ಅಧ್ಯಾಯ 123
“ಇಗೋ, ಈ ಮನುಷ್ಯನು!”
ಯೇಸುವಿನ ನಡತೆಯಿಂದ ಪ್ರಭಾವಿತನಾಗಿ ಮತ್ತು ಅವನ ನಿರಪರಾಧಿತ್ವವನ್ನು ಮನಗಂಡು, ಪಿಲಾತನು ಇನ್ನೊಂದು ರೀತಿಯಲ್ಲಿ ಅವನನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಾನೆ. “ಆದರೆ ಪಸ್ಕ ಹಬ್ಬದಲ್ಲಿ,” ಅವನು ಜನರ ಗುಂಪಿಗೆ ಹೇಳುತ್ತಾನೆ, “ನಾನು ಒಬ್ಬನನ್ನು ನಿಮಗೆ ಬಿಟ್ಟು ಕೊಡುವ ಪದ್ಧತಿ ಉಂಟಷ್ಟೇ.”
ಬರಬ್ಬನು, ಒಬ್ಬ ಕುಖ್ಯಾತ ಕೊಲಿಗಾರನಾಗಿದ್ದು, ಸೆರೆಮನೆಯಲ್ಲಿ ಬಂಧನದಲ್ಲಿದ್ದನು, ಆದುದರಿಂದ ಪಿಲಾತನು ಕೇಳುವದು: “ನಿಮಗೆ ಯಾರನ್ನು ಬಿಟ್ಟು ಕೊಡಬೇಕನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನೋ?”
ಬರಬ್ಬನನ್ನು ಬಿಡುಗಡೆ ಮಾಡುವಂತೆ, ಆದರೆ ಯೇಸುವನ್ನು ಕೊಲ್ಲಿಸುವಂತೆ, ಜನರು ಕೇಳುವಂತೆ ಮಹಾ ಯಾಜಕರು ಜನರನ್ನು ಉದ್ರೇಕಿಸಿ, ಒಡಂಬಡಿಸಿದ್ದರು. ಆದರೂ ಬಿಟ್ಟು ಕೊಡದೆ, ಪಿಲಾತನು ಪ್ರತಿವರ್ತಿಸುತ್ತಾ, ಪುನಃ ಕೇಳುವದು: “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟು ಕೊಡಬೇಕನ್ನುತ್ತೀರಿ?”
“ಬರಬ್ಬನನ್ನು” ಜನರು ಕೂಗುತ್ತಾರೆ.
“ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಪಿಲಾತನು ಜಿಗುಪ್ಸೆಯಿಂದ ಕೇಳುತ್ತಾನೆ.
ಅವರೆಲ್ಲರೂ ಕಿವಿಡುಗೊಳಿಸುವ ಆರ್ಭಟದಲ್ಲಿ, ಉತ್ತರಿಸುವದು: “ಅವನನ್ನು ವಧಾಸ್ತಂಭಕ್ಕೆ ಹಾಕಿಸು.” “ವಧಾಸ್ತಂಭಕ್ಕೆ ಹಾಕಿಸು, ಅವನನ್ನು ವಧಾಸ್ತಂಭಕ್ಕೆ ಹಾಕಿಸು!
ನಿರಪರಾಧಿ ಮನುಷ್ಯನ ಮರಣವನ್ನು ಅವರು ಅಪೇಕ್ಷಿಸುತ್ತಾರೆ ಎಂದವನ್ನು ಅರಿತು, ಪಿಲಾತನು ವಿನಂತಿಸುತ್ತಾನೆ: “ಯಾಕೆ? ಕೆಟ್ಟದ್ದೇನು ಮಾಡಿದನು? ನಾನು ಇವನಲ್ಲಿ ಮರಣ ದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ; ಆದದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ.”
