‘ಬೋಧಿಸುವುದರಲ್ಲಿ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು’
“ನೀವು ನನ್ನನ್ನು ‘ಬೋಧಕನು’ ಮತ್ತು ‘ಕರ್ತನು’ ಎಂದು ಸಂಭೋದಿಸುತ್ತೀರಿ. ನೀವು ಹೇಳುವುದು ಸರಿಯೇ, ಏಕೆಂದರೆ ನಾನು ಅಂಥವನೇ.” (ಯೋಹಾ. 13:13) ತನ್ನ ಶಿಷ್ಯರಿಗೆ ಹೇಳಿದ ಈ ಮಾತುಗಳಲ್ಲಿ ಯೇಸು ಬೋಧಕನಾದ ತನ್ನ ಪಾತ್ರವನ್ನು ಎತ್ತಿಹೇಳಿದನು. ಅನಂತರ, ಸ್ವರ್ಗಕ್ಕೇರಿ ಹೋಗುವ ತುಸು ಮುಂಚಿತವಾಗಿ ಅವನು ತನ್ನ ಹಿಂಬಾಲಕರಿಗೆ ಆಜ್ಞೆಯಿತ್ತದ್ದು: “ಆದುದರಿಂದ ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.” (ಮತ್ತಾ. 28:19, 20) ದೇವರ ವಾಕ್ಯದ ಬೋಧಕರಾಗಿರುವ ಮಹತ್ವವನ್ನು ತದನಂತರ ಅಪೊಸ್ತಲ ಪೌಲನು ಸಹ ಒತ್ತಿಹೇಳಿದನು. ಕ್ರೈಸ್ತ ಹಿರಿಯನಾದ ತಿಮೊಥೆಯನಿಗೆ ಅವನು ಪ್ರಬೋಧಿಸಿದ್ದು: “ಸಾರ್ವಜನಿಕ ವಾಚನದಲ್ಲಿಯೂ ಬುದ್ಧಿಹೇಳುವುದರಲ್ಲಿಯೂ ಬೋಧಿಸುವುದರಲ್ಲಿಯೂ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು. . . . ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:13-15.
ಅಂದಿನಂತೆ ಇಂದು ಸಹ ಬೋಧಿಸುವಿಕೆಯು ನಮ್ಮ ಕ್ಷೇತ್ರ ಶುಶ್ರೂಷೆಯ ಹಾಗೂ ನಮ್ಮ ಕ್ರೈಸ್ತ ಕೂಟಗಳ ಮಹತ್ತಾದ ಅಂಶ. ಬೋಧಿಸುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತಾ ಇರುವುದನ್ನು ನಾವು ಹೇಗೆ ಮುಂದುವರಿಸಬಲ್ಲೆವು ಮತ್ತು ದೇವರ ವಾಕ್ಯದ ಬೋಧಕರಾದ ನಮಗೆ ಅಭಿವೃದ್ಧಿಯನ್ನು ಅಥವಾ ಪ್ರಗತಿಯನ್ನು ಮಾಡಲು ಇದು ಯಾವ ವಿಧಗಳಲ್ಲಿ ಸಹಾಯಕರ?
