ಪ್ರೀತಿರಹಿತ ಜಗತ್ತಿನಲ್ಲಿ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು
“ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ನಾನು ಈ ವಿಷಯಗಳನ್ನು ನಿಮಗೆ ಆಜ್ಞಾಪಿಸುತ್ತೇನೆ.” —ಯೋಹಾ. 15:17.
1. ಪ್ರಥಮ ಶತಮಾನದ ಕ್ರೈಸ್ತರು ಏಕೆ ಆಪ್ತ ಮಿತ್ರರಾಗಿ ಉಳಿಯಬೇಕಾಗಿತ್ತು?
ಯೇಸು ತನ್ನ ಭೂಜೀವನದ ಕೊನೆ ರಾತ್ರಿಯಂದು, ತನ್ನ ನಿಷ್ಠಾವಂತ ಶಿಷ್ಯರನ್ನು ಒಬ್ಬರೊಂದಿಗೊಬ್ಬರು ಸ್ನೇಹಿತರಾಗಿ ಉಳಿಯುವಂತೆ ಉತ್ತೇಜಿಸಿದನು. ಇದರ ಸ್ವಲ್ಪ ಮುಂಚೆ, ಅವರು ಪರಸ್ಪರರ ಕಡೆಗೆ ತೋರಿಸುವ ಪ್ರೀತಿಯೇ ಅವರನ್ನು ತನ್ನ ಹಿಂಬಾಲಕರಾಗಿ ಗುರುತಿಸುವುದೆಂದೂ ಅವನು ಹೇಳಿದ್ದನು. (ಯೋಹಾ. 13:35) ಮುಂದೆ ಬರಲಿದ್ದ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳಲು ಮತ್ತು ಯೇಸು ಅವರಿಗೆ ನೇಮಿಸಲಿದ್ದ ಕೆಲಸವನ್ನು ಪೂರೈಸಲು ಆ ಅಪೊಸ್ತಲರು ಆಪ್ತ ಮಿತ್ರರಾಗಿ ಉಳಿಯಬೇಕಿತ್ತು. ಅದರಂತೆ, ಪ್ರಥಮ ಶತಮಾನದ ಕ್ರೈಸ್ತರು ದೇವರ ಕಡೆಗೂ ಪರಸ್ಪರರ ಕಡೆಗೂ ತೋರಿಸಿದ ಮುರಿಯಲಾಗದ ನಿಷ್ಠೆಗಾಗಿ ಪ್ರಸಿದ್ಧರಾದರು.
2. (ಎ) ನಮ್ಮ ದೃಢಸಂಕಲ್ಪ ಏನಾಗಿದೆ, ಮತ್ತು ಏಕೆ? (ಬಿ) ನಾವೀಗ ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
2 ಪ್ರಥಮ ಶತಮಾನದ ಕ್ರೈಸ್ತರ ಮಾದರಿಯನ್ನು ಅನುಸರಿಸುತ್ತಿರುವ ಸದಸ್ಯರುಳ್ಳ ಲೋಕವ್ಯಾಪಕ ಸಂಘಟನೆಯೊಂದಿಗೆ ಇಂದು ಜತೆಗೂಡಿರಲು ನಾವೆಷ್ಟು ಹರ್ಷಿಸುತ್ತೇವೆ! ಪರಸ್ಪರರಿಗಾಗಿ ನಿಜವಾದ ಪ್ರೀತಿಯನ್ನು ತೋರಿಸಬೇಕೆಂಬ ಯೇಸುವಿನ ಆಜ್ಞೆಗೆ ವಿಧೇಯರಾಗುವುದೇ ನಮ್ಮ ದೃಢಸಂಕಲ್ಪವಾಗಿದೆ. ಆದರೆ ಈ ಕಡೇ ದಿವಸಗಳಲ್ಲಿ ಹೆಚ್ಚಿನ ಜನರು ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಆಗಿದ್ದಾರೆ. (2 ತಿಮೊ. 3:1-3) ಅವರು ಸ್ನೇಹಬಂಧಗಳನ್ನು ಬೆಸೆದರೂ ಅವು ಹೆಚ್ಚಾಗಿ ಗಾಢವಾಗಿರುವುದಿಲ್ಲ ಮತ್ತು ನಿಸ್ವಾರ್ಥವಾದದ್ದಾಗಿರುವುದಿಲ್ಲ. ನಿಜ ಕ್ರೈಸ್ತರೆಂಬ ನಮ್ಮ ಗುರುತನ್ನು ಕಾಪಾಡಿಕೊಳ್ಳಲಿಕ್ಕಾಗಿ ನಮ್ಮಲ್ಲಿ ಅಂಥ ಮನೋಭಾವಗಳು ಇರಬಾರದು. ಹಾಗಾದರೆ ಒಳ್ಳೇ ಸ್ನೇಹಬಂಧಗಳ ಬುನಾದಿ ಯಾವುದು? ನಾವು ಒಳ್ಳೇ ಸ್ನೇಹಿತರನ್ನು ಮಾಡುವುದು ಹೇಗೆ? ಒಂದು ಸ್ನೇಹಬಂಧವನ್ನು ಯಾವಾಗ ಕಡಿದುಹಾಕಬೇಕಾದೀತು? ಭಕ್ತಿವೃದ್ಧಿ ಮಾಡುವ ಸ್ನೇಹಬಂಧಗಳನ್ನು ಹೇಗೆ ಉಳಿಸಿಕೊಳ್ಳಬಲ್ಲೆವು? ಈ ವಿಷಯಗಳನ್ನು ನಾವೀಗ ಪರಿಗಣಿಸೋಣ.
ಒಳ್ಳೇ ಸ್ನೇಹಬಂಧಗಳ ಬುನಾದಿ ಯಾವುದು?
3, 4. ಗಾಢವಾದ ಸ್ನೇಹಬಂಧಗಳ ಬುನಾದಿ ಯಾವುದು, ಮತ್ತು ಏಕೆ?
3 ಯೆಹೋವನಿಗಾಗಿರುವ ಪ್ರೀತಿಯೇ ಗಾಢ ಸ್ನೇಹಬಂಧಗಳ ಬುನಾದಿಯಾಗಿದೆ. ರಾಜ ಸೊಲೊಮೋನನು ಬರೆದದ್ದು: “ಒಬ್ಬೊಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಎದುರಾಗಿ ನಿಲ್ಲಬಹುದು; ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲವಷ್ಟೆ.” (ಪ್ರಸಂ. 4:12) ಒಂದು ಸ್ನೇಹಬಂಧದಲ್ಲಿ ಮೂರನೇ ಹುರಿ ಯೆಹೋವನಾಗಿರುವಲ್ಲಿ ಆ ಸ್ನೇಹ ಬಾಳುವುದು.
4 ಯೆಹೋವನನ್ನು ಪ್ರೀತಿಸದವರು ಸಹ ಸಮರ್ಪಕ ಸ್ನೇಹಬಂಧಗಳನ್ನು ಬೆಸೆಯುತ್ತಾರೇನೋ ನಿಜ. ಆದರೆ ಸ್ನೇಹಿತರಾದ ವ್ಯಕ್ತಿಗಳನ್ನು ಆಕರ್ಷಿಸಿದ ಸಂಗತಿಯು ಪರಸ್ಪರರಿಗಿರುವ ದೇವರ ಮೇಲಣ ಪ್ರೀತಿಯಾಗಿರುವಲ್ಲಿ ಅಂಥ ಸ್ನೇಹ ಸ್ಥಿರವಾಗಿರುವುದು. ತಪ್ಪಭಿಪ್ರಾಯಗಳು ಹುಟ್ಟುವಲ್ಲಿ, ನಿಜ ಸ್ನೇಹಿತರು ಪರಸ್ಪರರೊಂದಿಗೆ ಯೆಹೋವನಿಗೆ ಮೆಚ್ಚಿಕೆಯಾಗುವಂಥ ವಿಧದಲ್ಲಿ ನಡೆದುಕೊಳ್ಳುವರು. ದೇವರ ವಿರೋಧಿಗಳು ನಿಜ ಕ್ರೈಸ್ತರ ಮಧ್ಯೆ ಬಿರುಕನ್ನುಂಟುಮಾಡಲು ಪ್ರಯತ್ನಿಸುವಾಗ, ಅವರ ಸ್ನೇಹಬಂಧಗಳನ್ನು ಮುರಿಯಲಾಗದು ಎಂಬುದನ್ನು ಕಂಡುಕೊಳ್ಳುತ್ತಾರೆ. ಇತಿಹಾಸದಾದ್ಯಂತ ಯೆಹೋವನ ಸೇವಕರು, ತಾವು ಸಾಯಲಿಕ್ಕೆ ಸಿದ್ಧರಿದ್ದೇವೆ ಆದರೆ ಪರಸ್ಪರರಿಗೆ ದ್ರೋಹವೆಸಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.—1 ಯೋಹಾನ 3:16 ಓದಿ.
5. ರೂತ ಹಾಗೂ ನೊವೊಮಿಯ ಮಧ್ಯಯಿದ್ದ ಸ್ನೇಹವು ಬಾಳಲು ಕಾರಣವೇನು?
5 ಯೆಹೋವನನ್ನು ಪ್ರೀತಿಸುವವರೊಂದಿಗಿನ ಸ್ನೇಹಬಂಧಗಳು ಅತ್ಯಂತ ಹೆಚ್ಚು ತೃಪ್ತಿತರುತ್ತವೆ ಎಂಬುದು ನಿಸ್ಸಂಶಯ. ರೂತ ಹಾಗೂ ನೊವೊಮಿಯ ಮಾದರಿಯನ್ನು ಪರಿಗಣಿಸಿ. ಈ ಸ್ತ್ರೀಯರ ಸ್ನೇಹಬಂಧವು, ಬೈಬಲ್ನಲ್ಲಿ ದಾಖಲೆಯಾದ ಸ್ನೇಹಬಂಧಗಳಲ್ಲೇ ಅತ್ಯಂತ ಹೆಚ್ಚು ಮೆಚ್ಚುಗೆ ಪಡೆದಿದೆ. ಅವರ ಸ್ನೇಹ ಬಾಳಲು ಕಾರಣವೇನು? ಅದು, ರೂತಳು ನೊವೊಮಿಗೆ ಹೇಳಿದ ಈ ಮಾತುಗಳಿಂದ ತಿಳಿದುಬರುತ್ತದೆ: “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. . . . ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ.” (ರೂತ. 1:16, 17) ರೂತ ಹಾಗೂ ನೊವೊಮಿಗೆ ದೇವರ ಮೇಲೆ ಗಾಢ ಪ್ರೀತಿಯಿತ್ತೆಂಬುದು ಸ್ಪಷ್ಟ. ಈ ಪ್ರೀತಿಯೇ ಅವರು ಪರಸ್ಪರರೊಂದಿಗೆ ನಡೆದುಕೊಳ್ಳುವ ರೀತಿಯನ್ನು ಪ್ರಭಾವಿಸುವಂತೆ ಬಿಟ್ಟರು. ಫಲಿತಾಂಶವಾಗಿ ಆ ಇಬ್ಬರೂ ಸ್ತ್ರೀಯರು ಯೆಹೋವನಿಂದ ಆಶೀರ್ವದಿತರಾದರು.
ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?
6-8. (ಎ) ಸ್ನೇಹಬಂಧಗಳು ಬಾಳಬೇಕಾದರೆ ಏನು ಆವಶ್ಯಕ? (ಬಿ) ಸ್ನೇಹಿತರನ್ನು ಮಾಡಿಕೊಳ್ಳಲು ನೀವು ಹೇಗೆ ಮೊದಲ ಹೆಜ್ಜೆ ತೆಗೆದುಕೊಳ್ಳಬಹುದು?
6 ರೂತ ಹಾಗೂ ನೊವೊಮಿಯ ಮಾದರಿ, ಒಳ್ಳೇ ಸ್ನೇಹಬಂಧಗಳು ತನ್ನಿಂದ ತಾನೇ ಹುಟ್ಟಿಕೊಳ್ಳುವುದಿಲ್ಲ ಎಂಬುದನ್ನು ತೋರಿಸಿಕೊಡುತ್ತದೆ. ಯೆಹೋವನ ಮೇಲೆ ಪರಸ್ಪರರಿಗಿರುವ ಪ್ರೀತಿಯೇ ಒಳ್ಳೇ ಸ್ನೇಹಬಂಧಗಳ ಬುನಾದಿ. ಆದರೆ ಅವು ಬಾಳಬೇಕಾದರೆ ಕಠಿನ ಶ್ರಮ ಹಾಗೂ ಸ್ವತ್ಯಾಗ ಆವಶ್ಯಕ. ಕ್ರೈಸ್ತ ಕುಟುಂಬಗಳಲ್ಲಿ ಯೆಹೋವನನ್ನು ಆರಾಧಿಸುತ್ತಿರುವ ಒಡಹುಟ್ಟಿದವರು ಸಹ ತಮ್ಮ ಮಧ್ಯೆ ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳಲು ಶ್ರಮಪಡಬೇಕು. ಹಾಗಾದರೆ ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?
