ಯೆಹೋವನ ಭಯದಲ್ಲಿ ನಡೆಯಿರಿ
“[ಸಭೆಯು] ಯೆಹೋವನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಹೆಚ್ಚುತ್ತಾ ಬಂತು.”—ಅ.ಕೃತ್ಯಗಳು 9:31.
1, 2. (ಎ) ಸಮಾಧಾನದ ಸಮಯಾವಧಿಯಲ್ಲಿ ಕ್ರೈಸ್ತ ಸಭೆಗೆ ಏನು ಸಂಭವಿಸಿತು? (ಬಿ) ಯೆಹೋವನು ಹಿಂಸೆಯನ್ನು ಅನುಮತಿಸುತ್ತಾನಾದರೂ, ಬೇರೇನನ್ನು ಅವನು ಮಾಡುತ್ತಾನೆ?
ಶಿಷ್ಯನೊಬ್ಬನು ಒಂದು ಶ್ರೇಷ್ಠ ಪರೀಕ್ಷೆಯನ್ನು ಎದುರಿಸಿದನು. ಅವನು ದೇವರಿಗೆ ಸಮಗ್ರತೆಯನ್ನು ತೋರಿಸುವನೋ? ಹೌದು, ಖಂಡಿತವಾಗಿಯೂ! ಅವನು ದೇವರ ಭಯದಲ್ಲಿ ನಡೆದಿದ್ದನು, ತನ್ನ ನಿರ್ಮಾಣಿಕನೆಡೆಗೆ ಭಯಭಕ್ತಿಯಿತ್ತು ಮತ್ತು ಯೆಹೋವನ ಒಬ್ಬ ನಂಬಿಗಸ್ತ ಸಾಕ್ಷಿಯಾಗಿ ಸಾಯಲಿದ್ದನು.
2 ಆ ದೇವಭೀರು ಸಮಗ್ರತೆ-ಪಾಲಕನು “ಪವಿತ್ರಾತ್ಮಭರಿತನೂ, ನಂಬಿಕೆಯಿಂದ ತುಂಬಿದವನೂ ಆದ” ಸ್ತೆಫನನಾಗಿದ್ದನು. (ಅ.ಕೃತ್ಯಗಳು 6:5) ಅವನು ಹತ್ಯೆಯು ಹಿಂಸೆಯ ಅಲೆಯನ್ನು ಎಬ್ಬಿಸಿತು, ಆದರೆ ತದನಂತರ ಯೂದಾಯ, ಗಲಿಲಾಯ ಮತ್ತು ಸಮಾರ್ಯಗಳಲ್ಲಿನ ಸಭೆಗಳು ಸಮಾಧಾನದ ಸಮಯಾವಧಿಯನ್ನು ಅನುಭವಿಸಿದವು ಮತ್ತು ಆತ್ಮೀಕವಾಗಿ ಕಟ್ಟಲ್ಪಟ್ಟವು. ಅದಲ್ಲದೇ, “ಅವರು ಯೆಹೋವನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಹೆಚ್ಚುತ್ತಾ ಬಂದರು.” (ಅ.ಕೃತ್ಯಗಳು 9:31) ಅಪೊಸ್ತಲರ ಕೃತ್ಯಗಳು 6 ನೆಯ ಅಧ್ಯಾಯದಿಂದ ಹಿಡಿದು ಹನ್ನೆರಡರ ತನಕದಲ್ಲಿ ತೋರಿಸಲ್ಪಟ್ಟಂತೆ, ಇಂದಿನ ಯೆಹೋವನ ಸಾಕ್ಷಿಗಳೋಪಾದಿ, ನಾವು ಸಮಾಧಾನ ಯಾ ಹಿಂಸೆಯನ್ನೇ ಅನುಭವಿಸಲಿ, ಯೆಹೋವನು ನಮ್ಮನ್ನು ಆಶೀರ್ವದಿಸುವನೆಂದು ಖಾತ್ರಿಯಿಂದಿರಸಾಧ್ಯವಿದೆ. ಆದುದರಿಂದ, ಹಿಂಸಿಸಲ್ಪಟ್ಟಾಗ ದೇವರ ಭಯದಲ್ಲಿ ನಾವು ನಡೆಯೋಣ ಯಾ ಹಿಂಸೆಯಿಂದ ಸ್ವಲ್ಪ ಬಿಡುಗಡೆ ದೊರೆತಾಗ ಆತ್ಮೀಕ ಬಲವರ್ಧನೆಗಾಗಿ ಮತ್ತು ಅವನ ಸೇವೆಯನ್ನು ಇನ್ನೂ ಹೆಚ್ಚು ಚಟುವಟಿಕೆಯಿಂದ ಮಾಡಲು ಆ ಸಮಯವನ್ನು ಉಪಯೋಗಿಸೋಣ.—ಧರ್ಮೋಪದೇಶಕಾಂಡ 32:11, 12; 33:27.
ಕೊನೆಯ ತನಕ ನಂಬಿಗಸ್ತರು
3. ಯೆರೂಸಲೇಮಿನಲ್ಲಿ ಯಾವ ಸಮಸ್ಯೆಯನ್ನು ಪರಿಹರಿಸಲಾಯಿತು, ಮತ್ತು ಹೇಗೆ?
3 ಸಮಾಧಾನದ ಸಮಯದಲ್ಲೂ ಸಮಸ್ಯೆಗಳು ಎದ್ದಲ್ಲಿ, ಒಳ್ಳೆಯ ಸಂಸ್ಥಾಪನೆಯು ಅವುಗಳನ್ನು ಬಗೆಹರಿಸಲು ಸಹಾಯಕರವಾಗಬಲ್ಲದು. (6:1-7) ಇಬ್ರಿಯ ಭಾಷೆಯನ್ನಾಡುವ ಯೆಹೂದ್ಯ ವಿಶ್ವಾಸೀ ವಿಧವೆಯರನ್ನು ದಿನದಿನದ ಉಪಚಾರದಲ್ಲಿ ಹೆಚ್ಚು ಲಕ್ಷ್ಯಿಸಿ, ತಮ್ಮ ವಿಧವೆಯರನ್ನು ಅಲಕ್ಷ್ಯಿಸಲಾಗಿದೆ ಎಂದು ಯೆರೂಸಲೇಮಿನಲ್ಲಿರುವ ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರು ದೂರಿದರು. “ಈ ಅವಶ್ಯಕ ಕೆಲಸಕ್ಕಾಗಿ” ಅಪೊಸ್ತಲರು ಏಳು ಮಂದಿಯನ್ನು ನೇಮಿಸಿದಾಗ ಈ ಸಮಸ್ಯೆಯು ಪರಿಹಾರಗೊಂಡಿತು. ಇವರಲ್ಲಿ ಸ್ತೆಫನನು ಒಬ್ಬನು.
4. ಸುಳ್ಳು ಆರೋಪಗಳಿಗೆ ಸ್ತೆಫನನ ಪ್ರತಿವರ್ತನೆ ಏನಾಗಿತ್ತು?
4 ಆದಾಗ್ಯೂ, ದೇವ-ಭೀರು ಸ್ತೆಫನನು ಬಲುಬೇಗನೆ ಪರೀಕ್ಷೆಯೊಂದನ್ನು ಎದುರಿಸಿದನು. (6:8-15) ಕೆಲವು ಜನರು ಎದ್ದು ಸ್ತೆಫನನೊಡನೆ ತರ್ಕಮಾಡಲು ಆರಂಭಿಸಿದರು. ಅವರಲ್ಲಿ ಕೆಲವರು “ಲಿಬೆರ್ತೀನರೆಂಬ ಸಮಾಜದವರು”, ಪ್ರಾಯಶಃ ರೋಮನರಿಂದ ಸೆರೆಹಿಡಿಯಲ್ಪಟ್ಟ ಯೆಹೂದ್ಯರಲ್ಲಿ ನಂತರ ಬಿಡುಗಡೆ ಹೊಂದಿದವರು ಇಲ್ಲವೇ ಒಮ್ಮೆ ದಾಸರಾಗಿದ್ದ ಯೆಹೂದಿ ಮತಾಂತರಿಗಳು ಆಗಿದ್ದಿರಬಹುದು. ಸ್ತೆಫನನ ವಿವೇಕ ಮತ್ತು ಆತ್ಮದ ಎದುರು ನಿಲ್ಲಶಕ್ತರಾಗದೇ, ಈ ವಿರೋಧಿಗಳು ಅವನನ್ನು ಸನ್ಹೆದ್ರಿನ್ ಮುಂದೆ ಕೊಂಡೊಯ್ದರು. ಅಲ್ಲಿ ಸುಳ್ಳು ಸಾಕ್ಷಿಗಳು ಹೇಳಿದ್ದು: ‘ದೇವಾಲಯವನ್ನು ಯೇಸುವು ಕೆಡವಿ ಹಾಕುವನು ಮತ್ತು ಮೋಶೆಯಿಂದ ಬಂದ ಆಚಾರಗಳನ್ನು ಬೇರೆ ಮಾಡುವನು ಎಂದು ಈ ಮನುಷ್ಯನು ಹೇಳುವುದನ್ನು ನಾವು ಕೇಳಿದೆವು.’ ಆದರೂ, ಅವನ ವಿರೋಧಿಗಳು ಸ್ತೆಫನನು ತಪ್ಪುಗಾರನಲ್ಲವೆಂದೂ, ಬದಲಿಗೆ ದೇವದೂತನ ಮುಖದಂತೆ—ದೇವರ ಬೆಂಬಲವಿರುವ ಅವನ ದೂತನಂತೆ—ಅವನು ಪ್ರಶಾಂತ ಮುಖಭಾವದಿಂದ ಇರುವುದನ್ನೂ ಕಾಣ ಶಕ್ತರಾದರು. ಅವರು ತಮ್ಮನ್ನು ಸೈತಾನನಿಗೆ ಒಪ್ಪಿಸಿಕೊಟ್ಟದರ್ದಿಂದ, ವ್ಯಾಧಿಕರ ಹಾನಿಕಾರಕ ದುಷ್ಟತನದಿಂದ ತುಂಬಿದ ಅವರ ಮುಖಗಳಿಗಿಂತ ಎಷ್ಟೊಂದು ಭಿನ್ನವಾಗಿತ್ತು !
