ಅಧ್ಯಯನ ಲೇಖನ 29
ಮಹಾ ಸಂಕಟಕ್ಕೆ ನೀವು ರೆಡಿನಾ?
“ಸಿದ್ಧವಾಗಿರಿ.”—ಮತ್ತಾ. 24:44.
ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು
ಈ ಲೇಖನದಲ್ಲಿ ಏನಿದೆ?a
1. ಆಪತ್ತು ಬರೋ ಮುಂಚೆನೇ ನಾವು ಯಾಕೆ ತಯಾರಾಗಿ ಇರಬೇಕು?
ಯಾವಾಗ್ಲೂ ಎಲ್ಲಾದಕ್ಕೂ ನಾವು ತಯಾರಾಗಿ ಇರಬೇಕು. ಆಗ ಆಪತ್ತು ಬಂದ್ರೆ ನಾವು ನಮ್ಮ ಜೀವನೂ ಉಳಿಸ್ಕೊಳ್ತೀವಿ ಬೇರೆಯವ್ರ ಜೀವನೂ ಉಳಿಸ್ತೀವಿ. ಇಲ್ಲಾಂದ್ರೆ ‘ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ’ ಹಾಗಿರುತ್ತೆ. ಅದಕ್ಕೇ “ಚೆನ್ನಾಗಿ ತಯಾರಿ ಮಾಡ್ಕೊಂಡ್ರೆ ಅರ್ಧ ಜೀವ ಉಳಿದ ಹಾಗೆ” ಅಂತ ಯೂರೋಪ್ನ ಸಮಾಜ ಸೇವೆ ಸಂಘಟನೆಯೊಂದು ಹೇಳುತ್ತೆ.
2. ಮಹಾ ಸಂಕಟಕ್ಕೆ ನಾವು ಈಗ್ಲೇ ಯಾಕೆ ರೆಡಿಯಾಗಿ ಇರಬೇಕು? (ಮತ್ತಾಯ 24:44)
2 ಕೆಲವು ವಿಪತ್ತುಗಳಾದಾಗ ನಮಗೆ ತುಂಬ ಭಯ ಆಗುತ್ತೆ, ಗಾಬರಿಯಾಗುತ್ತೆ. ಯಾಕಂದ್ರೆ ಅದು ಬರೋದೇ ಗೊತ್ತಾಗಲ್ಲ. ಆದ್ರೆ ಮಹಾ ಸಂಕಟ ಬಂದಾಗ ಯೆಹೋವನ ಜನ್ರಿಗೆ ಅಷ್ಟು ಭಯ ಆಗಲ್ಲ. ಯಾಕಂದ್ರೆ ಆ ದಿನಕ್ಕೆ ಸಿದ್ಧವಾಗಿರಿ ಅಂತ ಯೇಸು 2,000 ವರ್ಷಗಳ ಮುಂಚೆನೇ ಹೇಳಿದ್ದನು. (ಮತ್ತಾಯ 24:44 ಓದಿ.) “ಮಹಾ ಸಂಕಟ” ದಿಢೀರಂತ ಬರುತ್ತೆ. (ಮತ್ತಾ. 24:21) ಹಾಗಾಗಿ ನಾವು ಈಗಿಂದಾನೇ ತಯಾರಾಗಿದ್ರೆ ಆ ದಿನ ಬಂದಾಗ ಕಷ್ಟನ ಸಹಿಸ್ಕೊಳ್ಳೋಕೆ ಆಗುತ್ತೆ, ಬೇರೆಯವ್ರಿಗೂ ಸಹಾಯ ಮಾಡೋಕಾಗುತ್ತೆ.—ಲೂಕ 21:36.
3. ಮಹಾ ಸಂಕಟಕ್ಕೆ ರೆಡಿಯಾಗೋಕೆ ತಾಳ್ಮೆ, ಅನುಕಂಪ ಮತ್ತು ಪ್ರೀತಿ ಹೇಗೆ ಸಹಾಯ ಮಾಡುತ್ತೆ?
