ಅಧ್ಯಾಯ 8
ಸಭೆಯಲ್ಲಿ “ಸಮಾಧಾನ ಇತ್ತು”
ಹಿಂಸೆ ಕೊಡ್ತಿದ್ದ ಸೌಲ ಹುರುಪಿಂದ ಸಿಹಿಸುದ್ದಿ ಸಾರಿದ
ಆಧಾರ: ಅಪೊಸ್ತಲರ ಕಾರ್ಯ 9:1-43
1, 2. ಸೌಲ ದಮಸ್ಕದಲ್ಲಿ ಏನು ಮಾಡಬೇಕಂತ ಇದ್ದ?
ಜನರ ಒಂದು ಗುಂಪು ದಮಸ್ಕಕ್ಕೆ ಬರ್ತಾ ಇದ್ರು. ಅವರ ಮನಸ್ಸಲ್ಲಿ ಒಂದು ಕೆಟ್ಟ ಯೋಚ್ನೆ ಇತ್ತು. ಅವರ ಮುಖದಲ್ಲಿ ಕ್ರೂರತೆ ಎದ್ದು ಕಾಣ್ತಾ ಇತ್ತು. ಅವರು ದಮಸ್ಕಕ್ಕೆ ಹೋಗಿ ಯೇಸುವಿನ ಶಿಷ್ಯರನ್ನ ಮನೆಗಳಿಂದ ಹೊರಗೆ ಎಳ್ಕೊಂಡು ಬಂದು, ಅವಮಾನ ಮಾಡಿ, ಅವ್ರನ್ನ ಬಂಧಿಸಿ ಯೆರೂಸಲೇಮಿಗೆ ಕರ್ಕೊಂಡು ಹೋಗಬೇಕಂತ ಇದ್ರು. ಅಲ್ಲಿ ಆ ಶಿಷ್ಯರಿಗೆ ಹಿರೀಸಭೆ ಶಿಕ್ಷೆ ಕೊಡ್ತಿತ್ತು.
2 ಆ ಜನರ ಗುಂಪಿನ ಮುಖ್ಯಸ್ಥನ ಹೆಸ್ರು ಸೌಲ. ಅವನು ಈಗಾಗಲೇ ಒಂದು ಕೊಲೆಯಲ್ಲಿ ಶಾಮೀಲಾಗಿದ್ದ.a ಇತ್ತೀಚೆಗೆ, ಅವನ ಮತಾಂಧ ಜೊತೆಗಾರರು ಯೇಸುವಿನ ಹುರುಪಿನ ಶಿಷ್ಯನಾಗಿದ್ದ ಸ್ತೆಫನನನ್ನ ಕಲ್ಲು ಹೊಡೆದು ಕೊಲ್ಲುವಾಗ ಅವನು ಸಮ್ಮತಿ ಕೊಟ್ಟು ನೋಡ್ತಾ ನಿಂತಿದ್ದ. (ಅ. ಕಾ. 7:57–8:1) ಈ ಸೌಲ ಯೆರೂಸಲೇಮಿನಲ್ಲಿದ್ದ ಶಿಷ್ಯರಿಗೆ ಹಿಂಸೆ ಕೊಟ್ಟಿದ್ದಷ್ಟೇ ಅಲ್ಲ ಹಿಂಸೆಯ ಕಾಡ್ಗಿಚ್ಚನ್ನ ಎಲ್ಲಾ ಕಡೆ ಹಬ್ಬಿಸಬೇಕು ಅಂತಿದ್ದ. “ದೇವ್ರ ಮಾರ್ಗ” ಅನ್ನೋ ಈ ಗುಂಪನ್ನ ಅವನು ಅಂಟುರೋಗದ ತರ ನೋಡ್ತಿದ್ದ, ಅವ್ರನ್ನ ಸರ್ವನಾಶ ಮಾಡಬೇಕು ಅಂತ ಇದ್ದ.—ಅ. ಕಾ. 9:1, 2; “ದಮಸ್ಕದಲ್ಲಿ ಸೌಲನಿಗಿದ್ದ ಅಧಿಕಾರ” ಅನ್ನೋ ಚೌಕ ನೋಡಿ.
3, 4. (ಎ) ಸೌಲನಿಗೆ ಏನಾಯ್ತು? (ಬಿ) ಯಾವ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡ್ತೀವಿ?
3 ಆದ್ರೆ ಇದ್ದಕ್ಕಿದ್ದ ಹಾಗೆ, ಉಜ್ವಲವಾದ ಬೆಳಕು ಸೌಲನನ್ನ ಆವರಿಸ್ತು. ಅವನ ಜೊತೆಯಲ್ಲಿ ಪ್ರಯಾಣ ಮಾಡ್ತಿದ್ದವರಿಗೆ ಆ ಬೆಳಕು ಕಾಣಿಸಿದ್ರೂ ದಿಢೀರಂತ ಹೀಗೇ ಆಗಿದ್ರಿಂದ ಅವ್ರಿಗೆ ಮಾತೇ ಬರಲಿಲ್ಲ. ಸೌಲ ದೃಷ್ಟಿ ಕಳ್ಕೊಂಡು ಅಲ್ಲೇ ಕುಸಿದುಬಿದ್ದ. ಆಮೇಲೆ ಒಂದು ಸ್ವರ ಅವನಿಗೆ: “ಸೌಲ, ಸೌಲ, ನನ್ನನ್ನ ಯಾಕೆ ಹಿಂಸಿಸ್ತಿದ್ದೀಯಾ?” ಅಂತ ಕೇಳ್ತು. ಬೆಚ್ಚಿಬಿದ್ದ ಅವನು, “ಪ್ರಭು, ನೀನು ಯಾರು?” ಅಂತ ಕೇಳಿದ. “ನೀನು ಹಿಂಸೆ ಕೊಡ್ತಿರೋ ಯೇಸುನೇ ನಾನು” ಅಂತ ಉತ್ರ ಕೊಟ್ಟ. ಇದನ್ನ ಕೇಳಿದಾಗ ಅವನಿಗೆ ಒಂದು ಕ್ಷಣ ತನ್ನ ಕಿವಿಗಳನ್ನೇ ನಂಬಕ್ಕಾಗಲಿಲ್ಲ!—ಅ. ಕಾ. 9:3-5; 22:9.
4 ಯೇಸು ಸೌಲನಿಗೆ ಹೇಳಿದ ಮೊದಲ ಮಾತಿನಿಂದ ನಾವೇನು ಕಲಿಬಹುದು? ಸೌಲ ಕ್ರೈಸ್ತನಾದಾಗ ನಡೆದ ಘಟನೆಗಳನ್ನ ಓದೋದ್ರಿಂದ ನಮಗೆ ಯಾವ ಪ್ರಯೋಜನ ಸಿಗುತ್ತೆ? ಸೌಲ ಕ್ರೈಸ್ತನಾದ ಮೇಲೆ ಸ್ವಲ್ಪ ಸಮಯ ಶಾಂತಿ ಇತ್ತು. ಈ ಸಮಯವನ್ನ ಸಭೆ ಉಪಯೋಗಿಸಿದ ರೀತಿಯಿಂದ ನಾವೇನು ಕಲಿಬಹುದು?
“ನನ್ನನ್ನ ಯಾಕೆ ಹಿಂಸಿಸ್ತಿದ್ದೀಯಾ?” (ಅ. ಕಾ. 9:1-5)
5, 6. ಯೇಸು ಸೌಲನಿಗೆ ಹೇಳಿದ ಮಾತಿನಿಂದ ನಾವೇನು ಕಲಿಬಹುದು?
5 ದಮಸ್ಕಕ್ಕೆ ಹೋಗೋ ದಾರಿಯಲ್ಲಿ ಸೌಲನನ್ನ ತಡೆದ ಯೇಸು “ನನ್ನ ಶಿಷ್ಯರನ್ನ ಯಾಕೆ ಹಿಂಸಿಸ್ತಿದ್ದೀಯಾ?” ಅಂತ ಕೇಳಲಿಲ್ಲ. ಬದಲಿಗೆ, “ನನ್ನನ್ನ ನನ್ನನ್ನ ಯಾಕೆ ಹಿಂಸಿಸ್ತಿದ್ದೀಯಾ?” ಅಂತ ಕೇಳಿದನು. (ಅ. ಕಾ. 9:4) ತನ್ನ ಹಿಂಬಾಲಕರು ಕಷ್ಟ-ಪರೀಕ್ಷೆಗಳನ್ನ ಅನುಭವಿಸೋವಾಗ ಯೇಸುಗೆ ತಾನೇ ಅವನ್ನ ಅನುಭವಿಸ್ತಾ ಇರೋ ಹಾಗೆ ಅನಿಸುತ್ತೆ ಅಂತ ಇದ್ರಿಂದ ಗೊತ್ತಾಗುತ್ತೆ.—ಮತ್ತಾ. 25:34-40, 45.
6 ಕ್ರಿಸ್ತನ ಮೇಲೆ ನಂಬಿಕೆ ಇಟ್ಟಿರೋ ಕಾರಣಕ್ಕೆ ನಿಮ್ಮ ಮೇಲೆ ದಬ್ಬಾಳಿಕೆ ಆಗ್ತಾ ಇದ್ಯಾ? ಹಾಗಿದ್ರೆ, ಯೆಹೋವ ಮತ್ತು ಯೇಸುಗೆ ನಿಮ್ಮ ಕಷ್ಟ ಚೆನ್ನಾಗಿ ಅರ್ಥ ಆಗುತ್ತೆ. (ಮತ್ತಾ. 10:22, 28-31) ನಿಮಗೆ ಬಂದ ಈ ಕಷ್ಟವನ್ನ ಯೆಹೋವ ಈಗಲೇ ತೆಗೆದು ಹಾಕದೆ ಇರಬಹುದು. ಸ್ವಲ್ಪ ನೆನಪಿಸ್ಕೊಳ್ಳಿ: ಸ್ತೆಫನನನ್ನ ಕೊಲ್ಲೋದ್ರಲ್ಲಿ ಸೌಲನಿಗೂ ಪಾಲು ಇದ್ದಿದ್ದನ್ನ, ಯೆರೂಸಲೇಮಿನಲ್ಲಿ ತನ್ನ ನಂಬಿಗಸ್ತ ಶಿಷ್ಯರನ್ನ ಮನೆಗಳಿಂದ ಎಳೆದು ತಂದಿದ್ದನ್ನ ಯೇಸು ನೋಡಿದ್ದನು. (ಅ. ಕಾ. 8:3) ಆಗ ಆತನು ಅದನ್ನ ತಡೀಲಿಲ್ಲ. ಆದ್ರೆ, ಕ್ರಿಸ್ತನ ಮೂಲಕ ಯೆಹೋವ ಸ್ತೆಫನನಿಗೆ ಮತ್ತು ಬೇರೆ ಶಿಷ್ಯರಿಗೆ ನಂಬಿಗಸ್ತರಾಗಿ ಇರೋಕೆ ಬೇಕಾದ ಬಲ ಕೊಟ್ಟನು.
7. ಹಿಂಸೆ ತಾಳ್ಕೊಳ್ಳೋಕೆ ನೀವೇನು ಮಾಡಬೇಕು?
7 ನಿಮಗೆ ಬರೋ ಹಿಂಸೆನ ತಾಳ್ಕೊಳ್ಳೋಕೆ ಏನು ಮಾಡಬೇಕು? (1) ಏನೇ ಆದ್ರೂ ನಿಯತ್ತನ್ನ ಬಿಟ್ಕೊಡಲ್ಲ ಅಂತ ದೃಢನಿರ್ಧಾರ ಮಾಡಿ. (2) ಯೆಹೋವನ ಸಹಾಯಕ್ಕಾಗಿ ಬೇಡಿ. (ಫಿಲಿ. 4:6, 7) (3) ಸೇಡು ತೀರಿಸೋ ಕೆಲಸನ ಯೆಹೋವನಿಗೆ ಬಿಟ್ಟುಬಿಡಿ. (ರೋಮ. 12:17-21) (4) ನಿಮಗೆ ಬಂದ ಕಷ್ಟವನ್ನ ಯೆಹೋವ ತೆಗೆದು ಹಾಕೋ ತನಕ ಆತನೇ ನಿಮಗೆ ತಾಳ್ಕೊಳ್ಳೋಕೆ ಬೇಕಾದ ಬಲ ಕೊಡ್ತಾನೆ ಅಂತ ಭರವಸೆ ಇಡಿ.—ಫಿಲಿ. 4:12, 13.
“ಸಹೋದರ ಸೌಲ, . . . ಯೇಸು ಪ್ರಭುನೇ ನನ್ನನ್ನ ಕಳಿಸಿದ್ದಾನೆ” (ಅ. ಕಾ. 9:6-17)
8, 9. ತನಗೆ ಸಿಕ್ಕಿದ ನೇಮಕದ ಬಗ್ಗೆ ಅನನೀಯನಿಗೆ ಹೇಗನಿಸಿರಬಹುದು?
8 “ಪ್ರಭು, ನೀನು ಯಾರು?” ಅನ್ನೋ ಸೌಲನ ಪ್ರಶ್ನೆಗೆ ಉತ್ರ ಕೊಟ್ಟ ಮೇಲೆ ಯೇಸು ಅವನಿಗೆ, “ನೀನೆದ್ದು ದಮಸ್ಕ ಪಟ್ಟಣಕ್ಕೆ ಹೋಗು. ನೀನು ಏನು ಮಾಡ್ಬೇಕು ಅಂತ ಅಲ್ಲಿ ನಿನಗೆ ಒಬ್ಬ ವ್ಯಕ್ತಿ ಹೇಳ್ತಾನೆ” ಅಂದನು. (ಅ. ಕಾ. 9:6) ಕಣ್ಣು ಕಾಣದಿದ್ದ ಸೌಲನನ್ನ ದಮಸ್ಕದಲ್ಲಿ ಉಳ್ಕೊಳ್ಳೋಕೆ ಒಂದು ಮನೆಗೆ ಕರ್ಕೊಂಡು ಹೋದ್ರು. ಅಲ್ಲಿ ಅವನು ಮೂರು ದಿನ ಉಪವಾಸ ಇದ್ದು ಪ್ರಾರ್ಥಿಸ್ತಾ ಇದ್ದ. ಅದೇ ಸಮಯದಲ್ಲಿ, ಯೇಸು ಆ ಪಟ್ಟಣದಲ್ಲಿದ್ದ ತನ್ನ ಶಿಷ್ಯ ಅನನೀಯನ ಹತ್ರ ಸೌಲನ ಬಗ್ಗೆ ಮಾತಾಡಿದನು. ದಮಸ್ಕದಲ್ಲಿದ್ದ “ಎಲ್ಲ ಯೆಹೂದ್ಯರಿಗೆ ಅವನ ಬಗ್ಗೆ ಒಳ್ಳೇ ಅಭಿಪ್ರಾಯ ಇತ್ತು.”—ಅ. ಕಾ. 22:12.
9 ಯೇಸು ಈ ನೇಮಕ ಕೊಟ್ಟಾಗ ಅನನೀಯನಿಗೆ ಖುಷಿಪಡಬೇಕಾ, ಭಯಪಡಬೇಕಾ ಅಂತ ಗೊತ್ತಾಗಿರಲಿಕ್ಕಿಲ್ಲ. ಸಭೆಯ ಯಜಮಾನ ಆಗಿರೋ ಯೇಸುನೇ ಸ್ವತಃ ಅವನ ಹತ್ರ ಮಾತಾಡಿ ಒಂದು ವಿಶೇಷ ನೇಮಕವನ್ನ ಕೊಟ್ಟಿದ್ದನು! ಇದಂತೂ ನಿಜವಾಗ್ಲೂ ಗೌರವದ ವಿಷ್ಯ ಆಗಿತ್ತು. ಆದ್ರೆ ಆ ನೇಮಕ ಎಂಥದ್ದು! ಸೌಲನ ಹತ್ರ ಹೋಗಿ ಮಾತಾಡೋದು!! ಯೇಸು ಇದನ್ನ ಹೇಳಿದಾಗ ಅನನೀಯ, “ಪ್ರಭು, ಅವನ ಬಗ್ಗೆ ಮತ್ತು ಯೆರೂಸಲೇಮಲ್ಲಿ ಇರೋ ನಿನ್ನ ಪವಿತ್ರ ಜನ್ರಿಗೆ ಅವನು ಮಾಡಿರೋ ಹಾನಿ ಬಗ್ಗೆ ತುಂಬ ಜನ ಹೇಳಿರೋದನ್ನ ನಾನು ಕೇಳಿಸ್ಕೊಂಡಿದ್ದೀನಿ. ಈಗ್ಲೂ ಅವನು ಮುಖ್ಯ ಪುರೋಹಿತರಿಂದ ಅಧಿಕಾರ ಪಡ್ಕೊಂಡು ನಿನ್ನ ಶಿಷ್ಯರನ್ನೆಲ್ಲ ಬಂಧಿಸೋಕೆ ಇಲ್ಲಿಗೆ ಬಂದಿದ್ದಾನೆ” ಅಂತ ಹೇಳಿದ.—ಅ. ಕಾ. 9:13, 14.
10. ಅನನೀಯನ ಜೊತೆ ಯೇಸು ನಡ್ಕೊಂಡ ರೀತಿಯಿಂದ ಆತನ ಬಗ್ಗೆ ನಮಗೇನು ಗೊತ್ತಾಗುತ್ತೆ?
10 ಅನನೀಯ ತನ್ನ ಚಿಂತೆಯನ್ನ ಹೇಳ್ಕೊಂಡಾಗ ಯೇಸು ಅವನನ್ನ ಖಂಡಿಸಲಿಲ್ಲ. ಬದಲಿಗೆ ಅವನೇನು ಮಾಡಬೇಕಂತ ಸ್ಪಷ್ಟ ನಿರ್ದೇಶನ ಕೊಟ್ಟನು. ಜೊತೆಗೆ, ಈ ದೊಡ್ಡ ಕೆಲಸವನ್ನ ಯಾಕೆ ಮಾಡಬೇಕಂತ ಹೇಳೋ ಮೂಲಕ ಅವನನ್ನ ಗೌರವಿಸಿದನು. ಸೌಲನ ಬಗ್ಗೆ ಯೇಸು ಅನನೀಯನಿಗೆ, “ನಾನು ಅವನನ್ನ ಆರಿಸ್ಕೊಂಡಿದ್ದೀನಿ. ಅವನು ಯೆಹೂದ್ಯರಲ್ಲದ ಜನ್ರಿಗೆ, ರಾಜರಿಗೆ, ಇಸ್ರಾಯೇಲ್ ಜನ್ರಿಗೆ ನನ್ನ ಹೆಸ್ರಿನ ಬಗ್ಗೆ ಹೇಳ್ತಾನೆ. ನನ್ನ ಶಿಷ್ಯನಾಗೋದ್ರಿಂದ ಅವನಿಗೆ ಎಷ್ಟೆಲ್ಲ ಕಷ್ಟ ಬರುತ್ತೆ ಅಂತ ನಾನು ಅವನಿಗೆ ತೋರಿಸ್ತೀನಿ” ಅಂತ ಹೇಳಿದನು. (ಅ. ಕಾ. 9:15, 16) ಅನನೀಯ ತಡಮಾಡದೇ ಯೇಸು ಹೇಳಿದ ಹಾಗೇ ಮಾಡಿದ. ಹಿಂಸೆ ಕೊಡ್ತಿದ್ದ ಸೌಲ ಇದ್ದಲ್ಲಿಗೆ ಹೋಗಿ, “ಸಹೋದರ ಸೌಲ, ನಿನಗೆ ದಾರಿಯಲ್ಲಿ ಕಾಣಿಸ್ಕೊಂಡ ಯೇಸು ಪ್ರಭುನೇ ನನ್ನನ್ನ ಕಳಿಸಿದ್ದಾನೆ. ನಿನಗೆ ಮತ್ತೆ ಕಣ್ಣು ಕಾಣೋ ತರ, ಪವಿತ್ರಶಕ್ತಿ ಸಿಗೋ ತರ ಮಾಡೋಕೆ ನಾನು ಬಂದಿದ್ದೀನಿ” ಅಂತ ಹೇಳಿದ.—ಅ. ಕಾ. 9:17.
11, 12. ಯೇಸು, ಅನನೀಯ, ಸೌಲರಿಗೆ ಸಂಬಂಧಪಟ್ಟ ಘಟನೆಯಿಂದ ನಾವೇನು ಕಲಿಬಹುದು?
11 ಯೇಸು, ಅನನೀಯ ಮತ್ತು ಸೌಲನಿಗೆ ಸಂಬಂಧಪಟ್ಟ ಈ ಘಟನೆಯಿಂದ ನಮಗೆ ತುಂಬ ವಿಷ್ಯಗಳು ಗೊತ್ತಾಗುತ್ತೆ. ಉದಾಹರಣೆಗೆ, ಯೇಸು ಮಾತು ಕೊಟ್ಟ ತರಾನೇ ಸಾರೋ ಕೆಲಸನ ಚೆನ್ನಾಗಿ ಮಾರ್ಗದರ್ಶಿಸ್ತಿದ್ದಾನೆ. (ಮತ್ತಾ. 28:20) ಇವತ್ತು ಆತನು ಒಬ್ಬೊಬ್ರ ಜೊತೆನೂ ನೇರವಾಗಿ ಮಾತಾಡೋದಿಲ್ಲ ನಿಜ. ಆದ್ರೆ, ತನ್ನ ಮನೆಯವರ ಮೇಲೆ ನೇಮಿಸಿದ ನಂಬಿಗಸ್ತ ಆಳಿನ ಮೂಲಕ ಸಾರೋ ಕೆಲಸವನ್ನ ಮಾರ್ಗದರ್ಶಿಸ್ತಿದ್ದಾನೆ. (ಮತ್ತಾ. 24:45-47) ಆಡಳಿತ ಮಂಡಲಿಯ ನಿರ್ದೇಶನದ ಪ್ರಕಾರ ಪ್ರಚಾರಕರು ಮತ್ತು ಪಯನೀಯರರು ಕ್ರಿಸ್ತನ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಇಷ್ಟಪಡೋ ಜನ್ರನ್ನ ಹುಡುಕ್ತಾ ಇದ್ದಾರೆ. ಹಿಂದಿನ ಅಧ್ಯಾಯದಲ್ಲಿ ನೋಡಿದ ಹಾಗೆ ಜನರು ದೇವರ ಸಹಾಯಕ್ಕಾಗಿ ಪ್ರಾರ್ಥನೆ ಮಾಡ್ತಿದ್ದಾಗಲೇ ಯೆಹೋವನ ಸಾಕ್ಷಿಗಳು ಅವರನ್ನ ಭೇಟಿ ಮಾಡಿದ್ದಾರೆ.—ಅ. ಕಾ. 9:11.
