ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸುವವರಾರು?
“ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.”—1 ಯೋಹಾನ 4:19.
1, 2. (ಎ) ನಮ್ಮನ್ನು ಪ್ರೀತಿಸಲಾಗುತ್ತಿದೆಯೆಂದು ನಮಗೆ ತಿಳಿದಿರುವುದು ಏಕೆ ಪ್ರಾಮುಖ್ಯವಾದದ್ದಾಗಿದೆ? (ಬಿ) ನಮಗೆ ಯಾರ ಪ್ರೀತಿಯು ಹೆಚ್ಚು ಆವಶ್ಯಕ?
ನಿಮ್ಮನ್ನು ಪ್ರೀತಿಸಲಾಗುತ್ತಿದೆಯೆಂದು ನಿಮಗೆ ತಿಳಿದಿರುವುದು ಎಷ್ಟು ಪ್ರಾಮುಖ್ಯ? ಶೈಶವಾವಸ್ಥೆಯಿಂದ ಹಿಡಿದು ಪ್ರೌಢಾವಸ್ಥೆಯ ವರೆಗೆ ಪ್ರೀತಿಯಿರುವಾಗ ಮನುಷ್ಯರು ಚೆನ್ನಾಗಿ ಏಳಿಗೆಹೊಂದುತ್ತಾರೆ. ತನ್ನ ಅಮ್ಮನ ತೋಳುಗಳಲ್ಲಿ ಪ್ರೀತಿಯಿಂದ ತಬ್ಬಿಹಿಡಿಯಲ್ಪಟ್ಟಿರುವ ಒಂದು ಕೂಸನ್ನು ಗಮನಿಸಿದ್ದೀರೊ? ಆ ಕೂಸು ನಸುನಗುತ್ತಿರುವ ತನ್ನ ತಾಯಿಯ ಕಣ್ಣುಗಳನ್ನೇ ಎವೆಯಿಕ್ಕದೆ ದಿಟ್ಟಿಸುತ್ತಿರುವಾಗ, ತನ್ನ ಸುತ್ತಲೂ ಏನೇ ನಡೆಯುತ್ತಿರಲಿ, ತನ್ನನ್ನು ಪ್ರೀತಿಸುತ್ತಿರುವ ಅಮ್ಮನ ತೋಳುಗಳಲ್ಲಿ ನೆಮ್ಮದಿಯಿಂದ ಆರಾಮವಾಗಿರುತ್ತದೆ. ಇಲ್ಲವೇ ಕೆಲವೊಮ್ಮೆ ತಳಮಳದಿಂದ ಕೂಡಿದ್ದ ನಿಮ್ಮ ತರುಣಾವಸ್ಥೆಯ ವರ್ಷಗಳಲ್ಲಿ ನೀವು ಹೇಗಿದ್ದಿರೆಂಬುದು ನಿಮಗೆ ನೆನಪಿದೆಯೊ? (1 ಥೆಸಲೊನೀಕ 2:7) ನಿಮಗೆ ಏನು ಬೇಕು ಅಥವಾ ನಿಮಗೆ ಹೇಗೆ ಅನಿಸುತ್ತದೆಂದು ಕೆಲವೊಮ್ಮೆ ನಿಮಗೇ ಅರ್ಥವಾಗದೇ ಇದ್ದಿರಬಹುದು. ಆದರೂ, ನಿಮ್ಮ ತಂದೆತಾಯಿ ನಿಮ್ಮನ್ನು ಪ್ರೀತಿಸುತ್ತಾರೆಂದು ನಿಮಗೆ ಗೊತ್ತಿರುವುದು ಎಷ್ಟು ಪ್ರಾಮುಖ್ಯವಾಗಿತ್ತು! ನಿಮಗೆ ಯಾವುದೇ ಸಮಸ್ಯೆಯಿರಲಿ ಇಲ್ಲವೇ ಪ್ರಶ್ನೆಯಿರಲಿ ನೀವು ಅವರ ಬಳಿಗೆ ಹೋಗಬಹುದೆಂಬ ಅರಿವು ಸಹಾಯಕಾರಿಯಾಗಿತ್ತಲ್ಲವೊ? ಹೌದು, ಜೀವನದುದ್ದಕ್ಕೂ ಇರುವ ನಮ್ಮ ಅತಿ ದೊಡ್ಡ ಅಗತ್ಯಗಳಲ್ಲಿ ಒಂದು, ಇತರರಿಂದ ಪ್ರೀತಿಸಲ್ಪಡುವುದೇ ಆಗಿದೆ. ಅಂತಹ ಪ್ರೀತಿಯು ನಾವು ಅಮೂಲ್ಯರಾಗಿದ್ದೇವೆಂಬ ಆಶ್ವಾಸನೆಯನ್ನು ನಮಗೆ ಕೊಡುತ್ತದೆ.
2 ಹೆತ್ತವರ ಕೊನೆಯಿಲ್ಲದ ಪ್ರೀತಿಯು, ಸರಿಯಾದ ಬೆಳವಣಿಗೆ ಮತ್ತು ಸಮತೋಲನಕ್ಕೆ ಖಂಡಿತವಾಗಿಯೂ ಮಹತ್ವಪೂರ್ಣವಾಗಿದೆ. ಆದರೆ ನಮ್ಮ ಸ್ವರ್ಗೀಯ ತಂದೆಯಾಗಿರುವ ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆಂಬ ಭರವಸೆಯು, ನಮ್ಮ ಆತ್ಮಿಕ ಹಾಗೂ ಭಾವನಾತ್ಮಕ ಕ್ಷೇಮಕ್ಕೆ ಎಷ್ಟೋ ಹೆಚ್ಚು ಮಹತ್ವಪೂರ್ಣವಾದದ್ದಾಗಿದೆ. ಈ ಪತ್ರಿಕೆಯ ಕೆಲವು ಓದುಗರಿಗೆ, ಅವರ ಕುರಿತಾಗಿ ನಿಜವಾಗಿಯೂ ಕಾಳಜಿ ವಹಿಸಿದಂಥ ಹೆತ್ತವರು ಇಲ್ಲದಿದ್ದಿರಬಹುದು. ಅದು ನಿಮ್ಮ ವಿಷಯದಲ್ಲಿ ಸತ್ಯವಾಗಿರುವಲ್ಲಿ, ಎದೆಗುಂದಬೇಡಿ. ಹೆತ್ತವರ ಪ್ರೀತಿಯು ಇಲ್ಲದಿರುವಲ್ಲಿ ಅಥವಾ ಅವರು ಸಾಕಷ್ಟು ಪ್ರೀತಿಯನ್ನು ತೋರಿಸಿರದಿದ್ದರೂ, ದೇವರ ನಿಷ್ಠಾವಂತ ಪ್ರೀತಿಯು ಆ ಕೊರತೆಯನ್ನು ನೀಗಿಸುತ್ತದೆ.
3. ಯೆಹೋವನು ತನ್ನ ಜನರಿಗೆ ತನ್ನ ಪ್ರೀತಿಯ ಕುರಿತಾಗಿ ಹೇಗೆ ಪುನರಾಶ್ವಾಸನೆಯನ್ನು ಕೊಟ್ಟಿದ್ದಾನೆ?
3 ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಹೇಳಿದ್ದೇನೆಂದರೆ, ಒಬ್ಬ ತಾಯಿಯು ತನ್ನ ಮೊಲೆಕೂಸನ್ನು “ಮರೆತಾಳು,” ಆದರೆ ತಾನು ತನ್ನ ಜನರನ್ನು ಎಂದಿಗೂ ಮರೆಯೆನು. (ಯೆಶಾಯ 49:15) ತದ್ರೀತಿಯಲ್ಲಿ, ದಾವೀದನು ದೃಢಭರವಸೆಯಿಂದ ಹೇಳಿದ್ದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ಎಷ್ಟು ಪುನರಾಶ್ವಾಸನಾದಾಯಕ ಮಾತುಗಳಿವು! ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ನಿಮಗೆ ಯೆಹೋವ ದೇವರೊಂದಿಗೆ ಒಂದು ಸಮರ್ಪಿತ ಸಂಬಂಧವಿರುವಲ್ಲಿ, ನಿಮಗಾಗಿ ಆತನಲ್ಲಿರುವ ಪ್ರೀತಿಯು ಯಾವುದೇ ಮನುಷ್ಯನ ಪ್ರೀತಿಗಿಂತಲೂ ಎಷ್ಟೋ ಹೆಚ್ಚಾಗಿದೆಯೆಂದು ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು!
ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ
4. ಪ್ರಥಮ ಶತಮಾನದ ಕ್ರೈಸ್ತರಿಗೆ ದೇವರ ಪ್ರೀತಿಯ ಪುನರಾಶ್ವಾಸನೆಯು ಹೇಗೆ ಕೊಡಲ್ಪಟ್ಟಿತ್ತು?
4 ಯೆಹೋವನ ಪ್ರೀತಿಯ ಬಗ್ಗೆ ನಿಮಗೆ ಮೊದಲು ತಿಳಿದುಬಂದದ್ದು ಯಾವಾಗ? ನಿಮ್ಮ ಅನುಭವವು, ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರಿಗೆ ಬಹುಮಟ್ಟಿಗೆ ಹೋಲುತ್ತಿರಬಹುದು. ರೋಮಾಪುರದವರಿಗೆ ಪೌಲನು ಬರೆದ ಪತ್ರದ 5ನೆಯ ಅಧ್ಯಾಯವು, ಒಂದು ಸಮಯದಲ್ಲಿ ದೇವರಿಂದ ವಿಮುಖರಾಗಿದ್ದ ಪಾಪಿಗಳು ಯೆಹೋವನ ಪ್ರೀತಿಯೊಂದಿಗೆ ಪರಿಚಿತರಾಗುವ ವಿಧವನ್ನು ಸುಂದರವಾಗಿ ವರ್ಣಿಸುತ್ತದೆ. 5ನೆಯ ವಚನದಲ್ಲಿ ನಾವು ಹೀಗೆ ಓದುತ್ತೇವೆ: “ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆಯಲ್ಲಾ.” 8ನೆಯ ವಚನದಲ್ಲಿ ಪೌಲನು ಕೂಡಿಸಿ ಹೇಳುವುದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.”
5. ದೇವರ ಪ್ರೀತಿಯ ಮಟ್ಟವನ್ನು ನೀವು ಹೇಗೆ ಗ್ರಹಿಸಲಾರಂಭಿಸಿದಿರಿ?
5 ತದ್ರೀತಿಯಲ್ಲಿ, ದೇವರ ವಾಕ್ಯದ ಸತ್ಯವು ನಿಮ್ಮ ಮುಂದೆ ಇಡಲ್ಪಟ್ಟಾಗ ಮತ್ತು ನೀವು ನಂಬಿಕೆಯಿಡಲು ಆರಂಭಿಸಿದಾಗ, ಯೆಹೋವನ ಪವಿತ್ರಾತ್ಮವು ನಿಮ್ಮ ಹೃದಯದಲ್ಲಿ ಕಾರ್ಯನಡೆಸಲು ಆರಂಭಿಸಿತು. ಈ ರೀತಿಯಲ್ಲಿ, ನಿಮಗೋಸ್ಕರ ಸಾಯಲು ಯೆಹೋವನು ತನ್ನ ಪ್ರಿಯ ಮಗನನ್ನು ಕಳುಹಿಸಿರುವುದರ ಮಹತ್ವವನ್ನು ನೀವು ಗಣ್ಯಮಾಡಲು ಆರಂಭಿಸಿದ್ದೀರಿ. ಹೀಗೆ ಯೆಹೋವನು, ತಾನು ಮಾನವಕುಲವನ್ನು ಎಷ್ಟು ಪ್ರೀತಿಸುತ್ತೇನೆಂಬುದು ನಿಮಗೆ ಗೊತ್ತಾಗುವಂತೆ ಸಹಾಯಮಾಡಿದನು. ನೀವು ಆತನಿಂದ ವಿಮುಖಗೊಂಡಿದ್ದ ಒಬ್ಬ ಪಾಪಿಯಾಗಿಯೇ ಹುಟ್ಟಿದ್ದರೂ, ಅಂತ್ಯವಿಲ್ಲದ ಜೀವನದ ಪ್ರತೀಕ್ಷೆಯೊಂದಿಗೆ ನೀತಿವಂತರಾಗಿ ನಿರ್ಣಯಿಸಲ್ಪಡಲು ಯೆಹೋವನು ಮಾನವರಿಗಾಗಿ ಮಾರ್ಗವನ್ನು ತೆರೆದನು ಎಂಬುದನ್ನು ನೀವು ಗ್ರಹಿಸಿದಾಗ, ಅದು ನಿಮ್ಮ ಮನಮುಟ್ಟಲಿಲ್ಲವೊ? ನಿಮ್ಮಲ್ಲಿ ಯೆಹೋವನಿಗಾಗಿ ಪ್ರೀತಿ ಉಕ್ಕಿಬರಲಿಲ್ಲವೊ?—ರೋಮಾಪುರ 5:10.
6. ನಾವು ಯೆಹೋವನಿಂದ ದೂರದಲ್ಲಿದ್ದೇವೆಂದು ನಮಗೆ ಕೆಲವೊಮ್ಮೆ ಅನಿಸಬಹುದೇಕೆ?
6 ನಿಮ್ಮ ಸ್ವರ್ಗೀಯ ತಂದೆಯ ಪ್ರೀತಿಯಿಂದ ಆಕರ್ಷಿತರಾಗಿ, ಆತನಿಗೆ ಅಂಗೀಕಾರಾರ್ಹರಾಗಿರಲು ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಿದ ಬಳಿಕ ನೀವು ದೇವರಿಗೆ ನಿಮ್ಮ ಜೀವನವನ್ನು ಸಮರ್ಪಿಸಿದಿರಿ. ಈಗ ನಿಮಗೆ ದೇವರೊಂದಿಗೆ ಸಮಾಧಾನವಿದೆ. ಆದರೂ ಕೆಲವೊಮ್ಮೆ ನೀವು ಯೆಹೋವನಿಂದ ತುಂಬ ದೂರದಲ್ಲಿದ್ದೀರೆಂದು ನಿಮಗನಿಸುತ್ತದೊ? ನಮ್ಮಲ್ಲಿ ಯಾರಿಗೂ ಆ ಅನಿಸಿಕೆ ಬರಸಾಧ್ಯವಿದೆ. ಆದರೆ ದೇವರು ಎಂದಿಗೂ ಬದಲಾಗುವುದಿಲ್ಲವೆಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಸೂರ್ಯನು ಭೂಮಿಗೆ ಬೆಳಕಿನ ಬೆಚ್ಚಗಿನ ಕಿರಣಗಳನ್ನು ಬೀರುವುದನ್ನು ಎಂದೂ ನಿಲ್ಲಿಸದಿರುವಂತೆಯೇ, ಆತನ ಪ್ರೀತಿಯು ನಿರಂತರವೂ ಸ್ಥಿರವಾದದ್ದೂ ಆಗಿದೆ. (ಮಲಾಕಿಯ 3:6; ಯಾಕೋಬ 1:17) ನಾವಾದರೋ ತಾತ್ಕಾಲಕ್ಕಾದರೂ ಬದಲಾಗುವ ಸಾಧ್ಯತೆಯಿದೆ. ಭೂಮಿಯು ತಿರುಗುತ್ತಾ ಇರುವಾಗ, ಈ ಭೂಗ್ರಹದ ಅರ್ಧ ಭಾಗವು ಕತ್ತಲಲ್ಲಿ ಮುಳುಗಿಹೋಗುತ್ತದೆ. ತದ್ರೀತಿಯಲ್ಲಿ ನಾವು ದೇವರಿಂದ ಸ್ವಲ್ಪಮಟ್ಟಿಗಾದರೂ ತಿರುಗುವಲ್ಲಿ, ಆತನೊಂದಿಗಿನ ನಮ್ಮ ಸಂಬಂಧವು ಸ್ವಲ್ಪ ತಣ್ಣಗಾಗಿರುವಂತೆ ನಮಗನಿಸಬಹುದು. ಆ ಸನ್ನಿವೇಶವನ್ನು ಸರಿಪಡಿಸಲು ನಾವೇನು ಮಾಡಸಾಧ್ಯವಿದೆ?
7. ದೇವರ ಪ್ರೀತಿಯಲ್ಲಿ ಉಳಿಯುವಂತೆ ಸ್ವಪರೀಕ್ಷೆಯು ನಮಗೆ ಹೇಗೆ ಸಹಾಯಮಾಡಬಲ್ಲದು?
7 ದೇವರ ಪ್ರೀತಿಯಿಂದ ಸ್ವಲ್ಪ ಅಗಲಿಸಲ್ಪಟ್ಟಿದ್ದೇವೆಂದು ನಮಗನಿಸುವಲ್ಲಿ, ನಾವು ಹೀಗೆ ಕೇಳಿಕೊಳ್ಳಬೇಕು: ‘ನಾನು ದೇವರ ಪ್ರೀತಿಯನ್ನು ತೀರ ಹಗುರವಾಗಿ ತೆಗೆದುಕೊಂಡಿದ್ದೇನೊ? ನಾನು ನಿಧಾನವಾಗಿ, ಜೀವಂತನಾಗಿರುವ ಹಾಗೂ ಪ್ರೀತಿಭರಿತನಾಗಿರುವ ದೇವರಿಂದ ಸಾಧಾರಣ ಮಟ್ಟಿಗೆ ತಿರುಗಿಬಿದ್ದು, ನನ್ನ ನಂಬಿಕೆಯು ದುರ್ಬಲವಾಗುತ್ತಿರುವುದನ್ನು ಬೇರೆ ಬೇರೆ ರೀತಿಗಳಲ್ಲಿ ತೋರಿಸುತ್ತಿದ್ದೇನೊ? “ಶರೀರಭಾವಕ್ಕೆ ಸಂಬಂಧಪಟ್ಟವುಗಳ ಮೇಲೆ” ಮನಸ್ಸಿಡುವುದರ ಬದಲು ನಾನು “ಪವಿತ್ರಾತ್ಮಕ್ಕೆ ಸಂಬಂಧಪಟ್ಟವುಗಳ” ಮೇಲೆ ಮನಸ್ಸನ್ನಿಟ್ಟಿದ್ದೇನೊ?’ (ರೋಮಾಪುರ 8:5-8; ಇಬ್ರಿಯ 3:12) ನಾವು ಯೆಹೋವನಿಂದ ದೂರಹೋಗಿರುವಲ್ಲಿ, ಆತನೊಂದಿಗೆ ಒಂದು ಆಪ್ತವಾದ, ಬೆಚ್ಚಗಿನ ಸಂಬಂಧವನ್ನು ಪುನಃ ಸ್ಥಾಪಿಸಲು ಕ್ರಮಗಳನ್ನು ಕೈಗೊಳ್ಳಬಲ್ಲೆವು. ಯಾಕೋಬನು ನಮ್ಮನ್ನು ಪ್ರೇರೇಪಿಸುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಯೂದನ ಮಾತುಗಳಿಗೆ ಕಿವಿಗೊಡಿರಿ: “ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.”—ಯೂದ 20, 21.
ಪರಿಸ್ಥಿತಿಗಳಲ್ಲಿನ ಬದಲಾವಣೆಯು ದೇವರ ಪ್ರೀತಿಯನ್ನು ಬಾಧಿಸುವುದಿಲ್ಲ
8. ನಮ್ಮ ಜೀವಿತದಲ್ಲಿ ಯಾವ ಬದಲಾವಣೆಗಳು ಥಟ್ಟನೆ ಸಂಭವಿಸಬಲ್ಲವು?
8 ಈ ವಿಷಯಗಳ ವ್ಯವಸ್ಥೆಯಲ್ಲಿ ನಮ್ಮ ಜೀವನವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂದು ರಾಜ ಸೊಲೊಮೋನನು ಗಮನಿಸಿದನು. (ಪ್ರಸಂಗಿ 9:11) ದಿನಬೆಳಗಾಗುವುದರೊಳಗೆ ನಮ್ಮ ಜೀವನವು ಸಂಪೂರ್ಣವಾಗಿ ಬದಲಾಗಬಹುದು. ಒಂದು ದಿನ ನಾವು ಆರೋಗ್ಯದಿಂದಿರುವುದಾದರೆ, ಮರುದಿನ ನಾವು ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುತ್ತೇವೆ. ಒಂದು ದಿನ ನಮ್ಮ ಐಹಿಕ ಉದ್ಯೋಗವು ತುಂಬ ಸುರಕ್ಷಿತವಾಗಿರುವಾಗ, ಮರುದಿನ ನಾವು ನಿರುದ್ಯೋಗಿಗಳಾಗಿರಸಾಧ್ಯವಿದೆ. ಎಚ್ಚರಿಕೆ ಕೊಡದೆ, ಮರಣವು ನಮ್ಮ ಪ್ರಿಯ ವ್ಯಕ್ತಿಯೊಬ್ಬನನ್ನು ನಮ್ಮಿಂದ ಕಸಿದುಕೊಳ್ಳಬಹುದು. ಒಂದು ನಿರ್ದಿಷ್ಟ ದೇಶದಲ್ಲಿ ಕ್ರೈಸ್ತರು ಸ್ವಲ್ಪ ಕಾಲ ಶಾಂತಿಪೂರ್ಣ ಪರಿಸ್ಥಿತಿಗಳಲ್ಲಿ ಆನಂದಿಸುತ್ತಿರುವಾಗ, ಒಮ್ಮೆಲೇ ಅಲ್ಲಿ ಪ್ರಚಂಡ ಹಿಂಸೆಯು ಹೊರಚಿಮ್ಮಬಹುದು. ನಮ್ಮ ಮೇಲೆ ತಪ್ಪು ಆರೋಪಗಳು ಹೊರಿಸಲ್ಪಟ್ಟಿರಬಹುದು ಮತ್ತು ಇದರಿಂದಾಗಿ ನಮಗೆ ಅನ್ಯಾಯವಾಗಬಹುದು. ಹೌದು, ಜೀವನವು ಸ್ಥಿರವಲ್ಲ ಅಥವಾ ಸಂಪೂರ್ಣವಾಗಿ ಹಾನಿರಹಿತವಾದದ್ದಲ್ಲ.—ಯಾಕೋಬ 4:13-15.
9. ರೋಮಾಪುರ ಅಧ್ಯಾಯ 8ರ ಒಂದು ಭಾಗವನ್ನು ಪರಿಗಣಿಸುವುದು ಏಕೆ ಒಳ್ಳೇದು?
9 ನಮ್ಮ ಜೀವಿತದಲ್ಲಿ ದುಃಖಕರ ಸಂಗತಿಗಳು ನಡೆಯುವಾಗ, ನಮ್ಮ ಕೈಬಿಡಲಾಗಿದೆ, ನಮಗಾಗಿ ದೇವರಿಗಿದ್ದ ಪ್ರೀತಿಯು ಕಡಿಮೆಯಾಗಿಬಿಟ್ಟಿದೆಯೆಂದು ಸಹ ನಾವು ಊಹಿಸಲಾರಂಭಿಸಬಹುದು. ನಾವೆಲ್ಲರೂ ಅಂಥ ಸಂಗತಿಗಳಿಗೆ ತುತ್ತಾಗುವುದರಿಂದ, ರೋಮಾಪುರ ಅಧ್ಯಾಯ 8ರಲ್ಲಿ ದಾಖಲಿಸಲ್ಪಟ್ಟಿರುವ ಅಪೊಸ್ತಲ ಪೌಲನ ಅತಿ ಸಾಂತ್ವನದಾಯಕ ಮಾತುಗಳನ್ನು ಜಾಗರೂಕತೆಯಿಂದ ಪರಿಗಣಿಸುವುದು ಒಳ್ಳೇದು. ಆ ಮಾತುಗಳು ವಾಸ್ತವದಲ್ಲಿ ಆತ್ಮಾಭಿಷಿಕ್ತ ಕ್ರೈಸ್ತರಿಗೆ ಸಂಬೋಧಿಸಲ್ಪಟ್ಟಿದ್ದವು. ಆದರೂ, ತತ್ವ ದೃಷ್ಟಿಯಿಂದ ನೋಡುವಾಗ ಅವು ಬೇರೆ ಕುರಿಗಳಿಗೂ ಅನ್ವಯಿಸುತ್ತವೆ. ಯಾಕೆಂದರೆ ಕ್ರೈಸ್ತ ಪೂರ್ವ ಸಮಯಗಳಲ್ಲಿ ಅಬ್ರಹಾಮನನ್ನು ದೇವರ ಸ್ನೇಹಿತನೋಪಾದಿ ನೀತಿವಂತನೆಂದು ನಿರ್ಣಯಿಸಲಾದಂತೆ, ಇವರನ್ನೂ ದೇವರ ಸ್ನೇಹಿತರೋಪಾದಿ ನೀತಿವಂತರೆಂದು ನಿರ್ಣಯಿಸಲಾಗಿದೆ.—ರೋಮಾಪುರ 4:20-22; ಯಾಕೋಬ 2:21-23.
10, 11. (ಎ) ದೇವಜನರ ವಿರುದ್ಧ ಶತ್ರುಗಳು ಕೆಲವೊಮ್ಮೆ ಯಾವ ಆರೋಪಗಳನ್ನು ಹೊರಿಸುತ್ತಾರೆ? (ಬಿ) ಕ್ರೈಸ್ತರಿಗೆ ಈ ಆರೋಪಗಳು ಒಂದು ಮಹತ್ವಪೂರ್ಣ ಸಂಗತಿಯಾಗಿರುವುದಿಲ್ಲವೇಕೆ?
10 ರೋಮಾಪುರ 8:31-34 ನ್ನು ಓದಿ. ಪೌಲನು ಕೇಳುವುದು: “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” ಸೈತಾನನು ಮತ್ತು ಅವನ ದುಷ್ಟ ಲೋಕವು ನಮ್ಮ ವಿರುದ್ಧ ನಿಂತಿದೆಯೆಂಬುದು ನಿಜ. ಶತ್ರುಗಳು ನಮ್ಮ ಮೇಲೆ ಸುಳ್ಳಾರೋಪಗಳನ್ನು ಹೊರಿಸಬಹುದು. ಇದನ್ನವರು ದೇಶದ ನ್ಯಾಯಾಲಯಗಳಲ್ಲೂ ಮಾಡಬಹುದು. ಕೆಲವು ಕ್ರೈಸ್ತ ಹೆತ್ತವರು, ದೇವರ ನಿಯಮವನ್ನು ಉಲ್ಲಂಘಿಸುವಂಥ ರೀತಿಯ ವೈದ್ಯಕೀಯ ಕಾರ್ಯವಿಧಾನಗಳನ್ನು ತಮ್ಮ ಮಕ್ಕಳು ಸ್ವೀಕರಿಸುವಂತೆ ಅಥವಾ ವಿಧರ್ಮಿ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಅನುಮತಿಸದಿರುವ ಕಾರಣ, ಅವರು ತಮ್ಮ ಮಕ್ಕಳನ್ನು ದ್ವೇಷಿಸುತ್ತಾರೆಂಬ ಆರೋಪವನ್ನು ಹೊರಿಸಲಾಗಿದೆ. (ಅ. ಕೃತ್ಯಗಳು 15:28, 29; 2 ಕೊರಿಂಥ 6:14-16) ಇನ್ನೂ ಇತರ ನಂಬಿಗಸ್ತ ಕ್ರೈಸ್ತರು ಯುದ್ಧದಲ್ಲಿ ಜೊತೆ ಮಾನವರನ್ನು ಕೊಲ್ಲದಿರುವುದರಿಂದ ಅಥವಾ ರಾಜಕೀಯದಲ್ಲಿ ಪಾಲ್ಗೊಳ್ಳದಿರುವುದರಿಂದ, ಅವರ ಮೇಲೆ ದೇಶದ್ರೋಹಿಗಳು ಎಂಬ ಸುಳ್ಳಾರೋಪವನ್ನು ಹೊರಿಸಲಾಗಿದೆ. (ಯೋಹಾನ 17:16) ಕೆಲವು ವಿರೋಧಿಗಳು, ವಾರ್ತಾಮಾಧ್ಯಮದಲ್ಲಿ ಯೆಹೋವನ ಸಾಕ್ಷಿಗಳ ಬಗ್ಗೆ ಹೆಸರು ಕೆಡಿಸುವಂಥ ರೀತಿಯ ಸುಳ್ಳುಗಳನ್ನು ಹಬ್ಬಿಸಿದ್ದಾರೆ. ಅವರು ಒಂದು ಅಪಾಯಕಾರಿ ಪಂಥವಾಗಿದ್ದಾರೆಂದೂ ಈ ವಿರೋಧಿಗಳು ಪ್ರಚಾರಮಾಡಿದ್ದಾರೆ.
11 ಆದರೆ ಅಪೊಸ್ತಲರ ದಿನಗಳಲ್ಲಿಯೂ, “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬುದೊಂದೇ ನಮಗೆ ಗೊತ್ತದೆ” ಎಂದು ಹೇಳಲಾಗಿತ್ತೆಂಬುದನ್ನು ಮರೆಯದಿರಿ. (ಅ. ಕೃತ್ಯಗಳು 28:22) ಈ ಸುಳ್ಳಾರೋಪಗಳು ಮಹತ್ವಪೂರ್ಣ ಸಂಗತಿಗಳಲ್ಲ, ಯಾಕೆಂದರೆ ಕ್ರಿಸ್ತನ ಯಜ್ಞದಲ್ಲಿ ಅವರಿಗಿರುವ ನಂಬಿಕೆಯ ಆಧಾರದ ಮೇರೆಗೆ ಸತ್ಯ ಕ್ರೈಸ್ತರನ್ನು ನೀತಿವಂತರೆಂದು ನಿರ್ಣಯಿಸುವವನು ದೇವರೇ. ಯೆಹೋವನು ತನ್ನಿಂದ ಸಾಧ್ಯವಿರುವ ಅತಿ ಅಮೂಲ್ಯವಾದ ಕೊಡುಗೆಯನ್ನು, ಅಂದರೆ ತನ್ನ ಸ್ವಂತ ಪ್ರಿಯ ಮಗನನ್ನು ಕೊಟ್ಟ ಬಳಿಕ ತನ್ನ ಆರಾಧಕರನ್ನು ಪ್ರೀತಿಸುವುದನ್ನು ಏಕೆ ನಿಲ್ಲಿಸುವನು? (1 ಯೋಹಾನ 4:10) ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟು, ದೇವರ ಬಲಬದಿಯಲ್ಲಿ ಕೂರಿಸಲ್ಪಟ್ಟಿರುವುದರಿಂದ, ಅವನು ಕ್ರೈಸ್ತರ ಪರವಾಗಿ ಸಕ್ರಿಯವಾಗಿ ಮನವಿಮಾಡುತ್ತಾನೆ. ಕ್ರಿಸ್ತನು ತನ್ನ ಹಿಂಬಾಲಕರನ್ನು ನ್ಯಾಯೋಚಿತವಾಗಿ ಸಮರ್ಥಿಸುತ್ತಾನೆಂಬುದನ್ನು ಯಾರಾದರೂ ಅಲ್ಲಗಳೆಯಬಲ್ಲರೋ ಅಥವಾ ದೇವರು ತನ್ನ ನಂಬಿಗಸ್ತರ ಪರವಾಗಿ ಅನುಕೂಲವಾದ ನ್ಯಾಯತೀರ್ಪು ನೀಡುತ್ತಿರುವುದನ್ನು ಯಾರಾದರೂ ಯಶಸ್ವಿಯಾಗಿ ಪಂಥಾಹ್ವಾನಕ್ಕೊಡ್ಡಬಲ್ಲರೊ? ಯಾರೂ ಇಲ್ಲ!—ಯೆಶಾಯ 50:8, 9; ಇಬ್ರಿಯ 4:15, 16.
12, 13. (ಎ) ಯಾವ ಪರಿಸ್ಥಿತಿಗಳು ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಲಾರವು? (ಬಿ) ನಮಗೆ ಕಷ್ಟಗಳನ್ನು ಉಂಟುಮಾಡುವ ಪಿಶಾಚನ ಗುರಿಯೇನು? (ಸಿ) ಕ್ರೈಸ್ತರು ಸಂಪೂರ್ಣವಾಗಿ ವಿಜೇತರಾಗಿ ಹೊರಬರುವುದೇಕೆ?
12 ರೋಮಾಪುರ 8:35-37 ನ್ನು ಓದಿ. ಸ್ವತಃ ನಮ್ಮನ್ನೇ ಬಿಟ್ಟರೆ, ಯೆಹೋವನ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವ ಯಾವ ವ್ಯಕ್ತಿಯಾಗಲಿ ವಸ್ತುವಾಗಲಿ ಇದೆಯೊ? ಕ್ರೈಸ್ತರಿಗೆ ಉಪದ್ರವವನ್ನುಂಟುಮಾಡಲು ಸೈತಾನನು ಭೂಮಿಯ ಮೇಲಿರುವ ತನ್ನ ಕಾರ್ಯಭಾರಿಗಳನ್ನು ಉಪಯೋಗಿಸಬಹುದು. ಗತ ಶತಮಾನದಲ್ಲಿ, ನಮ್ಮ ಅನೇಕಾನೇಕ ಕ್ರೈಸ್ತ ಸಹೋದರ ಸಹೋದರಿಯರು, ಅನೇಕ ದೇಶಗಳಲ್ಲಿ ಘೋರ ಹಿಂಸೆಗೆ ಗುರಿಯಾಗಿದ್ದರು. ಇಂದು ಕೆಲವು ಸ್ಥಳಗಳಲ್ಲಿ ನಮ್ಮ ಸಹೋದರರು ದೈನಂದಿನ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಾರೆ. ಕೆಲವರು ಹಸಿವಿನ ಬೇನೆ ಅಥವಾ ಬಟ್ಟೆಬರೆಯ ಕೊರತೆಯಿಂದಾಗಿ ಕಷ್ಟಪಡುತ್ತಾರೆ. ಈ ಕಷ್ಟಕರ ಪರಿಸ್ಥಿತಿಗಳನ್ನು ಉಂಟುಮಾಡುವುದರಲ್ಲಿ ಪಿಶಾಚನ ಉದ್ದೇಶವಾದರೂ ಏನು? ಅವನ ಕಡಿಮೆಪಕ್ಷ ಒಂದು ಗುರಿಯು, ಯೆಹೋವನ ಸತ್ಯಾರಾಧನೆಯನ್ನು ನಿರುತ್ತೇಜಿಸುವುದೇ ಆಗಿದೆಯೆಂದು ಹೇಳಬಹುದು. ದೇವರ ಪ್ರೀತಿಯು ತಣ್ಣಗಾಗಿದೆಯೆಂದು ನಾವು ನಂಬಬೇಕೆಂಬುದೇ ಸೈತಾನನ ಬಯಕೆ. ಆದರೆ ದೇವರ ಪ್ರೀತಿಯು ನಿಜವಾಗಿ ತಣ್ಣಗಾಗಿಬಿಟ್ಟಿದೆಯೊ?
13 ಕೀರ್ತನೆ 44:22 ನ್ನು ಉಲ್ಲೇಖಿಸಿದ ಪೌಲನಂತೆ, ನಾವು ದೇವರ ಲಿಖಿತ ವಾಕ್ಯವನ್ನು ಅಭ್ಯಾಸಮಾಡಿದ್ದೇವೆ. ಇದೆಲ್ಲವೂ ದೇವರ ನಾಮಕ್ಕೋಸ್ಕರ ಆತನ ‘ಕುರಿ’ಗಳಾಗಿರುವ ನಮಗೆ ಸಂಭವಿಸುತ್ತಿದೆಯೆಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಇದರಲ್ಲಿ ದೇವರ ನಾಮದ ಪವಿತ್ರೀಕರಣ ಮತ್ತು ಆತನ ವಿಶ್ವ ಪರಮಾಧಿಕಾರದ ನಿರ್ದೋಷೀಕರಣವು ಒಳಗೂಡಿದೆ. ಈ ಪ್ರಧಾನ ವಿವಾದಾಂಶಗಳಿಂದಾಗಿ ದೇವರು ಈ ಕಷ್ಟಗಳನ್ನು ಅನುಮತಿಸಿದ್ದಾನೆಯೇ ಹೊರತು, ಆತನು ನಮ್ಮನ್ನು ಈಗ ಪ್ರೀತಿಸದಿರುವ ಕಾರಣದಿಂದಲ್ಲ. ಈ ಸಂಕಷ್ಟಕರ ಪರಿಸ್ಥಿತಿಯು ಏನೇ ಆಗಿರಲಿ, ದೇವರಿಗೆ ನಮ್ಮಲ್ಲಿ ಪ್ರತಿಯೊಬ್ಬರನ್ನೂ ಸೇರಿಸಿ, ತನ್ನ ಜನರಿಗಾಗಿರುವ ಪ್ರೀತಿಯು ಬದಲಾಗಿಲ್ಲವೆಂಬ ಆಶ್ವಾಸನೆ ನಮಗಿದೆ. ನಾವು ಸೋಲನ್ನು ಅನುಭವಿಸುತ್ತಿದ್ದೇವೆಂದು ತೋರಿದರೂ, ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಂಡರೆ ಅದು ಒಂದು ವಿಜಯವಾಗಿ ಪರಿಣಮಿಸುವುದು. ದೇವರ ಅಚಲವಾದ ಪ್ರೀತಿಯ ಆಶ್ವಾಸನೆಯಿಂದ ನಾವು ಬಲಪಡಿಸಲ್ಪಟ್ಟು, ಪೋಷಿಸಲ್ಪಡುತ್ತೇವೆ.
14. ಕ್ರೈಸ್ತರು ಅನುಭವಿಸಬಹುದಾದ ಕಷ್ಟಗಳು ದೇವರ ಪ್ರೀತಿಯನ್ನು ಬಾಧಿಸಲಾರವು ಎಂದು ಪೌಲನಿಗೆ ದೃಢನಂಬಿಕೆ ಉಂಟಾದದ್ದು ಏಕೆ?
14 ರೋಮಾಪುರ 8:38, 39 ನ್ನು ಓದಿ.a ಯಾವುದೇ ಸಂಗತಿಯು ಕ್ರೈಸ್ತರನ್ನು ದೇವರ ಪ್ರೀತಿಯಿಂದ ಅಗಲಿಸಲಾರದೆಂದು ಪೌಲನಲ್ಲಿ ದೃಢನಂಬಿಕೆಯನ್ನು ಉಂಟುಮಾಡಿದಂಥದ್ದು ಯಾವುದು? ಶುಶ್ರೂಷೆಯಲ್ಲಿ ಪೌಲನಿಗಾದ ವೈಯಕ್ತಿಕ ಅನುಭವಗಳು, ನಮಗಾಗಿ ದೇವರಿಗಿರುವ ಪ್ರೀತಿಯನ್ನು ಕಷ್ಟಸಂಕಟಗಳು ಬಾಧಿಸಲಾರವು ಎಂಬ ಅವನ ನಿಶ್ಚಿತಾಭಿಪ್ರಾಯವನ್ನು ಇನ್ನೂ ಬಲಪಡಿಸಿರಬೇಕು. (2 ಕೊರಿಂಥ 11:23-27; ಫಿಲಿಪ್ಪಿ 4:13) ಅಲ್ಲದೆ, ಪೌಲನಿಗೆ ಯೆಹೋವನ ನಿತ್ಯ ಉದ್ದೇಶ ಮತ್ತು ತನ್ನ ಜನರೊಂದಿಗಿನ ಆತನ ಹಿಂದಿನ ವ್ಯವಹಾರಗಳ ಕುರಿತಾದ ಜ್ಞಾನವಿತ್ತು. ನಿಷ್ಠೆಯಿಂದ ತನ್ನ ಸೇವೆಮಾಡಿರುವವರಿಗಾಗಿ ದೇವರಿಗಿರುವ ಪ್ರೀತಿಯ ಮೇಲೆ ಮರಣವಾದರೂ ಜಯಸಾಧಿಸುವುದೊ? ಖಂಡಿತವಾಗಿಯೂ ಇಲ್ಲ! ಅಂಥ ನಂಬಿಗಸ್ತರು ಮರಣಪಡುವುದಾದರೂ, ದೇವರ ಪರಿಪೂರ್ಣ ಜ್ಞಾಪಕಶಕ್ತಿಯಲ್ಲಿ ಅವರು ಬದುಕಿ ಉಳಿಯುವರು ಮತ್ತು ತಕ್ಕ ಸಮಯದಲ್ಲಿ ಆತನು ಅವರನ್ನು ಪುನರುತ್ಥಾನಗೊಳಿಸುವನು.—ಲೂಕ 20:37, 38; 1 ಕೊರಿಂಥ 15:22-26.
15, 16. ದೇವರು ತನ್ನ ನಂಬಿಗಸ್ತ ಸೇವಕರನ್ನು ಪ್ರೀತಿಸುವುದನ್ನು ಎಂದಿಗೂ ನಿಲ್ಲಿಸಲಾರದಂಥ ಕೆಲವು ಸಂಗತಿಗಳನ್ನು ತಿಳಿಸಿರಿ.
15 ಇಂದು ಜೀವನವು ನಮ್ಮ ಮೇಲೆ ಯಾವುದೇ ಆಪತ್ತನ್ನು ತರಲಿ, ಅಂದರೆ ನಮ್ಮನ್ನು ಅಶಕ್ತರನ್ನಾಗಿಮಾಡುವ ಒಂದು ಅಪಘಾತವಾಗಲಿ, ಮರಣಾಂತಿಕ ಕಾಯಿಲೆಯಾಗಲಿ, ಅಥವಾ ಹಣಕಾಸಿನ ಬಿಕ್ಕಟ್ಟಾಗಲಿ, ಇದಾವುದೂ ತನ್ನ ಜನರಿಗಾಗಿ ದೇವರಿಗಿರುವ ಪ್ರೀತಿಯನ್ನು ಅಳಿಸಿಹಾಕಲಾರದು. ಸೈತಾನನಾಗಿ ಪರಿಣಮಿಸಿದ ಅವಿಧೇಯ ದೇವದೂತನಂಥ ಶಕ್ತಿಶಾಲಿ ದೇವದೂತರು ಸಹ, ಯೆಹೋವನು ತನ್ನ ಸಮರ್ಪಣಾಭಾವದ ಸೇವಕರನ್ನು ಪ್ರೀತಿಸುವುದನ್ನು ನಿಲ್ಲಿಸುವಂತೆ ಮಾಡಲಾರರು. (ಯೋಬ 2:3) ಸರಕಾರಗಳು ದೇವರ ಸೇವಕರನ್ನು ನಿಷೇಧಿಸಬಹುದು, ಸೆರೆಗೆ ಹಾಕಬಹುದು ಮತ್ತು ದುರುಪಚರಿಸಬಹುದು ಹಾಗೂ “ಪರ್ಸೋನ ನಾನ್ಗ್ರಾಟ” (ಅಂಗೀಕಾರಾರ್ಹರಲ್ಲದ ವ್ಯಕ್ತಿಗಳು) ಎಂಬ ನಾಮಪಟ್ಟಿಯನ್ನು ಅವರಿಗೆ ಅಂಟಿಸಬಹುದು. (1 ಕೊರಿಂಥ 4:13) ರಾಷ್ಟ್ರಗಳ ನ್ಯಾಯಸಮ್ಮತವಲ್ಲದ ಅಂಥ ದ್ವೇಷವು ಮನುಷ್ಯರನ್ನು ನಮ್ಮ ವಿರುದ್ಧ ತಿರುಗಿಸಬಹುದಾದರೂ, ವಿಶ್ವದ ಪರಮಾಧಿಕಾರಿಯು ನಮ್ಮ ಕೈಬಿಡುವಂತೆ ಅದು ಆತನನ್ನು ಒಡಂಬಡಿಸಲಾರದು.
16 ಪೌಲನು ‘ಈಗಿನ ಸಂಗತಿಗಳು’ ಎಂದು ಕರೆದಂಥ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿನ ಘಟನೆಗಳು, ಪರಿಸ್ಥಿತಿಗಳು ಮತ್ತು ಸನ್ನಿವೇಶಗಳು ಇಲ್ಲವೇ ‘ಮುಂದಣ ಸಂಗತಿಗಳು,’ ದೇವರಿಗೆ ತನ್ನ ಜನರೊಂದಿಗಿರುವ ಬಾಂಧವ್ಯವನ್ನು ಮುರಿಯಲಾರವು. ಭೂಶಕ್ತಿಗಳಾಗಲಿ ಸ್ವರ್ಗೀಯಶಕ್ತಿಗಳಾಗಲಿ ನಮ್ಮ ವಿರುದ್ಧ ಯುದ್ಧ ನಡಿಸಿದರೂ, ದೇವರ ನಿಷ್ಠಾವಂತ ಪ್ರೀತಿಯು ನಮ್ಮನ್ನು ಪೋಷಿಸಲಿಕ್ಕಾಗಿ ಇದ್ದೇ ಇದೆ. ಪೌಲನು ಒತ್ತಿಹೇಳಿದಂತೆ, “ಎತ್ತರವಾಗಲಿ, ಆಳವಾಗಲಿ” ದೇವರ ಪ್ರೀತಿಗೆ ಅಡ್ಡಬರಲಾರದು. ಹೌದು, ನಮ್ಮನ್ನು ತೀರ ನಿರುತ್ಸಾಹಗೊಳಿಸಬಹುದಾದ ಅಥವಾ ನಮ್ಮ ಮೇಲೆ ಅತಿಯಾಗಿ ಪ್ರಭಾವಬೀರುವ ಯಾವುದೇ ಸಂಗತಿಯು ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಲಾರದು; ಬೇರಾವುದೇ ಸೃಷ್ಟಿಯೂ, ತನ್ನ ನಂಬಿಗಸ್ತ ಸೇವಕರೊಂದಿಗೆ ಸೃಷ್ಟಿಕರ್ತನಿಗಿರುವ ಸಂಬಂಧವನ್ನು ಭಂಗಗೊಳಿಸಲಾರದು. ದೇವರ ಪ್ರೀತಿಯು ಎಂದಿಗೂ ಬಿದ್ದುಹೋಗುವುದಿಲ್ಲ, ಅದು ಶಾಶ್ವತವಾಗಿದೆ.—1 ಕೊರಿಂಥ 13:8.
ದೇವರ ಪ್ರೀತಿದಯೆಯನ್ನು ಸದಾಕಾಲಕ್ಕೂ ಅಮೂಲ್ಯವೆಂದೆಣಿಸಿರಿ
17. (ಎ) ದೇವರ ಪ್ರೀತಿಯು “ಜೀವಕ್ಕಿಂತಲೂ ಶ್ರೇಷ್ಠ”ವಾಗಿರುವುದು ಹೇಗೆ? (ಬಿ) ನಾವು ದೇವರ ಪ್ರೀತಿದಯೆಯನ್ನು ಅಮೂಲ್ಯವೆಂದೆಣಿಸುತ್ತೇವೆಂದು ಹೇಗೆ ತೋರಿಸುತ್ತೇವೆ?
17 ದೇವರ ಪ್ರೀತಿಯು ನಿಮಗೆಷ್ಟು ಮಹತ್ವಪೂರ್ಣವಾಗಿದೆ? “ನಿನ್ನ ಪ್ರೇಮಾನುಭವವು [“ಪ್ರೀತಿದಯೆಯು,” NW] ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವದು. ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು” ಎಂದು ಬರೆದಂಥ ದಾವೀದನಂತೆ ನಿಮಗನಿಸುತ್ತದೊ? (ಕೀರ್ತನೆ 63:3, 4) ಈ ಲೋಕದಲ್ಲಿನ ಜೀವನವು, ದೇವರ ಪ್ರೀತಿ ಮತ್ತು ನಿಷ್ಠಾವಂತ ಸ್ನೇಹವನ್ನು ಅನುಭವಿಸುವುದಕ್ಕಿಂತಲೂ ಹೆಚ್ಚು ಉತ್ತಮವಾದದ್ದೇನನ್ನಾದರೂ ನೀಡಬಲ್ಲದೊ? ಉದಾಹರಣೆಗಾಗಿ, ಒಂದು ಲಾಭಕರ ಐಹಿಕ ಜೀವನವೃತ್ತಿಯನ್ನು ಬೆನ್ನಟ್ಟಿಕೊಂಡು ಹೋಗುವುದು, ದೇವರೊಂದಿಗಿನ ಒಂದು ಆಪ್ತ ಸಂಬಂಧದಿಂದ ಫಲಿಸುವ ಮನಶ್ಶಾಂತಿ ಮತ್ತು ಸಂತೋಷಕ್ಕಿಂತಲೂ ಹೆಚ್ಚು ಉತ್ತಮವಾಗಿದೆಯೊ? (ಲೂಕ 12:15) ಕೆಲವು ಕ್ರೈಸ್ತರ ಮುಂದೆ, ಯೆಹೋವನನ್ನು ತ್ಯಜಿಸಿಬಿಡುವ ಇಲ್ಲವೇ ಮರಣವನ್ನು ಎದುರಿಸುವ ಆಯ್ಕೆಯನ್ನು ಇಡಲಾಯಿತು. IIನೆಯ ಲೋಕ ಯುದ್ಧದ ಸಮಯದಲ್ಲಿ ನಾಸಿ ಸೆರೆ ಶಿಬಿರಗಳಲ್ಲಿದ್ದ ಅನೇಕ ಯೆಹೋವನ ಸಾಕ್ಷಿಗಳಿಗೆ ಹೀಗಾಯಿತು. ಕೆಲವು ವ್ಯಕ್ತಿಗಳನ್ನು ಬಿಟ್ಟರೆ, ನಮ್ಮ ಬೇರೆಲ್ಲ ಕ್ರೈಸ್ತ ಸಹೋದರರು ದೇವರ ಪ್ರೀತಿಯಲ್ಲಿ ಉಳಿಯುವ ಆಯ್ಕೆಯನ್ನು ಮಾಡಿದರು, ಮತ್ತು ಇದಕ್ಕಾಗಿ ಅಗತ್ಯವಿರುವಲ್ಲಿ ಅವರು ಮರಣವನ್ನು ಎದುರಿಸಲೂ ಸಿದ್ಧರಿದ್ದರು. ಆತನ ಪ್ರೀತಿಯಲ್ಲಿ ನಿಷ್ಠೆಯಿಂದ ಉಳಿಯುವವರು, ದೇವರಿಂದ ಒಂದು ನಿತ್ಯ ಭವಿಷ್ಯತ್ತನ್ನು ಪಡೆಯುವರೆಂಬ ಭರವಸೆಯಿಂದಿರಬಲ್ಲರು. ಇದು ಲೋಕವು ನಮಗೆ ಕೊಡಲಾರದ ಒಂದು ವಿಷಯವಾಗಿದೆ. (ಮಾರ್ಕ 8:34-36) ಆದರೆ ನಿತ್ಯ ಜೀವವನ್ನು ಪಡೆಯುವುದಕ್ಕಿಂತಲೂ ಹೆಚ್ಚಿನ ಸಂಗತಿಯು ಇದರಲ್ಲಿ ಒಳಗೂಡಿದೆ.
18. ನಿತ್ಯ ಜೀವವು ಏಕೆ ತುಂಬ ಅಪೇಕ್ಷಣೀಯವಾಗಿದೆ?
18 ಯೆಹೋವನಿಲ್ಲದೆ ಸದಾಕಾಲ ಜೀವಿಸುವುದು ಅಸಾಧ್ಯವಾಗಿರುವುದಾದರೂ, ನಮ್ಮ ಸೃಷ್ಟಿಕರ್ತನಿಲ್ಲದೆ ತುಂಬ ದೀರ್ಘವಾದ ಜೀವಿತವನ್ನು ನಡೆಸುವುದು ಹೇಗಿರಬಹುದೆಂಬುದನ್ನು ಸ್ವಲ್ಪ ಊಹಿಸಿ ನೋಡಿ. ನಿಜವಾದ ಉದ್ದೇಶವಿಲ್ಲದೆ ಅದು ಬರಿದಾಗಿರುವುದು. ಯೆಹೋವನು ತನ್ನ ಜನರಿಗೆ, ಈ ಕಡೇ ದಿವಸಗಳಲ್ಲಿ ಮಾಡಲಿಕ್ಕಾಗಿ ತೃಪ್ತಿದಾಯಕ ಕೆಲಸವನ್ನು ಕೊಟ್ಟಿದ್ದಾನೆ. ಆದುದರಿಂದ, ಮಹಾ ಉದ್ದೇಶಕರ್ತನಾಗಿರುವ ಯೆಹೋವನು ನಿತ್ಯ ಜೀವವನ್ನು ಕೊಡುವಾಗ, ಅದು ಕಲಿಯಲು ಮತ್ತು ಮಾಡಲು ಅತ್ಯಾಶ್ಚರ್ಯಕರವಾದ ಹಾಗೂ ಪ್ರಯೋಜನಾರ್ಹವಾದ ಕೆಲಸಗಳಿಂದ ತುಂಬಿರುವುದೆಂಬ ಭರವಸೆ ನಮಗಿರಬಲ್ಲದು. (ಪ್ರಸಂಗಿ 3:11) ಮುಂದಿನ ಸಹಸ್ರಮಾನಗಳಲ್ಲಿ ನಾವು ಎಷ್ಟೇ ಕಲಿತರೂ, ‘ದೇವರ ಐಶ್ವರ್ಯ, ಜ್ಞಾನ, ವಿವೇಕದ ಆಗಾಧತೆಯನ್ನು’ ನಾವು ಎಂದಿಗೂ ಪೂರ್ಣವಾಗಿ ಗ್ರಹಿಸಲಾರೆವು!—ರೋಮಾಪುರ 11:33.
ತಂದೆಗೆ ನಿಮ್ಮ ಮೇಲೆ ಮಮತೆ ಇದೆ
19. ಯೇಸು ಕ್ರಿಸ್ತನು ತನ್ನ ಶಿಷ್ಯರನ್ನು ಅಗಲುವುದಕ್ಕೆ ಮುಂಚೆ ಯಾವ ಪುನರಾಶ್ವಾಸನೆಯನ್ನು ಕೊಟ್ಟನು?
19 ಯೇಸು ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರೊಂದಿಗೆ ಕಳೆದ ಕೊನೆಯ ಸಾಯಂಕಾಲದಂದು, ಅಂದರೆ ಸಾ.ಶ. 33ರ ನೈಸಾನ್ 14ರಂದು, ಮುಂದೆ ಕಾದಿದ್ದ ಸಂಗತಿಗಳಿಗಾಗಿ ಅವರನ್ನು ಬಲಪಡಿಸಲು ಅನೇಕ ವಿಷಯಗಳನ್ನು ಹೇಳಿದನು. ಅವರೆಲ್ಲರೂ ಯೇಸುವಿನ ಕಷ್ಟಗಳ ಸಮಯದಲ್ಲಿ ಅವನಿಗೆ ಅಂಟಿಕೊಂಡಿದ್ದರು, ಮತ್ತು ತಮಗಾಗಿ ಅವನಲ್ಲಿದ್ದ ಪ್ರೀತಿಯನ್ನು ವ್ಯಕ್ತಿಗತವಾಗಿ ಅನುಭವಿಸಿದ್ದರು. (ಲೂಕ 22:28, 30; ಯೋಹಾನ 1:16; 13:1) ಅನಂತರ ಯೇಸು ಅವರಿಗೆ ಪುನರಾಶ್ವಾಸನೆ ಕೊಟ್ಟದ್ದು: “ತಂದೆಯು ತಾನೇ ನಿಮ್ಮ ಮೇಲೆ ಮಮತೆ ಇಡುತ್ತಾನಲ್ಲವೇ.” (ಯೋಹಾನ 16:27) ಆ ಮಾತುಗಳು, ತಮ್ಮ ಸ್ವರ್ಗೀಯ ತಂದೆಗೆ ತಮ್ಮ ಕಡೆಗಿದ್ದ ಕೋಮಲ ಭಾವನೆಗಳನ್ನು ಗ್ರಹಿಸಲು ಆ ಶಿಷ್ಯರಿಗೆಷ್ಟು ಸಹಾಯಮಾಡಿದ್ದಿರಬಹುದು!
20. ನೀವೇನನ್ನು ಮಾಡಲು ನಿರ್ಧರಿಸಿದ್ದೀರಿ, ಮತ್ತು ನಿಮಗೆ ಯಾವುದರ ಕುರಿತು ಭರವಸೆಯಿರಸಾಧ್ಯವಿದೆ?
20 ಈಗ ಜೀವಿಸುತ್ತಿರುವ ಅನೇಕರು, ಹಲವಾರು ದಶಕಗಳಿಂದ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಿದ್ದಾರೆ. ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಮುಂಚೆ, ನಾವು ಇನ್ನೂ ಹೆಚ್ಚಿನ ಕಷ್ಟಗಳನ್ನು ಎದುರಿಸುವೆವು. ಅಂಥ ಕಷ್ಟಸಂಕಟಗಳು, ನಿಮಗಾಗಿ ದೇವರಿಗಿರುವ ನಿಷ್ಠಾವಂತ ಪ್ರೀತಿಯ ಕುರಿತು ಶಂಕೆ ಹುಟ್ಟಿಸುವಂತೆ ಬಿಡಬೇಡಿರಿ. ಯೆಹೋವನಿಗೆ ನಿಮ್ಮ ಮೇಲೆ ಮಮತೆ ಇದೆ ಎಂಬುದನ್ನು ಎಷ್ಟು ಬಾರಿ ಹೇಳಿದರೂ ಸಾಲದು. (ಯಾಕೋಬ 5:11, NW) ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ಪಾತ್ರವನ್ನು ನಿರ್ವಹಿಸುತ್ತಾ ಇದ್ದು, ದೇವರ ನಿಯಮಗಳನ್ನು ನಿಷ್ಠೆಯಿಂದ ಪಾಲಿಸುತ್ತಿರೋಣ. (ಯೋಹಾನ 15:8-10) ಆತನ ನಾಮವನ್ನು ಸ್ತುತಿಸಲು ಪ್ರತಿಯೊಂದು ಸಂದರ್ಭವನ್ನು ಉಪಯೋಗಿಸೋಣ. ಪ್ರಾರ್ಥನೆಯ ಮೂಲಕ ಮತ್ತು ಆತನ ವಾಕ್ಯವನ್ನು ಅಭ್ಯಾಸಿಸುವ ಮೂಲಕ, ಯೆಹೋವನಿಗೆ ಸಮೀಪವಾಗುತ್ತಾ ಇರುವ ನಮ್ಮ ದೃಢಸಂಕಲ್ಪವನ್ನು ನಾವು ಬಲಪಡಿಸಬೇಕು. ನಾಳಿನ ದಿನ ನಮ್ಮ ಮೇಲೆ ಏನೇ ತರಲಿ, ನಾವು ಮಾತ್ರ ಯೆಹೋವನನ್ನು ಮೆಚ್ಚಿಸಲು ನಮ್ಮಿಂದಾಗುವುದೆಲ್ಲವನ್ನೂ ಮಾಡುತ್ತಿರುವಲ್ಲಿ, ನಾವು ಆತನ ನಿರಂತರ ಪ್ರೀತಿಯ ಕುರಿತಾಗಿ ಪೂರ್ಣ ಭರವಸೆಯಿಂದ ಶಾಂತಿಯಿಂದಿರುವೆವು.—2 ಪೇತ್ರ 3:14.
[ಪಾದಟಿಪ್ಪಣಿ]
a ರೋಮಾಪುರ 8:38, 39, NW: “ಏಕೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ಸರಕಾರಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ, ಶಕ್ತಿಗಳಾಗಲಿ, ಎತ್ತರವಾಗಲಿ, ಆಳವಾಗಲಿ, ಬೇರೆ ಯಾವುದೇ ಸೃಷ್ಟಿಯಾಗಲಿ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾರದೆಂಬ ದೃಢವಾದ ನಂಬಿಕೆ ನನಗಿದೆ.”
ನೀವು ಹೇಗೆ ಪ್ರತಿಕ್ರಿಯಿಸುವಿರಿ?
• ನಮ್ಮ ಆತ್ಮಿಕ ಹಾಗೂ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ನಮಗೆ ವಿಶೇಷವಾಗಿ ಯಾರ ಪ್ರೀತಿ ಆವಶ್ಯಕ?
• ಯಾವ ವಿಷಯಗಳು ಯೆಹೋವನು ತನ್ನ ಸೇವಕರನ್ನು ಪ್ರೀತಿಸುವುದನ್ನು ನಿಲ್ಲಿಸುವಂತೆ ಮಾಡಲಾರವು?
• ಯೆಹೋವನ ಪ್ರೀತಿಯನ್ನು ಅನುಭವಿಸುವುದು “ಜೀವಕ್ಕಿಂತ ಶ್ರೇಷ್ಠ”ವಾಗಿರುವುದು ಹೇಗೆ?
[ಪುಟ 13ರಲ್ಲಿರುವ ಚಿತ್ರಗಳು]
ದೇವರ ಪ್ರೀತಿಯಿಂದ ಅಗಲಿಸಲ್ಪಟ್ಟಿದ್ದೇವೆಂದು ನಮಗನಿಸುವಲ್ಲಿ, ನಾವು ಪರಿಸ್ಥಿತಿಯನ್ನು ಸರಿಪಡಿಸಲು ಕ್ರಿಯೆಗೈಯಬಹುದು
[ಪುಟ 15ರಲ್ಲಿರುವ ಚಿತ್ರ]
ತಾನು ಏಕೆ ಹಿಂಸಿಸಲ್ಪಟ್ಟೆನೆಂದು ಪೌಲನಿಗೆ ತಿಳಿದಿತ್ತು