ಯೆಹೋವನ ವಾಕ್ಯವು ಸಜೀವವಾದದ್ದು
ರೋಮಾಪುರದವರಿಗೆ ಬರೆದ ಪತ್ರದ ಮುಖ್ಯಾಂಶಗಳು
ಸುಮಾರು ಸಾ.ಶ. 56ರ ಸಮಯ. ಅಪೊಸ್ತಲ ಪೌಲನು ತನ್ನ ಮೂರನೇ ಮಿಷನೆರಿ ಸಂಚಾರದಲ್ಲಿರುವಾಗ ಕೊರಿಂಥ ಪಟ್ಟಣಕ್ಕೆ ಆಗಮಿಸುತ್ತಾನೆ. ರೋಮಿನ ಯೆಹೂದ್ಯೇತರ ಹಾಗೂ ಯೆಹೂದಿ ಕ್ರೈಸ್ತರ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಅವನಿಗೆ ತಿಳಿದುಬಂದಿದೆ. ಅವರೆಲ್ಲರನ್ನು ಕ್ರಿಸ್ತನಲ್ಲಿ ಐಕ್ಯಗೊಳಿಸುವ ಬಯಕೆಯಿಂದ ಪೌಲನು ಅವರಿಗೆ ಒಂದು ಪತ್ರ ಬರೆಯುತ್ತಾನೆ.
ಪೌಲನು ರೋಮಾಪುರದವರಿಗೆ ಬರೆದ ಆ ಪತ್ರದಲ್ಲಿ, ಮನುಷ್ಯರು ನೀತಿವಂತರೆಂದು ನಿರ್ಣಯ ಹೊಂದುವುದು ಹೇಗೆ ಮತ್ತು ಅಂಥವರು ಹೇಗೆ ಜೀವಿಸತಕ್ಕದ್ದು ಎಂಬದನ್ನು ವಿವರಿಸುತ್ತಾನೆ. ಈ ಪತ್ರವು ದೇವರ ಹಾಗೂ ಆತನ ವಾಕ್ಯದ ಕುರಿತ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ದೇವರ ಅಪಾತ್ರ ಕೃಪೆಗೆ ಹೆಚ್ಚಿನ ಒತ್ತುಕೊಡುತ್ತದೆ ಮತ್ತು ನಮ್ಮ ರಕ್ಷಣೆಯಲ್ಲಿ ಯೇಸುವಿಗಿರುವ ಪಾತ್ರಕ್ಕೆ ಮಾನ್ಯತೆ ಕೊಡುತ್ತದೆ.—ಇಬ್ರಿ. 4:12.
ನೀತಿವಂತರೆಂದು ನಿರ್ಣಯ ಹೊಂದುವುದು ಹೇಗೆ?
“ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂದು ಪೌಲನು ಬರೆಯುತ್ತಾನೆ. “ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು.” ಪೌಲನು ಇದನ್ನೂ ಹೇಳುತ್ತಾನೆ: ‘ಧರ್ಮಪ್ರಮಾಣಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡುವರು.’ (ರೋಮಾ. 3:23, 24, 28) ನಂಬಿಕೆಯ “ಒಂದೇ ಸತ್ಕಾರ್ಯದಿಂದ” ಅಭಿಷಿಕ್ತ ಕ್ರೈಸ್ತರು ಮತ್ತು “ಬೇರೆ ಕುರಿಗಳ” ‘ಮಹಾ ಸಮೂಹದ’ ಸದಸ್ಯರು ‘ನೀತಿವಂತರೆಂದು ನಿರ್ಣಯ ಹೊಂದಸಾಧ್ಯವಿದೆ.’ ಅಭಿಷಿಕ್ತರು ಸ್ವರ್ಗದಲ್ಲಿನ ಜೀವನಕ್ಕೆ ಕ್ರಿಸ್ತನೊಂದಿಗೆ ಜೊತೆಬಾಧ್ಯಸ್ಥರಾಗಿ ನೀತಿವಂತರೆಂಬ ನಿರ್ಣಯ ಹೊಂದುತ್ತಾರೆ. ಮಹಾ ಸಮೂಹದವರು ಮಹಾ ಸಂಕಟದಿಂದ ಪಾರಾಗುವ ನಿರೀಕ್ಷೆಯೊಂದಿಗೆ ದೇವರ ಸ್ನೇಹಿತರಾಗಿ ನೀತಿವಂತರೆಂಬ ನಿರ್ಣಯ ಹೊಂದುತ್ತಾರೆ.—ರೋಮಾ. 5:18; ಪ್ರಕ. 7:9, 14; ಯೋಹಾ. 10:16; ಯಾಕೋ. 2:21-24; ಮತ್ತಾ. 25:46.
