ಅಧ್ಯಾಯ 10
“ಯೆಹೋವನ ಸಂದೇಶ ಎಲ್ಲ ಕಡೆ ಹಬ್ತಾ ಇತ್ತು”
ಪೇತ್ರನ ಬಿಡುಗಡೆ ಮತ್ತು ಹಿಂಸೆಯ ಮಧ್ಯೆನೂ ಹಬ್ಬಿದ ಸಿಹಿಸುದ್ದಿ
ಆಧಾರ: ಅಪೊಸ್ತಲರ ಕಾರ್ಯ 12:1-25
1-4. (ಎ) ಪೇತ್ರನಿಗೆ ಯಾವ ಕಷ್ಟದ ಪರಿಸ್ಥಿತಿ ಬಂತು? (ಬಿ) ಅವನ ಜಾಗದಲ್ಲಿ ನೀವು ಇದ್ದಿದ್ರೆ ನಿಮಗೆ ಹೇಗನಿಸ್ತಿತ್ತು?
ಪೇತ್ರನ ಎರಡೂ ಕೈಗಳಿಗೆ ಬೇಡಿ ಹಾಕಿದ್ರು. ಸೈನಿಕರು ಅವನನ್ನ ಜೈಲಿನ ಕೋಣೆಗೆ ಹಾಕಿ ದಢಾರಂತ ಬಾಗಿಲು ಮುಚ್ಚಿದ್ರು. ಆಮೇಲೆ ಎರಡೂ ಕಡೆ ಒಬ್ಬೊಬ್ಬ ರೋಮನ್ ಕಾವಲುಗಾರರು ಕಾವಲು ಕಾಯ್ತಾ ನಿಂತ್ರು. ಪೇತ್ರನಿಗೆ ಜೈಲಿನ ನಾಲ್ಕು ಗೋಡೆ, ಬಾಗಿಲಿನ ಕಂಬಿಗಳು, ತನಗೆ ಹಾಕಿದ್ದ ಬೇಡಿ ಮತ್ತು ಕಾವಲು ಕಾಯ್ತಿದ್ದ ಸೈನಿಕರನ್ನ ಬಿಟ್ರೆ ನೋಡೋಕೆ ಅಲ್ಲಿ ಏನೂ ಇರಲಿಲ್ಲ. ‘ಮುಂದೆ ನಂಗೆ ಏನಾಗುತ್ತೋ’ ಅನ್ನೋ ಚಿಂತೆ ಪೇತ್ರನ ಮನಸ್ಸಲ್ಲಿ ಕಾಡ್ತಿತ್ತು. ಅದನ್ನ ತಿಳ್ಕೊಳ್ಳೋಕೆ ಅವನು ತುಂಬಾ ಸಮಯ ಕಾಯಬೇಕಿತ್ತು, ಸಮಯ ಯಾಕೆ ದಿನಗಳೇ ಹಿಡೀತು.
2 ಕೊನೆಗೂ ಅವನು ಕಾಯ್ತಿದ್ದ ಸುದ್ದಿ ಅವನ ಕಿವಿಗೆ ಬಿತ್ತು. ಅವನಿಗೆ ಮರಣಶಿಕ್ಷೆ ವಿಧಿಸಿದ್ರು. ರಾಜ 1ನೇ ಹೆರೋದ ಅಗ್ರಿಪ್ಪ ಪೇತ್ರನನ್ನ ಕೊಲ್ಲಬೇಕಂತ ಪಣತೊಟ್ಟಿದ್ದ.a ಅವನನ್ನ ಪಸ್ಕಹಬ್ಬ ಆದ್ಮೇಲೆ ಜನರ ಮುಂದೆ ನಿಲ್ಲಿಸಿ ಮರಣಶಿಕ್ಷೆ ವಿಧಿಸಿದ್ರೆ ಜನ್ರಿಗೆ ಖುಷಿಯಾಗುತ್ತೆ, ‘ಇದು ನಾನು ಅವರಿಗೆ ಹಬ್ಬಕ್ಕೆ ಕೊಡೋ ಉಡುಗೊರೆ’ ಅಂತ ನೆನಸಿದ. ಪೇತ್ರನನ್ನ ಕೊಲ್ತೀನಿ ಅಂತ ಅವನು ಬರೀ ಬಾಯಿ ಮಾತಿಗೆ ಹೇಳ್ಲಿಲ್ಲ, ಆ ಅಧಿಕಾರ ಅವನಿಗೆ ಇತ್ತು. ಈ ಹಿಂದೆ ಪೇತ್ರನ ಜೊತೆ ಇದ್ದ ಅಪೊಸ್ತಲ ಯಾಕೋಬನನ್ನ ಅವನೇ ಕೊಲ್ಲಿಸಿದ್ದ.
3 ಮರಣಶಿಕ್ಷೆ ವಿಧಿಸೋ ಹಿಂದಿನ ರಾತ್ರಿ ಪೇತ್ರ ಜೈಲಿನ ಆ ಕತ್ತಲೆ ಕೋಣೆಯಲ್ಲಿ ಕೂತು ಏನು ಯೋಚಿಸ್ತಾ ಇದ್ದಿರಬಹುದು? ಅವನನ್ನ ಕಟ್ಟಿ, ಅವನಿಗೆ ಇಷ್ಟ ಇಲ್ಲದಿರೋ ಜಾಗಕ್ಕೆ ಅಂದ್ರೆ ಕೊಲ್ಲೋಕೆ ಕರ್ಕೊಂಡು ಹೋಗ್ತಾರೆ ಅಂತ ಯೇಸು ತುಂಬ ವರ್ಷಗಳ ಮುಂಚೆನೇ ಹೇಳಿದ್ದ. ಈ ಮಾತು ಅವನಿಗೆ ನೆನಪಾಗಿರಬಹುದಾ? (ಯೋಹಾ. 21:18, 19) ಯೇಸು ಹೇಳಿದ ಆ ಸಮಯ ಈಗ ಬಂದಿದೆ ಅಂತ ಪೇತ್ರನಿಗೆ ಅನಿಸಿರಬಹುದು.
4 ಪೇತ್ರನ ಜಾಗದಲ್ಲಿ ನೀವು ಇದ್ದಿದ್ರೆ ನಿಮಗೆ ಹೇಗನಿಸ್ತಿತ್ತು? ತುಂಬ ಜನ ಇಂಥಾ ಪರಿಸ್ಥಿತಿಲಿ ಇದ್ದಿದ್ರೆ ಬೇರೆ ದಾರಿನೇ ಇಲ್ಲ, ನಮ್ಮ ಕಥೆ ಇಲ್ಲಿಗೇ ಮುಗೀತು ಅಂತ ಯೋಚಿಸ್ತಿದ್ರು. ಆದ್ರೆ ಯೇಸು ಕ್ರಿಸ್ತನ ಒಬ್ಬ ಹಿಂಬಾಲಕನಿಗೆ ಈ ತರ ಯಾವತ್ತೂ ಅನಿಸಲ್ಲ. ಎಂಥದ್ದೇ ಪರಿಸ್ಥಿತಿ ಬಂದ್ರೂ ಅವ್ರಿಗೆ ನಿರೀಕ್ಷೆ ಇದ್ದೇ ಇರುತ್ತೆ. ಬನ್ನಿ, ಇಂಥಾ ಕಷ್ಟದ ಪರಿಸ್ಥಿತಿಲಿ ಪೇತ್ರ ಮತ್ತು ಅವನ ಜೊತೆಗೆ ಇದ್ದ ಕ್ರೈಸ್ತರು ಏನು ಮಾಡಿದ್ರು, ಅವ್ರಿಂದ ನಾವು ಯಾವ ಪಾಠ ಕಲಿಬಹುದು ಅಂತ ನೋಡೋಣ.
