ಯೊಹನ್ನಳಿಂದ ನಾವೇನು ಕಲಿಯಬಹುದು?
ಯೇಸುವಿಗೆ 12 ಮಂದಿ ಅಪೊಸ್ತಲರಿದ್ದರು ಎಂದು ತುಂಬ ಜನರಿಗೆ ಗೊತ್ತು. ಆದರೆ ಅವನ ಶಿಷ್ಯರಲ್ಲಿ ಸ್ತ್ರೀಯರೂ ಇದ್ದರೆಂದು ಅನೇಕರಿಗೆ ಗೊತ್ತಿಲ್ಲ. ಇವರಿಗೆ ಯೇಸುವಿನ ಜೊತೆ ಹತ್ತಿರದ ಒಡನಾಟವಿತ್ತು. ಇವರಲ್ಲಿ ಒಬ್ಬಳು ಯೊಹನ್ನ.—ಮತ್ತಾ. 27:55; ಲೂಕ 8:3.
ಯೇಸು ಮಾಡುತ್ತಿದ್ದ ಸಾರುವ ಕೆಲಸದಲ್ಲಿ ಯೊಹನ್ನಳ ಪಾತ್ರ ಏನಾಗಿತ್ತು? ಇವಳ ಮಾದರಿಯಿಂದ ನಾವೇನನ್ನು ಕಲಿಯಬಹುದು?
ಯಾರಿವಳು ಯೊಹನ್ನ?
“ಹೆರೋದನ ಮನೆವಾರ್ತೆಯ ಮೇಲ್ವಿಚಾರಕನಾದ ಕೂಜನ ಹೆಂಡತಿ”ಯೇ ಯೊಹನ್ನ. ಕೂಜನು ಬಹುಶಃ ಹೆರೋದ ಅಂತಿಪನ ಮನೆಗೆ ಸಂಬಂಧಪಟ್ಟ ಕೆಲಸಗಳ ಮೇಲ್ವಿಚಾರಣೆ ಮಾಡುತ್ತಿದ್ದನು. ಯೇಸು ಗುಣಪಡಿಸಿದ ಅನೇಕ ರೋಗಿಗಳಲ್ಲಿ ಯೊಹನ್ನಳೂ ಒಬ್ಬಳಾಗಿದ್ದಳು. ಬೇರೆ ಸ್ತ್ರೀಯರ ಜೊತೆ ಈಕೆಯೂ ಯೇಸು ಮತ್ತು ಅವನ ಅಪೊಸ್ತಲರೊಟ್ಟಿಗೆ ಪ್ರಯಾಣಿಸಿದಳು.—ಲೂಕ 8:1-3.
ತಮ್ಮ ಸಂಬಂಧಿಕರಲ್ಲದ ಯಾವುದೇ ಗಂಡಸಿನ ಜೊತೆ ಪ್ರಯಾಣ ಮಾಡುವುದು ಬಿಡಿ, ಯಾವುದೇ ರೀತಿಯ ಒಡನಾಟವನ್ನೂ ಇಟ್ಟುಕೊಳ್ಳಬಾರದೆಂದು ಯೆಹೂದಿ ರಬ್ಬಿಗಳು ಕಲಿಸುತ್ತಿದ್ದರು. ಯೆಹೂದಿ ಗಂಡಸರು ಸ್ತ್ರೀಯರ ಜೊತೆ ಹೆಚ್ಚು ಮಾತಾಡಬಾರದಿತ್ತು. ಆದರೆ ಯೇಸು ಈ ಎಲ್ಲಾ ಸಂಪ್ರದಾಯಗಳನ್ನು ಬದಿಗೊತ್ತಿದನು. ತನ್ನನ್ನು ನಂಬುತ್ತಿದ್ದ ಯೊಹನ್ನ ಮತ್ತು ಇತರ ಸ್ತ್ರೀಯರಿಗೆ ತನ್ನ ಗುಂಪಿನ ಜೊತೆ ಬರುವಂತೆ ಅನುಮತಿಸಿದನು.
