ಯೆಹೋವನ ರಾಜ್ಯವನ್ನು ಧೈರ್ಯದಿಂದ ಸಾರು!
“ಅವನು . . . ತನ್ನ ಬಳಿಗೆ ಬರುವವರೆಲ್ಲರನ್ನು ಸೇರಿಸಿಕೊಂಡು ದೇವರ ರಾಜ್ಯವನ್ನು ಪ್ರಸಿದ್ಧಪಡಿಸುತ್ತಾ . . . ಇದ್ದನು..”—ಅಪೊಸ್ತಲರ ಕೃತ್ಯ 28:30, 31.
1, 2. ಅಪೊಸ್ತಲ ಪೌಲನಿಗೆ ದೈವಿಕ ಬೆಂಬಲದ ಯಾವ ಸಾಬೀತು ಇತ್ತು, ಮತ್ತು ಅವನು ಯಾವ ಮಾದರಿಯನ್ನಿಟ್ಟನು?
ಯೆಹೋವನು ರಾಜ್ಯ ಘೋಷಕರನ್ನು ಸದಾ ಸಮರ್ಥಿಸುತ್ತಾನೆ. ಇದು ಅಪೊಸ್ತಲ ಪೌಲನ ವಿಷಯದಲ್ಲಿ ಎಷ್ಟು ಸತ್ಯವಾಗಿತ್ತು! ಅವನು ದೈವಿಕ ಬೆಂಬಲದಿಂದ ಅಧಿಪತಿಗಳ ಮುಂದೆ ನಿಂತು, ದೊಂಬಿಗಳನ್ನು ಸಹಿಸಿ ಕೊಂಡು ಧೈರ್ಯದಿಂದ ಯೆಹೋವನ ರಾಜ್ಯವನ್ನು ಸಾರಿದನು.
2 ರೋಮಿನಲ್ಲಿ ಕೈದಿಯಾಗಿದ್ದಾಗಲೂ ಪೌಲನು, “ತನ್ನ ಬಳಿಗೆ ಬರುವವರೆಲ್ಲರನ್ನು ಸೇರಿಸಿಕೊಂಡು . . . ದೇವರ ರಾಜ್ಯವನ್ನು ಪ್ರಸಿದ್ಧಿ” ಪಡಿಸಿದನು. (ಅಪೊಸ್ತಲರ ಕೃತ್ಯ 28:30, 31) ಇದು ಯೆಹೋವನ ಸಾಕ್ಷಿಗಳಿಗೆ ಇಂದು ಎಂತಹ ಉತ್ತಮ ಮಾದರಿ! ಲೂಕನು ವರದಿ ಮಾಡಿರುವಂತೆ, ನಾವು ಬೈಬಲಿನ ಅಪೊಸ್ತಲರ ಕೃತ್ಯಗಳ ಅಂತಿಮ ಅಧ್ಯಾಯಗಳಲ್ಲಿ ಪೌಲನ ಶುಶ್ರೂಷೆಯ ಕುರಿತು ಇನ್ನೂ ಹೆಚ್ಚು ವಿಷಯಗಳನ್ನು ಕಲಿಯಬಲ್ಲೆವು.—20:1–28:31
ಜೊತೆ ವಿಶ್ವಾಸಿಗಳಿಗೆ ಭಕ್ತಿವೃದ್ಧಿ
3. ತ್ರೋವದಲ್ಲಿ ಏನು ನಡೆಯಿತು, ಮತ್ತು ನಮ್ಮ ದಿನಗಳಲ್ಲಿ ಯಾವದಕ್ಕೆ ಇದನ್ನು ಹೋಲಿಸಬಹುದು?
3 ಎಫೆಸದ ಗೊಂದಲ ಕಡಿಮೆಯಾದ ಬಳಿಕ ಪೌಲನು ತನ್ನ ಮೂರನೆಯ ಮಿಶನೆರಿ ಪ್ರಯಾಣವನ್ನು ಮುಂದುವರಿಸಿದನು. (20:1-12) ಆದರೆ, ಸಿರಿಯಾಕ್ಕೆ ಸಮುದ್ರಯಾನ ಮಾಡಬೇಕೆಂದಿದ್ದಾಗ, ಯೆಹೂದ್ಯರು ತನ್ನ ವಿರುದ್ಧವಾಗಿ ಒಳಸಂಚು ಮಾಡಿದ್ದಾರೆಂದು ಪೌಲನಿಗೆ ತಿಳಿದು ಬಂತು. ಅವರು ಅದೇ ಹಡಗು ಹತ್ತಿ ತನ್ನನ್ನು ಕೊಲ್ಲಲು ಉಪಾಯ ಮಾಡಿರಬಹುದಾದರ್ದಿಂದ ಅವನು ಮಕೆದೋನ್ಯದ ದಾರಿಯಾಗಿ ಪ್ರಯಾಣಿಸಿದನು. ತ್ರೋವದಲ್ಲಿ ಅವನು, ಯೆಹೋವನ ಸಾಕ್ಷಿಗಳ ಮಧ್ಯೆ ಸಂಚಾರ ಮೇಲ್ವಿಚಾರಕರು ಇಂದು ಮಾಡುವಂತೆ, ಒಂದು ವಾರ ಕಳೆದು ಜೊತೆ ವಿಶ್ವಾಸಿಗಳ ಭಕ್ತಿ ವೃದ್ಧಿ ಮಾಡಿದನು. ಅವನು ಬೀಳ್ಕೊಡಲು ಇದ್ದ ಮುಂಚಿನ ರಾತ್ರಿ ಪೌಲನು ತನ್ನ ಭಾಷಣವನ್ನು ಮಧ್ಯರಾತ್ರಿಯ ತನಕ ಮುಂದುವರಿಸಿದನು. ಕಿಟಿಕಿಯಲ್ಲಿ ಕೂತಿದ್ದ ಯೂತಿಖನು ದಿನದ ಕೆಲಸದಿಂದ ಬಳಲಿದ್ದಿರಬೇಕು. ಅವನು ನಿದ್ದೆಮಾಡುತ್ತಿದ್ದಾಗ ಮಹಡಿಯಿಂದ ಕೆಳಗೆ ಬಿದ್ದು ಸತ್ತನು. ಆದರೆ ಪೌಲನು ಅವನನ್ನು ಪುನರ್ಜೀವಿಸಿದನು. ಇದರಿಂದ ಅಲ್ಲಿ ಎಷ್ಟು ಸಂತೋಷವಾಗಿದ್ದಿರಬೇಕು! ಹಾಗಾದರೆ, ಬರಲಿರುವ ನೂತನ ಲೋಕದಲ್ಲಿ ಅನೇಕ ಕೋಟ್ಯಾಂತರ ಜನರಿಗೆ ಪುನರುತ್ಥಾನವಾಗುವಾಗ ಅಲ್ಲಿರಬಹುದಾದ ಆನಂದವನ್ನು ಊಹಿಸಿರಿ!—ಯೋಹಾನ 5:28, 29.
4. ಶುಶ್ರೂಷೆಯ ಸಂಬಂಧದಲ್ಲಿ ಪೌಲನು ಎಫೆಸದ ಹಿರಿಯರಿಗೆ ಏನು ಕಲಿಸಿದನು?
4 ಯೆರೂಸಲೇಮಿಗೆ ಹೋಗುವ ದಾರಿಯಲ್ಲಿ ಪೌಲನು, ಮಿಲೇತದಲ್ಲಿ, ಎಫೆಸದ ಹಿರಿಯರುಗಳನ್ನು ಭೇಟಿಯಾದನು. (20:13-21) ಅವನು “ಮನೆ ಮನೆಯಲ್ಲಿ” ಅವರಿಗೆ ಉಪದೇಶಿಸಿದ್ದುದ್ದನ್ನೂ “ಯೆಹೂದ್ಯರಿಗೂ ಗ್ರೀಕರಿಗೂ ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆ ಇಡಬೇಕೆಂತಲೂ ಖಂಡಿತವಾಗಿ” ಬೋಧಿಸಿದ್ದನ್ನೂ ಅವರಿಗೆ ಜ್ಞಾಪಕ ಹುಟ್ಟಿಸಿದನು. ಆ ಬಳಿಕ ಹಿರಿಯರುಗಳಾದ ಅವರು ಪಶ್ಚಾತ್ತಾಪ ಪಡೆದು ನಂಬಿಕೆಯನ್ನು ಪಡೆದಿದ್ದರು. ಅಪೊಸ್ತಲನು, ಇಂದು ಯೆಹೋವನ ಸಾಕ್ಷಿಗಳು ಮಾಡುವಂತೆ, ಅವಿಶ್ವಾಸಿಗಳಿಗೆ ಮನೆ ಮನೆಯ ಸೇವೆಯಲ್ಲಿ ಧೈರ್ಯದಿಂದ ರಾಜ್ಯವನ್ನು ಸಾರುವಂತೆ ಅವರಿಗೆ ತರಬೇತನ್ನೂ ಕೊಟ್ಟಿದ್ದನು.