“ಸಭೆಯವರು . . . ದೇವ್ರ ಹತ್ರ ತುಂಬ ಪ್ರಾರ್ಥನೆ ಮಾಡ್ತಾ ಇದ್ರು” (ಅ. ಕಾ. 12:1-5)
5, 6. (ಎ) ರಾಜ 1ನೇ ಹೆರೋದ ಅಗ್ರಿಪ್ಪ ಕ್ರೈಸ್ತ ಸಭೆ ಮೇಲೆ ಯಾಕೆ ದಾಳಿ ಮಾಡಿದ ಮತ್ತು ಹೇಗೆ ಮಾಡಿದ? (ಬಿ) ಯಾಕೋಬನ ಮರಣ ಕ್ರೈಸ್ತ ಸಭೆಗೆ ಒಂದು ದೊಡ್ಡ ಪರೀಕ್ಷೆಯಾಗಿತ್ತು ಯಾಕೆ?
5 ಹಿಂದಿನ ಅಧ್ಯಾಯದಲ್ಲಿ ನೋಡಿದ ಹಾಗೆ, ಯೆಹೂದ್ಯನಲ್ಲದ ಕೊರ್ನೇಲ್ಯ ಮತ್ತು ಅವನ ಕುಟುಂಬದವರು ಕ್ರೈಸ್ತರಾಗಿರೋದು ಸಭೆಯಲ್ಲಾದ ಒಂದು ದೊಡ್ಡ ಬದಲಾವಣೆ ಆಗಿತ್ತು. ಯೆಹೂದಿ ಕ್ರೈಸ್ತರು, ಯೆಹೂದ್ಯರಲ್ಲದ ಜನರ ಜೊತೆ ಸೇರಿ ಆರಾಧನೆ ಮಾಡ್ತಿದ್ರು. ಇದು ಕ್ರೈಸ್ತರಲ್ಲದ ಯೆಹೂದ್ಯರಿಗೆ ನುಂಗಲಾರದ ತುತ್ತಾಗಿತ್ತು.
6 ಈ ಸನ್ನಿವೇಶವನ್ನ ನರಿ ಬುದ್ಧಿಯ ರಾಜಕಾರಣಿ ರಾಜ ಹೆರೋದ ಅಗ್ರಿಪ್ಪ ಯೆಹೂದ್ಯರ ಮನಸ್ಸು ಗೆಲ್ಲೋಕೆ ಬಳಸ್ಕೊಂಡ. ಅವನು ಕ್ರೈಸ್ತರಿಗೆ ತೊಂದ್ರೆ ಕೊಡೋಕೆ ಶುರುಮಾಡಿದ. “ಯೋಹಾನನ ಅಣ್ಣ” ಅಪೊಸ್ತಲ ಯಾಕೋಬ ಯೇಸು ಕ್ರಿಸ್ತನಿಗೆ ತುಂಬ ಆಪ್ತ ಅನ್ನೋ ವಿಷ್ಯ ಅವನಿಗೆ ಗೊತ್ತಾಗಿರಬೇಕು. ಅದಕ್ಕೇ ಅವನು “ಯಾಕೋಬನ ತಲೆ ಕತ್ತರಿಸಿದ.” (ಅ. ಕಾ. 12:2) ಇದು ಖಂಡಿತ ಸಭೆಗೆ ಒಂದು ದೊಡ್ಡ ಪರೀಕ್ಷೆ ಆಗಿತ್ತು! ಯೇಸು ರೂಪಾಂತರ ಆಗಿದ್ದನ್ನ ಮತ್ತು ಬೇರೆ ಅಪೊಸ್ತಲರು ನೋಡದೆ ಇದ್ದ ಕೆಲವು ಅದ್ಭುತಗಳನ್ನ ನೋಡಿದ ಮೂರು ಶಿಷ್ಯರಲ್ಲಿ ಯಾಕೋಬ ಒಬ್ಬನಾಗಿದ್ದ. (ಮತ್ತಾ. 17:1, 2; ಮಾರ್ಕ 5:37-42) ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಯೇಸು “ಗುಡುಗಿನ ಮಕ್ಕಳು” ಅಂತ ಕರೆದಿದ್ದನು. (ಮಾರ್ಕ 3:17) ಆ ಧೈರ್ಯವಂತ, ನಂಬಿಗಸ್ತ ಹಾಗೂ ಪ್ರೀತಿಯ ಅಪೊಸ್ತಲನ ಮರಣ ಸಭೆಗೆ ಒಂದು ದೊಡ್ಡ ನಷ್ಟ ಆಗಿತ್ತು.
7, 8. ಪೇತ್ರ ಜೈಲಲ್ಲಿ ಇರೋವಾಗ ಸಭೆಯವ್ರು ಏನು ಮಾಡಿದ್ರು?
7 ಯಾಕೋಬನನ್ನ ಕೊಲ್ಲಿಸಿದ್ದು ಅಗ್ರಿಪ್ಪ ಅಂದ್ಕೊಂಡ ಹಾಗೆ ಯೆಹೂದ್ಯರಿಗೆ ತುಂಬ ಇಷ್ಟ ಆಯ್ತು. ಇದೇ ಹುಮ್ಮಸ್ಸಲ್ಲಿ ಅವನು ಪೇತ್ರನ ಹಿಂದೆ ಬಿದ್ದ. ಆರಂಭದಲ್ಲಿ ಹೇಳಿದ ತರ ಅವನು ಪೇತ್ರನನ್ನ ಬಂಧಿಸಿದ. ಆದ್ರೆ ಅವನಿಗೆ, ಈ ಹಿಂದೆ ಅಪೊಸ್ತಲರು ಅದ್ಭುತ ರೀತಿಯಲ್ಲಿ ಜೈಲಿಂದ ಬಿಡಿಸ್ಕೊಂಡಿದ್ದು ನೆನಪಿರಬಹುದು. ಈ ಘಟನೆ ಬಗ್ಗೆ 5ನೇ ಅಧ್ಯಾಯದಲ್ಲಿ ನೋಡಿದ್ವಿ. ಹಾಗಾಗಿ ಅಗ್ರಿಪ್ಪ ಈಗ ಪೇತ್ರನನ್ನ ಸರದಿ ಪ್ರಕಾರ ಹಗಲೂರಾತ್ರಿ ಕಾಯೋಕೆ 4 ಕಾವಲುಗಾರರ 4 ಗುಂಪುಗಳನ್ನ ಅಂದ್ರೆ ಒಟ್ಟು 16 ಕಾವಲುಗಾರರನ್ನ ಇಟ್ಟ. ಅಷ್ಟೇ ಅಲ್ಲ, ಆ ನಾಲ್ಕು ಕಾವಲುಗಾರರಲ್ಲಿ ಇಬ್ರು ಪೇತ್ರನ ಎರಡೂ ಕಡೆ ಇದ್ರು ಮತ್ತು ಪೇತ್ರನ ಕೈಗಳಿಗೆ ಹಾಕಿದ್ದ ಸರಪಳಿಯನ್ನ ತಮ್ಮ ಕೈಗೆ ಕಟ್ಕೊಂಡಿದ್ರು. ಪೇತ್ರ ತಪ್ಪಿಸ್ಕೊಂಡ್ರೆ ಅವನಿಗೆ ಕೊಟ್ಟಿದ್ದ ಶಿಕ್ಷೆ ಆ ಕಾವಲುಗಾರರಿಗೆ ಸಿಗ್ತಿತ್ತು. ಇಂಥ ಕಷ್ಟದ ಸನ್ನಿವೇಶದಲ್ಲಿದ್ದ ಪೇತ್ರನಿಗೆ ಅವನ ಜೊತೆಗೆ ಇದ್ದ ಕ್ರೈಸ್ತರು ಏನಾದ್ರೂ ಸಹಾಯ ಮಾಡಬಹುದಿತ್ತಾ?