ಅವನ ಪ್ರಯತ್ನಗಳ ಹೊರತಾಗಿಯೂ, ಅವರ ಧಾರ್ಮಿಕ ಮುಖಂಡರುಗಳಿಂದ ಕೆರಳಸಲ್ಪಟ್ಟು, ಕೋಪೋದ್ರಿಕ್ತ ಜನರ ಗುಂಪು, ದೊಡ್ಡ ಕೂಗಾಟ ಮಾಡಲು ಆರಂಭಿಸಿತು: “ಅವನನ್ನು ವಧಾಸ್ತಂಭಕ್ಕೆ ಏರಿಸು!” ಯಾಜಕರ ರೋಷಾವೇಶದಿಂದ ಕಲಕಿಸಲ್ಪಟ್ಟ, ಜನರ ಗುಂಪು ರಕ್ತಕ್ಕಾಗಿ ಹಾತೊರೆಯಿತು. ಮತ್ತು ನೆನಪಿಸಿರಿ, ಕೇವಲ ಐದು ದಿನಗಳ ಹಿಂದೆ ರಾಜನೋಪಾದಿ ಯೆರೂಸಲೇಮಿನಲ್ಲಿ ಯೇಸುವನ್ನು ಸುಸ್ವಾಗತಿಸಿದವರಲ್ಲಿ ಪ್ರಾಯಶಃ ಕೆಲವರು ಈ ಗುಂಪಿನಲ್ಲಿದಿರ್ದಬಹುದು! ಇದೆಲ್ಲಾದರ ನಡುವೆ, ಒಂದು ವೇಳೆ ಯೇಸುವಿನ ಶಿಷ್ಯರು ಇದ್ದಿರುವದಾದರೆ, ಅವರು ಸುಮ್ಮನೆ, ಮರೆಯಲ್ಲಿ ಇದ್ದಿರಬೇಕು.
ಅವನ ವಿನಂತಿಗಳು ಯಾವುದೇ ಒಳಿತನ್ನು ಮಾಡುವ ಬದಲಾಗಿ, ಕೂಗಾಟವು ಏರುವದನ್ನು ಪಿಲಾತನು ನೋಡಿ, ನೀರು ತಕ್ಕೊಂಡು ಜನರ ಮುಂದೆ ಕೈ ತೊಳಕೊಂಡು, ಹೇಳುವದು: “ಈ ಮನುಷ್ಯನನ್ನು ಕೊಲ್ಲಿಸಿದಕ್ಕೆ ನಾನು ಸೇರಿದವನಲ್ಲ; ನೀವೇ ನೋಡಿಕೊಳ್ಳಿರಿ.” ಆಗ ಜನರು ಉತ್ತರಿಸುವದು: “ಅವನನ್ನು ಕೊಲ್ಲಿಸಿದಕ್ಕೆ ನಾವೂ ನಮ್ಮ ಮಕ್ಕಳೂ ಉತ್ತರ ಕೊಡುತ್ತೇವೆ.”
ಆದುದರಿಂದ ಅವರ ಕೇಳಿಕೆಗಳ ಮೇರೆಗೆ—ಸರಿ ಯಾವುದು ಎಂದು ಅವನು ತಿಳಿದಿರುವದನ್ನು ಮಾಡುವದಕ್ಕಿಂತಲೂ ಜನರ ಗುಂಪನ್ನು ತೃಪ್ತಿಗೊಳಿಸಲು ಬಯಸಿ, ಪಿಲಾತನು ಬರಬ್ಬನನ್ನು ಅವರಿಗಾಗಿ ಬಿಟ್ಟುಕೊಡುತ್ತಾನೆ. ಅವನು ಯೇಸುವಿನ ವಸ್ತ್ರ ತೆಗೆಸಿ, ಕೊರಡೆಗಳಿಂದ ಹೊಡಿಸುತ್ತಾನೆ. ಇದೊಂದು ಸಾಮಾನ್ಯ ರೀತಿಯ ಕೊರಡೆಯ ಹೊಡೆತಗಳಲ್ಲ. ರೋಮನ್ ಕೊರಡೆಗಳ ಹೊಡೆತದ ಕುರಿತು ದ ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೆಶನ್ ವಿವರಿಸುವದು:
