ಅಧ್ಯಾಯ 122
ಪಿಲಾತನಿಂದ ಹೆರೋದನ ಬಳಿ ಮತ್ತು ಪುನಃ ಹಿಂದಕ್ಕೆ
ಯೇಸುವು ತಾನೊಬ್ಬ ಅರಸನು ಆಗಿದ್ದೇನೆ ಎಂಬುದನ್ನು ಮರೆಮಾಡಲು ಯಾವ ಪ್ರಯತ್ನವನ್ನು ಮಾಡದಿದ್ದರೂ, ಅವನ ರಾಜ್ಯವು ರೋಮಿಗೆ ಯಾವುದೇ ರೀತಿಯಲ್ಲಿ ಬೆದರಿಕೆಯಾಗಿರುವದಿಲ್ಲ ಎಂದವನು ವಿವರಿಸಿದನು. “ನನ್ನ ರಾಜ್ಯವು ಈ ಲೋಕದ್ದಲ್ಲ.” ಯೇಸುವನ್ನುತ್ತಾನೆ. “ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದ್ದಲ್ಲ.” ಈ ರೀತಿಯಲ್ಲಿ ಯೇಸುವು, ಐಹಿಕ ಮೂಲದಿಂದ ಅದು ಬರದಿದ್ದರೂ, ತನಗೊಂದು ರಾಜ್ಯವಿದೆಯೆಂದು ಮೂರು ಬಾರಿ ಅಂಗೀಕರಿಸುತ್ತಾನೆ.
ಆದರೂ, ಪಿಲಾತನು ಅವನನ್ನು ಇನ್ನಷ್ಟು ಒತ್ತಡಕ್ಕೆ ಹಾಕುತ್ತಾನೆ: “ಹಾಗಾದರೆ ನೀನು ಅರಸನು ಹೌದೋ?” ಅಂದರೆ ನಿನ್ನ ರಾಜ್ಯವು ಈ ಲೋಕದ ಭಾಗವಲ್ಲದಿದ್ದರೂ ಕೂಡ, ನೀನು ಒಬ್ಬ ಅರಸನೋ?
ಪಿಲಾತನು ಸರಿಯಾದ ಸಮಾಪ್ತಿಗೆ ಬಂದಿದ್ದಾನೆಂದು ತಿಳಿಯುವಂತೆ ಯೇಸುವು ಬಿಡುತ್ತಾ, ಉತ್ತರಿಸುವದು: “ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯ ಪರರೆಲ್ಲರು ನನ್ನ ಮಾತಿಗೆ ಕಿವಿಗೊಡುತ್ತಾರೆ.”
ಹೌದು, ಯೇಸುವಿನ ಭೂಮಿಯ ಮೇಲಿನ ಅಸ್ತಿತ್ವದ ಉದ್ದೇಶವು ತಾನೇ “ಸತ್ಯ”ಕ್ಕೋಸ್ಕರ, ನಿರ್ದಿಷ್ಟವಾಗಿ ಅವನ ರಾಜ್ಯದ ಸತ್ಯದ ಕುರಿತು ಸಾಕ್ಷಿ ನೀಡುವದಕ್ಕಾಗಿದೆ. ಅವನ ಜೀವವನ್ನು ಬೆಲೆಯಾಗಿ ತೆರಬೇಕಾದರೂ, ಯೇಸುವು ನಂಬಿಗಸ್ತನಾಗಿರಲು ಸಿದ್ಧನಾಗಿದ್ದನು. “ಸತ್ಯವಂದರೇನು?” ಎಂದು ಪಿಲಾತನು ಕೇಳಿದರೂ, ಅವನು ಹೆಚ್ಚಿನ ವಿವರಣೆಗಾಗಿ ಕಾಯಲಿಲ್ಲ. ತೀರ್ಪನ್ನು ನೀಡಲು ಸಾಕಷ್ಟು ಅವನು ಕೇಳಿದ್ದನು.
ಅರಮನೆಯ ಹೊರಗಡೆ ಕಾದು ಕೊಂಡಿದ್ದ ಜನರ ಗುಂಪಿನೆಡೆಗೆ ಪಿಲಾತನು ಹಿಂತಿರುಗಿ ಬರುತ್ತಾನೆ. ಯೇಸುವು ಅವನ ಪಕ್ಕದಲ್ಲಿ ಇದ್ದನೆಂದು ತೋಚುತ್ತದೆ, ಮಹಾ ಯಾಜಕರಿಗೆ ಮತ್ತು ಹೊರಗೆ ಇದ್ದವರಿಗೆ ಅವನು ಹೇಳುವದು: “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುವದಿಲ್ಲ.”