5. ಸಾಕ್ಷಿ ನೀಡುವಾಗ ಯಾವ ವಿಷಯಗಳನ್ನು ಸ್ತೆಫನನು ತಿಳಿಸಿದನು?
5 ಮಹಾಯಾಜಕ ಕಾಯಫನಿಂದ ಪ್ರಶ್ನಿಸಲ್ಪಟ್ಟಾಗ, ಸ್ತೆಫನನು ನಿರ್ಭೀತಿಯ ಸಾಕ್ಷಿಯನ್ನಿತ್ತನು. (7:1-53) ಇಸ್ರಾಯೇಲ್ಯರ ಇತಿಹಾಸದ ಅವನ ಪುನರಾವರ್ತನೆಯು, ಮೆಸ್ಸೀಯನು ಬಂದ ನಂತರ ನಿಯಮ ಶಾಸ್ತ್ರ ವನ್ನೂ, ದೇವಾಲಯದ ಸೇವೆಯನ್ನೂ ಇಲ್ಲದಂತೆ ಮಾಡುವುದು ದೇವರ ಉದ್ದೇಶವಾಗಿತ್ತು ಎಂದು ತೋರಿಸಿತು. ತಾನು ವಿಮೋಚಕನಾದ ಮೋಶೆಯನ್ನು ಗೌರವಿಸುತ್ತೇನೆಂದು ಹೇಳುವ ಪ್ರತಿಯೊಬ್ಬ ಯೆಹೂದ್ಯನು, ಮೋಶೆಯನ್ನು ತಿರಸ್ಕರಿಸಿದಂತೆಯೇ, ಮಹಾ ಬಿಡುಗಡೆಯನ್ನು ತರುವನನ್ನು ಸಹಿತ ಈಗ ಅವರು ತಿರಸ್ಕರಿಸುತ್ತಾರೆಂದು ಸ್ತೆಫನನು ತಿಳಿಸಿದನು. ಕೈಗಳಿಂದ ಕಟ್ಟಿದ ಮನೆಗಳಲ್ಲಿ ದೇವರು ವಾಸಿಸುವುದಿಲ್ಲವೆಂದು ಹೇಳಿದ್ದರ ಮೂಲಕ, ದೇವಾಲಯ ಮತ್ತು ಅದರ ಆರಾಧನಾ ಏರ್ಪಾಡು ಗತಿಸಿ ಹೋಗಲಿದೆ ಎಂದು ಸ್ತೆಫನನು ತೋರಿಸಿದನು. ಆದರೆ ಅವನ ನ್ಯಾಯಾಧೀಶರು ದೇವರಿಗೆ ಭಯಪಡುತ್ತಿರಲಿಲ್ಲ ಇಲ್ಲವೇ ಆತನ ಚಿತ್ತವನ್ನು ತಿಳಿಯಲು ಬಯಸಲಿಲ್ಲವಾದ್ದರಿಂದ ಸ್ತೆಫನನು ಅಂದದ್ದು: ‘ಚಂಡಿಗಳೇ, ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆ ಪಡಿಸದವರು ಯಾರಿದ್ದಾರೆ? ಅವರು ಆ ನೀತಿಸ್ವರೂಪನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಅವನನ್ನು ಹಿಡುಕೊಟ್ಟು ಕೊಂದವರಾದಿರಿ.’
6. (ಎ) ತನ್ನ ಮರಣದ ಮೊದಲು ನಂಬಿಕೆ-ಬಲಪಡಿಸುವ ಯಾವ ಅನುಭವ ಸ್ತೆಫನನಿಗೆ ಆಯಿತು? (ಬಿ) “ಯೇಸು ಸ್ವಾಮಿಯೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಸ್ತೆಫನನು ಯೋಗ್ಯವಾಗಿಯೇ ಹೇಳಶಕ್ತನಾದದ್ದು ಹೇಗೆ?
6 ಸ್ತೆಫನನ ನಿರ್ಭೀತಿಯ ಉತ್ತರವು ಅವನ ಕೊಲೆಗೆ ನಡಿಸಿತು. (7:54-60) ಯೇಸುವಿನ ಕೊಲೆಯಲ್ಲಿದ್ದ ತಮ್ಮ ತಪ್ಪನ್ನು ಬಹಿರಂಗಗೊಳಿಸಿದ್ದಕ್ಕಾಗಿ ನ್ಯಾಯಾಧಿಪತಿಗಳು ಕ್ರೋಧಿತರಾದರು. ಆದರೆ ಸ್ತೆಫನನು ‘ಆಕಾಶದ ಕಡೆಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತ ಯೇಸುವನ್ನೂ ಕಂಡಾಗ’ ಅವನ ನಂಬಿಕೆಯು ಎಷ್ಟೊಂದು ದೃಢಗೊಂಡಿರಬೇಕು ! ತಾನು ದೇವರ ಚಿತ್ತವನ್ನು ಮಾಡಿದ್ದೇನೆಂಬ ಭರವಸೆಯಿಂದ ತನ್ನ ವಿರೋಧಿಗಳನ್ನು ಅವನು ಈಗ ಎದುರಿಸಶಕ್ತನಾಗಿದ್ದನು. ಯೆಹೋವನ ಸಾಕ್ಷಿಗಳಿಗೆ ಅಂತಹ ದರ್ಶನಗಳು ಇಲ್ಲದಿರುವುದಾದರೂ, ಹಿಂಸಿಸಲ್ಪಟ್ಟಾಗ ದೇವರಿಂದ ಕೊಡಲ್ಪಡುವ ತದ್ರೀತಿಯ ಪ್ರಶಾಂತತೆಯು ನಮಗಿರಸಾಧ್ಯವಿದೆ. ಸ್ತಫನನ್ನು ಯೆರೂಸಲೇಮಿನ ಹೊರಗೆ ಕೊಂಡು ಹೋದ ನಂತರ ಅವನ ಶತ್ರುಗಳು ಅವನಿಗೆ ಕಲ್ಲೆಸೆಯಲಾರಂಭಿಸಿದರು, ಆಗ ಅವನು ಈ ವಿನಂತಿಯನ್ನು ಮಾಡಿದನು: “ಯೇಸು ಸ್ವಾಮಿಯೇ, ನನ್ನಾತ್ಮವನ್ನು ಸೇರಿಸಿಕೋ.” ಇದು ಯೋಗ್ಯವಾಗಿತ್ತು ಯಾಕಂದರೆ ಜೀವಿತಕ್ಕೆ ಇತರರನ್ನು ಎಬ್ಬಿಸಲು ದೇವರು ಯೇಸುವಿಗೆ ಅಧಿಕಾರವನ್ನಿತ್ತಿದ್ದನು. (ಯೋಹಾನ 5:26; 6:40; 11:25, 26) ಮೊಣಕಾಲೂರಿ, ಸ್ತೆಫನನು ಮಹಾ ಶಬ್ದದಿಂದ ಕೂಗಿ ಹೇಳಿದ್ದು: “ಯೆಹೋವನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ.”(NW) ಅಂದಿನಿಂದ ಆಧುನಿಕ ಸಮಯಗಳ ತನಕ ಯೇಸುವಿನ ಅನೇಕ ಹಿಂಬಾಲಕರು ಮಾಡಿದಂತೆ, ಅವನು ಒಬ್ಬ ಧರ್ಮಬಲಿಯೋಪಾದಿ ಅನಂತರ ಮರಣದಲ್ಲಿ ನಿದ್ರೆಹೋದನು.