8 ಏನು ಮಾಡಬೇಕಂತ ಸಭೆಯವ್ರಿಗೆ ಗೊತ್ತಿತ್ತು. ಅಪೊಸ್ತಲರ ಕಾರ್ಯ 12:5 ಹೇಳೋ ತರ “ಪೇತ್ರ ಜೈಲಲ್ಲಿ ಇರುವಾಗ ಸಭೆಯವರು ಅವನಿಗೋಸ್ಕರ ದೇವ್ರ ಹತ್ರ ತುಂಬ ಪ್ರಾರ್ಥನೆ ಮಾಡ್ತಾ ಇದ್ರು.” ಅವರು ತಮ್ಮ ಪ್ರೀತಿಯ ಸಹೋದರನಿಗಾಗಿ ಮನಸಾರೆ ಪ್ರಾರ್ಥನೆ ಮಾಡಿದ್ರು, ದೇವರ ಹತ್ರ ಸಹಾಯ ಕೇಳಿದ್ರು. ಯಾಕೋಬನ ಮರಣದಿಂದ ಅವರು ಕುಗ್ಗಿನೂ ಹೋಗಲಿಲ್ಲ, ಪ್ರಾರ್ಥನೆ ಮಾಡಿ ಏನೂ ಪ್ರಯೋಜನ ಇಲ್ಲ ಅಂತಾನೂ ಅಂದ್ಕೊಳ್ಳಲಿಲ್ಲ. ಯಾಕಂದ್ರೆ ಪ್ರಾರ್ಥನೆಗಳಿಗೆ ಯೆಹೋವ ತುಂಬ ಪ್ರಾಮುಖ್ಯತೆ ಕೊಡ್ತಾನೆ, ಅವು ಆತನ ಇಷ್ಟದ ಪ್ರಕಾರ ಇದ್ರೆ ಉತ್ರ ಕೊಟ್ಟೇ ಕೊಡ್ತಾನೆ ಅಂತ ಅವ್ರಿಗೆ ಗೊತ್ತಿತ್ತು. (ಇಬ್ರಿ. 13:18, 19; ಯಾಕೋ. 5:16) ನಾವೂ ಕೂಡ ಅವ್ರ ತರ ಬೇರೆವ್ರಿಗೋಸ್ಕರ ಪ್ರಾರ್ಥನೆ ಮಾಡಬೇಕು.
9. ಪೇತ್ರನಿಗೋಸ್ಕರ ಪ್ರಾರ್ಥನೆ ಮಾಡಿದ ಕ್ರೈಸ್ತರಿಂದ ನಾವೇನು ಕಲಿಬಹುದು?
9 ತುಂಬ ಕಷ್ಟಗಳನ್ನ ಅನುಭವಿಸ್ತಿರೋ ಜೊತೆ ಕ್ರೈಸ್ತರ ಬಗ್ಗೆ ನಿಮಗೆ ಗೊತ್ತಿದ್ಯಾ? ಹಿಂಸೆ, ಸರ್ಕಾರದ ನಿಷೇಧ ಅಥವಾ ನೈಸರ್ಗಿಕ ವಿಪತ್ತುಗಳಿಂದ ಅವರು ಕಷ್ಟಪಡ್ತಿರಬಹುದು. ಇವ್ರಿಗೋಸ್ಕರ ಮನಸಾರೆ ಪ್ರಾರ್ಥನೆ ಮಾಡಿ. ಇನ್ನು ಕೆಲವರು ಅನುಭವಿಸ್ತಿರೋ ಕಷ್ಟ ಬೇರೆವ್ರ ಗಮನಕ್ಕೆ ಅಷ್ಟಾಗಿ ಬರದೇ ಇರಬಹುದು. ಉದಾಹರಣೆಗೆ ಅವ್ರಿಗೆ ಕುಟುಂಬದಲ್ಲಿ ತೊಂದರೆ ಇರಬಹುದು, ಅವರು ಬೇಜಾರಲ್ಲಿ ಇರಬಹುದು ಅಥವಾ ನಂಬಿಕೆ ವಿಷ್ಯದಲ್ಲಿ ಯಾವುದೊ ಒಂದು ಪರೀಕ್ಷೆ ಎದುರಿಸ್ತಿರಬಹುದು. ನಾವು ಪ್ರಾರ್ಥನೆ ಮಾಡೋ ಮುಂಚೆ ಸ್ವಲ್ಪ ಯೋಚ್ನೆ ಮಾಡಿದ್ರೆ ಇಂಥವರ ನೆನಪಾಗುತ್ತೆ. ಇದ್ರಿಂದ “ಪ್ರಾರ್ಥನೆ ಕೇಳುವ” ಯೆಹೋವನ ಹತ್ರ ಮಾತಾಡುವಾಗ ಅವರ ಹೆಸ್ರು ಹೇಳಿ ಪ್ರಾರ್ಥಿಸೋಕೆ ಸಹಾಯ ಆಗುತ್ತೆ. (ಕೀರ್ತ. 65:2) ನೀವು ಕಷ್ಟದಲ್ಲಿ ಇರುವಾಗ ಸಹೋದರ ಸಹೋದರಿಯರು ನಿಮಗೂ ಇದನ್ನೇ ಮಾಡಬೇಕು ಅಂತ ಇಷ್ಟಪಡ್ತಿರಲ್ವಾ?
“ನನ್ನ ಹಿಂದೆನೇ ಬಾ” (ಅ. ಕಾ. 12:6-11)
10, 11. ಯೆಹೋವನ ದೂತ ಪೇತ್ರನನ್ನ ಜೈಲಿಂದ ಹೇಗೆ ಬಿಡಿಸಿದ?