ಈ ತೀರ್ಪಿನಿಂದ ಕೋಪಗೊಂಡು, ಜನರ ಗುಂಪು ಒತ್ತಾಯಿಸಲು ಪ್ರಾರಂಭಿಸಿತು: “ಗಲಿಲಾಯದಲ್ಲಿ ಪ್ರಾರಂಭ ಮಾಡಿ ಇಲ್ಲಿಯ ವರೆಗೂ ಯೂದಾಯ ಸೀಮೆಯಲ್ಲಿಲ್ಲಾ ಇವನು ಬೋಧನೆ ಮಾಡುತ್ತಾ, ಜನರ ಮನಸ್ಸನ್ನು ಕದಲಿಸುತ್ತಾನೆ.”
ಯೆಹೂದ್ಯರ ಅತಾರ್ಕಿಕವಾಗಿದ್ದ ಉನ್ಮತ್ತಾಭಿಮಾನದಿಂದ ಪಿಲಾತನಿಗೆ ಆಶ್ಚರ್ಯವಾಗಿರಬೇಕು. ಆದುದರಿಂದ, ಮಹಾ ಯಾಜಕರು ಮತ್ತು ಹಿರೀ ಪುರುಷರು ಕೂಗುವದನ್ನು ಮುಂದುವರಿಸಿದಾಗ, ಪಿಲಾತನು ಯೇಸುವಿನ ಕಡೆಗೆ ತಿರುಗಿ, ಕೇಳುವದು: “ಇವರು ನಿನ್ನ ಮೇಲೆ ಎಷ್ಟು ಸಾಕ್ಷಿ ಹೇಳುತ್ತಾರೆ, ನೀನು ಕೇಳುವದಿಲ್ಲವೋ?” ಆದರೂ, ಯೇಸುವು ಯಾವುದೇ ಉತ್ತರ ಕೊಡಲು ಪ್ರಯತ್ನಿಸುವದಿಲ್ಲ. ಸಿಕ್ಕಾಬಟ್ಟೆಯ ಆರೋಪಗಳ ಎದುರಲ್ಲಿ ಅವನ ಶಾಂತಚಿತತ್ತೆಯು ಪಿಲಾತನನ್ನು ಬೆರಗುಗೊಳಿಸುತ್ತದೆ.
ಯೇಸುವು ಗಲಿಲಾಯದವನು ಎಂದು ತಿಳಿದು, ಅವನ ಜವಾಬ್ದಾರಿಕೆಯನ್ನು ತಪ್ಪಿಸಿಕೊಳ್ಳುವ ಒಂದು ದಾರಿಯನ್ನು ಪಿಲಾತನು ಕಂಡುಕೊಳ್ಳುತ್ತಾನೆ. ಗಲಿಲಾಯದ ಅಧಿಪತಿಯಾದ ಹೆರೋದ ಅಂತಿಪನು [ಮಹಾ ಹೆರೋದನ ಮಗನು] ಪಸ್ಕ ಹಬ್ಬಕ್ಕಾಗಿ ಬಂದವನು ಯೆರೂಸಲೇಮಿನಲ್ಲಿ ಇದ್ದನು, ಆದ್ದರಿಂದ ಅವನ ಬಳಿಗೆ ಪಿಲಾತನು ಯೇಸುವನ್ನು ಕಳುಹಿಸುತ್ತಾನೆ. ಈ ಮೊದಲು ಹೆರೋದನು ಸ್ನಾನಿಕನಾದ ಯೋಹಾನನ ತಲೆಯನ್ನು ಕಡಿಸಿದ್ದನು ಮತ್ತು ಯೇಸುವು ನಡಿಸುವ ಮಹತ್ಕಾರ್ಯಗಳನ್ನು ಕೇಳಿದಾಗ ಹೆದರಿದ್ದನು, ಯಾಕಂದರೆ ಯೇಸುವು ಸತ್ತವರೊಳಗಿಂದ ಎದ್ದು ಬಂದ ಯೋಹಾನನೋ ಎಂಬ ಭಯ ಇತ್ತು.
