ಮೇಲಧಿಕಾರಿಗಳಿಗೆ ನಮ್ಮ ಸಂಬಂಧಕ ಅಧೀನತೆ
“ಆದ ಕಾರಣ . . . ನೀವು ಅಧೀನರಾಗುವ ಅವಶ್ಯ ಕಾರಣ ಅಲ್ಲಿದೆ.” -ರೋಮಾಪುರ 13:5, NW.
1. ನಾಜೀ ಮೇಲಧಿಕಾರಿಗಳಿಂದ ಯೆಹೋವನ ಸಾಕ್ಷಿಗಳಿಗೆ ಯಾವ ಕಠಿಣ ಅನುಭವಗಳಾದವು, ಮತ್ತು ಇದು “ಕೆಟ್ಟದ್ದನ್ನು ಮಾಡಿದ” ಕಾರಣದಿಂದಲೋ?
ಜನವರಿ 7, 1940ರಲ್ಲಿ, ಪ್ರಾಂಜ್ ರೈಟರ್ ಮತ್ತು ಬೇರೆ ಐದು ಮಂದಿ ಯುವ ಆಸ್ಟ್ರಿಯಾನರು ಶಿರಚ್ಛೇದನೆಯ ಮೂಲಕ ಹತಿಸಲ್ಪಟ್ಟರು. ಅವರು ಬೈಬಲ್ಫೋರ್ಚರ್ ಅಂದರೆ ಯೆಹೋವನ ಸಾಕ್ಷಿಗಳು ಆಗಿದ್ದರು ಮತ್ತು ಅವರು ಸತ್ತದ್ದು, ಹಿಟ್ಲರನ ರಾಷ್ಟ್ರಕ್ಕಾಗಿ ಶಸ್ತ್ರವನ್ನೆತ್ತುವುದು ಅವರ ಮನಸ್ಸಿಗೆ ನ್ಯಾಯವಾಗಿ ತೋರದರ್ದಿಂದಲೇ. ಎರಡನೆಯ ಲೋಕಯುದ್ಧದ ಸಮಯದಲ್ಲಿ ತಮ್ಮ ನಂಬಿಕೆಗಾಗಿ ಸತ್ತ ಸಾವಿರಾರು ಸಾಕ್ಷಿಗಳಲ್ಲಿ ರೈಟರನು ಒಬ್ಬನು. ಇನ್ನು ಅನೇಕರು ಕೂಟಶಿಬಿರಗಳಲ್ಲಿ ದೀರ್ಘಾವಧಿಯ ಶಿಕ್ಷೆಯನ್ನು ಸಹಿಸಿಕೊಂಡರು. ಅವರೆಲ್ಲರು ನಾಜೀ ಮೇಲಧಿಕಾರಿಗಳ “ಕತ್ತಿಗೆ” ಗುರಿಯಾದದ್ದು “ಕೆಟ್ಟದ್ದನ್ನು ಮಾಡಿದ” ಕಾರಣದಿಂದಲೋ? (ರೋಮಾಪುರ 13:4) ಖಂಡಿತವಾಗಿಯೂ ಅಲ್ಲ! ಈ ಕ್ರೈಸ್ತರು ರೋಮಾಪುರ 13ರಲ್ಲಿನ ದೇವರಾಜ್ಞೆಗಳಿಗೆ ವಿಧೇಯರಾಗಿದ್ದರೆಂದು ಪೌಲನ ಮುಂದಿನ ಮಾತುಗಳು ತೋರಿಸುತ್ತವೆ, ಆದರೂ ಅವರು ಅಧಿಕಾರಿಗಳ ಕೈಯಿಂದ ಶಿಕ್ಷೆಗೆ ಗುರಿಯಾದರು.
2. ಮೇಲಧಿಕಾರಿಗಳಿಗೆ ಅಧೀನರಾಗಲು ಇರುವ ಅವಶ್ಯ ಕಾರಣವು ಯಾವುದು?
2 ರೋಮಾಪುರ 13:5ರಲ್ಲಿ ಅಪೊಸ್ತಲನು ಬರೆಯುವುದು: “ಆದ ಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ (ಮನಸ್ಸಾಕ್ಷಿಗೆ, NW) ನ್ಯಾಯವಾಗಿ ತೋರುವುದರಿಂದಲೂ ಅವನಿಗೆ ಅಧೀನರಾಗುವ ಅವಶ್ಯ ಕಾರಣ ಅಲ್ಲಿದೆ.” ಇದಕ್ಕೆ ಮುಂಚೆ ಪೌಲನು, ಅಧಿಕಾರಿಯು “ಕತ್ತಿಯನ್ನು” ಹಿಡಿದಿರುವ ಕಾರಣ ಅವನಿಗೆ ಅಧೀನರಾಗುವುದು ಒಳ್ಳೆಯದು ಎಂದಿದ್ದನು. ಈಗಲಾದರೋ ಅವನು ಇನ್ನೊಂದು ಬಲವಾದ ಕಾರಣವನ್ನು ಕೊಡುತ್ತಾನೆ ಅದೇನಂದರೆ, ಮನಸ್ಸಾಕ್ಷಿ. ನಾವು “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿ” ದೇವರನ್ನು ಆರಾಧಿಸಲು ಪ್ರಯಾಸಪಡುತ್ತೇವೆ. (2 ತಿಮೊಥಿ 1:3) ಮೇಲಧಿಕಾರಿಗಳಿಗೆ ಅಧೀನರಾಗಲು ಬೈಬಲು ನಮಗೆ ಹೇಳುತ್ತದೆ, ಮತ್ತು ನಾವು ವಿಧೇಯರಾಗುತ್ತೇವೆ ಯಾಕಂದರೆ ದೇವರ ದೃಷ್ಟಿಯಲ್ಲಿ ಯಾವುದು ಯೋಗ್ಯವೋ ಅದನ್ನು ಮಾಡಲು ನಾವು ಬಯಸುತ್ತೇವೆ. (ಇಬ್ರಿಯ 5:14) ನಿಶ್ಚಯವಾಗಿಯೂ, ಬೈಬಲ್-ತರಬೇತು ಹೊಂದಿದ ನಮ್ಮ ಮನಸ್ಸಾಕ್ಷಿಯು, ನಮ್ಮನ್ನು ಪರೀಕ್ಷೆ ಮಾಡಲು ಯಾವ ಮಾನವ ಅಧಿಕಾರಿಗಳು ಇಲ್ಲದಾಗಲೂ, ಅಧಿಕಾರಕ್ಕೆ ಅಧೀನತೆ ತೋರಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.—ಪ್ರಸಂಗಿ 10:20ನ್ನು ಹೋಲಿಸಿ.
“ಆದ ಕಾರಣ ನೀವು ಕಂದಾಯವನ್ನೂ ಕೊಡುತ್ತೀರಿ”
3, 4. ಯೆಹೋವನ ಸಾಕ್ಷಿಗಳಿಗೆ ಯಾವ ಸತ್ಕೀರ್ತಿಯು ಇದೆ, ಮತ್ತು ಕ್ರೈಸ್ತರು ಏಕೆ ತೆರಿಗೆಗಳನ್ನು ಕೊಡಬೇಕು?
3 ನೈಜೀರಿಯದಲ್ಲಿ ಕೆಲವು ವರ್ಷಗಳ ಹಿಂದೆ ತೆರಿಗೆಗಳನ್ನು ಸಲ್ಲಿಸುವ ವಿಷಯವಾಗಿ ದಂಗೆಗಳೆದ್ದವು. ಹಲವಾರು ಹತ್ಯೆಗಳಾದವು ಮತ್ತು ಸರಕಾರವು ಸೇನೆಯನ್ನು ಕರೆಯಿತು. ಕೂಟಗಳು ನಡಿಯುತ್ತಿದ್ದ ಒಂದು ರಾಜ್ಯ ಸಭಾಗೃಹವನ್ನು ಸೈನಿಕರು ಪ್ರವೇಶಿಸಿ, ಕೂಟದ ಉದ್ದೇಶವೇನೆಂದು ತಿಳಿಯಲು ನಿರ್ಬಂಧಿಸಿದರು. ಅದು ಯೆಹೋವನ ಸಾಕ್ಷಿಗಳ ಬೈಬಲಭ್ಯಾಸ ಕೂಟವೆಂದು ತಿಳಿದಾಗ, ಮುಖ್ಯಾಧಿಕಾರಿ ಸೈನಿಕರನ್ನು ಬಿಟ್ಟುಹೋಗುವಂತೆ ಆಜ್ಞಾಪಿಸುತ್ತಾ, ಅಂದದ್ದು: “ಯೆಹೋವನ ಸಾಕ್ಷಿಗಳು ತೆರಿಗೆ ಚಳುವಳಿಗಾರರಲ್ಲ.”
4 ಆ ನೈಜೀರಿಯನ್ ಸಾಕ್ಷಿಗಳಿಗೆ ಪೌಲನ ಮಾತುಗಳಿಗೆ ಹೊಂದಿಕೆಯಾಗಿ ಜೀವಿಸಿದ ಸತ್ಕೀರ್ತಿ ಇತ್ತು. “ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡಾ ಕೊಡುತ್ತೀರಿ. ಯಾಕಂದರೆ ಕಂದಾಯ ಎತ್ತುವವರು ದೇವರ ಉದ್ಯೋಗಿಗಳಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ.” (ರೋಮಾಪುರ 13:6) ‘ಕೈಸರನದನ್ನು ಕೈಸರನಿಗೆ ಕೊಡಿರಿ’ ಎಂಬ ನಿಯಮವನ್ನು ಯೇಸು ಸೂಚಿಸಿದಾಗ, ತೆರಿಗೆ ಕೊಡುವ ಕುರಿತಾಗಿಯೇ ತಿಳಿಸಿದ್ದನು. (ಮತ್ತಾಯ 22:21) ಐಹಿಕ ಅಧಿಕಾರಿಗಳು ರಸ್ತೆಗಳನ್ನು, ಪೊಲೀಸ್ ಸುರಕ್ಷೆಯನ್ನು, ಲೈಬ್ರೆರಿಗಳನ್ನು, ವಾಹನ ಸೌಕರ್ಯಗಳನ್ನು, ಶಾಲೆಗಳನ್ನು, ಅಂಚೆ ವ್ಯವಸ್ಥೆಯನ್ನು ಮತ್ತು ಬೇರೆಷ್ಟೋ ವಿಷಯಗಳನ್ನು ಒದಗಿಸುತ್ತಾರೆ. ನಾವೀ ಒದಗಿಸುವಿಕೆಗಳನ್ನು ಆಗಿಂದಾಗ್ಯೆ ಉಪಯೋಗಿಸುತ್ತೇವೆ. ತೆರಿಗೆಗಳ ಮೂಲಕವಾಗಿ ಅವುಗಳಿಗಾಗಿ ಹಣ ಸಲ್ಲಿಸುವುದು ತೀರಾ ಯೋಗ್ಯವಾದದ್ದೇ.
“ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ”
5. “ಎಲ್ಲರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ” ಎಂಬ ಹೇಳಿಕೆಯ ಅರ್ಥವೇನು?
5 ಪೌಲನು ಮುಂದರಿಸಿದ್ದು: “ಅವರವರಿಗೆ (ಎಲ್ಲರಿಗೆ, NW) ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು, ಯಾರಿಗೆ ಭಯವೋ ಅವರಿಗೆ ಭಯವನ್ನು ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ.” (ರೋಮಾಪುರ 13:7) “ಎಲ್ಲರಿಗೆ” ಎಂಬ ಪದವು, ದೇವರ ಸಾರ್ವಜನಿಕ ಉದ್ಯೋಗಿಯಾಗಿರುವ ಐಹಿಕ ಅಧಿಕಾರದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಆವರಿಸುತ್ತದೆ. ಅದರಲ್ಲಿ ಯಾವ ವಿನಾಯಿತಿಯೂ ಇರಲಾರದು. ವೈಯಕ್ತಿಕವಾಗಿ ನಮಗಿಷ್ಟವಿಲ್ಲದ ಒಂದು ರಾಜಕೀಯ ವ್ಯವಸ್ಥೆಯ ಕೆಳಗೆ ಜೀವಿಸುವಾಗಲೂ, ತೆರಿಗೆಯನ್ನು ನಾವು ಕೊಡುತ್ತೇವೆ. ನಾವು ವಾಸಿಸುವಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಇದ್ದರೆ ಸಭೆಗಳು ಇದರ ಸದುಪಯೋಗವನ್ನು ಮಾಡಬಹುದು. ಮತ್ತು ಬೇರೆ ನಾಗರಿಕರಂತೆ ಕ್ರೈಸ್ತರು ಸಹಾ, ತಾವು ಸಲ್ಲಿಸುವ ತೆರಿಗೆಗಳನ್ನು ಸೀಮಿತಗೊಳಿಸಲಿಕ್ಕೆ ಮಾಡಲಾದ ಯಾವುದೇ ನ್ಯಾಯಬದ್ಧ ಒದಗಿಸುವಿಕೆಗಳನ್ನು ಉಪಯೋಗಿಸಬಹುದು. ಆದರೆ ಯಾವ ಕ್ರೈಸ್ತನಾದರೂ ಅನ್ಯಾಯವಾಗಿ ತೆರಿಗೆ ಸಲ್ಲಿಸುವುದನ್ನು ತಪ್ಪಿಸಲು ಪ್ರಯತ್ನಿಸಬಾರದು.—ಮತ್ತಾಯ 5:41; 17:24-27, ಹೋಲಿಸಿ.
6, 7. ಹಣವು ನಾವು ಅಸಮ್ಮತಿಸುವ ಒಂದು ವಿಷಯಕ್ಕೆ ಪ್ರಯೋಗಿಸಲ್ಪಟ್ಟಾಗ್ಯೂ ಅಥವಾ ಅಧಿಕಾರಿಗಳು ಒಂದು ವೇಳೆ ನಮ್ಮನ್ನು ಹಿಂಸಿಸುವುದಾದರೂ, ನಾವೇಕೆ ತೆರಿಗೆಗಳನ್ನು ಕೊಡಬೇಕು?
6 ಒಂದು ವೇಳೆ ಒಂದು ತೆರಿಗೆಯು ಅನ್ಯಾಯವಾಗಿ ಹೊರಿಸಲ್ಪಟ್ಟದೆ ಎಂದು ನೆನಸೋಣ. ಅಥವಾ, ತೆರಿಗೆ ಹಣದ ಸ್ವಲ್ಪಾಂಶವು ಉಚಿತ ಗರ್ಭಪಾತಗಳಿಗೆ, ರಕ್ತಸಂಗ್ರಹಾಲಯಗಳು ಅಥವಾ ನಮ್ಮ ತಟಸ್ಥ ನೋಟಗಳಿಗೆ ವಿರುದ್ಧವಾದ ಕಾರ್ಯಕ್ರಮಗಳೇ ಮುಂತಾದ ವಿಷಯಗಳಿಗೆ ಪ್ರಯೋಗಿಸಲ್ಪಟ್ಟರೆ ಆಗೇನು? ಆಗಲೂ, ನಾವು ನಮ್ಮೆಲ್ಲಾ ತೆರಿಗೆಗಳನ್ನು ಕೊಡುತ್ತೇವೆ. ತೆರಿಗೆಯ ಹಣವನ್ನು ಹೇಗೆ ಉಪಯೋಗಿಸಲಾಗುತ್ತದೆಂಬದಕ್ಕೆ ಜವಾಬ್ದಾರರು ಅಧಿಕಾರಿಗಳೇ ಆಗಿರುತ್ತಾರೆ. ಅಧಿಕಾರವನ್ನು ತೀರ್ಪು ಮಾಡುವ ಅಪ್ಪಣೆ ನಮಗಿಲ್ಲ. ದೇವರು “ಲೋಕದ ನ್ಯಾಯಾಧಿಪತಿಯು,” ಮತ್ತು ಸರಕಾರಗಳು ತಮ್ಮ ಅಧಿಕಾರವನ್ನು ಹೇಗೆ ಉಪಯೋಗಿಸಿದ್ದಾರೆಂಬ ವಿಷಯದಲ್ಲಿ ತನ್ನ ಕ್ಲುಪ್ತ ಕಾಲದಲ್ಲಿ ಆತನೇ ಲೆಕ್ಕ ಕೇಳುವನು. (ಕೀರ್ತನೆ 94:2; ಯೆರೆಮೀಯ 25:31.) ಅದು ಸಂಭವಿಸುವ ತನಕ, ನಾವು ನಮ್ಮ ತೆರಿಗೆಗಳನ್ನು ಸಲ್ಲಿಸುತ್ತಾ ಇರುವೆವು.
