ಶಿಷ್ಯರನ್ನಾಗಿ ಮಾಡುವುದಕ್ಕೋಸ್ಕರ ಸಾರಿರಿ
“[ಅಪೊಲ್ಲೋಸನ] ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ [“ಸರಿಯಾಗಿ,” NW] ವಿವರಿಸಿದರು.”—ಅ. ಕೃತ್ಯಗಳು 18:26.
1. (ಎ) ಅಪೊಲ್ಲೋಸನು ‘ಆಸಕ್ತ ಮನಸ್ಸುಳ್ಳವನಾಗಿದ್ದನಾದರೂ,’ ಅವನಲ್ಲಿ ಯಾವುದರ ಕೊರತೆಯಿತ್ತು? (ಬಿ) ತನ್ನ ಆತ್ಮಿಕ ಕೊರತೆಯನ್ನು ಸರಿಪಡಿಸಲು ಅಪೊಲ್ಲೋಸನಿಗೆ ಯಾವುದರ ಅಗತ್ಯವಿತ್ತು?
ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತ ವಿವಾಹಿತ ದಂಪತಿಯಾಗಿದ್ದರು. ಇವರು ಎಫೆಸ ಪಟ್ಟಣದ ಸಭಾಮಂದಿರವೊಂದರಲ್ಲಿ ಅಪೊಲ್ಲೋಸನು ಒಂದು ಭಾಷಣವನ್ನು ಕೊಡುತ್ತಿದ್ದದ್ದನ್ನು ಗಮನಿಸಿದರು. ತನ್ನ ವಾಕ್ಚಾತುರ್ಯದಿಂದ ಮತ್ತು ಒಡಂಬಡಿಸುವ ಶಕ್ತಿಯಿಂದ ಅಪೊಲ್ಲೋಸನು ತನ್ನ ಸಭಿಕರ ಗಮನವನ್ನು ಸೆರೆಹಿಡಿದಿದ್ದನು. ಅವನು ‘ಆಸಕ್ತ ಮನಸ್ಸುಳ್ಳವನಾಗಿದ್ದನು’ ಮತ್ತು ‘ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ [“ಸರಿಯಾಗಿ,” NW] ಹೇಳಿ ಉಪದೇಶಿಸುತ್ತಿದ್ದನು.’ ಆದರೂ, ಅಪೊಲ್ಲೋಸನು ಸ್ನಾನಿಕನಾದ ‘ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾಗಿದ್ದನು’ ಎಂದು ವ್ಯಕ್ತವಾಗುತ್ತಿತ್ತು. ಕ್ರಿಸ್ತನ ವಿಷಯದಲ್ಲಿ ಅವನು ಏನನ್ನು ಸಾರಿಹೇಳಿದನೋ ಅದು ಸತ್ಯವಾಗಿತ್ತಾದರೂ ಹೆಚ್ಚು ಗಹನವಾದ ವಿಷಯಗಳು ಅದರಲ್ಲಿ ಒಳಗೂಡಿರಲಿಲ್ಲ. ಸಮಸ್ಯೆಯೇನೆಂದರೆ, ಕ್ರಿಸ್ತನ ಕುರಿತು ಅವನಿಗಿದ್ದ ಜ್ಞಾನವು ಅಪೂರ್ಣವಾಗಿತ್ತು. ಯೆಹೋವನ ಉದ್ದೇಶವನ್ನು ಪೂರೈಸುವುದರಲ್ಲಿ ಯೇಸು ಕ್ರಿಸ್ತನಿಗಿದ್ದ ಪಾತ್ರದ ಕುರಿತಾದ ಜ್ಞಾನದಲ್ಲಿ ಅಪೊಲ್ಲೋಸನು ಇನ್ನೂ ಬೆಳೆಯುವ ಆವಶ್ಯಕತೆಯಿತ್ತು.—ಅ. ಕೃತ್ಯಗಳು 18:24-26.
2. ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಯಾವ ಪಂಥಾಹ್ವಾನವನ್ನು ಸ್ವೀಕರಿಸಿದರು?
2 ಯಾವುದೇ ಹಿಂಜರಿಕೆಯಿಲ್ಲದೆ ಪ್ರಿಸ್ಕಿಲ್ಲ ಮತ್ತು ಅಕ್ವಿಲರು, ಕ್ರಿಸ್ತನು ‘ಆಜ್ಞಾಪಿಸಿದ್ದನ್ನೆಲ್ಲಾ’ ಮಾಡಲು ಶಕ್ತನಾಗುವಂತೆ ಅಪೊಲ್ಲೋಸನಿಗೆ ಸಹಾಯಮಾಡಲು ತಮ್ಮನ್ನು ನೀಡಿಕೊಂಡರು. (ಮತ್ತಾಯ 28:19, 20) ಅವರು ಅಪೊಲ್ಲೋಸನನ್ನು “ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸರಿಯಾಗಿ ವಿವರಿಸಿದರು” ಎಂದು ವೃತ್ತಾಂತವು ತಿಳಿಸುತ್ತದೆ. ಆದರೂ, ಕೆಲವು ಕ್ರೈಸ್ತರು ಅಪೊಲ್ಲೋಸನಿಗೆ ಕಲಿಸಲು ಹಿಂಜರಿಯುವಂತೆ ಮಾಡಸಾಧ್ಯವಿದ್ದ ಸತ್ಯಾಂಶಗಳಿದ್ದವು. ಯಾವ ಸತ್ಯಾಂಶಗಳು? ಮತ್ತು ಅಪೊಲ್ಲೋಸನೊಂದಿಗೆ ಶಾಸ್ತ್ರವಚನಗಳ ಕುರಿತು ಚರ್ಚಿಸಲಿಕ್ಕಾಗಿ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಮಾಡಿದ ಪ್ರಯತ್ನಗಳಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? ಈ ಐತಿಹಾಸಿಕ ವೃತ್ತಾಂತದ ಪುನರ್ವಿಮರ್ಶೆಯು, ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ಮನಸ್ಸನ್ನು ಕೇಂದ್ರೀಕರಿಸುವಂತೆ ನಮಗೆ ಹೇಗೆ ಸಹಾಯಮಾಡುತ್ತದೆ?
ಜನರ ಆವಶ್ಯಕತೆಗಳಿಗೆ ಗಮನಕೊಡಿರಿ
3. ಅಪೊಲ್ಲೋಸನ ಹಿನ್ನೆಲೆಯು ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅವನಿಗೆ ಕಲಿಸುವುದರಿಂದ ಅವರನ್ನು ತಡೆಗಟ್ಟಲಿಲ್ಲವೇಕೆ?