“ಹಲವಾರು ಒಂದೊಂದೇ ಆಗಿ ಇರುವ ಯಾ ಹೆಣೆಯಲ್ಪಟ್ಟ ಚರ್ಮದ ಬೇರೆ ಬೇರೆ ಉದ್ದದ ಬಾರುಗಳಿರುವ ಒಂದು ಗಿಡ್ಡ ಕೊರಡೆಯು (ಚಬುಕು ಯಾ ಚಾವಟಿ) ಸಾಧಾರಣ ಸಾಧನವಾಗಿತ್ತು, ಈ ಬಾರುಗಳಿಗೆ ಅಲ್ಲಲ್ಲಿ ಸ್ಥಳ ಬಿಟ್ಟು ಚಿಕ್ಕ ಕಬ್ಬಿಣದ ಗುಂಡುಗಳು ಯಾ ಕುರಿಯ ಎಲುಬಿನ ಚೂಪಾದ ತುಂಡುಗಳು ಸಿಕ್ಕಿಸಲ್ಪಡುತ್ತಿದ್ದವು. . . . ಪೂರ್ಣ ಬಲವನ್ನುಪಯೋಗಿಸಿ ರೋಮನ್ ಸಿಪಾಯಿಗಳು ಅಪರಾಧಿಯ ಬೆನ್ನ ಮೇಲೆ ಪುನಃ ಪುನಃ ಹೊಡೆದಾಗ, ಕಬ್ಬಿಣದ ಗುಂಡುಗಳು ಆಳವಾದ ಬಾಸುಂಡೆಗಳಿಗೆ ಕಾರಣವಾಗುತ್ತಿದ್ದವು ಮತ್ತು ಚರ್ಮದ ಬಾರುಗಳು ಮತ್ತು ಕುರಿಗಳ ಎಲುಬುಗಳು ಚರ್ಮವನ್ನು ಮತ್ತು ಚರ್ಮದ ಕೆಳಗಡೆಯ ಅಂಗಕಟ್ಟುಗಳನ್ನು [ಅಂಗಾಂಶ-ಟಿಶ್ಯು] ಕತ್ತರಿಸುತ್ತಿದ್ದವು. ಅನಂತರ, ಕೊರಡೆಯೇಟು ಮುಂದರಿಸಲ್ಪಟ್ಟರೆ, ಸೀಳಿರುವ ಮಾಂಸದ ಕೆಳಸ್ತರದಲ್ಲಿರುವ ಎಲುಬುಗೂಡಿನ ಸ್ನಾಯುಗಳನ್ನು ಹರಿಯುತ್ತದೆ ಮತ್ತು ರಕ್ತ ಸೋರುವ ಮಾಂಸದ ಕಂಪಿಸುವ ಚಿಂದಿ ಚಿಂದಿಗಳನ್ನು ಉತ್ಪಾದಿಸುತ್ತದೆ.”
ಈ ಯಾತನಾಮಯ ಹೊಡೆತಗಳ ನಂತರ, ಯೇಸುವನ್ನು ದೇಶಾಧಿಪತಿಯ ಅರಮನೆಯೊಳಕ್ಕೆ ತೆಗೆದುಕೊಂಡು ಹೋದರು ಮತ್ತು ಪಟಾಲಮನ್ನೆಲ್ಲಾ ಆತನ ಸುತ್ತಲೂ ಕೂಡಿಸಿದರು. ಅಲ್ಲಿ ಸಿಪಾಯಿಗಳು ಮುಳ್ಳುಬಳ್ಳಿಯಿಂದ ಕಿರೀಟವನ್ನು ಹೆಣೆದು ಆತನ ತಲೆಯ ಮೇಲಿಂದ ಬಲಾತ್ಕಾರವಾಗಿ ಒತ್ತಿದರು. ಅವನ ಬಲಗೈಯಲ್ಲಿ ಬೆತ್ತವನ್ನು ಇಟ್ಟು, ರಾಜರು ಉಟ್ಟುಕೊಳ್ಳುವಂಥ ಒಂದು ಕೆಂಪು ಒಲ್ಲಿಯನ್ನು ಹೊದಿಸಿದರು. ತದನಂತರ, ಅಪಹಾಸ್ಯಮಾಡುತ್ತಾ, ಅವರಂದದ್ದು: “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಆತನ ಮೇಲೆ ಉಗುಳಿ, ಕೆನ್ನೆಯ ಮೇಲೆ ಹೊಡೆದರು. ಅವನ ಕೈಯಲ್ಲಿದ್ದ ಗಟ್ಟಿಯಾದ ಬೆತ್ತವನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಹೊಡೆದರು, ಆ ಮೂಲಕ, ಅವನನ್ನು ಅವಮಾನಿಸುವ “ಕಿರೀಟ”ದ ಚೂಪಾದ ಮುಳ್ಳುಗಳು ಇನ್ನಷ್ಟು ಆಳವಾಗಿ ಅವನ ತಲೆಯ ನೆತ್ತಿಯಲ್ಲಿ ಹೊಗಿಸಿದರು.