7 ಅಧಿಕಾರಿಗಳು ನಮ್ಮ ಹಿಂಸಿಸುತ್ತಾರಾದರೆ, ಆಗೇನು? ಆಗಲೂ ನಾವು ತೆರಿಗೆಗಳನ್ನು ಕೊಡುವೆವು ಯಾಕಂದರೆ ದಿನದಿನವೂ ನಮಗೆ ಒದಗಿಸಲ್ಪಡುವ ಸೇವೆಗಳಿಗಾಗಿಯೇ. ಒಂದು ಆಫ್ರಿಕನ್ ದೇಶದಲ್ಲಿ ಹಿಂಸೆಯನ್ನು ಅನುಭವಿಸುತ್ತಿರುವ ಸಾಕ್ಷಿಗಳ ಕುರಿತು ಸಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್ ಅಂದದ್ದು: “ಅವರನ್ನು ಆದರ್ಶ ನಾಗರಿಕರಾಗಿ ನಾವು ಪರಿಗಣಿಸಬಹುದು. ಅವರು ದಕ್ಷತೆಯಿಂದ ತೆರಿಗೆಗಳನ್ನು ಸಲ್ಲಿಸುತ್ತಾರೆ, ರೋಗಿಗಳ ಉಪಚಾರವನ್ನು ಮಾಡುತ್ತಾರೆ, ಅನಕ್ಷರತೆಯ ವಿರುದ್ಧ ಹೋರಾಡುತ್ತಾರೆ.” ಹೌದು, ಆ ಹಿಂಸಿತ ಕ್ರೈಸ್ತರು ತಮ್ಮ ತೆರಿಗೆಗಳನ್ನು ಸಲ್ಲಿಸಿದರು.
“ಭಯ” ಮತ್ತು “ಮರ್ಯಾದೆ”
8. ಅಧಿಕಾರಕ್ಕೆ ನಾವು ತೋರಿಸುವ “ಭಯ” ಯಾವುದು?
8 ರೋಮಾಪುರ 13:7ರ “ಭಯ”ವು ಹೇಡಿತನದ ಭಯವಲ್ಲ, ಬದಲಾಗಿ ಐಹಿಕ ಅಧಿಕಾರಕ್ಕೆ ಮರ್ಯಾದೆ ತೋರಿಸುವಿಕೆ, ಅದರ ನಿಯಮವನ್ನು ಮೀರುವ ವಿಷಯವಾಗಿ ಭಯಪಡುವಿಕೆಯೇ ಆಗಿದೆ. ಈ ಮರ್ಯಾದೆಯು ಕೊಡಲ್ಪಡುವುದು ಅದು ಒಳಗೂಡಿರುವ ಸ್ಥಾನದಿಂದಾಗಿಯೇ, ಆ ಹುದ್ದೆಯನ್ನು ಹಿಡಿದಿರುವ ವ್ಯಕ್ತಿಯ ಕಾರಣದಿಂದಾಗಿ ಯಾವಾಗಲೂ ಅಲ್ಲ. ಬೈಬಲು, ರೋಮನ್ ಸಾಮ್ರಾಟ ಟೈಬೀರಿಯಸನ ಕುರಿತು ಪ್ರವಾದನಾರೂಪವಾಗಿ ಮಾತಾಡುವಾಗ, “ಒಬ್ಬ ನೀಚನು” ಎಂದವನನ್ನು ಕರೆದದೆ. (ದಾನಿಯೇಲ 11:21) ಆದರೆ ಅವನು ಸಾಮ್ರಾಟನಾಗಿದ್ದನು, ಮತ್ತು ಹಾಗಿರುವಲ್ಲಿ, ಕ್ರೈಸ್ತನು ಅವನಿಗೆ ಭಯವನ್ನು ಮತ್ತು ಮರ್ಯಾದೆಯನ್ನು ಸಲ್ಲಿಸುವ ಹಂಗಿನವನು.
9. ಮಾನವ ಅಧಿಕಾರಿಗಳಿಗೆ ನಾವು ಮರ್ಯಾದೆಯನ್ನು ಸಲ್ಲಿಸುವ ಕೆಲವು ಮಾರ್ಗಗಳು ಯಾವುವು?
9 ಮರ್ಯಾದೆಯ ವಿಷಯದಲ್ಲಾದರೂ, ಧಾರ್ಮಿಕ ಸ್ಥಾನಗಳ ಮೇಲಾಧರಿತವಾದ ಪದವಿಗಳನ್ನು ಕೊಡದಂಥ ಯೇಸುವಿನ ಆಜ್ಞೆಯನ್ನು ನಾವು ಪಾಲಿಸುತ್ತೇವೆ. (ಮತ್ತಾಯ 23:8-10) ಆದರೆ ಲೌಕಿಕ ಅಧಿಕಾರಿಗಳ ಸಂಬಂಧದಲ್ಲಿ, ಅವರನ್ನು ಗೌರವಿಸುವುದರಲ್ಲಿ, ಆವಶ್ಯಕವಾದ ಯಾವುದೇ ಪದವಿಯಿಂದ ಸಂಬೋಧಿಸುವುದಕ್ಕೆ ನಾವು ಸಂತೋಷ ಪಡುತ್ತೇವೆ. ರೋಮನ್ ಗವರ್ನರರಿಗೆ ಮಾತಾಡಿದಾಗ, “ಶ್ರೀಮಾನ್ ಮಹಾ” (ಘನವೆತ್ತವರೇ), ಎಂಬ ಪದವನ್ನು ಪೌಲನು ಉಪಯೋಗಿಸಿದನು. (ಅಪೊಸ್ತಲರ ಕೃತ್ಯಗಳು 26:25) ದಾನಿಯೇಲನು ನೆಬೂಕದ್ನೆಚ್ಚರನನ್ನು “ಎನ್ನೊಡೆಯನೇ,” ಎಂದು ಕರೆದನು. (ದಾನಿಯೇಲ 4:19) ಇಂದು ಕ್ರೈಸ್ತರು, “ನನ್ನ ಸ್ವಾಮೀ” ಅಥವಾ “ಮಹಾ ಪ್ರಭೂ” ಮುಂತಾದ ಪದಗಳನ್ನುಪಯೋಗಿಸಬಹುದು. ನ್ಯಾಯಾಧಿಪತಿ ಕೋರ್ಟ್ರೂಮನ್ನು ಪ್ರವೇಶಿಸುವಾಗ ಅವರು ಎದ್ದು ನಿಲ್ಲಬಹುದು ಅಥವಾ ಅಧಿಪತಿಯ ಮುಂದೆ ಬಗ್ಗಿ ನಮಸ್ಕರಿಸುವ ಪದ್ಧತಿಯಿದ್ದರೆ, ಗೌರವಪೂರ್ವಕವಾಗಿ ಅದನ್ನು ಮಾಡಬಹುದು.
ಸಂಬಂಧಕ ಅಧೀನತೆ
10. ಕ್ರೈಸ್ತನಿಂದ ಮಾನವ ಅಧಿಕಾರಿಯು ನಿರ್ಬಂಧಿಸಿ ಕೇಳುವ ವಿಷಯಗಳಿಗೆ ಸೀಮಿತವಿದೆಂಬದನ್ನು ಯೇಸು ತೋರಿಸಿದ್ದು ಹೇಗೆ?
10 ಯೆಹೋವನ ಸಾಕ್ಷಿಗಳು ಮಾನುಷ ಅಧಿಕಾರಕ್ಕೆ ಅಧೀನರಾಗಿರಲಾಗಿ, ಪ್ರಾಂಜ್ ರೈಟರ್ ಮತ್ತು ಇತರ ಅನೇಕರು ಅಷ್ಟು ಕಷ್ಟಾನುಭವಗಳನ್ನು ಅನುಭವಿಸಿದ್ದೇಕೆ? ಏಕೆಂದರೆ, ನಮ್ಮ ಅಧೀನತೆಯು ಸಂಬಂಧಕವಾಗಿರುವುದರಿಂದಲೇ, ಮತ್ತು, ಅವರು ಹಕ್ಕಿನಿಂದ ಕೇಳುವ ನಿರ್ಬಂಧಗಳಿಗೆ ಬೈಬಲು ಸೀಮಿತಗಳನ್ನಿಟ್ಟದೆ ಎಂಬದನ್ನು ಅಧಿಕಾರಿಗಳು ಯಾವಾಗಲೂ ಮಾನ್ಯಮಾಡುವುದಿಲ್ಲ. ತರಬೇತಾದ ಕ್ರೈಸ್ತ ಮನಸ್ಸಾಕ್ಷಿಗೆ ವಿರೋಧವಾದ ಒಂದು ಸಂಗತಿಯನ್ನು ಅಧಿಕಾರಿಗಳು ನಿರ್ಬಂಧಪಡಿಸುವುದಾದರೆ ಅವರು ತಮ್ಮ ದೇವದತ್ತ ಸೀಮಿತವನ್ನು ಮೀರಿ ಹೋಗುತ್ತಾರೆ. ಯೇಸು ಇದನ್ನು ಸೂಚಿಸಿದಾಗ ಅಂದದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ; ಆದರೆ ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾಯ 22:21, NW) ಯಾವುದು ದೇವರಿಗೆ ಸೇರಿದೆಯೋ ಅದನ್ನು ಕೈಸರನು ನಿರ್ಬಂಧಿಸಿ ಕೇಳುವಾಗ, ಪ್ರಥಮವಾಗಿ ಕೇಳುವ ಹಕ್ಕು ದೇವರದ್ದು ಎಂಬದನ್ನು ನಾವು ಅಂಗೀಕರಿಸಲೇ ಬೇಕು.