ಈಗ ಯೇಸುವನ್ನು ನೋಡುವ ಪ್ರತೀಕ್ಷೆಯಿಂದ ಹೆರೋದನು ಸಂತೋಷ ಪಟ್ಟನು. ಯೇಸುವಿನ ಶ್ರೇಯೋಭಿವೃದ್ಧಿಯಲ್ಲಿ ಅವನು ಚಿಂತಿತನಾಗಿದ್ದ ಕಾರಣದಿಂದಲ್ಲ, ಯಾ ಅವನ ವಿರುದ್ಧ ಮಾಡಿದ್ದ ಆಪಾದನೆಗಳು ಸತ್ಯವೋ, ಅಲ್ಲವೋ ಎಂದು ತಿಳಿಯುವ ನಿಜವಾದ ಪ್ರಯತ್ನಗಳ ಆಸೆಯಿಂದಲ್ಲ. ಬದಲು, ಅವನು ಕೇವಲ ಕುತೂಹಲವುಳ್ಳವನಾಗಿದ್ದನು ಮತ್ತು ಯಾವದಾದರೂ ಸೂಚಕಕಾರ್ಯ ಯೇಸುವು ನಡಿಸುವದನ್ನು ಅವನು ಆಶಿಸುತ್ತಿದ್ದನು.
ಆದಾಗ್ಯೂ, ಹೆರೋದನ ಕುತೂಹಲವನ್ನು ತಣಿಸಲು ಯೇಸುವು ನಿರಾಕರಿಸುತ್ತಾನೆ. ವಾಸ್ತವದಲ್ಲಿ, ಹೆರೋದನು ಅವನನ್ನು ಪ್ರಶ್ನಿಸಿದಾಗ, ಅವನು ಒಂದು ಮಾತನ್ನೂ ಆಡುವದಿಲ್ಲ. ನಿರಾಶನಾಗಿ, ಹೆರೋದನು ಮತ್ತು ಅವನ ಸಿಪಾಯಿಗಳು ಯೇಸುವಿಗೆ ಗೇಲಿ ಮಾಡಿದರು. ಅವನಿಗೆ ಒಂದು ಶೋಭಾಯಮಾನವಾದ ಉಡುಪನ್ನು ಹಾಕಿಸಿ ಹಾಸ್ಯ ಮಾಡಿದರು. ಅನಂತರ ಅವನನ್ನು ಪಿಲಾತನ ಬಳಿಗೆ ಹಿಂದಕ್ಕೆ ಕಳುಹಿಸಿದರು. ಇದರಿಂದಾಗಿ, ಮೊದಲು ವೈರಿಗಳಾಗಿದ್ದ ಹೆರೋದ ಮತ್ತು ಪಿಲಾತನು, ಈಗ ಒಳ್ಳೆಯ ಸ್ನೇಹಿತರಾದರು.
ಯೇಸುವು ಹಿಂದಕ್ಕೆ ಬಂದಾಗ, ಪಿಲಾತನು ಮಹಾ ಯಾಜಕರನ್ನೂ, ಯೆಹೂದ್ಯರ ಅಧಿಕಾರಿಗಳನ್ನೂ ಮತ್ತು ಪ್ರಜೆಗಳನ್ನೂ ಒಟ್ಟಾಗಿ ಕರಸಿ, ಹೇಳುವದು: “ಈ ಮನುಷ್ಯನು ಪ್ರಜೆಗಳನ್ನು ತಿರುಗಿ ಬೀಳುವಂತೆ ಮಾಡುವವನು ಎಂದು ಇವನನ್ನು ನನ್ನ ಬಳಿಗೆ ತಂದಿರಲ್ಲಾ; ನೀವು ಇವನ ಮೇಲೆ ತಂದ ದೂರುಗಳ ವಿಷಯವಾಗಿ ನಾನು ನಿಮ್ಮ ಮುಂದೆಯೇ ವಿಚಾರಣೆ ಮಾಡಿದರೂ ಇವನಲ್ಲಿ ಒಂದು ತಪ್ಪಾದರೂ ನನಗೆ ಕಾಣಲಿಲ್ಲ. ಹೆರೋದನಿಗಾದರೂ ಕಾಣಲಿಲ್ಲ; ಅವನು ಇವನನ್ನು ಹಿಂತಿರುಗಿ ನಮ್ಮ ಬಳಿಗೆ ಕಳುಹಿಸಿದನಲ್ಲಾ. ಇವನು ಮರಣ ದಂಡನೆಗೆ ಯೋಗ್ಯವಾದದೇನ್ದೂ ಮಾಡಿದವನಲ್ಲವೆಂದಾಯಿತು. ಆದದರಿಂದ ನಾನು ಇವನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ.”