ಯೇಸು ಮತ್ತು ಅವನ ಅಪೊಸ್ತಲರ ಜೊತೆ ಸಹವಾಸ ಮಾಡುವುದನ್ನು ಸಮಾಜ ಒಪ್ಪುವುದಿಲ್ಲ ಎಂದು ಯೊಹನ್ನಳಿಗೆ ಗೊತ್ತಿತ್ತು ಆದರೂ ಅವರ ಸಹವಾಸ ಮಾಡಿದಳು. ಇದಕ್ಕಾಗಿ ತನ್ನ ದಿನನಿತ್ಯದ ಜೀವನದಲ್ಲಿ ಹೊಂದಾಣಿಕೆಗಳನ್ನೂ ಮಾಡಿದಳು. ಯೇಸುವಿನೊಟ್ಟಿಗೆ ಹೋಗುವವರೆಲ್ಲರೂ ಇದನ್ನು ಮಾಡಬೇಕಿತ್ತು. ಆದರೆ ಅಂಥ ಹೊಂದಾಣಿಕೆಗಳನ್ನು ಮಾಡುವವರ ಬಗ್ಗೆ ಯೇಸು ಹೀಗಂದನು: “ದೇವರ ವಾಕ್ಯವನ್ನು ಕೇಳಿ ಅದರಂತೆ ಮಾಡುವವರೇ ನನ್ನ ತಾಯಿಯೂ ತಮ್ಮಂದಿರೂ ಆಗಿದ್ದಾರೆ.” (ಲೂಕ 8:19-21; 18:28-30) ತನ್ನ ಹಿಂಬಾಲಕರಾಗಲು ತ್ಯಾಗಗಳನ್ನು ಮಾಡುವವರ ಬಗ್ಗೆ ಯೇಸುವಿಗೆ ಎಷ್ಟೊಂದು ಆಪ್ತ ಭಾವನೆಯಿದೆಯೆಂದು ತಿಳಿದು ನಿಮಗೆ ಪ್ರೋತ್ಸಾಹ ಸಿಗುತ್ತದಲ್ಲವೇ!
ತನ್ನ ಸ್ವತ್ತುಗಳನ್ನು ಬಳಸಿ ಉಪಚಾರ ಮಾಡಿದಳು
“ತಮ್ಮ ಸ್ವತ್ತು”ಗಳನ್ನು ಬಳಸಿ ಯೊಹನ್ನ ಮತ್ತು ಇತರ ಸ್ತ್ರೀಯರು ಯೇಸು ಮತ್ತು 12 ಮಂದಿ ಅಪೊಸ್ತಲರಿಗೆ ಉಪಚಾರ ಮಾಡಿದರು. (ಲೂಕ 8:3) ಒಬ್ಬ ಬರಹಗಾರನು ಹೀಗಂದನು: “ಆ ಸ್ತ್ರೀಯರು ಅಡುಗೆ ಮಾಡಿದರು, ಪಾತ್ರೆ ತೊಳೆದರು, ಬಟ್ಟೆ ಹೊಲಿದರು ಎಂದು ಲೂಕನು ತನ್ನ ಓದುಗರಿಗೆ ಹೇಳುತ್ತಿಲ್ಲ. ಅದನ್ನೆಲ್ಲ ಅವರು ಮಾಡಿರಬಹುದು. ಆದರೆ ಲೂಕನು ಅದರ ಬಗ್ಗೆ ಮಾತಾಡುತ್ತಿಲ್ಲ.” ಈ ಸ್ತ್ರೀಯರು ಬಹುಶಃ ತಮ್ಮ ಹಣ, ವಸ್ತುಗಳು ಅಥವಾ ಆಸ್ತಿಯನ್ನು ಬಳಸಿ ತಮ್ಮ ಜೊತೆ ಇದ್ದವರ ಉಪಚಾರ ಮಾಡಿದರು.