ಮಹಾ ಬೋಧಕನನ್ನು ಅನುಕರಿಸಿರಿ
ಯೇಸುವಿನ ಬೋಧನಾ ವಿಧಾನವು ಅವನಿಗೆ ಕಿವಿಗೊಟ್ಟ ಅನೇಕರ ಮನಸ್ಸನ್ನು ಒಲಿಸಿತು. ನಜರೇತಿನ ಸಭಾಮಂದಿರದಲ್ಲಿ ಹಾಜರಾದವರ ಮೇಲೆ ಅವನ ಮಾತುಗಳು ಬೀರಿದ ಪ್ರಭಾವವನ್ನು ಗಮನಿಸಿರಿ. ಸುವಾರ್ತಾ ಲೇಖಕ ಲೂಕನು ದಾಖಲಿಸಿದ್ದು: “ಅವರೆಲ್ಲರು ಅವನ ಕುರಿತು ಮೆಚ್ಚಿಗೆಯ ಮಾತುಗಳನ್ನಾಡುತ್ತಾ ಅವನ ಬಾಯಿಂದ ಬರುತ್ತಿದ್ದ ಮನವೊಲಿಸುವ ಮಾತುಗಳಿಗೆ ಆಶ್ಚರ್ಯಪಡುತ್ತಾ” ಇದ್ದರು. (ಲೂಕ 4:22) ಯೇಸುವಿನ ಶಿಷ್ಯರು ತಮ್ಮ ಸಾರುವಿಕೆಯನ್ನು ತಮ್ಮ ಗುರುವಿನ ಮಾದರಿಯಲ್ಲಿ ನಡಿಸಿದರು. ಅದೇರೀತಿ ಪೌಲನು ತನ್ನ ಜೊತೆ ಕ್ರೈಸ್ತರನ್ನು ಉತ್ತೇಜಿಸಿದ್ದು: “ನಾನು ಕ್ರಿಸ್ತನನ್ನು ಅನುಕರಿಸುವವನಾಗಿರುವಂತೆಯೇ ನೀವೂ ನನ್ನನ್ನು ಅನುಕರಿಸುವವರಾಗಿರಿ.” (1 ಕೊರಿಂ. 11:1) ಯೇಸುವಿನ ಮಾದರಿಯನ್ನು ಅನುಕರಿಸಿದ ಕಾರಣ ಪೌಲನು ‘ಸಾರ್ವಜನಿಕವಾಗಿಯೂ ಮನೆಮನೆಯಲ್ಲಿಯೂ ಬೋಧಿಸುವುದರಲ್ಲಿ’ ತುಂಬ ಪರಿಣಾಮಕಾರಿಯಾದನು.—ಅ. ಕಾ. 20:20.
“ಪೇಟೆಯಲ್ಲಿ” ಬೋಧಿಸಿದ್ದು
ಸಾರ್ವಜನಿಕ ಬೋಧಿಸುವಿಕೆಯಲ್ಲಿ ಪೌಲನ ಪ್ರವೀಣತೆಯ ಉತ್ತಮ ಮಾದರಿಯು ಅಪೊಸ್ತಲರ ಕಾರ್ಯಗಳು 17ನೇ ಅಧ್ಯಾಯದಲ್ಲಿ ಕಂಡುಬರುತ್ತದೆ. ಅವನು ಗ್ರೀಸ್ ದೇಶದ ಅಥೆನ್ಸನ್ನು ಸಂದರ್ಶಿಸಿದ ಕುರಿತು ನಾವು ಅಲ್ಲಿ ಓದುತ್ತೇವೆ. ಪೌಲನು ದೃಷ್ಟಿ ಹರಿಸಿದಲ್ಲೆಲ್ಲ ರಸ್ತೆಗಳಲ್ಲೂ ಸಾರ್ವಜನಿಕ ಸ್ಥಳಗಳಲ್ಲೂ ವಿಗ್ರಹಗಳೇ ವಿಗ್ರಹಗಳು ತುಂಬಿದ್ದವು. ಅದರಿಂದ ಅವನು ಅತಿಯಾಗಿ ವ್ಯಾಕುಲಗೊಂಡನೆಂದು ಹೇಳಬೇಕಾಗಿಲ್ಲ! ಆದರೂ ಅವನು ತನ್ನ ಭಾವೋದ್ರೇಕಗಳನ್ನು ಅಂಕೆಯಲ್ಲಿಟ್ಟನು. ಮಾತ್ರವಲ್ಲದೆ ಅವನು ‘ಸಭಾಮಂದಿರದಲ್ಲಿ ಮತ್ತು ಪ್ರತಿದಿನ ಪೇಟೆಯಲ್ಲಿ ಸಿಗುತ್ತಿದ್ದ ಜನರೊಂದಿಗೆ ತರ್ಕಿಸಲಾರಂಭಿಸಿದನು.’ (ಅ. ಕಾ. 17:16, 17) ನಮಗೆ ಎಂಥ ಉತ್ತಮ ಮಾದರಿ! ಎಲ್ಲ ಹಿನ್ನೆಲೆಗಳ ಜನರನ್ನು ನಾವು ಗೌರವದಿಂದ ಸಮೀಪಿಸಬೇಕೇ ಹೊರತು ಖಂಡಿಸುವ ರೀತಿಯಲ್ಲಲ್ಲ. ಈ ಮೂಲಕ ಕೆಲವರಾದರೂ ಸಂದೇಶಕ್ಕೆ ಕಿವಿಗೊಟ್ಟು ಕಾಲಕ್ರಮೇಣ ಸುಳ್ಳು ಧರ್ಮದ ಬಂಧನದಿಂದ ಹೊರಗೆ ಬರುವಂತೆ ನಾವು ಮಾಡಬಲ್ಲೆವು.—ಅ. ಕಾ. 10:34, 35; ಪ್ರಕ. 18:4.