ಈ ರೀತಿಯಲ್ಲಿ ಎರಡು ಸಲ ಪಿಲಾತನು ಯೇಸುವನ್ನು ನಿರಪರಾಧಿ ಎಂದು ಹೇಳುತ್ತಾನೆ. ಕೇವಲ ಮತ್ಸರದ ಕಾರಣ ಯಾಜಕರು ಅವನನ್ನು ಒಪ್ಪಿಸಿದ್ದಾರೆಂದು ಅವನು ತಿಳಿದುಕೊಂಡದ್ದರಿಂದ, ಅವನನ್ನು ಬಿಡಿಸಲು ಪಿಲಾತನು ಆತುರನಾಗಿದ್ದನು. ಯೇಸುವನ್ನು ಬಿಡಿಸಲು ಪಿಲಾತನು ಪ್ರಯತ್ನಿಸುವದನ್ನು ಮುಂದುವರಿಸುತ್ತಿರುವಾಗ, ಹಾಗೆ ಮಾಡಲು ಇನ್ನೊಂದು ಬಲವಾದ ಪ್ರೇರಣೆ ಅವನಿಗೆ ದೊರಕಿತು. ಅವನು ತನ್ನ ನ್ಯಾಯಾಸನದಲ್ಲಿ ಕೂತಿರುವಾಗ ಅವನ ಹೆಂಡತಿಯು ಒಂದು ಸಂದೇಶವನ್ನು ಕಳುಹಿಸಿ, ಅವನಿಗೆ ಒತ್ತಾಯಿಸುವದು: “ನೀನು ಆ ಸತ್ಪುರುಷನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ [ದೈವಿಕ ಮೂಲದಿಂದ ಎಂದು ತೋರುತ್ತದೆ] ಬಹಳ ತೊಂದರೆ ಪಟ್ಟೆನು.”
ಆದರೂ, ಈ ನಿರಪರಾಧಿ ಮನುಷ್ಯನನ್ನು ಪಿಲಾತನು, ಹಾಗೆ ಮಾಡಬೇಕೆಂದು ಅವನು ತಿಳಿದಿದ್ದರೂ, ಹೇಗೆ ಬಿಡುಗಡೆ ಮಾಡ ಶಕ್ತನು? ಯೋಹಾನ 18:36-38; ಲೂಕ 23:4-16; ಮತ್ತಾಯ 27:12-14, 18, 19; 14:1, 2; ಮಾರ್ಕ 15:2-5.
▪ ಅವನ ರಾಜ್ಯತ್ವದ ಕುರಿತಾದ ಪ್ರಶ್ನೆಗೆ ಯೇಸುವು ಹೇಗೆ ಉತ್ತರ ಕೊಡುತ್ತಾನೆ?
▪ ಯೇಸುವು ತನ್ನ ಐಹಿಕ ಜೀವನವನ್ನು ಅದಕ್ಕೋಸ್ಕರ ಸಾಕ್ಷಿ ನೀಡಲು ವ್ಯಯಿಸಿದ ಆ “ಸತ್ಯವು” ಯಾವುದು?
▪ ಪಿಲಾತನ ನ್ಯಾಯತೀರ್ಪು ಏನಾಗಿತ್ತು, ಜನರು ಹೇಗೆ ಪ್ರತಿವರ್ತಿಸಿದರು, ಮತ್ತು ಯೇಸುವಿನೊಂದಿಗೆ ಪಿಲಾತನು ಏನು ಮಾಡಿದನು?
▪ ಹೆರೋದ ಅಂತಿಪನು ಯಾರು, ಯೇಸುವನ್ನು ನೋಡಲು ಅವನು ಸಂತೋಷಪಟ್ಟದ್ದೇಕೆ, ಮತ್ತು ಅವನೊಂದಿಗೆ ಅವನು ಹೇಗೆ ವರ್ತಿಸುತ್ತಾನೆ?
▪ ಯೇಸುವನ್ನು ಬಿಡುಗಡೆಗೊಳಿಸಲು ಪಿಲಾತನು ಯಾಕೆ ಆಸಕ್ತನಾಗಿದ್ದನು?