ಅಧ್ಯಾಯ 15
‘ಸಭೆಗಳನ್ನ ಬಲಪಡಿಸಿದ್ರು’
ಸಂಚರಣ ಮೇಲ್ವಿಚಾರಕರು ಸಭೆಗಳಲ್ಲಿರೋ ಸಹೋದರರಿಗೆ ಹೆಚ್ಚು ನಂಬಿಕೆ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾರೆ
ಆಧಾರ: ಅಪೊಸ್ತಲರ ಕಾರ್ಯ 15:36–16:5
1-3. (ಎ) ಪೌಲನ ಹೊಸ ಜೊತೆಗಾರ ಯಾರು? (ಬಿ) ಅವನು ಯಾವ ತರ ವ್ಯಕ್ತಿ ಆಗಿದ್ದ? (ಸಿ) ಈ ಅಧ್ಯಾಯದಲ್ಲಿ ಏನು ಕಲೀತೀವಿ?
ಅಪೊಸ್ತಲ ಪೌಲ ಹಳ್ಳ-ದಿಣ್ಣೆಗಳಿದ್ದ ಪ್ರದೇಶಗಳಲ್ಲಿ ನಡೀತಾ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗ್ತಿದ್ದ. ಜೊತೆಗೆ ತಿಮೊತಿ ಅನ್ನೋ ಯುವಕನೂ ಇದ್ದ. ಆಗ ಪೌಲ ತಿಮೊತಿಯ ಭವಿಷ್ಯದ ಬಗ್ಗೆ ಯೋಚಿಸ್ತಿದ್ದ. ಯೌವನ ಮತ್ತು ಶಕ್ತಿಯಿಂದ ತುಂಬಿತುಳುಕ್ತಿದ್ದ ತಿಮೊತಿಯ ವಯಸ್ಸು 20ರ ಆಸುಪಾಸು ಇದ್ದಿರಬಹುದು. ಈ ಹೊಸ ಪ್ರಯಾಣದಲ್ಲಿ ತಿಮೊತಿ ಒಂದೊಂದು ಹೆಜ್ಜೆ ಇಡ್ತಾ ಹೋದ ಹಾಗೆ ತನ್ನ ಮನೆಯಿಂದ ದೂರ ಆಗ್ತಾ ಇದ್ದ. ಆ ದಿನ ಮುಗಿಯೋಷ್ಟರಲ್ಲಿ ಲುಸ್ತ್ರ ಮತ್ತು ಇಕೋನ್ಯದಿಂದ ಅವರಿಬ್ರೂ ತುಂಬ ದೂರ ಬಂದಿದ್ರು. ಮುಂದೆ ಏನಾಗುತ್ತೆ ಅಂತ ಪೌಲನಿಗೆ ಸ್ವಲ್ಪ ಗೊತ್ತಿತ್ತು, ಯಾಕಂದ್ರೆ ಇದು ಅವನ ಎರಡನೇ ಮಿಷನರಿ ಪ್ರಯಾಣ. ಇಂಥಾ ಪ್ರಯಾಣದಲ್ಲಿ ತುಂಬ ಅಪಾಯಗಳು, ಸಮಸ್ಯೆಗಳು ಬರುತ್ತೆ ಅಂತ ಅವನಿಗೆ ಗೊತ್ತಿತ್ತು. ಆದ್ರೆ ಅವನ ಪಕ್ಕದಲ್ಲಿ ನಡೀತಿದ್ದ ಯುವಕನಿಗೆ ಇದೆಲ್ಲ ತಾಳ್ಕೊಳ್ಳೋಕೆ ಆಗುತ್ತಾ?
2 ಪೌಲನಿಗೆ ತಿಮೊತಿ ಮೇಲೆ ತುಂಬ ಭರವಸೆ ಇತ್ತು. ದೀನತೆಯಿದ್ದ ತಿಮೊತಿಗೇ ತನ್ನ ಬಗ್ಗೆ ಅಷ್ಟು ಭರವಸೆ ಇರಲಿಲ್ಲ. ಇತ್ತೀಚೆಗೆ ಆದ ಘಟನೆಗಳಿಂದಾಗಿ ತನ್ನ ಪ್ರಯಾಣಕ್ಕೆ ಸರಿಯಾದ ಜೊತೆಗಾರ ಬೇಕು ಅಂತ ಪೌಲನಿಗೆ ಗೊತ್ತಿತ್ತು. ಯಾಕಂದ್ರೆ ಮುಂದೆ ಅವರು ಸಭೆಗಳನ್ನ ಭೇಟಿಮಾಡಿ ಅವುಗಳನ್ನ ಬಲಪಡಿಸಬೇಕಿತ್ತು. ಇದನ್ನ ಮಾಡೋಕೆ ಸಂಚರಣ ಸೇವಕರಾದ ಇವ್ರಿಗೆ ಛಲ ಇರಬೇಕಿತ್ತು ಮತ್ತು ಇಬ್ರೂ ಒಂದೇ ತರ ಯೋಚ್ನೆ ಮಾಡಬೇಕಿತ್ತು ಅನ್ನೋದು ಪೌಲನಿಗೆ ಗೊತ್ತಿತ್ತು. ಅವನು ಯಾಕೆ ಈ ವಿಷ್ಯದ ಬಗ್ಗೆ ಯೋಚ್ನೆ ಮಾಡ್ತಿದ್ದ? ಯಾಕಂದ್ರೆ ಅವನ ಮತ್ತೆ ಬಾರ್ನಬನ ಮಧ್ಯೆ ಒಂದು ಭಿನ್ನಾಭಿಪ್ರಾಯ ಬಂದು ಇಬ್ರೂ ಬೇರೆ ಬೇರೆ ದಾರಿ ಹಿಡೀಬೇಕಾಯ್ತು.
