ಯೆಹೋವನ ಹುರಿಪಿನ ಸಾಕ್ಷಿಗಳು ಪಥಚಲನೆಯಲ್ಲಿ!
ಯೆಹೋವನ ಮೊದಲನೆ ಶತಮಾನದ ಸಾಕ್ಷಿಗಳು ಧೈರ್ಯ ಹಾಗೂ ಹುರುಪಿನ ಕ್ರಿಯಾಶೀಲ ಜನರಾಗಿದ್ದರು. ಯೇಸುವಿನ ನಿಯೋಗವನ್ನು ಅವರು ಉತ್ಸುಕತೆಯಿಂದ ಮುಂದುವರಿಸಿದರು: “ಹೋಗಿ. . . . ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.”—ಮತ್ತಾಯ 28:19,20.
ಆದರೆ ಕ್ರಿಸ್ತನ ಆರಂಭದ ಹಿಂಬಾಲಕರು ಆ ನಿಯೋಗವನ್ನು ಗಂಭೀರವಾಗಿ ತಕ್ಕೊಂಡರೆಂದು ನಮಗೆ ಹೇಗೆ ತಿಳಿದಿದೆ? ಯಾಕೆ, ಅಪೋಸ್ತಲರ ಕೃತ್ಯಗಳೆಂಬ ಬೈಬಲ್ ಪುಸ್ತಕವು ನಿಜವಾಗಿಯೂ ಪಥಚಲನೆಯಲ್ಲಿರುವ ಯೆಹೋವನ ಹುರುಪಿನ ಸಾಕ್ಷಿಗಳಿದ್ದಾರೆಂದು ರುಜುಪಡಿಸುತ್ತದೆ.
ಪ್ರಯೋಜನಗಳು ಮತ್ತು ಇತರ ಲಕ್ಷಣಗಳು
ಮೂರನೆಯ ಸುವಾರ್ತೆ ಮತ್ತು ಅಪೋಸ್ತಲರ ಕೃತ್ಯಗಳ ಪುಸ್ತಕದ ನಡುವಿನ ಭಾಷೆ ಮತ್ತು ಶೈಲಿಯ ಸರಿಹೋಲಿಕೆಗಳು ಒಬ್ಬನೇ ಲೇಖಕನನ್ನು ಸೂಚಿಸುತ್ತವೆ. ಅವನಾರೆಂದರೆ “ಪ್ರಿಯ ವೈದ್ಯ”ನಾದ —ಲೂಕನು. (ಕೊಲೊಸ್ಸೆ 4:14) ಅಪೋಸ್ತಲರ ಕೃತ್ಯಗಳಲ್ಲಿ ಉಳಿಸಲ್ಪಟ್ಟಿರುವ ಅಸದೃಶ ಲಕ್ಷಣಗಳಲ್ಲಿ ಪ್ರಾರ್ಥನೆ ಮತ್ತು ಸಂಭಾಷಣೆಗಳು ಕೂಡಿವೆ. ಪುಸ್ತಕದ ಸುಮಾರು 20 ಸೇಕಡಾ ವಿಷಯವು, ನಿಜನಂಬಿಕೆಯ ಸಮರ್ಥನೆಯಲ್ಲಿ ಪೇತ್ರ ಮತ್ತು ಪೌಲರು ಕೊಟ್ಟಂತಹ ಭಾಷಣಗಳಾಗಿವೆ.
ಸಾ.ಶ. 61 ರ ಸುಮಾರಿಗೆ ಅ. ಕೃತ್ಯಗಳು ರೋಮಿನಲ್ಲಿ ಬರೆಯಲ್ಪಟ್ಟವು. ಆದುದರಿಂದ ಕೈಸರನ ಮುಂದೆ ಪೌಲನ ತೋರಿಕೆ ಯಾ ಸಾ.ಶ. 64 ರ ಸುಮಾರಿಗೆ ಕ್ರೈಸ್ತರ ವಿರುದ್ಧವಾಗಿ ನೀರೋ ಗೈದ ಹಿಂಸೆಯ ಉಲ್ಲೀಖವಿಲ್ಲದಿರಲು ಕಾರಣವೆಂದು ವಿಧಿತವಾಗುತ್ತದೆ.—2 ತಿಮೋಥಿ 4:11.
ಲೂಕನ ಸುವಾರ್ತೆಯಂತೆಯೇ, ಅ. ಕೃತ್ಯಗಳು ಥಿಯೋಫಿಲನಿಗೆ ಸಂಭೋದಿಸಲ್ಪಟ್ಟಿವೆ. ನಂಬಿಕೆಯನ್ನು ಪ್ರೋತ್ಸಾಹಿಸಲು ಮತ್ತು ಕ್ರೈಸ್ತತೇವದ ಹಬ್ಬುವಿಕೆಯನ್ನು ವರದಿಸಲು ಅದು ಬರೆಯಲ್ಪಟ್ಟಿತ್ತು. (ಲೂಕ 1:1-4; ಅ. ಕೃತ್ಯಗಳು 1:1,2) ಯೆಹೋವನ ಹಸ್ತವು ಆತನ ನಿಷ್ಟೆಯ ಸೇವಕರ ಮೇಲಿತ್ತು ಎಂದು ಪುಸ್ತಕವು ರುಜುಪಡಿಸುತ್ತದೆ. ಆತನ ಆತ್ಮದ ಶಕ್ತಿಯ ಪ್ರಜ್ನೆಯನ್ನು ನಮ್ಮಲ್ಲುಂಟುಮಾಡಿ, ದೇವಪ್ರೇರಿತ ಪ್ರವಾದನೆಗಳಲ್ಲಿ ನಮ್ಮ ಭರವಸವನ್ನು ಅದು ದೃಢಪಡಿಸುತ್ತದೆ. ಹಿಂಸೆಯನ್ನು ತಾಳಿಕೊಳ್ಳಲು ಅಪೋಸ್ತಲರ ಕೃತ್ಯಗಳು ನಮಗೆ ನೆರವಾಗುತ್ತದೆ, ಯೆಹೋವನ ಸ್ವತ್ಯಾಗದ ಸಾಕ್ಷಿಗಳಾಗಿರುವಂತೆ ನಡಿಸುತ್ತದೆ ಮತ್ತು ರಾಜ್ಯದ ನಿರೀಕ್ಷೆಯಲ್ಲಿ ನಮ್ಮ ನಂಬಿಕೆಯನ್ನು ಕಟ್ಟುತ್ತದೆ.