3 ಮಹಾ ಸಂಕಟಕ್ಕೆ ರೆಡಿಯಾಗಿರೋಕೆ ನಮಗೆ 3 ಗುಣಗಳು ಸಹಾಯ ಮಾಡುತ್ತೆ. ಅದನ್ನ ನಾವು ಈಗಿಂದಾನೇ ಬೆಳೆಸ್ಕೊಬೇಕು. ಒಂದು ತಾಳ್ಮೆ. ಮುಂದೆ ಆಲಿಕಲ್ಲಿನಂಥ ನ್ಯಾಯತೀರ್ಪಿನ ಸಂದೇಶನ ನಾವು ಸಾರಬೇಕಾಗುತ್ತೆ. ಆಗ ಜನ್ರು ನಮ್ಮನ್ನ ವಿರೋಧಿಸ್ತಾರೆ. (ಪ್ರಕ. 16:21) ನಮಗೆ ತಾಳ್ಮೆ ಇದ್ರೆ ಯೆಹೋವ ನಮ್ಮನ್ನ ಕಾಪಾಡೇ ಕಾಪಾಡ್ತಾನೆ ಅಂತ ನಂಬಿ ನಾವು ಸಾರುತ್ತಾ ಇರ್ತೀವಿ. ಎರಡು ಅನುಕಂಪ. ಮಹಾ ಸಂಕಟದ ಸಮಯದಲ್ಲಿ ನಮ್ಮ ಸಹೋದರರು ಅವ್ರ ಹತ್ರ ಇರೋದನ್ನೆಲ್ಲ ಕಳ್ಕೊಬಹುದು. (ಹಬ. 3:17, 18) ನಮಗೆ ಅನುಕಂಪ ಇದ್ರೆ ನಮ್ಮ ಹತ್ರ ಇರೋದನ್ನ ಹಂಚ್ಕೊಳ್ತೀವಿ. ಮೂರು ಪ್ರೀತಿ. ಜನಾಂಗಗಳ ಗುಂಪು ನಮ್ಮ ಮೇಲೆ ಆಕ್ರಮಣ ಮಾಡಿದಾಗ ನಾವೆಲ್ರೂ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಬರುತ್ತೆ. (ಯೆಹೆ. 38:10-12) ಆಗ ನಮ್ಮಲ್ಲಿ ಪ್ರೀತಿ ಇದ್ರೆ ಒಗ್ಗಟ್ಟಿಂದ ಕಷ್ಟಗಳನ್ನ ಸಹಿಸ್ಕೊಳ್ತೀವಿ.
4. ತಾಳ್ಮೆ, ಅನುಕಂಪ ಮತ್ತು ಪ್ರೀತಿಯನ್ನ ತೋರಿಸ್ತಾ ಇರಬೇಕು ಅಂತ ಬೈಬಲಿಂದ ಹೇಗೆ ಗೊತ್ತಾಗುತ್ತೆ?
4 ನಾವು ತಾಳ್ಮೆ, ಅನುಕಂಪ, ಪ್ರೀತಿ ಅನ್ನೋ ಗುಣಗಳನ್ನ ತೋರಿಸ್ತಾನೇ ಇರಬೇಕು ಅಂತ ಬೈಬಲ್ ಹೇಳುತ್ತೆ. ಲೂಕ 21:19 “ನಿಮ್ಮ ತಾಳ್ಮೆನೇ ನಿಮ್ಮ ಪ್ರಾಣ ಕಾಪಾಡುತ್ತೆ” ಅಂತ ಹೇಳುತ್ತೆ. ಕೊಲೊಸ್ಸೆ 3:12 ‘ಅನುಕಂಪನ ಬಟ್ಟೆ ತರ ಹಾಕ್ಕೊಳ್ಳಿ’ ಅನ್ನುತ್ತೆ. 1 ಥೆಸಲೊನೀಕ 4:9, 10 “ಒಬ್ರನ್ನೊಬ್ರು . . . ಪ್ರೀತಿಸಬೇಕಂತ ದೇವರೇ ನಿಮಗೆ ಕಲಿಸಿದ್ದಾನೆ. . . . ಆದ್ರೆ ಸಹೋದರರೇ, ನೀವು ಇನ್ನೂ ಜಾಸ್ತಿ ಪ್ರೀತಿ ತೋರಿಸ್ತಾ ಇರಬೇಕಂತ ಪ್ರೋತ್ಸಾಹಿಸ್ತಾ ಇದ್ದೀವಿ” ಅಂತ ಹೇಳುತ್ತೆ. ಈ ಮಾತುಗಳನ್ನ ಯಾರಿಗೆ ಬರೆದ್ರೋ ಆ ಕ್ರೈಸ್ತರು ಈ ಗುಣಗಳನ್ನ ಈಗಾಗ್ಲೇ ತೋರಿಸ್ತಿದ್ರು. ಆದ್ರೂ ಯಾಕೆ ಈ ತರ ಹೇಳಿದ್ರು? ಯಾಕಂದ್ರೆ ಅವರು ಈ ಗುಣಗಳನ್ನ ತೋರಿಸ್ತಾನೇ ಇರಬೇಕಿತ್ತು. ನಾವೂ ಈ ಗುಣಗಳನ್ನ ತೋರಿಸ್ತಾ ಇರಬೇಕು. ಆಗ ಮಹಾ ಸಂಕಟಕ್ಕೆ ರೆಡಿಯಾಗ್ತೀವಿ. ಹಾಗಾಗಿ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಆ ಗುಣಗಳನ್ನ ಹೇಗೆ ತೋರಿಸಿದ್ರು ಅಂತ ನೋಡೋಣ. ಆಮೇಲೆ ನಾವು ಆ ಗುಣಗಳನ್ನ ಹೇಗೆ ತೋರಿಸಬಹುದು ಅಂತ ಕಲಿಯೋಣ.
ತಾಳ್ಮೆ ತೋರಿಸ್ತಾ ಇರಿ
5. ಒಂದನೇ ಶತಮಾನದ ಕ್ರೈಸ್ತರಿಗೆ ಕಷ್ಟಗಳನ್ನ ತಾಳ್ಕೊಳ್ಳೋಕೆ ಯಾವುದು ಸಹಾಯ ಮಾಡ್ತು?
5 ಒಂದನೇ ಶತಮಾನದ ಕ್ರೈಸ್ತರೂ ತಾಳ್ಮೆ ತೋರಿಸಿದ್ರು. (ಇಬ್ರಿ. 10:36) ಅವ್ರಿಗೆ ಎಲ್ಲಾ ಜನ್ರಿಗೆ ಬರೋ ಕಷ್ಟಗಳ ಜೊತೆ ಇನ್ನೂ ತುಂಬ ಕಷ್ಟಗಳಿತ್ತು. ಯೆಹೂದಿ ಧರ್ಮಗುರುಗಳು ಮತ್ತು ರೋಮ್ ಸರ್ಕಾರ ಅವ್ರಿಗೆ ತುಂಬ ಹಿಂಸೆ ಕೊಡ್ತಿತ್ತು. ಅವ್ರ ಸ್ವಂತ ಕುಟುಂಬದವ್ರೇ ಅವ್ರಿಗೆ ಶತ್ರುಗಳಾಗಿದ್ರು. (ಮತ್ತಾ. 10:21) ಅಷ್ಟೇ ಅಲ್ಲ, ಧರ್ಮಭ್ರಷ್ಟರು ಸಭೆಯನ್ನ ಒಡಿಯುವಂಥ ವಿಷ್ಯಗಳನ್ನ ಕಲಿಸ್ತಿದ್ರು. ಅದ್ರಿಂದ ಅವರು ಹುಷಾರಾಗಿ ಇರಬೇಕಿತ್ತು. (ಅ. ಕಾ. 20:29, 30) ಈ ಕಷ್ಟಗಳನ್ನೆಲ್ಲ ಅವರು ತಾಳ್ಕೊಂಡ್ರು. (ಪ್ರಕ. 2:3) ಅದಕ್ಕೆ ಅವ್ರಿಗೆ ಯಾವುದು ಸಹಾಯ ಮಾಡ್ತು? ಯೋಬನ ತರ ತಾಳ್ಮೆ ತೋರಿಸಿದ ಎಷ್ಟೋ ನಂಬಿಗಸ್ತರ ಉದಾಹರಣೆಗಳನ್ನ ಅವರು ನೆನಪಿಸ್ಕೊಂಡ್ರು. (ಯಾಕೋ. 5:10, 11) ಸಹಿಸ್ಕೊಳ್ಳೋಕೆ ಶಕ್ತಿ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಳ್ತಾ ಇದ್ರು. (ಅ. ಕಾ. 4:29-31) ತಾಳ್ಮೆ ತೋರಿಸೋದ್ರಿಂದ ಸಿಗೋ ಆಶೀರ್ವಾದಗಳ ಕಡೆಗೆ ಗಮನ ಕೊಟ್ರು.—ಅ. ಕಾ. 5:41.