ಸುವಾರ್ತೆ ಸಾರಲು ಯೇಸು ಮತ್ತು ಅವನ ಶಿಷ್ಯರು ಪ್ರಯಾಣ ಮಾಡುವ ಸಮಯದಲ್ಲಿ ಯಾವುದೇ ಐಹಿಕ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಬಹುಶಃ 20 ಮಂದಿಯ ಆ ಗುಂಪಿನವರಿಗೆ ಊಟ ಮತ್ತು ಇತರ ವಸ್ತುಗಳ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಲು ಅವರ ಹತ್ತಿರ ಹಣ ಇರುತ್ತಿರಲಿಲ್ಲ. ಬೇರೆಯವರು ಅವರಿಗೆ ಅತಿಥಿಸತ್ಕಾರ ಮಾಡುತ್ತಿದ್ದರು ನಿಜ. ಆದರೂ ಯಾವಾಗಲೂ ಯೇಸು ಮತ್ತು ಅವನ ಶಿಷ್ಯರು ಅದರ ಮೇಲೆಯೇ ಹೊಂದಿಕೊಂಡಿರಲಿಲ್ಲ ಎಂದು ತೋರುತ್ತದೆ. ಅವರ ಬಳಿ “ಹಣದ ಪೆಟ್ಟಿಗೆ” ಇದ್ದ ವಿಷಯದಿಂದ ಇದು ಗೊತ್ತಾಗುತ್ತದೆ. (ಯೋಹಾ. 12:6; 13:28, 29) ಖರ್ಚುಗಳನ್ನು ತುಂಬಿಸಲು ಯೊಹನ್ನ ಮತ್ತು ಇತರ ಸ್ತ್ರೀಯರು ಸಹ ಹಣ ಸಹಾಯ ಮಾಡಿರಬಹುದು.
ಯೆಹೂದಿ ಸ್ತ್ರೀಯರ ಬಳಿ ಹಣ ಇರುತ್ತಿರಲಿಲ್ಲ ಎಂದು ಕೆಲವರು ವಾದ ಮಾಡುತ್ತಾರೆ. ಆದರೆ ಯೇಸುವಿನ ಸಮಯದಲ್ಲಿದ್ದ ಇತರ ಬರಹಗಾರರ ಪ್ರಕಾರ ಯೆಹೂದಿ ಸ್ತ್ರೀಯೊಬ್ಬಳು ಈ ಮೂಲಗಳಿಂದ ಹಣ ಪಡೆಯುವ ಸಾಧ್ಯತೆ ಇತ್ತು: (1) ಅವಳ ತಂದೆ ಗಂಡುಮಕ್ಕಳಿಲ್ಲದೆ ಸತ್ತುಹೋದರೆ ಇವಳಿಗೆ ಬರುತ್ತಿದ್ದ ಹಣ. (2) ಅವಳಿಗೆ ಕೊಡಲಾದ ಆಸ್ತಿ. (3) ಮದುವೆ ಒಪ್ಪಂದದಲ್ಲಿ ನಿಗದಿಪಡಿಸಲಾದಂತೆಯೇ ವಿವಾಹ ವಿಚ್ಛೇದನವಾದಾಗ ಸಿಕ್ಕಿರುವ ಪರಿಹಾರ ಹಣ. (4) ತೀರಿಕೊಂಡ ಗಂಡನ ಸ್ವತ್ತಿನಿಂದ ಸಿಗುವ ಹಣ. (5) ಅವಳೇ ದುಡಿದು ಸಂಪಾದಿಸಿದ ಹಣ.
ಯೇಸುವಿನ ಹಿಂಬಾಲಕರು ತಮ್ಮಿಂದ ಎಷ್ಟಾಗುತ್ತದೊ ಅಷ್ಟನ್ನು ಕಾಣಿಕೆಯಾಗಿ ಕೊಟ್ಟರು ಎಂಬುದರಲ್ಲಿ ಸಂಶಯವಿಲ್ಲ. ಅವರಲ್ಲಿ ಶ್ರೀಮಂತ ಸ್ತ್ರೀಯರೂ ಇದ್ದಿರಬಹುದು. ಯೊಹನ್ನಳು ಯೇಸುವಿನ ಶಿಷ್ಯೆಯಾಗಿದ್ದ ಸಮಯದಲ್ಲಿ ಹೆರೋದನ ಮನೆವಾರ್ತೆಯವನ ಹೆಂಡತಿ ಆಗಿದ್ದಳು ಅಥವಾ ಬಹುಶಃ ಹಿಂದೊಮ್ಮೆ ಆಗಿದ್ದಿರಬಹುದು. ಹಾಗಾಗಿ ಅವಳು ಶ್ರೀಮಂತಳಾಗಿದ್ದಳೆಂದು ಅನೇಕರು ಹೇಳುತ್ತಾರೆ. ಅವಳಂತೆ ಶ್ರೀಮಂತರಾಗಿದ್ದ ಯಾರೋ ಯೇಸುವಿಗೆ ಹೊಲಿಗೆ ಇಲ್ಲದ ಬೆಲೆಬಾಳುವ ಮೇಲಂಗಿಯನ್ನು ಕೊಟ್ಟಿರಬಹುದು. (ಯೋಹಾ. 19:23, 24) “ಅಂಥ ಉಡುಪನ್ನು ಬೆಸ್ತರ ಹೆಂಡತಿಯರು ಕೊಡಲು ಆಗುತ್ತಿರಲಿಲ್ಲ” ಎಂದಳು ಒಬ್ಬ ಬರಹಗಾರ್ತಿ.