ಐತಿಹಾಸಿಕ ನಿಖರತೆ
ಪೌಲನ ಸಂಗಾತಿಯೋಪಾದಿ ಲೂಕನು ಇವರ ಸಂಚಾರಗಳನ್ನು ದಾಖಲಿಸಿದನು. ಅವನು ಕಣ್ಣಾರೆ ಸಾಕ್ಷಿಗಳ ಕೂಡಾ ಮಾತಾಡಿದ್ದನು. ಐತಿಹಾಸಿಕ ನಿಖರತೆಯ ಬಗ್ಗೆ ಈ ಮೇಲಿನ ವಾಸ್ತವಾಂಶಗಳಿಂದಲೂ ಅವನ ಸಮಗ್ರ ಶೋಧನೆಯ ಕಾರಣದಿಂದಲೂ ಅವನ ಈ ಬರವಣಿಗೆಯನ್ನು ಒಂದು ನಾಯಕಕೃತಿಯಾಗಿ ಮಾಡಿದೆ.
ಆದುದರಿಂದಲೇ ವಿದ್ವಾಂಸ ವಿಲ್ಯಂ ರಾಮ್ಸೇ ಹೀಗೆ ಹೇಳಶಕ್ತನಾದನು: “ಲೂಕನು ಮೊದಲ ದರ್ಜೆಯ ಇತಿಹಾಸಜ್ಜನು. ವಾಸ್ತವಾಂಶಗಳ ಅವನ ಹೇಳಿಕೆಗಳು ಕೇವಲ ನಂಬಲರ್ಹವಾದವುಗಳು ಮಾತ್ರವಲ್ಲ ಅವನು ನಿಜ ಇತಿಹಾಸ ಪರಿಜ್ಞಾನವಿದ್ದವನಾಗಿದ್ದನು. . . . ಈ ಗ್ರಂಥಕರ್ತನನ್ನು ಇತಿಹಾಸಗಾರರಲ್ಲಿ ಅತಿ ಶ್ರೇಷ್ಟರೊಳಗೆ ಪರಿಗಣಿಸತಕ್ಕದ್ದು.”
ಪೇತ್ರ—ಒಬ್ಬ ನಂಬಿಗಸ್ತ ಸಾಕ್ಷಿ
ಸುವಾರ್ತೆಯನ್ನು ಸಾರುವ ದೇವದತ್ತ ಕೆಲಸವನ್ನು ಯೆಹೋವನ ಪವಿತ್ರಾತ್ಮ ಶಕ್ತಿಯಲ್ಲಿ ಮಾತ್ರ ಪೂರೈಸಲು ಸಾಧ್ಯವಿತ್ತು. ಈ ರೀತಿ ಯೇಸುವಿನ ಹಿಂಬಾಲಕರು ಪವಿತ್ರಾತ್ಮವನ್ನು ಪಡೆದಾಗ ಅವರು ಯೆರೂಸಲೇಮ್, ಯೂದಾಯ ಮತ್ತು ಸಮಾರ್ಯ ಹಾಗೂ “ಭೂಲೋಕದ ಕಟ್ಟಕಡೆಯ ವರೆಗೂ” ಸಾಕ್ಷಿಗಳಾಗಲಿಕ್ಕಿದ್ದರು. ಸಾ.ಶ. 33 ರ ಪಂಚಾಶತ್ತಮದಲ್ಲಿ ಅವರು ಪವಿತ್ರಾತ್ಮದಿಂದ ತುಂಬಿಸಲ್ಪಟ್ಟರು. ಅದು ಕೇವಲ ಬೆಳಗ್ಗಿನ 9 ಗಂಟೆಯಾಗಿದ್ದರಿಂದ, ಖಂಡಿತವಾಗಿಯೂ ಕೆಲವರೆಣಿಸಿದ್ದಂತೆ ಅವರು ಕುಡಿದು ಅಮಲೇರಿದವರಾಗಿರಲಿಲ್ಲ. ಪೇತ್ರನು ರೋಮಾಂಚಕಾರಿ ಸಾಕ್ಷಿಯೊಂದನ್ನು ಅಲ್ಲಿ ನೀಡುತ್ತಾನೆ ಮತ್ತು 3000 ಮಂದಿ ದೀಕ್ಷಾಸ್ನಾನ ಹೊಂದುತ್ತಾರೆ. ರಾಜ್ಯ ಘೋಷಕರನ್ನು ಸ್ತಬ್ಧಗೊಳಿಸಲು ಧಾರ್ಮಿಕ ವಿರೋಧಿಗಳು ಪ್ರಯತ್ನಿಸುತ್ತಾರೆ, ಆದರ ಪ್ರಾರ್ಥನೆಗೆ ಉತ್ತರವಾಗಿ ತನ್ನ ಸಾಕ್ಷಿಗಳು ಆತನ ವಾಕ್ಯವನ್ನು ಧೈರ್ಯದಿಂದ ಸಾರುವಂತೆ ದೇವರು ಸಾಧ್ಯಮಾಡಿದನು. ಪುನಃ ಬೆದರಿಕೆ ಹಾಕಿದಾಗ ಅವರಂದದ್ದು: “ಮನುಷ್ಯರಿಗಿಂತಲೂ ಹೆಚ್ಚಾಗಿ ನಾವು ದೇವರಿಗೆ ವಿಧೇಯರಾಗಿರಬೇಕಲ್ಲಾ.” ಮನೆಯಿಂದ ಮನೆಗೆ ಸಾರುವುದನ್ನು ಅವರು ಮುಂದರಿಸಿದ್ದಷ್ಟಕ್ಕೆ ಕೆಲಸವು ಮುಂದರಿಯುತ್ತದೆ.—1:1-5:42.