6. ಮೆರೀಟ ಅವ್ರಿಂದ ನೀವೇನು ಕಲಿತ್ರಿ?
6 ನಮಗೆ ಬರೋ ಕಷ್ಟಗಳನ್ನ ನಾವೂ ತಾಳ್ಕೊಳ್ಳೋಕೆ ಆಗುತ್ತೆ. ಅದಕ್ಕೆ ನಾವು ಕಷ್ಟಗಳನ್ನ ಸಹಿಸ್ಕೊಂಡವ್ರ ಉದಾಹರಣೆಗಳನ್ನ ಬೈಬಲಲ್ಲಿ ಮತ್ತು ಪ್ರಕಾಶನಗಳಲ್ಲಿ ಓದಬೇಕು. ಅವ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ಇದನ್ನೇ ಅಲ್ಬೇನಿಯದಲ್ಲಿರೋ ಸಹೋದರಿ ಮೆರೀಟನೂ ಮಾಡಿದ್ರು. ಅವ್ರ ಕುಟುಂಬದವರು ಕ್ರೂರವಾಗಿ ಹಿಂಸೆ ಕೊಡ್ತಿದ್ರು. ಅದನ್ನ ತಾಳ್ಕೊಳ್ಳೋಕೆ ಅವರು ಏನು ಮಾಡಿದ್ರು? “ನಾನು ಯೋಬನ ಬಗ್ಗೆ ತುಂಬ ಓದ್ತಿದ್ದೆ. ಅವನಿಗೆ ಅವನ ಕಷ್ಟಗಳಿಗೆ ಯಾರು ಕಾರಣ ಅಂತ ಗೊತ್ತಿರಲಿಲ್ಲ. ಆದ್ರೂ ‘ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!’ ಅಂತ ಹೇಳಿದ. (ಯೋಬ 27:5) ಅವನಿಗೆ ಬಂದಿರೋ ಕಷ್ಟಗಳಿಗೆ ಹೋಲಿಸಿದ್ರೆ ನನ್ನ ಕಷ್ಟಗಳು ಏನೇನೂ ಅಲ್ಲ. ಅಷ್ಟೇ ಅಲ್ಲ, ಇದಕ್ಕೆಲ್ಲ ಯಾರು ಕಾರಣ ಅಂತನೂ ನಂಗೊತ್ತು” ಅಂತ ಅವರು ಹೇಳ್ತಾರೆ.
7. ಈಗ ನಮಗೆ ದೊಡ್ಡ ಕಷ್ಟಗಳು ಬಂದಿಲ್ಲಾಂದ್ರೂ ನಾವೇನು ಮಾಡಬೇಕು?
