ಕೆಲವೇ ಕೈಗಳು ಅನೇಕರಿಗೆ ಆಹಾರ ಉಣಿಸುತ್ತವೆ
“ರೊಟ್ಟಿಗಳನ್ನು ಮುರಿದು [ಯೇಸು] ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಅವರು ಅದನ್ನು ಜನರ ಗುಂಪುಗಳಿಗೆ ಹಂಚಿದರು.”—ಮತ್ತಾ. 14:19.
1-3. ಬೆತ್ಸಾಯಿದದ ನಿರ್ಜನ ಪ್ರದೇಶದಲ್ಲಿ ಸಾವಿರಾರು ಜನರಿಗೆ ಯೇಸು ಹೇಗೆ ಆಹಾರ ಉಣಿಸಿದನೆಂದು ವಿವರಿಸಿ. (ಶೀರ್ಷಿಕೆಯ ಪಕ್ಕದ ಚಿತ್ರ ನೋಡಿ.)
ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. (ಮತ್ತಾಯ 14:14-21 ಓದಿ.) ಕ್ರಿ.ಶ. 32ರ ಪಸ್ಕಹಬ್ಬಕ್ಕೆ ಸ್ವಲ್ಪವೇ ಮೊದಲು ನಡೆದ ಘಟನೆ. ಯೇಸು ಮತ್ತು ಶಿಷ್ಯರು ಗಲಿಲಾಯ ಸಮುದ್ರದ ಉತ್ತರ ತೀರದಲ್ಲಿರುವ ಬೆತ್ಸಾಯಿದ ಹಳ್ಳಿಯ ಹತ್ತಿರದ ನಿರ್ಜನ ಪ್ರದೇಶದಲ್ಲಿದ್ದಾರೆ. ಅವರನ್ನು ಹಿಂಬಾಲಿಸಿ ಸ್ತ್ರೀಯರು, ಮಕ್ಕಳು ಅಲ್ಲದೆ ಗಂಡಸರೇ ಸುಮಾರು 5,000 ಮಂದಿ ಬಂದಿದ್ದಾರೆ!
2 ಈ ಜನರನ್ನು ನೋಡಿ ಯೇಸು ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ವಾಸಿಮಾಡಿದನು. ದೇವರ ರಾಜ್ಯದ ಬಗ್ಗೆ ಅನೇಕ ವಿಷಯಗಳನ್ನು ಬೋಧಿಸಿದನು. ಈಗಾಗಲೇ ತುಂಬ ಹೊತ್ತಾಗಿದ್ದರಿಂದ, ಜನರನ್ನು ಕಳುಹಿಸಿಬಿಡುವಂತೆ ಶಿಷ್ಯರು ಯೇಸುವನ್ನು ಕೇಳಿಕೊಳ್ಳುತ್ತಾರೆ. ಆಗಲಾದರೂ ಅವರು ಹತ್ತಿರದ ಹಳ್ಳಿಗಳಿಗೆ ಹೋಗಿ ಆಹಾರ ಖರೀದಿಸಬಹುದಿತ್ತು. ಆದರೆ ಯೇಸು “ನೀವೇ ಅವರಿಗೆ ಏನನ್ನಾದರೂ ಊಟಕ್ಕೆ ಕೊಡಿರಿ” ಎನ್ನುತ್ತಾನೆ. ಯೇಸು ಏನು ಹೇಳುತ್ತಿದ್ದಾನೆಂದು ಒಂದು ಕ್ಷಣ ಶಿಷ್ಯರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವರ ಹತ್ತಿರ ಇದ್ದದ್ದು ಕೇವಲ ಐದು ರೊಟ್ಟಿ, ಎರಡು ಮೀನು. ಅದರಿಂದ ಆ ಸಾವಿರಾರು ಜನರ ಹೊಟ್ಟೆ ತುಂಬಿಸುವುದಾದರೂ ಹೇಗೆ?
3 ಜನರ ಮೇಲೆ ಅನುಕಂಪಪಟ್ಟು ಯೇಸು ಒಂದು ಅದ್ಭುತ ಮಾಡುತ್ತಾನೆ. ಈ ಅದ್ಭುತಕಾರ್ಯದ ವಿಶೇಷತೆಯೇನೆಂದರೆ ಇದು ನಾಲ್ಕೂ ಸುವಾರ್ತಾ ವೃತ್ತಾಂತಗಳಲ್ಲಿ ದಾಖಲಾಗಿದೆ. (ಮಾರ್ಕ 6:35-44; ಲೂಕ 9:10-17; ಯೋಹಾ. 6:1-13) ಅವರನ್ನು ನೂರು ಮಂದಿ ಮತ್ತು ಐವತ್ತು ಮಂದಿಯಾಗಿ ಹಸಿರು ಹುಲ್ಲಿನ ಮೇಲೆ ಕೂರಿಸುವಂತೆ ಶಿಷ್ಯರಿಗೆ ಯೇಸು ಹೇಳಿದನು. ಅನಂತರ ಸ್ತೋತ್ರ ಸಲ್ಲಿಸಿ, ರೊಟ್ಟಿಗಳನ್ನು ಮುರಿದು ಮೀನುಗಳನ್ನು ಹಂಚಲು ಆರಂಭಿಸಿದನು. ಅವನೇ ಜನರಿಗೆ ಹಂಚುವ ಬದಲು ಅದನ್ನು “ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಅವರು ಅದನ್ನು ಜನರ ಗುಂಪುಗಳಿಗೆ ಹಂಚಿದರು.” ಅಷ್ಟು ಜನ ಊಟಮಾಡಿದ ಮೇಲೂ ಆಹಾರ ಇನ್ನೂ ಮಿಕ್ಕಿತ್ತು! ಹೌದು, ಯೇಸು ಕೆಲವೇ ಮಂದಿಯ ಕೈಗಳಿಂದ ಸಾವಿರಾರು ಜನರಿಗೆ ಉಣಿಸಿದನು.a
4. (1) ಯಾವ ಇನ್ನೊಂದು ಬಗೆಯ ಆಹಾರವನ್ನು ಜನರಿಗೆ ಕೊಡುವುದು ಯೇಸುವಿಗೆ ಹೆಚ್ಚು ಪ್ರಾಮುಖ್ಯವಾಗಿತ್ತು? (2) ಏಕೆ? (3) ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನಾವೇನು ಕಲಿಯುವೆವು?
