ನೀವು ಯಾರಿಗೆ ವಿಧೇಯರು —ದೇವರಿಗೊ ಮನುಷ್ಯರಿಗೊ?
‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು.’—ಅ. ಕೃತ್ಯಗಳು 5:29.
ಯೆಹೂದಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ರೋಷೋನ್ಮತ್ತರಾಗಿದ್ದಿರಬೇಕು. ಏಕೆಂದರೆ ಬಂದಿಗಳೇ ಕಾಣೆಯಾಗಿದ್ದರು. ಈ ಬಂದಿಗಳು, ಕೆಲವು ವಾರಗಳಿಗೆ ಮುಂಚೆ ಉಚ್ಚ ನ್ಯಾಯಾಲಯವು ಯಾರನ್ನು ಮರಣದಂಡನೆಗೆ ಒಪ್ಪಿಸಿತ್ತೊ ಆ ಯೇಸು ಕ್ರಿಸ್ತನ ಅಪೊಸ್ತಲರಾಗಿದ್ದರು. ಈಗಲಾದರೊ, ಅದೇ ನ್ಯಾಯಾಲಯವು ಅವನ ಆಪ್ತ ಅನುಯಾಯಿಗಳಿಗೆ ದಂಡನೆ ವಿಧಿಸಲು ಸಿದ್ಧವಾಗಿತ್ತು. ಆದರೆ ಪಹರೆಯವರು ಅವರನ್ನು ಕರೆತರಲು ಹೋದಾಗ, ಬಾಗಿಲುಗಳಿಗೆ ಬೀಗಹಾಕಲ್ಪಟ್ಟಿತ್ತಾದರೂ ಅವರ ಸೆರೆಕೋಣೆಗಳು ಬರಿದಾಗಿದ್ದವು. ಅಷ್ಟೇ ಅಲ್ಲ, ಬೇಗನೆ ಆ ಪಹರೆಯವರಿಗೆ, ಆ ಅಪೊಸ್ತಲರು ಯೆರೂಸಲೇಮಿನ ದೇವಾಲಯದಲ್ಲಿದ್ದಾರೆಂದು ಮತ್ತು ಅವರು ಜನರಿಗೆ ಯೇಸು ಕ್ರಿಸ್ತನ ವಿಷಯವಾಗಿ ನಿರ್ಭೀತಿಯಿಂದ ಬೋಧಿಸುತ್ತಿದ್ದಾರೆ ಅಂದರೆ ಯಾವ ಕೆಲಸಕ್ಕಾಗಿ ಅವರನ್ನು ದಸ್ತಗಿರಿ ಮಾಡಲಾಗಿತ್ತೊ ಅದನ್ನೇ ಮಾಡುತ್ತಿದ್ದಾರೆ ಎಂದು ತಿಳಿದುಬಂತು! ಆ ಪಹರೆಯವರು ನೇರವಾಗಿ ದೇವಾಲಯಕ್ಕೆ ಹೋಗಿ ಅಪೊಸ್ತಲರನ್ನು ಕೈದುಮಾಡಿ ನ್ಯಾಯಾಲಯಕ್ಕೆ ಕರೆತಂದರು.—ಅ. ಕೃತ್ಯಗಳು 5:17-27.
2 ಅಪೊಸ್ತಲರನ್ನು ದೇವದೂತನೊಬ್ಬನು ಸೆರೆಮನೆಯಿಂದ ಬಿಡಿಸಿದ್ದನು. ಇದು ಅವರ ಮೇಲೆ ಹೆಚ್ಚಿನ ಹಿಂಸೆ ಬರದಂತೆ ರಕ್ಷಿಸಲಿಕ್ಕಾಗಿತ್ತೊ? ಇಲ್ಲ. ಅವರು ಬಿಡಿಸಲ್ಪಟ್ಟದ್ದು, ಯೆರೂಸಲೇಮಿನ ನಿವಾಸಿಗಳು ಯೇಸು ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಕೇಳಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ. “ಈ ಸಜ್ಜೀವವಿಷಯವಾದ ಮಾತುಗಳನ್ನೆಲ್ಲಾ [“ಜೀವವಾಕ್ಯಗಳನ್ನು” NIBV] ಜನರಿಗೆ ಹೇಳಿರಿ” ಎಂಬುದು ಆ ಅಪೊಸ್ತಲರಿಗೆ ದೇವದೂತನು ಕೊಟ್ಟ ಅಪ್ಪಣೆಯಾಗಿತ್ತು. (ಅ. ಕೃತ್ಯಗಳು 5:19, 20) ಹೀಗಿರುವುದರಿಂದಲೇ, ಆ ಪಹರೆಯವರು ದೇವಾಲಯಕ್ಕೆ ಬಂದಾಗ, ಅಪೊಸ್ತಲರು ಆ ಆಜ್ಞೆಗೆ ವಿಧೇಯರಾಗಿ ನಡೆದುಕೊಳ್ಳುತ್ತಿರುವುದನ್ನು ನೋಡಿದರು.
3 ಉದ್ದೇಶ ಸಾಧನೆಗೆ ಅಂಟಿಕೊಂಡ ಆ ಸುವಾರ್ತಿಕರಲ್ಲಿ ಇಬ್ಬರಾದ ಅಪೊಸ್ತಲ ಪೇತ್ರ ಮತ್ತು ಯೋಹಾನರು ಈ ಮೊದಲೂ ಆ ನ್ಯಾಯಾಲಯಕ್ಕೆ ಬಂದಿದ್ದರು. ಇದನ್ನೇ ಮುಖ್ಯ ನ್ಯಾಯಾಧೀಶನಾದ ಯೋಸೆಫ್ ಕಾಯಫನು ಅವರಿಗೆ ಜ್ಞಾಪಕಹುಟ್ಟಿಸುತ್ತಾ ಗಡುಸಾಗಿ ಹೇಳಿದ್ದು: “ನೀವು [ಯೇಸುವಿನ] ಹೆಸರನ್ನು ಎತ್ತಿ ಉಪದೇಶಮಾಡಲೇಬಾರದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆಕೊಟ್ಟೆವಲ್ಲಾ; ಆದರೂ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ.” (ಅ. ಕೃತ್ಯಗಳು 5:28) ಪೇತ್ರಯೋಹಾನರನ್ನು ಪುನಃ ನ್ಯಾಯಾಲಯದಲ್ಲಿ ನೋಡಿ ಕಾಯಫನಿಗೆ ಆಶ್ಚರ್ಯವಾಗಬಾರದಿತ್ತು. ಏಕೆಂದರೆ ಸುವಾರ್ತೆ ಸಾರುವುದನ್ನು ನಿಲ್ಲಿಸುವಂತೆ ಈ ಹಿಂದೆ ನ್ಯಾಯಾಲಯದಲ್ಲಿ ಪ್ರಥಮ ಬಾರಿ ಅಪ್ಪಣೆಕೊಡಲ್ಪಟ್ಟಾಗ, ಆ ಇಬ್ಬರು ಅಪೊಸ್ತಲರು ಹೀಗೆ ಉತ್ತರ ಕೊಟ್ಟಿದ್ದರು: “ದೇವರ ಮಾತನ್ನು ಕೇಳುವದಕ್ಕಿಂತಲೂ ನಿಮ್ಮ ಮಾತನ್ನು ಕೇಳುವುದು ನ್ಯಾಯವೋ ಏನು? ನೀವೇ ತೀರ್ಪು ಮಾಡಿಕೊಳ್ಳಿರಿ; ನಾವಂತೂ ಕಂಡುಕೇಳಿದ್ದನ್ನು ಹೇಳದೆ ಇರಲಾರೆವು.” ಪುರಾತನ ಕಾಲದ ಪ್ರವಾದಿ ಯೆರೆಮೀಯನಂತೆ, ಪೇತ್ರಯೋಹಾನರಿಗೆ ತಮಗೆ ಕೊಡಲ್ಪಟ್ಟಿದ್ದ ಸಾರುವ ಆದೇಶವನ್ನು ಪೂರೈಸುವುದರಿಂದ ತಮ್ಮನ್ನೇ ತಡೆದು ಹಿಡಿಯಲು ಸಾಧ್ಯವಿರಲಿಲ್ಲ.—ಅ. ಕೃತ್ಯಗಳು 4:18-20; ಯೆರೆಮೀಯ 20:9.