3 ಯೆಹೂದಿ ವಂಶದಲ್ಲಿ ಹುಟ್ಟಿದ್ದ ಅಪೊಲ್ಲೋಸನು ಅಲೆಕ್ಸಾಂಡ್ರಿಯ ಪಟ್ಟಣದಲ್ಲಿ ಬೆಳೆದು ದೊಡ್ಡವನಾಗಿದ್ದನು ಎಂಬುದು ಸುವ್ಯಕ್ತ. ಆಗ ಅಲೆಕ್ಸಾಂಡ್ರಿಯವು ಉಚ್ಚ ವ್ಯಾಸಂಗದ ಕೇಂದ್ರವಾಗಿತ್ತು ಮತ್ತು ಅದರ ದೊಡ್ಡ ಗ್ರಂಥಾಲಯಕ್ಕೆ ತುಂಬ ಸುಪ್ರಸಿದ್ಧವಾಗಿತ್ತು. ಆ ಪಟ್ಟಣದಲ್ಲಿ ವಿದ್ವಾಂಸರನ್ನೂ ಸೇರಿಸಿ ಯೆಹೂದ್ಯರ ಸಂಖ್ಯೆಯು ಅತ್ಯಧಿಕವಾಗಿತ್ತು. ಆದುದರಿಂದ, ಸೆಪ್ಟೂಅಜಂಟ್ ಎಂದು ಪ್ರಸಿದ್ಧವಾಗಿರುವ ಹೀಬ್ರು ಶಾಸ್ತ್ರವಚನಗಳ ಗ್ರೀಕ್ ಭಾಷಾಂತರವು ಅಲ್ಲಿಯೇ ಮಾಡಲ್ಪಟ್ಟಿತು. ಹೀಗಿರುವುದರಿಂದ, ಅಪೊಲ್ಲೋಸನು “ಶಾಸ್ತ್ರಗಳಲ್ಲಿ ಪ್ರವೀಣ”ನಾಗಿದ್ದುದರಲ್ಲಿ ಆಶ್ಚರ್ಯವೇನಿಲ್ಲ! ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಗುಡಾರಗಳನ್ನು ಮಾಡುವವರಾಗಿದ್ದರು. ಅಪೊಲ್ಲೋಸನ ವಾಗ್ವೈಖರಿಯು, ಅವನಿಗೆ ಸಹಾಯಮಾಡಲು ತಾವು ಅರ್ಹರಲ್ಲ ಎಂಬ ಹಿಂಜರಿಕೆಯನ್ನು ಉಂಟುಮಾಡಿತೋ? ಖಂಡಿತವಾಗಿಯೂ ಇಲ್ಲ. ಪ್ರೀತಿಯ ನಿಮಿತ್ತವಾಗಿಯೇ ಅವರು ಆ ವ್ಯಕ್ತಿಯನ್ನು, ಅವನ ಅವಶ್ಯಕತೆಗಳನ್ನು ಮತ್ತು ತಾವು ಅವನಿಗೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ಪರಿಗಣಿಸಿದರು.
4. ಎಲ್ಲಿ ಮತ್ತು ಹೇಗೆ ತನಗೆ ಅಗತ್ಯವಿರುವ ಸಹಾಯವನ್ನು ಅಪೊಲ್ಲೋಸನು ಪಡೆದುಕೊಂಡನು?
4 ಅಪೊಲ್ಲೋಸನು ಎಷ್ಟೇ ವಾಗ್ವೈಖರಿಯುಳ್ಳವನಾಗಿದ್ದರೂ, ಅವನಿಗೆ ಹೆಚ್ಚಿನ ಉಪದೇಶದ ಅಗತ್ಯವಿತ್ತು. ಅವನಿಗೆ ಅಗತ್ಯವಾಗಿದ್ದ ಸಹಾಯವು ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರಲಿಲ್ಲ, ಆದರೆ ಕ್ರೈಸ್ತ ಸಭೆಯ ಜೊತೆ ಸದಸ್ಯರ ನಡುವೆ ಲಭ್ಯವಿತ್ತು. ರಕ್ಷಣೆಗೋಸ್ಕರ ದೇವರು ಮಾಡಿರುವ ಏರ್ಪಾಡಿನ ಕುರಿತು ಹೆಚ್ಚು ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಮಾಡಸಾಧ್ಯವಿದ್ದ ಅಂಶಗಳಿಂದ ಅಪೊಲ್ಲೋಸನು ಪ್ರಯೋಜನವನ್ನು ಪಡೆಯಲಿದ್ದನು. ಪ್ರಿಸ್ಕಿಲ್ಲ ಮತ್ತು ಅಕ್ವಿಲರು “ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸರಿಯಾಗಿ ವಿವರಿಸಿದರು.”
5. ಪ್ರಿಸ್ಕಿಲ್ಲ ಮತ್ತು ಅಕ್ವಿಲರ ಆತ್ಮಿಕತೆಯ ಕುರಿತು ನೀವು ಏನು ಹೇಳಬಲ್ಲಿರಿ?
5 ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಆತ್ಮಿಕವಾಗಿ ಬಲಶಾಲಿಗಳಾಗಿದ್ದರು ಮತ್ತು ನಂಬಿಕೆಯಲ್ಲಿ ದೃಢವಾಗಿ ಬೇರೂರಿದವರಾಗಿದ್ದರು. ಒಬ್ಬ ವ್ಯಕ್ತಿಯು ಐಶ್ವರ್ಯವಂತನಾಗಿರಲಿ, ಬಡವನಾಗಿರಲಿ, ವಿದ್ವಾಂಸನಾಗಿರಲಿ ಅಥವಾ ದಾಸನಾಗಿರಲಿ, ‘ತಮ್ಮಲ್ಲಿದ್ದ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಅವರು ಯಾವಾಗಲೂ ಸಿದ್ಧರಾಗಿದ್ದರು’ ಎಂಬುದು ಸಂಭವನೀಯ. (1 ಪೇತ್ರ 3:15) ಅಕ್ವಿಲನೂ ಅವನ ಪತ್ನಿಯೂ ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸಲು’ ಶಕ್ತರಾಗಿದ್ದರು. (2 ತಿಮೊಥೆಯ 2:15) ಅವರು ಶಾಸ್ತ್ರವಚನಗಳನ್ನು ಗಂಭೀರವಾಗಿ ಅಧ್ಯಯನಮಾಡುತ್ತಿದ್ದ ವ್ಯಕ್ತಿಗಳಾಗಿದ್ದರು ಎಂಬುದು ಸುಸ್ಪಷ್ಟ. ಹೃದಯದ ಮೇಲೆ ಪ್ರಭಾವಬೀರುವಂತಿದ್ದು, ‘ಸಜೀವವೂ ಕಾರ್ಯಸಾಧಕವೂ ಆಗಿರುವ ದೇವರ ವಾಕ್ಯದ’ ಮೇಲಾಧಾರಿತವಾದ ಉಪದೇಶದಿಂದ ಅಪೊಲ್ಲೋಸನು ಬಹಳವಾಗಿ ಪ್ರಭಾವಿತನಾದನು.—ಇಬ್ರಿಯ 4:12.
6. ತಾನು ಪಡೆದುಕೊಂಡ ಸಹಾಯವನ್ನು ಅಪೊಲ್ಲೋಸನು ಗಣ್ಯಮಾಡಿದನು ಎಂಬುದು ನಮಗೆ ಹೇಗೆ ಗೊತ್ತು?