12 ಅನನೀಯ ತನಗೆ ಕೊಟ್ಟಿರೋ ನೇಮಕವನ್ನ ವಿಧೇಯತೆಯಿಂದ ಸ್ವೀಕರಿಸಿ ಆಶೀರ್ವಾದ ಪಡ್ಕೊಂಡ. ನಮಗೂ ಚೆನ್ನಾಗಿ ಸಾರಬೇಕು ಅನ್ನೋ ಆಸೆ ಇದೆ. ಆದ್ರೆ ಕೆಲವು ಸಲ ಭಯ ಆಗುತ್ತೆ. ಕೆಲವ್ರಿಗೆ ಮನೆಯಿಂದ ಮನೆಗೆ ಹೋಗಿ ಅಪರಿಚಿತರನ್ನ ಮಾತಾಡಿಸೋಕೆ ಭಯ ಆದ್ರೆ ಇನ್ನೂ ಕೆಲವ್ರಿಗೆ ವ್ಯಾಪಾರ ಸ್ಥಳಗಳಲ್ಲಿ, ದಾರಿಯಲ್ಲಿ, ಫೋನ್ ಅಥವಾ ಪತ್ರಗಳ ಮೂಲಕ ಸಾರೋಕೆ ಕಷ್ಟ ಆಗುತ್ತೆ. ಅನನೀಯನಿಗೂ ಭಯ ಆಯ್ತು, ಆದ್ರೆ ಅದನ್ನ ಮೆಟ್ಟಿನಿಂತ. ಇದ್ರಿಂದ ಪವಿತ್ರಶಕ್ತಿ ಪಡ್ಕೊಳ್ಳೋಕೆ ಸೌಲನಿಗೆ ಸಹಾಯ ಮಾಡೋ ಅವಕಾಶ ಅವನಿಗೆ ಸಿಕ್ತು.b ಅನನೀಯ ಯೇಸು ಮೇಲೆ ಭರವಸೆ ಇಟ್ಟ ಮತ್ತು ಸೌಲನನ್ನ ತನ್ನ ಸಹೋದರನಂತೆ ನೋಡಿದ. ಅದಕ್ಕೇ ಅವನಿಗೆ ಯಶಸ್ಸು ಸಿಕ್ತು. ನಾವು ಕೂಡ ನಮಗಿರೋ ಯಾವುದೇ ಭಯವನ್ನ ಮೆಟ್ಟಿ ನಿಲ್ಲಬಹುದು. ಹಾಗೆ ಮಾಡೋಕೆ ನಾವು ಅನನೀಯನ ತರ ಸಾರೋ ಕೆಲಸನ ಯೇಸು ಮಾರ್ಗದರ್ಶಿಸ್ತಿದ್ದಾನೆ ಅಂತ ನಂಬಬೇಕು, ಜನರ ಕಡೆಗೆ ಅನುಕಂಪ ಇರಬೇಕು. ಒಬ್ಬ ವ್ಯಕ್ತಿಯನ್ನ ನೋಡಿ ನಮಗೆ ತುಂಬ ಭಯ ಆದ್ರೆ ಅವರು ಕೂಡ ಮುಂದೆ ನಮ್ಮ ಒಬ್ಬ ಸಹೋದರ ಆಗಬಹುದು ಅಂತ ಮನಸ್ಸಲ್ಲಿಡಬೇಕು.—ಮತ್ತಾ. 9:36.
‘ಯೇಸು ಬಗ್ಗೆ ಸಾರೋಕೆ ಶುರುಮಾಡಿದ’ (ಅ. ಕಾ. 9:18-30)
13, 14. ನಿಮಗೆ ದೀಕ್ಷಾಸ್ನಾನ ಆಗಿಲ್ಲ ಅಂದ್ರೆ ಸೌಲನ ಮಾದರಿಯಿಂದ ನೀವೇನು ಕಲಿಬಹುದು?
13 ಸೌಲ ತಾನು ಕಲಿತಿದ್ದನ್ನ ಕೂಡಲೇ ಪಾಲಿಸೋಕೆ ಶುರುಮಾಡಿದ. ದೃಷ್ಟಿ ಬಂದ ಮೇಲೆ ಅವನು ದೀಕ್ಷಾಸ್ನಾನ ತಗೊಂಡು ದಮಸ್ಕದಲ್ಲಿದ್ದ ಶಿಷ್ಯರ ಜೊತೆ ಆಪ್ತ ಸಹವಾಸ ಮಾಡೋಕೆ ಆರಂಭಿಸಿದ. ಅಷ್ಟೇ ಅಲ್ಲ, “ತಕ್ಷಣ ಅವನು, ಯೇಸುನೇ ದೇವರ ಮಗ ಅಂತ ಸಭಾಮಂದಿರಗಳಿಗೆ ಹೋಗಿ ಸಾರೋಕೆ ಶುರುಮಾಡಿದ.”—ಅ. ಕಾ. 9:20.
14 ನೀವು ಇನ್ನೂ ದೀಕ್ಷಾಸ್ನಾನ ತಗೊಂಡಿಲ್ಲ ಅಂದ್ರೆ ಸೌಲನ ತರ ನೀವೂ ದೀಕ್ಷಾಸ್ನಾನ ತಗೊಳ್ತೀರಾ? ಕ್ರಿಸ್ತ ಮಾಡಿದ ಅದ್ಭುತವನ್ನ ಸೌಲ ಕಣ್ಣಾರೆ ನೋಡಿದ. ಇದು ಅವನಿಗೆ ಹೆಜ್ಜೆ ತಗೊಳ್ಳೋಕೆ ಸಹಾಯ ಮಾಡ್ತು ಅನ್ನೋದ್ರಲ್ಲಿ ಸಂಶಯ ಇಲ್ಲ. ಆದ್ರೆ ಬೇರೆ ಜನರೂ ಯೇಸು ಮಾಡಿದ ಅದ್ಭುತಗಳನ್ನ ನೋಡಿದ್ರು. ಉದಾಹರಣೆಗೆ, ಲಕ್ವ ಹೊಡಿದಿದ್ದ ಒಬ್ಬ ವ್ಯಕ್ತಿಯನ್ನ ಯೇಸು ವಾಸಿ ಮಾಡಿದಾಗ ಫರಿಸಾಯರ ಒಂದು ಗುಂಪು ಅದನ್ನ ನೋಡಿತ್ತು. ಲಾಜರನನ್ನ ಮತ್ತೆ ಜೀವಂತ ಎಬ್ಬಿಸಿದ್ದು ತುಂಬ ಯೆಹೂದಿಗಳಿಗೆ ಗೊತ್ತಿತ್ತು. ಆದ್ರೂ ಅವರು ಸ್ವಲ್ಪನೂ ಆಸಕ್ತಿ ತೋರಿಸಲಿಲ್ಲ. ಕೆಲವರಂತೂ ಯೇಸುನ ವಿರೋಧಿಸಿದ್ರು. (ಮಾರ್ಕ 3:1-6; ಯೋಹಾ. 12:9, 10) ಆದ್ರೆ ಸೌಲ ಇವರ ತರ ಇರಲಿಲ್ಲ, ಸಂಪೂರ್ಣವಾಗಿ ಬದಲಾದ. ಬೇರೆಯವರು ಬದಲಾಗದಿದ್ರೂ ಸೌಲ ಮಾತ್ರ ಯಾಕೆ ಈ ರೀತಿ ಬದಲಾದ? ಯಾಕಂದ್ರೆ, ಅವನು ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡ್ತಿದ್ದ ಮತ್ತು ಕ್ರಿಸ್ತ ಅವನಿಗೆ ತೋರಿಸಿದ ಕರುಣೆಗಾಗಿ ತುಂಬ ಕೃತಜ್ಞನಾಗಿದ್ದ. (ಫಿಲಿ. 3:8) ನೀವೂ ಅವನ ತರ ನಡ್ಕೊಂಡ್ರೆ, ಸಾರೋಕೆ ಮತ್ತು ಪ್ರಗತಿ ಮಾಡ್ತಾ ದೀಕ್ಷಾಸ್ನಾನ ಪಡ್ಕೊಳ್ಳೋಕೆ ನಿಮ್ಮನ್ನ ಯಾವುದೂ ತಡಿಯೋಕೆ ಆಗಲ್ಲ.
15, 16. (ಎ) ಸೌಲ ಸಭಾಮಂದಿರಗಳಲ್ಲಿ ಏನು ಮಾಡಿದ? (ಬಿ) ಅದನ್ನ ನೋಡಿದಾಗ ದಮಸ್ಕದ ಯೆಹೂದ್ಯರು ಏನು ಮಾಡಿದ್ರು?
15 ಸೌಲ ಸಭಾಮಂದಿರಗಳಲ್ಲಿ ಯೇಸು ಬಗ್ಗೆ ಸಾರೋಕೆ ಶುರುಮಾಡಿದಾಗ ಕೆಲವ್ರಿಗೆ ಆಶ್ಚರ್ಯ ಆದ್ರೆ ಇನ್ನು ಕೆಲವ್ರಿಗೆ ಕೋಪ ಬಂತು. “ಯೆರೂಸಲೇಮಲ್ಲಿ ಯೇಸು ಹೆಸ್ರಲ್ಲಿ ನಂಬಿಕೆ ಇಟ್ಟಿದ್ದ ಜನ್ರನ್ನ ಕ್ರೂರವಾಗಿ ಹಿಂಸಿಸಿದ್ದು ಇವನೇ ಅಲ್ವಾ?” ಅಂತ ಅವರು ಕೇಳಿದ್ರು. (ಅ. ಕಾ. 9:21) ಯೇಸು ಬಗ್ಗೆ ತನಗಿರೋ ಅಭಿಪ್ರಾಯನ ಯಾಕೆ ಬದಲಾಯಿಸ್ಕೊಂಡೆ ಅಂತ ಅವನು ವಿವರಿಸುವಾಗ ‘ಯೇಸುನೇ ಕ್ರಿಸ್ತ ಅಂತ ಅರ್ಥಮಾಡಿಸೋಕೆ’ ಪ್ರಯತ್ನ ಮಾಡ್ದ. (ಅ. ಕಾ. 9:22) ಹಾಗಂತ ತರ್ಕ ಬಳಸಿ ಅವ್ರಿಗೆ ಅರ್ಥ ಆಗೋ ತರ ಹೇಳಿದ ತಕ್ಷಣ ಎಲ್ರೂ ದೇವರ ಮಾತನ್ನ ಒಪ್ತಾರೆ ಅಂತ ಹೇಳಕ್ಕಾಗಲ್ಲ. ಸಂಪ್ರದಾಯಗಳ ಕಟ್ಟುಪಾಡಿಗೆ ಒಗ್ಗಿ ಹೋಗಿರೋರು ಮತ್ತು ಅಹಂಕಾರಿಗಳು ತಮ್ಮ ಯೋಚ್ನೆನ ಬದಲಾಯಿಸೋಕೆ ಇಷ್ಟಪಡಲ್ಲ. ಹಾಗಂತ, ಸೌಲ ಕೈಚೆಲ್ಲಿ ಕೂರಲಿಲ್ಲ, ಸಿಹಿಸುದ್ದಿ ಸಾರ್ತಾ ಇದ್ದ.
16 ಹೀಗೆ ಮೂರು ವರ್ಷ ಕಳೆದ್ರೂ ದಮಸ್ಕದ ಯೆಹೂದ್ಯರು ಸೌಲನನ್ನ ವಿರೋಧ ಮಾಡ್ತಾನೇ ಇದ್ರು. ಕೊನೆಗೆ ಅವನನ್ನ ಕೊಲ್ಲೋಕೆ ಸಂಚು ಮಾಡಿದ್ರು. (ಅ. ಕಾ. 9:23; 2 ಕೊರಿಂ. 11:32, 33; ಗಲಾ. 1:13-18) ಇದರ ಬಗ್ಗೆ ಗೊತ್ತಾದಾಗ ಶಿಷ್ಯರು ಸೌಲನನ್ನ ಒಂದು ದೊಡ್ಡ ಬುಟ್ಟಿಯಲ್ಲಿ ಕೂರಿಸಿ ಗೋಡೆಯಲ್ಲಿದ್ದ ಕಿಟಕಿಯಿಂದ ಕೆಳಗೆ ಇಳಿಸಿದ್ರು. ಸೌಲ ಆ ಪಟ್ಟಣವನ್ನ ಬಿಟ್ಟು ಹೋಗೋ ಮೂಲಕ ವಿವೇಚನೆಯಿಂದ ನಡ್ಕೊಂಡ. ಆ ರಾತ್ರಿ ಅಲ್ಲಿಂದ ತಪ್ಪಿಸ್ಕೊಂಡು ಹೋಗೋಕೆ ಸಹಾಯ ಮಾಡಿದವರು “[ಸೌಲನ] ಶಿಷ್ಯರು” ಅಂತ ಲೂಕ ಹೇಳಿದ್ದಾನೆ. (ಅ. ಕಾ. 9:25) ದಮಸ್ಕದಲ್ಲಿ ಸೌಲ ಸಾರಿದ್ದನ್ನ ಕೇಳಿದವ್ರಲ್ಲಿ ಕೆಲವರಾದ್ರೂ ಕ್ರಿಸ್ತನ ಶಿಷ್ಯರಾಗಿದ್ರು ಅಂತ ಇದ್ರಿಂದ ಗೊತ್ತಾಗುತ್ತೆ.
17. (ಎ) ಜನರು ಬೈಬಲ್ ಸತ್ಯಕ್ಕೆ ಹೇಗೆಲ್ಲಾ ಪ್ರತಿಕ್ರಿಯಿಸ್ತಾರೆ? (ಬಿ) ನಾವೇನು ಮಾಡ್ತಾ ಇರಬೇಕು? ಯಾಕೆ?
17 ನೀವು ಬೈಬಲಿಂದ ಒಳ್ಳೇ ವಿಷ್ಯಗಳನ್ನ ಕಲಿತಾಗ ಅದನ್ನ ನಿಮ್ಮ ಕುಟುಂಬದವ್ರಿಗೆ, ಸ್ನೇಹಿತರಿಗೆ ಮತ್ತು ಬೇರೆಯವ್ರಿಗೆ ಹೇಳಿದ್ರಿ. ಯಾಕಂದ್ರೆ ಆ ಸತ್ಯಗಳು ತುಂಬಾ ಸ್ಪಷ್ಟವಾಗಿ, ತರ್ಕಬದ್ಧವಾಗಿ ಇರೋದ್ರಿಂದ ಅದನ್ನ ಖಂಡಿತ ಅವರು ಒಪ್ಕೊತಾರೆ ಅಂದ್ಕೊಂಡ್ರಿ. ಅವ್ರಲ್ಲಿ ಕೆಲವರು ನಿಮ್ಮ ಮಾತನ್ನ ಕೇಳಿರಬಹುದು, ಆದ್ರೆ ತುಂಬಾ ಜನ ಕೇಳದೇ ಇದ್ದಿರಬಹುದು. ನಿಮ್ಮ ಮನೆಯವರೇ ನಿಮ್ಮನ್ನ ಶತ್ರುಗಳ ತರ ನೋಡಿರಬಹುದು. (ಮತ್ತಾ. 10:32-38) ಆದ್ರೂ ನೀವು ಬೈಬಲನ್ನ ಬಳಸಿ ಚೆನ್ನಾಗಿ ತರ್ಕ ಮಾಡೋದನ್ನ, ಸ್ಪಷ್ಟವಾಗಿ ವಿವರಿಸೋದನ್ನ ಕಲೀತಾ ಇದ್ರೆ ಮತ್ತು ಒಳ್ಳೇ ನಡತೆಯನ್ನ ಕಾಪಾಡ್ಕೊಂಡ್ರೆ ನಿಮ್ಮನ್ನ ವಿರೋಧ ಮಾಡೋರು ನಿಧಾನವಾಗಿ ಬದಲಾಗಬಹುದು.—ಅ. ಕಾ. 17:2; 1 ಪೇತ್ರ 2:12; 3:1, 2, 7.
