ದೇವರನ್ನು ಸಂತೋಷಗೊಳಿಸಿದಂತಹ ಯಜ್ಞಗಳು
“ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವದಕ್ಕೆ ನೇಮಕವಾಗಿರುತ್ತಾನಷ್ಟೆ.”—ಇಬ್ರಿಯ 8:3.
1. ಜನರು ದೇವರ ಬಳಿ ಹೋಗುವ ಅಗತ್ಯವನ್ನೇಕೆ ಕಾಣುತ್ತಾರೆ?
“ಯಜ್ಞಗಳನ್ನು ಅರ್ಪಿಸುವುದು ಮನುಷ್ಯನಿಗೆ ಪ್ರಾರ್ಥನೆಮಾಡುವಷ್ಟೇ ‘ಸಹಜವಾದ’ ಸಂಗತಿಯಾಗಿದೆ. ಯಜ್ಞಗಳು ಅವನಿಗೆ ತನ್ನ ಬಗ್ಗೆ ಏನನಿಸುತ್ತದೆಂಬುದನ್ನು ತೋರಿಸುತ್ತವೆ, ಮತ್ತು ಪ್ರಾರ್ಥನೆಯು ಅವನಿಗೆ ದೇವರ ಬಗ್ಗೆ ಏನನಿಸುತ್ತದೆಂಬುದನ್ನು ವ್ಯಕ್ತಪಡಿಸುತ್ತದೆ” ಎಂದು ಬೈಬಲ್ ಇತಿಹಾಸಗಾರರಾದ ಆ್ಯಲ್ಫ್ರೆಡ್ ಎಡರ್ಶೈಮ್ ಬರೆದರು. ಪಾಪವು ಜಗತ್ತನ್ನು ಪ್ರವೇಶಿಸಿದಾಗ, ಅದರೊಂದಿಗೆ ಅಪರಾಧಿಭಾವದ ನೋವು, ದೇವರಿಂದ ದೂರಸರಿಯುವಿಕೆ ಮತ್ತು ನಿಸ್ಸಹಾಯಕತೆಯು ಸಹ ಬಂತು. ಇಂತಹ ಹತಾಶ ಸ್ಥಿತಿಯಿಂದ ಉಪಶಮನವು ಬೇಕಾಗಿದೆ. ಆದುದರಿಂದಲೇ ಜನರು ಸಹಾಯಕ್ಕಾಗಿ ದೇವರ ಬಳಿಗೆ ಹೋಗುತ್ತಾರೆ.—ರೋಮಾಪುರ 5:12.
2. ಬೈಬಲಿನಲ್ಲಿ ಆರಂಭದ ಸಮಯದಲ್ಲಿ ದೇವರಿಗೆ ಅರ್ಪಿಸಲಾಗುತ್ತಿದ್ದ ಯಜ್ಞಗಳ ಕುರಿತಾಗಿ ಯಾವ ದಾಖಲೆಯಿದೆ?
2 ದೇವರಿಗೆ ಅರ್ಪಿಸಲ್ಪಟ್ಟಿರುವ ನೈವೇದ್ಯಗಳ ಕುರಿತಾಗಿ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಮೊದಲನೆಯ ದಾಖಲೆಯು, ಕಾಯಿನ ಮತ್ತು ಹೇಬೆಲರದ್ದಾಗಿದೆ. ನಾವು ಅಲ್ಲಿ ಓದುವುದು: “ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮಮಾಡಿದನು.” (ಆದಿಕಾಂಡ 4:3, 4) ಆಮೇಲೆ, ನೋಹನು ಅರ್ಪಿಸಿದ ‘ಸರ್ವಾಂಗಹೋಮದ’ ಕುರಿತಾಗಿ ತಿಳಿಸಲಾಗಿದೆ. ತನ್ನ ದಿನದಲ್ಲಿದ್ದ ದುಷ್ಟ ಸಂತತಿಯನ್ನು ನಾಶಗೊಳಿಸಿದ ದೊಡ್ಡ ಜಲಪ್ರಳಯದಿಂದ ದೇವರು ಅವನನ್ನೂ ಅವನ ಕುಟುಂಬವನ್ನೂ ಸಂರಕ್ಷಿಸಿದ್ದಕ್ಕಾಗಿ ಅವನು ಆ ಯಜ್ಞವನ್ನು ಅರ್ಪಿಸಿದನು. (ಆದಿಕಾಂಡ 8:20) ದೇವರ ನಂಬಿಗಸ್ತ ಸೇವಕನೂ ಸ್ನೇಹಿತನೂ ಆಗಿದ್ದ ಅಬ್ರಹಾಮನು ದೇವರ ವಾಗ್ದಾನಗಳು ಮತ್ತು ಆಶೀರ್ವಾದಗಳಿಂದ ಪ್ರೇರಿಸಲ್ಪಟ್ಟು, ಹಲವಾರು ಸಂದರ್ಭಗಳಲ್ಲಿ ‘ಒಂದು ಯಜ್ಞವೇದಿಯನ್ನು ಕಟ್ಟಿಸಿ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.’ (ಆದಿಕಾಂಡ 12:8; 13:3, 4, 18) ಆಮೇಲೆ ಯೆಹೋವನು ಅವನಿಗೆ ತನ್ನ ಮಗನಾದ ಇಸಾಕನನ್ನು ಸರ್ವಾಂಗಹೋಮವಾಗಿ ಅರ್ಪಿಸಲಿಕ್ಕಾಗಿ ಹೇಳಿದನು. ಇದು, ತನ್ನ ನಂಬಿಕೆಗಾಗಿ ಅಬ್ರಹಾಮನು ಎದುರಿಸಿದ ಅತಿ ದೊಡ್ಡ ಪರೀಕ್ಷೆಯಾಗಿತ್ತು. (ಆದಿಕಾಂಡ 22:1-14) ಈ ಎಲ್ಲ ವೃತ್ತಾಂತಗಳು ಸಂಕ್ಷಿಪ್ತವಾಗಿದ್ದರೂ, ಯಜ್ಞಗಳ ಕುರಿತಾಗಿ ಬಹಳಷ್ಟು ಮಾಹಿತಿಯನ್ನು ಕೊಡುತ್ತವೆ. ಅದನ್ನೇ ನಾವೀಗ ಪರಿಗಣಿಸುವೆವು.
3. ಆರಾಧನೆಯಲ್ಲಿ ಯಜ್ಞಗಳ ಪಾತ್ರವೇನು?
3 ಬೈಬಲಿನ ಈ ವೃತ್ತಾಂತಗಳು ಮತ್ತು ಇತರ ವೃತ್ತಾಂತಗಳಿಂದ ಒಂದು ವಿಷಯವು ಸ್ಪಷ್ಟವಾಗುತ್ತದೆ. ಅದೇನೆಂದರೆ, ಯಜ್ಞಗಳ ಕುರಿತಾಗಿ ಯೆಹೋವನು ನಿರ್ದಿಷ್ಟವಾದ ನಿಯಮಗಳನ್ನು ಕೊಡುವ ಎಷ್ಟೋ ಸಮಯದ ಮುಂಚೆಯೇ, ಯಜ್ಞವನ್ನು ಅರ್ಪಿಸುವುದು ಆರಾಧನೆಯ ಒಂದು ಮುಖ್ಯ ಭಾಗವಾಗಿತ್ತು. ಇದಕ್ಕೆ ಹೊಂದಿಕೆಯಲ್ಲಿ ಒಂದು ಗ್ರಂಥವು, “ಯಜ್ಞ” ಎಂಬ ಪದವನ್ನು ಹೀಗೆ ಅರ್ಥನಿರೂಪಿಸುತ್ತದೆ: “ಅದೊಂದು ಧಾರ್ಮಿಕ ಸಂಸ್ಕಾರ. ಇದರಲ್ಲಿ, ಮನುಷ್ಯನು ಯಾವುದನ್ನು ಪವಿತ್ರವೆಂದೆಣಿಸುತ್ತಾನೊ ಅದರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಸ್ಥಾಪಿಸಲಿಕ್ಕಾಗಿ, ಕಾಪಾಡಿಕೊಂಡುಹೋಗಲಿಕ್ಕಾಗಿ ಇಲ್ಲವೇ ಪುನಃ ಪಡೆಯಲಿಕ್ಕಾಗಿ ಒಬ್ಬ ದೇವರಿಗೆ ಒಂದು ವಸ್ತುವನ್ನು ಅರ್ಪಿಸುತ್ತಾನೆ.” ಆದರೆ, ಆರಾಧನೆಯಲ್ಲಿ ಯಜ್ಞಗಳು ಏಕೆ ಆವಶ್ಯಕ? ಯಾವ ರೀತಿಯ ಯಜ್ಞಗಳು ದೇವರನ್ನು ಸಂತೋಷಗೊಳಿಸುತ್ತವೆ? ಮತ್ತು ಹಿಂದಿನ ಕಾಲದ ಯಜ್ಞಗಳು ನಮಗಿಂದು ಏನನ್ನು ಸೂಚಿಸುತ್ತವೆ? ಎಂಬಂತಹ ಪ್ರಾಮುಖ್ಯ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳನ್ನು ಜಾಗರೂಕತೆಯಿಂದ ಪರಿಗಣಿಸುವುದು ಯೋಗ್ಯವಾಗಿದೆ.