ಯೊಹನ್ನಳು ಹಣವನ್ನೇ ಕಾಣಿಕೆಯಾಗಿ ಕೊಟ್ಟಳೆಂದು ಬೈಬಲ್ ನಿರ್ದಿಷ್ಟವಾಗಿ ಹೇಳುವುದಿಲ್ಲ. ಆದರೆ ತನ್ನಿಂದ ಎಷ್ಟಾಗುತ್ತದೊ ಅಷ್ಟನ್ನು ಅವಳು ಮಾಡಿದಳು. ಇದರಿಂದ ನಾವೊಂದು ಪಾಠ ಕಲಿಯಬಹುದು. ರಾಜ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಬೆಂಬಲಿಸಲು ನಾವು ಏನನ್ನಾದರೂ ಕೊಡುತ್ತೇವಾ ಇಲ್ಲವಾ ಎನ್ನುವುದು ಮಾತ್ರವಲ್ಲ, ಏನನ್ನು ಕೊಡುತ್ತೇವೆ ಎನ್ನುವುದು ನಮಗೆ ಬಿಟ್ಟದ್ದು. ಆದರೆ ನಮ್ಮಿಂದಾದದ್ದೆಲ್ಲವನ್ನು ಸಂತೋಷದಿಂದ ಮಾಡಬೇಕೆಂದು ದೇವರು ಬಯಸುತ್ತಾನೆ.—ಮತ್ತಾ. 6:33; ಮಾರ್ಕ 14:8; 2 ಕೊರಿಂ. 9:7.
ಯೊಹನ್ನ ಯೇಸುವಿಗೆ ನಿಷ್ಠಳಾಗಿ ಉಳಿದಳು
ಯೇಸುವಿನ ಮರಣದ ಸಮಯದಲ್ಲಿ ಕೆಲವು ಸ್ತ್ರೀಯರು ಅಲ್ಲಿ ಇದ್ದರು. ಇವರು ‘ಗಲಿಲಾಯದಲ್ಲಿದ್ದಾಗ ಅವನ ಜೊತೆಯಿದ್ದು ಅವನಿಗೆ ಸೇವೆಮಾಡಿದ್ದರು. ಮಾತ್ರವಲ್ಲದೆ ಅವನೊಂದಿಗೆ ಯೆರೂಸಲೇಮಿಗೆ ಬಂದಿದ್ದ ಇನ್ನೂ ಬೇರೆ ಸ್ತ್ರೀಯರೂ ಇದ್ದರು.’ ಇವರಲ್ಲಿ ಯೊಹನ್ನಳೂ ಒಬ್ಬಳು ಆಗಿದ್ದಿರಬಹುದು. (ಮಾರ್ಕ 15:41) ಯಾತನಾ ಕಂಬದಿಂದ ಯೇಸುವಿನ ದೇಹವನ್ನು ತೆಗೆಯಲಾದ ಸಮಯದಲ್ಲಿ “ಗಲಿಲಾಯದಿಂದ ಅವನೊಂದಿಗೆ ಬಂದಿದ್ದ ಸ್ತ್ರೀಯರು ಹಿಂದೆಯೇ ಹೋಗಿ ಸ್ಮರಣೆಯ ಸಮಾಧಿಯನ್ನೂ ಅದರಲ್ಲಿ ಅವನ ದೇಹವು ಇಡಲ್ಪಟ್ಟಿದ್ದ ರೀತಿಯನ್ನೂ ನೋಡಿದರು; ಬಳಿಕ ಅವರು ಪರಿಮಳದ್ರವ್ಯವನ್ನೂ ಸುಗಂಧತೈಲವನ್ನೂ ಸಿದ್ಧಪಡಿಸಲು ಹಿಂದಿರುಗಿದರು.” ಈ ಸ್ತ್ರೀಯರು, “ಮಗ್ದಲದ ಮರಿಯಳೂ ಯೊಹನ್ನಳೂ ಯಾಕೋಬನ ತಾಯಿಯಾದ ಮರಿಯಳೂ ಆಗಿದ್ದರು” ಎಂದು ಲೂಕನು ಗುರುತಿಸಿದನು. ಇವರು ಸಬ್ಬತ್ ದಿನದ ಬಳಿಕ ಹಿಂದಿರುಗಿ ಬಂದಾಗ ದೇವದೂತರನ್ನು ನೋಡಿದರು. ಯೇಸುವಿನ ಪುನರುತ್ಥಾನವಾಗಿದೆ ಎಂದು ಈ ದೇವದೂತರು ಹೇಳಿದರು.—ಲೂಕ 23:55–24:10.