10 ಮುಂದೆ ತನಗೆ ಏನಾಗುತ್ತೋ ಏನೋ ಅಂತ ಪೇತ್ರ ಭಯ ಪಟ್ನಾ? ಅದ್ರ ಬಗ್ಗೆ ನಮಗೆ ಖಚಿತವಾಗಿ ಗೊತ್ತಿಲ್ಲ, ಆದ್ರೆ ಜೈಲಲ್ಲಿದ್ದ ಆ ಕೊನೆ ರಾತ್ರಿ ಅವನು ಚೆನ್ನಾಗಿ ನಿದ್ದೆ ಮಾಡ್ತಿದ್ದ ಅನ್ನೋದಂತೂ ಖಚಿತ. ಯಾಕಂದ್ರೆ ನಾಳೆ ತನಗೇನೇ ಅಪಾಯ ಬಂದ್ರೂ ಯೆಹೋವ ನನ್ನ ಜೊತೆ ಇರ್ತಾನೆ ಅನ್ನೋ ಗ್ಯಾರೆಂಟಿ ಅವನಿಗೆ ಇತ್ತು. (ರೋಮ. 14:7, 8) ಅದೇ ತರ ಆಯ್ತು. ಪೇತ್ರ ಅಂದ್ಕೊಳ್ಳದೇ ಇದ್ದ ಕೆಲವು ಘಟನೆಗಳು ನಡೀತು. ತಟ್ಟನೇ ಜೈಲಿನ ಆ ಕೋಣೆಯಲ್ಲಿ ಪ್ರಕಾಶವಾದ ಬೆಳಕು ತುಂಬ್ಕೊಳ್ತು. ಅಲ್ಲೊಬ್ಬ ದೇವದೂತ ನಿಂತ್ಕೊಂಡಿದ್ದ. ಆದ್ರೆ ಅಲ್ಲಿದ್ದ ಕಾವಲುಗಾರರಿಗೆ ಅವನು ಕಾಣಿಸಲಿಲ್ಲ. ಅವನು ಅವಸರವಾಗಿ ಪೇತ್ರನನ್ನ ಎಬ್ಬಿಸಿದ. ಆಗ ಪೇತ್ರನ ಕೈಗಳಲ್ಲಿದ್ದ, ಯಾರಿಂದಾನೂ ಮುರಿಯೋಕೆ ಆಗದ ಸರಪಳಿಗಳು ತನ್ನಿಂದ ತಾನೇ ಕಳಚಿಬಿದ್ವು!
11 ಆಮೇಲೆ ದೇವದೂತ ಪೇತ್ರನಿಗೆ ಒಂದಾದ ಮೇಲೆ ಒಂದು ಅಪ್ಪಣೆಗಳನ್ನ ಕೊಟ್ಟ: “ಬೇಗ ಎದ್ದೇಳು!,” “ಬಟ್ಟೆ, ಚಪ್ಪಲಿ ಹಾಕು,” ‘ಮೇಲೆ ಹಾಕೋ ಬಟ್ಟೆನೂ ಹಾಕು’ ಅಂತ ಹೇಳಿದ. ಪೇತ್ರ ಅವನು ಹೇಳಿದ ತರಾನೇ ಮಾಡಿದ. ಕೊನೆಗೆ ದೇವದೂತ ಅವನಿಗೆ “ನನ್ನ ಹಿಂದೆನೇ ಬಾ” ಅಂತ ಹೇಳಿದ. ಪೇತ್ರ ಅವನನ್ನ ಹಿಂಬಾಲಿಸಿದ. ಅವರು ಜೈಲಿನ ಆ ಕೋಣೆಯಿಂದ ಹೊರಗೆ ಬಂದ್ರು. ಕಾವಲುಗಾರರ ಮುಂದೇನೇ ನಡ್ಕೊಂಡು, ಸದ್ದುಮಾಡದೇ ಆ ದೊಡ್ಡ ಕಬ್ಬಿಣದ ಬಾಗಿಲ ಕಡೆಗೆ ಬಂದ್ರು. ಅಲ್ಲಿಂದ ಹೊರಗೆ ಹೋಗೋದು ಹೇಗೆ ಅನ್ನೋ ಯೋಚ್ನೆ ಪೇತ್ರನ ಮನಸ್ಸಿಗೆ ಬರ್ತಿದ್ದ ಹಾಗೆ ಅದಕ್ಕೆ ಉತ್ರ ಸಿಕ್ತು. “ಆ ಬಾಗಿಲು ತಾನಾಗಿಯೇ ತೆರಿತು.” ಅವರು ಆ ಬಾಗಿಲು ದಾಟಿ ಬೀದಿಯಲ್ಲಿ ಬಂದು ನಿಂತ್ರು. ಆಮೇಲೆ ಆ ದೇವದೂತ ಮಾಯವಾದ. ಇದೆಲ್ಲಾ ಚಿಟಿಕೆ ಹೊಡೆಯೋಷ್ಟರಲ್ಲಿ ನಡೆದುಹೋಗಿತ್ತು. ಪೇತ್ರ ಒಬ್ಬನೇ ಆ ಬೀದಿಯಲ್ಲಿ ನಿಂತ್ಕೊಂಡಿದ್ದ. ಆಗ್ಲೇ ಅವನಿಗೆ ಇದು ದರ್ಶನ ಅಲ್ಲ, ನಿಜ ಅಂತ ಗೊತ್ತಾಯ್ತು. ಅವನು ಜೈಲಿಂದ ಹೊರಗೆ ಬಂದುಬಿಟ್ಟಿದ್ದ!—ಅ. ಕಾ. 12:7-11.
12. ಯೆಹೋವ ಪೇತ್ರನನ್ನ ರಕ್ಷಿಸಿದ್ದನ್ನ ನೋಡಿದಾಗ ನಮಗೆ ಯಾಕೆ ನೆಮ್ಮದಿ ಆಗುತ್ತೆ?
12 ತನ್ನ ಸೇವಕರನ್ನ ರಕ್ಷಿಸೋಕೆ ಯೆಹೋವನಿಗೆ ಇರೋ ಅಪಾರ ಶಕ್ತಿ ಬಗ್ಗೆ ಯೋಚ್ನೆ ಮಾಡುವಾಗ ನೆಮ್ಮದಿ ಆಗುತ್ತಲ್ವಾ? ಪೇತ್ರನನ್ನ ಬಂಧಿಸಿ ಇಟ್ಟಿದ್ದ ರಾಜನಿಗೆ ಲೋಕದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದ್ದ ಸರ್ಕಾರದ ಬೆಂಬಲ ಇತ್ತು. ಆದ್ರೆ ಪೇತ್ರ ಎಷ್ಟು ಸುಲಭವಾಗಿ ಆ ಜೈಲಿಂದ ಹೊರಗೆ ನಡ್ಕೊಂಡು ಬಂದ! ಯೆಹೋವ ಇಂಥ ಅದ್ಭುತಗಳನ್ನ ತನ್ನೆಲ್ಲ ಸೇವಕರಿಗೆ ಮಾಡೋದಿಲ್ಲ ನಿಜ. ಯಾಕೋಬನಿಗೂ ಮಾಡಲಿಲ್ಲ, ಮುಂದೆ ಪೇತ್ರನಿಗೂ ಮಾಡಲಿಲ್ಲ. ಯಾಕಂದ್ರೆ ಪೇತ್ರನ ಬಗ್ಗೆ ಯೇಸು ಮುಂಚೆನೇ ಹೇಳಿದ್ದ ಮಾತುಗಳು ನಿಜ ಆದ್ವು. ಇದ್ರಿಂದ ಏನು ಗೊತ್ತಾಗುತ್ತೆ? ಇವತ್ತು ಕ್ರೈಸ್ತರು ನಮ್ಮನ್ನೂ ದೇವರು ಇದೇ ತರ ಅದ್ಭುತವಾಗಿ ಬಿಡುಗಡೆ ಮಾಡ್ತಾನೆ ಅಂತ ನಿರೀಕ್ಷಿಸಲ್ಲ. ಆದ್ರೆ ಯೆಹೋವ ಬದಲಾಗಿಲ್ಲ ಅನ್ನೋ ಗ್ಯಾರೆಂಟಿ ನಮಗಿದೆ. (ಮಲಾ. 3:6) ಮರಣ ಅನ್ನೋ ಜೈಲಿನಲ್ಲಿ ಕೋಟಿಗಟ್ಟಲೆ ಜನ ಸಿಕ್ಕಿಹಾಕೊಂಡಿದ್ದಾರೆ. ಯೆಹೋವ ದೇವರು ಮುಂದೆ ತನ್ನ ಮಗನ ಮೂಲಕ ಅವ್ರೆಲ್ಲರನ್ನ ಆ ಬಂಧನದಿಂದ ಬಿಡಿಸ್ತಾನೆ. (ಯೋಹಾ. 5:28, 29) ನಾವು ಇವತ್ತು ಕಷ್ಟಪರೀಕ್ಷೆಗಳನ್ನ ಎದುರಿಸುವಾಗ ಅಂಥ ಭವಿಷ್ಯವಾಣಿಗಳು ನಮ್ಮಲ್ಲಿ ತುಂಬ ಧೈರ್ಯ ಕೊಡುತ್ತೆ.