11. ಮಾನವ ಅಧಿಕಾರಿಯು ಏನನ್ನು ನಿರ್ಬಂಧಿಸಿ ಕೇಳುತ್ತಾನೋ ಅದಕ್ಕೆ ಸೀಮಿತಗಳಿವೆ ಎಂದು ತೋರಿಸುವ ಯಾವ ತತ್ವವು ವಿಶಾಲವಾಗಿ ಸ್ವೀಕರಿಸಲ್ಪಟ್ಟಿದೆ?
11 ಈ ಸ್ಥಾನವು ದ್ರೋಹಕಾರಕವೂ ಅಥವಾ ಮೋಸಕರವೂ? ಅಲ್ಲವೇ ಅಲ್ಲ. ವಾಸ್ತವದಲ್ಲಿ ಹೆಚ್ಚಿನ ಸುಸಂಸ್ಕೃತ ರಾಷ್ಟ್ರಗಳಿಂದ ಅಂಗೀಕೃತವಾದ ಒಂದು ತತ್ವದ ವಿಶಾಲ ನೋಟವಿದು. 15ನೇ ಶತಮಾನದಲ್ಲಿ ಪೀಟರ್ ವಾನ್ ಹ್ಯಾಗೆನ್ಬೆಕನು, ತನ್ನ ಅಧಿಕಾರದ ಕೈಕೆಳಗಿದ್ದ ಯೂರೋಪಿನ ಒಂದು ಕ್ಷೇತ್ರದಲ್ಲಿ ಕ್ರೂರಾಡಳಿತವನ್ನು ಆರಂಭಿಸಿದಕ್ಕಾಗಿ ನ್ಯಾಯ ವಿಚಾರಣೆಗೆ ಒಳಗಾದನು. ತಾನು ಕೇವಲ ತನ್ನ ಒಡೆಯನಾದ ಡ್ಯೂಕ್ ಆಫ್ ಬರ್ಗಂಡಿಯ ಅಪ್ಪಣೆಯನ್ನು ಪಾಲಿಸುತ್ತಿದ್ದೇನೆಂಬ ಅವನ ಪ್ರತಿವಾದವನ್ನು ತಿರಸ್ಕರಿಸಲಾಯಿತು. ಇಂಥ ಕ್ರೌರ್ಯಗಳನ್ನು ನಡಿಸುವ ಒಬ್ಬನು, ಅದನ್ನು ಮೇಲಧಿಕಾರಿಯ ಅಪ್ಪಣೆಯ ಮೇರೆ ನಡಿಸುತ್ತಾನಾದರೆ, ಅದಕ್ಕೆ ತಾನೇ ಹೊಣೆಗಾರನಲ್ಲವೆಂಬ ವಾದವು ಅನಂತರ ಹಲವಾರು ಬಾರಿ—ಅತಿ ಗಮನಾರ್ಹವಾಗಿ ನ್ಯೂರೆಂಬರ್ಗಿನ ಅಂತರ್ರಾಷ್ಟ್ರೀಯ ನ್ಯಾಯಸ್ಥಾನದ ಮುಂದೆ ನಾಜೀ ಯುದ್ಧ ಪಾತಕಿಗಳಿಂದ ಮಾಡಲ್ಪಟ್ಟಿದೆ. ಈ ವಾದವು ಸರ್ವ ಸಾಮಾನ್ಯವಾಗಿ ತಿರಸ್ಕರಿಸಲ್ಪಟ್ಟಿರುತ್ತದೆ. ಅಂತರ್ರಾಷ್ಟ್ರೀಯ ನ್ಯಾಯಸ್ಥಾನವು ತನ್ನ ತೀರ್ಮಾನದಲ್ಲಿ ಹೇಳಿದ್ದು: “ವ್ಯಕ್ತಿಪರ ರಾಜ್ಯದಿಂದ ವಿಧಿಸಲ್ಪಟ್ಟ ವಿಧೇಯತೆಯ ರಾಷ್ಟ್ರೀಯ ಹಂಗುಗಳಿಗಿಂತ ಮಿಗಿಲಾಗಿ ವ್ಯಕ್ತಿಗಳಿಗೆ ಅಂತರ್ರಾಷ್ಟ್ರೀಯ ಕರ್ತವ್ಯಗಳು ಇರುತ್ತವೆ.”
12. ಅಧಿಕಾರದಿಂದ ಮಾಡಲ್ಪಟ್ಟ ಅಸಮಂಜಸ ನಿರ್ಬಂಧಗಳನ್ನು ಪಾಲಿಸಲು ನಿರಾಕರಿಸಿದ ದೇವರ ಸೇವಕರ ಕೆಲವು ಶಾಸ್ತ್ರೀಯ ಮಾದರಿಗಳು ಯಾವುವು?
12 ಮೇಲಧಿಕಾರಿಗಳಿಗೆ ತಾವು ಮನಸ್ಸಾಕ್ಷಿಪೂರ್ವಕವಾಗಿ ಸಲ್ಲಿಸಬೇಕಾದ ಅಧೀನತೆಗೆ ಸೀಮಿತಗಳಿವೆ ಎಂಬದನ್ನು ದೇವರ ಸೇವಕರು ಯಾವಾಗಲೂ ಮನಗಂಡಿದ್ದರು. ಮೋಶೆಯು ಐಗುಪ್ತದಲ್ಲಿ ಹುಟ್ಟಿದ್ದ ಸಮಯದಲ್ಲಿ, ಇಬ್ರಿಯ ಗಂಡು ಕೂಸುಗಳನ್ನೆಲ್ಲಾ ಕೊಲ್ಲುವಂತೆ ಫರೋಹನು ಇಬ್ಬರು ಹಿಬ್ರೂ ಸೂಲಗಿತ್ತಿಯರಿಗೆ ಅಪ್ಪಣೆ ಕೊಟ್ಟಿದ್ದನು. ಆದರೆ ಆ ಸೂಲಗಿತ್ತಿಯರಾದರೋ ಕೂಸುಗಳನ್ನು ಕಾಪಾಡಿ ಉಳಿಸಿದರು. ಅವರು ಫರೋಹನಿಗೆ ಅವಿಧೇಯರಾದದ್ದು ತಪ್ಪೋ? ಅಲ್ಲ, ಅವರು ದೇವದತ್ತ ಮನಸ್ಸಾಕ್ಷಿಯನ್ನು ಹಿಂಬಾಲಿಸಿದ್ದರು ಮತ್ತು ಅದಕ್ಕಾಗಿ ದೇವರು ಅವರನ್ನು ಆಶೀರ್ವದಿಸಿದನು. (ವಿಮೋಚನಕಾಂಡ 1:15-20) ಇಸ್ರಾಯೇಲು ಬಬಿಲೋನಿನಲ್ಲಿ ಬಂಧೀವಾಸದಲ್ಲಿದ್ದಾಗ ತನ್ನ ಅಧಿಕಾರಿಗಳು, ಶದ್ರಕ್, ಮೇಶಕ್ ಮತ್ತು ಅಬೆದ್ನಿಗೋ ಎಂಬ ಮೂವರು ಇಬ್ರಿಯರೂ ಸೇರಿ, ದೂರಾ ಬಯಲಿನಲ್ಲಿ ಅವನು ಪ್ರತಿಷ್ಠಿಸಿದ ಪ್ರತಿಮೆಯ ಮುಂದೆ ಅಡ್ಡ ಬೀಳಬೇಕೆಂದು ನಿರ್ಬಂಧಪಡಿಸಿದನು. ಆ ಮೂವರು ಇಬ್ರಿಯರು ನಿರಾಕರಿಸಿದರು. ಅವರು ಮಾಡಿದ್ದು ತಪ್ಪೋ? ಅಲ್ಲ, ಯಾಕಂದರೆ ಅರಸನ ಆಜ್ಞೆಯನ್ನು ಪಾಲಿಸುವುದು ದೇವರ ನಿಯಮಕ್ಕೆ ಅವಿಧೇಯರಾಗುವ ಅರ್ಥದಲ್ಲಿತ್ತು.—ವಿಮೋಚನಕಾಂಡ 20:4, 5; ದಾನಿಯೇಲ 3:1-18.
“ಅಧಿಪತಿಯೋಪಾದಿ ದೇವರಿಗೆ ವಿಧೇಯರಾಗಿರಿ”
13. ಮೇಲಧಿಕಾರಿಗಳಿಗೆ ಸಂಬಂಧಕ ವಿಧೇಯತೆಯ ವಿಷಯದಲ್ಲಿ ಯಾವ ಮಾದರಿಯನ್ನು ಆದಿ ಕ್ರೈಸ್ತರಿಟ್ಟರು?
13 ತದ್ರೀತಿಯಲ್ಲಿ, ಯೆಹೂದಿ ಅಧಿಕಾರಿಗಳು ಪೇತ್ರ ಮತ್ತು ಯೋಹಾನರನ್ನು ಯೇಸುವಿನ ಕುರಿತು ಸಾರುವುದನ್ನು ನಿಲ್ಲಿಸುವಂತೆ ಆಜ್ಞಾಪಿಸಿದಾಗ, ಅವರು ಉತ್ತರಿಸಿದ್ದು: “ದೇವರ ಮಾತನ್ನು ಕೇಳುವುದಕ್ಕಿಂತಲೂ ನಿಮ್ಮ ಮಾತನ್ನು ಕೇಳುವುದು ದೇವರ ಮುಂದೆ ನ್ಯಾಯವೂ ಏನು? ನೀವೇ ತೀರ್ಪು ಮಾಡಿಕೊಳ್ಳಿರಿ.” (ಅಪೊಸ್ತಲರ ಕೃತ್ಯಗಳು 4:19; 5:29) ಅವರು ಮೌನರಾಗಿ ಉಳಿಯ ಶಕ್ತರಿರಲಿಲ್ಲ. ದಿ ಕ್ರಿಶ್ಚನ್ ಸೆಂಚ್ಯುರಿ ಎಂಬ ಪತ್ರಿಕೆಯು, ಆದಿ ಕ್ರೈಸ್ತರಿಂದ ತಕ್ಕೊಳ್ಳಲ್ಪಟ್ಟ ಇನ್ನೊಂದು ಮನಸ್ಸಾಕ್ಷಿಪೂರ್ವಕವಾದ ಸ್ಥಾನದ ಕುರಿತು ಗಮನವನ್ನು ಸೆಳೆಯುತ್ತಾ, ಅನ್ನುವುದು: “ಅತ್ಯಾರಂಭದ ಕ್ರೈಸ್ತರು ಶಸ್ತ್ರಸೇನೆಗಳಲ್ಲಿ ಕೆಲಸ ಮಾಡಲಿಲ್ಲ. ‘ಹೊಸ ಒಡಂಬಡಿಕೆಯ ಅವಧಿಯ ಅಂತ್ಯದಿಂದ ಕ್ರಿ.ಶ. 170-180ರ ದಶಮಾನದ ತನಕ ಕ್ರೈಸ್ತರು ಸೈನ್ಯದಲ್ಲಿ ಸೇರಿದ್ದ ಯಾವುದೇ ರುಜುವಾತು ಅಲ್ಲಿಲ್ಲ’ವೆಂದು ರೋಲೆಂಡ್ ಬೈನ್ಟನ್ ಹೇಳಿದ್ದಾರೆ.’ (ಕ್ರಿಶ್ಚನ್ ಆ್ಯಟಿಟ್ಯೂಡ್ಸ್ ಟುವರ್ಡ್ ವಾರ್ ಆ್ಯಂಡ್ ಪೀಸ್ [ಎಬಿಂಗ್ಡನ್, 1960], ಪುಟ 67-8). . . . ‘ಕ್ರೈಸ್ತನು ಹಿಂಸಾತ್ಮಕ ಕೃತ್ಯಗಳಿಂದ ಹಿಮ್ಮೆಟ್ಟುವುದು ಅವನಿಗೆ ಸಹಜವಾದ ಮಾರ್ಗವೆಂದು ಜಸ್ಟಿನ್ ಮಾರ್ಟರ್ನ ನೆನಸಿಕೆ ಎಂದು ಸ್ವಿಫ್ಟ್ ಹೇಳುತ್ತಾರೆ.’”
14, 15. ಮಾನವ ಅಧಿಕಾರಿಗಳಿಗೆ ಆದಿ ಕ್ರೈಸ್ತರ ಸಂಬಂಧಕ ವಿಧೇಯತೆಯನ್ನು ಪ್ರಭಾವಿಸಿದ ಕೆಲವು ಬೈಬಲ್ ತತ್ವಗಳು ಯಾವುವು?
14 ಆದಿ ಕ್ರೆಸ್ತರು ಸೈನಿಕರಾಗಿ ಕೆಲಸ ಮಾಡಲಿಲ್ಲವೇಕೆ? ಅವರಲ್ಲಿ ಪ್ರತಿಯೊಬ್ಬನು ದೇವರ ವಾಕ್ಯವನ್ನು ಮತ್ತು ನಿಯಮವನ್ನು ಜಾಗರೂಕತೆಯಿಂದ ಅಭ್ಯಸಿಸಿ, ಬೈಬಲ್-ತರಬೇತಾದ ಮನಸ್ಸಾಕ್ಷಿಯ ಆಧಾರದ ಮೇಲೆ ವ್ಯಕ್ತಿಪರ ನಿರ್ಣಯವನ್ನು ಮಾಡಿದ್ದನೆಂಬದು ನಿಸ್ಸಂಶಯ. ಅವರು “ಲೋಕದ ಭಾಗವಾಗಿ” ಇರದೆ, ತಟಸ್ಥರಾಗಿದ್ದರು ಮತ್ತು ಅವರ ತಾಟಸ್ಥ್ಯವು ಈ ಲೋಕದ ಹೋರಾಟಗಳಲ್ಲಿ ಪಕ್ಷವನ್ನು ವಹಿಸದಂತೆ ನಿಷೇಧಿಸಿತ್ತು. (ಯೋಹಾನ 17:16; 18:36) ಅದಲ್ಲದೆ ಅವರು ದೇವರ ಸೊತ್ತಾಗಿದ್ದರು. (2 ತಿಮೊಥಿ 2:19) ರಾಜ್ಯಕ್ಕಾಗಿ ತಮ್ಮ ಜೀವವನ್ನು ಅರ್ಪಿಸುವುದು ಎಂದರೆ ದೇವರಿಗೆ ಸೇರಿದ್ದನ್ನು ಕೈಸರನಿಗೆ ಕೊಡುವ ಅರ್ಥದಲ್ಲಿತ್ತು. ಅಷ್ಟಲ್ಲದೆ ಅವರು, ಪ್ರೀತಿಯಲ್ಲಿ ಒಂದಾಗಿ ಕಟ್ಟಲ್ಪಟ್ಟ ಒಂದು ಅಂತರ್ರಾಷ್ಟ್ರೀಯ ಭ್ರಾತೃತ್ವದ ಭಾಗವಾಗಿದ್ದಾರೆ. (ಯೋಹಾನ 13:34, 35; ಕೊಲೊಸ್ಸೆ 3:14; 1 ಪೇತ್ರ 4:8; 5:9) ಜೊತೆ ಕ್ರೈಸ್ತನನ್ನು ಹತಿಸುವ ಸಂಭವನೀಯತೆಯೊಂದಿಗೆ, ಒಳ್ಳೇ ಮನಸ್ಸಾಕ್ಷಿಯಿಂದ ಅವರು ಶಸ್ತ್ರ ವನ್ನೆತ್ತಲಾರರು.
15 ಅದಲ್ಲದೆ ಕ್ರೈಸ್ತರು, ಸಾಮ್ರಾಟನ ಭಕ್ತಿಯೇ ಮುಂತಾದ ಧಾರ್ಮಿಕ ಆಚಾರಗಳಲ್ಲಿ ಪಾಲಿಗರಾಗಶಕ್ತರಲ್ಲ. ಫಲಿತಾಂಶವಾಗಿ ಅವರು, “ಮಿಕ್ಕವರು ಸಹಜವಾಗಿಯೇ ಸಂಶಯಪಡುವ ವಿಲಕ್ಷಣ ಮತ್ತು ಅಪಾಯಕರ ಜನರಾಗಿ” ನೋಡಲ್ಪಡುತ್ತಿದ್ದರು. (ಸಿಲ್ಟ್ ದ ಬೈಬಲ್ ಸ್ಪೀಕ್ಸ್, ಬೈ ಡಬ್ಲ್ಯೂ.ಎ.ಸ್ಮಾರ್ಟ್) ‘ಯಾರಿಗೆ ಭಯವೂ ಅವರಿಗೆ ಭಯವನ್ನು’ ಕ್ರೈಸ್ತರು ಸಲ್ಲಿಸಬೇಕೆಂದು ಪೌಲನು ಬರೆದಿರುವುದಾದರೂ, ಯೆಹೋವನಿಗಾಗಿ ತಮ್ಮ ‘ಹೆಚ್ಚಿನ ಭಯವನ್ನು ಅಥವಾ ಗೌರವವನ್ನು’ ಅವರು ಮರೆತುಬಿಡಲಿಲ್ಲ. (ರೋಮಾಪುರ 13:7; ಕೀರ್ತನೆ 86:11) ಯೇಸು ತಾನೇ ಅಂದದ್ದು: “ದೇಹವನ್ನು ಕೊಂದು ಆತ್ಮವನ್ನು ಕೊಲಲ್ಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ಗೆಹೆನ್ನಾದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.”—ಮತ್ತಾಯ 10:28, NW.
16. (ಎ)ಯಾವ ಕ್ಷೇತ್ರಗಳಲ್ಲಿ ಕ್ರೈಸ್ತರು ಮೇಲಧಿಕಾರಿಗಳಿಗೆ ತಮ್ಮ ಅಧೀನತೆಯನ್ನು ಜಾಗ್ರತೆಯಿಂದ ತೂಗಿನೋಡಬೇಕು? (ಬಿ) 25ನೇ ಪುಟದ ಚೌಕಟ್ಟು ಏನನ್ನು ದೃಷ್ಟಾಂತಿಸುತ್ತದೆ?
16 ಕ್ರೈಸ್ತರಾದ ನಾವು ಇಂದು, ತದ್ರೀತಿಯ ಪಂಥಾಹ್ವಾನಗಳನ್ನು ಎದುರಿಸುತ್ತಿದ್ದೇವೆ. ವಿಗ್ರಹಾರಾಧನೆಯ ಯಾವುದೇ ಆಧುನಿಕ ಆವೃತ್ತಿಯಲ್ಲಿ—ವಿಗ್ರಹಕ್ಕೆ ಅಥವಾ ಕುರುಹಿಗೆ ಒಂದು ಭಕ್ತಿಭರಿತ ಕ್ರಿಯೆಯಲಾಗ್ಲಲಿ ಅಥವಾ ವ್ಯಕ್ತಿ ಯಾ ಸಂಘಟನೆಯನ್ನು ರಕ್ಷಣೆಯ ಮೂಲವಾಗಿ ನೋಡುವುದರಲ್ಲಾಗಲಿ, ನಾವು ಭಾಗವಹಿಸಶಕ್ತರಲ್ಲ. (1 ಕೊರಿಂಥ 10:14; 1 ಯೋಹಾನ 5:21) ಮತ್ತು ಆದಿ ಕ್ರೈಸ್ತರಂತೆಯೇ ನಮ್ಮ ಕ್ರಿಸ್ತೀಯ ತಾಟಸ್ಥ್ಯದಲ್ಲಿ ನಾವು ಒಪ್ಪಂದವನ್ನು ಮಾಡಿಕೊಳ್ಳಲಾರೆವು.—2 ಕೊರಿಂಥ 10:4 ಹೋಲಿಸಿರಿ.
“ಶಾಂತಭಾವದಿಂದ ಮತ್ತು ಆಳವಾದ ಗೌರವದಿಂದ”
17. ಮನಸ್ಸಾಕ್ಷಿಯ ನಿಮಿತ್ತವಾಗಿ ಬಾಧೆ ಪಡುವವರಿಗೆ ಪೇತ್ರನು ಯಾವ ಸೂಚನೆಯನ್ನು ಕೊಟ್ಟನು?
17 ನಮ್ಮ ಮನಸ್ಸಾಕ್ಷಿಪೂರ್ವಕವಾದ ನಿಲುವಿನ ಕುರಿತು ಅಪೊಸ್ತಲ ಪೇತ್ರನು ಬರೆಯುತ್ತಾ, ಅಂದದ್ದು: “ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರ ಕಡೆಗಿನ ಮನಸ್ಸಾಕ್ಷಿಯ ಕಾರಣ ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ.” (1 ಪೇತ್ರ 2:19, NW) ಹೌದು, ಹಿಂಸೆಯ ನಡುವೆಯೂ ಒಬ್ಬ ಕ್ರೈಸ್ತನು ದೃಢವಾಗಿ ನಿಲ್ಲುವಾಗ ಅದು ದೇವರ ದೃಷ್ಟಿಯಲ್ಲಿ ಶ್ಲಾಘ್ಯವಾಗಿದೆ, ಮತ್ತು ಕ್ರೈಸ್ತನ ನಂಬಿಕೆಯು ಬಲಗೊಳ್ಳುವ ಮತ್ತು ಶುದ್ಧೀಕರಣ ಹೊಂದುವ ಅಧಿಕ ಪ್ರಯೋಜನವೂ ಅಲ್ಲಿದೆ. (ಯಾಕೋಬ 1:2-4; 1 ಪೇತ್ರ 1:.6, 7; 5:8-10) ಪೇತ್ರನು ಇದನ್ನೂ ಬರೆದನು: “ನೀತಿಯ ನಿಮಿತ್ತವೇ ನೀವು ಬಾಧೆ ಪಟ್ಟರೆ ನೀವು ಧನ್ಯರೇ. ಅವರ ಬೆದರಿಸುವಿಕೆಗೆ ಹೆದರದೆ ಕಳವಳಪಡದೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರ್ರಿ; ಆದರೆ ಇದನ್ನು ಶಾಂತಭಾವದಿಂದಲೂ ಆಳವಾದ ಗೌರವದಿಂದಲೂ ಮಾಡಿರಿ.” (1 ಪೇತ್ರ 3:14, 15, NW) ಇದು ಸಹಾಯಕಾರಿ ಸೂಚನೆ ನಿಶ್ಚಯ!
18, 19. ನಮ್ಮ ಆರಾಧನಾ ಸ್ವಾತಂತ್ರ್ಯಕ್ಕೆ ಅಧಿಕಾರಿಗಳು ಸೀಮಿತಗಳನ್ನು ಹಾಕುವಾಗ, ಆಳವಾದ ಗೌರವ ಮತ್ತು ಸಮಂಜಸತೆಯ ಭಾವವು ನಮಗೆ ಹೇಗೆ ಸಹಾಯಕಾರಿಯು?
18 ಕ್ರೈಸ್ತನ ನಿಲುವನ್ನು ಅಧಿಕಾರಿಗಳು ತಪ್ಪು ತಿಳಿಯುವ ಕಾರಣ ಅಥವಾ ಕ್ರೈಸ್ತ ಪ್ರಪಂಚದ ಧರ್ಮ ಮುಖಂಡರು ಯೆಹೋವನ ಸಾಕ್ಷಿಗಳನ್ನು ಅಧಿಕಾರಿಗಳಿಗೆ ತಪ್ಪಾಗಿ ಪ್ರತಿನಿಧೀಕರಿಸಿದ ಕಾರಣ ಹಿಂಸೆಯು ಬರುವುದಾದರೆ, ನಿಜಸಂಗತಿಗಳನ್ನು ಅಧಿಕಾರಿಗಳ ಮುಂದೆ ವಿವರಿಸುವ ಮೂಲಕ ಒತ್ತಡವನ್ನು ನೀಗಿಸಬಹುದು. ಶಾಂತ ಸ್ವಭಾವ ಮತ್ತು ಆಳವಾದ ಗೌರವವನ್ನು ತೋರಿಸುವದರಿಂದ ಕ್ರೈಸ್ತನು, ಹಿಂಸಕರ ವಿರುದ್ಧ ಪ್ರತಿಯಾಗಿ ಹೋರಾಡಲಾರನು. ಆದರೂ ಅವನು, ತನ್ನ ನಂಬಿಕೆಯನ್ನು ಸಮರ್ಥಿಸುವುದಕ್ಕಾಗಿ ದೊರೆಯುವ ಎಲ್ಲಾ ನ್ಯಾಯಾಂಗ ಸಾಧನಗಳನ್ನುಪಯೋಗಿಸುವನು. ಅನಂತರವೇ ಅವನು, ವಿಷಯಗಳನ್ನು ಯೆಹೋವನ ಹಸ್ತಗಳಲ್ಲಿ ಬಿಟ್ಟುಕೊಡುವನು.—ಪಿಲಿಪ್ಪಿ 1:7; ಕೊಲೊಸ್ಸೆ 4:5, 6.
19 ಆಳವಾದ ಗೌರವವು ಕ್ರೈಸ್ತನನ್ನು, ಮನಸ್ಸಾಕ್ಷಿಯನ್ನು ಉಲ್ಲಂಘಿಸದೇ ಅಧಿಕಾರಕ್ಕೆ ವಿಧೇಯನಾಗಲು, ಅವನೆಷ್ಟು ದೂರ ಹೋಗ ಶಕ್ತನೋ ಅಷ್ಟು ದೂರ ಹೋಗುವಂತೆಯೂ ನಡಿಸುತ್ತದೆ. ಉದಾಹರಣೆಗೆ ಸಭಾ ಕೂಟಗಳು ನಿಷೇಧಿಸಲ್ಪಟ್ಟರೆ, ಯೆಹೋವನ ಮೇಜಿನಿಂದ ಉಣಿಸುವುದನ್ನು ಮುಂದರಿಸುವುದಕ್ಕೆ ಹೆಚ್ಚು ಎದ್ದು ಕಾಣದ ಮಾರ್ಗವನ್ನು ಅವನು ಕಂಡುಹಿಡಿಯುವನು. ಸರ್ವಶ್ರೇಷ್ಠ ಅಧಿಕಾರಿಯಾದ ಯೆಹೋವ ದೇವರು, ಪೌಲನ ಮೂಲಕವಾಗಿ ನಮಗೆ ಹೇಳುವುದು: “ಸಭೆಯಾಗಿ ಕೂಡಿಕೊಳ್ಳುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ.” (ಇಬ್ರಿಯ 10:24, 25) ಆದರೆ ಅಂಥ ಕೂಟಗಳನ್ನು ವಿವೇಚನೆಯಿಂದ ನಡಿಸಸಾಧ್ಯವಿದೆ. ಕೆಲವರೇ ಹಾಜರಿದ್ದರೂ ಸಹಾ, ದೇವರು ಅಂಥ ಏರ್ಪಾಡುಗಳನ್ನು ಆಶೀರ್ವದಿಸುವನೆಂಬ ಭರವಸ ನಮಗಿರ ಸಾಧ್ಯವಿದೆ—ಮತ್ತಾಯ 18:20 ಹೋಲಿಸಿ.
20. ಸುವಾರ್ತೆಯ ಬಹಿರಂಗ ಸಾರುವಿಕೆಯು ನಿಷೇಧಿಸಲ್ಪಟ್ಟರೆ, ಕ್ರೈಸ್ತರು ಹೇಗೆ ಆ ಪರಿಸ್ಥಿತಿಯೊಂದಿಗೆ ವ್ಯವಹರಿಸಬಹುದು?
20 ತದ್ರೀತಿಯಲ್ಲಿ ಕೆಲವು ಅಧಿಕಾರಗಳು, ಸುವಾರ್ತೆಯ ಬಹಿರಂಗ ಸಾರುವಿಕೆಯನ್ನು ನಿಷೇಧಿಸಿವೆ. ಆದರೆ ಸರ್ವಶ್ರೇಷ್ಠ ಅಧಿಕಾರಿಯಾದಾತನು, ಸ್ವತಃ ಯೇಸುವಿನ ಮುಖೇನ, “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು” ಎಂದು ಹೇಳಿರುವುದು, ಆ ಅಧಿಕಾರಿಗಳ ಕೈಕೆಳಗೆ ಜೀವಿಸುವ ಕ್ರೈಸ್ತರಿಗೆ ನೆನಪಿದೆ. (ಮಾರ್ಕ 13:10) ಆದಕಾರಣ ಅವರು, ಯಾವುದೇ ಕಷ್ಟನಷ್ಟ ಬಂದರೂ, ಸರ್ವಶ್ರೇಷ್ಠ ಅಧಿಕಾರಕ್ಕೆ ಅಧೀನರಾಗುವರು. ಸಾಧ್ಯವಾದಲ್ಲೆಲ್ಲಾ ಅಪೊಸ್ತಲರು ಬಹಿರಂಗವಾಗಿ ಮತ್ತು ಮನೆಯಿಂದ ಮನೆಗೆ ಸಾರಿದರು, ಆದರೆ ಜನರನ್ನು ತಲಪಲು ಅನೌಪಚಾರಿಕ ಸಾಕ್ಷಿಯೇ ಮುಂತಾದ ಬೇರೆ ಮಾರ್ಗಗಳಿವೆ. (ಯೋಹಾನ 4:7-15; ಅಪೊಸ್ತಲರ ಕೃತ್ಯಗಳು 5:42; 20:20) ಕೇವಲ ಬೈಬಲು ಮಾತ್ರವೇ ಉಪಯೋಗಿಸಲ್ಪಟ್ಟರೆ—ಹೆಚ್ಚಾಗಿ ಅಧಿಕಾರಿಗಳು ನಮ್ಮ ಸಾರುವ ಕಾರ್ಯಕ್ಕೆ ಅಡ್ಡಿ ಮಾಡುವುದಿಲ್ಲ, ಇದು, ಶಾಸ್ತ್ರ ವಚನಗಳಿಂದ ವಿವೇಚನೆ ಮಾಡಲು ಸಾಕ್ಷಿಗಳೆಲ್ಲರೂ ಚೆನ್ನಾಗಿ ತರಬೇತು ಹೊಂದುವ ಅಗತ್ಯವನ್ನು ಎತ್ತಿಹೇಳುತ್ತದೆ. (ಅಪೊಸ್ತಲರ ಕೃತ್ಯಗಳು 17:2, 17ನ್ನು ಹೋಲಿಸಿ.) ಧೈರ್ಯದಿಂದ, ಆದರೂ ಗೌರವಪೂರ್ವಕವಾಗಿ, ಇರುವ ಮೂಲಕ ಕ್ರೈಸ್ತರು ಮೇಲಧಿಕಾರಿಗಳ ಕೋಪವನ್ನು ಆಹ್ವಾನಿಸದೇ ಯೆಹೋವನಿಗೆ ವಿಧೇಯರಾಗುವ ಮಾರ್ಗವನ್ನು ಕಂಡುಕೊಂಡಾರು.—ತೀತ 3:1, 2.
21. ಕೈಸರನು ತನ್ನ ಹಿಂಸಿಸುವಿಕೆಯಲ್ಲಿ ನಿಷ್ಕರುಣಿಯಾಗಿದ್ದರೆ, ಯಾವ ಮಾರ್ಗವನ್ನು ಕ್ರೈಸ್ತನು ಆರಿಸಬೇಕು?
21 ಕೆಲವೊಮ್ಮೆಯಾದರೋ ಅಧಿಕಾರಿಗಳು, ಕ್ರೈಸ್ತರನ್ನು ಹಿಂಸಿಸುವುದರಲ್ಲಿ ನಿಷ್ಕರುಣೆಯಿಂದಿರುತ್ತಾರೆ. ಆಗ ಮಾತ್ರ ನಾವು, ಶುದ್ಧ ಮನಸ್ಸಾಕ್ಷಿಯಲ್ಲಿ, ಒಳ್ಳೇದನ್ನು ಮಾಡುವುದರಲ್ಲಿ ಕೇವಲ ತಾಳಿಕೊಂಡಿರ ಸಾಧ್ಯವಿದೆ. ಯುವಕ ಪ್ರಾಂಜ್ ರೈಟರ್, ಒಂದು ಆಯ್ಕೆಯನ್ನು ಎದುರಿಸಿದ್ದನು: ಅವನ ನಂಬಿಕೆಯನ್ನು ಬಿಟ್ಟುಕೊಡುವದು ಅಥವಾ ಸಾಯುವದು. ದೇವರ ಆರಾಧನೆಯನ್ನು ಬಿಟ್ಟುಕೊಡಲು ಅವನಿಗೆ ಸಾಧ್ಯವಿರಲಿಲ್ಲವಾದದರಿಂದ ಧೈರ್ಯದಿಂದ ಮರಣವನ್ನೇ ಅಪ್ಪಿದನು. ಸಾಯುವ ಮುಂಚಿನ ರಾತ್ರಿ ಪ್ರಾಂಜ್, ತನ್ನ ತಾಯಿಗೆ ಪತ್ರ ಬರೆದನು: “ನಾಳೆ ಬೆಳಿಗ್ಗೆ ನಾನು ವಧಿಸಲ್ಪಡುವೆನು. ನನ್ನ ಬಲವು ದೇವರಿಂದಲೇ, ಗತಕಾಲದಿಂದ ನಿಜಕ್ರೈಸ್ತರೆಲ್ಲರಿಗೆ ಯಾವಾಗಲೂ ಇದ್ದಂತೆಯೇ. . . ಮರಣದ ತನಕ ನೀವೂ ನಂಬಿಗಸ್ತರಾಗಿ ಉಳಿದರೆ, ಪುನರುತ್ಥಾನದಲ್ಲಿ ನಾವು ಒಬ್ಬರನ್ನೊಬ್ಬರು ಪುನಃ ಸಂಧಿಸುವೆವು.”
22. ನಮಗೆ ಯಾವ ನಿರೀಕ್ಷೆ ಇದೆ ಮತ್ತು ಆ ತನಕ ನಾವು ಹೇಗೆ ನಡೆದುಕೊಳ್ಳಬೇಕು?
22 ಒಂದಾನೊಂದು ದಿನ ಮಾನವ ಕುಲವೆಲ್ಲವೂ ಕೇವಲ ಒಂದೇ ನಿಯಮದ ಕೆಳಗಿರುವುದು, ಅದ್ಯಾವದಂದರೆ ಯೆಹೋವ ದೇವರದ್ದೇ. ಆ ದಿನದ ತನಕ, ನಾವು ಶುದ್ಧ ಮನಸ್ಸಾಕ್ಷಿಯಿಂದ ದೇವರ ಏರ್ಪಾಡನ್ನು ಪರಿಪಾಲಿಸಬೇಕು ಮತ್ತು ಮೇಲಧಿಕಾರಿಗಳಿಗೆ ನಮ್ಮ ಸಂಬಂಧಕ ಅಧೀನತೆಯನ್ನು ಕಾಪಾಡಿಕೊಳ್ಳಬೇಕು, ಆದರೆ ಅದೇ ಸಮಯದಲ್ಲಿ ನಮ್ಮ ಸಾರ್ವಭೌಮ ಕರ್ತನಾದ ಯೆಹೋವನಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗುತ್ತಾ ಇರಬೇಕು.—ಫಿಲಿಪ್ಪಿ 4:5-7. (w90 11/1)
ನಿಮಗೆ ನೆನಪಿದೆಯೇ?
◻ ಮೇಲಧಿಕಾರಿಗಳಿಗೆ ಅಧೀನರಾಗಿರಲು ಅವಶ್ಯ ಕಾರಣವು ಯಾವುದು?
◻ ಕೈಸರನಿಂದ ವಿಧಿಸಲ್ಪಟ್ಟ ತೆರಿಗೆಗಳನ್ನು ಕೊಡಲು ನಾವೇಕೆ ಹಿಂಜರಿಯಬಾರದು?
◻ ಯಾವ ರೀತಿಯ ಮರ್ಯಾದೆಯನ್ನು ನಾವು ಅಧಿಕಾರಿಗಳಿಗೆ ಸಲ್ಲಿಸಬೇಕು?
◻ ಕೈಸರನಿಗೆ ನಮ್ಮ ಅಧೀನತೆಯು ಕೇವಲ ಸಂಬಂಧಕವೇಕೆ?
◻ ದೇವರದನ್ನು ಕೈಸರನು ನಿರ್ಬಂಧಿಸಿ ಕೇಳುವ ಕಾರಣ ನಾವು ಹಿಂಸಿಸಲ್ಪಟ್ಟರೆ, ಹೇಗೆ ಪ್ರತಿಕ್ರಿಯೆ ತೋರಿಸಬೇಕು?
[ಪುಟ 25 ರಲ್ಲಿರುವ ಚೌಕ]
ಆರಾಧನೆಯಲ್ಲ, ಗೌರವ
ಒಂದು ಬೆಳಗಾತ ಕ್ಲಾಸಿನಲ್ಲಿ ಟೆರ್ರ ಎಂಬ ಎಳೆಯ ಕೆನೇಡಿಯನ್ ಯೆಹೋವನ ಸಾಕ್ಷಿಯು, ಜೊತೆ ವಿದ್ಯಾರ್ಥಿಯನ್ನು ತನ್ನ ಟೀಚರ್ ಕ್ಲಾಸ್ನಿಂದ ತುಸು ವೇಳೆ ಹೊರಗೊಯ್ದದ್ದನ್ನು ಗಮನಿಸಿದಳು. ಆ ಮೇಲೆ ಸ್ವಲ್ಪದರಲ್ಲಿಯೇ ಟೀಚರ್ ಬಂದು, ಟೆರ್ರಳನ್ನು ತನ್ನೊಂದಿಗೆ ಪ್ರಾಧ್ಯಾಪಕರ ಆಫೀಸಿಗೆ ಬರುವಂತೆ ಕೇಳಿಕೊಂಡನು.
ಅಲ್ಲಿ ಬಂದಾಗ, ಪ್ರಾಧ್ಯಾಪಕನ ಮೇಜಿಗೆ ಅಡವ್ಡಾಗಿ ಕೆನೇಡಿಯನ್ ಧ್ವಜವು ಹಾಸಿರುವುದನ್ನು ಟೆರ್ರ ಗಮನಿಸಿದಳು. ಧ್ವಜದ ಮೇಲೆ ಉಗುಳುವಂತೆ ಟೀಚರ್ ಟೆರ್ರಗೆ ಹೇಳಿದನು! ಟೆರ್ರಳು ರಾಷ್ಟ್ರ ಗೀತವನ್ನು ಹಾಡುತ್ತಿರಲಿಲ್ಲ ಮತ್ತು ಧ್ವಜವಂದನೆ ಮಾಡುತ್ತಿರಲಿಲ್ಲ, ಇದನ್ನೂ ಮಾಡದಿರುವದಕ್ಕೆ ಅಲ್ಲಿ ಕಾರಣವಿರದರ್ದಿಂದ ಅವನು ಹಾಗೆ ಸೂಚಿಸಿದನು. ಟೆರ್ರ ನಿರಾಕರಿಸಿದಳು, ಯೆಹೋವನ ಸಾಕ್ಷಿಗಳು ಧ್ವಜಕ್ಕೆ ಭಕ್ತಿಯನ್ನು ಸಲ್ಲಿಸುವುದಿಲ್ಲವಾದರೂ ಅವರದನ್ನು ಗೌರವಿಸುತ್ತಾರೆ, ಎಂದವಳು ವಿವರಿಸಿದಳು.
ಹಿಂದೆ ಕ್ಲಾಸ್ಗೆ ಬಂದಾಗ, ತಾನೀಗಲೇ ಒಂದು ಪ್ರಯೋಗವನ್ನು ನಡಿಸಿದೆ ಎಂದು ಅಧ್ಯಾಪಕ ಪ್ರಕಟಿಸಿದನು. ಇಬ್ಬರು ವಿದ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ ಪ್ರಾಧ್ಯಾಪಕರ ಆಫೀಸಿಗೆ ಒಯ್ದು, ಧ್ವಜದ ಮೇಲೆ ಉಗುಳುವಂತೆ ಅವರಿಗೆ ಸೂಚಿಸಿದೆ ಎಂದನವನು. ಮೊದಲಿಗಳು, ದೇಶಭಕ್ತಿಯ ಆಚರಣೆಗಳಲ್ಲಿ ಪಾಲಿಗಳಾಗುತ್ತಿದ್ದಳು ಆದರೆ ಧ್ವಜದ ಮೇಲೆ ಉಗುಳುವಂತೆ ಹೇಳಿದಾಗ, ಉಗುಳಿದಳು. ಇದಕ್ಕೆ ಪ್ರತಿಹೋಲಿಕೆಯಲ್ಲಿ ಟೆರ್ರ, ರಾಷ್ಟ್ರ ಗೀತೆ ಹಾಡುತ್ತಿರಲಿಲ್ಲ ಮತ್ತು ಧ್ವಜವಂದನೆ ಮಾಡುತ್ತಿರಲಿಲ್ಲ ಆದರೂ ಧ್ವಜಕ್ಕೆ ಈ ರೀತಿ ಅಗೌರವವನ್ನು ತೋರಿಸಲು ಅವಳು ನಿರಾಕರಿಸಿದಳು. ಯೋಗ್ಯ ಗೌರವವನ್ನು ತೋರಿಸಿದವಳು ಟೆರ್ರಳೇ, ಎಂದು ಟೀಚರ್ ಎತ್ತಿಹೇಳಿದನು.—1990 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ.
[ಪುಟ 21 ರಲ್ಲಿರುವ ಚಿತ್ರ ಕೃಪೆ]
French Embassy Press & Information Division
USSR Mission to the UN