ದೇವರು ಮತ್ತು ಕೈಸರನು
“ಹಾಗಾದರೆ ಕೈಸರನ ವಿಷಯಗಳನ್ನು ಕೈಸರನಿಗೆ ಹಿಂದಕ್ಕೆ ಸಲ್ಲಿಸಿರಿ, ಆದರೆ ದೇವರ ವಿಷಯಗಳನ್ನು ದೇವರಿಗೆ ಸಲ್ಲಿಸಿರಿ.”—ಲೂಕ 20:25, NW.
1. (ಎ) ಯೆಹೋವನ ಉನ್ನತಕ್ಕೇರಿಸಲ್ಪಟ್ಟ ಸ್ಥಾನವು ಏನಾಗಿದೆ? (ಬಿ) ನಾವು ಕೈಸರನಿಗೆ ಎಂದಿಗೂ ಕೊಡಸಾಧ್ಯವಿರದ ಯಾವ ವಿಷಯವನ್ನು ನಾವು ಯೆಹೋವನಿಗೆ ಸಲ್ಲಿಸುವ ಹಂಗಿನವರಾಗಿದ್ದೇವೆ?
ಯೇಸು ಕ್ರಿಸ್ತನು ಆ ಉಪದೇಶವನ್ನು ನೀಡಿದಾಗ, ತನ್ನ ಸೇವಕರಿಗಾಗಿರುವ ದೇವರ ಆವಶ್ಯಕತೆಗಳು, ಕೈಸರನು ಅಥವಾ ರಾಜ್ಯವು ಅವರಿಂದ ಅಗತ್ಯವೆಂದು ವಿಧಿಸಬಹುದಾದ ಯಾವುದೇ ವಿಷಯದ ಮೇಲೆ ಆದ್ಯತೆ ಪಡೆಯುತ್ತವೆಂಬುದರ ಕುರಿತು, ಅವನ ಮನಸ್ಸಿನಲ್ಲಿ ಯಾವ ಸಂದೇಹವೂ ಇರಲಿಲ್ಲ. ಯೆಹೋವನಿಗೆ ಮಾಡಲ್ಪಟ್ಟ ಕೀರ್ತನೆಗಾರನ ಪ್ರಾರ್ಥನೆಯ ಸತ್ಯತೆಯನ್ನು ಬೇರೆ ಯಾರಿಗಿಂತಲೂ ಯೇಸು ಹೆಚ್ಚು ಉತ್ತಮವಾಗಿ ತಿಳಿದುಕೊಂಡಿದ್ದನು: “ನಿನ್ನ ರಾಜತ್ವವು ಎಲ್ಲ ಅನಿಶ್ಚಿತ ಸಮಯಗಳ ವರೆಗೂ ಇರುವ ರಾಜತ್ವವಾಗಿದೆ, ಮತ್ತು ನಿನ್ನ ಪ್ರಭುತ್ವವು [ಪರಮಾಧಿಕಾರವು]a ತಲತಲಾಂತರಕ್ಕೂ ಇದೆ.” (ಕೀರ್ತನೆ 145:13, NW) ಪಿಶಾಚನು ನಿವಾಸಿತ ಭೂಮಿಯ ಎಲ್ಲ ರಾಜ್ಯಗಳ ಮೇಲೆ ಅಧಿಕಾರವನ್ನು ಯೇಸುವಿಗೆ ನೀಡಿದಾಗ, ಯೇಸು ಉತ್ತರಿಸಿದ್ದು: “ನಿನ್ನ ದೇವರಾಗಿರುವ ಯೆಹೋವನನ್ನು ನೀನು ಆರಾಧಿಸಬೇಕು, ಮತ್ತು ಆತನೊಬ್ಬನಿಗೆ ಮಾತ್ರ ಪವಿತ್ರ ಸೇವೆಯನ್ನು ಸಲ್ಲಿಸಬೇಕು ಎಂಬುದಾಗಿ ಬರೆದದೆ.” (ಲೂಕ 4:5-8, NW) ಕೈಸರನು ರೋಮನ್ ಚಕ್ರವರ್ತಿ, ಬೇರೆ ಯಾವನೇ ಮಾನವ ಪ್ರಭು, ಅಥವಾ ಸ್ವತಃ ರಾಜ್ಯವೇ ಆಗಿರಲಿ, ಆರಾಧನೆಯನ್ನು ಎಂದಿಗೂ “ಕೈಸರ”ನಿಗೆ ಕೊಡಸಾಧ್ಯವಿರಲಿಲ್ಲ.
2. (ಎ) ಈ ಜಗತ್ತಿಗೆ ಸಂಬಂಧಕವಾಗಿ ಸೈತಾನನ ಸ್ಥಾನವು ಏನಾಗಿದೆ? (ಬಿ) ಯಾರ ಅನುಮತಿಯಿಂದ ಸೈತಾನನು ತನ್ನ ಸ್ಥಾನದಲ್ಲಿದ್ದಾನೆ?
2 ಜಗತ್ತಿನ ರಾಜ್ಯಗಳು ಸೈತಾನನಿಗೆ ಸೇರಿದ್ದವೆಂಬ ವಿಷಯವನ್ನು ಯೇಸು ನಿರಾಕರಿಸಲಿಲ್ಲ. ಅನಂತರ, ಅವನು ಸೈತಾನನನ್ನು “ಇಹಲೋಕಾಧಿಪತಿ” ಎಂಬುದಾಗಿ ಕರೆದನು. (ಯೋಹಾನ 12:31; 16:11) ಸಾ.ಶ. ಮೊದಲನೆಯ ಶತಮಾನದ ಕೊನೆಯಲ್ಲಿ, ಅಪೊಸ್ತಲ ಯೋಹಾನನು ಬರೆದುದು: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.” (1 ಯೋಹಾನ 5:19) ಇದು, ಯೆಹೋವನು ಭೂಮಿಯ ಮೇಲಿನ ತನ್ನ ಪರಮಾಧಿಕಾರವನ್ನು ತ್ಯಜಿಸಿಬಿಟ್ಟಿದ್ದಾನೆಂಬುದನ್ನು ಅರ್ಥೈಸುವುದಿಲ್ಲ. ರಾಜಕೀಯ ರಾಜ್ಯಗಳ ಮೇಲೆ ಯೇಸುವಿಗೆ ರಾಜತ್ವವನ್ನು ನೀಡುತ್ತಿದ್ದಾಗ, ಸೈತಾನನು ಹೀಗೆ ಹೇಳಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ: “ಇವೆಲ್ಲವುಗಳ ಅಧಿಕಾರವನ್ನೂ . . . ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ.” (ಲೂಕ 4:6) ದೇವರ ಅನುಮತಿಯಿಂದ ಮಾತ್ರ ಸೈತಾನನು, ಜಗತ್ತಿನ ರಾಜ್ಯಗಳ ಮೇಲೆ ಅಧಿಕಾರ ಚಲಾಯಿಸುತ್ತಾನೆ.
3. (ಎ) ಯೆಹೋವನ ಮುಂದೆ ರಾಷ್ಟ್ರಗಳ ಸರಕಾರಗಳು ಯಾವ ಸ್ಥಾನವನ್ನು ಪಡೆದಿವೆ? (ಬಿ) ಈ ಜಗತ್ತಿನ ಸರಕಾರಗಳಿಗೆ ತೋರಿಸುವ ಅಧೀನತೆಯು, ಈ ಜಗತ್ತಿನ ದೇವನಾದ ಸೈತಾನನಿಗೆ ನಮ್ಮನ್ನು ಅಧೀನಪಡಿಸಿಕೊಳ್ಳುವುದನ್ನು ಅರ್ಥೈಸುವುದಿಲ್ಲವೆಂದು ನಾವು ಹೇಗೆ ಹೇಳಸಾಧ್ಯವಿದೆ?