“ಅವನನ್ನ ನೋಡಿ ಅವರು ಬೆಚ್ಚಿಬಿದ್ರು” (ಅ. ಕಾ. 12:12-17)
13-15. (ಎ) ಪೇತ್ರ ಮರಿಯಳ ಮನೆಗೆ ಬಂದಾಗ ಅಲ್ಲಿದ್ದ ಸಹೋದರರ ಪ್ರತಿಕ್ರಿಯೆ ಏನಾಗಿತ್ತು? (ಬಿ) ಅಪೊಸ್ತಲರ ಕಾರ್ಯ ಪುಸ್ತಕದ ಉಳಿದ ಭಾಗ ಯಾವುದ್ರ ಬಗ್ಗೆ ಹೇಳುತ್ತೆ? (ಸಿ) ಪೇತ್ರ ತನ್ನ ಸಹೋದರ ಸಹೋದರಿಯರಿಗೋಸ್ಕರ ಏನು ಮಾಡಿದ?
13 ಪೇತ್ರ ಆ ಕತ್ತಲಲ್ಲಿ ಬೀದಿಯಲ್ಲಿ ನಿಂತ್ಕೊಂಡು, ಎಲ್ಲಿ ಹೋಗಬೇಕು ಅಂತ ಯೋಚ್ನೆ ಮಾಡ್ತಾ ಇದ್ದ. ಕೊನೆಗೂ ಒಂದು ನಿರ್ಧಾರ ಮಾಡಿದ. ಅಲ್ಲೇ ಹತ್ರದಲ್ಲಿ, ಮರಿಯ ಅನ್ನೋ ಕ್ರೈಸ್ತ ಸಹೋದರಿಯ ಮನೆ ಇತ್ತು. ಅವಳೊಬ್ಬ ಶ್ರೀಮಂತ ವಿಧವೆ ಆಗಿರಬೇಕು. ಕೂಟ ನಡೆಸೋವಷ್ಟು ದೊಡ್ಡ ಮನೆ ಅವಳಿಗಿತ್ತು. ಅವಳು ಯೋಹಾನ ಅನ್ನೋ ಮಾರ್ಕನ ತಾಯಿ ಆಗಿದ್ದಳು. ಅಪೊಸ್ತಲರ ಕಾರ್ಯದಲ್ಲಿ ಇದೇ ಮೊದಲ ಸಲ ಈ ಮಾರ್ಕನ ಬಗ್ಗೆ ಹೇಳಿದೆ. ಇವನು ಮುಂದೆ ಪೇತ್ರನಿಗೆ ಒಬ್ಬ ಮಗನ ತರ ಆದ. (1 ಪೇತ್ರ 5:13) ಆ ರಾತ್ರಿ ಸಭೆಯವರು ತುಂಬ ಹೊತ್ತಾದ್ರೂ ಇನ್ನೂ ಮರಿಯಳ ಮನೆಯಲ್ಲಿದ್ರು. ಅವರು ಶ್ರದ್ಧೆಯಿಂದ ಪ್ರಾರ್ಥನೆ ಮಾಡ್ತಿದ್ರು. ಅವರು ಪೇತ್ರನಿಗೆ ಬಿಡುಗಡೆ ಆಗಬೇಕು ಅಂತ ಖಂಡಿತ ಪ್ರಾರ್ಥಿಸಿ ಮಾಡಿರ್ತಾರೆ. ಆದ್ರೆ ಯೆಹೋವ ಅವ್ರ ಪ್ರಾರ್ಥನೆಗೆ ಆಶ್ಚರ್ಯ ಆಗೋ ತರ ಉತ್ರ ಕೊಟ್ರು!!
14 ಪೇತ್ರ ಮರಿಯಳ ಮನೆ ಹತ್ರ ಬಂದು ಕದ ತಟ್ಟಿದ. ಆ ಕದ ತೆರೆದ್ರೆ ಮೊದಲು ಒಂದು ದೊಡ್ಡ ಅಂಗಳ, ಆಮೇಲೆ ಮನೆ ಕಾಣಿಸ್ತಿತ್ತು. ರೋದೆ (“ಗುಲಾಬಿ” ಅನ್ನೋ ಅರ್ಥ ಇರೋ ಸರ್ವೇ ಸಾಮಾನ್ಯ ಗ್ರೀಕ್ ಹೆಸ್ರು) ಅನ್ನೋ ಸೇವಕಿ ಕದದ ಹತ್ರ ಬಂದಳು. ಅವಳಿಗೆ ಪೇತ್ರನ ಸ್ವರ ಕೇಳಿಸ್ಕೊಂಡಾಗ ತನ್ನ ಕಿವಿಗಳನ್ನ ನಂಬಕ್ಕೇ ಆಗಲಿಲ್ಲ! ಅವಳು ಕದ ತೆಗೆಯೋ ಬದಲು ಆಶ್ಚರ್ಯದಿಂದ ಮನೆ ಒಳಗೆ ಓಡಿಹೋದಳು. ಪೇತ್ರ ಅಲ್ಲೇ ಬೀದಿಯಲ್ಲಿ ನಿಂತಿದ್ದ! ಮನೆಯೊಳಗೆ ಹೋಗಿ ಸಭೆಯವ್ರಿಗೆ ಪೇತ್ರ ಬಂದಿದ್ದಾನೆ ಅಂತ ಹೇಳೋಕೆ ಅವಳು ಪ್ರಯತ್ನ ಮಾಡಿದಳು. ಆದ್ರೆ ಅವರು ಅವಳಿಗೆ ಹುಚ್ಚು ಹಿಡಿದಿದೆ ಅಂತ ಅಂದ್ಕೊಂಡ್ರು. ಹಾಗಂತ ಅವಳು ಅಲ್ಲಿಗೆ ಸುಮ್ಮನಾಗಲಿಲ್ಲ. ಅವಳಿಗೆ ಯಾವುದು ಸರಿ ಅಂತ ಗೊತ್ತಿತ್ತೋ ಅದನ್ನೇ ಮತ್ತೆಮತ್ತೆ ಹೇಳಿದಳು. ಆಗ ಅಲ್ಲಿದ್ದವರಲ್ಲಿ ಕೆಲವರು ಅವಳ ಮಾತು ಕೇಳಿ, ಬಹುಶಃ ಪೇತ್ರನನ್ನ ಪ್ರತಿನಿಧಿಸೋ ದೇವದೂತ ಬಂದಿರಬಹುದು ಅಂತ ಹೇಳಿದ್ರು. (ಅ. ಕಾ. 12:12-15) ಇದೆಲ್ಲ ನಡೀತಾ ಇದ್ದಾಗ ಪೇತ್ರ ಇನ್ನೂ ಕದ ತಟ್ತಾನೇ ಇದ್ದ. ಕೊನೆಗೂ ಅವರು ಹೋಗಿ ಕದ ತೆಗಿದ್ರು.
15 ಕದ ತೆಗೆದಾಗ ಪೇತ್ರ ನಿಂತಿದ್ದನ್ನ “ನೋಡಿ ಅವರು ಬೆಚ್ಚಿಬಿದ್ರು.” (ಅ. ಕಾ. 12:16) ಅವರಿಗೆಲ್ಲ ಎಷ್ಟು ಖುಷಿ ಆಯ್ತಂದ್ರೆ ಅಲ್ಲಿ ದೊಡ್ಡ ಗದ್ದಲಾನೇ ಆಯ್ತು. ಹಾಗಾಗಿ ಪೇತ್ರ ಅವ್ರಿಗೆ ಸುಮ್ಮನಿರೋಕೆ ಹೇಳಿದ. ಆಮೇಲೆ ತಾನು ಹೇಗೆ ಬಂದೆ ಅಂತ ವಿವರಿಸಿದ. ಈ ವಿಷ್ಯನಾ ಶಿಷ್ಯನಾದ ಯಾಕೋಬನಿಗೂ ಬೇರೆ ಸಹೋದರರಿಗೂ ತಿಳಿಸೋಕೆ ಹೇಳಿದ. ಆಮೇಲೆ ಹೆರೋದನ ಸೈನಿಕರು ಬಂದು ಅವನನ್ನ ಹಿಡ್ಕೊಳ್ಳೋ ಮುಂಚೆ ಅಲ್ಲಿಂದ ಹೋಗಿಬಿಟ್ಟ. ಸುರಕ್ಷಿತವಾಗಿದ್ದ ಜಾಗದಲ್ಲಿ ತನ್ನ ಸೇವೆ ಮುಂದುವರಿಸಿದ. ಇದಾದ ಮೇಲೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಅವನ ಬಗ್ಗೆ ಒಂದ್ಸಲ ಮಾತ್ರ ಅಂದ್ರೆ 15ನೇ ಅಧ್ಯಾಯದಲ್ಲಿ ಹೇಳಿದೆ. ಅಲ್ಲಿ ಪೇತ್ರ ಸುನ್ನತಿ ಬಗ್ಗೆ ಆಗ್ತಾ ಇದ್ದ ಜಗಳವನ್ನ ಬಗೆಹರಿಸೋಕೆ ಕೊಟ್ಟ ನೆರವಿನ ಬಗ್ಗೆ ಇದೆ. ಈ ಪುಸ್ತಕದ ಉಳಿದ ಭಾಗ ಅಪೊಸ್ತಲ ಪೌಲ ಮಾಡಿದ ಕೆಲಸ ಮತ್ತು ಪ್ರಯಾಣಗಳ ಬಗ್ಗೆ ಹೇಳುತ್ತೆ. ಆದ್ರೆ ಪೇತ್ರ ಎಲ್ಲೆಲ್ಲಿ ಹೋದ್ನೊ ಅಲ್ಲೆಲ್ಲ ಸಹೋದರ ಸಹೋದರಿಯರ ನಂಬಿಕೆಯನ್ನ ಬಲಪಡಿಸಿದ ಅಂತ ನಾವು ಗ್ಯಾರೆಂಟಿಯಾಗಿ ಹೇಳಬಹುದು. ಅವನು ಮರಿಯಳ ಮನೆಯಿಂದ ಹೋಗೋವಾಗ್ಲೂ ಅಲ್ಲಿರೋರಿಗೆಲ್ಲ ತುಂಬಾ ಸಂತೋಷ ಆಯ್ತು.
16. ಮುಂದೆ ನಮಗೆ ಸಂತೋಷ ಪಡೋಕೆ ತುಂಬಾ ಅವಕಾಶಗಳಿರುತ್ತೆ ಅಂತ ಯಾಕೆ ಹೇಳಬಹುದು?
16 ಕೆಲವು ಸಲ ಯೆಹೋವ ತನ್ನ ಸೇವಕರಿಗೆ ಅವರು ನೆನಸಿದ್ದಕ್ಕಿಂತ ಜಾಸ್ತಿನೇ ಆಶೀರ್ವಾದ ಕೊಡ್ತಾನೆ. ಇದ್ರಿಂದ ಅವ್ರಿಗೆ ತುಂಬಾ ಖುಷಿ ಆಗುತ್ತೆ. ಪೇತ್ರನ ಸಹೋದರ ಸಹೋದರಿಯರಿಗೆ ಆ ರಾತ್ರಿ ಹಾಗೇ ಆಯ್ತು. ಯೆಹೋವನ ಆಶೀರ್ವಾದ ಪಡೆಯೋವಾಗ ನಮ್ಗೂ ಹಾಗೇ ಅನಿಸಬಹುದು. (ಜ್ಞಾನೋ. 10:22) ಮುಂದೆ ಯೆಹೋವ ಹೇಳಿರೋ ಎಲ್ಲ ಭವಿಷ್ಯವಾಣಿಗಳು ಭೂಮಿಯಲ್ಲಿ ನಿಜ ಆಗೋದನ್ನ ನೋಡ್ತೀವಿ. ಅದು ನಮ್ಮ ಕಲ್ಪನೆಗೂ ಮೀರಿರುತ್ತೆ. ಹಾಗಾಗಿ ನಾವು ನಂಬಿಗಸ್ತರಾಗಿದ್ರೆ ಮುಂದೆ ಸಂತೋಷವಾದ ಜೀವನವನ್ನ ಖಂಡಿತ ಅನುಭವಿಸ್ತೀವಿ.
“ಯೆಹೋವನ ದೂತ ಅವನಿಗೆ ಕಾಯಿಲೆ ಬರೋ ತರ ಮಾಡಿದ” (ಅ. ಕಾ. 12:18-25)
17, 18. ಜನರು ಹೆರೋದನನ್ನ ಹೊಗಳೋಕೆ ಕಾರಣ ಏನು?
17 ಪೇತ್ರ ಜೈಲಿಂದ ತಪ್ಪಿಸ್ಕೊಂಡಿದ್ದನ್ನ ಕೇಳಿ ಹೆರೋದನಿಗೂ ಆಶ್ಚರ್ಯ ಆಯ್ತು. ತಕ್ಷಣ ಪೇತ್ರನನ್ನ ಹುಡುಕೋಕೆ ಆಜ್ಞೆ ಕೊಟ್ಟ. ಅವನನ್ನ ಕಾಯೋಕೆ ಇಟ್ಟಿದ್ದ ಕಾವಲುಗಾರರ ವಿಚಾರಣೆ ಮಾಡಿದ. ಆಮೇಲೆ “ಅವ್ರಿಗೆ ಶಿಕ್ಷೆ ಕೊಡೋಕೆ” ಆಜ್ಞೆ ಕೊಟ್ಟ, ಅದು ಮರಣ ಶಿಕ್ಷೆನೇ ಆಗಿರಬೇಕು. (ಅ. ಕಾ. 12:19) ಹೆರೋದ ಅಗ್ರಿಪ್ಪ ಅಷ್ಟರ ಮಟ್ಟಿಗೆ ದಯೆ, ಕರುಣೆಯಿಲ್ಲದ ವ್ಯಕ್ತಿ ಆಗಿದ್ದ. ಇಂಥಾ ಕಲ್ಲೆದೆಯ ವ್ಯಕ್ತಿಗೆ ಯಾವತ್ತೂ ಶಿಕ್ಷೆನೇ ಆಗಲಿಲ್ವಾ?
18 ಪೇತ್ರನನ್ನ ಕೊಲ್ಲಿಸೋಕೆ ಆಗದೇ ಇದ್ದಿದ್ರಿಂದ ಅಗ್ರಿಪ್ಪನಿಗೆ ದೊಡ್ಡ ಅವಮಾನ ಆಯ್ತು. ಆದ್ರೆ ಅದ್ರಿಂದ ಆಚೆ ಬರೋಕೆ ಅವನಿಗೆ ಒಂದು ಅವಕಾಶ ಸಿಕ್ತು. ಸ್ವಲ್ಪದರಲ್ಲೇ ಒಂದು ಕಾರ್ಯಕ್ರಮ ಇತ್ತು, ಅದ್ರಲ್ಲಿ ಅವನ ವಿರೋಧಿಗಳು ಅವನ ಜೊತೆ ಶಾಂತಿ ಸಂಧಾನ ಮಾಡ್ಕೊಳ್ಳೋಕೆ ಬಂದಿದ್ರು. ಆ ದೊಡ್ಡ ಜನಸಮೂಹದ ಮುಂದೆ ಭಾಷಣ ಕೊಡೋಕೆ ಹೆರೋದ ತುದಿಗಾಲಲ್ಲಿದ್ದ. ಆ ದಿನ ಅವನು “ತನ್ನ ಹಬ್ಬದ ಬಟ್ಟೆ ಹಾಕೊಂಡು” ಬಂದಿದ್ದ ಅಂತ ಲೂಕ ಹೇಳಿದ್ದಾನೆ. ಆ ಬಟ್ಟೆ ಬೆಳ್ಳಿದಾಗಿತ್ತು, ಅದ್ರ ಮೇಲೆ ಬೆಳಕು ಬಿದ್ದಾಗ ಅವನು ಮಹಿಮೆಯಿಂದ ಪ್ರಜ್ವಲಿಸೋ ಹಾಗೆ ಕಾಣ್ತಿತ್ತು ಅಂತ ಯೆಹೂದಿ ಇತಿಹಾಸಗಾರ ಜೋಸೀಫಸ್ ವರದಿಸಿದ್ದಾನೆ. ಈ ದುರಹಂಕಾರಿ ರಾಜ ಅಲ್ಲಿ ಭಾಷಣ ಕೊಟ್ಟಾಗ, ಅವನನ್ನ ಹೊಗಳ್ತಾ ಜನರ ಗುಂಪು, “ಇದು ಮನುಷ್ಯನ ಧ್ವನಿ ಅಲ್ಲ, ದೇವ್ರ ಧ್ವನಿ!” ಅಂತ ಕೂಗಿದ್ರು.—ಅ. ಕಾ. 12:20-22.
19, 20. (ಎ) ಹೆರೋದನಿಗೆ ಯಾಕೆ ಯೆಹೋವನಿಂದ ಶಿಕ್ಷೆ ಆಯ್ತು? (ಬಿ) ಹೆರೋದನ ಬಗ್ಗೆ ಇರೋ ಈ ಘಟನೆ ಓದೋವಾಗ ನಮಗೆ ಯಾವ ಸಾಂತ್ವನ ಸಿಗುತ್ತೆ?
19 ಆದ್ರೆ ಈ ಗೌರವ, ಮಹಿಮೆ ದೇವರಿಗೆ ಸೇರಬೇಕಾಗಿತ್ತು. ದೇವರು ಇದನ್ನೆಲ್ಲಾ ಗಮನಿಸ್ತಿದ್ದನು! ಹೆರೋದನಿಗೆ ಆಪತ್ತಿನಿಂದ ತಪ್ಪಿಸ್ಕೊಳ್ಳೋಕೆ ಅವಕಾಶ ಇತ್ತು. ಅವನು ಆ ಜನ್ರನ್ನ ಗದರಿಸಬಹುದಿತ್ತು ಅಥವಾ ಕಡಿಮೆಪಕ್ಷ ಅವರು ಹೇಳಿದ ಮಾತು ಸರಿಯಲ್ಲ ಅಂತನಾದ್ರೂ ಹೇಳಬಹುದಿತ್ತು. ಇದಕ್ಕೆ ಬದಲು, “ಸೊಕ್ಕಿಂದ ಸರ್ವನಾಶ” ಅನ್ನೋ ಮಾತಿಗೆ ಅವನು ಜೀವಂತ ಉದಾಹರಣೆಯಾದ. (ಜ್ಞಾನೋ. 16:18) “ತಕ್ಷಣ ಯೆಹೋವನ ದೂತ ಅವನಿಗೆ ಕಾಯಿಲೆ ಬರೋ ತರ ಮಾಡಿದ.” ಅಹಂಕಾರದಿಂದ ಉಬ್ಬಿಹೋಗಿದ್ದ ಈ ಸ್ವಾರ್ಥಿ ತುಂಬ ಅಸಹ್ಯವಾದ, ಘೋರ ಮರಣವನ್ನ ಅನುಭವಿಸಿದ. ಹೆರೋದ “ಅಲ್ಲೇ ಹುಳಬಿದ್ದು ಸತ್ತ.” (ಅ. ಕಾ. 12:23) ಜೋಸೀಫಸ ಕೂಡ ಬರೆದಿರೋದು ಏನಂದ್ರೆ, ‘ಹೆರೋದ ಅಗ್ರಿಪ್ಪನಿಗೆ ತಟ್ಟನೆ ಒಂದು ಮಾರಣಾಂತಿಕ ಕಾಯಿಲೆ ಬಂತು ಮತ್ತು ಜನರ ಹೊಗಳಿಕೆಯನ್ನ ಸ್ವೀಕರಿಸಿದ್ದರಿಂದಲೇ ತನಗೆ ಹೀಗಾಯ್ತು ಅಂತ ರಾಜನಿಗೂ ಗೊತ್ತಾಯ್ತು. ಹೆರೋದ 5 ದಿನಗಳ ತನಕ ನರಳಿ ಸತ್ತುಹೋದ.’b
20 ಕೆಲವು ಸಲ ನಮ್ಗೆ, ದೇವರ ಮೇಲೆ ಭಕ್ತಿ ಇಲ್ಲದ ಜನ ಏನೇ ಕೆಟ್ಟದು ಮಾಡಿದ್ರೂ ಶಿಕ್ಷೆನೇ ಸಿಗಲ್ಲ ಅಂತ ಅನಿಸಬಹುದು. ಯೆಹೋವ ಜನರಾದ ನಮಗೆ “ಇಡೀ ಲೋಕ ಸೈತಾನನ ಕೈಯಲ್ಲಿದೆ” ಅಂತ ಗೊತ್ತು. (1 ಯೋಹಾ. 5:19) ಆದ್ರೂ ಕೆಟ್ಟವರು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋದನ್ನ ನೋಡೋವಾಗ ನಮಗೆ ಬೇಜಾರಾಗುತ್ತೆ. ಆದ್ರೆ ಹೆರೋದನಿಗೆ ಆದ ಗತಿ ನೋಡಿದಾಗ ಯೆಹೋವ ದೇವರು ಕೆಟ್ಟವ್ರಿಗೆ ಶಿಕ್ಷೆ ಕೊಟ್ಟೇ ಕೊಡ್ತಾನೆ ಅಂತ ಗೊತ್ತಾಗುತ್ತೆ. ಇದ್ರಿಂದ ಆತನು ನ್ಯಾಯವನ್ನ ಪ್ರೀತಿಸ್ತಾನೆ ಅಂತ ಗ್ಯಾರೆಂಟಿಯಾಗಿ ನಂಬಬಹುದು. (ಕೀರ್ತ. 33:5) ಒಂದಲ್ಲ ಒಂದು ದಿನ ಆತನ ನ್ಯಾಯಕ್ಕೇ ಜಯ ಸಿಕ್ಕೇ ಸಿಗುತ್ತೆ!