ಯೆಹೋವನಾತ್ಮದ ಮೇಲೆ ಆಧರಿಸುವಿಕೆಯು ಅವನ ಸಾಕ್ಷಿಗಳು ಹಿಂಸೆಯನ್ನು ತಾಳಿಕೊಳ್ಳುವಂತೆ ಸಾಧ್ಯಮಾಡಿತು. ಆದಕಾರಣ, ನಂಬಿಗಸ್ತ ಸಾಕ್ಷಿ ಸ್ತೆಫನನು ಕಲ್ಲಿಸೆತದಿಂದ ಹತಿಸಲ್ಪಟ್ಟ ನಂತರ, ಯೇಸುವಿನ ಹಿಂಬಾಲಕರು ಚದರಿಸಲ್ಪಟ್ಟರು. ಆದರೆ ಇದು ವಾಕ್ಯವನ್ನು ಹಬ್ಬಿಸಿತು. ಸುವಾರ್ತಿಕನಾದ ಫಿಲಿಪ್ಪನು ಸಮಾರ್ಯದಲ್ಲಿ ಪಯನೀಯರ ಸೇವೆ ಮಾಡುತ್ತಾನೆ. ಆಶ್ಚರ್ಯಕರವಾಗಿಯೇ, ಉಗ್ರ ಹಿಂಸಕನಾದ ತಾಸ್ರದ ಸೌಲನು ಪರಿವರ್ತನೆ ಹೊಂದಿದನು. ಅಪೋಸ್ತಲ ಪೌಲನೋಪಾದಿ, ಅವನು ದಮಾಸ್ಕದಲ್ಲಿ ಹಿಂಸೆಯ ತಾಪವನ್ನು ಅನುಭವಿಸುತ್ತಿದ್ದಂತೆಯೇ ಯೆಹೂದ್ಯರ ಕೊಲೆ ಹಂಚಿಕೆಯನ್ನು ಪಾರಾಗುತ್ತಾನೆ. ಯೆರೂಸಲೇಮಿನ ಅಪೋಸ್ತಲರೊಂದಿಗೆ ಕೊಂಚವಾಗಿ ಸಹವಸಿಸಿದನಂತರ ತನ್ನ ಶುಶ್ರೂಷೆಯನ್ನು ಮುಂದರಿಸುತ್ತಾನೆ.—6:1-9:31.
ಯೆಹೋವನ ಹಸ್ತವು ಅವನ ಸಾಕ್ಷಿಗಳೊಂದಿಗಿತ್ತೆಂಬದನ್ನು ಅಪೋಸ್ತಲರ ಕೃತ್ಯವು ತೋರಿಸುತ್ತಾ ಹೋಗಿದೆ. ಪೇತ್ರನು ಸತ್ತ ದೊರ್ಕಳನ್ನು (ತಬೀಥಾ) ಎಬ್ಬಿಸುತ್ತಾನೆ. ಕರೆಗೆ ಓಗೊಟ್ಟು ಕೈಸರೇಯದಲ್ಲಿ ಕೊರ್ನೇಲ್ಯನಿಗೆ, ಅವನ ಮನೆಯವರಿಗೆ ಮತ್ತು ಮಿತ್ರರಿಗೆ ಅವನು ಸುವಾರ್ತೆಯನ್ನು ಸಾರುತ್ತಾನೆ. ಅನ್ಯರಿಂದ ಯೇಸುವಿನ ಶಿಷ್ಯರಾಗಿ ಅವರು ಮೊತ್ತಮೊದಲಾಗಿ ದೀಕ್ಷಾಸ್ನಾನ ಪಡೆಯುತ್ತಾರೆ. ಈ ರೀತಿ “ಎಪ್ಪತ್ತು ವಾರಗಳು” ಅಂತ್ಯಗೊಂಡು, ನಮ್ಮನ್ನು ಸಾ.ಶ. 36ಕ್ಕೆ ತಲುಪಿಸುತ್ತದೆ. (ದಾನಿಯೇಲ 9:24) ಇದಾದ ಸ್ವಲ್ಪ ಸಮಯದಲ್ಲಿ 1ನೇ ಹೆರೋದ ಅಗ್ರಿಪ್ಪನು ಅಪೋಸ್ತಲ ಯಾಕೋಬನನ್ನು ಹತಿಸುತ್ತಾನೆ ಮತ್ತು ಪೇತ್ರನನ್ನು ಕೈದು ಮಾಡುತ್ತಾನೆ. ಆದರೆ ಅಪೋಸ್ತಲನು ಸೆರೆಮನೆಯಿಂದ ದೇವದೂತನಿಂದ ಬಿಡಿಸಲ್ಪಡುತ್ತಾನೆ ಮತ್ತು ‘ಯೆಹೋವನ ವಾಕ್ಯ ಹಬ್ಬಿ ಹೆಚ್ಚುತ್ತಾ ಬಂತು.”—9:32-12:25.