ಪೌಲನು ಪೇಟೆಯಲ್ಲಿ ಸಾರಿದ ಹೆಚ್ಚಿನ ಜನರು ಅವನ ಸಂದೇಶಕ್ಕೆ ಕಿವಿಗೊಡಲಿಲ್ಲ. ಅವರಲ್ಲಿ ಕೆಲವರು ತತ್ತ್ವಜ್ಞಾನಿಗಳೂ ಇದ್ದರು. ಅವರ ದೃಷ್ಟಿಕೋನಗಳು ಪೌಲನು ಸಾರಿದ ಸತ್ಯಕ್ಕೆ ಹೊಂದಿಕೆಯಾಗಿರಲಿಲ್ಲ. ಪೌಲನಿಗೆ ವಾದವಿವಾದಗಳು ಎದುರಾದಾಗ ಅವನು ನಿಶ್ಚಯವಾಗಿ ಅವರ ಹೇಳಿಕೆಗಳಿಗೆ ಕಿವಿಗೊಟ್ಟನು. ಕೆಲವರು ಅವನನ್ನು “ಮಾತಾಳಿ” (ಗ್ರೀಕ್ ಭಾಷೆಯಲ್ಲಿ ಅಕ್ಷರಶಃ “ಬೀಜ ಹೆಕ್ಕುವವನು.”) ಎಂದು ಕರೆದರು. ಆ ಸಮಯದಲ್ಲಿ ಈ ಪದವನ್ನು, ಕಲಬೆರಕೆಯ ಮಾಹಿತಿಯನ್ನು ಸಂಗ್ರಹಿಸಿ ಅದರ ಕುರಿತು ವಿವೇಚನೆಯಿಲ್ಲದೆ ಮಾತನಾಡುತ್ತಾ ಇರುವವನಿಗೆ ಉಪಯೋಗಿಸುತ್ತಿದ್ದರು. ಇನ್ನು ಕೆಲವರು, “ಇವನು ಅನ್ಯದೇವತೆಗಳ ಪ್ರಚಾರಕನಂತೆ ತೋರುತ್ತಾನೆ” ಎಂದು ಹೇಳಿದರು.—ಅ. ಕಾ. 17:18.
ಆದರೂ ತನ್ನ ಕೇಳುಗರ ಇಂಥ ಕೊಂಕು ನುಡಿಗಳು ಪೌಲನನ್ನು ನಿರಾಶೆಗೊಳಿಸಲಿಲ್ಲ. ಬದಲಾಗಿ ತನ್ನ ಬೋಧನೆಗಳನ್ನು ವಿವರಿಸುವಂತೆ ಕೇಳಲ್ಪಟ್ಟಾಗ ಅವನು ಆ ಸದವಕಾಶವನ್ನು ತಕ್ಕೊಂಡು ತನ್ನ ಬೋಧನಾ ಕೌಶಲಗಳನ್ನು ಉತ್ತಮವಾಗಿ ಪ್ರದರ್ಶಿಸಿದ ಒಳನೋಟಭರಿತ ಭಾಷಣವನ್ನಿತ್ತನು. (ಅ. ಕಾ. 17:19-22; 1 ಪೇತ್ರ 3:15) ನಾವಾತನ ಭಾಷಣವನ್ನು ಸವಿವರವಾಗಿ ಪರಾಮರ್ಶಿಸಿ ನಮ್ಮ ಬೋಧನಾ ಕೌಶಲಗಳನ್ನು ಉತ್ತಮಗೊಳಿಸಲು ನೆರವಾಗಬಹುದಾದ ಪಾಠಗಳನ್ನು ಕಲಿಯೋಣ.