7 ನಮ್ಮ ಮನಸ್ಸಲ್ಲಿರೋ ಚಿಂತೆನೆಲ್ಲಾ ಯೆಹೋವ ದೇವ್ರ ಹತ್ರ ಹೇಳ್ಕೊಬೇಕು. ಅಷ್ಟೇ ಅಲ್ಲ ಪದೇ ಪದೇ ಪ್ರಾರ್ಥನೆ ಮಾಡಬೇಕು. ಆಗ ನಮಗೆ ಬರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಆಗುತ್ತೆ. (ಫಿಲಿ. 4:6; 1 ಥೆಸ. 5:17) ಈಗ ನಿಮಗೆ ಅಂಥ ದೊಡ್ಡ ಸಮಸ್ಯೆ ಏನೂ ಇಲ್ಲದೆ ಇರಬಹುದು. ಆದ್ರೆ ಚಿಕ್ಕಚಿಕ್ಕ ವಿಷ್ಯಗಳಿಂದ ನಿಮಗೆ ಕಿರಿಕಿರಿ ಆಗ್ತಾ ಇರಬಹುದು, ಬೇಜಾರ್ ಆಗ್ತಾ ಇರಬಹುದು. ಅಂಥ ಚಿಕ್ಕಚಿಕ್ಕ ವಿಷ್ಯಗಳಿಗೂ ಯೆಹೋವ ದೇವರ ಹತ್ರ ಸಹಾಯ ಕೇಳೋ ರೂಢಿ ಮಾಡ್ಕೊಳ್ಳಿ. ಇದ್ರಿಂದ ಯೆಹೋವ ದೇವರಿಗೆ ಯಾವಾಗ, ಹೇಗೆ ಸಹಾಯ ಮಾಡಬೇಕು ಅಂತ ಚೆನ್ನಾಗಿ ಗೊತ್ತಿದೆ ಅನ್ನೋ ನಂಬಿಕೆ ನಿಮಗೆ ಬರುತ್ತೆ. ಆಗ ಮುಂದೆ ದೊಡ್ಡದೊಡ್ಡ ಕಷ್ಟಗಳು ಬಂದಾಗ ಯೆಹೋವನ ಹತ್ರ ಸಹಾಯ ಕೇಳೋಕೆ ನೀವು ಹಿಂಜರಿಯಲ್ಲ.—ಕೀರ್ತ. 27:1, 3.
8. ಈಗ ಕಷ್ಟಗಳನ್ನ ಸಹಿಸ್ಕೊಂಡ್ರೆ ಮುಂದೆನೂ ಸಹಿಸ್ಕೊಳ್ಳೋಕೆ ಆಗುತ್ತೆ ಅಂತ ಸಹೋದರಿ ಮೀರಾ ಅವ್ರ ಉದಾಹರಣೆಯಿಂದ ಹೇಗೆ ಗೊತ್ತಾಗುತ್ತೆ? (ಯಾಕೋಬ 1:2-4) (ಚಿತ್ರನೂ ನೋಡಿ.)
8 ನಾವು ಈಗ ಕಷ್ಟಗಳನ್ನ ತಾಳ್ಕೊಂಡ್ರೆ ಮುಂದೆ ಮಹಾ ಸಂಕಟದಲ್ಲಿ ಬರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಆಗುತ್ತೆ. (ರೋಮ. 5:3) ಇದು ನಮಗೆ ಎಷ್ಟೋ ಸಹೋದರರ ಅನುಭವದಿಂದ ಗೊತ್ತಾಗಿದೆ. ಅವರು ತಮಗೆ ಒಂದು ಕಷ್ಟ ಬಂದಾಗ ಅದನ್ನ ತಾಳ್ಕೊಂಡ್ರು. ಇದ್ರಿಂದ ಯೆಹೋವ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಅವ್ರಿಗೆ ಬಂತು. ಆಗ ಅವ್ರಿಗೆ ಬಂದ ಇನ್ನೊಂದು ಕಷ್ಟನೂ ತಾಳ್ಕೊಳ್ಳೋಕೆ ಆಯ್ತು. (ಯಾಕೋಬ 1:2-4 ಓದಿ.) ಅಲ್ಬೇನಿಯದಲ್ಲಿರೋ ಮೀರಾ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವರು ಮುಂಚೆ ಬಂದ ಕಷ್ಟಗಳನ್ನ ತಾಳ್ಕೊಂಡಿದ್ರಿಂದ ಇವಾಗ ಬರ್ತಿರೋ ಕಷ್ಟಗಳನ್ನೂ ತಾಳ್ಕೊಳ್ಳೋಕೆ ಆಗ್ತಿದೆ. ಕೆಲವೊಮ್ಮೆ ಆ ಸಹೋದರಿಗೆ ‘ನನ್ನಷ್ಟು ಕಷ್ಟ ಬೇರೆ ಯಾರಿಗೂ ಬಂದಿಲ್ಲ’ ಅಂತ ಅನಿಸ್ತಾ ಇರುತ್ತೆ. ಆಗೆಲ್ಲ ಅವರು 20 ವರ್ಷದಿಂದ ಯೆಹೋವ ಹೇಗೆಲ್ಲ ಅವ್ರಿಗೆ ಸಹಾಯ ಮಾಡ್ತಾ ಬಂದಿದ್ದಾನೆ ಅನ್ನೋದನ್ನ ನೆನಸ್ಕೊಳ್ತಾರೆ. ‘ಇಷ್ಟು ವರ್ಷದಿಂದ ನೀನು ಏನೇ ಕಷ್ಟ ಬಂದ್ರೂ ಯೆಹೋವನ ಸಹಾಯದಿಂದ ಅದನ್ನೆಲ್ಲ ಗೆದ್ದಿದ್ದೀಯ. ಈಗ ಬಿಟ್ಕೊಟ್ರೆ ಎಲ್ಲಾ ಮಣ್ಣುಪಾಲಾಗುತ್ತೆ ಮೀರಾ’ ಅಂತ ಆ ಸಹೋದರಿ ಅವ್ರಿಗೆ ಅವ್ರೇ ಹೇಳ್ಕೊಳ್ತಾರೆ. ನಾವು ಕೂಡ ಯೆಹೋವ ನಮಗೆ ಏನನ್ನೆಲ್ಲ ಸಹಿಸ್ಕೊಳ್ಳೋಕೆ ಶಕ್ತಿ ಕೊಟ್ಟಿದ್ದಾನೆ ಅನ್ನೋದನ್ನ ನೆನಸ್ಕೊಬೇಕು. ನಾವು ಸಹಿಸ್ಕೊಳ್ಳೋ ಪ್ರತಿಯೊಂದು ಕಷ್ಟಾನೂ ಆತನು ನೋಡ್ತಾ ಇದ್ದಾನೆ. ಅದಕ್ಕೆ ತಕ್ಕ ಹಾಗೆ ನಮ್ಮನ್ನ ಆಶೀರ್ವದಿಸ್ತಾನೆ ಅಂತ ನಂಬಬೇಕು. (ಮತ್ತಾ. 5:10-12) ಹೀಗೆ ಮಾಡಿದಾಗ, ಮಹಾ ಸಂಕಟ ಶುರು ಆಗೋಷ್ಟರಲ್ಲಿ ನಾವು ಸಹಿಸ್ಕೊಳ್ಳೋದನ್ನ ಕಲ್ತಿರ್ತೀವಿ. ಆಗ ಏನೇ ಕಷ್ಟ ಬಂದ್ರೂ ಸಹಿಸ್ಕೊಳ್ತೀವಿ.
ಅನುಕಂಪ ತೋರಿಸಿ
9. ಸಿರಿಯದ ಅಂತಿಯೋಕ್ಯ ಸಭೆಯವರು ಹೇಗೆ ಅನುಕಂಪ ತೋರಿಸಿದ್ರು?
9 ಒಂದು ಸಲ ಯೂದಾಯದಲ್ಲಿ ದೊಡ್ಡ ಬರಗಾಲ ಬಂತು. ಇದ್ರಿಂದ ಅಲ್ಲಿದ್ದ ಕ್ರೈಸ್ತರಿಗೆ ತುಂಬ ಕಷ್ಟ ಆಯ್ತು. ಈ ವಿಷ್ಯ ಸಿರಿಯದ ಅಂತಿಯೋಕ್ಯ ಸಭೆಗೆ ಗೊತ್ತಾಯ್ತು. ಅಲ್ಲಿದ್ದ ಕ್ರೈಸ್ತರಿಗೆ ಯೂದಾಯದಲ್ಲಿದ್ದ ಸಹೋದರರ ಪರಿಸ್ಥಿತಿ ಬಗ್ಗೆ ಕೇಳಿ ಅಯ್ಯೋ ಪಾಪ ಅಂತ ಅನಿಸ್ತು. ‘ತಮ್ಮಿಂದಾದಷ್ಟು ಸಹಾಯ ಮಾಡಿ’ ಅವ್ರಿಗೆ ಅನುಕಂಪ ತೋರಿಸಿದ್ರು. (ಅ. ಕಾ. 11:27-30) ಬರಗಾಲದಿಂದ ಕಷ್ಟಪಡ್ತಿದ್ದ ಸಹೋದರರು ಅಂತಿಯೋಕ್ಯದಿಂದ ತುಂಬ ದೂರ ಇದ್ರು. ಆದ್ರೂ ಅಂತಿಯೋಕ್ಯದ ಸಹೋದರರು ಅವ್ರಿಗೆ ಹೇಗಾದ್ರೂ ಮಾಡಿ ಸಹಾಯ ಮಾಡ್ಲೇಬೇಕು ಅಂತ ನಿರ್ಧಾರ ಮಾಡಿದ್ರು.—1 ಯೋಹಾ. 3:17, 18.