18, 19. (ಎ) ಬಾರ್ನಬ ಸೌಲನ ಪರವಾಗಿ ಮಾತಾಡಿದ್ರಿಂದ ಏನಾಯ್ತು? (ಬಿ) ಬಾರ್ನಬ ಮತ್ತು ಸೌಲನನ್ನ ನಾವು ಹೇಗೆ ಅನುಕರಿಸಬಹುದು?
18 ದಮಸ್ಕದಿಂದ ಸೌಲ ಯೆರೂಸಲೇಮಿಗೆ ಬಂದು ಅಲ್ಲಿದ್ದ ಶಿಷ್ಯರಿಗೆ ‘ನಾನೂ ಯೇಸುವಿನ ಶಿಷ್ಯನಾಗಿದ್ದೀನಿ’ ಅಂತ ಹೇಳಿದ. ಆದ್ರೆ ಅವ್ರು ನಂಬಲಿಲ್ಲ. ಆದ್ರೆ ಬಾರ್ನಬ ಮುಂದೆ ಬಂದು ಸೌಲ ನಿಜವಾಗ್ಲೂ ಶಿಷ್ಯನಾಗಿದ್ದಾನೆ ಅಂತ ವಿವರಿಸಿದಾಗ ಅಪೊಸ್ತಲರು ಅವನನ್ನ ಸೇರಿಸ್ಕೊಂಡ್ರು. ಹೀಗೆ ಸೌಲ ಸ್ವಲ್ಪ ಸಮಯ ಅವರ ಜೊತೆ ಇದ್ದ. (ಅ. ಕಾ. 9:26-28) ಅವನು ಸಿಹಿಸುದ್ದಿ ಸಾರುವಾಗ ವಿವೇಚನೆ ತೋರಿಸಿದ ಆದ್ರೆ ನಾಚಿಕೆಪಡಲಿಲ್ಲ. (ರೋಮ. 1:16) ಹಾಗಾಗಿ ಯೇಸು ಕ್ರಿಸ್ತನ ಶಿಷ್ಯರನ್ನ ಕ್ರೂರವಾಗಿ ಹಿಂಸಿಸೋಕೆ ಅವನು ಆರಂಭಿಸಿದ ಜಾಗದಲ್ಲೇ ಅಂದ್ರೆ ಯೆರೂಸಲೇಮಿನಲ್ಲೇ ಧೈರ್ಯದಿಂದ ಸಾರಿದ. ಕ್ರೈಸ್ತರನ್ನ ಸಂಪೂರ್ಣವಾಗಿ ನಾಶ ಮಾಡೋದ್ರಲ್ಲಿ ತಮಗೆ ನಾಯಕನ ತರ ಇದ್ದ ಸೌಲನೇ ಒಬ್ಬ ಕ್ರೈಸ್ತನಾಗಿರೋದು ಯೆರೂಸಲೇಮಿನ ಯೆಹೂದ್ಯರಿಗೆ ಸ್ವಲ್ಪನೂ ಇಷ್ಟ ಆಗಲಿಲ್ಲ. ಹಾಗಾಗಿ ಅವರು ಅವನನ್ನ ಕೊಲ್ಲಬೇಕು ಅಂತ ಅಂದ್ಕೊಂಡ್ರು. “ಸಹೋದರರಿಗೆ ಈ ವಿಷ್ಯ ಗೊತ್ತಾದಾಗ” ಅವರು “ಸೌಲನನ್ನ ಕೈಸರೈಯಕ್ಕೆ ಕರ್ಕೊಂಡು ಹೋಗಿ ತಾರ್ಸಕ್ಕೆ ಕಳಿಸಿಬಿಟ್ರು.” (ಅ. ಕಾ. 9:30) ಸಭೆ ಮೂಲಕ ಯೇಸು ಕೊಟ್ಟ ಮಾರ್ಗದರ್ಶನವನ್ನ ಸೌಲ ಪಾಲಿಸಿದ. ಇದ್ರಿಂದ ಸೌಲನಿಗೂ ಸಭೆಗೂ ಪ್ರಯೋಜನ ಆಯ್ತು.
19 ಸೌಲನಿಗೆ ಸಹಾಯ ಮಾಡೋಕೆ ಬಾರ್ನಬ ಮುಂದೆ ಬಂದಿದ್ರಿಂದನೇ ಅವರಿಬ್ಬರ ಮಧ್ಯೆ ಒಳ್ಳೇ ಸ್ನೇಹ ಬೆಳೆದಿರಬೇಕು. ಬಾರ್ನಬನ ತರ ನೀವು ಸಹ ಸಭೆಯಲ್ಲಿರೋ ಹೊಸಬರಿಗೆ ಸಹಾಯ ಮಾಡೋಕೆ ಮುಂದೆ ಬರ್ತೀರಾ? ಅವರ ಜೊತೆ ಸೇವೆಗೆ ಹೋಗ್ತಿರಾ? ಅವರು ಪ್ರಗತಿ ಮಾಡೋಕೆ ಸಹಾಯ ಮಾಡ್ತೀರಾ? ಹೀಗೆ ಮಾಡಿದ್ರೆ, ಖಂಡಿತ ನಿಮಗೆ ತುಂಬ ಆಶೀರ್ವಾದ ಸಿಗುತ್ತೆ. ನೀವು ಹೊಸ ಪ್ರಚಾರಕರಾಗಿದ್ರೆ, ನಿಮಗೆ ಯಾರಾದ್ರೂ ಸಹಾಯ ಮಾಡೋಕೆ ಮುಂದೆ ಬಂದಾಗ ಸೌಲನ ತರ ಅದನ್ನ ಸ್ವೀಕರಿಸಿ. ಹೆಚ್ಚು ಅನುಭವ ಇರೋ ಪ್ರಚಾರಕರ ಜೊತೆ ಸೇವೆ ಮಾಡುವಾಗ ನೀವು ಇನ್ನೂ ಚೆನ್ನಾಗಿ ಸೇವೆ ಮಾಡೋಕೆ ಆಗುತ್ತೆ, ನಿಮ್ಮ ಸಂತೋಷ ಜಾಸ್ತಿ ಆಗುತ್ತೆ, ಸಹೋದರರ ಜೊತೆಗೆ ನಿಮ್ಮ ಬಾಂಧವ್ಯ ಬಲ ಆಗುತ್ತೆ.
“ತುಂಬ ಜನ ಪ್ರಭುವನ್ನ ನಂಬಿದ್ರು” (ಅ. ಕಾ. 9:31-43)
20, 21. ಹಿಂದಿನ ಕಾಲದಲ್ಲಿ ಮತ್ತು ಇವತ್ತು ಯೆಹೋವನ ಸೇವಕರು ಶಾಂತಿಯ ಸಮಯವನ್ನ ಹೇಗೆ ಚೆನ್ನಾಗಿ ಬಳಸಿದ್ದಾರೆ?
20 ಸೌಲ ಕ್ರೈಸ್ತನಾಗಿ, ಸುರಕ್ಷಿತವಾಗಿ ಯೆರೂಸಲೇಮಿನಿಂದ ಹೋದ ಮೇಲೆ, “ಯೂದಾಯ, ಗಲಿಲಾಯ, ಸಮಾರ್ಯದಲ್ಲಿದ್ದ ಸಭೆಗಳಲ್ಲಿ ಸಮಾಧಾನ ಇತ್ತು.” (ಅ. ಕಾ. 9:31) ಅಲ್ಲಿ ಪರಿಸ್ಥಿತಿ ಚೆನ್ನಾಗಿತ್ತು. ಆ ಸಮಯವನ್ನ ಶಿಷ್ಯರು ಹೇಗೆ ಉಪಯೋಗಿಸ್ಕೊಂಡ್ರು? (2 ತಿಮೊ. 4:2) ಅಪೊಸ್ತಲರು ಮತ್ತು ಜವಾಬ್ದಾರಿ ಇದ್ದ ಬೇರೆ ಸಹೋದರರು ಶಿಷ್ಯರ ನಂಬಿಕೆಯನ್ನ ಬಲಪಡಿಸ್ತಾ ಅವ್ರನ್ನ ಮಾರ್ಗದರ್ಶಿಸಿದ್ರು. ಇದ್ರಿಂದ ಸಭೆಯಲ್ಲಿ ಇರೋರು “ಯೆಹೋವನ ಮೇಲೆ ಭಯಭಕ್ತಿಯಿಂದ ಜೀವನ ಮಾಡ್ತಾ ಇದ್ರು. ಅಷ್ಟೇ ಅಲ್ಲ ಪವಿತ್ರಶಕ್ತಿಯ ಬಲ ಅವ್ರಿಗೆ ಸಿಕ್ತಾ ಇತ್ತು.” ಉದಾಹರಣೆಗೆ, ಪೇತ್ರ ಸಾರೋನ ಪ್ರದೇಶದ ಲುದ್ದ ಪಟ್ಟಣದಲ್ಲಿದ್ದ ಶಿಷ್ಯರನ್ನ ಬಲಪಡಿಸಿದ. ಇದ್ರಿಂದ ಅಲ್ಲಿ ಸುತ್ತಮುತ್ತಲಿನ ತುಂಬ ಜನ “ಪ್ರಭು ಮೇಲೆ ನಂಬಿಕೆ ಇಟ್ರು.” (ಅ. ಕಾ. 9:32-35) ಶಿಷ್ಯರು ಬೇರೆ ವಿಷ್ಯಗಳಿಗೆ ಗಮನ ಕೊಡಲಿಲ್ಲ. ಸಿಹಿಸುದ್ದಿ ಸಾರೋಕೆ ಮತ್ತು ಒಬ್ಬರಿಗೊಬ್ರು ಕಾಳಜಿ ತೋರಿಸೋಕೆ ಗಮನ ಕೊಟ್ರು. ಇದ್ರಿಂದ ಸಭೆಯಲ್ಲಿ “ಶಿಷ್ಯರ ಸಂಖ್ಯೆ ಹೆಚ್ಚಾಯ್ತು.”
21 ಇಪ್ಪತ್ತನೇ ಶತಮಾನದ ಕೊನೆಯಷ್ಟಕ್ಕೆ ಅನೇಕ ದೇಶಗಳಲ್ಲಿ ಯೆಹೋವನ ಸಾಕ್ಷಿಗಳಿಗೆ ಅಂಥದ್ದೇ ಶಾಂತಿಯ ಸಮಯ ಆರಂಭವಾಯ್ತು. ಯಾಕಂದ್ರೆ ದೇವಜನರಿಗೆ ಹಿಂಸೆ ಕೊಡ್ತಿದ್ದ ಸರ್ಕಾರಗಳು ಇದ್ದಕ್ಕಿದ್ದ ಹಾಗೆ ಬಿದ್ದುಹೋದ್ವು. ಕೆಲವು ಕಡೆಗಳಲ್ಲಿ ಸಾರೋ ಕೆಲಸದ ಮೇಲೆ ಇದ್ದ ನಿಷೇಧ ತೆಗೆದುಹಾಕಿದ್ರು. ಸಾವಿರಾರು ಸಾಕ್ಷಿಗಳು ಈ ಅವಕಾಶವನ್ನ ಬಳಸ್ತಾ ಸಾರ್ವಜನಿಕವಾಗಿ ಸಾರಿದ್ರು. ಇದ್ರಿಂದ ತುಂಬ ಒಳ್ಳೇ ಫಲಿತಾಂಶ ಸಿಕ್ತು.
22. ನಿಮಗಿರೋ ಸ್ವಾತಂತ್ರ್ಯವನ್ನ ಹೇಗೆ ಚೆನ್ನಾಗಿ ಬಳಸಬಹುದು?
22 ಸಾರೋಕೆ ನಿಮಗಿರೋ ಸ್ವಾತಂತ್ರ್ಯವನ್ನ ನೀವು ಚೆನ್ನಾಗಿ ಬಳಸ್ತಾ ಇದ್ದೀರಾ? ಈ ಸಮಯದಲ್ಲಿ ಯೆಹೋವನ ಸೇವೆಯನ್ನ ಬಿಟ್ಟು ಹಣ-ಆಸ್ತಿಯನ್ನ ಗಳಿಸೋದ್ರ ಹಿಂದೆ ನೀವು ಹೋಗಬೇಕು ಅಂತ ಸೈತಾನ ಪ್ರಯತ್ನ ಮಾಡ್ತಾ ಇರ್ತಾನೆ. (ಮತ್ತಾ. 13:22) ಆದರೆ ಅವನ ಬಲೆಗೆ ಸಿಕ್ಕಿ ಹಾಕೊಬೇಡಿ. ನಿಮಗೆ ಈಗ ಇರೋ ತಕ್ಕಮಟ್ಟಿಗಿನ ಶಾಂತಿಯ ಸಮಯವನ್ನ ಚೆನ್ನಾಗಿ ಉಪಯೋಗಿಸ್ಕೊಳ್ಳಿ. ಆ ಸಮಯವನ್ನ ಸಿಹಿಸುದ್ದಿ ಸಾರೋಕೆ, ಸಭೆಯನ್ನ ಬಲಪಡಿಸೋಕೆ ನಿಮಗೆ ಸಿಕ್ಕಿರೋ ಅವಕಾಶ ಅಂತ ನೆನಸಿ. ಯಾವ ಕ್ಷಣದಲ್ಲಿ ಬೇಕಾದ್ರೂ ನಿಮ್ಮ ಪರಿಸ್ಥಿತಿ ಬದಲಾಗಬಹುದು ಅಂತ ನೆನಪಿಡಿ.
23, 24. (ಎ) ತಬಿಥಾ ಬಗ್ಗೆ ಇರೋ ಘಟನೆಯಿಂದ ನಾವು ಯಾವ ಅಂಶಗಳನ್ನ ಕಲಿಬಹುದು? (ಬಿ) ನಮ್ಮ ದೃಢನಿರ್ಧಾರ ಏನಾಗಿರಬೇಕು?
23 ತಬಿಥಾ ಅಥವಾ ದೊರ್ಕ ಅನ್ನೋ ಹೆಸ್ರಿನ ಶಿಷ್ಯೆಗೆ ಏನಾಯ್ತು ನೋಡಿ. ಅವಳು ಲುದ್ದದಿಂದ ಸ್ವಲ್ಪ ದೂರದ ಯೊಪ್ಪ ಅನ್ನೋ ಪಟ್ಟಣದಲ್ಲಿ ಇದ್ದಳು. ಈ ನಂಬಿಗಸ್ತ ಸಹೋದರಿ “ಒಳ್ಳೇ ಕೆಲಸಗಳನ್ನ ಮಾಡ್ತಾ ಇದ್ದಳು. ಬಡವ್ರಿಗೆ ಸಹಾಯ ಮಾಡ್ತಿದ್ದಳು.” ಹೀಗೆ ತನ್ನ ಸಮಯ, ಶಕ್ತಿ ಮತ್ತು ಸೊತ್ತನ್ನ ವಿವೇಕದಿಂದ ಬಳಸಿದಳು. ಆದ್ರೆ ಇದ್ದಕ್ಕಿದ್ದ ಹಾಗೆ ಅವಳು ಕಾಯಿಲೆಬಿದ್ದು ತೀರಿಕೊಂಡಳು.c ಇದ್ರಿಂದಾಗಿ ಯೊಪ್ಪದ ಶಿಷ್ಯರೆಲ್ಲರಿಗೂ ತುಂಬ ಬೇಜಾರಾಯ್ತು. ಅದ್ರಲ್ಲೂ ಮುಖ್ಯವಾಗಿ ಅವಳು ಪ್ರೀತಿಯಿಂದ ಸಹಾಯ ಮಾಡಿದ್ದ ವಿಧವೆಯರಿಗೆ ತುಂಬ ದುಃಖ ಆಯ್ತು. ಅವಳ ಶವವನ್ನ ಹೂಣಿಡೋಕೆ ಸಿದ್ಧ ಮಾಡ್ತಿದ್ದಾಗ ಪೇತ್ರ ಅಲ್ಲಿಗೆ ಬಂದ. ಅಲ್ಲಿ ತನಕ ಯೇಸು ಕ್ರಿಸ್ತನ ಶಿಷ್ಯರಲ್ಲಿ ಯಾರೂ ಮಾಡದೇ ಇದ್ದಂಥ ಅದ್ಭುತವನ್ನ ಅವನು ಮಾಡಿದ. ಪೇತ್ರ ಪ್ರಾರ್ಥಿಸಿ ತಬಿಥಾಳನ್ನ ಬದುಕಿಸಿದ! ಆಮೇಲೆ ಅವನು ವಿಧವೆಯರನ್ನ ಮತ್ತು ಇತರ ಶಿಷ್ಯರನ್ನ ಆ ಕೋಣೆಯೊಳಗೆ ಕರೆದು ಬದುಕಿದ್ದ ತಬಿಥಾಳನ್ನ ತೋರಿಸಿದ. ಆಗ ಅವ್ರಿಗೆ ಎಷ್ಟು ಖುಷಿ ಆಗಿರಬೇಕಲ್ವಾ? ಈ ಘಟನೆ ಅವ್ರಿಗೆ ಮುಂದೆ ಬರೋ ಪರೀಕ್ಷೆಗಳನ್ನ ಎದುರಿಸೋಕೆ ಬೇಕಾದ ಬಲ ಕೊಡ್ತು. ಈ ಅದ್ಭುತ “ಇಡೀ ಯೊಪ್ಪಗೆ ಗೊತ್ತಾಯ್ತು. ಹಾಗಾಗಿ ತುಂಬ ಜನ ಪ್ರಭುವನ್ನ ನಂಬಿದ್ರು.”—ಅ. ಕಾ. 9:36-42.
24 ಈ ಘಟನೆಯಿಂದ ನಾವು ಎರಡು ಮುಖ್ಯ ಅಂಶಗಳನ್ನ ಕಲಿತೀವಿ. (1) ಜೀವನ ನೀರಿನ ಮೇಲೆ ಇರೋ ಗುಳ್ಳೆ ತರ ಇದೆ, ಯಾವಾಗ ಏನು ಬೇಕಾದ್ರೂ ಆಗಬಹುದು. ಹಾಗಾಗಿ ಸಮಯ ಇರೋವಾಗ್ಲೇ ಅಂದ್ರೆ ಈಗಲೇ ದೇವರ ಜೊತೆ ಒಳ್ಳೇ ಹೆಸ್ರು ಮಾಡಿಕೊಳ್ಳೋದು ತುಂಬ ಮುಖ್ಯ! (ಪ್ರಸಂ. 7:1) (2) ಸತ್ತರೂ ಜೀವ ಸಿಗೋದು ಖಚಿತ. ತಬಿಥಾ ಪ್ರೀತಿಯಿಂದ ಮಾಡಿದ ಕೆಲಸಗಳನ್ನ ಯೆಹೋವ ಗಮನಿಸಿದನು ಮತ್ತು ಅದಕ್ಕೆ ಪ್ರತಿಫಲ ಕೊಟ್ಟನು. ನಾವು ಅರ್ಮಗೆದ್ದೋನ್ ಮುಂಚೆನೇ ತೀರಿಹೋದ್ರೆ ನಾವು ಪಟ್ಟ ಶ್ರಮವನ್ನ ಆತನು ನೆನಪಲ್ಲಿಟ್ಟು ನಮಗೆ ಮತ್ತೆ ಜೀವ ಕೊಟ್ಟು ಎಬ್ಬಿಸ್ತಾನೆ. (ಇಬ್ರಿ. 6:10) ಹಾಗಾಗಿ ನಾವು “ಕಷ್ಟ ಬಂದಾಗ್ಲೂ,” ಶಾಂತಿಯ ಸಮಯದಲ್ಲೂ ಕ್ರಿಸ್ತನ ಬಗ್ಗೆ ಚೆನ್ನಾಗಿ ಸಾಕ್ಷಿ ಕೊಡ್ತಾ ಇರೋಣ.—2 ತಿಮೊ. 4:2.
a “ಫರಿಸಾಯನಾಗಿದ್ದ ಸೌಲ” ಅನ್ನೋ ಚೌಕ ನೋಡಿ.
b ಸಾಮಾನ್ಯವಾಗಿ, ಪವಿತ್ರಶಕ್ತಿ ಅನ್ನೋ ವರವನ್ನ ಬೇರೆಯವ್ರಿಗೆ ಅಪೊಸ್ತಲರು ಕೊಡ್ತಿದ್ರು. ಆದ್ರೆ ಸೌಲನಿಗೆ ಪವಿತ್ರಶಕ್ತಿಯನ್ನ ಯೇಸು ಅನನೀಯನ ಮೂಲಕ ಕೊಡಿಸಿದನು ಅನ್ಸುತ್ತೆ. ಸೌಲ ಕ್ರೈಸ್ತನಾದ ಮೇಲೆ ತುಂಬ ಸಮಯದ ತನಕ 12 ಅಪೊಸ್ತಲರನ್ನ ಭೇಟಿಯಾಗಲಿಲ್ಲ. ಆದ್ರೂ ಆ ಸಮಯದಲ್ಲೂ ಅವನು ಸಾರೋ ಕೆಲಸ ಮಾಡ್ತಾ ಇದ್ದಿರಬೇಕು. ಹೀಗೆ, ಸೌಲ ತನ್ನ ನೇಮಕವನ್ನ ಮಾಡೋಕೆ ಬೇಕಾದ ಶಕ್ತಿ ಸಿಗೋ ತರ ಯೇಸು ನೋಡ್ಕೊಂಡನು.
c “ತಬಿಥಾ—‘ಒಳ್ಳೇ ಕೆಲಸಗಳನ್ನ ಮಾಡ್ತಾ ಇದ್ದಳು’” ಅನ್ನೋ ಚೌಕ ನೋಡಿ.