ಪೌಲನ ಮೂರು ಮಿಶೆನರಿ ಸಂಚಾರಗಳು
ಪೌಲನಂತೆ ದೇವರ ಸೇವೆಯಲ್ಲಿ ತಮ್ಮನ್ನು ವಿನಿಯೋಗಿಸುವರಿಗೆ ಆಶೀರ್ವಾದಗಳು ಹರಿಯುತ್ತವೆ. ಅವನ ಮೊದಲ ಮಿಶೆನರಿ ಸಂಚಾರವು ಸಿರಿಯದ ಅಂತಿಯೋಕ್ಯದಿಂದ ಆರಂಭಗೊಳ್ಳುತ್ತದೆ. ಕುಪ್ರ ದ್ವೀಪದಲ್ಲಿ ಪ್ರಾಂತಾಧಿಕಾರಿ ಸೆರ್ಗ್ಯ ಪೌಲನೆಂಬವನೂ ಇನ್ನಿತರ ಅನೇಕರೂ ವಿಶ್ವಾಸಿಗಳಾದರು. ಪಂಪುಲ್ಯದ ಪೆರ್ಗದಲ್ಲಿ ಯೋಹಾನಮಾರ್ಕನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹೋಗುತ್ತಾನೆ, ಆದರೆ ಪೌಲ, ಬಾರ್ನಬರು ಪಿಸಿದ್ಯದ ಅಂತಿಯೋಕಕ್ಕೆ ಬರುತ್ತಾರೆ. ಲುಸ್ತ್ರದಲ್ಲಿ ಯೆಹೂದ್ಯರು ಹಿಂಸೆಯೆಬ್ಬಿಸುತ್ತಾರೆ. ಹೊಡೆಯಲ್ಪಟ್ಟು, ಸತ್ತಿದ್ದಾನೆಂದು ಬಿಟ್ಟುಹೊದರೂ, ಪೌಲನು ಪುನಃ ಚೇತರಿಸಿ ತನ್ನ ಶುಶ್ರೂಷೆಯನ್ನು ಮುಂದುವರಿಸುತ್ತಾನೆ. ಕೊನೆಗೆ ಅವನೂ ಬಾರ್ನಬನೂ ಸಿರಿಯದ ಅಂತಿಯೋಕಕ್ಕೆ ಹಿಂತಿರುಗಿ ಹೀಗೆ ಮೊದಲ ಸಂಚಾರವನ್ನು ಮುಗಿಸುತ್ತಾರೆ.—13:1-14:28.
ಮೊದಲ ಶತಕದ ಪಡಿರೂಪದಂತೆ, ಇಂದಿನ ಆಡಳಿತ ಮಂಡಲಿಯು ಪ್ರಶ್ನೆಗಳನ್ನು ಪವಿತ್ರಾತ್ಮದ ಮಾರ್ಗದರ್ಶನೆಯಲ್ಲಿ ಪರಿಹರಿಸುತ್ತದೆ. “ಅವಶ್ಯಕ ಸಂಗತಿಗಳಾದ” “ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದನ್ನೂ ಹಾದರವನ್ನೂ ವಿಸರ್ಜಿಸು” ವುದರಲ್ಲಿ ಸುನ್ನತಿಯು ಸೇರಿರಲಿಲ್ಲ. (15:28,29) ಪೌಲ ಬಾರ್ನಬರು ಎರಡನೆಯ ಪ್ರಯಾಣವನ್ನು ಆರಂಭಿಸಿದಾಗ ತಿಮೋಥಿಯು ಸೇರಿರುತ್ತಾನೆ. ಮಕೆದೋನ್ಯಕ್ಕೆ ಬರಬೇಕೆಂದು ಕರೆಗೆ ತಕ್ಷಣ ಕ್ರಿಯೆಗೈದರು. ಪಿಲಿಪ್ಪಿಯಲ್ಲಿ ಸಾಕ್ಷಿಯ ಫಲಿತಾಂಶವಾಗಿ ದೊಂಬಿ ಮತ್ತು ಸೆರೆವಾಸ ಬರುತ್ತದೆ. ಆದರೆ ಪೌಲ, ಬಾರ್ನಬರು ಒಂದು ಭೂಕಂಪದಿಂದಾಗಿ ಬಿಡುಗಡೆ ಹೊಂದುತ್ತಾರೆ ಮತ್ತು ಸೆರೆಯ ಯಜಮಾನನಿಗೂ ಅವನ ಮನೆಯವರಿಗೂ ಸಾರಿದರಿಂದ ಅವರೂ ವಿಶ್ವಾಸಿಗಳಾಗುತ್ತಾರೆ.—15:1-16:40.
ಯೆಹೋವನ ಸೇವಕರು ಆತನ ವಾಕ್ಯದ ಶ್ರದ್ಧೆಯ ವಿದ್ಯಾರ್ಥಿಗಳಾಗತಕ್ಕದ್ದು. ಶಾಸ್ತ್ರಗ್ರಂಥಗಳನ್ನು ಶೋಧಿಸಿದ ಬೆರೋಯದವರೂ ಪೌಲನೂ ಹಾಗಿದ್ದರು. ಅಥೇನೆಯ ಅರಿಯೊಪಾಗದಲ್ಲಿ ಅವನು ಯೆಹೊವನ ಸೃಷ್ಟಿತ್ವದ ಕುರಿತು ಕೊಟ್ಟ ಸಾಕ್ಷಿಯ ಫಲವಾಗಿ ಕೆಲವರು ವಿಶ್ವಾಸಿಗಳಾಗುತ್ತಾರೆ. ಕೊರಿಂಥದಲ್ಲಿ ಎಷ್ಟೊಂದು ಆಸಕ್ತಿ ತೋರಿಸಲ್ಪಟ್ಟಿತ್ತೆಂದರೆ, ಅವನಲ್ಲಿ 18 ತಿಂಗಳು ತಂಗಿದನು. ಅಲ್ಲಿರುವಾಗ ಥೆಸಲೋನಿಕದವರಿಗೆ ತನ್ನ ಮೊದಲನೆ ಮತ್ತು ಎರಡನೆ ಪತ್ರವನ್ನು ಬರೆಯುತ್ತಾನೆ. ಸೀಲ ಮತ್ತು ತಿಮೋಥಿಯನ್ನು ಬಿಟ್ಟು, ಅಪೋಸ್ತಲನು ಎಫೆಸಕ್ಕೆ ಪ್ರಯಾಣಮಾಡಿ, ಕೈಸರೆಯದಲ್ಲಿ ಇಳಿದು ಯೆರೂಸಲೇಮಿಗೆ ಪ್ರಯಾಣಿಸುತ್ತಾನೆ. ಅವನು ಸಿರಿಯದ ಅಂತಿಯೋಕ್ಯಕ್ಕೆ ಹಿಂತೆರಳಿದಾಗ, ಅವನ ಎರಡನೆ ಮಿಶೆನರಿ ಸಂಚಾರ ಕೊನೆಗೊಳ್ಳುತ್ತದೆ.—17:1-18:22.
