ಒಂದು ಅಪರಿಪೂರ್ಣ ಲೋಕದಲ್ಲಿ ಭರವಸೆ
“ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.” ನಿಮ್ಮ ವಿಷಯದಲ್ಲೂ ಇದು ಸತ್ಯವಾಗಿರುವುದು ನಿಮಗೆ ಕಂಡುಬರುತ್ತದೋ? ಅದೇ ರೀತಿಯ ಸಮಸ್ಯೆ ಅಪೊಸ್ತಲ ಪೌಲನಿಗೂ ಇತ್ತು ಎಂಬುದನ್ನು ತಿಳಿಯಲು ಉತ್ತೇಜಿತರಾಗಿರಿ; ಆದರೂ ಕ್ರೈಸ್ತ ಸಮಗ್ರತೆಯಲ್ಲಿ ಅವನೊಬ್ಬ ಎದ್ದುಕಾಣುವ ವ್ಯಕ್ತಿಯಾಗಿದ್ದನು. ಇದೊಂದು ವಿರೋಧೋಕ್ತಿಯಾಗಿಲ್ಲವೇ? ರೋಮ್ನಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ, ಪೌಲನು ಸಮಸ್ಯೆಯನ್ನು ವಿಶ್ಲೇಷಿಸಿದನು: “ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು.” ಯಾವ ಪಾಪಕ್ಕೆ ಅವನು ಸೂಚಿಸುತ್ತಿದ್ದಾನೆ, ಮತ್ತು ಒಬ್ಬ ಸಮಗ್ರತೆಯ ಮನುಷ್ಯನಾಗಿರಲು, ಅದನ್ನು ಅವನು ಹೇಗೆ ಜಯಿಸಿದನು?—ರೋಮಾಪುರ 7:19, 20.
ತನ್ನ ಪತ್ರದ ಮೊದಲಲ್ಲಿ, ಪೌಲನು ಬರೆದದ್ದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” ಆ “ಒಬ್ಬ ಮನುಷ್ಯ”ನು ಆದಾಮನಾಗಿದ್ದನು. (ರೋಮಾಪುರ 5:12, 14) ಮಾನವಕುಲವು ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆಯ ಕಾರಣ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಒಂದು ನಿಜವಾದ ಪಂಥಾಹ್ವಾನವಾಗಿರುವುದೇಕೆ ಎಂಬುದಕ್ಕೆ ಒಂದು ಮೂಲಕಾರಣವು, ಆದಾಮಸಂಬಂಧಿತ ಪಾಪ—ಮೊದಲನೆಯ ಮಾನವನಾದ ಆದಾಮನ ಪಾಪವಾಗಿದೆ.
“ಮೂಲಭೂತ ಪಾಪ”ದ—ಈ ಮೊದಲು ಕರೆಯಲಾಗಿದ್ದಂತಹ—ಕುರಿತಾದ ಪೌಲನ ನೋಟವು, ಇಂದು ವ್ಯಾಪಕವಾಗಿ ಅಂಗೀಕರಿಸಲ್ಪಡುವುದಿಲ್ಲ, ಏಕೆಂದರೆ ದೇವತಾಶಾಸ್ತ್ರೀಯ ಕ್ಷೇತ್ರಗಳಲ್ಲಿ ವಿಕಾಸವಾದಗಳನ್ನು ಅಂಗೀಕರಿಸಿ, ಬೈಬಲಿನ ಸೃಷ್ಟಿ ವೃತ್ತಾಂತವನ್ನು ತಳ್ಳಿಹಾಕಲಾಗಿದೆ. “ವಿದ್ವಾಂಸರು ಪೂರ್ತಿ ಭಾಗವನ್ನು ಬದಿಗೆ ಹಾಕಿದ್ದಾರೆ,” ಎಂದು ರೋಮಾಪುರ 5:12-14ರ ಕುರಿತಾದ ಒಂದು ಆಧುನಿಕ ವ್ಯಾಖ್ಯಾನವು ಹೇಳುತ್ತದೆ. ಆದರೂ ನೂರು ವರುಷಗಳ ಹಿಂದೆ, ಬೈಬಲ್ ವ್ಯಾಖ್ಯಾನಗಳು “ಆದಾಮನು ಪಾಪಮಾಡಿದಾಗ . . . ಅವನು ಆ ಪಾಪದಿಂದ ಮತ್ತು ಅದರ ಪರಿಣಾಮದಿಂದ ಅವನ ಎಲ್ಲಾ ಸಂತತಿಯನ್ನು ಮಲಿನಗೊಳಿಸಿದನು,” ಎಂದು ಸುಸಂಗತವಾಗಿ ವಿವರಿಸಿದವು.a
ಸಮಗ್ರತೆಯ ಮೂಲಭೂತ ನಷ್ಟ
ಮೊದಲನೇ ಮಾನವನಾದ ಆದಾಮನ ಅಸ್ತಿತ್ವವು ಇಂದು ಅನೇಕರಿಂದ ಅಲ್ಲಗಳೆಯಲ್ಪಡುವಂತೆಯೇ, ಪಿಶಾಚನಾದ ಸೈತಾನನೂ ಪೌರಾಣಿಕ ಕಲ್ಪನೆಯೆಂಬುದಾಗಿ ತಳ್ಳಿಹಾಕಲ್ಪಡುತ್ತಾನೆ.b ಆದರೆ ಇವನು “ಸತ್ಯದಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ,” ಅಂದರೆ ಬೇರೊಂದು ಮಾತಿನಲ್ಲಿ, ಅವನು ಭರವಸಯೋಗ್ಯನಾಗಿರಲಿಲ್ಲ ಎಂಬುದಾಗಿ ಪ್ರಧಾನ ಅಧಿಕಾರಿಯಾಗಿರುವ ಯೇಸು ಕ್ರಿಸ್ತನು ನಮಗೆ ಹೇಳುತ್ತಾನೆ. (ಯೋಹಾನ 8:44, NW) ಮತ್ತು ಆದಾಮನು ಹಾಗೂ ಅವನ ಹೆಂಡತಿಯಾದ ಹವ್ವಳು ಯೆಹೋವನ ವಿರುದ್ಧ ದಂಗೆಯೆದ್ದದ್ದೂ, ಪರೀಕ್ಷೆಯ ಕೆಳಗೆ ತಮ್ಮ ಸಮಗ್ರತೆಯನ್ನು ಮುರಿದುಬಿಟ್ಟದ್ದೂ, ಸೈತಾನನ ಚಿತಾವಣೆಯಿಂದಲೆ.—ಆದಿಕಾಂಡ 3:1-19.
ನಾವೆಲ್ಲರೂ ಆದಾಮನಿಂದ ಬಂದವರಾದ ಕಾರಣ, ನಾವೆಲ್ಲರೂ ಪಾಪದ ಮನೋಭಾವವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. ವಿವೇಕಿಯಾದ ಸೊಲೊಮೋನನು ತಿಳಿಸಿದ್ದು: “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ.” (ಪ್ರಸಂಗಿ 7:20) ಆದರೂ, ಯಾವುದೇ ಮಾನವನು ಭರವಸಾರ್ಹನಾಗಿರಸಾಧ್ಯವಿದೆ. ಇದು ಹೇಗೆ ಸಾಧ್ಯ? ಏಕೆಂದರೆ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಒಬ್ಬ ಪರಿಪೂರ್ಣ ಮನುಷ್ಯನೇ ಬೇಕೆಂದಿರುವುದಿಲ್ಲ.
ಸಮಗ್ರತೆಯ ಆಧಾರ
ಇಸ್ರಾಯೇಲಿನ ರಾಜ ದಾವೀದನು, ಬತ್ಷೆಬೆಯೊಂದಿಗಿನ ತನ್ನ ಸುಪ್ರಮಾಣಿತ ವ್ಯಭಿಚಾರ ಸಂಬಂಧವನ್ನು ಸೇರಿಸಿ, ಅನೇಕ ತಪ್ಪುಗಳನ್ನು ಮಾಡಿದನು. (2 ಸಮುವೇಲ 11:1-27) ದಾವೀದನ ಅನೇಕ ತಪ್ಪುಗಳು, ಅವನು ಪರಿಪೂರ್ಣನಾಗಿರಲಿಲ್ಲವೆಂಬುದನ್ನು ಎತ್ತಿತೋರಿಸಲು ಸಹಾಯಮಾಡಿದವು. ಆದರೂ, ಯೆಹೋವನು ಆ ಮನುಷ್ಯನಲ್ಲಿ ಏನನ್ನು ಕಂಡನು? ದಾವೀದನ ಮಗನಾದ ಸೊಲೊಮೋನನಿಗೆ ಸಂಬೋಧಿಸುತ್ತಾ ಯೆಹೋವನು ಹೇಳಿದ್ದು: “ನೀನು ನಿನ್ನ ತಂದೆಯಾದ ದಾವೀದನಂತೆ ಪೂರ್ಣಮನಸ್ಸಿನಿಂದಲೂ [“ಹೃದಯದ ಸಮಗ್ರತೆಯಿಂದಲೂ,” NW] ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊ.” (1 ಅರಸುಗಳು 9:4) ದಾವೀದನ ಅನೇಕ ತಪ್ಪುಗಳ ಎದುರಿನಲ್ಲಿಯೂ, ಅವನ ಭರವಸಾರ್ಹತೆಯು ಯೆಹೋವನಿಂದ ಗುರುತಿಸಲ್ಪಟ್ಟಿತು. ಏಕೆ?
ದಾವೀದನು ಸೊಲೊಮೋನನಿಗೆ ಹೀಗೆ ಹೇಳಿದಾಗ ಉತ್ತರವನ್ನು ಕೊಟ್ಟನು: “ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿ”ದ್ದಾನೆ. (1 ಪೂರ್ವಕಾಲವೃತ್ತಾಂತ 28:9) ದಾವೀದನು ತಪ್ಪುಗಳನ್ನು ಮಾಡಿದನು, ಆದರೆ ಅವನು ದೀನನಾಗಿದ್ದನು ಮತ್ತು ಯಾವುದು ಸರಿಯಾಗಿತ್ತೋ ಅದನ್ನು ಮಾಡಬಯಸಿದನು. ಅವನು ಸುಸಂಗತವಾಗಿ ಗದರಿಕೆ ಮತ್ತು ತಿದ್ದುಪಾಟನ್ನು ಸ್ವೀಕರಿಸಿದನು—ಹೌದು, ಅದಕ್ಕಾಗಿ ಅವನು ಕೇಳಿಕೊಂಡನು. “ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು,” ಎಂಬುದು ಅವನ ಬೇಡಿಕೆಯಾಗಿತ್ತು. (ಕೀರ್ತನೆ 26:2) ಮತ್ತು ದಾವೀದನು ನಿಜವಾಗಿಯೂ ಶುದ್ಧೀಕರಿಸಲ್ಪಟ್ಟನು. ಉದಾಹರಣೆಗೆ, ಬತ್ಷೆಬೆಯೊಂದಿಗಿನ ಅವನ ಪಾಪದಿಂದ ಉಂಟಾದ ಇತಿಮಿತಿಗಳು, ಅವನ ಜೀವಿತದ ಕೊನೆಯ ವರೆಗೆ ಉಳಿದವು. ಆದರೂ, ದಾವೀದನು ಎಂದಿಗೂ ತನ್ನ ತಪ್ಪನ್ನು ಸಮರ್ಥಿಸಲು ಪ್ರಯತ್ನಿಸಲಿಲ್ಲ. (2 ಸಮುವೇಲ 12:1-12) ಹೆಚ್ಚು ಪ್ರಾಮುಖ್ಯವಾಗಿ, ಅವನು ಸತ್ಯ ಧರ್ಮದಿಂದ ದೂರಸರಿಯಲಿಲ್ಲ. ಈ ಕಾರಣಕ್ಕಾಗಿ, ಮತ್ತು ದಾವೀದನ ಯಥಾರ್ಥವಾದ, ಹೃತ್ಪೂರ್ವಕ ಪರಿತಾಪ ಹಾಗೂ ಪಶ್ಚಾತ್ತಾಪದ ಕಾರಣ, ಯೆಹೋವನು ಅವನ ಪಾಪಗಳನ್ನು ಕ್ಷಮಿಸಲು ಮತ್ತು ಅವನನ್ನು ಸಮಗ್ರತೆಯ ಒಬ್ಬ ಮನುಷ್ಯನನ್ನಾಗಿ ಸ್ವೀಕರಿಸಲು ಸಿದ್ಧನಿದ್ದನು.—ಕೀರ್ತನೆ 51ನ್ನೂ ನೋಡಿರಿ.
ಪರೀಕ್ಷೆಯ ಕೆಳಗೆ ಭರವಸಾರ್ಹತೆ
ಯೇಸು, ತನ್ನ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸಿದ ಪಿಶಾಚನಾದ ಸೈತಾನನಿಂದ ಪರೀಕ್ಷಿಸಲ್ಪಟ್ಟನು. ಪರಿಪೂರ್ಣ ಮನುಷ್ಯನಾಗಿದ್ದು, ಯಾರ ವಿಧೇಯತೆಯು ಒಂದು ದೈವಿಕ ನಿಯಮಕ್ಕೆ ವಿಧೇಯನಾಗುವಂತೆ ಕೇವಲ ಉಪದೇಶಿಸಲ್ಪಟ್ಟ ಮೂಲಕ ಪರೀಕ್ಷಿಸಲ್ಪಟ್ಟಿತೊ, ಆ ಆದಾಮನಿಗೆ ವ್ಯತಿರಿಕ್ತವಾಗಿ ಇವನು ತೊಂದರೆಗಳು ಮತ್ತು ಕಷ್ಟಾನುಭವದಲ್ಲಿಯೂ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕಿತ್ತು. ಅದಕ್ಕೆ ಕೂಡಿಸಿ, ತನ್ನ ಸಮಗ್ರತೆಯ ಮೇಲೆ ಮಾನವ ಕುಟುಂಬದ ವಿಮೋಚನೆಯು ಹೊಂದಿಕೊಂಡಿದೆ ಎಂಬ ಜ್ಞಾನದ ಒತ್ತಡವೂ ಯೇಸುವಿಗೆ ಇತ್ತು.—ಇಬ್ರಿಯ 5:8, 9.
ಯೇಸುವಿನ ಸಮಗ್ರತೆಯನ್ನು ಮುರಿಯುವ ದೃಢನಿರ್ಣಯವನ್ನು ಮಾಡುತ್ತಾ ಸೈತಾನನು, ಯೇಸು ಅತ್ಯಂತ ಬಲಹೀನ ಸ್ಥಿತಿಯಲ್ಲಿರುವಾಗ—ಅವನು ಮನನಮಾಡುತ್ತಾ, ಉಪವಾಸಮಾಡುತ್ತಾ 40 ದಿವಸಗಳನ್ನು ಅರಣ್ಯದಲ್ಲಿ ಕಳೆದ ಅನಂತರ—ಅವನನ್ನು ಸಮೀಪಿಸಿದನು. ಅವನು ಮೂರು ಬಾರಿ ಯೇಸುವನ್ನು ಶೋಧಿಸಿದನು—ಕಲ್ಲುಗಳನ್ನು ರೊಟ್ಟಿಯಾಗುವಂತೆ ಮಾಡಲು; ದೇವದೂತರ ಹಸ್ತಕ್ಷೇಪವು ಅವನನ್ನು ರಕ್ಷಿಸಬಲ್ಲದು ಮತ್ತು ಈ ರೀತಿ ಆತನ ಮೆಸ್ಸೀಯತ್ವವನ್ನು ನಿರೂಪಿಸಲು ಒಂದು ಅದ್ಭುತಕರ ಸೂಚನೆಯನ್ನು ಕೊಡಬಹುದು ಎಂದು ಭಾವಿಸುತ್ತಾ, ದೇವಾಲಯದ ಶಿಖರದ ಮೇಲಿನಿಂದ ಕೆಳಕ್ಕೆ ಧುಮುಕಲು; ಸೈತಾನನಿಗೆ ಕೇವಲ ಒಂದು “ಆರಾಧನಾ ಕೃತ್ಯಕ್ಕೆ” (NW) ಬದಲಿಯಾಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನು ಸ್ವೀಕರಿಸಲು. ಆದರೆ ಯೇಸು, ಯೆಹೋವನಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತ, ಪ್ರತಿಯೊಂದು ಶೋಧನೆಯನ್ನು ನಿರಾಕರಿಸಿದನು.—ಮತ್ತಾಯ 4:1-11; ಲೂಕ 4:1-13.
ಯೋಬನ ಸಮಗ್ರತೆ
ಯೋಬನ ನಿಲುವು, ಪರೀಕ್ಷೆಯ ಕೆಳಗೆ ಅವನು ಸಮಗ್ರತೆಯನ್ನು ಕಾಪಾಡಿಕೊಂಡದ್ದು ಸುಪ್ರಸಿದ್ಧವಾಗಿದೆ. ಆಸಕ್ತಿದಾಯಕವಾಗಿ, ಯೋಬನಿಗೆ ವಿಪತ್ತು ಏಕೆ ತನ್ನ ಮೇಲೆ ಬಂತು ಎಂಬುದು ಅರ್ಥವಾಗಲಿಲ್ಲ. ಯೋಬನು ಸ್ವಾರ್ಥ ಕಾರಣಗಳಿಗಾಗಿ ದೇವರನ್ನು ಸೇವಿಸಿದನು ಎಂದು ಆಪಾದಿಸುತ್ತಾ ಮತ್ತು ತನ್ನ ಸ್ವಂತ ಜೀವವನ್ನು ರಕ್ಷಿಸಿಕೊಳ್ಳಲಿಕ್ಕಾಗಿ ತನ್ನ ಸಮಗ್ರತೆಯನ್ನು ಮುರಿಯಲು ಸಿದ್ಧನಿದ್ದಾನೆ ಎಂಬುದಾಗಿ ಹೇಳುತ್ತಾ, ಸೈತಾನನು ಸುಳ್ಳು ಉದ್ದೇಶಗಳನ್ನು ತನ್ನ ಮೇಲೆ ಆರೋಪಿಸಿದ್ದನೆಂಬುದು ಅವನಿಗೆ ತಿಳಿದಿರಲಿಲ್ಲ. ಸೈತಾನನು ತಪ್ಪಿತಸ್ಥನೆಂದು ತೋರಿಸಲಾಗುವಂತೆ, ಯೋಬನು ಬಹಳ ಕಠಿನವಾದ ಕೆಲವು ಅನುಭವಗಳನ್ನು ಅನುಭವಿಸುವಂತೆ ಯೆಹೋವನು ಅನುಮತಿಸಿದನು.—ಯೋಬ 1:6-12; 2:1-8.
ಮೂವರು ಸುಳ್ಳು ಸ್ನೇಹಿತರು ರಂಗವನ್ನು ಪ್ರವೇಶಿಸಿದರು. ಅವರು ಬೇಕುಬೇಕೆಂದೇ ದೇವರ ಮಟ್ಟಗಳನ್ನು ಮತ್ತು ಉದ್ದೇಶಗಳನ್ನು ತಪ್ಪಾಗಿ ನಿರೂಪಿಸಿದರು. ಯೋಬನ ಹೆಂಡತಿ ಸಹ—ವಿಷಯವನ್ನು ಅರ್ಥಮಾಡಿಕೊಳ್ಳಲಾಗದೆ—ತನ್ನ ಗಂಡನು ತೀವ್ರವಾದ ಆವಶ್ಯಕತೆಯಲ್ಲಿದ್ದಾಗ ಅವನನ್ನು ಉತ್ತೇಜಿಸಲು ತಪ್ಪಿಹೋದಳು. (ಯೋಬ 2:9-13) ಆದರೆ ಯೋಬನು ಸ್ಥಿರವಾಗಿ ನಿಂತನು. “ಸಾಯುವ ತನಕ ನನ್ನ ಯಥಾರ್ಥತ್ವದ [“ಸಮಗ್ರತೆಯ,” NW] ಹೆಸರನ್ನು ಕಳಕೊಳ್ಳೆನು. ನನ್ನ ನೀತಿಯನ್ನು ಎಂದಿಗೂ ಬಿಡದೆ ಭದ್ರವಾಗಿ ಹಿಡಿದುಕೊಳ್ಳುವೆನು. ನನ್ನ ಜೀವಮಾನದ ಯಾವ ದಿನಚರ್ಯದಲ್ಲಿಯೂ ಮನಸ್ಸಾಕ್ಷಿಯ ತಪ್ಪುತೋರಿಸುವದಿಲ್ಲ.”—ಯೋಬ 27:5, 6.
ಬೈಬಲಿನಲ್ಲಿ ದಾಖಲಾದಂತೆ, ಅನೇಕ ನಂಬಿಗಸ್ತ ಪುರುಷರ ಹಾಗೂ ಸ್ತ್ರೀಯರ ಸಮಗ್ರತೆಯೊಂದಿಗೆ, ಯೋಬನ ಅಪ್ಪಟ ಮಾದರಿಯು, ಸೈತಾನನನ್ನು ಒಬ್ಬ ಸುಳ್ಳುಗಾರನನ್ನಾಗಿ ರುಜುಪಡಿಸಿತು.
ಸಮಗ್ರತೆ ಮತ್ತು ಕ್ರೈಸ್ತ ಶುಶ್ರೂಷೆ
ಸಮಗ್ರತೆಯು, ಕೇವಲ ತನ್ನ ಸ್ವಂತ ತೃಪ್ತಿಗಾಗಿ ಯೆಹೋವನು ಮಾನ್ಯಮಾಡುವ ಗುಣವಾಗಿದೆಯೋ? ಇಲ್ಲ. ಮಾನವರಾದ ನಮಗೆ, ಸಮಗ್ರತೆಯು ಒಂದು ವಾಸ್ತವಿಕ ಮೌಲ್ಯದ್ದಾಗಿದೆ. ‘ನಮ್ಮ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದಲೂ, ಪೂರ್ಣ ಪ್ರಾಣದಿಂದಲೂ ಮತ್ತು ಪೂರ್ಣ ಬುದ್ಧಿಯಿಂದಲೂ ಪ್ರೀತಿಸು’ವಂತೆ ಯೇಸು ಎಚ್ಚರಿಸಿದ್ದು ನಮ್ಮ ಪ್ರಯೋಜನಕ್ಕಾಗಿಯೇ. ನಿಜವಾಗಿಯೂ, ಈ ಆಜ್ಞೆಯು “ಮುಖ್ಯವಾದದ್ದು ಮತ್ತು ಮೊದಲನೆಯದು,” ಮತ್ತು ಇದನ್ನು ಪಾಲಿಸಲು ಸಮಗ್ರತೆಯುಳ್ಳ ಪುರುಷ, ಸ್ತ್ರೀ, ಅಥವಾ ಮಗುವಿನ ಅವಶ್ಯವಿದೆ. (ಮತ್ತಾಯ 22:36-38) ಸಮಗ್ರತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಏನು ಒಳಗೊಂಡಿದೆ, ಮತ್ತು ಪ್ರತಿಫಲಗಳಾವುವು?
ಸಮಗ್ರತೆಯ ಮನುಷ್ಯನ ಮೇಲೆ ಕೇವಲ ಅವನ ಜೊತೆಮಾನವನಲ್ಲ, ಹೆಚ್ಚು ಪ್ರಾಮುಖ್ಯವಾಗಿ, ದೇವರು ಭರವಸೆಯಿಡಬಲ್ಲನು. ಅವನ ಹೃದಯದ ಶುದ್ಧತೆಯು ಅವನ ಕೃತ್ಯಗಳಲ್ಲಿ ತೋರಿಬರುತ್ತದೆ; ಅವನು ಕಪಟತನದಿಂದ ವಿಮುಕ್ತನಾಗಿದ್ದಾನೆ. ಅವನು ಮೋಸಗಾರ ಅಥವಾ ಭ್ರಷ್ಟನಾಗಿರುವುದಿಲ್ಲ. ಅಪೊಸ್ತಲ ಪೌಲನು ಇದನ್ನು ಈ ರೀತಿಯಲ್ಲಿ ತಿಳಿಸಿದನು: “ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.”—2 ಕೊರಿಂಥ 4:2.
ಪೌಲನು ಉಲ್ಲೇಖಿಸಿದ ಗುಣಗಳು, ಕ್ರೈಸ್ತ ಶುಶ್ರೂಷೆಗೆ ಸಂಬಂಧಪಟ್ಟವುಗಳಾಗಿವೆ ಎಂಬುದನ್ನು ಗಮನಿಸಿರಿ. ಒಬ್ಬ ಕ್ರೈಸ್ತ ಶುಶ್ರೂಷಕನ ಕೃತ್ಯಗಳು ಸರಿಯಾಗಿಲ್ಲದಿದ್ದರೆ, ಅವನು ಒಬ್ಬ ಸಮಗ್ರತೆಯ ಮನುಷ್ಯನಾಗಿರದಿದ್ದರೆ, ಅವನು ಹೇಗೆ ತಾನೇ ಇತರರಿಗೆ ಸೇವೆಸಲ್ಲಿಸಸಾಧ್ಯವಿದೆ? ಇತ್ತೀಚೆಗೆ ರಾಜೀನಾಮೆ ಕೊಟ್ಟ, ಒಂದು ಐರಿಷ್ ಧಾರ್ಮಿಕ ವ್ಯವಸ್ಥೆಯ ಮಠಾಧಿಪತಿಯು, ವಿಷಯವನ್ನು ಸ್ಪಷ್ಟವಾಗಿ ಚಿತ್ರಿಸುತ್ತಾನೆ. ದಿ ಇಂಡಿಪೆನ್ಡೆಂಟ್ ವಾರ್ತಾ ಪತ್ರಿಕೆಗನುಸಾರ, “ಮಕ್ಕಳ ಕಾಮಿಯಾದ ಒಬ್ಬ ಪಾದ್ರಿಯು ಮಕ್ಕಳನ್ನು ಅಪಪ್ರಯೋಗಿಸಿದ ವಿಷಯವು ತಿಳಿದು ಬಂದ ಬಹಳ ಸಮಯದ ನಂತರವೂ, ಅವನು ಮಕ್ಕಳೊಂದಿಗೆ ಕೆಲಸವನ್ನು ಮುಂದುವರಿಸುವಂತೆ ನಾನು ಬಿಟ್ಟೆ,” ಎಂದು ಅವನು ಒಪ್ಪಿಕೊಂಡನು. ಮಕ್ಕಳ ಅಪಪ್ರಯೋಗವು 24 ವರುಷಗಳಿಗಿಂತಲೂ ಹೆಚ್ಚು ಸಮಯ ಮುಂದುವರಿಯಿತು ಎಂಬುದಾಗಿ ವೃತ್ತಾಂತವು ವಿವರಿಸಿತು. ಪಾದ್ರಿಯು ನಾಲ್ಕು ವರುಷಗಳ ವರೆಗೆ ಸೆರೆಗೆ ಹಾಕಲ್ಪಟ್ಟನು, ಆದರೆ ಕ್ರಿಯೆಕೈಕೊಳ್ಳಲು ನೈತಿಕ ಸಮಗ್ರತೆಯ ಕೊರತೆಯುಳ್ಳವನಾದ ಅವನ ಮಠಾಧಿಪತಿಯ ಕಾರಣ, ಆ ವರುಷಗಳಲ್ಲಿ ಅವನು ಅತ್ಯಾಚಾರ ನಡೆಸಿದ ಮಕ್ಕಳ ಮೇಲೆ ಹೊರಿಸಲ್ಪಟ್ಟ ಕಷ್ಟಾನುಭವವನ್ನು ಕುರಿತು ಯೋಚಿಸಿರಿ!
ಸಮಗ್ರತೆ—ಪ್ರತಿಫಲಗಳು
ಅಪೊಸ್ತಲ ಯೋಹಾನನು ಒಬ್ಬ ಭಯರಹಿತ ಮನುಷ್ಯನಾಗಿದ್ದನು. ಅವರ ಉರಿಯುತ್ತಿದ್ದ ಉತ್ಸಾಹದ ಕಾರಣ, ಯೇಸು ಅವನನ್ನೂ, ಅವನ ಸಹೋದರ ಯಾಕೋಬನನ್ನೂ “ಗುಡುಗಿನ ಮರಿಗಳು” ಎಂದು ಕರೆದನು. (ಮಾರ್ಕ 3:17) ಎದ್ದುಕಾಣುವ ಸಮಗ್ರತೆಯ ಮನುಷ್ಯನಾದ ಯೋಹಾನನು—ಪೇತ್ರನೊಂದಿಗೆ—ತಾನು ಯೇಸುವಿನೊಂದಿಗಿದ್ದಾಗ ಕಂಡು, ಕೇಳಿದ್ದ ಸಂಗತಿಗಳ ಕುರಿತು ‘ಮಾತನಾಡದೆ ಇರಲಾರೆನು’ ಎಂಬುದಾಗಿ ಯೆಹೂದಿ ಅಧಿಕಾರಿಗಳಿಗೆ ವಿವರಿಸಿದನು. “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಹೇಳಿದ ಅಪೊಸ್ತಲರಲ್ಲಿ ಯೋಹಾನನೂ ಒಬ್ಬನಾಗಿದ್ದನು.—ಅ. ಕೃತ್ಯಗಳು 4:19, 20; 5:27-32.
ಯೋಹಾನನು ತನ್ನ 90ಗಳ ಕೊನೆಯಲ್ಲಿದ್ದಾಗ, ‘ದೇವರ ಕುರಿತು ಮಾತನಾಡಿದ್ದಕ್ಕೂ, ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ’ ಪತ್ಮೊಸ್ ದ್ವೀಪಕ್ಕೆ ಗಡೀಪಾರು ಮಾಡಲ್ಪಟ್ಟನು. (ಪ್ರಕಟನೆ 1:9) ತನ್ನ ಈ ಪ್ರಾಯದಲ್ಲಿ, ತನ್ನ ಶುಶ್ರೂಷೆಯು ಮುಗಿದುಹೋಗಿತ್ತು ಎಂಬುದಾಗಿ ಅವನು ನೆನಸಿದ್ದಿರಲೂಬಹುದು. ಆದರೆ ಅವನಿಗಿದ್ದಂತಹ ಸಮಗ್ರತೆಯ ಪುರುಷನಿಗೆ ಮಾತ್ರ ಪ್ರಕಟನೆಯ ರೋಮಾಂಚಕ ದರ್ಶನವನ್ನು ಬರೆಯುವಂತೆ ನೇಮಕವು ಕೊಡಲ್ಪಡಸಾಧ್ಯವಿತ್ತು. ಈ ನೇಮಕದಲ್ಲಿ ಯೋಹಾನನು ನಂಬಿಗಸ್ತನಾಗಿದ್ದನು. ಅವನಿಗೆ ಅದು ಎಂತಹ ಒಂದು ಸುಯೋಗವಾಗಿತ್ತು! ಮತ್ತು ಹೆಚ್ಚಿನ ಸುಯೋಗಗಳು ಮುಂದೆ ಬರಲಿದ್ದವು. ಅನಂತರ, ಎಫೆಸದ ಪರಿಸರದಲ್ಲಿ ಅವನು ತನ್ನ ಸುವಾರ್ತಾ ವೃತ್ತಾಂತವನ್ನೂ, ಮೂರು ಪತ್ರಗಳನ್ನೂ ಬರೆದನೆಂಬುದು ಸ್ಪಷ್ಟ. 70 ವರುಷಗಳ ನಂಬಿಗಸ್ತ, ಭರವಸಾರ್ಹವಾದ ಸೇವೆಯನ್ನು ಯಶಸ್ವಿಗೊಳಿಸಲು ಎಂತಹ ಮಹಾ ಸುಯೋಗಗಳು!
ಸಮಗ್ರತೆಯ ವ್ಯಕ್ತಿಯಾಗಿ ಇರುವುದು ಆಳವಾದ ತೃಪ್ತಿಯನ್ನು ಕೊಡುತ್ತದೆ. ದೇವರ ದೃಷ್ಟಿಯಲ್ಲಿ ಭರವಸಾರ್ಹರಾಗಿರುವುದು ನಿತ್ಯ ಪ್ರತಿಫಲಗಳನ್ನು ತರುತ್ತದೆ. ಇಂದು, ಸತ್ಯಾರಾಧಕರ “ಮಹಾ ಸಮೂಹ”ವು, ನಿತ್ಯ ಜೀವದ ಪ್ರತೀಕ್ಷೆಯೊಂದಿಗೆ, ಶಾಂತಿ ಮತ್ತು ಐಕ್ಯದ ನೂತನ ಲೋಕವನ್ನು ಪ್ರವೇಶಿಸಲು ತಯಾರಿಸಲ್ಪಡುತ್ತಿದೆ. (ಪ್ರಕಟನೆ 7:9) ಸೈತಾನನು ತರಬಹುದಾದ ಅನೇಕ ಪಂಥಾಹ್ವಾನಗಳು ಹಾಗೂ ಈ ವಿಷಯಗಳ ವ್ಯವಸ್ಥೆಯ ಸಂಕಷ್ಟಗಳ ಎದುರಿನಲ್ಲಿಯೂ, ನೈತಿಕತೆ ಮತ್ತು ಆರಾಧನೆಯಂತಹ ಮುಖ್ಯ ವಿಷಯಗಳಲ್ಲಿ ಸಮಗ್ರತೆಯನ್ನು ಎತ್ತಿಹಿಡಿಯಲೇಬೇಕು. ಭರವಸೆಯಿಂದಿರಿ, ಯೆಹೋವನು ಕೊಡುವ ಶಕ್ತಿಯಿಂದ ನೀವು ಜಯಿಸಸಾಧ್ಯವಿದೆ!—ಫಿಲಿಪ್ಪಿ 4:13.
ಸದ್ಯದ ಮತ್ತು ಭವಿಷ್ಯತ್ತಿನ ಕುರಿತು ಮಾತಾಡುತ್ತಾ, ಯೆಹೋವನಿಗೆ ಉಪಕಾರಸ್ತುತಿಯಲ್ಲಿ, ಕೀರ್ತನೆಗಾರನಾದ ದಾವೀದನು ಹೀಗೆ ಹೇಳುವಾಗ ನಮ್ಮೆಲ್ಲರಿಗೆ ಪುನರಾಶ್ವಾಸನೆ ನೀಡುತ್ತಾನೆ: “ನಿರ್ದೋಷಿಯಾದ [“ಸಮಗ್ರನಾದ,” NW] ನನ್ನನ್ನಾದರೋ ನೀನು ಉದ್ಧಾರಮಾಡಿ ನಿನ್ನ ಸನ್ನಿಧಿಯಲ್ಲಿ ನಿಲ್ಲಿಸುವಿ. . . . ಕರ್ತನಿಗೆ [“ಯೆಹೋವನಿಗೆ,” NW] . . . ಕೊಂಡಾಟವಾಗಲಿ. ಆಮೆನ್. ಆಮೆನ್.”—ಕೀರ್ತನೆ 41:12, 13.
[ಅಧ್ಯಯನ ಪ್ರಶ್ನೆಗಳು]
a ವಿವಿಧ ಲೇಖಕರ ಸಂಕ್ಷಿಪ್ತ ವ್ಯಾಖ್ಯಾನದೊಂದಿಗೆ, ಆತೊರೈಸ್ಡ್ ವರ್ಷನ್ಗನುಸಾರ, ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ಹೊಸ ಒಡಂಬಡಿಕೆ (ಇಂಗ್ಲಿಷ್)ಯಲ್ಲಿನ ಹೇಳಿಕೆ.
b ಸೈತಾನ ಎಂಬ ಹೆಸರಿನ ಅರ್ಥ “ಪ್ರತಿಭಟಕ.” “ಪಿಶಾಚ” ಅಂದರೆ “ನಿಂದಕ.”
[ಪುಟ 4 ರಲ್ಲಿರುವ ಚಿತ್ರ]
ತನ್ನ ತಪ್ಪುಗಳ ಎದುರಿನಲ್ಲಿಯೂ, ದಾವೀದನು ಭರವಸೆಗೆ ಯೋಗ್ಯನಾಗಿ ಪರಿಣಮಿಸಿದನು
[ಪುಟ 5 ರಲ್ಲಿರುವ ಚಿತ್ರ]
ಯೇಸು ನಮಗೆ ಭರವಸಾರ್ಹತೆಯ ಅತ್ಯುತ್ತಮ ಉದಾಹರಣೆಯನ್ನು ಬಿಟ್ಟುಹೋದನು
[ಪುಟ 7 ರಲ್ಲಿರುವ ಚಿತ್ರ]
ಭರವಸಾರ್ಹರಾಗಿರುವುದು ಮಹಾ ತೃಪ್ತಿಯನ್ನು ತರುತ್ತದೆ