ಕೇಳುಗರಿಗೆ ಆಸಕ್ತಿಹುಟ್ಟಿಸುವ ವಿಷಯಗಳನ್ನು ಆರಿಸಿಕೊಳ್ಳಿ
ಪೌಲನು ಹೇಳಿದ್ದು: “ಅಥೆನ್ಸಿನ ಜನರೇ, ಇತರರಿಗಿಂತಲೂ ನೀವು ಎಲ್ಲ ವಿಷಯಗಳಲ್ಲಿ ದೇವದೇವತೆಗಳಿಗೆ ಹೆಚ್ಚು ಭಯಪಡುವವರಾಗಿದ್ದೀರಿ ಎಂಬುದನ್ನು ನಾನು ಗಮನಿಸುತ್ತೇನೆ. ಉದಾಹರಣೆಗೆ, ನಾನು . . . ನಿಮ್ಮ ಆರಾಧನಾ ವಸ್ತುಗಳನ್ನು ಜಾಗರೂಕತೆಯಿಂದ ಗಮನಿಸುತ್ತಿದ್ದಾಗ ಒಂದು ಬಲಿಪೀಠವು ನನಗೆ ಕಂಡಿತು; ಅದರ ಮೇಲೆ, ‘ಅಜ್ಞಾತ ದೇವರಿಗೆ’ ಎಂದು ಬರೆದಿತ್ತು. ಆದುದರಿಂದ ಯಾವುದಕ್ಕೆ ನೀವು ಅಜ್ಞಾತವಾಗಿ ಭಕ್ತಿಯನ್ನು ಸಲ್ಲಿಸುತ್ತಿದ್ದೀರೋ ಅದನ್ನೇ ನಾನು ನಿಮಗೆ ತಿಳಿಯಪಡಿಸುತ್ತಿದ್ದೇನೆ.”—ಅ. ಕಾ. 17:22, 23.
ಪೌಲನು ತನ್ನ ಸುತ್ತಮುತ್ತಲಿದ್ದ ಎಲ್ಲ ವಿಷಯಗಳಿಗೆ ಗಮನಕೊಟ್ಟನು. ಜಾಗರೂಕತೆಯಿಂದ ಅವಲೋಕಿಸಿದ್ದ ವಸ್ತುಗಳಿಂದ ತಾನು ಮಾತಾಡುತ್ತಿದ್ದ ಜನರ ಕುರಿತು ಅವನು ಹೆಚ್ಚನ್ನು ತಿಳುಕೊಂಡನು. ನಾವು ಸಹ ಸುತ್ತುಮುತ್ತ ಅವಲೋಕಿಸುವವರಾಗಿದ್ದಲ್ಲಿ ಮನೆಯವನ ಕುರಿತು ಏನನ್ನಾದರೂ ತಿಳುಕೊಳ್ಳಬಲ್ಲೆವು. ಉದಾಹರಣೆಗೆ, ಹಿತ್ತಲಲ್ಲಿ ಬಿದ್ದಿರುವ ಆಟಿಕೆಗಳಿಂದ ಅಥವಾ ಬಾಗಲ ಮೇಲಿನ ಗುರುತುಗಳಿಂದ ನಾವು ಹೆಚ್ಚನ್ನು ಅರಿತುಕೊಳ್ಳುತ್ತೇವೆ. ಮನೆಯವನ ಸಂಭಾವ್ಯ ಸನ್ನಿವೇಶಗಳೇನೆಂದು ನಮಗೆ ಸ್ವಲ್ಪಮಟ್ಟಿಗೆ ತಿಳಿದುಬಂದಾಗ ಏನನ್ನು ಹೇಳಬೇಕೆಂದು ಮಾತ್ರವಲ್ಲ ಅದನ್ನು ಹೇಗೆ ಹೇಳಬೇಕೆಂಬದನ್ನೂ ಜಾಗರೂಕತೆಯಿಂದ ಆರಿಸಿಕೊಳ್ಳಬಲ್ಲೆವು.—ಕೊಲೊ. 4:6.
ಪೌಲನು ತನ್ನ ಸಂದೇಶವನ್ನು ಖಂಡನಾತ್ಮಕವಾಗಿ ನೀಡಲಿಲ್ಲ. ಆದರೂ ಅಥೆನ್ಸಿನವರ “ಭಕ್ತಿ” ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿಸಿಲ್ಲ ಎಂದವನು ಕಂಡುಕೊಂಡನು. ಅವರು ಸತ್ಯದೇವರಿಗೆ ತಮ್ಮ ಆರಾಧನೆಯನ್ನು ಹೇಗೆ ಸಲ್ಲಿಸಸಾಧ್ಯವಿತ್ತು ಎಂಬುದನ್ನು ಪೌಲನು ಸ್ಪಷ್ಟವಾಗಿ ಎತ್ತಿಹೇಳಿದನು. (1 ಕೊರಿಂ. 14:8) ಹೀಗಿರಲಾಗಿ ರಾಜ್ಯ ಸುವಾರ್ತೆಯನ್ನು ಸಾರುವಾಗ ಸ್ಪಷ್ಟವಾಗಿ ಹಾಗೂ ಖಂಡಿಸದೆ ಮಾತಾಡುವುದು ಎಷ್ಟು ಪ್ರಾಮುಖ್ಯ!
ಜಾಣ್ಮೆ ಹಾಗೂ ನಿಷ್ಪಕ್ಷಪಾತ ತೋರಿಸಿ
ಪೌಲನು ಮುಂದರಿಸುತ್ತಾ ಅಂದದ್ದು: “ಜಗತ್ತನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡುವವನಲ್ಲ; ತನಗೆ ಅಗತ್ಯವಿದೆಯೋ ಎಂಬಂತೆ ಆತನು ಮಾನವರ ಕೈಗಳಿಂದ ಸೇವೆಹೊಂದುವವನೂ ಅಲ್ಲ, ಏಕೆಂದರೆ ಆತನೇ ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಸರ್ವವನ್ನೂ ಕೊಡುವಾತನಾಗಿದ್ದಾನೆ.”—ಅ. ಕಾ. 17:24, 25.
ಯೆಹೋವನು ಜೀವದಾತನು ಎಂಬ ವಿಷಯಕ್ಕೆ ಇಲ್ಲಿ ಪೌಲನು ಗಮನ ಸೆಳೆಯುತ್ತಾ ದೇವರನ್ನು “ಭೂಮ್ಯಾಕಾಶಗಳ ಒಡೆಯ” ಎಂದು ಜಾಣ್ಮೆಯಿಂದ ನಿರ್ದೇಶಿಸಿದನು. ಸಕಲ ಜೀವಗಳ ಮೂಲನು ಯೆಹೋವ ದೇವರೇ ಎಂಬುದನ್ನು ಬೇರೆ ಬೇರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದ ಪ್ರಾಮಾಣಿಕ ಜನರು ತಿಳಿಯುವಂತೆ ಸಹಾಯಮಾಡುವುದು ಅದೆಷ್ಟು ದೊಡ್ಡ ಸುಯೋಗ!—ಕೀರ್ತ. 36:9.
ತದನಂತರ ಪೌಲನು ಅಂದದ್ದು: “ಆತನು ಒಬ್ಬ ಮನುಷ್ಯನಿಂದಲೇ ಪ್ರತಿಯೊಂದು ಮಾನವ ಜನಾಂಗವನ್ನು ನಿರ್ಮಿಸಿ . . . ನಿಯಮಿತ ಕಾಲಗಳನ್ನೂ ಮನುಷ್ಯ ನಿವಾಸದ ಮೇರೆಗಳನ್ನೂ ನಿರ್ಣಯಿಸಿದನು; ಹೀಗೆ ಮಾಡಿದ್ದು, ಅವರು ದೇವರಿಗಾಗಿ ತಡಕಾಡಿ, ನಿಜವಾಗಿಯೂ ಕಂಡುಹಿಡಿಯುವ ಕಾರಣದಿಂದ ಆತನನ್ನು ಹುಡುಕುವಂತೆ ಮಾಡಲಿಕ್ಕಾಗಿಯೇ. ಆದರೂ ವಾಸ್ತವದಲ್ಲಿ ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ.”—ಅ. ಕಾ. 17:26, 27.
