ಯೇಸುವಿನ ದಿವ್ಯಭಕ್ತಿಯ ಮಾದರಿಯನ್ನು ಅನುಸರಿಸಿರಿ
“ಈ ದಿವ್ಯಭಕ್ತಿಯ ಪವಿತ್ರ ರಹಸ್ಯ ಶೇಷ್ಟವೆಂಬದು ಒಪ್ಪಿಕೊಳ್ಳಬೇಕಾದ ವಿಷಯ. ಅವನು [ಯೇಸು] ಶರೀರದಲ್ಲಿ ಕಾಣಿಸಲ್ಪಟ್ಟನು.”-1 ತಿಮೋಥಿ 3:16, NW.
1. (ಎ)ಯಾವ ಪ್ರಶ್ನೆ 4000 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಉತ್ತರವಿಲ್ಲದ್ದಾಗಿತ್ತು? (ಬಿ) ಇದಕ್ಕೆ ಯಾವಾಗ ಮತ್ತು ಹೇಗೆ ಉತ್ತರ ದೊರೆಯಿತು?
ಆ ಪ್ರಶ್ನೆಗೆ 4,000 ಕ್ಕಿಂತಲೂ ಹೆಚ್ಚು ವರ್ಷಕಾಲ ಉತ್ತರ ದೊರೆತಿರಲಿಲ್ಲ. ಸಮಗ್ರತೆ ಕಾಪಾಡಿಕೊಳ್ಳುವುದರಲ್ಲಿ ವಿಫಲನಾದ ಪ್ರಥಮ ಮನುಷ್ಯ ಆದಾಮನ ಕಾಲದಿಂದ ಹಿಡಿದು ಇದ್ದ ಪ್ರಶ್ನೆ ಅದಾಗಿತ್ತು: ದಿವ್ಯಭಕ್ತಿ ಮಾನವರ ಮಧ್ಯೆ ಹೇಗೆ ಕಾಣಿಸಿಕೊಳ್ಳಬಹುದು? ಕೊನೆಗೆ, ಸಾ.ಶ. ಒಂದನೆಯ ಶತಮಾನದಲ್ಲಿ ದೇವಕುಮಾರನ ಭೂಮ್ಯಾಗಮನದ ಸಮಯ ಇದಕ್ಕೆ ಉತ್ತರ ಕೊಡಲ್ಪಟ್ಟಿತು. ಪ್ರತಿಯೊಂದು ಯೋಚನೆ, ನುಡಿ ಮತ್ತು ನಡೆಯಲ್ಲಿ ಯೇಸು ಕ್ರಿಸ್ತನು ಯೆಹೋವನಿಗೆ ತನ್ನ ವೈಯಕ್ತಿಕ ಅನುರಾಗವನ್ನು ಪ್ರದರ್ಶಿಸಿದನು. ಹೀಗೆ ಅವನು ‘ದಿವ್ಯ ಭಕ್ತಿಯ ಪವಿತ್ರ ರಹಸ್ಯವನ್ನು’ ಬಿಚ್ಚಿ ಸಮರ್ಪಿತ ಮಾನವರು ತಮ್ಮ ಭಕ್ತಿಯನ್ನು ಕಾಪಾಡಿಕೊಳ್ಳುವ ವಿಧವನ್ನು ತೋರಿಸಿದನು.—1ತಿಮೋಥಿ 3:16.
2. ದಿವ್ಯ ಭಕ್ತಿಯನ್ನು ಅನುಸರಿಸುವುದರಲ್ಲಿ ನಾವೇಕೆ ಯೇಸುವಿನ ಮಾದರಿಯನ್ನು ನಿಕಟವಾಗಿ ಪರಿಗಣಿಸಬೇಕು?
2. ನಾವು ಸಮರ್ಪಿತ, ದೀಕ್ಷಾಸ್ನಾತ ಕ್ರೈಸ್ತರಾಗಿ ದಿವ್ಯ ಭಕ್ತಿಯನ್ನು ಅನುಸರಿಸುವಾಗ ಯೇಸುವಿನ ಮಾದರಿಯನ್ನು ‘ಒತ್ತಾಗಿ ಪರಿಗಣಿಸುವುದು’ ಹಿತಕರವು. (ಇಬ್ರಿಯ 12:3) ಏಕೆ? ಎರಡು ಕಾರಣಗಳಿಂದಾಗಿ. ಒಂದನೆಯದಾಗಿ, ಯೇಸುವಿನ ಮಾದರಿ ನಾವು ದಿವ್ಯ ಭಕ್ತಿಯನ್ನು ಬೆಳೆಸುವಂತೆ ಸಹಾಯ ಮಾಡಬಲ್ಲದು. ಯೇಸುವಿಗೆ ತನ್ನ ತಂದೆಯ ಪರಿಚಯ ಇನ್ನಾವನಿಗಿಂತಲೂ ಹೆಚ್ಚಿತ್ತು. (ಯೋಹಾನ 1:18) ಮತ್ತು ಯೇಸು ಯೆಹೋವನ ರೀತಿ ಮತ್ತು ಗುಣಗಳನ್ನು ಎಷ್ಟು ಒತ್ತಾಗಿ ಅನುಕರಿಸಿದ್ದನೆಂದರೆ “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” ಎಂದು ಅವನು ಹೇಳ ಸಾಧ್ಯವಾಯಿತು. (ಯೋಹಾನ 14:9) ಹಾಗಾದರೆ, ಯೇಸುವಿನ ಜೀವನ ಮತ್ತು ಶುಶ್ರೂಷೆಯ ಮೂಲಕ ನಾವು ಯೆಹೋವನ ಕೋಮಲ ಗುಣಗಳ ಹೆಚ್ಚು ಆಳವಾದ ಗಣ್ಯತೆಯನ್ನು ಸಂಪಾದಿಸಿ ಹೀಗೆ ನಮ್ಮ ಪ್ರಿಯ ಸೃಷ್ಟಿಕರ್ತನಿಗೆ ನಮ್ಮೊಂದಿಗಿರುವ ವೈಯಕ್ತಿಕ ಸಂಬಂಧವನ್ನು ಬಲಪಡಿಸಬಲ್ಲೆವು. ಎರಡನೆಯದಾಗಿ, ಯೇಸುವಿನ ಮಾದರಿ ನಾವು ದಿವ್ಯಭಕ್ತಿಯನ್ನು ತೋರಿಸುವಂತೆ ಸಹಾಯಮಾಡಬಲ್ಲದು. ಅವನು ದಿವ್ಯಭಕ್ತಿ ತೋರಿಸುತ್ತಾ ನಡತೆಯ ಪರಿಪೂರ್ಣ ಮಾದರಿಯನ್ನಿಟ್ಟನು. ಆದುದರಿಂದ, ಕ್ರಿಸ್ತನನ್ನು ಹೇಗೆ ‘ಧರಿಸಿಕೊಳ್ಳುವುದು’ ಅಂದರೆ ಅವನನ್ನು ನಮೂನೆಯಾಗಿ ತಕ್ಕೊಂಡು ಅವನ ಮಾದರಿಯನ್ನು ಹೇಗೆ ಅನುಸರಿಸಬಹುದೆಂಬದನ್ನು ಪರ್ಯಾಲೋಚಿಸುವುದು ನಮಗೆ ಹಿತಕರ.—ರೋಮಾಪುರ 13:14.
3. ನಮ್ಮ ಸ್ವಂತ ಬೈಬಲಧ್ಯಯನ ಕಾರ್ಯಕ್ರಮದಲ್ಲಿ ಏನೆಲ್ಲಾ ಸೇರಿರಬೇಕು ಮತ್ತು ಏಕೆ?