ಕ್ರಿ.ಶ. 33ರ ಪಂಚಾಶತ್ತಮ ಹಬ್ಬದಂದು ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಯೇಸುವಿನ ಶಿಷ್ಯರೊಂದಿಗೆ ಅವನ ತಾಯಿ, ತಮ್ಮಂದಿರು ಮತ್ತು ಯೊಹನ್ನಳೂ ಇದ್ದಿರಬಹುದು. (ಅ. ಕಾ. 1:12-14) ಹೆರೋದ ಅಂತಿಪನ ಜೊತೆ ಇವಳ ಗಂಡ ಕೆಲಸ ಮಾಡುತ್ತಿದ್ದದರಿಂದ ಅವನ ಮನೆಯಲ್ಲಿ ನಡೆದಂಥ ಕೆಲವು ವಿಷಯಗಳ ಬಗ್ಗೆ ಬೇಕಾದ ಮಾಹಿತಿಯನ್ನು ಯೊಹನ್ನಳು ಲೂಕನಿಗೆ ಕೊಟ್ಟಿರಬಹುದು. ಲೂಕನು ಮಾತ್ರ ತನ್ನ ಸುವಾರ್ತಾ ಪುಸ್ತಕದಲ್ಲಿ ಯೊಹನ್ನಳ ಹೆಸರನ್ನು ಉಲ್ಲೇಖಿಸಿದ್ದಾನೆ.—ಲೂಕ 8:3; 9:7-9; 23:8-12; 24:10.
ನಾವು ಯೋಚಿಸುವಂತೆ ಮಾಡುವ ಕೆಲವು ಪಾಠಗಳನ್ನು ಯೊಹನ್ನಳಿಂದ ಕಲಿಯಬಹುದು. ತನ್ನಿಂದಾದಷ್ಟು ಉತ್ತಮ ರೀತಿಯಲ್ಲಿ ಯೇಸುವಿನ ಸೇವೆ ಮಾಡಿದಳು. ಬಹುಶಃ ಅವಳು ಕೊಟ್ಟ ಹಣ ಯೇಸುವಿಗೆ, 12 ಮಂದಿ ಅಪೊಸ್ತಲರಿಗೆ ಮತ್ತು ಇತರ ಶಿಷ್ಯರಿಗೆ ಪ್ರಯಾಣ ಮಾಡಲು, ಸುವಾರ್ತೆ ಸಾರಲು ನೆರವಾಗಿದ್ದಲ್ಲಿ ಅವಳಿಗೆ ತುಂಬ ಖುಷಿಯಾಗಿರಬಹುದು. ಯೇಸುವಿನ ಸೇವೆ ಮಾಡುವುದರ ಜೊತೆಗೆ ಅವನಿಗೂ ಅವನ ಒಡನಾಡಿಗಳಿಗೂ ಬಂದ ಕಷ್ಟ ತೊಂದರೆಗಳ ಸಮಯದಲ್ಲೂ ಯೇಸುವಿಗೆ ನಿಷ್ಠಳಾಗಿ ಉಳಿದಳು. ಯೊಹನ್ನಳ ದೈವಿಕ ಗುಣಗಳನ್ನು ಕ್ರೈಸ್ತ ಸ್ತ್ರೀಯರು ಸಹ ಅನುಕರಿಸಬಲ್ಲರು.