3 ತದ್ರೀತಿಯಲ್ಲಿ, ರಾಜ್ಯವು ತನ್ನ ಅಧಿಕಾರವನ್ನು ಚಲಾಯಿಸುತ್ತದೆ ಏಕೆಂದರೆ, ಪರಮ ಪ್ರಭುವಿನೋಪಾದಿ ದೇವರು ಹಾಗೆ ಮಾಡುವಂತೆ ಅದಕ್ಕೆ ಅನುಮತಿ ಕೊಡುವುದರಿಂದಲೇ. (ಯೋಹಾನ 19:11) ಹೀಗೆ “ಅಸ್ತಿತ್ವದಲ್ಲಿರುವ ಅಧಿಕಾರಿಗಳು ತಮ್ಮ ಸಂಬಂಧಕ ಸ್ಥಾನಗಳಲ್ಲಿ ದೇವರಿಂದ ಇಡಲ್ಪಟ್ಟಿದ್ದಾರೆ” ಎಂಬುದಾಗಿ ಹೇಳಸಾಧ್ಯವಿದೆ. ಯೆಹೋವನ ಶ್ರೇಷ್ಠ ಪರಮ ಅಧಿಕಾರದ ಸಂಬಂಧದಲ್ಲಿ, ಹೋಲಿಕೆಯಲ್ಲಿ ರಾಜ್ಯ ಅಧಿಕಾರವು ಖಂಡಿತವಾಗಿಯೂ ಕಡಿಮೆಯದ್ದಾಗಿದೆ. ಹಾಗಿದ್ದರೂ, ಅವರು ಅಗತ್ಯವಾದ ಸೇವೆಗಳನ್ನು ಒದಗಿಸುವುದರಲ್ಲಿ, ನ್ಯಾಯ ಪರಿಪಾಲನೆ ಮತ್ತು ಶಿಸ್ತನ್ನು ಕಾಪಾಡುವುದರಲ್ಲಿ, ಮತ್ತು ಕೇಡಿಗರನ್ನು ದಂಡಿಸುವುದರಲ್ಲಿ “ದೇವರ ಶುಶ್ರೂಷಕರು,” “ದೇವರ ಸಾರ್ವಜನಿಕ ಸೇವಕರು” ಆಗಿದ್ದಾರೆ. (ರೋಮಾಪುರ 13:1, 4, 6, NW) ಆದುದರಿಂದ ಕ್ರೈಸ್ತರು ತಿಳಿದುಕೊಳ್ಳಬೇಕಾದದ್ದೇನೆಂದರೆ, ಸೈತಾನನು ಈ ಜಗತ್ತಿನ ಅಥವಾ ವ್ಯವಸ್ಥೆಯ ಅದೃಶ್ಯ ಪ್ರಭುವಾಗಿದ್ದರೂ, ರಾಜ್ಯಕ್ಕಿರುವ ತಮ್ಮ ಸಂಬಂಧಕ ಅಧೀನತೆಯನ್ನು ಅವರು ಗುರುತಿಸುವಾಗ, ತಮ್ಮನ್ನು ಸೈತಾನನಿಗೆ ಅಧೀನಪಡಿಸಿಕೊಳ್ಳುತ್ತಿಲ್ಲ. ಅವರು ದೇವರಿಗೆ ವಿಧೇಯರಾಗುತ್ತಿದ್ದಾರೆ. 1996ರ ಈ ವರ್ಷದಲ್ಲಿ, ರಾಜಕೀಯ ರಾಜ್ಯವು ಇನ್ನೂ “ದೇವರ ಏರ್ಪಾಡಿನ” ಒಂದು ಭಾಗವಾಗಿ, ದೇವರು ಅಸ್ತಿತ್ವದಲ್ಲಿರುವಂತೆ ಅನುಮತಿಸುವ ಒಂದು ತಾತ್ಕಾಲಿಕ ಏರ್ಪಾಡಾಗಿ ಇದೆ, ಮತ್ತು ಅದು ಯೆಹೋವನ ಭೂಸೇವಕರಿಂದ ಹಾಗೆಂದು ಗುರುತಿಸಲ್ಪಡಬೇಕು.—ರೋಮಾಪುರ 13:2, NW.
ಯೆಹೋವನ ಕ್ರೈಸ್ತ ಪೂರ್ವ ಸೇವಕರು ಮತ್ತು ರಾಜ್ಯ
4. ಐಗುಪ್ತದ ಸರಕಾರದಲ್ಲಿ ಯೋಸೇಫನು ಪ್ರಧಾನನಾಗುವಂತೆ ಯೆಹೋವನು ಏಕೆ ಅನುಮತಿಸಿದನು?
4 ಕ್ರೈಸ್ತ ಪೂರ್ವ ಸಮಯಗಳಲ್ಲಿ, ತನ್ನ ಸೇವಕರಲ್ಲಿ ಕೆಲವರು ರಾಜ್ಯ ಸರಕಾರಗಳಲ್ಲಿ ಪ್ರಧಾನ ಸ್ಥಾನಗಳಲ್ಲಿರುವಂತೆ ಯೆಹೋವನು ಅನುಮತಿಸಿದನು. ಉದಾಹರಣೆಗೆ, ಸಾ.ಶ.ಪೂ. 18ನೆಯ ಶತಮಾನದಲ್ಲಿ, ಯೋಸೇಫನು ಐಗುಪ್ತದ ಪ್ರಧಾನ ಮಂತ್ರಿಯಾದನು—ಸ್ಥಾನದಲ್ಲಿ ಆಳುತ್ತಿರುವ ಫರೋಹನಿಗೆ ಎರಡನೆಯವನು. (ಆದಿಕಾಂಡ 41:39-43) ತನ್ನ ಉದ್ದೇಶಗಳ ನೆರವೇರಿಕೆಗಾಗಿ, ‘ಅಬ್ರಹಾಮನ ಸಂತತಿ,’ ತನ್ನ ವಂಶಸ್ಥರನ್ನು ಸಂರಕ್ಷಿಸುವುದರಲ್ಲಿ ಯೋಸೇಫನು ಒಂದು ಸಾಧನದೋಪಾದಿ ಕಾರ್ಯಮಾಡಸಾಧ್ಯವಾಗುವುದಕ್ಕಾಗಿ, ಯೆಹೋವನು ಇದನ್ನು ಯುಕ್ತಿಯಿಂದ ಯೋಜಿಸಿದನೆಂದು ತರುವಾಯದ ಘಟನೆಗಳು ಸ್ಪಷ್ಟಗೊಳಿಸಿದವು. ನಿಶ್ಚಯವಾಗಿಯೂ ಜ್ಞಾಪಕದಲ್ಲಿಡಬೇಕಾದ ವಿಷಯವೇನೆಂದರೆ, ಯೋಸೇಫನು ಐಗುಪ್ತದಲ್ಲಿ ದಾಸ್ವತಕ್ಕೆ ಮಾರಲ್ಪಟ್ಟಿದ್ದನು, ಮತ್ತು ಅವನು, ದೇವರ ಸೇವಕರಿಗೆ ಮೋಶೆಯ ಧರ್ಮಶಾಸ್ತ್ರವಾಗಲಿ “ಕ್ರಿಸ್ತನ ನಿಯಮ”ವಾಗಲಿ ಇರದಿದ್ದ ಒಂದು ಸಮಯದಲ್ಲಿ ಜೀವಿಸಿದನು.—ಆದಿಕಾಂಡ 15:5-7; 50:19-21; ಗಲಾತ್ಯ 6:2.
5. ಯೆಹೂದಿ ಪರದೇಶವಾಸಿಗಳು ಬಾಬೆಲಿನ “ಕ್ಷೇಮವನ್ನು ಹಾರೈ”ಸುವಂತೆ ಏಕೆ ಆಜ್ಞಾಪಿಸಲ್ಪಟ್ಟರು?
5 ಶತಮಾನಗಳ ನಂತರ, ಬಾಬೆಲಿನಲ್ಲಿ ಪರದೇಶವಾಸದಲ್ಲಿರುವಾಗ ಪ್ರಭುಗಳಿಗೆ ಅಧೀನರಾಗಿರುವಂತೆ ಮತ್ತು ಆ ನಗರದ ಶಾಂತಿಗಾಗಿ ಪ್ರಾರ್ಥಿಸುವಂತೆಯೂ ಯೆಹೂದಿ ಪರದೇಶವಾಸಿಗಳಿಗೆ ಹೇಳುವಂತೆ, ನಂಬಿಗಸ್ತ ಪ್ರವಾದಿಯಾದ ಯೆರೆಮೀಯನು ಯೆಹೋವನ ಮೂಲಕ ಪ್ರೇರಿಸಲ್ಪಟ್ಟನು. ಅವರಿಗೆ ಬರೆದ ತನ್ನ ಪತ್ರದಲ್ಲಿ ಅವನು ಬರೆದುದು: “ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು . . . ಸೆರೆಯವರೆಲ್ಲರಿಗೂ ಹೀಗೆ ಹೇಳುತ್ತಾನೆ—ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ.” (ಯೆರೆಮೀಯ 29:4, 7) ಯೆಹೋವನನ್ನು ಆರಾಧಿಸಲು ಸ್ವಾತಂತ್ರ್ಯವನ್ನು ಪಡೆಯುವ ಸಲುವಾಗಿ, ಯೆಹೋವನ ಜನರಿಗೆ ತಮಗಾಗಿ ಹಾಗೂ ತಾವು ಜೀವಿಸುವ ರಾಷ್ಟ್ರಕ್ಕಾಗಿ “ಸಮಾಧಾನವನ್ನು ಹಾರೈ”ಸಲು ಕಾರಣವಿದೆ.—1 ಪೇತ್ರ 3:11.
6. ಉನ್ನತ ಸರಕಾರೀ ಸ್ಥಾನಗಳು ಕೊಡಲ್ಪಟ್ಟಿದ್ದರೂ, ಯೆಹೋವನ ನಿಯಮದ ಸಂಬಂಧದಲ್ಲಿ ದಾನಿಯೇಲನು ಮತ್ತು ಅವನ ಮೂವರು ಸಂಗಾತಿಗಳು ಯಾವ ವಿಧಗಳಲ್ಲಿ ಸಂಧಾನಮಾಡಿಕೊಳ್ಳುವುದನ್ನು ನಿರಾಕರಿಸಿದರು?
6 ಬಾಬೆಲಿನ ಪರದೇಶವಾಸದ ಸಮಯದಲ್ಲಿ, ಬಾಬೆಲಿಗೆ ದಾಸತ್ವದಲ್ಲಿ ಸೆರೆವಾಸಿಗಳಾಗಿದ್ದ ದಾನಿಯೇಲ ಮತ್ತು ಇತರ ಮೂವರು ನಂಬಿಗಸ್ತ ಯೆಹೂದ್ಯರು, ರಾಜ್ಯ ತರಬೇತಿಗೆ ಅಧೀನರಾದರು ಮತ್ತು ಬ್ಯಾಬಿಲೋನಿಯದಲ್ಲಿ ಉಚ್ಚ ಮಟ್ಟದ ಪ್ರಜಾ ಸೇವಾಧಿಕಾರಿಗಳಾದರು. (ದಾನಿಯೇಲ 1:3-7; 2:48, 49) ಹಾಗಿದ್ದರೂ, ತಮ್ಮ ತರಬೇತಿಯ ಸಮಯದಲ್ಲೂ, ತಮ್ಮ ದೇವರಾದ ಯೆಹೋವನು ಮೋಶೆಯ ಮುಖಾಂತರ ಒದಗಿಸಿದ್ದ ಧರ್ಮಶಾಸ್ತ್ರವನ್ನು ತಾವು ಮುರಿಯುವಂತೆ ನಡೆಸಸಾಧ್ಯವಿರುತ್ತಿದ್ದ ಆಹಾರಪಥ್ಯದ ವಿಷಯಗಳ ಮೇಲೆ ದೃಢವಾದ ಸ್ಥಾನವನ್ನು ಅವರು ತೆಗೆದುಕೊಂಡರು. ಇದಕ್ಕಾಗಿ ಅವರು ಆಶೀರ್ವದಿಸಲ್ಪಟ್ಟರು. (ದಾನಿಯೇಲ 1:8-17) ರಾಜ ನೆಬೂಕದ್ನೆಚ್ಚರನು ಒಂದು ರಾಜ್ಯ ಪ್ರತಿಮೆಯನ್ನು ಸ್ಥಾಪಿಸಿದಾಗ, ತಮ್ಮ ಜೊತೆ ರಾಜ್ಯಾಡಳಿತಗಾರರೊಂದಿಗೆ ಉತ್ಸವಕ್ಕೆ ಹಾಜರಾಗುವಂತೆ ದಾನಿಯೇಲನ ಮೂವರು ಹೀಬ್ರು ಸಂಗಾತಿಗಳು ಒತ್ತಾಯಿಸಲ್ಪಟ್ಟರೆಂಬುದು ಸುವ್ಯಕ್ತ. ಆದರೂ ಅವರು ರಾಜ್ಯ ಪ್ರತಿಮೆಗೆ “ಅಡ್ಡ ಬಿದ್ದು ಆರಾಧಿಸಲು” ನಿರಾಕರಿಸಿದರು. ಪುನಃ ಯೆಹೋವನು ಅವರ ಸಮಗ್ರತೆಗೆ ಪ್ರತಿಫಲವನ್ನು ನೀಡಿದನು. (ದಾನಿಯೇಲ 3:1-6, 13-28, NW) ತದ್ರೀತಿಯಲ್ಲಿ ಇಂದು, ತಾವು ಜೀವಿಸುತ್ತಿರುವ ರಾಷ್ಟ್ರದ ಧ್ವಜವನ್ನು ಯೆಹೋವನ ಸಾಕ್ಷಿಗಳು ಗೌರವಿಸುತ್ತಾರೆ, ಆದರೆ ಅದರ ಕಡೆಗೆ ಆರಾಧನೆಯ ಒಂದು ಕ್ರಿಯೆಯನ್ನು ಅವರು ಮಾಡಲಾರರು.—ವಿಮೋಚನಕಾಂಡ 20:4, 5; 1 ಯೋಹಾನ 5:21.
7. (ಎ) ಬಾಬೆಲಿನ ಸರಕಾರೀ ರಚನೆಯಲ್ಲಿ ಒಂದು ಉಚ್ಚ ಸ್ಥಾನವನ್ನು ಪಡೆದಿದ್ದರೂ, ಯಾವ ಉತ್ತಮ ನಿಲುವನ್ನು ದಾನಿಯೇಲನು ತೆಗೆದುಕೊಂಡನು? (ಬಿ) ಕ್ರೈಸ್ತ ಸಮಯಗಳಲ್ಲಿ ಯಾವ ಬದಲಾವಣೆಗಳು ಸಂಭವಿಸಿದವು?
7 ನವ-ಬ್ಯಾಬಿಲೋನಿಯ ರಾಜ್ಯವಂಶದ ಪತನದ ತರುವಾಯ, ಬಾಬೆಲಿನಲ್ಲಿ ಅದನ್ನು ಸ್ಥಾನಪಲ್ಲಟಗೊಳಿಸಿದ ಹೊಸ ಮೇದ್ಯಯ ಪಾರಸಿಯ ಆಳಿಕೆಯ ಕೆಳಗೆ, ದಾನಿಯೇಲನಿಗೆ ಒಂದು ಉಚ್ಚ ಮಟ್ಟದ ಸರಕಾರೀ ಸ್ಥಾನವು ಕೊಡಲ್ಪಟ್ಟಿತು. (ದಾನಿಯೇಲ 5:30, 31; 6:1-3) ಆದರೆ ತನ್ನ ಉಚ್ಚ ಸ್ಥಾನವನ್ನು ಅವನು, ತನ್ನ ಸಮಗ್ರತೆಯೊಂದಿಗೆ ಸಂಧಾನಮಾಡುವುದಕ್ಕೆ ನಡೆಸುವಂತೆ ಬಿಡಲಿಲ್ಲ. ಯೆಹೋವನ ಬದಲಿಗೆ ರಾಜ ದಾರ್ಯಾವೆಷನನ್ನು ಆರಾಧಿಸಬೇಕೆಂದು ಒಂದು ರಾಜ್ಯ ನಿಯಮವು ಅವಶ್ಯಪಡಿಸಿದಾಗ, ಅವನು ನಿರಾಕರಿಸಿದನು. ಇದಕ್ಕಾಗಿ ಅವನು ಸಿಂಹಗಳ ಗವಿಯೊಳಗೆ ಎಸೆಯಲ್ಪಟ್ಟನು, ಆದರೆ ಯೆಹೋವನು ಅವನನ್ನು ಕಾಪಾಡಿದನು. (ದಾನಿಯೇಲ 6:4-24) ನಿಶ್ಚಯವಾಗಿಯೂ, ಇದು ಕ್ರೈಸ್ತ ಪೂರ್ವ ಸಮಯಗಳಲ್ಲಾಗಿತ್ತು. ಕ್ರೈಸ್ತ ಸಭೆಯು ಒಮ್ಮೆ ಸ್ಥಾಪಿತವಾದಾಗ, ದೇವರ ಸೇವಕರು “ಕ್ರಿಸ್ತನ ನಿಯಮಕ್ಕೊಳಗಾ”ದರು. ಯೆಹೋವನು ಈಗ ತನ್ನ ಜನರೊಂದಿಗೆ ವ್ಯವಹರಿಸುತ್ತಿರುವ ವಿಧದ ಮೇಲೆ ಆಧರಿಸುತ್ತಾ, ಯೆಹೂದಿ ವ್ಯವಸ್ಥೆಯ ಕೆಳಗೆ ಅನುಮತಿಸಲ್ಪಟ್ಟ ಅನೇಕ ವಿಷಯಗಳು ಭಿನ್ನವಾಗಿ ವೀಕ್ಷಿಸಲ್ಪಡಬೇಕಾಗಿದ್ದವು.—1 ಕೊರಿಂಥ 9:21; ಮತ್ತಾಯ 5:31, 32; 19:3-9.
ರಾಜ್ಯದ ಕಡೆಗೆ ಯೇಸುವಿನ ಮನೋಭಾವ
8. ರಾಜಕೀಯ ಒಳಗೊಳ್ಳುವಿಕೆಯನ್ನು ತೊರೆಯಲು ಯೇಸು ನಿಶ್ಚಯಿಸಿದ್ದನೆಂಬುದನ್ನು ಯಾವ ಘಟನೆಯು ತೋರಿಸುತ್ತದೆ?
8 ಯೇಸು ಕ್ರಿಸ್ತನು ಭೂಮಿಯ ಮೇಲಿದ್ದಾಗ, ತನ್ನ ಹಿಂಬಾಲಕರಿಗಾಗಿ ಅವನು ಉನ್ನತ ಮಟ್ಟಗಳನ್ನು ಸ್ಥಾಪಿಸಿದನು ಮತ್ತು ರಾಜಕೀಯ ಅಥವಾ ಮಿಲಿಟರಿ ವಿಷಯಗಳಲ್ಲಿನ ಎಲ್ಲ ಒಳಗೊಳ್ಳುವಿಕೆಯನ್ನು ಅವನು ತಿರಸ್ಕರಿಸಿದನು. ಕೆಲವೊಂದು ರೊಟ್ಟಿಯ ತುಂಡುಗಳು ಮತ್ತು ಎರಡು ಸಣ್ಣ ಮೀನುಗಳಿಂದ ಯೇಸು ಅದ್ಭುತಕರವಾಗಿ ಹಲವಾರು ಸಾವಿರ ಜನರಿಗೆ ಉಣಿಸಿದ ತರುವಾಯ, ಯೆಹೂದಿ ಪುರುಷರು ಅವನನ್ನು ಹಿಡಿದು, ಒಬ್ಬ ರಾಜಕೀಯ ಅರಸನನ್ನಾಗಿ ಮಾಡಲು ಬಯಸಿದರು. ಆದರೆ ಬೇಗನೆ ಗುಡ್ಡಗಳಿಗೆ ಓಡಿಹೋಗುವ ಮೂಲಕ ಯೇಸು ಅವರನ್ನು ದೂರವಿಟ್ಟನು. (ಯೋಹಾನ 6:5-15) ಈ ಘಟನೆಯ ಕುರಿತು, ದ ನ್ಯೂ ಇಂಟರ್ನ್ಯಾಷನಲ್ ಕಾಮೆಂಟರಿ ಆನ್ ದ ನ್ಯೂ ಟೆಸ್ಟಮೆಂಟ್ ಹೇಳುವುದು: “ಆ ಅವಧಿಯ ಯೆಹೂದ್ಯರ ಮಧ್ಯದಲ್ಲಿ ತೀವ್ರವಾದ ರಾಷ್ಟ್ರೀಯ ಬಯಕೆಗಳಿದ್ದವು, ಮತ್ತು ನಿಸ್ಸಂದೇಹವಾಗಿ ಆ ಅದ್ಭುತವನ್ನು ನೋಡಿದ ಅನೇಕರಿಗೆ, ಅವರನ್ನು ರೋಮನರ ವಿರುದ್ಧ ನಡೆಸುವ ಆದರ್ಶ ವ್ಯಕ್ತಿ, ದೈವಿಕವಾಗಿ ಮನ್ನಣೆಪಡೆದ ಒಬ್ಬ ನಾಯಕನು ಇಲ್ಲಿದ್ದನೆಂದು ಅನಿಸಿತು. ಆದುದರಿಂದ ಅವನನ್ನು ರಾಜನಾಗಿ ಮಾಡಲು ಅವರು ನಿರ್ಧರಿಸಿದರು.” ರಾಜಕೀಯ ನಾಯಕತ್ವದ ಈ ನೀಡಿಕೆಯನ್ನು ಯೇಸು “ನಿರ್ಣಾಯಕವಾಗಿ ತಿರಸ್ಕರಿಸಿದನು” ಎಂಬುದಾಗಿ ಆ ಪುಸ್ತಕವು ಕೂಡಿಸುತ್ತದೆ. ಕ್ರಿಸ್ತನು ರೋಮನ್ ಪ್ರಭುತ್ವದ ವಿರುದ್ಧ ಯಾವುದೇ ಯೆಹೂದಿ ದಂಗೆಗೆ ಬೆಂಬಲಕೊಡಲಿಲ್ಲ. ನಿಶ್ಚಯವಾಗಿ, ತನ್ನ ಮರಣದ ನಂತರ ಸಂಭವಿಸಲಿದ್ದ ಪ್ರತಿಭಟನೆಯ ಪರಿಣಾಮವು ಏನಾಗಿರುವುದೆಂದು ಅವನು ಮುಂತಿಳಿಸಿದನು—ಯೆರೂಸಲೇಮಿನ ನಿವಾಸಿಗಳಿಗೆ ಹೇಳಲಾಗದ ಕೇಡುಗಳು ಮತ್ತು ಆ ಪಟ್ಟಣದ ನಾಶನ.—ಲೂಕ 21:20-24.
9. (ಎ) ಈ ಜಗತ್ತಿಗೆ ತನ್ನ ರಾಜ್ಯದ ಸಂಬಂಧವನ್ನು ಯೇಸು ಹೇಗೆ ವರ್ಣಿಸಿದನು? (ಬಿ) ಈ ಜಗತ್ತಿನ ಸರಕಾರಗಳೊಂದಿಗಿನ ತಮ್ಮ ವ್ಯವಹಾರಗಳ ವಿಷಯವಾಗಿ ಯೇಸು ತನ್ನ ಹಿಂಬಾಲಕರಿಗೆ ಯಾವ ಮಾರ್ಗದರ್ಶನೆಯನ್ನು ನೀಡಿದನು?
9 ತನ್ನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ, ಯೂದಾಯದಲ್ಲಿದ್ದ ರೋಮನ್ ಚಕ್ರವರ್ತಿಯ ವಿಶೇಷ ಪ್ರತಿನಿಧಿಗೆ ಯೇಸು ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:36) ಅವನ ರಾಜ್ಯವು ರಾಜಕೀಯ ಸರಕಾರಗಳ ಆಳಿಕೆಗೆ ಅಂತ್ಯವನ್ನು ತರುವ ತನಕ, ಕ್ರಿಸ್ತನ ಶಿಷ್ಯರು ಅವನ ಮಾದರಿಯನ್ನು ಅನುಸರಿಸುತ್ತಾರೆ. ಆ ಸ್ಥಾಪಿತ ಅಧಿಕಾರಿಗಳಿಗೆ ಅವರು ವಿಧೇಯತೆಯನ್ನು ಸಲ್ಲಿಸುತ್ತಾರೆ, ಆದರೆ ರಾಜಕೀಯ ಕೆಲಸಗಳಲ್ಲಿ ಅವರು ತಲೆಹಾಕುವುದಿಲ್ಲ. (ದಾನಿಯೇಲ 2:44; ಮತ್ತಾಯ 4:8-10) ಯೇಸು ಹೀಗೆ ಹೇಳುತ್ತಾ, ತನ್ನ ಶಿಷ್ಯರಿಗೆ ಮಾರ್ಗದರ್ಶನೆಗಳನ್ನು ಒದಗಿಸಿದನು: “ಹಾಗಾದರೆ ಕೈಸರನ ವಿಷಯಗಳನ್ನು ಕೈಸರನಿಗೆ ಹಿಂದಕ್ಕೆ ಸಲ್ಲಿಸಿರಿ, ಆದರೆ ದೇವರ ವಿಷಯಗಳನ್ನು ದೇವರಿಗೆ ಸಲ್ಲಿಸಿರಿ.” (ಮತ್ತಾಯ 22:21, NW) ಈ ಮುಂಚೆ, ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಹೀಗೆ ಹೇಳಿದ್ದನು: “ಅಧಿಕಾರದಲ್ಲಿರುವ ಒಬ್ಬನು, ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀ ಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು.” (ಮತ್ತಾಯ 5:41, NW) ಈ ಪ್ರಸಂಗದ ಪೂರ್ವಾಪರದಲ್ಲಿ, ಮಾನವ ಸಂಬಂಧಗಳಲ್ಲಾಗಲಿ ಅಥವಾ ದೇವರ ನಿಯಮದೊಂದಿಗೆ ಸಾಮರಸ್ಯದಲ್ಲಿರುವ ಸರಕಾರೀ ಆವಶ್ಯಕತೆಗಳಲ್ಲಾಗಲಿ, ನ್ಯಾಯಸಮ್ಮತವಾದ ಬೇಡಿಕೆಗಳಿಗೆ ಇಚ್ಛಾಪೂರ್ವಕ ಅಧೀನತೆಯ ತತ್ವವನ್ನು ಯೇಸು ದೃಷ್ಟಾಂತಿಸುತ್ತಿದ್ದನು.—ಲೂಕ 6:27-31: ಯೋಹಾನ 17:14, 15.
ಕ್ರೈಸ್ತರು ಮತ್ತು ಕೈಸರನು
10. ಒಬ್ಬ ಇತಿಹಾಸಕಾರನಿಗನುಸಾರ, ಕೈಸರನ ಸಂಬಂಧದಲ್ಲಿ ಆದಿ ಕ್ರೈಸ್ತರು ಯಾವ ಶುದ್ಧಾಂತಃಕರಣದ ಸ್ಥಾನಕ್ಕೆ ಅಂಟಿಕೊಂಡರು?
10 ಈ ಸಂಕ್ಷಿಪ್ತ ಮಾರ್ಗದರ್ಶನೆಗಳು ಕ್ರೈಸ್ತರು ಮತ್ತು ರಾಜ್ಯದ ನಡುವಿನ ಸಂಬಂಧವನ್ನು ಪ್ರಭಾವಿಸಲಿದ್ದವು. ತನ್ನ ಪುಸ್ತಕವಾದ ದ ರೈಸ್ ಆಫ್ ಕ್ರಿಸ್ಟಿಆ್ಯನಿಟಿಯಲ್ಲಿ, ಇತಿಹಾಸಕಾರ ಈ. ಡಬ್ಲ್ಯೂ. ಬಾರ್ನ್ಸ್ ಬರೆದುದು: “ಬರಲಿರುವ ಶತಮಾನಗಳಲ್ಲಿ ಎಂದಾದರೂ, ರಾಜ್ಯದ ಕಡೆಗಿನ ತನ್ನ ಕರ್ತವ್ಯದ ಕುರಿತು ಒಬ್ಬ ಕ್ರೈಸ್ತನು ಅನಿಶ್ಚಿತನಾಗಿದ್ದರೆ, ಅವನು ಕ್ರಿಸ್ತನ ಅಧಿಕೃತ ಬೋಧನೆಯ ಕಡೆಗೆ ತಿರುಗಿದನು. ಅವನು ತೆರಿಗೆಗಳನ್ನು ಸಲ್ಲಿಸಿದನು: ವಿಧಿಸಲ್ಪಟ್ಟ ತೆರಿಗೆಗಳು ತಾಳಲಸಾಧ್ಯವಾದವುಗಳಾಗಿರಬಹುದು—ಪಾಶ್ಚಾತ್ಯ ಸಾಮ್ರಾಜ್ಯದ ಕುಸಿತಕ್ಕೆ ಮುಂಚೆ ಅವು ಸಹಿಸಲಸಾಧ್ಯವಾದವುಗಳಾಗಿ ಪರಿಣಮಿಸಿದವು—ಆದರೆ ಕ್ರೈಸ್ತನು ಅವುಗಳನ್ನು ಸಹಿಸಲಿದ್ದನು. ಅಂತೆಯೇ, ದೇವರಿಗೆ ಸೇರಿದ ವಿಷಯಗಳನ್ನು ಕೈಸರನಿಗೆ ಸಲ್ಲಿಸುವಂತೆ ಅವಶ್ಯಪಡಿಸಲ್ಪಡದಿರುವ ಸಂದರ್ಭದಲ್ಲಿ, ಅವನು ಇತರ ಎಲ್ಲ ರಾಜ್ಯ ಹಂಗುಗಳನ್ನು ಸ್ವೀಕರಿಸುವನು.”
11. ಲೌಕಿಕ ಪ್ರಭುಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ಪೌಲನು ಸಲಹೆ ನೀಡಿದನು?
11 ಈ ತತ್ವಕ್ಕೆ ಹೊಂದಿಕೆಯಲ್ಲಿ, ಕ್ರಿಸ್ತನ ಮರಣದ 20ಕ್ಕಿಂತಲೂ ಕೊಂಚ ಹೆಚ್ಚಿನ ವರ್ಷಗಳ ನಂತರ, ಅಪೊಸ್ತಲ ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಹೇಳಿದ್ದು: “ಪ್ರತಿಯೊಂದು ಪ್ರಾಣವು ಮೇಲಧಿಕಾರಿಗಳಿಗೆ ಅಧೀನವಾಗಿರಲಿ.” (ರೋಮಾಪುರ 13:1, NW) ಸುಮಾರು ಹತ್ತು ವರ್ಷಗಳ ನಂತರ, ತನ್ನ ಎರಡನೆಯ ಬಂಧನ ಮತ್ತು ರೋಮ್ನಲ್ಲಿ ಮರಣ ಶಿಕ್ಷೆಗೆ ಸ್ವಲ್ಪ ಮುಂಚಿತವಾಗಿ, ಪೌಲನು ತೀತನಿಗೆ ಬರೆದುದು: “ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ, ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಬೇಕೆಂತಲೂ, ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ ಅವರಿಗೆ [ಕ್ರೇತದ ಕ್ರೈಸ್ತರಿಗೆ] ಜ್ಞಾಪಕಕೊಡು.”—ತೀತ 3:1, 2.
“ಮೇಲಧಿಕಾರಿ”ಗಳ ಕುರಿತಾದ ಪ್ರಗತಿಪರ ತಿಳಿವಳಿಕೆ
12. (ಎ) ಸರಕಾರೀ ಅಧಿಕಾರಿಗಳಿಗೆ ಒಬ್ಬ ಕ್ರೈಸ್ತನ ಸಂಬಂಧಕ ಅಧೀನತೆಯ ಯೋಗ್ಯವಾದ ಸ್ಥಾನವು ಯಾವುದೆಂದು ಚಾರ್ಲ್ಸ್ ಟೇಸ್ ರಸ್ಸಲ್ ವೀಕ್ಷಿಸಿದರು? (ಬಿ) ಸಶಸ್ತ್ರ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುವ ವಿಷಯದಲ್ಲಿ, Iನೆಯ ಜಾಗತಿಕ ಯುದ್ಧದ ಸಮಯದಲ್ಲಿ ಯಾವ ವಿಭಿನ್ನ ದೃಷ್ಟಿಕೋನಗಳನ್ನು ಅಭಿಷಿಕ್ತ ಕ್ರೈಸ್ತರು ತೆಗೆದುಕೊಂಡರು?
12 1886ರಷ್ಟು ಆದಿಭಾಗದಲ್ಲಿ, ದ ಪ್ಲ್ಯಾನ್ ಆಫ್ ದಿ ಏಜಸ್ ಎಂಬ ಪುಸ್ತಕದಲ್ಲಿ, ಚಾರ್ಲ್ಸ್ ಟೇಸ್ ರಸಲ್ ಬರೆದುದು: “ಯೇಸುವಾಗಲಿ ಅಪೊಸ್ತಲರಾಗಲಿ ಯಾವುದೇ ವಿಧದಲ್ಲಿ ಭೌಮಿಕ ಪ್ರಭುಗಳಿಗೆ ಅಡ್ಡವಾಗಿ ಬರಲಿಲ್ಲ. . . . ನಿಯಮಗಳಿಗೆ ವಿಧೇಯರಾಗುವಂತೆ, ಮತ್ತು ಅವರ ಸ್ಥಾನದ ಕಾರಣ ಅಧಿಕಾರದಲ್ಲಿರುವವರನ್ನು ಗೌರವಿಸುವಂತೆ, . . . ನೇಮಿತ ತೆರಿಗೆಗಳನ್ನು ಸಲ್ಲಿಸುವಂತೆ, ಮತ್ತು ರಾಜ್ಯದ ನಿಯಮಗಳು ದೇವರ ನಿಯಮಗಳೊಂದಿಗೆ ಘರ್ಷಿಸದೆ ಇರುವಲ್ಲಿ (ಅ. ಕೃತ್ಯಗಳು 4:19; 5:29) ಯಾವುದೇ ಸ್ಥಾಪಿತ ನಿಯಮಕ್ಕೆ ಪ್ರತಿರೋಧವನ್ನು ತೋರಿಸದಂತೆ ಅವರು ಚರ್ಚಿಗೆ ಕಲಿಸಿದರು. (ರೋಮಾ. 13:1-7; ಮತ್ತಾ. 22:21) ಯೇಸು ಮತ್ತು ಅಪೊಸ್ತಲರು ಹಾಗೂ ಆದಿಯ ಚರ್ಚು, ಈ ಲೋಕದಿಂದ ಪ್ರತ್ಯೇಕರಾಗಿದ್ದು, ಅದರ ಸರಕಾರಗಳಲ್ಲಿ ಯಾವ ಭಾಗವನ್ನೂ ತೆಗೆದುಕೊಳ್ಳದೇ ಇದ್ದರೂ, ಎಲ್ಲರೂ ನ್ಯಾಯಬದ್ಧರಾಗಿದ್ದರು.” ಈ ಪುಸ್ತಕವು, ಅಪೊಸ್ತಲ ಪೌಲನಿಂದ ಉಲ್ಲೇಖಿಸಲ್ಪಟ್ಟ “ಉನ್ನತ ಶಕ್ತಿಗಳು,” ಅಥವಾ “ಮೇಲಧಿಕಾರಿಗಳ”ನ್ನು, ಸರಿಯಾಗಿ ಮಾನವ ಸರಕಾರೀ ಅಧಿಕಾರಿಗಳೆಂದು ಗುರುತಿಸಿತು. (ರೋಮಾಪುರ 13:1, ಕಿಂಗ್ ಜೇಮ್ಸ್ ವರ್ಷನ್) 1904ರಲ್ಲಿ ದ ನ್ಯೂ ಕ್ರಿಯೇಷನ್ ಎಂಬ ಪುಸ್ತಕವು ಹೇಳಿದ್ದೇನೆಂದರೆ, ಸತ್ಯ ಕ್ರೈಸ್ತರು “ಪ್ರಚಲಿತ ಸಮಯದ ಅತ್ಯಂತ ನ್ಯಾಯಬದ್ಧ ಜನರೊಳಗೆ ಕಂಡುಕೊಳ್ಳಲ್ಪಡಬೇಕು—ಚಳವಳಿಕಾರರು, ಕಲಹಪ್ರಿಯರು, ತಪ್ಪು ಕಂಡುಹಿಡಿಯುವ ಜನರೊಳಗೆ ಅಲ್ಲ.” ಇದು Iನೆಯ ಜಾಗತಿಕ ಯುದ್ಧದ ಸಮಯದಲ್ಲಿ ಸಶಸ್ತ್ರ ಸೇನೆಗಳಲ್ಲಿ ಸೇವೆಯನ್ನು ಸ್ವೀಕರಿಸುವ ಮಟ್ಟಿಗೆ ಸಹ, ಸರಕಾರೀ ಶಕ್ತಿಗಳಿಗೆ ಸಂಪೂರ್ಣ ಅಧೀನತೆಯನ್ನು ಅರ್ಥೈಸಿತೆಂದು ಕೆಲವರಿಂದ ತಿಳಿದುಕೊಳ್ಳಲ್ಪಟ್ಟಿತು. ಇತರರಾದರೊ, ಅದನ್ನು ಯೇಸುವಿನ ಈ ಹೇಳಿಕೆಗೆ ಪ್ರತಿಕೂಲವಾಗಿರುವಂತೆ ವೀಕ್ಷಿಸಿದರು: “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:52) ನಿಸ್ಸಂಶಯವಾಗಿ, ಮೇಲಧಿಕಾರಿಗಳಿಗೆ ಕ್ರೈಸ್ತ ಅಧೀನತೆಯ ಒಂದು ಸ್ಪಷ್ಟವಾದ ತಿಳಿವಳಿಕೆಯು ಬೇಕಾಗಿತ್ತು.
13. 1929ರಲ್ಲಿ, ಉನ್ನತ ಶಕ್ತಿಗಳ ಗುರುತಿಸುವಿಕೆಯ ತಿಳಿವಳಿಕೆಯಲ್ಲಿ ಯಾವ ಬದಲಾವಣೆಯನ್ನು ಪ್ರಸ್ತುತಪಡಿಸಲಾಯಿತು, ಮತ್ತು ಇದು ಪ್ರಯೋಜನಕರವಾಗಿ ರುಜುವಾದದ್ದು ಹೇಗೆ?
13 1929ರಲ್ಲಿ, ವಿಭಿನ್ನ ಸರಕಾರಗಳ ನಿಯಮಗಳು, ದೇವರು ಆಜ್ಞಾಪಿಸುವ ವಿಷಯಗಳನ್ನು ನಿಷೇಧಿಸಲು ಅಥವಾ ದೇವರ ನಿಯಮಗಳು ನಿಷೇಧಿಸುವ ವಿಷಯಗಳನ್ನು ತಗಾದೆ ಮಾಡಲು ತೊಡಗುತ್ತಿದ್ದ ಒಂದು ಸಮಯದಲ್ಲಿ, ಉನ್ನತ ಶಕ್ತಿಗಳು ಯೆಹೋವ ದೇವರು ಮತ್ತು ಯೇಸು ಕ್ರಿಸ್ತನಾಗಿರಬೇಕೆಂದು ನಂಬಲಾಯಿತು.b IIನೆಯ ಜಾಗತಿಕ ಯುದ್ಧದ ಸಮಯದಲ್ಲಿ ಹಾಗೂ ಅದರ ಮುಂಚಿನ ನಿರ್ಧಾರಕ ಅವಧಿಯಲ್ಲಿ ಮತ್ತು ಶೀತಲ ಯುದ್ಧದ ಮಿಲಿಟರಿ ಶಕ್ತಿಯ ಸಮತೆ ಹಾಗೂ ಅದರ ಮಿಲಿಟರಿ ಸಿದ್ಧತೆಯ ಸಮಯದಲ್ಲಿ ಯೆಹೋವನ ಸೇವಕರಿಗಿದ್ದ ತಿಳಿವಳಿಕೆಯು ಇದಾಗಿತ್ತು. ಹಿನ್ನೋಟ ಬೀರುತ್ತಾ, ವಿಷಯಗಳ ಈ ನೋಟವು, ಯೆಹೋವ ಮತ್ತು ಆತನ ಕ್ರಿಸ್ತನ ಪರಮಾಧಿಪತ್ಯವನ್ನು ಮೇಲೇರಿಸುತ್ತಾ, ಈ ಕಷ್ಟಕರ ಅವಧಿಯ ಉದ್ದಕ್ಕೂ ಸಂಧಾನ ಮಾಡಿಕೊಳ್ಳಲಾರದಂತಹ ತಟಸ್ಥ ನಿಲುವನ್ನು ಕಾಪಾಡಿಕೊಳ್ಳುವಂತೆ ದೇವರ ಜನರಿಗೆ ಸಹಾಯ ಮಾಡಿತೆಂಬುದು ಸುವ್ಯಕ್ತ.
ಸಂಬಂಧಕ ಅಧೀನತೆ
14. ರೋಮಾಪುರ 13:1, 2 ಮತ್ತು ಸಂಬಂಧಪಟ್ಟ ಶಾಸ್ತ್ರವಚನಗಳ ಮೇಲೆ, 1962ರಲ್ಲಿ ಹೆಚ್ಚಿನ ಬೆಳಕು ಹೇಗೆ ಪ್ರಕಾಶಿಸಲ್ಪಟ್ಟಿತು?
14 1961ರಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಪೂರ್ಣಗೊಂಡಿತು. ಅದರ ಸಿದ್ಧತೆಯು, ಶಾಸ್ತ್ರಗಳ ಮೂಲ ಗ್ರಂಥದ ಭಾಷೆಯ ಆಳವಾದ ಅಧ್ಯಯನವನ್ನು ಅವಶ್ಯಪಡಿಸಿತು. ರೋಮಾಪುರ 13ನೆಯ ಅಧ್ಯಾಯದಲ್ಲಿ ಮಾತ್ರವಲ್ಲ, ತೀತ 3:1, 2 ಮತ್ತು 1 ಪೇತ್ರ 2:13, 17ರಲ್ಲಿಯೂ ಉಪಯೋಗಿಸಲ್ಪಟ್ಟ ಪದಗಳ ನಿಖರವಾದ ಭಾಷಾಂತರವು ಸ್ಪಷ್ಟಗೊಳಿಸಿತೇನೆಂದರೆ, “ಮೇಲಧಿಕಾರಿಗಳು” ಎಂಬ ಪದವು, ಪರಮ ಅಧಿಕಾರಿಯಾದ ಯೆಹೋವ ಮತ್ತು ಆತನ ಮಗನಾದ ಯೇಸುವಿಗೆ ಸೂಚಿಸಲಿಲ್ಲ, ಬದಲಾಗಿ ಮಾನವ ಸರಕಾರೀ ಅಧಿಕಾರಿಗಳಿಗೆ ಸೂಚಿಸಿತು. 1962ರ ಕೊನೆಯ ಭಾಗದಲ್ಲಿ, ರೋಮಾಪುರ 13ನೆಯ ಅಧ್ಯಾಯದ ನಿಷ್ಕೃಷ್ಟ ವಿವರಣೆಯನ್ನು ನೀಡಿದ ಮತ್ತು ಸಿ. ಟಿ. ರಸಲರ ಸಮಯದಲ್ಲಿದ್ದ ದೃಷ್ಟಿಕೋನಕ್ಕಿಂತ ಹೆಚ್ಚು ಸ್ಪಷ್ಟವಾದ ಒಂದು ದೃಷ್ಟಿಕೋನವನ್ನು ಒದಗಿಸಿದ ಲೇಖನಗಳು ದ ವಾಚ್ಟವರ್ ಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟವು. ಅಧಿಕಾರಿಗಳಿಗೆ ಕ್ರೈಸ್ತ ಅಧೀನತೆಯು ಸಂಪೂರ್ಣವಾಗಿರಲು ಸಾಧ್ಯವಿಲ್ಲವೆಂಬುದನ್ನು ಈ ಲೇಖನಗಳು ಸೂಚಿಸಿದವು. ಅದು ಸಂಬಂಧಕವಾಗಿರಬೇಕು, ದೇವರ ಸೇವಕರನ್ನು ದೇವರ ನಿಯಮಗಳೊಂದಿಗೆ ಘರ್ಷಣೆಯಲ್ಲಿ ತರದೆ ಇರುವುದರ ಮೇಲೆ ಅವಲಂಬಿತವಾಗಿರಬೇಕು. ದ ವಾಚ್ಟವರ್ ಪತ್ರಿಕೆಯಲ್ಲಿನ ಇನ್ನೂ ಹೆಚ್ಚಿನ ಲೇಖನಗಳು ಈ ಪ್ರಾಮುಖ್ಯವಾದ ಅಂಶವನ್ನು ಒತ್ತಿಹೇಳಿವೆ.c
15, 16. (ಎ) ರೋಮಾಪುರ 13ನೆಯ ಅಧ್ಯಾಯದ ಹೊಸ ತಿಳಿವಳಿಕೆಯು, ಯಾವ ಉತ್ತಮ ಸಮತೂಕಕ್ಕೆ ನಡೆಸಿತು? (ಬಿ) ಯಾವ ಪ್ರಶ್ನೆಗಳು ಉತ್ತರಿಸಲ್ಪಡಲು ಉಳಿದಿವೆ?
15 ರೋಮಾಪುರ 13ನೆಯ ಅಧ್ಯಾಯದ ಸರಿಯಾದ ತಿಳಿವಳಿಕೆಗಾಗಿರುವ ಈ ವಿವರಣೆಯು, ಪ್ರಮುಖ ಶಾಸ್ತ್ರೀಯ ತತ್ವಗಳ ಮೇಲೆ ಸಂಧಾನಮಾಡಿಕೊಳ್ಳಲಾರದ ನಿಲುವಿನೊಂದಿಗೆ ರಾಜಕೀಯ ಅಧಿಕಾರಿಗಳಿಗಾಗಿ ಸಲ್ಲತಕ್ಕ ಗೌರವವನ್ನು ಸರಿದೂಗಿಸಲು ಯೆಹೋವನ ಜನರನ್ನು ಶಕ್ತಗೊಳಿಸಿದೆ. (ಕೀರ್ತನೆ 97:11; ಯೆರೆಮೀಯ 3:15) ಅದು ದೇವರೊಂದಿಗಿನ ತಮ್ಮ ಸಂಬಂಧ ಮತ್ತು ರಾಜ್ಯದೊಂದಿಗಿನ ತಮ್ಮ ವ್ಯವಹಾರಗಳ ಕುರಿತು ಯೋಗ್ಯವಾದ ನೋಟವನ್ನಿಟ್ಟುಕೊಳ್ಳುವಂತೆ ಅವರನ್ನು ಅನುಮತಿಸಿದೆ. ಕೈಸರನ ವಿಷಯಗಳನ್ನು ಅವರು ಕೈಸರನಿಗೆ ಹಿಂದಕ್ಕೆ ಸಲ್ಲಿಸುವಾಗ, ದೇವರ ವಿಷಯಗಳನ್ನು ದೇವರಿಗೆ ಹಿಂದಕ್ಕೆ ಸಲ್ಲಿಸಲು ಅವರು ನಿರ್ಲಕ್ಷಿಸುವುದಿಲ್ಲವೆಂಬುದನ್ನು ಅದು ಖಚಿತಗೊಳಿಸಿದೆ.
16 ಆದರೆ ನಿಖರವಾಗಿ, ಕೈಸರನ ವಿಷಯಗಳು ಯಾವುವಾಗಿವೆ? ಒಬ್ಬ ಕ್ರೈಸ್ತನ ಮೇಲೆ ಯಾವ ನ್ಯಾಯಸಮ್ಮತ ಹಕ್ಕುಕೇಳಿಕೆಗಳನ್ನು ರಾಜ್ಯವು ಮಾಡಸಾಧ್ಯವಿದೆ? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವವು.
[ಅಧ್ಯಯನ ಪ್ರಶ್ನೆಗಳು]
a ಕೀರ್ತನೆ 103:22, NW ಪಾದಟಿಪ್ಪಣಿಯನ್ನು ನೋಡಿರಿ.
b ದ ವಾಚ್ಟವರ್, ಜೂನ್ 1 ಮತ್ತು 15, 1929.
c ದ ವಾಚ್ಟವರ್, ನವೆಂಬರ್ 1 ಮತ್ತು 15, ಡಿಸೆಂಬರ್ 1, 1962; ನವೆಂಬರ್ 1, 1990; ಫೆಬ್ರವರಿ 1, 1993; ಜುಲೈ 1, 1994ನ್ನು ನೋಡಿ.
ಸ್ವಾರಸ್ಯಕರವಾಗಿ, ರೋಮಾಪುರ 13ನೆಯ ಅಧ್ಯಾಯದ ಕುರಿತಾದ ತನ್ನ ವ್ಯಾಖ್ಯಾನದಲ್ಲಿ, ಪ್ರೊಫೆಸರ್ ಎಫ್. ಎಫ್. ಬ್ರೂಸ್ ಬರೆಯುವುದು: “ಅಪೊಸ್ತಲರ ಬರಹಗಳ ಸಾಮಾನ್ಯ ಪೂರ್ವಾಪರದಿಂದಿರುವಂತೆಯೆ, ರೋಮಾಪುರ 13ನೆಯ ಅಧ್ಯಾಯದ ನೇರವಾದ ಪೂರ್ವಾಪರದಿಂದ ಸ್ಪಷ್ಟವಾಗಿರುವ ವಿಷಯವೇನೆಂದರೆ, ರಾಜ್ಯವು ಅದು ದೈವಿಕವಾಗಿ ಸ್ಥಾಪಿಸಲ್ಪಟ್ಟಿರುವ ಉದ್ದೇಶಗಳ ಪರಿಮಿತಿಗಳೊಳಗೆ ಮಾತ್ರ, ನ್ಯಾಯವಾಗಿ ವಿಧೇಯತೆಯನ್ನು ಕೇಳಿಕೊಳ್ಳಬಲ್ಲದು—ವಿಶೇಷವಾಗಿ, ರಾಜ್ಯವು ದೇವರಿಗೆ ಮಾತ್ರ ಸಲ್ಲತಕ್ಕ ನಿಷ್ಠೆಯನ್ನು ತಗಾದೆ ಮಾಡುವಾಗ, ಅದರ ವಿರುದ್ಧವಾಗಿ ಪ್ರತಿಭಟಿಸಬಹುದು ಮಾತ್ರವಲ್ಲ ಪ್ರತಿಭಟಿಸಲೇಬೇಕು.”
ನೀವು ವಿವರಿಸಬಲ್ಲಿರೊ?
◻ ಮೇಲಧಿಕಾರಿಗಳಿಗೆ ಅಧೀನತೆಯು, ಸೈತಾನನಿಗೆ ಅಧೀನರಾಗುವುದನ್ನು ಏಕೆ ಅರ್ಥೈಸುವುದಿಲ್ಲ?
◻ ತನ್ನ ದಿನದ ರಾಜಕೀಯದ ಕಡೆಗೆ ಯೇಸುವಿನ ಮನೋಭಾವವು ಏನಾಗಿತ್ತು?
◻ ಕೈಸರನೊಂದಿಗಿನ ತಮ್ಮ ವ್ಯವಹಾರಗಳ ವಿಷಯವಾಗಿ ಯೇಸು ತನ್ನ ಹಿಂಬಾಲಕರಿಗೆ ಯಾವ ಸಲಹೆಯನ್ನು ನೀಡಿದನು?
◻ ರಾಷ್ಟ್ರಗಳ ಪ್ರಭುಗಳೊಂದಿಗೆ ಕ್ರೈಸ್ತರು ಹೇಗೆ ವ್ಯವಹರಿಸಬೇಕೆಂದು ಪೌಲನು ಸಲಹೆ ನೀಡಿದನು?
◻ ಮೇಲಧಿಕಾರಿಗಳ ಗುರುತಿನ ಕುರಿತಾದ ತಿಳಿವಳಿಕೆಯು ವರ್ಷಗಳ ಉದ್ದಕ್ಕೂ ಹೇಗೆ ವಿಕಾಸಹೊಂದಿದೆ?
[ಪುಟ 10 ರಲ್ಲಿರುವ ಚಿತ್ರ]
ಸೈತಾನನು ಅವನಿಗೆ ರಾಜಕೀಯ ಶಕ್ತಿಯನ್ನು ನೀಡಿದಾಗ, ಯೇಸು ಅದನ್ನು ನಿರಾಕರಿಸಿದನು
[ಪುಟ 13 ರಲ್ಲಿರುವ ಚಿತ್ರ]
ಕ್ರೈಸ್ತರು “ಪ್ರಚಲಿತ ಸಮಯದ ಅತ್ಯಂತ ನ್ಯಾಯಬದ್ಧ ಜನರೊಳಗೆ ಕಂಡುಕೊಳ್ಳಲ್ಪಡಬೇಕು,” ಎಂದು ರಸ್ಸಲ್ ಬರೆದರು