7 ಮೊದಲ ಹೆಜ್ಜೆ ತೆಗೆದುಕೊಳ್ಳಿ. ಅಪೊಸ್ತಲ ಪೌಲನು ರೋಮ್ನಲ್ಲಿನ ಸಭೆಯಲ್ಲಿದ್ದ ತನ್ನ ಸ್ನೇಹಿತರಿಗೆ, ‘ಅತಿಥಿಸತ್ಕಾರದ ಪಥವನ್ನು ಅನುಸರಿಸಲು’ ಉತ್ತೇಜಿಸಿದನು. (ರೋಮ. 12:13) ಒಂದು ಅಕ್ಷರಶಃ ಪಥದಲ್ಲಿ ನಡೆಯುವಾಗ ಒಂದೊಂದೇ ಹೆಜ್ಜೆಯನ್ನಿಟ್ಟು ಮುಂದೆ ಸಾಗಬೇಕಾಗುತ್ತದೆ. ಅದೇ ರೀತಿಯಲ್ಲಿ ಅತಿಥಿಸತ್ಕಾರದ ಪಥದಲ್ಲಿ ನಡೆಯಲಿಕ್ಕಾಗಿ ಪ್ರತಿನಿತ್ಯವೂ ಅತಿಥಿಸತ್ಕಾರದ ಚಿಕ್ಕಪುಟ್ಟ ಕೃತ್ಯಗಳನ್ನು ಮಾಡಬೇಕು. ಆ ಪಥದಲ್ಲಿ ನಿಮಗಾಗಿ ಬೇರಾರೂ ನಡೆಯಲಾರರು. (ಜ್ಞಾನೋಕ್ತಿ 3:27 ಓದಿ.) ಸಭೆಯಲ್ಲಿನ ಬೇರೆ ಬೇರೆಯವರನ್ನು ಒಂದು ಸರಳ ಊಟಕ್ಕೆ ಕರೆಯುವುದು ಸಹ ಅತಿಥಿಸತ್ಕಾರ ತೋರಿಸುವ ಒಂದು ವಿಧವಾಗಿದೆ. ಸಭೆಯ ಸದಸ್ಯರಿಗೆ ಕ್ರಮವಾಗಿ ಅತಿಥಿಸತ್ಕಾರ ತೋರಿಸುವುದನ್ನು ನಿಮ್ಮ ರೂಢಿಯಾಗಿ ಮಾಡಬಲ್ಲಿರೋ?
8 ಸ್ನೇಹಿತರನ್ನು ಮಾಡಿಕೊಳ್ಳಲಿಕ್ಕಾಗಿ ನೀವು ಮೊದಲ ಹೆಜ್ಜೆ ತೆಗೆದುಕೊಳ್ಳಬಹುದಾದ ಇನ್ನೊಂದು ವಿಧವು, ಸಾರುವ ಕೆಲಸದಲ್ಲಿ ನಿಮ್ಮೊಂದಿಗೆ ಪಾಲ್ಗೊಳ್ಳುವಂತೆ ಬೇರೆ ಬೇರೆಯವರನ್ನು ಆಮಂತ್ರಿಸುವುದೇ ಆಗಿದೆ. ನೀವೊಬ್ಬ ಅಪರಿಚಿತನ ಬಾಗಿಲ ಬಳಿ ನಿಂತಿದ್ದು, ನಿಮ್ಮ ಜೊತೆಗಿರುವವರು ಯೆಹೋವನಿಗಾಗಿರುವ ತಮ್ಮ ಪ್ರೀತಿಯ ಕುರಿತು ಹೃದಯದಾಳದಿಂದ ಮಾತಾಡುವುದನ್ನು ಕೇಳಿಸಿಕೊಳ್ಳುವಾಗ ಸಹಜವಾಗಿಯೇ ಅವರಿಗೆ ಆಪ್ತರಾಗುವಿರಿ.
9, 10. ಪೌಲನು ಯಾವ ಮಾದರಿಯನ್ನಿಟ್ಟನು, ಮತ್ತು ಅವನನ್ನು ನಾವು ಹೇಗೆ ಅನುಕರಿಸಬಲ್ಲೆವು?
9 ನಿಮ್ಮ ಮಮತೆ ವಿಶಾಲಗೊಳ್ಳಲಿ. (2 ಕೊರಿಂಥ 6:12, 13 ಓದಿ.) ಸಭೆಯಲ್ಲಿ ನಿಮ್ಮ ಸ್ನೇಹಿತರಾಗಬಲ್ಲವರು ಯಾರೂ ಇಲ್ಲವೆಂದು ನಿಮಗನಿಸಿದೆಯೋ? ಹೀಗಿರುವಲ್ಲಿ ಇದಕ್ಕೆ ಕಾರಣ, ಯಾರು ನಿಮ್ಮ ಸ್ನೇಹಿತರಾಗಸಾಧ್ಯವಿದೆ ಎಂಬುದರ ಬಗ್ಗೆ ನಿಮಗಿರುವ ಸಂಕುಚಿತ ನೋಟವೋ? ಅಪೊಸ್ತಲ ಪೌಲನು ಮಮತೆಯನ್ನು ವಿಶಾಲಗೊಳಿಸುವ ವಿಷಯದಲ್ಲಿ ಒಳ್ಳೇ ಮಾದರಿಯನ್ನಿಟ್ಟನು. ಯೆಹೂದ್ಯೇತರರೊಂದಿಗೆ ಆಪ್ತ ಸ್ನೇಹವನ್ನು ಬೆಳೆಸುವುದರ ಬಗ್ಗೆ ಒಂದುಕಾಲದಲ್ಲಿ ಅವನು ಕನಸುಮನಸ್ಸಲ್ಲೂ ನೆನಸಿರಲಿಕ್ಕಿಲ್ಲ. ಆದರೆ ಅವನೇ ನಂತರ, “ಅನ್ಯಜನಾಂಗಗಳವರಿಗೆ ಅಪೊಸ್ತಲ”ನಾದನು.—ರೋಮ. 11:13.
10 ಅಷ್ಟುಮಾತ್ರವಲ್ಲದೆ, ಪೌಲನು ಕೇವಲ ತನ್ನ ಸಮಪ್ರಾಯದವರೊಂದಿಗೆ ಮಾತ್ರ ಸ್ನೇಹಬೆಳೆಸಲಿಲ್ಲ. ಉದಾಹರಣೆಗೆ, ಅವನ ಮತ್ತು ತಿಮೊಥೆಯನ ಮಧ್ಯೆ ತುಂಬ ವಯಸ್ಸಿನ ಅಂತರವಿತ್ತು ಹಾಗೂ ಅವರ ಹಿನ್ನೆಲೆ ಕೂಡ ಬೇರೆಯಾಗಿತ್ತು. ಆದರೂ ಅವರು ಆಪ್ತ ಮಿತ್ರರಾದರು. ಇಂದು ಅನೇಕ ಯುವ ಜನರು ಸಭೆಯಲ್ಲಿ ತಮಗಿಂತ ಹಿರಿಯರಾದವರೊಂದಿಗೆ ಬೆಳೆಸಿಕೊಂಡಿರುವ ಸ್ನೇಹಬಂಧಗಳನ್ನು ಬಹುಮೂಲ್ಯವೆಂದು ಪರಿಗಣಿಸುತ್ತಾರೆ. 20-25ರೊಳಗಿನ ಪ್ರಾಯದ ವೆನಿಸಾ ಹೇಳುವುದು: “ನನ್ನ ಅತ್ಯಾಪ್ತ ಸ್ನೇಹಿತೆಯ ಪ್ರಾಯ 50 ದಾಟಿದೆ. ಆದರೂ ನನ್ನ ವಯಸ್ಸಿನ ಸ್ನೇಹಿತರೊಂದಿಗೆ ಏನೇನು ಮಾತಾಡುತ್ತೇನೊ ಅದೆಲ್ಲವನ್ನು ಅವರೊಂದಿಗೆ ಮಾತಾಡಬಲ್ಲೆ. ಅವರಿಗೆ ನನ್ನ ಬಗ್ಗೆ ಅಪಾರ ಕಾಳಜಿಯೂ ಇದೆ.” ಇಂಥ ಸ್ನೇಹಗಳು ಹೇಗೆ ಹುಟ್ಟಿಕೊಳ್ಳುತ್ತವೆ? ವೆನಿಸಾ ಹೇಳುವುದು: “ಈ ಸ್ನೇಹ ತನ್ನಿಂದ ತಾನೇ ಆಗುತ್ತದೆಂದು ನೆನಸಿ ನಾನು ಕಾಯುತ್ತಾ ಕುಳಿತಿರಲಿಲ್ಲ, ಪ್ರಯತ್ನಪಟ್ಟು ಗಳಿಸಿಕೊಂಡೆ.” ನೀವು ಸಹ ನಿಮ್ಮ ಸಮವಯಸ್ಕರಲ್ಲದವರೊಂದಿಗೆ ಸ್ನೇಹ ಬೆಳೆಸಲು ಸಿದ್ಧರಿದ್ದೀರೊ? ನಿಮ್ಮ ಪ್ರಯತ್ನಗಳನ್ನು ಯೆಹೋವನು ಖಂಡಿತವಾಗಿಯೂ ಹರಸುವನು.
11. ಯೋನಾತಾನ ಹಾಗೂ ದಾವೀದರ ಮಾದರಿಯಿಂದ ನಾವೇನು ಕಲಿಯಬಲ್ಲೆವು?
11 ನಿಷ್ಠರಾಗಿರಿ. ಸೊಲೊಮೋನನು ಬರೆದದ್ದು: “ಒಬ್ಬ ನಿಜ ಒಡನಾಡಿಯು ಯಾವಾಗಲೂ ಪ್ರೀತಿಸುತ್ತಾನೆ, ಮತ್ತು ಸಂಕಟದ ಸಮಯದಲ್ಲಿ ಸಹಾಯ ಮಾಡಲಿಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.” (ಜ್ಞಾನೋ. 17:17, NW) ಆ ಮಾತುಗಳನ್ನು ಬರೆಯುವಾಗ ಸೊಲೊಮೋನನಿಗೆ, ಯೋನಾತಾನನೊಂದಿಗೆ ತನ್ನ ತಂದೆಯಾದ ದಾವೀದನಿಗಿದ್ದ ಸ್ನೇಹ ಮನಸ್ಸಿನಲ್ಲಿದ್ದಿರಬಹುದು. (1 ಸಮು. 18:1) ರಾಜ ಸೌಲನಿಗೆ ತನ್ನ ಮಗನಾದ ಯೋನಾತಾನನು ಇಸ್ರಾಯೇಲ್ ರಾಜ್ಯದ ಸಿಂಹಾಸನವೇರಬೇಕೆಂಬ ಆಸೆಯಿತ್ತು. ಆದರೆ ಯೋನಾತಾನನು, ಆ ಸುಯೋಗಕ್ಕಾಗಿ ಯೆಹೋವನು ದಾವೀದನನ್ನು ಆಯ್ಕೆಮಾಡಿದ್ದಾನೆಂಬ ವಾಸ್ತವಾಂಶವನ್ನು ಒಪ್ಪಿಕೊಂಡಿದ್ದನು. ಆದುದರಿಂದ ಅವನು ಸೌಲನಂತೆ ದಾವೀದನ ಬಗ್ಗೆ ಹೊಟ್ಟೆಕಿಚ್ಚುಪಡಲಿಲ್ಲ. ದಾವೀದನಿಗೆ ಸಿಗುತ್ತಿದ್ದ ಹೊಗಳಿಕೆಯಿಂದ ಅವನು ಮುನಿಸಿಕೊಳ್ಳಲಿಲ್ಲ. ಅಲ್ಲದೇ, ಸೌಲನು ದಾವೀದನ ಬಗ್ಗೆ ಹಬ್ಬಿಸಿದ ಸುಳ್ಳು ವದಂತಿಯನ್ನು ಅವನು ನಂಬಿಬಿಡಲೂ ಇಲ್ಲ. (1 ಸಮು. 20:24-34) ನಾವು ಯೋನಾತಾನನಂತೆ ಇದ್ದೇವೋ? ನಮ್ಮ ಸ್ನೇಹಿತರಿಗೆ ಸುಯೋಗಗಳು ಸಿಗುವಾಗ ಸಂತೋಷಪಡುತ್ತೇವೋ? ಕಷ್ಟಗಳು ಬಂದಾಗ, ಅವರನ್ನು ಸಂತೈಸಿ, ಬೆಂಬಲಿಸುತ್ತೇವೋ? ಒಬ್ಬ ಸ್ನೇಹಿತನ ಬಗ್ಗೆ ಹಾನಿಕರ ಹರಟೆಮಾತು ನಮ್ಮ ಕಿವಿಗೆ ಬಿದ್ದರೆ ಅದನ್ನು ಕೂಡಲೇ ನಂಬಿಬಿಡುತ್ತೇವೋ? ಇಲ್ಲವೇ, ಯೋನಾತಾನನಂತೆ ನಮ್ಮ ಸ್ನೇಹಿತನನ್ನು ನಿಷ್ಠೆಯಿಂದ ಸಮರ್ಥಿಸುತ್ತೇವೋ?
ಸ್ನೇಹಬಂಧಗಳನ್ನು ಯಾವಾಗ ಕಡಿದುಹಾಕಬೇಕು?
12-14. ಕೆಲವು ಬೈಬಲ್ ವಿದ್ಯಾರ್ಥಿಗಳಿಗೆ ಯಾವ ಸವಾಲು ಎದುರಾಗುತ್ತದೆ, ಮತ್ತು ನಾವು ಅವರಿಗೆ ಹೇಗೆ ನೆರವು ನೀಡಬಲ್ಲೆವು?
12 ಬೈಬಲ್ ವಿದ್ಯಾರ್ಥಿಯೊಬ್ಬನು ತನ್ನ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಲಾರಂಭಿಸುವಾಗ, ಗೆಳೆತನಗಳ ವಿಷಯದಲ್ಲಿ ದೊಡ್ಡ ಸವಾಲು ಎದುರಾಗಬಹುದು. ಅವನು ಯಾರ ಸಂಗವನ್ನು ಇಷ್ಟಪಡುತ್ತಾನೊ ಆ ಒಡನಾಡಿಗಳು ಬೈಬಲಿನ ನೀತಿ ಸಂಹಿತೆಗನುಸಾರ ಜೀವಿಸುತ್ತಿರಲಿಕ್ಕಿಲ್ಲ. ಈ ಹಿಂದೆ ಇಂಥವರೊಂದಿಗೆ ಅವನು ಕ್ರಮವಾಗಿ ತುಂಬ ಸಮಯ ಕಳೆದಿರಬಹುದು. ಆದರೆ ಈಗ, ಅವರ ಕಾರ್ಯಕಲಾಪಗಳು ತನ್ನ ಮೇಲೆ ಕೆಟ್ಟ ಪ್ರಭಾವ ಬೀರಬಲ್ಲವು ಮತ್ತು ಈ ಕಾರಣದಿಂದ ಆ ಒಡನಾಡಿಗಳೊಂದಿಗಿನ ಸಂಪರ್ಕ ಕಡಿಮೆಮಾಡಬೇಕೆಂದು ಅವನಿಗನಿಸುತ್ತದೆ. (1 ಕೊರಿಂ. 15:33) ಆದರೆ ಅವರೊಂದಿಗೆ ಸಹವಾಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರೆ ತಾನು ದ್ರೋಹಿಯಾಗುವೆ ಎಂದು ಅವನಿಗನಿಸಬಹುದು.
13 ಈ ಸಮಸ್ಯೆಯನ್ನು ಎದುರಿಸುತ್ತಿರುವ ಬೈಬಲ್ ವಿದ್ಯಾರ್ಥಿ ನೀವಾಗಿರುವಲ್ಲಿ ಇದನ್ನು ನೆನಪಿಡಿ: ನೀವು ನಿಮ್ಮ ಜೀವನವನ್ನು ಸುಧಾರಿಸುವಾಗ ಯಾರು ನಿಜವಾಗಿ ನಿಮ್ಮ ಸ್ನೇಹಿತರಾಗಿದ್ದಾರೋ ಅವರು ಖುಷಿಪಡುತ್ತಾರೆ. ಯೆಹೋವನ ಬಗ್ಗೆ ಕಲಿಯುವುದರಲ್ಲಿ ಬಹುಶಃ ಅವರು ನಿಮ್ಮೊಂದಿಗೆ ಜೊತೆಗೂಡಲೂಬಹುದು. ಇನ್ನೊಂದು ಬದಿಯಲ್ಲಿ ಸುಳ್ಳು ಸ್ನೇಹಿತರು, “ತಮ್ಮ ಕೀಳ್ಮಟ್ಟದ ಪಟಿಂಗತನದಲ್ಲಿ ನೀವು ಅವರೊಂದಿಗೆ” ಓಡದಿರುವ ಕಾರಣ “ನಿಮ್ಮ ಕುರಿತು ದೂಷಣಾತ್ಮಕ ಮಾತುಗಳನ್ನಾಡುತ್ತಾರೆ.” (1 ಪೇತ್ರ 4:3, 4) ವಾಸ್ತವದಲ್ಲಿ ದ್ರೋಹವೆಸಗುತ್ತಿರುವವರು ನೀವಲ್ಲ, ನಿಮ್ಮ ಸ್ನೇಹಿತರೇ.
14 ದೇವರ ಮೇಲೆ ಪ್ರೀತಿ ಇಲ್ಲದ ಸ್ನೇಹಿತರು ಬೈಬಲ್ ವಿದ್ಯಾರ್ಥಿಗಳನ್ನು ಬಿಟ್ಟುಹೋಗುವಾಗ ಉಂಟಾಗುವ ಖಾಲಿ ಜಾಗವನ್ನು ಸಭಾ ಸದಸ್ಯರು ತುಂಬಿಸಬಲ್ಲರು. (ಗಲಾ. 6:10) ಬೈಬಲ್ ಅಧ್ಯಯನ ಮಾಡುತ್ತಿದ್ದು, ಕೂಟಗಳಿಗೆ ಕ್ರಮವಾಗಿ ಬರುತ್ತಿರುವವರು ಯಾರಾದರೂ ನಿಮ್ಮ ಸಭೆಯಲ್ಲಿದ್ದಾರೋ? ಅಂಥವರಿಗೆ ನೀವು ಆಗಾಗ್ಗೆ ಭಕ್ತಿವರ್ಧಕ ಸಹವಾಸ ಒದಗಿಸಬಲ್ಲಿರೋ?
15, 16. (ಎ) ಸ್ನೇಹಿತರೊಬ್ಬರು ಯೆಹೋವನ ಸೇವೆಮಾಡುವುದನ್ನು ನಿಲ್ಲಿಸುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ದೇವರ ಮೇಲೆ ನಮಗಿರುವ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು?
15 ಆದರೆ ಸಭೆಯೊಳಗಿನ ಸ್ನೇಹಿತರೊಬ್ಬರು ಯೆಹೋವನಿಗೆ ಬೆನ್ನುಹಾಕುವಲ್ಲಿ, ಮತ್ತು ಬಹುಶಃ ಅವರನ್ನು ಬಹಿಷ್ಕರಿಸಬೇಕಾಗುವಲ್ಲಿ ಆಗೇನು? ಇಂಥ ಸನ್ನಿವೇಶವು ತುಂಬ ಸಂಕಟಕರವಾಗಿಬಲ್ಲದು. ಒಬ್ಬ ಸಹೋದರಿಯ ಪರಮಾಪ್ತ ಗೆಳತಿ ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿದಳು. ಆಗ ತನಗೆ ಹೇಗನಿಸಿತೆಂಬುದನ್ನು ವರ್ಣಿಸುತ್ತಾ ಆ ಸಹೋದರಿ ಹೇಳಿದ್ದು: “ನನ್ನೊಳಗೆ ಒಂದು ಭಾಗ ಸತ್ತುಹೋಗಿರುವಂತೆ ನನಗನಿಸಿತು. ನನ್ನ ಗೆಳತಿ ಸತ್ಯದಲ್ಲಿ ದೃಢವಾಗಿ ತಳವೂರಿದ್ದಾಳೆಂದು ನಾನೆಣಿಸಿದ್ದೆ, ಆದರೆ ಹಾಗಿರಲಿಲ್ಲ. ತನ್ನ ಕುಟುಂಬವನ್ನು ಮೆಚ್ಚಿಸಲಿಕ್ಕಾಗಿ ಮಾತ್ರ ಆಕೆ ಯೆಹೋವನ ಸೇವೆ ಮಾಡುತ್ತಿದ್ದಳೊ ಏನೋ. ಅನಂತರ ನಾನು ನನ್ನ ಸ್ವಂತ ಇರಾದೆಗಳನ್ನು ಪರಿಶೀಲಿಸಲಾರಂಭಿಸಿದೆ. ನಾನು ಯೆಹೋವನ ಸೇವೆಯನ್ನು ಸರಿಯಾದ ಕಾರಣಕ್ಕಾಗಿ ಮಾಡುತ್ತಿದ್ದೇನೋ?” ಈ ಸಹೋದರಿ ಹೇಗೆ ನಿಭಾಯಿಸಿದಳು? ಅವಳನ್ನುವುದು: “ನಾನು ಯೆಹೋವನ ಮೇಲೆ ನನ್ನ ಭಾರವನ್ನು ಹಾಕಿದೆ. ನಾನು ಯೆಹೋವನನ್ನು ಪ್ರೀತಿಸುವುದು, ಆತನು ನನಗೆ ತನ್ನ ಸಂಘಟನೆಯೊಳಗೆ ಸ್ನೇಹಿತರನ್ನು ಕೊಡುತ್ತಾನೆ ಎಂಬ ಕಾರಣಕ್ಕಾಗಿ ಮಾತ್ರ ಅಲ್ಲ ಎಂಬುದನ್ನು ತೋರಿಸಿಕೊಡಲು ಗಟ್ಟಿಮನಸ್ಸು ಮಾಡಿದ್ದೇನೆ.”
16 ಈ ಲೋಕದ ಸ್ನೇಹಿತರಾಗಿರುವವರ ಜೊತೆಸೇರುವಲ್ಲಿ ನಾವು ದೇವರ ಸ್ನೇಹಿತರಾಗಿ ಉಳಿಯಲಾರೆವು. “ಲೋಕದೊಂದಿಗೆ ಸ್ನೇಹವು ದೇವರೊಂದಿಗೆ ವೈರತ್ವವಾಗಿದೆ ಎಂಬುದು ನಿಮಗೆ ತಿಳಿಯದೊ? ಆದುದರಿಂದ ಯಾವನಾದರೂ ಲೋಕಕ್ಕೆ ಸ್ನೇಹಿತನಾಗಲು ಬಯಸುವುದಾದರೆ ಅವನು ತನ್ನನ್ನು ದೇವರಿಗೆ ವೈರಿಯನ್ನಾಗಿ ಮಾಡಿಕೊಳ್ಳುತ್ತಾನೆ” ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋ. 4:4) ನಾವು ಯೆಹೋವನಿಗೆ ನಿಷ್ಠರಾಗಿ ಉಳಿಯುವಲ್ಲಿ, ಸ್ನೇಹಿತರೊಬ್ಬರನ್ನು ಕಳೆದುಕೊಂಡರೂ ಆ ನಷ್ಟವನ್ನು ಸಹಿಸಲು ದೇವರು ಸಹಾಯ ಮಾಡುವನೆಂಬ ಭರವಸೆಯಿಡುವ ಮೂಲಕ ಆತನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸಬಲ್ಲೆವು. (ಕೀರ್ತನೆ 18:25 ಓದಿ.a) ಈ ಹಿಂದೆ ಉಲ್ಲೇಖಿಸಲಾಗಿರುವ ಸಹೋದರಿಯು, ವಿಷಯವನ್ನು ಹೀಗೆ ಸಾರಾಂಶಿಸುತ್ತಾರೆ: “ಯೆಹೋವನನ್ನಾಗಲಿ ನಮ್ಮನ್ನಾಗಲಿ ಪ್ರೀತಿಸುವಂತೆ ನಾವು ಯಾರನ್ನೂ ಒತ್ತಾಯ ಮಾಡಸಾಧ್ಯವಿಲ್ಲ ಎಂಬ ಪಾಠವನ್ನು ನಾನು ಕಲಿತೆ. ಅದು ಅವರವರ ವೈಯಕ್ತಿಕ ಆಯ್ಕೆ.” ಆದರೆ ಸಭೆಯಲ್ಲಿ ಇರುವವರೊಂದಿಗಿನ ಭಕ್ತಿವರ್ಧಕ ಸ್ನೇಹಬಂಧಗಳನ್ನು ಉಳಿಸಿಕೊಳ್ಳಲು ನಾವೇನು ಮಾಡಬಲ್ಲೆವು?
ಒಳ್ಳೇ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು
17. ಒಳ್ಳೇ ಸ್ನೇಹಿತರು ಪರಸ್ಪರ ಹೇಗೆ ಮಾತಾಡುತ್ತಾರೆ?
17 ಒಳ್ಳೇ ಸಂವಾದವು, ಸ್ನೇಹಬಂಧಕ್ಕೆ ಜೀವಕಳೆ ಕೊಡುತ್ತದೆ. ರೂತ ನೊವೊಮಿ, ದಾವೀದ ಯೋನಾತಾನ ಮತ್ತು ಪೌಲ ತಿಮೊಥೆಯರ ಕುರಿತ ಬೈಬಲ್ ವೃತ್ತಾಂತಗಳನ್ನು ಓದುವಾಗ, ಒಳ್ಳೇ ಸ್ನೇಹಿತರು ಹೃದಯಬಿಚ್ಚಿ ಆದರೆ ಗೌರವಪೂರ್ವಕವಾಗಿ ಮಾತಾಡುತ್ತಾರೆ ಎಂಬದನ್ನು ಗಮನಿಸುವಿರಿ. ನಾವು ಇತರರೊಂದಿಗೆ ಸಂವಾದ ಮಾಡಬೇಕಾದ ವಿಧದ ಕುರಿತು ಪೌಲನು ಬರೆದದ್ದು: “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ.” ಪೌಲನು ಇಲ್ಲಿ ನಿರ್ದಿಷ್ಟವಾಗಿ “ಹೊರಗಿನವರೊಂದಿಗೆ” ಅಂದರೆ ಕ್ರೈಸ್ತ ಸಹೋದರರಲ್ಲದವರೊಂದಿಗೆ ನಾವು ಮಾತಾಡಬೇಕಾದ ವಿಧಕ್ಕೆ ಸೂಚಿಸುತ್ತಿದ್ದನು. (ಕೊಲೊ. 4:5, 6) ನಾವು ಮಾತಾಡುವಾಗ ಅವಿಶ್ವಾಸಿಗಳಿಗೇ ಗೌರವಕೊಡಬೇಕಾದರೆ ಸಭೆಯೊಳಗಿನ ನಮ್ಮ ಸ್ನೇಹಿತರಿಗೆ ಇನ್ನೆಷ್ಟು ಗೌರವಕೊಡಬೇಕು!
18, 19. ಕ್ರೈಸ್ತ ಸ್ನೇಹಿತನೊಬ್ಬನಿಂದ ಸಿಗುವ ಯಾವುದೇ ಸಲಹೆಯ ಬಗ್ಗೆ ನಮ್ಮ ನೋಟವೇನಾಗಿರಬೇಕು, ಮತ್ತು ಎಫೆಸದಲ್ಲಿದ್ದ ಹಿರಿಯರು ನಮಗಾಗಿ ಯಾವ ಮಾದರಿಯನ್ನಿಟ್ಟರು?
18 ಒಳ್ಳೇ ಸ್ನೇಹಿತರು ಪರಸ್ಪರರ ಅಭಿಪ್ರಾಯಗಳಿಗೆ ಬೆಲೆಕೊಡುತ್ತಾರೆ. ಹೀಗಿರುವುದರಿಂದ ಅವರ ನಡುವಿನ ಸಂವಾದವು ಸೌಜನ್ಯಭರಿತವೂ ಅದೇ ಸಮಯದಲ್ಲಿ ನೇರವಾದದ್ದೂ ಆಗಿರಬೇಕು. ವಿವೇಕಿ ರಾಜ ಸೊಲೊಮೋನನು ಬರೆದದ್ದು: “ತೈಲವೂ ಸುಗಂಧದ್ರವ್ಯವೂ ಹೃದಯವನ್ನು ಸಂತೋಷಪಡಿಸುತ್ತವೆ. ಹಾಗೆಯೇ ಆದರಣೆಯ ಸಲಹೆಯು ಸ್ನೇಹಿತನಿಗೆ ಮಧುರವಾಗಿರುತ್ತದೆ.” (ಜ್ಞಾನೋ. 27:9, NIBV) ಒಬ್ಬ ಸ್ನೇಹಿತನಿಂದ ಸಿಗುವ ಯಾವುದೇ ಸಲಹೆಯ ಬಗ್ಗೆ ನಿಮಗೂ ಹಾಗೆ ಅನಿಸುತ್ತದೋ? (ಕೀರ್ತನೆ 141:5 ಓದಿ.) ನೀವು ಕೈಗೆತ್ತಿಕೊಂಡಿರುವ ಯಾವುದೋ ಕೆಲಸದ ಕುರಿತು ಸ್ನೇಹಿತರೊಬ್ಬರು ಕಳವಳ ವ್ಯಕ್ತಪಡಿಸುವಾಗ ಹೇಗೆ ಪ್ರತಿಕ್ರಿಯಿಸುತ್ತೀರಿ? ಅವರ ಮಾತುಗಳನ್ನು ಉಪಕಾರದ ಅಥವಾ ಪ್ರೀತಿಪರ ದಯೆಯ ಅಭಿವ್ಯಕ್ತಿಯಾಗಿ ಪರಿಗಣಿಸುತ್ತೀರೋ, ಕೋಪಮಾಡಿಕೊಳ್ಳುತ್ತೀರೋ?
19 ಅಪೊಸ್ತಲ ಪೌಲನಿಗೆ, ಎಫೆಸದಲ್ಲಿದ್ದ ಸಭೆಯ ಹಿರಿಯರೊಂದಿಗೆ ಆಪ್ತ ಸಂಬಂಧವಿತ್ತು. ಬಹುಶಃ ಅವರಲ್ಲಿ ಕೆಲವರ ಪರಿಚಯ ಅವರು ಹೊಸದಾಗಿ ವಿಶ್ವಾಸಿಗಳಾದಂದಿನಿಂದಲೇ ಅವನಿಗಿದ್ದಿರಬಹುದು. ಹಾಗಿದ್ದರೂ ಅವರೊಂದಿಗಿನ ತನ್ನ ಕೊನೆ ಭೇಟಿಯಲ್ಲಿ ಅವನು ಅವರಿಗೆ ನೇರವಾದ ಸಲಹೆ ಕೊಟ್ಟನು. ಅವರು ಹೇಗೆ ಪ್ರತಿಕ್ರಿಯಿಸಿದರು? ಅವರು ಪೌಲನ ಸ್ನೇಹಿತರಾಗಿದ್ದರಿಂದ ಅವರಿಗೆ ಸಿಟ್ಟುಬರಲಿಲ್ಲ. ಅವನು ಅವರಲ್ಲಿ ತೋರಿಸಿದ ಅಭಿರುಚಿಯನ್ನು ಅವರು ಗಣ್ಯಮಾಡಿದರು. ಮಾತ್ರವಲ್ಲದೆ, ಇನ್ನು ಮುಂದೆ ಅವನನ್ನು ನೋಡಲಾಗುವುದಿಲ್ಲ ಎಂಬ ಕಾರಣಕ್ಕೆ ಅತ್ತುಬಿಟ್ಟರು.—ಅ. ಕಾ. 20:17, 29, 30, 36-38.
20. ಪ್ರೀತಿಪರ ಸ್ನೇಹಿತನೊಬ್ಬನು ಏನು ಮಾಡುವನು?
20 ಒಳ್ಳೇ ಸ್ನೇಹಿತರು ವಿವೇಕಯುತ ಸಲಹೆಯನ್ನು ಸ್ವೀಕರಿಸುತ್ತಾರೆ ಮಾತ್ರವಲ್ಲ ಅದನ್ನು ಕೊಡುತ್ತಾರೆ ಸಹ. ಆದರೆ, ನಾವು ಯಾವಾಗೆಲ್ಲ ‘ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸ್ವಂತ ಕಾರ್ಯವನ್ನೇ ಮಾಡಿಕೊಂಡಿರಬೇಕು’ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳಬೇಕು. (1 ಥೆಸ. 4:11) ನಮ್ಮಲ್ಲಿ ಪ್ರತಿಯೊಬ್ಬನೂ “ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸುವನು” ಎಂಬುದನ್ನು ಕೂಡ ಅಂಗೀಕರಿಸಬೇಕು. (ರೋಮ. 14:12) ಆದರೆ ಅವಶ್ಯಬಿದ್ದಲ್ಲಿ, ಒಬ್ಬ ಪ್ರೀತಿಯ ಸ್ನೇಹಿತನು ತನ್ನ ಮಿತ್ರನಿಗೆ ಯೆಹೋವನ ಮಟ್ಟಗಳ ಬಗ್ಗೆ ದಯೆಯಿಂದ ನೆನಪುಹುಟ್ಟಿಸುವನು. (1 ಕೊರಿಂ. 7:39) ಉದಾಹರಣೆಗೆ, ಅವಿವಾಹಿತರಾಗಿರುವ ನಿಮ್ಮ ಸ್ನೇಹಿತರೊಬ್ಬರು ಅವಿಶ್ವಾಸಿ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತಾ ಇರುವುದನ್ನು ನೀವು ಗಮನಿಸುವಲ್ಲಿ ಏನು ಮಾಡುವಿರಿ? ನಿಮ್ಮ ಸ್ನೇಹ ಮುರಿದುಹೋಗುವುದೆಂಬ ಭಯದಿಂದ ನಿಮ್ಮ ಕಳವಳವನ್ನು ಅವರಿಗೆ ವ್ಯಕ್ತಪಡಿಸದೇ ಸುಮ್ಮನಿರುವಿರೋ? ಒಂದುವೇಳೆ ನಿಮ್ಮ ಸ್ನೇಹಿತನು ನಿಮ್ಮ ಸಲಹೆಯನ್ನು ಅಲಕ್ಷಿಸುವಲ್ಲಿ ಏನು ಮಾಡುವಿರಿ? ತಪ್ಪುಹೆಜ್ಜೆಯನ್ನು ತೆಗೆದುಕೊಂಡಿರುವ ಮಿತ್ರನಿಗೆ ನೆರವುನೀಡಲು ಒಬ್ಬ ನಿಜ ಸ್ನೇಹಿತನು ಪ್ರೀತಿಪರ ಕುರುಬರ ಸಹಾಯ ಕೋರುವನು. ಇದನ್ನು ಮಾಡಲು ಧೈರ್ಯ ಬೇಕು. ಸ್ನೇಹಬಂಧವು ಯೆಹೋವನಿಗಾಗಿರುವ ಪ್ರೀತಿಯ ಮೇಲಾಧರಿತವಾಗಿರುವಲ್ಲಿ ಅದಕ್ಕೆ ಯಾವುದೇ ಶಾಶ್ವತ ಹಾನಿಯಾಗದು.
21. ನಾವೆಲ್ಲರೂ ಕೆಲವೊಮ್ಮೆ ಏನು ಮಾಡಬಹುದು, ಆದರೆ ಸಭೆಯೊಳಗೆ ಗಾಢ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು ಏಕೆ ಅತ್ಯಾವಶ್ಯಕ?
21 ಕೊಲೊಸ್ಸೆ 3:13, 14 ಓದಿ. ಕೆಲವೊಮ್ಮೆ ನಾವು ನಮ್ಮ ಸ್ನೇಹಿತರಿಗೆ ನಮ್ಮ ಬಗ್ಗೆ “ದೂರುಹೊರಿಸಲು ಕಾರಣ” ಕೊಡುವೆವು ಮತ್ತು ಕೆಲವೊಮ್ಮೆ ಅವರು ಸಹ ನಮಗೆ ಮಾತು ಅಥವಾ ಕೃತ್ಯದಲ್ಲಿ ಸಿಟ್ಟುಬರಿಸಬಹುದು. ಯಾಕೋಬನು ಬರೆದದ್ದು: “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ.” (ಯಾಕೋ. 3:2) ಆದರೆ ಸ್ನೇಹವನ್ನು, ನಾವು ಎಷ್ಟು ಸಲ ತಪ್ಪುಮಾಡುತ್ತೇವೆ ಎಂಬುದರಿಂದ ಅಲ್ಲ ಬದಲಾಗಿ ಆ ತಪ್ಪುಗಳನ್ನು ಎಷ್ಟು ಸಂಪೂರ್ಣವಾಗಿ ಕ್ಷಮಿಸುತ್ತೇವೆ ಎಂಬುದರಿಂದ ಅಳೆಯಲಾಗುತ್ತದೆ. ಬಿಚ್ಚುಮನಸ್ಸಿನಿಂದ ಸಂವಾದ ಮಾಡುವ ಮೂಲಕ ಮತ್ತು ಪರಸ್ಪರರನ್ನು ಮುಕ್ತವಾಗಿ ಕ್ಷಮಿಸುವ ಮೂಲಕ ಗಾಢವಾದ ಸ್ನೇಹಬಂಧಗಳನ್ನು ಕಟ್ಟುವುದು ಎಷ್ಟು ಅತ್ಯಾವಶ್ಯಕ! ನಾವು ಇಂಥ ಪ್ರೀತಿಯನ್ನು ತೋರಿಸುವಲ್ಲಿ ಅದು “ಐಕ್ಯದ ಪರಿಪೂರ್ಣ ಬಂಧವಾಗಿ” ಪರಿಣಮಿಸುವುದು.
[ಪಾದಟಿಪ್ಪಣಿ]
a ಕೀರ್ತನೆ 18:25 (NW): “ನಿಷ್ಠಾವಂತನೊಂದಿಗೆ ನೀನು ನಿಷ್ಠೆಯಿಂದ ವರ್ತಿಸುವಿ. ನಿರ್ದೋಷಿಯೊಂದಿಗೆ ದೋಷವಿಲ್ಲದೆ ನಡೆದುಕೊಳ್ಳುವಿ.”
ನಿಮ್ಮ ಉತ್ತರವೇನು?
• ನಾವು ಹೇಗೆ ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಬಲ್ಲೆವು?
• ಒಂದು ಸ್ನೇಹಬಂಧವನ್ನು ಯಾವಾಗ ಕಡಿದುಹಾಕಬೇಕಾದೀತು?
• ಗಾಢ ಸ್ನೇಹಬಂಧಗಳನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು?
[ಪುಟ 18ರಲ್ಲಿರುವ ಚಿತ್ರ]
ರೂತ ಹಾಗೂ ನೊವೊಮಿಯ ಮಧ್ಯೆಯಿದ್ದ ಬಾಳುವ ಸ್ನೇಹಬಂಧದ ಬುನಾದಿ ಯಾವುದಾಗಿತ್ತು?
[ಪುಟ 19ರಲ್ಲಿರುವ ಚಿತ್ರ]
ನೀವು ಕ್ರಮವಾಗಿ ಅತಿಥಿಸತ್ಕಾರ ತೋರಿಸುತ್ತೀರೋ?