ಪೌಲನು ತೋರಿಸಿದ ಪ್ರಕಾರ, ಮನೆಮನೆಯ ಸಾಕ್ಷಿಯು ಕ್ರೈಸ್ತ ಶುಶ್ರೂಷೆಯ ಒಂದು ಪ್ರಮುಖ ಭಾಗವು. ಅಪೋಸ್ತಲನ ಮೂರನೆಯ ಪ್ರಯಾಣ (ಸಾ.ಶ. 52-56) ಹೆಚ್ಚಾಗಿ ಎರಡನೆಯ ಸಂಚಾರಕ್ಕನುಸಾರವಾಗಿಯೇ ಇತ್ತು. ಪೌಲನ ಶುಶ್ರೂಷೆಯು ಎಫೆಸದಲ್ಲಿ ವಿರೋಧವನ್ನು ಎಬ್ಬಿಸುತ್ತದೆ. ಅಲ್ಲಿಂದ ಕೊರಿಂಥದವರಿಗೆ ತನ್ನ ಮೊದಲ ಪತ್ರವನ್ನು ಪೌಲನು ಬರೆದನು. ಎರಡನೆಯ ಪತ್ರವನ್ನು ಕೊರಿಂಥದವರಿಗೆ ಮಕೆದೋನ್ಯದಿಂದ ಬರೆದನು. ಮಿಲೇತದಲ್ಲಿ ಪೌಲನು ಎಫೆಸದ ಹಿರಿಯರನ್ನು ಭೇಟಿಯಾಗಿ ಅವರಿಗೆ ಬಹಿರಂಗವಾಗಿಯೂ ಮನೆಮನೆಯಲ್ಲಿಯೂ ಹೇಗೆ ಕಲಿಸಿದ್ದನು ಎಂದು ಹೇಳುತ್ತಾನೆ. ಅವನ ಮೂರನೆಯ ಪ್ರಯಾಣವು ಯೆರೂಸಲೇಮಿಗೆ ಹಿಂತಿರುಗಿ ಬಂದಾಗ ಕೊನೆಗೊಂಡಿತು.—18:23-21:14.
ಹಿಂಸೆಗೆ ಪರಿಣಾಮಕಾರಿಯಾಗಲಿಲ್ಲ
ಯೆಹೋವನ ನಂಬಿಗಸ್ತ ಸಾಕ್ಷಿಗಳ ತುಟಿಗಳನ್ನು ಹಿಂಸೆಯು ಮುದ್ರೆಹಾಕಿ ಮುಚ್ಚಲಿಲ್ಲ. ಯೆರೂಸಲೇಮಿನ ದೇವಾಲಯದಲ್ಲಿ ಪೌಲನ ವಿರುದ್ಧವಾದ ಗುಂಪು ದೊಂಬಿಯು ಸ್ಫೋಟಿಸಿದಾಗ ಅವನು ಕೆಂಡಕಾರುವ ದೊಂಬಿಗಾರರಿಗೆ ಧೈರ್ಯದಿಂದ ಸಾಕ್ಷಿ ನೀಡುತ್ತಾನೆ. ಮಿಲಿಟರಿ ಕಾವಲಿನಲ್ಲಿ ಕೈಸರೆಯದಲ್ಲಿದ್ದ ದೇಶಾಧಿಪತಿ ಫಿಲಿಕ್ಸನ ಬಳಿಗೆ ಕಳುಹಿಸಲ್ಪಟ್ಟಾಗ ಅವನನ್ನು ಕೊಲೆಗೈಯುವ ಹಂಚಿಕೆಯೊಂದು ನಿಷ್ಫಲಗೊಂಡಿತು. ಲಂಚ ಬರಬಹುದೆಂದೆಣಿಸಿ ಫಿಲಿಕ್ಸನು ಎರಡು ವರ್ಷಗಳ ತನಕ ಪೌಲನನ್ನು ಬಂಧನದಲ್ಲಿರಿಸಿದರೂ ಅದು ಬರಲೇ ಇಲ್ಲ. ಅವನ ಉತ್ತರಾಧಿಕಾರಿ ಫೆಸ್ತನು ಪೌಲನು ಕೈಸರನಿಗೆ ಮಾಡಿದ ಮನವಿಯನ್ನು ಕೇಳುತ್ತಾನೆ. ಅದಾಗ್ಯೂ ರೋಮಿಗೆ ತೆರಳುವ ಮುಂಚಿತವಾಗಿ ಅರಸ ಅಗ್ರಿಪ್ಪನ ಮುಂದೆ ಅಪೋಸ್ತಲನು ಒಂದು ಮನಕೆದುಕುವ ಪ್ರತಿವಾದವನ್ನು ಮಾಡುತ್ತಾನೆ.—21:15-26:32.