6 ಅಪೊಲ್ಲೋಸನು ತನ್ನ ಬೋಧಕರ ಮಾದರಿಯನ್ನು ಗಣ್ಯಮಾಡಿದನು ಮತ್ತು ಶಿಷ್ಯರನ್ನಾಗಿಮಾಡುವ ಕೆಲಸದಲ್ಲಿ ಇನ್ನೂ ಹೆಚ್ಚು ಪ್ರವೀಣನಾದನು. ವಿಶೇಷವಾಗಿ ಯೆಹೂದಿ ಜನರ ನಡುವೆ ಅವನು ಸುವಾರ್ತೆಯನ್ನು ಘೋಷಿಸುವ ಕೆಲಸದಲ್ಲಿ ತನ್ನ ಜ್ಞಾನವನ್ನು ಪೂರ್ಣವಾಗಿ ಸದುಪಯೋಗಿಸಿದನು. ಕ್ರಿಸ್ತನ ವಿಷಯದಲ್ಲಿ ಯೆಹೂದ್ಯರನ್ನು ಒಡಂಬಡಿಸುವುದರಲ್ಲಿ ಅಪೊಲ್ಲೋಸನು ಅಸಾಧಾರಣ ಮಟ್ಟದಲ್ಲಿ ಸಹಾಯಕನಾಗಿದ್ದನು. ಅವನು ‘ಪವಿತ್ರ ಗ್ರಂಥದಲ್ಲಿ ಪಾಂಡಿತ್ಯ ಪಡೆದಿದ್ದರಿಂದ,’ ಪುರಾತನ ಪ್ರವಾದಿಗಳೆಲ್ಲರೂ ಕ್ರಿಸ್ತನ ಬರೋಣಕ್ಕಾಗಿ ಎದುರುನೋಡಿದರು ಎಂಬುದನ್ನು ಆ ಯೆಹೂದ್ಯರಿಗೆ ರುಜುಪಡಿಸಲು ಶಕ್ತನಾಗಿದ್ದನು. (ಅ. ಕೃತ್ಯಗಳು 18:24, ಪರಿಶುದ್ಧ ಬೈಬಲ್a) ಅದೇ ವೃತ್ತಾಂತವು ಮುಂದುವರಿಸುತ್ತಾ ಹೇಳುವಂತೆ, ತದನಂತರ ಅಪೊಲ್ಲೋಸನು ಅಖಾಯಕ್ಕೆ ಹೋದನು ಮತ್ತು ಅಲ್ಲಿ “ಯೇಸುವೇ ಕ್ರಿಸ್ತನೆಂದು ಶಾಸ್ತ್ರಾಧಾರದಿಂದ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದ್ದವರಿಗೆ ಬಹಳ ಸಹಾಯಮಾಡಿದನು.”—ಅ. ಕೃತ್ಯಗಳು 18:27, 28.
ಇತರ ಬೋಧಕರ ಮಾದರಿಯಿಂದ ಪಾಠವನ್ನು ಕಲಿಯಿರಿ
7. ಅಕ್ವಿಲ ಮತ್ತು ಪ್ರಿಸ್ಕಿಲ್ಲರು ನಿಪುಣ ಬೋಧಕರಾಗಿ ಪರಿಣಮಿಸಿದ್ದು ಹೇಗೆ?
7 ಅಕ್ವಿಲ ಮತ್ತು ಪ್ರಿಸ್ಕಿಲ್ಲರು ದೇವರ ವಾಕ್ಯದ ನಿಪುಣ ಬೋಧಕರಾಗಿ ಪರಿಣಮಿಸಿದ್ದು ಹೇಗೆ? ವೈಯಕ್ತಿಕ ಅಧ್ಯಯನ ಹಾಗೂ ಕೂಟದ ಹಾಜರಿಯಲ್ಲಿನ ಅವರ ಶ್ರದ್ಧೆ ಮಾತ್ರವಲ್ಲ, ಅಪೊಸ್ತಲ ಪೌಲನೊಂದಿಗಿನ ಅವರ ಆಪ್ತ ಸಹವಾಸವು ಸಹ ಅವರಿಗೆ ಮಹತ್ತರವಾಗಿ ಸಹಾಯಮಾಡಿದ್ದಿರಬೇಕು. ಕೊರಿಂಥದಲ್ಲಿ ಸುಮಾರು 18 ತಿಂಗಳುಗಳ ವರೆಗೆ ಪೌಲನು ಪ್ರಿಸ್ಕಿಲ್ಲ ಮತ್ತು ಅಕ್ವಿಲರ ಮನೆಯಲ್ಲಿ ಉಳಿದುಕೊಂಡಿದ್ದನು. ಗುಡಾರಗಳನ್ನು ಮಾಡುವ ಹಾಗೂ ರಿಪೇರಿಮಾಡುವ ಕೆಲಸದಲ್ಲಿ ಅವರು ಜೊತೆಯಾಗಿ ಶ್ರಮಿಸಿದರು. (ಅ. ಕೃತ್ಯಗಳು 18:2, 3) ಆಗ ಅವರು ನಡೆಸಿದ್ದಿರಬಹುದಾದ ಗಹನವಾದ ಶಾಸ್ತ್ರೀಯ ಸಂಭಾಷಣೆಗಳ ಕುರಿತು ತುಸು ಆಲೋಚಿಸಿರಿ. ಮತ್ತು ಪೌಲನೊಂದಿಗಿನ ಅಂಥ ಸಹವಾಸವು ಅವರ ಆತ್ಮಿಕತೆಯನ್ನು ಎಷ್ಟೊಂದು ಹೆಚ್ಚಿಸಿದ್ದಿರಬೇಕು! “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು” ಎಂದು ಜ್ಞಾನೋಕ್ತಿ 13:20 ಹೇಳುತ್ತದೆ. ಒಳ್ಳೇ ಸಹವಾಸವು ಅವರ ಆತ್ಮಿಕ ಹವ್ಯಾಸಗಳ ಮೇಲೆ ಅತ್ಯುತ್ತಮ ಪ್ರಭಾವವನ್ನು ಬೀರಿತು.—1 ಕೊರಿಂಥ 15:33.
8. ಪೌಲನ ಶುಶ್ರೂಷೆಯಲ್ಲಿ ಅವನನ್ನು ಗಮನಿಸುವ ಮೂಲಕ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಯಾವ ಪಾಠವನ್ನು ಕಲಿತರು?
8 ರಾಜ್ಯದ ಘೋಷಕನೋಪಾದಿ ಸೇವೆಮಾಡುತ್ತಿದ್ದ ಪೌಲನನ್ನು ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಗಮನಿಸಿದಾಗ, ಅವನಲ್ಲಿ ಒಬ್ಬ ಒಳ್ಳೇ ಬೋಧಕನ ಅತ್ಯುತ್ತಮ ಮಾದರಿಯನ್ನು ಕಂಡರು. ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿರುವ ವೃತ್ತಾಂತವು ಹೇಳುವುದೇನೆಂದರೆ, ಪೌಲನು “ಪ್ರತಿಸಬ್ಬತ್ ದಿನವೂ [ಕೊರಿಂಥದಲ್ಲಿನ] ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು.” ಸಮಯಾನಂತರ, ಪೌಲನೊಂದಿಗೆ ಸೀಲನೂ ತಿಮೊಥೆಯನೂ ಜೊತೆಗೂಡಿದಾಗ, ಅವನು “ದೇವರ ವಾಕ್ಯವನ್ನು ಬೋಧಿಸುವದರಲ್ಲಿ ಅತ್ಯಾಸಕ್ತಿಯುಳ್ಳವನಾಗಿ ಯೇಸುವೇ ಬರಬೇಕಾದ ಕ್ರಿಸ್ತನೆಂದು ಯೆಹೂದ್ಯರಿಗೆ ಖಂಡಿತವಾಗಿ ಸಾಕ್ಷಿಹೇಳಿದನು.” ಸಭಾಮಂದಿರದ ಸದಸ್ಯರಲ್ಲಿ ಆಸಕ್ತಿಯು ಇಲ್ಲದಿರುವುದು ಕಂಡುಬಂದಾಗ, ಪೌಲನು ತನ್ನ ಸಾರುವ ಚಟುವಟಿಕೆಯ ಕೇಂದ್ರವನ್ನು ಹೆಚ್ಚು ಅನುಕೂಲಕರವಾದ ಸ್ಥಳಕ್ಕೆ ಅಂದರೆ ಸಭಾಮಂದಿರದ ಮಗ್ಗುಲಲ್ಲೇ ಇದ್ದ ಒಂದು ಮನೆಗೆ ಸ್ಥಳಾಂತರಿಸಿದ್ದನ್ನು ಸಹ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಗಮನಿಸಿದರು. ಅಲ್ಲಿ ಪೌಲನು “ಸಭಾಮಂದಿರದ ಅಧ್ಯಕ್ಷನಾದ” ಕ್ರಿಸ್ಪನು ಒಬ್ಬ ಶಿಷ್ಯನಾಗುವಂತೆ ಸಹಾಯಮಾಡಲು ಶಕ್ತನಾದನು. ಆ ವ್ಯಕ್ತಿಯು ಶಿಷ್ಯನಾಗಿ ಪರಿಣಮಿಸಿದ್ದು, ಆ ಕ್ಷೇತ್ರದಲ್ಲಿ ಗಾಢವಾದ ಮತ್ತು ಫಲದಾಯಕ ಪರಿಣಾಮವನ್ನು ಬೀರಿತು ಎಂಬುದನ್ನು ಪ್ರಿಸ್ಕಿಲ್ಲ ಮತ್ತು ಅಕ್ವಿಲರು ನೋಡಿರಬಹುದು. ಆ ವೃತ್ತಾಂತವು ಹೇಳುವುದು: “ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಮತ್ತು ಕೊರಿಂಥದವರಲ್ಲಿ ಅನೇಕರು ಕೇಳಿ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡರು.”—ಅ. ಕೃತ್ಯಗಳು 18:4-8.
9. ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಪೌಲನ ಮಾದರಿಗೆ ಹೇಗೆ ಪ್ರತಿಕ್ರಿಯಿಸಿದರು?
9 ಕ್ಷೇತ್ರ ಶುಶ್ರೂಷೆಯಲ್ಲಿ ಪೌಲನು ಇಟ್ಟ ಮಾದರಿಯನ್ನು ಪ್ರಿಸ್ಕಿಲ್ಲ ಮತ್ತು ಅಕ್ವಿಲರಂಥ ಇತರ ರಾಜ್ಯ ಘೋಷಕರು ಸಹ ಅನುಕರಿಸಿದರು. ಈ ಅಪೊಸ್ತಲನು ಇತರ ಕ್ರೈಸ್ತರನ್ನು ಹೀಗೆ ಉತ್ತೇಜಿಸಿದನು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.” (1 ಕೊರಿಂಥ 11:1) ಪೌಲನ ಮಾದರಿಗನುಸಾರವಾಗಿ, ಕ್ರೈಸ್ತ ಬೋಧನೆಗಳನ್ನು ಇನ್ನೂ ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವಂತೆ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅಪೊಲ್ಲೋಸನಿಗೆ ಸಹಾಯಮಾಡಿದರು. ಇದರ ಫಲಿತಾಂಶವಾಗಿ ಅವನು ಸಹ ಇತರರಿಗೆ ಸಹಾಯಮಾಡಿದನು. ರೋಮ್, ಕೊರಿಂಥ ಮತ್ತು ಎಫೆಸದಲ್ಲಿ ಶಿಷ್ಯರನ್ನಾಗಿ ಮಾಡಲಿಕ್ಕಾಗಿ ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಸಹಾಯಮಾಡಿದರು ಎಂಬುದರಲ್ಲಿ ಸಂಶಯವೇ ಇಲ್ಲ.—ಅ. ಕೃತ್ಯಗಳು 18:1, 2, 18, 19; ರೋಮಾಪುರ 16:3-5.
10. ಶಿಷ್ಯರನ್ನಾಗಿಮಾಡುವ ಕೆಲಸದಲ್ಲಿ ನಿಮಗೆ ಸಹಾಯಮಾಡುವಂಥ ಯಾವ ಪಾಠವನ್ನು ಅಪೊಸ್ತಲರ ಕೃತ್ಯಗಳು 18ನೆಯ ಅಧ್ಯಾಯದಿಂದ ನೀವು ಕಲಿತಿದ್ದೀರಿ?
10 ಅಪೊಸ್ತಲರ ಕೃತ್ಯಗಳು 18ನೆಯ ಅಧ್ಯಾಯದ ನಮ್ಮ ಪರಿಗಣನೆಯಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಪೌಲನಿಂದ ಹೇಗೆ ಪಾಠವನ್ನು ಕಲಿತಿದ್ದಿರಬಹುದೋ ಅದೇ ರೀತಿಯಲ್ಲಿ ನಾವು ದೇವರ ವಾಕ್ಯದ ಒಳ್ಳೇ ಬೋಧಕರ ಮಾದರಿಯನ್ನು ಅನುಸರಿಸುವ ಮೂಲಕ ಶಿಷ್ಯರನ್ನಾಗಿಮಾಡುವ ನಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸಿಕೊಳ್ಳಸಾಧ್ಯವಿದೆ. “ದೇವರ ವಾಕ್ಯದೊಂದಿಗೆ ತೀವ್ರವಾಗಿ ನಿರತರಾಗಿರುವವರೊಂದಿಗೆ” ಮತ್ತು ಇತರರಿಗೆ “ಸಮಗ್ರವಾಗಿ ಸಾಕ್ಷಿನೀಡುವವರೊಂದಿಗೆ” ನಾವು ಸಹವಾಸಮಾಡಸಾಧ್ಯವಿದೆ. (ಅ. ಕೃತ್ಯಗಳು 18:5, ಕಿಂಗ್ಡಮ್ ಇಂಟರ್ಲಿನಿಯರ್ ಟ್ರಾನ್ಸ್ಲೇಶನ್) ಒಡಂಬಡಿಸುವಂಥ ಬೋಧನಾ ಕೌಶಲಗಳನ್ನು ಉಪಯೋಗಿಸುವ ಮೂಲಕ ಅವರು ಜನರ ಹೃದಯವನ್ನು ಹೇಗೆ ತಲಪುತ್ತಾರೆ ಎಂಬುದನ್ನು ನಾವು ಗಮನಿಸಸಾಧ್ಯವಿದೆ. ಅಂಥ ಕೌಶಲಗಳು ಶಿಷ್ಯರನ್ನಾಗಿ ಮಾಡುವಂತೆ ನಮಗೆ ಸಹಾಯಮಾಡಬಲ್ಲವು. ಒಬ್ಬ ವ್ಯಕ್ತಿಯು ನಮ್ಮೊಂದಿಗೆ ಬೈಬಲ್ ಅಧ್ಯಯನಮಾಡುತ್ತಿರುವಾಗ, ಆ ಅಧ್ಯಯನದಲ್ಲಿ ಜೊತೆಗೂಡುವಂತೆ ತನ್ನ ಕುಟುಂಬದ ಇತರ ಸದಸ್ಯರನ್ನು ಅಥವಾ ನೆರೆಯವರನ್ನು ಆಮಂತ್ರಿಸುವಂತೆ ನಾವು ಅವನಿಗೆ ಸಲಹೆ ನೀಡಬಹುದು. ಅಥವಾ ನಾವು ಯಾರೊಂದಿಗೆ ಬೈಬಲ್ ಅಧ್ಯಯನ ನಡೆಸಸಾಧ್ಯವಿದೆಯೋ ಅಂಥ ವ್ಯಕ್ತಿಗಳು ಯಾರಾದರೂ ಅವನಿಗೆ ಗೊತ್ತಿರುವಲ್ಲಿ ನಮಗೆ ತಿಳಿಸುವಂತೆ ಕೇಳಿಕೊಳ್ಳಬಹುದು.—ಅ. ಕೃತ್ಯಗಳು 18:6-8.
ಶಿಷ್ಯರನ್ನಾಗಿ ಮಾಡುವ ಅವಕಾಶಗಳನ್ನು ಸೃಷ್ಟಿಸಿರಿ
11. ಹೊಸ ಶಿಷ್ಯರನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
11 ಮನೆಯಿಂದ ಮನೆಗೆ, ಮಾರುಕಟ್ಟೆಯಲ್ಲಿ ಮತ್ತು ಪ್ರಯಾಣಿಸುತ್ತಿರುವಾಗ—ಎಲ್ಲಾ ಕಡೆಗಳಲ್ಲಿ—ಸಾರುವ ಮೂಲಕ ಪೌಲನು ಮತ್ತು ಅವನ ಜೊತೆ ಕ್ರೈಸ್ತರು ಶಿಷ್ಯರನ್ನಾಗಿಮಾಡಲು ಪ್ರಯತ್ನಿಸಿದರು. ಶಿಷ್ಯರನ್ನಾಗಿಮಾಡಲು ಪ್ರಯತ್ನಿಸುತ್ತಿರುವಂಥ ಹುರುಪಿನ ರಾಜ್ಯ ಕೆಲಸಗಾರರೋಪಾದಿ, ನೀವು ನಿಮ್ಮ ಕ್ಷೇತ್ರ ಸೇವೆಯ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಬಲ್ಲಿರೋ? ಯೋಗ್ಯ ವ್ಯಕ್ತಿಗಳನ್ನು ಹುಡುಕಲು ಮತ್ತು ಅವರಿಗೆ ಸಾರಲು ಇರುವ ಸದವಕಾಶಗಳನ್ನು ನೀವು ಸದುಪಯೋಗಿಸಿಕೊಳ್ಳಬಲ್ಲಿರೋ? ಸುವಾರ್ತೆಯ ನಮ್ಮ ಜೊತೆ ಪ್ರಚಾರಕರು ಶಿಷ್ಯರನ್ನು ಕಂಡುಕೊಂಡಂಥ ಕೆಲವು ವಿಧಗಳು ಯಾವುವು? ನಾವು ಪ್ರಥಮವಾಗಿ ಟೆಲಿಫೋನ್ ಸಾಕ್ಷಿಕಾರ್ಯದ ಕ್ಷೇತ್ರದ ಕಡೆಗೆ ಗಮನ ಹರಿಸೋಣ.
12-14. ಟೆಲಿಫೋನ್ ಸಾಕ್ಷಿಕಾರ್ಯದ ಪ್ರಯೋಜನಗಳನ್ನು ಉದಾಹರಿಸಲಿಕ್ಕಾಗಿ, ನಿಮ್ಮ ಸ್ವಂತ ಅನುಭವವನ್ನು ಅಥವಾ ಈ ಪ್ಯಾರಗ್ರಾಫ್ಗಳಲ್ಲಿ ಕಂಡುಬರುವ ಅನುಭವಗಳಲ್ಲಿ ಒಂದನ್ನು ತಿಳಿಸಿರಿ.
12 ಮಾರೀಯ ಎಂದು ಕರೆಯಬಹುದಾದ ಒಬ್ಬ ಕ್ರೈಸ್ತಳು ಬ್ರಸಿಲ್ನಲ್ಲಿ ಮನೆಯಿಂದ ಮನೆಗೆ ಸಾರುತ್ತಿದ್ದಾಗ, ಒಂದು ಕಟ್ಟಡದಿಂದ ಹೊರಗೆ ಹೋಗುತ್ತಿದ್ದ ಯುವ ಸ್ತ್ರೀಗೆ ಒಂದು ಟ್ರ್ಯಾಕ್ಟನ್ನು ನೀಡಿದಳು. ಆ ಟ್ರ್ಯಾಕ್ಟ್ನ ಶೀರ್ಷಿಕೆಯನ್ನು ಪೀಠಿಕೆಯಾಗಿ ಉಪಯೋಗಿಸುತ್ತಾ, “ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ?” ಎಂದು ಮಾರೀಯಳು ಕೇಳಿದಳು. ಆ ಸ್ತ್ರೀಯು ಉತ್ತರಿಸಿದ್ದು: “ತಿಳಿದುಕೊಳ್ಳಲು ತುಂಬ ಇಷ್ಟಪಡುತ್ತೇನೆ. ಆದರೆ ನನ್ನ ಸಮಸ್ಯೆಯೇನೆಂದರೆ, ನಾನೊಬ್ಬ ಶಿಕ್ಷಕಿ, ವಿದ್ಯಾರ್ಥಿಗಳಿಗೆ ಪಾಠಗಳನ್ನು ಕಲಿಸುವುದರಲ್ಲೇ ನನ್ನ ಸಮಯವೆಲ್ಲಾ ಕಳೆದುಹೋಗುತ್ತದೆ.” ಟೆಲಿಫೋನಿನ ಮುಖಾಂತರ ತಾವು ಬೈಬಲ್ ವಿಷಯಗಳನ್ನು ಚರ್ಚಿಸಸಾಧ್ಯವಿದೆ ಎಂದು ಮಾರೀಯಳು ವಿವರಿಸಿದಳು. ಆ ಸ್ತ್ರೀಯು ಮಾರೀಯಳಿಗೆ ತನ್ನ ಫೋನ್ ನಂಬರನ್ನು ಕೊಟ್ಟಳು ಮತ್ತು ಅದೇ ದಿನ ಸಾಯಂಕಾಲ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನ ಸಹಾಯದಿಂದ ಅವಳು ಟೆಲಿಫೋನಿನ ಮೂಲಕ ಒಂದು ಅಧ್ಯಯನವನ್ನು ಆರಂಭಿಸಿದಳು.b
13 ಇಥಿಯೋಪಿಯದಲ್ಲಿ ಪೂರ್ಣ ಸಮಯದ ಶುಶ್ರೂಷಕಿಯೊಬ್ಬಳು ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಒಳಗೂಡಿದ್ದಾಗ, ಒಬ್ಬ ಪುರುಷನು ಅವಳಿಗೆ ಮಾತಾಡಲು ಸಿಕ್ಕಿದನಾದರೂ ಹಿನ್ನೆಲೆಯಲ್ಲಿ ತುಂಬ ಗದ್ದಲವು ಕೇಳಿಬಂದಾಗ ತುಂಬ ಗಾಬರಿಗೊಂಡಳು. ಸ್ವಲ್ಪ ಸಮಯಾನಂತರ ಫೋನ್ ಮಾಡುವಂತೆ ಆ ಪುರುಷನು ಅವಳ ಬಳಿ ವಿನಂತಿಸಿಕೊಂಡನು. ಸ್ವಲ್ಪ ಹೊತ್ತಿನ ನಂತರ ಅವಳು ಫೋನ್ ಮಾಡಿದಾಗ, ಅವನು ಕ್ಷಮೆಯಾಚಿಸಿದನು ಮತ್ತು ಹಿಂದಿನ ಸಲ ಅವಳು ಫೋನ್ ಮಾಡಿದ್ದಾಗ ತಾನೂ ತನ್ನ ಪತ್ನಿಯೂ ತೀವ್ರವಾದ ಜಗಳದಲ್ಲಿ ಒಳಗೂಡಿದ್ದೆವು ಎಂದು ಹೇಳಿದನು. ಕುಟುಂಬದ ಸಮಸ್ಯೆಗಳನ್ನು ನಿಭಾಯಿಸಲಿಕ್ಕಾಗಿ ಬೈಬಲ್ ಕೊಡುವ ವಿವೇಕಯುತವಾದ ಮಾರ್ಗದರ್ಶನವನ್ನು ಸೂಚಿಸಲಿಕ್ಕಾಗಿ ಆ ಸಹೋದರಿಯು ಅವನ ಹೇಳಿಕೆಯನ್ನು ಸದುಪಯೋಗಿಸಿಕೊಂಡಳು. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕವು ಅನೇಕ ಕುಟುಂಬಗಳಿಗೆ ಸಹಾಯಮಾಡಿದೆ ಎಂದು ಅವಳು ಅವನಿಗೆ ಹೇಳಿದಳು. ಈ ಪುಸ್ತಕವು ಆ ಪುರುಷನ ಕೈಸೇರಿದ ಕೆಲವು ದಿನಗಳ ಬಳಿಕ, ಈ ಸಹೋದರಿಯು ಅವನಿಗೆ ಪುನಃ ಫೋನ್ ಮಾಡಿದಳು. ಅವನು ಉದ್ಗರಿಸಿದ್ದು: “ಈ ಪುಸ್ತಕವು ನನ್ನ ವಿವಾಹವನ್ನು ರಕ್ಷಿಸಿದೆ!” ವಾಸ್ತವದಲ್ಲಿ, ಈ ಪುಸ್ತಕದಲ್ಲಿ ತಾನು ಓದಿದ್ದ ಒಳ್ಳೇ ಅಂಶಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳಲಿಕ್ಕಾಗಿ ಅವನು ಒಂದು ಕೌಟುಂಬಿಕ ಕೂಟವನ್ನೂ ನಡೆಸಿದ್ದನು. ಒಂದು ಮನೆ ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು ಮತ್ತು ಸ್ವಲ್ಪದರಲ್ಲೇ ಈ ಪುರುಷನು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗತೊಡಗಿದನು.
14 ಟೆಲಿಫೋನಿನಲ್ಲಿ ಸಾಕ್ಷಿನೀಡುವ ಮೂಲಕ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದ ಡೆನ್ಮಾರ್ಕಿನ ಒಬ್ಬ ರಾಜ್ಯ ಘೋಷಕಿಯು ಹೇಳುವುದು: “ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವಂತೆ ಸೇವಾ ಮೇಲ್ವಿಚಾರಕರು ನನ್ನನ್ನು ಉತ್ತೇಜಿಸಿದರು. ‘ಇದನ್ನಂತೂ ನಾನು ಖಂಡಿತ ಮಾಡಲಾರೆ’ ಎಂದು ಹೇಳುತ್ತಾ ಆರಂಭದಲ್ಲಿ ನಾನು ಹಾಗೆ ಮಾಡಲು ಹಿಂಜರಿದೆ. ಆದರೂ ಒಂದು ದಿನ ನಾನು ಧೈರ್ಯವನ್ನು ಒಟ್ಟುಗೂಡಿಸಿಕೊಂಡು, ಒಂದು ಮನೆಯ ಫೋನನ್ನು ಡಯಲ್ ಮಾಡಲಾರಂಭಿಸಿದೆ. ಸೋನ್ಯ ಎಂಬ ವ್ಯಕ್ತಿ ಫೋನಿನಲ್ಲಿ ಮಾತಾಡಿದಳು ಮತ್ತು ಒಂದು ಚಿಕ್ಕ ಸಂಭಾಷಣೆಯ ಬಳಿಕ ಅವಳು ಬೈಬಲ್ ಆಧಾರಿತ ಸಾಹಿತ್ಯವನ್ನು ಪಡೆದುಕೊಳ್ಳಲು ಒಪ್ಪಿದಳು. ಒಂದು ದಿನ ಸಾಯಂಕಾಲ ನಾವು ಸೃಷ್ಟಿಯ ಕುರಿತು ಚರ್ಚಿಸಿದೆವು, ಮತ್ತು ಅವಳು ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? ಎಂಬ ಪುಸ್ತಕವನ್ನು ಓದಲು ಬಯಸಿದಳು.c ನಾವು ಮುಖಾಮುಖಿಯಾಗಿ ಭೇಟಿಯಾಗಿ, ಈ ವಿಷಯದ ಕುರಿತು ಚರ್ಚೆಯನ್ನು ನಡೆಸಿದರೆ ಒಳ್ಳೇದು ಎಂದು ನಾನು ಅವಳಿಗೆ ಹೇಳಿದೆ. ಅವಳು ಇದಕ್ಕೆ ಒಪ್ಪಿಕೊಂಡಳು. ನಾನು ಬಂದಾಗ ಸೋನ್ಯಳು ಅಧ್ಯಯನಕ್ಕೆ ಸಿದ್ಧಳಾಗಿದ್ದಳು ಮತ್ತು ಅಂದಿನಿಂದ ಪ್ರತಿ ವಾರ ನಾವು ಅಧ್ಯಯನಮಾಡಿದ್ದೇವೆ.” ನಮ್ಮ ಕ್ರೈಸ್ತ ಸಹೋದರಿಯು ಅಂತಿಮವಾಗಿ ಹೇಳಿದ್ದು: “ಅನೇಕ ವರ್ಷಗಳಿಂದ ನಾನು ಒಂದು ಬೈಬಲ್ ಅಧ್ಯಯನಕ್ಕಾಗಿ ಪ್ರಾರ್ಥಿಸುತ್ತಿದ್ದೆ, ಆದರೆ ಫೋನ್ನಲ್ಲಿ ಸಾಕ್ಷಿನೀಡುವ ಮೂಲಕ ಒಂದು ಅಧ್ಯಯನ ಸಿಗುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ.”
15, 16. ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿರುವ ಬೇರೆ ಬೇರೆ ವಿಧಗಳ ಕುರಿತು ಎಚ್ಚರವಾಗಿರುವುದರ ಪ್ರಯೋಜನವನ್ನು ತೋರಿಸಲಿಕ್ಕಾಗಿ ನೀವು ಯಾವ ಅನುಭವಗಳನ್ನು ತಿಳಿಸಬಲ್ಲಿರಿ?
15 ಜನರು ಎಲ್ಲಿಯೇ ಇರಲಿ ಅವರೆಲ್ಲರಿಗೂ ಸಾಕ್ಷಿಯನ್ನು ನೀಡಲಿಕ್ಕಾಗಿರುವ ಸಲಹೆಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಅನೇಕರು ಸಾಫಲ್ಯದಲ್ಲಿ ಆನಂದಿಸುತ್ತಿದ್ದಾರೆ. ಅಮೆರಿಕದಲ್ಲಿ ಒಬ್ಬ ಕ್ರೈಸ್ತ ಸ್ತ್ರೀಯು, ವಾಹನಗಳನ್ನು ನಿಲ್ಲಿಸುವ ಸ್ಥಳದಲ್ಲಿದ್ದ ಒಂದು ವ್ಯಾನ್ನ ಪಕ್ಕದಲ್ಲೇ ತನ್ನ ಕಾರನ್ನು ನಿಲ್ಲಿಸಿದಳು. ಆ ವ್ಯಾನಿನಲ್ಲಿದ್ದ ಸ್ತ್ರೀಯು ಇವಳನ್ನು ನೋಡಿದಾಗ, ಈ ಸಹೋದರಿಯು ನಮ್ಮ ಬೈಬಲ್ ಶೈಕ್ಷಣಿಕ ಕೆಲಸದ ಕುರಿತಾಗಿ ಅವಳಿಗೆ ವಿವರಿಸಲಾರಂಭಿಸಿದಳು. ಆ ಸ್ತ್ರೀ ಕಿವಿಗೊಟ್ಟು, ವ್ಯಾನ್ನಿಂದ ಕೆಳಗಿಳಿದಳು ಮತ್ತು ಈ ಸಹೋದರಿಯ ಕಾರ್ನ ಬಳಿ ಬಂದಳು. ಅವಳು ಹೇಳಿದ್ದು: “ನೀವು ಸ್ವಲ್ಪ ಸಮಯವನ್ನು ತೆಗೆದುಕೊಂಡು ನನ್ನೊಂದಿಗೆ ಮಾತಾಡಲು ಪ್ರಯತ್ನಿಸಿದ್ದು ನನಗೆ ತುಂಬ ಇಷ್ಟವಾಯಿತು. ಬಹಳ ಸಮಯದಿಂದಲೂ ನನ್ನ ಬಳಿ ನಿಮ್ಮ ಯಾವುದೇ ಬೈಬಲ್ ಸಾಹಿತ್ಯವು ಇರಲಿಲ್ಲ. ಅಷ್ಟುಮಾತ್ರವಲ್ಲ, ನಾನು ಪುನಃ ಬೈಬಲ್ ಅಧ್ಯಯನ ಮಾಡಲು ಇಷ್ಟಪಡುತ್ತೇನೆ. ನೀವು ನನ್ನೊಂದಿಗೆ ಅಧ್ಯಯನ ನಡೆಸುವಿರೋ?” ಹೀಗೆ ನಮ್ಮ ಸಹೋದರಿಯು ಸುವಾರ್ತೆಯನ್ನು ಹಂಚಿಕೊಳ್ಳಲಿಕ್ಕಾಗಿ ಅನುಕೂಲಕರವಾದ ಸನ್ನಿವೇಶವನ್ನು ಸೃಷ್ಟಿಸಿಕೊಂಡಳು.
16 ಅಮೆರಿಕದಲ್ಲಿ ಒಬ್ಬ ಸಹೋದರಿಯು ಒಂದು ರೋಗೋಪಚಾರ ಗೃಹವನ್ನು ಸಂದರ್ಶಿಸಿದಾಗ ಅವಳಿಗೆ ಈ ಅನುಭವವಾಯಿತು: ಮೊದಲಾಗಿ ಅವಳು ಆ ಕಟ್ಟಡದಲ್ಲಿನ ನಿರ್ದಿಷ್ಟ ಕೆಲಸಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದ ಡೈರೆಕ್ಟರನೊಬ್ಬನನ್ನು ಅವಳು ಸಮೀಪಿಸಿದಳು ಮತ್ತು ಇಲ್ಲಿ ವಾಸಿಸುತ್ತಿರುವ ಜನರ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ತನ್ನ ಸಹಾಯವನ್ನು ಸ್ವಯಂ ನೀಡಲು ಬಯಸುತ್ತೇನೆ ಎಂದು ಅವನಿಗೆ ಹೇಳಿದಳು. ಯಾರು ಉಚಿತವಾದ ಸಾಪ್ತಾಹಿಕ ಬೈಬಲ್ ಅಧ್ಯಯನಕ್ಕೆ ಹಾಜರಾಗಲು ಇಷ್ಟಪಡುತ್ತಾರೋ ಅಂಥ ವ್ಯಕ್ತಿಗಳೊಂದಿಗೆ ಅಧ್ಯಯನವನ್ನು ನಡೆಸಲು ನನಗೆ ಮನಸ್ಸಿದೆ ಎಂದು ಕೂಡ ನಮ್ಮ ಸಹೋದರಿಯು ತಿಳಿಸಿದಳು. ಬೇರೆ ಬೇರೆ ನಿವಾಸಿಗಳ ಕೋಣೆಗಳನ್ನು ಸಂದರ್ಶಿಸಲು ಆ ಡೈರೆಕ್ಟರನು ಅವಳಿಗೆ ಅನುಮತಿಯನ್ನಿತ್ತನು. ಸ್ವಲ್ಪ ಸಮಯದಲ್ಲೇ ಅವಳು ಒಟ್ಟು 26 ನಿವಾಸಿಗಳೊಂದಿಗೆ ವಾರಕ್ಕೆ ಮೂರಾವರ್ತಿ ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದಳು; ಮತ್ತು ಅವರಲ್ಲಿ ಒಬ್ಬರು ನಮ್ಮ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಶಕ್ತರಾಗಿದ್ದಾರೆ.
17. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ಯಾವ ಪ್ರಸ್ತಾಪವು ಅನೇಕವೇಳೆ ಪರಿಣಾಮಕಾರಿಯಾಗಿದೆ?
17 ಕೆಲವು ರಾಜ್ಯ ಘೋಷಕರಿಗಾದರೋ, ಬೈಬಲ್ ಅಧ್ಯಯನಮಾಡುವಂತೆ ಜನರನ್ನು ನೇರವಾಗಿ ಕೇಳುವುದು ಒಳ್ಳೇ ಫಲಿತಾಂಶಗಳನ್ನು ತಂದಿದೆ. ಒಂದು ದಿನ ಬೆಳಗ್ಗೆ 105 ಮಂದಿ ಪ್ರಚಾರಕರಿರುವ ಒಂದು ಸಭೆಯು, ಸೇವೆಯಲ್ಲಿ ಭೇಟಿಯಾಗುವ ಪ್ರತಿಯೊಬ್ಬ ಮನೆಯವನಿಗೆ ಒಂದು ಬೈಬಲ್ ಅಧ್ಯಯನದ ನೀಡಿಕೆಯನ್ನು ಪ್ರಸ್ತಾಪಿಸುವ ವಿಶೇಷ ಪ್ರಯತ್ನವನ್ನು ಮಾಡಿತು. ಎಂಬತ್ತಾರು ಮಂದಿ ಪ್ರಚಾರಕರು ಕ್ಷೇತ್ರ ಸೇವೆಯಲ್ಲಿ ಭಾಗವಹಿಸಿದರು, ಮತ್ತು ಸಾರುವ ಕೆಲಸದಲ್ಲಿ ಎರಡು ತಾಸುಗಳನ್ನು ವ್ಯಯಿಸಿದ ಬಳಿಕ, ಕಡಿಮೆಪಕ್ಷ 15 ಬೈಬಲ್ ಅಧ್ಯಯನಗಳು ಆರಂಭಿಸಲ್ಪಟ್ಟಿದ್ದು ಅವರ ಗಮನಕ್ಕೆ ಬಂತು.
ಯೋಗ್ಯರನ್ನು ಹುಡುಕುತ್ತಾ ಇರಿ
18, 19. ಯೇಸುವಿನ ಯಾವ ಪ್ರಮುಖ ನಿರ್ದೇಶನವನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಮತ್ತು ಇದನ್ನು ಪೂರೈಸಲಿಕ್ಕಾಗಿ ನಾವೇನನ್ನು ಮಾಡಲು ನಿರ್ಧರಿಸಬೇಕು?
18 ರಾಜ್ಯ ಘೋಷಕರೋಪಾದಿ ನೀವು ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸಿ ನೋಡಲು ಬಯಸಬಹುದು. ಸಾಕ್ಷಿಕಾರ್ಯದ ಬೇರೆ ಬೇರೆ ವಿಧಾನಗಳನ್ನು ಪರಿಗಣಿಸುವಾಗ, ಸ್ಥಳಿಕ ರೂಢಿಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದು ವಿವೇಕಯುತವಾಗಿದೆ ಎಂಬುದಂತೂ ನಿಶ್ಚಯ. ಎಲ್ಲಕ್ಕಿಂತಲೂ ಮಿಗಿಲಾಗಿ, ಯೋಗ್ಯರನ್ನು ಹುಡುಕುವಂತೆ ಹಾಗೂ ಅಂಥ ವ್ಯಕ್ತಿಗಳಿಗೆ ಶಿಷ್ಯರಾಗಲು ಸಹಾಯಮಾಡುವಂತೆ ಯೇಸು ಕೊಟ್ಟ ನಿರ್ದೇಶನವನ್ನು ನಾವೆಲ್ಲರೂ ಮನಸ್ಸಿನಲ್ಲಿಟ್ಟುಕೊಳ್ಳೋಣ.—ಮತ್ತಾಯ 10:11; 28:19.
19 ಈ ಉದ್ದೇಶವನ್ನು ಪೂರೈಸಲಿಕ್ಕಾಗಿ ನಾವು ‘ದೇವರ ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸೋಣ.’ ಶಾಸ್ತ್ರವಚನಗಳ ಮೇಲೆ ಸದೃಢವಾಗಿ ಆಧಾರಿತವಾಗಿರುವ ಒಡಂಬಡಿಸುವಿಕೆಯನ್ನು ಉಪಯೋಗಿಸುವ ಮೂಲಕ ನಾವು ಹೀಗೆ ಮಾಡಸಾಧ್ಯವಿದೆ. ಇದು ಕಿವಿಗೊಡುವವರ ಹೃದಯಗಳನ್ನು ಸ್ಪರ್ಶಿಸುವಂತೆ ಮತ್ತು ಕ್ರಿಯೆಗೈಯಲು ಅವರನ್ನು ಪ್ರಚೋದಿಸುವಂತೆ ನಮಗೆ ಸಹಾಯಮಾಡುವುದು. ನಾವು ಪ್ರಾರ್ಥನಾಪೂರ್ವಕವಾಗಿ ಯೆಹೋವನ ಮೇಲೆ ಆತುಕೊಳ್ಳುವಾಗ, ಯೇಸು ಕ್ರಿಸ್ತನ ಶಿಷ್ಯರಾಗುವಂತೆ ಕೆಲವರಿಗೆ ಸಹಾಯಮಾಡುವುದರಲ್ಲಿ ನಾವು ಪಾಲ್ಗೊಳ್ಳಸಾಧ್ಯವಿದೆ. ಮತ್ತು ಈ ಕೆಲಸವು ಎಷ್ಟು ಪ್ರತಿಫಲದಾಯಕವಾದದ್ದಾಗಿದೆ! ಆದುದರಿಂದ, ಶಿಷ್ಯರನ್ನು ಮಾಡುವ ಉದ್ದೇಶದಿಂದ ಸಾರುವಂಥ ಹುರುಪಿನ ರಾಜ್ಯ ಘೋಷಕರೋಪಾದಿ ಸದಾ ಯೆಹೋವನನ್ನು ಮಹಿಮೆಪಡಿಸುತ್ತಾ ನಾವೆಲ್ಲರೂ ‘ದೇವರ ದೃಷ್ಟಿಯಲ್ಲಿ ಯೋಗ್ಯರಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡೋಣ.’—2 ತಿಮೊಥೆಯ 2:15.
[ಪಾದಟಿಪ್ಪಣಿಗಳು]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
b ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
c ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಕನ್ನಡದಲ್ಲಿ ಲಭ್ಯವಿಲ್ಲ.
ನೀವು ಜ್ಞಾಪಿಸಿಕೊಳ್ಳಬಲ್ಲಿರೋ?
• ದೇವರ ಮಾರ್ಗವು ಇನ್ನೂ ಸರಿಯಾಗಿ ವಿವರಿಸಲ್ಪಡುವ ಆವಶ್ಯಕತೆ ಅಪೊಲ್ಲೋಸನಿಗಿತ್ತೇಕೆ?
• ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅಪೊಸ್ತಲ ಪೌಲನಿಂದ ಯಾವ ವಿಧಗಳಲ್ಲಿ ಪಾಠವನ್ನು ಕಲಿತರು?
• ಅಪೊಸ್ತಲರ ಕೃತ್ಯಗಳು 18ನೆಯ ಅಧ್ಯಾಯದಿಂದ ಶಿಷ್ಯರನ್ನಾಗಿಮಾಡುವ ಕೆಲಸದ ಕುರಿತು ನೀವು ಏನನ್ನು ಕಲಿತಿದ್ದೀರಿ?
• ಶಿಷ್ಯರನ್ನು ಮಾಡಲಿಕ್ಕಾಗಿ ನೀವು ಹೇಗೆ ಅವಕಾಶಗಳನ್ನು ಸೃಷ್ಟಿಸಸಾಧ್ಯವಿದೆ?
[ಪುಟ 18ರಲ್ಲಿರುವ ಚಿತ್ರ]
ಪ್ರಿಸ್ಕಿಲ್ಲ ಮತ್ತು ಅಕ್ವಿಲರು ಅಪೊಲ್ಲೋಸನಿಗೆ ‘ದೇವರ ಮಾರ್ಗವನ್ನು ಇನ್ನೂ ಸರಿಯಾಗಿ ವಿವರಿಸಿದರು’
[ಪುಟ 20ರಲ್ಲಿರುವ ಚಿತ್ರ]
ಅಪೊಲ್ಲೋಸನು ಶಿಷ್ಯರನ್ನಾಗಿಮಾಡುವ ಕೆಲಸದಲ್ಲಿ ಪ್ರವೀಣನಾದನು
[ಪುಟ 21ರಲ್ಲಿರುವ ಚಿತ್ರ]
ಪೌಲನು ತಾನು ಎಲ್ಲಿಗೆ ಹೋದನೋ ಅಲ್ಲೆಲ್ಲಾ ಸಾರಿದನು
[ಪುಟ 23ರಲ್ಲಿರುವ ಚಿತ್ರಗಳು]
ಸಾರಲಿಕ್ಕಾಗಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಿ