ಹೃದಯದ ಆನಂದದಿಂದ ಯೆಹೋವನನ್ನು ಸೇವಿಸಿರಿ
“ನೀವು ನಿಮ್ಮ ದೇವರಾದ ಯೆಹೋವನನ್ನು ಹರ್ಷದಿಂದ ಮತ್ತು ಹೃದಯದ ಆನಂದದಿಂದ ಸೇವಿಸದೆ ಹೋದದರಿಂದ . . . ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗುವವು.”—ಧರ್ಮೋಪದೇಶಕಾಂಡ 28:45-47, NW.
1. ಯೆಹೋವನನ್ನು ಸೇವಿಸುವವರು ಆತನನ್ನು ಎಲ್ಲಿಯೇ ಸೇವಿಸಲಿ, ಆನಂದಭರಿತರಾಗಿದ್ದಾರೆ ಎಂಬುದಕ್ಕೆ ಯಾವ ಸಾಕ್ಷ್ಯವಿದೆ?
ಯೆಹೋವನ ಸೇವಕರು, ಆತನ ಚಿತ್ತವನ್ನು ಪರಲೋಕದಲ್ಲಿ ಮಾಡುತ್ತಿರಲಿ ಅಥವಾ ಭೂಮಿಯಲ್ಲಿ ಮಾಡುತ್ತಿರಲಿ, ಆನಂದಭರಿತರಾಗಿದ್ದಾರೆ. ಭೂಮಿಯ ಸ್ಥಾಪನೆಯ ಸಮಯದಲ್ಲಿ “ಮುಂಜಾನೆ ನಕ್ಷತ್ರ” ಗಳಾದ ದೇವದೂತರು ಉತ್ಸಾಹಧ್ವನಿಯೆತ್ತಿದರು, ಮತ್ತು ನಿಸ್ಸಂದೇಹವಾಗಿ ಕೋಟ್ಯನುಕೋಟಿ ಸ್ವರ್ಗೀಯ ದೇವದೂತರು ಆನಂದದಿಂದ ‘ದೇವರ ವಾಕ್ಯವನ್ನು ನೆರವೇರಿಸುತ್ತಾರೆ.’ (ಯೋಬ 38:4-7; ಕೀರ್ತನೆ 103:20) ಯೆಹೋವನ ಏಕಜಾತ ಪುತ್ರನು, ಸ್ವರ್ಗದಲ್ಲಿ ಆನಂದಭರಿತ “ಶಿಲ್ಪಿ” ಯಾಗಿದ್ದನು ಮತ್ತು ಭೂಮಿಯಲ್ಲಿ ಮನುಷ್ಯನಾದ ಯೇಸು ಕ್ರಿಸ್ತನೋಪಾದಿ ದೈವಿಕ ಚಿತ್ತವನ್ನು ಮಾಡುವುದರಲ್ಲಿ ಹರ್ಷವನ್ನು ಕಂಡುಕೊಂಡನು. ಅಷ್ಟೇ ಅಲ್ಲದೆ, “ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.”—ಜ್ಞಾನೋಕ್ತಿ 8:30, 31; ಇಬ್ರಿಯ 10:5-10; 12:2.
2. ಇಸ್ರಾಯೇಲ್ಯರು ಆಶೀರ್ವಾದಗಳನ್ನು ಇಲ್ಲವೆ ಅಶುಭಗಳನ್ನು ಅನುಭವಿಸಿದರೆಂಬುದನ್ನು ಯಾವುದು ನಿಶ್ಚಯಿಸಿತು?
2 ದೇವರನ್ನು ಅವರು ಮೆಚ್ಚಿಸಿದಾಗ ಇಸ್ರಾಯೇಲ್ಯರು ಆನಂದವನ್ನು ಅನುಭವಿಸಿದರು. ಆದರೆ ಆತನಿಗೆ ಅವಿಧೇಯರಾದರೆ ಆಗೇನು? ಅವರು ಎಚ್ಚರಿಸಲ್ಪಟ್ಟದ್ದು: “ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡದೆಯೂ ಆತನು ನೇಮಿಸಿದ ಆಜ್ಞಾವಿಧಿಗಳನ್ನು ಅನುಸರಿಸದೆಯೂ ಹೋದದರಿಂದ ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗಿ ನಿಮ್ಮನ್ನು ಹಿಂದಟ್ಟಿ ಹಿಡಿದು ಕಡೆಗೆ ನಾಶಮಾಡುವವು. ಇವು ನಿಮಗೂ ನಿಮ್ಮ ಸಂತತಿಯವರಿಗೂ ಯಾವಾಗಲೂ ಪ್ರಾಪ್ತವಾಗುತ್ತಾ [ಎಲ್ಲರಿಗೂ] ಎಚ್ಚರಿಕೆಯನ್ನೂ ಬೆರಗನ್ನೂ ಉಂಟುಮಾಡುವವು. ನಿಮಗೆ ಸರ್ವಸಮೃದ್ಧಯುಂಟಾದ ಕಾಲದಲ್ಲಿಯೂ ನೀವು ನಿಮ್ಮ ದೇವರಾದ ಯೆಹೋವನನ್ನು ಹರ್ಷಾನಂದಗಳುಳ್ಳವರಾಗಿ ಸೇವಿಸದೆ ಹೋದದರಿಂದ ಯೆಹೋವನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವನು; ಆಗ ನೀವು ಹಸಿವು ಬಾಯಾರಿಕೆಗಳುಳ್ಳವರಾಗಿ ಬಟ್ಟೆಯೂ ಏನೂ ಇಲ್ಲದೆ ಆ ಶತ್ರುಗಳಿಗೇ ಸೇವಕರಾಗಬೇಕಾಗುವದು. ಆತನು ಕಬ್ಬಿಣದ ನೊಗವನ್ನು ಹೇರಿಸಿ ನಿಮ್ಮನ್ನು ನಾಶಮಾಡುವನು.” (ಧರ್ಮೋಪದೇಶಕಾಂಡ 28:45-48) ಯಾರು ಯೆಹೋವನ ಸೇವಕರಾಗಿದ್ದರು ಮತ್ತು ಯಾರು ಆತನ ಸೇವಕರಾಗಿರಲಿಲ್ಲ ಎಂಬುದನ್ನು ಆಶೀರ್ವಾದಗಳು ಮತ್ತು ಅಶುಭಗಳು ಸೃಷ್ಟಗೊಳಿಸಿದವು. ದೇವರ ತತ್ವಗಳು ಮತ್ತು ಉದ್ದೇಶಗಳೊಂದಿಗೆ ಹುಡುಗಾಟವಾಡಲು ಸಾಧ್ಯವಿಲ್ಲ, ಅಷ್ಟೇ ಅಲ್ಲದೆ ಅವುಗಳ ಉಪೇಕ್ಷೆಯೂ ಸಾಧ್ಯವಿಲ್ಲ ಎಂಬುದನ್ನು ಇಂತಹ ಅಶುಭಗಳು ದೃಢೀಕರಿಸಿದವು. ಹಾಳು ಮಾಡುವ ಮತ್ತು ಗಡೀಪಾರು ಮಾಡುವ ಯೆಹೋವನ ಎಚ್ಚರಿಕೆಗಳಿಗೆ ಇಸ್ರಾಯೇಲ್ಯರು ಕಿವಿಗೊಡಲು ನಿರಾಕರಿಸಿದ್ದರಿಂದ, ಯೆರೂಸಲೇಮ್ “ಲೋಕದ ಸಮಸ್ತಜನಾಂಗಗಳಲ್ಲಿ ಶಾಪ” ವಾಯಿತು. (ಯೆರೆಮೀಯ 26:6) ಆದುದರಿಂದ ನಾವು ದೇವರಿಗೆ ವಿಧೇಯರಾಗಿ ಆತನ ಅನುಗ್ರಹವನ್ನು ಅನುಭವಿಸೋಣ. ದೈವಭಕ್ತಿಯುಳ್ಳವರಿಂದ ಅನುಭವಿಸಲ್ಪಡುವ ಅನೇಕ ದೈವಿಕ ಆಶೀರ್ವಾದಗಳಲ್ಲಿ ಆನಂದವು ಒಂದಾಗಿದೆ.
“ಹೃದಯದ ಆನಂದ” ದಿಂದ ಸೇವಿಸುವ ವಿಧ
3. ಸಾಂಕೇತಿಕ ಹೃದಯವು ಏನಾಗಿದೆ?
3 ಇಸ್ರಾಯೇಲ್ಯರು ಯೆಹೋವನನ್ನು “ಹರ್ಷದಿಂದ ಮತ್ತು ಹೃದಯದ ಆನಂದದಿಂದ” ಸೇವಿಸಬೇಕಿತ್ತು. ದೇವರ ಆಧುನಿಕ ದಿನದ ಸೇವಕರು ಸಹ ಹಾಗೆಯೇ ಮಾಡಬೇಕು. ಹರ್ಷಿಸುವುದೆಂದರೆ “ಉಲ್ಲಾಸಪಡು; ಆನಂದದಿಂದ ತುಂಬಲ್ಪಡು,” ಎಂದಾಗಿದೆ. ಶಾರೀರಿಕ ಹೃದಯವು ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿದೆಯಾದರೂ, ಅದು ಅಕ್ಷರಾರ್ಥಕವಾಗಿ ಯೋಚಿಸುವುದಿಲ್ಲ ಅಥವಾ ವಿವೇಚಿಸುವುದಿಲ್ಲ. (ವಿಮೋಚನಕಾಂಡ 28:30) ಅದರ ಪ್ರಧಾನ ಕಾರ್ಯವು, ದೇಹದ ಕೋಶಗಳನ್ನು ಪೋಷಿಸುವ ರಕ್ತವನ್ನು ಪಂಪು ಮಾಡುವುದಾಗಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಬೈಬಲು ಸಾಂಕೇತಿಕ ಹೃದಯವನ್ನು ಸೂಚಿಸಿ ಮಾತಾಡುತ್ತದೆ, ಅದು ವಾತ್ಸಲ್ಯ, ಪ್ರಚೋದನೆ, ಮತ್ತು ಬುದ್ಧಿಶಕ್ತಿಯ ಸ್ಥಾನವಾಗಿರುವ ಹೃದಯಕ್ಕಿಂತ ಹೆಚ್ಚಿನದ್ದಾಗಿದೆ. ಅದು “ಸಾಧಾರಣವಾಗಿ ಮಧ್ಯ ಭಾಗವನ್ನು, ಒಳಭಾಗವನ್ನು ಸೂಚಿಸುತ್ತದೆ, ಮತ್ತು ಹೀಗೆ ತನ್ನ ಎಲ್ಲ ವಿಭಿನ್ನ ಚಟುವಟಿಕೆಗಳಲ್ಲಿ, ತನ್ನ ಬಯಕೆಗಳಲ್ಲಿ, ವಾತ್ಸಲ್ಯಗಳಲ್ಲಿ, ಭಾವಾವೇಶಗಳಲ್ಲಿ, ಭಾವೋದ್ರೇಕಗಳಲ್ಲಿ, ಉದ್ದೇಶಗಳಲ್ಲಿ, ತನ್ನ ಆಲೋಚನೆಗಳಲ್ಲಿ, ಗ್ರಹಿಕೆಗಳಲ್ಲಿ, ಕಲ್ಪನೆಗಳಲ್ಲಿ, ತನ್ನ ವಿವೇಕದಲ್ಲಿ, ಜ್ಞಾನದಲ್ಲಿ, ಕೌಶಲದಲ್ಲಿ, ತನ್ನ ನಂಬಿಕೆ ಮತ್ತು ತನ್ನ ವಿವೇಚನೆಗಳಲ್ಲಿ, ತನ್ನ ಸ್ಮರಣೆ ಹಾಗೂ ತನ್ನ ಪ್ರಜ್ಞೆಯಲ್ಲಿ ತನ್ನನ್ನು ಪ್ರದರ್ಶಿಸಿಕೊಳ್ಳುವ ಆಂತರಿಕ ಮನುಷ್ಯ ನನ್ನು” ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. (ಜರ್ನಲ್ ಆಫ್ ದ ಸೊಸೈಟಿ ಆಫ್ ಬಿಬ್ಲಿಕಲ್ ಲಿಟ್ರೇಚರ್ ಆ್ಯಂಡ್ ಎಕ್ಸಿಜೀಸಿಸ್, 1882, ಪುಟ 67) ನಮ್ಮ ಸಾಂಕೇತಿಕ ಹೃದಯವು ಆನಂದವನ್ನು ಸೇರಿಸಿ, ನಮ್ಮ ಅನಿಸಿಕೆಗಳನ್ನು ಮತ್ತು ಭಾವಾವೇಶಗಳನ್ನು ಒಳಗೊಳ್ಳುತ್ತದೆ.—ಯೋಹಾನ 16:22.
4. ಯೆಹೋವ ದೇವರನ್ನು ಹೃದಯದ ಆನಂದದಿಂದ ಸೇವಿಸುವಂತೆ ನಮಗೆ ಯಾವುದು ಸಹಾಯಮಾಡಬಲ್ಲದು?
4 ಹೃದಯದ ಆನಂದದಿಂದ ಯೆಹೋವನನ್ನು ಸೇವಿಸಲು ನಮಗೆ ಯಾವುದು ಸಹಾಯ ಮಾಡಬಲ್ಲದು? ನಮ್ಮ ಆಶೀರ್ವಾದಗಳ ಮತ್ತು ದೇವದತ್ತ ಸುಯೋಗಗಳ ಕಡೆಗೆ ಒಂದು ಸಕಾರಾತ್ಮಕ ಹಾಗೂ ಗುಣಗ್ರಾಹಿ ದೃಷ್ಟಿಕೋನವು ಸಹಾಯಕಾರಿಯಾಗಿದೆ. ದೃಷ್ಟಾಂತಕ್ಕೆ, ಸತ್ಯ ದೇವರಿಗೆ ‘ಪವಿತ್ರ ಸೇವೆಯನ್ನು’ ಸಲ್ಲಿಸುವ ನಮ್ಮ ಸುಯೋಗದ ಕುರಿತು ನಾವು ಆನಂದಕರವಾಗಿ ಯೋಚಿಸಸಾಧ್ಯವಿದೆ. (ಲೂಕ 1:74) ಆತನ ಸಾಕ್ಷಿಗಳೋಪಾದಿ ಯೆಹೋವನ ಹೆಸರನ್ನು ಧರಿಸುವ ಸಂಬಂಧಿತ ಸುಯೋಗವಿದೆ. (ಯೆಶಾಯ 43:10-12) ದೇವರ ವಾಕ್ಯವನ್ನು ಅನುಸರಿಸುವ ಮೂಲಕ ನಾವು ಆತನನ್ನು ಮೆಚ್ಚಿಸುತ್ತಿದ್ದೇವೆ ಎಂಬ ಅರಿವಿನ ಆನಂದವನ್ನು ನಾವು ಇದಕ್ಕೆ ಕೂಡಿಸಬಲ್ಲೆವು. ಆತ್ಮಿಕ ಬೆಳಕನ್ನು ಪ್ರತಿಬಿಂಬಿಸುವುದರಲ್ಲಿ ಮತ್ತು ಹೀಗೆ ಅಂಧಕಾರದ ಹೊರಗೆ ಬರಲು ಅನೇಕರಿಗೆ ಸಹಾಯ ಮಾಡುವುದರಲ್ಲಿ ಎಂತಹ ಆನಂದವಿದೆ!—ಮತ್ತಾಯ 5:14-16; ಹೋಲಿಸಿ 1 ಪೇತ್ರ 2:9.
5. ದಿವ್ಯ ಆನಂದದ ಮೂಲವು ಏನಾಗಿದೆ?
5 ಆದರೂ, ಹೃದಯದ ಆನಂದದಿಂದ ಯೆಹೋವನನ್ನು ಸೇವಿಸುವುದು ಕೇವಲ ಸಕಾರಾತ್ಮಕ ಯೋಚನೆಯನ್ನು ಒಳಗೊಳ್ಳುವುದಿಲ್ಲ. ವೀಕ್ಷಣೆಯಲ್ಲಿ ಸಕಾರಾತ್ಮಕರಾಗಿರುವುದು ಪ್ರಯೋಜನಕರವಾಗಿದೆ. ಆದರೆ ದಿವ್ಯ ಆನಂದವು ಚಾರಿತ್ರ್ಯ ವಿಕಸನೆಯ ಮುಖಾಂತರ ನಾವು ತಯಾರಿಸುವ ವಿಷಯವಾಗಿರುವುದಿಲ್ಲ. ಅದು ಯೆಹೋವನ ಆತ್ಮದ ಒಂದು ಫಲವಾಗಿದೆ. (ಗಲಾತ್ಯ 5:22, 23) ನಮಗೆ ಅಂತಹ ಆನಂದವು ಇರದಿದ್ದರೆ, ದೇವರ ಆತ್ಮವನ್ನು ದುಃಖಿಸಬಹುದಾದ ಯಾವುದೊ ಅಶಾಸ್ತ್ರೀಯ ವಿಧಾನದಲ್ಲಿ ಯೋಚಿಸುವುದನ್ನು ಅಥವಾ ಕ್ರಿಯೆಗೈಯುವುದನ್ನು ತೊರೆಯುವ ಸಲುವಾಗಿ ಹೊಂದಾಣಿಕೆಗಳನ್ನು ಮಾಡುವ ಅಗತ್ಯ ನಮಗಿರಬಹುದು. (ಎಫೆಸ 4:30) ಆದರೆ ಯೆಹೋವನಿಗೆ ಸಮರ್ಪಿತರಾದವರೋಪಾದಿ, ಯಾವುದೊ ಸಂದರ್ಭದಲ್ಲಾಗುವ ಹೃತ್ಪೂರ್ವಕ ಆನಂದದ ಕೊರತೆಯು ದೈವಿಕ ಅಸಮಾಧಾನದ ಪ್ರಮಾಣವಾಗಿದೆ ಎಂದು ನಾವು ಭಯಪಡದಿರೋಣ. ನಾವು ಅಪರಿಪೂರ್ಣರು ಮತ್ತು ಕೆಲವೊಮ್ಮೆ ವೇದನೆ, ದುಃಖ, ಮತ್ತು ಖಿನ್ನತೆಗೂ ಒಳಗಾಗುತ್ತೇವೆ, ಆದರೆ ಯೆಹೋವನು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ. (ಕೀರ್ತನೆ 103:10-14) ಆದುದರಿಂದ, ಪವಿತ್ರಾತ್ಮದ ಫಲವಾದ ಆನಂದವು ದೇವದತವ್ತಾಗಿದೆ ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ನಾವು ಆತನ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸೋಣ. ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಅಂತಹ ಪ್ರಾರ್ಥನೆಗಳನ್ನು ಉತ್ತರಿಸುವನು ಮತ್ತು ಹೃದಯದ ಆನಂದದಿಂದ ಆತನನ್ನು ಸೇವಿಸಲು ನಮ್ಮನ್ನು ಶಕ್ತಗೊಳಿಸುವನು.—ಲೂಕ 11:13.
ಆನಂದವು ಲೋಪವಾಗಿರುವಾಗ
6. ದೇವರ ಕಡೆಗಿನ ನಮ್ಮ ಸೇವೆಯಲ್ಲಿ ಆನಂದವು ಲೋಪವಾಗಿದ್ದರೆ, ನಾವು ಏನನ್ನು ಮಾಡತಕ್ಕದ್ದು?
6 ನಮ್ಮ ಸೇವೆಯಲ್ಲಿ ಆನಂದವು ಲೋಪವಾಗಿದ್ದರೆ, ಯೆಹೋವನನ್ನು ಸೇವಿಸುವುದರಲ್ಲಿ ನಮ್ಮ ಹುರುಪು ಕಟ್ಟಕಡೆಗೆ ಕುಗ್ಗಬಹುದು ಅಥವಾ ನಾವು ಆತನಿಗೆ ಅವಿಶ್ವಾಸಿಗಳಾಗಿಯೂ ಪರಿಣಮಿಸಬಹುದು. ಆದಕಾರಣ, ನಮ್ಮ ಉದ್ದೇಶಗಳನ್ನು ದೈನ್ಯವಾಗಿಯೂ ಪ್ರಾರ್ಥನಾಪೂರ್ವಕವಾಗಿಯೂ ಪರಿಗಣಿಸುವುದು ಮತ್ತು ಆವಶ್ಯಕ ಹೊಂದಾಣಿಕೆಗಳನ್ನು ಮಾಡುವುದು ವಿವೇಕವುಳ್ಳದ್ದಾಗಿರುವುದು. ದೇವದತ್ತ ಆನಂದವನ್ನು ಪಡೆದಿರಲು, ನಾವು ಯೆಹೋವನನ್ನು ಪ್ರೀತಿಯಿಂದ ಮತ್ತು ನಮ್ಮ ಪೂರ್ಣ ಹೃದಯ, ಪ್ರಾಣ, ಮತ್ತು ಮನಸ್ಸಿನಿಂದ ಸೇವಿಸಬೇಕು. (ಮತ್ತಾಯ 22:37) ನಾವು ಸ್ಪರ್ಧಾತ್ಮಾಕ ಮನೋಭಾವದಿಂದ ಸೇವಿಸಬಾರದು, ಯಾಕೆಂದರೆ ಪೌಲನು ಬರೆದದ್ದು: “ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ. ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.” (ಗಲಾತ್ಯ 5:25, 26) ಇತರರಿಗಿಂತ ಶ್ರೇಷ್ಠರಾಗಿರಲು ನಾವು ಬಯಸುವುದರಿಂದ ಸೇವಿಸುತ್ತಿದ್ದರೆ ಅಥವಾ ಸ್ತುತಿಯನ್ನು ಹುಡುಕುತ್ತಿದ್ದರೆ, ನಮ್ಮಲ್ಲಿ ನಿಜವಾದ ಆನಂದವು ಇರಲಾರದು.
7. ನಮ್ಮ ಹೃದಯದ ಆನಂದವನ್ನು ನಾವು ಹೇಗೆ ಮತ್ತೆ ಕೆರಳಿಸಬಲ್ಲೆವು?
7 ಯೆಹೋವನಿಗೆ ಮಾಡಿರುವ ನಮ್ಮ ಸಮರ್ಪಣೆಯನ್ನು ನೆರೆವೇರಿಸುವುದರಲ್ಲಿ ಆನಂದವಿದೆ. ನಾವು ದೇವರಿಗೆ ಹೊಸದಾಗಿ ಸಮರ್ಪಿಸಿಕೊಂಡಾಗ, ನಾವು ಹುರುಪಿನಿಂದ ಕ್ರೈಸ್ತೋಚಿತವಾದ ಜೀವನ ಮಾರ್ಗವನ್ನು ಪ್ರಾರಂಭಿಸಿದೆವು. ನಾವು ಶಾಸ್ತ್ರಗಳನ್ನು ಅಭ್ಯಸಿಸಿದೆವು ಮತ್ತು ಕ್ರಮವಾಗಿ ಕೂಟಗಳಲ್ಲಿ ಭಾಗವಹಿಸಿದೆವು. (ಇಬ್ರಿಯ 10:24, 25) ಶುಶ್ರೂಷೆಯಲ್ಲಿ ಭಾಗವಹಿಸುವುದು ನಮಗೆ ಆನಂದವನ್ನು ನೀಡಿತು. ಆದರೂ, ನಮ್ಮ ಆನಂದವು ಕುಗ್ಗಿದ್ದರೆ ಆಗೇನು? ಬೈಬಲ್ ಅಧ್ಯಯನ, ಕೂಟದ ಹಾಜರಿ, ಶುಶ್ರೂಷೆಯಲ್ಲಿ ಭಾಗವಹಿಸುವಿಕೆಯು—ನಿಶ್ಚಯವಾಗಿ, ಕ್ರೈಸ್ತತ್ವದ ಪ್ರತಿಯೊಂದು ರೂಪದಲ್ಲಿ ಪೂರ್ಣವಾದ ಒಳಗೊಳ್ಳುವಿಕೆ—ನಮ್ಮ ಜೀವಿತಗಳಿಗೆ ಆತ್ಮಿಕ ಸ್ಥಿರತೆಯನ್ನು ಕೊಡತಕ್ಕದ್ದು ಮತ್ತು ಮೊದಲ್ಲಿದ್ದ ಪ್ರೀತಿಯನ್ನು ಮತ್ತು ನಮ್ಮ ಹಿಂದಿನ ಹೃದಯದ ಆನಂದವನ್ನು—ಎರಡನ್ನೂ—ಮತ್ತೆ ಕೆರಳಿಸತಕ್ಕದ್ದು. (ಪ್ರಕಟನೆ 2:4) ಆಗ ಕೊಂಚ ಮಟ್ಟಿಗೆ ಆನಂದರಹಿತರಾಗಿರುವ ಮತ್ತು ಅನೇಕ ವೇಳೆ ಆತ್ಮಿಕ ನೆರವಿನ ಅಗತ್ಯದಲ್ಲಿರುವ ಕೆಲವರಂತೆ ನಾವು ಇರಲಾರೆವು. ಸಹಾಯ ಮಾಡಲು ಹಿರಿಯರು ಸಂತೋಷಿಸುತ್ತಾರೆ, ಆದರೆ ದೇವರ ಕಡೆಗಿರುವ ನಮ್ಮ ಸಮರ್ಪಣೆಯನ್ನು ನಾವು ವೈಯಕ್ತಿಕವಾಗಿ ಪೂರೈಸಬೇಕು. ನಮಗಾಗಿ ಇದನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಆದುದರಿಂದ ಯೆಹೋವನ ಕಡೆಗಿರುವ ನಮ್ಮ ಸಮರ್ಪಣೆಯನ್ನು ಪೂರೈಸುವ ಮತ್ತು ನಿಜವಾದ ಆನಂದವನ್ನು ಹೊಂದುವ ಸಲುವಾಗಿ, ಸಾಮಾನ್ಯವಾದ ಕ್ರೈಸ್ತ ನಿಯತಕ್ರಮವನ್ನು ಅನುಸರಿಸುವುದನ್ನು ನಮ್ಮ ಗುರಿಯನ್ನಾಗಿ ನಾವು ಮಾಡೋಣ.
8. ನಾವು ಆನಂದಭರಿತರಾಗಿರಬೇಕಾದರೆ, ಒಂದು ಶುದ್ಧವಾದ ಮನಸ್ಸಾಕ್ಷಿಯು ಪ್ರಾಮುಖ್ಯವಾಗಿದೆ ಏಕೆ?
8 ದೇವರ ಆತ್ಮದ ಒಂದು ಫಲವಾಗಿರುವ ಆನಂದವನ್ನು ನಾವು ಪಡೆದಿರಬೇಕಾದರೆ, ನಮಗೊಂದು ಶುದ್ಧ ಮನಸ್ಸಾಕ್ಷಿಯ ಅಗತ್ಯವಿದೆ. ಇಸ್ರಾಯೇಲಿನ ರಾಜನಾದ ದಾವೀದನು ತನ್ನ ಪಾಪವನ್ನು ಮರೆಮಾಚಲು ಪ್ರಯತ್ನಿಸಿದ ತನಕ, ಸಂಕಟಪಟ್ಟನು. ವಾಸ್ತವದಲ್ಲಿ, ಅವನ ಜೀವಿತದ ಆರ್ದ್ರತೆಯು ಬಾಷ್ಪಗೊಳ್ಳುವಂತೆ ತೋರಿತು, ಮತ್ತು ಅವನು ಶಾರೀರಿಕವಾಗಿ ಅಸ್ವಸ್ಥಗೊಂಡಿರಬಹುದು. ಪಶ್ಚಾತಾಪ್ತ ಮತ್ತು ಪಾಪ ನಿವೇದನೆಯು ಸಂಭವಿಸಿದಾಗ ಎಂತಹ ಉಪಶಮನವನ್ನು ಅವನು ಪಡೆದನು! (ಕೀರ್ತನೆ 32:1-5) ಯಾವುದೊ ಗಂಭೀರವಾದ ಪಾಪವನ್ನು ನಾವು ಮರೆಮಾಚುತ್ತಿದ್ದರೆ, ಆನಂದಭರಿತರಾಗಿರಲು ನಮಗೆ ಸಾಧ್ಯವಿಲ್ಲ. ತೊಂದರೆಯುಕ್ತ ಜೀವಿತವೊಂದನ್ನು ಜೀವಿಸುವಂತೆ ಅದು ಮಾಡಬಲ್ಲದು. ಖಂಡಿತವಾಗಿಯೂ, ಆನಂದವನ್ನು ಅನುಭವಿಸುವಂತಹ ರೀತಿಯು ಅದಾಗಿರುವುದಿಲ್ಲ. ಆದರೆ ಪಾಪ ನಿವೇದನೆ ಮತ್ತು ಪಶ್ಚಾತಾಪ್ತವು ಉಪಶಮನವನ್ನು ಮತ್ತು ಆನಂದಭರಿತವಾದೊಂದು ಆತ್ಮದ ಪುನಃಸ್ಥಾಪನೆಯನ್ನು ತರುತ್ತವೆ.—ಜ್ಞಾನೋಕ್ತಿ 28:13.
ಆನಂದದಿಂದ ಕಾಯುವುದು
9, 10. (ಎ) ಯಾವ ವಾಗ್ದಾನವನ್ನು ಅಬ್ರಹಾಮನು ಪಡೆದನು, ಆದರೆ ಅವನ ನಂಬಿಕೆ ಮತ್ತು ಆನಂದವು ಹೇಗೆ ಪರೀಕ್ಷಿಸಲ್ಪಟ್ಟಿರಬಹುದು? (ಬಿ) ಅಬ್ರಹಾಮ, ಇಸಾಕ್, ಮತ್ತು ಯಾಕೋಬರ ಉದಾಹರಣೆಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
9 ದೈವಿಕ ಉದ್ದೇಶದ ಕುರಿತು ಮೊದಲು ಕಲಿಯುವಾಗ ಆನಂದವನ್ನು ಹೊಂದಿರುವುದು ಒಂದು ವಿಷಯವಾಗಿದೆ, ಆದರೆ ವರ್ಷಗಳು ಗತಿಸಿದಂತೆ ಆನಂದಭರಿತರಾಗಿ ಉಳಿಯುವುದು ಮತ್ತೊಂದು ವಿಷಯವಾಗಿದೆ. ಇದನ್ನು ನಂಬಿಗಸ್ತ ಅಬ್ರಹಾಮನ ವಿಷಯದಲ್ಲಿ ದೃಷ್ಟಾಂತಿಸಸಾಧ್ಯವಿದೆ. ದೇವರ ಆಜ್ಞೆಯ ಮೇರೆಗೆ ತನ್ನ ಮಗನಾದ ಇಸಾಕನನ್ನು ಅರ್ಪಿಸಲು ಅವನು ಪ್ರಯತ್ನಿಸಿದ ಬಳಿಕ, ದೇವದೂತನೊಬ್ಬನು ಈ ಸಂದೇಶವನ್ನು ನೀಡಿದನು: “ಯೆಹೋವನು ನುಡಿದದ್ದನ್ನು ಕೇಳು; ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದ್ದರಿಂದ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದರ್ದಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು ಎಂಬದಾಗಿ ಯೆಹೋವನು ತನ್ನಾಣೆಯಿಟ್ಟು ಹೇಳಿದ್ದಾನೆ.” (ಆದಿಕಾಂಡ 22:15-18) ನಿಸ್ಸಂದೇಹವಾಗಿ, ಅಬ್ರಹಾಮನು ಈ ವಾಗ್ದಾನದಿಂದ ಅತ್ಯಾನಂದಪಟ್ಟನು.
10 ವಾಗ್ದಾನಿತ ಆಶೀರ್ವಾದಗಳು ಯಾರ ಮುಖಾಂತರ ಬರಬೇಕಾಗಿತ್ತೊ, ಆ “ಸಂತತಿ”ಯು ಇಸಾಕನಾಗಿರಬಹುದೆಂದು ಅಬ್ರಹಾಮನು ನಿರೀಕ್ಷಿಸಿರಬಹುದು. ಆದರೆ ಇಸಾಕನ ಮುಖಾಂತರ ಯಾವುದೇ ಅದ್ಭುತಕರವಾದ ವಿಷಯವು ಸಾಧಿಸಲ್ಪಡದೆಯೇ ವರ್ಷಗಳ ದಾಟುವಿಕೆಯು, ಅಬ್ರಹಾಮನ ಮತ್ತು ಅವನ ಕುಟುಂಬದವರ ನಂಬಿಕೆ ಮತ್ತು ಆನಂದವನ್ನು ಪರೀಕ್ಷಿಸಿರಬಹುದು. ಇಸಾಕನಿಗೆ ಮತ್ತು ತದನಂತರ ಅವನ ಮಗನಾದ ಯಾಕೋಬನಿಗೆ ವಾಗ್ದಾನದ ಕುರಿತಾಗಿ ದೇವರ ದೃಢೀಕರಣವು, ಸಂತತಿಯ ಬರುವಿಕೆಯು ಇನ್ನೂ ಭವಿಷ್ಯದಲ್ಲಿದೆ ಎಂಬ ವಿಷಯದ ಆಶ್ವಾಸನೆಯನ್ನು ಅವರಿಗೆ ನೀಡಿತು, ಮತ್ತು ಇದು ಅವರಿಗೆ ತಮ್ಮ ನಂಬಿಕೆ ಮತ್ತು ಆನಂದವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು. ದೇವರು ಅವರಿಗೆ ಮಾಡಿದ ವಾಗ್ದಾನಗಳನ್ನು ನೋಡದೆಯೇ ಅಬ್ರಹಾಮ, ಇಸಾಕ, ಮತ್ತು ಯಾಕೋಬರು ಸತ್ತುಹೋದರು, ಆದರೆ ಅವರು ಯೆಹೋವನ ಆನಂದರಹಿತ ಸೇವಕರಾಗಿರಲಿಲ್ಲ. (ಇಬ್ರಿಯ 11:13) ಆತನ ವಾಗ್ದಾನಗಳ ನೆರವೇರಿಕೆಯನ್ನು ಎದುರುನೋಡುತ್ತಿರುವಾಗ, ನಾವು ಸಹ ಯೆಹೋವನನ್ನು ನಂಬಿಕೆ ಮತ್ತು ಆನಂದದಿಂದ ಸೇವಿಸುತ್ತಾ ಇರಬಲ್ಲೆವು.
ಹಿಂಸೆಯ ಹೊರತೂ ಆನಂದ
11. ಹಿಂಸೆಯ ಹೊರತೂ ನಾವು ಏಕೆ ಆನಂದಭರಿತರಾಗಿರಬಲ್ಲೆವು?
11 ಯೆಹೋವನ ಸೇವಕರೋಪಾದಿ, ನಾವು ಹಿಂಸೆಯನ್ನು ಅನುಭವಿಸುವುದಾದರೂ ಯೆಹೋವನನ್ನು ಹೃದಯದ ಆನಂದದಿಂದ ಸೇವಿಸಬಲ್ಲೆವು. ತನ್ನ ನಿಮಿತ್ತ ಹಿಂಸಿಸಲ್ಪಡುವವರನ್ನು ಯೇಸು ಸಂತುಷ್ಟರೆಂದು ಹೇಳಿದನು, ಮತ್ತು ಅಪೊಸ್ತಲ ಪೇತ್ರನು ಹೇಳಿದ್ದು: “ಆದರೆ ನೀವು ಎಷ್ಟರ ಮಟ್ಟಿಗೂ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷವುಳ್ಳವರಾಗಿರ್ರಿ; ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ. ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರೇ; ತೇಜೋಮಯವಾದ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.” (1 ಪೇತ್ರ 4:13, 14; ಮತ್ತಾಯ 5:11, 12) ನೀತಿಯ ಸಲುವಾಗಿ ನೀವು ಹಿಂಸೆಯನ್ನೂ ಕಷ್ಟಾನುಭವವನ್ನೂ ತಾಳಿಕೊಳ್ಳುತ್ತಿದ್ದರೆ, ನೀವು ಯೆಹೋವನ ಆತ್ಮ ಮತ್ತು ಮೆಚ್ಚುಗೆಯನ್ನು ಪಡೆದಿದ್ದೀರಿ, ಮತ್ತು ಅದು ಖಂಡಿತವಾಗಿಯೂ ಆನಂದವನ್ನು ಪ್ರವರ್ಧಿಸುತ್ತದೆ.
12. (ಎ) ನಂಬಿಕೆಯ ಪರೀಕ್ಷೆಗಳನ್ನು ನಾವು ಆನಂದದಿಂದ ಏಕೆ ಎದುರಿಸಬಲ್ಲೆವು? (ಬಿ) ಪರದೇಶ ವಾಸದಲ್ಲಿದ್ದ ಒಬ್ಬ ಲೇವಿಯನ ವಿಷಯದಿಂದ ಯಾವು ಮೂಲಭೂತ ಪಾಠವನ್ನು ಕಲಿಯಸಾಧ್ಯವಿದೆ?
12 ನಂಬಿಕೆಯ ಪರೀಕ್ಷೆಗಳನ್ನು ನಾವು ಆನಂದದಿಂದ ಎದುರಿಸಬಲ್ಲೆವು ಏಕೆಂದರೆ ದೇವರು ನಮ್ಮ ಆಶ್ರಯವಾಗಿದ್ದಾನೆ. ಇದು ಕೀರ್ತನೆಗಳು 42 ಮತ್ತು 43 ರಲ್ಲಿ ವ್ಯಕ್ತಪಡಿಸಲ್ಪಟ್ಟಿದೆ. ಯಾವುದೊ ಕಾರಣಕ್ಕಾಗಿ, ಒಬ್ಬ ಲೇವಿಯನು ಪರದೇಶವಾಸಿಯಾಗಿದ್ದನು. ದೇವರ ಆಲಯದಲ್ಲಿನ ಆರಾಧನೆಯನ್ನು ತಪ್ಪುವುದಕ್ಕಾಗಿ ಅವನು ಎಷ್ಟು ವಿಷಾದಪಟ್ಟನೆಂದರೆ, ಒಣಗಿದ ಮತ್ತು ಬಂಜರವಾಗಿರುವ ಒಂದು ಭೂಮಿಯಲ್ಲಿ ನೀರಿಗಾಗಿ ತವಕಿಸುವ ಬಾಯಾರಿದ ಹರಿಣಿ ಯಾ ಹೆಣ್ಣು ಜಿಂಕೆಯಂತೆ ಅವನಿಗನಿಸಿತು. ಯೆಹೋವನಿಗಾಗಿ ಮತ್ತು ದೇವರನ್ನು ಆತನ ಆಲಯದಲ್ಲಿ ಆರಾಧಿಸುವುದರ ಸುಯೋಗಕ್ಕಾಗಿ ಅವನು ‘ತೃಷೆ ಪಟ್ಟನು’ ಅಥವಾ ಹಾತೊರೆದನು. (ಕೀರ್ತನೆ 42:1, 2) ಯೆಹೋವನ ಜನರೊಂದಿಗೆ ನಾವು ಆನಂದಿಸುವ ಸಹವಾಸಕ್ಕಾಗಿ ಕೃತಜ್ಞತೆಯನ್ನು ತೋರಿಸುವಂತೆ, ಈ ಪರದೇಶ ವಾಸಿಯ ಅನುಭವವು ನಮ್ಮನ್ನು ಪ್ರೇರಿಸತಕ್ಕದ್ದು. ಹಿಂಸೆಯ ಕಾರಣ ಬಂಧನದಂತಹ ಒಂದು ಸನ್ನಿವೇಶವು, ಅವರೊಂದಿಗೆ ನಾವು ಇರುವುದನ್ನು ತಾತ್ಕಾಲಿಕವಾಗಿ ತಡೆದರೆ, ಪವಿತ್ರ ಸೇವೆಯಲ್ಲಿ ಜೊತೆಗೆ ಅನುಭವಿಸಿದ ಗತಕಾಲದ ಆನಂದಗಳನ್ನು ನಾವು ಜ್ಞಾಪಕಕ್ಕೆ ತಂದುಕೊಳ್ಳೋಣ ಮತ್ತು ಆತನ ಆರಾಧಕರೊಂದಿಗೆ ಕ್ರಮವಾದ ಚಟುವಟಿಕೆಗೆ ನಮ್ಮನ್ನು ಪುನಃಸ್ಥಾಪಿಸಲಿಕ್ಕಾಗಿ ನಾವು “ದೇವರನ್ನು ನಿರೀಕ್ಷಿಸು” ವಾಗ ತಾಳ್ಮೆಗಾಗಿ ಪ್ರಾರ್ಥಿಸೋಣ.—ಕೀರ್ತನೆ 42:4, 5, 11; 43:3-5.
“ಯೆಹೋವನನ್ನು ಸಂತೋಷದಿಂದ ಸೇವಿಸಿರಿ”
13. ದೇವರಿಗೆ ಮಾಡುವ ನಮ್ಮ ಸೇವೆಯ ಒಂದು ವಿಷಯಾಂಶವು ಆನಂದವಾಗಿರಬೇಕೆಂದು ಕೀರ್ತನೆ 100:1, 2 ಹೇಗೆ ತೋರಿಸುತ್ತದೆ?
13 ದೇವರಿಗೆ ಮಾಡುವ ನಮ್ಮ ಸೇವೆಯ ಪ್ರಧಾನ ವಿಷಯಾಂಶವು ಆನಂದವಾಗಿರಬೇಕು. ಕೀರ್ತನೆಗಾರನು ಹಾಡಿದ ಉಪಕಾರಸ್ತುತಿಯ ಒಂದು ಗೀತೆಯಲ್ಲಿ ಇದನ್ನು ತೋರಿಸಲಾಗಿತ್ತು: “ಸಮಸ್ತಭೂನಿವಾಸಿಗಳೇ, ಯೆಹೋವನಿಗೆ ಜಯಘೋಷಮಾಡಿರಿ. ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ.” (ಕೀರ್ತನೆ 100:1, 2) ಯೆಹೋವನು “ಸಂತುಷ್ಟ ದೇವರು” ಆಗಿದ್ದಾನೆ ಮತ್ತು ಆತನ ಕಡೆಗಿರುವ ತಮ್ಮ ಸಮರ್ಪಣೆಯನ್ನು ಪೂರೈಸುವುದರಲ್ಲಿ ತನ್ನ ಸೇವಕರು ಆನಂದವನ್ನು ಕಂಡುಕೊಳ್ಳಬೇಕೆಂದು ಬಯಸುತ್ತಾನೆ. (1 ತಿಮೊಥೆಯ 1:11) ಎಲ್ಲ ರಾಷ್ಟ್ರಗಳ ಜನರು ಯೆಹೋವನಲ್ಲಿ ಅತ್ಯಾನಂದ ಪಡಬೇಕು, ಮತ್ತು ಸ್ತುತಿಯ ನಮ್ಮ ಅಭಿವ್ಯಕ್ತಿಗಳು, ಒಂದು ಜಯಶಾಲಿ ಸೇನೆಯ ‘ವಿಜಯಿಯಾದ ಕೂಗಿ’ ನಂತೆ ಪ್ರಬಲವಾಗಿರತಕ್ಕದ್ದು. ದೇವರಿಗೆ ಮಾಡುವ ಸೇವೆಯು ವಿಶ್ರಾಂತಿದಾಯಕವಾಗಿರುವುದರಿಂದ, ಅದು ಹರ್ಷದಿಂದ ಜೊತೆಗೂಡಿರಬೇಕು. ಆದಕಾರಣ, “ಉತ್ಸಾಹಧ್ವನಿಮಾಡುತ್ತಾ” ದೇವರ ಸಾನ್ನಿಧ್ಯಕ್ಕೆ ಬರುವಂತೆ ಕೀರ್ತನೆಗಾರನು ಜನರನ್ನು ಪ್ರೇರೇಪಿಸಿದನು.
14, 15. ಕೀರ್ತನೆ 100:3-5 ಯೆಹೋವನ ಆನಂದಭರಿತ ಜನರಿಗೆ ಇಂದು ಹೇಗೆ ಅನ್ವಯಿಸುತ್ತದೆ?
14 ಕೀರ್ತನೆಗಾರನು ಕೂಡಿಸಿದ್ದು: “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ [ಗುರುತಿಸಿರಿ, ಅಂಗೀಕರಿಸಿರಿ]. ನಮ್ಮನ್ನು ಉಂಟುಮಾಡಿದವನು ಆತನೇ, ನಾವು ಆತನವರು. ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ.” (ಕೀರ್ತನೆ 100:3) ಯೆಹೋವನು ನಮ್ಮ ಸೃಷ್ಟಿಕರ್ತನಾಗಿರುವುದರಿಂದ, ಒಬ್ಬ ಕುರುಬನು ತನ್ನ ಕುರಿಗಳಿಗೆ ಒಡೆಯನಾಗಿರುವಂತೆಯೇ ಆತನು ನಮ್ಮ ಒಡೆಯನಾಗಿದ್ದಾನೆ. ಎಷ್ಟು ಸಮರ್ಪಕವಾಗಿ ದೇವರು ನಮ್ಮ ಕುರಿತು ಚಿಂತಿಸುತ್ತಾನೆಂದರೆ, ಕೃತಜ್ಞತಾಪೂರ್ವಕವಾಗಿ ನಾವು ಆತನನ್ನು ಕೊಂಡಾಡುತ್ತೇವೆ. (ಕೀರ್ತನೆ 23) ಯೆಹೋವನ ಕುರಿತು, ಕೀರ್ತನೆಗಾರನು ಮತ್ತೂ ಹಾಡಿದ್ದು: “ಕೃತಜ್ಞತಾಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ ಕೀರ್ತನೆಯೊಡನೆ ಆತನ ಅಂಗಳಗಳಿಗೂ ಬನ್ನಿರಿ; ಆತನ ಉಪಕಾರ ಸ್ಮರಿಸಿರಿ; ಆತನ ನಾಮವನ್ನು ಕೊಂಡಾಡಿರಿ. ಯೆಹೋವನು ಒಳ್ಳೆಯವನು; ಆತನ ಕೃಪೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.”—ಕೀರ್ತನೆ 100:4, 5.
15 ಇಂದು, ಎಲ್ಲ ರಾಷ್ಟ್ರಗಳ ಆನಂದಭರಿತ ಜನರು, ಉಪಕಾರಸ್ತುತಿ ಮತ್ತು ಸ್ತೋತ್ರವನ್ನು ಅರ್ಪಿಸಲು ಯೆಹೋವನ ಆಲಯದ ಅಂಗಳಗಳನ್ನು ಪ್ರವೇಶಿಸುತ್ತಿದ್ದಾರೆ. ಯೆಹೋವನ ಕುರಿತು ಸದಾ ಒಳ್ಳೆಯದಾಗಿ ಮಾತಾಡುವ ಮೂಲಕ ನಾವು ಆನಂದಪೂರ್ಣವಾಗಿ ದೇವರ ಹೆಸರನ್ನು ಹರಸುತ್ತೇವೆ, ಮತ್ತು ಆತನ ಮಹಾ ಗುಣಗಳು ಆತನನ್ನು ಸ್ತುತಿಸುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಆತನು ಸಂಪೂರ್ಣವಾಗಿ ಒಳ್ಳೆಯವನಾಗಿದ್ದಾನೆ, ಮತ್ತು ಆತನ ಪ್ರೀತಿ ದಯೆಯ ಅಥವಾ ಆತನ ಸೇವಕರಿಗಾಗಿರುವ ಸಹಾನುಭೂತಿಯುಳ್ಳ ಲಕ್ಷ್ಯದ ಮೇಲೆ ಯಾವಾಗಲೂ ಆತುಕೊಳ್ಳಸಾಧ್ಯವಿದೆ, ಯಾಕೆಂದರೆ ಅದು ಸದಾಕಾಲ ಮುಂದುವರಿಯುತ್ತದೆ. ಒಂದು ‘ಸಂತತಿಯಿಂದ ಇನ್ನೊಂದು ಸಂತತಿಗೆ’ ಆತನ ಚಿತ್ತವನ್ನು ಮಾಡುವವರ ಕಡೆಗೆ ಪ್ರೀತಿಯನ್ನು ತೋರಿಸುವುದರಲ್ಲಿ ಯೆಹೋವನು ನಂಬಿಗಸ್ತನಾಗಿದ್ದಾನೆ. (ರೋಮಾಪುರ 8:38, 39) ಹಾಗಾದರೆ, ಖಂಡಿತವಾಗಿಯೂ ‘ಯೆಹೋವನನ್ನು ಸಂತೋಷದಿಂದ ಸೇವಿಸಲು’ ನಮಗೆ ಒಳ್ಳೆಯ ಕಾರಣವಿದೆ.
ನಿಮ್ಮ ನಿರೀಕ್ಷೆಯಲ್ಲಿ ಹರ್ಷಿಸಿರಿ
16. ಯಾವ ನಿರೀಕ್ಷೆಗಳಲ್ಲಿ ಮತ್ತು ಪ್ರತೀಕ್ಷೆಗಳಲ್ಲಿ ಕ್ರೈಸ್ತರು ಹರ್ಷಿಸಬಲ್ಲರು?
16 ಪೌಲನು ಬರೆದದ್ದು: “ನಿರೀಕ್ಷೆಯಲ್ಲಿ ಹರ್ಷಿಸಿರಿ.” (ರೋಮಾಪುರ 12:12, NW) ಯೇಸು ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು, ದೇವರು ತನ್ನ ಮಗನ ಮುಖಾಂತರ ಅವರಿಗೆ ತೆರೆದ, ಅಮರ ಸ್ವರ್ಗೀಯ ಜೀವನದ ಮಹಿಮಾಭರಿತ ನಿರೀಕ್ಷೆಯಲ್ಲಿ ಹರ್ಷಿಸುತ್ತಾರೆ. (ರೋಮಾಪುರ 8:16, 17; ಫಿಲಿಪ್ಪಿ 3:20, 21) ಭೂಮಿಯ ಮೇಲೆ ಪ್ರಮೋದವನದಲ್ಲಿ ಅನಂತ ಜೀವನದ ನಿರೀಕ್ಷೆಯಿರುವ ಕ್ರೈಸ್ತರಿಗೂ ಹರ್ಷಿಸುವುದಕ್ಕಾಗಿ ಆಧಾರವಿದೆ. (ಲೂಕ 23:43) ಯೆಹೋವನ ಎಲ್ಲ ನಂಬಿಗಸ್ತ ಸೇವಕರಿಗೆ ರಾಜ್ಯದ ನಿರೀಕ್ಷೆಯಲ್ಲಿ ಹರ್ಷಿಸುವ ಕಾರಣವಿದೆ, ಯಾಕೆಂದರೆ ಒಂದೊ ಅವರು ಆ ಸ್ವರ್ಗೀಯ ಸರಕಾರದ ಭಾಗವಾಗಿರುವರು ಇಲ್ಲದಿದ್ದರೆ ಅದರ ಭೂಕ್ಷೇತ್ರದಲ್ಲಿ ಜೀವಿಸುವರು. ಎಂತಹ ಆನಂದಮಯ ಆಶೀರ್ವಾದ!—ಮತ್ತಾಯ 6:9, 10; ರೋಮಾಪುರ 8:18-21.
17, 18. (ಎ) ಯೆಶಾಯ 25:6-8 ರಲ್ಲಿ ಯಾವ ವಿಷಯವನ್ನು ಮುಂತಿಳಿಸಲಾಗಿತ್ತು? (ಬಿ) ಯೆಶಾಯನ ಪ್ರವಾದನೆಯು ಇಂದು ಹೇಗೆ ನೆರವೇರುತ್ತಿದೆ, ಮತ್ತು ಭವಿಷ್ಯದಲ್ಲಿ ಅದರ ನೆರವೇರಿಕೆಯ ಕುರಿತೇನು?
17 ಯೆಶಾಯನೂ ವಿಧೇಯ ಮಾನವಕುಲಕ್ಕೆ ಆನಂದಭರಿತವಾದೊಂದು ಭವಿಷ್ಯತ್ತನ್ನು ಮುಂತಿಳಿಸಿದನು. ಅವನು ಬರೆದದ್ದು: “ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತಾದ್ತ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು. ಮತ್ತು ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶೀಯರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವನು. ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.”—ಯೆಶಾಯ 25:6-8.
18 ಇಂದು ಯೆಹೋವನ ಆರಾಧಕರೋಪಾದಿ ನಾವು ಪಾಲಿಗರಾಗುವ ಆತ್ಮಿಕ ಉತ್ಸವವು ನಿಜವಾಗಿಯೂ ಒಂದು ಆನಂದಭರಿತ ಔತಣವಾಗಿದೆ. ವಾಸ್ತವದಲ್ಲಿ, ಹೊಸ ಲೋಕಕ್ಕಾಗಿ ದೇವರು ವಾಗ್ದಾನಿಸಿರುವ ಅಕ್ಷರಾರ್ಥಕವಾದ ಒಳ್ಳೆಯ ವಿಷಯಗಳ ಔತಣದ ನಿರೀಕ್ಷಣೆಯಲ್ಲಿ ನಾವು ಆತನನ್ನು ಹುರುಪಿನಿಂದ ಸೇವಿಸಿದಂತೆ, ನಮ್ಮ ಆನಂದವು ತುಂಬಿಹರಿಯುತ್ತದೆ. (2 ಪೇತ್ರ 3:13) ಯೇಸುವಿನ ಯಜ್ಞದ ಆಧಾರದ ಮೇಲೆ, ಆದಾಮನ ಪಾಪದಿಂದಾಗಿ ಮಾನವಕುಲವನ್ನು ಸುತ್ತುವರಿದಿರುವ “ತೆರೆಯನ್ನು” ಯೆಹೋವನು ತೆಗೆದುಬಿಡುವನು. ಪಾಪ ಮತ್ತು ಮರಣ ತೆಗೆದುಹಾಕಲ್ಪಡುವುದನ್ನು ನೋಡುವುದು ಎಂತಹ ಒಂದು ಆನಂದವಾಗಿರುವುದು! ಪುನರುತಿತ್ಥ ಪ್ರಿಯರನ್ನು ಮತ್ತೆ ಸ್ವಾಗತಿಸುವುದು, ಕಣ್ಣೀರುಗಳು ಮಾಯವಾಗಿವೆ ಎಂಬುದನ್ನು ಗಮನಿಸುವುದು, ಮತ್ತು ಎಲ್ಲಿ ಯೆಹೋವನ ಜನರು ಖಂಡಿಸಲ್ಪಡುವುದಿಲ್ಲವೊ, ಆದರೆ ಮಹಾ ದೂರುಗಾರನಾದ ಪಿಶಾಚನಾದ ಸೈತಾನನಿಗೆ ನೀಡುವಂತೆ ದೇವರಿಗೆ ಒಂದು ಉತ್ತರವನ್ನು ಕೊಟ್ಟಿರುವರೊ ಆ ಪ್ರಮೋದವನ ಭೂಮಿಯಲ್ಲಿ ಜೀವಿಸುವುದು ಎಂತಹ ಒಂದು ಹರ್ಷವಾಗಿರುವುದು!—ಜ್ಞಾನೋಕ್ತಿ 27:11.
19. ಯೆಹೋವನು ಆತನ ಸಾಕ್ಷಿಗಳೋಪಾದಿ ನಮ್ಮ ಮುಂದೆ ಇಟ್ಟಿರುವ ಪ್ರತೀಕ್ಷೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
19 ಯೆಹೋವನು ತನ್ನ ಸೇವಕರಿಗಾಗಿ ಏನನ್ನು ಮಾಡುವನೆಂಬುದನ್ನು ಅರಿಯುವುದು ನಿಮ್ಮನ್ನು ಆನಂದ ಮತ್ತು ಕೃತಜ್ಞತೆಯಿಂದ ತುಂಬುವುದಿಲ್ಲವೊ? ಖಂಡಿತವಾಗಿಯೂ, ಇಂತಹ ಮಹಾ ಪ್ರತೀಕ್ಷೆಗಳು ನಮ್ಮ ಆನಂದಕ್ಕೆ ನೆರವು ನೀಡುತ್ತವೆ! ಅಲ್ಲದೆ, ನಮ್ಮ ಆಶೀರ್ವದಿತ ನಿರೀಕ್ಷೆಯು ನಮ್ಮನ್ನು ಇಂತಹ ಭಾವನೆಗಳೊಂದಿಗೆ ನಮ್ಮ ಸಂತೋಷದ, ಪ್ರೀತಿಯ, ಉದಾರ ದೇವರ ಕಡೆಗೆ ನೋಡುವಂತೆ ಮಾಡುತ್ತವೆ: “ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನೇ ಯೆಹೋವನು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ, ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು.” (ಯೆಶಾಯ 25:9) ಉಜ್ವಲವಾದ ನಿರೀಕ್ಷೆಯು ನಮ್ಮ ಮನಸ್ಸಿನಲ್ಲಿ ದೃಢವಾಗಿ ನೆಟ್ಟಿರುವುದರೊಂದಿಗೆ, ಯೆಹೋವನನ್ನು ಹೃದಯದ ಆನಂದದಿಂದ ಸೇವಿಸಲು ನಾವು ಪ್ರತಿಯೊಂದು ಪ್ರಯತ್ನವನ್ನು ಉತ್ಸಾಹದಿಂದ ನಡೆಸೋಣ.
ನೀವು ಹೇಗೆ ಉತ್ತರಿಸುವಿರಿ?
▫ ನಾವು ಯೆಹೋವನನ್ನು “ಹೃದಯದ ಆನಂದ” ದಿಂದ ಹೇಗೆ ಸೇವಿಸಬಲ್ಲೆವು?
▫ ದೇವರಿಗೆ ಮಾಡುವ ನಮ್ಮ ಸೇವೆಯಲ್ಲಿ ಆನಂದವು ಲೋಪವಾಗಿದ್ದರೆ ನಾವು ಏನನ್ನು ಮಾಡಬಲ್ಲೆವು?
▫ ಹಿಂಸೆಯ ಹೊರತೂ ಯೆಹೋವನ ಜನರು ಆನಂದಿತರಾಗಿರಬಲ್ಲರು ಏಕೆ?
▫ ನಮ್ಮ ನಿರೀಕ್ಷೆಯಲ್ಲಿ ಹರ್ಷಿಸಲು ನಮಗೆ ಯಾವ ಕಾರಣಗಳಿವೆ?
[ಪುಟ 17 ರಲ್ಲಿರುವ ಚಿತ್ರಗಳು]
ಕ್ರೈಸ್ತ ಜೀವಿತದ ಎಲ್ಲ ವೈಶಿಷ್ಟ್ಯಗಳಲ್ಲಿ ಭಾಗವಹಿಸುವುದು ನಮ್ಮ ಆನಂದವನ್ನು ಹೆಚ್ಚಿಸುವುದು