ವಿಚಾರಣೆಗಳಿಂದ ಭಯಬೀತರಾಗದೆ ಯೆಹೋವನ ಸೇವಕರು ಸಾರುವುದನ್ನು ಮುಂದುವರಿಸುತ್ತಾ ಇರುತ್ತಾರೆ. ಇದು ಪೌಲನ ವಿಷಯದಲ್ಲಿಯೂ ಸತ್ಯ. ಕೈಸರನಿಗೆ ಅವನು ಮಾಡಿದ ಮನವಿಯ ಕಾರಣ, ಅಪೋಸ್ತಲನು ಸಾ.ಶ. 58 ರಲ್ಲಿ ಲೂಕನೊಂದಿಗೆ ರೋಮಿಗೆ ಹೊರಡುತ್ತಾನೆ. ಲುಕೀಯದ ಮೈರಾದಲ್ಲಿ ಇನ್ನೊಂದು ಹಡಗಿಗೆ ಅವರು ಹೋಗುತ್ತಾರೆ. ಹಡಗು ಒಡೆಯಲ್ಪಟ್ಟು ಅವರು ಮಾಲ್ಟಾ ದ್ವೀಪಕ್ಕೆ ಬಂದರೂ ಇನ್ನೊಂದು ಹಡಗದಲ್ಲಿ ಅವರನ್ನು ಇಟೆಲಿಗೆ ಒಯ್ಯಲಾಗುತ್ತದೆ. ರೋಮಿನಲ್ಲಿ ಮಿಲಿಟರಿ ಕಾವಲಲ್ಲಿರುವಾಗಲೂ ಪೌಲನು ಜನರನ್ನು ಕರೆದು ಅವರಿಗೆ ಶುಭ ವಾರ್ತೆಯನ್ನು ಸಾರುತ್ತಿದ್ದನು. ಈ ಸೆರೆಯಲ್ಲಿರುವಾಗ ಅವನು ಎಫೆಸದವರಿಗೆ, ಪಿಲಿಪ್ಪಿಯವರಿಗೆ, ಕೊಲೊಸ್ಸೆಯವರಿಗೆ, ಫಿಲೆಮೋನನಿಗೆ ಮತ್ತು ಇಬ್ರಿಯರಿಗೆ ಪತ್ರಿಕೆಗಳನ್ನು ಬರೆದನು.—27:1-28:31.
ಎಂದೆಂದಿಗೂ ಪಥಚಲನೆಯಲ್ಲಿ
ದೇವರ ಪುತ್ರನಿಂದ ಆರಂಭಿಸಲ್ಪಟ್ಟ ಕೆಲಸವು ಮೊದಲನೆ ಶತಮಾನದ ಯೆಹೋವನ ಸಾಕ್ಷಿಗಳಿಂದ ನಂಬಿಕೆಯಲ್ಲಿ ಮುಂದುವರಿದಿತ್ತೆಂದು ಅಪೋಸ್ತಲರ ಕೃತ್ಯಗಳು ಪುಸ್ತಕವು ಸಾಬೀತು ಪಡಿಸುತ್ತದೆ. ಹೌದು, ದೇವರ ಪವಿತ್ರ ಆತ್ಮದ ಶಕ್ತಿಯ ಕೆಳಗೆ ಅವರು ಹುರುಪಿನಿಂದ ಸಾಕ್ಷಿ ನೀಡಿದರು.
ದೇವರ ಮೇಲೆ ಪ್ರಾರ್ಥನಾಪೂರ್ವಕವಾಗಿ ಯೇಸುವಿನ ಹಿಂಬಾಲಕರು ಆತುಕೊಂಡಿದ್ದ ಕಾರಣ, ಆತನ ಹಸ್ತವು ಅವರೊಂದಿಗಿತ್ತು. ಸಾವಿರಾರು ಮಂದಿ ವಿಶ್ವಾಸಿಗಳಾದರು ಮತ್ತು ‘ಆಕಾಶದ ಕೆಳಗಿನ ಸರ್ವ ಸೃಷ್ಟಿಗೆ ಸುವಾರ್ತೆಯು ಸಾರಲ್ಪಟ್ಟಿತು.’ (ಕೊಲೊಸ್ಸೆ 1:23) ಅಂದು ಮತ್ತು ಇಂದು ನಿಜವಾಗಿಯೂ. ಸತ್ಯ ಕ್ರೈಸ್ತರು ಮುಂದೊತ್ತುವ ಯೆಹೋವನ ಹುರುಪಿನ ಸಾಕ್ಷಿಗಳೆಂದು ರುಜುಪಡಿಸಿದ್ದಾರೆ! (w90 5/15)
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ಶತಾಧಿಪತಿಯಾದ ಕೊರ್ನೇಲ್ಯನು: ಕೊರ್ನೇಲ್ಯನು ಒಬ್ಬ ಸೇನಾಧಿಕಾರಿ ಯಾ ಶತಾಧಿಪತಿಯಾಗಿದ್ದನು. (10:1) ಒಬ್ಬ ಶತಾಧಿಪತಿಯ ಸಂಬಳವು ಕಾಲಾಳಿಗಿಂತ ಐದು ಪಟ್ಟು ಹೆಚ್ಚು ಯಾ 1200 ದೀನಾರುಗಳಾಗಿರಬಹುದು, ಅದಕ್ಕಿಂತ ಬಹಳ ಹೆಚ್ಚಿರಲೂ ಶಕ್ಯ. ನಿವೃತ್ತಿ ಪಡೆದ ಮೇಲೆ ಅವನಿಗೆ ಹಣ ಯಾ ಸ್ಥಳದ ರೀತಿಯಲ್ಲಿ ಸಹಾಯ ದೊರೆಯುತ್ತಿತ್ತು. ಅವನ ಸೇನಾ ಪೋಷಾಕು ವರ್ಣರಂಜಿತವಾಗಿತ್ತು. ಬೆಳ್ಳಿಯ ಶಿರಸ್ತ್ರಾಣದಿಂದ ಗಿಡ್ಡುಲಂಗದ ನಿರಿಗೂಡಿಸಿ ಕಟ್ಟಿದ ಉಡುಪು, ಒಂದು ಶ್ರೇಷ್ಟ ಉಣ್ಣೆಯ ಮೇಲಂಗಿ ಮತ್ತು ಅಲಂಕೃತ ಜಂಘಾಕವಚ ಸೇರಿತ್ತು. ನಿಯಮಕ್ಕನುಸಾರ ಶತಾಧಿಪತಿಯ ದಂಡಿನಲ್ಲಿ 100 ಪುರುಷರಿರಬೇಕಾದರೂ, ಕೆಲವೊಮ್ಮೆ 80 ರಷ್ಟು ಮಾತ್ರವೇ ಇರುತ್ತಿದ್ದರು. “ಇತಾಲ್ಯದ ಪಟಲಾಮಿಗೆ” ಅಭ್ಯರ್ಥಿಗಳು ರೋಮೀಯ ನಾಗರಿಕರಿಂದ ಮತ್ತು ಇಟೆಲಿಯ ಸ್ವತಂತ್ರ ಪುರುಷರಿಂದ ಬಂದಿರಬೇಕು.
