇಶಿಸುತ್ತಾನೆ. ಮಲ್ಕನ ಕಿವಿಯನ್ನು ಮುಟ್ಟಿ ಅವನ ಗಾಯವನ್ನು ವಾಸಿಮಾಡುತ್ತಾನೆ. ತದನಂತರ ಒಂದು ಪ್ರಾಮುಖ್ಯ ಪಾಠವನ್ನು ಅವನು ಕಲಿಸುತ್ತಾ, ಪೇತ್ರನಿಗೆ ಅಂದದ್ದು: “ನಿನ್ನ ಕತ್ತಿಯನ್ನು ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು. ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ, ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ?”
ಯೇಸುವು ಬಂಧಿಸಲ್ಪಡಲು ಇಚ್ಛೆಯುಳ್ಳವನಾಗಿದ್ದನು, ಏಕಂದರೆ ಅವನು ವಿವರಿಸುವದು: “ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ?” ಮತ್ತು ಅವನು ಕೂಡಿಸುವದು: “ತಂದೆ ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ತನಗಾಗಿರುವ ದೇವರ ಚಿತ್ತಕ್ಕೆ ಅವನು ಪೂರ್ಣ ಸಹಮತದಿಂದ ಇದ್ದನು!
ಅನಂತರ ಯೇಸುವು ಜನರ ಗುಂಪಿಗೆ ಹೇಳುವದು: “ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವದಕ್ಕೆ ಬಂದಿರಾ?” ಅವನು ಕೇಳುತ್ತಾನೆ. “ನಾನು ದಿನಾಲು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ; ಆದರೆ ಶಾಸ್ತ್ರವಚನಗಳು ನೆರವೇರುವಂತೆ ಇದೆಲ್ಲಾ ಆಯಿತು.”
ಆಗ ಸೈನಿಕರ ದಳ, ಮಿಲಿಟರಿ ಅಧಿಪತಿ ಮತ್ತು ಯೆಹೂದ್ಯರ ಅಧಿಕಾರಿಗಳು ಯೇಸುವನ್ನು ಹಿಡಿದು ಕಟ್ಟುತ್ತಾರೆ. ಇದನ್ನು ನೋಡಿದ ಅಪೊಸ್ತಲರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡುತ್ತಾರೆ. ಆದಾಗ್ಯೂ, ಒಬ್ಬಾನೊಬ್ಬ ಯೌವನಸ್ಥನು—ಶಿಷ್ಯನಾಗಿದ್ದ ಮಾರ್ಕನು—ಅಲ್ಲಿಯೇ ಜನರ ಗುಂಪಿನೊಟ್ಟಿಗೆ ಉಳಿಯುತ್ತಾನೆ. ಪಸ್ಕ ಹಬ್ಬವನ್ನು ಯೇಸುವು ಆಚರಿಸಿದ ಮನೆಯಲ್ಲಿ ಅವನು ಇದ್ದಿರಬಹುದು ಮತ್ತು ಅನಂತರ ಅಲ್ಲಿಂದ ಗುಂಪನ್ನು ಹಿಂಬಾಲಿಸಿರಬಹುದು. ಆದಾಗ್ಯೂ, ಈಗ ಅವನ ಪರಿಚಯ ಹಿಡಿಯಲ್ಪಟ್ಟಿತು ಮತ್ತು ಅವನನ್ನು ಹಿಡಿಯಲು ಪ್ರಯತ್ನಿಸಲಾಯಿತು. ಆದರೆ ಅವನು ತನ್ನ ನಾರುಮಡಿಯನ್ನು ಬಿಟ್ಟು ಅಲ್ಲಿಂದ ಓಡಿಹೋಗುತ್ತಾನೆ. ಮತ್ತಾಯ 26:47-56; ಮಾರ್ಕ 14:43-52; ಲೂಕ 22:47-53; ಯೋಹಾನ 17:12; 18:3-12.
▪ ಗೆತ್ಸೇಮನೆ ತೋಟದಲ್ಲಿ ಯೇಸುವನ್ನು ತಾನು ಕಂಡುಕೊಳ್ಳುವನೆಂದು ಯೂದನು ನಿಶ್ಚಯವುಳ್ಳವನಾಗಿದ್ದದು ಯಾಕೆ?
▪ ಅವನ ಅಪೊಸ್ತಲರಿಗಾಗಿ ಯೇಸುವು ಚಿಂತೆಯನ್ನು ಪ್ರದರ್ಶಿಸಿದ್ದು ಹೇಗೆ?
▪ ಯೇಸುವಿನ ರಕ್ಷಣೆಗಾಗಿ ಪೇತ್ರನು ಯಾವ ಕ್ರಿಯೆಯನ್ನು ಕೈಗೊಂಡನು, ಆದರೆ ಅದರ ಕುರಿತು ಪೇತ್ರನಿಗೆ ಯೇಸುವು ಏನಂದನು?
▪ ತನಗಾಗಿರುವ ದೇವರ ಚಿತ್ತಕ್ಕೆ ಅವನು ಪೂರ್ಣ ಸಹಮತದಲ್ಲಿದ್ದನು ಎಂದು ಯೇಸುವು ಪ್ರಕಟಿಸಿದ್ದು ಹೇಗೆ?
▪ ಯೇಸುವನ್ನು ಅಪೊಸ್ತಲರು ತೊರೆದು ಓಡಿದಾಗ, ಯಾರು ಉಳಿಯುತ್ತಾನೆ, ಮತ್ತು ಅವನಿಗೆ ಏನು ಸಂಭವಿಸುತ್ತದೆ?