ನಾವು ಬೋಧಿಸುವ ರೀತಿಯಿಂದ ನಾವು ಎಂಥ ದೇವರನ್ನು ಆರಾಧಿಸುತ್ತೇವೆಂದು ತೋರಿಸಿಕೊಡಬಲ್ಲೆವು. ಯಾವುದೇ ಪಕ್ಷಪಾತವಿಲ್ಲದೆ ಎಲ್ಲಾ ಜನಾಂಗಗಳ ಜನರು ತನ್ನನ್ನು “ತಡಕಾಡಿ ನಿಜವಾಗಿ ಕಂಡುಕೊಳ್ಳುವಂತೆ” ಯೆಹೋವನು ಅನುಮತಿಸುತ್ತಾನೆ. ತದ್ರೀತಿಯಲ್ಲಿ ನಾವು ಸಹ ಭೇಟಿಯಾಗುವ ಎಲ್ಲರೊಂದಿಗೆ ನಿಷ್ಪಕ್ಷಪಾತದಿಂದ ಮಾತಾಡುತ್ತೇವೆ. ಸೃಷ್ಟಿಕರ್ತನಲ್ಲಿ ನಂಬಿಕೆಯಿಡುವ ಜನರು ಆತನೊಂದಿಗೆ ಆಪ್ತಸಂಬಂಧವನ್ನು ಬೆಳೆಸಿಕೊಳ್ಳುವಂತೆ ನೆರವಾಗಲು ನಾವು ಪ್ರಯತ್ನಿಸುತ್ತೇವೆ. ಈ ಸಂಬಂಧವು ಅವರಿಗೆ ನಿತ್ಯ ಆಶೀರ್ವಾದಗಳನ್ನು ತರಬಲ್ಲದು. (ಯಾಕೋ. 4:8) ಆದರೆ ದೇವರ ಅಸ್ತಿತ್ವವನ್ನು ಸಂದೇಹಿಸುವವರಿಗೆ ನಾವು ಹೇಗೆ ಸಹಾಯಮಾಡುತ್ತೇವೆ? ಪೌಲನ ಮಾದರಿಯನ್ನು ಅನುಸರಿಸುವ ಮೂಲಕವೇ. ಅವನು ನಂತರ ಏನಂದನೆಂದು ಗಮನಿಸಿ.
“ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ. ನಿಮ್ಮ ಕವಿಗಳಲ್ಲಿಯೂ ಕೆಲವರು, ‘ನಾವು ಸಹ ಆತನ ಸಂತಾನದವರೇ’ ಎಂದು ಹೇಳಿದ್ದಾರೆ. ಆದುದರಿಂದ, ನಾವು ದೇವರ ಸಂತಾನದವರಾಗಿದ್ದ ಮೇಲೆ ದೇವರು . . . ಬಂಗಾರ, ಬೆಳ್ಳಿ ಅಥವಾ ಕಲ್ಲಿನಂತಿದ್ದಾನೆಂದು ನಾವು ಕಲ್ಪಿಸಿಕೊಳ್ಳಬಾರದು.”—ಅ. ಕಾ. 17:28, 29.
ತನ್ನ ಕೇಳುಗರು ಆಸಕ್ತಿ ತೋರಿಸಿ ತಾನು ಹೇಳುವುದನ್ನು ಸ್ವೀಕರಿಸುವರು ಎಂಬ ಉದ್ದೇಶದಿಂದ ಪೌಲನು ಕವಿಗಳ ಕುರಿತು ಉಲ್ಲೇಖಿಸಿದನು. ಯಾಕಂದರೆ ಅಥೆನ್ಸಿನ ಜನರು ಕವಿಗಳನ್ನು ತಿಳಿದಿದ್ದರು ಮತ್ತು ಮಾನ್ಯಮಾಡಿದ್ದರು. ಅಂತೆಯೇ ನಮ್ಮ ಕೇಳುಗರು ಏನನ್ನು ಒಪ್ಪುವರೆಂದು ನಮಗೆ ತಿಳಿದಿದೆಯೊ ಅದರ ಕುರಿತು ತರ್ಕಬದ್ಧವಾಗಿ ಮಾತಾಡುವ ಮೂಲಕ ಅವರ ಆಸಕ್ತಿಯನ್ನು ಎಬ್ಬಿಸಬಲ್ಲೆವು. ಉದಾಹರಣೆಗೆ ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನು ಕೊಟ್ಟ ದೃಷ್ಟಾಂತವು ಇಂದು ಸಹ ಮನವೊಪ್ಪಿಸುವಂಥದ್ದು: “ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ.” (ಇಬ್ರಿ. 3:4) ಈ ಸರಳವಾದ ದೃಷ್ಟಾಂತದ ಕುರಿತು ಮನೆಯವರು ವಿವೇಚಿಸುವಂತೆ ಮಾಡುವ ಮೂಲಕ ನಾವು ಹೇಳುವ ವಿಷಯದ ಸತ್ಯತೆಯನ್ನು ಅವರು ಒಪ್ಪುವಂತೆ ಸಹಾಯಮಾಡಬಲ್ಲೆವು. ಪೌಲನು ಕೊಟ್ಟ ಭಾಷಣದಲ್ಲಿ ಪರಿಣಾಮಕಾರಿಯಾದ ಬೋಧನೆಯ ಇನ್ನೊಂದು ಅಂಶವನ್ನು ಗಮನಿಸಿ. ಅದು ಯಾವುದೆಂದರೆ ಪ್ರಚೋದನೆಯೇ.
