ಅಧ್ಯಾಯ 6
ಒಳ್ಳೆಯ ಮನೋರಂಜನೆಯನ್ನು ಆರಿಸಿಕೊಳ್ಳುವ ವಿಧ
“ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.” —1 ಕೊರಿಂಥ 10:31.
1, 2. ಮನೋರಂಜನೆಯ ವಿಷಯದಲ್ಲಿ ನಾವು ಯಾವ ಆಯ್ಕೆಯನ್ನು ಮಾಡುವ ಅಗತ್ಯವಿದೆ?
ತುಂಬ ರುಚಿಕರವಾದ ಒಂದು ಹಣ್ಣನ್ನು ಇನ್ನೇನು ತಿನ್ನಲಿಕ್ಕಿರುವಾಗ ಅದರ ಒಂದು ಭಾಗವು ಹಾಳಾಗಿರುವುದನ್ನು ನೀವು ಗಮನಿಸುತ್ತೀರಿ ಎಂದಿಟ್ಟುಕೊಳ್ಳಿ. ನೀವೇನು ಮಾಡುವಿರಿ? ಹಾಳಾದ ಭಾಗವನ್ನೂ ಸೇರಿಸಿ ಇಡೀ ಹಣ್ಣನ್ನು ತಿನ್ನಸಾಧ್ಯವಿದೆ; ಹಾಳಾದ ಭಾಗವನ್ನೂ ಸೇರಿಸಿ ಇಡೀ ಹಣ್ಣನ್ನು ಎಸೆದುಬಿಡಸಾಧ್ಯವಿದೆ; ಅಥವಾ ಹಣ್ಣಿನ ಹಾಳಾದ ಭಾಗವನ್ನು ಕತ್ತರಿಸಿ ತೆಗೆದು ಒಳ್ಳೆಯ ಭಾಗವನ್ನು ಸವಿಯಸಾಧ್ಯವಿದೆ. ನೀವು ಯಾವ ಆಯ್ಕೆಯನ್ನು ಮಾಡುವಿರಿ?
2 ಒಂದರ್ಥದಲ್ಲಿ ಮನೋರಂಜನೆಯು ಆ ಹಣ್ಣಿನಂತಿದೆ. ಕೆಲವೊಮ್ಮೆ ನೀವು ಸ್ವಲ್ಪ ವಿನೋದಾವಳಿಯಲ್ಲಿ ಆನಂದಿಸಲು ಇಷ್ಟಪಡಬಹುದು, ಆದರೆ ಇಂದು ಲಭ್ಯವಿರುವ ಮನೋರಂಜನೆಯಲ್ಲಿ ಹೆಚ್ಚಿನದ್ದು ನೈತಿಕವಾಗಿ ಹಾಳಾಗಿದೆ, ಕೆಟ್ಟೂ ಹೋಗಿದೆ ಎಂಬುದು ನಿಮಗೆ ಮನವರಿಕೆಯಾಗುತ್ತದೆ. ಹಾಗಾದರೆ ನೀವು ಏನು ಮಾಡುವಿರಿ? ಕೆಲವರು ಕೆಟ್ಟದ್ದನ್ನು ಸಹಿಸಿಕೊಳ್ಳುವ ಮನಸ್ಸಿನವರಾಗಿದ್ದು ಈ ಲೋಕವು ನೀಡಲಿಕ್ಕಿರುವಂಥ ಯಾವುದೇ ಮನೋರಂಜನೆಯನ್ನು ಅಂಗೀಕರಿಸಬಹುದು. ಇತರರು ಹಾನಿಕರವಾದ ವಿಷಯಗಳಿಗೆ ತಮ್ಮನ್ನು ಒಡ್ಡಿಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಎಲ್ಲ ರೀತಿಯ ಮನೋರಂಜನೆಯಿಂದ ದೂರವಿರಬಹುದು. ಇನ್ನಿತರರಾದರೋ ತುಂಬ ಜಾಗ್ರತೆಯಿಂದ ಹಾನಿಕರವಾದ ಮನೋರಂಜನೆಯಿಂದ ದೂರವಿದ್ದು ಸ್ವಲ್ಪಮಟ್ಟಿಗೆ ಒಳ್ಳೇದಾಗಿರುವ ಮನೋರಂಜನೆಯಲ್ಲಿ ಕೆಲವೊಮ್ಮೆ ಆನಂದಿಸಬಹುದು. ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಲಿಕ್ಕಾಗಿ ನೀವು ಯಾವ ಆಯ್ಕೆಯನ್ನು ಮಾಡಬೇಕು?
3. ನಾವೀಗ ಏನನ್ನು ಪರಿಗಣಿಸುವೆವು?
3 ನಮ್ಮಲ್ಲಿ ಹೆಚ್ಚಿನವರು ಮೂರನೆಯ ಆಯ್ಕೆಯನ್ನು ಮಾಡುವೆವು. ಸ್ವಲ್ಪಮಟ್ಟಿಗಿನ ಮನೋರಂಜನೆಯು ಅಗತ್ಯ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವಾದರೂ ನೈತಿಕವಾಗಿ ಸ್ವಸ್ಥವಾಗಿರುವುದಕ್ಕೆ ಮಾತ್ರ ನಮ್ಮ ಮನೋರಂಜನೆಯನ್ನು ಸೀಮಿತಗೊಳಿಸಲು ಬಯಸುತ್ತೇವೆ. ಆದುದರಿಂದ ಯಾವುದು ಒಳ್ಳೆಯ ಮನೋರಂಜನೆಯಾಗಿದೆ ಮತ್ತು ಯಾವುದು ಒಳ್ಳೆಯ ಮನೋರಂಜನೆಯಾಗಿಲ್ಲ ಎಂಬುದನ್ನು ನಾವು ಹೇಗೆ ನಿರ್ಧರಿಸಸಾಧ್ಯವಿದೆ ಎಂಬ ವಿಷಯವನ್ನು ಪರಿಗಣಿಸಬೇಕಾಗಿದೆ. ಅದಕ್ಕಿಂತ ಮೊದಲು ಮನೋರಂಜನೆಯ ವಿಷಯದಲ್ಲಿ ನಾವು ಮಾಡುವ ಆಯ್ಕೆಯು ಯೆಹೋವನಿಗೆ ನಾವು ಸಲ್ಲಿಸುವ ಆರಾಧನೆಯ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು ಎಂಬುದನ್ನು ಚರ್ಚಿಸೋಣ.
“ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ”
4. ನಮ್ಮ ಸಮರ್ಪಣೆಯು ಮನೋರಂಜನೆಯ ಕುರಿತಾದ ನಮ್ಮ ಆಯ್ಕೆಯ ಮೇಲೆ ಹೇಗೆ ಪ್ರಭಾವ ಬೀರಬೇಕು?
4 ಇಸವಿ 1946ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಒಬ್ಬ ವೃದ್ಧ ಸಾಕ್ಷಿಯು ಸ್ವಲ್ಪ ಹಿಂದೆ ಹೇಳಿದ್ದು: “ದೀಕ್ಷಾಸ್ನಾನದ ಪ್ರತಿಯೊಂದು ಭಾಷಣಕ್ಕೆ ಹಾಜರಾಗಿ, ಅದು ನನ್ನದೇ ದೀಕ್ಷಾಸ್ನಾನವೋ ಎನ್ನುವಷ್ಟರ ಮಟ್ಟಿಗೆ ಜಾಗರೂಕತೆಯಿಂದ ಕಿವಿಗೊಡುವುದನ್ನು ನಾನು ರೂಢಿಯಾಗಿ ಮಾಡಿಕೊಂಡಿದ್ದೇನೆ.” ಏಕೆ? “ನನ್ನ ಸಮರ್ಪಣೆಯನ್ನು ಮನಸ್ಸಿನಲ್ಲಿ ಹೊಚ್ಚಹೊಸತಾಗಿ ಇರಿಸುವುದು ನಾನು ನಂಬಿಗಸ್ತನಾಗಿ ಉಳಿದಿರುವುದರಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಅವರು ವಿವರಿಸಿದರು. ಈ ದೃಷ್ಟಿಕೋನವನ್ನು ನೀವು ಸಮ್ಮತಿಸುತ್ತೀರಿ ಎಂಬುದರಲ್ಲಿ ಸಂಶಯವಿಲ್ಲ. ನಿಮ್ಮ ಇಡೀ ಜೀವನವನ್ನು ಯೆಹೋವನ ಸೇವೆಗಾಗಿ ವಿನಿಯೋಗಿಸುತ್ತೀರೆಂದು ನೀವು ಆತನಿಗೆ ಮಾತುಕೊಟ್ಟಿದ್ದೀರಿ ಎಂಬುದನ್ನು ಸ್ವತಃ ನೆನಪಿಸಿಕೊಳ್ಳುವುದು, ತಾಳಿಕೊಳ್ಳುವಂತೆ ನಿಮ್ಮನ್ನು ಪ್ರಚೋದಿಸುವುದು. (ಪ್ರಸಂಗಿ 5:4 ಓದಿ.) ವಾಸ್ತವದಲ್ಲಿ ನಿಮ್ಮ ಸಮರ್ಪಣೆಯ ಕುರಿತು ಮನನಮಾಡುವುದು ಕ್ರೈಸ್ತ ಶುಶ್ರೂಷೆಯ ಕುರಿತು ಮಾತ್ರವಲ್ಲ ಮನೋರಂಜನೆಯನ್ನೂ ಒಳಗೊಂಡು ಜೀವನದ ಇತರ ಎಲ್ಲ ಚಟುವಟಿಕೆಗಳ ಕುರಿತಾದ ನಿಮ್ಮ ದೃಷ್ಟಿಕೋನದ ಮೇಲೆ ಪ್ರಭಾವ ಬೀರುವುದು. ಅಪೊಸ್ತಲ ಪೌಲನು ತನ್ನ ದಿನದ ಕ್ರೈಸ್ತರಿಗೆ “ನೀವು ತಿಂದರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ” ಎಂದು ಬರೆದಾಗ ಆ ಸತ್ಯವನ್ನು ಒತ್ತಿಹೇಳಿದನು.—1 ಕೊರಿಂಥ 10:31.