4 ಆದರೆ ಈಗ, ಪೇತ್ರಯೋಹಾನರಿಗೆ ಮಾತ್ರವಲ್ಲ, ಹೊಸದಾಗಿ ಆರಿಸಲ್ಪಟ್ಟಿದ್ದ ಮತ್ತೀಯನನ್ನು ಸೇರಿಸಿ ಎಲ್ಲ ಅಪೊಸ್ತಲರಿಗೆ ತಮ್ಮ ನಿಲುವನ್ನು ಬಹಿರಂಗವಾಗಿ ಘೋಷಿಸುವ ಅವಕಾಶ ದೊರೆಯಿತು. (ಅ. ಕೃತ್ಯಗಳು 1:21-26) ಸುವಾರ್ತೆ ಸಾರುವುದನ್ನು ನಿಲ್ಲಿಸಬೇಕೆಂಬ ಅಪ್ಪಣೆಕೊಡಲ್ಪಟ್ಟಾಗ, ಅವರೂ ಧೈರ್ಯದಿಂದ ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’ ಎಂದು ಉತ್ತರಕೊಟ್ಟರು.—ಅ. ಕೃತ್ಯಗಳು 5:29.
ದೇವರಿಗೆ ವಿಧೇಯತೆಯ ಎದುರಾಗಿ ಮನುಷ್ಯನಿಗೆ ವಿಧೇಯತೆ
5 ಅಪೊಸ್ತಲರು ಸಾಮಾನ್ಯವಾಗಿ ನ್ಯಾಯಾಲಯದ ಆಜ್ಞೆಗಳಿಗೆ ವಿಧೇಯರಾಗುತ್ತಿದ್ದ ನಿಯಮಪಾಲಕ ವ್ಯಕ್ತಿಗಳಾಗಿದ್ದರು. ಆದರೆ ಯಾವ ಮಾನವನಿಗೂ, ಅವನೆಷ್ಟೇ ಶಕ್ತಿಶಾಲಿಯಾಗಿರಲಿ, ದೇವರ ಆಜ್ಞೆಗಳಲ್ಲೊಂದಕ್ಕೆ ಅವಿಧೇಯರಾಗಬೇಕೆಂದು ಹೇಳುವ ಹಕ್ಕಿಲ್ಲ. ಯೆಹೋವನು ‘ಭೂಲೋಕದಲ್ಲೆಲ್ಲಾ ಸರ್ವೋನ್ನತನು.’ (ಕೀರ್ತನೆ 83:18) ಆತನು “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಮಾತ್ರವಲ್ಲ, ಪರಮ ಧರ್ಮವಿಧಾಯಕನೂ ನಿತ್ಯತೆಯ ಅರಸನೂ ಆಗಿದ್ದಾನೆ. ಆದುದರಿಂದ, ದೇವರ ಆಜ್ಞೆಯನ್ನು ರದ್ದುಗೊಳಿಸುವ ಯಾವುದೇ ಕೋರ್ಟಿನ ಆಜ್ಞೆಗೆ ದೇವರ ದೃಷ್ಟಿಯಲ್ಲಿ ಮಾನ್ಯತೆಯಿಲ್ಲ.—ಆದಿಕಾಂಡ 18:25; ಯೆಶಾಯ 33:22.
6 ಈ ನಿಜತ್ವವನ್ನು ಅತ್ಯುತ್ತಮ ನ್ಯಾಯಶಾಸ್ತ್ರೀಯ ಪರಿಣತರಲ್ಲಿ ಕೆಲವರು ಒಪ್ಪಿಕೊಂಡಿದ್ದಾರೆ. ಉದಾಹರಣೆಗೆ, 18ನೆಯ ಶತಮಾನದ ಪ್ರಸಿದ್ಧ ಆಂಗ್ಲ ನ್ಯಾಯಶಾಸ್ತ್ರಜ್ಞ ವಿಲ್ಯಮ್ ಬ್ಲ್ಯಾಕ್ಸ್ಟನ್, ಮಾನವ ನಿಯಮವು ಬೈಬಲಿನಲ್ಲಿ ಕಂಡುಬರುವ ‘ದಿವ್ಯಜ್ಞಾನ ನಿಯಮಕ್ಕೆ’ ವಿರುದ್ಧವಾಗಿರಬಾರದು ಎಂದು ಬರೆದರು. ಆದಕಾರಣ, ಹಿರೀಸಭೆಯ ನ್ಯಾಯಾಲಯವು ಅಪೊಸ್ತಲರು ಸುವಾರ್ತೆ ಸಾರುವುದನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದಾಗ, ಅದು ನಿಜ ಅಧಿಕಾರದ ರೇಖೆಯನ್ನು ಮೀರಿಹೋಯಿತು. ಆ ಆಜ್ಞೆಗೆ ವಿಧೇಯರಾಗಲು ಅಪೊಸ್ತಲರಿಗೆ ಸಾಧ್ಯವೇ ಇರಲಿಲ್ಲ.