ಯಜ್ಞಗಳು ಏಕೆ ಆವಶ್ಯಕ?
4. ಆದಾಮಹವ್ವರು ಪಾಪಮಾಡಿದಾಗ ಅದರ ಫಲಿತಾಂಶವೇನಾಗಿತ್ತು?
4 ಆದಾಮನು ಬೇಕುಬೇಕೆಂದೇ ಪಾಪಮಾಡಿದನು. ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಅವನು ತೆಗೆದು ತಿಂದಾಗ, ಅವನು ಬೇಕೆಂದೇ ಅವಿಧೇಯತೆಯನ್ನು ತೋರಿಸಿದನು. ಅವನ ಈ ಅವಿಧೇಯತೆಗಾಗಿ ಅವನಿಗೆ ಮರಣದಂಡನೆಯು ವಿಧಿಸಲ್ಪಟ್ಟಿತು. ಇದನ್ನು ದೇವರು ಮುಂಚೆಯೇ ಸ್ಪಷ್ಟವಾಗಿ ತಿಳಿಸಿದ್ದನು: “ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:17) ಮತ್ತು ಹಾಗೆಯೇ ಆಯಿತು. ಕೊನೆಯಲ್ಲಿ ಆದಾಮಹವ್ವರಿಗೆ ಪಾಪದ ಸಂಬಳ ಸಿಕ್ಕಿತು. ಅಂದರೆ ಅವರು ಸತ್ತುಹೋದರು.—ಆದಿಕಾಂಡ 3:19; 5:3-5.
5. ಆದಾಮನ ಸಂತತಿಯ ಪ್ರಯೋಜನಕ್ಕಾಗಿ ಯೆಹೋವನು ಮೊದಲ ಹೆಜ್ಜೆಯನ್ನು ತೆಗೆದುಕೊಂಡದ್ದೇಕೆ, ಮತ್ತು ಅವರಿಗಾಗಿ ಆತನು ಏನು ಮಾಡಿದನು?
5 ಆದರೆ ಆದಾಮನ ಸಂತತಿಯ ಕುರಿತಾಗಿ ಏನು? ಅವರು ಆದಾಮನಿಂದ ಪಾಪ ಮತ್ತು ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದದ್ದರಿಂದ, ಅವರು ಸಹ ಆ ಪ್ರಥಮ ದಂಪತಿಯು ಅನುಭವಿಸಿದ ಸ್ಥಿತಿಗೇ ತುತ್ತಾದರು. ಅಂದರೆ ದೇವರಿಂದ ದೂರಸರಿಯುವಿಕೆ, ನಿರೀಕ್ಷಾಹೀನತೆ, ಮತ್ತು ಮರಣಕ್ಕೆ ಈಡಾದರು. (ರೋಮಾಪುರ 5:14) ಆದರೆ ಯೆಹೋವನು ಕೇವಲ ನ್ಯಾಯ ಮತ್ತು ಶಕ್ತಿಯ ದೇವರು ಮಾತ್ರವಲ್ಲ, ಪ್ರಧಾನವಾಗಿ ಆತನು ಪ್ರೀತಿಯ ದೇವರಾಗಿದ್ದಾನೆ. (1 ಯೋಹಾನ 4:8, 16) ಆದುದರಿಂದಲೇ, ಆ ಪರಿಸ್ಥಿತಿಯನ್ನು ಸರಿಪಡಿಸಲು ಆತನೇ ಮೊದಲ ಹೆಜ್ಜೆಯನ್ನು ತೆಗೆದುಕೊಂಡನು. ಈ ಕಾರಣದಿಂದ ಬೈಬಲ್, “ಪಾಪವು ಕೊಡುವ ಸಂಬಳ ಮರಣ” ಎಂದು ತಿಳಿಸಿದ ನಂತರ, “ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ”ವೇ ಆಗಿದೆಯೆಂದು ಹೇಳುತ್ತದೆ.—ರೋಮಾಪುರ 6:23.
6. ಆದಾಮನ ಪಾಪದಿಂದಾಗಿ ಫಲಿಸಿರುವ ಹಾನಿಯ ಕುರಿತು ಯೆಹೋವನ ಚಿತ್ತವೇನಾಗಿದೆ?
6 ಆ ವರವು ಮನುಷ್ಯರಿಗೆ ಸಿಗುವಂತಾಗಲು, ಯೆಹೋವನು ಆದಾಮನ ತಪ್ಪಿನಿಂದಾಗಿ ಫಲಿಸಿದ ನಷ್ಟವನ್ನು ಮುಚ್ಚಲು ಏನನ್ನೊ ಒದಗಿಸಬೇಕಾಗಿತ್ತು. ಹೀಬ್ರು ಭಾಷೆಯಲ್ಲಿ ಕಾಫಾರ್ ಎಂಬ ಪದಕ್ಕೆ ಆರಂಭದಲ್ಲಿ, “ಮುಚ್ಚು” ಅಥವಾ ಪ್ರಾಯಶಃ “ಒರಸಿಹಾಕು” ಎಂಬರ್ಥವಿತ್ತು. ಆ ಪದವನ್ನು “ದೋಷಪರಿಹಾರ” ಎಂದು ಸಹ ಭಾಷಾಂತರಿಸಲಾಗುತ್ತದೆ.a ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆದಾಮನಿಂದ ಬಾಧ್ಯತೆಯಾಗಿ ಬಂದಿರುವ ಪಾಪವನ್ನು ಮುಚ್ಚಲಿಕ್ಕಾಗಿ ಮತ್ತು ಆ ಪಾಪದಿಂದಾಗಿ ಫಲಿಸಿದ ಹಾನಿಯನ್ನು ಒರಸಿಹಾಕಲಿಕ್ಕಾಗಿ ಯೆಹೋವನು ತಕ್ಕದಾದ ಸಾಧನವನ್ನು ಒದಗಿಸಿದನು. ಹೀಗೆ ಮಾಡುವುದರಿಂದ, ಆ ವರಕ್ಕಾಗಿ ಅರ್ಹರಾಗುವವರು ಪಾಪ ಮತ್ತು ಮರಣದ ದಂಡನೆಯಿಂದ ಬಿಡುಗಡೆಹೊಂದಬಹುದಿತ್ತು.—ರೋಮಾಪುರ 8:21.
7. (ಎ) ದೇವರು ಸೈತಾನನಿಗೆ ವಿಧಿಸಿದ ದಂಡನೆಯ ಮೂಲಕ ಯಾವ ಆಶಾಕಿರಣವು ತೋರಿಬಂತು? (ಬಿ) ಮಾನವಕುಲವನ್ನು ಪಾಪ ಮತ್ತು ಮರಣದಿಂದ ಬಿಡಿಸಲಿಕ್ಕಾಗಿ ಯಾವ ಬೆಲೆಯು ತೆರಲ್ಪಡಬೇಕಾಗಿತ್ತು?
7 ಪಾಪ ಮತ್ತು ಮರಣದ ದಾಸತ್ವದಿಂದ ಬಿಡುಗಡೆಹೊಂದುವ ನಿರೀಕ್ಷೆಯ ಕುರಿತಾಗಿ, ಮೊದಲನೆಯ ಮಾನವ ದಂಪತಿಯು ಪಾಪಮಾಡಿದ ನಂತರ ತತ್ಕ್ಷಣ ಪರೋಕ್ಷವಾಗಿ ತಿಳಿಸಲಾಯಿತು. ಸರ್ಪದಿಂದ ಪ್ರತಿನಿಧಿಸಲ್ಪಟ್ಟಿದ್ದ ಸೈತಾನನಿಗೆ ದಂಡನೆಯನ್ನು ವಿಧಿಸುತ್ತಾ ಯೆಹೋವನು ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ [“ಜಜ್ಜುವಿ,” ಪಾದಟಿಪ್ಪಣಿ].” (ಆದಿಕಾಂಡ 3:15) ಆ ಪ್ರವಾದನಾತ್ಮಕ ಹೇಳಿಕೆಯ ಮೂಲಕ, ಆ ವಾಗ್ದಾನದಲ್ಲಿ ನಂಬಿಕೆಯನ್ನಿಡುವವರೆಲ್ಲರಿಗೆ ಬಿಡುಗಡೆಯ ಒಂದು ಆಶಾಕಿರಣವು ತೋರಿಬಂತು. ಆದರೆ ಅಂತಹ ಬಿಡುಗಡೆಯನ್ನು ಪಡೆಯಲಿಕ್ಕಾಗಿ ಒಂದು ಬೆಲೆಯು ತೆರಲ್ಪಡಬೇಕಾಗಿತ್ತು. ವಾಗ್ದತ್ತ ಸಂತಾನವು ಬಂದು ಸೈತಾನನನ್ನು ನಾಶಮಾಡುವುದಷ್ಟೇ ಅಲ್ಲ, ಅದಕ್ಕಿಂತ ಮುಂಚೆ, ಆ ಸಂತಾನವೇ ಹಿಮ್ಮಡಿಯಲ್ಲಿ ಜಜ್ಜಲ್ಪಡಲಿತ್ತು, ಅಂದರೆ ಮರಣವನ್ನು ಅನುಭವಿಸಬೇಕಾಗಿತ್ತು—ಆದರೆ ಶಾಶ್ವತವಾಗಿ ಅಲ್ಲ.
8. (ಎ) ಕಾಯಿನನು ಹೇಗೆ ಆಶಾಭಂಗವನ್ನು ತಂದನು? (ಬಿ) ಹೇಬೆಲನ ಯಜ್ಞವನ್ನು ದೇವರು ಏಕೆ ಮೆಚ್ಚಿಕೊಂಡನು?
8 ಈ ವಾಗ್ದತ್ತ ಸಂತಾನದ ಕುರಿತಾಗಿ ಆದಾಮಹವ್ವರು ನಿಸ್ಸಂದೇಹವಾಗಿಯೂ ತುಂಬ ಯೋಚಿಸಿದ್ದಿರಬಹುದು. ಆದುದರಿಂದಲೇ ಹವ್ವಳು ತನ್ನ ಪ್ರಥಮ ಮಗನಾದ ಕಾಯಿನನಿಗೆ ಜನ್ಮನೀಡಿದಾಗ ಘೋಷಿಸಿದ್ದು: “ಯೆಹೋವನ ಅನುಗ್ರಹದಿಂದ ಗಂಡುಮಗುವನ್ನು ಪಡೆದಿದ್ದೇನೆ.” (ಆದಿಕಾಂಡ 4:1) ಈ ಮಗನು ಆ ಸಂತಾನವಾಗಿರುವುದೆಂದು ಅವಳು ಯೋಚಿಸಿದ್ದಿರಬಹುದೊ? ಅವಳು ಹಾಗೆ ಯೋಚಿಸಿದಳೊ ಇಲ್ಲವೊ ನಮಗೆ ತಿಳಿದಿಲ್ಲ. ಆದರೆ ಕಾಯಿನನು ಮತ್ತು ಅವನ ನೈವೇದ್ಯವು ಖಂಡಿತವಾಗಿಯೂ ಆಶಾಭಂಗವನ್ನುಂಟುಮಾಡಿತ್ತು. ಆದರೆ ಇನ್ನೊಂದು ಕಡೆ, ಅವನ ತಮ್ಮನಾದ ಹೇಬೆಲನು ದೇವರ ವಾಗ್ದಾನದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದನು. ಮತ್ತು ಯೆಹೋವನಿಗೆ ಒಂದು ಯಜ್ಞದೋಪಾದಿ ತನ್ನ ಹಿಂಡಿನಲ್ಲಿದ್ದ ಕೆಲವೊಂದು ಚೊಚ್ಚಲ ಕುರಿಗಳನ್ನು ಅರ್ಪಿಸಲು ಪ್ರೇರಿಸಲ್ಪಟ್ಟನು. ನಾವು ಹೀಗೆ ಓದುತ್ತೇವೆ: “ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ತಾನು ನೀತಿವಂತನೆಂದು ಸಾಕ್ಷಿಹೊಂದಿದನು.”—ಇಬ್ರಿಯ 11:4.
9. (ಎ) ಹೇಬೆಲನು ಯಾವುದರಲ್ಲಿ ನಂಬಿಕೆಯನ್ನಿಟ್ಟನು, ಮತ್ತು ಅವನು ಆ ನಂಬಿಕೆಯನ್ನು ಹೇಗೆ ವ್ಯಕ್ತಪಡಿಸಿದನು? (ಬಿ) ಹೇಬೆಲನ ಯಜ್ಞವು ಏನನ್ನು ತೋರಿಸಿಕೊಟ್ಟಿತು?
9 ಹೇಬೆಲನ ನಂಬಿಕೆಯು ಒಂದು ಸಾಮಾನ್ಯ ನಂಬಿಕೆಯಾಗಿರಲಿಲ್ಲ. ಅಂದರೆ ಒಬ್ಬ ದೇವರು ಅಸ್ತಿತ್ವದಲ್ಲಿದ್ದಾನೆಂಬ ಬರಿಯ ನಂಬಿಕೆ ಅವನಿಗಿರಲಿಲ್ಲ. ಇಂತಹ ನಂಬಿಕೆ ಕಾಯಿನನಿಗೂ ಇದ್ದಿರಬೇಕು. ಅದರ ಬದಲು, ನಂಬಿಗಸ್ತ ಮಾನವರಿಗೆ ರಕ್ಷಣೆಯನ್ನು ತರುವ ಒಂದು ಸಂತಾನದ ಕುರಿತಾಗಿ ದೇವರು ಮಾಡಿದ ವಾಗ್ದಾನದಲ್ಲಿ ಹೇಬೆಲನಿಗೆ ಬಲವಾದ ನಂಬಿಕೆಯಿತ್ತು. ಈ ರಕ್ಷಣೆಯ ಕೆಲಸವು ಹೇಗೆ ನಡೆಯಲಿದೆಯೆಂಬುದು ಅವನಿಗೆ ತಿಳಿಸಲ್ಪಟ್ಟಿರಲಿಲ್ಲ. ಆದರೂ, ದೇವರು ಮಾಡಿದ ವಾಗ್ದಾನದಿಂದ, ಯಾರಾದರೂ ಹಿಮ್ಮಡಿಯಲ್ಲಿ ಜಜ್ಜಲ್ಪಡಬೇಕೆಂಬುದನ್ನು ಹೇಬೆಲನು ಅರಿತುಕೊಂಡನು. ಹೌದು, ರಕ್ತವು ಸುರಿಸಲ್ಪಡಬೇಕೆಂದು ಅವನು ತರ್ಕಿಸಿದ್ದಿರಬಹುದು. ಮತ್ತು ಇದು ತಾನೇ, ಅಂದರೆ ರಕ್ತದ ಸುರಿಸುವಿಕೆಯೇ ಒಂದು ಯಜ್ಞಕ್ಕೆ ಆವಶ್ಯಕವಾಗಿತ್ತು. ಹೇಬೆಲನು ಜೀವದ ಬುಗ್ಗೆಯಾಗಿರುವ ಯೆಹೋವನಿಗೆ, ಜೀವ ಮತ್ತು ರಕ್ತವುಳ್ಳ ಒಂದು ಕೊಡುಗೆಯನ್ನು ಕೊಟ್ಟನು. ಇದು, ಯೆಹೋವನ ವಾಗ್ದಾನವು ನೆರವೇರಬೇಕೆಂಬ ಅವನ ತೀವ್ರ ಹಂಬಲ ಮತ್ತು ನಿರೀಕ್ಷೆಯ ಕುರುಹು ಆಗಿದ್ದಿರಬಹುದು. ನಂಬಿಕೆಯ ಈ ಅಭಿವ್ಯಕ್ತಿಯಿಂದಾಗಿಯೇ ಹೇಬೆಲನ ಯಜ್ಞವನ್ನು ಯೆಹೋವನು ಮೆಚ್ಚಿದನು. ಅಷ್ಟುಮಾತ್ರವಲ್ಲದೆ, ಯಜ್ಞವೆಂದರೇನು ಎಂಬುದನ್ನು ಸಹ ಅದು ಒಂದು ಚಿಕ್ಕ ರೀತಿಯಲ್ಲಿ ತೋರಿಸಿತು. ಅದು ಪಾಪಿ ಮಾನವರು ದೇವರ ಅನುಗ್ರಹವನ್ನು ಪಡೆಯಲಿಕ್ಕಾಗಿ ಆತನನ್ನು ಸಮೀಪಿಸುವ ಒಂದು ಮಾರ್ಗವಾಗಿದೆ.—ಆದಿಕಾಂಡ 4:4; ಇಬ್ರಿಯ 11:1, 6.
10. ಇಸಾಕನನ್ನು ಬಲಿಯರ್ಪಿಸುವಂತೆ ಯೆಹೋವನು ಅಬ್ರಹಾಮನನ್ನು ಕೇಳಿಕೊಂಡಾಗ, ಯಜ್ಞಗಳ ಸೂಚಿತಾರ್ಥವು ಹೇಗೆ ಸ್ಪಷ್ಟಗೊಳಿಸಲ್ಪಟ್ಟಿತು?
10 ಯಜ್ಞಗಳ ಅಗಾಧವಾದ ಸೂಚಿತಾರ್ಥವೇನೆಂಬುದು, ಯೆಹೋವನು ಅಬ್ರಹಾಮನಿಗೆ ತನ್ನ ಮಗನಾದ ಇಸಾಕನನ್ನು ಒಂದು ಸರ್ವಾಂಗಹೋಮವಾಗಿ ಅರ್ಪಿಸಲು ಆಜ್ಞಾಪಿಸಿದಾಗ ಸ್ಪಷ್ಟಗೊಳಿಸಲ್ಪಟ್ಟಿತು. ಆ ಯಜ್ಞವು ಅರ್ಧದಲ್ಲೇ ನಿಲ್ಲಿಸಲ್ಪಟ್ಟರೂ, ಸ್ವತಃ ಯೆಹೋವನೇ ಮುಂದೆ ಮಾಡಲಿದ್ದ ಯಜ್ಞವನ್ನು ಅದು ಮುನ್ಚಿತ್ರಿಸಿತು. ಮಾನವಕುಲಕ್ಕಾಗಿ ತನಗಿರುವ ಉದ್ದೇಶವನ್ನು ಪೂರೈಸಲಿಕ್ಕಾಗಿ ಅತಿ ಮಹಾನ್ ಯಜ್ಞವಾಗಿ ತನ್ನ ಒಬ್ಬನೇ ಮಗನನ್ನು ದೇವರು ಅರ್ಪಿಸಲಿದ್ದನು. (ಯೋಹಾನ 3:16) ಮೋಶೆಯ ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಿದ್ದ ಯಜ್ಞಗಳು ಮತ್ತು ನೈವೇದ್ಯಗಳ ಮೂಲಕ, ಯೆಹೋವನು ತನ್ನ ಆಯ್ದ ಜನರಿಗೆ ಪ್ರವಾದನಾ ನಮೂನೆಗಳನ್ನಿಟ್ಟನು. ಇವುಗಳ ಮೂಲಕ, ಅವರು ತಮ್ಮ ಪಾಪಗಳ ಕ್ಷಮಾಪಣೆಗಾಗಿ ಏನು ಮಾಡಬೇಕು ಮತ್ತು ರಕ್ಷಣೆಗಾಗಿರುವ ತಮ್ಮ ನಿರೀಕ್ಷೆಯನ್ನು ಬಲಗೊಳಿಸಲು ಏನು ಮಾಡಬೇಕೆಂಬುದನ್ನು ಆತನು ಅವರಿಗೆ ಕಲಿಸಿದನು. ಈ ಯಜ್ಞಗಳು ಮತ್ತು ನೈವೇದ್ಯಗಳಿಂದ ನಾವೇನನ್ನು ಕಲಿಯಬಹುದು?
ಯೆಹೋವನು ಸ್ವೀಕರಿಸುವಂತಹ ಯಜ್ಞಗಳು
11. ಇಸ್ರಾಯೇಲಿನ ಮಹಾ ಯಾಜಕನು ಅರ್ಪಿಸುತ್ತಿದ್ದ ನೈವೇದ್ಯಗಳು ಯಾವ ಎರಡು ವರ್ಗಗಳಾಗಿ ವಿಂಗಡಿಸಲ್ಪಟ್ಟಿತ್ತು, ಮತ್ತು ಅವು ಯಾವ ಉದ್ದೇಶಗಳಿಗಾಗಿ ಅರ್ಪಿಸಲ್ಪಡುತ್ತಿದ್ದವು?
11 “ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವದಕ್ಕೆ ನೇಮಕವಾಗಿರುತ್ತಾನಷ್ಟೆ” ಎಂದು ಅಪೊಸ್ತಲ ಪೌಲನು ಹೇಳಿದನು. (ಇಬ್ರಿಯ 8:3) ಪ್ರಾಚೀನ ಇಸ್ರಾಯೇಲಿನಲ್ಲಿದ್ದ ಮಹಾ ಯಾಜಕನ ನೈವೇದ್ಯಗಳನ್ನು ಪೌಲನು ಎರಡು ವರ್ಗಗಳಾಗಿ ವಿಂಗಡಿಸುತ್ತಾನೆಂಬುದನ್ನು ಗಮನಿಸಿರಿ. ಅವು, ‘ಕಾಣಿಕೆಗಳು’ ಮತ್ತು ‘ಯಜ್ಞಗಳು,’ ಅಥವಾ ‘ಪಾಪನಿವಾರಣಕ್ಕಾಗಿ ಯಜ್ಞಗಳು’ ಎಂದಾಗಿದ್ದವು. (ಇಬ್ರಿಯ 5:1) ಸಾಮಾನ್ಯವಾಗಿ ಜನರು ತಮ್ಮ ಪ್ರೀತಿ ಮತ್ತು ಗಣ್ಯತೆಯನ್ನು ವ್ಯಕ್ತಪಡಿಸಲು ಹಾಗೂ ಸ್ನೇಹವನ್ನು ಬೆಳೆಸಿಕೊಳ್ಳಲು, ಅನುಗ್ರಹವನ್ನು ಅಥವಾ ಸ್ವೀಕೃತಿಯನ್ನು ಪಡೆಯಲು ಕಾಣಿಕೆಗಳನ್ನು ಅಥವಾ ಕೊಡುಗೆಗಳನ್ನು ಕೊಡುತ್ತಾರೆ. (ಆದಿಕಾಂಡ 32:20; ಜ್ಞಾನೋಕ್ತಿ 18:16) ಅಂತೆಯೇ, ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಿರುವ ಅನೇಕ ನೈವೇದ್ಯಗಳು, ದೇವರ ಅನುಗ್ರಹ ಮತ್ತು ಅಂಗೀಕಾರವನ್ನು ಪಡೆಯಲು ಆತನಿಗೆ ಕೊಡಲ್ಪಡುವ ‘ಕಾಣಿಕೆಗಳಾಗಿ’ ವೀಕ್ಷಿಸಲ್ಪಡಬಹುದು.b ಧರ್ಮಶಾಸ್ತ್ರದ ವಿರುದ್ಧ ನಡೆಸಲ್ಪಟ್ಟ ಅಪರಾಧಗಳಿಗಾಗಿ ನಷ್ಟಭರ್ತಿಮಾಡಬೇಕಾಗುತ್ತಿತ್ತು ಮತ್ತು ಕ್ಷಮಾಪಣೆಯನ್ನು ಪಡೆಯಲಿಕ್ಕಾಗಿ ‘ಪಾಪನಿವಾರಣ ಯಜ್ಞಗಳನ್ನು’ ಅರ್ಪಿಸಬೇಕಾಗುತ್ತಿತ್ತು. ಪೆಂಟಟ್ಯೂಕ್, ವಿಶೇಷವಾಗಿ ವಿಮೋಚನಕಾಂಡ, ಯಾಜಕಕಾಂಡ, ಮತ್ತು ಅರಣ್ಯಕಾಂಡ ಪುಸ್ತಕಗಳು ವಿಭಿನ್ನ ರೀತಿಯ ಯಜ್ಞಗಳು ಮತ್ತು ನೈವೇದ್ಯಗಳ ಕುರಿತು ಬಹಳಷ್ಟು ಮಾಹಿತಿಯನ್ನು ಕೊಡುತ್ತವೆ. ಅವುಗಳಲ್ಲಿರುವ ಪ್ರತಿಯೊಂದು ಚಿಕ್ಕಪುಟ್ಟ ವಿವರಗಳನ್ನು ಓದಿ ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟಕರವಾಗಿರುವುದಾದರೂ, ಆ ವಿಭಿನ್ನ ಯಜ್ಞಗಳ ಕುರಿತಾದ ಕೆಲವೊಂದು ಮುಖ್ಯ ವಿಷಯಗಳಿಗೆ ನಾವು ಗಮನವನ್ನು ಕೊಡಬಹುದು.
12. ಧರ್ಮಶಾಸ್ತ್ರದಲ್ಲಿರುವ ಯಜ್ಞಗಳು ಅಥವಾ ನೈವೇದ್ಯಗಳ ಸಾರಾಂಶವನ್ನು ನಾವು ಬೈಬಲಿನಲ್ಲಿ ಎಲ್ಲಿ ಕಂಡುಕೊಳ್ಳಬಹುದು?
12 ಯಾಜಕಕಾಂಡ 1ರಿಂದ 7ನೆಯ ಅಧ್ಯಾಯಗಳಲ್ಲಿ ಐದು ಪ್ರಮುಖ ರೀತಿಯ ನೈವೇದ್ಯಗಳನ್ನು ಒಂದೊಂದಾಗಿ ವರ್ಣಿಸಲಾಗಿದೆ. ವಾಸ್ತವದಲ್ಲಿ ಇವುಗಳಲ್ಲಿ ಕೆಲವೊಂದನ್ನು ಜೊತೆಯಾಗಿ ಅರ್ಪಿಸಲಾಗುತ್ತಿತ್ತು. ಇವು ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ದೋಷಪರಿಹಾರಕ ಯಜ್ಞ ಮತ್ತು ಪ್ರಾಯಶ್ಚಿತ್ತ ಯಜ್ಞಗಳಾಗಿದ್ದವು. ಈ ನೈವೇದ್ಯಗಳನ್ನು ಆ ಅಧ್ಯಾಯಗಳಲ್ಲಿ ಎರಡು ಬಾರಿ ವರ್ಣಿಸಲಾಗಿರುವುದಾದರೂ, ಅದನ್ನು ಎರಡು ಭಿನ್ನ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂಬುದನ್ನು ಸಹ ನೀವು ಗಮನಿಸಬಹುದು. ಮೊದಲನೆಯ ಬಾರಿ, ವೇದಿಯ ಮೇಲೆ ಏನನ್ನು ಅರ್ಪಿಸಬೇಕೆಂಬ ವಿವರಗಳನ್ನು ಕೊಡುತ್ತಾ, ಯಾಜಕಕಾಂಡ 1:2ರಿಂದ 6:7ರಲ್ಲಿ ವರ್ಣಿಸಲಾಗಿದೆ. ಎರಡನೆಯ ಬಾರಿ, ಯಾಜಕರಿಗಾಗಿ ಹಾಗೂ ಯಜ್ಞವನ್ನು ಅರ್ಪಿಸುತ್ತಿರುವವರಿಗಾಗಿ ಕಾದಿರಿಸಲ್ಪಡುತ್ತಿದ್ದ ಭಾಗಗಳನ್ನು ತೋರಿಸುತ್ತಾ, ಯಾಜಕಕಾಂಡ 6:8ರಿಂದ 7:36ರಲ್ಲಿ ವರ್ಣಿಸಲಾಗಿದೆ. ಅನಂತರ, ಅರಣ್ಯಕಾಂಡ 28 ಮತ್ತು 29ನೆಯ ಅಧ್ಯಾಯಗಳಲ್ಲಿ, ಒಂದು ವಿವರವಾದ ಕಾಲಪಟ್ಟಿಯನ್ನು ಕೊಡಲಾಗಿದೆ. ಅದರಲ್ಲಿ ಪ್ರತಿದಿನ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಮತ್ತು ವಾರ್ಷಿಕ ಹಬ್ಬಗಳ ಸಮಯದಲ್ಲಿ ಏನು ಅರ್ಪಿಸಲ್ಪಡಬೇಕೆಂಬುದನ್ನು ತಿಳಿಸಲಾಗಿದೆ.
13. ದೇವರಿಗೆ ಸ್ವಯಂಪ್ರೇರಿತವಾಗಿ ಕಾಣಿಕೆಗಳಾಗಿ ಕೊಡಲಾಗುತ್ತಿದ್ದ ನೈವೇದ್ಯಗಳನ್ನು ವಿವರಿಸಿರಿ.
13 ಸ್ವಯಂಪ್ರೇರಿತವಾಗಿ ಕೊಡಲಾಗುತ್ತಿದ್ದ ಕಾಣಿಕೆಗಳು ಅಥವಾ ದೇವರ ಅನುಗ್ರಹವನ್ನು ಪಡೆಯಲಿಕ್ಕಾಗಿ ಆತನನ್ನು ಸಮೀಪಿಸಲು ಅರ್ಪಿಸಲಾಗುತ್ತಿದ್ದ ನೈವೇದ್ಯಗಳಲ್ಲಿ ಸರ್ವಾಂಗಹೋಮಗಳು, ಧಾನ್ಯನೈವೇದ್ಯಗಳು ಮತ್ತು ಸಮಾಧಾನಯಜ್ಞಗಳು ಸೇರಿದ್ದವು. “ಸರ್ವಾಂಗಹೋಮ”ಕ್ಕಾಗಿರುವ ಹೀಬ್ರು ಪದದ ಅರ್ಥ, “ಆರೋಹಣದ ನೈವೇದ್ಯ” ಅಥವಾ “ಏರುತ್ತಿರುವ ನೈವೇದ್ಯ” ಆಗಿದೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆ ಪದಗಳು ತಕ್ಕದ್ದಾಗಿವೆ, ಯಾಕೆಂದರೆ ಒಂದು ಸರ್ವಾಂಗಹೋಮದಲ್ಲಿ, ವಧಿಸಲ್ಪಟ್ಟಿರುವ ಪ್ರಾಣಿಯನ್ನು ವೇದಿಯ ಮೇಲೆ ಸುಡಲಾಗುತ್ತಿತ್ತು ಮತ್ತು ಅಲ್ಲಿಂದ ಸ್ವರ್ಗದೆಡೆಗೆ ದೇವರಿಗೆ ಒಂದು ಸುಗಂಧಭರಿತ ಸುವಾಸನೆಯು ಮೇಲೇರುತ್ತಿತ್ತು. ಈ ಸರ್ವಾಂಗಹೋಮದ ವಿಶಿಷ್ಟತೆ ಏನೆಂದರೆ, ಅದರ ರಕ್ತವು ವೇದಿಯ ಸುತ್ತಲೂ ಚಿಮುಕಿಸಲ್ಪಟ್ಟ ನಂತರ, ಇಡೀ ಪ್ರಾಣಿಯನ್ನೇ ದೇವರಿಗೆ ಅರ್ಪಿಸಲಾಗುತ್ತಿತ್ತು. ಯಾಜಕರು ‘ಅದನ್ನು ಪೂರ್ತಿಯಾಗಿ ಯಜ್ಞವೇದಿಯ ಮೇಲೆ ಹೋಮಮಾಡುತ್ತಿದ್ದರು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟು ಮಾಡುವ ಸರ್ವಾಂಗಹೋಮವಾಗಿರುತ್ತಿತ್ತು.’—ಯಾಜಕಕಾಂಡ 1:3, 4, 9; ಆದಿಕಾಂಡ 8:21.
14. ಧಾನ್ಯನೈವೇದ್ಯವನ್ನು ಹೇಗೆ ಅರ್ಪಿಸಲಾಗುತ್ತಿತ್ತು?
14 ಧಾನ್ಯನೈವೇದ್ಯದ ಕುರಿತಾಗಿ ಯಾಜಕಕಾಂಡ 2ನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ. ಇದು ಒಂದು ಸ್ವಯಂಪ್ರೇರಿತ ಕಾಣಿಕೆಯಾಗಿದ್ದು, ಸಾಮಾನ್ಯವಾಗಿ ಎಣ್ಣೆಬೆರೆಸಲ್ಪಟ್ಟಿದ್ದ ಮತ್ತು ಧೂಪವು ಸೇರಿಸಲ್ಪಟ್ಟಿದ್ದ ಗೋದಿಹಿಟ್ಟಾಗಿರುತ್ತಿತ್ತು. “ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಸೂಚಿಸುವದಕ್ಕಾಗಿ ಆ ಎಣ್ಣೆ ಬೆರಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದು.” (ಯಾಜಕಕಾಂಡ 2:2) ದೇವಗುಡಾರದಲ್ಲಿ ಮತ್ತು ದೇವಾಲಯದಲ್ಲಿ ಧೂಪವೇದಿಯ ಮೇಲೆ ಸುಡಲಾಗುತ್ತಿದ್ದ ಪವಿತ್ರ ಧೂಪದ ಸಾಮಗ್ರಿಗಳಲ್ಲಿ ಧೂಪವು ಒಂದಾಗಿತ್ತು. (ವಿಮೋಚನಕಾಂಡ 30:34-36) “ನನ್ನ ಪ್ರಾರ್ಥನೆಯು ಧೂಪದಂತೆಯೂ ನಾನು ಕೈಯೆತ್ತುವದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ” ಎಂದು ರಾಜ ದಾವೀದನು ಹೇಳಿದಾಗ, ಬಹುಶಃ ಇದೇ ಸಂಗತಿಯು ಅವನ ಮನಸ್ಸಿನಲ್ಲಿದ್ದಿರಬಹುದು.—ಕೀರ್ತನೆ 141:2.
15. ಸಮಾಧಾನ ಯಜ್ಞದ ಉದ್ದೇಶವೇನಾಗಿತ್ತು?
15 ಇನ್ನೊಂದು ಸ್ವಯಂಪ್ರೇರಿತ ನೈವೇದ್ಯವು, ಸಮಾಧಾನ ಯಜ್ಞವಾಗಿತ್ತು. ಇದನ್ನು ಯಾಜಕಕಾಂಡ 3ನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ. . . . ಹೀಬ್ರು ಭಾಷೆಯಲ್ಲಿ, “ಸಮಾಧಾನ” ಎಂಬ ಪದವು ಕೇವಲ ಯುದ್ಧ ಅಥವಾ ಕಲಹದಿಂದ ಮುಕ್ತವಾಗಿರುವುದಕ್ಕಿಂತಲೂ ಹೆಚ್ಚನ್ನು ಸೂಚಿಸುತ್ತದೆ. “ಬೈಬಲಿನಲ್ಲಿ” ಆ ಪದವು “ಇದನ್ನೇ ಸೂಚಿಸುತ್ತದೆ. ಅದಲ್ಲದೆ, ದೇವರೊಂದಿಗೆ ಸಮಾಧಾನದ ಸ್ಥಿತಿ ಅಥವಾ ಸಂಬಂಧವನ್ನು, ಸಮೃದ್ಧಿ, ಆನಂದ ಮತ್ತು ಸಂತೋಷವನ್ನು ಸಹ ಸೂಚಿಸುತ್ತದೆ” ಎಂದು ಸ್ಟಡೀಸ್ ಇನ್ ದ ಮೊಸಾಯಿಕ್ ಇನ್ಸ್ಟಿಟ್ಯುಷನ್ಸ್ ಪುಸ್ತಕವು ಹೇಳುತ್ತದೆ. ಹೀಗೆ, ಸಮಾಧಾನ ಯಜ್ಞಗಳು ದೇವರನ್ನು ಸಮಾಧಾನಗೊಳಿಸಲಿಕ್ಕಾಗಿಯೋ ಎಂಬಂತೆ ಆತನಿಂದ ಶಾಂತಿಯನ್ನು ಸಂಪಾದಿಸಲಿಕ್ಕಾಗಿ ಅರ್ಪಿಸಲ್ಪಡುತ್ತಿರಲಿಲ್ಲ. ಬದಲಾಗಿ, ಆತನಿಂದ ಸಮ್ಮತಿಯನ್ನು ಪಡೆದಿರುವವರು ಆತನೊಂದಿಗೆ ಆನಂದಿಸುವಂತಹ ಸಮಾಧಾನದ ಧನ್ಯ ಸ್ಥಿತಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅಥವಾ ಕೊಂಡಾಡಲು ಅರ್ಪಿಸಲಾಗುತ್ತಿತ್ತು. ರಕ್ತ ಮತ್ತು ಕೊಬ್ಬನ್ನು ಯೆಹೋವನಿಗೆ ಅರ್ಪಿಸಿದ ನಂತರ, ಯಾಜಕರು ಮತ್ತು ಯಜ್ಞವನ್ನು ಅರ್ಪಿಸುತ್ತಿದ್ದವನು ಉಳಿದ ಮಾಂಸವನ್ನು ತಿನ್ನುತ್ತಿದ್ದರು. (ಯಾಜಕಕಾಂಡ 3:17; 7:16-21; 19:5-8) ಯಜ್ಞವನ್ನು ಕೊಡುತ್ತಿದ್ದವನು, ಯಾಜಕರು ಮತ್ತು ಯೆಹೋವ ದೇವರು ಒಂದು ಮನೋಹರವಾದ ಮತ್ತು ಸಾಂಕೇತಿಕವಾದ ರೀತಿಯಲ್ಲಿ ಒಂದು ಊಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದು ಅವರ ನಡುವಿನ ಸಮಾಧಾನದ ಸಂಬಂಧವನ್ನು ಸೂಚಿಸುತ್ತಿತ್ತು.
16. (ಎ) ದೋಷಪರಿಹಾರಕ ಯಜ್ಞ ಮತ್ತು ಪ್ರಾಯಶ್ಚಿತ್ತ ಯಜ್ಞದ ಉದ್ದೇಶವೇನಾಗಿತ್ತು? (ಬಿ) ಈ ಯಜ್ಞಗಳು ಮತ್ತು ಸರ್ವಾಂಗಹೋಮದ ನಡುವಿನ ವ್ಯತ್ಯಾಸವೇನು?
16 ದೋಷಪರಿಹಾರಕ ಯಜ್ಞ ಮತ್ತು ಪ್ರಾಯಶ್ಚಿತ್ತ ಯಜ್ಞಗಳು, ಪಾಪಕ್ಕಾಗಿ ಕ್ಷಮಾಪಣೆಯನ್ನು ಕೋರಲು ಅಥವಾ ಧರ್ಮಶಾಸ್ತ್ರದ ವಿರುದ್ಧ ಮಾಡಲಾದ ತಪ್ಪುಗಳ ಪ್ರಾಯಶ್ಚಿತ್ತಕ್ಕಾಗಿ ಅರ್ಪಿಸಲಾಗುತ್ತಿದ್ದ ಯಜ್ಞಗಳಾಗಿದ್ದವು. ಈ ಯಜ್ಞಗಳನ್ನು ವೇದಿಯ ಮೇಲೆ ಸುಡುವುದರ ಮೂಲಕ ಅರ್ಪಿಸಲಾಗುತ್ತಿದ್ದರೂ, ಅವು ಸರ್ವಾಂಗ ಹೋಮದಿಂದ ಭಿನ್ನವಾಗಿದ್ದವು. ಹೇಗೆ? ಇಡೀ ಪ್ರಾಣಿಯನ್ನು ದೇವರಿಗೆ ಅರ್ಪಿಸಲಾಗುತ್ತಿರಲಿಲ್ಲ. ಕೇವಲ ಅದರ ಕೊಬ್ಬು ಮತ್ತು ನಿರ್ದಿಷ್ಟ ಭಾಗಗಳನ್ನು ಮಾತ್ರ ಅರ್ಪಿಸಲಾಗುತ್ತಿತ್ತು. ಪ್ರಾಣಿಯ ಉಳಿದ ಭಾಗವನ್ನು ಪಾಳೆಯದ ಹೊರಗೆ ಸುಡಲಾಗುತ್ತಿತ್ತು ಅಥವಾ ಕೆಲವೊಂದು ಸಂದರ್ಭಗಳಲ್ಲಿ ಯಾಜಕರು ಅದನ್ನು ತಿನ್ನುತ್ತಿದ್ದರು. ಈ ವ್ಯತ್ಯಾಸಕ್ಕೂ ಒಂದು ಕಾರಣವಿದೆ. ಸರ್ವಾಂಗಹೋಮವು, ದೇವರನ್ನು ಸಮೀಪಿಸಲಿಕ್ಕಾಗಿ ಒಂದು ಕಾಣಿಕೆಯಾಗಿ ಸಲ್ಲಿಸಲಾಗುತ್ತಿತ್ತು. ಆದುದರಿಂದ ಅದನ್ನು ಕೇವಲ ದೇವರಿಗೆ ಇಡೀಯಾಗಿ ಅರ್ಪಿಸಲಾಗುತ್ತಿತ್ತು. ಆಸಕ್ತಿಕರವಾದ ಸಂಗತಿಯೇನೆಂದರೆ, ಸಾಮಾನ್ಯವಾಗಿ ಒಂದು ಸರ್ವಾಂಗಹೋಮವನ್ನು ಅರ್ಪಿಸುವ ಮುಂಚೆ ಒಂದು ದೋಷಪರಿಹಾರಕ ಯಜ್ಞವನ್ನು ಅಥವಾ ಪ್ರಾಯಶ್ಚಿತ್ತ ಯಜ್ಞವನ್ನು ಅರ್ಪಿಸಲಾಗುತ್ತಿತ್ತು. ಇದು, ಆ ಪಾಪಿಯ ಕಾಣಿಕೆಯು ದೇವರಿಂದ ಸ್ವೀಕರಿಸಲ್ಪಡಬೇಕಾದರೆ, ಮೊದಲು ಪಾಪವು ಕ್ಷಮಿಸಲ್ಪಡಬೇಕೆಂಬುದನ್ನು ಸೂಚಿಸುತ್ತದೆ.—ಯಾಜಕಕಾಂಡ 8:14, 18; 9:2, 3; 16:3, 5.
17, 18. ದೋಷಪರಿಹಾರ ಯಜ್ಞವನ್ನು ಯಾವುದಕ್ಕಾಗಿ ಕೊಡಲಾಗುತ್ತಿತ್ತು, ಮತ್ತು ಪ್ರಾಯಶ್ಚಿತ್ತ ಯಜ್ಞಗಳ ಉದ್ದೇಶವೇನಾಗಿತ್ತು?
17 ದೋಷಪರಿಹಾರಕ ಯಜ್ಞವನ್ನು, ಧರ್ಮಶಾಸ್ತ್ರದ ವಿರುದ್ಧ ತಿಳಿಯದೇ ಮಾಡಿದ ಪಾಪಕ್ಕಾಗಿ, ಅಂದರೆ ಶರೀರದ ಬಲಹೀನತೆಗಳಿಂದಾಗಿ ಮಾಡಿದ ಪಾಪಕ್ಕಾಗಿ ಮಾತ್ರವೇ ಸಲ್ಲಿಸಲಾಗುತ್ತಿತ್ತು. “ಯಾವನೇ ಆಗಲಿ ತಿಳಿಯದೆ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವದನ್ನಾದರೂ ಮಾಡಿ ದೋಷಿಯಾದರೆ” ಆ ಪಾಪಿಯು, ಸಮಾಜದಲ್ಲಿನ ತನ್ನ ಸ್ಥಾನಮಾನ ಅಥವಾ ನಿಲುವಿಗನುಸಾರ ಒಂದು ದೋಷಪರಿಹಾರಕ ಯಜ್ಞವನ್ನು ಅರ್ಪಿಸಬೇಕಾಗಿತ್ತು. (ಯಾಜಕಕಾಂಡ 4:2, 3, 22, 27) ಆದರೆ ಪಶ್ಚಾತ್ತಾಪಪಡದ ಪಾಪಿಗಳನ್ನು ತೆಗೆದುಹಾಕಲಾಗುತ್ತಿತ್ತು, ಮತ್ತು ಅವರಿಗೆ ಇನ್ನು ಮುಂದೆ ಯಾವ ಯಜ್ಞಗಳೂ ಇರುತ್ತಿರಲಿಲ್ಲ.—ವಿಮೋಚನಕಾಂಡ 21:12-15; ಯಾಜಕಕಾಂಡ 17:10; 20:2, 6, 10; ಅರಣ್ಯಕಾಂಡ 15:30; ಇಬ್ರಿಯ 2:2.
18 ಪ್ರಾಯಶ್ಚಿತ್ತ ಯಜ್ಞದ ಅರ್ಥ ಮತ್ತು ಉದ್ದೇಶವೇನೆಂಬುದನ್ನು, ಯಾಜಕಕಾಂಡ 5 ಮತ್ತು 6ನೆಯ ಅಧ್ಯಾಯಗಳಲ್ಲಿ ಸ್ಪಷ್ಟಗೊಳಿಸಲಾಗಿದೆ. ಒಬ್ಬ ವ್ಯಕ್ತಿಯು ತಿಳಿಯದೇ ಪಾಪಮಾಡಿರಬಹುದು. ಹೀಗಿದ್ದರೂ, ಅವನ ತಪ್ಪಿನಿಂದಾಗಿ ಅವನು ತನ್ನ ಜೊತೆ ಮಾನವನ ಹಕ್ಕುಗಳ ವಿರುದ್ಧ ಅಥವಾ ಯೆಹೋವ ದೇವರ ಮುಂದೆ ದೋಷಿಯಾಗಿರಬಹುದು. ಮತ್ತು ಆ ತಪ್ಪಿಗಾಗಿ ನಷ್ಟಭರ್ತಿಮಾಡಬೇಕಾಗಿತ್ತು. ಆ ಅಧ್ಯಾಯಗಳಲ್ಲಿ ಅನೇಕ ವರ್ಗಗಳ ಪಾಪಗಳನ್ನು ತಿಳಿಸಲಾಗಿದೆ. ಕೆಲವು ವೈಯಕ್ತಿಕ ಪಾಪಗಳಾಗಿದ್ದವು (ಯಾಜಕಕಾಂಡ 5:2-6). ಕೆಲವು ಪಾಪಗಳು “ಯೆಹೋವನಿಗೆ ಸಲ್ಲಿಸಬೇಕಾದ ದೇವರ ವಸ್ತುಗಳ” ವಿರುದ್ಧವಾದದ್ದಾಗಿದ್ದವು (ಯಾಜಕಕಾಂಡ 5:14-16). ಮತ್ತು ಕೆಲವು ಪಾಪಗಳು ಸಂಪೂರ್ಣವಾಗಿ ತಿಳಿಯದೇ ಮಾಡಿದ ಪಾಪಗಳಾಗಿರದಿದ್ದರೂ, ತಪ್ಪಾದ ಬಯಕೆಗಳು ಅಥವಾ ಶಾರೀರಿಕ ಬಲಹೀನತೆಗಳಿಂದಾಗಿ ಮಾಡಲ್ಪಟ್ಟ ಪಾಪಗಳಾಗಿದ್ದವು (ಯಾಜಕಕಾಂಡ 6:1-3). ತಪ್ಪಿತಸ್ಥನು ಅಂತಹ ಪಾಪಗಳನ್ನು ಅರಿಕೆಮಾಡಬೇಕಾಗಿತ್ತು ಮಾತ್ರವಲ್ಲ, ಅವಶ್ಯವಿದ್ದಲ್ಲೆಲ್ಲ ನಷ್ಟಭರ್ತಿಯನ್ನು ಮಾಡಬೇಕಿತ್ತು ಮತ್ತು ಅನಂತರ ಯೆಹೋವನಿಗೆ ಪ್ರಾಯಶ್ಚಿತ್ತ ಯಜ್ಞವನ್ನು ಅರ್ಪಿಸಬೇಕಾಗಿತ್ತು.—ಯಾಜಕಕಾಂಡ 6:4-7.
ಶ್ರೇಷ್ಠವಾದದ್ದೇನೊ ಬರಲಿದೆ
19. ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರ ಮತ್ತು ಯಜ್ಞಗಳ ಏರ್ಪಾಡು ಇದ್ದರೂ, ಅವರೇಕೆ ದೇವರ ಅನುಗ್ರಹವನ್ನು ಪಡೆಯಲಿಲ್ಲ?
19 ದೇವರು ಇಸ್ರಾಯೇಲ್ಯರಿಗೆ ಮೋಶೆಯ ಧರ್ಮಶಾಸ್ತ್ರವನ್ನು ಮತ್ತು ಅದರಲ್ಲಿ ಯಜ್ಞಗಳು ಮತ್ತು ನೈವೇದ್ಯಗಳ ಕುರಿತಾಗಿ ನಿಯಮಗಳನ್ನು ಕೊಡಲು ಒಂದು ಉದ್ದೇಶವಿತ್ತು. ಅದೇನು? ವಾಗ್ದತ್ತ ಸಂತಾನವು ಬರುವ ವರೆಗೆ, ದೇವರ ಅನುಗ್ರಹ ಹಾಗೂ ಆಶೀರ್ವಾದವನ್ನು ಪಡೆಯಲಿಕ್ಕಾಗಿ ಮತ್ತು ಅದನ್ನು ಕಾಪಾಡಿಕೊಂಡುಹೋಗಲಿಕ್ಕಾಗಿ ದೇವರನ್ನು ಸಮೀಪಿಸಲು ಒಂದು ಮಾರ್ಗವನ್ನು ಒದಗಿಸುವುದೇ. ಜನ್ಮತಃ ಒಬ್ಬ ಯೆಹೂದಿಯಾಗಿದ್ದ ಅಪೊಸ್ತಲ ಪೌಲನು ಅದನ್ನು ಈ ರೀತಿಯಲ್ಲಿ ತಿಳಿಸಿದನು: “ಧರ್ಮಶಾಸ್ತ್ರವು, ಹುಡುಗನನ್ನು ಉಪಾಧ್ಯಾಯನ ಬಳಿಗೆ ಕರಕೊಂಡು ಹೋಗುವ ಆಳಿನಂತಾಗಿದೆ. ನಾವು ನಂಬಿಕೆಯಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವದಕ್ಕಾಗಿ ಅದು ನಮ್ಮನ್ನು ಕ್ರಿಸ್ತನ ಬಳಿಗೆ ಕರೆತರುತ್ತದೆ.” (ಗಲಾತ್ಯ 3:24, ಪಾದಟಿಪ್ಪಣಿ) ಆದರೆ ದುಃಖಕರ ಸಂಗತಿಯೇನೆಂದರೆ, ಒಂದು ಜನಾಂಗದೋಪಾದಿ ಇಸ್ರಾಯೇಲ್ಯರು ಆ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿಸಲಿಲ್ಲ, ಬದಲಾಗಿ ಆ ಸುಯೋಗವನ್ನು ನಿಂದಿಸಿದರು. ಫಲಿತಾಂಶವಾಗಿ, ಅವರು ಅರ್ಪಿಸುತ್ತಿದ್ದ ಅಸಂಖ್ಯಾತ ಯಜ್ಞಗಳು ಯೆಹೋವನಿಗೆ ಅಸಹ್ಯಕರವಾಗಿಬಿಟ್ಟವು. ಆತನು ಹೀಗಂದನು: “ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ? ಟಗರುಗಳ ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿಕುರಿಹೋತಗಳ ರಕ್ತಕ್ಕೆ ನಾನು ಒಲಿಯೆನು.”—ಯೆಶಾಯ 1:11.
20. ಧರ್ಮಶಾಸ್ತ್ರ ಮತ್ತು ಅದರಲ್ಲಿ ತಿಳಿಸಲ್ಪಟ್ಟಿರುವ ಯಜ್ಞಗಳ ಸಂಬಂಧದಲ್ಲಿ ಸಾ.ಶ. 70ರಲ್ಲಿ ಏನಾಯಿತು?
20 ಸಾ.ಶ. 70ರಲ್ಲಿ ಯೆಹೂದಿ ವಿಷಯಗಳ ವ್ಯವಸ್ಥೆಯು, ಅದರ ದೇವಾಲಯ ಮತ್ತು ಯಾಜಕತ್ವದ ಸಮೇತ ಅಂತ್ಯಗೊಂಡಿತು. ಅನಂತರ, ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಂತಹ ರೀತಿಯಲ್ಲಿ ಯಜ್ಞಗಳನ್ನು ಅರ್ಪಿಸುವುದು ಅಸಾಧ್ಯವಾಯಿತು. ಹಾಗಾದರೆ, ಧರ್ಮಶಾಸ್ತ್ರದ ಅವಿಭಾಜ್ಯ ಅಂಗದಂತಿದ್ದ ಆ ಯಜ್ಞಗಳು, ಇಂದು ದೇವರ ಆರಾಧಕರಿಗೆ ಯಾವುದೇ ಅರ್ಥವಿಲ್ಲದವುಗಳಾಗಿವೆಯೊ? ನಾವು ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.
[ಪಾದಟಿಪ್ಪಣಿಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಇನ್ಸೈಟ್ ಆನ್ ದ ಸ್ರಿಪ್ಚರ್ಸ್ ವಿವರಿಸುವುದು: “ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ, ‘ದೋಷಪರಿಹಾರದ’ ಮೂಲ ಅರ್ಥ, ‘ಮುಚ್ಚು’ ಅಥವಾ ‘ವಿನಿಮಯಮಾಡು’ ಎಂದಾಗಿದೆ. ಒಂದು ವಸ್ತುವಿನ ವಿನಿಮಯದಲ್ಲಿ ಕೊಡಲಾಗುವ ಅಥವಾ ಅದನ್ನು ‘ಮುಚ್ಚಲಿಕ್ಕಾಗಿ’ ಕೊಡಲಾಗುವ ವಸ್ತು, ಅದರ ಪ್ರತಿರೂಪವಾಗಿರಬೇಕು. . . . ಆದಾಮನು ಏನನ್ನು ಕಳಕೊಂಡನೊ ಅದಕ್ಕೆ ಸರಿಯಾದ ಪ್ರಾಯಶ್ಚಿತ್ತವನ್ನು ಮಾಡಲಿಕ್ಕಾಗಿ, ಕರಾರುವಾಕ್ಕಾಗಿ ಒಂದು ಪರಿಪೂರ್ಣ ಮಾನವ ಜೀವದ ಮೌಲ್ಯವುಳ್ಳ ದೋಷಪರಿಹಾರಕ ಯಜ್ಞವು ಕೊಡಲ್ಪಡಬೇಕಾಗಿತ್ತು.”
b ಕೊರ್ಬಾನ್ ಎಂಬ ಹೀಬ್ರು ಪದವನ್ನು “ನೈವೇದ್ಯ” ಎಂದು ಅನೇಕಬಾರಿ ಭಾಷಾಂತರಿಸಲಾಗಿದೆ. ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿನಿಷ್ಠೆಯಿಲ್ಲದ ಒಂದು ಆಚರಣೆಯನ್ನು ಖಂಡಿಸುತ್ತಾ ಯೇಸು ಹೇಳಿದಂತಹ ಮಾತುಗಳನ್ನು ಮಾರ್ಕನು ದಾಖಲಿಸಿದನು. ಆಗ ಮಾರ್ಕನು ವಿವರಿಸಿದ್ದೇನೆಂದರೆ “ಕೊರ್ಬಾನ್”ನ ಅರ್ಥವು, “ದೇವರಿಗಾಗಿ ಮೀಸಲಾಗಿಟ್ಟಿರುವ ಕೊಡುಗೆ” (NW) ಎಂದೇ ಆಗಿದೆ.—ಮಾರ್ಕ 7:11.
ನೀವು ವಿವರಿಸಬಲ್ಲಿರೊ?
• ಪ್ರಾಚೀನ ಸಮಯದಲ್ಲಿದ್ದ ನಂಬಿಗಸ್ತ ಪುರುಷರು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುವಂತೆ ಯಾವುದು ಪ್ರೇರಿಸಿತು?
• ಯಜ್ಞಗಳು ಏಕೆ ಆವಶ್ಯಕವಾಗಿದ್ದವು?
• ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಟ್ಟ ಪ್ರಧಾನ ಯಜ್ಞಗಳು ಯಾವವು, ಮತ್ತು ಅವುಗಳ ಉದ್ದೇಶಗಳೇನಾಗಿದ್ದವು?
• ಪೌಲನಿಗನುಸಾರ, ಧರ್ಮಶಾಸ್ತ್ರ ಮತ್ತು ಅದರಲ್ಲಿ ತಿಳಿಸಲ್ಪಟ್ಟಿದ್ದ ಯಜ್ಞಗಳ ಮುಖ್ಯ ಉದ್ದೇಶವೇನಾಗಿತ್ತು?
[ಪುಟ 14ರಲ್ಲಿರುವ ಚಿತ್ರ]
ಹೇಬೆಲನ ಯಜ್ಞವನ್ನು ಯೆಹೋವನು ಮೆಚ್ಚಿಕೊಂಡನು ಯಾಕೆಂದರೆ, ಅದು ಯೆಹೋವನ ವಾಗ್ದಾನದಲ್ಲಿದ್ದ ಅವನ ನಂಬಿಕೆಯನ್ನು ಪ್ರದರ್ಶಿಸಿತು
[ಪುಟ 15ರಲ್ಲಿರುವ ಚಿತ್ರ]
ಈ ದೃಶ್ಯದ ಸೂಚಿತಾರ್ಥವನ್ನು ನೀವು ಗ್ರಹಿಸಿದ್ದೀರೊ?