5. ಯಾಜಕಕಾಂಡ 22:18-20ರಲ್ಲಿರುವ ವಚನಗಳು ರೋಮನ್ನರಿಗೆ 12:1ರ ಹಿಂದಿರುವ ಪರೋಕ್ಷವಾದ ಎಚ್ಚರಿಕೆಯನ್ನು ಗ್ರಹಿಸಲು ನಮಗೆ ಹೇಗೆ ಸಹಾಯಮಾಡುತ್ತವೆ?
5 ಜೀವನದಲ್ಲಿ ನೀವು ಮಾಡುವಂಥ ಪ್ರತಿಯೊಂದು ವಿಷಯವು ಯೆಹೋವನಿಗೆ ನೀವು ಸಲ್ಲಿಸುವ ಆರಾಧನೆಯೊಂದಿಗೆ ಸಂಬಂಧಿಸಿದೆ. ರೋಮನ್ನರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಜೊತೆ ವಿಶ್ವಾಸಿಗಳ ಮನಸ್ಸುಗಳ ಮೇಲೆ ಈ ಸತ್ಯವನ್ನು ಅಚ್ಚೊತ್ತಲಿಕ್ಕಾಗಿ ತುಂಬ ಪ್ರಬಲವಾದ ಒಂದು ಅಭಿವ್ಯಕ್ತಿಯನ್ನು ಉಪಯೋಗಿಸಿದನು. ಅವನು ಅವರಿಗೆ ಉತ್ತೇಜಿಸುತ್ತಾ, “ನೀವು ನಿಮ್ಮ ದೇಹಗಳನ್ನು ಸಜೀವವಾಗಿಯೂ ಪವಿತ್ರವಾಗಿಯೂ ದೇವರಿಗೆ ಸ್ವೀಕೃತವಾಗಿಯೂ ಇರುವ ಯಜ್ಞವಾಗಿ ಅರ್ಪಿಸಿರಿ; ಇದೇ ನೀವು ವಿವೇಚನಾಶಕ್ತಿಯೊಂದಿಗೆ ಅರ್ಪಿಸುವ ಪವಿತ್ರ ಸೇವೆಯಾಗಿದೆ” ಎಂದು ಹೇಳಿದನು. (ರೋಮನ್ನರಿಗೆ 12:1) ನಿಮ್ಮ ದೇಹವು ನಿಮ್ಮ ಮನಸ್ಸು, ಹೃದಯ ಮತ್ತು ನಿಮ್ಮ ಶಾರೀರಿಕ ಶಕ್ತಿಯನ್ನು ಒಳಗೂಡಿದೆ. ಇದೆಲ್ಲವನ್ನೂ ನೀವು ದೇವರ ಸೇವೆಯಲ್ಲಿ ಉಪಯೋಗಿಸುತ್ತೀರಿ. (ಮಾರ್ಕ 12:30) ಇಂಥ ಪೂರ್ಣ ಪ್ರಾಣದ ಸೇವೆಯನ್ನು ಪೌಲನು ಒಂದು ಯಜ್ಞವೋ ಎಂಬಂತೆ ಮಾತಾಡುತ್ತಾನೆ. “ಯಜ್ಞ” ಎಂಬ ಅಭಿವ್ಯಕ್ತಿಯಲ್ಲಿ ಪರೋಕ್ಷವಾದ ಎಚ್ಚರಿಕೆಯು ಒಳಗೂಡಿದೆ. ಮೋಶೆಯ ಧರ್ಮಶಾಸ್ತ್ರದ ಕೆಳಗೆ ಕುಂದುಕೊರತೆಯುಳ್ಳ ಯಜ್ಞವನ್ನು ದೇವರು ತಿರಸ್ಕರಿಸುತ್ತಿದ್ದನು. (ಯಾಜಕಕಾಂಡ 22:18-20) ತದ್ರೀತಿಯಲ್ಲಿ, ಕ್ರೈಸ್ತನೊಬ್ಬನ ಆಧ್ಯಾತ್ಮಿಕ ಯಜ್ಞವು ಯಾವುದಾದರೊಂದು ರೀತಿಯಲ್ಲಿ ಕಳಂಕಗೊಂಡಿರುವಲ್ಲಿ, ದೇವರು ಅದನ್ನು ತಿರಸ್ಕರಿಸುತ್ತಾನೆ. ಆದರೆ ಇದು ಹೇಗೆ ಸಂಭವಿಸಸಾಧ್ಯವಿದೆ?
6, 7. ಕ್ರೈಸ್ತನೊಬ್ಬನು ತನ್ನ ದೇಹವನ್ನು ಹೇಗೆ ಕಳಂಕಿತಗೊಳಿಸಸಾಧ್ಯವಿದೆ ಮತ್ತು ಅದರ ಪರಿಣಾಮಗಳು ಏನಾಗಿರಬಲ್ಲವು?
6 ರೋಮ್ನಲ್ಲಿದ್ದ ಕ್ರೈಸ್ತರಿಗೆ ಪೌಲನು, “ನಿಮ್ಮ ಅಂಗಗಳನ್ನು . . . ಪಾಪಕ್ಕೆ ಒಪ್ಪಿಸುತ್ತಾ ಇರಬೇಡಿ” ಎಂದು ಬುದ್ಧಿಹೇಳಿದನು. ‘ದೇಹದ ದುರಭ್ಯಾಸಗಳನ್ನು ಸಾಯಿಸುವಂತೆಯೂ’ ಪೌಲನು ಅವರಿಗೆ ಹೇಳಿದನು. (ರೋಮನ್ನರಿಗೆ 6:12-14; 8:13) ಇದಕ್ಕೂ ಮುಂಚೆ ಅವನು ತನ್ನ ಪತ್ರದಲ್ಲಿ “ದೇಹದ ದುರಭ್ಯಾಸಗಳ” ವಿಷಯದಲ್ಲಿ ಕೆಲವು ಉದಾಹರಣೆಗಳನ್ನು ಕೊಟ್ಟಿದ್ದನು. ಪಾಪಭರಿತ ಮಾನವಕುಲದ ವಿಷಯದಲ್ಲಿ ನಾವು ಹೀಗೆ ಓದುತ್ತೇವೆ: ‘ಅವರ ಬಾಯಿ ಶಾಪದಿಂದ ತುಂಬಿದೆ.’ “ಅವರ ಪಾದಗಳು ರಕ್ತವನ್ನು ಸುರಿಸಲು ತ್ವರೆಪಡುತ್ತವೆ.” “ಅವರ ಕಣ್ಮುಂದೆ ದೇವರ ಭಯವೇ ಇಲ್ಲ.” (ರೋಮನ್ನರಿಗೆ 3:13-18) ಒಬ್ಬ ಕ್ರೈಸ್ತನು ತನ್ನ “ಅಂಗಗಳನ್ನು” ಇಂಥ ಪಾಪಭರಿತ ದುರಭ್ಯಾಸಗಳಿಗಾಗಿ ಉಪಯೋಗಿಸುವಲ್ಲಿ ಅವನು ತನ್ನ ದೇಹವನ್ನು ಕಳಂಕಗೊಳಿಸುತ್ತಾನೆ. ಉದಾಹರಣೆಗೆ, ಇಂದು ಕ್ರೈಸ್ತನೊಬ್ಬನು ಲಂಪಟಸಾಹಿತ್ಯದಂಥ ನೀತಿಭ್ರಷ್ಟ ವಿಷಯಗಳನ್ನು ಉದ್ದೇಶಪೂರ್ವಕವಾಗಿ ನೋಡುವಲ್ಲಿ ಅಥವಾ ಹಿಂಸಾನಂದದ ಹಿಂಸಾಚಾರವನ್ನು ವೀಕ್ಷಿಸುವಲ್ಲಿ, ಅವನು ತನ್ನ ‘[ಕಣ್ಣುಗಳನ್ನು] ಪಾಪಕ್ಕೆ ಒಪ್ಪಿಸುತ್ತಾ ಇದ್ದಾನೆ’ ಮತ್ತು ಇದರಿಂದಾಗಿ ತನ್ನ ಇಡೀ ದೇಹವನ್ನೇ ಕಳಂಕಿತಗೊಳಿಸುತ್ತಾನೆ. ಅವನು ಸಲ್ಲಿಸುವ ಯಾವುದೇ ಆರಾಧನೆಯು ಇನ್ನೆಂದಿಗೂ ಪವಿತ್ರವಾಗಿರದಂಥ ಒಂದು ಯಜ್ಞಕ್ಕೆ ಸಮಾನವಾಗಿದೆ ಮತ್ತು ಇದು ದೇವರಿಗೆ ಅನಂಗೀಕೃತವಾಗಿದೆ. (ಧರ್ಮೋಪದೇಶಕಾಂಡ 15:21; 1 ಪೇತ್ರ 1:14-16; 2 ಪೇತ್ರ 3:11) ಅಹಿತಕರವಾದ ಮನೋರಂಜನೆಯನ್ನು ಆರಿಸಿಕೊಂಡದ್ದಕ್ಕಾಗಿ ಎಂಥ ಬೆಲೆಯನ್ನು ತೆರಬೇಕಾಗುತ್ತದೆ!
7 ಕ್ರೈಸ್ತನೊಬ್ಬನ ಮನೋರಂಜನೆಯ ಆಯ್ಕೆಯು ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದು ಸುಸ್ಪಷ್ಟ. ಹೀಗಿರುವುದರಿಂದ, ದೇವರಿಗೆ ನಮ್ಮ ಯಜ್ಞವನ್ನು ಕಳಂಕಗೊಳಿಸುವಂಥದ್ದಲ್ಲ ಬದಲಾಗಿ ಅದಕ್ಕೆ ಶೋಭೆ ನೀಡುವಂಥ ಮನೋರಂಜನೆಯನ್ನು ನಾವು ಆರಿಸಿಕೊಳ್ಳಲು ಬಯಸುತ್ತೇವೆ. ಯಾವುದು ಒಳ್ಳೆಯ ಮನೋರಂಜನೆಯಾಗಿದೆ ಮತ್ತು ಯಾವುದು ಒಳ್ಳೆಯ ಮನೋರಂಜನೆಯಾಗಿಲ್ಲ ಎಂಬುದನ್ನು ಹೇಗೆ ನಿರ್ಧರಿಸಸಾಧ್ಯವಿದೆ ಎಂಬ ವಿಷಯವನ್ನು ನಾವೀಗ ಚರ್ಚಿಸೋಣ.
“ಕೆಟ್ಟದ್ದನ್ನು ಹೇಸಿರಿ”
8, 9. (ಎ) ಸಾಮಾನ್ಯವಾಗಿ ಮನೋರಂಜನೆಯನ್ನು ಯಾವ ಎರಡು ವರ್ಗಗಳಾಗಿ ವಿಂಗಡಿಸಸಾಧ್ಯವಿದೆ? (ಬಿ) ಯಾವ ರೀತಿಯ ಮನೋರಂಜನೆಯನ್ನು ನಾವು ತಿರಸ್ಕರಿಸುತ್ತೇವೆ ಮತ್ತು ಏಕೆ?
8 ಸಾಮಾನ್ಯವಾಗಿ ಮನೋರಂಜನೆಯನ್ನು ಎರಡು ವರ್ಗಗಳಾಗಿ ವಿಂಗಡಿಸಸಾಧ್ಯವಿದೆ. ಒಂದು ವರ್ಗವು ಕ್ರೈಸ್ತರು ಖಡಾಖಂಡಿತವಾಗಿ ದೂರವಿರಬೇಕಾದ ಮನೋರಂಜನೆಯನ್ನು ಒಳಗೂಡಿದೆ; ಇನ್ನೊಂದು ವರ್ಗವು ಕ್ರೈಸ್ತರು ಅಂಗೀಕೃತವಾಗಿ ಪರಿಗಣಿಸಬಹುದಾದ ಇಲ್ಲವೆ ಅಂಗೀಕೃತವಾಗಿ ಪರಿಗಣಿಸದಿರಬಹುದಾದ ಮನೋರಂಜನೆಯನ್ನು ಒಳಗೂಡಿದೆ. ಪ್ರಥಮವಾಗಿ ನಾವು ಮೊದಲನೆಯ ವರ್ಗವನ್ನು ಅಂದರೆ ಕ್ರೈಸ್ತರು ದೂರವಿರಬೇಕಾದ ಮನೋರಂಜನೆಯನ್ನು ಪರಿಗಣಿಸೋಣ.
9 ಒಂದನೆಯ ಅಧ್ಯಾಯದಲ್ಲಿ ಗಮನಿಸಿದಂತೆ, ಕೆಲವೊಂದು ರೀತಿಯ ಮನೋರಂಜನೆಯು ಬೈಬಲಿನಲ್ಲಿ ಸ್ಪಷ್ಟವಾಗಿ ಖಂಡಿಸಿರುವಂಥ ಚಟುವಟಿಕೆಗಳನ್ನು ಚಿತ್ರಿಸುತ್ತದೆ. ಉದಾಹರಣೆಗೆ, ಹಿಂಸಾನಂದದ ಅಥವಾ ಪೈಶಾಚಿಕ ವಿಷಯಗಳನ್ನು ಒಳಗೂಡಿರುವ ಇಲ್ಲವೆ ಲಂಪಟಸಾಹಿತ್ಯವನ್ನು ಹೊಂದಿರುವ ಅಥವಾ ಅಸಹ್ಯಕರವಾದ ಅನೈತಿಕ ದುರಭ್ಯಾಸಗಳನ್ನು ಉತ್ತೇಜಿಸುವಂಥ ವೆಬ್ ಸೈಟ್ಗಳು ಮತ್ತು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಸಂಗೀತದ ಕುರಿತು ಆಲೋಚಿಸಿರಿ. ಇಂಥ ಮನೋರಂಜನೆಯ ಹೀನ ರೂಪಗಳು ಬೈಬಲಿನ ಮೂಲತತ್ತ್ವಗಳನ್ನು ಉಲ್ಲಂಘಿಸುವಂಥ ಅಥವಾ ಬೈಬಲಿನ ನಿಯಮಗಳನ್ನು ಮುರಿಯುವಂಥ ಚಟುವಟಿಕೆಗಳನ್ನು ಅಂಗೀಕಾರಾರ್ಹವಾದ ರೀತಿಯಲ್ಲಿ ಚಿತ್ರಿಸುತ್ತವಾದ್ದರಿಂದ ನಿಜ ಕ್ರೈಸ್ತರು ಇವುಗಳಿಂದ ದೂರವಿರಬೇಕಾಗಿದೆ. (ಅಪೊಸ್ತಲರ ಕಾರ್ಯಗಳು 15:28, 29; 1 ಕೊರಿಂಥ 6:9, 10; ಪ್ರಕಟನೆ 21:8) ಇಂಥ ಅಹಿತಕರವಾದ ಮನೋರಂಜನೆಯನ್ನು ತಿರಸ್ಕರಿಸುವ ಮೂಲಕ ನೀವು ನಿಜವಾಗಿಯೂ ‘ಕೆಟ್ಟದ್ದನ್ನು ಹೇಸುತ್ತೀರಿ’ ಮತ್ತು ಯಾವಾಗಲೂ ‘ಕೆಟ್ಟದ್ದರಿಂದ ವಿಮುಖರಾಗುತ್ತೀರಿ’ ಎಂಬುದನ್ನು ಯೆಹೋವನಿಗೆ ರುಜುಪಡಿಸುತ್ತೀರಿ. ಈ ರೀತಿಯಲ್ಲಿ ನಿಮ್ಮಲ್ಲಿ ‘ನಿಷ್ಕಪಟವಾದ ನಂಬಿಕೆಯಿರುತ್ತದೆ.’—ರೋಮನ್ನರಿಗೆ 12:9; ಕೀರ್ತನೆ 34:14; 1 ತಿಮೊಥೆಯ 1:5.