7 ಸುವಾರ್ತೆ ಸಾರುತ್ತ ಹೋಗುವ ಈ ಅಪೊಸ್ತಲರ ದೃಢನಿರ್ಧಾರವು ಯಾಜಕರಿಗೆ ಕೋಪವನ್ನುಂಟುಮಾಡಿತು. ಕಾಯಫನನ್ನೂ ಸೇರಿಸಿ, ಯಾಜಕರಾಗಿದ್ದವರಲ್ಲಿ ಕೆಲವರು ಸದ್ದುಕಾಯರಾಗಿದ್ದರು ಮತ್ತು ಪುನರುತ್ಥಾನದಲ್ಲಿ ಅವರಿಗೆ ನಂಬಿಕೆಯಿರಲಿಲ್ಲ. (ಅ. ಕೃತ್ಯಗಳು 4:1, 2; 5:17) ಆದರೆ ಈ ಅಪೊಸ್ತಲರು ಯೇಸುವಿಗೆ ಸತ್ತವರೊಳಗಿಂದ ಪುನರುತ್ಥಾನವಾಗಿದೆಯೆಂದು ಪಟ್ಟುಹಿಡಿದು ಹೇಳುತ್ತಿದ್ದರು. ಅಲ್ಲದೆ, ಯಾಜಕರಲ್ಲಿ ಕೆಲವರು ರೋಮನ್ ಅಧಿಕಾರಿಗಳ ಅನುಗ್ರಹ ಪಡೆಯಲಿಕ್ಕಾಗಿ ಬಹಳಷ್ಟು ಪ್ರಯತ್ನಗಳನ್ನು ಸಹ ಮಾಡಿದ್ದರು. ಯೇಸುವನ್ನು ವಿಚಾರಣೆಗೊಳಪಡಿಸಿದ ಸಮಯದಲ್ಲಿ, ಅವನನ್ನು ತಮ್ಮ ಅರಸನೆಂದು ಒಪ್ಪಿಕೊಳ್ಳುವ ಅವಕಾಶವನ್ನು ಪಿಲಾತನು ಕೊಟ್ಟಾಗ ಅವರು, “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಕೂಗಿ ಹೇಳಿದ್ದರು. (ಯೋಹಾನ 19:15)a ಆ ಅಪೊಸ್ತಲರಾದರೊ ಯೇಸುವಿನ ಪುನರುತ್ಥಾನವಾಗಿದೆಯೆಂದು ಒತ್ತಿಹೇಳುತ್ತಿದ್ದರಲ್ಲದೆ “ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ” ಎಂದೂ ಬೋಧಿಸುತ್ತಿದ್ದರು. (ಅ. ಕೃತ್ಯಗಳು 2:36; 4:12) ಒಂದುವೇಳೆ ಜನರು ಪುನರುತ್ಥಿತ ಯೇಸುವನ್ನು ತಮ್ಮ ನಾಯಕನಾಗಿ ನೋಡುವಲ್ಲಿ, ರೋಮನರು ಬಂದು ತಮ್ಮ “ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು” ಎಂದು ಆ ಯಾಜಕರು ಭಯಪಟ್ಟರು.—ಯೋಹಾನ 11:48.
8 ಯೇಸು ಕ್ರಿಸ್ತನ ಅಪೊಸ್ತಲರ ಭವಿಷ್ಯವು ಮಬ್ಬಾಗಿರುವಂತೆ ತೋರಿತು. ಹಿರೀಸಭೆಯ ನ್ಯಾಯಾಲಯದ ನ್ಯಾಯಧೀಶರು ಅವರಿಗೆ ಮರಣದಂಡನೆ ವಿಧಿಸಲು ದೃಢಮನಸ್ಕರಾಗಿದ್ದರು. (ಅ. ಕೃತ್ಯಗಳು 5:33) ಆದರೆ ಹೇಗೊ ಘಟನೆಗಳು ಅನಿರೀಕ್ಷಿತವಾಗಿ ಮಾರ್ಪಟ್ಟವು. ನ್ಯಾಯಶಾಸ್ತ್ರ ಪರಿಣತನಾಗಿದ್ದ ಗಮಲಿಯೇಲನು ಎದ್ದುನಿಂತು ತನ್ನ ಸಹಾಧಿಕಾರಿಗಳು ದುಡುಕಿ ವರ್ತಿಸುವುದು ಸರಿಯಲ್ಲವೆಂದು ಎಚ್ಚರಿಸಿದನು. ಅವನು ವಿವೇಚನೆಯಿಂದ ಹೇಳಿದ್ದು: “ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವದು; ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ.” ಬಳಿಕ, ಗಮಲಿಯೇಲನು ಈ ಗಮನಾರ್ಹವಾದ ಮಾತುಗಳನ್ನು ಹೇಳಿದನು: “ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ.”—ಅ. ಕೃತ್ಯಗಳು 5:34, 38, 39.
9 ಆಶ್ಚರ್ಯಕರವಾಗಿ, ಆ ನ್ಯಾಯಾಲಯವು ಗಮಲಿಯೇಲನ ಬುದ್ಧಿವಾದವನ್ನು ಅಂಗೀಕರಿಸಿತು. ಹಿರೀಸಭೆ ನ್ಯಾಯಾಲಯದವರು “ಅಪೊಸ್ತಲರನ್ನು ಕರೆಸಿ ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತಾಡಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು.” ಅಪೊಸ್ತಲರು ಬೆದರಿ ಸುಮ್ಮನಿರುವ ಬದಲಿಗೆ ಸಾರಬೇಕೆಂದು ದೇವದೂತನು ಕೊಟ್ಟ ಆಜ್ಞೆಯನ್ನು ಕೈಕೊಳ್ಳಲು ದೃಢಮನಸ್ಕರಾಗಿದ್ದರು. ಈ ಕಾರಣದಿಂದ ಅವರು ತಮಗೆ ಬಿಡುಗಡೆಯಾದಾಗ, “ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶ ಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅ. ಕೃತ್ಯಗಳು 5:40, 42) ಮತ್ತು ಯೆಹೋವನು ಅವರ ಪ್ರಯತ್ನಗಳನ್ನು ಆಶೀರ್ವದಿಸಿದನು. ಎಷ್ಟರ ಮಟ್ಟಿಗೆ? “ದೇವರ ವಾಕ್ಯವು ಪ್ರಬಲವಾಯಿತು. ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು.” ವಾಸ್ತವದಲ್ಲಿ “ಯಾಜಕರಲ್ಲಿಯೂ ಬಹುಜನರು ಕ್ರಿಸ್ತ ನಂಬಿಕೆಗೆ ಒಳಗಾಗುತ್ತಾ ಇದ್ದರು.” (ಅ. ಕೃತ್ಯಗಳು 6:7) ಮಹಾಯಾಜಕರಿಗೆ ಇದು ಎಂಥ ಒಂದು ಹೊಡೆತವಾಗಿದ್ದಿರಬೇಕು! ಹೆಚ್ಚಾಗುತ್ತಾ ಹೋಗುತ್ತಿದ್ದ ರುಜುವಾತು, ಅಪೊಸ್ತಲರ ಕೆಲಸವು ನಿಶ್ಚಯವಾಗಿಯೂ ದೇವರ ಕೆಲಸವೇ ಆಗಿತ್ತು ಎಂಬುದನ್ನು ತೋರಿಸಿತು!
ದೇವರಿಗೆ ಎದುರಾಗಿ ಹೋರಾಡುವವರು ಗೆಲ್ಲಲಾರರು
10 ಒಂದನೆಯ ಶತಮಾನದಲ್ಲಿ, ಯೆಹೂದಿ ಮಹಾಯಾಜಕರನ್ನು ರೋಮನ್ ಅಧಿಕಾರಿಗಳು ನೇಮಿಸುತ್ತಿದ್ದರು. ಧನಿಕನಾಗಿದ್ದ ಯೋಸೆಫ್ ಕಾಯಫನನ್ನು ಮಹಾಯಾಜಕನ ಸ್ಥಾನಕ್ಕೆ ನೇಮಿಸಿದವನು ವಲೇರ್ಯುಸ್ ಗ್ರಾಟುಸ್ ಎಂಬವನಾಗಿದ್ದನು ಮತ್ತು ಕಾಯಫನು ಅವನಿಗಿಂತ ಮುಂಚೆ ಇದ್ದ ಮಹಾಯಾಜಕರಲ್ಲಿ ಅನೇಕರಿಗಿಂತಲೂ ಹೆಚ್ಚು ಕಾಲ ಆ ಹುದ್ದೆಯಲ್ಲಿದ್ದನು. ಕಾಯಫನು ತನ್ನ ಈ ಸಾಧನೆಯನ್ನು ದೇವರ ಹಸ್ತಕ್ಷೇಪದ ಬದಲಿಗೆ ತನ್ನ ರಾಯಭಾರ ಕುಶಲತೆ ಮತ್ತು ಪಿಲಾತನೊಂದಿಗೆ ತನಗಿದ್ದ ವೈಯಕ್ತಿಕ ಸ್ನೇಹದ ಫಲವೆಂದು ಎಣಿಸಿದ್ದಿರಬಹುದು. ಆದರೆ, ಅವನು ಮನುಷ್ಯರಲ್ಲಿ ಭರವಸೆಯಿಟ್ಟದ್ದು ತಪ್ಪೆಂದು ರುಜುವಾಯಿತು. ಅಪೊಸ್ತಲರು ಹಿರೀಸಭೆಯಲ್ಲಿ ಕಾಣಿಸಿಕೊಂಡು ಕೇವಲ 3 ವರುಷಗಳು ಕಳೆದ ಬಳಿಕ ಕಾಯಫನು ರೋಮನ್ ಅಧಿಕಾರಿಗಳ ಮೆಚ್ಚಿಕೆಗೆ ಅಪಾತ್ರನಾಗಿ ಮಹಾಯಾಜಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟನು.
11 ಕಾಯಫನನ್ನು ಅವನ ಸ್ಥಾನದಿಂದ ತೆಗೆದುಹಾಕುವ ಅಪ್ಪಣೆಯು ಪಿಲಾತನ ಮೇಲಿನ ಹಿರಿಯ ಅಧಿಕಾರಿಯಾಗಿದ್ದ ಹಾಗೂ ಸಿರಿಯದ ರಾಜ್ಯಪಾಲನಾಗಿದ್ದ ಲೂಕ್ಯಸ್ ವಿಟೆಲೀಯುಸ್ ಎಂಬವನಿಂದ ಬಂದಿತ್ತು ಮತ್ತು ಕಾಯಫನ ಆಪ್ತಮಿತ್ರನಾಗಿದ್ದ ಪಿಲಾತನು ಅದನ್ನು ತಡೆಯಲು ಅಶಕ್ತನಾಗಿದ್ದನು. ವಾಸ್ತವವೇನಂದರೆ, ಕಾಯಫನ ಸ್ಥಾನನಷ್ಟದ ಬಳಿಕ ಕೇವಲ ಒಂದು ವರುಷದಲ್ಲಿ ಪಿಲಾತನು ಸಹ ಅವನ ಸ್ಥಾನದಿಂದ ತೆಗೆಯಲ್ಪಟ್ಟು, ಅವನ ವಿರುದ್ಧ ಇದ್ದ ಗಂಭೀರ ಆರೋಪಗಳಿಗೆ ಉತ್ತರ ಕೊಡಲು ರೋಮ್ಗೆ ತೆರಳಬೇಕಾಯಿತು. ಮತ್ತು ಕೈಸರನಲ್ಲಿ ಭರವಸೆಯಿಟ್ಟಿದ್ದ ಯೆಹೂದಿ ನಾಯಕರ ವಿಷಯದಲ್ಲಿಯಾದರೊ, ರೋಮನರು ಬಂದು ಅವರ ‘ಸ್ಥಾನವನ್ನು ಮತ್ತು ಜನವನ್ನು’ ಕಸಿದುಕೊಂಡು ಹೋದರು. ಇದು ಸಾ.ಶ. 70ರಲ್ಲಿ ರೋಮನ್ ಸೈನ್ಯಗಳು ಯೆರೂಸಲೇಮ್ ನಗರ, ದೇವಾಲಯ ಮತ್ತು ಹಿರೀಸಭೆಯ ನ್ಯಾಯಾಲಯವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ನಡೆಯಿತು. ಈ ಸಂಬಂಧದಲ್ಲಿ ಕೀರ್ತನೆಗಾರನ ಮಾತುಗಳು ಎಷ್ಟು ಸತ್ಯವಾಗಿ ಪರಿಣಮಿಸಿದವು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ”!—ಯೋಹಾನ 11:48; ಕೀರ್ತನೆ 146:3.
12 ಇದಕ್ಕೆ ತದ್ವಿರುದ್ಧವಾಗಿ, ದೇವರು ಪುನರುತ್ಥಿತ ಯೇಸು ಕ್ರಿಸ್ತನನ್ನು ಮಹಾ ಆಧ್ಯಾತ್ಮಿಕಾಲಯದ ಮಹಾಯಾಜಕನಾಗಿ ನೇಮಿಸಿದನು. ಆ ನೇಮಕವನ್ನು ಯಾವ ಮನುಷ್ಯನೂ ರದ್ದು ಮಾಡಲಾರನು. ಹೌದು, ಯೇಸುವಿನ “ಯಾಜಕತ್ವವು ಮತ್ತೊಬ್ಬರಿಗೆ ಹೋಗುವಂಥದಲ್ಲ.” (ಇಬ್ರಿಯ 2:9; 7:17, 24; 9:11) ದೇವರು ಯೇಸುವನ್ನು ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ಸಹ ನೇಮಿಸಿದನು. (1 ಪೇತ್ರ 4:5) ಆ ಸ್ಥಾನದಲ್ಲಿರುವ ಯೇಸು, ಯೋಸೆಫ್ ಕಾಯಫ ಮತ್ತು ಪೊಂತ್ಯ ಪಿಲಾತರಿಗೆ ಭಾವೀ ಜೀವನದ ಸಾಧ್ಯತೆ ಇದೆಯೊ ಎಂಬುದನ್ನು ನಿರ್ಣಯಿಸುವನು.—ಮತ್ತಾಯ 23:33; ಅ. ಕೃತ್ಯಗಳು 24:15.