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ಮನೇಮಾಳಿಗೆಯ ಮೇಲೆ ಪ್ರಾರ್ಥನೆ: ಮನೆ ಮಾಳಿಗೆಯ ಮೇಲೆ ಪೇತ್ರನು ಪ್ರಾರ್ಥಿಸಿದ್ದು ಢಾಂಬಿಕ ಪ್ರದರ್ಶನೆಯಾಗಿರಲಿಲ್ಲ. (10:9) ಸಮತಟ್ಟಾದ ಮಾಡಿನ ಸುತ್ತಲೂ ಇರುವ ಪಾಗಾರವು ಇನ್ನಿತರರ ನೋಟದಿಂದ ಅವನನ್ನು ಅಡಗಿಸಿದ್ದಿರಬೇಕು. (ಧರ್ಮೋಪದೇಶಕಾಂಡ 22:8) ಮನೇ ಮಾಳಿಗೆಯು ಆರಮಿಸಲು ಹಾಗೂ ಸಾಯಂಕಾಲದ ರಸ್ತೆಯ ಸದ್ದಿನಿಂದ ದೂರವಿರಬಹುದಾದ ಸ್ಥಳವಾಗಿತ್ತು.
[ಪುಟ 30 ರಲ್ಲಿರುವ ಚೌಕ]
ಮನುಷ್ಯರೂಪದ ದೇವತೆಗಳೆಂಬ ಭಾವನೆ: ಕುಂಟನೊಬ್ಬನನ್ನು ಪೌಲನು ಗುಣಪಡಿಸಿದಾಗ ಲುಸ್ತ್ರದ ಜನರು ಅವರನ್ನು ಮನುಷ್ಯರೂಪದಲ್ಲಿ ಬಂದ ದೇವತೆಗಳೆಂದು ಭಾವಿಸಿದರು. (14:8-18) ಗ್ರೀಕ್ ಮುಖ್ಯ ದೇವತೆ ದ್ಯೌಸನಿಗೆ ಆ ನಗರದಲ್ಲಿ ಒಂದು ದೇವಾಲಯವಿತ್ತು ಮತ್ತು ಅವನ ಮಗ ಹೆರ್ಮಿಸನು ದೇವತೆಗಳ ಸಂದೇಶವಾಹಕನಾಗಿದ್ದು ಮಾತಾಡುವುದರಲ್ಲಿ ಹೆಸರುವಾಸಿಯಾಗಿದ್ದನು. ಮಾತಾಡುವುದರಲ್ಲಿ ಪೌಲನು ಮುಖ್ಯ ಪಾತ್ರ ವಹಿಸಿದ್ದರಿಂದ ಪೌಲನನ್ನು ಹೆರ್ಮಿಸ್ ಎಂದೂ, ಬಾರ್ನಬನು ದ್ಯೌಸನೆಂದೂ ಜನರು ಎಣಿಸಿದರು. ಸುಳ್ಳು ದೇವತಾ ವಿಗ್ರಹಗಳಿಗೆ ಹೂವಿನ ಯಾ ಸೈಪ್ರಸ್ ಯಾ ಪೀತದಾರು ಮರದ ಎಲೆಗಳ ಕಿರೀಟ ಯಾ ಹಾರಗಳನ್ನು ಧರಿಸುವುದು ವಾಡಿಕೆಯಾಗಿತ್ತು. ಆದರೆ ಇಂತಹ ವಿಗ್ರಹಾರಾಧಕ ಸತ್ಕಾರವನ್ನು ಪೌಲ, ಬಾರ್ನಬರು ನಿರಾಕರಿಸಿದರು.
[ಪುಟ 30 ರಲ್ಲಿರುವ ಚೌಕ/ಚಿತ್ರಗಳು]
ಸೆರೇ ಯಜಮಾನನು ನಂಬುತ್ತಾನೆ: ಭೂಕಂಪವು ಸೆರೆಯ ದ್ವಾರಗಳನ್ನು ತೆರೆದಾಗ ಮತ್ತು ಒಳಗಿದ್ದ ಬಂಧಗಳ ಬೇಡಿಗಳು ಕಳಚಲ್ಪಟ್ಟಾಗ, ಪಿಲಿಪ್ಪಿಯ ಸೆರೇ ಯಜಮಾನನು ತನ್ನನ್ನೇ, ಹತಿಸಲಿಕ್ಕಿದ್ದನು. (16:25-27) ಯಾಕೆ? ಯಾಕಂದರೆ ರೋಮೀಯ ಕಾನೂನಿಗನುಸಾರ ಬಂಧಿವಾಸದಿಂದ ತಪ್ಪಿಸಿಕೊಂಡವನ ಶಿಕ್ಷೆಯು ಸೆರೇ ಯಜಮಾನನಿಗೆ ವಿಧಿಸಲ್ಪಡುತ್ತಿತ್ತು. ಹಿಂಸಾತ್ಮಕವಾಗಿ ಮರಣವನ್ನು ಅನುಭವಿಸುವ ಬದಲು ಆತ್ಮಹತ್ಯೆಯೇ ಲೇಸೆಂದು ಸೆರೇ ಯಜಮಾನನು ಇಚ್ಛಿಸಿದನೆಂತ ಕಾಣುತ್ತದೆ. ಅಂತಹ ಶಿಕ್ಷೆ ಕೆಲವು ಬಂಧಿವಾಸಿಗಳಿಗೆ ಪ್ರಾಯಶಃ ಇತ್ತು. ಅದಾಗ್ಯೂ, ಅವನು ಸುವಾರ್ತೆಯನ್ನು ಸ್ವೀಕರಿಸಿದನು ಮತ್ತು “ಅವನು ಮತ್ತು ಅವನವರೆಲ್ಲರು ತಡಮಾಡದೆ ದೀಕ್ಷಾಸ್ನಾನ ಪಡೆದರು.”—16:28-34.