5. ಎ)ಪವಿತ್ರಾತ್ಮದ ನಡಿಸುವಿಕೆಯ ಸಂಬಂಧದಲ್ಲಿ ಪೌಲನು ಹೇಗೆ ಆದರ್ಶಪ್ರಾಯನು? (ಬಿ) ‘ಸಕಲ ಮಂದೆಗೆ ಗಮನ ಕೊಡುವ’ ವಿಷಯದಲ್ಲಿ ಹಿರಿಯರಿಗೆ ಏಕೆ ಸಲಹೆ ಬೇಕಿತ್ತು?
5 ದೇವರ ಪವಿತ್ರಾತ್ಮದ ಮಾರ್ಗದರ್ಶನವನ್ನು ಅಂಗೀಕರಿಸುವುದರಲ್ಲಿ ಪೌಲನು ಆದರ್ಶಪ್ರಾಯನು. (20:22-30) “ಆತ್ಮ ನಿರ್ಬಂಧವುಳ್ಳವನಾಗಿ” ಅಥವಾ ಅದರ ನಡಿಸುವಿಕೆಗೆ ಒಪ್ಪಿ ಕೊಳ್ಳಲು ನಿರ್ಬಂಧ ಪಟ್ಟವನಾಗಿ ಅಪೊಸ್ತಲನು, ಬಂಧನ, ಸಂಕಟಗಳು ಅವನಿಗಾಗಿ ಕಾದಿದ್ದರೂ, ಯೆರೂಸಲೇಮಿಗೆ ಹೋಗಲಿಕ್ಕಿದ್ದನು. ಅವನಿಗೆ ಜೀವವು ಅಮೂಲ್ಯವಾಗಿತ್ತು. ಆದರೆ ದೇವರಿಗೆ ಸಮಗ್ರತೆ ತೋರಿಸುವುದು, ಇಂದು ನಮಗೆ ಹೇಗಿರ ಬೇಕೋ ಹಾಗೆಯೇ ಅವನಿಗೆ ಅತಿ ಪ್ರಾಮುಖ್ಯವಾಗಿತ್ತು. ಪೌಲನು ಹಿರಿಯರಿಗೆ, ‘ಪವಿತ್ರಾತ್ಮವು ಮೇಲ್ವಿಚಾರಕರಾಗಿ ನೇಮಿಸಿದ ಮಂದೆಗೆ ಗಮನ ಕೊಡುವಂತೆ’ ಪ್ರೋತ್ಸಾಹಿಸಿದನು. ಅವನು (ಮರಣದಲ್ಲಿ) “ಹೋದ ಮೇಲೆ” “ಕ್ರೂರವಾದ ತೋಳಗಳು . . . ಹಿಂಡನ್ನು ಕನಿಕರಿಸುವುದಿಲ್ಲ.” ಇಂಥ ಮನುಷ್ಯರು ಹಿರಿಯರ ಮಧ್ಯದಿಂದಲೇ ಎದ್ದು ಬರುವರು ಮತ್ತು ಕಡಿಮೆ ವಿವೇಚನೆಯ ಶಿಷ್ಯರು ಅವರ ತಿರುಚು ಬೋಧನೆಗಳನ್ನು ಅಂಗೀಕರಿಸಲಿದ್ದರು.—2 ಥೆಸಲೊನೀಕದವರಿಗೆ 2:6.
6. (ಎ)ಪೌಲನು ಹಿರಿಯರನ್ನು ದೃಢತೆಯಿಂದ ಹೇಗೆ ಒಪ್ಪಿಸ ಸಾಧ್ಯವಿತ್ತು? (ಬಿ) ಅಪೊಸ್ತಲರ ಕೃತ್ಯ 20:35 ರ ಸೂತ್ರವನ್ನು ಪೌಲನು ಹೇಗೆ ಅನುಸರಿಸಿದನು?
6 ಹಿರಿಯರು ಧರ್ಮಭ್ರಷ್ಟತೆಯ ವಿರುದ್ಧ ನಿಲ್ಲಲು ಆತ್ಮಿಕವಾಗಿ ಎಚ್ಚರದಿಂದಿರಬೇಕಿತ್ತು. (20:31-38) ಅಪೊಸ್ತಲನು ಅವರಿಗೆ ಹಿಬ್ರೂ ಶಾಸ್ತ್ರವನ್ನು ಮತ್ತು ಯೇಸುವಿನ ಬೋಧನೆಗಳನ್ನು ಕಲಿಸಿದ್ದನು. ಇವಕ್ಕೆ ಶುದ್ಧೀಕರಣ ಶಕ್ತಿ ಇತ್ತು ಮತ್ತು “ಪವಿತ್ರರಾದವರೆಲ್ಲರಲ್ಲಿ . . . ಹಕ್ಕನ್ನು” ಅಂದರೆ ಸ್ವರ್ಗರಾಜ್ಯವನ್ನು ಅವರು ಪಡೆಯುವಂತೆ ಇದು ಸಹಾಯ ಮಾಡಲಿಕ್ಕಿತ್ತು. ತನಗೆ ಮತ್ತು ಸಹವಾಸಿಗಳಿಗೆ ಅವಶ್ಯವಾದದ್ದನ್ನು ಒದಗಿಸಲಿಕ್ಕಾಗಿ ಕೆಲಸ ಮಾಡಿದ್ದರಿಂದ ಹಿರಿಯರು ಸಹಾ ಶ್ರಮಪಡುವ ಕೆಲಸಗಾರರಾಗುವಂತೆ ಪೌಲನು ಪ್ರೋತ್ಸಾಹಿಸಿದನು. (ಅಪೊಸ್ತಲರ ಕೃತ್ಯ 18:1-3; 1 ಥೆಸಲೊನೀಕ 2:9) ನಾವು ಇದೇ ರೀತಿಯ ಮಾರ್ಗವನ್ನು ಅನುಸರಿಸಿ ಇತರರು ನಿತ್ಯಜೀವವನ್ನು ಪಡೆಯುವಂತೆ ಸಹಾಯ ಮಾಡಿದರೆ, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬ ಯೇಸುವಿನ ಮಾತುಗಳನ್ನು ಗಣ್ಯಮಾಡುವೆವು. ಸುವಾರ್ತೆಗಳಲ್ಲಿ ಈ ಹೇಳಿಕೆಯ ಸೂಚನೆಗಳು ಕಂಡು ಬರುತ್ತವೆ ನಿಜ, ಆದರೆ ಪೌಲನು ಮಾತ್ರ ಇದನ್ನು ಉಲ್ಲೇಖಿಸಿದ್ದಾನೆ. ಅವನು ಇದನ್ನು ಬಾಯಿಮಾತಿನಿಂದ ಅಥವಾ ಪ್ರೇರಣೆಯಿಂದ ಪಡೆದಿರಬಹುದು. ನಾವು ಪೌಲನಷ್ಟೇ ಆತ್ಮತ್ಯಾಗಿಗಳಾಗಿರುವಲ್ಲಿ ತುಂಬಾ ಸಂತೋಷವನ್ನು ಅನುಭವಿಸಬಲ್ಲೆವು. ಅವನು ತನ್ನನ್ನು ಎಷ್ಟು ತ್ಯಾಗಮಾಡಿದ್ದನೆಂದರೆ ಅವನ ಅಪಗಮನ ಎಫೆಸದ ಹಿರಿಯರಿಗೆ ತುಂಬಾ ಶೋಕವನ್ನುಂಟು ಮಾಡಿತ್ತು!
ಯೆಹೋವನ ಚಿತ್ತ ನಡೆಯಲಿ
7. ದೇವರ ಚಿತ್ತಕ್ಕೆ ಅಧೀನನಾಗುವುದರಲ್ಲಿ ಪೌಲನು ಹೇಗೆ ಮಾದರಿಯನ್ನಿಟ್ಟನು?
7 ಪೌಲನ ತೃತೀಯ ಮಿಶನೆರಿ ಪ್ರಯಾಣ (ಸುಮಾರು ಸಾ. ಶ. 56 ರಲ್ಲಿ) ಮುಗಿಯುತ್ತಿದ್ದ ಸಮಯದಲ್ಲಿ ಅವನು ದೇವರ ಚಿತ್ತಕ್ಕೆ ಒಳಗಾಗುವ ವಿಷಯದಲ್ಲಿ ಒಂದು ಉತ್ತಮ ಮಾದರಿಯನ್ನಿಟ್ಟನು. (21:1-14) ಕೈಸರೇಯದಲ್ಲಿ ಅವನೂ ಜೊತೆಗಾರರೂ, “ಪ್ರವಾದಿಸುತ್ತಿದ್ದ” ನಾಲ್ಕು ಹೆಣ್ಣು ಮಕ್ಕಳಿದ್ದ ಫಿಲಿಪ್ಪನ ಮನೆಯಲ್ಲಿ ತಂಗಿದರು. ಆ ಹುಡುಗಿಯರು ಪವಿತ್ರಾತ್ಮದ ಮೂಲಕ ನಡೆಯಲಿದ್ದ ಸಂಗತಿಗಳನ್ನು ಮುಂತಿಳಿಸುತ್ತಿದ್ದರು. ಅಲ್ಲಿ ಕ್ರೈಸ್ತ ಪ್ರವಾದಿ ಅಗಬನು ಪೌಲನ ನಡುಕಟ್ಟಿನಿಂದ ತನ್ನ ಕೈಕಾಲುಗಳನ್ನು ಕಟ್ಟಿ, ಯೆಹೂದ್ಯರು ಆ ನಡುಗಟ್ಟಿನ ಯಜಮಾನನ್ನು ಕಟ್ಟಿ ಅನ್ಯ ಜನರ ಕೈಗೆ ಒಪ್ಪಿಸುವರೆಂದು ಹೇಳುವಂತೆ ಆತ್ಮ ಪ್ರೇರಿತನಾದನು. ತಾನು “ಬೇಡೀ ಹಾಕಿಸಿಕೊಳ್ಳುವದಕ್ಕೆ ಮಾತ್ರವಲ್ಲದೆ ಸಾಯುವದಕ್ಕೂ ಸಿದ್ಧ”ನೆಂದು ಪೌಲನು ಹೇಳಿದನು. ಆಗ ಶಿಷ್ಯರು “ಯೆಹೋವನ ಚಿತ್ತವಿದ್ದಂತೆ ಆಗಲಿ” ಎಂದು ಹೇಳಿ ಸಮ್ಮತಿ ಸೂಚಿಸಿದರು.
8. ನಮಗೆ ಕೆಲವು ಸಲ ಉತ್ತಮ ಸಲಹೆಯನ್ನು ತಕ್ಕೊಳ್ಳುವುದು ಕಷ್ಟವಾದರೆ, ನಾವು ಯಾವುದನ್ನು ಜ್ಞಾಪಿಸಿಕೊಳ್ಳಬಹುದು?
8 ಪೌಲನು ಯೆರೂಸಲೇಮಿನಲ್ಲಿ, ದೇವರು ತನ್ನ ಶುಶ್ರೂಷೆಯ ಮೂಲಕ ಅನ್ಯ ಜನರ ಮಧ್ಯೆ ಮಾಡಿದ ವಿಷಯಗಳನ್ನು ಹಿರಿಯರಿಗೆ ತಿಳಿಸಿದನು. (21:15-26) ಉತ್ತಮ ಸಲಹೆಯನ್ನು ಅಂಗೀಕರಿಸುವುದು ನಮಗೆ ಕಷ್ಟವಾಗುವಲ್ಲಿ, ಪೌಲನು ಅಂಗೀಕರಿಸಿದ ವಿಷಯವನ್ನು ನಾವು ನೆನಪಿಸಿಕೊಳ್ಳಬಹುದು. ಅನ್ಯದೇಶಗಳಲ್ಲಿ ತಾನು ಯೆಹೂದ್ಯರಿಗೆ, “ಮೋಶೆಯ ಧರ್ಮವನ್ನು ತ್ಯಾಗಮಾಡಬೇಕೆಂದು” ಹೇಳುವವನಲ್ಲ ಎಂಬದನ್ನು ರುಜುಪಡಿಸಲು ವಿಧಿವಿಹಿತವಾಗಿ ಶುದ್ಧೀಕರಣ ಮಾಡಿಕೊಳ್ಳಬೇಕು ಮತ್ತು ತನ್ನ ಮತ್ತು ಇತರ ನಾಲ್ವರು ಪುರುಷರ ಖರ್ಚನ್ನು ನೋಡಿಕೊಳ್ಳಬೇಕು ಎಂಬ ಹಿರಿಯರ ಬುದ್ಧಿವಾದಕ್ಕೆ ಅವನು ಕಿವಿಗೊಟ್ಟನು. ಯೇಸುವಿನ ಮರಣ ಧರ್ಮಶಾಸ್ತ್ರವನ್ನು ತೊಲಗಿಸಿದರೂ, ವೃತಾಚರಣೆಯ ಕುರಿತು ಅದರ ಭಾಗಗಳನ್ನು ನೆರವೇರಿಸಿದರ್ದಲ್ಲಿ ಪೌಲನು ತಪ್ಪೇನೂ ಮಾಡಲಿಲ್ಲ.—ರೋಮಾಪುರದವರಿಗೆ 7:12-14.
ದೊಂಬಿಗೊಳಗಾದರೂ ನಿರ್ಭೀತರು
9. ದೊಂಬಿ ಹಿಂಸೆಯ ವಿಷಯದಲ್ಲಿ ಪೌಲನ ಅನುಭವ ಮತ್ತು ಇಂದಿನ ಯೆಹೋವನ ಸಾಕ್ಷಿಗಳ ಮಧ್ಯೆ ಯಾವ ಹೋಲಿಕೆ ಇದೆ?
9 ಯೆಹೋವನ ಸಾಕ್ಷಿಗಳು ಅನೇಕ ವೇಳೆ ದೊಂಬಿ ಹಿಂಸೆಯ ಎದುರಲ್ಲಿ ಸಮಗ್ರತೆ ಕಾಪಾಡಿಕೊಂಡಿದ್ದಾರೆ. (1975 ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ ಪುಟ 180-90 ನೋಡಿ.) ಇದೇ ರೀತಿ ಏಸ್ಯಾ ಮೈನರಿನ ಯೆಹೂದ್ಯರು ಪೌಲನ ವಿರುದ್ಧ ದೊಂಬಿ ಎಬ್ಬಿಸಿದರು. (21:27-40) ಎಫೆಸದ ತ್ರೊಫಿಮನನ್ನು ಅವನೊಂದಿಗೆ ಕಂಡ ಅವರು ಅವನು ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಅದನ್ನು ಅಪವಿತ್ರಗೊಳಿಸಿದ್ದಾನೆಂದು ಸುಳ್ಳು ದೂರು ಹಾಕಿದರು. ರೋಮನ್ ಅಧಿಕಾರಿ ಕಾಡ್ಲಿಯಸ್ ಲೈಸಿಯಸ್ ಮತ್ತು ಅವನ ಸೈನಿಕರು ದೊಂಬಿಯನ್ನು ನಿಲ್ಲಿಸಿದಾಗ ಪೌಲನು ಕೊಲ್ಲಲ್ಪಡುವದರಲ್ಲಿದ್ದನು ! ಮುಂತಿಳಿಸಲ್ಪಟ್ಟಿದ್ದಂತೆ (ಆದರೆ ಯೆಹೂದ್ಯರ ಕಾರಣದಿಂದಾಗಿ) ಲೈಸಿಯಸನು ಪೌಲನಿಗೆ ಜೋಡು ಬೇಡಿ ಹಾಕಿಸಿದನು. (ಅಪೊಸ್ತಲರ ಕೃತ್ಯ 21:11) ಅಪೊಸ್ತಲನನ್ನು ದೇವಾಲಯದ ಪಕ್ಕದಲ್ಲಿ ಇದ್ದ ಸೈನಿಕರ ವಸತಿಗಳೊಳಗೆ ತೆಗೆದು ಕೊಂಡು ಹೋಗುವುದರಲ್ಲಿದ್ದಾಗ, ಪೌಲನು ರಾಜದ್ರೋಹಿಯಲ್ಲವೆಂದೂ ದೇವಾಲಯದ ಕ್ಷೇತ್ರವನ್ನು ಪ್ರವೇಶಿಸಲು ಹಕ್ಕಿದ್ದ ಯೆಹೂದ್ಯನೆಂದೂ ಲೈಸಿಯಸನಿಗೆ ತಿಳಿದು ಬಂತು. ಆಗ ಮಾತಾಡಲು ಅನುಮತಿ ದೊರೆತ ಪೌಲನು ಹಿಬ್ರೂ ಭಾಷೆಯಲ್ಲಿ ಜನರೊಂದಿಗೆ ಮಾತಾಡಿದನು.
10. ಯೆರೂಸಲೇಮಿನಲ್ಲಿ ಪೌಲನ ಭಾಷಣವನ್ನು ಯೆಹೂದ್ಯರು ಹೇಗೆ ಅಂಗೀಕರಿಸಿದರು ಮತ್ತು ಅವನಿಗೆ ಕೊರಡೆಯ ಏಟು ಏಕೆ ಸಿಗಲಿಲ್ಲ?
10 ಪೌಲನು ಧೈರ್ಯದಿಂದ ಸಾಕ್ಷಿ ಕೊಟ್ಟನು. (22:1-30) ತಾನು ಯೆಹೂದ್ಯನು, ತುಂಬಾ ಗೌರವಿಸಲ್ಪಡುತ್ತಿದ್ದ ಗಮಲಿಯೇಲನಿಂದ ಶಿಕ್ಷಣ ಪಡೆದವನು ಎಂದು ಪೌಲನು ತನ್ನನ್ನು ಪರಿಚಯಿಸಿದನು. ಕ್ರಿಸ್ತ ಮಾರ್ಗದ ಅನುಯಾಯಿಗಳನ್ನು ಹಿಂಸಿಸುವದಕ್ಕೆ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಮಹಿಮಾಭರಿತ ಯೇಸು ಕ್ರಿಸ್ತನನ್ನು ನೋಡಲಾಗಿ ತಾನು ಕುರುಡನಾದೆನು, ಆದರೆ ಅನನೀಯನಿಂದ ತನಗೆ ಪುನಃ ದೃಷ್ಟಿ ದೊರೆಯಿತು. ಆ ಬಳಿಕ ಕರ್ತನು ಪೌಲನಿಗೆ ಹೀಗೆಂದಿದ್ದನು: “ನೀನು ಹೋಗು; ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುತ್ತೇನೆ.” ಈ ಮಾತು ಕಾಡಿಗೆ ಕಿಡಿಯೋಪಾದಿ ಇತ್ತು. ಜನರ ಗುಂಪು, ಪೌಲನು ಜೀವಿಸಲು ಯೋಗ್ಯನಲ್ಲವೆಂದೂ ಕೂಗಾಡಿ ತಮ್ಮ ಹೊರ ಉಡುಪುಗಳನ್ನು ಬಿಸಾಡಿ ಗಾಳಿಗೆ ದೂಳೆರಚಿದರು. ಈ ಕಾರಣದಿಂದ ಲೈಸಿಯಸನು ಯೆಹೂದ್ಯರು ಪೌಲನನ್ನು ಏಕೆ ವಿರೋಧಿಸುತ್ತಾರೆಂದು ಕೊರಡೆಯಿಂದ ಹೊಡಿಸಿ ತಿಳಿಯಲು ಅವನನ್ನು ಸೈನಿಕ ವಸತಿಯೊಳಗೆ ತೆಗೆದುಕೊಂಡು ಹೋದನು. ಪೌಲನು, “ರೋಮಾಪುರದ ಹಕ್ಕುದಾರನಾದ ಮನುಷ್ಯನನ್ನು ನ್ಯಾಯವಿಚಾರಣೆ ಮಾಡದೆ ಕೊರಡೆಗಳಿಂದ ಹೊಡೆಸುವುದು ನ್ಯಾಯವೋ?” ಎಂದು ಕೇಳಿದಾಗ ಪೌಲನಿಗೆ ಕೊರಡೆ (ಗಂಟುಗಳು ಅಥವಾ ನಾಟಿಸಿರುವ ಲೋಹ ಅಥವಾ ಎಲುಬಿನ ತುಂಡುಗಳಿರುವ ಚರ್ಮದ ಬಾರುಕೋಲು) ಯ ಏಟು ತಪ್ಪಿತು. ಪೌಲನು ರೋಮನ್ ಪೌರನೆಂದು ತಿಳಿದ ಲೈಸಿಯಸನು ಭಯಭೀತನಾಗಿ ಯೆಹೂದ್ಯರು ಅವನ ಮೇಲೆ ಏಕೆ ದೂರು ಹೊರಿಸಿದ್ದಾರೆಂದು ತಿಳಿಯಲು ಅವನನ್ನು ಸನ್ಹೆದ್ರಿನ್ ಮುಂದೆ ಕರಕೊಂಡು ಹೋದನು.
11. ಪೌಲನು ಯಾವ ರೀತಿಯ ಫರಿಸಾಯನಾಗಿದ್ದನು?
11 “ನಾನು . . . ಒಳ್ಳೇ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಎಂದು ಹೇಳಿ ಪೌಲನು ಸನ್ಹೆದ್ರಿನ್ನ ಮುಂದೆ ತನ್ನ ಪ್ರತಿವಾದವನ್ನು ಆರಂಭಿಸಿದನು. ಪೌಲನಿಗೆ ಹೊಡೆಯಲು ಮಹಾ ಯಾಜಕ ಅನನೀಯನು ಅಪ್ಪಣೆ ಕೊಟ್ಟನು. (23:1-10) “ಎಲೈ ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು” ಎಂದು ಪೌಲನಂದನು. “ದೇವರು ನೇಮಿಸಿದ ಮಹಾ ಯಾಜಕನನ್ನು ಬೈಯುತ್ತೀಯಾ?” ಎಂದು ಕೆಲವರು ಕೇಳಿದರು. ಮಂದ ದೃಷ್ಟಿಯ ಕಾರಣ ಪೌಲನು ಅನನೀಯನನ್ನು ಗುರುತಿಸಿದ್ದಿರಲಿಕ್ಕಿಲ್ಲ. ಆದರೆ ಆ ಸಭೆಯಲ್ಲಿ ಫರಿಸಾಯರೂ ಸದ್ದುಕಾಯರೂ ಇದ್ದುದ್ದನ್ನು ಪೌಲನು ನೋಡಿ, ‘ನಾನು ಫರಿಸಾಯನು ಮತ್ತು ಪುನರುತ್ಥಾನದ ನಿರೀಕ್ಷೆಯ ಮೇಲೆ ನನ್ನ ವಿಚಾರಣೆಯಾಗುತ್ತದೆ’ ಎಂದು ಹೇಳಿದನು. ಇದರಿಂದಾಗಿ ಸನ್ಹೆದ್ರಿನ್ ಇಬ್ಭಾಗವಾಯಿತು. ಏಕೆಂದರೆ ಫರಿಸಾಯರು ಪುನರುತ್ಥಾನವನ್ನು ನಂಬುತ್ತಿದ್ದರು, ಆದರೆ ಸದ್ದುಕಾಯರು ನಂಬುತ್ತಿರಲಿಲ್ಲ. ಅಲ್ಲಿ ಎಷ್ಟೊಂದು ಕಚಾಟ್ಚ ಉಂಟಾಯಿತೆಂದರೆ ಲೈಸಿಯಸನು ಅಪೊಸ್ತಲನನ್ನು ಅಲ್ಲಿಂದ ರಕ್ಷಿಸಬೇಕಾಯಿತು.
12. ಯೆರೂಸಲೇಮಿನಲ್ಲಿ ಪೌಲನ ಜೀವದ ವಿರುದ್ಧ ಮಾಡಿದ ಪಿತೂರಿಯಿಂದ ಅವನು ಹೇಗೆ ತಪ್ಪಿಸಿಕೊಂಡನು?
12 ಆ ಬಳಿಕ ಪೌಲನು ತನ್ನ ಜೀವದ ವಿರುದ್ಧ ಮಾಡಿದ ಒಂದು ಪಿತೂರಿಯಿಂದ ತಪ್ಪಿಸಿಕೊಂಡನು. (23:11-35) ನಾಲ್ವತ್ತು ಮಂದಿ ಯೆಹೂದ್ಯರು ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನ ಮಾಡುವದಿಲ್ಲವೆಂದು ಶಪಥ ಹಾಕಿದ್ದರು. ಪೌಲನ ಸೋದರಳಿಯನು ಬಂದು ಇದನ್ನು ಅವನಿಗೂ ಲೈಸಿಯಸನಿಗೂ ತಿಳಿಸಿದನು. ಆಗ ಅಪೊಸ್ತಲನನ್ನು ಸೈನಿಕ ಕಾವಲಿನೊಂದಿಗೆ ಯೂದಾಯದಲ್ಲಿ ರೋಮನ್ ಆಡಳಿತದ ರಾಜಧಾನಿಯಾದ ಕೈಸರೈಯದಲ್ಲಿ ರಾಜ್ಯಪಾಲ ಅಂಟೋನಿಯಸ್ ಫೇಲಿಕ್ಸನ ಬಳಿಗೆ ಕರೆದೊಯ್ಯಲಾಯಿತು. ಪೌಲನನ್ನು ವಿಚಾರಣೆ ಮಾಡುತ್ತೇನೆಂದು ಮಾತುಕೊಟ್ಟ ಫೇಲಿಕ್ಸನು ಅವನನ್ನು ರಾಜ್ಯಪಾಲನ ಪ್ರಧಾನ ಕಾರ್ಯಸ್ಥಾನವಾಗಿದ್ದ ಮಹಾ ಹೆರೋದನ ಪ್ರೆಟೋರಿಯಸ್ ಅರಮನೆಯಲ್ಲಿ ಕಾವಲಿನಲ್ಲಿಟ್ಟನು.
ಅಧಿಪತಿಗಳ ಮುಂದೆ ಧೀರತೆ
13. ಪೌಲನು ಫೇಲಿಕ್ಸನಿಗೆ ಯಾವುದರ ವಿಷಯ ಸಾಕ್ಷಿ ನೀಡಿದನು, ಮತ್ತು ಪರಿಣಾಮವೇನು?
13 ಅಪೊಸ್ತಲನು ಸುಳ್ಳಪವಾದದ ವಿರುದ್ಧ ಪ್ರತಿವಾದ ಮಾಡಿ ಫೇಲಿಕ್ಸನಿಗೆ ಧೈರ್ಯದಿಂದ ಸಾಕ್ಷಿ ನೀಡಿದನು. (24:1-27) ಅಪವಾದ ಹೊರಿಸಿದ ಯೆಹೂದ್ಯರ ಮುಂದೆ ಪೌಲನು, ತಾನು ದೊಂಬಿಯನ್ನು ಪ್ರೇರಿಸಲಿಲ್ಲವೆಂದು ತೋರಿಸಿದನು. ತಾನು ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಪುಸ್ತಕಗಳಲ್ಲಿ ಕೊಟ್ಟಿರುವುದನ್ನು ನಂಬುತ್ತೇನೆಂದೂ “ನೀತಿವಂತರಿಗೂ ಅನೀತಿವಂತರಿಗೂ” ಆಗುವ “ಪುನರುತ್ಥಾನ”ದಲ್ಲಿ ನಿರೀಕ್ಷೆ ಇಡುತ್ತೇನೆಂದೂ ಅವನು ಹೇಳಿದನು. ಪೌಲನು ಯೆರೂಸಲೇಮಿಗೆ “ಧರ್ಮದ್ರವ್ಯ” (ಹಿಂಸೆಯಿಂದ ಬಡವರಾಗಿರಬಹುದಾಗಿದ್ದ ಯೇಸುವಿನ ಶಿಷ್ಯರಿಗೆ ವಂತಿಗೆಗಳು) ವನ್ನು ಹಿಡಿದುಕೊಂಡು ಹೋಗಿದ್ದನು. ಅವನಿಗೆ ವಿಧಿವಿಹಿತವಾದ ಶುದ್ಧೀಕರಣವೂ ಆಗಿತ್ತು. ಫೇಲಿಕ್ಸನು ತೀರ್ಪನ್ನು ವಿಳಂಬಿಸಿದರೂ ಪೌಲನು ಆ ಬಳಿಕ ಫೇಲಿಕ್ಸನಿಗೂ ಅವನ ಪತ್ನಿ ಡ್ರುಸಿಲ (1 ನೇ ಹೆರೋದ ಅಗ್ರಿಪ್ಪನ ಮಗಳು) ಳಿಗೂ ಕ್ರಿಸ್ತನು, ನೀತಿ, ಆತ್ಮ ಸಂಯಮ ಮತ್ತು ಬರಲಿರುವ ನ್ಯಾಯ ತೀರ್ಪು—ಇವುಗಳ ವಿಷಯ ಸಾರಿದನು. ಇಂಥ ಮಾತುಗಳಿಂದ ಗಾಬರಿಗೊಂಡ ಫೇಲಿಕ್ಸನು ಪೌಲನನ್ನು ಕಳುಹಿಸಿ ಬಿಟ್ಟನು. ಆ ತರುವಾಯ, ಅವನು ಅಪೊಸ್ತಲನನ್ನು ಅನೇಕ ಸಲ, ಲಂಚ ಪಡೆಯುವ ನಿರೀಕ್ಷೆಯಿಂದ ಕರೆಯಿಸಿದನು. ಪೌಲನು ನಿರಿಪರಾಧಿಯೆಂದು ಫೇಲಿಕ್ಸನಿಗೆ ತಿಳಿದಿದ್ದರೂ ಯೆಹೂದ್ಯರ ಮೆಚ್ಚಿಗೆ ಪಡೆಯುವ ಕಾರಣ ಅವನನ್ನು ಕೈದಿಯಾಗಿಟ್ಟನು. ಎರಡು ವರ್ಷಗಳಾದನಂತರ ಫೇಲಿಕ್ಸನ ಸ್ಥಾನಕ್ಕೆ ಪೊರ್ಸಿಯಸ್ ಫೆಸ್ತನು ಬಂದನು.
14. ಪೌಲನು ಫೆಸ್ತನ ಮುಂದೆ ಬಂದಾಗ ಯಾವ ಶಾಸನ ಬದ್ಧ ಏರ್ಪಾಡಿನ ಪ್ರಯೋಜನ ತಕ್ಕೊಂಡನು, ಮತ್ತು ಇದರಲ್ಲಿ ಯಾವ ಹೋಲಿಕೆಯನ್ನು ನೀವು ಕಂಡುಕೊಳ್ಳುತ್ತೀರಿ?
14 ಈ ಫೆಸ್ತನ ಮುಂದೆಯೂ ಪೌಲನು ಧೈರ್ಯದಿಂದ ಪ್ರತಿವಾದ ಮಾಡಿದನು. (25:1-12) ತಾನು ಮರಣ ಯೋಗ್ಯನಾಗಿರುವಲ್ಲಿ ಕ್ಷಮೆ ಯಾಚಿಸುವುದಿಲ್ಲವೆಂದೂ, ಆದರೆ ಮೆಚ್ಚಿಕೆ ಪಡೆಯಲಿಕ್ಕಾಗಿ ಯಾವನೂ ತನ್ನನ್ನು ಯೆಹೂದ್ಯರಿಗೆ ಒಪ್ಪಿಸಿಕೊಡನೆಂದೂ ಅವನು ಹೇಳಿದನು. ರೋಮಿನಲ್ಲಿ (ಆ ಸಮಯದಲ್ಲಿ ನೀರೋ ಚಕ್ರವರ್ತಿಯ ಮುಂದೆ) ನ್ಯಾಯ ವಿಚಾರಣೆಯಾಗುವ ರೋಮಿನ ಪೌರನ ಹಕ್ಕಿನ ಪ್ರಯೋಜನ ಪಡೆಯುತ್ತಾ ಪೌಲನು, “ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ” ಅಂದನು. ಈ ಅಪ್ಪೀಲಿಗೆ ಮನ್ನಣೆ ದೊರೆತಾಗ ಪೌಲನು “ರೋಮಾಪುರದಲ್ಲಿಯೂ ಸಾಕ್ಷಿ” ನುಡಿಯಲಿದ್ದನು. (ಅಪೊಸ್ತಲರ ಕೃತ್ಯ 23:11) ಯೆಹೋವನ ಸಾಕ್ಷಿಗಳು ಸಹಾ ‘ಸುವಾರ್ತೆಯನ್ನು ಸಂರಕ್ಷಿಸಿ ಶಾಸನಾಬದ್ಧವಾಗಿ ಸ್ಥಾಪಿಸುವ’ ಏರ್ಪಾಡಿನ ಪ್ರಯೋಜನವನ್ನು ಪಡೆಯುತ್ತಾರೆ.—ಫಿಲಿಪ್ಪಿಯವರಿಗೆ 1:7.
15. (ಎ)ರಾಜ ಅಗ್ರಿಪ್ಪ ಮತ್ತು ಕೈಸರನ ಮುಂದೆ ಪೌಲನು ಬಂದಾಗ ಯಾವ ಪ್ರವಾದನೆ ನೆರವೇರಿತು? (ಬಿ) ಸೌಲನು ‘ಮುಳ್ಳುಗೋಲನ್ನು’ ಒದೆದದ್ದು ಹೇಗೆ?
15 ಉತ್ತರ ಯೂದಾಯದ ರಾಜ 2 ನೇ ಹೆರೋದ ಅಗ್ರಿಪ್ಪ ಮತ್ತು (ಅವನಿಗೆ ಅಗಮ್ಯಗಮನ ಸಂಬಂಧವಿದ್ದ) ಅವನ ತಂಗಿ ಬೆರ್ನಿಕೆ ಕೈಸರೈಯದಲ್ಲಿ ಫೆಸ್ತನನ್ನು ಭೇಟಿಯಾಗುತ್ತಿದ್ದಾಗ ಪೌಲನ ವಿಷಯ ಕೇಳಿದರು. (25:13-26:23) ಅಗ್ರಿಪ್ಪ ಮತ್ತು ಕೈಸರನಿಗೆ ಸಾಕ್ಷಿ ಕೊಟ್ಟದ್ದರ ಮೂಲಕ, ತಾನು ಕರ್ತನ ಹೆಸರನ್ನು ಅರಸರಿಗೆ ತಿಳಿಸುತ್ತೇನೆಂಬ ಪ್ರವಾದನೆಯನ್ನು ಪೌಲನು ನೆರವೇರಿಸಿದನು. (ಅಪೊಸ್ತಲರ ಕೃತ್ಯ 9:15) ದಮಸ್ಕದ ದಾರಿಯಲ್ಲಿ ನಡೆದುದನ್ನು ಅಗ್ರಿಪ್ಪನಿಗೆ ತಿಳಿಸುತ್ತಾ ಪೌಲನು, “ಮುಳ್ಳುಗೋಲನ್ನು ಒದೆಯುವದು ನಿನಗೆ ಕಷ್ಟ” ಎಂದು ಯೇಸುವು ಹೇಳಿದನೆಂದು ತಿಳಿಸಿದನು. ಮುಳ್ಳುಗೋಲನ್ನು ತಡೆಯುವುದರಿಂದ ಗಡುಸಾದ ಹೋರಿ ತನಗೆ ಹೇಗೆ ನೋವು ಮಾಡಿಕೊಳ್ಳುತ್ತದೋ ತದ್ರೀತಿ ದೇವರ ಬೆಂಬಲವಿದ್ದ ಯೇಸುವಿನ ಶಿಷ್ಯರ ವಿರುದ್ಧ ಸೌಲನು ಮಾಡುವ ಹೋರಾಟದಿಂದ ಅವನು ತನ್ನನ್ನು ತಾನೇ ನೋಯಿಸಿಕೊಂಡಿದ್ದನು.
16. ಫೆಸ್ತನೂ ಅಗ್ರಿಪ್ಪನೂ ಪೌಲನ ಸಾಕ್ಷಿಗೆ ಹೇಗೆ ಪ್ರತಿವರ್ತನೆ ತೋರಿಸಿದರು?
16 ಇದಕ್ಕೆ ಫೆಸ್ತ ಮತ್ತು ಅಗ್ರಿಪ್ಪರ ಪ್ರತಿಕ್ರಿಯೆ ಏನಾಗಿತ್ತು? (26:24-32) ಪುನರುತ್ಥಾನವನ್ನು ತಿಳಿಯಲು ಅಶಕ್ತನಾಗಿ ಮತ್ತು ಪೌಲನ ದೃಢಾಭಿಪ್ರಾಯದಿಂದ ಆಶ್ಚರ್ಯಗೊಂಡ ಫೆಸ್ತನು, “ನೀನು ಬಹಳವಾಗಿ ಮಾಡುವ ಶಾಸ್ತ್ರವಿಚಾರವು ನಿನ್ನನ್ನು ಮರುಳುಗೊಳಿಸುತ್ತದೆ !” ಎಂದು ಹೇಳಿದನು. ಇದೇ ರೀತಿ, ಈಗ ಕೆಲವರು, ಯೆಹೋವನ ಸಾಕ್ಷಿಗಳು ಪೌಲನಂತೆ “ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತು”ಗಳನ್ನಾಡುವಾಗ ಅವರು ಹುಚ್ಚರೆಂದು ಹೇಳುತ್ತಾರೆ. “ಅಲ್ಪ ಪ್ರಯತ್ನದಿಂದ ನನ್ನನ್ನು ಕ್ರೈಸ್ತನಾಗುವುದಕ್ಕೆ ಒಡಂಬಡಿಸುತೀಯ್ತಾ?” ಎಂದು ಹೇಳಿದ ಅಗ್ರಿಪ್ಪನು ವಿಚಾರಣೆ ಮುಗಿಸಿದರೂ ಪೌಲನು ಕೈಸರನಿಗೆ ಅಪ್ಪೀಲು ಮಾಡಿರದಿದ್ದರೆ ಅವನನ್ನು ಬಿಡಿಸಬಹುದಿತ್ತು ಎಂದು ಒಪ್ಪಿಕೊಂಡನು.
ಸಮುದ್ರದಲ್ಲಿ ಅಪಾಯ
17. ಪೌಲನು ರೋಮಿಗೆ ಯಾನ ಮಾಡಿದಾಗ ಬಂದ ಸಮುದ್ರದ ಅಪಾಯವನ್ನು ನೀವು ಹೇಗೆ ವರ್ಣಿಸುವಿರಿ?
17 ರೋಮಿಗೆ ಮಾಡಿದ ಪ್ರಯಾಣದಲ್ಲಿ ಪೌಲನು “ಸಮುದ್ರದಲ್ಲಿ ಅಪಾಯ”ಕ್ಕೆ ಬಲಿಬಿದ್ದನು. (2 ಕೊರಿಂಥ 11:24-27) ಕೈಸರೈಯದಿಂದ ರೋಮಿಗೆ ಯಾನ ಮಾಡುವಾಗ ಜೂಲಿಯಸ್ನೆಂಬ ಸೇನಾಧಿಕಾರಿಯ ವಶದಲ್ಲಿ ಕೈದಿಗಳಿದ್ದರು. (27:1-26) ಹಡಗು ಸೀದೋನಿಗೆ ತಲಪಿದಾಗ ವಿಶ್ವಾಸಿಗಳನ್ನು ಭೇಟಿಯಾಗಲು ಅನುಮತಿ ದೊರೆತ ಪೌಲನು ವಿಶ್ವಾಸಿಗಳಿಂದ ಆತ್ಮಿಕವಾಗಿ ಚೈತನ್ಯಗೊಳಿಸಲ್ಪಟ್ಟನು. (3 ಯೋಹಾನ 14 ಹೋಲಿಸಿ.) ಏಸ್ಯಾ ಮೈನರಿನ ಮೈರದಲ್ಲಿ ಇಟೆಲಿಗೆ ಹೋಗುತ್ತಿದ್ದ ಧಾನ್ಯ ಹಡಗಿಗೆ ಜೂಲಿಯಸನು ಕೈದಿಗಳನ್ನು ಹತ್ತಿಸಿದನು. ಎದುರುಗಾಳಿ ಇದ್ದರೂ ಅವರು ಕ್ರೇತ ದ್ವೀಪದ ಲಸಾಯ ಪಟ್ಟಣದ ಸಮೀಪವಿದ್ದ ಚಂದರೇವುಗಳೆಂಬ ಸ್ಥಳಗಳನ್ನು ಮುಟ್ಟಿದರು. ಆ ಸ್ಥಳವನ್ನು ಬಿಟ್ಟು ಪೊಯಿನಿಕ್ಸ್ ರೇವಿಗೆ ಹೋಗುವಾಗ ಈಶಾನ್ಯ ದಿಕ್ಕಿನ ಬಿರುಗಾಳಿ ಹಡಗನ್ನು ಬುಡುಕೊಂಡು ಹೋಯಿತು. ಉತ್ತರ ಆಫ್ರಿಕ ಕರಾವಳಿಯ ಸುರ್ತಿಸ್ (ಕಳ್ಳುಸುಬು ನೆಲ) ನಲ್ಲಿ ಹಡಗು ನೆಲಹತ್ತಿತೆಂಬ ಭಯದಿಂದ ನಾವಿಕರು “ಹಾಯಿಯನ್ನು ಸಡಿಲು ಮಾಡಿ”ದರು, ಪ್ರಾಯಶಃ ಕೂವೆಮರ ಮತ್ತು ಹಾಯಿಯನ್ನು ಕೆಳಗಿಳಿಸಿದರು. ಹಡಗದ ಜೋಡಣೆ ಭಾಗವಾಗದಂತೆ ಹಡಗಿನ ಒಡಲಿನ ಸುತ್ತಲೂ ಹಗ್ಗವನ್ನು ಬಿಗಿಯಲಾಗಿತ್ತು. ಮರುದಿನವೂ ಬಿರುಗಾಳಿ ಮುಂದರಿಯಲಾಗಿ ಸರಕನ್ನು ಹೊರಗೆಸೆದು ಹಡಗನ್ನು ಹಗುರ ಮಾಡಲಾಯಿತು. ಮೂರನೆಯ ದಿನ ಯಂತ್ರ ಸಲಕರಣೆ (ಹಾಯಿ ಮತ್ತು ಮಿಕ್ಕ ಸಲಕರಣೆ)ಯನ್ನು ಅವರು ಎಸೆದರು. ಅವರ ನಿರೀಕ್ಷೆ ಮೊಬ್ಬಾಗುವಂತೆ ಕಂಡಾಗ, ಒಬ್ಬ ದೇವದೂತನು ಪೌಲನಿಗೆ ತೋರಿಸಿಕೊಂಡು, ಭಯಪಡಬಾರದೆಂದೂ, ಏಕೆಂದರೆ ಅವನು ಕೈಸರನ ಮುಂದೆ ನಿಲ್ಲುವನೆಂದೂ ಹೇಳಿದನು. ಎಲ್ಲಾ ಪ್ರಯಾಣಿಕರು ಒಂದು ದ್ವೀಪವನ್ನು ಸೇರುವರೆಂದು ಪೌಲನು ತಿಳಿಸಿದಾಗ ಅವರಿಗೆ ಎಷ್ಟೊಂದು ಉಪಶಮನವಾಗಿರಬೇಕು !
18. ಕೊನೆಗೆ ಪೌಲನಿಗೂ ಜೊತೆ ಪ್ರಯಾಣಿಕರಿಗೂ ಏನು ಸಂಭವಿಸಿತು?
18 ಪ್ರಯಾಣಿಕರು ಬದುಕಿ ಉಳಿದರು. (27:27-44) 14 ನೇ ದಿವಸದ ಮಧ್ಯರಾತ್ರಿಯಲ್ಲಿ ನಾವಿಕರಿಗೆ ನೆಲ ಸಮೀಪವಿದೆ ಎಂದು ತಿಳಿದು ಬಂತು. ಅಳತೆಗುಂಡು ಇದನ್ನು ದೃಢಪಡಿಸಿತು ಮತ್ತು ಹಡಗು ಬಂಡೆಗೆ ಬಡೆಯುವ ವಿಪತ್ತನ್ನು ತಪ್ಪಿಸಲು ಲಂಗರಗಳನ್ನು ಕೆಳಗಿಳಿಸಲಾಯಿತು. ಪೌಲನ ಪ್ರೋತ್ಸಾಹದಿಂದ 276 ಜನರಲ್ಲಿ ಪ್ರತಿಯೊಬ್ಬನೂ ಆಹಾರ ತಕ್ಕೊಂಡರು. ಆ ಬಳಿಕ ಗೋಧಿಯನ್ನು ಹೊರಗೆಸೆದು ಹಡಗನ್ನು ಹಗುರ ಮಾಡಲಾಯಿತು. ಹೊತ್ತಾರೆ, ನಾವಿಕರು ಲಂಗರಗಳನ್ನು ಕಡಿದು ಹುಟ್ಟುಗಳನ್ನು ಬಿಚ್ಚಿ ಮುಂದಿನ ಹಾಯಿಯನ್ನು ಗಾಳಿಗೆ ಎತ್ತಿ ಕಟ್ಟಿದರು. ಹಡಗು ಮರಳ ದಿಬ್ಬ ಹತ್ತಲಾಗಿ ಅದರ ಹಿಂಭಾಗ ಒಡೆದು ಚೂರು ಚೂರಾಯಿತು. ಆದರೆ ಎಲ್ಲರೂ ನೆಲಸೇರಿದರು.
19. ಮೇಲಿತೆಯಲ್ಲಿ ಪೌಲನಿಗೆ ಏನು ಸಂಭವಿಸಿತು, ಮತ್ತು ಅಲ್ಲಿ ಅವನು ಇತರರಿಗೆ ಏನು ಮಾಡಿದನು?
19 ಹಡಗಿನ ಒಡೆತಕ್ಕೆ ಬಲಿಬಿದ್ದು ನೆನೆದು ಆಯಾಸಗೊಂಡಿದ್ದ ಇವರಿಗೆ ಈಗ ತಾವು ಮೆಲೀತೆ ದ್ವೀಪವನ್ನು ತಲಪಿದ್ದೇವೆಂದು ತಿಳಿದು ಬಂತು. ದ್ವೀಪವಾಸಿಗಳು ಅವರಿಗೆ “ಅಸಾಧಾರಣವಾದ ಮಾನವ ದಯೆ”ಯನ್ನು ತೋರಿಸಿದರು. (NW)(28:1-16) ಪೌಲನು ಬೆಂಕಿಯ ಮೇಲೆ ಕಟ್ಟಿಗೆಯನ್ನಿಟ್ಟಾಗ, ಆ ಶಾಖವು ಸುಪ್ತಾವಸ್ಥೆಯಲ್ಲಿದ್ದ ವಿಷದ ಹಾವೊಂದನ್ನು ಎಬ್ಬಿಸಲಾಗಿ ಅದು ಅವನ ಕೈಯನ್ನು ಸುತ್ತಿಕೊಂಡಿತು. (ಈಗ ಮೆಲೀತೆಯಲ್ಲಿ ವಿಷದ ಹಾವುಗಳಿಲ್ಲವಾದರೂ ಇದು “ವಿಷ ಜಂತು”ವಾಗಿತ್ತು.) ಮೆಲೀತೆಯ ಜನರು, ಪೌಲನು, “ಪ್ರತೀಕಾರಕ ನ್ಯಾಯವು” ಅವನನ್ನು ಜೀವಿಸಲು ಬಿಡದ ಕೊಲೆಪಾತಕನೆಂದು ಎಣಿಸಿದರೂ, ಅವನು ಸಾಯದೆ ಇದುದ್ದನ್ನು ಅಥವಾ ಉರಿಯೂತದಿಂದ ಬಾತುಹೋಗದ್ದನ್ನು ನೋಡಿ ಅವನು ದೇವನೆಂದರು. ಆ ಬಳಿಕ ಮೆಲೀತೆಯ ಮುಖ್ಯಾಧಿಕಾರಿ ಪೂಬಿಯ್ಲಸನ ತಂದೆ ಸಹಿತ ಅನೇಕರನ್ನು ಪೌಲನು ವಾಸಿಮಾಡಿದನು. ಮೂರು ತಿಂಗಳುಗಳಾದ ಮೇಲೆ ಪೌಲ, ಲೂಕ ಮತ್ತು ಅರಿಸ್ತಾರ್ಕರು “ಸ್ಯೂಸ್ನ ಪುತ್ರರು” (ನಾವಿಕರಿಗೆ ಸಹಾಯ ನೀಡುವವರೆಂದು ಹೇಳಲಾಗುವ, ಕ್ಯಾಸ್ಟರ್ ಮತ್ತು ಪೊಲಕ್ಸ್ ಎಂಬ ಅವಳಿ ದೇವತೆಗಳು) ಎಂಬ ಚಿಹ್ನೆಯಿದ್ದ ಹಡಗಿನಲ್ಲಿ ಅಲ್ಲಿಂದ ತೆರಳಿದರು. ಪೊತಿಯೋಲವನ್ನು ತಲಪಿದಾಗ ಜೂಲಿಯಸನು ತನ್ನ ಕೈದಿಯೊಂದಿಗೆ ಮುಂದೆ ಪ್ರಯಾಣಿಸಿದನು. ರೋಮನ್ ರಾಜಧಾನಿಯಿಂದ ಬಂದಿದ್ದ ಕ್ರೈಸ್ತರು ಅವನನ್ನು ಅಪ್ಪಿಯ ರಾಜಮಾರ್ಗದಲ್ಲಿ ಅಪ್ಪಿಯ ಪೇಟೆ ಮತ್ತು ತ್ರಿಚ್ಛತ್ರ ಎಂಬ ಸ್ಥಳದಲ್ಲಿ ಭೇಟಿಯಾಗಲಾಗಿ ಪೌಲನು ದೇವರಿಗೆ ಸ್ತೋತ್ರಮಾಡಿ ಧೈರ್ಯಗೊಂಡನು. ಕೊನೆಗೆ, ರೋಮಿನಲ್ಲಿ ಪೌಲನಿಗೆ ಒಂಟಿಗನಾಗಿ—ಆದರೆ ಸೈನಿಕ ಕಾವಲಿನಲ್ಲಿ—ಜೀವಿಸುವ ಅನುಮತಿ ದೊರೆಯಿತು.
ಯೆಹೋವನ ರಾಜ್ಯವನ್ನು ಸಾರುತ್ತಾ ಹೋಗಿರಿ!
20. ರೋಮಿನ ತನ್ನ ಮನೆಯಲ್ಲಿ ಪೌಲನು ಯಾವ ಚಟುವಟಿಕೆಯಲ್ಲಿ ಮಗ್ನನಾದನು?
20 ರೋಮಿನ ತನ್ನ ಮನೆಯಲ್ಲಿ ಪೌಲನು ಧೈರ್ಯದಿಂದ ಯೆಹೋವನ ರಾಜ್ಯದ ಕುರಿತು ಸಾರಿದನು. (28:17-31) ಅವನು ಯೆಹೂದ್ಯರ ಪ್ರಧಾನರಿಗೆ ಹೇಳಿದ್ದು: “ಇಸ್ರಾಯೇಲ್ ಜನರ ನಿರೀಕ್ಷೆಯ ನಿಮಿತ್ತವಾಗಿ ಈ ಬೇಡಿಯಿಂದ ಕಟ್ಟಲ್ಪಟ್ಟಿದ್ದೇನೆ.” ಈ ನಿರೀಕ್ಷೆಯಲ್ಲಿ ಮೆಸ್ಸೀಯನನ್ನು ಅಂಗೀಕರಿಸುವ ವಿಷಯ ಸೇರಿದೆ. ಈ ಕಾರಣಕ್ಕಾಗಿ ನಾವೂ ಬಾಧೆಪಡಲು ಸಿದ್ಧರಿರಬೇಕು. (ಫಿಲಿಪ್ಪಿಯವರಿಗೆ 1:29) ಆದರೆ ಯೆಹೂದ್ಯರಲ್ಲಿ ಬಹುತೇಕ ಮಂದಿ ನಂಬದಿದ್ದರೂ ಅನೇಕ ಅನ್ಯರು ಮತ್ತು ಯೆಹೂದಿ ಜನಶೇಷವೊಂದು ಸಮರ್ಪಕ ಹೃದಯ ಪರಿಸ್ಥಿತಿಯನ್ನು ತೋರಿಸಿದರು. (ಯೆಶಾಯ 6:9, 10) ಎರಡು ವರ್ಷಕಾಲ (ಸುಮಾರು ಸಾ. ಶ. 59-61) ಪೌಲನು ತನ್ನ ಬಳಿಗೆ ಬರುವವರೆಲ್ಲರನ್ನು ಸೇರಿಸಿಕೊಂಡು “ಯಾವ ಅಡಿಯ್ಡೂ ಇಲ್ಲದೆ ತುಂಬಾ ಧೈರ್ಯದಿಂದ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸುತ್ತಾ ಕರ್ತನಾದ ಯೇಸುಕ್ರಿಸ್ತನ ವಿಷಯವಾಗಿ ಉಪದೇಶ ಮಾಡುತ್ತಾ ಇದ್ದನು.”
21. ತನ್ನ ಭೂಜೀವಿತದ ಅಂತ್ಯದ ತನಕವೂ ಪೌಲನು ಯಾವ ಮಾದರಿಯನ್ನಿಟ್ಟನು?
21 ನೀರೋ ಅರಸನು ಪೌಲನು ನಿರಿಪರಾಧಿಯೆಂದು ನಿರ್ಣಯಿಸಿ ಅವನನ್ನು ಬಿಡುಗಡೆ ಮಾಡಿದನೆಂದು ಗೊತ್ತಾಗಿ ಬರುತ್ತದೆ. ಆಗ ಅಪೊಸ್ತಲನು ತಿಮೊಥಿ ಮತ್ತು ತೀತರೊಂದಿಗೆ ತನ್ನ ಕೆಲಸವನ್ನು ಪುನಃ ಆರಂಭಿಸಿದನು. ಆದರೆ ಅವನನ್ನು ರೋಮಿನಲ್ಲಿ ಪುನಃ (ಸುಮಾರು ಸಾ. ಶ. 65) ಬಂಧಿಸಲಾಗಿ, ನೀರೋ ಅರಸನ ಕೈಯಿಂದ ಅವನು ಹುತಾತ್ಮನಾಗಿ ಸತ್ತಿರುವುದು ಸಂಭವನೀಯ. (2 ತಿಮೊಥಿ 4:6-8) ಆದರೆ ಕೊನೆಯ ತನಕ, ಪೌಲನು ಧೀರತೆಯ ರಾಜ್ಯ ಘೋಷಕನಾಗಿ ಉತ್ತಮ ಮಾದರಿಯನ್ನಿಟ್ಟನು. ಈ ಕಡೇ ದಿವಸಗಳಲ್ಲಿ ಇದೇ ಮನೋಭಾವವುಳ್ಳವರಾಗಿ ದೇವರಿಗೆ ಸಮರ್ಪಿತರೆಲ್ಲರೂ ಧೈರ್ಯದಿಂದ ಯೆಹೋವನ ರಾಜ್ಯವನ್ನು ಸಾರುವವರಾಗಲಿ ! (w90 6/15)
ನೀವು ಹೇಗೆ ಉತ್ತರಿಸುವಿರಿ?
◻ ಪೌಲನು ಎಫೆಸದ ಹಿರಿಯರಿಗೆ ಯಾವ ಶುಶ್ರೂಷಾ ತರಬೇತು ಕೊಟ್ಟನು?
◻ ದೇವರ ಚಿತ್ತಕ್ಕೆ ಅಧೀನನಾಗುವುದರಲ್ಲಿ ಪೌಲನು ಹೇಗೆ ಮಾದರಿಯನ್ನಿಟ್ಟನು?
◻ ದೊಂಬಿಗಳ ಸಂಬಂಧದಲ್ಲಿ ಪೌಲನ ಅನುಭವಕ್ಕೂ ಇಂದಿನ ಯೆಹೋವನ ಸಾಕ್ಷಿಗಳ ಅನುಭವಕ್ಕೂ ಯಾವ ಹೋಲಿಕೆ ಇದೆ?
◻ ರಾಜ್ಯಪಾಲ ಫೆಸ್ತನ ಮುಂದೆ ಪೌಲನು ಯಾವ ಶಾಸನಬದ್ಧ ಏರ್ಪಾಡಿನ ಪ್ರಯೋಜನ ತಕ್ಕೊಂಡನು, ಮತ್ತು ಇದಕ್ಕೆ ಯಾವ ಆಧುನಿಕ ದಿನಗಳ ಹೋಲಿಕೆ ಇದೆ?
◻ ಪೌಲನು ರೋಮಿನ ಮನೆಯಲ್ಲಿ ಇರುವಾಗ ಯಾವ ಚಟುವಟಿಕೆಯಲ್ಲಿ ಮಗ್ನನಾಗಿದ್ದನು, ಮತ್ತು ಯಾವ ಮಾದರಿಯನ್ನಿಟ್ಟನು?