21. (ಎ) ಅಪೊಸ್ತಲರ ಕಾರ್ಯ 12ನೇ ಅಧ್ಯಾಯದಿಂದ ಮುಖ್ಯವಾಗಿ ಯಾವ ವಿಷ್ಯ ನಮ್ಗೆ ಗೊತ್ತಾಗುತ್ತೆ? (ಬಿ) ಅದ್ರಿಂದ ಇವತ್ತು ನಮಗೆ ಹೇಗೆ ಸಾಂತ್ವನ ಸಿಗುತ್ತೆ?
21 ಈ ಘಟನೆಯ ಕೊನೆಯಲ್ಲಿ ಆದ ಇನ್ನೊಂದು ವಿಷ್ಯ ಕೂಡ ನಮ್ಗೆ ಪ್ರೋತ್ಸಾಹ ಕೊಡುತ್ತೆ. ಅದು ಹೇಳೋದು: “ಯೆಹೋವನ ಸಂದೇಶ ಎಲ್ಲ ಕಡೆ ಹಬ್ತಾ ಇತ್ತು.” (ಅ. ಕಾ. 12:24) ಇದು ಆಧುನಿಕ ಸಮಯದಲ್ಲೂ ಯೆಹೋವ ಸಾರೋ ಕೆಲಸವನ್ನ ಆಶೀರ್ವದಿಸ್ತಿದ್ದಾನೆ ಅನ್ನೋದನ್ನ ನೆನಪಿಸುತ್ತೆ. ಅಪೊಸ್ತಲರ ಕಾರ್ಯ ಅಧ್ಯಾಯ 12ರಲ್ಲಿ ಒಬ್ಬ ಅಪೊಸ್ತಲ ಸತ್ತದ್ದರ ಬಗ್ಗೆ ಮತ್ತು ಇನ್ನೊಬ್ಬ ಅಪೊಸ್ತಲ ಜೈಲಿನಿಂದ ತಪ್ಪಿಸ್ಕೊಂಡಿದ್ದರ ಬಗ್ಗೆ ಮಾತ್ರ ಅಲ್ಲ, ಮುಖ್ಯವಾಗಿ ಯೆಹೋವನ ಬಗ್ಗೆ ತಿಳಿಸುತ್ತೆ. ಕ್ರೈಸ್ತ ಸಭೆಯನ್ನ ಅಳಿಸಿಹಾಕೋಕೆ ಮತ್ತು ಸಾರೋ ಕೆಲಸನ ನಿಲ್ಲಿಸೋಕೆ ಸೈತಾನ ಮಾಡಿದ ಎಲ್ಲಾ ಪ್ರಯತ್ನಗಳನ್ನ ಯೆಹೋವ ಹೇಗೆ ಮಣ್ಣುಪಾಲು ಮಾಡಿದನು ಅಂತ ತೋರಿಸುತ್ತೆ. ಆಗ ಆದ ತರನೇ ಮುಂದೆ ಸೈತಾನ ಮಾಡೋ ಎಲ್ಲ ಸಂಚುಗಳಿಗೂ ಅದೇ ಗತಿಯಾಗುತ್ತೆ. (ಯೆಶಾ. 54:17) ಆದ್ರೆ ಯೆಹೋವ ಮತ್ತು ಯೇಸು ಕ್ರಿಸ್ತನ ಪಕ್ಷ ವಹಿಸೋರು ಮಾಡೋ ಕೆಲಸಕ್ಕೆ ಯಾವಾಗ್ಲೂ ಜಯ ಸಿಕ್ಕೇ ಸಿಗುತ್ತೆ. ಇವತ್ತು “ಯೆಹೋವನ ಸಂದೇಶ” ಹಬ್ಬಿಸೋ ಎಂಥ ದೊಡ್ಡ ಸುಯೋಗ ನಮಗಿದೆ! ಇದನ್ನ ಕೇಳಿದಾಗ ನಮ್ಗೆ ಎಷ್ಟು ಪ್ರೋತ್ಸಾಹ ಆಗುತ್ತಲ್ವಾ?
a “1ನೇ ಹೆರೋದ ಅಗ್ರಿಪ್ಪ ರಾಜ” ಅನ್ನೋ ಚೌಕ ನೋಡಿ.
b ವೈದ್ಯನಾಗಿರೋ ಒಬ್ಬ ಲೇಖಕ ಇದ್ರ ಬಗ್ಗೆ ಹೇಳಿರೋದು ಏನಂದ್ರೆ, ಜೋಸೀಫಸ್ ಮತ್ತು ಲೂಕ ಹೇಳಿರೋ ಲಕ್ಷಣಗಳನ್ನ ನೋಡಿದ್ರೆ ಅದು ಜಂತುಹುಳಗಳು ಕರುಳಲ್ಲಿ ಅಡಚಣೆ ತಂದು ಸಾವನ್ನ ತರೋ ಮಾರಕ ಕಾಯಿಲೆ ಆಗಿರಬಹುದು. ಕೆಲವೊಮ್ಮೆ ಇಂಥ ಹುಳಗಳು ರೋಗಿ ವಾಂತಿ ಮಾಡುವಾಗ ಹೊರಗೆ ಬರುತ್ತೆ ಅಥವಾ ರೋಗಿ ಸಾಯುವಾಗ ದೇಹದಿಂದ ಆಚೆ ಬರುತ್ತೆ. ಇದ್ರ ಬಗ್ಗೆ ಇನ್ನೊಂದು ಕೃತಿ ಹೀಗೆ ಹೇಳುತ್ತೆ: “ಲೂಕ ವೈದ್ಯನಾಗಿದ್ದ ಕಾರಣ ಅವನು ಕೊಟ್ಟಿರೋ ಮಾಹಿತಿ, [ಹೆರೋದನ] ಸಾವು ಎಷ್ಟು ಭಯಂಕರವಾಗಿತ್ತು ಅಂತ ತೋರಿಸ್ಕೊಡುತ್ತೆ.”