ಪವಿತ್ರಾತ್ಮದವುಗಳ ಮೇಲೆ ಮನಸ್ಸಿಟ್ಟು, ಬದುಕಿರಿ!
‘ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವ ಆಗಿದೆ.’—ರೋಮಾಪುರ 8:6.
1, 2. “ಶರೀರ” ಮತ್ತು “ಪವಿತ್ರಾತ್ಮ”ದ ನಡುವೆ ಬೈಬಲ್ ಯಾವ ವ್ಯತ್ಯಾಸವನ್ನು ತೋರಿಸುತ್ತದೆ?
ಇಂದಿನ ನೀತಿಗೆಟ್ಟ ಲೋಕದಲ್ಲಿ ಶರೀರದಭಿಲಾಷೆಗಳನ್ನು ತಣಿಸುವುದಕ್ಕೆ ಅತಿ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತದೆ. ಆದುದರಿಂದ ದೇವರ ಮುಂದೆ ಶುದ್ಧವಾದ ನೈತಿಕ ನಿಲುವನ್ನು ಕಾಪಾಡಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಆದರೆ ಶಾಸ್ತ್ರವಚನಗಳು, “ಶರೀರ” ಮತ್ತು “ಪವಿತ್ರಾತ್ಮ”ದ ನಡುವಿನ ಭೇದವನ್ನು ತೋರಿಸುತ್ತವೆ. ಪಾಪಪೂರ್ಣ ಶರೀರಕ್ಕೆ ಅಧೀನವಾಗಿರುವುದರಿಂದ ಬರುವ ಕೆಟ್ಟ ಫಲಿತಾಂಶಗಳು ಹಾಗೂ ದೇವರ ಪವಿತ್ರಾತ್ಮದ ಪ್ರಭಾವಕ್ಕೆ ಒಳಗಾಗುವುದರಿಂದ ಸಿಗುವ ಆನಂದಕರ ಫಲಿತಾಂಶಗಳನ್ನು ಅವು ತೀರ ಸ್ಪಷ್ಟವಾಗಿ ನಮ್ಮ ಮುಂದಿಡುತ್ತವೆ.
2 ಉದಾಹರಣೆಗಾಗಿ ಯೇಸು ಕ್ರಿಸ್ತನಂದದ್ದು: “ಬದುಕಿಸುವಂಥದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಅವೆ.” (ಯೋಹಾನ 6:63) ಗಲಾತ್ಯದಲ್ಲಿರುವ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ಶರೀರಭಾವವು ಅಭಿಲಾಷಿಸುವದು ಆತ್ಮನಿಗೆ ವಿರುದ್ಧವಾಗಿದೆ, ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ.” (ಗಲಾತ್ಯ 5:17) ಪೌಲನು ಹೀಗೂ ಅಂದನು: “ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.”—ಗಲಾತ್ಯ 6:8.
3. ದುರಾಶೆಗಳು ಮತ್ತು ಪ್ರವೃತ್ತಿಗಳಿಂದ ಮುಕ್ತರಾಗಲಿಕ್ಕಾಗಿ ಏನು ಅಗತ್ಯ?
3 ಯೆಹೋವನ ಕಾರ್ಯಕಾರಿ ಶಕ್ತಿಯಾಗಿರುವ ಪವಿತ್ರಾತ್ಮವು, ಅಶುದ್ಧವಾದ “ಶಾರೀರಿಕ ಅಭಿಲಾಷೆ”ಗಳನ್ನು ಮತ್ತು ನಮ್ಮ ಪಾಪಪೂರ್ಣ ಶರೀರದ ನಾಶಕಾರಿ ಪ್ರಭುತ್ವವನ್ನು ಬೇರುಸಹಿತ ಕಿತ್ತೆಗೆಯಬಲ್ಲದು. (1 ಪೇತ್ರ 2:11) ತಪ್ಪು ಪ್ರವೃತ್ತಿಗಳ ಬಂಧನದಿಂದ ಬಿಡಿಸಲಿಕ್ಕಾಗಿ, ನಮಗೆ ದೇವರಾತ್ಮದ ಸಹಾಯವು ಬೇಕೇ ಬೇಕು. ಏಕೆಂದರೆ ಪೌಲನು ಬರೆದುದು: “ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ; ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ.” (ರೋಮಾಪುರ 8:6) ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರ ಅರ್ಥವೇನು?
‘ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದು’
4. ‘ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರ’ ಅರ್ಥವೇನು?
4 ‘ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರ’ ಕುರಿತಾಗಿ ಪೌಲನು ಬರೆದಾಗ, “ಆಲೋಚನಾ ರೀತಿ, ಮನೋ (ರೂಢಿ), . . . ಗುರಿ, ಹೆಬ್ಬಯಕೆ, ಶ್ರಮೆ” ಎಂಬರ್ಥವುಳ್ಳ ಗ್ರೀಕ್ ಪದವೊಂದನ್ನು ಉಪಯೋಗಿಸಿದನು. ಇದಕ್ಕೆ ಸಂಬಂಧವಿರುವ ಒಂದು ಕ್ರಿಯಾಪದದ ಅರ್ಥ, “ಯೋಚಿಸುವುದು, ಒಂದು ನಿರ್ದಿಷ್ಟ ರೀತಿಯಲ್ಲಿ ಮನಸ್ಸುಳ್ಳವರಾಗಿರುವುದು” ಆಗಿದೆ. ಹೀಗಿರುವುದರಿಂದ, ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರ ಅರ್ಥ, ಯೆಹೋವನ ಕ್ರಿಯಾತ್ಮಕ ಶಕ್ತಿಯಿಂದ ನಿಯಂತ್ರಿಸಲ್ಪಡುವುದು, ಆಳಲ್ಪಡುವುದು ಮತ್ತು ಮುಂದಕ್ಕೆ ತಳ್ಳಲ್ಪಡುವುದೇ ಆಗಿದೆ. ನಮ್ಮ ಆ ಯೋಚನಾರೀತಿಯು, ಪ್ರವೃತ್ತಿಗಳು ಮತ್ತು ಹೆಬ್ಬಯಕೆಗಳು ಸಂಪೂರ್ಣವಾಗಿ ದೇವರ ಪವಿತ್ರಾತ್ಮದ ಪ್ರಭಾವಕ್ಕೊಳಗಾಗುವಂತೆ ನಾವು ಸಿದ್ಧಮನಸ್ಸಿನಿಂದ ಅನುಮತಿಸುವುದನ್ನು ಇದು ಸೂಚಿಸುತ್ತದೆ.
5. ನಾವು ಎಷ್ಟರ ಮಟ್ಟಿಗೆ ಪವಿತ್ರಾತ್ಮದ ಪ್ರಭಾವಕ್ಕೆ ಅಧೀನರಾಗಬೇಕು?
5 ನಾವು ಎಷ್ಟರ ಮಟ್ಟಿಗೆ ಪವಿತ್ರಾತ್ಮದ ಪ್ರಭಾವಕ್ಕೆ ಅಧೀನರಾಗಬೇಕೆಂಬುದನ್ನು ಪೌಲನು ಎತ್ತಿಹೇಳಿದನು. ‘ಪವಿತ್ರಾತ್ಮದ ದಾಸ’ರಾಗಿರುವುದರ ಕುರಿತಾಗಿ ಅವನು ಮಾತಾಡಿದನು. (ರೋಮಾಪುರ 7:6, NW) ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿನ ತಮ್ಮ ನಂಬಿಕೆಯ ಆಧಾರದ ಮೇಲೆ, ಕ್ರೈಸ್ತರು ಪಾಪದ ಆಧಿಪತ್ಯದಿಂದ ಬಿಡಿಸಲ್ಪಟ್ಟು, ಅದರ ದಾಸರೋಪಾದಿ ಅವರ ಹಿಂದಿನ ಸ್ಥಿತಿಗೆ ‘ಸತ್ತವರಾಗಿದ್ದಾರೆ.’ (ರೋಮಾಪುರ 6:2, 11) ಆ ರೀತಿಯಲ್ಲಿ ಸಾಂಕೇತಿಕವಾಗಿ ಸತ್ತವರು, ಶಾರೀರಿಕವಾಗಿ ಈಗಲೂ ಜೀವದಿಂದಿದ್ದಾರೆ ಮತ್ತು ಈಗ ಕ್ರಿಸ್ತನನ್ನು ‘ನೀತಿಗೆ ದಾಸರಾಗಿ’ ಕ್ರಿಸ್ತನನ್ನು ಹಿಂಬಾಲಿಸಲು ಸ್ವತಂತ್ರರಾಗಿದ್ದಾರೆ.—ರೋಮಾಪುರ 6:18-20.
ಒಂದು ಮಹತ್ತರವಾದ ಪರಿವರ್ತನೆ
6. ‘ನೀತಿಗೆ ದಾಸ’ರಾಗುವವರಿಂದ ಯಾವ ಪರಿವರ್ತನೆಯು ಅನುಭವಿಸಲ್ಪಡುತ್ತಿದೆ?
6 ‘ಪಾಪದ ದಾಸ’ರಾಗಿರುವುದರಿಂದ ಮುಕ್ತರಾಗಿ ‘ನೀತಿಗೆ ದಾಸರೋಪಾದಿ’ ದೇವರನ್ನು ಸೇವಿಸುವವರಾಗುವ ಪರಿವರ್ತನೆಯು ನಿಜವಾಗಿಯೂ ಮಹತ್ತರವಾದದ್ದಾಗಿದೆ. ಅಂಥ ಬದಲಾವಣೆಯನ್ನು ಮಾಡಿರುವ ಕೆಲವರ ಕುರಿತಾಗಿ ಪೌಲನು ಬರೆದುದು: “ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—ರೋಮಾಪುರ 6:17, 18; 1 ಕೊರಿಂಥ 6:11.
7. ಯಾವುದೇ ವಿಷಯದ ಕುರಿತಾಗಿ ಯೆಹೋವನ ದೃಷ್ಟಿಕೋನವೇನೆಂಬುದನ್ನು ತಿಳಿದುಕೊಂಡಿರುವುದು ಏಕೆ ಪ್ರಾಮುಖ್ಯವಾಗಿದೆ?
7 ಅಂಥ ಗಮನಾರ್ಹವಾದ ಪರಿವರ್ತನೆಯನ್ನು ಅನುಭವಿಸಲಿಕ್ಕೋಸ್ಕರ, ಯಾವುದೇ ಸಂಗತಿಯನ್ನು ದೇವರು ಹೇಗೆ ದೃಷ್ಟಿಸುತ್ತಾನೆಂಬುದರ ಕುರಿತಾಗಿ ನಾವು ಮೊದಲು ಕಲಿಯಬೇಕು. ಶತಮಾನಗಳ ಹಿಂದೆ, ಕೀರ್ತನೆಗಾರ ದಾವೀದನು ದೇವರಿಗೆ ಕಟ್ಟಾಸಕ್ತಿಯಿಂದ ಭಿನ್ನಹಿಸಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; . . . ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು.” (ಕೀರ್ತನೆ 25:4, 5) ಯೆಹೋವನು ದಾವೀದನಿಗೆ ಕಿವಿಗೊಟ್ಟನು, ಮತ್ತು ತನ್ನ ಆಧುನಿಕ ದಿನದ ಸೇವಕರು ಮಾಡುವ ಅಂಥ ಪ್ರಾರ್ಥನೆಗೂ ಅವನು ಉತ್ತರಕೊಡಬಲ್ಲನು. ದೇವರ ಮಾರ್ಗಗಳು ಹಾಗೂ ಆತನ ಸತ್ಯವು ಶುದ್ಧ ಮತ್ತು ಪವಿತ್ರವಾಗಿವೆ. ಆದುದರಿಂದ ಅವುಗಳ ಕುರಿತಾಗಿ ಮನನಮಾಡುವುದು, ನಾವು ಅಶುದ್ಧವಾದ ಶಾರೀರಿಕ ಕಾಮನೆಗಳನ್ನು ತೃಪ್ತಿಪಡಿಸುವ ಶೋಧನೆಗೆ ಒಳಗಾಗುವಾಗ ನಮಗೆ ಸಹಾಯಕಾರಿಯಾಗಿರುವುದು.
ದೇವರ ವಾಕ್ಯದ ಅತಿ ಪ್ರಾಮುಖ್ಯ ಪಾತ್ರ
8. ನಾವು ಬೈಬಲನ್ನು ಅಭ್ಯಾಸಮಾಡುವುದು ಏಕೆ ಅತ್ಯಗತ್ಯ?
8 ದೇವರ ವಾಕ್ಯವಾದ ಬೈಬಲ್, ಆತನ ಆತ್ಮದ ಉತ್ಪನ್ನವಾಗಿದೆ. ಹೀಗಿರುವುದರಿಂದ, ಆ ಆತ್ಮವು ನಮ್ಮ ಮೇಲೆ ಕಾರ್ಯನಡಿಸುವಂತೆ ಬಿಡುವ ಒಂದು ಪ್ರಮುಖ ವಿಧಾನವು, ಬೈಬಲನ್ನು ಸಾಧ್ಯವಿರುವಲ್ಲಿ ಪ್ರತಿದಿನ ಓದಿ ಅಭ್ಯಾಸಮಾಡುವುದಾಗಿದೆ. (1 ಕೊರಿಂಥ 2:10, 11; ಎಫೆಸ 5:18) ಬೈಬಲ್ ಸತ್ಯಗಳು ಮತ್ತು ತತ್ತ್ವಗಳನ್ನು ನಮ್ಮ ಹೃದಮನಗಳಲ್ಲಿ ತುಂಬಿಸಿಕೊಳ್ಳುವುದು, ನಮ್ಮ ಆತ್ಮಿಕತೆಯ ಮೇಲಾಗುವ ಆಕ್ರಮಣಗಳನ್ನು ಎದುರಿಸಿ ನಿಲ್ಲಲು ಸಹಾಯಮಾಡುವುದು. ಅನೈತಿಕತೆಯ ಶೋಧನೆಗಳನ್ನು ಎದುರಿಸುವಾಗ ದೇವಾರಾತ್ಮವು ಶಾಸ್ತ್ರೀಯ ಮರುಜ್ಞಾಪನಗಳನ್ನು ಮತ್ತು ಮಾರ್ಗದರ್ಶಕ ತತ್ವಗಳನ್ನು ನಮ್ಮ ನೆನಪಿಗೆ ತರುವುದು. ಇವು, ನಾವು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ನಮ್ಮ ದೃಢಸಂಕಲ್ಪವನ್ನು ಇನ್ನೂ ಹೆಚ್ಚು ಬಲಪಡಿಸುವವು. (ಕೀರ್ತನೆ 119:1, 2, 99; ಯೋಹಾನ 14:26) ಹೀಗಿರುವುದರಿಂದ ತಪ್ಪಾದ ಮಾರ್ಗಕ್ರಮವನ್ನು ಬೆನ್ನಟ್ಟುವುದರಿಂದ ನಾವು ವಂಚಿಸಲ್ಪಡುವುದಿಲ್ಲ.—2 ಕೊರಿಂಥ 11:3.
9. ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಕಾಪಾಡಲಿಕ್ಕಾಗಿರುವ ನಮ್ಮ ದೃಢಸಂಕಲ್ಪವನ್ನು ಬೈಬಲ್ ಅಭ್ಯಾಸವು ಹೇಗೆ ಬಲಪಡಿಸುತ್ತದೆ?
9 ಬೈಬಲ್ ಆಧಾರಿತ ಪ್ರಕಾಶನಗಳ ಸಹಾಯದಿಂದ ನಾವು ಶಾಸ್ತ್ರವಚನಗಳ ಪ್ರಾಮಾಣಿಕ ಮತ್ತು ಶ್ರದ್ಧಾಪೂರ್ವಕ ಅಭ್ಯಾಸವನ್ನು ಮುಂದುವರಿಸುವಾಗ, ದೇವರಾತ್ಮವು ನಮ್ಮ ಹೃದಮನಗಳನ್ನು ಪ್ರಭಾವಿಸಿ, ಯೆಹೋವನ ಮಟ್ಟಗಳಿಗಾಗಿರುವ ನಮ್ಮ ಗೌರವವು ಗಾಢವಾಗಿಸುವುದು. ದೇವರೊಂದಿಗಿನ ನಮ್ಮ ಸಂಬಂಧವು, ನಮ್ಮ ಜೀವಿತದಲ್ಲೇ ಅತಿ ಪ್ರಾಮುಖ್ಯವಾದ ಸಂಗತಿಯಾಗುವುದು. ನಮ್ಮ ಮುಂದೆ ಶೋಧನೆಯು ಬರುವಾಗ, ಆ ತಪ್ಪು ಕೃತ್ಯವನ್ನು ಮಾಡುವುದರಿಂದ ಎಷ್ಟು ಸುಖ ಸಿಗುವುದೆಂಬ ಯೋಚನೆಗಳೇ ಮನಸ್ಸಿಗೆ ಬಾರದಿರುವವು. ಅದಕ್ಕೆ ಬದಲಾಗಿ, ನಮ್ಮ ಮುಖ್ಯ ಚಿಂತೆಯು ಯೆಹೋವನಿಗೆ ಯಥಾರ್ಥರಾಗಿ ಉಳಿಯುವುದೇ ಆಗಿರುತ್ತದೆ. ಆತನೊಂದಿಗಿನ ನಮ್ಮ ಸಂಬಂಧಕ್ಕಾಗಿ ನಮ್ಮಲ್ಲಿರುವ ಗಾಢವಾದ ಗಣ್ಯತೆಯು, ಅದಕ್ಕೆ ಕುತ್ತನ್ನು ತರುವ ಅಥವಾ ಅಂತ್ಯಗೊಳಿಸುವ ಯಾವುದೇ ಪ್ರವೃತ್ತಿಯ ವಿರುದ್ಧ ಹೋರಾಡುವಂತೆ ನಮ್ಮನ್ನು ಪ್ರೇರಿಸುವುದು.
“ನಿಮ್ಮ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ!”
10. ಪವಿತ್ರಾತ್ಮದವುಗಳ ಮೇಲೆ ಮನಸ್ಸನ್ನಿಡಲಿಕ್ಕಾಗಿ, ಯೆಹೋವನ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದು ಏಕೆ ಆವಶ್ಯಕವಾಗಿದೆ?
10 ನಾವು ಪವಿತ್ರಾತ್ಮದವುಗಳ ಮೇಲೆ ನಮ್ಮ ಮನಸ್ಸನ್ನಿಡಬೇಕಾದರೆ, ದೇವರ ವಾಕ್ಯದ ಕುರಿತಾದ ಜ್ಞಾನವಷ್ಟೇ ಸಾಲದು. ರಾಜನಾದ ಸೊಲೊಮೋನನಿಗೂ ಯೆಹೋವನ ಮಟ್ಟಗಳೇನೆಂಬುದರ ಒಳ್ಳೆಯ ತಿಳುವಳಿಕೆಯಿತ್ತು. ಆದರೆ ತನ್ನ ಜೀವಿತದ ಕೊನೆಯ ಭಾಗದಲ್ಲಿ ಅವನು ಅವುಗಳಿಗನುಸಾರ ಜೀವಿಸಲು ತಪ್ಪಿಹೋದನು. (1 ಅರಸುಗಳು 4:29, 30; 11:1-6) ನಾವು ಆತ್ಮಿಕ ಮನಸ್ಸುಳ್ಳವರಾಗಿರುವಲ್ಲಿ, ಬೈಬಲ್ ಏನು ಹೇಳುತ್ತದೆಂಬುದರ ಬಗ್ಗೆ ಕೇವಲ ತಿಳಿದುಕೊಳ್ಳುವುದು ಅಗತ್ಯ ಎಂಬುದನ್ನು ಮಾತ್ರವಲ್ಲ, ಬದಲಾಗಿ ದೇವರ ನಿಯಮಗಳಿಗೆ ಪೂರ್ಣಹೃದಯದಿಂದ ವಿಧೇಯರಾಗುವ ಅಗತ್ಯವಿದೆಯೆಂಬುದನ್ನೂ ಗ್ರಹಿಸುವೆವು. ಇದರರ್ಥ, ನಾವು ಯೆಹೋವನ ಮಟ್ಟಗಳನ್ನು ನಿಷ್ಠೆಯಿಂದ ಪರಿಶೀಲಿಸಿ, ಅವುಗಳನ್ನು ಶ್ರದ್ಧೆಯಿಂದ ಅನುಸರಿಸಲು ಪ್ರಯತ್ನಿಸಬೇಕು. ಕೀರ್ತನೆಗಾರನಿಗೆ ಇದೇ ರೀತಿಯ ಮನೋಭಾವವಿತ್ತು. ಅವನು ಹೀಗೆ ಹಾಡಿದನು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.” (ಕೀರ್ತನೆ 119:97) ದೇವರ ಧರ್ಮಶಾಸ್ತ್ರವನ್ನು ಪಾಲಿಸುವುದೇ ನಮ್ಮ ಧ್ಯಾನವಾಗಿರುವಾಗ, ನಾವು ದೈವಿಕ ಗುಣಗಳನ್ನು ಪ್ರದರ್ಶಿಸುವಂತೆ ಪ್ರಚೋದಿಸಲ್ಪಡುತ್ತೇವೆ. (ಎಫೆಸ 5:1, 2) ನಿಸ್ಸಹಾಯಕರೆಂಬಂತೆ ತಪ್ಪುಮಾಡುವುದರ ಕಡೆಗೆ ಆಕರ್ಷಿಸಲ್ಪಡುವುದರ ಬದಲಿಗೆ ನಾವು ಪವಿತ್ರಾತ್ಮದ ಫಲವನ್ನು ಪ್ರದರ್ಶಿಸುವೆವು. ಅಷ್ಟುಮಾತ್ರವಲ್ಲದೆ, ಯೆಹೋವನನ್ನು ಸಂತೋಷಪಡಿಸಬೇಕೆಂಬ ಬಯಕೆಯು, ನಾವು ನೀಚ ‘ಶರೀರಭಾವದ ಅಭಿಲಾಷೆಗಳಿಂದ’ ದೂರಸರಿಯುವಂತೆ ಮಾಡುವುದು.—ಗಲಾತ್ಯ 5:16, 19-23; ಕೀರ್ತನೆ 15:1, 2.
11. ವ್ಯಭಿಚಾರವನ್ನು ನಿಷೇಧಿಸುವಂಥ ಯೆಹೋವನ ನಿಯಮವು, ನಮಗೆ ಒಂದು ಸಂರಕ್ಷಣೆಯಾಗಿದೆಯೆಂದು ನೀವು ಹೇಗೆ ವಿವರಿಸುವಿರಿ?
11 ಯೆಹೋವನ ಧರ್ಮಶಾಸ್ತ್ರಕ್ಕಾಗಿ ನಾವು ಆಳವಾದ ಗೌರವ ಮತ್ತು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು? ಒಂದು ವಿಧಾನವು, ಅವುಗಳ ಮೌಲ್ಯವನ್ನು ಜಾಗರೂಕತೆಯಿಂದ ಪರೀಕ್ಷಿಸುವ ಮೂಲಕವೇ. ಉದಾಹರಣೆಗೆ, ಲೈಂಗಿಕ ಸಂಬಂಧಗಳು ವಿವಾಹಬಂಧದೊಳಗೆ ಮಾತ್ರ ಇರಬೇಕೆಂದು ಹೇಳುವ ಮತ್ತು ವ್ಯಭಿಚಾರ ಹಾಗೂ ಹಾದರವನ್ನು ನಿಷೇಧಿಸುವ ದೇವರ ನಿಯಮವನ್ನು ಪರಿಗಣಿಸಿರಿ. (ಇಬ್ರಿಯ 13:4) ಆ ನಿಯಮಕ್ಕೆ ವಿಧೇಯರಾಗುವುದರಿಂದ ನಾವು ಯಾವುದಾದರೂ ಒಳಿತಿನಿಂದ ವಂಚಿತರಾಗಿದ್ದೇವೊ? ಒಬ್ಬ ಪ್ರಿಯ ಸ್ವರ್ಗೀಯ ತಂದೆಯಾಗಿರುವ ಆತನು, ನಮಗೆ ಪ್ರಯೋಜನಕರವಾಗಿರುವ ವಿಷಯವನ್ನು ನಮ್ಮಿಂದ ಕಿತ್ತುಕೊಳ್ಳುವ ನಿಯಮವನ್ನು ಕೊಡುವನೊ? ಖಂಡಿತವಾಗಿಯೂ ಇಲ್ಲ! ಯೆಹೋವನ ನೈತಿಕ ಮಟ್ಟಗಳಿಗನುಸಾರ ಜೀವಿಸದ ಎಷ್ಟೊ ಜನರ ಬಾಳುಗಳನ್ನು ಸ್ವಲ್ಪ ನೋಡಿರಿ. ಬೇಡವಾದಂಥ ಗರ್ಭಧಾರಣೆಗಳಿಂದಾಗಿ ಅನೇಕವೇಳೆ ಗರ್ಭಪಾತಗಳನ್ನು ಮಾಡಲಾಗುತ್ತದೆ ಅಥವಾ ಪ್ರಾಯಶಃ ಸಮಯಕ್ಕೆ ಮುಂಚಿನ ಮದುವೆಗಳು ನಡೆಯುತ್ತವೆ ಮತ್ತು ಅಸಂತೋಷವು ತುಂಬಿರುವ ವಿವಾಹಗಳು ಫಲಿಸುತ್ತವೆ. ಅನೇಕರು, ಒಬ್ಬ ಗಂಡನಿಲ್ಲದೆಯೊ ಹೆಂಡತಿಯಿಲ್ಲದೆಯೊ ಒಂದು ಮಗುವನ್ನು ಬೆಳೆಸಬೇಕಾಗುತ್ತದೆ. ಇನ್ನೂ ಹೆಚ್ಚಾಗಿ, ವ್ಯಭಿಚಾರವನ್ನು ನಡೆಸುವವರು, ರತಿ ರವಾನಿತ ರೋಗಗಳಿಗೆ ತುತ್ತಾಗುವ ಸಂಭಾವ್ಯತೆಗೆ ತಮ್ಮನ್ನು ಗುರಿಪಡಿಸುತ್ತಾರೆ. (1 ಕೊರಿಂಥ 6:18) ಮತ್ತು ಯೆಹೋವನ ಸೇವಕನೊಬ್ಬನು ವ್ಯಭಿಚಾರವನ್ನು ಮಾಡುವಲ್ಲಿ ಅದರ ಭಾವನಾತ್ಮಕ ಪರಿಣಾಮಗಳು, ಮನಕುಗ್ಗಿಸುವಂಥದ್ದು ಆಗಿರಬಲ್ಲವು. ಅಪರಾಧಿ ಮನಸ್ಸಾಕ್ಷಿಯ ತಿವಿತಗಳಿಂದಾಗಿ, ರಾತ್ರಿಗಳನ್ನು ನಿದ್ದೆಯಿಲ್ಲದೆ ಮತ್ತು ಮಾನಸಿಕ ಸಂಕಟದಲ್ಲಿ ಕಳೆಯಬೇಕಾಗಬಹುದು. (ಕೀರ್ತನೆ 32:3, 4; 51:3) ಹಾಗಾದರೆ, ವ್ಯಭಿಚಾರವನ್ನು ನಿಷೇಧಿಸುವಂಥ ಯೆಹೋವನ ನಿಯಮವು, ನಮ್ಮನ್ನು ಸಂರಕ್ಷಿಸಲಿಕ್ಕಾಗಿಯೇ ರಚಿಸಲ್ಪಟ್ಟಿತ್ತೆಂಬುದು ಸ್ಪಷ್ಟವಾಗುವುದಿಲ್ಲವೊ? ಹೌದು, ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನವಿದೆ!
ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿರಿ
12, 13. ಪಾಪಪೂರ್ಣ ಆಶೆಗಳು ದಾಳಿಯಿಡುವಾಗ ಪ್ರಾರ್ಥನೆಮಾಡುವುದು ಏಕೆ ಯಥೋಚಿತವಾಗಿದೆ?
12 ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದಕ್ಕಾಗಿ ಹೃತ್ಪೂರ್ವಕವಾದ ಪ್ರಾರ್ಥನೆಯು ಖಂಡಿತವಾಗಿಯೂ ಆವಶ್ಯಕ. ದೇವರಾತ್ಮದ ಸಹಾಯಕ್ಕಾಗಿ ಕೇಳುವುದು ಯಥೋಚಿತವಾಗಿದೆ, ಏಕೆಂದರೆ ಯೇಸು ಹೇಳಿದ್ದು: “ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:13) ನಮ್ಮ ಬಲಹೀನತೆಗಳ ಸಂಬಂಧದಲ್ಲಿ ಸಹಾಯಕ್ಕಾಗಿ ನಾವು ಆತನ ಆತ್ಮದ ಮೇಲೆ ಅವಲಂಬಿಸುತ್ತಿದ್ದೇವೆಂಬುದನ್ನು ನಾವು ಪ್ರಾರ್ಥನೆಯಲ್ಲಿ ತಿಳಿಸಬಲ್ಲೆವು. (ರೋಮಾಪುರ 8:26, 27) ಪಾಪಪೂರ್ಣ ಆಶೆಗಳು ಅಥವಾ ಮನೋಭಾವಗಳು ನಮ್ಮನ್ನು ಬಾಧಿಸುತ್ತಿವೆಯೆಂದು ಸ್ವತಃ ನಾವು ಗ್ರಹಿಸುವಲ್ಲಿ ಇಲ್ಲವೇ ಒಬ್ಬ ಪ್ರೀತಿಪರ ಜೊತೆ ವಿಶ್ವಾಸಿಯು ಇದನ್ನು ನಮ್ಮ ಗಮನಕ್ಕೆ ತರುವಲ್ಲಿ, ಪ್ರಾರ್ಥನೆಗಳನ್ನು ಮಾಡುವಾಗ ಈ ಸಮಸ್ಯೆಯನ್ನು ನಿರ್ದಿಷ್ಟವಾಗಿ ತಿಳಿಸಿ, ಇಂಥ ಪ್ರವೃತ್ತಿಗಳನ್ನು ಜಯಿಸುವಂತೆ ದೇವರ ಸಹಾಯಕ್ಕಾಗಿ ಕೇಳುವುದು ಒಳ್ಳೆಯದು.
13 ನ್ಯಾಯವೂ, ಶುದ್ಧವೂ, ಸದ್ಗುಣದ್ದೂ ಮತ್ತು ಕೀರ್ತಿಗೆ ಯೋಗ್ಯವಾದದ್ದಾಗಿರುವ ವಿಷಯಗಳ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುವಂತೆ ಯೆಹೋವನು ನಮಗೆ ಸಹಾಯಮಾಡಬಲ್ಲನು. ಮತ್ತು “ದೇವಶಾಂತಿಯು” ನಮ್ಮ ಹೃದಯಗಳನ್ನೂ ಮಾನಸಿಕ ಶಕ್ತಿಗಳನ್ನೂ ರಕ್ಷಿಸುವಂತೆ ಆತನಿಗೆ ಬೇಡಿಕೊಳ್ಳುವುದು ಎಷ್ಟು ತಕ್ಕದ್ದು! (ಫಿಲಿಪ್ಪಿ 4:6-8) ಆದುದರಿಂದ, “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ” ನಾವು ಯೆಹೋವನ ನೆರವಿಗಾಗಿ ಪ್ರಾರ್ಥಿಸೋಣ. (1 ತಿಮೊಥೆಯ 6:11-14) ನಮ್ಮ ಸ್ವರ್ಗೀಯ ತಂದೆಯ ಸಹಾಯದೊಂದಿಗೆ ಚಿಂತೆಗಳು ಮತ್ತು ಶೋಧನೆಗಳು ನಿಯಂತ್ರಣಮೀರಿದ ಹಂತದ ವರೆಗೆ ತಲಪದಿರುವವು. ಅದಕ್ಕೆ ಬದಲಾಗಿ, ನಮ್ಮ ಜೀವಿತಗಳು ದೇವದತ್ತ ನೆಮ್ಮದಿಯೊಂದಿಗೆ ತುಂಬಿರುವವು.
ಪವಿತ್ರಾತ್ಮವನ್ನು ದುಃಖಿಸಬೇಡಿರಿ
14. ದೇವರಾತ್ಮವು, ಶುದ್ಧತೆಗಾಗಿ ಒಂದು ಪ್ರೇರಣಾಶಕ್ತಿಯಾಗಿದೆ ಏಕೆ?
14 ಯೆಹೋವನ ಪ್ರೌಢ ಸೇವಕರು ಪೌಲನ ಸಲಹೆಯನ್ನು ವೈಯಕ್ತಿಕವಾಗಿ ಅನ್ವಯಿಸುತ್ತಾರೆ: “ಪವಿತ್ರಾತ್ಮವನ್ನು ನಂದಿಸಬೇಡಿರಿ.” (1 ಥೆಸಲೊನೀಕ 5:19) ದೇವರಾತ್ಮವು “ಪವಿತ್ರವಾದ ಆತ್ಮ”ವಾಗಿರುವುದರಿಂದ ಅದು ನಿರ್ಮಲವೂ, ಶುದ್ಧವೂ, ಪರಿಶುದ್ಧವಾದದ್ದೂ ಆಗಿದೆ. (ರೋಮಾಪುರ 1:4) ಹೀಗೆ ಆ ಆತ್ಮವು ನಮ್ಮ ಮೇಲೆ ಕಾರ್ಯನಡೆಸುವಾಗ ಅದು ಪವಿತ್ರತೆಗೆ ಅಥವಾ ಶುದ್ಧತೆಗೆ ಒಂದು ಬಲವಾದ ಪ್ರೇರಣಾಶಕ್ತಿಯಾಗಿರುತ್ತದೆ. ಅದು ನಾವು, ದೇವರಿಗೆ ವಿಧೇಯರಾಗಿರುತ್ತಾ ಶುದ್ಧವಾದ ಜೀವನ ರೀತಿಯಲ್ಲಿ ಮುಂದುವರಿಯುವಂತೆ ಸಹಾಯಮಾಡುತ್ತದೆ. (1 ಪೇತ್ರ 1:2) ಯಾವುದೇ ಅಶುದ್ಧ ಅಭ್ಯಾಸವು ಇರುವಲ್ಲಿ ಅದು ಆ ಪವಿತ್ರಾತ್ಮದ ತಾತ್ಸಾರಮಾಡುವಿಕೆಯಾಗಿದೆ ಮತ್ತು ವಿಪತ್ಕಾರಕ ಫಲಿತಾಂಶಗಳನ್ನು ತರಬಲ್ಲದು. ಹೇಗೆ?
15, 16. (ಎ) ನಾವು ದೇವರಾತ್ಮವನ್ನು ಹೇಗೆ ದುಃಖಪಡಿಸುತ್ತಿರಬಹುದು? (ಬಿ) ನಾವು ಯೆಹೋವನ ಆತ್ಮವನ್ನು ದುಃಖಪಡಿಸುತ್ತಿರುವುದರಿಂದ ಹೇಗೆ ದೂರವಿರಬಲ್ಲೆವು?
15 ಪೌಲನು ಬರೆದುದು: “ದೇವರ ಪವಿತ್ರಾತ್ಮನನ್ನು ದುಃಖಪಡಿಸ ಬೇಡಿರಿ; ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆಹೊಂದಿದ್ದೀರಲ್ಲಾ.” (ಎಫೆಸ 4:30) ಶಾಸ್ತ್ರವಚನಗಳು ಯೆಹೋವನ ಆತ್ಮವನ್ನು ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗಾಗಿರುವ ಒಂದು ಮುದ್ರೆ, ಅಥವಾ ‘ಸಂಚಕಾರವಾಗಿ’ ಗುರುತಿಸುತ್ತವೆ. ಮತ್ತು ಇದು ಅಮರವಾದ ಸ್ವರ್ಗೀಯ ಜೀವನವಾಗಿದೆ. (2 ಕೊರಿಂಥ 1:22; 1 ಕೊರಿಂಥ 15:50-57; ಪ್ರಕಟನೆ 2:10) ಅಭಿಷಿಕ್ತರು ಮತ್ತು ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯಿರುವ ಅವರ ಸಂಗಾತಿಗಳು ನಂಬಿಗಸ್ತಿಕೆಯ ಜೀವನವನ್ನು ನಡೆಸಲು ದೇವರಾತ್ಮವು ನಿರ್ದೇಶಿಸಬಲ್ಲದು ಮತ್ತು ಅವರು ಪಾಪಪೂರ್ಣ ಕೆಲಸಗಳಿಂದ ದೂರವಿರಲೂ ಸಹಾಯಮಾಡಬಲ್ಲದು.
16 ಅಸತ್ಯವನ್ನಾಡುವುದು, ಕಳ್ಳತನ, ನಾಚಿಕೆಗೆಟ್ಟ ನಡತೆ ಮುಂತಾದವುಗಳ ಕಡೆಗಿನ ಪ್ರವೃತ್ತಿಗಳ ವಿರುದ್ಧ ಅಪೊಸ್ತಲನು ಎಚ್ಚರಿಸಿದನು. ಅಂಥ ಕೆಲಸಗಳ ಕಡೆಗೆ ಆಕರ್ಷಿಸಲ್ಪಡುವಂತೆ ನಾವು ಬಿಟ್ಟುಕೊಡುವಲ್ಲಿ, ನಾವು ದೇವರ ವಾಕ್ಯದ ಆತ್ಮಪ್ರೇರಿತ ಸಲಹೆಯ ವಿರುದ್ಧ ಹೋಗುತ್ತಿರುವೆವು. (ಎಫೆಸ 4:17-29; 5:1-5) ಕಡಿಮೆಪಕ್ಷ ಸ್ವಲ್ಪಮಟ್ಟಿಗೆ ನಾವು ದೇವರಾತ್ಮವನ್ನು ದುಃಖಪಡಿಸುತ್ತಿರುವೆವು. ಇದನ್ನು ಮಾಡುವುದರಿಂದಲೇ ನಾವು ದೂರವಿರಲು ಬಯಸಬೇಕು. ಯೆಹೋವನ ವಾಕ್ಯದಲ್ಲಿರುವ ಸಲಹೆಯನ್ನು ನಮ್ಮಲ್ಲಿ ಯಾರೇ ಆಗಲಿ ಅಲಕ್ಷಿಸಲು ಆರಂಭಿಸುವಲ್ಲಿ, ಉದ್ದೇಶಪೂರ್ವಕ ಪಾಪ ಮತ್ತು ದೇವರ ಅನುಗ್ರಹವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದಕ್ಕೆ ನಡೆಸುವ ಮನೋಭಾವಗಳು ಅಥವಾ ಗುಣಲಕ್ಷಣಗಳು ನಮ್ಮಲ್ಲಿ ಬೆಳೆಯಲಾರಂಭಿಸಬಹುದು. (ಇಬ್ರಿಯ 6:4-6) ನಾವು ಈಗಲೇ ಯಾವುದೇ ಪಾಪವನ್ನು ಮಾಡದೇ ಇರಬಹುದಾದರೂ, ನಾವು ಹಾಗೆ ಮಾಡುವ ದಿಕ್ಕಿನತ್ತ ಹೋಗುತ್ತಿರುವ ಸಾಧ್ಯತೆಯಿದೆ. ಸತತವಾಗಿ ಆತ್ಮದ ಮಾರ್ಗದರ್ಶನಕ್ಕೆ ವಿರುದ್ಧವಾಗಿ ಹೋಗುವ ಮೂಲಕ ನಾವು ಅದನ್ನು ದುಃಖಪಡಿಸುವೆವು. ಮತ್ತು ಹೀಗೆ ನಾವು ಯೆಹೋವನನ್ನೂ ವಿರೋಧಿಸುತ್ತಿದ್ದು, ಆತನನ್ನು ದುಃಖಪಡಿಸುತ್ತಿರುವೆವು. ಏಕೆಂದರೆ ಆತನೇ ಪವಿತ್ರಾತ್ಮದ ಮೂಲನಾಗಿದ್ದಾನೆ. ದೇವರನ್ನು ಪ್ರೀತಿಸುತ್ತಿರುವವರೋಪಾದಿ, ನಾವೆಂದೂ ಹಾಗೆ ಮಾಡದಿರೋಣ. ಅದಕ್ಕೆ ಬದಲಾಗಿ, ಆತನ ಆತ್ಮವನ್ನು ದುಃಖಪಡಿಸದೇ, ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರ ಮೂಲಕ ಆತನ ಪವಿತ್ರ ನಾಮಕ್ಕೆ ಗೌರವವನ್ನು ತರಲು ಶಕ್ತರಾಗಿರುವಂತೆ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸೋಣ.
ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುತ್ತಾ ಇರಿ
17. ನಾವು ಇಡಬಹುದಾದ ಕೆಲವು ಆತ್ಮಿಕ ಗುರಿಗಳು ಯಾವವು, ಮತ್ತು ಅವುಗಳನ್ನು ತಲಪಲಿಕ್ಕಾಗಿ ಶ್ರಮಿಸುವುದು ಏಕೆ ವಿವೇಕಯುತವಾಗಿದೆ?
17 ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರ ಒಂದು ಗಮನಾರ್ಹ ವಿಧಾನವು, ಆತ್ಮಿಕ ಗುರಿಗಳನ್ನಿಟ್ಟು ಅವುಗಳನ್ನು ತಲಪಲು ಶ್ರಮಿಸುವುದೇ ಆಗಿದೆ. ನಮ್ಮ ಅಗತ್ಯಗಳು ಮತ್ತು ಪರಿಸ್ಥಿತಿಗಳಿಗನುಸಾರ, ನಮ್ಮ ಗುರಿಗಳಲ್ಲಿ ನಮ್ಮ ಅಧ್ಯಯನದ ರೂಢಿಗಳನ್ನು ಉತ್ತಮಗೊಳಿಸುವುದು, ಸಾರುವ ಕೆಲಸದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವುದು, ಅಥವಾ ಪೂರ್ಣ ಸಮಯದ ಪಯನೀಯರ್ ಸೇವೆ, ಬೆತೆಲ್ ಸೇವೆ, ಇಲ್ಲವೇ ಮಿಷನೆರಿ ಸೇವೆಯಂಥ ನಿರ್ದಿಷ್ಟ ಸೇವಾಸುಯೋಗವನ್ನು ತಲಪುವ ಗುರಿಗಳು ಸೇರಿರಬಹುದು. ಇದರಿಂದಾಗಿ ನಮ್ಮ ಮನಸ್ಸು ಆತ್ಮಿಕ ಅಭಿರುಚಿಗಳಿಂದ ತುಂಬಿರುವುದು ಮತ್ತು ಇದು ನಾವು ಮಾನವ ಬಲಹೀನತೆಗಳಿಗೆ ಮಣಿಯದಂತೆ ಇಲ್ಲವೇ ಈ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿರುವ ಪ್ರಾಪಂಚಿಕ ಗುರಿಗಳು ಮತ್ತು ಅಶಾಸ್ತ್ರೀಯ ಅಭಿಲಾಷೆಗಳಿಂದ ಪ್ರಚೋದಿಸಲ್ಪಡದಂತೆ ಸಹಾಯಮಾಡುವುದು. ಇದು ಖಂಡಿತವಾಗಿಯೂ ವಿವೇಕಯುತವಾದ ಮಾರ್ಗಕ್ರಮವಾಗಿದೆ, ಏಕೆಂದರೆ ಯೇಸು ಪ್ರೇರಿಸಿದ್ದು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬು ಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ. ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ.”—ಮತ್ತಾಯ 6:19-21.
18. ಈ ಕಡೇ ದಿವಸಗಳಲ್ಲಿ ನಾವು ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದು ಏಕೆ ತುಂಬ ಪ್ರಾಮುಖ್ಯವಾಗಿದೆ?
18 ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದು ಮತ್ತು ಲೌಕಿಕ ಆಸೆಗಳನ್ನು ಅದುಮಿಡುವುದು, ಈ “ಕಡೇ ದಿವಸಗಳಲ್ಲಿ” ಖಂಡಿತವಾಗಿಯೂ ವಿವೇಕಯುತ ಮಾರ್ಗಕ್ರಮವಾಗಿದೆ. (2 ತಿಮೊಥೆಯ 3:1-5) ಎಷ್ಟೆಂದರೂ, “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) ಉದಾಹರಣೆಗಾಗಿ, ಒಬ್ಬ ಕ್ರೈಸ್ತ ಯುವಕನು ಪೂರ್ಣ ಸಮಯದ ಸೇವೆಯ ಗುರಿಯನ್ನಿಟ್ಟು ಅದನ್ನು ಬೆನ್ನಟ್ಟುವಲ್ಲಿ, ಅದು ಅವನ ತರುಣಾವಸ್ಥೆ ಅಥವಾ ಎಳೆಯ ವಯಸ್ಕತನದ ಕಷ್ಟಕರ ವರ್ಷಗಳಲ್ಲಿ ಮಾರ್ಗದರ್ಶನದೋಪಾದಿ ಇರಬಹುದು. ಈ ವಿಷಯದಲ್ಲಿ ರಾಜಿಮಾಡಿಕೊಳ್ಳುವಂತೆ ಒತ್ತಾಯಿಸಲ್ಪಟ್ಟಾಗ, ಅಂಥ ವ್ಯಕ್ತಿಗೆ ತಾನು ಯೆಹೋವನ ಸೇವೆಯಲ್ಲಿ ಏನನ್ನು ಸಾಧಿಸಲು ಬಯಸುತ್ತೇನೆಂಬುದರ ಬಗ್ಗೆ ಸ್ಪಷ್ಟವಾದ ನೋಟವಿರುತ್ತದೆ. ಅಂಥ ಆತ್ಮಿಕ ವ್ಯಕ್ತಿಯು, ಪ್ರಾಪಂಚಿಕ ಬೆನ್ನಟ್ಟುವಿಕೆಗಳು ಅಥವಾ ಪಾಪವು ವಾಗ್ದಾನಿಸುವಂಥ ಯಾವುದೇ ಸುಖಕ್ಕೋಸ್ಕರ ಆತ್ಮಿಕ ಗುರಿಗಳನ್ನು ಕೈಬಿಡುವುದು, ಅವಿವೇಕತನವಾಗಿದೆ ಹೌದು ಮೂರ್ಖತನವಾಗಿದೆಯೆಂದು ಪರಿಗಣಿಸುವನು. ಆತ್ಮಿಕ ಪ್ರವೃತ್ತಿಯಿದ್ದ ಮೋಶೆಯು, “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು” ಎಂಬುದನ್ನು ನೆನಪಿಗೆ ತಂದುಕೊಳ್ಳಿರಿ. (ಇಬ್ರಿಯ 11:24, 25) ನಾವು ಎಳೆಯರಾಗಿರಲಿ, ವೃದ್ಧರಾಗಿರಲಿ, ಅಪರಿಪೂರ್ಣ ಶರೀರದ ಬದಲಿಗೆ ಪವಿತ್ರಾತ್ಮದವುಗಳ ಮೇಲೆ ಮನಸ್ಸನ್ನಿಡುವಾಗ ನಾವು ಅದೇ ರೀತಿಯ ಆಯ್ಕೆಯನ್ನು ಮಾಡುತ್ತೇವೆ.
19. ನಾವು ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರಿಂದ ಯಾವ ಪ್ರಯೋಜನಗಳಲ್ಲಿ ಆನಂದಿಸುವೆವು?
19 “ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ,” ಆದರೆ “ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ.” (ರೋಮಾಪುರ 8:6, 7) ನಾವು ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುತ್ತಾ ಇರುವಲ್ಲಿ, ನಾವು ತುಂಬ ಅಮೂಲ್ಯವಾದ ಶಾಂತಿಯನ್ನು ಅನುಭವಿಸುವೆವು. ನಮ್ಮ ಹೃದಯಗಳು ಮತ್ತು ಮಾನಸಿಕ ಶಕ್ತಿಗಳು, ನಮ್ಮ ಪಾಪಪೂರ್ಣ ಸ್ಥಿತಿಯ ಪ್ರಭಾವದಿಂದ ಹೆಚ್ಚು ಸುರಕ್ಷಿತವಾಗಿರುವುವು. ತಪ್ಪನ್ನು ಮಾಡುವ ಶೋಧನೆಗಳನ್ನು ನಾವು ಹೆಚ್ಚು ಉತ್ತಮವಾಗಿ ಪ್ರತಿರೋಧಿಸಲು ಶಕ್ತರಾಗಿರುವೆವು. ಶರೀರ ಹಾಗೂ ಆತ್ಮದ ನಡುವೆ ಸತತವಾಗಿ ಈಗಲೂ ನಡೆಯುತ್ತಾ ಇರುವ ಹೋರಾಟವನ್ನು ನಿಭಾಯಿಸಲು ನಮಗೆ ದೈವಿಕ ಸಹಾಯವು ಇರುವುದು.
20. ಶರೀರ ಮತ್ತು ಪವಿತ್ರಾತ್ಮದ ನಡುವಿನ ಹೋರಾಟದಲ್ಲಿ ಜಯಗೊಳಿಸುವುದು ಸಾಧ್ಯವಿದೆಯೆಂದು ನಾವು ಏಕೆ ನಿಶ್ಚಿತರಾಗಿರಬಲ್ಲೆವು?
20 ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದನ್ನು ಮುಂದುವರಿಸುವ ಮೂಲಕ, ನಾವು ಜೀವ ಹಾಗೂ ಪವಿತ್ರಾತ್ಮದ ಮೂಲನಾಗಿರುವ ಯೆಹೋವನೊಂದಿಗೆ ಒಂದು ಪ್ರಮುಖವಾದ ಸಂಬಂಧವನ್ನು ಕಾಪಾಡಿಕೊಂಡಿರುವೆವು. (ಕೀರ್ತನೆ 36:9; 51:11) ಯೆಹೋವ ದೇವರೊಂದಿಗಿನ ನಮ್ಮ ಸಂಬಂಧವನ್ನು ಕಡಿದುಹಾಕಲಿಕ್ಕಾಗಿ ಪಿಶಾಚನಾದ ಸೈತಾನನು ಮತ್ತು ಅವನ ಏಜೆಂಟರು ತಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುತ್ತಾರೆ. ಅವರು ನಮ್ಮ ಮನಸ್ಸುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ನಾವು ಹಾಗೆ ಬಿಟ್ಟುಕೊಡುವಲ್ಲಿ, ಅದು ಕಟ್ಟಕಡೆಗೆ ದೇವರೊಂದಿಗೆ ಶತ್ರುತ್ವ ಮತ್ತು ಮರಣಕ್ಕೆ ನಡೆಸುವುದೆಂದು ಅವರಿಗೆ ತಿಳಿದಿದೆ. ಆದರೆ ಶರೀರ ಮತ್ತು ಪವಿತ್ರಾತ್ಮದ ನಡುವಿನ ಈ ಹೋರಾಟದಲ್ಲಿ ನಾವು ವಿಜಯಿಗಳಾಗಸಾಧ್ಯವಿದೆ. ಇದು ಪೌಲನ ಅನುಭವವಾಗಿತ್ತು. ಏಕೆಂದರೆ ತನ್ನ ಸ್ವಂತ ಹೋರಾಟದ ಕುರಿತಾಗಿ ಬರೆಯುತ್ತಿರುವಾಗ, ಅವನು ಮೊದಲು ಕೇಳಿದ್ದು: “ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” ರಕ್ಷಣೆಯು ಸಾಧ್ಯ ಎಂಬುದನ್ನು ತೋರಿಸುತ್ತಾ, ಅವನು ಉದ್ಗರಿಸಿದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ರೋಮಾಪುರ 7:21-25) ಮಾನವ ಬಲಹೀನತೆಗಳನ್ನು ನಿಭಾಯಿಸಲಿಕ್ಕಾಗಿ ಸಾಧನವನ್ನು ಕೊಟ್ಟದ್ದಕ್ಕಾಗಿ ಮತ್ತು ನಿತ್ಯಜೀವದ ಅದ್ಭುತಕರ ನಿರೀಕ್ಷೆಯೊಂದಿಗೆ ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದನ್ನು ಸಾಧ್ಯಮಾಡಿರುವ ದೇವರಿಗೆ ಕ್ರಿಸ್ತನ ಮೂಲಕ ಉಪಕಾರವನ್ನು ಹೇಳುತ್ತೇವೆ.—ರೋಮಾಪುರ 6:23.
ನಿಮಗೆ ಜ್ಞಾಪಕವಿದೆಯೊ?
• ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವುದರ ಅರ್ಥವೇನು?
• ಯೆಹೋವನ ಆತ್ಮವು ನಮ್ಮ ಮೇಲೆ ಕೆಲಸಮಾಡುವಂತೆ ನಾವು ಹೇಗೆ ಅನುಮತಿಸಬಲ್ಲೆವು?
• ಪಾಪದ ವಿರುದ್ಧ ನಾವು ನಡೆಸುತ್ತಿರುವ ಹೋರಾಟದಲ್ಲಿ, ಬೈಬಲನ್ನು ಅಭ್ಯಾಸಮಾಡುವುದು, ಯೆಹೋವನ ನಿಯಮಕ್ಕೆ ವಿಧೇಯರಾಗುವುದು ಮತ್ತು ಆತನಿಗೆ ಪ್ರಾರ್ಥಿಸುವುದು ಏಕೆ ಆವಶ್ಯಕವೆಂದು ವಿವರಿಸಿರಿ.
• ಆತ್ಮಿಕ ಗುರಿಗಳನ್ನಿಡುವುದು ನಮ್ಮನ್ನು ಜೀವಿತದ ಮಾರ್ಗದಲ್ಲಿ ಇಡುವುದು ಹೇಗೆ?
[ಪುಟ 16ರಲ್ಲಿರುವ ಚಿತ್ರ]
ನಮ್ಮ ಆತ್ಮಿಕತೆಯ ಮೇಲಾಗುವ ದಾಳಿಗಳನ್ನು ಎದುರಿಸಿನಿಲ್ಲಲು ಬೈಬಲ್ ಅಭ್ಯಾಸ ಸಹಾಯಮಾಡುತ್ತದೆ
[ಪುಟ 17ರಲ್ಲಿರುವ ಚಿತ್ರ]
ಪಾಪಪೂರ್ಣ ಅಭಿಲಾಷೆಗಳನ್ನು ಜಯಿಸಲಿಕ್ಕಾಗಿ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುವುದು ಸೂಕ್ತವಾಗಿದೆ
[ಪುಟ 18ರಲ್ಲಿರುವ ಚಿತ್ರಗಳು]
ಪವಿತ್ರಾತ್ಮದವುಗಳ ಮೇಲೆ ಮನಸ್ಸಿಡುವಂತೆ ಆತ್ಮಿಕ ಗುರಿಗಳು ಸಹಾಯಮಾಡಬಲ್ಲವು