ತುರ್ತನ್ನು ಒತ್ತಿಹೇಳಿ
ಪೌಲನು ಹೇಳಿದ್ದು: “ದೇವರು ಅಂಥ ಅಜ್ಞಾನದ ಕಾಲಗಳನ್ನು ಲಕ್ಷ್ಯಕ್ಕೆ ತರಲಿಲ್ಲ ಎಂಬುದು ನಿಜ; ಆದರೆ ಈಗ ಎಲ್ಲ ಕಡೆಗಳಲ್ಲಿರುವ ಮಾನವರು ಪಶ್ಚಾತ್ತಾಪಪಡಬೇಕೆಂದು ಆತನು ಹೇಳುತ್ತಿದ್ದಾನೆ. ಏಕೆಂದರೆ ತಾನು ನೇಮಿಸಿರುವ ಒಬ್ಬ ಮನುಷ್ಯನ ಮೂಲಕ ನಿವಾಸಿತ ಭೂಮಿಗೆ ನೀತಿಗನುಸಾರ ನ್ಯಾಯತೀರಿಸಲಿಕ್ಕಾಗಿ ಆತನು ಒಂದು ದಿನವನ್ನು ಗೊತ್ತುಮಾಡಿದ್ದಾನೆ.”—ಅ. ಕಾ. 17:30, 31.
ಕೆಟ್ಟತನಕ್ಕೆ ದೇವರು ಕೊಟ್ಟ ತಾತ್ಕಾಲಿಕ ಅನುಮತಿಯು ನಿಜವಾಗಿ ನಮ್ಮ ಹೃದಯದ ಅಪೇಕ್ಷೆ ಏನಾಗಿದೆ ಎಂಬುದನ್ನು ಆತನಿಗೆ ತೋರಿಸುವ ಸದವಕಾಶವನ್ನು ನಮಗೆಲ್ಲರಿಗೆ ಕೊಟ್ಟಿರುತ್ತದೆ. ಆದ್ದರಿಂದ ನಮ್ಮ ಕಾಲದ ತುರ್ತನ್ನು ಒತ್ತಿಹೇಳುವುದೂ ಈಗ ಅತಿ ಸಮೀಪದಲ್ಲಿರುವ ರಾಜ್ಯದಾಳಿಕೆಯ ಆಶೀರ್ವಾದಗಳನ್ನು ಮನಗಾಣಿಸಿ ಮಾತಾಡುವುದೂ ಅತ್ಯಾವಶ್ಯಕ.—2 ತಿಮೊ. 3:1-5.
ವಿವಿಧ ಪ್ರತಿಕ್ರಿಯೆಗಳು
“ಸತ್ತವರ ಪುನರುತ್ಥಾನದ ಕುರಿತು ಕೇಳಿಸಿಕೊಂಡಾಗ ಕೆಲವರು ಗೇಲಿಮಾಡಲಾರಂಭಿಸಿದರು; ಬೇರೆ ಕೆಲವರು, ‘ಇದರ ಕುರಿತು ನೀನು ಹೇಳುವುದನ್ನು ನಾವು ಇನ್ನೊಂದು ಬಾರಿಯೂ ಕೇಳಿಸಿಕೊಳ್ಳುವೆವು’ ಎಂದರು. ಆಗ ಪೌಲನು ಅವರ ಮಧ್ಯದಿಂದ ಹೊರಟುಹೋದನು. ಕೆಲವರು ಅವನೊಂದಿಗೆ ಸೇರಿಕೊಂಡರು ಮತ್ತು ವಿಶ್ವಾಸಿಗಳಾದರು.”—ಅ. ಕಾ. 17:32-34.