ಈ ಕೆಟ್ಟ ನಡವಳಿಕೆಯ ಎದುರಲ್ಲಿಯೂ ಯೇಸುವಿನ ಎದ್ದುಕಾಣುವ ಘನತೆ ಮತ್ತು ಬಲವನ್ನು ಕಂಡು ಪಿಲಾತನು ಎಷ್ಟೊಂದು ಪ್ರಭಾವಿತನಾದನೆಂದರೆ, ಅವನನ್ನು ಬಿಡಿಸಲು ಇನ್ನೊಂದು ಪ್ರಯತ್ನವನ್ನು ಮಾಡುತ್ತಾನೆ. “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ,” ಎಂದವನು ಗುಂಪಿಗೆ ಹೇಳುತ್ತಾನೆ. ಯೇಸುವಿನ ಯಾತನೆ ಪಡುವ ನೋಟವಾದರೂ ಅವರ ಹೃದಯಗಳನ್ನು ಮೃದುಗೊಳಿಸಬಹುದೇನೋ ಎಂದವನು ಊಹಿಸಿರಬಹುದು. ಹೃದಯವಿಲ್ಲದ ಗುಂಪಿನ ಮುಂದೆ ಯೇಸುವು ಮುಳ್ಳಿನ ಕಿರೀಟವನ್ನೂ, ಕೆಂಪು ಹೊರಗಿನ ಒಲ್ಲಿಯನ್ನೂ ಧರಿಸಿದವನಾಗಿ ಮತ್ತು ನೋವಿನಿಂದ ನರಳುತ್ತಿರುವ ರಕ್ತ ಸುರಿಯುವ ಮುಖದಿಂದ ಬಂದು ನಿಂತಾಗ, ಪಿಲಾತನು ಘೋಷಿಸುವದು: “ಇಗೋ, ಈ ಮನುಷ್ಯನು!”
ಚರ್ಮ ವಿವರ್ಣವಾಗುವ ರೀತಿಯಲ್ಲಿ ಹೊಡೆಯಲ್ಪಟ್ಟು, ಜಜ್ಜಲ್ಪಟ್ಟರೂ, ಇತಿಹಾಸದಲ್ಲಿಲ್ಲಾ ಅತಿ ಪ್ರಮುಖನಾದ ವ್ಯಕ್ತಿ, ನಿಜವಾಗಿಯೂ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನು ಇಲ್ಲಿ ನಿಂತಿದ್ದಾನೆ! ಹೌದು, ಪಿಲಾತನು ಕೂಡ ಅಂಗೀಕರಿಸಬೇಕಾದ ಒಂದು ದೊಡ್ಡತನವನ್ನು ಸೂಚಿಸುವಂಥ ಒಂದು ಶಾಂತ ಘನತೆಯನ್ನು ಮತ್ತು ನಿಶ್ಚಲತೆಯನ್ನು ಯೇಸುವು ತೋರಿಸುತ್ತಾನೆ, ಯಾಕಂದರೆ ಗೌರವ ಮತ್ತು ಕಾರುಣ್ಯ ಎರಡೂ ಸೇರಿದ್ದ ನುಡಿಗಳು ಪಿಲಾತನದ್ದಾಗಿದ್ದವು. ಯೋಹಾನ 18:39—19:5; ಮತ್ತಾಯ 27:15-17, 20-30; ಮಾರ್ಕ 15:6-19; ಲೂಕ 23:18-25.
▪ ಯೇಸುವನ್ನು ಬಿಡಿಸಲು ಪಿಲಾತನು ಯಾವ ರೀತಿಯಲ್ಲಿ ಪ್ರಯತ್ನಿಸಿದನು?
▪ ಜವಾಬ್ದಾರಿಕೆಯಿಂದ ತಪ್ಪಿಸಿಕೊಳ್ಳಲು ಪಿಲಾತನು ಹೇಗೆ ಪ್ರಯತ್ನಿಸಿದನು?
▪ ಕೊರಡೆಗಳ ಹೊಡೆತಗಳಲ್ಲಿ ಏನು ಒಳಗೂಡಿದೆ?
▪ ಕೊರಡೆಗಳಿಂದ ಹೊಡೆಯಲ್ಪಟ್ಟ ನಂತರ, ಯೇಸುವನ್ನು ಹೇಗೆ ಅವಮಾನಿಸಲಾಯಿತು?
▪ ಯೇಸುವನ್ನು ಬಿಡಿಸಲು ಯಾವ ಹೆಚ್ಚಿನ ಪ್ರಯತ್ನವನ್ನು ಪಿಲಾತನು ಮಾಡಿದನು?