ದೇವರ ಅಪಾತ್ರ ದಯೆಯನ್ನು ಹೊಂದಿದಕ್ಕಾಗಿ ಕೃತಜ್ಞರು
“ನಾವೆಲ್ಲರೂ ಅಪಾತ್ರ ದಯೆಯ ಮೇಲೆ ಅಪಾತ್ರ ದಯೆಯನ್ನೂ ಹೊಂದಿದೆವು.”—ಯೋಹಾ. 1:16.
1, 2. (ಎ) ದ್ರಾಕ್ಷೇ ತೋಟದ ಯಜಮಾನನ ಕುರಿತು ಯೇಸು ಹೇಳಿದ ಕಥೆಯನ್ನು ವಿವರಿಸಿ. (ಬಿ) ಆ ಕಥೆಯು ಉದಾರತೆ ಮತ್ತು ಅಪಾತ್ರ ದಯೆಯ ಕುರಿತು ಹೇಗೆ ಕಲಿಸುತ್ತದೆ?
ಒಂದು ದ್ರಾಕ್ಷೇತೋಟದ ಯಜಮಾನನು ಬೆಳ ಬೆಳಗ್ಗೆ ಕೂಲಿಯಾಳುಗಳನ್ನು ಕರೆಯಲಿಕ್ಕಾಗಿ ಪೇಟೆಗೆ ಹೋದನು. ಅವರಿಗೆ ಇಂತಿಷ್ಟು ಕೂಲಿಕೊಡುತ್ತೇನೆಂದು ಹೇಳಿದಾಗ ಆ ಆಳುಗಳು ಒಪ್ಪಿದರು. ಆದರೆ ಯಜಮಾನನಿಗೆ ಹೆಚ್ಚು ಕೆಲಸಗಾರರು ಬೇಕಾಗಿದ್ದರಿಂದ ಅವನು ಪುನಃ ಹಲವಾರು ಬಾರಿ ಪೇಟೆಗೆ ಹೋಗಿ ಹೆಚ್ಚು ಕೂಲಿಯಾಳುಗಳನ್ನು ಕರತಂದನು. ಅವರೆಲ್ಲರಿಗೂ ನ್ಯಾಯವಾದ ಕೂಲಿಯನ್ನು ಕೊಡುತ್ತೇನೆಂದು ಹೇಳಿದನು. ಸಂಜೆಯಾದಾಗ ಯಜಮಾನನು ಎಲ್ಲರನ್ನು ಕರೆದು ದಿನವಿಡೀ ಕೆಲಸಮಾಡಿದವರಿಗೂ ಬರೀ ಒಂದು ತಾಸು ಕೆಲಸಮಾಡಿದವರಿಗೂ ಒಂದೇ ಕೂಲಿ ಕೊಟ್ಟನು. ದಿನವಿಡೀ ಕೆಲಸಮಾಡಿದವರು ಗುಣುಗುಟ್ಟಲು ಆರಂಭಿಸಿದಾಗ ಅವನಂದದ್ದು: ‘ನಾನು ಹೇಳಿದ ಕೂಲಿಗೆ ಕೆಲಸಮಾಡಲು ನೀವು ಒಪ್ಪಿಕೊಂಡಿರಲ್ಲ? ಎಲ್ಲ ಆಳುಗಳಿಗೆ ನನಗೆ ಇಷ್ಟ ಬಂದಷ್ಟು ಕೂಲಿ ಕೊಡಲು ನನಗೆ ಹಕ್ಕಿಲ್ಲವೊ? ನಾನು ಉದಾರಿಯಾಗಿರುವುದನ್ನು [ಒಳ್ಳೆಯವನಾಗಿರುವುದನ್ನು] ನೋಡಿ ನಿಮಗೆ ಅಸೂಯೆ ಆಗುತ್ತದಾ?’—ಮತ್ತಾ. 20:1-15.
2 ಯೇಸು ಹೇಳಿದ ಈ ಕಥೆ ಯೆಹೋವನ “ಅಪಾತ್ರ ದಯೆಯ” ಕುರಿತು ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ. (2 ಕೊರಿಂಥ 6:1 ಓದಿ.) ಹೇಗೆ? ಒಂದೇ ಒಂದು ತಾಸು ಕೆಲಸಮಾಡಿದ ಆಳುಗಳು ಇಡೀ ದಿನದ ಕೂಲಿ ಪಡೆಯಲು ಯೋಗ್ಯರಲ್ಲ ಎಂದು ತೋರಬಹುದು. ಆದರೆ ಯಜಮಾನನು ಅವರಿಗೆ ಅಪಾತ್ರ ದಯೆ ತೋರಿಸಿದನು. ಬೈಬಲಿನಲ್ಲಿ ಬಳಸಲಾದ “ಅಪಾತ್ರ ದಯೆ” ಎಂಬ ಶಬ್ದದ ಕುರಿತು ಒಬ್ಬ ಪರಿಣತ ಹೀಗಂದನು: “ಈ ಪದದ ಮೂಲ ಅರ್ಥ ಅರ್ಹನಲ್ಲದ ವ್ಯಕ್ತಿಯೊಬ್ಬನಿಗೆ ಕೊಡಲಾಗುವ ಉಚಿತ ಉಡುಗೊರೆ ಎಂದಾಗಿದೆ. ಅದನ್ನು ಅವನು ದುಡಿದು ಸಂಪಾದಿಸಿಲ್ಲ, ಅದಕ್ಕೆ ಅವನು ಯೋಗ್ಯನೂ ಅಲ್ಲ.”