ಕೆಲವರು ನಮ್ಮ ಬೋಧನೆಗೆ ಕೂಡಲೆ ಪ್ರತಿಕ್ರಿಯೆ ತೋರಿಸುತ್ತಾರೆ. ಇತರರಿಗಾದರೊ ನಮ್ಮ ತರ್ಕಬದ್ಧತೆಯಿಂದ ಮನಗಾಣಿಸಲ್ಪಡಲು ಹೆಚ್ಚು ಸಮಯ ಬೇಕಾದೀತು. ಆದರೆ ಸತ್ಯದ ಬಗ್ಗೆ ನಾವು ಕೊಡುವ ಸ್ಪಷ್ಟವೂ ಸರಳವೂ ಆದ ವಿವರಣೆಯು ಒಬ್ಬನೇ ಒಬ್ಬ ವ್ಯಕ್ತಿಗಾದರೂ ಯೆಹೋವನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಸಹಾಯಮಾಡಿದಲ್ಲಿ ಅದೆಷ್ಟು ಉತ್ತಮ! ಜನರನ್ನು ಆತನ ಕುಮಾರನ ಬಳಿಗೆ ಸೆಳೆಯಲು ದೇವರಿಂದ ಉಪಯೋಗಿಸಲ್ಪಟ್ಟದ್ದಕ್ಕಾಗಿ ನಾವೆಷ್ಟು ಆಭಾರಿಗಳು!—ಯೋಹಾ. 6:44.
ಕಲಿಯಬಲ್ಲ ಪಾಠ
ಪೌಲನು ಕೊಟ್ಟ ಭಾಷಣದ ಕುರಿತು ನಾವು ಯೋಚಿಸುವಾಗ ಬೈಬಲ್ ಸತ್ಯವನ್ನು ಇತರರಿಗೆ ಹೇಗೆ ವಿವರಿಸುವುದು ಎಂಬುದರ ಕುರಿತು ಹೆಚ್ಚನ್ನು ಕಲಿಯುತ್ತೇವೆ. ಸಭೆಯಲ್ಲಿ ಸಾರ್ವಜನಿಕ ಭಾಷಣ ಕೊಡುವ ಸುಯೋಗ ನಮಗಿದ್ದರೆ ಜಾಣ್ಮೆಯ ಹೇಳಿಕೆಗಳನ್ನು ಬಳಸುವ ಮೂಲಕ ನಾವು ಪೌಲನನ್ನು ಅನುಕರಿಸಲು ಪ್ರಯತ್ನಿಸಬಲ್ಲೆವು. ಆ ಮೂಲಕ ಅವಿಶ್ವಾಸಿಯಾದ ವ್ಯಕ್ತಿಯು ಬೈಬಲ್ ಸತ್ಯವನ್ನು ತಿಳುಕೊಂಡು ಅದನ್ನು ಸ್ವೀಕರಿಸುವಂತೆ ಸಹಾಯಮಾಡಲ್ಪಡುವನು. ನಾವು ಅಂಥ ಸತ್ಯವನ್ನು ಸ್ಪಷ್ಟವಾಗಿ ನೀಡಲು ಬಯಸುತ್ತೇವೆ. ಆದರೆ ಹಾಜರಿರಬಹುದಾದ ಯಾವನೇ ಅವಿಶ್ವಾಸಿಯ ನಂಬಿಕೆಗಳನ್ನು ಟೀಕಿಸದಂತೆ ಜಾಗ್ರತೆಯಿಂದಿರುವೆವು. ಅದೇ ಸಮಯದಲ್ಲಿ ನಮ್ಮ ಸಾರ್ವಜನಿಕ ಸಾರುವ ಕೆಲಸದಲ್ಲಿ ನಾವು ಒಡಂಬಡಿಸುವಿಕೆಯನ್ನೂ ಜಾಣ್ಮೆಯನ್ನೂ ತೋರಿಸಲು ಪ್ರಯಾಸಪಡುತ್ತೇವೆ. ಹಾಗೆ ಮಾಡುವ ಮೂಲಕ ‘ಬೋಧಿಸುವುದರಲ್ಲಿ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು’ ಎಂಬ ಪೌಲನ ಸಲಹೆಯನ್ನು ನಾವು ನಿಜವಾಗಿ ಅನುಸರಿಸುತ್ತೇವೆ.
[ಪುಟ 30ರಲ್ಲಿರುವ ಚಿತ್ರ]
ಪೌಲನ ಬೋಧಿಸುವಿಕೆಯು ಸ್ಪಷ್ಟವೂ ಸರಳವೂ ಜಾಣ್ಮೆಯುಳ್ಳದ್ದೂ ಆಗಿತ್ತು
[ಪುಟ 31ರಲ್ಲಿರುವ ಚಿತ್ರ]
ಸಾರುವಾಗ ಜನರ ಭಾವನೆಗಳನ್ನು ಪರಿಗಣಿಸುವ ಮೂಲಕ ನಾವು ಪೌಲನನ್ನು ಅನುಕರಿಸುತ್ತೇವೆ