ಯೆಹೋವನು ಅನೇಕ ಪುತ್ರರನ್ನು ಮಹಿಮೆಗೆ ತರುತ್ತಾನೆ
“ಅನೇಕ ಪುತ್ರರನ್ನು ಮಹಿಮೆಗೆ ತರುವಲ್ಲಿ ಅವರ ರಕ್ಷಣಾಕರ್ತನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು [ದೇವರಿಗೆ] ಯುಕ್ತವಾಗಿತ್ತು.”—ಇಬ್ರಿಯ 2:10, NW.
1. ಮಾನವಕುಲದ ಸಂಬಂಧದಲ್ಲಿ ಯೆಹೋವನ ಉದ್ದೇಶವು ನೆರವೇರುವುದೆಂಬ ವಿಷಯದಲ್ಲಿ ನಾವು ಏಕೆ ನಿಶ್ಚಿತರಾಗಿರಬಲ್ಲೆವು?
ಯೆಹೋವನು ಭೂಮಿಯನ್ನು, ಅಂತ್ಯರಹಿತ ಜೀವಿತವನ್ನು ಅನುಭವಿಸುವ ಪರಿಪೂರ್ಣ ಮಾನವ ಕುಟುಂಬದ ಅನಂತ ಬೀಡಾಗಿರುವಂತೆ ಸೃಷ್ಟಿಸಿದನು. (ಪ್ರಸಂಗಿ 1:4; ಯೆಶಾಯ 45:12, 18) ನಿಜ, ನಮ್ಮ ಪೂರ್ವಜನಾದ ಆದಾಮನು ಪಾಪಮಾಡಿ, ಹೀಗೆ ಪಾಪ ಮತ್ತು ಮರಣವನ್ನು ತನ್ನ ಸಂತತಿಗೆ ದಾಟಿಸಿದನು. ಆದರೆ ಮಾನವಕುಲಕ್ಕಾಗಿರುವ ದೇವರ ಉದ್ದೇಶವು, ಆತನ ವಾಗ್ದತ್ತ ಸಂತಾನವಾದ ಯೇಸು ಕ್ರಿಸ್ತನ ಮುಖಾಂತರ ನೆರವೇರಿಸಲ್ಪಡುವುದು. (ಆದಿಕಾಂಡ 3:15; 22:18; ರೋಮಾಪುರ 5:12-21; ಗಲಾತ್ಯ 3:16) ಮಾನವಕುಲದ ಲೋಕಕ್ಕಾಗಿರುವ ಪ್ರೀತಿಯು, “ತನ್ನ ಒಬ್ಬನೇ ಮಗನನ್ನು” ಕೊಡುವಂತೆ ಯೆಹೋವನನ್ನು ಪ್ರಚೋದಿಸಿತು. ದೇವರು, “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಮತ್ತು “ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡು”ವಂತೆ, ಪ್ರೀತಿಯು ಯೇಸುವನ್ನು ಪ್ರಚೋದಿಸಿತು. (ಮತ್ತಾಯ 20:28) ಈ “ಅನುರೂಪವಾದ ಪ್ರಾಯಶ್ಚಿತ್ತ”ವು (NW), ಆದಾಮನು ಕಳೆದುಕೊಂಡ ಹಕ್ಕುಗಳನ್ನೂ ಪ್ರತೀಕ್ಷೆಗಳನ್ನೂ ಪುನಃ ಖರೀದಿಸಿ, ನಿತ್ಯಜೀವವನ್ನು ಸಾಧ್ಯಗೊಳಿಸುತ್ತದೆ.—1 ತಿಮೊಥೆಯ 2:5, 6; ಯೋಹಾನ 17:3.
2. ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಅನ್ವಯವು ಇಸ್ರಾಯೇಲಿನ ವಾರ್ಷಿಕ ದೋಷಪರಿಹಾರಕ ದಿನದಂದು ಹೇಗೆ ಮುನ್ಸೂಚಿಸಲ್ಪಟ್ಟಿತು?
2 ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಅನ್ವಯವು, ವಾರ್ಷಿಕ ದೋಷಪರಿಹಾರಕ ದಿನದಂದು ಮುನ್ಸೂಚಿಸಲ್ಪಟ್ಟಿತು. ಆ ದಿನದಂದು, ಇಸ್ರಾಯೇಲಿನ ಮಹಾ ಯಾಜಕನು ಪ್ರಥಮವಾಗಿ ಒಂದು ಹೋರಿಯನ್ನು ಪಾಪಬಲಿಯಾಗಿ ಅರ್ಪಿಸಿ, ಅದರ ರಕ್ತವನ್ನು ಸಾಕ್ಷಿಗುಡಾರದ ಅತಿಪವಿತ್ರ ಸ್ಥಾನದಲ್ಲಿರುವ ಪವಿತ್ರ ಮಂಜೂಷ ಮತ್ತು ತರುವಾಯ ದೇವಾಲಯದಲ್ಲಿ ಪ್ರಸ್ತುತಪಡಿಸಿದನು. ಇದನ್ನು ತನಗಾಗಿ, ತನ್ನ ಮನೆವಾರ್ತೆಗಾಗಿ ಹಾಗೂ ಲೇವಿಕುಲದ ಪರವಾಗಿ ಮಾಡಲಾಯಿತು. ತದ್ರೀತಿಯಲ್ಲಿ, ಯೇಸು ಕ್ರಿಸ್ತನು ತನ್ನ ರಕ್ತದ ಮೌಲ್ಯವನ್ನು, ಪ್ರಥಮವಾಗಿ ತನ್ನ ಆತ್ಮಿಕ “ಸಹೋದರ”ರ ಪಾಪಗಳನ್ನು ಮರೆಮಾಡಲಿಕ್ಕಾಗಿ ದೇವರಿಗೆ ಅರ್ಪಿಸಿದನು. (ಇಬ್ರಿಯ 2:12; 10:19-22; ಯಾಜಕಕಾಂಡ 16:6, 11-14) ದೋಷಪರಿಹಾರಕ ದಿನದಂದು, ಮಹಾ ಯಾಜಕನು ಒಂದು ಹೋತವನ್ನೂ ಪಾಪಬಲಿಯಾಗಿ ಅರ್ಪಿಸಿ, ಅದರ ರಕ್ತವನ್ನು ಅತಿಪವಿತ್ರ ಸ್ಥಾನದಲ್ಲಿ ಪ್ರಸ್ತುತಪಡಿಸಿದನು. ಹೀಗೆ, ಅವನು ಇಸ್ರಾಯೇಲಿನ 12 ಯಾಜಕೇತರ ಕುಲಗಳ ಪಾಪಗಳಿಗಾಗಿ ಪರಿಹಾರವನ್ನು ಮಾಡಿದನು. ತದ್ರೀತಿಯಲ್ಲಿ, ಮಹಾ ಯಾಜಕನಾದ ಯೇಸು ಕ್ರಿಸ್ತನು, ಮಾನವಕುಲದವರಲ್ಲಿ ಯಾರು ನಂಬಿಕೆಯನ್ನು ಪ್ರಯೋಗಿಸುತ್ತಾರೊ ಅವರ ಪರವಾಗಿ ತನ್ನ ಜೀವರಕ್ತವನ್ನು ಅನ್ವಯಿಸಿ, ಅವರ ಪಾಪಗಳನ್ನು ಅಳಿಸಿಬಿಡುವನು.—ಯಾಜಕಕಾಂಡ 16:15.