3 ಈ ಅಧ್ಯಾಯದಲ್ಲಿ ನಾವು ಭಿನ್ನಾಭಿಪ್ರಾಯಗಳನ್ನ ಹೇಗೆ ಬಗೆಹರಿಸಬಹುದು ಅಂತ ಕಲೀತೀವಿ. ಪೌಲ ತಿಮೊತಿಯನ್ನ ತನ್ನ ಜೊತೆಗಾರನಾಗಿ ಆಯ್ಕೆಮಾಡಿದ್ದು ಯಾಕೆ ಅಂತಾನೂ ಕಲೀತೀವಿ. ಅಷ್ಟೇ ಅಲ್ಲ, ಇವತ್ತು ಸಂಚರಣ ಮೇಲ್ವಿಚಾರಕರ ಮುಖ್ಯ ಪಾತ್ರದ ಬಗ್ಗೆ ಜಾಸ್ತಿ ವಿಷ್ಯನೂ ತಿಳ್ಕೊಳ್ತೀವಿ.
“ಮತ್ತೆ ಹೋಗಿ ಅಲ್ಲಿನ ಸಹೋದರರನ್ನ ಭೇಟಿಮಾಡೋಣ” (ಅ. ಕಾ. 15:36)
4. ಎರಡನೇ ಮಿಷನರಿ ಪ್ರಯಾಣದಲ್ಲಿ ಪೌಲ ಏನು ಮಾಡಬೇಕಂತಿದ್ದ?
4 ಹಿಂದಿನ ಅಧ್ಯಾಯದಲ್ಲಿ ನಾಲ್ಕು ಮಂದಿ ಸಹೋದರರ ಒಂದು ತಂಡ, ಅಂದ್ರೆ ಪೌಲ, ಬಾರ್ನಬ, ಯೂದ ಮತ್ತು ಸೀಲ ಸುನ್ನತಿ ಬಗ್ಗೆ ಆಡಳಿತ ಮಂಡಲಿಯ ತೀರ್ಮಾನವನ್ನ ಬಳಸಿ ಅಂತಿಯೋಕ್ಯದ ಸಭೆಯನ್ನ ಹೇಗೆ ಬಲಪಡಿಸಿದ್ರು ಅಂತ ನೋಡಿದ್ವಿ. ಪೌಲ ಮುಂದೇನು ಮಾಡಿದ? ಎರಡನೇ ಮಿಷನರಿ ಪ್ರಯಾಣದ ಒಂದು ಹೊಸ ಯೋಜನೆ ಮಾಡ್ದ. ಅದ್ರ ಬಗ್ಗೆ ಬಾರ್ನಬನಿಗೆ ಹೇಳ್ತಾ, “ನಾವು ಯೆಹೋವನ ಸಂದೇಶವನ್ನ ಸಾರಿದ ಎಲ್ಲ ಊರುಗಳಿಗೆ ಮತ್ತೆ ಹೋಗಿ ಅಲ್ಲಿನ ಸಹೋದರರನ್ನ ಭೇಟಿಮಾಡೋಣ. ಅವ್ರ ಪರಿಸ್ಥಿತಿ ಹೇಗಿದೆ ಅಂತ ನೋಡೋಣ” ಅಂದ. (ಅ. ಕಾ. 15:36) ಇಲ್ಲಿ ಪೌಲ ಬಾರ್ನಬನಿಗೆ, ಹೊಸದಾಗಿ ಕ್ರೈಸ್ತರಾದ ಇವ್ರನ್ನ ಸುಮ್ಮನೆ ಭೇಟಿ ಮಾಡ್ಕೊಂಡು ಬರೋಣ ಅಂತ ಸಲಹೆ ಕೊಡ್ತಿರಲಿಲ್ಲ. ಅವನು ಹೋಗೋಕೆ ಎರಡು ಕಾರಣ ಇತ್ತು ಅಂತ ಅಪೊಸ್ತಲರ ಕಾರ್ಯ ಪುಸ್ತಕ ಹೇಳುತ್ತೆ. ಮೊದಲನೇ ಕಾರಣ, ಆಡಳಿತ ಮಂಡಲಿ ಸಭೆಗಳಿಗೆ ಹೇಳಬೇಕು ಅಂತಿದ್ದ ತೀರ್ಮಾನಗಳ ಬಗ್ಗೆ ಹೇಳೋಕೆ. (ಅ. ಕಾ. 16:4) ಎರಡನೇ ಕಾರಣ, ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಸಭೆಗಳಲ್ಲಿರೋ ಸಹೋದರ ಸಹೋದರಿಯರ ನಂಬಿಕೆಯನ್ನ ಬಲಪಡಿಸೋಕೆ. (ರೋಮ. 1:11, 12) ಅಪೊಸ್ತಲರು ಇಟ್ಟ ಈ ಮಾದರಿಯನ್ನ ಆಧುನಿಕ ದಿನದಲ್ಲಿ ಯೆಹೋವನ ಸಾಕ್ಷಿಗಳ ಸಂಘಟನೆ ಹೇಗೆ ಅನುಸರಿಸ್ತಾ ಇದೆ?
5. ಇವತ್ತು ಆಡಳಿತ ಮಂಡಲಿ ಸಭೆಗಳಿಗೆ ಹೇಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಕೊಡುತ್ತೆ?
5 ಇವತ್ತು ಯೇಸು ತನ್ನ ಸಭೆಯನ್ನ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಮೂಲಕ ನಿರ್ದೇಶಿಸ್ತಿದ್ದಾನೆ. ಈ ನಂಬಿಗಸ್ತ ಅಭಿಷಿಕ್ತ ಸಹೋದರರು ಲೋಕದ ಎಲ್ಲಾ ಕಡೆ ಇರೋ ಸಭೆಗಳಿಗೆ ಪತ್ರಗಳು, ಮುದ್ರಿತ ಮತ್ತು ಆನ್ಲೈನ್ ಪ್ರಕಾಶನಗಳು, ಕೂಟಗಳು ಮತ್ತು ಬೇರೆ ಸಾಧನಗಳನ್ನ ಬಳಸಿ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕೊಡ್ತಿದ್ದಾರೆ. ಆಡಳಿತ ಮಂಡಲಿ ಒಂದೊಂದು ಸಭೆ ಜೊತೆನೂ ಆಪ್ತ ಸಂಪರ್ಕ ಇಡೋಕೆ ಪ್ರಯತ್ನಿಸ್ತಿದೆ. ಇದಕ್ಕಾಗಿ ಅದು ಸಂಚರಣ ಮೇಲ್ವಿಚಾರಕರನ್ನ ಬಳಸುತ್ತೆ. ಇಡೀ ಲೋಕದಲ್ಲಿ ಅದು ಸಾವಿರಾರು ಅರ್ಹ ಹಿರಿಯರನ್ನ ಸಂಚರಣ ಮೇಲ್ವಿಚಾರಕರಾಗಿ ನೇರವಾಗಿ ನೇಮಕ ಮಾಡಿದೆ.
6, 7. ಸಂಚರಣ ಮೇಲ್ವಿಚಾರಕರಿಗೆ ಯಾವೆಲ್ಲಾ ಜವಾಬ್ದಾರಿ ಇರುತ್ತೆ?
6 ಇವತ್ತು ಸಂಚರಣ ಮೇಲ್ವಿಚಾರಕರು ಸಭೆಗಳನ್ನ ಭೇಟಿ ಮಾಡೋವಾಗ ಪ್ರತಿಯೊಬ್ರಿಗೂ ಗಮನ ಕೊಟ್ಟು, ಬೈಬಲಿಂದ ಪ್ರೋತ್ಸಾಹ ಕೊಡೋಕೆ ಪ್ರಯತ್ನಿಸ್ತಾರೆ. ಇದನ್ನ ಅವರು ಹೇಗೆ ಮಾಡ್ತಾರೆ? ಅದಕ್ಕಾಗಿ ಅವರು ಪೌಲನಂಥ ಸಂಚರಣ ಮೇಲ್ವಿಚಾರಕರ ಮಾದರಿಯನ್ನ ಅನುಕರಿಸ್ತಾರೆ. ಅವನು ತನ್ನ ಜೊತೆ ಮೇಲ್ವಿಚಾರಕನಿಗೆ ಈ ಬುದ್ಧಿಮಾತು ಹೇಳಿದ: “ದೇವರ ಸಂದೇಶವನ್ನ ಸಾರು. ಪರಿಸ್ಥಿತಿ ಚೆನ್ನಾಗಿ ಇದ್ದಾಗ್ಲೂ ಕಷ್ಟ ಬಂದಾಗ್ಲೂ ಹುರುಪಿಂದ ತಡಮಾಡ್ದೆ ಸಾರು. ತಾಳ್ಮೆಯಿಂದ, ಜಾಣ್ಮೆಯಿಂದ ಕಲಿಸ್ತಾ ತಪ್ಪು ಮಾಡುವವ್ರನ್ನ ತಿದ್ದು, ಎಚ್ಚರಿಕೆ ಕೊಟ್ಟು ಬುದ್ಧಿಹೇಳು . . . ಸಿಹಿಸುದ್ದಿ ಸಾರುತ್ತಾ ಇರು.”—2 ತಿಮೊ. 4:2, 5.
7 ಈ ವಚನದಲ್ಲಿ ಹೇಳೋ ತರ ಸಂಚರಣ ಮೇಲ್ವಿಚಾರಕರು (ಮದ್ವೆ ಆಗಿದ್ರೆ ಅವ್ರ ಹೆಂಡ್ತಿ ಕೂಡ) ಸ್ಥಳೀಯ ಪ್ರಚಾರಕರ ಜೊತೆ ಬೇರೆ ಬೇರೆ ವಿಧಾನಗಳಲ್ಲಿ ಸಿಹಿಸುದ್ದಿ ಸಾರ್ತಾರೆ. ಈ ಮೇಲ್ವಿಚಾರಕರು ಹುರುಪಿಂದ ಸೇವೆ ಮಾಡ್ತಾರೆ, ಚೆನ್ನಾಗಿ ಬೋಧಿಸ್ತಾರೆ. ಅವರಲ್ಲಿರೋ ಈ ಗುಣಗಳನ್ನ ನೋಡಿ ಬೇರೆ ಸಹೋದರರು ಅವ್ರಿಂದ ಕಲಿತಾರೆ. (ರೋಮ. 12:11; 2 ತಿಮೊ. 2:15) ಸಂಚರಣ ಕೆಲಸದಲ್ಲಿರೋರು ಪ್ರೀತಿ ತೋರಿಸೋದ್ರಲ್ಲಿ ಒಳ್ಳೇ ಮಾದರಿಗಳಾಗಿದ್ದಾರೆ. ಅವರು ಸಂತೋಷದಿಂದ ಬೇರೆಯವರ ಸೇವೆ ಮಾಡ್ತಾರೆ. ಹವಾಮಾನ ಹೇಗೇ ಇರಲಿ, ಟೆರಿಟೊರಿಯಲ್ಲಿ ಎಷ್ಟೇ ಅಪಾಯ ಇರಲಿ ಅವರು ಸೇವೆಗೆ ಹೋಗ್ತಾರೆ. (ಫಿಲಿ. 2:3, 4) ಬೈಬಲ್ ಆಧಾರಿತ ಭಾಷಣಗಳನ್ನ ಕೊಟ್ಟು ಸಂಚರಣ ಮೇಲ್ವಿಚಾರಕರು ಪ್ರತಿಯೊಂದು ಸಭೆಗೆ ಬೋಧಿಸ್ತಾರೆ. ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸಿ, ತಿದ್ದಿ ಬುದ್ಧಿಹೇಳ್ತಾರೆ. ಇವ್ರ ನಡತೆ ಗಮನಿಸಿ ಇವ್ರ ತರ ಇರೋಕೆ ಪ್ರಯತ್ನಿಸೋದಾದ್ರೆ ಸಭೆಯಲ್ಲಿರೋ ಎಲ್ರಿಗೂ ಪ್ರಯೋಜನ ಆಗುತ್ತೆ.—ಇಬ್ರಿ. 13:7.
“ದೊಡ್ಡ ಜಗಳ” (ಅ. ಕಾ. 15:37-41)
8. “ಸಹೋದರರನ್ನ ಭೇಟಿಮಾಡೋಣ” ಅಂತ ಪೌಲ ಕೇಳಿದಾಗ ಬಾರ್ನಬ ಏನು ಮಾಡ್ದ?
8 “ಸಹೋದರರನ್ನ ಭೇಟಿಮಾಡೋಣ” ಅಂತ ಪೌಲ ಕೇಳಿದಾಗ ಬಾರ್ನಬ ಒಪ್ಕೊಂಡ. (ಅ. ಕಾ. 15:36) ಅವರಿಬ್ರೂ ಈಗಾಗ್ಲೇ ಸಂಚರಣ ಸೇವೆಯಲ್ಲಿ ಚೆನ್ನಾಗಿ ಕೆಲಸಮಾಡಿದ್ರು. ಈಗ ಭೇಟಿ ಮಾಡಬೇಕು ಅಂತಿದ್ದ ಪ್ರದೇಶಗಳ ಬಗ್ಗೆ ಮತ್ತು ಜನರ ಬಗ್ಗೆ ಅವ್ರಿಗೆ ಚೆನ್ನಾಗಿ ಗೊತ್ತಿತ್ತು. (ಅ. ಕಾ. 13:2–14:28) ಹಾಗಾಗಿ ಈ ನೇಮಕವನ್ನ ಒಟ್ಟಿಗೆ ಜೊತೆಯಾಗಿ ಮಾಡೋದೇ ಒಳ್ಳೇದು ಅಂತ ಅವ್ರಿಗೆ ಅನಿಸ್ತು. ಆದ್ರೆ ಒಂದು ಸಮಸ್ಯೆ ಬಂತು. ಅಪೊಸ್ತಲರ ಕಾರ್ಯ 15:37 ಹೇಳೋದು: “ಮಾರ್ಕ ಅನ್ನೋ ಹೆಸ್ರಿದ್ದ ಯೋಹಾನನನ್ನ ತಮ್ಮ ಜೊತೆ ಕರ್ಕೊಂಡು ಹೋಗಬೇಕು ಅಂತ ಬಾರ್ನಬ ಪಟ್ಟುಹಿಡಿದ.” ಬಾರ್ನಬ ತನ್ನ ಸಂಬಂಧಿಯಾಗಿದ್ದ ಮಾರ್ಕನನ್ನ ಜೊತೆ ಕರ್ಕೊಂಡು ಹೋಗೋಣ ಅಂತ ಸಲಹೆ ಕೊಡಲಿಲ್ಲ. ಬದಲಿಗೆ ಅವನನ್ನ ಈ ಮಿಷನರಿ ಪ್ರಯಾಣದಲ್ಲಿ ಕರ್ಕೊಂಡು ಹೋಗಲೇ ಬೇಕು ಅಂತ “ಪಟ್ಟುಹಿಡಿದ” ಅಂದ್ರೆ ನಿರ್ಧಾರ ಮಾಡಿದ್ದ.
9. ಪೌಲ ಬಾರ್ನಬನ ಮಾತಿಗೆ ಯಾಕೆ ಒಪ್ಪಲಿಲ್ಲ?
9 ಪೌಲ ಇದಕ್ಕೆ ಒಪ್ಪಲಿಲ್ಲ. ಯಾಕೆ? ಇದ್ರ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ: “[ಮಾರ್ಕನನ್ನ] ತಮ್ಮ ಜೊತೆ ಕರ್ಕೊಂಡು ಹೋಗೋಕೆ ಪೌಲನಿಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಪಂಫುಲ್ಯದಲ್ಲಿದ್ದಾಗ ಮಾರ್ಕ ಅವ್ರ ಜೊತೆ ಸೇವೆಮಾಡದೆ ಅವ್ರನ್ನ ಬಿಟ್ಟು ಹೋಗಿದ್ದ.” (ಅ. ಕಾ. 15:38) ಪೌಲ ಮತ್ತು ಬಾರ್ನಬರ ಮೊದಲನೇ ಮಿಷನರಿ ಪ್ರಯಾಣದಲ್ಲಿ ಮಾರ್ಕ ಅವ್ರ ಜೊತೆ ಹೋಗಿದ್ರೂ ಕೊನೆ ವರೆಗೂ ಇರಲಿಲ್ಲ. (ಅ. ಕಾ. 12:25; 13:13) ಆ ಪ್ರಯಾಣ ಆರಂಭವಾಗಿ ಸ್ವಲ್ಪದರಲ್ಲೇ ಅಂದ್ರೆ ಅವರು ಪಂಫುಲ್ಯದಲ್ಲಿ ಇದ್ದಾಗಲೇ ಮಾರ್ಕ ತನ್ನ ನೇಮಕ ಬಿಟ್ಟು ಯೆರೂಸಲೇಮಲ್ಲಿದ್ದ ತನ್ನ ಮನೆಗೆ ವಾಪಸ್ ಹೋಗಿದ್ದ. ಅವನು ಯಾಕೆ ಹೋದ ಅಂತ ಬೈಬಲ್ ಹೇಳೋದಿಲ್ಲ. ಆದ್ರೆ ಅವನು ಹಾಗೆ ಮಾಡಿದ್ದು ಬೇಜವಾಬ್ದಾರಿತನ ಅಂತ ಅಪೊಸ್ತಲ ಪೌಲನಿಗೆ ಅನಿಸಿರಬೇಕು. ಅದಕ್ಕೆ ಮಾರ್ಕನನ್ನ ನಂಬಕಾಗಲ್ಲ, ಯಾವ ಕ್ಷಣದಲ್ಲಿ ಬೇಕಾದ್ರೂ ಕೈಕೊಡ್ತಾನೆ ಅಂತ ಪೌಲ ನೆನಸಿರಬಹುದು.
10. (ಎ) ಪೌಲ ಮತ್ತು ಬಾರ್ನಬರ ಮಧ್ಯೆ ಬಂದ ಭಿನ್ನಾಭಿಪ್ರಾಯ ಯಾವುದಕ್ಕೆ ತಿರುಗ್ತು? (ಬಿ) ಇದ್ರಿಂದ ಏನಾಯ್ತು?
10 ಹೀಗಿದ್ರೂ ಮಾರ್ಕನನ್ನ ಜೊತೆಯಲ್ಲಿ ಕರ್ಕೊಂಡು ಹೋಗಲೇಬೇಕು ಅಂತ ಬಾರ್ನಬ ಹಠಹಿಡಿದ. ಅವನನ್ನ ಕರ್ಕೊಂಡು ಹೋಗಬಾರದು ಅಂತ ಪೌಲನೂ ಹಠಹಿಡಿದ. “ಈ ವಿಷ್ಯದಲ್ಲಿ ಪೌಲ ಮತ್ತು ಬಾರ್ನಬನ ನಡುವೆ ದೊಡ್ಡ ಜಗಳ ಆಗಿ ಅವ್ರಿಬ್ರೂ ಬೇರೆ ಆದ್ರು” ಅಂತ ಅಪೊಸ್ತಲರ ಕಾರ್ಯ 15:39 ಹೇಳುತ್ತೆ. ಬಾರ್ನಬ ಮಾರ್ಕನನ್ನ ಕರ್ಕೊಂಡು ತನ್ನ ಊರಾದ ಸೈಪ್ರಸ್ ದ್ವೀಪಕ್ಕೆ ಸಮುದ್ರಮಾರ್ಗವಾಗಿ ಹೋದ. ಪೌಲ ತಾನು ಮಾಡಿದ್ದ ಯೋಜನೆಗಳ ಪ್ರಕಾರನೇ ಮುಂದುವರಿದ. “ಪೌಲ ಸೀಲನನ್ನ ಆರಿಸ್ಕೊಂಡ. ಪೌಲನ ಮೇಲೆ ಯೆಹೋವನ ಅಪಾರ ಕೃಪೆ ಇರಲಿ ಅಂತ ಸಹೋದರರು ಪ್ರಾರ್ಥಿಸಿದ ಮೇಲೆ ಅವನು ತನ್ನ ಪ್ರಯಾಣ ಮುಂದುವರಿಸಿದ” ಅಂತ ಬೈಬಲ್ ಹೇಳುತ್ತೆ. (ಅ. ಕಾ. 15:40) ಇವರಿಬ್ರೂ “ಸಿರಿಯ ಮತ್ತು ಕಿಲಿಕ್ಯ ಪ್ರದೇಶಗಳಲ್ಲಿ ಪ್ರಯಾಣ ಮಾಡ್ತಾ ಅಲ್ಲಿದ್ದ ಸಭೆಗಳನ್ನ ಬಲಪಡಿಸ್ತಾ” ಹೋದ್ರು.—ಅ. ಕಾ. 15:41.
11. ಯಾರಾದ್ರೂ ನಮ್ಮನ್ನ ನೋಯಿಸಿದ್ರೆ ಮತ್ತು ನಮ್ಮ ಮಧ್ಯೆ ಇರೋ ಸಂಬಂಧ ಹಾಳಾಗದೇ ಇರೋಕೆ ಯಾವ ಗುಣಗಳು ಸಹಾಯ ಮಾಡುತ್ತೆ?
11 ಈ ಘಟನೆ ಓದಿದಾಗ ನಮ್ಮಲ್ಲಿರೋ ಅಪರಿಪೂರ್ಣತೆ ನೆನಪಾಗುತ್ತೆ ಅಲ್ವಾ? ಪೌಲ ಮತ್ತು ಬಾರ್ನಬ ಆಡಳಿತ ಮಂಡಲಿಯ ವಿಶೇಷ ಪ್ರತಿನಿಧಿಗಳಾಗಿದ್ರು. ಆಮೇಲೆ ಪೌಲ ಆ ಮಂಡಲಿಯ ಸದಸ್ಯನಾಗಿರಬಹುದು. ಇಷ್ಟೆಲ್ಲಾ ನೇಮಕ ಇದ್ರೂ ಪೌಲ ಬಾರ್ನಬ ಕೋಪದ ಕೈಗೆ ಬುದ್ಧಿ ಕೊಟ್ಟು ಜಗಳ ಮಾಡ್ಕೊಂಡ್ರು. ಹಾಗಂತ ಅವ್ರ ಮಧ್ಯೆ ಇದ್ದ ಸಮಸ್ಯೆನಾ ಹಾಗೇ ಬಿಟ್ಟುಬಿಟ್ರಾ? ಪೌಲ ಬಾರ್ನಬ ಅಪರಿಪೂರ್ಣರಾಗಿದ್ರು ನಿಜ, ಆದ್ರೆ ಅವರು ದೀನರಾಗಿದ್ರು, ಯೇಸು ಕ್ರಿಸ್ತನ ತರ ನಡ್ಕೊಂಡ್ರು. ಹಾಗಾಗಿ ಸ್ವಲ್ಪ ಸಮಯ ಆದಮೇಲೆ ಅವರು ಒಬ್ಬರನ್ನೊಬ್ರೂ ಕ್ಷಮಿಸಿದ್ರು, ಒಂದಾದ್ರು. (ಎಫೆ. 4:1-3) ಮುಂದೆ, ಪೌಲ ಮತ್ತು ಮಾರ್ಕ ಬೇರೆ ನೇಮಕಗಳಲ್ಲಿ ಜೊತೆಯಾಗಿ ಕೆಲಸಮಾಡಿದ್ರು.a—ಕೊಲೊ. 4:10.
12. ಪೌಲ ಮತ್ತು ಬಾರ್ನಬನ ತರ ಇವತ್ತು ಮೇಲ್ವಿಚಾರಕರು ಯಾವ ಗುಣಗಳನ್ನ ತೋರಿಸಬೇಕು?
12 ಈ ತರ ಜಗಳ ಮಾಡೋದು ಬಾರ್ನಬ ಮತ್ತು ಪೌಲನ ಸ್ವಭಾವ ಆಗಿರಲಿಲ್ಲ. ಯಾಕಂದ್ರೆ ಬಾರ್ನಬ ತುಂಬ ಪ್ರೀತಿ ಇರೋ, ಉದಾರ ವ್ಯಕ್ತಿ ಅಂತ ಎಲ್ರಿಗೂ ಗೊತ್ತಿತ್ತು. ಅವನಲ್ಲಿ ಈ ಗುಣಗಳು ಎಷ್ಟರ ಮಟ್ಟಿಗೆ ಇತ್ತಂದ್ರೆ ಅಪೊಸ್ತಲರು, ಯೋಸೇಫ ಅಂತ ಅವನ ಸ್ವಂತ ಹೆಸ್ರನ್ನ ಕರಿಯೋ ಬದಲು ಬಾರ್ನಬ ಅನ್ನೋ ಹೆಸ್ರಿಂದ ಕರೀತಿದ್ರು. ಅದ್ರ ಅರ್ಥ “ಸಾಂತ್ವನದ ಪುತ್ರ.” (ಅ. ಕಾ. 4:36, ಪಾದಟಿಪ್ಪಣಿ) ಪೌಲ ಕೂಡ ಕೋಮಲವಾಗಿ ನಡ್ಕೊತಿದ್ದ ಮತ್ತು ಸೌಮ್ಯ ಸ್ವಭಾವಕ್ಕೆ ಹೆಸ್ರುವಾಸಿಯಾಗಿದ್ದ. (1 ಥೆಸ. 2:7, 8) ಈಗಿರೋ ಎಲ್ಲ ಕ್ರೈಸ್ತ ಮೇಲ್ವಿಚಾರಕರು ಅಂದ್ರೆ ಸಂಚರಣ ಮೇಲ್ವಿಚಾರಕರು ಕೂಡ ಪೌಲ ಮತ್ತು ಬಾರ್ನಬನನ್ನ ಅನುಕರಿಸ್ತಾ ಯಾವಾಗ್ಲೂ ದೀನತೆ ತೋರಿಸಬೇಕು. ಜೊತೆ ಹಿರಿಯರನ್ನ, ಸಭೆಯನ್ನ ಕೋಮಲವಾಗಿ ನೋಡ್ಕೊಬೇಕು.—1 ಪೇತ್ರ 5:2, 3.
“ಒಳ್ಳೇ ಹೆಸ್ರು ಪಡ್ಕೊಂಡಿದ್ದ” (ಅ. ಕಾ. 16:1-3)
13, 14. (ಎ) ತಿಮೊತಿ ಯಾರು? (ಬಿ) ಅವನ ಮತ್ತು ಪೌಲನ ಭೇಟಿ ಹೇಗೆ ಆಯ್ತು? (ಸಿ) ತಿಮೊತಿಗೆ ಪೌಲ ಯಾಕೆ ವಿಶೇಷ ಗಮನಕೊಟ್ಟ? (ಡಿ) ತಿಮೊತಿಗೆ ಯಾವ ನೇಮಕ ಸಿಕ್ತು?
13 ಪೌಲ ತನ್ನ ಎರಡನೇ ಮಿಷನರಿ ಪ್ರಯಾಣದಲ್ಲಿ ಗಲಾತ್ಯ ಅನ್ನೋ ರೋಮನ್ ಪ್ರಾಂತಕ್ಕೆ ಹೋದ. ಅಲ್ಲಿ ಆಗಲೇ ಕೆಲವು ಸಭೆಗಳು ಇದ್ವು. “ಆಮೇಲೆ ಪೌಲ ದೆರ್ಬೆಗೆ ಬಂದ. ಅಲ್ಲಿಂದ ಲುಸ್ತ್ರಕ್ಕೆ ಹೋದ. ಅಲ್ಲಿ ತಿಮೊತಿ ಅನ್ನೋ ಒಬ್ಬ ಶಿಷ್ಯನಿದ್ದ. ಯೆಹೂದ್ಯಳಾಗಿದ್ದ ಅವನ ಅಮ್ಮ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದಳು. ಆದ್ರೆ ಅವನ ಅಪ್ಪ ಒಬ್ಬ ಗ್ರೀಕನಾಗಿದ್ದ” ಅಂತ ಬೈಬಲ್ ಹೇಳುತ್ತೆ.—ಅ. ಕಾ. 16:1.b
14 ಪೌಲ ಕ್ರಿ.ಶ. 47ರಲ್ಲಿ ಆ ಪ್ರದೇಶಕ್ಕೆ ಮೊದಲನೇ ಸಲ ಹೋದಾಗ ತಿಮೊತಿಯ ಕುಟುಂಬನ ಭೇಟಿ ಮಾಡಿದ್ದ. ಎರಡು-ಮೂರು ವರ್ಷಗಳಾದ ಮೇಲೆ ತನ್ನ ಎರಡನೇ ಭೇಟಿಯಲ್ಲಿ ಪೌಲ ಆ ಯುವ ತಿಮೊತಿಗೆ ವಿಶೇಷ ಗಮನಕೊಟ್ಟ. ಯಾಕೆ? ಯಾಕಂದ್ರೆ ತಿಮೊತಿ “ಸಹೋದರರ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿದ್ದ.” ಅವನಿಗೆ ಸ್ವಂತ ಊರಿನ ಸಹೋದರರ ಮಧ್ಯೆ ಅಷ್ಟೇ ಅಲ್ಲ, ಬೇರೆ ಸಭೆಗಳಲ್ಲೂ ಒಳ್ಳೇ ಹೆಸ್ರಿತ್ತು. ಲುಸ್ತ್ರದ ಸಹೋದರರು ಮತ್ತು ಅಲ್ಲಿಂದ ಸುಮಾರು 30 ಕಿ.ಮೀ. ದೂರದಲ್ಲಿದ್ದ ಇಕೋನ್ಯದ ಸಹೋದರರು ಕೂಡ ಅವನ ಬಗ್ಗೆ ಒಳ್ಳೊಳ್ಳೇ ಮಾತುಗಳನ್ನ ಆಡ್ತಿದ್ರು ಅಂತ ಬೈಬಲ್ ಹೇಳುತ್ತೆ. (ಅ. ಕಾ. 16:2) ಪವಿತ್ರಶಕ್ತಿಯ ಮಾರ್ಗದರ್ಶನಕ್ಕನುಸಾರ ಹಿರಿಯರು ಯುವ ತಿಮೊತಿಗೆ ಒಂದು ದೊಡ್ಡ ಜವಾಬ್ದಾರಿ ಕೊಟ್ರು. ಅದೇನು? ಸಂಚರಣ ಸೇವಕನಾಗಿ ಪೌಲ ಮತ್ತು ಸೀಲರಿಗೆ ಸಹಾಯ ಮಾಡೋದೇ ಆ ಜವಾಬ್ದಾರಿ ಆಗಿತ್ತು.—ಅ. ಕಾ. 16:3.
15, 16. ತಿಮೊತಿ ಒಳ್ಳೇ ಹೆಸ್ರನ್ನ ಸಂಪಾದಿಸಿದ್ದು ಹೇಗೆ?
15 ತಿಮೊತಿ ಆ ಚಿಕ್ಕ ವಯಸ್ಸಲ್ಲೇ ಇಷ್ಟು ಒಳ್ಳೇ ಹೆಸ್ರು ಸಂಪಾದಿಸಿದ್ದು ಹೇಗೆ? ಇದಕ್ಕೆ ಅವನ ಬುದ್ಧಿವಂತಿಕೆ ಕಾರಣನಾ? ಅವನು ನೋಡೋಕೆ ಚೆನ್ನಾಗಿದ್ದ ಅಂತನಾ? ಅಥವಾ ಅವನ ಪ್ರತಿಭೆ ಸಾಮರ್ಥ್ಯನಾ? ಸಾಮಾನ್ಯವಾಗಿ ಮನುಷ್ಯರು ಇದನ್ನೆಲ್ಲ ನೋಡಿ ಒಬ್ಬರನ್ನ ಮೆಚ್ಕೊತಾರೆ. ಒಂದು ಸಲ ಪ್ರವಾದಿ ಸಮುವೇಲ ಕೂಡ ಹೊರಗಿನ ತೋರಿಕೆಗೆ ಮರುಳಾದ. ಆಗ ದೇವರು ಅವನಿಗೆ, “ಮನುಷ್ಯರು ನೋಡೋ ತರ ದೇವರು ನೋಡಲ್ಲ. ಮನುಷ್ಯರು ಕಣ್ಣಿಗೆ ಕಾಣಿಸೋದನ್ನ ನೋಡ್ತಾರೆ. ಆದ್ರೆ ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ” ಅಂತ ಹೇಳಿದನು. (1 ಸಮು. 16:7) ಆದ್ರೆ ತಿಮೊತಿಗೆ ಒಳ್ಳೇ ಹೆಸರಿರೋಕೆ ಅವನಲ್ಲಿದ್ದ ಪ್ರತಿಭೆ ಸಾಮರ್ಥ್ಯಗಳು ಕಾರಣ ಅಲ್ಲ, ಬದಲಿಗೆ ಅವನಲ್ಲಿದ್ದ ಒಳ್ಳೇ ಗುಣಗಳೇ.
16 ಕೆಲವು ವರ್ಷಗಳಾದ ಮೇಲೆ ಅಪೊಸ್ತಲ ಪೌಲ ತಿಮೊತಿಯಲ್ಲಿದ್ದ ಒಳ್ಳೇ ಗುಣಗಳ ಬಗ್ಗೆ ಹೇಳಿದ. ಅವನ ಒಳ್ಳೇ ನಡತೆ, ಪ್ರೀತಿ, ಸಭೆಯಲ್ಲಿ ಕೊಟ್ಟ ನೇಮಕ ಮಾಡೋದ್ರಲ್ಲಿ ಅವನಿಗಿದ್ದ ಶ್ರದ್ಧೆ ಬಗ್ಗೆ ಪೌಲ ವರ್ಣಿಸಿದ. (ಫಿಲಿ. 2:20-22) ಇಷ್ಟೇ ಅಲ್ಲ, ತಿಮೊತಿ ‘ಪ್ರಾಮಾಣಿಕ ನಂಬಿಕೆಗೂ’ ಹೆಸ್ರುವಾಸಿಯಾಗಿದ್ದ.—2 ತಿಮೊ. 1:5.
17. ಇವತ್ತು ಯುವ ಜನರು ತಿಮೊತಿಯನ್ನ ಹೇಗೆ ಅನುಕರಿಸಬಹುದು?
17 ತಿಮೊತಿ ತರನೇ ಇವತ್ತು ತುಂಬ ಯುವ ಜನರು ದೇವರು ಮೆಚ್ಚೋ ಗುಣಗಳನ್ನ ಬೆಳೆಸ್ಕೊಂಡಿದ್ದಾರೆ. ಹೀಗೆ ಅವರು, ಚಿಕ್ಕ ವಯಸ್ಸಿನಲ್ಲೇ ಯೆಹೋವನ ಹತ್ರ ಒಳ್ಳೇ ಹೆಸ್ರು ಮಾಡ್ಕೊಳ್ಳೋದ್ರ ಜೊತೆಗೆ ಆತನ ಜನರ ಮಧ್ಯೆನೂ ಒಳ್ಳೇ ಹೆಸ್ರು ಸಂಪಾದಿಸಿದ್ದಾರೆ. (ಜ್ಞಾನೋ. 22:1; 1 ತಿಮೊ. 4:15) ಅವರು ಪ್ರಾಮಾಣಿಕ ನಂಬಿಕೆ ತೋರಿಸ್ತಾರೆ, ಸಭೆಲಿ ಒಂತರ, ಆಚೆ ಒಂತರ ನಡ್ಕೊಳ್ಳೋದಿಲ್ಲ. (ಕೀರ್ತ. 26:4) ಈ ಎಲ್ಲಾ ಗುಣಗಳಿರೋದ್ರಿಂದ ತಿಮೊತಿ ತರನೇ ಇವತ್ತಿರೋ ಯುವ ಜನರು ಸಭೆಯ ಅಮೂಲ್ಯ ಮುತ್ತು ರತ್ನಗಳ ತರ ಇದ್ದಾರೆ. ಅವರು ಪ್ರಚಾರಕರಾದಾಗ, ಯೆಹೋವನಿಗೆ ತಮ್ಮನ್ನ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡಾಗ ತಮ್ಮ ಸುತ್ತ ಇರೋ ಯೆಹೋವನ ಆರಾಧಕರನ್ನ ಪ್ರೋತ್ಸಾಹಿಸ್ತಾರೆ!
“ನಂಬಿಕೆ ಹೆಚ್ಚಾಯ್ತು” (ಅ. ಕಾ. 16:4, 5)
18. (ಎ) ಪೌಲ ಮತ್ತು ತಿಮೊತಿ ಸಂಚರಣ ಸೇವಕರಾಗಿ ಯಾವ ವಿಶೇಷ ನೇಮಕಗಳನ್ನ ಪಡೆದಿದ್ರು? (ಬಿ) ಸಭೆಗಳಿಗೆ ಹೇಗೆ ಆಶೀರ್ವಾದ ಸಿಕ್ತು?
18 ಪೌಲ ಮತ್ತು ತಿಮೊತಿ ತುಂಬ ವರ್ಷ ಒಟ್ಟಿಗೆ ಕೆಲಸಮಾಡಿದ್ರು. ಸಂಚರಣ ಸೇವಕರಾಗಿ ಅವರು ಆಡಳಿತ ಮಂಡಲಿಯ ಪರವಾಗಿ ಬೇರೆ ಬೇರೆ ಕೆಲಸಗಳನ್ನ ಮಾಡಿದ್ರು. ಅದ್ರ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ: “ಅವರು ಒಂದು ಊರಿಂದ ಇನ್ನೊಂದು ಊರಿಗೆ ಹೋಗ್ತಾ ಇದ್ದಾಗ ಯೆರೂಸಲೇಮಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು ತಗೊಂಡಿದ್ದ ತೀರ್ಮಾನಗಳನ್ನ ಪಾಲಿಸೋಕೆ ಸಹೋದರರಿಗೆ ನೆನಪು ಹುಟ್ಟಿಸಿದ್ರು.” (ಅ. ಕಾ. 16:4) ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು ಕೊಟ್ಟ ನಿರ್ದೇಶನಗಳನ್ನ ಸಭೆಗಳು ಖಂಡಿತ ಪಾಲಿಸಿರಬೇಕು. ಅದಕ್ಕೆ “ಸಭೆಯಲ್ಲಿದ್ದ ಸಹೋದರರ ನಂಬಿಕೆ ಹೆಚ್ಚಾಯ್ತು. ಶಿಷ್ಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಾ ಹೋಯ್ತು.”—ಅ. ಕಾ. 16:5.
19, 20. ನಾವು ಯಾಕೆ ‘ಮುಂದೆ ನಿಂತು ನಡಿಸುವವ್ರ’ ಮಾತು ಕೇಳಬೇಕು?
19 ಅದೇ ತರ ಇವತ್ತು ಯೆಹೋವನ ಸಾಕ್ಷಿಗಳು ‘ಮುಂದೆ ನಿಂತು ತಮ್ಮನ್ನ ನಡಿಸುವವರು’ ಕೊಡೋ ನಿರ್ದೇಶನಗಳಿಗೆ ಅಧೀನತೆ ತೋರಿಸ್ತಾರೆ. ಇದ್ರಿಂದ ತುಂಬಾ ಆಶೀರ್ವಾದಗಳನ್ನ ಪಡೀತಿದ್ದಾರೆ. (ಇಬ್ರಿ. 13:17) ಈ ಲೋಕ ಬದಲಾಗ್ತಾ ಇರೋದ್ರಿಂದ “ನಂಬಿಗಸ್ತ, ವಿವೇಕಿ ಆದ ಆಳು” ಕೊಡೋ ಸಲಹೆ ಸೂಚನೆಗಳನ್ನ ಕ್ರೈಸ್ತರು ತಡಮಾಡದೆ ಪಾಲಿಸೋದು ತುಂಬಾ ಪ್ರಾಮುಖ್ಯ. (ಮತ್ತಾ. 24:45; 1 ಕೊರಿಂ. 7:29-31) ಹಾಗೆ ಪಾಲಿಸಿದ್ರೆ ನಮ್ಮ ನಂಬಿಕೆ ಬಲವಾಗಿರುತ್ತೆ ಮತ್ತು ಈ ಲೋಕದ ಕೆಟ್ಟತನದಿಂದ ದೂರ ಇರ್ತೀವಿ.—ಯಾಕೋ. 1:27.
20 ಪೌಲ, ಬಾರ್ನಬ, ಮಾರ್ಕ ಮತ್ತು ಬೇರೆ ಅಭಿಷಿಕ್ತ ಹಿರಿಯರ ತರಾನೇ ಇವತ್ತಿರೋ ಹಿರಿಯರು, ಆಡಳಿತ ಮಂಡಲಿಯ ಸದಸ್ಯರು ಕೂಡ ಅಪರಿಪೂರ್ಣರು ನಿಜ. (ರೋಮ. 5:12; ಯಾಕೋ. 3:2) ಆದ್ರೂ ನಾವು ಆಡಳಿತ ಮಂಡಲಿಯನ್ನ ಪೂರ್ತಿ ನಂಬಬಹುದು. ಯಾಕಂದ್ರೆ ಅವರು ಎಲ್ಲಾ ವಿಷ್ಯದಲ್ಲೂ ದೇವರ ವಾಕ್ಯ ಏನು ಹೇಳುತ್ತೋ ಅದನ್ನೇ ಪಾಲಿಸ್ತಾರೆ. ಅಷ್ಟೇ ಅಲ್ಲ, ಅಪೊಸ್ತಲರು ಇಟ್ಟಿರೋ ಮಾದರಿಯನ್ನೇ ಪಾಲಿಸ್ತಾರೆ. (2 ತಿಮೊ. 1:13, 14) ಅದಕ್ಕೆ, ಸಭೆಯಲ್ಲಿರೋ ಸಹೋದರರ ನಂಬಿಕೆ ಹೆಚ್ಚಾಗ್ತಾ ಹೋಗ್ತಿದೆ.
a “ಮಾರ್ಕನಿಗೆ ಸಿಕ್ಕಿದ ವಿಶೇಷ ನೇಮಕಗಳು” ಅನ್ನೋ ಚೌಕ ನೋಡಿ.
b “ತಿಮೊತಿ ‘ಸಿಹಿಸುದ್ದಿ ಸಾರೋಕೆ ಕಷ್ಟಪಟ್ಟು ಕೆಲಸ ಮಾಡಿದ’” ಅನ್ನೋ ಚೌಕ ನೋಡಿ.