4 ತನ್ನ ಹಿಂಬಾಲಕರಿಗೆ ಆಧ್ಯಾತ್ಮಿಕ ಆಹಾರ ಕೊಡುವುದು ಯೇಸುವಿಗೆ ಹೆಚ್ಚು ಮುಖ್ಯವಾದ ವಿಷಯವಾಗಿತ್ತು. ಏಕೆಂದರೆ ಆಧ್ಯಾತ್ಮಿಕ ಆಹಾರ, ಅಂದರೆ ದೇವರ ವಾಕ್ಯದಲ್ಲಿರುವ ಸತ್ಯಗಳು ನಿತ್ಯಜೀವ ಪಡೆಯಲು ಸಹಾಯಮಾಡುತ್ತವೆ ಎಂದು ಅವನಿಗೆ ತಿಳಿದಿತ್ತು. (ಯೋಹಾ. 6:26, 27; 17:3) ಜನರ ಕಡೆಗೆ ಕನಿಕರಪಟ್ಟು ಯೇಸು ರೊಟ್ಟಿ, ಮೀನನ್ನು ಒದಗಿಸಿದನು. ಅದೇ ರೀತಿ ಕನಿಕರಪಟ್ಟು ಆತನು ತನ್ನ ಹಿಂಬಾಲಕರಿಗೆ ಆಧ್ಯಾತ್ಮಿಕ ವಿಷಯಗಳನ್ನು ಬೋಧಿಸಲು ತುಂಬ ಸಮಯ ವ್ಯಯಿಸಿದನು. (ಮಾರ್ಕ 6:34) ಆದರೆ ತಾನು ಹೆಚ್ಚು ಸಮಯ ಭೂಮಿಯಲ್ಲಿರಲ್ಲ, ಸ್ವರ್ಗಕ್ಕೆ ಹೋಗುತ್ತೇನೆ ಎಂಬುದು ಆತನಿಗೆ ಗೊತ್ತಿತ್ತು. (ಮತ್ತಾ. 16:21; ಯೋಹಾ. 14:12) ಸ್ವರ್ಗಕ್ಕೆ ಹೋದ ನಂತರ ಯೇಸು ಭೂಮಿಯಲ್ಲಿದ್ದ ತನ್ನ ಹಿಂಬಾಲಕರನ್ನು ಆಧ್ಯಾತ್ಮಿಕವಾಗಿ ಹೇಗೆ ಉಣಿಸಲಿದ್ದನು? ಭೂಮಿಯಲ್ಲಿದ್ದಾಗ ಮಾಡಿದಂತೆಯೇ, ಕೆಲವೇ ಮಂದಿಯ ಕೈಗಳಿಂದ ಅನೇಕರನ್ನು ಉಣಿಸಲಿದ್ದನು. ಆದರೆ ಆ ಕೆಲವೇ ಮಂದಿ ಯಾರು? ಯೇಸು ಹೇಗೆ ಕೆಲವು ಮಂದಿಯ ಮೂಲಕ ಒಂದನೇ ಶತಮಾನದ ಅನೇಕ ಅಭಿಷಿಕ್ತ ಕ್ರೈಸ್ತರಿಗೆ ಉಣಿಸಿದನೆಂದು ಈ ಲೇಖನದಲ್ಲಿ ನೋಡೋಣ. ಮುಂದಿನ ಲೇಖನದಲ್ಲಿ, ನಮ್ಮೆಲ್ಲರಿಗೆ ಪ್ರಾಮುಖ್ಯವಾಗಿರುವ ಈ ಪ್ರಶ್ನೆಗೆ ಉತ್ತರ ತಿಳಿಯೋಣ: “ಇಂದು ನಮ್ಮನ್ನು ಉಣಿಸಲು ಯೇಸು ಉಪಯೋಗಿಸುತ್ತಿರುವ ಕೆಲವು ಮಂದಿ ಯಾರೆಂದು ಕಂಡುಹಿಡಿಯುವುದು ಹೇಗೆ?”
ಕೆಲವು ಮಂದಿಯನ್ನು ಯೇಸು ಆರಿಸಿದನು
5, 6. (1) ತನ್ನ ಮರಣದ ನಂತರವೂ ಶಿಷ್ಯರಿಗೆ ಆಧ್ಯಾತ್ಮಿಕ ಆಹಾರ ಸಿಗುತ್ತಾ ಇರಬೇಕೆಂಬ ಉದ್ದೇಶದಿಂದ ಯೇಸು ಯಾವ ದೊಡ್ಡ ನಿರ್ಣಯವನ್ನು ಕೈಗೊಂಡನು? (2) ತನ್ನ ಮರಣದ ನಂತರ ಶಿಷ್ಯರು ವಹಿಸಬೇಕಿದ್ದ ಪ್ರಮುಖ ಜವಾಬ್ದಾರಿಗಾಗಿ ಯೇಸು ಅವರನ್ನು ಹೇಗೆ ಸಿದ್ಧಪಡಿಸಿದನು?
5 ಕುಟುಂಬದ ಜವಾಬ್ದಾರಿಯುತ ಶಿರಸ್ಸು ತನ್ನ ಮರಣದ ನಂತರವೂ ಕುಟುಂಬಕ್ಕೆ ಬೇಕಾದ ಅಗತ್ಯಗಳು ಪೂರೈಕೆಯಾಗುವಂತೆ ಏರ್ಪಾಡು ಮಾಡುತ್ತಾನೆ. ಹಾಗೆಯೇ ಕ್ರೈಸ್ತ ಸಭೆಯ ಶಿರಸ್ಸಾಗಲಿದ್ದ ಯೇಸು, ತಾನು ಮರಣಪಟ್ಟ ನಂತರವೂ ತನ್ನ ಹಿಂಬಾಲಕರ ಆಧ್ಯಾತ್ಮಿಕ ಅಗತ್ಯಗಳು ಪೂರೈಕೆಯಾಗುವಂತೆ ಏರ್ಪಾಡುಮಾಡಿದನು. (ಎಫೆ. 1:22) ಉದಾಹರಣೆಗೆ, ಯೇಸು ಸಾಯುವ ಸುಮಾರು ಎರಡು ವರ್ಷಗಳ ಮೊದಲು ಒಂದು ದೊಡ್ಡ ನಿರ್ಣಯ ಮಾಡಿದನು. ಭವಿಷ್ಯತ್ತಿನಲ್ಲಿ ಅನೇಕರಿಗೆ ಉಣಿಸಲು ಉಪಯೋಗಿಸಲಿದ್ದ ಕೆಲವು ಮಂದಿಯಲ್ಲಿ ಮೊದಲಿಗರನ್ನು ಆಯ್ಕೆಮಾಡಿದನು. ಹೇಗೆಂದು ನೋಡೋಣ.
6 ಇಡೀ ರಾತ್ರಿ ಪ್ರಾರ್ಥಿಸಿದ ಬಳಿಕ ಯೇಸು ತನ್ನ ಶಿಷ್ಯರನ್ನು ಒಟ್ಟುಗೂಡಿಸಿ ಅವರಲ್ಲಿ 12 ಮಂದಿಯನ್ನು ಅಪೊಸ್ತಲರಾಗಿ ಆರಿಸಿಕೊಂಡನು. (ಲೂಕ 6:12-16) ಅಲ್ಲಿಂದ ಮುಂದಿನ ಎರಡು ವರ್ಷ ಯೇಸು ಆ 12 ಮಂದಿಯೊಂದಿಗೆ ಹೆಚ್ಚು ಆಪ್ತನಾದನು. ಅವರಿಗೆ ತನ್ನ ಮಾತಿನಿಂದಲೂ ಮಾದರಿಯಿಂದಲೂ ಕಲಿಸಿದನು. ಅವರು ಸಾಕಷ್ಟು ಕಲಿಯಲಿಕ್ಕಿದೆ ಎಂದು ಯೇಸುವಿಗೆ ಗೊತ್ತಿತ್ತು. ಹಾಗಾಗಿ ಅವರನ್ನು ‘ಶಿಷ್ಯರು’ ಎಂದು ಸಹ ಕರೆದದ್ದು ಸೂಕ್ತ. (ಮತ್ತಾ. 11:1; 20:17) ಅವರಿಗೆ ವೈಯಕ್ತಿಕವಾಗಿ ಬಹುಮೂಲ್ಯವಾದ ಸಲಹೆಗಳನ್ನು ಕೊಟ್ಟನು. ಶುಶ್ರೂಷೆಯಲ್ಲಿ ತುಂಬ ತರಬೇತಿ ಕೊಟ್ಟನು. (ಮತ್ತಾ. 10:1-42; 20:20-23; ಲೂಕ 8:1; 9:52-55) ಹೀಗೆ ತಾನು ಸತ್ತು ಸ್ವರ್ಗಕ್ಕೆ ಹಿಂದಿರುಗಿದ ಮೇಲೆ ಶಿಷ್ಯರು ವಹಿಸಬೇಕಿದ್ದ ದೊಡ್ಡ ಜವಾಬ್ದಾರಿಗಾಗಿ ಯೇಸು ಅವರನ್ನು ಸಿದ್ಧಪಡಿಸುತ್ತಿದ್ದನು.
7. ಅಪೊಸ್ತಲರು ಯಾವುದಕ್ಕೆ ಹೆಚ್ಚು ಗಮನಕೊಡಲಿರುವರು ಎನ್ನುವುದರ ಸುಳಿವನ್ನು ಯೇಸು ಹೇಗೆ ಕೊಟ್ಟನು?
7 ಈ ಅಪೊಸ್ತಲರು ಯಾವ ಪಾತ್ರ ವಹಿಸಲಿದ್ದರು? ಕ್ರಿ.ಶ. 33ರ ಪಂಚಾಶತ್ತಮ ಹತ್ತಿರವಾದಂತೆ ಅಪೊಸ್ತಲರಿಗೆ ತಾವು “ಮೇಲ್ವಿಚಾರಣೆಯ ಸ್ಥಾನ” ವಹಿಸಲಿದ್ದೇವೆಂಬ ವಿಷಯ ಸ್ಪಷ್ಟವಾಯಿತು. (ಅ. ಕಾ. 1:20) ಅವರು ಯಾವುದಕ್ಕೆ ಹೆಚ್ಚು ಗಮನ ಕೊಡಲಿದ್ದರು? ಯೇಸು ಪುನರುತ್ಥಾನದ ನಂತರ ಅಪೊಸ್ತಲ ಪೇತ್ರನಿಗೆ ಹೇಳಿದ ಮಾತುಗಳಿಂದ ಅದು ತಿಳಿಯುತ್ತದೆ. (ಯೋಹಾನ 21:1, 2, 15-17 ಓದಿ.) ಇತರ ಕೆಲವು ಅಪೊಸ್ತಲರ ಸಮ್ಮುಖದಲ್ಲಿ ಯೇಸು ಪೇತ್ರನಿಗೆ ಹೀಗಂದನು: “ನನ್ನ ಚಿಕ್ಕ ಕುರಿಗಳನ್ನು ಮೇಯಿಸು.” ಹೀಗೆ ಹೇಳುವ ಮೂಲಕ, ಅನೇಕರಿಗೆ ಆಧ್ಯಾತ್ಮಿಕ ಆಹಾರವನ್ನು ಉಣಿಸಲು ಯೇಸು ಉಪಯೋಗಿಸಲಿರುವ ಕೆಲವೇ ಮಂದಿಯಲ್ಲಿ ಅಪೊಸ್ತಲರು ಸೇರಿರುವರು ಎಂದು ಸೂಚಿಸಿದನು. ಯೇಸುವಿಗೆ ತನ್ನ “ಚಿಕ್ಕ ಕುರಿಗಳ” ಬಗ್ಗೆ ಎಷ್ಟು ಕಾಳಜಿಯಿದೆ ಎನ್ನುವುದರ ಮನಸ್ಪರ್ಶಿ ಹಾಗೂ ಸ್ಪಷ್ಟ ನಿದರ್ಶನ ಇದಾಗಿದೆ.b
ಪಂಚಾಶತ್ತಮದಿಂದ ಹಿಡಿದು ಆಹಾರದ ಪೂರೈಕೆ
8. ಪಂಚಾಶತ್ತಮದಂದು ಹೊಸದಾಗಿ ಕ್ರೈಸ್ತರಾದವರು ಕ್ರಿಸ್ತನು ಉಪಯೋಗಿಸುತ್ತಿದ್ದ ಮಾಧ್ಯಮವನ್ನು ಸ್ಪಷ್ಟವಾಗಿ ಗುರುತಿಸಿದ್ದೇವೆಂದು ಹೇಗೆ ತೋರಿಸಿದರು?
8 ಕ್ರಿ.ಶ. 33ರ ಪಂಚಾಶತ್ತಮದಿಂದ ಹಿಡಿದು ಯೇಸು ಅಭಿಷಿಕ್ತ ಶಿಷ್ಯರಿಗೆ ಉಣಿಸಲು ತನ್ನ ಅಪೊಸ್ತಲರನ್ನು ಮಾಧ್ಯಮವಾಗಿ ಉಪಯೋಗಿಸಿದನು. (ಅಪೊಸ್ತಲರ ಕಾರ್ಯಗಳು 2:41, 42 ಓದಿ.) ಪಂಚಾಶತ್ತಮ ದಿನದಂದು ಪವಿತ್ರಾತ್ಮದಿಂದ ಅಭಿಷೇಕಗೊಂಡ ಯೆಹೂದ್ಯರು, ಯೆಹೂದಿ ಮತಾವಲಂಬಿಗಳು ಆ ಮಾಧ್ಯಮವನ್ನು ಸ್ಪಷ್ಟವಾಗಿ ಗುರುತಿಸಿದರು. ಮತ್ತು ‘ಅಪೊಸ್ತಲರ ಬೋಧನೆಗೆ ತಮ್ಮನ್ನು ಮೀಸಲಾಗಿಟ್ಟುಕೊಳ್ಳುವುದನ್ನು’ ಮುಂದುವರಿಸಿದರು. ಒಬ್ಬ ವಿದ್ವಾಂಸನು ಹೇಳುವ ಪ್ರಕಾರ “ತಮ್ಮನ್ನು ಮೀಸಲಾಗಿಟ್ಟುಕೊಳ್ಳುವುದು” ಎಂದು ಭಾಷಾಂತರವಾಗಿರುವ ಗ್ರೀಕ್ ಕ್ರಿಯಾಪದದ ಅರ್ಥ “ಒಂದು ಕ್ರಿಯೆಗೆ ದೃಢಚಿತ್ತದ, ಏಕಚಿತ್ತದ ನಿಷ್ಠೆ” ತೋರಿಸುವುದು. ಹೊಸದಾಗಿ ಕ್ರೈಸ್ತರಾದ ಮಂದಿ ಆಧ್ಯಾತ್ಮಿಕವಾಗಿ ಹಸಿದಿದ್ದರು. ಆಧ್ಯಾತ್ಮಿಕ ಆಹಾರ ಪಡೆಯಲು ಯಾರ ಕಡೆಗೆ ನೋಡಬೇಕೆಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಹಾಗಾಗಿ ಯೇಸುವಿನ ಮಾತುಗಳ, ಕ್ರಿಯೆಗಳ ಹಾಗೂ ಶಾಸ್ತ್ರಗ್ರಂಥದಲ್ಲಿ ಅವನ ಬಗ್ಗೆ ಹೇಳಿರುವ ವಿಷಯಗಳ ವಿವರಣೆಗಾಗಿ ಅಪೊಸ್ತಲರ ಕಡೆಗೆ ನೋಡಿದರು. ಅವರ ಕಡೆಗೆ ಅಚಲ ನಿಷ್ಠೆ ತೋರಿಸಿದರು.c—ಅ. ಕಾ. 2:22-36.
9. ಕುರಿಗಳನ್ನು ಮೇಯಿಸುವ ಜವಾಬ್ದಾರಿಯ ಮೇಲೆ ತಾವು ಗಮನ ಕೇಂದ್ರೀಕರಿಸಿದ್ದೇವೆಂದು ಅಪೊಸ್ತಲರು ಹೇಗೆ ತೋರಿಸಿಕೊಟ್ಟರು?
9 ಅಪೊಸ್ತಲರು ಯೇಸುವಿನ ಕುರಿಗಳನ್ನು ಮೇಯಿಸುವ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿದರು. ಉದಾಹರಣೆಗೆ, ಆಗಷ್ಟೇ ಸ್ಥಾಪಿತವಾದ ಸಭೆಯಲ್ಲಿ ಉದ್ಭವಿಸಿದ ಒಂದು ಸಮಸ್ಯೆಯನ್ನು ಅವರು ಹೇಗೆ ನಿಭಾಯಿಸಿದರು ಎಂದು ಗಮನಿಸಿ. ಇದು ಕೇವಲ ಶಾರೀರಿಕ ಊಟಕ್ಕೆ ಸಂಬಂಧಪಟ್ಟ ವಿಷಯವಾಗಿತ್ತಾದರೂ ಅದರಿಂದ ಸಹೋದರರ ಭಾವನೆಗಳಿಗೆ ಪೆಟ್ಟಾಗುವ ಮತ್ತು ಅವರಲ್ಲಿ ವಿಭಜನೆಯಾಗುವ ಸಾಧ್ಯತೆಯಿತ್ತು. ದೈನಂದಿನ ಆಹಾರದ ವಿತರಣೆಯಲ್ಲಿ ಗ್ರೀಕ್ ಭಾಷೆಯ ವಿಧವೆಯರನ್ನು ಅಲಕ್ಷಿಸಲಾಗುತ್ತಿತ್ತು. ಆದರೆ ಹೀಬ್ರು ಭಾಷೆಯ ವಿಧವೆಯರಿಗೆ ಆ ರೀತಿ ಉಪಚರಿಸಲಿಲ್ಲ. ಈ ಸೂಕ್ಷ್ಮ ಸನ್ನಿವೇಶವನ್ನು ಅಪೊಸ್ತಲರು ಹೇಗೆ ನಿಭಾಯಿಸಿದರು? ಈ ಅಪೊಸ್ತಲರಲ್ಲಿ ಹೆಚ್ಚಿನವರು ಯೇಸು ಅದ್ಭುತವಾಗಿ ಜನರಿಗೆ ಊಟ ಕೊಟ್ಟಾಗ ಅದನ್ನು ವಿತರಿಸುವುದರಲ್ಲಿ ಭಾಗವಹಿಸಿದ್ದರು. ಹಾಗಿದ್ದರೂ ಅವರು ಏಳು ಮಂದಿ ಅರ್ಹ ಸಹೋದರರನ್ನು “ಆವಶ್ಯಕ ಕೆಲಸ” ಅಂದರೆ ಆಹಾರ ವಿತರಣೆಯನ್ನು ನೋಡಿಕೊಳ್ಳುವಂತೆ ನೇಮಿಸಿದರು. ತಾವೂ ಇನ್ನಿತರ ಅಪೊಸ್ತಲರೂ ಹೆಚ್ಚು ಪ್ರಮುಖವಾದ ಆಧ್ಯಾತ್ಮಿಕ ಆಹಾರ ವಿತರಣೆಯ ಮೇಲೆ ಗಮನ ಕೇಂದ್ರೀಕರಿಸಿದರು. ಹೀಗೆ “ವಾಕ್ಯಕ್ಕೆ ಸಂಬಂಧಿಸಿದ ಶುಶ್ರೂಷಾ ಕಾರ್ಯದಲ್ಲಿ” ಅವರು ನಿರತರಾಗಿದ್ದರು.—ಅ. ಕಾ. 6:1-6.
10. ಯೆರೂಸಲೇಮಿನಲ್ಲಿದ್ದ ಅಪೊಸ್ತಲರನ್ನೂ ಹಿರೀಪುರುಷರನ್ನೂ ಕ್ರಿಸ್ತನು ಹೇಗೆ ಉಪಯೋಗಿಸಿದನು?
10 ಕ್ರಿ.ಶ. 49ರಷ್ಟಕ್ಕೆ ಉಳಿದಿದ್ದ ಅಪೊಸ್ತಲರೊಂದಿಗೆ ಇತರ ಅರ್ಹ ಹಿರಿಯರು ಜೊತೆಗೂಡಿದರು. (ಅಪೊಸ್ತಲರ ಕಾರ್ಯಗಳು 15:1, 2 ಓದಿ.) ‘ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರೀಪುರುಷರೂ’ ಆಡಳಿತ ಮಂಡಲಿಯಾಗಿ ಕೆಲಸಮಾಡಿದರು. ಅರ್ಹ ಪುರುಷರ ಈ ಚಿಕ್ಕ ಗುಂಪನ್ನು ಸಭೆಯ ಶಿರಸ್ಸಾಗಿರುವ ಕ್ರಿಸ್ತನು, ಶಾಸ್ತ್ರಗ್ರಂಥದ ತತ್ವಗಳಿಗೆ ಸಂಬಂಧಿಸಿದ ವಿಷಯಗಳನ್ನು ಇತ್ಯರ್ಥಗೊಳಿಸಲು, ರಾಜ್ಯದ ಸುವಾರ್ತೆ ಸಾರುವ ಹಾಗೂ ಬೋಧಿಸುವ ಕೆಲಸವನ್ನು ಮಾರ್ಗದರ್ಶಿಸಲು ಹಾಗೂ ಅದರ ಮೇಲ್ವಿಚಾರಣೆ ಮಾಡಲು ಉಪಯೋಗಿಸಿದನು.—ಅ. ಕಾ. 15:6-29; 21:17-19; ಕೊಲೊ. 1:18.
11, 12. (1) ಒಂದನೇ ಶತಮಾನದ ಸಭೆಗಳಿಗೆ ಉಣಿಸಲು ಕ್ರಿಸ್ತನು ಮಾಡಿದ ಏರ್ಪಾಡನ್ನು ಯೆಹೋವನು ಆಶೀರ್ವದಿಸಿದನು ಎಂದು ಯಾವುದು ತೋರಿಸುತ್ತದೆ? (2) ಆಧ್ಯಾತ್ಮಿಕವಾಗಿ ಉಣಿಸಲು ಕ್ರಿಸ್ತನು ಬಳಸುತ್ತಿದ್ದ ಮಾಧ್ಯಮವನ್ನು ಸ್ಪಷ್ಟವಾಗಿ ಗುರುತಿಸಲು ಹೇಗೆ ಸಾಧ್ಯವಿತ್ತು?
11 ಒಂದನೇ ಶತಮಾನದ ಸಭೆಗಳಿಗೆ ಆಧ್ಯಾತ್ಮಿಕ ಆಹಾರ ಕೊಡಲು ಕ್ರಿಸ್ತನು ಮಾಡಿದ ಈ ಏರ್ಪಾಡನ್ನು ಯೆಹೋವನು ಆಶೀರ್ವದಿಸಿದನೇ? ಹೌದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದನ್ನು ನಾವು ಹೇಗೆ ಹೇಳಬಹುದು? ಅಪೊಸ್ತಲರ ಕಾರ್ಯಗಳು ಪುಸ್ತಕದಲ್ಲಿ ಈ ಏರ್ಪಾಡಿನ ಕುರಿತಾದ ವರದಿ ಹೀಗಿದೆ: “[ಅಪೊಸ್ತಲ ಪೌಲ ಹಾಗೂ ಅವನ ಸಂಗಡಿಗರು] ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಾ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರೀಪುರುಷರೂ ತೀರ್ಮಾನಿಸಿದ ನಿಯಮಗಳನ್ನು ಪಾಲಿಸುವಂತೆ [ಅಲ್ಲಿನ] ಜನರಿಗೆ ತಿಳಿಯಪಡಿಸಿದರು. ಆದುದರಿಂದ ಸಭೆಗಳು ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಾ ದಿನೇ ದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದವು.” (ಅ. ಕಾ. 16:4, 5) ಹೌದು, ಸಭೆಗಳು ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಗೆ ನಿಷ್ಠೆಯಿಂದ ಸಹಕಾರ ನೀಡಿದ್ದರಿಂದ ಹೆಚ್ಚೆಚ್ಚು ಬೆಳೆದವು. ಇದರಿಂದ, ಸಭೆಗಳನ್ನು ಆಧ್ಯಾತ್ಮಿಕವಾಗಿ ಉಣಿಸಲು ತನ್ನ ಮಗನು ಮಾಡಿದ ಏರ್ಪಾಡನ್ನು ಯೆಹೋವನು ಆಶೀರ್ವದಿಸಿದನೆಂದು ತಿಳಿದುಬರುವುದಿಲ್ಲವೆ? ಯೆಹೋವನ ಆಶೀರ್ವಾದವಿದ್ದರೆ ಮಾತ್ರ ಆಧ್ಯಾತ್ಮಿಕ ಸಮೃದ್ಧಿ ಸಾಧ್ಯ.—ಜ್ಞಾನೋ. 10:22; 1 ಕೊರಿಂ. 3:6, 7.
12 ನಾವು ಇಲ್ಲಿಯವರೆಗೆ ನೋಡಿದ ಪ್ರಕಾರ ಯೇಸು ತನ್ನ ಹಿಂಬಾಲಕರಿಗೆ ಉಣಿಸಲು ಈ ನಮೂನೆಯನ್ನು ಅನುಸರಿಸಿದನು: “ಕೆಲವೇ ಕೈಗಳಿಂದ ಅನೇಕರಿಗೆ ಉಣಿಸಿದನು.” ಆಧ್ಯಾತ್ಮಿಕವಾಗಿ ಉಣಿಸಲು ಯೇಸು ಬಳಸುತ್ತಿದ್ದ ಈ ಮಾಧ್ಯಮವನ್ನು ಎಲ್ಲರೂ ಸುಲಭವಾಗಿ ಗುರುತಿಸಬಹುದಿತ್ತು. ಹೇಗೆ? ಆಡಳಿತ ಮಂಡಲಿಯಲ್ಲಿ ಅಪೊಸ್ತಲರು ಇರುವುದೇ ಅದರ ಹಿಂದೆ ಯೆಹೋವನ ಹಾಗೂ ಕ್ರಿಸ್ತನ ಬೆಂಬಲವಿದೆ ಎನ್ನುವುದರ ಪುರಾವೆಯಾಗಿತ್ತು. “ಅಪೊಸ್ತಲರ ಕೈಗಳಿಂದ ಜನರ ನಡುವೆ ಅನೇಕ ಸೂಚಕಕಾರ್ಯಗಳೂ ಆಶ್ಚರ್ಯಕಾರ್ಯಗಳೂ ನಡೆಯುತ್ತಾ ಇದ್ದವು” ಎಂದು ಅಪೊಸ್ತಲರ ಕಾರ್ಯಗಳು 5:12 ರಲ್ಲಿ ಹೇಳಲಾಗಿದೆ.d ಹಾಗಾಗಿ ಅಂದಿನ ಕ್ರೈಸ್ತರಿಗೆ ‘ಕ್ರಿಸ್ತನು ತನ್ನ ಕುರಿಗಳನ್ನು ಮೇಯಿಸಲು ಉಪಯೋಗಿಸುತ್ತಿರುವ ಮಾಧ್ಯಮ ಯಾವುದು?’ ಎಂಬ ಪ್ರಶ್ನೆ ಬರಲು ಸಾಧ್ಯವೇ ಇರಲಿಲ್ಲ. ಆದರೆ ಒಂದನೇ ಶತಮಾನದ ಕೊನೆಯಷ್ಟಕ್ಕೆ ಸನ್ನಿವೇಶ ಬದಲಾಯಿತು.
ಹೆಚ್ಚು ಕಳೆಗಳು ಮತ್ತು ಕಡಿಮೆ ಗೋದಿ
13, 14. (1) ಯೇಸು ಯಾವುದರ ಬಗ್ಗೆ ಎಚ್ಚರಿಸಿದನು? (2) ಆ ಎಚ್ಚರಿಕೆ ಯಾವಾಗ ನಿಜವಾಗತೊಡಗಿತು? (3) ಯಾವ ಎರಡು ಕಡೆಗಳಿಂದ ವಿರೋಧ ಬರಲಿತ್ತು? (ಟಿಪ್ಪಣಿ ನೋಡಿ.)
13 ಕ್ರೈಸ್ತ ಸಭೆಗೆ ಅಪಾಯ ಬರುವುದೆಂದು ಯೇಸು ಹೇಳಿದ್ದನು. ಗೋದಿ ಮತ್ತು ಕಳೆಗಳ ದೃಷ್ಟಾಂತದಲ್ಲಿ ಈಗಾಗಲೇ ಯೇಸು, ಗೋದಿಯನ್ನು (ಅಭಿಷಿಕ್ತ ಕ್ರೈಸ್ತರು) ಬಿತ್ತಿದ ಹೊಲದಲ್ಲಿ ಕಳೆಗಳನ್ನು (ನಕಲಿ ಕ್ರೈಸ್ತರು) ಬಿತ್ತಲಾಗುವುದು ಎಂದು ಎಚ್ಚರಿಸಿದ್ದನು. “ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ” ನಡೆಯಲಿದ್ದ ಕೊಯ್ಲಿನ ವರೆಗೆ ಎರಡೂ ಒಟ್ಟೊಟ್ಟಿಗೆ ಬೆಳೆಯಲು ಬಿಡಲಾಗುವುದು ಎಂದೂ ಹೇಳಿದ್ದನು. (ಮತ್ತಾ. 13:24-30, 36-43) ಯೇಸುವಿನ ಈ ಮಾತು ನಿಜವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.e
14 ಒಂದನೇ ಶತಮಾನದಲ್ಲಿ ಧರ್ಮಭ್ರಷ್ಟತೆ ಸಭೆಯೊಳಗೆ ಸ್ವಲ್ಪಸ್ವಲ್ಪವಾಗಿ ನುಸುಳಲು ಆರಂಭಿಸಿತು. ಆದರೆ ಯೇಸುವಿನ ನಂಬಿಗಸ್ತ ಅಪೊಸ್ತಲರು ಇಂತಹ ಸುಳ್ಳು ಬೋಧನೆಗಳಿಂದ ಸಭೆ ಕಲುಷಿತವಾಗದಂತೆ ‘ಪ್ರತಿಬಂಧಕವಾಗಿ ಕಾರ್ಯನಡಿಸಿದರು.’ (2 ಥೆಸ. 2:3, 6, 7) ಆದರೆ ಅಪೊಸ್ತಲರಲ್ಲಿ ಕೊನೆಯವರು ಸತ್ತಾಗ ಧರ್ಮಭ್ರಷ್ಟತೆ ಸಭೆಯಲ್ಲಿ ಬೇರುಬಿಟ್ಟು ಹೆಚ್ಚಾಗಿ ಬೆಳೆದು ಶತಮಾನಗಳ ವರೆಗೆ ಹಾಗೆಯೇ ಉಳಿಯಿತು. ಎಷ್ಟೆಂದರೆ ಗೋದಿಗಿಂತ ಕಳೆಗಳೇ ತುಂಬಾ ಆದವು. ಹಾಗಾಗಿ ಆಧ್ಯಾತ್ಮಿಕ ಆಹಾರವನ್ನು ನಿಯತವಾಗಿ ಹಂಚಲು ಒಂದು ಸುಸಂಘಟಿತ ಮಾಧ್ಯಮವಿರಲಿಲ್ಲ. ಆದರೆ ಅದು ಬೇಗನೆ ಬದಲಾಗಲಿತ್ತು. ಯಾವಾಗ?
ಕೊಯ್ಲಿನ ಕಾಲದಲ್ಲಿ ಯಾರು ಆಹಾರ ಉಣಿಸಲಿದ್ದರು?
15, 16. (1) ಬೈಬಲ್ ವಿದ್ಯಾರ್ಥಿಗಳು ಶ್ರದ್ಧೆಯಿಂದ ಮಾಡಿದ ಅಧ್ಯಯನ ಯಾವ ಪ್ರತಿಫಲ ತಂದಿತು? (2) ಇದರಿಂದ ಯಾವ ಪ್ರಶ್ನೆ ಬರುತ್ತೆ?
15 ಗೋದಿ ಮತ್ತು ಕಳೆಗಳು ಬೆಳೆಯುವ ಕಾಲ ಕೊನೆಯಾಗುತ್ತಿದ್ದಂತೆ ಬೈಬಲ್ ಸತ್ಯದ ಕಡೆಗೆ ಕೆಲವರ ಆಸಕ್ತಿ ಬೆಳೆಯತೊಡಗಿತು. 1870ರ ದಶಕದಲ್ಲಿ ಸತ್ಯವನ್ನು ಯಥಾರ್ಥವಾಗಿ ಹುಡುಕುವ ಗುಂಪೊಂದು ಕಳೆಗಳಂತಿದ್ದ ಕ್ರೈಸ್ತಪ್ರಪಂಚದ ನಕಲಿ ಕ್ರೈಸ್ತರಿಂದ ಬೇರ್ಪಟ್ಟು, ಬೈಬಲ್ ಕ್ಲಾಸ್ಗಳನ್ನು ನಡೆಸತೊಡಗಿತು. ದೀನತೆ ಹಾಗೂ ತೆರೆದ ಮನಸ್ಸಿನಿಂದ ಈ ಯಥಾರ್ಥ ಬೈಬಲ್ ವಿದ್ಯಾರ್ಥಿಗಳು ಜಾಗರೂಕತೆಯಿಂದ ಪ್ರಾರ್ಥನಾಪೂರ್ವಕವಾಗಿ ಬೈಬಲನ್ನು ಅಧ್ಯಯನ ಮಾಡತೊಡಗಿದರು.—ಮತ್ತಾ. 11:25.
16 ಬೈಬಲ್ ವಿದ್ಯಾರ್ಥಿಗಳ ಕೂಲಂಕಷ ಅಧ್ಯಯನ ಒಳ್ಳೆ ಪ್ರತಿಫಲ ತಂದಿತು. ಆ ನಿಷ್ಠಾವಂತ ಸ್ತ್ರೀಪುರುಷರು ಬೈಬಲ್ ಸಾಹಿತ್ಯವನ್ನು ಪ್ರಕಾಶಿಸಿ ದೂರದೂರಕ್ಕೂ ಹಂಚುವ ಮೂಲಕ ಸುಳ್ಳು ಬೋಧನೆಗಳನ್ನು ಬಯಲುಪಡಿಸಿದರು. ಬೈಬಲ್ ಸತ್ಯಗಳನ್ನು ತಿಳಿಸಿದರು. ಆಧ್ಯಾತ್ಮಿಕ ಸತ್ಯಕ್ಕಾಗಿ ಕಾದು ಕೂತಿದ್ದ ಅನೇಕ ಯಥಾರ್ಥ ಹೃದಯದ ಜನರ ಮನಮುಟ್ಟುವುದರಲ್ಲಿ ಅವರು ಯಶಸ್ವಿಯಾದರು. ಹಾಗಾದರೆ, 1914ರ ಸಮಯದ ವರೆಗೆ ಇದ್ದ ಇವರನ್ನೇ ಕ್ರಿಸ್ತನು ತನ್ನ ಕುರಿಗಳಿಗೆ ಆಹಾರ ಹಂಚಲು ಮಾಧ್ಯಮವಾಗಿ ಬಳಸಿದನಾ? ಇಲ್ಲ. ಏಕೆಂದರೆ ಗೋದಿ ಇನ್ನೂ ಬೆಳೆಯುತ್ತಲೇ ಇತ್ತು. ಅದರರ್ಥ ಆಧ್ಯಾತ್ಮಿಕ ಆಹಾರವನ್ನು ಹಂಚಲು ಉಪಯೋಗಿಸಲಿದ್ದ ಮಾಧ್ಯಮ ಇನ್ನೂ ಬೆಳವಣಿಗೆಯ ಹಂತದಲ್ಲಿತ್ತು. ಗೋದಿಯಂತಿದ್ದ ಸತ್ಯಕ್ರೈಸ್ತರಿಂದ ಕಳೆಗಳಂತಿದ್ದ ಸುಳ್ಳುಕ್ರೈಸ್ತರನ್ನು ಬೇರ್ಪಡಿಸುವ ಸಮಯ ಇನ್ನೂ ಬಂದಿರಲಿಲ್ಲ.
17. 1914ರಲ್ಲಿ ಯಾವ ಪ್ರಮುಖ ಘಟನೆಗಳು ನಡೆಯತೊಡಗಿದವು?
17 ಹಿಂದಿನ ಲೇಖನದಲ್ಲಿ ಕಲಿತಂತೆ 1914ರಲ್ಲಿ ಕೊಯ್ಲಿನ ಕಾಲ ಆರಂಭವಾಯಿತು. ಆ ವರ್ಷದಲ್ಲಿ ಅನೇಕ ಬದಲಾವಣೆಗಳು ಆಗತೊಡಗಿದವು. ಯೇಸು ರಾಜನಾಗಿ ಸಿಂಹಾಸನವೇರಿದನು. ಕಡೇ ದಿವಸಗಳ ಆರಂಭವಾಯಿತು. (ಪ್ರಕ. 11:15) 1914ರಿಂದ 1919ರ ಆರಂಭದ ತಿಂಗಳುಗಳ ವರೆಗೆ ಯೇಸು ತನ್ನ ತಂದೆಯೊಂದಿಗೆ ಆಧ್ಯಾತ್ಮಿಕ ಆಲಯದ ಪರೀಕ್ಷೆ ಮಾಡಿದನು ಮತ್ತು ಶುದ್ಧಿಮಾಡಿದನು.f (ಮಲಾ. 3:1-4) ನಂತರ 1919ರಿಂದ ಗೋದಿಯನ್ನು ಒಟ್ಟುಗೂಡಿಸುವ ಸಮಯ ಆರಂಭವಾಗಲಿತ್ತು. ಕ್ರಿಸ್ತನು ಆಧ್ಯಾತ್ಮಿಕ ಆಹಾರ ಹಂಚಲು ಒಂದು ಸಂಘಟಿತ ಮಾಧ್ಯಮವನ್ನು ಈ ಸಮಯದಲ್ಲಿ ನೇಮಿಸಿದನಾ? ಹೌದು!
18. (1) ಯಾವ ನೇಮಕ ಮಾಡುತ್ತೇನೆಂದು ಯೇಸು ಹೇಳಿದ್ದನು? (2) ಕಡೇ ದಿವಸಗಳ ಆರಂಭದ ನಂತರ ಯಾವ ಕ್ಲಿಷ್ಟಕರ ಪ್ರಶ್ನೆ ಎದ್ದಿತು?
18 ಅಂತ್ಯದ ಬಗ್ಗೆ ಯೇಸು ಪ್ರವಾದನೆ ಹೇಳುವಾಗ, “ತಕ್ಕ ಸಮಯಕ್ಕೆ” ಆಧ್ಯಾತ್ಮಿಕ ಆಹಾರವನ್ನು ಹಂಚಲು ಒಂದು ಮಾಧ್ಯಮವನ್ನು ನೇಮಿಸುವೆನು ಎಂದು ಸಹ ಹೇಳಿದ್ದನು. (ಮತ್ತಾ. 24:45-47) ಯಾವ ಮಾಧ್ಯಮವನ್ನು ಅವನು ನೇಮಿಸಲಿದ್ದನು? ಯೇಸು ಒಂದನೇ ಶತಮಾನದಲ್ಲಿ ಮಾಡಿದಂತೆಯೇ ಈ ಸಮಯದಲ್ಲೂ ಕೆಲವೇ ಕೈಗಳಿಂದ ಅನೇಕರಿಗೆ ಉಣಿಸಲಿದ್ದನು. ಕಡೇ ದಿವಸಗಳು ಪ್ರಾರಂಭವಾದಾಗ, ಆ ಕೆಲವರು ಯಾರು? ಎಂಬ ಪ್ರಶ್ನೆ ಎದ್ದಿತು. ಈ ಪ್ರಶ್ನೆಗೆ ಮತ್ತು ಯೇಸುವಿನ ಪ್ರವಾದನೆಯ ಕುರಿತಾದ ಇನ್ನು ಕೆಲವು ಪ್ರಶ್ನೆಗಳಿಗೆ ನಾವು ಮುಂದಿನ ಲೇಖನದಲ್ಲಿ ಉತ್ತರ ತಿಳಿಯೋಣ.
a ಪ್ಯಾರ 3: [1] ಇನ್ನೊಂದು ಸಂದರ್ಭದಲ್ಲಿ ಇದೇ ರೀತಿ ಯೇಸು, ಸ್ತ್ರೀಯರು-ಮಕ್ಕಳಲ್ಲದೆ 4,000 ಗಂಡಸರಿಗೆ ಆಹಾರ ಕೊಟ್ಟನು. ಇಲ್ಲಿಯೂ ಅವನು ಆಹಾರವನ್ನು “ಶಿಷ್ಯರಿಗೆ ಕೊಟ್ಟನು ಮತ್ತು ಅವರು ಜನರ ಗುಂಪಿಗೆ ಹಂಚಿಕೊಟ್ಟರು.”—ಮತ್ತಾ. 15:32-38.
b ಪ್ಯಾರ 7: [2] ಪೇತ್ರನ ಸಮಯದಲ್ಲಿ, ಯಾರು “ಚಿಕ್ಕ ಕುರಿ”ಗಳಾಗಿ ಆಹಾರ ಪಡೆದರೋ ಅವರೆಲ್ಲರಿಗೆ ಸ್ವರ್ಗೀಯ ನಿರೀಕ್ಷೆಯಿತ್ತು.
c ಪ್ಯಾರ 8: [3] ಹೊಸದಾಗಿ ಕ್ರೈಸ್ತರಾದವರು ‘ಅಪೊಸ್ತಲರ ಬೋಧನೆಗೆ ತಮ್ಮನ್ನು ಮೀಸಲಾಗಿಟ್ಟುಕೊಳ್ಳುವುದನ್ನು’ ಮುಂದುವರಿಸಿದರು ಎನ್ನುವುದೇ ತೋರಿಸುತ್ತದೆ ಅಪೊಸ್ತಲರು ನಿಯತವಾಗಿ ಬೋಧಿಸುತ್ತಿದ್ದರು ಎಂದು. ಕೆಲವು ಅಪೊಸ್ತಲರ ಬೋಧನೆ ಶಾಶ್ವತವಾಗಿ ಪ್ರೇರಿತ ಪುಸ್ತಕಗಳಾಗಿ ಬರೆಯಲ್ಪಟ್ಟಿತು. ಇಂದು ಅವು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವಾಗಿ ನಮ್ಮಲ್ಲಿವೆ.
d ಪ್ಯಾರ 12: [4] ಅಪೊಸ್ತಲರಲ್ಲದೆ ಇತರರು ಕೂಡ ಪವಿತ್ರಾತ್ಮದ ವರವನ್ನು ಪಡಕೊಂಡರು. ಅನೇಕ ಸಂದರ್ಭಗಳಲ್ಲಿ ಈ ಅದ್ಭುತ ವರಗಳನ್ನು ಅಪೊಸ್ತಲರಿಂದ ನೇರವಾಗಿ ಅಥವಾ ಅವರ ಉಪಸ್ಥಿತಿಯಲ್ಲಿ ದಾಟಿಸಲಾಯಿತು.—ಅ. ಕಾ. 8:14-18; 10:44, 45.
e ಪ್ಯಾರ 13: [5] ಅಪೊಸ್ತಲರ ಕಾರ್ಯಗಳು 20:29, 30ರಲ್ಲಿರುವ ಪೌಲನ ಮಾತುಗಳಿಂದ ಗೊತ್ತಾಗುತ್ತದೆ, ಸಭೆಗೆ ಎರಡು ಕಡೆಗಳಿಂದ ಆಕ್ರಮಣ ಆಗುತ್ತದೆ ಅಂತ. ಒಂದು, ಸುಳ್ಳು ಕ್ರೈಸ್ತರು (“ಕಳೆಗಳು”) “ಮಧ್ಯೆ ಪ್ರವೇಶಿಸುವ” ಮೂಲಕ. ಎರಡನೆಯದು, ಸತ್ಯಕ್ರೈಸ್ತರ ‘ಒಳಗಿಂದಲೇ’ ಕೆಲವರು ಭ್ರಷ್ಟರಾಗಿ “ವಕ್ರವಾದ ವಿಷಯಗಳನ್ನು” ಮಾತಾಡುವ ಮೂಲಕ.