ಮಹಿಮೆಗೆ ತರಲ್ಪಟ್ಟದ್ದು
3. ಇಬ್ರಿಯ 2:9, 10ಕ್ಕನುಸಾರ, ದೇವರು 1,900 ವರ್ಷಗಳಿಂದ ಏನನ್ನು ಮಾಡುತ್ತಿದ್ದಾನೆ?
3 ಯೇಸುವಿನ “ಸಹೋದರ”ರ ಸಂಬಂಧದಲ್ಲಿ, ದೇವರು 1,900 ವರ್ಷಗಳಿಂದ ಗಮನಾರ್ಹವಾದ ಯಾವುದೊ ಸಂಗತಿಯನ್ನು ಮಾಡುತ್ತಿದ್ದಾನೆ. ಇದರ ಕುರಿತು ಅಪೊಸ್ತಲ ಪೌಲನು ಬರೆದುದು: “ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು, ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ. ಮೃತಪಟ್ಟದ್ದರಿಂದಲೇ ಮಾನಪ್ರಭಾವಗಳನ್ನು ಹೊಂದಿದನು. ಆತನು ದೇವರ ಕೃಪೆಯಿಂದ ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಲೇಬೇಕಾಗಿತ್ತು. ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ ಆತನು [ಯೆಹೋವ ದೇವರು] ಬಹು ಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ [“ಮಹಿಮೆಗೆ ತರುವಲ್ಲಿ,” NW] ಅವರ ರಕ್ಷಣಾಕರ್ತನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.” (ಇಬ್ರಿಯ 2:9, 10) ಯೇಸು ಕ್ರಿಸ್ತನು ರಕ್ಷಣಾಕರ್ತನಾಗಿದ್ದಾನೆ. ಅವನು ಭೂಮಿಯಲ್ಲಿ ಒಬ್ಬ ಮನುಷ್ಯನಾಗಿ ಜೀವಿಸುತ್ತಿದ್ದಾಗ ತಾನು ಅನುಭವಿಸಿದ ಕಷ್ಟಗಳ ಮೂಲಕ ಪರಿಪೂರ್ಣ ವಿಧೇಯತೆಯನ್ನು ಕಲಿತುಕೊಂಡನು. (ಇಬ್ರಿಯ 5:7-10) ದೇವರ ಆತ್ಮಿಕ ಪುತ್ರರೋಪಾದಿ ಜನಿಸಿದವರಲ್ಲಿ ಯೇಸು ಪ್ರಥಮನಾಗಿದ್ದನು.
4. ಯೇಸು ದೇವರ ಆತ್ಮಿಕ ಪುತ್ರನೋಪಾದಿ ಯಾವಾಗ ಮತ್ತು ಹೇಗೆ ಜನಿಸಿದನು?
4 ಯೇಸುವನ್ನು ಸ್ವರ್ಗೀಯ ಮಹಿಮೆಗೆ ತರುವ ಸಲುವಾಗಿ ಅವನಿಗೆ ತನ್ನ ಆತ್ಮಿಕ ಪುತ್ರನೋಪಾದಿ ಜನ್ಮಕೊಡಲು, ಯೆಹೋವನು ತನ್ನ ಪವಿತ್ರಾತ್ಮ ಇಲ್ಲವೆ ಕಾರ್ಯಕಾರಿ ಶಕ್ತಿಯನ್ನು ಉಪಯೋಗಿಸಿದನು. ಯೇಸು ಸ್ನಾನಿಕನಾದ ಯೋಹಾನನೊಂದಿಗೆ ಒಬ್ಬನೇ ಇದ್ದಾಗ, ದೇವರಿಗೆ ತನ್ನನ್ನು ಅರ್ಪಿಸಿಕೊಳ್ಳುವುದರ ಸಂಕೇತವಾಗಿ ಅವನು ನೀರಿನಲ್ಲಿ ಪೂರ್ಣವಾದ ನಿಮಜ್ಜನಕ್ಕೆ ಒಳಗಾದನು. ಲೂಕನ ಸುವಾರ್ತಾ ವೃತ್ತಾಂತವು ಹೇಳುವುದು: “ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಲ್ಲಿ ಆಕಾಶವು ತೆರೆಯಿತು; ಮತ್ತು ಪವಿತ್ರಾತ್ಮನು ದೇಹಾಕಾರವಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ—ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ ಎಂಬ ಆಕಾಶವಾಣಿ ಆಯಿತು.” (ಲೂಕ 3:21, 22) ಯೇಸುವಿನ ಮೇಲೆ ಪವಿತ್ರಾತ್ಮವು ಬರುವುದನ್ನು ಯೋಹಾನನು ಕಂಡನು ಮತ್ತು ಯೆಹೋವನು ಅವನ ಕುರಿತು ತನ್ನ ಪ್ರಿಯ ಪುತ್ರನೆಂದು ಮುಚ್ಚುಮರೆಯಿಲ್ಲದೆ ಹೇಳಿದ್ದನ್ನೂ ಕೇಳಿದನು. ಯೆಹೋವನು ಆ ಸಮಯದಲ್ಲಿ ಮತ್ತು ಪವಿತ್ರಾತ್ಮದ ಮೂಲಕ, ‘ಮಹಿಮೆಗೆ ತರಲ್ಪಟ್ಟ ಅನೇಕ ಪುತ್ರ’ರಲ್ಲಿ ಪ್ರಥಮವಾಗಿ ಯೇಸುವಿಗೆ ಜನ್ಮಕೊಟ್ಟನು.
5. ಯೇಸುವಿನ ಯಜ್ಞದಿಂದ ಪ್ರಯೋಜನಪಡೆಯುವವರಲ್ಲಿ ಪ್ರಥಮರು ಯಾರು, ಮತ್ತು ಅವರ ಸಂಖ್ಯೆಯೇನು?
5 ಯೇಸುವಿನ “ಸಹೋದರ”ರು ಅವನ ಯಜ್ಞದಿಂದ ಪ್ರಯೋಜನಪಟ್ಟಿರುವವರಲ್ಲಿ ಪ್ರಥಮರಾಗಿರುತ್ತಾರೆ. (ಇಬ್ರಿಯ 2:12-18) ದರ್ಶನದಲ್ಲಿ ಅಪೊಸ್ತಲ ಯೋಹಾನನು, ಅವರು ಕುರಿಮರಿಯಾದ ಪುನರುತ್ಥಿತ ಕರ್ತನಾದ ಯೇಸು ಕ್ರಿಸ್ತನೊಂದಿಗೆ ಸ್ವರ್ಗೀಯ ಚೀಯೋನ್ ಪರ್ವತದ ಮೇಲೆ ಈಗಾಗಲೇ ಮಹಿಮೆಯಲ್ಲಿರುವುದನ್ನು ಕಂಡನು. ಯೋಹಾನನು ಹೀಗೆ ಹೇಳುತ್ತಾ ಅವರ ಸಂಖ್ಯೆಯನ್ನೂ ತಿಳಿಯಪಡಿಸಿದನು: “ನಾನು ನೋಡಲಾಗಿ ಯಜ್ಞದ ಕುರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು. . . . ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದರು. ಇವರ ಬಾಯಲ್ಲಿ ಸುಳ್ಳುಸಿಕ್ಕಲಿಲ್ಲ; ಇವರು ನಿರ್ದೋಷಿಗಳಾಗಿದ್ದಾರೆ.” (ಪ್ರಕಟನೆ 14:1-5) ಹೀಗೆ, ಸ್ವರ್ಗದಲ್ಲಿ ‘ಮಹಿಮೆಗೆ ತರಲ್ಪಟ್ಟ ಅನೇಕ ಪುತ್ರರ’ ಒಟ್ಟುಮೊತ್ತವು ಕೇವಲ 1,44,001 ಆಗಿದೆ—ಯೇಸು ಮತ್ತು ಅವನ ಆತ್ಮಿಕ ಸಹೋದರರು.