10. ಮನೋರಂಜನೆಯ ಕುರಿತಾದ ಯಾವ ರೀತಿಯ ತರ್ಕವು ಅಪಾಯಕರ ಮತ್ತು ಏಕೆ?
10 ಆದರೂ ಅನೈತಿಕ ನಡತೆಯನ್ನು ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ಚಿತ್ರಿಸುವ ಮನೋರಂಜನೆಯನ್ನು ನೋಡುವುದು ಹಾನಿಕರವಲ್ಲ ಎಂದು ಕೆಲವರು ನೆನಸಬಹುದು. ‘ನಾನು ಚಲನಚಿತ್ರಗಳಲ್ಲಿ ಅಥವಾ ಟಿವಿಯಲ್ಲಿ ಅದನ್ನು ನೋಡಬಹುದು, ಆದರೆ ಸ್ವತಃ ನಾನೇ ಅಂಥ ವಿಷಯಗಳನ್ನು ಎಂದೂ ಮಾಡುವುದಿಲ್ಲ’ ಎಂದು ಅವರು ತರ್ಕಿಸುತ್ತಾರೆ. ಇಂಥ ತರ್ಕವು ವಂಚನಾತ್ಮಕವೂ ಅಪಾಯಕರವೂ ಆಗಿದೆ. (ಯೆರೆಮೀಯ 17:9 ಓದಿ.) ಯೆಹೋವನು ಏನನ್ನು ಖಂಡಿಸುತ್ತಾನೋ ಅದನ್ನು ನಾವು ಮನೋರಂಜನೆಯಾಗಿ ಪರಿಗಣಿಸುವಲ್ಲಿ, ನಾವು ನಿಜವಾಗಿಯೂ ‘ಕೆಟ್ಟದ್ದನ್ನು ಹೇಸುತ್ತಿದ್ದೇವೊ?’ ದುಷ್ಟ ನಡತೆಯನ್ನು ಪುನಃ ಪುನಃ ನೋಡುವುದು, ಅದರ ಕುರಿತು ಓದುವುದು ಅಥವಾ ಅದರ ಕುರಿತು ಕೇಳಿಸಿಕೊಳ್ಳುವುದು ನಮ್ಮ ಇಂದ್ರಿಯಗಳನ್ನು ಮಂಕುಗೊಳಿಸುತ್ತದೆ. (ಕೀರ್ತನೆ 119:70; 1 ತಿಮೊಥೆಯ 4:1, 2) ಇಂಥ ರೂಢಿಯು ನಾವು ಏನು ಮಾಡುತ್ತೇವೋ ಅದರ ಮೇಲೆ ಅಥವಾ ಇತರರ ಪಾಪಭರಿತ ನಡತೆಯನ್ನು ನಾವು ಹೇಗೆ ವೀಕ್ಷಿಸುತ್ತೇವೋ ಅದರ ಮೇಲೆ ಪರಿಣಾಮ ಬೀರಸಾಧ್ಯವಿದೆ.
11. ಮನೋರಂಜನೆಯ ವಿಷಯದಲ್ಲಿ ಗಲಾತ್ಯ 6:7 ಹೇಗೆ ಸತ್ಯವಾಗಿ ಸಾಬೀತಾಗಿದೆ?
11 ವಾಸ್ತವದಲ್ಲಿ ಹೀಗೆ ಸಂಭವಿಸಿದೆ. ಕೆಲವು ಕ್ರೈಸ್ತರು ರೂಢಿಯಾಗಿ ನೋಡುತ್ತಿದ್ದಂಥ ಮನೋರಂಜನೆಯಿಂದ ಪ್ರಭಾವಿತರಾದ ಕಾರಣ ಅನೈತಿಕ ಕೃತ್ಯಗಳನ್ನು ನಡೆಸಿದ್ದಾರೆ. “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು” ಎಂಬ ಪಾಠವನ್ನು ಅವರು ಕೆಟ್ಟ ಅನುಭವದ ಮೂಲಕ ಕಲಿತಿದ್ದಾರೆ. (ಗಲಾತ್ಯ 6:7) ಆದರೆ ಇಂಥ ಕೆಟ್ಟ ಪರಿಣಾಮವನ್ನು ತಪ್ಪಿಸಸಾಧ್ಯವಿದೆ. ನೀವು ಜಾಗರೂಕತೆಯಿಂದ ನಿಮ್ಮ ಮನಸ್ಸುಗಳಲ್ಲಿ ನೈತಿಕವಾಗಿ ಶುದ್ಧವಾಗಿರುವುದನ್ನು ಬಿತ್ತುವುದಾದರೆ, ನಿಮ್ಮ ಜೀವನದಲ್ಲಿ ಹಿತಕರವಾದದ್ದನ್ನೇ ಸಂತೋಷದಿಂದ ಕೊಯ್ಯುವಿರಿ.—“ನಾನು ಯಾವ ಮನೋರಂಜನೆಯನ್ನು ಆರಿಸಿಕೊಳ್ಳಬೇಕು?” ಎಂಬ ಚೌಕವನ್ನು ನೋಡಿ.
ಬೈಬಲ್ ಮೂಲತತ್ತ್ವಗಳ ಮೇಲಾಧಾರಿತವಾದ ವೈಯಕ್ತಿಕ ನಿರ್ಣಯಗಳು
12. ಗಲಾತ್ಯ 6:5 ಮನೋರಂಜನೆಗೆ ಹೇಗೆ ಅನ್ವಯವಾಗುತ್ತದೆ ಮತ್ತು ವೈಯಕ್ತಿಕ ನಿರ್ಣಯಗಳನ್ನು ಮಾಡಲು ನಮಗೆ ಯಾವ ಮಾರ್ಗದರ್ಶನ ಸಿಗುತ್ತದೆ?
12 ನಾವೀಗ ಎರಡನೆಯ ವರ್ಗದ ಕುರಿತು ಚರ್ಚಿಸೋಣ. ಇದು ದೇವರ ವಾಕ್ಯದಲ್ಲಿ ನೇರವಾಗಿ ಖಂಡಿಸಲ್ಪಟ್ಟಿಲ್ಲದ ಅಥವಾ ನಿರ್ದಿಷ್ಟವಾಗಿ ಅಂಗೀಕರಿಸಲ್ಪಟ್ಟಿಲ್ಲದ ಚಟುವಟಿಕೆಗಳನ್ನು ಚಿತ್ರಿಸುವಂಥ ಮನೋರಂಜನೆಯಾಗಿದೆ. ಇಂಥ ಮನೋರಂಜನೆಯನ್ನು ಆರಿಸಿಕೊಳ್ಳುವಾಗ, ಪ್ರತಿಯೊಬ್ಬ ಕ್ರೈಸ್ತನು ತಾನು ಯಾವುದನ್ನು ಒಳ್ಳೇದೆಂದು ಕಂಡುಕೊಳ್ಳುತ್ತಾನೋ ಆ ವಿಷಯದಲ್ಲಿ ವೈಯಕ್ತಿಕ ನಿರ್ಣಯವನ್ನು ಮಾಡುವ ಅಗತ್ಯವಿದೆ. (ಗಲಾತ್ಯ 6:5 ಓದಿ.) ಆದರೆ ಈ ರೀತಿಯ ಆಯ್ಕೆಯನ್ನು ಮಾಡಲಿಕ್ಕಿರುವಾಗಲೂ ನಮಗೆ ಮಾರ್ಗದರ್ಶನ ಸಿಗುತ್ತದೆ. ಯೆಹೋವನ ಆಲೋಚನಾ ರೀತಿಯನ್ನು ಗ್ರಹಿಸಲು ಶಕ್ತರನ್ನಾಗಿ ಮಾಡುವಂಥ ಮೂಲತತ್ತ್ವಗಳು ಅಥವಾ ಮೂಲಭೂತ ಸತ್ಯಗಳು ಬೈಬಲಿನಲ್ಲಿವೆ. ಇಂಥ ಮೂಲತತ್ತ್ವಗಳಿಗೆ ಗಮನ ಕೊಡುವ ಮೂಲಕ ನಾವು ಮನೋರಂಜನೆಯ ಆಯ್ಕೆಯ ವಿಷಯವನ್ನೂ ಒಳಗೊಂಡು ಎಲ್ಲ ವಿಷಯಗಳಲ್ಲಿ “ಯೆಹೋವನ ಚಿತ್ತವೇನೆಂಬುದನ್ನು” ಗ್ರಹಿಸಲು ಶಕ್ತರಾಗುವೆವು.—ಎಫೆಸ 5:17.
13. ಯೆಹೋವನನ್ನು ಅಸಂತೋಷಪಡಿಸಸಾಧ್ಯವಿರುವ ಮನೋರಂಜನೆಯಿಂದ ದೂರವಿರುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?
