ಸ್ವ-ತ್ಯಾಗದ ಭಾವವುಳ್ಳವರಾಗಿರ್ರಿ!
ರಾಲ್ಫ್a ಒಬ್ಬ ಮೌಲ್ಯತೆಯ ಕಾರ್ಮಿಕನಾಗಿದ್ದ. ಕ್ರೈಸ್ತ ಶುಶ್ರೂಷೆಯಲ್ಲಿ ತನ್ನ ಪಾಲನ್ನು ಹೆಚ್ಚಿಸುವಂತೆ ಅಂಶ-ಕಾಲಿಕ ಕೆಲಸ ಪಡೆಯಲು ಅವನು ನಿರ್ಣಯಿಸಿದಾಗ, ಅವನ ಧಣಿಯು ಸಹಕರಿಸಲು ಸಿದ್ಧನಾದನು. ಆದುದರಿಂದ ವರ್ಷಗಳ ತನಕ ರಾಲ್ಫ್ ಪಯನೀಯರ ಸೇವೆಯನ್ನು ಆನಂದಿಸ ಶಕ್ತನಾದನು. ಆದರೂ ಒಂದು ದಿನ ಕೆಲಸದ ಪರಿಸ್ಥಿತಿಯು ಬದಲಾಯಿತು. ರಾಲ್ಫ್ ತನ್ನ ಕೆಲಸದಲ್ಲಿ ಎಷ್ಟು ದಕ್ಷತೆಯುಳ್ಳವನಾಗಿ ತೋರಿಸಿಕೊಟ್ಟನೆಂದರೆ ಆ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರನ ಸ್ಥಾನವು ಅವನಿಗೆ ನೀಡಲ್ಪಟ್ಟಿತು. ಆ ಕೆಲಸದಲ್ಲಿ ಆಕರ್ಷಕ ವೇತನ ಮತ್ತು ಅಧಿಕ ಪ್ರಗತಿಯ ಒಳ್ಳೇ ಪ್ರತೀಕ್ಷೆಗಳು ಸೇರಿದ್ದವು. ಆದರೆ ಅಂಶ-ಕಾಲಿಕ ಕೆಲಸವು ಇನ್ನು ಮುಂದೆ ಶಕ್ಯವಿಲ್ಲ.
ರಾಲ್ಫ್ಗೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಪೋಷಿಸಲಿಕ್ಕಿತ್ತು, ಮತ್ತು ಈ ಹೆಚ್ಚು ಹಣದ ಕೆಲಸವು ಉಪಯುಕ್ತವಾಗಿರುತ್ತಿತ್ತು. ಆದಾಗ್ಯೂ, ಅವನು ಅದನ್ನು ಬೇಡವೆಂದನು, ಮತ್ತು ಆತ್ಮಿಕ ಮತ್ತು ಆರ್ಥಿಕ ಹಂಗುಗಳನ್ನು ಎರಡನ್ನೂ ಮುಟ್ಟುವಂತೆ ಅನುಮತಿಸುವ ಇನ್ನೊಂದು ಕೆಲಸಕ್ಕಾಗಿ ಅವನು ಅರ್ಜಿಹಾಕಿದನು. ರಾಲ್ಫ್ನ ಧಣಿಯು ಈ ನಿರ್ಣಯವನ್ನು ಕಂಡು ಚಕಿತನಾದನು. ಹೆಚ್ಚು ಸಂಬಳದ ಕೆಲಸದ ನೀಡಿಕೆ ಸಹಾ ವ್ಯರ್ಥವೆಂದು ಗ್ರಹಿಸಿದ ಅವನ ಧಣಿ ಕೊನೆಗೆ ಅಂದದ್ದು: “ನಿನ್ನ ದೃಢನಿಶ್ಚಯದೊಂದಿಗೆ ನಾನು ಸ್ಪರ್ಧಿಸಲಾರೆನೆಂದು ನನಗೆ ತಿಳಿಯಿತು.”
ಹೌದು, ರಾಲ್ಫ್ ದೃಢ ನಿಶ್ಚಯವುಳ್ಳವನಾಗಿದ್ದ. ಆದರೆ ಅವನಲ್ಲಿ ಇನ್ನೊಂದು ಗುಣ—ಸ್ವ-ತ್ಯಾಗದ ಭಾವ ಸಹಾ ಇತ್ತು. ಅಂಥ ಭಾವವು ನಮ್ಮ ಈ ಸ್ವಾರ್ಥ-ಲೋಲುಪ ಲೋಕದಲ್ಲಿ ಅಪೂರ್ವ. ಆದರೆ ಅದು ಪ್ರಯೋಜನಕಾರವೂ ಸಂತೃಪ್ತಿಕರವೂ ಆದ ಜೀವನ ಮಾರ್ಗಕ್ಕೆ ನಡಿಸಬಲ್ಲದು. ಈ ಸ್ವ-ತ್ಯಾಗದ ಭಾವವೆಂದರೇನು? ಅದು ಏನನ್ನು ಅವಶ್ಯಪಡಿಸುತ್ತದೆ? ಮತ್ತು ಅದನ್ನು ಕಾಪಾಡಿಕೊಳ್ಳಲು ನಾವೇನನ್ನು ಮಾಡಬೇಕು?
ಒಂದು ಬೈಬಲ್ ಆವಶ್ಯಕತೆ
ತ್ಯಾಗ ಮಾಡುವುದೆಂದರೆ ಏನಾದರೂ ಮೂಲ್ಯತೆಯ ವಸ್ತುವನ್ನು ಬಿಟ್ಟುಕೊಡುವುದು ಅಥವಾ ಅರ್ಪಣೆ ಮಾಡುವುದಾಗಿದೆ. ಅರ್ಪಣೆಯು ಮೊದಲನೆ ನಂಬಿಗಸ್ತ ಸಾಕ್ಷಿಯಾದ ಹೇಬೆಲನ ಸಮಯದಿಂದ ಸತ್ಯಾರಾಧನೆಯ ಒಂದು ಭಾಗವಾಗಿದೆ, ಅವನು “ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು,” ದೇವರಿಗೆ ಯಜ್ಞವಾಗಿ ಅರ್ಪಿಸಿದ್ದನು. (ಆದಿಕಾಂಡ 4:4) ನಂಬಿಕೆಯ ಪುರುಷರಾಗಿದ್ದ ನೋಹ ಮತ್ತು ಯಾಕೋಬರು ಅದೇ ರೀತಿ ಮಾಡಿದ್ದರು. (ಆದಿಕಾಂಡ 8:20; 31:54) ಪಶು ಅರ್ಪಣೆಗಳು ಮೋಶೆಯ ನಿಯಮ ಶಾಸ್ತ್ರದ ಒಂದು ಮಹತ್ವವುಳ್ಳ ವೈಶಿಷ್ಟ್ಯವಾಗಿದ್ದವು. (ಯಾಜಕಕಾಂಡ 1:2-4) ಆ ನಿಯಮದ ಕೆಳಗಾದರೋ ಆರಾಧಕರಿಗೆ ತಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡುವಂತೆ ಬೋಧಿಸಲಾಗಿತ್ತು. ಯಾವುದೇ ವ್ಯಂಗತೆ ಇದ್ದ ಪಶುಗಳನ್ನು ಯಜ್ಞವಾಗಿ ನೀಡುವಂತೆ ಅವರಿಗೆ ಅನುಮತಿ ಇರಲಿಲ್ಲ. (ಯಾಜಕಕಾಂಡ 22:19, 20; ಧರ್ಮೋಪದೇಶಕಾಂಡ 15:21) ಧರ್ಮಭ್ರಷ್ಟ ಇಸ್ರಾಯೇಲ್ಯರು ಈ ನಿಯಮವನ್ನು ಮೀರಿದಾಗ, ದೇವರು ಅವರಿಗೆ ಬುದ್ಧಿಹೇಳುತ್ತಾ ಅಂದದ್ದು: “ಕುಂಟಾದ ಪಶುವನ್ನು ಅರ್ಪಿಸುವುದು ದೋಷವಲ್ಲವೆಂದು ನಂಬುತ್ತೀರೋ? ಇಂಥದನ್ನು ದೇಶಾಧಿಪತಿಗೆ ಒಪ್ಪಿಸು; ಅವನು ನಿನಗೆ ಮೆಚ್ಚುವನೋ? ನಿನ್ನನ್ನು ದಯೆಯಿಂದ ಸೇರಿಸಿಕೊಳ್ಳುವನೋ? . . . ನಾನು ಅದನ್ನು ನಿಮ್ಮ ಕೈಯಿಂದ ಸ್ವೀಕರಿಸಲು ಸಂತೋಷಿಸುವೆನೋ?”—ಮಲಾಕಿಯ 1:8, 13.
ಈ ಅರ್ಪಣೆಯ ತತ್ವವು ಕ್ರೈಸ್ತ ಆರಾಧನೆಯೊಳಗೆ ತರಲ್ಪಟ್ಟಿದೆ. ಆದರೆ, ಕ್ರಿಸ್ತನು ಪೂರ್ಣ ವಿಮೋಚನಾ ಬೆಲೆಯನ್ನು ಸಲ್ಲಿಸಿದರಿಂದಾಗಿ, ಪಶು ಯಜ್ಞಗಳು ಇನ್ನು ಮುಂದೆ ದೇವರಿಗೆ ಸ್ವೀಕರಣೀಯವಾಗಿರಲಿಲ್ಲ. ಹಾಗಾದರೆ, ಕ್ರೈಸ್ತರು ಸ್ವೀಕಾರ್ಹವಾದ ಯಾವ ಯಜ್ಞವನ್ನು ನೀಡಶಕ್ತರು? ರೋಮಾಪುರ 12:1ರಲ್ಲಿ ಪೌಲನು ಬರೆದದ್ದು: “ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವುದೇನಂದರೆ—ನೀವು ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು.” ಎಂಥ ವಿಸ್ಮಯಕರವಾದ ಬದಲಾವಣೆ! ಸತ್ತ ಪಶುಗಳನ್ನು ಅರ್ಪಣೆ ಮಾಡುವ ಬದಲಾಗಿ, ಕ್ರೈಸ್ತರು ತಮ್ಮನ್ನು ಸಜೀವವಾಗಿ—ತಮ್ಮ ಶಕ್ತಿ, ಸ್ವತ್ತುಗಳು ಮತ್ತು ಸಾಮರ್ಥ್ಯಗಳನ್ನು ಅರ್ಪಿಸಬೇಕಾಗಿತ್ತು. ಮತ್ತು ಇಸ್ರಾಯೇಲಿನಲ್ಲಿ ಇದ್ದ ಹಾಗೆ, ಯೆಹೋವನು “ಕುಂಟಾದ” ಅಥವಾ ಅರೆಹೃದಯದ ಯಜ್ಞಗಳನ್ನು ಸ್ವೀಕರಿಸಲಾರನು. ಆತನ ಆರಾಧಕರು ಆತನಿಗೆ ಅತ್ಯುತ್ತಮವಾದದ್ದನ್ನು ಕೊಡುವಂತೆ ಅಂದರೆ ತಮ್ಮ ಪೂರ್ಣ ಹೃದಯ, ಆತ್ಮ, ಮನಸ್ಸು ಮತ್ತು ಶಕಿಯ್ತಿಂದ ಆತನನ್ನು ಸೇವಿಸುವಂತೆ ಆತನು ಕೇಳುತ್ತಾನೆ.—ಮಾರ್ಕ 12:30.
ಹೀಗೆ ಸ್ವ-ತ್ಯಾಗದ ಭಾವದಲ್ಲಿ, ಒಬ್ಬನು ಕ್ರೈಸ್ತ ಶುಶ್ರೂಷೆಯಲ್ಲಿ ತನ್ನನ್ನು ಒಂದು ಕೂಟಗಳ ಮತ್ತು ಚಟುವಟಿಕೆಯ ಕಾಲತಖ್ತೆಗೆ ಕೇವಲ ಬದ್ಧನಾಗಿ ಇಡುವುದಕ್ಕಿಂತ ಎಷ್ಟೋ ಹೆಚ್ಚು ಒಳಗೂಡಿರುತ್ತದೆ. ವೆಚ್ಚವು ಎಷ್ಟೇ ಇರಲಿ, ದೇವರ ಚಿತ್ತವನ್ನು ಮಾಡುವ ದೃಢ ನಿಶ್ಚಯವೆಂದೇ ಅದರ ಅರ್ಥ. ಕಷ್ಟಗಳನ್ನು ಮತ್ತು ಅನಾನುಕೂಲತೆಗಳನ್ನು ಸಹಿಸಿಕೊಳ್ಳಲು ಸಿದ್ಧರಾಗಿರುವುದೆಂದು ಅದರ ಅರ್ಥವಾಗಿದೆ. “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ,” ಯೇಸುವಂದದ್ದು, “ಅವನು ತನ್ನನ್ನು ನಿರಾಕರಿಸಿ ತನ್ನ ಯಾತನಾ ಕಂಭವನ್ನು ಹೊತ್ತುಕೊಂಡು ಸದಾ ನನ್ನ ಹಿಂದೆ ಬರಲಿ.” (ಮತ್ತಾಯ 16:24) ಒಬ್ಬ ಕ್ರೈಸ್ತನು ವೈಯಕ್ತಿಕ ಹೆಬ್ಬಯಕೆಯನ್ನು ಅಥವಾ ಪ್ರಾಪಂಚಿಕ ಗುರಿಗಳನ್ನು ತನ್ನ ಮುಖ್ಯ ಚಿಂತೆಯಾಗಿ ಮಾಡುವುದಿಲ್ಲ. ಅವನ ಜೀವಿತವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಪ್ರಥಮವಾಗಿ ಹುಡುಕುವುದರ ಸುತ್ತಲೂ ಕೇಂದ್ರೀಕರಿಸಿರುತ್ತದೆ. (ಮತ್ತಾಯ 6:33) ಅವಶ್ಯವಿದ್ದರೆ, ಅವನು ತನ್ನ “ಯಾತನೆಯ ಕಂಭವನ್ನು ಹೊತ್ತುಕೊಳ್ಳಲು,” ಹಿಂಸೆಯನ್ನು, ಅವಮಾನ ಮತ್ತು ಮರಣವನ್ನು ಸಹಾ ಅನುಭವಿಸಲು ಸಿದ್ಧನಾಗಿರುವನು!
ಸ್ವ-ತ್ಯಾಗದಿಂದ ಬರುವ ಆಶೀರ್ವಾದಗಳು
ಅಂಥ ಗಂಭೀರ ಸಂಭಾವ್ಯತೆಗಳಿರಲಾಗಿ, ಸ್ವ-ತ್ಯಾಗವು ಅದಕ್ಕೆ ಸಾರ್ಥಕವೂ ಎಂಬದಾಗಿ ಒಬ್ಬನು ಯೋಚಿಸಬಹುದು. ಯಾರು ಯೆಹೋವ ದೇವರನ್ನು ಪ್ರೀತಿಸುತ್ತಾರೋ ಮತ್ತು ಆತನ ಹೆಸರು ಗೌರವಿಸಲ್ಪಡುವಂತೆ ನೋಡ ಬಯಸುತ್ತಾರೋ ಅವರಿಗೆ ಅದು ಖಂಡಿತವಾಗಿಯೂ ಸಾರ್ಥಕ. (ಮತ್ತಾಯ 22:37) ಯೇಸು ಕ್ರಿಸ್ತನಿಂದ ಇಡಲ್ಪಟ್ಟ ಪರಿಪೂರ್ಣ ಮಾದರಿಯನ್ನು ಗಮನಿಸಿರಿ. ಈ ಭೂಮಿಗೆ ಬರುವ ಮುಂಚಿತವಾಗಿ, ಅವನು ಪರಲೋಕದಲ್ಲಿ ಆತ್ಮಿಕ ಜೀವಿಯಾಗಿ ಒಂದು ಉನ್ನತಸ್ಥಾನವನ್ನು ಆನಂದಿಸಿದ್ದನು. ಆದರೂ, ಅವನು ತನ್ನ ಶಿಷ್ಯರಿಗೆ ಹೇಳಿದಂತೆ, ‘ತನ್ನ ಸ್ವಂತ ಚಿತ್ತವನ್ನಲ್ಲ ತನ್ನನ್ನು ಕಳುಹಿಸಿದ ದೇವರ ಚಿತ್ತವನ್ನು ಮಾಡಲು’ ಹುಡುಕಿದನು. (ಯೋಹಾನ 5:30) ಆದುದರಿಂದ ಆತನು ಸಿದ್ಧಮನಸ್ಸಿನಿಂದ “ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶ್ಯನಾದನು. ತನ್ನನ್ನು ಮನುಷ್ಯನಾಗಿ ಕಂಡುಕೊಂಡಾಗ, ತನ್ನನ್ನು ತಗ್ಗಿಸಿಕೊಂಡು ಮರಣವನ್ನು, ಹೌದು, ಯಾತನೆಯ ಕಂಭದ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.”—ಫಿಲಿಪ್ಪಿ 2:7, 8, NW.
ಅಂಥ ತ್ಯಾಗಗಳು ನಿಷ್ಫಲವಾಗಿ ರುಜುವಾಗಲಿಲ್ಲ. ಯೇಸು “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡಲು” ಸಿದ್ಧನಾಗಿದ್ದರಿಂದ, ಅವನು ವಿಮೋಚನಾ ಬೆಲೆಯನ್ನು ಕೊಡಶಕ್ತನಾದನು ಮತ್ತು ಹೀಗೆ ಅಪೂರ್ಣ ಮಾನವರು ಪರಲೋಕದಲ್ಲಿ ಅಮರತ್ವವನ್ನು ಇಲ್ಲವೇ ಭೂಮಿಯಲ್ಲಿ ನಿತ್ಯ ಜೀವವನ್ನು ಪಡೆಯಲು ಶಕ್ತರಾಗಿ ಮಾಡಿದನು. (ಯೋಹಾನ 3:16; 15:13; 1 ಯೋಹಾನ 2:2) ತನ್ನ ಸಮಗ್ರತೆಯನ್ನು ಪರಿಪೂರ್ಣವಾಗಿ ಇಟ್ಟ ಮೂಲಕ, ಯೆಹೋವನ ನಾಮವು ಬಹಳವಾಗಿ ಸ್ತುತಿಸಲ್ಪಡುವಂತೆ ಸಾಧ್ಯಮಾಡಿದನು. (ಜ್ಞಾನೋಕ್ತಿ 27:11) ಆತನ ಈ ಆತ್ಮ-ತ್ಯಾಗದ ಮಾರ್ಗಕ್ಕಾಗಿ ಯೆಹೋವನು ಅವನನ್ನು ಆಶೀರ್ವದಿಸಿದರ್ದಲ್ಲಿ ಆಶ್ಚರ್ಯವೇನಿಲ್ಲ! “ಈ ಕಾರಣದಿಂದ ದೇವರು ಅವನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.”—ಫಿಲಿಪ್ಪಿ 2:9.
ನಿಶ್ಚಯವಾಗಿ, ಯೇಸು ದೇವರ ಏಕ-ಜಾತ ಪುತ್ರನಾಗಿದ್ದನು. ದೇವರಿಗಾಗಿ ತ್ಯಾಗಗಳನ್ನು ಮಾಡುವ ಇತರರಿಗೆ ಸಹಾ ಆತನು ಪ್ರತಿಫಲವನ್ನು ಕೊಡುತ್ತಾನೋ? ಹೌದು, ಮತ್ತು ಇದು ಅನೇಕ ಪುರಾತನ ಮತ್ತು ಆಧುನಿಕ ಕಾಲದ ಮಾದರಿಗಳಿಂದ ವ್ಯಕ್ತವಾಗುತ್ತದೆ. ಮೋವಾಬ್ಯಳಾದ ರೂತಳ ಬೈಬಲ್ ವೃತ್ತಾಂತವನ್ನು ತುಸು ಗಮನಿಸಿರಿ. ಆಕೆಯು ಯೆಹೋವನ ಕುರಿತಾಗಿ ಕಲಿತದ್ದು ಆಕೆಯ ಇಸ್ರಾಯೇಲ್ಯ ಗಂಡನ ಮೂಲಕವಾಗಿ ಎಂಬುದು ವ್ಯಕ್ತ. ಅವನು ಸತ್ತನಂತರ, ಅವಳಿಗೊಂದು ನಿರ್ಣಯವನ್ನು ಮಾಡಬೇಕಾಯಿತು. ತಾನು ಜನಿಸಿದ ವಿಧರ್ಮಿ ದೇಶದಲ್ಲಿ ಉಳಿಯುವಳೋ ಇಲ್ಲವೇ ತನ್ನ ವೃದ್ಧೆ ಅತೆಯ್ತಾದ ನವೂಮಿಯೊಂದಿಗೆ ವಾಗ್ದಾನ ದೇಶಕ್ಕೆ ಪ್ರಯಾಣಿಸುವಳೋ? ಅದಕ್ಕಾಗಿ ಅವಳಿಗೆ ತನ್ನ ಹೆತ್ತವರ ಸಹವಾಸವನ್ನು ತ್ಯಜಿಸಬೇಕಾದಾಗ್ಯೂ ಮತ್ತು ಒಂದುವೇಳೆ ಪುನರ್ವಿವಾಹದ ಪ್ರತೀಕ್ಷೆಯನ್ನು ಬಿಟ್ಟುಕೊಡುವ ಅರ್ಥದಲ್ಲಿದ್ದರೂ ಕೂಡಾ, ರೂತ್ ಎರಡನೆಯದನ್ನು ಆರಿಸಿಕೊಂಡಳು. ಹೇಗಿದ್ದರೂ ರೂತ್ ಯೆಹೋವನನ್ನು ತಿಳಿದಿದ್ದಳು ಮತ್ತು ಆತನನ್ನು ಆತನಾದುಕೊಂಡ ಜನರ ನಡುವೆ ಸೇವಿಸುವ ಅಪೇಕ್ಷೆಯು ಅವಳನ್ನು ನವೂಮಿಯೊಂದಿಗೆ ಜತೆಸೇರುವಂತೆ ಪ್ರೇರೇಪಿಸಿತು.
ಅಂಥ ಸ್ವ-ತ್ಯಾಗಕ್ಕಾಗಿ ರೂತಳಿಗೆ ಪ್ರತಿಫಲ ದೊರೆಯಿತೋ? ನಿಶ್ಚಯವಾಗಿಯೂ ಹೌದು! ಸಮಯಾನಂತರ ಬೊವಾಜನೆಂಬ ಒಬ್ಬ ಜಮೀನುದಾರನು ಆಕೆಯನ್ನು ಪತ್ನಿಯಾಗಿ ತಕ್ಕೊಂಡನು ಮತ್ತು ರೂತ್ ಓಬೇದ್ ಎಂಬ ಪುತ್ರನ ತಾಯಿಯಾದಳು, ಇದು ಅವಳನ್ನು ಯೇಸು ಕ್ರಿಸ್ತನ ಪೂರ್ವಜಳನ್ನಾಗಿ ಮಾಡಿತು.—ಮತ್ತಾಯ 1:5, 16.
ಇದೇ ರೀತಿಯ ಆಶೀರ್ವಾದಗಳು ಸ್ವ-ತ್ಯಾಗ ಮಾಡಿದ ಆಧುನಿಕ ಸಮಯದ ದೇವರ ಸೇವಕರಿಂದ ಆನಂದಿಸಲ್ಪಟ್ಟಿವೆ. ದೃಷ್ಟಾಂತಕ್ಕಾಗಿ, “ಬೈಬಲ್” ಬ್ರೌನ್ ಎಂದು ಪ್ರಖ್ಯಾತರಾಗಿದ್ದ ವಿಲ್ಯಮ್ ಆರ್. ಬ್ರೌನ್ 1923ರಲ್ಲಿ ತನ್ನ ಸ್ವದೇಶವಾದ ವೆಸ್ಟ್ ಇಂಡೀಸ್ನ್ನು ಬಿಟ್ಟು, ಪಶ್ಚಿಮ ಆಫ್ರಿಕದಲ್ಲಿ ಸಾರುವ ಕಾರ್ಯವನ್ನು ವೃದ್ಧಿಸುವುದಕ್ಕಾಗಿ ಹೋದರು. ಅವರೊಂದಿಗೆ ಅವರ ಪತ್ನಿ ಮತ್ತು ಮಗಳು ಇದ್ದರು. ಕಟ್ಟಕಡೆಗೆ ಸಾರುವ ಕಾರ್ಯವು ಆಗಲೇ ಫಲಿಸಲಾರಂಭಿಸಿದ್ದ ನೈಜೀರಿಯಕ್ಕೆ ಅವರು ಹೋದರು. ವಿನ್ಸೆಂಟ್ ಸಾಮ್ವೇಲ್ಸ್ ಎಂಬ ಹೆಸರಿನ ಒಬ್ಬ ಕರಿಯ ಅಮೆರಿಕನ್ ಮತ್ತು ಇನ್ನೊಬ್ಬ ವೆಸ್ಟ್ ಇಂಡಿಯನ್ ಸಾಕ್ಷಿ ಕ್ಲಾಡ್ ಬ್ರೌನ್ ಜೊತೆಯಲ್ಲಿ, “ಬೈಬಲ್” ಬ್ರೌನ್ ಪಶ್ಚಿಮ ಆಫ್ರಿಕದ ಕಾರ್ಯದ ಆರಂಭದ ಹಂತಗಳಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸಿದ್ದರು.
“ಬೈಬಲ್” ಬ್ರೌನ್ ಮತ್ತು ಅವರ ಸಂಗಡಿಗರಿಂದ ಪ್ರಥಮವಾಗಿ ತೆರೆಯಲ್ಪಟ್ಟ ಸಿಯರ ಲಿಯೋನ್, ಲೈಬೀರಿಯ, ಘಾನ, ಮತ್ತು ನೈಜೀರಿಯದಲ್ಲಿ ಇಂದು 1,87,000 ಕ್ಕಿಂತಲೂ ಹೆಚ್ಚು ಪ್ರಚಾರಕರು ಸೇವೆ ಮಾಡುತ್ತಿದ್ದಾರೆ. 1967ರಲ್ಲಿ ತಮ್ಮ ಮರಣಕ್ಕೆ ಮುಂಚಿತವಾಗಿ, “ಬೈಬಲ್” ಬ್ರೌನ್ ಹೇಳಿದ್ದು: “ದೇವರ ರಾಜ್ಯದ ಸುವಾರ್ತೆಗೆ ಪುರುಷರು ಮತ್ತು ಸ್ತ್ರೀಯರು ವಿಧೇಯರಾಗುತ್ತಿರುವುದನ್ನು ಕಾಣುವುದು ಅದೆಷ್ಟು ಸಂತೋಷ!” ಹೌದು, ತಮ್ಮ ಸ್ವ-ತ್ಯಾಗದ ಮಾರ್ಗಕ್ಕಾಗಿ ಅವರು ಹೇರಳವಾಗಿ ಆಶೀರ್ವದಿಸಲ್ಪಟ್ಟರು.
ಸ್ವಾರ್ಥ-ತ್ಯಾಗಿಗಳಾಗಿರುವ ವಿಧಗಳು
ಅದೇ ಆತ್ಮವನ್ನು ನಾವು ಇಂದು ತೋರಿಸಬಲ್ಲ ಕೆಲವು ವಿಧಾನಗಳು ಯಾವುವು? ಮನೆ ಮನೆಯ ಸೇವಾ ಶುಶ್ರೂಷೆಯಲ್ಲಿ ವಾರದಲ್ಲಿ ಕ್ರಮವಾಗಿ ಭಾಗವಹಿಸುವುದು ಅದರಲ್ಲೊಂದು. (ಅಪೊಸ್ತಲರ ಕೃತ್ಯಗಳು 20:20) ವಿಶೇಷವಾಗಿ ಇಡೀ ವಾರ ಐಹಿಕ ಉದ್ಯೋಗ ಮಾಡಿದ ದಣಿದ ಮೇಲೆ, ಇದನ್ನು ಮಾಡುವುದು ಸುಲಭವಾಗಿರಲಿಕ್ಕಿಲ್ಲ. ಆದರೆ ದೊರಕುವ ಸಂತೋಷಗಳು ಅನುಭವಿಸಿದ ಯಾವುವೇ ಅನಾನುಕೂಲತೆಗಳನ್ನು ತೂಕದಲ್ಲಿ ಮಿಗಿಸುತ್ತವೆ. ಯಾಕೆ, “ಮಸಿಯಿಂದಲ್ಲ ಜೀವವುಳ್ಳ ದೇವರ ಆತ್ಮನಿಂದ ಬರೆಯಲ್ಪಟ್ಟ, ಕಲ್ಲಿನ ಮೇಲೆಯಲ್ಲ ಹೃದಯಗಳೆಂಬ ಹಲಿಗೆಗಳ ಮೇಲೆ ಬರೆಯಲ್ಪಟ್ಟ . . . ಕ್ರಿಸ್ತನ ಒಂದು ಪತ್ರವಾಗುವಂತೆ” ಯಾರಿಗಾದರೂ ಸಹಾಯ ಮಾಡುವ ಸುಯೋಗವು ನಿಮಗೆ ದೊರಕ ಸಾಧ್ಯವಿದೆಯಲ್ಲಾ.—2 ಕೊರಿಂಥ 3:3.
ಕೆಲವರು ಪ್ರಾಯಶಃ ಐಹಿಕ ಕೆಲಸದಿಂದ ಯಾ ಮನೋರಂಜನೆಯಿಂದ ಜಾಗ್ರತೆಯಾಗಿ “ಅನುಕೂಲ ಸಮಯವನ್ನು ಕೊಂಡುಕೊಳ್ಳುವ” ಮೂಲಕ, ಸಾರುವ ಕಾರ್ಯದಲ್ಲಿ ತಮ್ಮ ಪಾಲನ್ನು ಹೆಚ್ಚಿಸಿದ್ದಾರೆ. (ಎಫೆಸ 5:16, NW ) ಅನೇಕರು ಕಡಿಮೆ ಪಕ್ಷ ವರ್ಷಕೊಮ್ಮೆಯಾದರೂ ಆಕ್ಸಿಲರಿ ಪಯನೀಯರ ಸೇವೆಯಲ್ಲಿ ಆನಂದಿಸುವಂತೆ ತಮ್ಮ ಕಾಲತಖ್ತೆಯನ್ನು ಏರ್ಪಡಿಸುತ್ತಾರೆ. ಇತರರು ಆಕ್ಸಿಲರಿ ಪಯನೀಯರ ಸೇವೆ ಮಾಡುತ್ತಾ ಮುಂದರಿಯಲು ಅಥವಾ ಕ್ರಮದ ಪಯನೀಯರರಾಗಲು ಶಕ್ತರಾಗಿದ್ದಾರೆ. ಇನ್ನೊಂದು ತ್ಯಾಗವು ಅಧಿಕ ರಾಜ್ಯ ಪ್ರಚಾರಕರ ಅಗತ್ಯವಿರುವ ಕ್ಷೇತ್ರಗಳಿಗೆ ಸ್ಥಳಾಂತರಿಸುವ ಯೋಚನೆ ಮಾಡುವುದೇ. ಇವು ಹೆಚ್ಚಾಗಿ ಜೀವನ-ಶೈಲಿಯಲ್ಲಿ ತೀವ್ರ ಬದಲಾವಣೆಗಳನ್ನು, ಅನಾನುಕೂಲತೆಗಳನ್ನು ತಾಳಿಕೊಳ್ಳುವಿಕೆ, ಹೊಸ ಸಂಸ್ಕೃತಿ ಮತ್ತು ಪದ್ಧತಿಗಳಿಗೆ ಅಳವಡಿಸುವಿಕೆಯನ್ನು ಅವಶ್ಯಪಡಿಸುತ್ತವೆ. ಆದರೆ ಇತರರು ಜೀವವನ್ನು ಪಡೆಯುವಂತೆ ನೆರವಾಗುವುದರಲ್ಲಿ ಪೂರ್ಣ ಪಾಲನ್ನು ತಕ್ಕೊಳ್ಳುವ ಮೂಲಕ ಬರುವ ಆಶೀರ್ವಾದಗಳು ಅಂಥ ತ್ಯಾಗಗಳಿಗೆ ಸಾರ್ಥಕ.
ಕೆನಡದಲ್ಲಿ ಜನಿಸಿದ ಜಾನ್ ಕಟ್ಫರ್ಥ್ ಇದನ್ನು ವೈಯಕ್ತಿಕವಾಗಿ ಕಂಡುಕೊಂಡರು. ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವೀಧರರಾದ ಮೇಲೆ, ಅವರು ಆಸ್ಟ್ರೇಲಿಯದಲ್ಲಿ ಮಿಶನೆರಿಯಾಗಿ ನೇಮಿಸಲ್ಪಟ್ಟರು. “ಅದು ಸ್ವದೇಶದಿಂದ ಎಷ್ಟು ದೂರವಿತ್ತು!” ಎಂದು ಮರುಕಳಿಸಿದರು ಸಹೋದರ ಕಟ್ಫರ್ಥರು. “ನನ್ನ ಹೆತ್ತವರನ್ನು ಮತ್ತು ಮಿತ್ರರನ್ನು ನೋಡಲು ಹರ್ಮಗೆದೋನ್ದಿಗೆ ಮುಂಚೆ ಕೆನಡಕ್ಕೆ ನಾನು ಎಂದಾದರೂ ಹಿಂದೆ ಬರುವೆನೋ? ಅದನ್ನು ತಿಳಿಯುವ ಒಂದೇ ಮಾರ್ಗ ಹೋಗುವುದೇ.” ಸಹೋದರ ಕಟ್ಫರ್ಥರು ಹೋದರು, ಮತ್ತು ತಾನು ಮಾಡಿದ ತ್ಯಾಗಗಳಿಗಾಗಿ ವಿಷಾದಪಡಲಿಲ್ಲ. ಮುಂದಣ ವರ್ಷಗಳಲ್ಲಿ ಅವರು ಪಪುವ ನ್ಯೂಗಿನಿಯಲ್ಲಿ ಸಾಕ್ಷಿಕಾರ್ಯದ ನುಗ್ಗುಮೊನೆಯಾದರು, ಈಗ ಪೂರ್ಣ ಸಮಯದ ಸೇವೆಯ 50 ವರ್ಷಗಳನ್ನು ಮುಗಿಸಿರುವ ಅವರು ಇನ್ನೂ ಹುರುಪಿನಿಂದ ಅಲ್ಲಿ ಸೇವೆ ಮಾಡುತ್ತಿದ್ದಾರೆ. ಒಮ್ಮೆ ಅವರು ಹೇಳಿದ್ದು: “ಯೆಹೋವನ ನಡಿಸುವಿಕೆಯನ್ನು ಹಿಂಬಾಲಿಸಲು ಯಾವಾಗಲೂ ಹುಡುಕುತ್ತಿರುವುದು, ಆತನು ಕೊಡಲು ಯುಕ್ತವೆಂದು ಕಾಣುವ ಯಾವುದೇ ನೇಮಕವನ್ನು ಸ್ವೀಕರಿಸುವುದು ಆನಂದ, ಸಂತೋಷ, ಸಂತೃಪ್ತಿ ಮತ್ತು ಅಗಣಿತ ಸ್ನೇಹಿತರನ್ನು ತರುತ್ತದೆ.”
ನಿಶ್ಚಯವಾಗಿಯೂ ಆರೋಗ್ಯ, ಆರ್ಥಿಕ ಸ್ಥಿತಿಗತಿ, ಮತ್ತು ಕುಟುಂಬ ಹಂಗುಗಳೇ ಮುಂತಾದ ಪರಿಸ್ಥಿತಿಗಳು ನೀವು ಮಾಡಬಲ್ಲ ವಿಷಯಗಳನ್ನು ಸೀಮಿತಗೊಳಿಸಬಹುದು; ಎಲ್ಲರೂ ಪಯನೀಯರರಾಗಿ ಮತ್ತು ಮಿಶನೆರಿಗಳಾಗಿ ಸೇವೆ ಮಾಡಶಕ್ತರಲ್ಲ. ಆದರೂ, ಕೂಟಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಪೂರ್ಣವಾಗಿ ಪಾಲಿಗರಾಗಲು ದೃಢ ನಿಶ್ಚಯ ಮಾಡಿರಿ. ಕೆಟ್ಟ ಹವಾಮಾನವೇ ಮುಂತಾದ ಚಿಕ್ಕಪುಟ್ಟ ಅನಾನುಕೂಲತೆಗಳು ನಿಮ್ಮನ್ನು ತಡೆಯುವಂತೆ ಬಿಡಬೇಡಿರಿ. (ಇಬ್ರಿಯ 10:24, 25) ದೇವರ ವಾಕ್ಯದ ವೈಯಕ್ತಿಕ ಅಭ್ಯಾಸಕ್ಕೂ ಹೆಚ್ಚು ಸಮಯವನ್ನು ತ್ಯಾಗಮಾಡಲು ನೀವು ಶಕ್ತರಾಗಬಹುದು. ಟೀವೀ ಕಾರ್ಯಕ್ರಮಗಳನ್ನು ನೋಡಲು ವ್ಯಯಿಸುವ ಸಮಯವನ್ನು ಸೀಮಿತಗೊಳಿಸುವ ಮೂಲಕ, ಪ್ರಾಯಶಃ ಪ್ರತಿವಾರ “ಟೀವೀ ಇಲ್ಲದ” ಒಂದು ರಾತ್ರಿಯನ್ನು, ಅಥವಾ ಟೀವೀ ಇಲ್ಲದೇ ಹೋಗುವುದನ್ನು ಏರ್ಪಡಿಸುವ ಮೂಲಕ ಕೆಲವು ಕುಟುಂಬಗಳು ಹಾಗೆ ಮಾಡುತ್ತವೆ. ವೈಯಕ್ತಿಕ ಅಧ್ಯಯನಕ್ಕೆ ಸಮಯವನ್ನು ಕಂಡುಕೊಳ್ಳುವ ಮೂಲಕ, ಕೂಟಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಯಾವುದರ ಮೂಲಕ “ಆತನ ನಾಮದ ಬಹಿರಂಗ ಘೋಷಣೆಯನ್ನು” ನೀವು ಮಾಡುತ್ತಿರೋ ಆ “ಸ್ತುತಿಯಜ್ಞವು” ಒಂದು ಉಚ್ಛ ಗುಣಮಟ್ಟದ ಯಜ್ಞವಾಗಿರುವ ಹೆಚ್ಚು ಸಂಭಾವ್ಯತೆ ಇದೆ.—ಇಬ್ರಿಯ 13:15.
ಸಾರುವ ಕಾರ್ಯವು ಈಗ ಅದರ ಕೊನೆಯ ಹಂತದಲ್ಲಿದೆಂಬದನ್ನು ನೆನಪಿನಲ್ಲಿಡಿರಿ. ಶೀಘ್ರದಲ್ಲೇ ದೇವರು ಈ ದುರಾಶೆಯ ಮತ್ತು ಭೋಗಾಸಕ್ತ ಲೋಕದ ಮೇಲೆ ತನ್ನ ತೀರ್ಪನ್ನು ಬರಮಾಡುವನು. (ಚೆಫನ್ಯ 2:3) ದೇವರ ಮೆಚ್ಚಿಗೆಯನ್ನು ಕಾಪಾಡಿಕೊಳ್ಳಬೇಕಾದರೆ, ನಾವು ನಮ್ಮನ್ನು ಮಿತವಾಗಿ ವ್ಯಯಿಸುವಂತೆ ನೋಡಬಾರದು. ನಾವು ‘ನಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಲೇ’ ಬೇಕು. (ರೋಮಾಪುರ 12:1) ಅಂಥ ಭಾವವು ಮಹಾ ಸಂತೋಷ ಮತ್ತು ಸಂತೃಪ್ತಿಯನ್ನು ತರುವುದು. ನಮ್ಮ ಶುಶ್ರೂಷೆಯಲ್ಲಿ ಹೆಚ್ಚಿನ ಸಂತೋಷವನ್ನು ಗಳಿಸಲು ಅದು ನಮಗೆ ಸಹಾಯ ಮಾಡುವುದು. ಮತ್ತು ಅದು ಯೆಹೋವ ದೇವರ ಹೃದಯವನ್ನು ಆನಂದಗೊಳಿಸುವುದು!—ಜ್ಞಾನೋಕ್ತಿ 27:11.
ಆದುದರಿಂದ ಆತ್ಮ-ತ್ಯಾಗದ ಭಾವವನ್ನು ಕಾಪಾಡಿಕೊಳ್ಳಿರಿ. ಇತರರ ಸಹಾಯಕ್ಕಾಗಿ ಮತ್ತು ರಾಜ್ಯದಭಿರುಚಿಗಳ ಬೆಂಬಲಕ್ಕಾಗಿ ನಿಮ್ಮನ್ನು ಕೊಟ್ಟುಕೊಳ್ಳಲು ಹಿಂಜರಿಯಬೇಡಿರಿ. ಪೌಲನು ಪ್ರಬೋಧಿಸುವುದು: “ಇದಲ್ಲದೆ ಪರೋಪಕಾರವನ್ನೂ ಇತರರಿಗೆ ಪಾಲು ಕೊಡುವುದನ್ನೂ ಮರೆಯಬೇಡಿರಿ, ಯಾಕಂದರೆ ಅಂಥ ಯಜ್ಞಗಳನ್ನು ದೇವರು ಮೆಚ್ಚುತ್ತಾನೆ.”—ಇಬ್ರಿಯ 13:16. (w92 2/1)
[ಅಧ್ಯಯನ ಪ್ರಶ್ನೆಗಳು]
a ಹೆಸರು ಬದಲಾಯಿಸಲ್ಪಟ್ಟಿದೆ.
[ಪುಟ 26 ರಲ್ಲಿರುವ ಚಿತ್ರ]
ವೈಯಕಿಕ್ತ ಅಧ್ಯಯನ ಮತ್ತು ಕ್ಷೇತ್ರಸೇವೆಗಾಗಿ ಸಮಯವನ್ನು ಕಂಡುಕೊಳ್ಳುವಿಕೆಯು ತ್ಯಾಗವನ್ನು ಅವಶ್ಯಪಡಿಸೀತು, ಆದರೆ ಅದು ಪ್ರತಿಫಲದಾಯಕವು
[ಪುಟ 28 ರಲ್ಲಿರುವ ಚಿತ್ರ]
ಡಬ್ಲ್ಯೂ.ಆರ್. ಬ್ರೌನ್ ಮತ್ತು ಜಾನ್ ಕಟ್ಫರ್ಥ್ರು ತಮ್ಮ ಸ್ವ-ತ್ಯಾಗದ ಮಾರ್ಗಕ್ಕಾಗಿ ಹೇರಳವಾಗಿ ಆಶೀರ್ವದಿಸಲ್ಪಟ್ಟರು