“ನಾವು ಧರ್ಮಶಾಸ್ತ್ರಾಧೀನರಲ್ಲ, ಕೃಪಾಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ?” ಎಂದು ಪೌಲನು ಪ್ರಶ್ನಿಸಿ, “ಎಂದಿಗೂ ಮಾಡಬಾರದು” ಎಂದು ಸ್ವತಃ ಉತ್ತರಕೊಡುತ್ತಾನೆ. “ನೀವು . . . ಪಾಪಕ್ಕೆ ದಾಸರಾದರೆ ಮರಣವೇ ಫಲ; [ನಂಬಿಕೆಯೆಂಬ] ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ” ಎಂದು ಪೌಲನು ವಿವರಿಸುತ್ತಾನೆ. (ರೋಮಾ. 6:15, 16) “ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶಮಾಡುವದಾದರೆ ಜೀವಿಸುವಿರಿ” ಎಂದವನು ಹೇಳುತ್ತಾನೆ.—ರೋಮಾ. 8:13.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
1:24-32—ಇಲ್ಲಿ ವರ್ಣಿಸಲಾದ ನೈತಿಕ ಅವನತಿ ಯೆಹೂದ್ಯರದ್ದಾಗಿತ್ತೋ ಅನ್ಯಜನರದ್ದಾಗಿತ್ತೋ? ವಿವರಣೆಯು ಎರಡೂ ಗುಂಪುಗಳಿಗೆ ಅನ್ವಯಿಸಸಾಧ್ಯವಿದ್ದರೂ ಪೌಲನು ನಿರ್ದಿಷ್ಟವಾಗಿ ಪ್ರಾಚೀನ ಕಾಲದ ಧರ್ಮಭ್ರಷ್ಟ ಇಸ್ರಾಯೇಲ್ಯರ ಕುರಿತು ತಿಳಿಸುತ್ತಿದ್ದನು. ಅವರಿಗೆ ದೇವರ ನೀತಿಯ ವಿಧಿಗಳ ಕುರಿತು ತಿಳಿದಿತ್ತಾದರೂ ‘ದೇವರ ಜ್ಞಾನವು ಅವರಿಗೆ ಇಷ್ಟವಿರಲಿಲ್ಲ.’ ಹೀಗೆ ಅವರು ದಂಡನಾರ್ಹರಾಗಿದ್ದರು.
3:24-26—ಕ್ರಿಸ್ತ ಯೇಸು ‘ಪಾಪ ವಿಮೋಚನಾ’ ಯಜ್ಞವನ್ನು ಅರ್ಪಿಸುವ ಮುಂಚೆ, “ದೇವರು ಹಿಂದಿನ ಕಾಲದ ಪಾಪಗಳನ್ನು” ಹೇಗೆ ಕ್ಷಮಿಸಸಾಧ್ಯವಿತ್ತು? ಆದಿಕಾಂಡ 3:15ರಲ್ಲಿ ದಾಖಲಾದ ಮೊದಲ ಮೆಸ್ಸೀಯ-ಸಂಬಂಧಿತ ಪ್ರವಾದನೆಯು ಯೇಸು ಯಾತನಾ ಕಂಬದ ಮೇಲೆ ಮೃತಪಟ್ಟಾಗ ಅಂದರೆ ಸಾ.ಶ. 33ರಲ್ಲಿ ನೆರವೇರಿತು. (ಗಲಾ. 3:13, 14, 16) ಯೆಹೋವನ ಉದ್ದೇಶದ ನೆರವೇರಿಕೆಯನ್ನು ಯಾವುದೂ ತಡೆಯಲಾರದ ಕಾರಣ, ಆತನು ಆ ಪ್ರವಾದನೆ ಉಚ್ಚರಿಸಿದ ಕ್ಷಣದಲ್ಲೇ ಆತನ ದೃಷ್ಟಿಯಲ್ಲಿ ಆ ವಿಮೋಚನಾ ಮೌಲ್ಯ ತೆರಲಾದಂತ್ತಿತ್ತು. ಹೀಗೆ ಯೇಸು ಮುಂದೆ ಕೊಡಲಿದ್ದ ಯಜ್ಞದ ಆಧಾರದ ಮೇಲೆ, ಆ ವಾಗ್ದಾನದಲ್ಲಿ ನಂಬಿಕೆಯಿಟ್ಟ ಆದಾಮನ ಸಂತತಿಯವರ ಪಾಪಗಳನ್ನು ಯೆಹೋವನು ಕ್ಷಮಿಸಸಾಧ್ಯವಿತ್ತು. ಅಲ್ಲದೆ ವಿಮೋಚನಾ ಮೌಲ್ಯದಿಂದ ಕ್ರೈಸ್ತಪೂರ್ವ ಸಮಯಗಳಲ್ಲಿ ಗತಿಸಿಹೋದವರ ಪುನರುತ್ಥಾನವೂ ಸಾಧ್ಯವಾಗುತ್ತದೆ.—ಅ. ಕೃ. 24:15.
6:3-5—ಕ್ರಿಸ್ತ ಯೇಸುವಿನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಳ್ಳುವುದರ ಮತ್ತು ಆತನ ಮರಣದಲ್ಲಿ ಪಾಲುಗಾರರಾಗುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಳ್ಳುವುದರ ಅರ್ಥವೇನು? ಯೆಹೋವನು ಕ್ರಿಸ್ತನ ಹಿಂಬಾಲಕರನ್ನು ಪವಿತ್ರಾತ್ಮದಿಂದ ಅಭಿಷೇಕಿಸುವಾಗ ಅವರು ಯೇಸುವಿನೊಂದಿಗೆ ಐಕ್ಯರಾಗಿ ಸಭೆಯೆಂಬ ಕ್ರಿಸ್ತನ ದೇಹದ ಅಂಗಗಳಾಗುತ್ತಾರೆ. ಈ ದೇಹಕ್ಕೆ ಕ್ರಿಸ್ತನು ಶಿರಸ್ಸು. (1 ಕೊರಿಂ. 12:12, 13, 27; ಕೊಲೊ. 1:18) ಇದೇ, ಕ್ರಿಸ್ತ ಯೇಸುವಿನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಳ್ಳುವುದರ ಅರ್ಥ. ಅಭಿಷಿಕ್ತ ಕ್ರೈಸ್ತರು ‘ಕ್ರಿಸ್ತನ ಮರಣದಲ್ಲಿ ಪಾಲುಗಾರರಾಗುವದಕ್ಕೆ ದೀಕ್ಷಾಸ್ನಾನ ಮಾಡಿಕೊಳ್ಳುವುದರ’ ಅರ್ಥ, ಅವರು ತ್ಯಾಗಮಯ ಜೀವನ ನಡೆಸುತ್ತಾರೆ ಮತ್ತು ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯನ್ನು ಬಿಟ್ಟುಕೊಡುತ್ತಾರೆ ಎಂದಾಗಿದೆ. ಹಾಗಾಗಿ ಯೇಸುವಿನ ಮರಣದಂತೆ ಅವರ ಮರಣವೂ ಒಂದು ತ್ಯಾಗವಾಗಿರುತ್ತದೆ. ಆದರೆ ಅವರ ಮರಣಕ್ಕೆ ವಿಮೋಚನಾ ಮೌಲ್ಯವಿರುವುದಿಲ್ಲ. ಕ್ರಿಸ್ತನ ಮರಣದಲ್ಲಿ ಪಾಲುಗಾರರಾಗುವದಕ್ಕೆ ಮಾಡಿಸಿಕೊಳ್ಳುವ ಈ ದೀಕ್ಷಾಸ್ನಾನವು, ಅವರು ಸತ್ತು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಗೊಳ್ಳುವಾಗ ಪೂರ್ಣಗೊಳ್ಳುತ್ತದೆ.
7:8-11—‘ಪಾಪವು ಆಜ್ಞೆಯಿಂದ [ಧರ್ಮಶಾಸ್ತ್ರದಿಂದ] ಅನುಕೂಲಹೊಂದಿದ್ದು’ ಹೇಗೆ? ಧರ್ಮಶಾಸ್ತ್ರವು ಜನರಿಗೆ ಪಾಪವೆಂದರೆ ಏನೆಂಬದನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡಿತು ಮತ್ತು ಹೀಗೆ ತಾವು ಪಾಪಿಗಳೆಂಬ ಪ್ರಜ್ಞೆಯನ್ನು ಜನರಲ್ಲಿ ಹೆಚ್ಚಿಸಿತು. ಇದರಿಂದಾಗಿ, ತಾವು ಪಾಪಮಾಡುತ್ತಿರುವ ಇನ್ನಷ್ಟು ವಿಧಗಳನ್ನು ಗುರುತಿಸಲು ಅವರಿಗೆ ಸಾಧ್ಯವಾಯಿತು ಮತ್ತು ಇನ್ನೂ ಹೆಚ್ಚಿನ ಜನರು ತಾವು ಪಾಪಿಗಳಾಗಿದ್ದೇವೆಂದು ಗ್ರಹಿಸಿಕೊಂಡರು. ಈ ಅರ್ಥದಲ್ಲಿ ಪಾಪವು ಧರ್ಮಶಾಸ್ತ್ರದಿಂದ ಅನುಕೂಲಹೊಂದಿತ್ತೆಂದು ಹೇಳಬಹುದು.
ನಮಗಾಗಿರುವ ಪಾಠಗಳು:
1:14, 15. ಸುವಾರ್ತೆಯನ್ನು ಸಿದ್ಧಮನಸ್ಸಿನಿಂದ ಅಥವಾ ಅತ್ಯಾಸಕ್ತಿಯಿಂದ ಪ್ರಚುರಪಡಿಸಲು ನಮಗೆ ಅನೇಕ ಕಾರಣಗಳಿವೆ. ಒಂದು ಕಾರಣವೇನೆಂದರೆ ಯೇಸು ತನ್ನ ರಕ್ತದಿಂದ ಕೊಂಡುಕೊಂಡ ಜನರಿಗೆ ನಾವು ಋಣಿಗಳಾಗಿದ್ದೇವೆ. ಆದುದರಿಂದ ಅವರಿಗೆ ಆಧ್ಯಾತ್ಮಿಕ ಸಹಾಯ ನೀಡುವ ಹಂಗು ನಮಗಿದೆ.
1:18-20. ಕಣ್ಣಿಗೆ ಕಾಣದಿರುವ ದೇವರ ಗುಣಲಕ್ಷಣಗಳು ಸೃಷ್ಟಿಯಲ್ಲಿ ಸ್ಪಷ್ಟವಾಗಿ ಕಾಣಬರುವುದರಿಂದ ಭಕ್ತಿಹೀನ ಹಾಗೂ ಅನೀತಿವಂತ ಜನರು “ಉತ್ತರವಿಲ್ಲದವರಾಗಿದ್ದಾರೆ” ಅಥವಾ ‘ನೆಪ ಇಲ್ಲದವರಾಗಿದ್ದಾರೆ’ (NIBV).
2:28; 3:1, 2; 7:6, 7. ಪೌಲನು ಆಡಿದ ಮಾತುಗಳನ್ನು ಯೆಹೂದ್ಯರು ಅವಹೇಳನಕಾರಿ ಆಗಿ ಪರಿಗಣಿಸಸಾಧ್ಯವಿತ್ತು. ಆದುದರಿಂದ ಬಳಿಕ ಪೌಲನು ಅವುಗಳ ತೀಕ್ಷ್ಣತೆಯನ್ನು ಕುಗ್ಗಿಸುವಂಥ ಮಾತುಗಳನ್ನಾಡಿದನು. ಒಬ್ಬ ವ್ಯಕ್ತಿಗೆ ಸಿಟ್ಟುಬರಿಸಬಹುದಾದ ವಿಷಯಗಳ ಕುರಿತು ಮಾತಾಡುವಾಗ ನಾವು ಸಹ ಜಾಣ್ಮೆಯಿಂದಲೂ ಕುಶಲತೆಯಿಂದಲೂ ಮಾತಾಡಲು ಇದೊಂದು ಉತ್ತಮ ಮಾದರಿ.
3:4. ಮನುಷ್ಯರು ಹೇಳುವ ಸಂಗತಿಗಳು ದೇವರು ತನ್ನ ವಾಕ್ಯದಲ್ಲಿ ಹೇಳಿರುವ ವಿಷಯಗಳಿಗೆ ವಿರುದ್ಧವಾಗಿರುವಾಗ, “ದೇವರು ಸತ್ಯವಂತನೇ ಸರಿ” ಎಂಬ ನಿಜತ್ವಕ್ಕೆ ನಾವು ಅಂಟಿಕೊಳ್ಳುತ್ತೇವೆ. ಬೈಬಲ್ ಸಂದೇಶದಲ್ಲಿ ಭರವಸೆಯಿಡುವ ಮತ್ತು ದೇವರ ಚಿತ್ತಕ್ಕನುಸಾರ ನಡೆದುಕೊಳ್ಳುವ ಮೂಲಕ ನಾವದನ್ನು ಮಾಡಬಲ್ಲೆವು. ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವ ಮೂಲಕ ಇತರರು ಸಹ ದೇವರು ಸತ್ಯವಂತನೆಂದು ಗ್ರಹಿಸುವಂತೆ ಸಹಾಯಮಾಡುತ್ತೇವೆ.
4:9-12. ಅಬ್ರಹಾಮನು 99ನೇ ವಯಸ್ಸಿನಲ್ಲಿ ಸುನ್ನತಿಯಾಗುವುದಕ್ಕಿಂತ ಎಷ್ಟೋ ಸಮಯದ ಮುಂಚೆಯೇ ಅವನ ನಂಬಿಕೆ ನೀತಿಯೆಂದು ಎಣಿಸಲ್ಪಟ್ಟಿತು. (ಆದಿ. 12:4; 15:6; 16:3; 17:1, 9, 10) ಹೀಗೆ, ದೇವರ ಮುಂದೆ ನಾವು ನೀತಿಯ ನಿಲುವನ್ನು ಹೇಗೆ ಪಡೆಯಬಲ್ಲೆವೆಂಬದನ್ನು ಆತನು ಪ್ರಬಲವಾದ ರೀತಿಯಲ್ಲಿ ತೋರಿಸಿದನು.
4:18. ನಿರೀಕ್ಷೆಯು ನಂಬಿಕೆಯ ಒಂದು ಮುಖ್ಯ ಅಂಶವಾಗಿದೆ. ಅದರ ಮೇಲೆ ನಮ್ಮ ನಂಬಿಕೆ ಆಧಾರಗೊಂಡಿದೆ.—ಇಬ್ರಿ. 11:1.
5:18, 19. ಯೇಸು ಆದಾಮನನ್ನು ಹೋಲುವ ರೀತಿಯನ್ನು ತರ್ಕಬದ್ಧವಾಗಿ ತಿಳಿಸುವ ಮೂಲಕ, ಕೇವಲ ಒಬ್ಬ ಮನುಷ್ಯನು “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು” ಅಥವಾ ವಿಮೋಚನಾ ಯಜ್ಞವಾಗಿ ಹೇಗೆ ಕೊಡಬಲ್ಲನೆಂದು ಪೌಲನು ಸಂಕ್ಷಿಪ್ತವಾಗಿ ವಿವರಿಸುತ್ತಾನೆ. (ಮತ್ತಾ. 20:28) ತರ್ಕಬದ್ಧವಾಗಿ ಮತ್ತು ಸಂಕ್ಷಿಪ್ತವಾಗಿ ಬೋಧಿಸುವ ಈ ವಿಧವನ್ನು ನಾವು ಅನುಸರಿಸಬೇಕು.—1 ಕೊರಿಂ. 4:17.
7:23. ಕೈ, ಕಾಲು, ನಾಲಗೆಯಂಥ ದೇಹದ ಅಂಗಗಳು ನಮ್ಮನ್ನು ‘ಪಾಪದ ನಿಯಮಕ್ಕೆ ವಶಮಾಡಬಲ್ಲವು.’ ಅದುದರಿಂದ ಅವುಗಳ ಅಪಪ್ರಯೋಗ ಮಾಡದಂತೆ ಎಚ್ಚರವಹಿಸಬೇಕು.
8:26, 27. ನಾವು ಕಂಗೆಟ್ಟಿರುವ ಸನ್ನಿವೇಶದಲ್ಲಿದ್ದು ಯಾವುದಕ್ಕಾಗಿ ಪ್ರಾರ್ಥಿಸಬೇಕೆಂದು ನಮಗೆ ತೋಚದಿರುವಾಗ ‘ಪವಿತ್ರಾತ್ಮವು ನಮಗೋಸ್ಕರ ಬೇಡಿಕೊಳ್ಳುತ್ತದೆ.’ ಇಂಥ ಸಂದರ್ಭಗಳಲ್ಲಿ, ‘ಪ್ರಾರ್ಥನೆಗಳನ್ನು ಕೇಳುವಾತನಾದ’ ಯೆಹೋವನು ಆತನ ವಾಕ್ಯದಲ್ಲಿರುವ ಪ್ರಾರ್ಥನೆಗಳಲ್ಲಿ ನಮ್ಮ ಸನ್ನಿವೇಶಕ್ಕೆ ತಕ್ಕದಾದದ್ದನ್ನು ಸ್ವತಃ ನಾವೇ ಮಾಡಿದ ಪ್ರಾರ್ಥನೆಗಳಾಗಿ ಎಣಿಸುತ್ತಾನೆ.—ಕೀರ್ತ. 65:2.
8:38, 39. ವಿಪತ್ತುಗಳಾಗಲಿ, ದುರಾತ್ಮಗಳಾಗಲಿ ಮಾನವ ಸರಕಾರಗಳಾಗಲಿ, ಯೆಹೋವನು ನಮಗೆ ಪ್ರೀತಿ ತೋರಿಸುವುದನ್ನು ನಿಲ್ಲಿಸಲಾರವು. ಯೆಹೋವನನ್ನು ಪ್ರೀತಿಸುವುದನ್ನು ನಿಲ್ಲಿಸುವಂತೆ ನಾವೂ ಅವುಗಳನ್ನು ಬಿಡಬಾರದು.
9:22-28; 11:1, 5, 17-26. ಇಸ್ರಾಯೇಲಿನ ಪುನಃಸ್ಥಾಪನೆಯ ಕುರಿತಾದ ಅನೇಕ ಪ್ರವಾದನೆಗಳು ಅಭಿಷಿಕ್ತ ಕ್ರೈಸ್ತರ ಸಭೆಯಲ್ಲಿ ನೆರವೇರಿದವು. ಆ ಸಭೆಯ ಸದಸ್ಯರನ್ನು ‘ಯೆಹೂದ್ಯರೊಳಗಿಂದ ಮಾತ್ರ ಕರೆಯದೆ ಅನ್ಯಜನರೊಳಗಿಂದ ಸಹ ಕರೆಯಲಾಯಿತು.’
10:10, 13, 14. ದೇವರ ಹಾಗೂ ಜೊತೆ ಮಾನವರ ಮೇಲಣ ಪ್ರೀತಿಯಲ್ಲದೆ, ಯೆಹೋವನಲ್ಲೂ ಆತನ ವಾಗ್ದಾನಗಳಲ್ಲೂ ಬಲವಾದ ನಂಬಿಕೆಯು ಕ್ರೈಸ್ತ ಶುಶ್ರೂಷೆಯಲ್ಲಿ ನಾವು ಹುರುಪಿನಿಂದ ಪಾಲ್ಗೊಳ್ಳುವಂತೆ ಸಹಾಯ ಮಾಡುವುದು.
11:16-24, 33. ‘ದೇವರ ದಯೆಯೂ ಕಾಠಿಣ್ಯವೂ’ ಎಂಥ ಸಮತೋಲನದಲ್ಲಿದೆ! ಹೌದು, “ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ.”—ಧರ್ಮೋ. 32:4.
ನೀತಿವಂತರೆಂದು ನಿರ್ಣಯ ಹೊಂದಿರುವುದಕ್ಕೆ ತಕ್ಕದಾಗಿ ಜೀವಿಸುವುದು
“ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ—ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ” ಎಂದು ಪೌಲನು ಹೇಳುತ್ತಾನೆ. (ರೋಮಾ. 12:1) “ಆದದರಿಂದ” ಅಂದರೆ ಕ್ರೈಸ್ತರು ತಮ್ಮ ನಂಬಿಕೆಯಿಂದಾಗಿ ನೀತಿವಂತರೆಂದು ನಿರ್ಣಯ ಹೊಂದಿರುವುದರಿಂದ, ಪೌಲನು ಮುಂದೆ ಏನು ಹೇಳಲಿದ್ದಾನೋ ಅದು ಅವರಿಗೆ ತಮ್ಮ ಬಗ್ಗೆ, ಇತರರ ಬಗ್ಗೆ ಹಾಗೂ ಸರ್ಕಾರದ ಬಗ್ಗೆ ಇರುವ ಮನೋಭಾವವನ್ನು ಪ್ರಭಾವಿಸಬೇಕು.
“ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನೆಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳ”ಬಾರದೆಂದು ಪೌಲನು ಬರೆಯುತ್ತಾನೆ. “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ” ಎಂಬ ಬುದ್ಧಿವಾದವನ್ನು ಅವನು ಕೊಡುತ್ತಾನೆ. (ರೋಮಾ. 12:3, 9) “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ.” (ರೋಮಾ. 13:1) ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಕ್ರೈಸ್ತರು “ಒಬ್ಬರ ವಿಷಯದಲ್ಲೊಬ್ಬರು ತೀರ್ಪುಮಾಡದೆ” ಇರುವಂತೆ ಅವನು ಉತ್ತೇಜಿಸುತ್ತಾನೆ.—ರೋಮಾ. 14:13.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
12:20—ವೈರಿಯ ತಲೆಯ ಮೇಲೆ ‘ಕೆಂಡಗಳನ್ನು ಕೂಡಿಸಿಡುವುದು’ ಹೇಗೆ? ಬೈಬಲ್ ಸಮಯಗಳಲ್ಲಿ ಅದಿರನ್ನು ಕುಲುಮೆಗೆ ಹಾಕಿ ಅದರ ಅಡಿಯಲ್ಲೂ ಮೇಲೂ ಕೆಂಡಗಳ ಪದರವನ್ನು ಇಡಲಾಗುತ್ತಿತ್ತು. ಮೇಲಿರುವ ಕೆಂಡಗಳ ಶಾಖವನ್ನು ಹೆಚ್ಚಿಸಿದಾಗ ಲೋಹವು ಕರಗಿ ಅದರಲ್ಲಿರುವ ಕಲ್ಮಶಗಳು ಪ್ರತ್ಯೇಕವಾಗುತ್ತಿದ್ದವು. ತದ್ರೀತಿಯಲ್ಲಿ ನಮ್ಮ ವೈರಿಯೊಂದಿಗೆ ದಯೆಯಿಂದ ನಡೆದುಕೊಳ್ಳುವ ಮೂಲಕ ನಾವು ಅವನ ತಲೆ ಮೇಲೆ ಕೆಂಡಗಳನ್ನು ಕೂಡಿಸಿಡುತ್ತೇವೆ. ಇದರಿಂದಾಗಿ ಅವನ ಕಾಠಿಣ್ಯವು ಕರಗಿ ಅವನಲ್ಲಿರುವ ಒಳ್ಳೇ ಗುಣಗಳು ವ್ಯಕ್ತವಾಗುವವು.
12:21—ನಾವು “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು”ವುದು ಹೇಗೆ? ನಾವಿದನ್ನು ಮಾಡುವ ಒಂದು ವಿಧವು, ಯೆಹೋವನು ಸಾಕು ಎಂದು ಹೇಳುವ ತನಕ ರಾಜ್ಯದ ಸುವಾರ್ತೆ ಸಾರುವ ನಮ್ಮ ದೇವದತ್ತ ನೇಮಕಕ್ಕೆ ನಿರ್ಭೀತಿಯಿಂದ ಅಂಟಿಕೊಳ್ಳುವುದಾಗಿದೆ.—ಮಾರ್ಕ 13:10.
13:1—ನಮ್ಮ ಮೇಲಿರುವ ಅಧಿಕಾರಿಗಳು ‘ದೇವರಿಂದ ನೇಮಿಸಲ್ಪಟ್ಟಿರುವುದು’ ಯಾವ ಅರ್ಥದಲ್ಲಿ? ಸರ್ಕಾರಿ ಅಧಿಕಾರಿಗಳು ‘ದೇವರಿಂದ ನೇಮಿಸಲ್ಪಟ್ಟಿರುವುದರ’ ಅರ್ಥ, ಆಳುವಂತೆ ದೇವರು ಅವರನ್ನು ಅನುಮತಿಸಿದ್ದಾನೆಂದೇ. ಕೆಲವು ವಿದ್ಯಮಾನಗಳಲ್ಲಿ ಅವರ ಆಳ್ವಿಕೆಯನ್ನು ದೇವರು ಮುನ್ನೋಡಿದ್ದನು. ಬೈಬಲ್ ಅನೇಕ ಅಧಿಪತಿಗಳ ಕುರಿತು ಮುಂತಿಳಿಸಿದ ವಿಷಯಗಳಿಂದ ಇದು ಸ್ಪಷ್ಟವಾಗಿದೆ.
ನಮಗಾಗಿರುವ ಪಾಠಗಳು:
12:17, 19. ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡುವುದು, ಯೆಹೋವನಿಗೆ ಬಿಟ್ಟ ವಿಷಯಗಳನ್ನು ನಾವು ಕೈಗೆತ್ತಿಕೊಂಡ ಹಾಗಿರುತ್ತದೆ. ಆದುದರಿಂದ “ಅಪಕಾರಕ್ಕೆ ಅಪಕಾರ” ಮಾಡುವುದು ಎಂಥ ದುರಹಂಕಾರದ ಸಂಗತಿಯಾಗಿರುವುದು!
14:14, 15. ನಾವು ನಮ್ಮ ಸಹೋದರನಿಗೆ ನೀಡುವ ಆಹಾರ ಪದಾರ್ಥ ಅಥವಾ ಪಾನೀಯಗಳಿಂದ ಅವನ ಮನಸ್ಸನ್ನು ನೋಯಿಸಬಾರದು ಅಂದರೆ ಅವನನ್ನು ಎಡವಿಸಬಾರದು.
14:17. ದೇವರೊಂದಿಗೆ ಒಂದು ಒಳ್ಳೇ ಸಂಬಂಧ, ಒಬ್ಬನು ಏನು ತಿನ್ನುತ್ತಾನೆ ಏನು ಕುಡಿಯುತ್ತಾನೆ ಎಂಬುದರ ಮೇಲೆ ಹೊಂದಿಕೊಂಡಿರುವುದಿಲ್ಲ. ಬದಲಿಗೆ ಅದು ನೀತಿ, ಸಮಾಧಾನ ಮತ್ತು ಆನಂದದೊಂದಿಗೆ ಸಂಬಂಧಿಸಿದೆ.
15:7. ಸತ್ಯದ ನಿಜ ಅನ್ವೇಷಕರೆಲ್ಲರನ್ನು ನಾವು ಪಕ್ಷಪಾತವಿಲ್ಲದೆ ಸಭೆಗೆ ಸೇರಿಸಿಕೊಳ್ಳಬೇಕು ಮತ್ತು ಭೇಟಿಯಾಗುವ ಪ್ರತಿಯೊಬ್ಬರಿಗೆ ರಾಜ್ಯದ ಸಂದೇಶವನ್ನು ಘೋಷಿಸಬೇಕು.
[ಪುಟ 31ರಲ್ಲಿರುವ ಚಿತ್ರಗಳು]
ವಿಮೋಚನಾ ಮೌಲ್ಯವು ತೆರಲ್ಪಟ್ಟ ಮುಂಚೆ ಯಾವ ಪಾಪಗಳು ಗೈಯಲ್ಪಟ್ಟಿದ್ದವೋ ಅವುಗಳಿಗೆ ಅದು ಅನ್ವಯವಾಗುತ್ತದೋ?