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಕೈಸರನಿಗೆ ಮನವಿ: ಜನ್ಮತಃ ರೋಮೀಯ ನಾಗರಿಕನೋಪಾದಿ ಕೈಸರನಿಗೆ ಮನವಿಮಾಡುವ ಮತ್ತು ರೋಮಿನಲ್ಲಿ ವಿಚಾರಿಸಲ್ಪಡುವ ಹಕ್ಕು ಪೌಲನಿಗಿತ್ತು. (25:10-12) ರೋಮೀಯ ನಾಗರಿಕನೊಬ್ಬನನ್ನು ವಿಚಾರಣೆಯಿಲ್ಲದೆ ಹೊಡೆಯಬಾರದಿತ್ತು. ಚಡಿಯೇಟು ನೀಡಬಾರದಿತ್ತು ಯಾ ದಂಡಿಸಬಾರದಿತ್ತು.—16:35-40; 22:22-29; 26:32.
[ಕೃಪೆ]
Musei Capitolini, Roma.
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಅರ್ತೆಮೀಯ ದೇವಸ್ಥಾನದ ಉಸ್ತುವಾರಿಗಾರ: ಪೌಲನ ಸಾರುವಿಕೆಯಿಂದ ಕ್ರೋಧಭರಿತನಾದ ಅಕ್ಕಸಾಲಿಗ ದೆಮೇತ್ರಿಯನು ದೊಂಬಿಯನ್ನೆಬ್ಬಿಸಿದನು. ಆದರೆ ಪಟ್ಟಣದ ಯಜಮಾನನು ಗುಂಪನ್ನು ಚದರಿಸಿದನು. (19:23-41) ಆನೇಕ ಸ್ತನಗಳ ಫಲೋತ್ಪಾದಕ ದೇವತೆ ಅರ್ತೆಮೀಯಳ ವಿಗ್ರಹವು ದೇವಾಲಯದ ಅತಿ ಪವಿತ್ರ ಸ್ಥಾನದಲ್ಲಿದ್ದು ಅದರ ಬೆಳ್ಳಿಯ ಚಿಕ್ಕ ಚಿಕ್ಕ ಅಲಂಕಾರಗಳನ್ನು ಅಕ್ಕಸಾಲಿಗರು ಮಾಡುತ್ತಿದ್ದರು. ಅವಳ ನಿಯೊಕೊರಸ್ ಯಾ ‘ದೇವಸ್ಥಾನದ ಉಸ್ತುವರಿಗಾರ’ರಾಗುವ ಮಾನಕ್ಕಾಗಿ ನಗರಗಳು ಪರಸ್ಪರ ಪೈಪೋಟಿ ನಡಿಸುತ್ತಿದ್ದವು.
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಸಮುದ್ರದಲ್ಲಿ ಅಪಾಯ: ಪೌಲನನ್ನು ಕೊಂಡೊಯ್ಯುವ ಹಡಗು ಈಶಾನ್ಯ ಪೂರ್ವ ವಾಯುವೆಂಬ ಹುಚ್ಚುಗಾಳಿಯಿಂದ ಹೊಡೆತಕ್ಕೀಡಾದಾಗ ‘ಹಡಗಿನ ದೋಣಿಯನ್ನು ಎತ್ತಿ ಭದ್ರಮಾಡಿ ಕೊಳ್ಳುವದು ಅವರಿಗೆ ಪ್ರಯಾಸವಾಯಿತು.’ (27:15,16) ಹಡಗಿನ ದೋಣಿ (ಸ್ಕೀಫ್), ದೊಡ್ಡ ಹಡಗಿನೊಟ್ಟಿಗೆ ಎಳೆದುಕೊಂಡು ಹೋಗುವ ಚಿಕ್ಕ ದೋಣಿಯಾಗಿತ್ತು. ಹಡಗು ಅದರ ಒಡಲಿನ ಸುತ್ತಲೂ ದಾರಗಳನ್ನು ಬಿಗಿದು, ಬಿರುಗಾಳಿಯ ಸಮಯದಲ್ಲಿ ಕೂವೆಮರದಲ್ಲಿ ಉಂಟಾಗುವ ಬಿಗುಪನ್ನು ನಿಯಂತ್ರಿಸಲು ಸಾಧ್ಯವಾಗುವಂತೆ, ಒಟ್ಟಿಗೆ ಹೊರಜಿಗಳನ್ನು ಕೊಂಡೊಯ್ಯುತ್ತದೆ. (27:17) ಈ ನಾವಿಕರು ನಾಲ್ಕು ಲಂಗರಗಳನ್ನು ಬಿಟ್ಟು ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗವನ್ನು ನಡಿಸುತ್ತಿದ್ದರು. (27:29.40) ಅಲೆಕ್ಸಾಂಡ್ರಿಯದ ಹಡಗಿಗೆ ನಾವಿಕರ ರಕ್ಷಕ ದೇವತೆಗಳೆಂದು ಎಣಿಸಲ್ಪಡುತ್ತಿದ್ದ “ದ್ಯೌಸದ ಪುತ್ರರಾದ”—ಕಾಸ್ಟರ್ ಮತ್ತು ಪೋಲಕ್ಸ್ (ಅಶ್ವಿನೀ ದೈವತೆಗಳು)ರವರ ದೊಡ್ಡ ಲಾಂಛನ ಮೂರ್ತಿ ಚಿಹ್ನೆ ಇತ್ತು.—28:11.