3. ಯೇಸು ಹೇಳಿದ ಮತ್ತು ನೋಡಿದ ಸರ್ವ ವಿಷಯಗಳು ಲಿಖಿತ ರೂಪದಲ್ಲಿರಲಿಲ್ಲ. (ಯೋಹಾನ 21:25) ಆದುದರಿಂದ, ದೈವಿಕ ಪ್ರೇರಣೆಯ ಮೂಲಕ ಬರೆಯಲ್ಪಟ್ಟ ವಿಷಯಗಳು ನಮಗೆ ವಿಶೇಷ ಸ್ವಾರಸ್ಯಕರವಾಗಿರಬೇಕು. ಈ ಕಾರಣದಿಂದ ನಮ್ಮ ವೈಯಕ್ತಿಕ ಬೈಬಲ್ ಅಧ್ಯಯನ ಕಾರ್ಯಕ್ರಮದಲ್ಲಿ ಯೇಸುವಿನ ಜೀವನ ವೃತ್ತಾಂತಗಳ ವಾಚನ ಸೇರಿರಬೇಕು. ಆದರೆ ದಿವ್ಯ ಭಕ್ತಿಯ ಅನುಸರಣದಲ್ಲಿ ಇಂಥ ವಾಚನ ನಮಗೆಸಹಾಯ ಮಾಡಬೇಕಾದರೆ, ನಾವು ಓದುವುದನ್ನು ಗಣ್ಯತೆಯಿಂದ ಯೋಚಿಸಲು ಸಮಯ ಕೊಡಬೇಕು. ಮತ್ತು ಸುಲಭ ವಿಷಯಗಳ ಹಿಂದಿರುವ ವಿಚಾರವನ್ನೂ ಪರೀಕ್ಷಿಸಲು ನಾವು ಎಚ್ಚರವಿರಬೇಕು.
ತಂದೆಯಂತೆ ಮಗ
4. (ಎ)ಯೇಸು ಅನುರಾಗ ಮತ್ತು ಆಳವಾದ ಅನುಕಂಪದ ವ್ಯಕ್ತಿಯೆಂದು ಯಾವುದು ತೋರಿಸುತ್ತದೆ? (ಬಿ) ಇತರರೊಂದಿಗೆ ವ್ಯವಹರಿಸುವಾಗ ಯೇಸು ಯಾವ ಮೊದಲ ಹೆಜ್ಜೆಯಿಟ್ಟನು?
4. ಒಂದು ಉದಾಹರಣೆಯನ್ನು ಪರಿಗಣಿಸಿರಿ. ಯೇಸು ಅನುರಾಗದ ಮತ್ತು ಆಳವಾದ ಅನುಕಂಪದ ಮನುಷ್ಯನಾಗಿದ್ದನು. ಮಾರ್ಕ 10:1, 10, 13, 17 ಮತ್ತು 35 ರಲ್ಲಿ, ಎಲ್ಲಾ ವಯಸ್ಸಿನ ಮತ್ತು ಹಿನ್ನೆಲೆಗಳ ಜನರು ಅವನನ್ನು ಸಮೀಪಿಸುವುದು ಸುಲಭವೆಂದು ಕಂಡುಕೊಂಡರು ಎಂಬದನ್ನು ಗಮನಿಸಿ. ಎರಡು ಸಲವಾದರೂ ಅವನು ಮಕ್ಕಳನ್ನು ಅಪ್ಪಿಕೊಂಡನು. (ಮಾರ್ಕ 9:36; 10:16) ಜನರು, ಮಕ್ಕಳು ಸಹಾ, ಯೇಸುವಿನೊಂದಿಗೆ ಹಾಯಾಗಿ ಇದ್ದದ್ದೇಕೆ? ಅವನಿಗೆ ಅವರಲ್ಲಿ ಯಥಾರ್ಥ, ನೈಜ ಅಭಿರುಚಿ ಇದದ್ದರಿಂದಲೇ. (ಮಾರ್ಕ 1:40, 41) ಸಹಾಯ ಬೇಕಿದ್ದವರಿಗೆ ಅವನು ಅನೇಕ ಸಲ ಸಹಾಯ ಕೊಡಲು ಮೊದಲಹೆಜ್ಜೆ ಇಟ್ಟದ್ದರಲ್ಲಿ ಇದು ರುಜುವಾಗುತ್ತದೆ. ಸತ್ತಿದ್ದ ಮಗನನ್ನು ಕೊಂಡೊಯ್ಯುತ್ತಿದ್ದಾಗ ಅವನು ನಾಯಿನಿನ ವಿಧವೆಯನ್ನು “ಕಂಡನು” ಎಂದು ನಾವು ಓದುತ್ತೇವೆ. ಬಳಿಕ “ಹತ್ತಿರಕ್ಕೆ” ಹೋಗಿ ಹುಡುಗನನ್ನು ಪುನುರುತ್ಥಾನ ಗೊಳಿಸಿದನು. ಯಾರೂ ಅವನನ್ನು ಹಾಗೆ ಮಾಡುವಂತೆ ಕೇಳಿದರ್ದ ಪ್ರಸ್ತಾಪವನ್ನು ನಾವಲ್ಲಿ ಕಾಣುವುದಿಲ್ಲ. (ಲೂಕ 7:13-15) ನಡುಬಗ್ಗಿದ ಸ್ತ್ರೀ ಮತ್ತು ಜಲೋದರ ರೋಗವಿದ್ದ ಮನುಷ್ಯನನ್ನೂ ಗುಣಪಡಿಸುವಾಗ ಅವನು ಕೇಳಲ್ಪಡದೆನೇ ಮೊದಲಹೆಜ್ಜೆಯಿಟ್ಟು ಗುಣಪಡಿಸಿದನು.—ಲೂಕ 13:11-13; 1:1-4.
5. ಯೇಸುವಿನ ಶುಶ್ರೂಷೆಯ ಈ ವೃತ್ತಾಂತಗಳು ಯೆಹೋವನ ಗುಣ ಮತ್ತು ಮಾರ್ಗಗಳ ಕುರಿತು ನಮಗೇನನ್ನು ಕಲಿಸುತ್ತವೆ?
5. ಇಂತಹ ಘಟನೆಗಳನ್ನು ಓದುವಾಗ ನಿಂತು ಹೀಗೆ ಪ್ರಶ್ನಿಸಿಕೊಳ್ಳಿರಿ: ‘ಯೇಸು ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಸರಿಸಿದರಿಂದ ಯೆಹೋವನ ಗುಣ ಮತ್ತು ಮಾರ್ಗಗಳ ಕುರಿತು ಈ ವೃತ್ತಾಂತಗಳು ನಮಗೇನನ್ನು ತಿಳಿಸುತ್ತವೆ? ಯೆಹೋವನು ಅನುರಾಗ ಮತ್ತು ಆಳವಾದ ಅನುಕಂಪದ ದೇವರೆಂದು ಇವು ನಮಗೆ ಪುನರಾಶ್ವಾಸನೆ ನೀಡಬೇಕು. ಮಾನವ ಸಂತತಿಯಲ್ಲಿ ಆತನಿಗಿರುವ ಬಾಳುವ ಅತ್ಯಾಸಕ್ತಿಯು ಅವರೊಂದಿಗೆ ವ್ಯವಹರಿಸುವದರಲ್ಲಿ ಮೊದಲಹೆಜ್ಜೆ ಇಡುವಂತೆ ಆತನನ್ನು ಪ್ರೇರಿಸಿದೆ. ತನ್ನ ಪುತ್ರನನ್ನು “ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ” ಕೊಡುವಂತೆ ಆತನನ್ನು ಯಾರೂ ಒತ್ತಾಯಿಸಬೇಕಿರಲಿಲ್ಲ. (ಮತ್ತಾಯ 20:28; ಯೋಹಾನ 3:16) ಪ್ರೀತಿಯಿಂದ ತನ್ನನ್ನು ಸೇವಿಸುವವರ ಕಡೆ “ಒಲುಮೆದೋರುವ” ಸಂದರ್ಭಗಳಿಗಾಗಿ ಆತನು ನೋಡುತ್ತಾನೆ. (ಧರ್ಮೋಪದೇಶ 10:15) ಬೈಬಲು ಹೇಳುವಂತೆ, “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥ ಮನಸ್ಸುಳ್ಳವರ ಕಡೆಗೆ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”—2 ಪೂರ್ವಕಾಲ 16:9.
6. ನಾವು ಯೇಸುವಿನಲ್ಲಿ ಕಂಡುಬಂದ ಅನುರಾಗ ಮತ್ತು ಆಳವಾದ ಅನುಕಂಪವನ್ನು ಸ್ಮರಿಸುವಾಗ ಏನು ಪರಿಣಮಿಸುತ್ತದೆ?
6. ಮಗನು ತೋರಿಸಿದ ಯೆಹೋವನ ಅನುರಾಗ ಮತ್ತು ಆಳವಾದ ಅನುಕಂಪದ ಕುರಿತು ಈ ರೀತಿ ಧ್ಯಾನಿಸುವುದು ನಮ್ಮ ಹೃದಯವನ್ನು ತಟ್ಟಿ, ಅದನ್ನು ಅತನ ಕೋಮಲವಾದ ಮತ್ತು ಹಿಡಿಸುವ ಗುಣಗಳಿಗೆ ನಮ್ಮನ್ನು ಇನ್ನೂ ಹೆಚ್ಚಿನ ಗಣ್ಯತೆಯಿಂದ ತುಂಬಿಸುವುದು. ಇದು, ಪ್ರತಿಯಾಗಿ, ನಮ್ಮನ್ನು ಆತನ ಬಳಿಗೆ ಸೆಳೆಯುವುದು. ಆಗ ನೀವು ಆತನನ್ನು ಎಲ್ಲಾ ಸಮಯಗಳಲ್ಲಿ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ಯಾವ ತಡೆಯೂ ಇಲ್ಲದೆ ಪ್ರಾರ್ಥನೆಯಲ್ಲಿ ಗೋಚರಿಸುವಂತೆ ಪ್ರಚೋದಿಸಲ್ಪಡುವಿರಿ. (ಕೀರ್ತನೆ 65:2) ಇದು ಆತನಿಗೆ ನಿಮ್ಮ ವೈಯಕ್ತಿಕ ಅನುರಾಗವನ್ನು ಬಲಪಡಿಸುವುದು.
7. ಯೆಹೋವನ ಅನುರಾಗ ಮತ್ತು ಆಳವಾದ ಅನುಕಂಪವನ್ನು ಯೋಚಿಸಿದ ಬಳಿಕ ನಾವೇನು ಕೇಳಿಕೊಳ್ಳಬೇಕು, ಮತ್ತು ಏಕೆ?
7. ಆದರೆ ದಿವ್ಯಭಕ್ತಿಯಲ್ಲಿ ಕೇವಲ ಆರಾಧನಾ ಭಾವಕ್ಕಿಂತ ಹೆಚ್ಚಿನದ್ದು ಸೇರಿದೆ ಎಂದು ನೆನಪಿಡಿರಿ. ಬೈಬಲ್ ಪಂಡಿತ ಆರ್. ಲೆನ್ಸ್ಕಿ ಗಮನಿಸುವಂತೆ ಅದರಲ್ಲಿ, “ನಮ್ಮ ಪೂರ್ತಿ ಪೂಜ್ಯ ಆರಾಧನಾ ಮನೋಭಾವ ಮತ್ತು ಅದರಿಂದ ಹೊರಬರುವ ವರ್ತನೆಗಳು ಸೇರಿವೆ.” (ಒತ್ತು ನಮ್ಮದು.) ಆದ್ದರಿಂದ, ಯೇಸುವಿನ ಮಾದರಿಯಲ್ಲಿ ಕಂಡುಬರುವ ಯೆಹೋವನ ಅನುರಾಗ ಮತ್ತು ಆಳವಾದ ಅನುಕಂಪವನ್ನು ಧ್ಯಾನಿಸಿದ ಬಳಿಕ ‘ಈ ವಿಷಯದಲ್ಲಿ ನಾನು ಯೆಹೋವನನ್ನು ಇನ್ನೂ ಹೆಚ್ಚು ಹೇಗೆ ಅನುಸರಿಸಬಲ್ಲೆನು? ನಾನು ಸಮೀಪಿಸಲು ಸುಲಭನೆಂದು ಇತರರು ಎಣಿಸುತ್ತಾರೋ?’ ಎಂದು ಪ್ರಶ್ನಿಸಿಕೊಳ್ಳಿ. ನೀವು ಹೆತ್ತವರಾಗಿರುವಲ್ಲಿ ಮಕ್ಕಳಿಗೆ ಸುಲಭವಾಗಿ ದೊರೆಯುವವರಾಗಬೇಕು. ಸಭಾ ಹಿರಿಯರಾಗಿರುವಲ್ಲಿ ನಿಶ್ಚಯವಾಗಿ ನೀವು ಸುಗಮ್ಯರಾಗಿರಬೇಕು. ಹಾಗಾದರೆ ನಿಮ್ಮನ್ನು ಸಮೀಪಿಸಲು ಹೆಚ್ಚು ಸುಲಭವಾಗುವಂತೆ ಯಾವುದು ಮಾಡುವುದು? ಅನುರಾಗ ಮತ್ತು ಅನುಕಂಪವೇ. ನೀವು ಇತರರಲ್ಲಿ ಯಥಾರ್ಥವಾದ, ನೈಜ ಅಭಿರುಚಿಯನ್ನು ಬೆಳೆಸತಕ್ಕದ್ದು. ನೀವು ಇತರರ ಕುರಿತು ನಿಜವಾಗಿ ಚಿಂತಿಸುವವರಾಗಿದ್ದು ಅವರ ಪರವಾಗಿ ವ್ಯಯಿಸಿಕೊಳ್ಳುವವರಾದರೆ ಅವರದನ್ನು ತಿಳಿದು ನಿಮ್ಮ ಕಡೆಗೆ ಆಕರ್ಶಿಸಲ್ಪಡುವರು.
8. (ಎ)ಯೇಸುವಿನ ಕುರಿತು ಬೈಬಲ್ ವೃತ್ತಾಂತಗಳನ್ನು ಓದುವಾಗ ನಾವೇನು ಮನಸ್ಸಿನಲ್ಲಿಡಬೇಕು? (ಬಿ) ಪಾದಟಿಪ್ಪಣಿಯಲ್ಲಿ ಕೊಟ್ಟಿರುವ ವೃತ್ತಾಂತಗಳಿಂದ ನಾವೇನನ್ನು ಕಲಿಯುತ್ತೇವೆ?
8. ಹೀಗೆ, ನೀವು ಯೇಸುವಿನ ಕುರಿತ ಬೈಬಲ್ ವೃತ್ತಾಂತಗಳನ್ನು ಓದುವಾಗ ಅವನ ನಡೆ ನುಡಿಗಳಿಂದ ಯೆಹೋವನು ಎಂತಹ ವ್ಯಕ್ತಿಯೆಂಬ ವಿಷಯದಲ್ಲಿ ಎಷ್ಟೋ ಅಧಿಕ ವಿಷಯಗಳನ್ನು ಕಲಿಯಬಹುದೆಂದು ಮನಸ್ಸಲ್ಲಿಡಿರಿ.a ಮತ್ತು ಯೇಸುವಿನಲ್ಲಿ ಪ್ರತಿಬಿಂಬಿಸಿರುವ ದೇವರ ಗುಣಗಳಿಗೆ ನಿಮ್ಮ ಗಣ್ಯತೆ ನೀವು ಆತನಂತೆ ಆಗುವಂತೆ ಪ್ರಚೋದಿಸುವಲ್ಲಿ, ನೀವು ನಿಮ್ಮ ದೇವಭಕ್ತಿಯ ರುಜುವಾತನ್ನು ಕೊಡುತ್ತೀರಿ.
ಕುಟುಂಬ ಸದಸ್ಯರಿಗೆ ದಿವ್ಯಭಕ್ತಿ ತೋರಿಸುವುದು
9, 10. (ಎ)ಯೇಸು ಸಾಯುವುದಕ್ಕೆ ತುಸು ಮೊದಲು ತನ್ನ ತಾಯಿ ಮರಿಯಳಿಗೆ ಪ್ರೀತಿ ಮತ್ತು ಚಿಂತೆಯನ್ನು ಹೇಗೆ ತೋರಿಸಿದನು? (ಬಿ) ಮರಿಯಳ ಪರಾಮರಿಕೆಯನ್ನು ತನ್ನ ಸ್ವಂತ ತಮ್ಮಂದಿರಲ್ಲಿ ಒಬ್ಬರಿಗಲ್ಲ, ಅಪೋಸ್ತಲ ಯೋಹಾನನಿಗೆ ಯೇಸು ಏಕೆ ಒಪ್ಪಿಸಿದ್ದಿರಬೇಕು?
9. ಯೇಸು ಕ್ರಿಸ್ತನ ಜೀವನ ಮತ್ತು ಶುಶ್ರೂಷೆ, ದಿವ್ಯ ಭಕ್ತಿಯನ್ನು ಹೇಗೆ ಪ್ರದರ್ಶಿಸಬೇಕೆಂಬದರ ಕುರಿತು ಹೆಚ್ಚಿನ ವಿಷಯಗಳನ್ನು ತೋರಿಸುತ್ತದೆ. ಯೋಹಾನ 19:25-27 ರಲ್ಲಿ ಒಂದು ಮನಮುಟ್ಟುವ ಮಾದರಿಯಿದೆ. ನಾವು ಓದುವುದು: “ಯೇಸುವಿನ ಶೂಲದ ಬಳಿಯಲ್ಲಿ ಆತನ ತಾಯಿಯಾ ಆತನ ತಾಯಿಯ ತಂಗಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗಲ್ದದ ಮರಿಯಳೂ ನಿಂತಿದ್ದರು. ಯೇಸು ತನ್ನ ತಾಯಿಯನ್ನೂ ಹತ್ತರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯ [ಯೋಹಾನ] ನನ್ನೂ ನೋಡಿ ತಾಯಿಗೆ- ಅಮ್ಮಾ, ಇಗೋ ನಿನ್ನ ಮಗನು ಎಂದು ಹೇಳಿದನು. ತರುವಾಯ ಆ ಶಿಷ್ಯನಿಗೆ- ಇಗೋ ನಿನ್ನ ತಾಯಿ ಎಂದು ಹೇಳಿದನು. ಆ ಹೊತ್ತಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡನು.”
10. ಭಾವಿಸಿರಿ! ತನ್ನ ಭೂಜೀವಿತವನ್ನು ಒಪ್ಪಿಸಿಕೊಡುವುದಕ್ಕೆ ತುಸು ಕ್ಷಣಗಳಿಗೆ ಮೊದಲು ಯೇಸುವಿನ ಪ್ರೀತಿ ಮತ್ತು ಚಿಂತೆ, ಅವನು [ಅಷ್ಟರೊಳೆಗೆ ವಿಧವೆಯಾಗಿದ್ದ] ತನ್ನ ತಾಯಿ ಮರಿಯಳನ್ನು ಪ್ರೀತಿಯ ಅಪೋಸ್ತಲ ಯೋಹಾನನ ಕೈಗೊಪ್ಪಿಸುವಂತೆ ಪ್ರೇರೇಪಿಸಿತು. ಆದರೆ ಯೋಹಾನನೇಕೆ? ತನ್ನ ಸ್ವಂತ ಶಾರೀರಿಕ ಸಹೋದರರನ್ನು ಅವನೇಕೆ ಕೇಳಲಿಲ್ಲ? ಏಕೆಂದರೆ ಮರಿಯಳ ಶಾರೀರಿಕ ಮತ್ತು ಪ್ರಾಪಂಚಿಕ ಅವಶ್ಯಕತೆಗಳ ಕುರಿತು ಮಾತ್ರವಲ್ಲ ವಿಶೇಷವಾಗಿ ಆಕೆಯ ಆತ್ಮಿಕ ಹಿತದ ಕುರಿತು ಅವನು ಚಿಂತೆಮಾಡಿದ್ದನು. ಮತ್ತು (ಪ್ರಾಯಶ: ಸೋದರ ಮಾವನ ಮಗನಾಗಿದ್ದ) ಯೋಹಾನನು ತನ್ನ ನಂಬಿಕೆಯನ್ನು ರುಜುಪಡಿಸಿದ್ದನು. ಆದರೆ ಯೇಸುವಿನ ಮಾಂಸಿಕ ಸಹೋದರರು ಆಗ ವಿಶ್ವಾಸಿಗಳಾಗಿದ್ದರೆಂಬದಕ್ಕೆ ಯಾವ ಸೂಚನೆಯೂ ಇದ್ದಿರಲಿಲ್ಲ.—ಮತ್ತಾಯ 12:46-50; ಯೋಹಾನ 7:5.
11. (ಎ)ಪೌಲನಿಗನುಸಾರ ಕ್ರೈಸ್ತನು ತನ್ನ ಸ್ವಂತ ಕುಟುಂಬದಲ್ಲಿ ಹೇಗೆ ದಿವ್ಯ ಭಕ್ತಿಯನ್ನು ತೋರಿಸಬಹುದು? (ಬಿ) ನಿಜ ಕ್ರೈಸ್ತನು ವೃದ್ಧ ಹೆತ್ತವರಿಗೆ ಬೇಕಾದ ಏರ್ಪಾಡನ್ನು ಏಕೆ ಮಾಡುತ್ತಾನೆ?
11. ಹಾಗಾದರೆ, ಇದು ಹೇಗೆ ದಿವ್ಯಭಕ್ತಿಯ ತೋರಿಸುವಿಕೆಯಾಗಿತ್ತು? ಅಪೋಸ್ತಲ ಪೌಲನು ತಿಳಿಸುವುದು: “ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ದಿವ್ಯಭಕ್ತಿ ತೋರಿಸುವುದಕ್ಕೂ ತಂದೆ ತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.” (1 ತಿಮೋಥಿ 5:3, 4) ಅಗತ್ಯ ಬೀಳುವಾಗ ಲೌಕಿಕ ಬೆಂಬಲ ಕೊಟ್ಟು ಹೀಗೆ ಹೆತ್ತವರನ್ನು ಸನ್ಮಾನಿಸುವುದು, ಪೌಲನು ಹೇಳುವಂತೆ ದೈವಿಕ ಭಕ್ತಿಯಾಗಿದೆ. ಇದು ಹೇಗೆ? ಕುಟುಂಬ ವ್ಯವಸ್ಥೆಯ ಜನಕನಾದ ಯೆಹೋವನು ಮಕ್ಕಳು ಹೆತ್ತವರನ್ನು ಗೌರವಿಸುವಂತೆ ಆಜ್ಞಾಪಿಸುತ್ತಾನೆ. (ಎಫೆಸ 3:14, 15; 6:1-3) ಹೀಗೆ, ಒಬ್ಬ ನಿಜ ಕ್ರೈಸ್ತನು, ಇಂಥ ಕುಟುಂಬ ಜವಾಬ್ದಾರಿಕೆಗಳನ್ನು ವಹಿಸುವುದು ಹೆತ್ತವರಿಗೆ ಪ್ರೀತಿಯನ್ನು ಮಾತ್ರವಲ್ಲ ದೇವರಿಗೆ ಪೂಜ್ಯಭಾವ ಮತ್ತು ಆತನ ಆಜ್ನೆಗಳಿಗೆ ವಿಧೇಯತೆಯನ್ನೂ ಪ್ರದರ್ಶಿಸುತ್ತದೆಂದು ಮಾನ್ಯ ಮಾಡುತ್ತಾನೆ.—ಕೊಲೊಸ್ಸೆ 3:20 ಹೋಲಿಸಿ.
12. ನೀವು ವೃದ್ಧರಾದ ಹೆತ್ತವರಿಗೆ ದಿವ್ಯ ಭಕ್ತಿಯನ್ನು ಹೇಗೆ ಪ್ರದರ್ಶಿಸಬಲ್ಲಿರಿ, ಮತ್ತು ಪ್ರಚೋದನೆ ಏನಾಗಿರಬೇಕು?
12. ಹಾಗಾದರೆ, ನೀವು ಕುಟುಂಬ ಸದಸ್ಯರ ಕಡೆಗೆ ದಿವ್ಯ ಭಕ್ತಿಯನ್ನು ಹೇಗೆ ತೋರಿಸಬಲ್ಲಿರಿ? ಯೇಸುವಿನಂತೆ ವೃದ್ಧರಾದ ಹೆತ್ತವರ ಆತ್ಮಿಕ ಹಾಗೂ ಪ್ರಾಪಂಚಿಕ ಅವಶ್ಯಕತೆಗಳನ್ನು ಪೂರೈಸಲು ಬೇಕಾದ ವ್ಯವಸ್ಥೆ ಮಾಡುವುದು ಇದರಲ್ಲಿ ನಿಶ್ಚಯವಾಗಿಯೂ ಸೇರಿದೆ. ಇದರಲ್ಲಿ ತಪ್ಪುವುದು ದಿವ್ಯಭಕ್ತಿಯ ಕೊರತೆಯನ್ನು ತೋರಿಸುವುದು. (2 ತಿಮೋಥಿ 3:2, 3, 5 ಹೋಲಿಸಿ.) ಸಮರ್ಪಿತ ಕ್ರೈಸ್ತನು ಅವಶ್ಯಕತೆಯಿರುವ ಹೆತ್ತವರಿಗೆ ದಯೆ ಮತ್ತು ಕರ್ತವ್ಯದ ಕಾರಣ ಮಾತ್ರವಲ್ಲ, ತನ್ನ ಕುಟುಂಬವನ್ನು ಪ್ರೀತಿಸುವುದರಿಂದಲೂ ವಿಷಯಗಳನ್ನು ಒದಗಿಸಿ, ಇಂತಹ ಜವಾಬ್ದಾರಿ ವಹಿಸುವುದರ ಮೇಲೆ ಯೆಹೋವನಿಗಿರುವ ಉಚ್ಚಭಿಮಾನವನ್ನು ಒಪ್ಪಿಕೊಳ್ಳುವುದರಿಂದಲೂ ಒದಗಿಸುತ್ತಾನೆ. ಹೀಗೆ ವೃದ್ಧ ಹೆತ್ತವರನ್ನು ಪರಾಮರಿಸುವುದು ದಿವ್ಯ ಭಕ್ತಿಯ ತೋರಿಸುವಿಕೆಯಾಗಿದೆ.b
13. ಕ್ರೈಸ್ತ ತಂದೆಯು ತನ್ನ ಕುಟುಂಬದ ಕಡೆಗೆ ದಿವ್ಯ ಭಕ್ತಿಯ ನಡತೆಯನ್ನು ಹೇಗೆ ತೋರಿಸಬಹುದು?
13. ದಿವ್ಯಭಕ್ತಿಯನ್ನು ಇತರ ವಿಧಗಳಲ್ಲಿ ಮನೆಯಲ್ಲಿ ಆಚರಿಸಬಹುದು. ಉದಾಹರಣೆಗೆ, ತನ್ನ ಕುಟುಂಬಕ್ಕೆ ಶಾರೀರಿಕವಾಗಿ, ಭಾವಪೂರಿತವಾಗಿ ಮತ್ತು ಆತ್ಮಿಕವಾಗಿ ಒದಗಿಸುವುದು ಒಬ್ಬ ಕ್ರೈಸ್ತ ತಂದೆಯ ಕರ್ತವ್ಯ. ಆದುದರಿಂದ, ಪ್ರಾಪಂಚಿಕ ಬೆಂಬಲ ಮಾತ್ರವಲ್ಲ, ನಿಯತಕ್ರಮದ ಕುಟುಂಬ ಬೈಬಲಧ್ಯಯನವನ್ನೂ ಅವನು ಪ್ರೀತಿಯಿಂದ ಏರ್ಪಡಿಸುತ್ತಾನೆ. ತನ್ನ ಕುಟುಂಬದೊಂದಿಗೆ ಕ್ರಮವಾಗಿ ಕ್ಷೇತ್ರಸೇವೆಯಲ್ಲಿ ಭಾಗವಹಿಸಲು ಸಹಾ ಅವನು ಸಮಯವನ್ನು ಏರ್ಪಡಿಸುತ್ತಾನೆ. ಅವರ ವಿಶ್ರಮ ಮತ್ತು ಮನೋರಂಜನೆಯ ಅಗತ್ಯತೆಗಳನ್ನು ಮನಸ್ಸಲ್ಲಿಡುವ ಸಮತೆಯ ವ್ಯಕ್ತಿ ಅವನಾಗಿರುತ್ತಾನೆ. ಸಭಾ ಚಟುವಟಿಕೆಗಳು ತನ್ನ ಕುಟುಂಬವನ್ನು ಅಸಡ್ಡೆಮಾಡುವಂತೆ ಬಿಡದೆ ಹೀಗೆ ವಿವೇಕದಿಂದ ಆದ್ಯತೆಗಳನ್ನಿಡುತ್ತಾನೆ. (1 ತಿಮೋಥಿ 3:5, 12) ಇದನ್ನೆಲ್ಲಾ ಅವನು ಮಾಡುವುದೇಕೆ? ಕರ್ತವ್ಯ ದೃಷ್ಟಿಯಿಂದ ಮಾತ್ರವಲ್ಲ ತನ್ನ ಕುಟುಂಬದ ಮೇಲಿರುವ ಪ್ರೀತಿಯ ಕಾರಣದಿಂದಲೂ. ಒಬ್ಬನ ಕುಟುಂಬವನ್ನು ಪರಾಮರಿಸುವ ವಿಷಯದಲ್ಲಿ ಯೆಹೋವನಿಡುವ ಪ್ರಾಮುಖ್ಯತೆಯನ್ನು ಅವನು ಒಪ್ಪುತ್ತಾನೆ. ಹೀಗೆ ಪತಿ ಮತ್ತು ಪಿತನಾಗಿ ಜವಾಬ್ದಾರಿಯನ್ನು ಪೂರೈಸುವುದರ ಮೂಲಕ ಅವನು ದಿವ್ಯ ಭಕ್ತಿಯನ್ನು ಆಚರಿಸುತ್ತಾನೆ.
14. ಕ್ರೈಸ್ತ ಪತ್ನಿ ಮನೆಯಲ್ಲಿ ದಿವ್ಯ ಭಕ್ತಿ ಹೇಗೆ ತೋರಿಸಬಹುದು?
14. ಮನೆಯಲ್ಲಿ ದಿವ್ಯ ಭಕ್ತಿಯನ್ನು ಆಚರಿಸುವ ಜವಾಬ್ದಾರಿ ಕ್ರೈಸ್ತ ಪತ್ನಿಯರಿಗೂ ಇದೆ. ಹೇಗೆ? ಹೆಂಡತಿ ತನ್ನ ಗಂಡನಿಗೆ “ಅಧೀನ” ಳಾಗಿಯೂ “ಆಳವಾದ ಗೌರವ” ಉಳ್ಳವಳಾಗಿಯೂ ಇರಬೇಕೆಂದು ಬೈಬಲು ಹೇಳುತ್ತದೆ. (ಎಫೆಸ 5:22, 33) ಆಕೆಯ ಗಂಡನು ವಿಶ್ವಾಸಿಯಲ್ಲವಾದರೂ ಆಕೆ “ಅಧೀನ” ಳಾಗಿರಬೇಕು. (1 ಪೇತ್ರ 3:1) ಕ್ರೈಸ್ತ ಮಹಿಳೆಯು ಇಂಥ ಪತ್ನೀಯ ಅಧೀನತೆಯನ್ನು, ಆಕೆಯ ಪತಿಯು ಮಾಡುವ ನಿರ್ಣಯಗಳನ್ನು ಅವು ದೇವರ ನಿಯಮಗಳನ್ನು ಎಷ್ಟರ ತನಕ ಉಲ್ಲಂಘಿಸುವುದಿಲ್ಲವೋ ಅಷ್ಟರ ತನಕ ಬೆಂಬಲಿಸುವ ಮೂಲಕ ತೋರಿಸುವಳು. (ಅಪೋ. 5:29) ಮತ್ತು ಆಕೆ ಈ ಪಾತ್ರವನ್ನು ಅಂಗೀಕರಿಸುವುದೇಕೆ? ತನ್ನ ಗಂಡನನ್ನು ಪ್ರೀತಿಸುವ ಕಾರಣದಿಂದ ಮಾತ್ರವಲ್ಲ, ವಿಶೇಷವಾಗಿ, ಅದು “ಕರ್ತನಲ್ಲಿರುವವರಿಗೆ” ಯೋಗ್ಯವಾಗಿರುವದರಿಂದ ಅಂದರೆ, ಅದು ಕುಟುಂಬಕ್ಕೆ ದೇವರ ಏರ್ಪಾಡಾಗಿರುವುದರಿಂದಲೇ. (ಕೊಲೊಸ್ಸೆ 3:18) ಹೀಗೆ, ಆಕೆ ತನ್ನ ಗಂಡನಿಗೆ ಇಷ್ಟಪೂರ್ವಕವಾಗಿ ತೋರಿಸುವ ಅಧೀನತೆ ದಿವ್ಯಭಕ್ತಿಯಾಗಿದೆ.
“ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ”
15. ಯೇಸು ದಿವ್ಯ ಭಕ್ತಿಯನ್ನು ಯಾವ ಪ್ರಧಾನವಾದ ರೀತಿಯಲ್ಲಿ ತೋರಿಸಿದನು?
15. ಯೇಸು ದಿವ್ಯ ಭಕ್ತಿಯನ್ನು ತೋರಿಸಿದ ಪ್ರಧಾನ ವಿಧಗಳಲ್ಲಿ ಒಂದು, ‘ದೇವರ ರಾಜ್ಯದ ಸುವಾರ್ತೆಯನ್ನು’ ಸಾರಿಯೇ. (ಲೂಕ 4:43) ಸಾ.ಶ. 29 ರಲ್ಲಿ ಯೋರ್ದನಿನಲ್ಲಿ ದೀಕ್ಷಾಸ್ನಾನ ಹೊಂದಿದ ಬಳಿಕ ಮೂರುವರೆ ವರ್ಷಗಳಲ್ಲಿ ಅವನು ಈ ಸರ್ವಪ್ರಧಾನ ಕಾರ್ಯದಲ್ಲಿ ತೀರಾ ಮಗ್ನನಾಗಿರುತ್ತಾ ಕಳೆದನು. “ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ” ಎಂದು ಅವನು ಹೇಳಿದನು. (ಮಾರ್ಕ 1:38; ಯೋಹಾನ 18:37) ಆದರೆ ಇದು ಹೇಗೆ ಅವನ ದಿವ್ಯ ಭಕ್ತಿಯ ತೋರಿಸಿ ಕೊಡುವಿಕೆಯಾಗಿತ್ತು?
16, 17. (ಎ)ಸಾರುವುದರಲ್ಲಿ ಮತ್ತು ಕಲಿಸುವುದರಲ್ಲಿ ತೀವ್ರ ಮಗ್ನನಾಗಿರುವಂತೆ ಯೇಸುವನ್ನು ಯಾವುದು ಪ್ರೇರಿಸಿತು? (ಬಿ) ಸಾರುವ ಮತ್ತು ಕಲಿಸುವ ಯೇಸುವಿನ ಶುಶ್ರೂಷೆ ಅವನ ದಿವ್ಯ ಭಕ್ತಿಯ ಪ್ರದರ್ಶನವಾಗಿತ್ತೇಕೆ?
16. ನೀವು ದೇವರನ್ನು ಪ್ರೀತಿಸಿ ಆತನ ಪ್ರಿಯ ಗುಣಗಳನ್ನು ಆಳವಾಗಿ ಮಾನ್ಯ ಮಾಡುವ ಕಾರಣ ಆತನನ್ನು ಮೆಚ್ಚಿಸುವಂಥ ಜೀವನ ಮಾರ್ಗ ದಿವ್ಯ ಭಕ್ತಿಯಲ್ಲಿ ಸೇರಿದೆ ಎಂಬದು ನೆನಪಿರಲಿ. ಹಾಗಾದರೆ ಭೂಮಿಯ ತನ್ನ ಕೊನೆಯ ವರುಷಗಳನ್ನು ಸಾರುವದರಲ್ಲಿ ಮತ್ತು ಕಲಿಸುವದರಲ್ಲಿಮಗ್ನನಾಗಿರುವಂತೆ ಯೇಸುವನ್ನು ಯಾವುದು ಪ್ರಚೋದಿಸಿತು? ಕೇವಲ ಕರ್ತವ್ಯವೋ ಅಥವಾ ಹಂಗೋ? ಅವನು ಜನರ ವಿಷಯ ಚಿಂತಿಸಿದನೆಂಬದಕ್ಕೆ ಯಾವ ಸಂಶಯವೂ ಇಲ್ಲ. (ಮತ್ತಾಯ 9:35, 36) ಮತ್ತು ತನ್ನ ಪವಿತ್ರಾತ್ಮಾಭಿಷೇಕವು ಶುಶ್ರೂಷೆಯನ್ನು ನೆರವೇರಿಸಲು ತನ್ನನ್ನು ನೇಮಿಸಿ, ಆಜ್ಞಾಪಿಸಿತೆಂದು ಅವನು ಪೂರ್ಣ ಗ್ರಹಿಸಿದನು. (ಲೂಕ 4:16-21) ಆದರೂ ಅವನ ಪ್ರೇರಣೆ ಅದಕ್ಕಿಂತಲೂ ಆಳವಾಗಿತ್ತು.
17. ತನ್ನ ಭೂಜೀವಿತದ ಕೊನೆಯ ರಾತ್ರಿ ಯೇಸು ಸರಳವಾಗಿ ತನ್ನ ಅಪೋಸ್ತಲರಿಗೆ, “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಹೇಳಿದನು. (ಯೋಹಾನ 14:31) ಆ ಪ್ರೀತಿ ಯೆಹೋವನ ಗುಣಗಳ ಆಳವಾದ ಹಾಗೂ ಆಪ್ತ ಜ್ಞಾನದ ಮೇಲೆ ಆಧರಿಸಿತ್ತು. (ಲೂಕ 10:22) ಆಳವಾದ ಗಣ್ಯತೆಯಿಂದ ಉದ್ರೇಕಿತ ಹೃದಯದಿಂದ ಪ್ರಚೋದಿತನಾಗಿ ಯೇಸು ದೇವರ ಇಷ್ಟವನ್ನು ಮಾಡುವುದರಲ್ಲಿ ಸಂತೋಷವನ್ನು ಕಂಡುಕೊಂಡನು. (ಕೀರ್ತನೆ 40:8) ಅದು ಅವನ “ಆಹಾರ”—ಅವನ ಜೀವನಕ್ಕೆ ಎಷ್ಟೋ ಅವಶ್ಯವಾದ, ಎಷ್ಟೋ ರುಚಿಕರವಾದ ವಿಷಯವಾಗಿತ್ತು. (ಯೋಹಾನ 4:34) ತನ್ನನ್ನು ಪ್ರಥಮವಾಗಿಡುವ ಬದಲಿಗೆ “ಮೊದಲು ರಾಜ್ಯಕ್ಕಾಗಿ ತವಕ ಪಡುವುದಕ್ಕೆ” ಅವನು ಪರಿಪೂರ್ಣ ಮಾದರಿಯನ್ನಿಟ್ಟನು. (ಮತ್ತಾಯ 6:33) ಹೀಗೆ, ಅವನು ಏನು ಮಾಡಿದನು ಅಥವಾ ಎಷ್ಟು ಮಾಡಿದನು ಅಷ್ಟೇಯಲ್ಲ, ಅವನು ಅದನ್ನು ಏಕೆ ಮಾಡಿದನೆಂಬ ವಿಷಯವು ಸಾರುವ ಮತ್ತು ಕಲಿಸುವ ಅವನ ಶುಶ್ರೂಷೆಯನ್ನು ದಿವ್ಯ ಭಕ್ತಿಯ ಪ್ರದರ್ಶನವಾಗಿ ಮಾಡಿತು.
18. ಸೇವೆಯಲ್ಲಿ ಸ್ವಲ್ಪ ಭಾಗವಹಿಸುವಿಕೆ ದಿವ್ಯ ಭಕ್ತಿಯ ಪ್ರದರ್ಶನವಾಗಿರಬೇಕೆಂದಿಲ್ಲವೇಕೆ?
18. ನಾವು ಈ ಸಂಬಂಧದಲ್ಲಿ “ಮಾದರಿ” ಯಾದ ಯೇಸುವಿನ ಆದರ್ಶವನ್ನು ಹೇಗೆ ಅನುಸರಿಸಬಲ್ಲೆವು? (1 ಪೇತ್ರ 2:21) “ಬಂದು ನನ್ನನ್ನು ಹಿಂಬಾಲಿಸು” ಎಂಬ ಯೇಸುವಿನ ಆಮಂತ್ರಣಕ್ಕೆ ಓಗೊಡುವವರೆಲ್ಲರಿಗೆ ರಾಜ್ಯದ ಸುವಾರ್ತೆಯನ್ನು ಸಾರಿ ಶಿಷ್ಯರನ್ನಾಗಿ ಮಾಡುವ ದೈವಿಕ ಆಜ್ನೆಯಿದೆ. (ಲೂಕ 18:22; ಮತ್ತಾಯ 24:14; 28:19, 20) ಹಾಗಾದರೆ, ಸುವಾರ್ತೆ ಸಾರುವುದರಲ್ಲಿ ತುಸು ಭಾಗವಹಿಸಿದರೆ ನಾವು ದಿವ್ಯ ಭಕ್ತಿಯನ್ನು ಬಿಡದೆ ಅನುಸರಿಸುತ್ತೇವೆಂದು ಅರ್ಥವೋ? ಹಾಗಿರಬೇಕೆಂದಿಲ್ಲ. ನಾವು ಉದಾಸೀನತೆಯಿಂದ ಸಾಂಕೇತಿಕವಾಗಿ ಸೇವೆಯಲ್ಲಿ ಭಾಗವಹಿಸುವುದಾದರೆ ಅಥವಾ ಕುಟುಂಬದವರನ್ನು ಅಥವಾ ಇತರರನ್ನು ಕೇವಲ ಮೆಚ್ಚಿಸಲು ಇದನ್ನು ಮಾಡುವುದಾದರೆ ಅದು ‘ದಿವ್ಯ ಭಕ್ತಿಯ ಕೃತ್ಯ’ ಅಲ್ಲವೆಂದೇ ಹೇಳಬೇಕು.
19. (ಎ) ನಾವು ಶುಶ್ರೂಷೆಯಲ್ಲಿ ಏನು ಮಾಡುತ್ತೇವೋ ಅದಕ್ಕೆ ಪ್ರಧಾನಕಾರಣ ಯಾವುದಾಗಿರತಕ್ಕದ್ದು? (ಬಿ) ದೇವರಿಗೆ ಆಳವಾಗಿ ಬೇರೂರಿರುವ ಪ್ರೀತಿಯಿಂದ ನಾವು ಪ್ರಚೋದಿತರಾಗುವಲ್ಲಿ ಏನು ಪರಿಣಮಿಸುತ್ತದೆ?
19. ಯೇಸುವಿನಂತೆ ನಿಮ್ಮ ಪ್ರಚೋದನೆಗಳೂ ಆಳವಾಗಿರಬೇಕು. ಯೇಸು ಹೇಳಿದ್ದು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯ [ಭಾವ, ಇಚ್ಛೆ ಮತ್ತು ಅಂತರ್ವ್ಯಕ್ತಿಯ ಅನಿಸಿಕೆ] ದಿಂದಲೂ ನಿನ್ನ ಪೂರ್ಣ ಆತ್ಮ [ಜೀವ, ಜೀವಾಳ] ದಿಂದಲೂ ಪೂರ್ಣ ಬುದ್ಧಿ [ಬುದ್ಧಿ ಸಾಮರ್ಥ್ಯ] ದಿಂದಲೂ ಪ್ರೀತಿಸಬೇಕು.” ಇದಕ್ಕೆ ಒಬ್ಬ ವಿವೇಚನೆಯ ಶಾಸ್ತ್ರಿ ಕೂಡಿಸಿದ್ದು: “ಇವು ಎಲ್ಲಾ ಸರ್ವಾಂಗ ಹೋಮಗಳಿಗಿಂತಲೂ . . . ಹೆಚ್ಚಿನವು.” (ಮಾರ್ಕ 12:30, 33, 34) ಹೀಗೆ ನಾವು ಮಾಡುವ ವಿಷಯ ಮಾತ್ರ ದೊಡ್ಡದಲ್ಲ, ನಾವೇಕೆ ಅದನ್ನು ಮಾಡುತ್ತೇವೆಂಬದೂ ದೊಡ್ಡದು. ದೇವರಿಗೆ ನಮ್ಮ ಪ್ರತಿಯೊಂದು ತಂತು ಸೇರಿರುವ ಆಳವಾಗಿ ಬೇರೂರಿರುವ ಪ್ರೀತಿಯೇ ನಾವು ಸೇವೆಯನ್ನು ಮಾಡುವದಕ್ಕೆ ಪ್ರಧಾನ ಕಾರಣವಾಗಿರಬೇಕು. ಸಂಗತಿಯು ಇದಾಗಿರುವಲ್ಲಿ, ನಾವು ಕೇವಲ ಸಾಂಕೇತಿಕವಾಗಿ ಭಾಗವಹಿಸುವುದರಲ್ಲಿ ತೃಪ್ತಿಹೊಂದದೆ, ನಮ್ಮಿಂದ ಸಾಧ್ಯವಿರುವದನ್ನೆಲ್ಲಾ ಮಾಡಿ ನಮ್ಮ ದಿವ್ಯಭಕ್ತಿಯ ಆಳವನ್ನು ಪ್ರದರ್ಶಿಸಲು ಪ್ರಚೋದಿತರಾಗುತ್ತೇವೆ. (2 ತಿಮೋಥಿ 2:15) ಅದೇ ಸಮಯದಲ್ಲಿ, ಪ್ರೀತಿಯೇ ನಮ್ಮ ಪ್ರಚೋದನೆಯಾಗಿರುವಲ್ಲಿ ನಮ್ಮ ಶುಶ್ರೂಷೆಯನ್ನು ಇತರರದಕ್ಕೆ ಹೋಲಿಸಿ ತಪ್ಪು ಕಂಡುಹಿಡಿಯುವವರಾಗೆವು.—ಗಲಾತ್ಯ 6:4.
20. ದಿವ್ಯ ಭಕ್ತಿಯನ್ನು ಬಿಡದೆ ಅನುಸರಿಸುವುದರಲ್ಲಿ ಯೇಸುವಿನ ಮಾದರಿಯಿಂದ ಪೂರ್ತಿ ಪ್ರಯೋಜನವನ್ನು ನಾವು ಹೇಗೆ ಪಡೆಯಬಹುದು?
20. ಯೆಹೋವನು ದಿವ್ಯ ಭಕ್ತಿಯ ಈ ಪವಿತ್ರ ರಹಸ್ಯವನ್ನು ನಮಗೆ ತಿಳಿಯಪಡಿಸಿದಕ್ಕಾಗಿ ನಾವೆಷ್ಟು ಕೃತಜ್ಞರು! ಯೇಸುವಿನ ನಡೆ ನುಡಿಗಳನ್ನು ಜಾಗ್ರತೆಯಿಂದ ಅಭ್ಯಾಸಮಾಡಿ ಅವನನ್ನು ಅನುಕರಿಸಲು ಪ್ರಯತ್ನಿಸುವುದರಿಂದ ದಿವ್ಯ ಭಕ್ತಿಯನ್ನು ಹೆಚ್ಚು ಪೂರ್ಣವಾಗಿ ಬೆಳಸಿ ತೋರಿಸಲು ನಮಗೆ ಸಹಾಯ ದೊರೆಯುವುದು. ಸಮರ್ಪಿತ, ದೀಕ್ಷಾಸ್ನಾತ ಕ್ರೈಸ್ತರಾಗಿ ದಿವ್ಯ ಭಕ್ತಿಯನ್ನು ಬಿಡದೆ ಅನುಸರಿಸುವುದರಲ್ಲಿ ಯೇಸುವಿನ ಮಾದರಿಯನ್ನು ಹಿಂಬಾಲಿಸುವಲ್ಲಿ ಯೆಹೋವನು ನಮ್ಮನ್ನು ಹೇರಳವಾಗಿ ಆಶೀರ್ವದಿಸುವನು.—1 ತಿಮೋಥಿ 4:7, 8. (w90 3/1)
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ದೃಷ್ಟಾಂತಗಳಿಗೆ, ಯೆಹೋವನ ಕುರಿತು ನಾವು ಈ ಕೆಳಗಿನ ವೃತ್ತಾಂತಗಳಿಂದ ಏನು ಕಲಿಯಬಹುದೆಂದು ಪರಿಗಣಿಸಿರಿ: ಮತ್ತಾಯ 8:2, 3; ಮಾರ್ಕ 14:3-9; ಲೂಕ 21:1-4 ಮತ್ತು ಯೋಹಾನ 11:33-36.
b ವೃದ್ಧ ಹೆತ್ತವರ ಕಡೆಗೆ ದಿವ್ಯ ಭಕ್ತಿಯನ್ನು ತೋರಿಸುವುದರಲ್ಲಿ ಸೇರಿರುವ ವಿಷಯಗಳ ಪೂರ್ಣ ಚರ್ಚೆಗೆ, ಜೂನ್ 1, 1987 ರ ವಾಚ್ಟವರ್ 13-18 ಪುಟಗಳನ್ನು ನೋಡಿ.
ಜ್ಞಾಪಕವಿದೆಯೋ?
◻ ದಿವ್ಯ ಭಕ್ತಿಯನ್ನು ಅನುಸರಿಸುವುದರಲ್ಲಿ ನಾವೇಕೆ ಯೇಸುವಿನ ಮಾದರಿಯನ್ನು ಪರಿಗಣಿಸಬೇಕು?
◻ ಯೇಸು ತೋರಿಸಿದ ಅನುರಾಗ ಮತ್ತು ಆಳವಾದ ಅನುಕಂಪದಿಂದ ಯೆಹೋವನ ಕುರಿತು ನಾವೇನು ಕಲಿಯುತ್ತೇವೆ?
◻ ನಾವು ಕುಟುಂಬ ಸದಸ್ಯರ ಕಡೆಗೆ ಹೇಗೆ ದಿವ್ಯ ಭಕ್ತಿಯನ್ನು ತೋರಿಸಬಹುದು?
◻ ನಮ್ಮ ಶುಶ್ರೂಷೆ ದಿವ್ಯ ಭಕ್ತಿಯ ಪ್ರದರ್ಶನವಾಗಿರಬೇಕಾದರೆ ಪ್ರಚೋದನೆ ಏನಾಗಿರಬೇಕು?
[ಪುಟ 21 ರಲ್ಲಿರುವ ಚಿತ್ರ]
ಕುಟುಂಬಕ್ಕೆ ಶಾರೀರಿಕವಾಗಿ, ಭಾವಪೂರಿತವಾಗಿ ಮತ್ತು ಆತ್ಮಿಕವಾಗಿ ಒದಗಿಸಲು ಕ್ರೈಸ್ತ ತಂದೆಯು ಜವಾಬ್ದಾರನು
[ಪುಟ 23 ರಲ್ಲಿರುವ ಚಿತ್ರ]
“ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ . . . ಅವರೇ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ”