ಮೇಲಧಿಕಾರಿಗಳ ವಿಷಯದಲ್ಲಿ ಕ್ರೈಸ್ತನ ನೋಟ
“ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ. ಇರುವ ಅಧಿಕಾರಿಗಳು ಅವರವರ ಸಂಬಂಧಕ ಸ್ಥಾನಗಳಲ್ಲಿ ದೇವರಿಂದ ಇಡಲ್ಪಟ್ಟವರು.”—ರೋಮಾಪುರ 13:1, NW.
1, 2. (ಎ) ಪೌಲನು ರೋಮಿನಲ್ಲಿ ಕೈದಿಯಾಗಿದ್ದದ್ದೇಕೆ? (ಬಿ) ಕೈಸರನಿಗೆ ಪೌಲನು ಮಾಡಿದ ಅಪ್ಪೀಲು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?
ಅಪೊಸ್ತಲ ಪೌಲನು ಮೇಲಿನ ಮಾತುಗಳನ್ನು ಬರೆದದ್ದು ಸುಮಾರು ಸಾ.ಶ. 56ರಲ್ಲಿ. ಕೆಲವೇ ವರ್ಷಗಳ ಅನಂತರ, ಅವನು ತಾನೇ ರೋಮಿನ ಸೆರೆಮನೆಯಲ್ಲಿ ತನ್ನನ್ನು ಕೈದಿಯಾಗಿ ಕಂಡುಕೊಂಡನು. ಏಕೆ? ಯೆರೂಸಲೇಮಿನಲ್ಲಿ ಒಂದು ದೊಂಬಿಯ ಆಕ್ರಮಣಕ್ಕೆ ಅವನು ಗುರಿಯಾದನು ಮತ್ತು ರೋಮನ್ ಸೈನಿಕರಿಂದ ಬಿಡಿಸಲ್ಪಟ್ಟನು. ಕೈಸರೇಯಕ್ಕೆ ಒಯ್ಯಲ್ಪಟ್ಟವನಾಗಿ ಅಲ್ಲಿ ಸುಳ್ಳಾರೋಪಗಳನ್ನು ಅವನ ಮೇಲೆ ಹೊರಿಸಲಾಯಿತು. ಆದರೆ ಅವನು ರೋಮನ್ ಗವರ್ನರ್ ಫೇಲಿಕ್ಸನ ಮುಂದೆ ತನ್ನನ್ನು ಸರಿಯಾಗಿ ಪ್ರತಿವಾದಿಸಿಕೊಳ್ಳಶಕ್ತನಾದನು. ಲಂಚ ಸಿಗುವುದೆಂಬ ನಿರೀಕ್ಷೆಯಿಂದ ಫೇಲಿಕ್ಸನು ಅವನನ್ನು ಎರಡು ವರ್ಷ ಬಂಧನದಲ್ಲಿಟ್ಟನು. ಕೊನೆಗೆ ಪೌಲನು, ಕೈಸರನ ಎದುರಲ್ಲಿ ಮನವಿಮಾಡಲು ತನ್ನನ್ನು ಬಿಡುವಂತೆ ನಂತರದ ಗವರ್ನರ ಫೆಸ್ತನನ್ನು ಹಕ್ಕಿನಿಂದ ಕೇಳಿಕೊಂಡನು.—ಅಪೊಸ್ತಲರ ಕೃತ್ಯಗಳು 21:27-32; 24:1–25:12.
2 ಇದು ರೋಮನ್ ನಾಗರಿಕನಾಗಿದ್ದ ಅವನ ಹಕ್ಕಾಗಿತ್ತು. ಆದರೆ, ಯೇಸು ತಾನೇ ಸೈತಾನನನ್ನು ನಿಜ “ಇಹಲೋಕಾಧಿಪತಿ” ಎಂದು ಕರೆದಿರಲಾಗಿ, ಮತ್ತು ಪೌಲನು ತಾನೇ ಸೈತಾನನನ್ನು “ಈ ಪ್ರಪಂಚದ ದೇವರು” ಎಂದು ನಿರ್ದೇಶಿಸಿರಲಾಗಿ, ಚಕ್ರವರ್ತಿಯ ಅಧಿಕಾರಕ್ಕೆ ಅಪ್ಪೀಲು ಮಾಡುವುದು ಪೌಲನಿಗೆ ತಕ್ಕದ್ದಾಗಿತ್ತೋ? (ಯೋಹಾನ 14:30; 2 ಕೊರಿಂಥ 4:4) ಅಥವಾ, ರೋಮನ್ ಅಧಿಕಾರವು ವಹಿಸಿದ್ದ ಕೆಲವು ‘ಸಂಬಂಧಕ ಅಧಿಕಾರ ಸ್ಥಾನ’ವು, ಆ ಅಧಿಕಾರಕ್ಕೆ ತನ್ನ ಹಕ್ಕುರಕ್ಷಣೆಗಾಗಿ ಪೌಲನು ವಿನಂತಿಸುವುದನ್ನು ಯೋಗ್ಯವನ್ನಾಗಿ ಮಾಡಿತ್ತೋ? ನಿಶ್ಚಯವಾಗಿ, ಅಪೊಸ್ತಲರ ಆರಂಭದ ಮಾತುಗಳಾದ “ಮನುಷ್ಯರಿಗಿಂತಲೂ ಹೆಚ್ಚಾಗಿ ಆಳುವವನಾದ ದೇವರಿಗೆ ವಿಧೇಯರಾಗಬೇಕು” ಎಂಬದು, ದೇವರಿಗೆ ಅವಿಧೇಯತೆಯು ಒಳಗೂಡದಿರುವಾಗಲ್ಲೆಲ್ಲಾ, ಮಾನವ ಅಧಿಪತಿಗಳಿಗೆ ಕ್ರೈಸ್ತ ವಿಧೇಯತೆಯನ್ನು ತೋರಿಸಲು ಬಿಡುತ್ತದೋ?—ಅಪೊಸ್ತಲರ ಕೃತ್ಯಗಳು 5:29.
3. ಯಾವ ಬಲಿತ ದೃಷ್ಟಿಕೋನವನ್ನು ಪೌಲನು ಪ್ರಕಟಿಸುತ್ತಾನೆ ಮತ್ತು ಮನಸ್ಸಾಕ್ಷಿಯು ಹೇಗೆ ಒಳಗೂಡಿದೆ?
3 ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು, ರೋಮಾಪುರದವರಿಗೆ ಪೌಲನು ಬರೆದ ಪತ್ರವು ನಮಗೆ ಸಹಾಯ ಮಾಡುತ್ತದೆ, ಅಲ್ಲಿ ಅವನು, ಮಾನವ ಅಧಿಕಾರದ ವಿಷಯದಲ್ಲಿ ಬಲಿತ ದೃಷ್ಟಿಕೋನವನ್ನು ಪ್ರಕಟ ಪಡಿಸಿದ್ದಾನೆ. ರೋಮಾಪುರ 13:1-7 ರಲ್ಲಿ ಪೌಲನು, ಸರ್ವಶ್ರೇಷ್ಠ ಸಾರ್ವಭೌಮ ಅಧಿಪತಿಯಾದ ಯೆಹೋವ ದೇವರಿಗೆ ಸಂಪೂರ್ಣ ವಿಧೇಯತೆಯನ್ನು, “ಮೇಲಧಿಕಾರಿಗಳಿಗೆ” ತೋರಿಸುವ ಸಂಬಂಧಕ ವಿಧೇಯತೆಯೊಂದಿಗೆ ಸಮತೂಕಮಾಡುವುದರಲ್ಲಿ ಕ್ರೈಸ್ತನ ಮನಸ್ಸಾಕ್ಷಿಯು ವಹಿಸಲೇ ಬೇಕಾದ ಪಾತ್ರವನ್ನು ಸ್ಪಷ್ಟೀಕರಿಸುತ್ತಾನೆ.
ಮೇಲಧಿಕಾರಿಗಳನ್ನು ಗುರುತಿಸುವುದು
4. 1962ರಲ್ಲಿ ಯಾವ ದೃಷ್ಟಿಕೋನದ ಕ್ರಮಪಡಿಸುವಿಕೆಯು ಮಾಡಲ್ಪಟ್ಟಿತು, ಇದು ಯಾವ ಪ್ರಶ್ನೆಗಳನ್ನು ಎಬ್ಬಿಸಿತು?
4 ಯೆಹೋವನ ಸಾಕ್ಷಿಗಳು ಕೆಲವಾರು ವರ್ಷಗಳಲ್ಲಿ ಅಂದರೆ 1962ರ ತನಕ, ಯೆಹೋವ ದೇವರು ಮತ್ತು ಕ್ರಿಸ್ತ ಯೇಸುವೇ ಮೇಲಧಿಕಾರಿಗಳು ಎಂದು ನಂಬಿದ್ದರು. ಆದರೆ, ಜ್ಞಾನೋಕ್ತಿ 4:18ರ ಹೊಂದಿಕೆಯಲ್ಲಿ ಬೆಳಕು ಹೆಚ್ಚುತ್ತಾ ಬಂತು, ಮತ್ತು ಈ ದೃಷ್ಟಿಕೋನವು ಕ್ರಮಗೊಳಿಸಲ್ಪಟ್ಟಿತು. ಇದು ಕೆಲವರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಎಬ್ಬಿಸಬಹುದು. ಲೋಕದಲ್ಲಿ ಐಹಿಕ, ರಾಜಕೀಯ ಅಧಿಕಾರವನ್ನು ಚಲಾಯಿಸುವ ಅರಸರುಗಳು, ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಪೌರಾಧ್ಯಕ್ಷರುಗಳು, ಮ್ಯಾಜಿಸ್ಟ್ರೇಟರುಗಳು ಮತ್ತು ಇತರರೇ ಈ ಅಧಿಕಾರಿಗಳು ಎಂದೂ ಮತ್ತು ಒಂದು ಸಂಬಂಧಕ ರೀತಿಯಲ್ಲಿ ನಾವು ಅವರಿಗೆ ಅಧೀನರಾಗಿದ್ದೇವೆ ಎಂದೂ ನಾವೀಗ ಹೇಳುವುದು ಸರಿಯೋ?
5. ರೋಮಾಪುರ 13:1ರ ಪೂರ್ವಾಪರ ವಚನಗಳು ಮೇಲಧಿಕಾರಿಗಳನ್ನು ಗುರುತಿಸಲು ಯಾವ ರೀತಿಯಲ್ಲಿ ಸಹಾಯ ಮಾಡುತ್ತವೆ, ಮತ್ತು ವಿವಿಧ ಬೈಬಲ್ ಭಾಷಾಂತರಗಳು ಹೇಗೆ ಈ ಗುರುತನ್ನು ಹೇಗೆ ಬೆಂಬಲಿಸುತ್ತವೆ?
5 ಸಾ. ಶ. ಎರಡನೇ ಶತಮಾನದ ಲೇಖಕನಾದ ಐರೀನೆಯಸನು, ಅವನ ಕಾಲದ ಕೆಲವರಿಗನುಸಾರ, ರೋಮಾಪುರ 13:1ರಲ್ಲಿ ಪೌಲನು ಮಾತಾಡಿದ್ದು “ಅದೃಶ್ಯ ಅಧಿಪತಿಗಳ [ಅಥವಾ] ದೇವದೂತ ಅಧಿಕಾರಗಳ ಕುರಿತು,” ಎಂದು ಹೇಳುತ್ತಾನೆ. ಆದರೆ ಸ್ವತಃ ಐರೀನೆಯಸನು ತಾನೇ ಮೇಲಧಿಕಾರಿಗಳನ್ನು, “ಸಾಕ್ಷತ್ ಮಾನವ ಅಧಿಕಾರಿಗಳು” ಎಂಬ ನೋಟದಿಂದ ನೋಡಿದ್ದನು. ಪೌಲನ ಮಾತುಗಳ ಪೂರ್ವಾಪರ ವಚನಗಳು, ಐರೀನೆಯಸನ ದೃಷ್ಟಿಕೋನ ಸರಿ ಎಂದು ತೋರಿಸುತ್ತವೆ. ಪೌಲನು ರೋಮಾಪುರ 12ನೇ ಅಧ್ಯಾಯದ ಸಮಾಪ್ತಿಯ ವಚನಗಳಲ್ಲಿ, ಕ್ರೈಸ್ತರು “ಎಲ್ಲರ” ಸಂಗಡ ಹೇಗೆ ನಡೆದುಕೊಳ್ಳಬೇಕು ಮತ್ತು ‘ವೈರಿ’ಗಳನ್ನು ಸಹಾ ಹೇಗೆ ಪ್ರೀತಿ ಮತ್ತು ಪರಿಗಣನೆಯಿಂದ ಉಪಚರಿಸಬೇಕು ಎಂದು ವಿವರಿಸುತ್ತಾನೆ. (ರೋಮಾಪುರ 12:17-21) “ಎಲ್ಲರ” ಸಂಗಡ ಎಂಬ ಹೇಳಿಕೆಯು, ಕ್ರೈಸ್ತ ಸಭೆಯ ಹೊರಗಿನ ಜನರಿಗೆ ಅನ್ವಯಿಸುತ್ತದೆಂಬದು ಸ್ಪಷ್ಟ. ಹೀಗೆ, ಪೌಲನು ಚರ್ಚಿಸುತ್ತಾ ಹೋದ “ಮೇಲಧಿಕಾರಿಗಳು” ಸಹಾ ಕ್ರೈಸ್ತ ಸಭೆಯ ಹೊರಗಿನವರೇ ಆಗಿರಬೇಕು. ಇದಕ್ಕೆ ಹೊಂದಿಕೆಯಲ್ಲಿ, ವಿವಿಧ ಭಾಷಾಂತರಗಳು ರೋಮಾಪುರ 13:1ರ ಪೂರ್ವಾರ್ಧವನ್ನು ಹೇಗೆ ತರ್ಜುಮೆ ಮಾಡಿವೆಯೆಂದು ಗಮನಿಸಿರಿ: “ಪ್ರತಿಯೊಬ್ಬನು ರಾಜ್ಯ ಅಧಿಕಾರಿಗಳಿಗೆ ವಿಧೇಯರಾಗಲೇ ಬೇಕು.” (ಟುಡೇಸ್ ಇಂಗ್ಲಿಷ್ ವರ್ಷನ್); “ಪ್ರತಿಯೊಬ್ಬನೂ ತನ್ನನ್ನು ಆಳುವ ಅಧಿಕಾರಿಗಳಿಗೆ ಅಧೀನಪಡಿಸಿಕೊಳ್ಳಬೇಕು.” (ನ್ಯೂ ಇಂಟರ್ನೇಶನಲ್ ವರ್ಷನ್); “ಪ್ರತಿಯೊಬ್ಬನು ನಗರಾಧಿಕಾರಿಗಳಿಗೆ ವಿಧೇಯರಾಗಲೇ ಬೇಕು.”—ಫಿಲಿಪ್ಸ್’ ನ್ಯೂ ಟೆಸ್ಟಮೆಂಟ್ ಇನ್ ಮಾಡರ್ನ್ ಇಂಗ್ಲಿಷ್.
6. ತೆರಿಗೆಗಳನ್ನು ಮತ್ತು ಕಂದಾಯಗಳನ್ನು ಸಲ್ಲಿಸುವ ವಿಷಯದಲ್ಲಿ ಪೌಲನ ಮಾತುಗಳು, ಮೇಲಧಿಕಾರಿಗಳು ಐಹಿಕ ಅಧಿಕಾರಿಗಳಾಗಿರಲೇ ಬೇಕೆಂಬದನ್ನು ಹೇಗೆ ತೋರಿಸುತ್ತವೆ?
6 ಈ ಅಧಿಕಾರಿಗಳು ತೆರಿಗೆಯನ್ನು ಮತ್ತು ಕಂದಾಯವನ್ನು ಎತ್ತುತ್ತಾರೆ ಎಂದು ಪೌಲನು ಹೇಳಿದ್ದಾನೆ. (ರೋಮಾಪುರ 13:6, 7) ಕ್ರೈಸ್ತ ಸಭೆಯು ಕಂದಾಯ ಮತ್ತು ತೆರಿಗೆಯನ್ನು ಕೇಳುವುದಿಲ್ಲ; ಯೆಹೋವನಾಗಲಿ ಯೇಸುವಾಗಲಿ ಇಲ್ಲವೇ ಬೇರೆ ಯಾವನೇ “ಅದೃಶ್ಯ ಅಧಿಪತಿಗಳಾಗಲಿ” ಅದನ್ನು ಕೇಳುವುದಿಲ್ಲ. (2 ಕೊರಿಂಥ 9:7) ಐಹಿಕ ಅಧಿಕಾರಿಗಳಿಗೆ ಮಾತ್ರ ತೆರಿಗೆಯನ್ನು ಕೊಡಲಾಗುತ್ತದೆ. ಇದಕ್ಕೆ ಹೊಂದಿಕೆಯಲ್ಲಿ, ರೋಮಾಪುರ 13:7ರಲ್ಲಿ ಉಪಯೋಗಿಸಲ್ಪಟ್ಟ “ತೆರಿಗೆ” ಮತ್ತು “ಕಂದಾಯ”ದ ಗ್ರೀಕ್ ಪದವು ವಿಶಿಷ್ಟವಾಗಿ ರಾಜ್ಯಕ್ಕೆ ಸಲ್ಲಿಸಿದ ಹಣಕ್ಕೆ ನಿರ್ದೇಶಿಸುತ್ತದೆ.a
7, 8. (ಎ)ಕ್ರೈಸ್ತರು ಈ ಲೋಕದ ರಾಜಕೀಯ ಅಧಿಕಾರಿಗಳಿಗೆ ಅಧೀನರಾಗಿರಬೇಕೆಂಬ ನೋಟದಲ್ಲಿ ಬೇರೆ ಬೇರೆ ವಚನಗಳು ಹೇಗೆ ಹೊಂದಿಕೆಯಾಗಿವೆ? (ಬಿ) ಯಾವಾಗ ಮಾತ್ರವೇ ಕ್ರೈಸ್ತನು “ಅಧಿಕಾರಿಗಳ” ಅಪ್ಪಣೆಗಳಿಗೆ ಸಮ್ಮತಿಸಲಾರನು?
7 ಅದಲ್ಲದೆ, ಮೇಲಧಿಕಾರಿಗಳಿಗೆ ಅಧೀನರಾಗಿರಿ ಎಂಬ ಪೌಲನ ಬುದ್ಧಿವಾದವು, “ಕೈಸರನದನ್ನು ಕೈಸರನಿಗೆ” ಕೊಡುವ ಯೇಸುವಿನ ಆಜ್ಞೆಯೊಂದಿಗೆ ಹೊಂದಿಕೆಯಲ್ಲಿದೆ; ಇಲ್ಲಿ “ಕೈಸರ”ನು ಐಹಿಕ ಅಧಿಕಾರವನ್ನು ಪ್ರತಿನಿಧೀಕರಿಸುತ್ತಾನೆ. (ಮತ್ತಾಯ 22:21) ಪೌಲನು ತದನಂತರ ತೀತನಿಗೆ ಹೇಳಿದ ಮಾತುಗಳಿಗೂ ಅದು ಹೊಂದಿಕೆಯಲ್ಲಿದೆ: “ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಸಕಲ ಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಬೇಕೆಂತಲೂ ಅವರಿಗೆ ಜ್ಞಾಪಕ ಕೊಡು.” (ತೀತ 3:1) ಆದ ಕಾರಣ, ಸಮಾಜ ಸೇವೆಯ ಕಾರ್ಯಗಳಲ್ಲಿ ಭಾಗಿಗಳಾಗುವಂತೆ ಸರಕಾರಗಳಿಂದ ಕ್ರೈಸ್ತರು ಆಜ್ಞಾಪಿಸಲ್ಪಡುವಾಗ ಅವರು ತೀರ ಯೋಗ್ಯವಾಗಿಯೇ ಸಮ್ಮತಿಸುತ್ತಾರೆ. ಆದರೆ, ಎಷ್ಟರ ವರೆಗೆ ಆ ಕ್ರಿಯೆಗಳು ಕೆಲವು ಅಶಾಸ್ತ್ರೀಯ ಸೇವೆಗೆ ಒಪ್ಪಂದಕ ಬದಲಿಯಾಗಿ ಕಂಡುಬರುವುದಿಲ್ಲವೋ ಅಥವಾ, ಯೆಶಾಯ 2:4ರಲ್ಲಿ ಕಂಡು ಬರುವ ಶಾಸ್ತ್ರೀಯ ತತ್ವಗಳಂಥವನ್ನು ಉಲ್ಲಂಘಿಸುವುದಿಲ್ಲವೋ, ಅಷ್ಟರ ತನಕ.
8 ನಾವು ಈ ಲೋಕದ ಐಹಿಕ ಅಧಿಕಾರಿಗಳಿಗೆ ಅಧೀನರಾಗಿರಬೇಕು ಎಂಬದನ್ನು ದೃಢೀಕರಿಸುವಾಗ, ಪೇತ್ರನು ಸಹಾ ಅಂದದ್ದು: “ಮನುಷ್ಯ ಸೃಷ್ಟಿಯ ಯಾವ ಅಧಿಕಾರಕ್ಕಾದರೂ ಕರ್ತನ ನಿಮಿತ್ತ ಅಧೀನರಾಗಿರಿ. ಅರಸನು ಸರ್ವಾಧಿಕಾರಿ ಎಂತಲೂ ಬೇರೆ ಅಧಿಪತಿಗಳು ಕೆಟ್ಟವರನ್ನು ದಂಡಿಸುವುದಕ್ಕೆ ಒಳ್ಳೆಯವರನ್ನು ಹೊಗಳುವುದಕ್ಕೆ ಅರಸನಿಂದ ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆ ಅಧೀನರಾಗಿರಿ.” (1 ಪೇತ್ರ 2:13, 14, NW) ಇದಕ್ಕೆ ಹೊಂದಿಕೆಯಲ್ಲಿ, ತಿಮೊಥಿಗೆ ಪೌಲನು ಕೊಟ್ಟ ಬುದ್ಧಿವಾದವನ್ನು ಸಹಾ ಕ್ರೈಸ್ತರು ಪಾಲಿಸುತ್ತಾರೆ: “ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವೆಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸರುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು.”b—1 ತಿಮೊಥಿ 2:1, 2.
9. ಮಾನವ ಅಧಿಕಾರಿಗಳನ್ನು “ಮೇಲಿನ” ಅಧಿಕಾರಿಗಳೆಂದು ನಿರ್ದೇಶಿಸುವುದು ಯೆಹೋವನ ಮಹಿಮೆಗೆ ಕಡಿಮೆಯಾಗಲಾರದೇಕೆ?
9 ಐಹಿಕ ಅಧಿಕಾರಿಗಳನ್ನು “ಮೇಲಧಿಕಾರಿಗಳು” ಎಂದು ಕರೆಯುವುದರಲ್ಲಿ ನಾವು ಯೆಹೋವನಿಗೆ ಸಲ್ಲತಕ್ಕ ಗೌರವದಿಂದ ತುಸುವಾದರೂ ಕಡಿಮೆ ಮಾಡುತ್ತೇವೋ? ಇಲ್ಲ, ಯಾಕೆಂದರೆ ಯೆಹೋವನು ಬರೇ ಮೇಲಧಿಕಾರಿಯಲ್ಲ, ಅದಕ್ಕಿಂತಲೂ ಎಷ್ಟೋ ಉನ್ನತನು. ಆತನು “ಸಾರ್ವಭೌಮ ಕರ್ತನು,” “ಸರ್ವಶ್ರೇಷ್ಠನು.” (ಕೀರ್ತನೆ 73:28; ದಾನಿಯೇಲ 7:18, 22, 25, 27; ಪ್ರಕಟನೆ 4:11; 6:10) ಮಾನವ ಅಧಿಕಾರಿಗಳಿಗೆ ನಮ್ಮ ಯೋಗ್ಯವಾದ ಅಧೀನತೆಯು, ಸರ್ವ ಶ್ರೇಷ್ಠ ಅಧಿಕಾರಿಯಾದ ಸಾರ್ವಭೌಮ ಕರ್ತ ಯೆಹೋವನ ನಮ್ಮ ಭಕ್ತಿಯಿಂದ ಏನನ್ನಾದರೂ ಕಡಿಮೆ ಮಾಡುವುದಿಲ್ಲ. ಹಾಗಾದರೆ, ಈ ಅಧಿಕಾರಿಗಳು ಎಷ್ಟರ ಮಟ್ಟಿಗೆ ಮೇಲಧಿಕಾರಿಗಳಾಗಿದ್ದಾರೆ? ಕೇವಲ ಬೇರೆ ಮಾನವರಿಗೆ ಸಂಬಂಧದಲ್ಲಿ ಮತ್ತು ಅವರ ಸ್ವಂತ ಚಟುವಟಿಕೆಯ ಕ್ಷೇತ್ರದಲ್ಲಿ ಮಾತ್ರ. ಮಾನವ ಸಮಾಜಗಳನ್ನು ಆಳುವುದಕ್ಕೆ ಮತ್ತು ರಕ್ಷಿಸುವುದಕ್ಕೆ ಅವರು ಜವಾಬ್ದಾರರಾಗಿದ್ದಾರೆ ಮತ್ತು ಇದಕ್ಕಾಗಿ ಸಾರ್ವಜನಿಕ ಕಾರ್ಯಾಧಿಗಳ ನಡಾವಳಿಗಾಗಿ ಅವರು ನಿಯಮಗಳನ್ನು ನೇಮಿಸುತ್ತಾರೆ.
“ಅವರವರ ಸಂಬಂಧಕ ಸ್ಥಾನಗಳಲ್ಲಿ ದೇವರಿಂದ ಇಡಲ್ಪಟ್ಟವರು”
10. (ಎ) ಮೇಲಧಿಕಾರಿಗಳನ್ನು ‘ಇಡುವ’ ಕುರಿತು ಪೌಲನ ಹೇಳಿಕೆಯು ಯೆಹೋವನಿರುವ ಸ್ವಂತ ಅಧಿಕಾರದ ಕುರಿತು ಏನನ್ನು ರುಜುಡಿಸುತ್ತದೆ? (ಬಿ) ನಿರ್ದಿಷ್ಟ ಅಧಿಪತಿಗಳನ್ನು ‘ಇಡುವ’ ವಿಷಯದಲ್ಲಿ ಯೆಹೋವನು ಏನನ್ನು ಅನುಮತಿಸಿದ್ದಾನೆ, ಮತ್ತು ಹೀಗೆ, ಅವನ ಸೇವಕರು ಹೇಗೆ ಪರೀಕ್ಷಿಸಲ್ಪಟ್ಟಿದ್ದಾರೆ?
10 ಐಹಿಕ ಅಧಿಕಾರಿಗಳ ಮೇಲೆ ಯೆಹೋವ ದೇವರ ಸರ್ವಶ್ರೇಷ್ಠತೆಯು, ಆ ಅಧಿಕಾರಿಗಳು “ಅವರವರ ಸಂಬಂಧಕ ಸ್ಥಾನಗಳಲ್ಲಿ ದೇವರಿಂದ ಇಡಲ್ಪಟ್ಟವ” ರಾಗಿರುವುದರಿಂದಲೂ ತೋರಿಸಲ್ಪಟ್ಟಿದೆ. ಆದರೂ ಈ ಹೇಳಿಕೆಯು ಒಂದು ಪ್ರಶ್ನೆಯನ್ನು ಎಬ್ಬಿಸುತ್ತದೆ. ಪೌಲನು ಈ ಮಾತುಗಳನ್ನು ಬರೆದು ಕೆಲವು ವರ್ಷಗಳಾದನಂತರ ರೋಮನ್ ಚಕ್ರವರ್ತಿ ನೀರೋ ಕ್ರೈಸ್ತರ ವಿರುದ್ಧವಾಗಿ ಉಗ್ರ ಹಿಂಸೆಯ ಒಂದು ಚಳುವಳಿಯನ್ನು ಬಡಿದೆಬ್ಬಿಸಿದನು. ನೀರೋವನ್ನು ದೇವರು ವೈಯಕ್ತಿಕವಾಗಿ ಆ ಸ್ಥಾನದಲ್ಲಿ ಇಟ್ಟನೋ? ಇಲ್ಲವೇ ಇಲ್ಲ! ಪ್ರತಿಯೊಬ್ಬ ಅಧಿಪತಿಯು ವ್ಯಕ್ತಿಶಃ ದೇವರಿಂದ ಆರಿಸಲ್ಪಟ್ಟು, “ದೇವಾನುಗ್ರಹದಿಂದ” ಆ ಸ್ಥಾನದಲ್ಲಿ ಇಡಲ್ಪಟ್ಟಿದ್ದಾರೆ ಎಂದಿದರ ಅರ್ಥವಲ್ಲ. ನಿಜವಾಗಿ ಹೇಳುವುದಾದರೆ, ಕೆಲವು ಸಾರಿ ನಿಷ್ಕರುಣೆಯ ಮನುಷ್ಯರನ್ನು ಅಧಿಪತಿಗಳ ಸ್ಥಾನಕ್ಕೇರಿಸುವ ಯುಕ್ತಿಹೂಡುವವನು ಸೈತಾನನು, ಮತ್ತು ಯೆಹೋವನು ಅದನ್ನು, ಮತ್ತು ಅದರೊಂದಿಗೆ ಆ ಅಧಿಪತಿಗಳು ತನ್ನ ಸಮಗ್ರತೆ-ಪಾಲಕ ಸೇವಕರ ಮೇಲೆ ತರಬಹುದಾದ ಪರೀಕ್ಷೆಗಳನ್ನು ಅನುಮತಿಸುತ್ತಾನೆ.—ಯೋಬ 2:2-10 ಹೋಲಿಸಿ.
11, 12. ಐಹಿಕ ಅಧಿಕಾರಿಗಳನ್ನು ಅವರ ಸ್ಥಾನದೊಳಗೆ ಅಥವಾ ಹೊರಗೆ ಹಾಕಲು ಯೆಹೋವನು ವೈಯಕ್ತಿಕವಾಗಿ ಎಲ್ಲಿ ಹಸ್ತ ಕ್ಷೇಪ ನಡಿಸಿದನೋ ಆ ಕೆಲವು ದಾಖಲೆಗಳು ಯಾವುವು?
11 ಆದರೂ ಯೆಹೋವನು, ತನ್ನ ಮಹತ್ತಾದ ಉದ್ದೇಶಗಳ ಪೂರೈಕೆಗಾಗಿ ಕೆಲವು ನಿರ್ದಿಷ್ಟ ಅಧಿಪತಿಗಳ ಅಥವಾ ಸರಕಾರಗಳ ವಿಷಯದಲ್ಲಿ ವ್ಯಕ್ತಿಪರ ಹಸ್ತಕ್ಷೇಪವನ್ನು ಮಾಡಿದ್ದಾನೆ. ಉದಾಹರಣೆಗಾಗಿ, ಅಬ್ರಹಾಮನ ಕಾಲದಲ್ಲಿ ಕಾನಾನ್ಯರು ಕಾನಾನ್ ದೇಶದಲ್ಲಿ ಉಳಿಯುವಂತೆ ದೇವರು ಬಿಟ್ಟಿದ್ದನು. ಆದರೆ, ತದನಂತರ, ಅವರನ್ನು ಕಿತ್ತುಹಾಕಿ, ಅಬ್ರಹಾಮನ ಸಂತಾನದವರಿಗೆ ಆ ದೇಶವನ್ನು ಕೊಟ್ಟನು. ಇಸ್ರಾಯೇಲ್ಯರ ಅರಣ್ಯ ಪ್ರಯಾಣದಲ್ಲಿ ಯೆಹೋವನು, ಅಮ್ಮೋನ್, ಮೋವಾಬ್ ಮತ್ತು ಸೆಯೀರ್ ಬೆಟ್ಟಪ್ರಾಂತ್ಯವನ್ನು ಸೋಲಿಸುವಂತೆ ಬಿಡಲಿಲ್ಲ. ಆದರೆ ಸೀಹೋನ್ ಮತ್ತು ಓಗನ ರಾಜ್ಯಗಳನ್ನು ಮಾತ್ರ ಧ್ವಂಸಮಾಡುವಂತೆ ಆಜ್ಞಾಪಿಸಿದ್ದನು.—ಆದಿಕಾಂಡ 15:18-21; 24:37; ವಿಮೋಚನಕಾಂಡ 34:11; ಧರ್ಮೋಪದೇಶಕಾಂಡ 2:4, 5, 9, 19, 24; 3:1, 2.
12 ಇಸ್ರಾಯೇಲ್ಯರು ಕಾನಾನ್ ದೇಶದಲ್ಲಿ ವಸತಿ ಮಾಡಿದ ನಂತರ ಯೆಹೋವನು, ತನ್ನ ಜನರ ಮೇಲೆ ಪರಿಣಾಮ ಮಾಡಿದ ಅಧಿಕಾರಿಗಳಲ್ಲಿ ನೇರವಾದ ಅಭಿರುಚಿಯನ್ನು ತಕ್ಕೊಳ್ಳುತ್ತಾ ಹೋದನು. ಕೆಲವೊಮ್ಮೆ ಇಸ್ರಾಯೇಲ್ಯರು ಪಾಪ ಮಾಡಿದಾಗ ಯೆಹೋವನು ಅವರನ್ನು ವಿಧರ್ಮಿ ಅಧಿಕಾರದ ಕೆಳಗೆ ತಂದನು. ಅವರು ಪಶ್ಚಾತ್ತಾಪ ಪಟ್ಟಾಗ ಯೆಹೋವನು ಆ ಅಧಿಕಾರವನ್ನು ದೇಶದಿಂದ ತೆಗೆದು ಹಾಕಿದನು. (ನ್ಯಾಯಸ್ಥಾಪಕರು 2:11-23) ಕಟ್ಟಕಡೆಗೆ, ಅವನು ಯೆಹೂದವನ್ನು ಬೇರೆ ಅನೇಕ ರಾಷ್ಟ್ರಗಳೊಂದಿಗೆ, ಬಬಿಲೋನಿನ ಅಧಿಕಾರದ ಕೆಳಗೆ ಹಾಕಿದನು. (ಯೆಶಾಯ 14:28–19:17; 23:1-12; 39:5-7) ಇಸ್ರಾಯೇಲು ಬಾಬೆಲಿನ ಬಂಧೀವಾಸದ ಕೆಳಗೆ ಬಿದ್ದ ನಂತರ ಯೆಹೋವನು, ಬಬಿಲೋನಿನ ಕಾಲದಿಂದ ನಮ್ಮೀ ಸಮಯದ ತನಕ ತನ್ನ ಜನರನ್ನು ಪರಿಣಮಿಸುವ ಲೋಕಶಕ್ತಿಗಳ ಏಳಿಕೆ ಮತ್ತು ಬೀಳಿಕ್ವೆಗಳನ್ನು ಮುಂತಿಳಿಸಿದನು.—ದಾನಿಯೇಲ ಅಧ್ಯಾಯ 2, 7, 8, ಮತ್ತು 11.
13. (ಎ)ಮೋಶೆಯ ಹಾಡಿಗೆ ಅನುಸಾರವಾಗಿ, ಯೆಹೋವನು ಜನರ ಮೇರೆಗಳನ್ನು ವಿಧಿಸಿದ್ದೇಕೆ? (ಬಿ) ಅನಂತರ ದೇವರು ಇಸ್ರಾಯೇಲನ್ನು ಅದರ ದೇಶಕ್ಕೆ ಪುನಃಸ್ಥಾಪಿಸಿದ್ದೇಕೆ?
13 ಮೋಶೆಯು ಯೆಹೋವನ ಕುರಿತು ಹಾಡಿದ್ದು: “ಪರಾತ್ಪರನಾದ ದೇವರು ಜನಾಂಗಗಳನ್ನು ಬೇರೆ ಬೇರೆ ಮಾಡಿ ಅವರವರಿಗೆ ಸ್ವದೇಶಗಳನ್ನು ನೇಮಿಸಿಕೊಟ್ಟಾಗ ಇಸ್ರಾಯೇಲ್ಯರ ಸಂಖ್ಯೆಗೆ ತಕ್ಕಂತೆ ಆಯಾ ಜನಾಂಗಕ್ಕೆ ಒಂದೊಂದು ಪ್ರದೇಶವನ್ನು ಗೊತ್ತುಮಾಡಿದ್ದೂ; ಇಸ್ರಾಯೇಲ್ಯರು ಮಾತ್ರ ಯೆಹೋವನ ಸ್ವಂತ ಜನರಾದದ್ದೂ; ಯಾಕೋಬ್ ವಂಶಸ್ಥರು ಆತನಿಗೆ ಸಕ್ವೀಯ ಪ್ರಜೆಯಾದದ್ದು.” (ಧರ್ಮೋಪದೇಶಕಾಂಡ 32:8, 9; ಇದಕ್ಕೆ ಅಪೊಸ್ತಲರ ಕೃತ್ಯಗಳು 17:26 ಹೋಲಿಸಿ.) ಹೌದು, ತನ್ನ ಉದ್ದೇಶಗಳ ನಿರ್ವಹಣೆಗಾಗಿ ದೇವರು, ಯಾವ ಅಧಿಕಾರಗಳು ಉಳಿಯಬೇಕು ಮತ್ತು ಯಾವ ಅಧಿಕಾರಗಳು ನಾಶವಾಗಬೇಕು ಎಂಬದನ್ನು ಅಲ್ಲಿ ವಿಧಿಸಿದನು. ಈ ರೀತಿಯಲ್ಲಿ ಆತನು, ಅಬ್ರಹಾಮನ ಸಂತಾನಕ್ಕೆ ಒಂದು ದೇಶವನ್ನು ಬಾಧ್ಯತೆಯಾಗಿ ಗೊತ್ತುಮಾಡಿದ್ದೂ ಮತ್ತು ಅನಂತರ ಅವರನ್ನು ಆ ದೇಶಕ್ಕೆ ಪುನಃಸ್ಥಾಪಿಸಿದ್ದೂ ಏಕೆಂದರೆ ಕೊನೆಗೆ, ಪ್ರವಾದಿಸಿದ ಪ್ರಕಾರವೇ, ವಾಗ್ದತ್ತ ಸಂತಾನವು ಅಲ್ಲಿ ತೋರಿಬರುವಂತೆಯೇ.—ದಾನಿಯೇಲ 9:25, 26; ಮೀಕ 5:2.
14. ಹೆಚ್ಚಿನ ಸಂದರ್ಭಗಳಲ್ಲಿ ಯೆಹೋವನು ಮಾನವ ಅಧಿಕಾರಿಗಳನ್ನು ಅವರವರ ಸಂಬಂಧಕ ಸ್ಥಾನಗಳಲ್ಲಿ ಇಡುವುದು ಯಾವ ಅರ್ಥದಲ್ಲಿ?
14 ಆದರೂ ಹೆಚ್ಚಿನ ಸಂದರ್ಭಗಳಲ್ಲಿ ಯೆಹೋವನು, ಅಧಿಪತಿಗಳನ್ನು ಅವರವರ ಸಂಬಂಧಕ ಸ್ಥಾನದಲ್ಲಿಡುವುದು, ಮಾನವರು ಒಬ್ಬರಿಗೊಬ್ಬರು ಸಂಬಂಧಕವಾದ ಅಧಿಕಾರ ಸ್ಥಾನಗಳನ್ನು ತಕ್ಕೊಳ್ಳುವಂತೆ ಬಿಟ್ಟುಕೊಡುವ ಅರ್ಥದಲ್ಲಿಯೇ; ಆದರೆ ಯಾವಾಗಲೂ ಆತನಿಗೆ ಕೆಳದರ್ಜೆಯಲ್ಲಿ. ಹೀಗೆ, ಯೇಸು ಪೊಂತ್ಯ ಪಿಲಾತನ ಮುಂದೆ ನಿಂತಿದ್ದಾಗ ಅವನು ಆ ಅಧಿಪತಿಗಂದದ್ದು: “ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ.” (ಯೋಹಾನ 19:11) ಇದರ ಅರ್ಥ ಪಿಲಾತನು ದೇವರಿಂದ ವೈಯಕ್ತಿಕವಾಗಿ ಆ ಸ್ಥಾನದಲ್ಲಿ ಇಡಲ್ಪಟ್ಟಿದ್ದನೆಂದು ಅಲ್ಲ. ಯೇಸುವಿನ ಮೇಲೆ ಜೀವ ಮತ್ತು ಮರಣದ ಅಧಿಕಾರ ಅವನಿಗಿದ್ದದ್ದು ದೇವರ ಅನುಮತಿಯಿಂದ ಮಾತ್ರವೇ ಎಂದದರ ಅರ್ಥವಾಗಿತ್ತು.
“ಈ ವಿಷಯಗಳ ವ್ಯವಸ್ಥೆಯ ದೇವರು”
15. ಯಾವ ರೀತಿಯಲ್ಲಿ ಸೈತಾನನು ಈ ಲೋಕದಲ್ಲಿ ಅಧಿಕಾರವನ್ನು ಚಲಾಯಿಸುತ್ತಿದ್ದಾನೆ?
15 ಹಾಗಾದರೆ, ಈ ಪ್ರಪಂಚದ ದೇವರು ಅಥವಾ ಇಹಲೋಕಾಧಿಪತಿಯಾದ ಸೆತಾನನ ಕುರಿತೇನು? (ಯೋಹಾನ 12:31; 2 ಕೊರಿಂಥ 4:4) ಅವನು ಯೇಸುವಿಗೆ ಲೋಕದ ರಾಜ್ಯಗಳನ್ನೆಲ್ಲಾ ತೋರಿಸಿ, “ಇವೆಲ್ಲವುಗಳ ಅಧಿಕಾರವನ್ನು . . . ನಿನಗೆ ಕೊಡುವೆನು. ಇದೆಲ್ಲಾ ನನಗೆ ಕೊಟ್ಟದೆ. ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ” ಎಂದು ಸೈತಾನನು ಕೊಚ್ಚಿಕೊಂಡ ವಿಷಯದಲ್ಲಿ ನಿಶ್ಚಯವಾಗಿ ಏನು? (ಲೂಕ 4:6) ಸೈತಾನನ ಬಡಾಯಿಯನ್ನು ಯೇಸು ಅಲ್ಲವೆನ್ನಲಿಲ್ಲ. ಮತ್ತು ಸೈತಾನನ ಆ ಮಾತುಗಳು, ಪೌಲನು ಅನಂತರ ಎಫೆಸದವರಿಗೆ ಏನು ಬರೆದನೋ ಅದಕ್ಕೆ ಹೊಂದಿಕೆಯಲ್ಲಿವೆ: “ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡ ಮಾತ್ರವಲ್ಲ. ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದ ದುರಾತ್ಮ ಸೇನೆಗಳ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.” (ಎಫೆಸ 6:12) ಅಷ್ಟಲ್ಲದೆ ಪ್ರಕಟನೆ ಪುಸ್ತಕವು, ಸೈತಾನನನ್ನು ಮಹಾ ಘಟಸರ್ಪನೋಪಾದಿ, ಭೂಲೋಕದ ರಾಜಕೀಯ ವ್ಯವಸ್ಥೆಯಾದ ಒಂದು ಸಾಂಕೇತಿಕ ಮೃಗಕ್ಕೆ, “ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟ”ವನಾಗಿ ಚಿತ್ರಿಸುತ್ತದೆ.—ಪ್ರಕಟನೆ 13:2.
16. (ಎ) ಸೈತಾನನ ಅಧಿಕಾರವು ಸೀಮಿತವಾದದ್ದು ಎಂಬದನ್ನು ಹೇಗೆ ಕಾಣಬಹುದು? (ಬಿ) ಮಾನವ ಕುಲದ ಮೇಲೆ ಅಧಿಕಾರ ನಡಿಸುವುದಕ್ಕೆ ಸೈತಾನನಿಗೆ ಯೆಹೋವನು ಅನುಮತಿ ಕೊಡುವುದೇಕೆ?
16 ಆದರೂ, ಸೈತಾನನು ಯೇಸುವಿಗೆ ನುಡಿದ ಮಾತುಗಳಾದ, “ಎಲ್ಲಾ ಅಧಿಕಾರಗಳು . . . ನನಗೆ ಕೊಟ್ಟದೆ” ಎಂಬದು, ಅವನು ಸಹಾ ಅನುಮತಿಯಿಂದ ಮಾತ್ರವೇ ಅಧಿಕಾರ ಚಲಾಯಿಸುತ್ತಿದ್ದಾನೆಂದು ತೋರಿಸುತ್ತದೆ. ದೇವರು ಅವನಿಗೆ ಈ ಅನುಮತಿಯನ್ನು ಕೊಡುವುದೇಕೆ? ಇಹಲೋಕಾಧಿಪತಿಯೋಪಾದಿ ಸೈತಾನನ ಈ ಕೆಲಸವು ಹಿಂದೆ ಏದೇನಿನಲ್ಲಿ, ಅವನು ದೇವರನ್ನು ಸುಳ್ಳುಗಾರನೆಂದೂ ತನ್ನ ಸಾರ್ವಭೌಮತ್ವವನ್ನು ಅನ್ಯಾಯವಾಗಿ ನಡಿಸುವಾತನೆಂದೂ ಬಹಿರಂಗವಾಗಿ ದೂರಿದಾಗಲೇ ಆರಂಭಿಸಿತ್ತು. (ಆದಿಕಾಂಡ 3:1-6) ಆದಾಮ ಮತ್ತು ಹವ್ವರು ಸೈತಾನನನ್ನು ಹಿಂಬಾಲಿಸಿದರು ಮತ್ತು ಯೆಹೋವನಿಗೆ ಅವಿಧೇಯರಾದರು. ಆ ಬಿಂದುವಲ್ಲೇ ಯೆಹೋವನು, ಪರಿಪೂರ್ಣ ನ್ಯಾಯಪರತೆಯಲ್ಲಿ, ಸೈತಾನನನ್ನು ಮತ್ತು ಅವನ ಇಬ್ಬರು ಹೊಸ ಹಿಂಬಾಲಕರನ್ನು ಸಂಹರಿಸಶಕ್ತನಿದ್ದನು. (ಆದಿಕಾಂಡ 2:16, 17) ಆದರೆ ಸೈತಾನನ ಮಾತುಗಳು ಯೆಹೋವನಿಗೆ ನಿಜವಾಗಿ ವ್ಯಕ್ತಿಪರ ಪಂಥಾಹ್ವಾನವಾಗಿತ್ತು. ಹೀಗೆ ದೇವರು ತನ್ನ ವಿವೇಕದಿಂದ ಸೈತಾನನನ್ನು ಕೆಲವು ಕಾಲ ಜೀವಿಸುವಂತೆ ಬಿಟ್ಟನು, ಮತ್ತು ಆದಾಮ ಮತ್ತು ಹವ್ವರು ಅವರು ಸಾಯುವ ಮುಂಚೆ ತಮ್ಮ ಸಂತಾನವನ್ನು ಹುಟ್ಟಿಸುವಂತೆ ಅನುಮತಿಸಿದನು. ಈ ರೀತಿಯಲ್ಲಿ ದೇವರು, ಸೈತಾನನ ಪಂಥಾಹ್ವಾನದ ಸುಳ್ಳು ಪ್ರದರ್ಶಿಸಲ್ಪಡುವಂತೆ ಸಮಯವನ್ನೂ, ಸಂದರ್ಭವನ್ನೂ ಒದಗಿಸಿದನು.—ಆದಿಕಾಂಡ 3:15-19.
17, 18. (ಎ) ಸೈತಾನನು ಈ ಲೋಕದ ದೇವರು ಎಂದು ನಾವು ಹೇಳುವುದೇಕೆ? (ಬಿ) ಈ ಲೋಕದಲ್ಲಿ “ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವುದಿಲ್ಲ” ಯಾವ ರೀತಿಯಲ್ಲಿ?
17 ಏದೆನಿನಿಂದ ಹಿಡಿದು ನಡೆದ ಘಟನಾವಳಿಗಳು ಸೈತಾನನ ದೋಷಾರೋಪಗಳು ಶುದ್ಧ ಸುಳ್ಳೆಂಬದನ್ನು ಖಚಿತಪಡಿಸಿವೆ. ಆದಾಮನ ಸಂತತಿಯವರು ಸೈತಾನ-ಆಳಿಕೆಯ ಕೆಳಗಾಗಲಿ ಅಥವಾ ಮಾನವ-ಆಳಿಕೆಯ ಕೆಳಗಾಗಲಿ ಸಂತೋಷವನ್ನು ಕಂಡಿರುವುದಿಲ್ಲ. (ಪ್ರಸಂಗಿ 8:9) ಮತ್ತೊಂದು ಕಡೆ, ತನ್ನ ಸ್ವಂತ ಜನರೊಂದಿಗೆ ದೇವರ ವ್ಯವಹಾರವಾದರೋ, ದೇವರ ಆಳಿಕೆಯ ಶ್ರೇಷ್ಠತೆಯನ್ನು ಪ್ರದರ್ಶಿಸಿರುತ್ತದೆ. (ಯೆಶಾಯ 33:22) ಆದರೆ ಆದಾಮನ ಸಂತಾನದ ಹೆಚ್ಚಿನವರು ಯೆಹೋವನ ಸರ್ವಾಧಿಪತ್ಯವನ್ನು ಸ್ವೀಕರಿಸುವುದಿಲ್ಲವಾದ್ದರಿಂದ, ತಿಳಿದೋ ಅಥವಾ ತಿಳಿಯದೆಯೋ, ಸೈತಾನನನ್ನು ತಮ್ಮ ದೇವರಾಗಿ ಅವರು ಸೇವಿಸುತ್ತಾರೆ.—ಕೀರ್ತನೆ 14:1; 1 ಯೋಹಾನ 5:19.
18 ಬೇಗನೇ, ಏದೆನಿನಲ್ಲಿ ಎಬ್ಬಿಸಲ್ಪಟ್ಟ ಪ್ರಶ್ನೆಗಳು ಬಗೆಹರಿಸಲ್ಪಡುವವು. ದೇವರ ರಾಜ್ಯವು ಮಾನವ ಕಾರ್ಯಾಧಿಗಳ ಮೇಲ್ವಿಚಾರವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವುದು ಮತ್ತು ಸೈತಾನನು ಅಧೋಲೋಕಕ್ಕೆ ಹಾಕಲ್ಪಡುವನು. (ಯೆಶಾಯ 11:1-5; ಪ್ರಕಟನೆ 20:1-6) ಆದರೂ, ಈ ಮಧ್ಯೆ ಮಾನವ ಕುಲದ ನಡುವೆ, ಒಂದು ಕ್ರಮಯುಕ್ತ ಜೀವಿತವು ಶಕ್ಯವಾಗುವಂತೆ, ಒಂದು ರೀತಿಯ ಏರ್ಪಾಡು ಅಥವಾ ರಚನೆಯು ಅವಶ್ಯವಾಗಿತ್ತು. ಯೆಹೋವನು “ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.” (1 ಕೊರಿಂಥ 14:33) ಆದ ಕಾರಣ, ಏದೆನಿನ ಹೊರಗೆ ವಿಕಸನಗೊಂಡ ಸಮಾಜಗಳಲ್ಲಿ ಅಧಿಕಾರದ ಏರ್ಪಾಡುಗಳು ಅಸ್ತಿತ್ವಕ್ಕೆ ಬರುವಂತೆ ಆತನು ಬಿಟ್ಟನು ಮತ್ತು ಈ ಏರ್ಪಾಡಿನಲ್ಲಿ ಮನುಷ್ಯರು ಅಧಿಕಾರ ನಡೆಸುವಂತೆ ಅನುಮತಿಸಿದನು. ಈ ರೀತಿಯಲ್ಲಿ, “ದೇವರಿಂದ ಹೊರತು ಯಾವ ಅಧಿಕಾರವೂ ಇರುವುದಿಲ್ಲ.”
ನ್ಯಾಯಪರ ಅಧಿಕಾರಿಗಳು
19. ಪ್ರತಿಯೊಬ್ಬ ಮಾನವ ಅಧಿಪತಿಯೂ ಸೈತಾನನ ನೇರವಾದ ಹತೋಟಿಯ ಕೆಳಗಿದಾನ್ದೋ?
19 ಏದೆನಿನಿಂದ ಹಿಡಿದು ಸೈತಾನನಿಗೆ ಮಾನವ ಕುಲದ ನಡುವೆ ವಿಸ್ತಾರ್ಯ ಸ್ವಾತಂತ್ರ್ಯವಿತ್ತು ಮತ್ತು ಅವನು ಯೇಸುವಿನೊಡನೆ ಕೊಚ್ಚಿಕೊಂಡ ಪ್ರಕಾರವೇ, ಅವನೀ ಸ್ವಾತಂತ್ರ್ಯವನ್ನು ಭೂಮಿಯ ಮೇಲೆ ಘಟನಾವಳಿಗಳ ಹಂಚಿಕೆಹೂಡಲು ಉಪಯೋಗಿಸಿದ್ದಾನೆ; (ಯೋಬ 1:7; ಮತ್ತಾಯ 4:1-10) ಆದರೂ, ಈ ಲೋಕದ ಪ್ರತಿಯೊಬ್ಬ ಅಧಿಪತಿಯು ಸೈತಾನನ ಹತೋಟಿಗೆ ನೇರವಾಗಿ ಅಧೀನನಾಗುತ್ತಾನೆಂದು ಇದರ ಅರ್ಥವಲ್ಲ. ಒಂದನೇ ಶತಮಾನದ ನೀರೋ ಮತ್ತು ನಮ್ಮ ಕಾಲದ ಎಡೋಲ್ಫ್ ಹಿಟ್ಲರ್ ಮುಂತಾದ ಕೆಲವರು—ಒಂದು ನಿಜವಾದ ಪೈಶಾಚಿಕ ಆತ್ಮವನ್ನು ಪ್ರದರ್ಶಿಸಿದ್ದರು. ಆದರೆ ಬೇರೆಯವರು ಹಾಗಲ್ಲ. ಸೈಪ್ರಸ್ನ ಸೆರ್ಗ್ಯ ಪೌಲನೆಂಬ ಪ್ರಾಂತಾಧಿಪತಿಯು, “ದೇವರ ವಾಕ್ಯವನ್ನು ಕೇಳಲು ಅಪೇಕ್ಷೆ” ತೋರಿಸಿದ್ದ ಒಬ್ಬ “ಬುದ್ಧಿವಂತ” ವ್ಯಕ್ತಿಯಾಗಿದ್ದನು. (ಅಪೊಸ್ತಲರ ಕೃತ್ಯಗಳು 13:7) ಅಖಾಯದ ಪ್ರಾಂತಾಧಿಕಾರಿ ಗಲ್ಲಿಯೋ, ಪೌಲನ ಮೇಲೆ ದೋಷಾರೋಪ ಹೊರಿಸಿದ್ದ ಯೆಹೂದ್ಯರ ಒತ್ತಾಯಕ್ಕೆ ಬಗ್ಗಲು ನಿರಾಕರಿಸಿದ್ದನು. (ಅಪೊಸ್ತಲರ ಕೃತ್ಯಗಳು 18:12-17) ಬೇರೆ ಅನೇಕ ಅಧಿಪತಿಗಳು ಒಂದು ಮಾನನೀಯ ರೀತಿಯಲ್ಲಿ ತಮ್ಮ ಅಧಿಕಾರವನ್ನು ಮನಸ್ಸಾಕ್ಷಿಪೂರ್ವಕವಾಗಿ ಚಲಾಯಿಸಿರುತ್ತಾರೆ.—ರೋಮಾಪುರ 2:15 ಹೋಲಿಸಿ.
20, 21. ಮಾನವ ಅಧಿಪತಿಗಳು ಯಾವಾಗಲೂ ಸೈತಾನನ ಚಿತ್ತವನ್ನೇ ಮಾಡುವದಿಲ್ಲವೆಂದು 20ನೇ ಶತಮಾನದ ಯಾವ ಘಟನೆಗಳು ಪ್ರದರ್ಶಿಸುತ್ತವೆ?
20 1914ರಲ್ಲಿ ಆರಂಭವಾದ “ಕರ್ತನ ದಿನ”ದ ಅವಧಿಯಲ್ಲಿ ಯೆಹೋವನು, ಮಾನವ ಅಧಿಕಾರಿಗಳನ್ನೂ ಉಪಾಯವಾಗಿ ನಿರ್ವಹಿಸಿ, ಸೈತಾನನ ದುರುದ್ದೇಶಗಳನ್ನು ನಿಷ್ಫಲಗೊಳಿಸುವನೆಂದು ಪ್ರಕಟನೆ ಪುಸ್ತಕವು ಮುಂತಿಳಿಸಿದೆ. ಅಭಿಷಿಕ್ತ ಕ್ರೈಸ್ತರ ವಿರುದ್ಧವಾಗಿ ಸೈತಾನನಿಂದ ತರಲ್ಪಡುವ ಪ್ರಚಂಡ ಹಿಂಸೆಯ ಕುರಿತು ಮತ್ತು ಅದನ್ನು “ಭೂಮಿಯು” ಕುಡಿದುಬಿಡುವ ಕುರಿತು ಪ್ರಕಟನೆ ವಿವರಿಸುತ್ತದೆ. (ಪ್ರಕಟನೆ 1:10; 12:16) “ಭೂಮಿ”ಯಲ್ಲಿರುವ ಮೂಲಾಂಶಗಳು ಅಂದರೆ ಈಗ ಭೂಮಿಯಲ್ಲಿರುವ ಮಾನವ ಸಮಾಜವು, ಯೆಹೋವನ ಜನರನ್ನು ಸೈತಾನನ ಹಿಂಸೆಯೊಳಗಿಂದ ರಕ್ಷಿಸುವದು.
21 ಇದು ಕಾರ್ಯತಃ ಸಂಭವಿಸಿದೆಯೇ? ಹೌದು. ದೃಷ್ಟಾಂತಕ್ಕಾಗಿ 1930ರ ಮತ್ತು 1940ರ ದಶಕಗಳಲ್ಲಿ ಅಮೆರಿಕದ ಯೆಹೋವನ ಸಾಕ್ಷಿಗಳು ದೊಂಬಿ ಆಕ್ರಮಣಗಳ ಮತ್ತು ಬಹಳಷ್ಟು ಅನ್ಯಾಯದ ಕೈದುಗಳ ಮಹಾ ಒತ್ತಡದ ಕೆಳಗಿದ್ದರು. ಆದರೆ ಅಮೆರಿಕದ ಉಚ್ಛ ನ್ಯಾಯಾಲಯವು ಅವರ ಕಾರ್ಯದ ನ್ಯಾಯಬದ್ಧತೆಯನ್ನು ಅಂಗೀಕರಿಸುತ್ತಾ ಹಲವಾರು ನಿರ್ಣಯಗಳನ್ನು ಅವರ ಪರವಾಗಿ ಕೊಟ್ಟಾಗ, ಅವರಿಗೆ ಪರಿಹಾರವು ಸಿಕ್ಕಿತು. ಬೇರೆ ಸ್ಥಳಗಳಲ್ಲಿ ಸಹಾ ಅಧಿಕಾರಿಗಳು ದೇವ ಜನರ ಸಹಾಯಕ್ಕಾಗಿ ಬಂದಿರುತ್ತಾರೆ. ಸುಮಾರು 40 ವರ್ಷಗಳ ಹಿಂದೆ ಐರ್ಯಲೆಂಡಿನಲ್ಲಿ ಒಂದು ರೋಮನ್ ಕ್ಯಾಥ್ಲಿಕ್ ದೊಂಬಿಯು ಕಾರ್ಕ್ಶಹರದಲ್ಲಿನ ಇಬ್ಬರು ಸಾಕ್ಷಿಗಳ ಮೇಲೆ ಆಕ್ರಮಣ ಮಾಡಿತು. ಒಬ್ಬ ಸ್ಥಳೀಕ ಪೊಲೀಸನು ಸಾಕ್ಷಿಗಳ ಸಹಾಯಕ್ಕೆ ಬಂದನು, ಮತ್ತು ನ್ಯಾಯಾಲಯವು ಆಕ್ರಮಣಗಾರರನ್ನು ಶಿಕ್ಷಿಸಿತು. ಇತ್ತೀಚೆಗೆ ಕಳೆದ ವರ್ಷದಲ್ಲಿ ಫಿಜಿಯಲ್ಲಿ ಮುಖ್ಯಸ್ಥರ ಒಂದು ಕೂಟವು, ಯೆಹೋವನ ಸಾಕ್ಷಿಗಳ ಚಟುವಟಿಕೆಯನ್ನು ನಿಷೇಧಿಸುವ ಒಂದು ಪ್ರಸ್ತಾಪವನ್ನು ಕೇಳಿತ್ತು. ಮುಖ್ಯಸ್ಥರಲ್ಲಿ ಒಬ್ಬನು ಸಾಕ್ಷಿಗಳ ಪರವಾಗಿ ಧೈರ್ಯದಿಂದ ಮಾತಾಡಿದನು ಮತ್ತು ಆ ಪ್ರಸ್ತಾಪವು ಸುಲಭವಾಗಿಯೇ ಸೋಲಿಸಲ್ಪಟ್ಟಿತು.
22. ಮುಂದಿನ ಲೇಖನಗಳಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಾಗುವುದು?
22 ಇಲ್ಲ, ಐಹಿಕ ಅಧಿಕಾರಿಗಳು ಯಾವಾಗಲೂ ಸೈತಾನನ ಹೇತುಗಳನ್ನೇ ನಡಿಸುತ್ತಾರೆಂದಲ್ಲ. ಕ್ರೈಸ್ತರು ಮೇಲಧಿಕಾರಿಗಳಿಗೆ, ಸೈತಾನನಿಗೆ ಸ್ವತಃ ಅಧೀನರಾಗದೇ, ಅಧೀನರಾಗಿರ ಸಾಧ್ಯವಿದೆ. ನಿಶ್ಚಯವಾಗಿ ಅವರು, ಅಧಿಕಾರಿಗಳು ಇರುವಂತೆ ದೇವರು ಎಷ್ಟರ ತನಕ ಅನುಮತಿಸುತ್ತಾನೋ ಆ ತನಕ ಅವರಿಗೆ ಅಧೀನರಾಗಿರುವರು. ಆದರೂ ಇಂತಹ ಅಧೀನತೆಯ ಅರ್ಥವೇನು? ಮತ್ತು ಮೇಲಧಿಕಾರಿಗಳಿಂದ ಕ್ರೈಸ್ತನು ಪ್ರತಿಫಲವಾಗಿ ಏನನ್ನು ಅಪೇಕ್ಷಿಸಬಹುದು? ಈ ಪ್ರಶ್ನೆಗಳನ್ನು, ಹಿಂಬಾಲಿಸುವ ಲೇಖನದಲ್ಲಿ ಚರ್ಚಿಸಲಾಗುವುದು. (w90 11/1)
[ಅಧ್ಯಯನ ಪ್ರಶ್ನೆಗಳು]
a ಉದಾಹರಣೆಗೆ, ಲೂಕ 20:22ರಲ್ಲಿ “ತೆರಿಗೆ” (pho‘ros—ಫೊ’ರೊಸ್) ಪದದ ಪ್ರಯೋಗವನ್ನು ನೋಡಿರಿ. ಹಾಗೂ ಇಲ್ಲಿ “ಕಂದಾಯ” ವೆಂದು ತರ್ಜುಮೆಯಾದ ಗ್ರೀಕ್ ಪದವಾದ te‘los (ಟೆ’ಲೊಸ್) ಮತ್ತಾಯ 17:25ರಲ್ಲಿ “ಕರ್ತವ್ಯಗಳು” ಆಗಿ ತರ್ಜುಮೆಯಾದದ್ದನ್ನು ನೋಡಿರಿ.
b “ಮೇಲಧಿಕಾರ” ಎಂದು ತರ್ಜುಮೆಯಾದ ಗ್ರೀಕ್ ನಾಮಪದ ಹೈ-ಪ-ರೋ-ಕೆ’ ಎಂಬದು ಕ್ರಿಯಾಪದವಾದ ಹೈ-ಪ-ರೇ-ಕೋ’ಗೆ ಸಂಬಂಧಿಸಿದೆ. “ಮೇಲಧಿಕಾರಿಗಳಲ್ಲಿ” “ಮೇಲ್” ಪದವು ಇದೇ ಗ್ರೀಕ್ ಕ್ರಿಯಾಪದದಿಂದ ಬಂದದ್ದಾಗಿದ್ದು, ಮೇಲಧಿಕಾರಿಗಳು ಐಹಿಕ ಅಧಿಕಾರಿಗಳೆಂಬ ರುಜುವಾತಿಗೆ ಕೂಡಿಸುತ್ತದೆ. ದಿ ನ್ಯೂ ಇಂಗ್ಲಿಷ್ ಬೈಬಲ್ನಲ್ಲಿ ರೋಮಾಪುರ 13:1ರ “ಪ್ರತಿಯೊಬ್ಬನು ಶ್ರೇಷ್ಠ ಅಧಿಕಾರಿಗಳಿಗೆ ಅಧೀನರಾಗಲೇ ಬೇಕು” ಎಂಬ ತರ್ಜುಮೆಯು, ಅವರು ಬೇರೆ ಮಾನವರಿಗಿಂತ ಮೇಲಾಗಿರಬಹುದಾದರೂ, ಸರಿಯಾದ ತರ್ಜುಮೆಯಲ್ಲ.
ನೀವು ಹೇಗೆ ಉತ್ತರಿಸುವಿರಿ?
◻ ಮೇಲಧಿಕಾರಿಗಳು ಯಾರು?
◻ “ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ” ಎಂದು ನಾವನ್ನುವುದು ಹೇಗೆ?
◻ ಲೋಕವನ್ನು ಸೈತಾನನ ಅಧಿಕಾರದ ಕೆಳಗೆ ಯೆಹೋವನು ಬಿಡುವುದೇಕೆ?
◻ ದೇವರು ಮಾನವ ಅಧಿಕಾರಿಗಳನ್ನು “ಅವರವರ ಸಂಬಂಧಕ ಸ್ಥಾನಗಳಲ್ಲಿ” ಇಡುವುದು ಯಾವ ರೀತಿಯಲ್ಲಿ?
[ಪುಟ 13 ರಲ್ಲಿರುವ ಚಿತ್ರ]
ರೋಮ್ ಶಹರ ಸುಟ್ಟು ಹೋದ ನಂತರ ನೀರೋ, ಒಂದು ನಿಜವಾದ ಪೈಶಾಚಿಕ ಆತ್ಮವನ್ನು ಪ್ರದರ್ಶಿಸಿದನು
[ಪುಟ 15 ರಲ್ಲಿರುವ ಚಿತ್ರ]
ಸೈಪ್ರಸ್ನ ಪ್ರಾಂತಾಧಿಕಾರಿ ಸೆರ್ಗ್ಯ ಪೌಲ, ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು