ನಿತ್ಯಜೀವಕ್ಕಾಗಿರುವ ಏಕೈಕ ಮಾರ್ಗ
“ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ.”—ಯೋಹಾನ 14:6.
1, 2. ಯೇಸು ನಿತ್ಯಜೀವಕ್ಕೆ ನಡೆಸುವ ದಾರಿಯನ್ನು ಯಾವುದಕ್ಕೆ ಹೋಲಿಸಿದನು, ಮತ್ತು ಅವನ ದೃಷ್ಟಾಂತದ ಸೂಚಿತಾರ್ಥವೇನು?
ಯೇಸು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ, ನಿತ್ಯಜೀವಕ್ಕೆ ನಡೆಸುವ ಮಾರ್ಗವನ್ನು, ವ್ಯಕ್ತಿಯೊಬ್ಬನು ಒಂದು ಬಾಗಿಲಿನ ಮೂಲಕ ಪ್ರವೇಶಿಸುವ ದಾರಿಗೆ ಹೋಲಿಸುತ್ತಾನೆ. ಜೀವಕ್ಕೆ ನಡೆಸುವ ಈ ದಾರಿಯು ಸುಲಭವಾದದ್ದಲ್ಲವೆಂದು ಯೇಸು ಒತ್ತಿಹೇಳುವುದನ್ನು ಗಮನಿಸಿರಿ. ಅವನು ಹೇಳಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶನಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.”—ಮತ್ತಾಯ 7:13, 14.
2 ಈ ದೃಷ್ಟಾಂತದ ಸೂಚಿತಾರ್ಥವನ್ನು ನೀವು ಗ್ರಹಿಸಿಕೊಳ್ಳುತ್ತೀರೊ? ಜೀವಕ್ಕೆ ನಡಿಸುವ ಒಂದೇ ಒಂದು ದಾರಿ ಅಥವಾ ಮಾರ್ಗವಿದೆಯೆಂದು, ಮತ್ತು ಆ ಜೀವದ ಹಾದಿಯಿಂದ ದಾರಿತಪ್ಪದೆ ಮುಂದರಿಯಲು ನಾವು ಪ್ರಯಾಸಪಡಲಿಕ್ಕಿದೆಯೆಂದು ಅದು ತಿಳಿಯಪಡಿಸುವುದಿಲ್ಲವೊ? ಹಾಗಾದರೆ, ನಿತ್ಯಜೀವಕ್ಕೆ ನಡಿಸುವ ಏಕೈಕ ಮಾರ್ಗವು ಯಾವುದಾಗಿದೆ?
ಯೇಸು ಕ್ರಿಸ್ತನ ಪಾತ್ರ
3, 4. (ಎ) ನಮ್ಮ ರಕ್ಷಣೆಯಲ್ಲಿ ಯೇಸುವಿನ ಪ್ರಮುಖ ಪಾತ್ರವನ್ನು ಬೈಬಲು ಹೇಗೆ ತೋರಿಸುತ್ತದೆ? (ಬಿ) ಮಾನವಕುಲವು ನಿತ್ಯಜೀವವನ್ನು ಪಡೆಯಸಾಧ್ಯವೆಂದು ದೇವರು ಪ್ರಪ್ರಥಮವಾಗಿ ಯಾವಾಗ ಪ್ರಕಟಿಸಿದನು?
3 ಸ್ಪಷ್ಟವಾಗಿ, ಆ ಮಾರ್ಗಕ್ಕೆ ಸಂಬಂಧಿಸಿದ ಒಂದು ಪ್ರಾಮುಖ್ಯ ಪಾತ್ರವು ಯೇಸುವಿಗೆ ಇದೆಯೆಂದು ಅಪೊಸ್ತಲ ಪೇತ್ರನು ಘೋಷಿಸಿದನು: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ. ಆ ಹೆಸರಿನಿಂದಲೇ [ಯೇಸುವಿನ ಹೆಸರಿನ] ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.” (ಅ. ಕೃತ್ಯಗಳು 4:12) ತದ್ರೀತಿಯಲ್ಲಿ, ಅಪೊಸ್ತಲ ಪೌಲನು ಪ್ರಕಟಿಸಿದ್ದು: “ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ನಿತ್ಯಜೀವಕ್ಕಿರುವ ಏಕೈಕ ಮಾರ್ಗವು ಅವನೇ ಎಂಬುದನ್ನು ಯೇಸು ಸ್ವತಃ ಪ್ರಕಟಿಸಿ, ಹೇಳಿದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ.”—ಯೋಹಾನ 14:6.
4 ಆದುದರಿಂದ, ನಿತ್ಯಜೀವವನ್ನು ಸಾಧ್ಯಮಾಡುವುದರಲ್ಲಿ ಯೇಸುವಿನ ಪಾತ್ರವನ್ನು ನಾವು ಅಂಗೀಕರಿಸುವುದು ಮಹತ್ವದ ಸಂಗತಿಯಾಗಿದೆ. ಆದುದರಿಂದ, ಅವನ ಪಾತ್ರವನ್ನು ನಾವು ಜಾಗರೂಕತೆಯಿಂದ ಪರೀಕ್ಷಿಸೋಣ. ಆದಾಮನು ಪಾಪಮಾಡಿದ ನಂತರ, ಮಾನವಕುಲವು ನಿತ್ಯಜೀವವನ್ನು ಪುನಃ ಪಡೆದುಕೊಳ್ಳಸಾಧ್ಯವಿತ್ತೆಂದು ಯೆಹೋವ ದೇವರು ಯಾವಾಗ ಸೂಚಿಸಿದನೆಂಬುದು ನಿಮಗೆ ಗೊತ್ತೊ? ಆದಾಮನು ಪಾಪಗೈದ ಕೂಡಲೇ. ಮಾನವಕುಲದ ರಕ್ಷಕನೋಪಾದಿ ಯೇಸು ಕ್ರಿಸ್ತನ ಒದಗಿಸುವಿಕೆಯು ಪ್ರಥಮವಾಗಿ ಹೇಗೆ ಮುಂತಿಳಿಸಲ್ಪಟ್ಟಿತು ಎಂಬುದನ್ನು ನಾವು ಈಗ ಪರಿಶೀಲಿಸೋಣ.
ವಾಗ್ದತ್ತ ಸಂತಾನ
5. ಹವ್ವಳನ್ನು ಮೋಸಗೊಳಿಸಿದ ಸರ್ಪವನ್ನು ನಾವು ಹೇಗೆ ಗುರುತಿಸಬಹುದು?
5 ಸಾಂಕೇತಿಕ ಭಾಷೆಯನ್ನು ಉಪಯೋಗಿಸುತ್ತಾ, ಯೆಹೋವ ದೇವರು ಈ ವಾಗ್ದತ್ತ ರಕ್ಷಕನನ್ನು ಗುರುತಿಸಿದನು. ಇದನ್ನು “ಸರ್ಪ”ಕ್ಕೆ ಶಿಕ್ಷೆ ವಿಧಿಸುವಾಗ ಆತನು ಮಾಡಿದನು. ಈ ಸರ್ಪವು ಹವ್ವಳೊಂದಿಗೆ ಮಾತಾಡಿ, ನಿಷೇಧಿಸಲ್ಪಟ್ಟ ಹಣ್ಣನ್ನು ತಿನ್ನುವ ಮೂಲಕ ದೇವರಿಗೆ ಅವಿಧೇಯಳಾಗುವಂತೆ ಪ್ರಲೋಭಿಸಿತು. (ಆದಿಕಾಂಡ 3:1-5) ಆ ಸರ್ಪವು ನಿಜವಾದ ಹಾವಾಗಿರಲಿಲ್ಲ. ಅದೊಂದು ಶಕ್ತಿಶಾಲಿಯಾದ ಆತ್ಮಿಕ ಜೀವಿಯಾಗಿದ್ದು, ಬೈಬಲಿನಲ್ಲಿ ಅವನನ್ನು “ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ”ನೆಂದು ಗುರುತಿಸಲಾಗಿದೆ. (ಪ್ರಕಟನೆ 12:9) ಹವ್ವಳನ್ನು ಮೋಸಗೊಳಿಸಲಿಕ್ಕಾಗಿ ಸೈತಾನನು ಈ ಕೆಳಜಾತಿಯ ಜೀವಿಯನ್ನು ತನ್ನ ವದನಕನಾಗಿ ಬಳಸಿದನು. ಹೀಗೆ, ಸೈತಾನನಿಗೆ ಶಿಕ್ಷೆ ವಿಧಿಸುವಾಗ ದೇವರು ಅವನಿಗೆ ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.”—ಆದಿಕಾಂಡ 3:15.
6, 7. (ಎ) “ಸಂತಾನ”ಕ್ಕೆ ಜನ್ಮನೀಡುವ ಆ ಸ್ತ್ರೀಯು ಯಾರು? (ಬಿ) ವಾಗ್ದತ್ತ ಸಂತಾನವು ಯಾರು, ಮತ್ತು ಅವನು ಏನನ್ನು ಸಾಧಿಸುತ್ತಾನೆ?
6 ಸೈತಾನನಿಗೆ ಶತ್ರುತ್ವವಿರುವ ಅಥವಾ ಹಗೆತನವಿರುವ ಈ “ಸ್ತ್ರೀ”ಯು ಯಾರು? ಪ್ರಕಟನೆ 12ನೆಯ ಅಧ್ಯಾಯದಲ್ಲಿ “ಪುರಾತನ ಸರ್ಪ”ವನ್ನು ಗುರುತಿಸಲಾಗಿರುವಂತೆಯೇ, ಸೈತಾನನು ಹಗೆಮಾಡುವ ಈ ಸ್ತ್ರೀಯು ಸಹ ಗುರುತಿಸಲ್ಪಟ್ಟಿದ್ದಾಳೆ. 1ನೆಯ ವಚನದಲ್ಲಿ, “ಸೂರ್ಯನನ್ನು ಧರಿಸಿಕೊಂಡಿದ್ದ ಒಬ್ಬ ಸ್ತ್ರೀಯಿದ್ದಳು; ಆಕೆಯ ಕಾಲುಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು” ಎಂದು ಅವಳ ಕುರಿತು ಹೇಳಲಾಗಿದೆ. ಈ ಸ್ತ್ರೀಯು ನಂಬಿಗಸ್ತ ದೇವದೂತರ ಸ್ವರ್ಗೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತಾಳೆ, ಮತ್ತು ಅವಳು ಜನ್ಮಕೊಡುವ ಆ “ಗಂಡು ಮಗು,” ಯೇಸು ಕ್ರಿಸ್ತನು ರಾಜನಾಗಿ ಆಳುತ್ತಿರುವ ದೇವರ ರಾಜ್ಯವನ್ನು ಪ್ರತಿನಿಧಿಸುತ್ತದೆ.—ಪ್ರಕಟನೆ 12:1-5.
7 ಹಾಗಾದರೆ, ಆದಿಕಾಂಡ 3:15ರಲ್ಲಿ ಉಲ್ಲೇಖಿಸಲ್ಪಟ್ಟಂತೆ, ಸೈತಾನನ “ತಲೆಯನ್ನು” ಜಜ್ಜಿ, ಹೀಗೆ ಅವನಿಗೆ ಸಾವೇಟನ್ನು ಹಾಕುವ ಈ “ಸಂತಾನ” ಅಥವಾ ಆ ಸ್ತ್ರೀಯ ಸಂತಾನವು ಯಾರು? ಒಬ್ಬ ಕನ್ನಿಕೆಯಿಂದ ಅದ್ಭುತಕರವಾಗಿ ಜನಿಸುವಂತೆ ದೇವರು ಸ್ವರ್ಗದಿಂದ ಕಳುಹಿಸಿದ ಯೇಸುವೇ ಆ ಸಂತಾನವಾಗಿದ್ದನು. (ಮತ್ತಾಯ 1:18-23; ಯೋಹಾನ 6:38) ಪುನರುತ್ಥಿತ ಸ್ವರ್ಗೀಯ ರಾಜನೋಪಾದಿ ಈ ಸಂತಾನವಾದ ಯೇಸು ಕ್ರಿಸ್ತನು, ಸೈತಾನನನ್ನು ಸೋಲಿಸುವುದರಲ್ಲಿ ನಾಯಕತ್ವವನ್ನು ವಹಿಸುವನೆಂದು ಪ್ರಕಟನೆ 12ನೆಯ ಅಧ್ಯಾಯವು ತಿಳಿಸುತ್ತದೆ. ಮತ್ತು ಪ್ರಕಟನೆ 12:10 ಹೇಳುವ ಪ್ರಕಾರ ‘ನಮ್ಮ ದೇವರ ರಾಜ್ಯವನ್ನೂ ಕ್ರಿಸ್ತನ ಅಧಿಕಾರವನ್ನೂ’ ಅವನು ಸ್ಥಾಪಿಸುವನು.
8. (ಎ) ದೇವರು ತನ್ನ ಮೂಲ ಉದ್ದೇಶದ ಸಂಬಂಧದಲ್ಲಿ ಯಾವ ಹೊಸ ವಿಷಯವನ್ನು ಒದಗಿಸಿದನು? (ಬಿ) ದೇವರ ಹೊಸ ಸರಕಾರದಲ್ಲಿ ಯಾರೆಲ್ಲ ಸೇರಿರುವರು?
8 ಯೇಸು ಕ್ರಿಸ್ತನ ಕೈಯಲ್ಲಿರುವ ಈ ರಾಜ್ಯವು, ಮಾನವಕುಲವು ಭೂಮಿಯಲ್ಲಿ ನಿತ್ಯಜೀವವನ್ನು ಅನುಭವಿಸುವ ತನ್ನ ಮೂಲ ಉದ್ದೇಶದ ಸಂಬಂಧದಲ್ಲಿ ದೇವರು ಒದಗಿಸಿದ ಒಂದು ಹೊಸ ವಿಷಯವಾಗಿದೆ. ಸೈತಾನನ ದಂಗೆಯ ಬಳಿಕ, ಯೆಹೋವನು ಆ ಕೂಡಲೇ ದುಷ್ಟತನದ ಸಕಲ ಕೆಟ್ಟ ಫಲಿತಾಂಶಗಳನ್ನು ತೆಗೆದುಹಾಕಲು ಏರ್ಪಾಡುಮಾಡಿದ್ದು ಈ ಹೊಸ ರಾಜ್ಯ ಸರಕಾರದ ಮೂಲಕವೇ. ಯೇಸು ಭೂಮಿಯಲ್ಲಿದ್ದಾಗ, ಈ ರಾಜ್ಯದ ಆಡಳಿತದಲ್ಲಿ ತಾನೊಬ್ಬನೇ ಇರುವುದಿಲ್ಲವೆಂಬುದನ್ನು ಪ್ರಕಟಪಡಿಸಿದನು. (ಲೂಕ 22:28-30) ಸ್ವರ್ಗದಲ್ಲಿ ಅವನೊಂದಿಗೆ ಈ ಆಡಳಿತದಲ್ಲಿ ಭಾಗವಹಿಸಲು, ಇತರರು ಮಾನವಕುಲದವರೊಳಗಿಂದ ಆರಿಸಲ್ಪಡಲಿದ್ದರು. ಹೀಗೆ ಅವರು ಸ್ತ್ರೀಯ ಸಂತಾನದ ಒಂದು ಸಹಾಯಕ ಭಾಗವಾಗಿ ಸಂಯೋಜಿಸಲ್ಪಡಲಿದ್ದರು. (ಗಲಾತ್ಯ 3:16, 29) ಭೂಮಿಯ ಪಾಪಪೂರ್ಣ ಮಾನವಕುಲದಿಂದ ಆರಿಸಲ್ಪಡುವ ಯೇಸುವಿನ ಈ ಸಹರಾಜರ ಸಂಖ್ಯೆಯು 1,44,000 ಆಗಿದೆಯೆಂದು ಬೈಬಲು ತಿಳಿಸುತ್ತದೆ.—ಪ್ರಕಟನೆ 14:1-3.
9. (ಎ) ಯೇಸು ಭೂಮಿಯ ಮೇಲೆ ಮಾನವನೋಪಾದಿ ಏಕೆ ಬರಬೇಕಿತ್ತು? (ಬಿ) ಯೇಸು ಪಿಶಾಚನ ಕೆಲಸಗಳನ್ನು ಲಯಮಾಡಿದ್ದು ಹೇಗೆ?
9 ಆದರೂ ಆ ರಾಜ್ಯವು ಆಳಲು ತೊಡಗುವ ಮೊದಲು, ಆ ಸಂತಾನದ ಪ್ರಧಾನ ಭಾಗವಾದ ಯೇಸು ಕ್ರಿಸ್ತನು ಭೂಮಿಯ ಮೇಲೆ ಆಗಮಿಸುವುದು ಅತ್ಯಾವಶ್ಯಕವಾಗಿತ್ತು. ಏಕೆ? ಏಕೆಂದರೆ, “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರ [ಅಥವಾ, ತೆಗೆದುಹಾಕುವುದಕ್ಕೋಸ್ಕರ]” ಅವನು ಯೆಹೋವ ದೇವರಿಂದ ನೇಮಿಸಲ್ಪಟ್ಟಿದ್ದನು. ಸೈತಾನನ ಕೆಲಸಗಳಲ್ಲಿ, ಆದಾಮನನ್ನು ಪಾಪಮಾಡುವಂತೆ ಪ್ರೇರೇಪಿಸಿದ್ದೂ ಸೇರಿತ್ತು. ಇದರಿಂದಾಗಿ ಆದಾಮನ ಸಂತತಿಯವರೆಲ್ಲರ ಮೇಲೆ ಪಾಪ ಮತ್ತು ಮರಣದ ಶಾಪವು ಬಂದಿತ್ತು. (ರೋಮಾಪುರ 5:12) ಯೇಸು ತನ್ನ ಜೀವವನ್ನು ಪ್ರಾಯಶ್ಚಿತ್ತವಾಗಿ ಕೊಡುವ ಮೂಲಕ ಸೈತಾನನ ಈ ಕೆಲಸವನ್ನು ಲಯಮಾಡಿದನು. ಹೀಗೆ ಯೇಸು ಮಾನವಕುಲವನ್ನು ಪಾಪ ಮತ್ತು ಮರಣದ ಶಾಪದಿಂದ ಬಿಡಿಸಲು ಮತ್ತು ನಿತ್ಯಜೀವಕ್ಕಾಗಿ ದಾರಿಯನ್ನು ತೆರೆಯಲು ಒಂದು ಆಧಾರವನ್ನು ಒದಗಿಸಿಕೊಟ್ಟನು.—ಮತ್ತಾಯ 20:28; ರೋಮಾಪುರ 3:24; ಎಫೆಸ 1:7.
ಪ್ರಾಯಶ್ಚಿತ್ತವು ಸಾಧಿಸುವಂತಹ ಸಂಗತಿ
10. ಯೇಸು ಮತ್ತು ಆದಾಮನ ಮಧ್ಯೆ ಯಾವ ಹೋಲಿಕೆಯಿದೆ?
10 ಯೇಸುವಿನ ಜೀವವು ಸ್ವರ್ಗದಿಂದ ಒಂದು ಸ್ತ್ರೀಯ ಗರ್ಭಕ್ಕೆ ಸ್ಥಳಾಂತರಿಸಲ್ಪಟ್ಟ ಕಾರಣ, ಅವನು ಆದಾಮನ ಪಾಪದಿಂದ ಮಲಿನಗೊಳ್ಳದೆ, ಪರಿಪೂರ್ಣ ಮನುಷ್ಯನಾಗಿ ಜೀವಿಸಿದನು. ಹೀಗೆ, ಯೇಸುವಿಗೆ ಭೂಮಿಯ ಮೇಲೆ ಸದಾಕಾಲ ಜೀವಿಸುವ ಸಾಮರ್ಥ್ಯವು ಇತ್ತು. ತದ್ರೀತಿಯಲ್ಲಿ ಆದಾಮನು, ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ ಪರಿಪೂರ್ಣ ಮನುಷ್ಯನಾಗಿ ನಿರ್ಮಿಸಲ್ಪಟ್ಟಿದ್ದನು. “ಮೊದಲನೆಯ ಮನುಷ್ಯನಾದ ಆದಾಮನು ಬದುಕುವ ಪ್ರಾಣಿಯಾದನೆಂದು ಬರೆದದೆಯಲ್ಲಾ. ಕಡೇ ಆದಾಮ [ಯೇಸು ಕ್ರಿಸ್ತನು]ನೋ ಬದುಕಿಸುವ ಆತ್ಮನು. . . . ಮೊದಲನೆಯ ಮನುಷ್ಯನು ಭೂಮಿಯೊಳಗಿಂದ ಉತ್ಪನ್ನನಾಗಿ ಮಣ್ಣಿಗೆ ಸಂಬಂಧಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು” ಎಂಬುದಾಗಿ ಅಪೊಸ್ತಲ ಪೌಲನು ಬರೆದಾಗ, ಈ ಇಬ್ಬರು ಪುರುಷರಲ್ಲಿದ್ದ ಹೋಲಿಕೆಯು ಅವನ ಮನಸ್ಸಿನಲ್ಲಿತ್ತು.—1 ಕೊರಿಂಥ 15:45, 47.
11. (ಎ) ಆದಾಮನು ಮತ್ತು ಯೇಸು ಮಾನವಕುಲದ ಮೇಲೆ ಯಾವ ಪ್ರಭಾವವನ್ನು ಬೀರಿದರು? (ಬಿ) ನಾವು ಯೇಸುವಿನ ಯಜ್ಞಾರ್ಪಣೆಯನ್ನು ಹೇಗೆ ವೀಕ್ಷಿಸತಕ್ಕದ್ದು?
11 ಈ ತನಕ ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಇಬ್ಬರೇ ಪರಿಪೂರ್ಣ ಮನುಷ್ಯರ ಈ ಹೋಲಿಕೆಯು, ಯೇಸು “ಎಲ್ಲರಿಗಾಗಿ ತನ್ನನ್ನು ಅನುರೂಪವಾದ ಪ್ರಾಯಶ್ಚಿತ್ತವಾಗಿ ನೀಡಿಕೊಂಡನು” ಎಂಬ ಬೈಬಲಿನ ಪ್ರಕಟನೆಯಿಂದ ಒತ್ತಿಹೇಳಲ್ಪಟ್ಟಿದೆ. (1 ತಿಮೊಥೆಯ 2:6, NW) ಯೇಸು ಯಾರಿಗೆ ಅನುರೂಪವಾಗಿದ್ದನು? ಪರಿಪೂರ್ಣ ಮನುಷ್ಯನಾಗಿದ್ದ ಆದಾಮನಿಗೆ! ಮೊದಲನೆಯ ಮನುಷ್ಯನಾದ ಆದಾಮನ ಪಾಪವು ಇಡೀ ಮಾನವಕುಲಕ್ಕೆ ಮರಣದ ಶಿಕ್ಷೆಯಾಗಿ ಪರಿಣಮಿಸಿತು. “ಕಡೇ ಆದಾಮನ” ಯಜ್ಞವು, ನಾವು ಸದಾಕಾಲ ಜೀವಿಸಲು ಸಾಧ್ಯವಾಗುವಂತೆ, ಪಾಪ ಮತ್ತು ಮರಣದಿಂದ ಬಿಡುಗಡೆಗೆ ಆಧಾರವನ್ನು ಒದಗಿಸುತ್ತದೆ! ಯೇಸುವಿನ ಯಜ್ಞಾರ್ಪಣೆಯು ಎಷ್ಟೊಂದು ಅಮೂಲ್ಯ! ಅಪೊಸ್ತಲ ಪೇತ್ರನು ಗಮನಿಸಿದ್ದು: “ನಿಮಗೆ ಬಿಡುಗಡೆಯಾದದ್ದು ಬೆಳ್ಳಿ ಭಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ.” ಬದಲಿಗೆ, ಪೇತ್ರನು ವಿವರಿಸುವುದು: “ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ.”—1 ಪೇತ್ರ 1:18, 19.
12. ನಮ್ಮ ಮೇಲಿದ್ದ ಮರಣದ ಶಾಪದ ತೆಗೆದುಹಾಕುವಿಕೆಯನ್ನು ಬೈಬಲು ಹೇಗೆ ವರ್ಣಿಸುತ್ತದೆ?
12 ಮಾನವಕುಲದ ಮೇಲೆ ಬಂದ ಮರಣದ ಶಾಪವು ತೆಗೆದುಹಾಕಲ್ಪಡುವ ವಿಧಾನವನ್ನು ಬೈಬಲು ಬಹಳ ಸುಂದರವಾಗಿ ವರ್ಣಿಸುತ್ತದೆ. ಅದು ಹೇಳುವುದು: “ಒಂದೇ [ಆದಾಮನ] ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಸಾಯಬೇಕೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಒಂದೇ ಸತ್ಕಾರ್ಯ [ಯೇಸುವಿನ ಮರಣ]ದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವನ್ನು ಫಲಿಸುತ್ತದೆ. ಒಬ್ಬನ [ಆದಾಮನ] ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ [ಯೇಸುವಿನ] ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು.”—ರೋಮಾಪುರ 5:18, 19.
ಒಂದು ಮಹಿಮಾಭರಿತ ಪ್ರತೀಕ್ಷೆ
13. ಸದಾಕಾಲ ಜೀವಿಸುವುದರ ಬಗ್ಗೆ ಅನೇಕರಿಗೆ ಹೇಗೆ ಅನಿಸುತ್ತದೆ?
13 ದೇವರ ಈ ಮುನ್ನೇರ್ಪಾಡು ನಮ್ಮನ್ನು ಎಷ್ಟು ಸಂತೋಷಿತರನ್ನಾಗಿ ಮಾಡಬೇಕು! ಒಬ್ಬ ರಕ್ಷಕನು ನಿಮಗಾಗಿ ಒದಗಿಸಲ್ಪಟ್ಟಿದ್ದಾನೆ ಎಂಬ ಸಂಗತಿಯು ನಿಮ್ಮನ್ನು ಪುಳಕಿತಗೊಳಿಸುತ್ತದೋ? ಅಮೆರಿಕದ ಒಂದು ದೊಡ್ಡ ನಗರದ ವಾರ್ತಾಪತ್ರಿಕೆಯಿಂದ ನಡೆಸಲ್ಪಟ್ಟ ಒಂದು ಸಮೀಕ್ಷೆಯಲ್ಲಿ, “ಸದಾಕಾಲ ಜೀವಿಸುವ ಪ್ರತೀಕ್ಷೆಯು ನಿಮ್ಮ ಮನಸ್ಸಿಗೆ ಹಿಡಿಸುತ್ತದೋ?” ಎಂಬುದಾಗಿ ಕೇಳಲ್ಪಟ್ಟಾಗ, ಪ್ರತಿಕ್ರಿಯಿಸಿದವರಲ್ಲಿ 67.4 ಪ್ರತಿಶತ ಮಂದಿ “ಇಲ್ಲ”ವೆಂದು ಉತ್ತರಕೊಟ್ಟರು. ಸದಾಕಾಲ ಜೀವಿಸಲು ತಾವು ಬಯಸುವುದಿಲ್ಲವೆಂದು ಅವರು ಹೇಳಿದ್ದೇಕೆ? ಏಕೆಂದರೆ ಭೂಮಿಯ ಮೇಲಿನ ಜೀವಿತವು ಇಂದು ಎಷ್ಟೋ ಸಮಸ್ಯೆಗಳಿಂದ ಕೂಡಿದೆ. ಒಬ್ಬಾಕೆ ಹೇಳಿದ್ದು: “ನನ್ನನ್ನು 200 ವರ್ಷದ ಮುದುಕಿಯಾಗಿ ನೋಡಲು ನಾನು ಇಷ್ಟಪಡುವುದಿಲ್ಲ.”
14. ಸದಾಕಾಲ ಜೀವಿಸುವುದು ಸಂಪೂರ್ಣ ಆನಂದದ ವಿಷಯವಾಗಿರುವುದು ಏಕೆ?
14 ಆದರೆ ಜನರು ರೋಗ, ವೃದ್ಧಾಪ್ಯ ಮತ್ತು ಇತರ ದುರಂತಗಳನ್ನು ಅನುಭವಿಸುವ ಒಂದು ಲೋಕದಲ್ಲಿ ಸದಾಕಾಲ ಜೀವಿಸುವುದರ ಕುರಿತು ಬೈಬಲು ಮಾತಾಡುವುದಿಲ್ಲ. ಏಕೆಂದರೆ ದೇವರ ರಾಜ್ಯದ ಅರಸನೋಪಾದಿ ಯೇಸು, ಸೈತಾನನಿಂದ ಉಂಟುಮಾಡಲ್ಪಟ್ಟ ಅಂತಹ ಎಲ್ಲ ಸಮಸ್ಯೆಗಳನ್ನು ತೆಗೆದುಹಾಕಲಿರುವನು. ಬೈಬಲಿಗನುಸಾರ, ದೇವರ ರಾಜ್ಯವು ಈ ಲೋಕದ ಎಲ್ಲಾ ದಬ್ಬಾಳಿಕೆಯ ಸರಕಾರಗಳನ್ನು “ಭಂಗಪಡಿಸಿ ನಿರ್ನಾಮ ಮಾಡುವುದು.” (ದಾನಿಯೇಲ 2:44) ಆ ಸಮಯದಲ್ಲಿ, ಯೇಸು ತನ್ನ ಹಿಂಬಾಲಕರಿಗೆ ಕಲಿಸಿದ್ದ ಆ ಪ್ರಾರ್ಥನೆಗೆ ಸದುತ್ತರವಾಗಿ, ದೇವರ “ಚಿತ್ತವು” “ಪರಲೋಕದಲ್ಲಿ ನೆರೆವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವುದು.” (ಮತ್ತಾಯ 6:9, 10) ದೇವರ ಹೊಸ ಲೋಕದಲ್ಲಿ, ಭೂಮಿಯ ಸಕಲ ಕೆಟ್ಟತನವನ್ನು ಹೋಗಲಾಡಿಸಿದ ಮೇಲೆ, ಯೇಸುವಿನ ಪ್ರಾಯಶ್ಚಿತ್ತದ ಪ್ರಯೋಜನಗಳನ್ನು ಅನ್ವಯಿಸಲಾಗುವುದು. ಹೌದು, ಅದಕ್ಕೆ ಯೋಗ್ಯರಾಗಿರುವ ಮಾನವರೆಲ್ಲರೂ ಪರಿಪೂರ್ಣ ಆರೋಗ್ಯವನ್ನು ಪಡೆಯುವರು!
15, 16. ದೇವರ ಹೊಸ ಲೋಕದಲ್ಲಿ ಯಾವ ಪರಿಸ್ಥಿತಿಗಳಿರುವವು?
15 ದೇವರ ಹೊಸ ಲೋಕದಲ್ಲಿ ಜೀವಿಸುತ್ತಿರುವ ಜನರಿಗೆ, ಬೈಬಲಿನ ಈ ಹೇಳಿಕೆಯು ಅನ್ವಯವಾಗುವುದು: “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.” (ಯೋಬ 33:25) ಮತ್ತೊಂದು ಬೈಬಲ್ ವಾಗ್ದಾನವು ಕೂಡ ನೆರವೇರಿಕೆಯನ್ನು ಕಂಡುಕೊಳ್ಳುವುದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”—ಯೆಶಾಯ 35:5, 6.
16 ಸ್ವಲ್ಪ ಯೋಚಿಸಿನೋಡಿ: ನಮ್ಮ ಶಾರೀರಿಕ ಪ್ರಾಯವು 80, 800 ಅಥವಾ ಇನ್ನೂ ಹೆಚ್ಚೇ ಆಗಿರಲಿ, ನಮ್ಮ ದೇಹಗಳು ಅತ್ಯುತ್ತಮ ಆರೋಗ್ಯವನ್ನು ಪಡೆದಿರುವವು. ಅದು ಬೈಬಲಿನ ವಾಗ್ದಾನದಂತಿರುವುದು: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಆ ಸಮಯದಲ್ಲಿ, ಈ ವಾಗ್ದಾನವೂ ನೆರವೇರುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಯೆಶಾಯ 33:24; ಪ್ರಕಟನೆ 21:3, 4.
17. ದೇವರ ಹೊಸ ಲೋಕದಲ್ಲಿ ಜನರು ಏನನ್ನು ಸಾಧಿಸುವರೆಂದು ನಾವು ನಿರೀಕ್ಷಿಸಸಾಧ್ಯವಿದೆ?
17 ಆ ಹೊಸ ಲೋಕದಲ್ಲಿ, ನಮ್ಮ ವಿಸ್ಮಯಕರವಾದ ಮಿದುಳನ್ನು, ನಮ್ಮ ಸೃಷ್ಟಿಕರ್ತನು ಅದನ್ನು ಅಪರಿಮಿತವಾದ ಕಲಿಯುವ ಸಾಮರ್ಥ್ಯದೊಂದಿಗೆ ರಚಿಸಿದಾಗ ಸಂಕಲ್ಪಿಸಿದ್ದ ಮೇರೆಗೆ, ನಾವು ಉಪಯೋಗಿಸಲು ಶಕ್ತರಾಗುವೆವು. ಅಷ್ಟೇಕೆ, ನಾವು ಪೂರೈಸಬಹುದಾದ ಕೆಲವು ಆಶ್ಚರ್ಯಕರ ಸಂಗತಿಗಳನ್ನು ಸ್ವಲ್ಪ ಊಹಿಸಿಕೊಳ್ಳಿರಿ! ಅಪರಿಪೂರ್ಣ ಮನುಷ್ಯರು ಸಹ ಭೂಮಿಯ ಮೂಲಧಾತುಗಳ ಭಂಡಾರದಿಂದ ನಾವು ನಮ್ಮ ಸುತ್ತಮುತ್ತ ಕಾಣುವ ಎಲ್ಲವನ್ನು, ಅಂದರೆ ಸೆಲ್ಯೂಲರ್ ಫೋನ್ಗಳು, ಮೈಕ್ರೋಫೋನ್ಗಳು, ವಾಚ್ಗಳು, ಪೇಜರ್ಗಳು, ಕಂಪ್ಯೂಟರ್ಗಳು, ವಿಮಾನಗಳು, ಹೌದು ಯಾವುದೇ ವಸ್ತುವನ್ನು ಹೆಸರಿಸಿರಿ, ಅದನ್ನು ಉತ್ಪಾದಿಸಿದ್ದಾರೆ. ಅವುಗಳಲ್ಲಿ ಯಾವುದೂ ವಿಶ್ವದ ಯಾವುದೊ ಮೂಲೆಯಿಂದ ತಂದ ವಸ್ತುಗಳಿಂದ ಉತ್ಪಾದಿಸಲ್ಪಟ್ಟಿರುವುದಿಲ್ಲ. ಬರಲಿರುವ ಭೂಪ್ರಮೋದವನದಲ್ಲಿ ಅನಂತಕಾಲದ ಜೀವನವು ನಮ್ಮ ಮುಂದಿರುವಾಗ, ರಚನಾತ್ಮಕ ಕಾರ್ಯಸಾಧನೆಗಾಗಿರುವ ಸಾಧ್ಯತೆಯಾದರೋ ಅಪಾರ!—ಯೆಶಾಯ 65:21-25.
18. ದೇವರ ಹೊಸ ಲೋಕದಲ್ಲಿ ಜೀವನವು ಏಕೆ ಬೇಸರಹಿಡಿಸಲಾರದು?
18 ಜೀವನವು ಬೇಸರ ಹಿಡಿಸುವಂತಹದ್ದು ಆಗಿರುವುದಿಲ್ಲ. ನಾವು ಹತ್ತಾರು ಸಾವಿರ ಊಟಗಳನ್ನು ಮಾಡಿರಬಹುದಾಗಿದ್ದರೂ, ನಮ್ಮ ಮುಂದಿನ ಊಟಕ್ಕಾಗಿ ನಾವು ಈಗಲೂ ಮುನ್ನೋಡುತ್ತೇವೆ. ಮಾನವ ಪರಿಪೂರ್ಣತೆಯಲ್ಲಿ, ಪ್ರಮೋದವನ್ಯ ಭೂಮಿಯ ರಸವತ್ತಾದ ಉತ್ಪಾದನೆಯನ್ನು ನಾವು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಸವಿಯಬಲ್ಲೆವು. (ಯೆಶಾಯ 25:6) ಮತ್ತು ಭೂಮಿಯ ಸಮೃದ್ಧವಾದ ಪ್ರಾಣಿಜೀವಿಗಳನ್ನು ನೋಡಿಕೊಳ್ಳುವ ಮತ್ತು ಶೋಭಾಯಮಾನವಾದ ಸೂರ್ಯಾಸ್ತಮಾನಗಳನ್ನು, ಬೆಟ್ಟಗಳನ್ನು, ನದಿಗಳನ್ನು ಮತ್ತು ಕಣಿವೆಗಳನ್ನು ನೋಡುವ ಶಾಶ್ವತವಾದ ಆನಂದವು ನಮಗಿರುವುದು. ನಿಜವಾಗಿಯೂ ದೇವರ ಹೊಸ ಲೋಕದಲ್ಲಿ ಜೀವಿತವೆಂದೂ ನೀರಸವಾಗಿರದು!—ಕೀರ್ತನೆ 145:16.
ದೇವರ ಆವಶ್ಯಕತೆಗಳನ್ನು ಪೂರೈಸುವುದು
19. ದೇವರಿಂದ ಜೀವದ ಕೊಡುಗೆಯನ್ನು ಪಡೆದುಕೊಳ್ಳಲು ಕೆಲವೊಂದು ಆವಶ್ಯಕತೆಗಳಿವೆ ಎಂಬುದಾಗಿ ನಂಬುವುದು ಏಕೆ ನ್ಯಾಯಸಮ್ಮತವಾಗಿದೆ?
19 ನೀವು ಏನನ್ನೂ ಮಾಡದೇ, ಪ್ರಮೋದವನದಲ್ಲಿ ನಿತ್ಯಜೀವದ ದೇವರ ಭವ್ಯವಾದ ಕೊಡುಗೆಯನ್ನು ಪಡೆದುಕೊಳ್ಳಲು ನಿರೀಕ್ಷಿಸುವಿರೋ? ದೇವರು ನಮ್ಮಿಂದ ಏನನ್ನಾದರೂ ಅಪೇಕ್ಷಿಸುವುದು ನ್ಯಾಯಸಮ್ಮತವಲ್ಲವೊ? ನಿಶ್ಚಯವಾಗಿಯೂ ಹೌದು. ವಾಸ್ತವದಲ್ಲಿ, ದೇವರು ಆ ಕೊಡುಗೆಯನ್ನು ನಮ್ಮೆಡೆಗೆ ಎಸೆಯುವುದಿಲ್ಲ. ಆತನು ಅದನ್ನು ನಮ್ಮೆಡೆಗೆ ಚಾಚುತ್ತಾನೆ, ನಾವದನ್ನು ಎಟುಕಿಸಿಕೊಂಡು ತೆಗೆದುಕೊಳ್ಳಬೇಕು. ಅದರಲ್ಲಿ ಪ್ರಯತ್ನವು ಒಳಗೂಡಿದೆ. ಹೀಗಿರಲಾಗಿ, ಆ ಧನಿಕನಾದ ಯುವ ಅಧಿಪತಿಯು ಯೇಸುವಿಗೆ ಕೇಳಿದ ಪ್ರಶ್ನೆಯನ್ನೇ ನೀವು ಸಹ ಕೇಳಿಕೊಳ್ಳಬಹುದು: “ನಾನು ನಿತ್ಯಜೀವವನ್ನು ಪಡೆಯಬೇಕಾದರೆ ಏನು ಒಳ್ಳೇ ಕಾರ್ಯವನ್ನು ಮಾಡಬೇಕು?” ಅಥವಾ ಅಪೊಸ್ತಲ ಪೌಲನಿಗೆ ಫಿಲಿಪ್ಪಿಯ ಒಬ್ಬ ಸೆರೆಯ ಯಜಮಾನನು ಕೇಳಿದ ರೀತಿಯಲ್ಲಿ ನೀವು ನಿಮ್ಮ ಪ್ರಶ್ನೆಯನ್ನು ರಚಿಸಬಹುದು: ‘ನಾನು ರಕ್ಷಣೆಹೊಂದುವದಕ್ಕೆ ಏನು ಮಾಡಬೇಕು?’—ಮತ್ತಾಯ 19:16; ಅ. ಕೃತ್ಯಗಳು 16:30.
20. ನಿತ್ಯಜೀವಕ್ಕಾಗಿರುವ ಒಂದು ಪ್ರಮುಖ ಆವಶ್ಯಕತೆ ಏನು?
20 ತನ್ನ ಮರಣಕ್ಕೆ ಮುಂಚಿನ ರಾತ್ರಿಯಲ್ಲಿ ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಆ ಆವಶ್ಯಕತೆಗಳಲ್ಲಿ ಒಂದನ್ನು ತಿಳಿಸಿದನು. “ಒಬ್ಬನೇ ಸತ್ಯ ದೇವರಾದ ನಿನ್ನನ್ನು ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಅವರು ಪಡೆದುಕೊಳ್ಳುವುದು—ಇದೇ ನಿತ್ಯಜೀವವು.” (ಯೋಹಾನ 17:3, NW) ನಿತ್ಯಜೀವವನ್ನು ಸಾಧ್ಯವನ್ನಾಗಿ ಮಾಡಿರುವ ಯೆಹೋವನ ಜ್ಞಾನವನ್ನು ಪಡೆದುಕೊಳ್ಳುವುದು ಮತ್ತು ನಮಗಾಗಿ ಸತ್ತ ಯೇಸುವಿನ ಜ್ಞಾನವನ್ನು ಪಡೆದುಕೊಳ್ಳುವುದು ಒಂದು ನ್ಯಾಯಸಮ್ಮತವಾದ ಆವಶ್ಯಕತೆಯಾಗಿರುವುದಿಲ್ಲವೇ? ಆದರೂ, ಕೇವಲ ಇಂತಹ ಜ್ಞಾನವನ್ನು ಪಡೆದುಕೊಳ್ಳುವುದಕ್ಕಿಂತ ಹೆಚ್ಚಿನದ್ದು ಅಗತ್ಯವಾಗಿದೆ.
21. ನಂಬಿಕೆಯನ್ನಿಡುವ ಆವಶ್ಯಕತೆಯನ್ನು ಪೂರೈಸುತ್ತಿದ್ದೇವೆಂಬುದನ್ನು ನಾವು ಹೇಗೆ ತೋರಿಸುತ್ತೇವೆ?
21 ಬೈಬಲು ಹೀಗೂ ಹೇಳುತ್ತದೆ: “ಮಗನಲ್ಲಿ ನಂಬಿಕೆಯನ್ನು ಪ್ರದರ್ಶಿಸುವವನಿಗೆ ನಿತ್ಯಜೀವ ಉಂಟು.” ಅದು ಕೂಡಿಸಿ ಹೇಳುವುದು: “ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು.” (ಯೋಹಾನ 3:36) ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಿ, ಅದನ್ನು ದೇವರ ಚಿತ್ತಕ್ಕನುಸಾರ ನಡೆಸುವ ಮೂಲಕ, ನೀವು ಮಗನಲ್ಲಿ ನಂಬಿಕೆಯನ್ನು ಪ್ರದರ್ಶಿಸುತ್ತಿದ್ದೀರೆಂದು ತೋರಿಸಬಲ್ಲಿರಿ. ನೀವು ಈ ವರೆಗೆ ಅನುಸರಿಸುತ್ತಿದ್ದ ಯಾವುದೇ ತಪ್ಪಾದ ಮಾರ್ಗವನ್ನು ತ್ಯಜಿಸಿ, ದೇವರಿಗೆ ಮೆಚ್ಚಿಕೆಯಾದುದನ್ನು ಮಾಡಲು ಪ್ರಯಾಸಪಡಬೇಕು. ಅಪೊಸ್ತಲ ಪೇತ್ರನು ಆಜ್ಞಾಪಿಸಿದ್ದನ್ನು ನೀವು ಮಾಡಬೇಕಾಗಿದೆ: “ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ.”—ಅ. ಕೃತ್ಯಗಳು 3:19.
22. ಯೇಸುವಿನ ಹೆಜ್ಜೆಜಾಡುಗಳನ್ನು ಅನುಸರಿಸುವುದರಲ್ಲಿ ಯಾವ ಕ್ರಿಯೆಗಳು ಒಳಗೂಡಿವೆ?
22 ಯೇಸುವಿನಲ್ಲಿ ನಂಬಿಕೆಯನ್ನಿಡುವ ಮೂಲಕ ಮಾತ್ರ ನಾವು ನಿತ್ಯಜೀವವನ್ನು ಅನುಭವಿಸುವುದು ಸಾಧ್ಯ ಎಂಬುದನ್ನು ನಾವು ಎಂದಿಗೂ ಮರೆಯದಿರೋಣ. (ಯೋಹಾನ 6:40; 14:6) ಯೇಸುವಿನ ‘ಹೆಜ್ಜೆಯ ಜಾಡಿನಲ್ಲಿ ನಿಕಟವಾಗಿ ನಡೆಯುವ’ ಮೂಲಕ, ನಾವು ಯೇಸುವಿನಲ್ಲಿ ನಂಬಿಕೆಯನ್ನು ಪ್ರದರ್ಶಿಸುತ್ತೇವೆ ಎಂಬುದನ್ನು ತೋರಿಸುತ್ತೇವೆ. (1 ಪೇತ್ರ 2:21) ಅದರಲ್ಲಿ ಏನು ಒಳಗೂಡಿದೆ? ದೇವರಿಗೆ ಮಾಡಿದ ತನ್ನ ಪ್ರಾರ್ಥನೆಯಲ್ಲಿ ಯೇಸು ಉದ್ಗರಿಸಿದ್ದು: “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರೆವೇರಿಸುವದಕ್ಕೆ ಬಂದಿದ್ದೇನೆ.” (ಇಬ್ರಿಯ 10:7) ಹೀಗೆ ನಾವು ಸಹ ದೇವರ ಚಿತ್ತವನ್ನು ಮಾಡಲು ಒಪ್ಪಿಕೊಳ್ಳುವುದರಲ್ಲಿ ಮತ್ತು ಯೆಹೋವನಿಗೆ ನಮ್ಮ ಜೀವನವನ್ನು ಸಮರ್ಪಿಸಿಕೊಳ್ಳುವುದರಲ್ಲಿ ಯೇಸುವನ್ನು ಅನುಕರಿಸುವುದು ಅತ್ಯಾವಶ್ಯಕ. ಆ ಮೇಲೆ, ಯೇಸು ದೀಕ್ಷಾಸ್ನಾನಕ್ಕಾಗಿ ತನ್ನನ್ನು ನೀಡಿಕೊಂಡ ಹಾಗೆಯೇ ಆ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ನೀವು ಸಂಕೇತಿಸಿಕೊಳ್ಳಬೇಕಾಗಿದೆ. (ಲೂಕ 3:21, 22) ಇಂತಹ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಸಂಪೂರ್ಣವಾಗಿ ನ್ಯಾಯಸಮ್ಮತವಾಗಿವೆ. “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ” ಎಂಬುದಾಗಿ ಅಪೊಸ್ತಲ ಪೌಲನು ಗಮನಿಸಿದನು. (2 ಕೊರಿಂಥ 5:14, 15) ಯಾವ ವಿಧದಲ್ಲಿ? ಪ್ರೀತಿಯಿಂದಲೇ ಯೇಸು ನಮಗಾಗಿ ತನ್ನ ಜೀವವನ್ನು ಅರ್ಪಿಸಿದನು. ಅವನಲ್ಲಿ ನಂಬಿಕೆಯನ್ನಿಡುವ ಮೂಲಕ ಪ್ರತಿಕ್ರಿಯಿಸುವಂತೆ ಅದು ನಮ್ಮನ್ನು ಒತ್ತಾಯಪಡಿಸಬಾರದೊ? ಹೌದು, ಇತರರಿಗೂ ಸಹಾಯಮಾಡಲು ತನ್ನನ್ನು ನೀಡಿಕೊಂಡ ಅವನ ಪ್ರೀತಿಪೂರ್ಣ ಮಾದರಿಯನ್ನು ನಾವು ಅನುಕರಿಸುವಂತೆ ಇದು ನಮ್ಮನ್ನು ಒತ್ತಾಯಪಡಿಸಬೇಕು. ಕ್ರಿಸ್ತನು ದೇವರ ಚಿತ್ತವನ್ನು ಮಾಡುವುದಕ್ಕಾಗಿ ಜೀವಿಸಿದನು; ನಾವೂ ಇನ್ನು ಮುಂದೆ ನಮಗಾಗಿ ಜೀವಿಸದೆ ದೇವರಿಗಾಗಿ ಜೀವಿಸಬೇಕು.
23. (ಎ) ಜೀವವನ್ನು ಪಡೆಯುವವರು ಯಾವುದಕ್ಕೆ ಸೇರಿಸಲ್ಪಡಬೇಕು? (ಬಿ) ಕ್ರೈಸ್ತ ಸಭೆಯಲ್ಲಿರುವವರಿಂದ ಏನನ್ನು ಕೇಳಿಕೊಳ್ಳಲಾಗುತ್ತದೆ?
23 ವಿಷಯವು ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಸಾ.ಶ. 33ರ ಪಂಚಾಶತ್ತಮದಂದು 3,000 ಜನರು ದೀಕ್ಷಾಸ್ನಾನ ಪಡೆದುಕೊಂಡಾಗ ಅವರು ‘ಸೇರಿಸಲ್ಪಟ್ಟರು’ ಎಂಬುದಾಗಿ ಬೈಬಲು ಹೇಳುತ್ತದೆ. ಯಾವುದಕ್ಕೆ ಸೇರಿಸಲ್ಪಟ್ಟರು? ಲೂಕನು ವಿವರಿಸುವುದು: “ಇವರು ಅಪೊಸ್ತಲರ ಬೋಧನೆಯನ್ನು ಕೇಳುವದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿಮುರಿಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು.” (ಅ. ಕೃತ್ಯಗಳು 2:41, 42) ಹೌದು, ಅವರು ಬೈಬಲ್ ಅಧ್ಯಯನ ಹಾಗೂ ಸಹವಾಸಕ್ಕಾಗಿ ಕೂಡಿಬಂದರು ಮತ್ತು ಹೀಗೆ ಅವರು ಕ್ರೈಸ್ತ ಸಭೆಗೆ ಸೇರಿಸಲ್ಪಟ್ಟರು ಇಲ್ಲವೆ ಅದರ ಭಾಗವಾದರು. ಆದಿ ಕ್ರೈಸ್ತರು ಆತ್ಮಿಕ ಉಪದೇಶಕ್ಕಾಗಿ ಕ್ರಮವಾಗಿ ಕೂಟಗಳಿಗೆ ಹಾಜರಾದರು. (ಇಬ್ರಿಯ 10:25) ಇಂದು ಯೆಹೋವನ ಸಾಕ್ಷಿಗಳು ಇದನ್ನೇ ಮಾಡುತ್ತಾರೆ, ಮತ್ತು ಅವರೊಂದಿಗೆ ಈ ಕೂಟಗಳಿಗೆ ಹಾಜರಾಗುವಂತೆ ನಿಮ್ಮನ್ನು ಉತ್ತೇಜಿಸಲು ಅವರು ಇಷ್ಟಪಡುತ್ತಾರೆ.
24. “ವಾಸ್ತವವಾದ ಜೀವನ” ಎಂದರೇನು, ಮತ್ತು ಅದು ಹೇಗೆ ಮತ್ತು ಯಾವಾಗ ದೊರಕುವುದು?
24 ಜೀವಕ್ಕೆ ನಡಿಸುವ ಈ ಇಕ್ಕಟ್ಟಾದ ದಾರಿಯಲ್ಲಿ ಈಗ ಲಕ್ಷಗಟ್ಟಲೆ ಜನರು ನಡೆಯುತ್ತಿದ್ದಾರೆ. ಈ ಇಕ್ಕಟ್ಟಾದ ದಾರಿಯಲ್ಲಿ ಉಳಿಯಲು ಪ್ರಯಾಸಪಡುವ ಅಗತ್ಯವಿದೆ! (ಮತ್ತಾಯ 7:13, 14) ಇದನ್ನು ಪೌಲನು ತನ್ನ ಹಾರ್ದಿಕ ಬೇಡಿಕೆಯಲ್ಲಿ ಸೂಚಿಸಿದನು: “ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು.” “ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ” ಈ ಹೋರಾಟವನ್ನು ಮಾಡುವುದು ಅತ್ಯಾವಶ್ಯಕವಾಗಿದೆ. (1 ತಿಮೊಥೆಯ 6:12, 19) ಅದು ಆದಾಮನ ಪಾಪದಿಂದಾಗಿ ತರಲ್ಪಟ್ಟ ಬೇನೆಬೇಸರಗಳು ಮತ್ತು ಕಷ್ಟದುಃಖಗಳಿಂದ ಕೂಡಿರುವ ಈ ಪ್ರಸ್ತುತ ಜೀವನವಲ್ಲ. ಬದಲಿಗೆ, ಅದು ದೇವರ ಹೊಸ ಲೋಕದ ಜೀವನವಾಗಿದೆ. ಈ ವಿಷಯಗಳ ವ್ಯವಸ್ಥೆಯು ತೆಗೆದುಹಾಕಲ್ಪಟ್ಟ ಬಳಿಕ, ಯೆಹೋವ ದೇವರನ್ನು ಮತ್ತು ಆತನ ಪುತ್ರನನ್ನು ಪ್ರೀತಿಸುವವರೆಲ್ಲರ ಪರವಾಗಿ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಅನ್ವಯಿಸಲ್ಪಡುವಾಗ, ಆ ಜೀವನವು ಅತಿ ಬೇಗನೆ ವಾಸ್ತವಿಕತೆಯಾಗುವುದು. ನಾವೆಲ್ಲರೂ ದೇವರ ಮಹಿಮಾಭರಿತ ಹೊಸ ಲೋಕದಲ್ಲಿ ನಿತ್ಯಜೀವವನ್ನು, ಅಂದರೆ ‘ವಾಸ್ತವವಾದ ಜೀವನವನ್ನು’ ಆಯ್ದುಕೊಳ್ಳುವಂತಾಗಲಿ.
ನೀವು ಹೇಗೆ ಉತ್ತರಿಸುವಿರಿ?
◻ ಆದಿಕಾಂಡ 3:15ರಲ್ಲಿ ಸೂಚಿಸಲ್ಪಟ್ಟ ಸರ್ಪ, ಸ್ತ್ರೀ, ಮತ್ತು ಸಂತಾನವು ಯಾರಾಗಿದ್ದಾರೆ?
◻ ಯೇಸು ಆದಾಮನಿಗೆ ಹೇಗೆ ಅನುರೂಪವಾಗಿದ್ದನು, ಮತ್ತು ಪ್ರಾಯಶ್ಚಿತ್ತವು ಯಾವುದನ್ನು ಸಾಧ್ಯಗೊಳಿಸಿತು?
◻ ದೇವರ ಹೊಸ ಲೋಕವನ್ನು ಬಹಳಷ್ಟು ಆನಂದದಾಯಕವಾಗಿ ಮಾಡಲಿರುವ ಯಾವ ವಿಷಯಗಳಿಗಾಗಿ ನೀವು ಎದುರುನೋಡಬಲ್ಲಿರಿ?
◻ ದೇವರ ಹೊಸ ಲೋಕದಲ್ಲಿ ಜೀವಿಸಲಿಕ್ಕಾಗಿ ನಾವು ಯಾವ ಆವಶ್ಯಕತೆಗಳನ್ನು ಪೂರೈಸಬೇಕು?
[ಪುಟ 10 ರಲ್ಲಿರುವ ಚಿತ್ರ]
ಆಬಾಲವೃದ್ಧರಿಗೆ ಅಂತ್ಯರಹಿತ ಜೀವಿತವನ್ನು ಕೊಡುವ ಏಕೈಕ ಮಾರ್ಗವು ಯೇಸುವಾಗಿದ್ದಾನೆ
[ಪುಟ 11 ರಲ್ಲಿರುವ ಚಿತ್ರ]
ದೇವರ ಕ್ಲುಪ್ತ ಸಮಯದಲ್ಲಿ, ವೃದ್ಧರು ಯೌವನಭರಿತ ಉತ್ಸಾಹಕ್ಕೆ ಹಿಂದಿರುಗುವರು