“ದೇವರಿಂದ ಹುಟ್ಟಿದವನು”
6, 7. “ದೇವರಿಂದ ಹುಟ್ಟಿ”ದವರು ಯಾರು, ಮತ್ತು ಇದು ಅವರಿಗೆ ಯಾವ ಅರ್ಥದಲ್ಲಿದೆ?
6 ಯೆಹೋವನ ಮೂಲಕ ಜನಿತರಾದವರು, ‘ದೇವರಿಂದ ಹುಟ್ಟಿದವರು.’ ಅಂತಹ ವ್ಯಕ್ತಿಗಳನ್ನು ಸಂಬೋಧಿಸುತ್ತಾ, ಅಪೊಸ್ತಲ ಯೋಹಾನನು ಬರೆದುದು: “ದೇವರಿಂದ ಹುಟ್ಟಿದವನು ಪಾಪಮಾಡನು; ದೇವರ [ಯೆಹೋವನ] ಜೀವವು [“ಸಂತಾನೋತ್ಪಾದಕ ಶಕ್ತಿ,” NW] ಅವನಲ್ಲಿ ನೆಲೆಗೊಂಡದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡುವವನಾಗಿರಲಾರನು.” (1 ಯೋಹಾನ 3:9) ಈ “ಸಂತಾನೋತ್ಪಾದಕ ಶಕ್ತಿ”ಯು ದೇವರ ಪವಿತ್ರಾತ್ಮವಾಗಿದೆ. ಆತನ ವಚನದೊಂದಿಗೆ ಸೇರಿ ಕಾರ್ಯನಡೆಸುತ್ತಾ, ಅದು 1,44,000 ಮಂದಿಯಲ್ಲಿ ಪ್ರತಿಯೊಬ್ಬರಿಗೆ ಸ್ವರ್ಗೀಯ ನಿರೀಕ್ಷೆಗೆ “ಒಂದು ಹೊಸ ಜನನ”ವನ್ನು (NW) ನೀಡಿದೆ.—1 ಪೇತ್ರ 1:3-5, 23.
7 ಪರಿಪೂರ್ಣ ಮನುಷ್ಯನಾದ ಆದಾಮನು “ದೇವರ ಮಗ”ನಾಗಿದ್ದಂತೆಯೇ, ಯೇಸು ತನ್ನ ಮಾನವ ಜನನದಿಂದ ದೇವರ ಮಗನಾಗಿದ್ದನು. (ಲೂಕ 1:35; 3:38) ಆದರೆ ಯೇಸುವಿನ ದೀಕ್ಷಾಸ್ನಾನದ ತರುವಾಯ, “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂದು ಯೆಹೋವನು ಪ್ರಕಟಿಸಿದ್ದು ಮಹತ್ವದ್ದಾಗಿತ್ತು. (ಮಾರ್ಕ 1:11) ಪವಿತ್ರಾತ್ಮದ ಸುರಿಸುವಿಕೆಯನ್ನು ಜೊತೆಗೂಡಿ ಬಂದ ಈ ಪ್ರಕಟನೆಯ ಮೂಲಕ, ದೇವರು ಆ ಸಮಯದಲ್ಲಿ ಯೇಸುವನ್ನು ತನ್ನ ಆತ್ಮಿಕ ಪುತ್ರನಾಗಿ ಮುಂತಂದನೆಂಬುದು ಸ್ಪಷ್ಟವಾಯಿತು. ಸಾಂಕೇತಿಕವಾಗಿ, ಯೇಸುವಿಗೆ ಆಗ, ಸ್ವರ್ಗದಲ್ಲಿ ಮತ್ತೊಮ್ಮೆ ದೇವರ ಆತ್ಮಪುತ್ರನಂತೆ ಜೀವವನ್ನು ಪಡೆದುಕೊಳ್ಳುವ ಹಕ್ಕಿನೊಂದಿಗೆ “ಒಂದು ಹೊಸ ಜನನ”ವು ಕೊಡಲ್ಪಟ್ಟಿತು. ಅವನಂತೆ, ಅವನ 1,44,000 ಮಂದಿ ಆತ್ಮಿಕ ಸಹೋದರರು “ಹೊಸದಾಗಿ ಹುಟ್ಟಿರು”ತ್ತಾರೆ. (ಯೋಹಾನ 3:1-8; ಫೆಬ್ರವರಿ 15, 1993ರ ಕಾವಲಿನಬುರುಜು, ಪುಟಗಳು 3-6ನ್ನು ನೋಡಿರಿ.) ಅಲ್ಲದೆ ಯೇಸುವಿನಂತೆಯೇ ಅವರು ದೇವರಿಂದ ಅಭಿಷೇಕಿಸಲ್ಪಟ್ಟು, ಸುವಾರ್ತೆಯನ್ನು ಘೋಷಿಸುವಂತೆ ಆದೇಶಿಸಲ್ಪಟ್ಟಿದ್ದಾರೆ.—ಯೆಶಾಯ 61:1, 2; ಲೂಕ 4:16-21; 1 ಯೋಹಾನ 2:20.
ಆತ್ಮಜನಿತರಾದುದರ ಪುರಾವೆ
8. (ಎ) ಯೇಸುವಿನ ಸಂಬಂಧದಲ್ಲಿ ಆತ್ಮಜನನದ ಯಾವ ರುಜುವಾತ್ತಿತ್ತು? (ಬಿ) ಅವನ ಆದಿ ಶಿಷ್ಯರ ಸಂಬಂಧದಲ್ಲಿ ಆತ್ಮಜನನದ ಯಾವ ರುಜುವಾತ್ತಿತ್ತು?
8 ಯೇಸು ಆತ್ಮಜನಿತನಾಗಿದ್ದನೆಂಬುದಕ್ಕೆ ಪುರಾವೆಯಿತ್ತು. ಸ್ನಾನಿಕನಾದ ಯೋಹಾನನು, ಯೇಸುವಿನ ಮೇಲೆ ಆತ್ಮವು ಇಳಿದುಬರುವುದನ್ನು ನೋಡಿದನು ಮತ್ತು ಹೊಸದಾಗಿ ಅಭಿಷೇಕಿಸಲ್ಪಟ್ಟ ಮೆಸ್ಸೀಯನ ಆತ್ಮಿಕ ಪುತ್ರತ್ವದ ವಿಷಯದಲ್ಲಿ ದೇವರ ಪ್ರಕಟನೆಯನ್ನು ಕೇಳಿಸಿಕೊಂಡನು. ಆದರೆ ಯೇಸುವಿನ ಶಿಷ್ಯರಿಗೆ ತಾವು ಆತ್ಮಜನಿತರೆಂದು ಹೇಗೆ ಗೊತ್ತಾಗಲಿತ್ತು? ಒಳ್ಳೆಯದು, ಅವನ ಸ್ವರ್ಗಾರೋಹಣದ ದಿನದಂದು ಯೇಸು ಹೇಳಿದ್ದು: “ಯೋಹಾನನಂತೂ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗಾಗಿ ಪವಿತ್ರಾತ್ಮದಲ್ಲಿ ಸ್ನಾನವಾಗುವದು.” (ಅ. ಕೃತ್ಯಗಳು 1:5) ಯೇಸುವಿನ ಶಿಷ್ಯರು ಸಾ.ಶ. 33ರ ಪಂಚಾಶತ್ತಮದ ದಿನದಂದು ‘ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನ’ವನ್ನು ಪಡೆದುಕೊಂಡರು. ಆತ್ಮದ ಆ ಸುರಿಸುವಿಕೆಯು ‘ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದ’ ಮತ್ತು ಪ್ರತಿಯೊಬ್ಬ ಶಿಷ್ಯನ ಮೇಲೆ “ಉರಿಯಂತಿದ್ದ ನಾಲಿಗೆ”ಗಳೊಂದಿಗೆ ಜೊತೆಗೂಡಿತ್ತು. ಅತ್ಯಂತ ಗಮನಾರ್ಹವಾದ ಸಂಗತಿಯು, ‘ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತಾಡುವ’ ಶಿಷ್ಯರ ಸಾಮರ್ಥ್ಯವಾಗಿತ್ತು. ಹೀಗೆ, ದೇವರ ಪುತ್ರರೋಪಾದಿ ಸ್ವರ್ಗೀಯ ಮಹಿಮೆಗೆ ನಡೆಸುವ ದಾರಿಯು ಕ್ರಿಸ್ತನ ಹಿಂಬಾಲಕರಿಗೆ ತೆರೆಯಲ್ಪಟ್ಟಿತ್ತೆಂಬುದಕ್ಕೆ ದೃಶ್ಯ ಹಾಗೂ ಶ್ರವ್ಯ ಪುರಾವೆಯಿತ್ತು.—ಅ. ಕೃತ್ಯಗಳು 2:1-4, 14-21; ಯೋವೇಲ 2:28, 29.
9. ಸಮಾರ್ಯದವರು, ಕೊರ್ನೇಲಿಯನು ಮತ್ತು ಪ್ರಥಮ ಶತಮಾನದ ಇತರರು ಆತ್ಮಜನಿತರಾಗಿದ್ದರೆಂಬುದಕ್ಕೆ ಯಾವ ರುಜುವಾತಿತ್ತು?
9 ಸ್ವಲ್ಪ ಸಮಯದ ತರುವಾಯ, ಸೌವಾರ್ತಿಕನಾದ ಫಿಲಿಪ್ಪನು ಸಮಾರ್ಯದಲ್ಲಿ ಸಾರಿದನು. ಸಮಾರ್ಯದವರು ಅವನ ಸಂದೇಶವನ್ನು ಸ್ವೀಕರಿಸಿ ದೀಕ್ಷಾಸ್ನಾನ ಪಡೆದುಕೊಂಡರಾದರೂ, ದೇವರು ಅವರಿಗೆ ಆತನ ಪುತ್ರರೋಪಾದಿ ಜನ್ಮನೀಡಿದ್ದನೆಂಬುದಕ್ಕೆ ಅವರಲ್ಲಿ ಪ್ರಮಾಣವಿರಲಿಲ್ಲ. ಅಪೊಸ್ತಲರಾದ ಪೇತ್ರ ಯೋಹಾನರು ಪ್ರಾರ್ಥಿಸಿ, ಆ ವಿಶ್ವಾಸಿಗಳ ಮೇಲೆ ತಮ್ಮ ಕೈಗಳನ್ನಿಟ್ಟಾಗ, ವೀಕ್ಷಕರಿಗೆ ವ್ಯಕ್ತವಾದಂತಹ ಯಾವುದೊ ವಿಧದಲ್ಲಿ “ಅವರು ಪವಿತ್ರಾತ್ಮ ವರವನ್ನು ಹೊಂದಿದರು.” (ಅ. ಕೃತ್ಯಗಳು 8:4-25) ದೇವರ ಪುತ್ರರಂತೆ ವಿಶ್ವಾಸಿ ಸಮಾರ್ಯದವರು ಆತ್ಮಜನಿತರಾಗಿದ್ದರೆಂಬುದಕ್ಕೆ ಇದು ಪುರಾವೆಯಾಗಿತ್ತು. ತದ್ರೀತಿಯಲ್ಲಿ ಸಾ.ಶ. 36ರಲ್ಲಿ, ಕೊರ್ನೇಲಿಯನು ಮತ್ತು ಇತರ ಅನ್ಯರು ದೇವರ ಸತ್ಯವನ್ನು ಸ್ವೀಕರಿಸಿದರು. ಪೇತ್ರ ಮತ್ತು ಅವನನ್ನು ಜೊತೆಗೂಡಿದ್ದ ಯೆಹೂದಿ ವಿಶ್ವಾಸಿಗಳು, “ಅವರು ನಾನಾ ಭಾಷೆಗಳನ್ನಾಡುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು . . . ಕೇಳಿದಾಗ . . . ಅನ್ಯಜನಗಳಿಗೂ ಪವಿತ್ರಾತ್ಮದಾನ ಮಾಡಲ್ಪಟ್ಟಿದೆಯಲ್ಲಾ ಎಂದು ಅತ್ಯಾಶ್ಚರ್ಯಪಟ್ಟರು.” (ಅ. ಕೃತ್ಯಗಳು 10:44-48) ಪ್ರಥಮ ಶತಮಾನದ ಅನೇಕ ಕ್ರೈಸ್ತರು, ನಾನಾ ಭಾಷೆಗಳಲ್ಲಿ ಮಾತಾಡುವಂತಹ “ಆತ್ಮದ ವರಗಳನ್ನು” (NW) ಪಡೆದುಕೊಂಡರು. (1 ಕೊರಿಂಥ 14:12, 32) ಹೀಗೆ ಅವರು ಆತ್ಮಜನಿತರಾಗಿದ್ದರೆಂಬುದಕ್ಕೆ ಈ ವ್ಯಕ್ತಿಗಳಿಗೆ ಸ್ಪಷ್ಟವಾದ ಪ್ರಮಾಣವು ದೊರಕಿತು. ಆದರೆ ತದನಂತರದ ಕ್ರೈಸ್ತರಿಗೆ ತಾವು ಆತ್ಮಜನಿತರಾಗಿದ್ದೇವೊ ಇಲ್ಲವೊ ಎಂಬುದು ಹೇಗೆ ಗೊತ್ತಾಗಲಿತ್ತು?
ಆತ್ಮದ ಸಾಕ್ಷಿ
10, 11. ರೋಮಾಪುರ 8:15-17ರ ಆಧಾರದ ಮೇಲೆ, ಯೇಸುವಿನ ಸಹಬಾಧ್ಯಸ್ಥರಾಗಿರುವವರಿಗೆ ಆತ್ಮವು ಸಾಕ್ಷಿನೀಡುತ್ತದೆಂಬುದನ್ನು ನೀವು ಹೇಗೆ ವಿವರಿಸುವಿರಿ?
10 ತಮಗೆ ದೇವರ ಆತ್ಮವಿದೆಯೆಂಬುದಕ್ಕೆ ಎಲ್ಲ 1,44,000 ಮಂದಿ ಅಭಿಷಿಕ್ತ ಕ್ರೈಸ್ತರಲ್ಲಿ ಖಂಡಿತವಾದ ಪ್ರಮಾಣವಿದೆ. ಈ ಸಂಬಂಧದಲ್ಲಿ, ಪೌಲನು ಬರೆದುದು: “ನೀವು . . . ಮಗನ ಭಾವವನ್ನು ಹೊಂದಿದವರಾಗಿದ್ದೀರಿ. ಈ ಭಾವದಿಂದ ನಾವು ದೇವರನ್ನು ಅಪ್ಪಾ, ತಂದೆಯೇ, ಎಂದು ಕೂಗುತ್ತೇವೆ. ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.” (ರೋಮಾಪುರ 8:15-17) ಅಭಿಷಿಕ್ತ ಕ್ರೈಸ್ತರಿಗೆ ತಮ್ಮ ಸ್ವರ್ಗೀಯ ತಂದೆಯ ಕಡೆಗೆ ಪುತ್ರ ಮನೋಭಾವ, ಪುತ್ರತ್ವದ ಪ್ರಬಲವಾದ ಪ್ರಜ್ಞೆಯಿದೆ. (ಗಲಾತ್ಯ 4:6, 7) ಅವರು ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಸಹಬಾಧ್ಯಸ್ಥರೋಪಾದಿ ದೇವರಿಂದ ಆತ್ಮಿಕ ಪುತ್ರತ್ವಕ್ಕೆ ಜನಿತರಾಗಿದ್ದಾರೆಂಬ ವಿಷಯದಲ್ಲಿ ಖಂಡಿತವಾಗಿಯೂ ನಿಶ್ಚಿತರಾಗಿದ್ದಾರೆ. ಇದರಲ್ಲಿ ಯೆಹೋವನ ಪವಿತ್ರಾತ್ಮವು ಸ್ಪಷ್ಟವಾದ ಪಾತ್ರವನ್ನು ವಹಿಸುತ್ತದೆ.
11 ದೇವರ ಪವಿತ್ರಾತ್ಮದ ಪ್ರಭಾವದ ಕೆಳಗೆ, ಅಭಿಷಿಕ್ತರ ಆತ್ಮ ಇಲ್ಲವೆ ಪ್ರಬಲವಾದ ಮನೋಭಾವವು, ಸ್ವರ್ಗೀಯ ನಿರೀಕ್ಷೆಯ ಕುರಿತು ದೇವರ ವಾಕ್ಯವು ಏನನ್ನು ಹೇಳುತ್ತದೊ ಅದಕ್ಕೆ ಸಕಾರಾತ್ಮಕವಾದ ವಿಧದಲ್ಲಿ ಪ್ರತಿಕ್ರಿಯಿಸುವಂತೆ ಅವರನ್ನು ಪ್ರಚೋದಿಸುತ್ತದೆ. ದೃಷ್ಟಾಂತಕ್ಕಾಗಿ, ಯೆಹೋವನ ಆತ್ಮಿಕ ಮಕ್ಕಳ ಕುರಿತಾಗಿ ಶಾಸ್ತ್ರಗಳು ಹೇಳುವ ವಿಷಯವನ್ನು ಅವರು ಓದುವಾಗ, ಅಂತಹ ಮಾತುಗಳು ಅವರಿಗೇ ಅನ್ವಯಿಸುತ್ತವೆ ಎಂಬುದನ್ನು ಅವರು ಸ್ವಪ್ರೇರಣೆಯಿಂದಲೇ ಅಂಗೀಕರಿಸುತ್ತಾರೆ. (1 ಯೋಹಾನ 3:2) ತಾವು “ಕ್ರಿಸ್ತ ಯೇಸುವಿನಲ್ಲಿ” ಮತ್ತು ಅವನ ಮರಣದಲ್ಲಿ “ದೀಕ್ಷಾಸ್ನಾನ” ಹೊಂದಿದ್ದೇವೆಂದು ಅವರಿಗೆ ಗೊತ್ತಿದೆ. (ರೋಮಾಪುರ 6:3) ತಾವು ಯೇಸುವಿನಂತೆ ಮರಣಹೊಂದಿ, ಸ್ವರ್ಗೀಯ ಮಹಿಮೆಗೆ ಪುನರುತ್ಥಿತರಾಗಲಿರುವ ದೇವರ ಆತ್ಮಿಕ ಪುತ್ರರೆಂಬುದು, ಅವರ ದೃಢ ವಿಶ್ವಾಸವಾಗಿದೆ.
12. ದೇವರ ಆತ್ಮವು ಅಭಿಷಿಕ್ತ ಕ್ರೈಸ್ತರಲ್ಲಿ ಏನನ್ನು ಹುಟ್ಟಿಸಿದೆ?
12 ಆತ್ಮಿಕ ಪುತ್ರತ್ವಕ್ಕೆ ಜನಿತರಾಗುವುದು, ಬೆಳೆಸಿಕೊಂಡ ಬಯಕೆಯಲ್ಲ. ಆತ್ಮಜನಿತರು, ಭೂಮಿಯ ಮೇಲಿರುವ ಸದ್ಯದ ಕಷ್ಟತೊಂದರೆಗಳಿಂದ ಸಂಕಟಪಡುವ ಕಾರಣದಿಂದಾಗಿ ಸ್ವರ್ಗಕ್ಕೆ ಹೋಗಬಯಸುವುದಿಲ್ಲ. (ಯೋಬ 14:1) ಬದಲಿಗೆ, ಸಾಮಾನ್ಯವಾಗಿ ಮಾನವರಿಗೆ ಅಸಾಧಾರಣವಾಗಿರುವ ಒಂದು ನಿರೀಕ್ಷೆ ಹಾಗೂ ಬಯಕೆಯನ್ನು, ಯೆಹೋವನ ಆತ್ಮವು ನಿಜವಾಗಿಯೂ ಅಭಿಷಿಕ್ತರಾದವರಲ್ಲಿ ಹುಟ್ಟಿಸಿದೆ. ಮಾನವ ಪರಿಪೂರ್ಣತೆಯಲ್ಲಿ ಒಂದು ಪ್ರಮೋದವನ್ಯ ಭೂಮಿಯ ಮೇಲೆ ಆನಂದಿತ ಕುಟುಂಬ ಹಾಗೂ ಮಿತ್ರರಿಂದ ಸುತ್ತುವರಿಯಲ್ಪಟ್ಟ ನಿತ್ಯಜೀವವು ಅದ್ಭುತಕರವಾಗಿರುವುದೆಂದು ಇಂತಹ ಜನಿತರಿಗೆ ಗೊತ್ತಿದೆ. ಹಾಗಿದ್ದರೂ, ಅಂತಹ ಜೀವಿತವು ಅವರ ಹೃದಯಗಳ ಪ್ರಧಾನ ಬಯಕೆಯಾಗಿರುವುದಿಲ್ಲ. ಅಭಿಷಿಕ್ತರಲ್ಲಿ ಎಷ್ಟೊಂದು ಬಲವಾದ ಸ್ವರ್ಗೀಯ ನಿರೀಕ್ಷೆಯಿದೆಯೆಂದರೆ, ಅವರು ಎಲ್ಲ ಭೂನಿರೀಕ್ಷೆಗಳನ್ನು ಮತ್ತು ಒಲವುಗಳನ್ನು ಮನಃಪೂರ್ವಕವಾಗಿ ತ್ಯಾಗಮಾಡುತ್ತಾರೆ.—2 ಪೇತ್ರ 1:13, 14.
13. 2 ಕೊರಿಂಥ 5:1-5ಕ್ಕನುಸಾರ, ಪೌಲನ ‘ಅಪೇಕ್ಷೆ’ಯು ಏನಾಗಿತ್ತು, ಮತ್ತು ಆತ್ಮಜನಿತರ ವಿಷಯದಲ್ಲಿ ಇದು ಏನನ್ನು ಸೂಚಿಸುತ್ತದೆ?
13 ಸ್ವರ್ಗೀಯ ಜೀವಿತದ ದೇವದತ್ತ ನಿರೀಕ್ಷೆಯು ಅಂತಹವರಲ್ಲಿ ಎಷ್ಟು ಬಲವಾಗಿದೆಯೆಂದರೆ, ಅವರ ಭಾವನೆಗಳು ಹೀಗೆ ಬರೆದ ಪೌಲನ ಭಾವನೆಗಳಂತಿವೆ: “ಭೂಮಿಯ ಮೇಲಿರುವ ನಮ್ಮ ಮನೆಯು ಅಂದರೆ ನಮ್ಮ ದೇಹವೆಂಬ ಗುಡಾರವು ಕಿತ್ತುಹಾಕಲ್ಪಟ್ಟರೂ ದೇವರಿಂದುಂಟಾದ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು. ಅದು ಕೈಯಿಂದ ಕಟ್ಟಿದ ಮನೆಯಾಗಿರದೆ ನಿತ್ಯವಾಗಿರುವಂಥದಾಗಿದೆ. ನಾವು ಈಗಿನ ದೇಹದಲ್ಲಿರುವ ವರೆಗೂ ನರಳುತ್ತೇವೆ. ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ನಾವು ದೇಹದ ಮೇಲೆ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತೇವೆ, ಅಂದರೆ ಆ ದಿನದಲ್ಲಿ ನಾವು ಇನ್ನೂ ದೇಹದಲ್ಲಿಯೇ ಇದ್ದರೆ ಆ ನಿವಾಸವನ್ನು ದೇಹದ ಮೇಲೆಯೇ ಧರಿಸಿಕೊಳ್ಳುವೆವು. ಈ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಇದು ಕಳಚಿಹೋಗಬೇಕೆಂಬದು ನಮ್ಮ ಇಷ್ಟವಲ್ಲ; ಮರ್ತ್ಯವಾದದ್ದು ನುಂಗಿಹೋಗಿ ಜೀವವೊಂದೇ ಉಳಿಯುವಂತೆ ಈ ಗುಡಾರದ ಮೇಲೆ ಆ ನಿವಾಸವನ್ನು ಧರಿಸಿಕೊಳ್ಳಬೇಕೆಂಬದೇ ನಮ್ಮ ಇಷ್ಟ. ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಮಾಡಿರುವವನು ದೇವರೇ; ಆತನು ಪವಿತ್ರಾತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.” (2 ಕೊರಿಂಥ 5:1-5) ಒಬ್ಬ ಅಮರ ಆತ್ಮಜೀವಿಯಾಗಿ ಸ್ವರ್ಗಕ್ಕೆ ಪುನರುತ್ಥಾನಹೊಂದುವುದು ಪೌಲನ ‘ಅಪೇಕ್ಷೆ’ಯಾಗಿತ್ತು. ಅವನು ಮಾನವ ದೇಹವನ್ನು ಸೂಚಿಸುತ್ತಾ, ಕುಸಿದುಬೀಳಬಲ್ಲ ಒಂದು ಗುಡಾರ—ಒಂದು ಮನೆಗೆ ಹೋಲಿಸುವಾಗ ದುರ್ಬಲ ಹಾಗೂ ತಾತ್ಕಾಲಿಕ ನಿವಾಸ—ದ ರೂಪಕವನ್ನು ಉಪಯೋಗಿಸಿದನು. ಬರಲಿರುವ ಸ್ವರ್ಗೀಯ ಜೀವಿತದ ಸಂಕೇತವಾಗಿ ಪವಿತ್ರಾತ್ಮವಿರುವ ಕ್ರೈಸ್ತರು, ಮರ್ತ್ಯ, ಮಾಂಸಿಕ ಶರೀರವುಳ್ಳವರಾಗಿ ಭೂಮಿಯ ಮೇಲೆ ಜೀವಿಸುತ್ತಿರುವುದಾದರೂ, “ದೇವರಿಂದುಂಟಾದ ಒಂದು ಕಟ್ಟಡ”ಕ್ಕಾಗಿ, ಒಂದು ಅಮರವಾದ, ನಶಿಸಿಹೋಗದ ಶರೀರಕ್ಕಾಗಿ ಎದುರುನೋಡುತ್ತಾರೆ. (1 ಕೊರಿಂಥ 15:50-53) ಪೌಲನಂತೆ, ಅವರು ಮನಃಪೂರ್ವಕವಾಗಿ ಹೀಗೆ ಹೇಳಸಾಧ್ಯವಿದೆ: “ನಾವು ಧೈರ್ಯವುಳ್ಳವರಾಗಿದ್ದು [ಮಾನವ] ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿರುವದೇ [ಸ್ವರ್ಗದಲ್ಲಿ] ಉತ್ತಮವೆಂದು ಎಣಿಸುತ್ತೇವೆ.”—2 ಕೊರಿಂಥ 5:8.
ವಿಶೇಷವಾದ ಒಡಂಬಡಿಕೆಗಳೊಳಗೆ ತೆಗೆದುಕೊಳ್ಳಲ್ಪಟ್ಟದ್ದು
14. ಜ್ಞಾಪಕ ಆಚರಣೆಯನ್ನು ಸ್ಥಾಪಿಸುವಾಗ, ಯಾವ ಒಡಂಬಡಿಕೆಯ ಕುರಿತು ಯೇಸು ಪ್ರಥಮವಾಗಿ ತಿಳಿಸಿದನು, ಮತ್ತು ಆತ್ಮಿಕ ಇಸ್ರಾಯೇಲ್ಯರ ಸಂಬಂಧದಲ್ಲಿ ಅದು ಯಾವ ಪಾತ್ರವನ್ನು ವಹಿಸುತ್ತದೆ?
14 ಆತ್ಮಜನಿತ ಕ್ರೈಸ್ತರು, ತಾವು ಎರಡು ವಿಶೇಷವಾದ ಒಡಂಬಡಿಕೆಗಳೊಳಗೆ ತೆಗೆದುಕೊಳ್ಳಲ್ಪಟ್ಟಿದ್ದೇವೆಂಬ ವಿಷಯದಲ್ಲಿ ನಿಶ್ಚಿತರಾಗಿದ್ದಾರೆ. ಸನ್ನಿಹಿತವಾದ ತನ್ನ ಮರಣದ ಜ್ಞಾಪಕವನ್ನು ಸ್ಥಾಪಿಸಲು, ಯೇಸು ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಉಪಯೋಗಿಸಿ, ದ್ರಾಕ್ಷಾಮದ್ಯದ ಪಾತ್ರೆಯ ಕುರಿತು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ” ಎಂದು ಹೇಳಿದಾಗ, ಆ ಒಡಂಬಡಿಕೆಗಳಲ್ಲಿ ಒಂದರ ಕುರಿತು ತಿಳಿಸಿದನು. (ಲೂಕ 22:20; 1 ಕೊರಿಂಥ 11:25) ಈ ಹೊಸ ಒಡಂಬಡಿಕೆಯ ಭಾಗಿಗಳು ಯಾರು? ಯೆಹೋವ ದೇವರು ಮತ್ತು ಆತ್ಮಿಕ ಇಸ್ರಾಯೇಲಿನ ಸದಸ್ಯರು—ಯಾರನ್ನು ಯೆಹೋವನು ಸ್ವರ್ಗೀಯ ಮಹಿಮೆಗೆ ತರಲು ಉದ್ದೇಶಿಸುತ್ತಾನೋ ಅವರು. (ಯೆರೆಮೀಯ 31:31-34; ಗಲಾತ್ಯ 6:15, 16; ಇಬ್ರಿಯ 12:22-24) ಯೇಸುವಿನ ಸುರಿಸಲ್ಪಟ್ಟ ರಕ್ತದ ಮೂಲಕ ಜಾರಿಗೆ ಬಂದ ಈ ಹೊಸ ಒಡಂಬಡಿಕೆಯು, ಯೆಹೋವನ ನಾಮಕ್ಕಾಗಿ ರಾಷ್ಟ್ರಗಳಿಂದ ಒಂದು ಜನಾಂಗವನ್ನು ಬೇರ್ಪಡಿಸಿ, ಈ ಆತ್ಮಜನಿತ ಕ್ರೈಸ್ತರನ್ನು ಅಬ್ರಹಾಮನ “ಸಂತತಿ”ಯವರನ್ನಾಗಿ ಮಾಡುತ್ತದೆ. (ಗಲಾತ್ಯ 3:26-29; ಅ. ಕೃತ್ಯಗಳು 15:14) ಸ್ವರ್ಗದಲ್ಲಿ ಅಮರ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವ ಮೂಲಕ, ಎಲ್ಲ ಆತ್ಮಿಕ ಇಸ್ರಾಯೇಲ್ಯರು ಮಹಿಮೆಗೆ ತರಲ್ಪಡುವಂತೆ ಹೊಸ ಒಡಂಬಡಿಕೆಯು ಅವಕಾಶ ನೀಡುತ್ತದೆ. “ಶಾಶ್ವತವಾದ ಒಡಂಬಡಿಕೆ”ಯಾಗಿರುವ ಕಾರಣ, ಅದರ ಪ್ರಯೋಜನಗಳು ಸದಾಕಾಲ ಬಾಳುವವು. ಸಹಸ್ರವರ್ಷದ ಸಮಯದಲ್ಲಿ ಮತ್ತು ತದನಂತರವೂ ಈ ಒಡಂಬಡಿಕೆಯು ಇತರ ವಿಧಗಳಲ್ಲಿ ಪಾತ್ರವಹಿಸುವುದೊ ಇಲ್ಲವೊ ಎಂಬುದನ್ನು ಭವಿಷ್ಯತ್ತು ಪ್ರಕಟಪಡಿಸುವುದು.—ಇಬ್ರಿಯ 13:20.
15. ಲೂಕ 22:28-30ಕ್ಕನುಗುಣವಾಗಿ, ಯೇಸುವಿನ ಅಭಿಷಿಕ್ತ ಹಿಂಬಾಲಕರನ್ನು ಬೇರೆ ಯಾವ ಒಡಂಬಡಿಕೆಯಲ್ಲಿ ತೆಗೆದುಕೊಳ್ಳಲಾರಂಭಿಸಲಾಯಿತು, ಮತ್ತು ಯಾವಾಗ?
15 ಯೆಹೋವನು ‘ಮಹಿಮೆಗೆ ತರಲು’ ಉದ್ದೇಶಿಸಿದ ‘ಅನೇಕ ಪುತ್ರರು,’ ಸ್ವರ್ಗೀಯ ರಾಜ್ಯಕ್ಕಾಗಿರುವ ಒಡಂಬಡಿಕೆಯಲ್ಲಿ ವ್ಯಕ್ತಿಗತವಾಗಿಯೂ ತೆಗೆದುಕೊಳ್ಳಲ್ಪಟ್ಟಿದ್ದಾರೆ. ತನ್ನ ಮತ್ತು ತನ್ನ ಹೆಜ್ಜೆಜಾಡಿನ ಹಿಂಬಾಲಕರ ನಡುವಿನ ಈ ಒಡಂಬಡಿಕೆಯ ಸಂಬಂಧದಲ್ಲಿ, ಯೇಸು ಹೇಳಿದ್ದು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಲೂಕ 22:28-30) ಸಾ.ಶ. 33ರ ಪಂಚಾಶತ್ತಮ ದಿನದಂದು ಯೇಸುವಿನ ಶಿಷ್ಯರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಾಗ, ಆ ರಾಜ್ಯ ಒಡಂಬಡಿಕೆಯು ಪ್ರತಿಷ್ಠಾಪಿಸಲ್ಪಟ್ಟಿತು. ಕ್ರಿಸ್ತ ಮತ್ತು ಅವನ ಸಹ ರಾಜರ ನಡುವಿನ ಆ ಒಡಂಬಡಿಕೆಯು ಸದಾಕಾಲ ಜಾರಿಯಲ್ಲಿರುತ್ತದೆ. (ಪ್ರಕಟನೆ 22:5) ಆದುದರಿಂದ, ಆತ್ಮಜನಿತ ಕ್ರೈಸ್ತರು ತಾವು ಹೊಸ ಒಡಂಬಡಿಕೆಯಲ್ಲಿ ಮತ್ತು ರಾಜ್ಯದ ಒಡಂಬಡಿಕೆಯಲ್ಲಿದ್ದೇವೆಂಬ ವಿಷಯದಲ್ಲಿ ನಿಶ್ಚಿತರಾಗಿದ್ದಾರೆ. ಆದುದರಿಂದ, ಕರ್ತನ ಸಂಧ್ಯಾ ಭೋಜನದ ಆಚರಣೆಗಳಲ್ಲಿ, ಭೂಮಿಯ ಮೇಲೆ ಇನ್ನೂ ಉಳಿದಿರುವ ಸಾಪೇಕ್ಷವಾಗಿ ಕೊಂಚವೇ ಅಭಿಷಿಕ್ತರು, ಯೇಸುವಿನ ಪಾಪರಹಿತ ಮಾನವ ದೇಹವನ್ನು ಸೂಚಿಸುವ ರೊಟ್ಟಿಯನ್ನು ಮತ್ತು ಹೊಸ ಒಡಂಬಡಿಕೆಯನ್ನು ಸ್ಥಿರೀಕರಿಸುತ್ತಾ ಮರಣದಲ್ಲಿ ಸುರಿಸಲ್ಪಟ್ಟ ಅವನ ಪರಿಪೂರ್ಣ ರಕ್ತವನ್ನು ಸೂಚಿಸುವ ದ್ರಾಕ್ಷಾಮದ್ಯದಲ್ಲಿ ಪಾಲ್ಗೊಳ್ಳುತ್ತಾರೆ.—1 ಕೊರಿಂಥ 11:23-26; ಫೆಬ್ರವರಿ 1, 1989ರ ಕಾವಲಿನಬುರುಜು (ಇಂಗ್ಲಿಷ್), 17-20ನೆಯ ಪುಟಗಳನ್ನು ನೋಡಿರಿ.
ಕರೆದವರು, ದೇವರಾದುಕೊಂಡವರು ಮತ್ತು ನಂಬಿಗಸ್ತರು
16, 17. (ಎ) ಮಹಿಮೆಗೆ ತರಲ್ಪಡಲು ಎಲ್ಲ 1,44,000 ಮಂದಿಯ ವಿಷಯದಲ್ಲಿ ಯಾವುದು ಸತ್ಯವಾಗಿರಬೇಕು? (ಬಿ) “ಹತ್ತು ರಾಜರು” ಯಾರು, ಮತ್ತು ಕ್ರಿಸ್ತನ “ಸಹೋದರ”ರಲ್ಲಿ ಭೌಮಿಕ ಉಳಿಕೆಯವರನ್ನು ಅವರು ಹೇಗೆ ಉಪಚರಿಸುತ್ತಿದ್ದಾರೆ?
16 ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಥಮ ಅನ್ವಯವು, 1,44,000 ಮಂದಿಯು ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಡುವುದನ್ನು ಮತ್ತು ದೇವರಿಂದ ಆತ್ಮಜನಿತರಾಗುವ ಮೂಲಕ ಆದುಕೊಳ್ಳಲ್ಪಡುವುದನ್ನು ಸಾಧ್ಯಗೊಳಿಸುತ್ತದೆ. ಆದರೆ, ಮಹಿಮೆಗೆ ತರಲ್ಪಡಲು ಅವರು ‘ತಮ್ಮ ಕರೆಯುವಿಕೆ ಹಾಗೂ ಆದುಕೊಳ್ಳುವಿಕೆಯನ್ನು ದೃಢಪಡಿಸಿಕೊಳ್ಳಲು ಮತ್ತಷ್ಟು ಪ್ರಯಾಸಪಡಬೇಕು’ ಮತ್ತು ಮರಣದ ವರೆಗೆ ನಂಬಿಗಸ್ತರಾಗಿ ಉಳಿಯಬೇಕು. (2 ಪೇತ್ರ 1:10; ಎಫೆಸ 1:3-7; ಪ್ರಕಟನೆ 2:10) ಭೂಮಿಯ ಮೇಲೆ ಇನ್ನೂ ಉಳಿದಿರುವ ಅಭಿಷಿಕ್ತರಲ್ಲಿ ಉಳಿಕೆಯವರ ಚಿಕ್ಕ ಗುಂಪು, ಸಕಲ ರಾಜಕೀಯ ಶಕ್ತಿಗಳನ್ನು ಚಿತ್ರಿಸುವ “ಹತ್ತು ರಾಜ”ರಿಂದ ವಿರೋಧಿಸಲ್ಪಟ್ಟಾಗ್ಯೂ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ. “ಅವರು ಯಜ್ಞದ ಕುರಿಯಾದಾತನ ಮೇಲೆ ಯುದ್ಧಮಾಡುವರು, ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವದರಿಂದ ಅವರನ್ನು ಜಯಿಸುವನು; ಮತ್ತು ದೇವರು ಕರೆದವರೂ ದೇವರಾದುಕೊಂಡವರೂ ನಂಬಿಗಸ್ತರೂ ಆಗಿರುವ ಆತನ ಕಡೆಯವರು ಆ ಜಯದಲ್ಲಿ ಪಾಲುಗಾರರಾಗುವರು” ಎಂದು ಒಬ್ಬ ದೇವದೂತನು ಹೇಳಿದನು.—ಪ್ರಕಟನೆ 17:12-14.
17 “ರಾಜಾಧಿರಾಜ”ನಾಗಿರುವ ಯೇಸುವು ಸ್ವರ್ಗದಲ್ಲಿರುವ ಕಾರಣ, ಆತನ ವಿರುದ್ಧ ಮಾನವ ಅಧಿಪತಿಗಳು ಏನನ್ನೂ ಮಾಡಲಾರರು. ಆದರೆ, ಭೂಮಿಯ ಮೇಲೆ ಇನ್ನೂ ಉಳಿದಿರುವ ಅವನ “ಸಹೋದರ”ರಲ್ಲಿ ಉಳಿಕೆಯವರ ಕಡೆಗೆ ಅವರು ಹಗೆತನವನ್ನು ಪ್ರದರ್ಶಿಸುತ್ತಾರೆ. (ಪ್ರಕಟನೆ 12:17) ಆ ಹಗೆತನವು, “ರಾಜಾಧಿರಾಜನೂ” ಅವನ ‘ಸಹೋದರರೂ’—“ದೇವರು ಕರೆದವರೂ ದೇವರಾದುಕೊಂಡವರೂ ನಂಬಿಗಸ್ತರೂ” ಆಗಿರುವವರಿಗಾಗಿ ವಿಜಯವು ನಿಶ್ಚಿತಗೊಳಿಸಲ್ಪಡುವ, ದೇವರ ಅರ್ಮಗೆದೋನ್ ಯುದ್ಧದಲ್ಲಿ ಕೊನೆಗೊಳ್ಳುವುದು. (ಪ್ರಕಟನೆ 16:14, 16) ಈ ಮಧ್ಯೆ, ಆತ್ಮಜನಿತ ಕ್ರೈಸ್ತರು ಬಹಳ ಕಾರ್ಯಮಗ್ನರಾಗಿದ್ದಾರೆ. ಯೆಹೋವನಿಂದ ಮಹಿಮೆಗೆ ತರಲ್ಪಡುವ ಮುಂಚೆ ಅವರು ಈಗ ಏನು ಮಾಡುತ್ತಿದ್ದಾರೆ?
ನಿಮ್ಮ ಉತ್ತರವೇನು?
◻ ದೇವರು ಯಾರನ್ನು ‘ಸ್ವರ್ಗೀಯ ಮಹಿಮೆಗೆ ತರುತ್ತಾನೆ’?
◻ ‘ದೇವರಿಂದ ಹುಟ್ಟುವುದು’ ಏನನ್ನು ಅರ್ಥೈಸುತ್ತದೆ?
◻ ಕೆಲವು ಕ್ರೈಸ್ತರೊಂದಿಗೆ ‘ಆತ್ಮವು ಸಾಕ್ಷಿನೀಡುವುದು’ ಹೇಗೆ?
◻ ಆತ್ಮಜನಿತರು ಯಾವ ಒಡಂಬಡಿಕೆಗಳಲ್ಲಿ ತೆಗೆದುಕೊಳ್ಳಲ್ಪಟ್ಟಿದ್ದಾರೆ?
[ಪುಟ 15 ರಲ್ಲಿರುವ ಚಿತ್ರ]
ಸಾ.ಶ. 33ರ ಪಂಚಾಶತ್ತಮದಂದು, ಸ್ವರ್ಗೀಯ ಮಹಿಮೆಗೆ ಮಾರ್ಗವು ತೆರೆಯಲ್ಪಟ್ಟಿತ್ತೆಂಬ ಪುರಾವೆಯು ಕೊಡಲ್ಪಟ್ಟಿತು