13 ಎಲ್ಲ ಕ್ರೈಸ್ತರು ನೈತಿಕ ಗ್ರಹಿಕೆಯನ್ನು ಅಥವಾ ವಿವೇಚನೆಯನ್ನು ಸಮಾನ ಮಟ್ಟದಲ್ಲಿ ಬೆಳೆಸಿಕೊಂಡಿರುವುದಿಲ್ಲ ಎಂಬುದು ಒಪ್ಪಿಕೊಳ್ಳತಕ್ಕ ಸಂಗತಿಯೇ. (ಫಿಲಿಪ್ಪಿ 1:9) ಅಷ್ಟುಮಾತ್ರವಲ್ಲದೆ ಮನೋರಂಜನೆಯ ವಿಷಯದಲ್ಲಿ ಅಭಿರುಚಿಗಳು ಭಿನ್ನವಾಗಿರುತ್ತವೆ ಎಂಬುದನ್ನು ಕ್ರೈಸ್ತರು ಮನಗಾಣುತ್ತಾರೆ. ಆದುದರಿಂದ ಎಲ್ಲ ಕ್ರೈಸ್ತರು ನಿಖರವಾಗಿ ಒಂದೇ ರೀತಿಯ ನಿರ್ಣಯಗಳನ್ನು ಮಾಡುವರೆಂದು ನಾವು ನಿರೀಕ್ಷಿಸಸಾಧ್ಯವಿಲ್ಲ. ಹಾಗಿದ್ದರೂ, ನಾವು ಎಷ್ಟು ಹೆಚ್ಚಾಗಿ ದೈವಿಕ ಮೂಲತತ್ತ್ವಗಳು ನಮ್ಮ ಹೃದಮನಗಳನ್ನು ಪ್ರಭಾವಿಸುವಂತೆ ಬಿಡುತ್ತೇವೋ ಅಷ್ಟೇ ಹೆಚ್ಚಾಗಿ ಯೆಹೋವನನ್ನು ಅಸಂತೋಷಪಡಿಸಸಾಧ್ಯವಿರುವ ಯಾವುದೇ ರೀತಿಯ ಮನೋರಂಜನೆಯಿಂದ ದೂರವಿರಲು ಅತ್ಯಾತುರರಾಗಿರುತ್ತೇವೆ.—ಕೀರ್ತನೆ 119:11, 129; 1 ಪೇತ್ರ 2:16.
14. (ಎ) ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಯಾವ ಅಂಶವನ್ನು ನಾವು ಪರಿಗಣಿಸಬೇಕು? (ಬಿ) ಜೀವನದಲ್ಲಿ ನಾವು ರಾಜ್ಯಾಭಿರುಚಿಗಳನ್ನು ಹೇಗೆ ಪ್ರಥಮ ಸ್ಥಾನದಲ್ಲಿರಿಸಸಾಧ್ಯವಿದೆ?
14 ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಪ್ರಾಮುಖ್ಯವಾದ ಇನ್ನೊಂದು ಅಂಶವನ್ನೂ ಪರಿಗಣಿಸಬೇಕಾಗಿದೆ. ಅದು ನಿಮ್ಮ ಸಮಯವೇ ಆಗಿದೆ. ನಿಮ್ಮ ಮನೋರಂಜನೆಯಲ್ಲಿ ಏನು ಒಳಗೂಡಿದೆಯೋ ಅದು ನೀವು ಯಾವುದನ್ನು ಸ್ವೀಕಾರಾರ್ಹವಾಗಿ ಕಂಡುಕೊಳ್ಳುತ್ತೀರಿ ಎಂಬುದನ್ನು ಬಯಲುಪಡಿಸುವಾಗ, ಅದಕ್ಕಾಗಿ ನೀವು ವಿನಿಯೋಗಿಸುವ ಸಮಯವು ಯಾವುದಕ್ಕೆ ನೀವು ಆದ್ಯತೆ ನೀಡುತ್ತೀರಿ ಎಂಬುದನ್ನು ಬಯಲುಪಡಿಸುತ್ತದೆ. ಕ್ರೈಸ್ತರಿಗಾದರೋ ಆಧ್ಯಾತ್ಮಿಕ ವಿಷಯಗಳು ಅತ್ಯಂತ ಪ್ರಾಮುಖ್ಯವಾದವುಗಳಾಗಿವೆ ಎಂಬುದಂತೂ ನಿಶ್ಚಯ. (ಮತ್ತಾಯ 6:33 ಓದಿ.) ಹೀಗಿರುವಾಗ, ರಾಜ್ಯಾಭಿರುಚಿಗಳು ನಿಮ್ಮ ಜೀವನದಲ್ಲಿ ಪ್ರಥಮ ಸ್ಥಾನದಲ್ಲೇ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವೇನು ಮಾಡಸಾಧ್ಯವಿದೆ? ಅಪೊಸ್ತಲ ಪೌಲನು ಹೇಳಿದ್ದು: “ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ. . . . ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ.” (ಎಫೆಸ 5:15, 16) ವಾಸ್ತವದಲ್ಲಿ, ಮನೋರಂಜನೆಗಾಗಿ ನೀವು ವ್ಯಯಿಸುವ ಸಮಯದ ವಿಷಯದಲ್ಲಿ ನಿರ್ದಿಷ್ಟವಾದ ಇತಿಮಿತಿಗಳನ್ನಿಡುವುದು, ‘ಹೆಚ್ಚು ಪ್ರಮುಖವಾದ ವಿಷಯಗಳಿಗೆ’ ಅಂದರೆ ನಿಮ್ಮ ಆಧ್ಯಾತ್ಮಿಕ ಹಿತಕ್ಷೇಮವನ್ನು ಉತ್ತಮಗೊಳಿಸುವಂಥ ಚಟುವಟಿಕೆಗಳಿಗೆ ಅಗತ್ಯವಿರುವ ಸಮಯವನ್ನು ಹೊಂದಿರಲು ನಿಮಗೆ ಸಹಾಯಮಾಡುವುದು.—ಫಿಲಿಪ್ಪಿ 1:10.
15. ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಸುರಕ್ಷೆಯ ಮಿತಿಯನ್ನು ಇಡುವುದು ವಿವೇಕಯುತ ಏಕೆ?
15 ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಸುರಕ್ಷೆಯ ಮಿತಿಯನ್ನು ಇಡುವುದು ಸಹ ವಿವೇಕಯುತ. ಇದರ ಅರ್ಥವೇನು? ಆ ಹಣ್ಣಿನ ಉದಾಹರಣೆಯನ್ನು ಪುನಃ ಒಮ್ಮೆ ಪರಿಗಣಿಸಿರಿ. ಗೊತ್ತಿಲ್ಲದೇ ಕೆಟ್ಟುಹೋಗಿರುವುದನ್ನು ತಿನ್ನದಿರಲಿಕ್ಕಾಗಿ ನೀವು ಹಾಳಾಗಿರುವ ನಿರ್ದಿಷ್ಟ ಭಾಗವನ್ನು ಮಾತ್ರವೇ ಅಲ್ಲ, ಅದರ ಸುತ್ತಲೂ ಇರುವ ಸ್ವಲ್ಪ ಭಾಗವನ್ನು ಸಹ ಕತ್ತರಿಸಿ ತೆಗೆಯುತ್ತೀರಿ. ಅದೇ ರೀತಿಯಲ್ಲಿ ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಸುರಕ್ಷೆಯ ಮಿತಿಯನ್ನು ಅನ್ವಯಿಸುವುದು ವಿವೇಕಯುತ. ವಿವೇಕವುಳ್ಳ ಒಬ್ಬ ಕ್ರೈಸ್ತನು ಬೈಬಲಿನ ಮೂಲತತ್ತ್ವಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವಂಥ ಮನೋರಂಜನೆಯಿಂದ ಮಾತ್ರವಲ್ಲ, ಸಂಶಯಾಸ್ಪದವಾದ ಇಲ್ಲವೆ ಆಧ್ಯಾತ್ಮಿಕವಾಗಿ ಅನಾರೋಗ್ಯಕರವಾದ ಭಾಗಗಳನ್ನು ಒಳಗೂಡಿರುವಂತೆ ತೋರಬಹುದಾದ ಮನೋರಂಜನೆಯ ವಿವಿಧ ರೂಪಗಳಿಂದಲೂ ದೂರವಿರುತ್ತಾನೆ. (ಜ್ಞಾನೋಕ್ತಿ 4:25-27) ದೇವರ ವಾಕ್ಯದಲ್ಲಿರುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಇದನ್ನೇ ಮಾಡಲು ನಿಮಗೆ ಸಹಾಯಮಾಡುವುದು.
“ಯಾವ ವಿಷಯಗಳು ನೈತಿಕವಾಗಿ ಶುದ್ಧವಾಗಿವೆಯೊ”
16. (ಎ) ನೈತಿಕ ವಿಷಯಗಳಲ್ಲಿ ನಮಗೆ ಯೆಹೋವನ ದೃಷ್ಟಿಕೋನವೇ ಇದೆ ಎಂಬುದನ್ನು ನಾವು ಹೇಗೆ ತೋರಿಸಬಹುದು? (ಬಿ) ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದು ಹೇಗೆ ನಿಮ್ಮ ಜೀವನಮಾರ್ಗವಾಗಿ ಪರಿಣಮಿಸಸಾಧ್ಯವಿದೆ?
16 ಮನೋರಂಜನೆಯನ್ನು ಆರಿಸಿಕೊಳ್ಳುವಾಗ ನಿಜ ಕ್ರೈಸ್ತರು ಎಲ್ಲಕ್ಕಿಂತಲೂ ಮೊದಲು ಯೆಹೋವನ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಬೈಬಲು ಯೆಹೋವನ ಭಾವನೆಗಳನ್ನು ಮತ್ತು ಮಟ್ಟಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗೆ, ಅರಸನಾದ ಸೊಲೊಮೋನನು ಯೆಹೋವನು ದ್ವೇಷಿಸುವಂಥ ಅನೇಕ ವಿಷಯಗಳನ್ನು ಪಟ್ಟಿಮಾಡುತ್ತಾನೆ. ಅವು ಯಾವುವೆಂದರೆ, “ಸುಳ್ಳಿನ ನಾಲಿಗೆ, ನಿರ್ದೋಷರಕ್ತವನ್ನು ಸುರಿಸುವ ಕೈ, ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು.” (ಜ್ಞಾನೋಕ್ತಿ 6:16-19) ಯೆಹೋವನ ದೃಷ್ಟಿಕೋನವು ನಿಮ್ಮ ದೃಷ್ಟಿಕೋನದ ಮೇಲೆ ಹೇಗೆ ಪ್ರಭಾವ ಬೀರಬೇಕು? “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ” ಎಂದು ಕೀರ್ತನೆಗಾರನು ಬುದ್ಧಿಹೇಳುತ್ತಾನೆ. (ಕೀರ್ತನೆ 97:10) ಮನೋರಂಜನೆಯಲ್ಲಿ ನೀವು ಮಾಡುವ ಆಯ್ಕೆಗಳು, ಯೆಹೋವನು ಏನನ್ನು ಹಗೆಮಾಡುತ್ತಾನೋ ಅದನ್ನು ನೀವು ನಿಜವಾಗಿಯೂ ಹಗೆಮಾಡುತ್ತೀರಿ ಎಂಬುದನ್ನು ತೋರಿಸುವ ಅಗತ್ಯವಿದೆ. (ಗಲಾತ್ಯ 5:19-21) ಬಹಿರಂಗವಾಗಿ ನೀವು ಏನು ಮಾಡುತ್ತೀರೋ ಅದಕ್ಕಿಂತ ಹೆಚ್ಚಾಗಿ ಖಾಸಗಿ ಬದುಕಿನಲ್ಲಿ ಏನು ಮಾಡುತ್ತೀರೋ ಅದು ನೀವು ನಿಜವಾಗಿಯೂ ಎಂಥ ವ್ಯಕ್ತಿಯಾಗಿದ್ದೀರಿ ಎಂಬುದನ್ನು ಬಯಲುಪಡಿಸುತ್ತದೆ ಎಂಬ ವಿಷಯವನ್ನು ಸಹ ಮನಸ್ಸಿನಲ್ಲಿಡಿ. (ಕೀರ್ತನೆ 11:4; 16:8) ಆದುದರಿಂದ, ನಿಮ್ಮ ಜೀವನದ ಎಲ್ಲ ಅಂಶಗಳಲ್ಲಿ ನೈತಿಕ ವಿಷಯಗಳ ಕುರಿತಾದ ಯೆಹೋವನ ಭಾವನೆಗಳನ್ನೇ ಪ್ರತಿಬಿಂಬಿಸುವುದು ನಿಮ್ಮ ಹೃತ್ಪೂರ್ವಕ ಬಯಕೆಯಾಗಿರುವಲ್ಲಿ, ನೀವು ಯಾವಾಗಲೂ ಬೈಬಲಿನ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಆಯ್ಕೆಗಳನ್ನು ಮಾಡುತ್ತೀರಿ. ಹೀಗೆ ಮಾಡುವುದು ನಿಮ್ಮ ಜೀವನಮಾರ್ಗವಾಗಿಬಿಡುತ್ತದೆ.—2 ಕೊರಿಂಥ 3:18.
17. ಮನೋರಂಜನೆಯನ್ನು ಆರಿಸಿಕೊಳ್ಳುವ ಮುಂಚೆ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
17 ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಯೆಹೋವನ ಆಲೋಚನಾ ಧಾಟಿಗೆ ಹೊಂದಿಕೆಯಲ್ಲಿ ನೀವು ಕ್ರಿಯೆಗೈಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಇನ್ನೂ ಏನು ಮಾಡಸಾಧ್ಯವಿದೆ? ‘ಇದು ನನ್ನ ಮೇಲೆ ಮತ್ತು ದೇವರೊಂದಿಗಿನ ನನ್ನ ನಿಲುವಿನ ಮೇಲೆ ಯಾವ ಪರಿಣಾಮ ಬೀರುವುದು?’ ಎಂಬ ಪ್ರಶ್ನೆಯ ಕುರಿತು ಆಲೋಚಿಸಿರಿ. ಉದಾಹರಣೆಗೆ, ಒಂದು ನಿರ್ದಿಷ್ಟ ಚಲನಚಿತ್ರವನ್ನು ನೋಡಬೇಕೊ ಬೇಡವೊ ಎಂಬುದನ್ನು ನಿರ್ಧರಿಸುವ ಮುಂಚೆ, ‘ಈ ಚಲನಚಿತ್ರದಲ್ಲಿರುವ ವಿಷಯವು ನನ್ನ ಮನಸ್ಸಾಕ್ಷಿಯ ಮೇಲೆ ಯಾವ ಪರಿಣಾಮ ಬೀರುವುದು?’ ಎಂದು ಸ್ವತಃ ಕೇಳಿಕೊಳ್ಳಿ. ಯಾವ ಮೂಲತತ್ತ್ವಗಳನ್ನು ಈ ವಿಷಯಕ್ಕೆ ಅನ್ವಯಿಸಸಾಧ್ಯವಿದೆ ಎಂಬುದನ್ನು ನಾವೀಗ ಪರಿಗಣಿಸೋಣ.
18, 19. (ಎ) ಫಿಲಿಪ್ಪಿ 4:8ರಲ್ಲಿ ಕಂಡುಬರುವ ಮೂಲತತ್ತ್ವವು ನಮ್ಮ ಮನೋರಂಜನೆಯು ಒಳ್ಳೇದಾಗಿದೆಯೋ ಇಲ್ಲವೊ ಎಂಬುದನ್ನು ನಿರ್ಧರಿಸಲು ನಮಗೆ ಹೇಗೆ ಸಹಾಯಮಾಡಬಲ್ಲದು? (ಬಿ) ಒಳ್ಳೆಯ ಮನೋರಂಜನೆಯನ್ನು ಆರಿಸಿಕೊಳ್ಳಲು ಬೇರೆ ಯಾವ ಮೂಲತತ್ತ್ವಗಳು ನಿಮಗೆ ಸಹಾಯಮಾಡಬಲ್ಲವು? (ಪಾದಟಿಪ್ಪಣಿಯನ್ನು ನೋಡಿ.)
18 ಒಂದು ಪ್ರಮುಖ ಮೂಲತತ್ತ್ವವು ಫಿಲಿಪ್ಪಿ 4:8ರಲ್ಲಿ ಕಂಡುಬರುತ್ತದೆ. ಅದು ತಿಳಿಸುವುದು: “ಯಾವ ವಿಷಯಗಳು ಸತ್ಯವಾಗಿವೆಯೊ, ಯಾವ ವಿಷಯಗಳು ಗಂಭೀರವಾದ ಚಿಂತನೆಗೆ ಅರ್ಹವಾಗಿವೆಯೊ, ಯಾವ ವಿಷಯಗಳು ನೀತಿಯುತವಾಗಿವೆಯೊ, ಯಾವ ವಿಷಯಗಳು ನೈತಿಕವಾಗಿ ಶುದ್ಧವಾಗಿವೆಯೊ, ಯಾವ ವಿಷಯಗಳು ಪ್ರೀತಿಯೋಗ್ಯವಾಗಿವೆಯೊ, ಯಾವ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೊ, ಸದ್ಗುಣವಾಗಿರುವ ಯಾವುದಿದ್ದರೂ ಮತ್ತು ಸ್ತುತಿಗೆ ಯೋಗ್ಯವಾಗಿರುವ ಯಾವುದೇ ವಿಷಯವಿದ್ದರೂ ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ.” ಪೌಲನು ಮನೋರಂಜನೆಯ ವಿಷಯದಲ್ಲಿ ಅಲ್ಲ, ಬದಲಾಗಿ ದೇವರಿಗೆ ಸಂತೋಷವನ್ನುಂಟುಮಾಡುವ ವಿಷಯಗಳ ಮೇಲೆ ಕೇಂದ್ರೀಕರಿಸಬೇಕಾಗಿರುವ ಹೃದಯದ ಧ್ಯಾನಗಳ ಕುರಿತು ಚರ್ಚಿಸುತ್ತಾ ಇದ್ದನು ಎಂಬುದು ಒಪ್ಪಿಕೊಳ್ಳತಕ್ಕ ಸಂಗತಿ. (ಕೀರ್ತನೆ 19:14) ಆದರೂ ಪೌಲನ ಮಾತುಗಳನ್ನು ಮನೋರಂಜನೆಯ ವಿಷಯಕ್ಕೆ ಕಾರ್ಯತಃ ಅನ್ವಯಿಸಸಾಧ್ಯವಿದೆ. ಹೇಗೆ?
19 ‘ನಾನು ಆಯ್ಕೆಮಾಡುವ ಚಲನಚಿತ್ರಗಳು, ವಿಡಿಯೋ ಆಟಗಳು, ಸಂಗೀತ ಅಥವಾ ಮನೋರಂಜನೆಯ ಇತರ ವಿಧಗಳು “ಯಾವ ವಿಷಯಗಳು ನೈತಿಕವಾಗಿ ಶುದ್ಧವಾಗಿಯೊ” ಅಂಥ ವಿಷಯಗಳಿಂದ ನನ್ನ ಮನಸ್ಸನ್ನು ತುಂಬಿಸುತ್ತವೆಯೊ?’ ಎಂದು ಸ್ವತಃ ಕೇಳಿಕೊಳ್ಳಿ. ಉದಾಹರಣೆಗೆ, ನೀವೊಂದು ಚಲನಚಿತ್ರವನ್ನು ನೋಡಿದ ಬಳಿಕ ಯಾವ ಮಾನಸಿಕ ಚಿತ್ರಗಳು ನಿಮ್ಮ ಮನಸ್ಸಿನಲ್ಲಿ ಮುಖ್ಯವಾಗಿ ಸುಳಿದಾಡುತ್ತಿರುತ್ತವೆ? ಅವು ಮನಸ್ಸಿಗೆ ಮುದನೀಡುವಂಥವೂ ಶುದ್ಧವೂ ಚೈತನ್ಯದಾಯಕವೂ ಆಗಿರುವಲ್ಲಿ ನಿಮ್ಮ ಮನೋರಂಜನೆಯು ಹಿತಕರ ಎಂಬುದು ನಿಮಗೆ ಗೊತ್ತಿದೆ. ಆದರೆ ನೀವು ನೋಡಿದಂಥ ಚಲನಚಿತ್ರವು ನೈತಿಕವಾಗಿ ಅಶುದ್ಧವಾದ ವಿಷಯಗಳ ಕುರಿತು ಆಲೋಚಿಸುವಂತೆ ಮಾಡುತ್ತಿರುವಲ್ಲಿ ಆಗ ನಿಮ್ಮ ಮನೋರಂಜನೆಯು ಅಸಮಂಜಸವಾದದ್ದೂ ಹಾನಿಕರವಾದದ್ದೂ ಆಗಿದೆ. (ಮತ್ತಾಯ 12:33; ಮಾರ್ಕ 7:20-23) ಏಕೆ? ಏಕೆಂದರೆ ನೈತಿಕವಾಗಿ ಅಶುದ್ಧವಾಗಿರುವ ವಿಷಯಗಳ ಕುರಿತು ಆಲೋಚಿಸುವುದು ನಿಮ್ಮ ಆಂತರಿಕ ನೆಮ್ಮದಿಯನ್ನು ಹಾಳುಮಾಡುತ್ತದೆ, ನಿಮ್ಮ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಯನ್ನು ಕಳಂಕಗೊಳಿಸುತ್ತದೆ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧವನ್ನೂ ಹಾಳುಮಾಡಿಬಿಡಬಲ್ಲದು. (ಎಫೆಸ 5:5; 1 ತಿಮೊಥೆಯ 1:5, 19) ಇಂಥ ಮನೋರಂಜನೆಯು ವೈಯಕ್ತಿಕವಾಗಿ ನಿಮ್ಮ ಮೇಲೆ ಹಾನಿಕರ ಪರಿಣಾಮವನ್ನು ಬೀರುವುದರಿಂದ, ಅದರಿಂದ ದೂರವಿರಲು ದೃಢನಿರ್ಣಯವನ್ನು ಮಾಡಿರಿ.a (ರೋಮನ್ನರಿಗೆ 12:2) “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು” ಎಂದು ಯೆಹೋವನಿಗೆ ಪ್ರಾರ್ಥಿಸಿದ ಕೀರ್ತನೆಗಾರನಂತಿರಿ.—ಕೀರ್ತನೆ 119:37.
ಪರಹಿತವನ್ನು ಚಿಂತಿಸಿರಿ
20, 21. ಒಳ್ಳೆಯ ಮನೋರಂಜನೆಯನ್ನು ಆರಿಸಿಕೊಳ್ಳುವ ವಿಷಯಕ್ಕೆ 1 ಕೊರಿಂಥ 10:23, 24 ಹೇಗೆ ಅನ್ವಯವಾಗುತ್ತದೆ?
20 ವೈಯಕ್ತಿಕ ವಿಷಯಗಳ ಕುರಿತಾದ ನಿರ್ಣಯಗಳನ್ನು ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕಾದ ಒಂದು ಪ್ರಮುಖ ಬೈಬಲ್ ಮೂಲತತ್ತ್ವವನ್ನು ಪೌಲನು ತಿಳಿಸುತ್ತಾನೆ. ಅವನು ಹೇಳಿದ್ದು: “ಎಲ್ಲ ವಿಷಯಗಳನ್ನು ಮಾಡಲು ನನಗೆ ಅನುಮತಿ ಇದೆ, ಆದರೆ ಎಲ್ಲವೂ ಭಕ್ತಿವೃದ್ಧಿಮಾಡುವುದಿಲ್ಲ. ಪ್ರತಿಯೊಬ್ಬನು ತನ್ನ ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ.” (1 ಕೊರಿಂಥ 10:23, 24) ಈ ಮೂಲತತ್ತ್ವವು ಒಳ್ಳೆಯ ಮನೋರಂಜನೆಯನ್ನು ಆರಿಸಿಕೊಳ್ಳುವುದಕ್ಕೆ ಹೇಗೆ ಅನ್ವಯವಾಗುತ್ತದೆ? ‘ನಾನು ಆರಿಸಿಕೊಳ್ಳುವಂಥ ಮನೋರಂಜನೆಯು ಇತರರ ಮೇಲೆ ಯಾವ ಪರಿಣಾಮ ಬೀರುವುದು?’ ಎಂದು ನೀವು ಸ್ವತಃ ಕೇಳಿಕೊಳ್ಳುವ ಅಗತ್ಯವಿದೆ.
21 ‘ಮಾಡಲು ಅನುಮತಿ ಇದೆ’ ಅಥವಾ ಅಂಗೀಕಾರಾರ್ಹವಾಗಿದೆ ಎಂದು ನೀವು ಪರಿಗಣಿಸುವಂಥ ನಿರ್ದಿಷ್ಟ ರೀತಿಯ ಮನೋರಂಜನೆಯಲ್ಲಿ ಒಳಗೂಡುವಂತೆ ನಿಮ್ಮ ಮನಸ್ಸಾಕ್ಷಿಯು ನಿಮ್ಮನ್ನು ಅನುಮತಿಸಬಹುದು. ಆದರೆ ಹೆಚ್ಚು ನಿರ್ಬಂಧಿತ ಮನಸ್ಸಾಕ್ಷಿಯಿರುವ ಇತರ ವಿಶ್ವಾಸಿಗಳು ಇದನ್ನು ಆಕ್ಷೇಪಣೀಯವಾಗಿ ಕಂಡುಕೊಳ್ಳುತ್ತಾರೆಂಬುದು ನಿಮ್ಮ ಗಮನಕ್ಕೆ ಬರುವಲ್ಲಿ, ನೀವು ಅದರಲ್ಲಿ ಒಳಗೂಡದಿರಲು ನಿರ್ಧರಿಸಬಹುದು. ಏಕೆ? ಏಕೆಂದರೆ ನಿಮ್ಮ ಜೊತೆ ವಿಶ್ವಾಸಿಗಳು ದೇವರ ಕಡೆಗೆ ನಂಬಿಗಸ್ತಿಕೆಯನ್ನು ಕಾಪಾಡಿಕೊಳ್ಳುವುದನ್ನು ಕಷ್ಟಕರವಾಗಿ ಮಾಡುವ ಮೂಲಕ ನೀವು ‘ನಿಮ್ಮ ಸಹೋದರರ ವಿರುದ್ಧ ಪಾಪಮಾಡಲು’ ಅಥವಾ ಪೌಲನು ಹೇಳಿದಂತೆ ‘ಕ್ರಿಸ್ತನಿಗೆ ವಿರುದ್ಧವಾಗಿ ಪಾಪಮಾಡಲು’ ಸಹ ಬಯಸುವುದಿಲ್ಲ. “ಎಡವಲು ಕಾರಣವಾಗಬೇಡಿರಿ” ಎಂಬ ಬುದ್ಧಿವಾದವನ್ನು ನೀವು ಹೃದಯಕ್ಕೆ ತೆಗೆದುಕೊಳ್ಳುತ್ತೀರಿ. (1 ಕೊರಿಂಥ 8:12; 10:32) ನಿಜ ಕ್ರೈಸ್ತರು ಇಂದು ಪೌಲನ ದಯಾಪರವಾದ ಹಾಗೂ ಸೂಕ್ಷ್ಮವಾದ ಸಲಹೆಯನ್ನು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಮತ್ತು ‘ಮಾಡಲು ಅನುಮತಿ’ ಇರುವುದಾದರೂ ‘ಭಕ್ತಿವೃದ್ಧಿಮಾಡದಿರಬಹುದಾದ’ ಮನೋರಂಜನೆಯಿಂದ ದೂರವಿರುತ್ತಾರೆ.—ರೋಮನ್ನರಿಗೆ 14:1; 15:1.
22. ವೈಯಕ್ತಿಕ ವಿಷಯಗಳಲ್ಲಿ ಕ್ರೈಸ್ತರು ಬೇರೆ ಬೇರೆ ದೃಷ್ಟಿಕೋನಗಳಿಗೆ ಅವಕಾಶಮಾಡಿಕೊಡುತ್ತಾರೆ ಏಕೆ?
22 ಆದರೂ ಪರಹಿತವನ್ನು ಚಿಂತಿಸುವಾಗ ಇನ್ನೊಂದು ಅಂಶವನ್ನೂ ಪರಿಗಣಿಸಬೇಕಾಗಿದೆ. ಹೆಚ್ಚು ನಿರ್ಬಂಧಿತ ಮನಸ್ಸಾಕ್ಷಿಯಿರುವ ಒಬ್ಬ ಕ್ರೈಸ್ತನು, ಯೋಗ್ಯವಾದ ಮನೋರಂಜನೆಯ ಕುರಿತಾದ ತನ್ನ ಸಂಕುಚಿತ ದೃಷ್ಟಿಕೋನಕ್ಕೆ ಕ್ರೈಸ್ತ ಸಭೆಯಲ್ಲಿರುವವರೆಲ್ಲರೂ ಹೊಂದಿಕೊಳ್ಳಬೇಕೆಂದು ಒತ್ತಾಯಿಸಬಾರದು. ಹಾಗೆ ಮಾಡುವಲ್ಲಿ, ವಾಹನದಲ್ಲಿ ಒಂದೇ ಹೆದ್ದಾರಿಯಲ್ಲಿ ಸಾಗುತ್ತಿರುವ ಇತರ ಎಲ್ಲ ಡ್ರೈವರ್ಗಳು ತಾನು ಇಷ್ಟಪಡುವ ವೇಗದಲ್ಲೇ ಹೋಗಬೇಕು ಎಂದು ಒತ್ತಾಯಿಸುವಂಥ ಒಬ್ಬ ಡ್ರೈವರ್ನಂತೆ ಅವನು ಇರುವನು. ಇಂಥ ತಗಾದೆಯು ನ್ಯಾಯಸಮ್ಮತವಾಗಿರುವುದಿಲ್ಲ. ಕ್ರೈಸ್ತ ಪ್ರೀತಿಯ ಕಾರಣ ಹೆಚ್ಚು ನಿರ್ಬಂಧಿತ ಮನಸ್ಸಾಕ್ಷಿಯಿರುವ ಒಬ್ಬನು, ಮನೋರಂಜನೆಯ ವಿಷಯದಲ್ಲಿ ತನ್ನ ಸ್ವಂತ ದೃಷ್ಟಿಕೋನಕ್ಕಿಂತ ಸ್ವಲ್ಪ ಭಿನ್ನವಾಗಿದ್ದರೂ ಕ್ರೈಸ್ತ ಮೂಲತತ್ತ್ವಗಳ ಮೇರೆಯೊಳಗೇ ಇರುವಂಥ ದೃಷ್ಟಿಕೋನಗಳನ್ನು ಹೊಂದಿರುವ ಜೊತೆ ವಿಶ್ವಾಸಿಗಳನ್ನು ಗೌರವಿಸುವ ಅಗತ್ಯವಿದೆ. ಹೀಗೆ ಅವನು ತನ್ನ “ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ” ತಿಳಿದುಬರುವಂತೆ ಬಿಡುತ್ತಾನೆ.—ಫಿಲಿಪ್ಪಿ 4:5; ಪ್ರಸಂಗಿ 7:16.
23. ನೀವು ಹಿತಕರವಾದ ಮನೋರಂಜನೆಯನ್ನು ಆರಿಸಿಕೊಳ್ಳುತ್ತೀರಿ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬಲ್ಲಿರಿ?
23 ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಒಳ್ಳೆಯ ಮನೋರಂಜನೆಯನ್ನು ಆರಿಸಿಕೊಳ್ಳುತ್ತೀರಿ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬಲ್ಲಿರಿ? ದೇವರ ವಾಕ್ಯದಲ್ಲಿ ನಿರ್ದಿಷ್ಟವಾಗಿ ಖಂಡಿಸಿರುವ ಹೀನವಾದ ಅನೈತಿಕ ಚಟುವಟಿಕೆಗಳನ್ನು ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ಚಿತ್ರಿಸುವ ಯಾವುದೇ ರೀತಿಯ ಮನೋರಂಜನೆಯನ್ನು ತಿರಸ್ಕರಿಸಿರಿ. ಬೈಬಲಿನಲ್ಲಿ ನಿರ್ದಿಷ್ಟವಾಗಿ ತಿಳಿಸಲ್ಪಟ್ಟಿರದಂಥ ಬೇರೆ ಬೇರೆ ರೀತಿಯ ಮನೋರಂಜನೆಗಳಿಗೆ ಅನ್ವಯವಾಗಸಾಧ್ಯವಿರುವ ಬೈಬಲ್ ಮೂಲತತ್ತ್ವಗಳನ್ನು ಅನುಸರಿಸಿರಿ. ನಿಮ್ಮ ಮನಸ್ಸಾಕ್ಷಿಯನ್ನು ಹಾಳುಮಾಡುವಂಥ ಮನೋರಂಜನೆಯಿಂದ ದೂರವಿರಿ ಮತ್ತು ಇತರರ, ವಿಶೇಷವಾಗಿ ಜೊತೆ ವಿಶ್ವಾಸಿಗಳ ಭಾವನೆಗಳನ್ನು ಘಾಸಿಗೊಳಿಸಬಹುದಾದ ಬೇರೆ ಬೇರೆ ರೀತಿಯ ಮನೋರಂಜನೆಗಳನ್ನು ತೊರೆಯಲು ಮನಃಪೂರ್ವಕವಾಗಿ ಸಿದ್ಧರಾಗಿರಿ. ಹೀಗೆ ಮಾಡುವ ನಿಮ್ಮ ದೃಢನಿರ್ಧಾರವು ದೇವರಿಗೆ ಮಹಿಮೆಯನ್ನು ತರಲಿ ಮತ್ತು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಆತನ ಪ್ರೀತಿಯಲ್ಲಿ ಕಾಪಾಡಿಕೊಳ್ಳುವಂತೆ ಮಾಡಲಿ.
a ಮನೋರಂಜನೆಗೆ ಅನ್ವಯವಾಗುವಂಥ ಇನ್ನೂ ಹೆಚ್ಚಿನ ಮೂಲತತ್ತ್ವಗಳು ಜ್ಞಾನೋಕ್ತಿ 3:31; 13:20; ಎಫೆಸ 5:3, 4; ಮತ್ತು ಕೊಲೊಸ್ಸೆ 3:5, 8, 20ರಲ್ಲಿ ಕಂಡುಬರುತ್ತವೆ.