ಅಜ್ಞಾತನಾದ ದೇವರಿಗೆ ಒಂದು ಬಲಿಪೀಠ
ಸುಮಾರು ಸಾ.ಶ. 50ರಲ್ಲಿ ಅಪೊಸ್ತಲ ಪೌಲನು ಗ್ರೀಸಿನ ಅಥೇನೆ ಪಟ್ಟಣಕ್ಕೆ ಭೇಟಿಕೊಟ್ಟನು. ಅಲ್ಲಿ ಅವನು ಅಜ್ಞಾತ ದೇವತೆಗೆ ಮೀಸಲಾಗಿರಿಸಿದ್ದ ಒಂದು ಬಲಿಪೀಠವನ್ನು ನೋಡಿ, ಬಳಿಕ ಯೆಹೋವನ ಪರವಾಗಿ ಒಂದು ಉತ್ತಮ ಸಾಕ್ಷಿಯನ್ನು ನೀಡುತ್ತಿದ್ದಾಗ ಅದರ ಬಗ್ಗೆ ತಿಳಿಸಿದನು.
ಮಾರ್ಸ್ ಹಿಲ್ ಅಥವಾ ಅರಿಯೊಪಾಗದಲ್ಲಿ, ತನ್ನ ಭಾಷಣದ ಆರಂಭದಲ್ಲಿ ಪೌಲನು ಹೇಳಿದ್ದು: “ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿ ಭಕ್ತಿವಂತರೆಂದು ನನಗೆ ತೋರುತ್ತದೆ. ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ತಿಳಿಯದ ದೇವರಿಗೆ ಎಂದು ಬರೆದಿತ್ತು. ಆದಕಾರಣ ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ.”—ಅ. ಕೃತ್ಯಗಳು 17:22-31.
ಅಥೇನೆಯ ಆ ಬಲಿಪೀಠವು ಇದುವರೆಗೆ ಪತ್ತೆಹಚ್ಚಲ್ಪಟ್ಟಿರುವುದಿಲ್ಲವಾದರೂ, ಗ್ರೀಸಿನ ಬೇರೆ ಭಾಗಗಳಲ್ಲಿ ಅಂತಹ ಬಲಿಪೀಠಗಳಿದ್ದವು. ಉದಾಹರಣೆಗೆ, ಎರಡನೆಯ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಪಾಸೆನೀಯಸ್, “ಅಜ್ಞಾತ ಹೆಸರಿನ ದೇವತೆಗಳ” ಬಲಿಪೀಠಗಳು ಅಥೇನೆಯ ಹತ್ತಿರದ ಫಲಿರನ್ನಲ್ಲಿರುವುದರ ಕುರಿತು ಹೇಳಿದನು. (ಡಿಸ್ಕ್ರಿಪ್ಶನ್ ಆಫ್ ಗ್ರೀಸ್, ಆ್ಯಟಿಕ 1, 4) ಅದೇ ಕೃತಿಗನುಸಾರ, ಒಲಿಂಪಿಯದಲ್ಲಿ “ಅಜ್ಞಾತ ದೇವತೆಗಳ ಬಲಿಪೀಠ” ಇತ್ತು.—ಈಲೀಅ 1, XIV, 8.
ದ ಲೈಫ್ ಆಫ್ ಅಪಲೋನಿಯಸ್ ಆಫ್ ಟೈಅನ ಎಂಬ ಕೃತಿಯಲ್ಲಿ ಗ್ರೀಕ್ ಲೇಖಕ ಫಲಾಸ್ಟ್ರಟಸ್ (ಸುಮಾರು ಸಾ.ಶ. 170-245) ಹೇಳಿದ್ದೇನಂದರೆ, ಅಥೇನೆಯಲ್ಲಿ “ಅಜ್ಞಾತ ದೇವತೆಗಳ ಗೌರವಾರ್ಥವಾಗಿಯೂ ಬಲಿಪೀಠಗಳಿವೆ.” ಮತ್ತು ಲೈವ್ಸ್ ಆಫ್ ಫಿಲಾಸಫರ್ಸ್ (1.110) ಎಂಬ ಪುಸ್ತಕದಲ್ಲಿ ಡಯಾಜನೀಸ್ ಲೇಅರ್ಷಸ್ (ಸುಮಾರು ಸಾ.ಶ. 200-250), ಅಥೇನೆಯ ವಿವಿಧ ಭಾಗಗಳಲ್ಲಿ “ನಾಮರಹಿತ ಬಲಿಪೀಠಗಳು” ಕಂಡುಬರುತ್ತವೆಂದು ಬರೆದನು.
ರೋಮನರು ಸಹ ನಾಮರಹಿತ ದೇವತೆಗಳಿಗೆ ಬಲಿಪೀಠಗಳನ್ನು ಕಟ್ಟಿದರು. ಸಾ.ಶ.ಪೂ. ಒಂದನೆಯ ಅಥವಾ ಎರಡನೆಯ ಶತಮಾನದಿಂದ ಬಂದಿರುವ ಮತ್ತು ಇಟಲಿಯ ರೋಮ್ನ ಪ್ಯಾಲಟೈನ್ ಪುರಾಣವಸ್ತುಶಾಸ್ತ್ರ ಸಂಗ್ರಹಾಲಯದಲ್ಲಿರುವ ಬಲಿಪೀಠವನ್ನು ಇಲ್ಲಿ ತೋರಿಸಲಾಗಿದೆ. ಈ ಬಲಿಪೀಠವನ್ನು “ಒಬ್ಬ ದೇವನಿಗೊ ದೇವತೆಗೊ ಪ್ರತಿಷ್ಠಿಸಲಾಗಿದೆ” ಎಂದು ಅದರ ಲ್ಯಾಟಿನ್ ಅರ್ಪಣಾಲೇಖ ತೋರಿಸುತ್ತದೆ. ಇಂತಹ ವಾಕ್ಯವು “ಅರ್ಪಣಾಲೇಖಗಳಲ್ಲಿಯೂ ಸಾಹಿತ್ಯದ ಗ್ರಂಥಪಾಠಗಳಲ್ಲಿಯೂ ಅನೇಕವೇಳೆ ಪ್ರಾರ್ಥನೆಗಳಲ್ಲಿಯೂ ಅರ್ಪಣಾ ಸೂತ್ರಗಳಲ್ಲಿಯೂ ಕಂಡುಬರುತ್ತದೆ.”
“ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟು ಮಾಡಿದ ದೇವರು” ಅನೇಕರಿಗೆ ಇನ್ನೂ ಅಜ್ಞಾತನಾಗಿದ್ದಾನೆ. ಆದರೆ ಪೌಲನು ಅಥೇನೆಯ ಜನರಿಗೆ ತಿಳಿಸಿದಂತೆ, ಈ ದೇವರಾದ ಯೆಹೋವನು, “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.”—ಅ. ಕೃತ್ಯಗಳು 17:24, 27.
[ಪುಟ 32ರಲ್ಲಿರುವ ಚಿತ್ರ ಕೃಪೆ]
ಬಲಿಪೀಠ: Soprintendenza Archeologica di Roma