ಯೆಹೋವನ ಉದಾರ ಉಡುಗೊರೆ
3, 4. ಯೆಹೋವನು ಮಾನವರೆಲ್ಲರ ಕಡೆಗೆ ಅಪಾತ್ರ ದಯೆಯನ್ನು ಏಕೆ ತೋರಿಸಿದನು? ಹೇಗೆ?
3 ದೇವರ ಅಪಾತ್ರ ದಯೆಯು ಒಂದು “ಉಚಿತ ಉಡುಗೊರೆ” ಎಂದು ಬೈಬಲ್ ನಮಗೆ ಹೇಳುತ್ತದೆ. (ಎಫೆ. 3:7) ನಾವು ಯೆಹೋವನಿಗೆ ಪೂರ್ಣ ವಿಧೇಯತೆ ತೋರಿಸಲು ಶಕ್ತರಲ್ಲದ ಕಾರಣ ಆತನಿಂದ ಯಾವುದೇ ರೀತಿಯ ದಯೆ ಪಡೆಯಲು ಅರ್ಹರಲ್ಲ. ವಾಸ್ತವದಲ್ಲಿ ನಾವು ಮರಣಕ್ಕೆ ಅರ್ಹರು. ರಾಜ ಸೊಲೊಮೋನ ಹೇಳಿದ್ದು: “ಪಾಪಮಾಡದೆ ಒಳ್ಳೆಯದನ್ನೇ ನಡೆಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ.” (ಪ್ರಸಂ. 7:20, ಪವಿತ್ರ ಗ್ರಂಥ ಭಾಷಾಂತರ) ಮುಂದಕ್ಕೆ ಅಪೊಸ್ತಲ ಪೌಲ ಕೂಡ ಹೀಗಂದನು: “ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ” ಮತ್ತು “ಪಾಪವು ಕೊಡುವ ಸಂಬಳ ಮರಣ.”—ರೋಮ. 3:23; 6:23ಎ.
4 ಯೆಹೋವನು ಮಾನವರನ್ನು ಎಷ್ಟು ಪ್ರೀತಿಸುತ್ತಾನೆಂದರೆ “ತನ್ನ ಏಕೈಕಜಾತ ಪುತ್ರನನ್ನು” ಅವರಿಗೋಸ್ಕರ ಸಾಯಲು ಕಳುಹಿಸಿದನು. ಈ ಮೂಲಕ ಆತನು ನಮಗೆ ಅತಿ ಶ್ರೇಷ್ಠ ವಿಧದಲ್ಲಿ ಅಪಾತ್ರ ದಯೆ ತೋರಿಸಿದ್ದಾನೆ. (ಯೋಹಾ. 3:16) ‘ಯೇಸು ಮರಣವನ್ನು ಅನುಭವಿಸಿದ ಬಳಿಕ ಮಹಿಮೆಯನ್ನೂ ಮಾನವನ್ನೂ ಕಿರೀಟವಾಗಿ ಹೊಂದಿದ್ದಾನೆ. ದೇವರ ಅಪಾತ್ರ ದಯೆಯಿಂದ ಅವನು ಪ್ರತಿ ಮನುಷ್ಯನಿಗಾಗಿ ಮರಣವನ್ನು ಅನುಭವಿಸಿದನು’ ಎಂದನು ಪೌಲ. (ಇಬ್ರಿ. 2:9) “ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ.”—ರೋಮ. 6:23ಬಿ.
5, 6. (ಎ) ಪಾಪವು ನಮ್ಮನ್ನು ಆಳುವಂತೆ ಬಿಟ್ಟರೆ ಫಲಿತಾಂಶ ಏನು? (ಬಿ) ಅಪಾತ್ರ ದಯೆಯು ನಮ್ಮನ್ನು ಆಳುವಂತೆ ಬಿಟ್ಟರೆ ಫಲಿತಾಂಶ ಏನು?
5 ನಾವು ಪಾಪಮಾಡುವುದು ಮತ್ತು ಸಾಯುವುದು ಏಕೆ? ಬೈಬಲ್ ಉತ್ತರ ಕೊಡುವುದು: ‘ಒಬ್ಬ ಮನುಷ್ಯನ [ಆದಾಮನ] ಅಪರಾಧದಿಂದ ಮರಣವು ಅರಸನಂತೆ ಆಳ್ವಿಕೆ ನಡೆಸಿತು.’ ನಾವು ಆದಾಮನ ಸಂತತಿಯವರಾದ ಕಾರಣ ಅಪರಿಪೂರ್ಣರಾಗಿದ್ದೇವೆ ಮತ್ತು ಸಾಯುತ್ತೇವೆ. (ರೋಮ. 5:12, 14, 17) ಆದರೂ ಪಾಪವು ನಮ್ಮನ್ನು ಆಳದಂತೆ ಅಂದರೆ ನಿಯಂತ್ರಣದಲ್ಲಿ ಇಡದಂತೆ ನಾವು ಆರಿಸಿಕೊಳ್ಳಬಹುದು. ಅದು ಹೇಗೆ ಸಾಧ್ಯ? ಕ್ರಿಸ್ತನ ವಿಮೋಚನಾ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ. ಆಗ ಯೆಹೋವನ ಅಪಾತ್ರ ದಯೆಯು ನಮ್ಮನ್ನು ಆಳುವಂತೆ ಬಿಡುತ್ತೇವೆ. ಬೈಬಲ್ ಹೇಳುವದು: “ಎಲ್ಲಿ ಪಾಪವು ಹೆಚ್ಚಾಯಿತೋ ಅಲ್ಲಿ ಅಪಾತ್ರ ದಯೆಯೂ ಇನ್ನಷ್ಟು ಹೆಚ್ಚಿತು. ಎಷ್ಟರ ಮಟ್ಟಿಗೆ? ಪಾಪವು ಮರಣದೊಂದಿಗೆ ಅರಸನಂತೆ ಆಳ್ವಿಕೆ ನಡೆಸಿದ ಹಾಗೆಯೇ ಅಪಾತ್ರ ದಯೆಯೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವನ್ನು ಉಂಟುಮಾಡುತ್ತಾ ನೀತಿಯ ಮೂಲಕ ಅರಸನಂತೆ ಆಳುವಂತಾಯಿತು.”—ರೋಮ. 5:20, 21.
6 ನಾವು ಈಗ ಪಾಪಿಗಳಾಗಿದ್ದರೂ ಪಾಪ ನಮ್ಮನ್ನು ಆಳುವಂತೆ ಬಿಡಬೇಕಾಗಿಲ್ಲ. ಒಂದುವೇಳೆ ನಾವು ಪಾಪ ಮಾಡಿದರೂ ಯೆಹೋವನಲ್ಲಿ ಕ್ಷಮೆಯಾಚಿಸಬೇಕು. ಪೌಲನು ನಮ್ಮನ್ನು ಎಚ್ಚರಿಸುವುದು: “ನೀವು ಧರ್ಮಶಾಸ್ತ್ರದ ಕೆಳಗಿರದೆ ದೇವರ ಅಪಾತ್ರ ದಯೆಯ ಕೆಳಗಿರುವುದರಿಂದ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸಬಾರದು.” (ರೋಮ. 6:14) ಹಾಗಾದರೆ ದೇವರ ಅಪಾತ್ರ ದಯೆ ನಮ್ಮನ್ನು ಆಳುವಂತೆ ಬಿಡುವುದರಿಂದ ಪ್ರಯೋಜನವೇನು? ಉತ್ತರ ಪೌಲನ ಈ ಮಾತುಗಳಲ್ಲಿದೆ: “ದೇವರ ಅಪಾತ್ರ ದಯೆಯು . . . ನಾವು ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸ್ವಸ್ಥಬುದ್ಧಿಯಿಂದಲೂ ನೀತಿಯಿಂದಲೂ ದೇವಭಕ್ತಿಯಿಂದಲೂ ಜೀವಿಸುವಂತೆ” ತರಬೇತಿ ಕೊಡುತ್ತದೆ.—ತೀತ 2:11, 12.
‘ವಿವಿಧ ರೀತಿಯಲ್ಲಿ ವ್ಯಕ್ತವಾಗಿರುವ’ ಅಪಾತ್ರ ದಯೆ
7, 8. ಯೆಹೋವನ ಅಪಾತ್ರ ದಯೆಯು ‘ವಿವಿಧ ರೀತಿಯಲ್ಲಿ ವ್ಯಕ್ತವಾಗಿದೆ’ ಎಂಬುದರ ಅರ್ಥವೇನು? (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)
7 ಅಪೊಸ್ತಲ ಪೇತ್ರ ಬರೆದದ್ದು: “ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ಅಪಾತ್ರ ದಯೆಯ ಉತ್ತಮ ಮನೆವಾರ್ತೆಯವರಾಗಿರುವ ಪ್ರತಿಯೊಬ್ಬನು ತನಗೆ ಸಿಕ್ಕಿದ ವರದ ಪ್ರಮಾಣಕ್ಕನುಸಾರ ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ ಅದನ್ನು ಉಪಯೋಗಿಸಲಿ.” (1 ಪೇತ್ರ 4:10) ಯೆಹೋವನ ಅಪಾತ್ರ ದಯೆಯು ‘ವಿವಿಧ ರೀತಿಯಲ್ಲಿ ವ್ಯಕ್ತವಾಗಿದೆ’ ಎಂಬುದರ ಅರ್ಥವೇನು? ನಮಗೆ ಜೀವನದಲ್ಲಿ ಯಾವುದೇ ಕಷ್ಟಗಳಿದ್ದರೂ ಅವುಗಳನ್ನು ತಾಳಿಕೊಳ್ಳಲು ಏನು ಅಗತ್ಯವೋ ಅದನ್ನು ಯೆಹೋವನು ಖಂಡಿತ ಕೊಡುತ್ತಾನೆಂದೇ. (1 ಪೇತ್ರ 1:6) ಬೇರೆಬೇರೆ ವಿಧದ ಕಷ್ಟಪರೀಕ್ಷೆಯನ್ನು ಜಯಿಸಲು ನಮಗೆ ಏನು ಬೇಕೋ ಸರಿಯಾಗಿ ಅದನ್ನೇ ಆತನು ಯಾವಾಗಲೂ ಕೊಡುತ್ತಾನೆ.
8 ಅಪೊಸ್ತಲ ಯೋಹಾನ ಬರೆದದ್ದು: “ಅವನ ಪೂರ್ಣತೆಯಿಂದಲೇ ನಾವೆಲ್ಲರೂ ಅಪಾತ್ರ ದಯೆಯ ಮೇಲೆ ಅಪಾತ್ರ ದಯೆಯನ್ನೂ ಹೊಂದಿದೆವು.” (ಯೋಹಾ. 1:16) ಯೆಹೋವನು ಅನೇಕ ರೀತಿಗಳಲ್ಲಿ ಅಪಾತ್ರ ದಯೆ ತೋರಿಸುವ ಕಾರಣ ನಮಗೆ ಅನೇಕ ಆಶೀರ್ವಾದಗಳು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ನೋಡೋಣ.
9. (ಎ) ಯೆಹೋವನ ಅಪಾತ್ರ ದಯೆಯಿಂದ ನಮಗೆ ಯಾವ ಪ್ರಯೋಜನವಿದೆ? (ಬಿ) ಅದಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬೇಕು?
9 ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಯೆಹೋವನು ನಮಗೆ ಅಪಾತ್ರ ದಯೆ ತೋರಿಸುತ್ತಾ ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಆದರೆ ಈ ಕ್ಷಮೆ ಸಿಗುವುದು ನಾವು ಪಶ್ಚಾತ್ತಾಪಪಟ್ಟು ನಮ್ಮ ಪಾಪಪೂರ್ಣ ಆಶೆಗಳ ವಿರುದ್ಧ ಹೋರಾಡುತ್ತಾ ಇದ್ದರೆ ಮಾತ್ರ. (1 ಯೋಹಾನ 1:8, 9 ಓದಿ.) ಯೆಹೋವನು ಪಾಪಗಳನ್ನು ಹೇಗೆ ಕ್ಷಮಿಸುತ್ತಾನೆಂದು ಪೌಲನು ತನ್ನ ಸಮಯದ ಅಭಿಷಿಕ್ತ ಕ್ರೈಸ್ತರಿಗೆ ವಿವರಿಸುತ್ತಾ ಅಂದದ್ದು: “[ದೇವರು] ನಮ್ಮನ್ನು ಅಂಧಕಾರದ ಅಧಿಕಾರದಿಂದ ಬಿಡಿಸಿ ತನ್ನ ಪ್ರೀತಿಯ ಮಗನ ರಾಜ್ಯದೊಳಕ್ಕೆ ವರ್ಗಾಯಿಸಿದನು. ಅವನ ವಿಮೋಚನಾ ಮೌಲ್ಯದ ಮೂಲಕ ನಮ್ಮ ಪಾಪಗಳಿಗೆ ಕ್ಷಮಾಪಣೆ ದೊರೆತು ನಮಗೆ ಬಿಡುಗಡೆಯಾಯಿತು.” (ಕೊಲೊ. 1:13, 14) ದೇವರು ತೋರಿಸುವ ಈ ಕರುಣೆಗಾಗಿ ನಾವು ಕೃತಜ್ಞತೆಯನ್ನು ಆತನನ್ನು ಸ್ತುತಿಸುವ ಮೂಲಕ ತೋರಿಸಬೇಕು. ನಮ್ಮ ಪಾಪಗಳಿಗೆ ಕ್ಷಮೆ ಸಿಗುವುದರಿಂದ ಇತರ ಅನೇಕ ಆಶ್ಚರ್ಯಕರ ಆಶೀರ್ವಾದಗಳೂ ಸಿಗುತ್ತವೆ.
10. ದೇವರ ಅಪಾತ್ರ ದಯೆಯಿಂದಾಗಿ ನಮಗೆ ಯಾವುದು ಸಾಧ್ಯವಾಗಿದೆ?
10 ದೇವರೊಂದಿಗೆ ನಮಗೆ ಸಮಾಧಾನದ ಸಂಬಂಧ ಇಡಲು ಆಗುತ್ತದೆ. ನಾವು ಪಾಪಿಗಳಾಗಿರುವುದರಿಂದ ಹುಟ್ಟಿನಿಂದಲೇ ದೇವರ ಶತ್ರುಗಳು. ಆದರೂ ‘ನಾವು ವೈರಿಗಳಾಗಿದ್ದಾಗಲೇ ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನ ಸಂಬಂಧಕ್ಕೆ ಬಂದೆವು’ ಎಂದನು ಪೌಲ. (ರೋಮ. 5:10) ವಿಮೋಚನಾ ಮೌಲ್ಯದ ಕಾರಣ ನಾವು ದೇವರೊಂದಿಗೆ ಸಮಾಧಾನ ಸಂಬಂಧ ಹೊಂದಲು ಅಂದರೆ ಆತನ ಸ್ನೇಹಿತರಾಗಲು ಸಾಧ್ಯವಾಗುತ್ತದೆ. ಇದನ್ನು ಮತ್ತು ಇದು ಯೆಹೋವನ ಅಪಾತ್ರ ದಯೆಗೆ ಸಂಬಂಧಿಸಿದ ರೀತಿಯನ್ನು ಪೌಲನು ತನ್ನ ಅಭಿಷಿಕ್ತ ಸಹೋದರರಿಗೆ ವಿವರಿಸುವಾಗ ಹೇಳಿದ್ದು: “ನಾವು ಈಗ ನಂಬಿಕೆಯ ನಿಮಿತ್ತ ನೀತಿವಂತರೆಂದು ನಿರ್ಣಯಿಸಲ್ಪಟ್ಟಿರಲಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನದಲ್ಲಿ ಆನಂದಿಸೋಣ. ಅವನ ಮೂಲಕವೇ ನಾವು ನಂಬಿಕೆಯಿಂದ ಈಗ ನೆಲೆಗೊಂಡಿರುವ ಅಪಾತ್ರ ದಯೆಯೊಳಗೆ ಪ್ರವೇಶವನ್ನು ಪಡೆದಿದ್ದೇವೆ.” (ರೋಮ. 5:1, 2) ಯೆಹೋವನೊಟ್ಟಿಗೆ ಇಂಥ ಸಮಾಧಾನಭರಿತ ಗೆಳೆತನ ಹೊಂದಲು ನಾವು ನಿಜಕ್ಕೂ ಕೃತಜ್ಞರು!
11. ಅಭಿಷಿಕ್ತರು ‘ಬೇರೆ ಕುರಿಗಳನ್ನು’ ನೀತಿಯ ಕಡೆಗೆ ತಿರುಗಿಸುವುದು ಹೇಗೆ?
11 ನಾವು ದೇವರ ದೃಷ್ಟಿಯಲ್ಲಿ ನೀತಿವಂತರಾಗಲು ಸಾಧ್ಯವಾಗಿದೆ. ಅಂತ್ಯಕಾಲದಲ್ಲಿ ‘ಜ್ಞಾನಿಗಳು’ ಅಂದರೆ ಅಭಿಷಿಕ್ತರು ಬಹು ಜನರನ್ನು ‘ಸದ್ಧರ್ಮಿಗಳನ್ನಾಗಿ ಮಾಡುವರು’ ಅಂದರೆ ನೀತಿಯ ಕಡೆಗೆ ತಿರುಗಿಸುವರೆಂದು ಪ್ರವಾದಿ ದಾನಿಯೇಲ ಬರೆದನು. (ದಾನಿಯೇಲ 12:3 ಓದಿ.) ಅಭಿಷಿಕ್ತರು ಇದನ್ನು ಮಾಡುವುದು ಹೇಗೆ? ಸುವಾರ್ತೆ ಸಾರುವ ಮೂಲಕ ಮತ್ತು ಲಕ್ಷಾಂತರ ‘ಬೇರೆ ಕುರಿಗಳಿಗೆ’ ಯೆಹೋವನ ನಿಯಮಗಳನ್ನು ಕಲಿಸುವ ಮೂಲಕ. (ಯೋಹಾ. 10:16) ಹೀಗೆ ಬೇರೆ ಕುರಿಗಳು ದೇವರ ದೃಷ್ಟಿಯಲ್ಲಿ ನೀತಿವಂತರಾಗಿ ಎಣಿಸಲ್ಪಡುವಂತೆ ಅಭಿಷಿಕ್ತರು ಸಹಾಯ ಮಾಡುತ್ತಾರೆ. ಈ ರೀತಿ ನೀತಿವಂತರಾಗಿ ಎಣಿಸಲ್ಪಡುವುದು ಯೆಹೋವನ ಅಪಾತ್ರ ದಯೆ ಆಗಿದೆ. ಪೌಲ ವಿವರಿಸಿದ್ದು: “ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಹೊಂದುವ ಮೂಲಕ ಅವರು ದೇವರ ಅಪಾತ್ರ ದಯೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಡುವುದು ಆತನ ಉಚಿತ ವರವಾಗಿದೆ.”—ರೋಮ. 3:23, 24.
12. ಪ್ರಾರ್ಥನೆಯು ದೇವರು ತೋರಿಸುವ ಅಪಾತ್ರ ದಯೆಗೆ ಹೇಗೆ ಸಂಬಂಧಿಸಿದೆ?
12 ಪ್ರಾರ್ಥನೆಯ ಮೂಲಕ ನಾವು ದೇವರಿಗೆ ಆಪ್ತರಾಗಲು ಸಾಧ್ಯವಾಗಿದೆ. ಯೆಹೋವನ ಅಪಾತ್ರ ದಯೆಯಿಂದಾಗಿ ನಾವು ಆತನಿಗೆ ಪ್ರಾರ್ಥನೆ ಮಾಡಲು ಸಾಧ್ಯವಾಗಿದೆ. ಪೌಲನು ಯೆಹೋವನ ಸಿಂಹಾಸನವನ್ನು “ಅಪಾತ್ರ ದಯೆಯ ಸಿಂಹಾಸನ” ಎಂದು ಕರೆದಿದ್ದಾನೆ. ಆ ಸಿಂಹಾಸನದ ಎದುರಿಗೆ “ವಾಕ್ಸರಳತೆ” ಅಂದರೆ ಧೈರ್ಯದಿಂದ ಹಿಂಜರಿಯದೆ ಬರುವಂತೆ ಆಮಂತ್ರಿಸಿದ್ದಾನೆ. (ಇಬ್ರಿ. 4:16ಬಿ) ಆದ್ದರಿಂದ ನಾವು ಯಾವ ಸಮಯದಲ್ಲೂ ಯೆಹೋವನಿಗೆ ಯೇಸುವಿನ ಮೂಲಕ ಪ್ರಾರ್ಥನೆ ಮಾಡಬಹುದು. ಇದು ನಿಜಕ್ಕೂ ಒಂದು ದೊಡ್ಡ ಸೌಭಾಗ್ಯ! ಪೌಲನು ಹೇಳಿದ್ದು: “ನಮಗೆ ಈ ವಾಕ್ಸರಳತೆ ಇದೆ ಮತ್ತು ಅವನಲ್ಲಿ [ಯೇಸುವಿನಲ್ಲಿ] ನಾವಿಟ್ಟಿರುವ ನಂಬಿಕೆಯ ಮೂಲಕ ನಾವು ಭರವಸೆಯಿಂದ ದೇವರನ್ನು ಸಮೀಪಿಸುತ್ತೇವೆ.”—ಎಫೆ. 3:12.
13. ದೇವರ ಅಪಾತ್ರ ದಯೆಯಿಂದಾಗಿ ನಮಗೆ ಹೇಗೆ ‘ಸಮಯೋಚಿತ ಸಹಾಯ’ ಸಿಗುತ್ತದೆ?
13 ಸಮಯಕ್ಕೆ ಸರಿಯಾದ ಸಹಾಯ ನಮಗೆ ಸಿಗುತ್ತದೆ. ಅಗತ್ಯವಿರುವಾಗೆಲ್ಲ ಯೆಹೋವನಿಗೆ ಪ್ರಾರ್ಥಿಸಬೇಕೆಂದು ಪೌಲನು ನಮ್ಮನ್ನು ಪ್ರೋತ್ಸಾಹಿಸಿದನು. ಆ ಮೂಲಕ ‘ನಾವು ಕರುಣೆಯನ್ನು ಹೊಂದಲು ಮತ್ತು ಅಪಾತ್ರ ದಯೆಯಿಂದ ಸಮಯೋಚಿತವಾದ ಸಹಾಯವನ್ನು ಕಂಡುಕೊಳ್ಳಲು’ ಆಗುತ್ತದೆ. (ಇಬ್ರಿ. 4:16ಎ) ಜೀವನದಲ್ಲಿ ಕಷ್ಟಪರೀಕ್ಷೆಗಳು ಬಂದಾಗೆಲ್ಲ ನಾವು ಸಹಾಯಕ್ಕಾಗಿ ಯೆಹೋವನನ್ನು ಬೇಡಿಕೊಳ್ಳಬಹುದು. ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡಲೇಬೇಕೆಂಬ ಹಂಗು ಆತನಿಗಿಲ್ಲದಿದ್ದರೂ ಉತ್ತರ ಕೊಡುತ್ತಾನೆ. ನಮಗೆ ಸಹಾಯ ಕೊಡಲು ಅನೇಕ ಬಾರಿ ಆತನು ನಮ್ಮ ಸಹೋದರ ಸಹೋದರಿಯರನ್ನು ಉಪಯೋಗಿಸುತ್ತಾನೆ. ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುವ ಕಾರಣ “ನಾವು ‘ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?’ ಎಂದು ಧೈರ್ಯವಾಗಿ ಹೇಳಬಹುದು.”—ಇಬ್ರಿ. 13:6.
14. ಯೆಹೋವನ ಅಪಾತ್ರ ದಯೆಯಿಂದ ನಮ್ಮ ಹೃದಯಕ್ಕೆ ಹೇಗೆ ಪ್ರಯೋಜನವಾಗುತ್ತದೆ?
14 ನಮ್ಮ ಹೃದಯಕ್ಕೆ ಸಾಂತ್ವನ ಸಿಗುತ್ತದೆ. ನಮಗೆ ಭಾವನಾತ್ಮಕ ಒತ್ತಡ ಇರುವಾಗಲೆಲ್ಲ ಯೆಹೋವನು ನಮಗೆ ಸಾಂತ್ವನ ಕೊಡುತ್ತಾನೆ. ಇದು ನಿಜಕ್ಕೂ ಒಂದು ಆಶೀರ್ವಾದ! (ಕೀರ್ತ. 51:17) ಥೆಸಲೊನೀಕದ ಕ್ರೈಸ್ತರು ಹಿಂಸೆಯನ್ನು ಅನುಭವಿಸುತ್ತಿದ್ದಾಗ ಪೌಲನು ಬರೆದದ್ದು: ‘ನಮ್ಮ ಕರ್ತನಾದ ಯೇಸು ಕ್ರಿಸ್ತನು ಮತ್ತು ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಸಾಂತ್ವನ, ಒಳ್ಳೇ ನಿರೀಕ್ಷೆಯನ್ನು ಅಪಾತ್ರ ದಯೆಯಿಂದ ನೀಡಿದ ತಂದೆಯಾದ ದೇವರು ನಿಮ್ಮ ಹೃದಯಗಳನ್ನು ಸಾಂತ್ವನಗೊಳಿಸುತ್ತಾನೆ ಹಾಗೂ ದೃಢಪಡಿಸುತ್ತಾನೆ.’ (2 ಥೆಸ. 2:16, 17) ಯೆಹೋವನ ಅಪಾತ್ರ ದಯೆಯಿಂದಲೇ ನಮಗೆ ಆತನ ಪ್ರೀತಿ ಮತ್ತು ಕಾಳಜಿ ಸಿಕ್ಕಿದೆಯೆಂದು ತಿಳಿಯುವುದು ಎಷ್ಟೊಂದು ನೆಮ್ಮದಿ ಕೊಡುತ್ತದೆ!
15. ದೇವರ ಅಪಾತ್ರ ದಯೆಯಿಂದಾಗಿ ನಮಗೆ ಯಾವ ನಿರೀಕ್ಷೆಯಿದೆ?
15 ನಮಗೆ ನಿತ್ಯಜೀವದ ನಿರೀಕ್ಷೆ ಇದೆ. ಯೆಹೋವನ ಸಹಾಯವಿಲ್ಲದೆ ಇರುತ್ತಿದ್ದರೆ ಪಾಪಿಗಳಾದ ನಮಗೆ ನಿರೀಕ್ಷೆಯೇ ಇರುತ್ತಿರಲಿಲ್ಲ. (ಕೀರ್ತನೆ 49:7, 8 ಓದಿ.) ಆದರೆ ಯೆಹೋವನು ನಮಗೆ ಒಂದು ಆಶ್ಚರ್ಯಕರ ನಿರೀಕ್ಷೆಯನ್ನು ಕೊಟ್ಟಿದ್ದಾನೆ. ಅದೇನು? ಯೇಸು ಅಂದದ್ದು: “ಮಗನನ್ನು ನೋಡಿ ಅವನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ನಿತ್ಯಜೀವವನ್ನು ಪಡೆಯಬೇಕು ಎಂಬುದೇ ನನ್ನ ತಂದೆಯ ಚಿತ್ತವಾಗಿದೆ.” (ಯೋಹಾ. 6:40) ಯೆಹೋವನ ಅಪಾತ್ರ ದಯೆಯಿಂದಲೇ ನಮಗೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿದೆ. ಪೌಲನು ಹೇಳಿದ್ದು: ‘ಎಲ್ಲ ರೀತಿಯ ಜನರಿಗೆ ರಕ್ಷಣೆಯನ್ನು ತರುವ ದೇವರ ಅಪಾತ್ರ ದಯೆಯು ಪ್ರತ್ಯಕ್ಷವಾಗಿದೆ.’—ತೀತ 2:11.
ದೇವರ ಅಪಾತ್ರ ದಯೆಯನ್ನು ಪಾಪಮಾಡಲು ನೆವವಾಗಿ ಬಳಸಬೇಡಿ
16. ಆರಂಭದ ಕ್ರೈಸ್ತರಲ್ಲಿ ಕೆಲವರು ದೇವರ ಅಪಾತ್ರ ದಯೆಯನ್ನು ಹೇಗೆ ದುರುಪಯೋಗಿಸಿದರು?
16 ಯೆಹೋವನ ಅಪಾತ್ರ ದಯೆಯಿಂದಾಗಿ ನಮಗೆ ಅನೇಕ ಆಶೀರ್ವಾದಗಳು ಸಿಗುತ್ತವೆ. ಆದರೆ ನಾವು ಆತನ ದಯೆಯನ್ನು ದುರುಪಯೋಗಿಸಬಾರದು ಅಂದರೆ ಪಾಪಮಾಡುವುದಕ್ಕೆ ನೆಪವಾಗಿ ಬಳಸಬಾರದು. ಆರಂಭದ ಕ್ರೈಸ್ತರಲ್ಲಿ ಕೆಲವರು ‘ದೇವರ ಅಪಾತ್ರ ದಯೆಯನ್ನು ನೆವಮಾಡಿಕೊಂಡು ಸಡಿಲು [ಭಂಡ] ನಡತೆಯನ್ನು ನಡೆಸಲು’ ಪ್ರಯತ್ನಿಸಿದರು. (ಯೂದ 4) ಈ ಅಪನಂಬಿಗಸ್ತ ಕ್ರೈಸ್ತರು ಏನು ನೆನಸಿದ್ದರೆಂದರೆ ‘ಯೆಹೋವನು ಹೇಗೂ ಯಾವಾಗಲೂ ನಮ್ಮನ್ನು ಕ್ಷಮಿಸುತ್ತಾನೆ, ಆದ್ದರಿಂದ ಪಾಪ ಮಾಡಿದರೂ ಪರವಾಗಿಲ್ಲ’ ಎಂದು. ಅವರು ಪಾಪಮಾಡಿದ್ದಲ್ಲದೆ ಅವರ ಸಹೋದರರನ್ನೂ ಪಾಪದಲ್ಲಿ ಒಳಗೂಡಿಸಲು ಪ್ರಯತ್ನಿಸಿದರು. ಇಂದು ಕೂಡ ಯಾರಾದರೂ ಹಾಗೆ ಮಾಡಿದರೆ ಅವರು ‘ಅಪಾತ್ರ ದಯೆಯ ಆತ್ಮವನ್ನು ತಿರಸ್ಕರಿಸುವವರಾಗಿದ್ದಾರೆ.’—ಇಬ್ರಿ. 10:29.
17. ಪೇತ್ರನು ಯಾವ ಗಂಭೀರ ಸಲಹೆಯನ್ನು ಕೊಟ್ಟನು?
17 ತಾವು ಯಾವುದೇ ಪಾಪ ಮಾಡಿದರೂ ಯೆಹೋವನು ಹೇಗೂ ಕ್ಷಮಿಸಿಬಿಡುತ್ತಾನೆಂಬ ಯೋಚನೆಯಿಂದ ಇಂದು ಸಹ ಸೈತಾನನು ಕೆಲವು ಕ್ರೈಸ್ತರನ್ನು ದಾರಿತಪ್ಪಿಸುತ್ತಿದ್ದಾನೆ. ಪಾಪಿಗಳು ಪಶ್ಚಾತ್ತಾಪಪಟ್ಟರೆ ಯೆಹೋವನು ಕ್ಷಮಿಸಲು ಸಿದ್ಧನಾಗಿದ್ದಾನೆ ನಿಜ. ಆದರೆ ನಾವು ಪಾಪಪೂರ್ಣ ಆಶೆಗಳ ವಿರುದ್ಧ ಹೋರಾಡುವಂತೆಯೂ ಆತನು ಅಪೇಕ್ಷಿಸುತ್ತಾನೆ. ಯೆಹೋವನು ಪೇತ್ರನಿಗೆ ಹೀಗೆ ಬರೆಯಲು ಪ್ರೇರಿಸಿದನು: “ಪ್ರಿಯರೇ, ಈ ವಿಷಯಗಳನ್ನು ನೀವು ಮುಂದಾಗಿಯೇ ತಿಳಿದುಕೊಂಡಿರುವುದರಿಂದ ನಿಯಮವನ್ನು ಉಲ್ಲಂಘಿಸುವಂಥ ಜನರ ತಪ್ಪಿನಿಂದ ನೀವು ಅವರೊಂದಿಗೆ ನಡೆಸಲ್ಪಟ್ಟು ನಿಮ್ಮ ಸ್ಥಿರತೆಯನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ. ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಅಪಾತ್ರ ದಯೆ ಮತ್ತು ಜ್ಞಾನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಇರಿ.”—2 ಪೇತ್ರ 3:17, 18.
ಅಪಾತ್ರ ದಯೆ ಹೊಂದಿರುವುದರಿಂದ ಬರುವ ಜವಾಬ್ದಾರಿಗಳು
18. ಯೆಹೋವನ ಅಪಾತ್ರ ದಯೆ ಹೊಂದಿರುವುದರಿಂದ ನಮಗೆ ಯಾವ ಜವಾಬ್ದಾರಿಗಳಿವೆ?
18 ಯೆಹೋವನ ಅಪಾತ್ರ ದಯೆಗಾಗಿ ನಾವು ತುಂಬ ಕೃತಜ್ಞರು. ಆದ್ದರಿಂದ ನಮ್ಮಲ್ಲಿರುವ ವರಗಳನ್ನು ಯೆಹೋವನನ್ನು ಮಹಿಮೆಪಡಿಸಲು ಮತ್ತು ಇತರರಿಗೆ ಸಹಾಯ ಕೊಡಲು ಬಳಸಬೇಕು. ಇತರರಿಗೆ ಸಹಾಯ ಮಾಡುವ ಹಂಗು ನಮಗಿದೆ. ನಮ್ಮ ವರಗಳನ್ನು ನಾವು ಹೇಗೆ ಉಪಯೋಗಿಸಬಹುದು? ಪೌಲನು ಹೇಳಿದ್ದು: “ನಮಗೆ ಕೊಡಲ್ಪಟ್ಟಿರುವ ಅಪಾತ್ರ ದಯೆಗನುಸಾರ ನಾವು ಭಿನ್ನವಾದ ವರಗಳನ್ನು ಹೊಂದಿದ್ದೇವೆ; . . . ಶುಶ್ರೂಷೆಯ ವರವಾಗಿರುವುದಾದರೆ ಈ ಶುಶ್ರೂಷೆಯಲ್ಲಿ ನಿರತರಾಗಿರೋಣ; ಬೋಧಿಸುವವನು ಬೋಧಿಸುತ್ತಾ ಇರಲಿ; ಬುದ್ಧಿಹೇಳುವವನು ಬುದ್ಧಿಹೇಳುವುದರಲ್ಲಿ ನಿರತನಾಗಿರಲಿ; . . . ಕರುಣೆ ತೋರಿಸುವವನು ಅದನ್ನು ಉಲ್ಲಾಸದಿಂದ ತೋರಿಸಲಿ.” (ರೋಮ. 12:6-8) ಯೆಹೋವನ ಅಪಾತ್ರ ದಯೆ ಹೊಂದಿರುವುದರಿಂದ ನಮಗೆ ಸೇವೆಯಲ್ಲಿ ಶ್ರಮಪಟ್ಟು ಕೆಲಸಮಾಡುವ, ಬೈಬಲನ್ನು ಇತರರಿಗೆ ಕಲಿಸುವ, ಸಹೋದರರನ್ನು ಪ್ರೋತ್ಸಾಹಿಸುವ, ಮನನೋಯಿಸಿದವರನ್ನು ಕ್ಷಮಿಸುವ ಜವಾಬ್ದಾರಿಗಳಿವೆ.
19. ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
19 ಯೆಹೋವನ ಅಪಾತ್ರ ದಯೆಯಿಂದ ಆಶೀರ್ವದಿತರಾಗಿರುವ ನಾವು ‘ಆತನ ಅಪಾತ್ರ ದಯೆಯ ಸುವಾರ್ತೆಗೆ ಕೂಲಂಕಷ ಸಾಕ್ಷಿ ಕೊಡಲು’ ನಮ್ಮಿಂದ ಆಗುವುದೆಲ್ಲವನ್ನು ಮಾಡುವಂತೆ ಪ್ರೇರಿಸಲ್ಪಡಬೇಕು. (ಅ. ಕಾ. 20:24) ನಮಗಿರುವ ಈ ಸಾರುವ ಜವಾಬ್ದಾರಿಯ ಕುರಿತು ಹೆಚ್ಚನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.