ಹಿಂಸೆಯು ಸುವಾರ್ತೆಯನ್ನು ಹಬ್ಬಿಸುತ್ತದೆ
7. ಹಿಂಸೆಯ ಫಲಿತಾಂಶವೇನು?
7 ವಾಸ್ತವದಲ್ಲಿ ಸ್ತೆಪನನ ಮರಣವು ಸುವಾರ್ತೆಯ ಹಬ್ಬಿಸುವಿಕೆಗೆ ಕಾರಣವಾಯಿತು. (8:1-4) ಅಪೊಸ್ತಲರ ಹೊರತಾಗಿ ಬೇರೆಲ್ಲಾ ಶಿಷ್ಯರನ್ನು ಹಿಂಸೆಯು ಯೂದಾಯ ಮತ್ತು ಸಮಾರ್ಯದಲ್ಲೆಲ್ಲಾ ಚದರುವಂತೆ ಮಾಡಿತು. ಸ್ತೆಫನನ ಮರಣವನ್ನು ಸಮ್ಮತಿಸಿದ ಸೌಲನು ಮೃಗದೋಪಾದಿ ಸಭೆಯನ್ನು ಧ್ವಂಸಮಾಡಿದನು, ಯೇಸುವಿನ ಹಿಂಬಾಲಕರನ್ನು ಸೆರೆಮನೆಗೆ ದೊಬ್ಬಲು ಒಂದಾದ ನಂತರ ಇನ್ನೊಂದು ಹೀಗೆ, ಮನೆಗಳ ಮೇಲೆ ಧಾಳಿಮಾಡುತ್ತಿದ್ದನು. ಚದರಿಸಲ್ಪಟ್ಟ ಶಿಷ್ಯರು ಸಾರುವಿಕೆಯನ್ನು ಜ್ಯಾರಿಯಲ್ಲಿ ಇಟ್ಟ ಹಾಗೆ, ದೇವ-ಭೀರು ರಾಜ್ಯ ಘೋಷಕರನ್ನು ಹಿಂಸಿಸುವ ಮೂಲಕ ಅವರನ್ನು ನಿಲ್ಲಿಸುವ ಸೈತಾನನ ಹಂಚಿಕೆಯು ನಿಷ್ಫಲಗೊಂಡಿತು. ಇಂದು ಕೂಡಾ, ಹಿಂಸೆಯು ಆಗಾಗ್ಯೆ ಸುವಾರ್ತೆಯನ್ನು ಹಬ್ಬಿಸಲು ಇಲ್ಲವೇ ರಾಜ್ಯ-ಸಾರುವ ಕೆಲಸದ ಕಡೆಗೆ ಗಮನವನ್ನು ಸೆಳೆಯುವಂತೆ ಕಾರಣವಾಗಿದೆ.
8. (ಎ) ಸಮಾರ್ಯದಲ್ಲಿ ಸಾರಿದರ್ದ ಫಲವಾಗಿ ಏನು ಸಂಭವಿಸಿತು? (ಬಿ) ಯೇಸುವು ಅವನ ವಶಕ್ಕೆ ಕೊಟ್ಟ ಎರಡನೆಯ ಬೀಗದ ಕೈಯನ್ನು ಪೇತ್ರನು ಹೇಗೆ ಉಪಯೋಗಿಸಿದನು?
8 ಸುವಾರ್ತಿಕನಾದ ಫಿಲಿಪ್ಪನು “ಕ್ರಿಸ್ತನನ್ನು ಪ್ರಕಟಿಸಲು” ಸಮಾರ್ಯಕ್ಕೆ ಹೋದನು. (8:5-25) ಸುವಾರ್ತೆಯು ಸಾರಲ್ಪಟ್ಟಾಗ, ದುಷ್ಟಾತ್ಮಗಳನ್ನು ಹೊರ ಅಟ್ಟಿದಾಗ ಮತ್ತು ಜನರನ್ನು ವಾಸಿಮಾಡಿದಾಗ ಪಟ್ಟಣದಲ್ಲಿ ಮಹಾ ಸಂತೋಷವಾಯಿತು. ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಪೇತ್ರ ಯೋಹಾನರನ್ನು ಸಮಾರ್ಯಕ್ಕೆ ಕಳುಹಿಸಿದರು ಮತ್ತು ಅವರ ಅಲ್ಲಿ ಪ್ರಾರ್ಥನೆ ಮಾಡಿ ಹಸ್ತಗಳನ್ನಿಟ್ಟಾಗ ಹೊಸ ಶಿಷ್ಯರು ಪವಿತ್ರಾತ್ಮವನ್ನು ಪಡೆದರು. ಮಾಜಿ ಮಾಂತ್ರಿಕನಾಗಿದ್ದ, ಆದರೆ ಈಗ ಹೊಸತಾಗಿ ದೀಕ್ಷಾಸ್ನಾನ ಪಡೆದ ಸೀಮೋನನು ಆ ವರದಾನವನ್ನು ಹಣಕ್ಕೆ ಖರೀದಿಸಲು ಪ್ರಯತ್ನಿಸಿದಾಗ, ಪೇತ್ರನಂದದ್ದು: ‘ನಿನ್ನ ಬೆಳ್ಳಿಯು ನಿನ್ನ ಕೂಡಾ ಹಾಳಾಗಿ ಹೋಗಲಿ. ನಿನ್ನ ಹೃದಯವು ದೇವರ ಮುಂದೆ ನೇರವಾಗಿಲ್ಲ.’(NW) ಪಶ್ಚಾತ್ತಾಪ ಪಡಲು ಮತ್ತು ಯೆಹೋವನ ಕ್ಷಮಾಪಣೆ ಬೇಡಲು ಹೇಳಿದಾಗ, ತನ್ನ ಪರವಾಗಿ ಪ್ರಾರ್ಥಿಸುವಂತೆ ಅಪೊಸ್ತಲರನ್ನು ಬೇಡಿಕೊಳ್ಳುತ್ತಾನೆ. ತಮ್ಮ ಹೃದಯಗಳನ್ನು ಕಾಪಾಡಿಕೊಳ್ಳುವುದರಲ್ಲಿ ದೈವಿಕ ಸಹಾಯಕ್ಕಾಗಿ ಬೇಡಲು, ಇದು ಯೆಹೋವನಿಗೆ ಭಯಪಡುವ ಇಂದಿನ ಎಲ್ಲರನ್ನು ಪ್ರಚೋದಿಸಬೇಕು. (ಜ್ಞಾನೋಕ್ತಿ 4:23) (ಈ ಘಟನೆಯಿಂದ “ಸಿಮೊನಿ” ಶಬ್ದ ಬಂದಿದೆ, ಅಂದರೆ “ಧರ್ಮಾಧಿಕಾರದ, ಮಠವೃತ್ತಿಗಳ ಮಾರಾಟ ಇಲ್ಲವೇ ಖರೀದಿಸುವಿಕೆ”) ಪೇತ್ರ ಯೋಹಾನರು ಸಮಾರ್ಯದ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು. ಈ ರೀತಿಯಲ್ಲಿ ಪೇತ್ರನು ಜ್ಞಾನದ ದ್ವಾರವನ್ನು ಮತ್ತು ಸ್ವರ್ಗೀಯ ರಾಜ್ಯಕ್ಕೆ ಪ್ರವೇಶಿಸುವ ಸಂದರ್ಭಗಳನ್ನು ತೆರೆಯಲು ಯೇಸುವು ಕೊಟ್ಟ ಬೀಗದ ಕೈಗಳಲ್ಲಿ ಎರಡನೆಯದ್ದನ್ನು ಉಪಯೋಗಿಸಿದನು.—ಮತ್ತಾಯ 16:19.
9. ಫಿಲಿಪ್ಪನು ಸಾಕ್ಷಿ ನೀಡಿದ ಐಥಿಯೋಪ್ಯದವನು ಯಾರು, ಮತ್ತು ಆ ಮನುಷ್ಯನು ದೀಕ್ಷಾಸ್ನಾನ ಪಡಕೊಳ್ಳಲು ಶಕ್ತನಾದದ್ದು ಹೇಗೆ?
9 ದೇವದೂತನು ತದನಂತರ ಫಿಲಿಪ್ಪನಿಗೆ ಒಂದು ಹೊಸ ನೇಮಕವನ್ನು ಕೊಟ್ಟನು. (8:26-40) ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ಖಜಾನೆಯ ಮೇಲ್ವಿಚಾರಕನಾಗಿದ್ದ “ಕಂಚುಕಿಯೊಬ್ಬನು” ಯೆರೂಸಲೇಮಿನಿಂದ ಗಾಜಾಕ್ಕೆ ರಥದಲ್ಲಿ ಹೋಗುತ್ತಾ ಇದ್ದನು. ಈತನು ಶಾರೀರಿಕವಾಗಿ “ಕಂಚುಕಿ” (ನಪುಂಸಕ) ನಾಗಿರಲಿಲ್ಲ, ಯಾಕಂದರೆ ಅಂಥವರು ಯೆಹೂದ್ಯರ ಸಭೆಗಳಲ್ಲಿ ಸೇರಕೂಡದಿತ್ತು. ಆದರೆ ಅವನು ಸುನ್ನತಿ ಹೊಂದಿದ ಮತಾಂತರಿಯಾಗಿ ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿದ್ದನು. (ಧರ್ಮೋಪದೇಶಕಾಂಡ 23:1) ಫಿಲಿಪ್ಪನು ಯೆಶಾಯ ಪುಸ್ತಕದಿಂದ ಅವನು ಓದುವುದನ್ನು ಕಂಡನು. ರಥದ ಮೇಲೆ ಬರಲು ಆಹ್ವಾನಿಸಲ್ಪಟ್ಟಾದ ಮೇಲೆ, ಫಿಲಿಪ್ಪನು ಯೆಶಾಯನ ಪ್ರವಾದನೆಯನ್ನು ಚರ್ಚಿಸಿದನು ಮತ್ತು “ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು.” (ಯೆಶಾಯ 53:7, 8) ತಕ್ಷಣವೇ ಐಥಿಯೋಪ್ಯನು ಉದ್ಗರಿಸಿದ್ದು: “ಅಗೋ ! ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?” ಯಾವುದೇ ಅಡ್ಡಿ ಇರಲಿಲ್ಲ, ಯಾಕಂದರೆ ಅವನು ದೇವರ ಕುರಿತು ಬಲ್ಲವನಾಗಿದ್ದನು ಮತ್ತು ಕ್ರಿಸ್ತನಲ್ಲಿ ನಂಬಿಕೆ ಇತ್ತು. ಆದುದರಿಂದ ಫಿಲಿಪ್ಪನು ಐಥಿಯೋಪ್ಯನಿಗೆ ದೀಕ್ಷಾಸ್ನಾನವನ್ನಿತ್ತನು, ತದನಂತರ ಅವನು ಸಂತೋಷಯುಳ್ಳವನಾಗಿ ತನ್ನ ದಾರಿಯನ್ನು ಹಿಡಿದು ಹೋದನು. ದೀಕ್ಷಾಸ್ನಾನ ಪಡೆಯುವುದರಿಂದ ನಿಮಗೆ ಏನಾದರೂ ಅಡ್ಡಿ ಇದೆಯೇ?
ಹಿಂಸಕನೊಬ್ಬನು ಪರಿವರ್ತಿತನಾದದ್ದು
10, 11. ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಮತ್ತು ಅದರ ಸ್ವಲ್ಪ ಸಮಯದ ನಂತರ ತಾರ್ಸದ ಸೌಲನಿಗೆ ಏನು ಸಂಭವಿಸಿತು?
10 ಸೆರೆಮನೆಯ ಯಾ ಮರಣದಂಡಣೆಯ ಬೆದರಿಕೆಯಡಿಯಲ್ಲಿ ಯೇಸುವಿನ ಅನುಯಾಯಿಗಳು ತಮ್ಮ ವಿಶ್ವಾಸವನ್ನು ತ್ಯಜಿಸಲು ಸೌಲನು ತನ್ಮಧ್ಯೆ ಪ್ರಯತ್ನಿಸಿದನು. (9:1-18ಎ) ದಮಾಸ್ಕದಲ್ಲಿರುವ ಸಭಾಮಂದಿರಗಳಿಗೆ ಮಹಾ ಯಾಜಕನು (ಪ್ರಾಯಶಃ ಕಾಯಫನಾಗಿರಬಹುದು) ಕಾಗದಗಳನ್ನು ಇವನ ಹತ್ತಿರ ಕೊಟ್ಟು, “ಆ ಮಾರ್ಗ” ಇಲ್ಲವೇ ಕ್ರಿಸ್ತನ ಮಾದರಿಯ ಮೇಲೆ ಆಧರಿತ ಜೀವಿತ ವಿಧಾನಕ್ಕೆ ಸೇರಿದ ಪುರುಷರಾಗಲೀ, ಸ್ತ್ರೀಯರಾಗಲೀ ಅವರನ್ನು ಬೇಡಿ ಹಾಕಿಸಿ ಯೆರೂಸಲೇಮಿಗೆ ತರಲು ಅವನಿಗೆ ಅಧಿಕಾರವನ್ನಿತ್ತನು. ದಮಸ್ಕಕ್ಕೆ ಹತ್ತಿರದಲ್ಲಿ ಸುಮಾರು ನಡುಮಧ್ಯಾಹ್ನಕ್ಕೆ ಆಕಾಶದಿಂದ ಬೆಳಕು ಮಿಂಚಿತು ಮತ್ತು ಒಂದು ಧ್ವನಿ ಕೇಳಿತು: “ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ?” ಸೌಲನ ಹತ್ತಿರವಿದ್ದವರು “ಧ್ವನಿಯ ಶಬ್ದವನ್ನು” ಮಾತ್ರ ಕೇಳಿದರೆ ಹೊರತು ಏನು ಹೇಳಲ್ಪಟ್ಟಿತೋ ಅದು ಅವರಿಗೆ ಅರ್ಥವಾಗಲಿಲ್ಲ. (ಅ.ಕೃತ್ಯಗಳು 22:6, 9 ನ್ನು ಹೋಲಿಸಿರಿ.) ಮಹಿಮಾಭರಿತ ಯೇಸುವಿನ ಆಂಶಿಕ ಪ್ರಕಟನೆಯು ಸೌಲನಿಗೆ ಕಣ್ಣು ಕಾಣದೇ ಹೋಗುವಂತೆ ಮಾಡಿತು. ಅವನ ದೃಷ್ಟಿಯನ್ನು ಪುನಃ ಸ್ಥಾಪಿಸಲು ಶಿಷ್ಯನಾದ ಅನನೀಯನೆಂಬ ಶಿಷ್ಯನನ್ನು ದೇವರು ಉಪಯೋಗಿಸಿದನು.
11 ಅವನ ದೀಕ್ಷಾಸ್ನಾನದ ನಂತರ, ಗತಕಾಲದ ಹಿಂಸಕನು ತಾನೇ ಹಿಂಸೆಯ ಗುರಿಯಾದನು. (9:18ಬಿ-25) ದಮಸ್ಕದಲ್ಲಿರುವ ಯೆಹೂದ್ಯರು ಸೌಲನನ್ನು ಕೊಲ್ಲಬೇಕೆಂದಿದ್ದರು. ಆದಾಗ್ಯೂ, ರಾತ್ರಿಯಲ್ಲಿ ಶಿಷ್ಯರು ಅವನನ್ನು ಬೆತ್ತಗಳಿಂದ ಹೆಣೆದ ಒಂದು ದೊಡ್ಡ ಬುಟ್ಟಿಯಲ್ಲಿ ಇಟ್ಟು ಗೋಡೆಯೊಳಗಿಂದ ಇಳಿಸಿದರು. (2 ಕೊರಿಂಥ್ಯದವರಿಗೆ 11:32, 33) ಗೋಡೆಯ ಪಕ್ಕದಲ್ಲಿ ಮನೆಯಿದ್ದ ಒಬ್ಬ ಶಿಷ್ಯನ ಕಿಟಕಿಗಳಿಂದ ಈ ಮಾರ್ಗ ಮಾಡಿದಿರ್ದಬಹುದು. ವಿರೋಧಿಗಳಿಂದ ತಪ್ಪಿಸಿಕೊಳ್ಳಲು ಮತ್ತು ಸಾರುವುದನ್ನು ಜ್ಯಾರಿಯಲ್ಲಿರಿಸಲು ಹೂಡಿದ ಹೆದರಿಕೆಯ ಒಂದು ಕೃತ್ಯವಲ್ಲ.
12. (ಎ) ಯೆರೂಸಲೇಮಿನಲ್ಲಿ ಪೌಲನಿಗೆ ಏನು ಸಂಭವಿಸಿತು? (ಬಿ) ಸಭೆಯು ಯಾವ ರೀತಿ ಕಾರ್ಯ ನಿರ್ವಹಿಸುತ್ತಿತ್ತು?
12 ಯೆರೂಸಲೇಮಿನಲ್ಲಿ ಶಿಷ್ಯರು ಸೌಲನನ್ನು ಒಬ್ಬ ಜತೆ ವಿಶ್ವಾಸಿಯಾಗಿ ಸ್ವೀಕರಿಸುವಂತೆ ಶಿಷ್ಯರಿಗೆ ಬಾರ್ನಬನು ಸಹಾಯ ಮಾಡಿದನು. (9:26-31) ಅಲ್ಲಿ ಗ್ರೀಕ್ ಭಾಷೆ ಮಾತಾಡುವ ಯೆಹೂದ್ಯರೊಂದಿಗೆ ಅವನು ತರ್ಕಿಸಲಾರಂಭಿಸಿದನು, ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. ಇದನ್ನು ಗ್ರಹಿಸಿ, ಸಹೋದರರು ಅವನನ್ನು ಕೈಸರೈಯಕ್ಕೆ ಕೊಂಡೊಯ್ದು, ಅಲ್ಲಿಂದ ತಾರ್ಷಿಸಿಗೆ ಕಳುಹಿಸಿ, ಅವನ ಊರುಮನೆಯಾದ ಸಿಸಿಲಿಯಾಕ್ಕೆ ಸಾಗಕಳುಹಿಸಿದರು. ಯೂದಾಯ, ಗಲಿಲಾಯ ಮತ್ತು ಸಮಾರ್ಯಗಳಲ್ಲಿ “ಸಭೆಯು ಸಮಾಧಾನದೊಳಕ್ಕೆ” ಬಂತು ಮತ್ತು ಆತ್ಮೀಕವಾಗಿ “ಬಲಹೊಂದಿತು.” ಅದು ‘ಯೆಹೋವನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಹೆಚ್ಚುತ್ತಾ ಬಂತು.’ ಯೆಹೋವನ ಆಶೀರ್ವಾದವನ್ನು ಅವರು ಪಡೆಯಬೇಕಾದರೆ ಇಂದು ಸಭೆಗಳಿಗೆ ಎಂಥಹ ಒಂದು ಉತ್ತಮ ಮಾದರಿಯು ಇದಾಗಿರುತ್ತದೆ !
ಅನ್ಯಜನರು ವಿಶ್ವಾಸಿಗಳಾಗುತ್ತಾರೆ
13. ಲುದ್ದದಲ್ಲಿ ಮತ್ತು ಯೊಪ್ಪದಲ್ಲಿ ಯಾವ ಅದ್ಭುತಗಳನ್ನು ಪೇತ್ರನು ಮಾಡುವಂತೆ ದೇವರು ಶಕ್ಯಗೊಳಿಸಿದನು?
13 ಪೇತ್ರನು ಕೂಡಾ ಬಹಳ ಕಾರ್ಯಮಗ್ನನಾಗಿಟ್ಟು ಕೊಳ್ಳುತ್ತಿದ್ದನು. (9:32-43) ಸಾರೋನ್ ಬಯಲು ಪ್ರದೇಶದ ಲುದ್ದದಲ್ಲಿ (ಈಗ ಲೋಡ್) ಐನೇಯನೆಂಬ ಪಾರ್ಶ್ವವಾಯು ರೋಗಿಯನ್ನು ವಾಸಿಮಾಡಿದನು. ಈ ವಾಸಿಮಾಡುವಿಕೆಯು ಅನೇಕರನ್ನು ಕರ್ತನ ಕಡೆಗೆ ತಿರುಗುವಂತೆ ಮಾಡಿತು. ಯೊಪ್ಪದಲ್ಲಿ ಪ್ರೀತಿಯ ಶಿಷ್ಯೆಯಾದ ತಬಿಥಾಳು (ದೊರ್ಕ) ರೋಗ ಹಿಡಿದು, ಸತ್ತಳು. ಪೇತ್ರನು ಬಂದಾಗ, ಗೋಳಾಡುತ್ತಿರುವ ವಿಧವೆಯರು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟ ವಸ್ತ್ರ ಗಳನ್ನು ತೋರಿಸಿದರು, ಪ್ರಾಯಶಃ ಅವರು ಧರಿಸಿಕೊಂಡಿದ್ದ ಉಡುಪುಗಳಾಗಿದ್ದಿರಬಹುದು. ಅವನು ದೊರ್ಕಳನ್ನು ಪುನಃ ಜೀವಂತಗೊಳಿಸಿದನು ಮತ್ತು ಈ ಸುದ್ದಿಯು ಹಬ್ಬಿದಾಗ, ಅನೇಕರು ವಿಶ್ವಾಸೀಗಳಾದರು. ಪೇತ್ರನು ಯೊಪ್ಪದಲ್ಲಿ ಚರ್ಮಕಾರನಾದ ಸೀಮೋನನ ಮನೆಯಲ್ಲಿ ಇದ್ದನು, ಅವನ ಮನೆಯು ಸಮುದ್ರ ತೀರದಲ್ಲಿ ಇತ್ತು. ಚರ್ಮಕಾರರು ಪ್ರಾಣಿಚರ್ಮವನ್ನು ಸಮುದ್ರದಲ್ಲಿ ಮುಳುಗಿಸಿ ಇಡುತ್ತಿದ್ದರು ಮತ್ತು ಕೂದಲುಗಳನ್ನು ಕೆರೆದು ತೆಗೆಯುವ ಮೊದಲು ಅದನ್ನು ಸುಣ್ಣದಿಂದ ಹದಮಾಡುತ್ತಿದ್ದರು. ಈ ತೊಗಲುಗಳನ್ನು ಅವರು ಕೆಲವು ನಿರ್ದಿಷ್ಟ ತರಹದ ಗಿಡಗಳ ದ್ರಾವಣದಲ್ಲಿ ಹದಮಾಡಿ, ಚರ್ಮವನ್ನಾಗಿ ಬದಲಾಯಿಸುತ್ತಿದ್ದರು.
14. (ಎ) ಕೊರ್ನೇಲ್ಯನು ಯಾರು? (ಬಿ) ಕೊರ್ನೇಲ್ಯನ ಪ್ರಾರ್ಥನೆಗಳ ಕುರಿತಾದ ಸತ್ಯವೇನು?
14 ಆ ಸಮಯದಲ್ಲಿ (ಸಾ.ಶ. 36) ಬೇರೊಂದು ಕಡೆಯಲ್ಲಿ ಒಂದು ಗಮನಾರ್ಹ ಬೆಳವಣಿಗೆಯು ಆಗಿತ್ತು. (10:1-8) ಕೈಸರೈಯದಲ್ಲಿ ಒಂದು ನೂರು ಜನರ ಮೇಲೆ ದಳಪತಿಯಾಗಿದ್ದ, ಒಬ್ಬ ರೋಮನ್ ಶತಾಧಿಪತಿಯು ಜೀವಿಸಿದ್ದನು, ಇವನು ಒಬ್ಬ ದೇವಭಕ್ತಿಯ ಅನ್ಯಧರ್ಮಿಯನಾದ ಕೊರ್ನೇಲ್ಯನಾಗಿದ್ದನು. ಇವನು “ಇತಾಲ್ಯದ ಪಟಾಲಮೆನಿಸಿಕೊಳ್ಳುವದರ” ಮುಖ್ಯಸ್ಥನಾಗಿದ್ದನು, ಬಹುಶಃ ಇದರಲ್ಲಿ ರೋಮೀಯ ನಾಗರಿಕರು ಮತ್ತು ಇಟೆಲಿಯ ಸ್ವತಂತ್ರ ಪುರುಷರು ಇದ್ದಿರಬೇಕು. ಕೊರ್ನೇಲ್ಯನು ದೇವರ ಭಯವಿದ್ದವನಾದರೂ, ಅವನೊಬ್ಬ ಯೆಹೂದಿ ಮತಾಂತರಿಯಾಗಿರಲಿಲ್ಲ. ದರ್ಶನವೊಂದರಲ್ಲಿ, ದೇವದೂತನೊಬ್ಬನು ಅವನಿಗೆ ಅವನ ಪ್ರಾರ್ಥನೆಗಳು “ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು” ಎಂದು ತಿಳಿಸಿದನು. ಕೊರ್ನೇಲ್ಯನು ಯೆಹೋವನಿಗೆ ಸಮರ್ಪಿಸಿಕೊಂಡವನಾಗಿಲ್ಲದಿದ್ದರೂ, ಅವನ ಪ್ರಾರ್ಥನೆಗೆ ಉತ್ತರವೊಂದನ್ನು ಪಡೆದನು. ಆದರೆ ದೇವದೂತನು ಮಾರ್ಗದರ್ಶಿಸಿದಂತೆ ಅವನು ಪೇತ್ರನಿಗಾಗಿ ಕರೇ ಕಳುಹಿಸಿದನು.
15. ಸೀಮೋನನ ಮನೆಯ ಮಾಳಿಗೆಯ ಮೇಲೆ ಪೇತ್ರನು ಪ್ರಾರ್ಥಿಸುತ್ತಿದ್ದಾಗ, ಏನು ಸಂಭವಿಸಿತು?
15 ತನ್ಮಧ್ಯೆ, ಸೀಮೋನನ ಮನೆಯ ಮಾಳಿಗೆಯಲ್ಲಿ ಪೇತ್ರನು ಪ್ರಾರ್ಥನೆ ಮಾಡುತ್ತಿದ್ದಾಗ, ಅವನಿಗೊಂದು ದರ್ಶನವುಂಟಾಯಿತು. (10:9-23) ಧ್ಯಾನಪರವಶತೆಯಲ್ಲಿ, ಆಕಾಶದಿಂದ ನಾಲ್ಕು ಮೂಲೆಗಳ ಒಂದು ದೊಡ್ಡ ಜೋಳಿಗೆಯಂತಿರುವ ಪಾತ್ರೆಯು ಇಳಿದುಬರುವುದನ್ನು ಕಂಡನು, ಅದರಲ್ಲಿ ಸಕಲವಿಧವಾದ ನಾಲ್ಕು ಕಾಲಿನ ಅಶುದ್ಧ ಪಶುಗಳೂ, ಹರಿದಾಡುವ ಕ್ರಿಮಿಕೀಟಗಳೂ, ಹಕ್ಕಿಗಳೂ ಇದ್ದವು. ಅವುಗಳನ್ನು ಕೊಯ್ದು ತಿನ್ನಲು ಹೇಳಿದಾಗ, ಪೇತ್ರನು ತಾನೆಂದೂ ಹೊಲೆಮಾಡುವ ಪದಾರ್ಥಗಳನ್ನು ತಿಂದವನಲ್ಲ ಎಂದು ಹೇಳುತ್ತಾನೆ. “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನ ಬೇಡ” ಎಂದವನಿಗೆ ತಿಳಿಸಲಾಯಿತು. ದರ್ಶನವು ಪೇತ್ರನನ್ನು ಕಳವಳಪಡಿಸಿದರೂ, ಅವನು ಪವಿತ್ರಾತ್ಮನ ಮಾರ್ಗದರ್ಶನವನ್ನು ಪರಿಪಾಲಿಸಿದನು. ಈ ರೀತಿ, ಅವನು ಮತ್ತು ಆರು ಮಂದಿ ಯೆಹೂದ್ಯ ಸಹೋದರರು ಕೊರ್ನೇಲ್ಯನಿಂದ ಕಳುಹಿಸಲ್ಪಟ್ಟವರೊಂದಿಗೆ ಹೋದರು.—ಅ. ಕೃತ್ಯಗಳು 11:12.
16, 17. (ಎ) ಕೊರ್ನೇಲ್ಯನಿಗೂ, ಅವನ ಮನೆಯಲ್ಲಿ ನೆರೆದು ಬಂದವರಿಗೂ ಪೇತ್ರನು ಏನು ಹೇಳಿದನು? (ಬಿ) ಪೇತ್ರನು ಇನ್ನೂ ಮಾತಾಡುತ್ತಿರುವಾಗಲೇ, ಏನು ಸಂಭವಿಸಿತು?
16 ಈಗ ಮೊದಲನೆಯ ಅನ್ಯಧರ್ಮಿಯರು ಸುವಾರ್ತೆಯನ್ನು ಕೇಳಲಿದ್ದರು. (10:24-43) ಪೇತ್ರನೂ, ಅವನ ಸಂಗಡಿಗರೂ ಕೈಸರೈಯಕ್ಕೆ ಬಂದಾಗ, ಕೊರ್ನೇಲ್ಯನೂ, ಅವನ ಬಂಧುಬಳಗದವರೂ, ಅವನು ಪ್ರಾಣಮಿತ್ರರೂ ಎದುರುನೋಡುತ್ತಾ ಇದ್ದರು. ಕೊರ್ನೇಲ್ಯನು ಪೇತ್ರನ ಪಾದಕ್ಕೆ ಎರಗಿದನು, ಆದರೆ ಅಪೊಸ್ತಲನು ದೀನತೆಯಿಂದ ಅಂಥಹ ಭಕ್ತಿಯ ಪ್ರಣಾಮವನ್ನು ನಿರಾಕರಿಸಿದನು. ಮೆಸ್ಸೀಯನೋಪಾದಿ ಯೇಸುವನ್ನು ಯೆಹೋವನು ಪವಿತ್ರಾತ್ಮದಿಂದ ಮತ್ತು ಬಲದಿಂದ ಅಭಿಷೇಕ ಮಾಡಿದ ವಿಧದ ಕುರಿತು ಮಾತಾಡಿದನು ಮತ್ತು ಅವನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನಿಗೂ ಪಾಪಗಳ ಕ್ಷಮಾಪಣೆಯಾಗುತ್ತದೆ ಎಂದು ವಿವರಿಸಿದನು.
17 ಈಗ ಯೆಹೋವನು ಕಾರ್ಯ ನಡಿಸಿದನು. (10:44-48) ಪೇತ್ರನು ಇನ್ನೂ ಮಾತಾಡುತ್ತಿರುವಾಗಲೇ, ದೇವರು ವಿಶ್ವಾಸೀಗಳಾದ ಅನ್ಯಧರ್ಮಿಯರ ಮೇಲೆ ಪವಿತ್ರಾತ್ಮ ವರವನ್ನು ಅನುಗ್ರಹಿಸಿದನು. ಆಗಲೇ ಮತ್ತು ಅಲ್ಲಿಯೇ, ಅವರು ಪವಿತ್ರಾತ್ಮದಿಂದ ಹುಟ್ಟಲ್ಪಟ್ಟವರಾಗಿ, ನಾನಾ ಭಾಷೆಗಳಲ್ಲಿ ಮಾತಾಡಲು ಮತ್ತು ಅವನನ್ನು ಕೊಂಡಾಡಲು ಪ್ರೇರಿತರಾದರು. ಆದಕಾರಣ, ಯೋಗ್ಯವಾಗಿಯೇ ಅವರು ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದಿದರು. ಹಾಗಾದರೆ, ಈ ರೀತಿಯಲ್ಲಿ ಪೇತ್ರನು ಜ್ಞಾನದ ದ್ವಾರವನ್ನು ಮತ್ತು ಸ್ವರ್ಗೀಯ ರಾಜ್ಯಕ್ಕೆ ಪ್ರವೇಶಿಸುವ ಸಂದರ್ಭಗಳನ್ನು ದೇವಭಯವಿದ್ದ ಅನ್ಯಧರ್ಮಿಯರಿಗೆ ತೆರೆಯಲು, ಯೇಸುವು ಕೊಟ್ಟ ಬೀಗದ ಕೈಗಳಲ್ಲಿ ಮೂರನೆಯದ್ದನ್ನು ಉಪಯೋಗಿಸಿದನು.—ಮತ್ತಾಯ 16:19.
18. ಅನ್ಯಜನರು “ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನ ಹೊಂದಿದರು” ಎಂದು ಪೇತ್ರನು ವಿವರಿಸಿದಾಗ, ಯೆಹೂದ್ಯ ಸಹೋದರರ ಪ್ರತಿಕ್ರಿಯೆ ಏನಾಗಿತ್ತು?
18 ಅನಂತರ ಯೆರೂಸಲೇಮಿನಲ್ಲಿ ಸುನ್ನತಿಯ ಪರವಾಗಿರುವವರು ಪೇತ್ರನೊಂದಿಗೆ ವಿವಾದಿಸಿದರು. (11:1-18) ಅನ್ಯಜನರು “ಪವಿತ್ರಾತ್ಮದಿಂದ ದೀಕ್ಷಾಸ್ನಾನ ಹೊಂದಿದ” ಸಂಗತಿಯನ್ನು ಕ್ರಮವಾಗಿ ವಿವರಿಸಿದ ನಂತರ, ಅವನ ಯೆಹೂದ್ಯ ಸಹೋದರರು ಅರ್ಥೈಸಿಕೊಂಡರು ಮತ್ತು “ಹಾಗಾದರೆ ದೇವರು ಅನ್ಯಜನರಿಗೂ ಜೀವ ಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ” ಎಂದು ದೇವರನ್ನು ಕೊಂಡಾಡಿದರು. ದೈವಿಕ ಚಿತ್ತವನ್ನು ನಮಗೆ ಸ್ಪಷ್ಟ ಪಡಿಸಿಯಾದ ನಂತರ ನಾವು ಕೂಡಾ ಸ್ವೀಕರಿಸುವವರಾಗಿರಬೇಕು.
ಅನ್ಯಜನರ ಸಭೆಯು ಸ್ಥಾಪಿತಗೊಂಡಿತು
19. ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಹೇಗೆ ಬಂತು?
19 ಮೊತ್ತ ಮೊದಲ ಅನ್ಯಜನರ ಕ್ರೈಸ್ತ ಸಭೆಯು ಈಗ ಸ್ಥಾಪಿತವಾಯಿತು. (11:19-26) ಸ್ತೆಫನನಿಂದುಂಟಾದ ಸಂಕಟದ ನಂತರ ಶಿಷ್ಯರು ಚದರಿಸಲ್ಪಟ್ಟಾಗ, ಕೆಲವರು ಸಿರಿಯಾದ ಅಂತಿಯೋಕ್ಯಕ್ಕೆ ಹೋದರು, ಅಲ್ಲಿ ಅಶುದ್ಧ ಆರಾಧನೆಗೆ ಮತ್ತು ನೈತಿಕ ಭ್ರಷ್ಟಾಚಾರಕ್ಕೆ ಅದು ಪ್ರಸಿದ್ಧವಾಗಿತ್ತು. ಅಲ್ಲಿರುವ ಗ್ರೀಕ್-ಮಾತಾಡುವ ಜನರಿಗೆ ಸುವಾರ್ತೆಯನ್ನು ಅವರು ತಿಳಿಸಿದಾಗ, “ಯೆಹೋವನ ಹಸ್ತವು ಅವರೊಂದಿಗೆ ಇತ್ತು,” ಮತ್ತು ಅನೇಕರು ವಿಶ್ವಾಸೀಗಳಾದರು. ಬಾರ್ನಬ ಮತ್ತು ಸೌಲರು ಅಲ್ಲಿ ಒಂದು ವರ್ಷದಷ್ಟು ಕಾಲ ಕಲಿಸಿದರು ಮತ್ತು “ಅಂತಿಯೋಕ್ಯದಲ್ಲಿ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲ ಬಾರಿ ದೈವಿಕ ಅನುಗ್ರಹದಿಂದ ಬಂತು.”(NW) ಆ ರೀತಿಯಲ್ಲಿ ಅವರು ಕರೆಯಲ್ಪಡುವಂತೆ ಯೆಹೋವನೇ ಮಾರ್ಗದರ್ಶಿಸಿರಬೇಕು, ಯಾಕಂದರೆ ಖ್ರೆ-ಮಾ-ಟಿಝೋ ಎಂಬ ಗ್ರೀಕ್ ಶಬ್ದದ ಅರ್ಥವು “ದೈವಿಕ ಅನುಗ್ರಹದಿಂದ ಕರೆಯಲ್ಪಡುವುದು” ಎಂದಾಗಿದೆ ಮತ್ತು ಅದು ದೇವರಿಂದ ಬರುವ ವಿಷಯಕ್ಕೆ ಮಾತ್ರ ಸಂಬಂಧಿಸಿ, ಶಾಸ್ತ್ರ ದಲ್ಲಿ ಯಾವಾಗಲೂ ಬಳಸಲ್ಪಟ್ಟಿದೆ.
20. ಅಗಬನು ಮುಂದಾಗಿ ಏನು ನುಡಿದನು, ಮತ್ತು ಅಂತಿಯೋಕ್ಯದ ಸಭೆಯು ಹೇಗೆ ಪ್ರತಿವರ್ತನೆ ತೋರಿಸಿತು?
20 ದೇವ-ಭೀರು ಪ್ರವಾದಿಗಳು ಕೂಡಾ ಯೆರೂಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು. (11:27-30) ಅಗಬನೆಂಬ ಒಬ್ಬನು, “ಎಲ್ಲಾ ನಿವಾಸಿತ ಭೂಮಿಯಲ್ಲಿ ಒಂದು ಮಹಾ ಕ್ಷಾಮ ಬರುವುದೆಂದು ಪವಿತ್ರಾತ್ಮ ಪ್ರೇರಣೆಯಿಂದ” ಸೂಚಿಸಿದನು. ಆ ಪ್ರವಾದನೆಯು ರೋಮನ್ ಚಕ್ರವರ್ತಿಯಾದ ಕ್ಲೌಡಿಯಸ್ನ (ಸಾ.ಶ. 41-54) ಆಳಿಕ್ವೆಯಲ್ಲಿ ನೆರವೇರಿತು ಮತ್ತು ಇತಿಹಾಸಗಾರ ಜೋಸಿಫಸ್ ಅದನ್ನು “ಮಹಾ ಕ್ಷಾಮ” ಎಂದು ಸೂಚಿಸಿದ್ದಾನೆ. (ಜ್ಯೂವಿಸ್ ಎಂಟಿಕಿಟ್ವೀಸ್, XX, 51 [II, 5]; XX, 101 [V, 2]) ಪ್ರೀತಿಯಿಂದ ಪ್ರೇರಿಸಲ್ಪಟ್ಟು ಯೂದಾಯದಲ್ಲಿದ್ದ ಆವಶ್ಯಕತೆಯಿದ್ದ ಸಹೋದರರಿಗೆ ಅಂತಿಯೋಕ್ಯ ಸಭೆಯು ಸಹಾಯವನ್ನು ಕಳುಹಿಸಿತು.—ಯೋಹಾನ 13:35.
ಹಿಂಸೆಯು ನಿಷ್ಪಯ್ರೋಜಕ
21. ಪೇತ್ರನ ವಿರುದ್ಧ ಯಾವ ಕ್ರಿಯೆಯನ್ನು ಹೆರೋದ ಅಗ್ರಿಪ್ಪ-I ನೆಯವನು ಕೈಗೊಂಡನು, ಆದರ ಯಾವ ಫಲಿತಾಂಶದೊಂದಿಗೆ?
21 ಸಮಾಧಾನದ ಅವಧಿಯು ಹೆರೋದ ಅಗ್ರಿಪ್ಪ-I ನೆಯವನು ಯೆರೂಸಲೇಮಿನಲ್ಲಿ ಯೆಹೋವನಿಗೆ ಭಯಪಡುವವರನ್ನು ಹಿಂಸಿಸಲು ಆರಂಭಿಸಿದಾಗ ಅಂತ್ಯಗೊಂಡಿತು. (12:1-11) ಹೆರೋದನು ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು, ಪ್ರಾಯಶಃ ಧರ್ಮಬಲಿಯಾಗಿ ಸತ್ತ ಅಪೊಸ್ತಲರಲ್ಲಿ ತಲೆಕಡಿಯಲ್ಪಟ್ಟವರಲ್ಲಿ ಮೊದಲಿಗನಾಗಿದ್ದಿರಬೇಕು. ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ನೋಡಿ, ಹೆರೋದನು ಪೇತ್ರನನ್ನು ಸೆರೆಗೆ ಹಾಕಿಸಿದನು. ಈ ಅಪೊಸ್ತಲನು ಎರಡೂ ಪಕ್ಕಗಳಲ್ಲಿ ಸರಪಣಿಗಳಿಂದ ಇಬ್ಬರು ಸೈನಿಕರಿಗೆ ಕಟ್ಟಲ್ಪಟ್ಟಿದ್ದನು ಮತ್ತು ಇಬ್ಬರು ಸಿಪಾಯಿಗಳು ಅವನ ಕೋಣೆಯನ್ನು ಕಾಯುತ್ತಿದ್ದರು. ಪಸ್ಕ ಹಬ್ಬ ಮತ್ತು ಹುಳಿಯಿಲ್ಲದ ರೊಟ್ಟಿಗಳ ದಿವಸಗಳು (ನೈಸಾನ್ 14-21) ಮುಗಿದ ಮೇಲೆ ಅವನನ್ನು ಕೊಲ್ಲಿಸಲು ಹೆರೋದನು ಯೋಜನೆ ಮಾಡಿದ್ದನು, ಆದರೆ ಅವನ ಪರವಾಗಿರುವ ಸಭೆಯವರ ಪ್ರಾರ್ಥನೆಗೆ ಸರಿಯಾದ ಸಮಯದಲ್ಲಿ ಉತ್ತರ ದೊರಕಿತು, ನಮ್ಮ ವಿಷಯದಲ್ಲೂ ಕೆಲವೊಮ್ಮೆ ಇದು ಸತ್ಯವಾಗಿರುತ್ತದೆ. ಇದು ಅಪೊಸ್ತಲನನ್ನು ಅದ್ಭುತವಾಗಿ ದೇವರ ದೂತನು ಸ್ವತಂತ್ರಗೊಳಿಸಿದಾಗ ಸಂಭವಿಸಿತು.
22. ಮಾರ್ಕನ ತಾಯಿಯಾದ ಮರಿಯಳ ಮನೆಗೆ ಪೇತ್ರನು ಹೋದಾಗ ಏನು ಸಂಭವಿಸಿತು?
22 ಪೇತ್ರನು ಬಲುಬೇಗನೇ ಮರಿಯಳ (ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ) ಮನೆಗೆ ತಲುಪಿದನು, ಪ್ರಾಯಶಃ ಅದು ಕ್ರೈಸ್ತ ಕೂಟಗಳ ಸ್ಥಳವಾಗಿದ್ದಿರಬಹುದು. (12:12-19) ಕತ್ತಲೆಯಲ್ಲಿ ದಾಸೀ ಹುಡುಗಿ ರೋದೆ ಎಂಬವಳು ಪೇತ್ರನ ಧ್ವನಿಯಿಂದಲೇ ಗೊತ್ತುಹಿಡಿದು, ಬೀಗಹಾಕಿದ ಬಾಗಲನ್ನು ತೆರೆಯದೇ ಒಳಕ್ಕೆ ಹೋದಳು. ಪೇತ್ರನನ್ನು ಪ್ರತಿನಿಧಿಸುವ ದೇವರಿಂದ ಕಳುಹಿಸಲ್ಪಟ್ಟ ದೇವದೂತನಾಗಿದ್ದು ಅವನಿಗೆ ಸರಿಸಮಾನವಾದ ಸರ್ವದಲ್ಲಿ ಮಾತಾಡುತ್ತಿರಬಹುದು ಎಂದು ಶಿಷ್ಯರು ಮೊದಲು ಎಣಿಸಿದ್ದಿರಬೇಕು. ಅವರು ಪೇತ್ರನನ್ನು ಒಳಕ್ಕೆ ತಂದಾಗ, ಅವನ ಬಿಡುಗಡೆಯ ಕುರಿತು ಯಾಕೋಬ ಮತ್ತು ಇತರ ಸಹೋದರರಿಗೆ (ಪ್ರಾಯಶಃ ಹಿರಿಯರಾಗಿರಬಹುದು) ತಿಳಿಸಲು ಹೇಳಿದನು. ಅನಂತರ ಅವನು ಅವರನ್ನು ಬಿಟ್ಟು, ವಿಚಾರಣೆಯಾದಲ್ಲಿ ಅವರನ್ನಾಗಲೀ ತನ್ನನ್ನಾಗಲೀ ಕಷ್ಟಕ್ಕೀಡುಮಾಡುವುದನ್ನು ತಪ್ಪಿಸಲಿಕ್ಕಾಗಿ, ಎಲ್ಲಿ ಹೋಗುತ್ತೇನೆಂದು ತಿಳಿಸದೇ ಗುಪ್ತ ಸ್ಥಳವೊಂದಕ್ಕೆ ಹೊರಟು ಹೋದನು. ಪೇತ್ರನನ್ನು ಹುಡುಕಿಸಲು ಹೆರೋದನು ಮಾಡಿದ ಪ್ರಯತ್ನಗಳು ನಿಷ್ಫಲಗೊಂಡವು ಮತ್ತು ಸಿಪಾಯಿಗಳನ್ನು ಶಿಕ್ಷಿಸಲಾಯಿತು, ಹೆಚ್ಚಿನ ಪಕ್ಷ ಅವರನ್ನು ಹತಿಸಿರಲೂ ಬಹುದು.
23. ಹೆರೋದ ಅಗ್ರಿಪ್ಪ-I ನೆಯವನ ಆಳಿಕ್ವೆಯ ಆಂತ್ಯ ಹೇಗಾಯಿತು, ಮತ್ತು ಇದರಿಂದ ನಾವೇನು ಕಲಿಯಬಲ್ಲೆವು?
23 ಹೆರೋದ ಅಗ್ರಿಪ್ಪ-I ನೆಯವನ ಆಳಿಕ್ವೆಯು ಹಠಾತ್ತಾಗಿ, ಅವನ 54 ನೆಯ ವಯಸ್ಸಿನಲ್ಲಿ ಕೈಸರೈಯದಲ್ಲಿ ಕೊನೆಗೊಂಡಿತು. (12:20-25) ಅವನು ತೂರ್ ಮತ್ತು ಸಿದೋನ್ ಪಟ್ಟಣಗಳ ಫಿನಿಷಿಯರ ವಿರುದ್ಧ ಬಹಳ ಕ್ರೋಧಿತನಾಗಿದ್ದನು, ಆದುದರಿಂದ ಅವನ ಅಧಿಕಾರಿಯಾದ ಬ್ಲಾಸ್ತನಿಗೆ ಹಣಕೊಟ್ಟು ಒಲಿಸಿಕೊಂಡು, ಸಮಾಧಾನಪಡಿಸಿಕೊಳ್ಳಲು ಒಂದು ಆಲಿಸುವಿಕೆಯ ಏರ್ಪಾಡು ಮಾಡಿದರು. “ಗೊತ್ತುಮಾಡಿದ ದಿನ” (ಕೌಡ್ಲಿಯಸ್ ಕೈಸರನನ್ನು ಗೌರವಿಸುವ ಹಬ್ಬ) ವೊಂದರಲ್ಲಿ ಹೆರೋದನು ರಾಜವಸ್ತ್ರ ವನ್ನು ಧರಿಸಿಕೊಂಡು ರಾಜಾಸನದ ಮೇಲೆ ಕುಳಿತು ಉಪನ್ಯಾಸ ಮಾಡಲು ಆರಂಭಿಸಿದನು. ಸಭಿಕರು ಪ್ರತಿವರ್ತನೆಯಲ್ಲಿ ಆರ್ಭಟಿಸಲಾರಂಭಿಸಿದರು: “ಇದು ಮನುಷ್ಯನ ನುಡಿಯಲ್ಲ, ದೇವರ ನುಡಿಯೇ ! ” ಆ ಕ್ಷಣದಲ್ಲಿಯೇ ದೇವರ ದೂತನು ಅವನನ್ನು ಬಡಿದನು ಯಾಕಂದರೆ “ಅವನು ಆ ಘನವನ್ನು ದೇವರಿಗೆ ಸಲ್ಲಿಸದೆ ಹೋದದರಿಂದಲೇ.” ಹೆರೋದನು “ಹುಳಬಿದ್ದು ಸತ್ತನು.” ಈ ಎಚ್ಚರಿಕೆಯ ಉದಾಹರಣೆಯು ಯೆಹೋವನ ಭಯದಲ್ಲಿ ನಡೆಯುವುದನ್ನು ಮುಂದುವರಿಸುತ್ತಾ, ಹೆಮ್ಮೆಯನ್ನು ತ್ಯಜಿಸುವಂತೆ ಮತ್ತು ಅವನ ಜನರಾಗಿ ನಾವೇನು ಮಾಡುತ್ತೇವೋ ಅದಕ್ಕಾಗಿ ಅವನಿಗೆ ಘನವನ್ನು ಸಲ್ಲಿಸುವಂತೆ ನಮ್ಮನ್ನು ನಡಿಸಲಿ.
24. ಮುಂದಿನ ಲೇಖನವು ವಿಸ್ತರಣೆಯ ಕುರಿತಾಗಿ ಏನನ್ನು ತೋರಿಸಲಿದೆ?
24 ಹೆರೋದನ ಹಿಂಸೆಯಲ್ಲಿಯೂ, “ಯೆಹೋವನ ವಾಕ್ಯವು ಬೆಳೆಯುತ್ತಾ ಮತ್ತು ಹಬ್ಬುತ್ತಾ ಹೋಯಿತು.” (NW) ವಾಸ್ತವದಲ್ಲಿ ಮುಂದಿನ ಲೇಖನವು ಇನ್ನಷ್ಟು ಹೆಚ್ಚು ವಿಸ್ತರಣೆಯನ್ನು ಶಿಷ್ಯರು ನಿರೀಕ್ಷಿಸ ಸಾಧ್ಯವಿತ್ತು ಎಂದು ತೋರಿಸುತ್ತದೆ. ಯಾಕೆ? ಯಾಕಂದರೆ ಅವರು “ಯೆಹೋವನ ಭಯದಲ್ಲಿ ನಡೆಯುತ್ತಿದ್ದರು.” (w90 6/1)
ನೀವು ಹೇಗೆ ಪ್ರತಿವರ್ತಿಸುವಿರಿ?
◻ ಅಂದಿನಿಂದ ದೇವರ ಅನೇಕ ಸೇವಕರು ಮಾಡಿರುವಂತೆ, ಸ್ತೆಫನನು ತಾನು ಯೆಹೋವನಿಗೆ ಭಯಪಡುತ್ತಿದ್ದನು ಎಂದು ತೋರಿಸಿದ್ದು ಹೇಗೆ?
◻ ರಾಜ್ಯ ಸಾರುವಿಕೆಯ ಚಟುವಟಿಕೆಯ ಮೇಲೆ ಸ್ತೆಫನನ ಮರಣವು ಯಾವ ಪರಿಣಾಮವನ್ನುಂಟುಮಾಡಿತು, ಮತ್ತು ಇದಕ್ಕೆ ಆಧುನಿಕ-ದಿನಗಳ ಸಮಾನಾಂತರವಾದದ್ದು ಇದೆಯೋ?
◻ ಹಿಂಸಕನಾಗಿದ್ದ ತಾರ್ಸದ ಸೌಲನು ಯೆಹೋವನಿಗೆ ಭಯಪಡುವವನಾದದ್ದು ಹೇಗೆ?
◻ ವಿಶ್ವಾಸೀಗಳಾದ ಮೊದಲ ಅನ್ಯಜನರು ಯಾರು?
◻ ಯೆಹೋವನಿಗೆ ಭಯಪಡುವವರನ್ನು ಹಿಂಸೆಯು ನಿಲ್ಲಿಸದು ಎಂದು ಅ. ಕೃತ್ಯಗಳ ಹನ್ನೆರಡನೆಯ ಅಧ್ಯಾಯ ಹೇಗೆ ತೋರಿಸುತ್ತದೆ?
[Picture on page 12, 13]
ಆಕಾಶದಿಂದ ಒಂದು ಬೆಳಕು ಮಿಂಚಿತು ಮತ್ತು ಒಂದು ಧ್ವನಿಯು ಕೇಳಿತು: “ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ?”