ಆಧುನಿಕ ದಿನಗಳ ನಿರ್ಭೀತ ರಾಜ್ಯ ಸುವಾರ್ತಿಕರು
13 ಪ್ರಥಮ ಶತಮಾನದಂತೆಯೇ ನಮ್ಮ ದಿನಗಳಲ್ಲಿಯೂ ‘ದೇವರ ವಿರುದ್ಧ ಹೋರಾಡುವವರ’ ಸಂಖ್ಯೆಯೇನೂ ಕಡಿಮೆಯಿಲ್ಲ. (ಅ. ಕೃತ್ಯಗಳು 5:39) ದೃಷ್ಟಾಂತಕ್ಕೆ, ಜರ್ಮನಿಯ ಯೆಹೋವನ ಸಾಕ್ಷಿಗಳು ಆಡಲ್ಫ್ ಹಿಟ್ಲರನನ್ನು ತಮ್ಮ ನಾಯಕನೆಂದು ವಂದಿಸಲು ನಿರಾಕರಿಸಲಾಗಿ, ಹಿಟ್ಲರನು ಅವರನ್ನು ನಿರ್ನಾಮ ಮಾಡಲು ಪಣತೊಟ್ಟನು. (ಮತ್ತಾಯ 23:10) ಅವನ ಕಾರ್ಯಸಾಧಕ ಹತ್ಯಾ ಸಂಘಟನೆಗೆ ಈ ಸಾಮರ್ಥ್ಯ ಇರುವ ಹಾಗೆ ಕಂಡಿತು. ನಾಸಿಗಳು ಸಾವಿರಾರು ಮಂದಿ ಸಾಕ್ಷಿಗಳನ್ನು ಸೆರೆಹಿಡಿದು ಕೂಟ ಶಿಬಿರಗಳಿಗೆ ಕಳುಹಿಸುವುದರಲ್ಲಿ ಜಯಹೊಂದಿದರು. ಕೆಲವು ಮಂದಿ ಸಾಕ್ಷಿಗಳನ್ನು ಕೊಲ್ಲಲು ಸಹ ಶಕ್ತರಾದರು. ಆದರೆ, ದೇವರನ್ನು ಮಾತ್ರ ಆರಾಧಿಸುವ ಸಾಕ್ಷಿಗಳ ನಿರ್ಧಾರವನ್ನು ಮುರಿಯಲು ನಾಸಿಗಳು ಶಕ್ತರಾಗಲಿಲ್ಲ ಮತ್ತು ದೇವರ ಸೇವಕರನ್ನು ಸಮೂಹವಾಗಿ ನಿರ್ಮೂಲಮಾಡುವುದರಲ್ಲಿ ಅವರು ವಿಫಲಗೊಂಡರು. ಏಕೆಂದರೆ ಈ ಸಾಕ್ಷಿಗಳ ಕೆಲಸವು ದೇವರ ಕೆಲಸವಾಗಿತ್ತು ಮತ್ತು ದೇವರ ಕೆಲಸವನ್ನು ಕೆಡಿಸುವುದು ಅಸಾಧ್ಯ. ಅರುವತ್ತು ವರುಷಗಳ ನಂತರವೂ, ಹಿಟ್ಲರನ ಸೆರೆ ಶಿಬಿರಗಳಿಂದ ಪಾರಾದ ನಂಬಿಗಸ್ತರು ಈಗಲೂ ಯೆಹೋವನನ್ನು ‘ಪೂರ್ಣ ಹೃದಯ, ಪ್ರಾಣ ಮತ್ತು ಮನಸ್ಸಿನಿಂದ’ ಸೇವಿಸುತ್ತಿದ್ದಾರೆ. ಆದರೆ ಹಿಟ್ಲರ್ ಮತ್ತು ಅವನ ನಾಸಿ ಪಕ್ಷವು ಅವರ ಕುಖ್ಯಾತ ಕೃತ್ಯಗಳಿಗಾಗಿ ಮಾತ್ರ ನೆನಪಿಸಲ್ಪಡುತ್ತಿವೆ.—ಮತ್ತಾಯ 22:37.
14 ನಾಸಿಗಳ ಆ ಪ್ರಯತ್ನಗಳು ನಡೆದಂದಿನಿಂದ ಗತಿಸಿರುವ ವರ್ಷಗಳಲ್ಲಿ, ಇನ್ನೂ ಕೆಲವರು ಯೆಹೋವನ ಮತ್ತು ಆತನ ಜನರ ಎದುರಾಗಿ ಸೋಲುವ ಕದನದಲ್ಲಿ ಸೇರಿಕೊಂಡಿದ್ದಾರೆ. ಯೂರೋಪಿನ ಅನೇಕ ದೇಶಗಳಲ್ಲಿ ಕೃತ್ರಿಮ ಧಾರ್ಮಿಕ ಮತ್ತು ರಾಜಕೀಯ ಅಧಿಕಾರಿಗಳು ಯೆಹೋವನ ಸಾಕ್ಷಿಗಳನ್ನು, ‘ಅಪಾಯಕಾರಿ ಪಂಥ’ವೆಂದು ಕರೆದಿರುತ್ತಾರೆ. ಆದಿ ಕ್ರೈಸ್ತರ ಮೇಲೆಯೂ ಇದೇ ಅಪವಾದವನ್ನು ಹಾಕಲಾಗಿತ್ತು. (ಅ. ಕೃತ್ಯಗಳು 28:22) ಆದರೆ ವಾಸ್ತವವೇನಂದರೆ, ಮಾನವ ಹಕ್ಕುಗಳ ಯೂರೋಪಿಯನ್ ನ್ಯಾಯಾಲಯವು ಯೆಹೋವನ ಸಾಕ್ಷಿಗಳನ್ನು ಒಂದು ಧರ್ಮವಾಗಿ ಒಪ್ಪಿಕೊಂಡಿದೆಯೇ ಹೊರತು ಒಂದು ಪಂಥವಾಗಿ ಅಲ್ಲ. ವಿರೋಧಿಗಳಿಗೆ ಇದು ಖಂಡಿತ ಗೊತ್ತಿದೆ. ಆದರೂ ಅವರು ಪಟ್ಟುಹಿಡಿದು ಯೆಹೋವನ ಸಾಕ್ಷಿಗಳ ಕುರಿತು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ. ಈ ತಪ್ಪು ಅಪವಾದದ ನೇರ ಪರಿಣಾಮವಾಗಿ, ಈ ಕ್ರೈಸ್ತರಲ್ಲಿ ಕೆಲವರನ್ನು ಕೆಲಸದಿಂದ ತೆಗೆಯಲಾಗಿದೆ. ಸಾಕ್ಷಿಗಳ ಮಕ್ಕಳು ಶಾಲೆಗಳಲ್ಲಿ ಪೀಡಿಸಲ್ಪಟ್ಟಿದ್ದಾರೆ. ಸಾಕ್ಷಿಗಳು ತಮ್ಮ ಕೂಟಗಳಿಗಾಗಿ ಎಷ್ಟೋ ವರ್ಷಗಳಿಂದ ಉಪಯೋಗಿಸುತ್ತಿದ್ದ ಕಟ್ಟಡಗಳ ಒಪ್ಪಂದಗಳನ್ನು ಮಾಲೀಕರು ಹೆದರಿಕೆಯಿಂದ ರದ್ದುಪಡಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ, ವ್ಯಕ್ತಿಗಳು ಯೆಹೋವನ ಸಾಕ್ಷಿಗಳೆಂಬ ಒಂದೇ ಕಾರಣದ ಮೇರೆಗೆ ಸರಕಾರೀ ಏಜನ್ಸಿಗಳು ಅವರಿಗೆ ಪೌರತ್ವವನ್ನೂ ಕೊಡಲು ನಿರಾಕರಿಸಿವೆ! ಆದರೂ, ಸಾಕ್ಷಿಗಳು ಹಿಮ್ಮೆಟ್ಟದೆ ಇದ್ದಾರೆ.
15 ದೃಷ್ಟಾಂತಕ್ಕೆ ಫ್ರಾನ್ಸ್ ದೇಶವನ್ನು ತೆಗೆದುಕೊಳ್ಳೋಣ. ಅಲ್ಲಿನ ಜನರು ಸಾಮಾನ್ಯವಾಗಿ ವಿವೇಚನೆ ಮತ್ತು ನ್ಯಾಯದೃಷ್ಟಿ ಉಳ್ಳವರು. ಆದರೂ ಕೆಲವು ಮಂದಿ ವಿರೋಧಿಗಳು ರಾಜ್ಯ ಕೆಲಸವನ್ನು ತಡೆಯುವ ನಿಯಮಗಳನ್ನು ಜಾರಿಗೆತಂದಿದ್ದಾರೆ. ಆದರೆ ಅಲ್ಲಿರುವ ಯೆಹೋವನ ಸಾಕ್ಷಿಗಳು ಇದಕ್ಕೆ ಹೇಗೆ ಪ್ರತಿವರ್ತಿಸಿದ್ದಾರೆ? ಅವರು ತಮ್ಮ ಕ್ಷೇತ್ರ ಚಟುವಟಿಕೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ತೀವ್ರಗೊಳಿಸಿದ್ದಾರೆ ಮತ್ತು ರೋಮಾಂಚನಗೊಳಿಸುವ ಫಲಗಳನ್ನು ಪಡೆದಿದ್ದಾರೆ. (ಯಾಕೋಬ 4:7) ಕೇವಲ ಆರು ತಿಂಗಳುಗಳ ಒಂದು ಅವಧಿಯಲ್ಲಿ ಆ ದೇಶದ ಬೈಬಲ್ ಅಧ್ಯಯನಗಳು ಬೆರಗುಗೊಳಿಸುವಷ್ಟು ಪ್ರಮಾಣದಲ್ಲಿ ಅಂದರೆ 33 ಪ್ರತಿಶತದಷ್ಟು ಅಭಿವೃದ್ಧಿಗೊಂಡಿವೆ! ಫ್ರಾನ್ಸ್ ದೇಶದ ಪ್ರಾಮಾಣಿಕ ಹೃದಯಿಗಳು ಸುವಾರ್ತೆಗೆ ಓಗೊಡುವುದನ್ನು ನೋಡಿ ಪಿಶಾಚನು ಕೋಪೋದ್ರೇಕಗೊಂಡಿದ್ದಾನೆ ಎಂಬುದು ಖಂಡಿತ. (ಪ್ರಕಟನೆ 12:17) ಫ್ರಾನ್ಸ್ ದೇಶದಲ್ಲಿರುವ ನಮ್ಮ ಜೊತೆಕ್ರೈಸ್ತರು, ಪ್ರವಾದಿ ಯೆಶಾಯನ ಮಾತುಗಳು ತಮ್ಮ ಸನ್ನಿವೇಶದಲ್ಲಿ ಸತ್ಯವಾಗಿ ಪರಿಣಮಿಸಿವೆಯೆಂದು ಭರವಸೆಯಿಂದಿದ್ದಾರೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ.”—ಯೆಶಾಯ 54:17.
16 ಹಿಂಸಿಸಲ್ಪಡುತ್ತಿರುವಾಗ ಯೆಹೋವನ ಸಾಕ್ಷಿಗಳು ಅದರಲ್ಲಿ ಆನಂದಿಸುವುದಿಲ್ಲ. ಆದರೂ, ಕ್ರೈಸ್ತರೆಲ್ಲರಿಗೆ ಕೊಟ್ಟಿರುವ ದೇವರಾಜ್ಞೆಗೆ ವಿಧೇಯರಾಗುತ್ತ, ಅವರು ಕೇಳಿದ ವಿಷಯಗಳ ಕುರಿತು ಮಾತಾಡುವುದನ್ನು ನಿಲ್ಲಿಸಲಾರರು ಮತ್ತು ನಿಲ್ಲಿಸುವುದಿಲ್ಲ. ಅವರು ಉತ್ತಮ ಪ್ರಜೆಗಳಾಗಿರಲು ಪ್ರಯತ್ನಿಸುತ್ತಾರೆ. ಆದರೆ ದೇವರ ನಿಯಮ ಮತ್ತು ಮನುಷ್ಯನ ನಿಯಮಗಳ ಮಧ್ಯೆ ತಿಕ್ಕಾಟವಿರುವಾಗ ಮಾತ್ರ ಅವರು ದೇವರಿಗೇ ವಿಧೇಯತೆ ತೋರಿಸಬೇಕು.
ಅವರಿಗೆ ಹೆದರಬೇಡಿ
17 ನಮ್ಮ ವೈರಿಗಳು ಅತಿ ಅಪಾಯದ ಸ್ಥಾನದಲ್ಲಿದ್ದಾರೆ. ಅವರು ದೇವರೆದುರು ಹೋರಾಡುತ್ತಿದ್ದಾರೆ. ಹೀಗಿರುವುದರಿಂದ ನಾವು ಯೇಸುವಿನ ಆಜ್ಞೆಗೆ ಹೊಂದಿಕೆಯಲ್ಲಿ ನಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸುತ್ತೇವೆ, ಅವರಿಗೆ ಭಯಪಡುವುದಿಲ್ಲ. (ಮತ್ತಾಯ 5:44) ಯಾರಾದರೂ ಅಜ್ಞಾನದ ಕಾರಣ ತಾರ್ಸದ ಸೌಲನಂತೆ ದೇವರನ್ನು ವಿರೋಧಿಸುತ್ತಿರುವಲ್ಲಿ, ಅವರು ಸತ್ಯವನ್ನು ತಿಳಿದುಕೊಳ್ಳುವಂತೆ ಯೆಹೋವನು ದಯೆಯಿಂದ ಅವರ ದೃಷ್ಟಿಯನ್ನು ತೆರೆಯಲಿ ಎಂದು ನಾವು ಪ್ರಾರ್ಥಿಸುತ್ತೇವೆ. (2 ಕೊರಿಂಥ 4:4) ಸೌಲನು ಕ್ರೈಸ್ತ ಅಪೊಸ್ತಲ ಪೌಲನಾದನು ಮತ್ತು ಬಳಿಕ ಅವನ ಕಾಲದ ಅಧಿಕಾರಿಗಳ ಕೈಯಿಂದ ತುಂಬ ಕಷ್ಟವನ್ನು ಅನುಭವಿಸಿದನು. ಆಗಲೂ ಅವನು ಜೊತೆ ವಿಶ್ವಾಸಿಗಳಿಗೆ “ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ, ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಬೇಕೆಂತಲೂ, ಯಾರನ್ನೂ [ತಮ್ಮನ್ನು ಅತಿ ತೀಕ್ಷ್ಣವಾಗಿ ಹಿಂಸಿಸುವವರನ್ನು ಸಹ] ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ” ಅವರಿಗೆ ಜ್ಞಾಪಕಹುಟ್ಟಿಸಿದನು. (ತೀತ 3:1, 2) ಫ್ರಾನ್ಸ್ನಲ್ಲಿ ಮತ್ತು ಬೇರೆ ಕಡೆಗಳಲ್ಲಿರುವ ಯೆಹೋವನ ಸಾಕ್ಷಿಗಳು ಈ ಸಲಹೆಯನ್ನು ಅನ್ವಯಿಸಿಕೊಳ್ಳುತ್ತಿದ್ದಾರೆ.
18 ದೇವರು ಪ್ರವಾದಿ ಯೆರೆಮೀಯನಿಗೆ ಹೇಳಿದ್ದು: “ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು.” (ಯೆರೆಮೀಯ 1:8) ಯೆಹೋವನು ನಮ್ಮನ್ನು ಹಿಂಸೆಗಳಿಂದ ಇಂದು ಹೇಗೆ ತಾನೇ ವಿಮೋಚಿಸಾನು? ಆತನು ಗಮಲಿಯೇಲನಂತಹ ನ್ಯಾಯದೃಷ್ಟಿಯುಳ್ಳ ನ್ಯಾಯಧೀಶನನ್ನು ಮೇಲಕ್ಕೆ ತರಬಹುದು. ಅಥವಾ ಭ್ರಷ್ಟನೂ ವಿರೋಧಿಯೂ ಆದ ಅಧಿಕಾರಿಯೊಬ್ಬನ ಸ್ಥಾನದಲ್ಲಿ ಅನಿರೀಕ್ಷಿತವಾಗಿ ವಿವೇಚನಶಾಲಿಯಾದ ಇನ್ನೊಬ್ಬ ವ್ಯಕ್ತಿಯು ಬರುವಂತೆ ಆತನು ನೋಡಿಕೊಳ್ಳಬಹುದು. ಆದರೆ ಕೆಲವೊಮ್ಮೆ ತನ್ನ ಜನರ ಮೇಲೆ ಬರುವ ಹಿಂಸೆಯು ಅದರ ವಾಯಿದೆಯನ್ನು ಮುಗಿಸುವಂತೆ ಆತನು ಅನುಮತಿಸಬಹುದು. (2 ತಿಮೊಥೆಯ 3:12) ನಾವು ಹಿಂಸಿಸಲ್ಪಡುವಂತೆ ದೇವರು ಅನುಮತಿಸುವಲ್ಲಿ ಆ ಹಿಂಸೆಯನ್ನು ತಾಳಿಕೊಳ್ಳುವ ಶಕ್ತಿಯನ್ನು ಆತನು ಯಾವಾಗಲೂ ಕೊಡುವನು. (1 ಕೊರಿಂಥ 10:13) ಮತ್ತು ದೇವರು ಏನನ್ನೇ ಅನುಮತಿಸಲಿ, ಅದರ ಅಂತಿಮ ಫಲಿತಾಂಶದ ಬಗ್ಗೆ ನಮಗೆ ಸಂದೇಹವೇ ಇಲ್ಲ: ದೇವಜನರ ಎದುರಾಗಿ ಹೋರಾಡುವವರು ದೇವರ ಎದುರಾಗಿ ಹೋರಾಡುತ್ತಿದ್ದಾರೆ, ಮತ್ತು ದೇವರ ಎದುರಾಗಿ ಹೋರಾಡುವವರು ಗೆಲ್ಲಲಾರರು.
19 ಸಂಕಟಗಳನ್ನು ನಿರೀಕ್ಷಿಸುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾನ 16:33) ಇದನ್ನು ಮನಸ್ಸಿನಲ್ಲಿಟ್ಟು ಅಪೊಸ್ತಲರ ಕೃತ್ಯಗಳು 5:29ರಲ್ಲಿ ಹೇಳಿರುವ, ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’ ಎಂಬ ಮಾತುಗಳು ಹಿಂದೆಂದಿಗಿಂತಲೂ ಈಗ ಸಮಯೋಚಿತವಾಗಿವೆ. ಈ ಕಾರಣಕ್ಕಾಗಿ, ಆ ರೋಮಾಂಚಕವಾದ ಮಾತುಗಳನ್ನು ಯೆಹೋವನ ಸಾಕ್ಷಿಗಳ 2006ರ ವಾರ್ಷಿಕವಚನವಾಗಿ ಆರಿಸಲಾಗಿದೆ. ಮುಂದಿನ ವರುಷದಲ್ಲಿ ಮತ್ತು ನಿತ್ಯತೆಯಲ್ಲೆಲ್ಲ, ಏನೇ ಬರಲಿ, ಪರಮಾಧಿಕಾರಿಯಾಗಿರುವ ದೇವರಿಗೆ ವಿಧೇಯತೆಯನ್ನು ತೋರಿಸುವುದು ನಮ್ಮ ದೃಢನಿರ್ಣಯವಾಗಿರಲಿ!
[ಪಾದಟಿಪ್ಪಣಿ]
a ಆ ಸಂದರ್ಭದಲ್ಲಿ ಯಾಜಕರು ಬಹಿರಂಗವಾಗಿ ಬೆಂಬಲಿಸಿದ “ಕೈಸರನು” ಕಪಟಿಯೂ ಕೊಲೆಗಾರನೂ ಆಗಿದ್ದು, ತುಚ್ಛೀಕರಿಸಲ್ಪಟ್ಟಿದ್ದ ರೋಮನ್ ಚಕ್ರವರ್ತಿ ತಿಬೇರಿಯನಾಗಿದ್ದನು. ತಿಬೇರಿಯನು ಹೇಯವಾದ ಲೈಂಗಿಕ ಆಚಾರಗಳಿಗೂ ಕುಪ್ರಸಿದ್ಧನಾಗಿದ್ದನು.—ದಾನಿಯೇಲ 11:15, 21.
ನೀವು ಉತ್ತರ ಕೊಡಬಲ್ಲಿರಾ?
• ಅಪೊಸ್ತಲರು ವಿರೋಧವನ್ನು ಎದುರಿಸಿದ ರೀತಿಯಲ್ಲಿ ನಮಗೆ ಯಾವ ಪ್ರೋತ್ಸಾಹಕರವಾದ ಮಾದರಿಯನ್ನಿಟ್ಟರು?
• ನಾವು ಯಾವಾಗಲೂ ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು ಏಕೆ?
• ನಮ್ಮ ವಿರೋಧಿಗಳು ನಿಜವಾಗಿಯೂ ಯಾರ ವಿರುದ್ಧ ಹೋರಾಡುತ್ತಿದ್ದಾರೆ?
• ಹಿಂಸೆಯನ್ನು ತಾಳಿಕೊಳ್ಳುವವರಿಗೆ ಯಾವ ಫಲವನ್ನು ನಾವು ನಿರೀಕ್ಷಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1. (ಎ) ಈ ಅಧ್ಯಯನದ ಮುಖ್ಯ ವಚನ ಯಾವುದು? (ಬಿ) ಅಪೊಸ್ತಲರನ್ನು ಕೈದುಮಾಡಲಾದದ್ದು ಏಕೆ?
2. ಅಪೊಸ್ತಲರು ಏನು ಮಾಡುವಂತೆ ಒಬ್ಬ ದೇವದೂತನು ಅಪ್ಪಣೆಕೊಟ್ಟನು?
3, 4. (ಎ) ಸಾರುವುದನ್ನು ನಿಲ್ಲಿಸಬೇಕೆಂಬ ಅಪ್ಪಣೆ ಕೊಡಲ್ಪಟ್ಟಾಗ ಪೇತ್ರಯೋಹಾನರು ಹೇಗೆ ಪ್ರತಿವರ್ತಿಸಿದರು? (ಬಿ) ಬೇರೆ ಅಪೊಸ್ತಲರು ಹೇಗೆ ಪ್ರತಿವರ್ತಿಸಿದರು?
5, 6. ಅಪೊಸ್ತಲರು ನ್ಯಾಯಾಲಯದ ಆ ಆಜ್ಞೆಗೆ ಏಕೆ ವಿಧೇಯರಾಗಲಿಲ್ಲ?
7. ಸಾರುವ ಕಾರ್ಯವು ಯಾಜಕರಿಗೆ ಕೋಪವನ್ನೆಬ್ಬಿಸಿತು ಏಕೆ?
8. ಗಮಲಿಯೇಲನು ಹಿರೀಸಭೆಯ ನ್ಯಾಯಾಲಯಕ್ಕೆ ಯಾವ ವಿವೇಕಯುತ ಸಲಹೆ ನೀಡಿದನು?
9. ಅಪೊಸ್ತಲರ ಕೆಲಸವು ದೇವರದ್ದಾಗಿತ್ತೆಂದು ಯಾವುದು ತೋರಿಸುತ್ತದೆ?
10. ಮಾನವ ದೃಷ್ಟಿಕೋನದಿಂದ ನೋಡುವಾಗ, ಕಾಯಫನು ತನ್ನ ಸ್ಥಾನದಲ್ಲಿ ಭದ್ರನಾಗಿದ್ದೇನೆಂದು ಏಕೆ ನೆನಸಿದ್ದಿರಬಹುದು, ಆದರೆ ಅವನ ಆ ಭರವಸೆ ತಪ್ಪಾಗಿತ್ತು ಏಕೆ?
11. ಪೊಂತ್ಯ ಪಿಲಾತನಿಗೆ ಮತ್ತು ಯೆಹೂದಿ ವ್ಯವಸ್ಥೆಗೆ ಅಂತಿಮವಾಗಿ ಏನಾಯಿತು, ಮತ್ತು ಇದರಿಂದ ನೀವು ಯಾವ ತೀರ್ಮಾನಕ್ಕೆ ಬರುತ್ತೀರಿ?
12. ದೇವರಿಗೆ ವಿಧೇಯತೆಯನ್ನು ತೋರಿಸುವುದೇ ವಿವೇಕದ ಮಾರ್ಗವೆಂಬುದನ್ನು ಯೇಸುವಿನ ಸನ್ನಿವೇಶ ಹೇಗೆ ರುಜುಪಡಿಸುತ್ತದೆ?
13. ಆಧುನಿಕ ಸಮಯಗಳಲ್ಲಿ, ಯಾವ ಕೆಲಸವು ಮನುಷ್ಯರದ್ದು ಮತ್ತು ಯಾವ ಕೆಲಸವು ದೇವರದ್ದು ಎಂದು ರುಜುವಾಗಿದೆ? ನಿಮಗೆ ಅದು ಹೇಗೆ ಗೊತ್ತು?
14. (ಎ) ದೇವರ ಸೇವಕರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ವಿರೋಧಿಗಳು ಯಾವ ಪ್ರಯತ್ನವನ್ನು ಮಾಡಿದ್ದಾರೆ, ಮತ್ತು ಪರಿಣಾಮಗಳೇನಾಗಿವೆ? (ಬಿ) ಇಂತಹ ಪ್ರಯತ್ನಗಳು ದೇವಜನರಿಗೆ ಶಾಶ್ವತವಾದ ಹಾನಿಯನ್ನು ತರುವವೊ? (ಇಬ್ರಿಯ 13:5, 6)
15, 16. ತಮ್ಮ ಕ್ರೈಸ್ತ ಕೆಲಸದ ಮೇಲೆ ಬಂದಿರುವ ವಿರೋಧಕ್ಕೆ ಫ್ರಾನ್ಸ್ ದೇಶದ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿವರ್ತಿಸಿದ್ದಾರೆ, ಮತ್ತು ಅವರು ಸುವಾರ್ತೆ ಸಾರುತ್ತಾ ಇರುವುದೇಕೆ?
17. (ಎ) ನಮ್ಮ ವೈರಿಗಳಿಗೆ ನಾವು ಏಕೆ ಭಯಪಡಬಾರದು? (ಬಿ) ಹಿಂಸೆಪಡಿಸುವವರ ಕಡೆಗೆ ನಮ್ಮ ಮನೋಭಾವವೇನಾಗಿರಬೇಕು?
18. (ಎ) ಯೆಹೋವನು ತನ್ನ ಜನರನ್ನು ಯಾವ ವಿಧದಲ್ಲಿ ರಕ್ಷಿಸಾನು? (ಬಿ) ಅಂತಿಮ ಫಲಿತಾಂಶವೇನಾಗಿರುವುದು?
19. ಇಸವಿ 2006ರ ವಾರ್ಷಿಕವಚನವು ಯಾವುದು, ಮತ್ತು ಇದು ಏಕೆ ತಕ್ಕದ್ದಾಗಿದೆ?
[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಸವಿ 2006ರ ವಾರ್ಷಿಕವಚನ: ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು.’—ಅ. ಕೃತ್ಯಗಳು 5:29
[ಪುಟ 19ರಲ್ಲಿರುವ ಚಿತ್ರ]
‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’
[ಪುಟ 21ರಲ್ಲಿರುವ ಚಿತ್ರ]
ಕಾಯಫನು ದೇವರಿಗಿಂತ ಹೆಚ್ಚಾಗಿ ಮನುಷ್ಯರಲ್ಲಿ ಭರವಸೆಯಿಟ್ಟನು