10. ಕಷ್ಟದಲ್ಲಿರೋ ಸಹೋದರ ಸಹೋದರಿಯರಿಗೆ ನಾವು ಹೇಗೆ ಅನುಕಂಪ ತೋರಿಸಬಹುದು? (ಚಿತ್ರನೂ ನೋಡಿ.)
10 ನಾವು ಕೂಡ ವಿಪತ್ತಿಂದ ಕಷ್ಟಪಡ್ತಿರೋ ನಮ್ಮ ಸಹೋದರ ಸಹೋದರಿಯರಿಗೆ ಅನುಕಂಪ ತೋರಿಸಬೇಕು. ಹೇಗೆ? ಅವ್ರಿಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರಬೇಕು. ವಿಪತ್ತು ಪರಿಹಾರ ಕೆಲಸ ನಡೀತಾ ಇದ್ರೆ ‘ನಾನು ಅಲ್ಲಿ ಹೋಗಿ ಸಹಾಯ ಮಾಡಬಹುದಾ?’ ಅಂತ ಹಿರಿಯರ ಹತ್ರ ನೀವು ಕೇಳಬಹುದು.b ಕಷ್ಟದಲ್ಲಿರೋ ಸಹೋದರರಿಗೋಸ್ಕರ ಪ್ರಾರ್ಥನೆ ಮಾಡಬಹುದು. ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳನ್ನ ಕೊಡಬಹುದು. (ಜ್ಞಾನೋ. 17:17) ಉದಾಹರಣೆಗೆ, ನಮ್ಮ ಸಂಘಟನೆ 2020ರಲ್ಲಿ 950ಕ್ಕೂ ಹೆಚ್ಚು ಗುಂಪುಗಳನ್ನ ವಿಪತ್ತು ಪರಿಹಾರ ಕೆಲಸಕ್ಕೆ ಕಳಿಸ್ತು. ಇವರು ಕೊರೊನಾ ಕಾಯಿಲೆ ಬಂದಾಗ ಸಹೋದರ ಸಹೋದರಿಯರಿಗೆ ತುಂಬ ಸಹಾಯ ಮಾಡಿದ್ರು. ಅವ್ರಿಗೆ ಬೇಕಾದ ವಸ್ತುಗಳನ್ನ ತಂದ್ಕೊಟ್ರು. ಇನ್ನು ಕೆಲವು ಕಡೆ ಮನೆಗಳನ್ನ, ಆರಾಧನಾ ಸ್ಥಳಗಳನ್ನ ಕಟ್ಕೊಟ್ರು, ರಿಪೇರಿ ಮಾಡ್ಕೊಟ್ರು. ಅಷ್ಟೇ ಅಲ್ಲ, ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸ್ಕೊಳ್ಳೋಕೆ ಸಹಾಯನೂ ಮಾಡಿದ್ರು. ಹೀಗೆ ಅವರು ಅನುಕಂಪ ತೋರಿಸಿದ್ರು. ಈ ಸಹೋದರ ಸಹೋದರಿಯರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಡಿಮೆನೇ!—2 ಕೊರಿಂಥ 8:1-4 ಹೋಲಿಸಿ.
11. ನಾವು ತೋರಿಸೋ ಅನುಕಂಪ ನೋಡಿ ಜನ್ರು ಏನು ಮಾಡ್ತಿದ್ದಾರೆ?
11 ವಿಪತ್ತು ಆದಾಗ ನಾವು ನಮ್ಮ ಸಹೋದರ ಸಹೋದರಿಯರಿಗೆ ಅನುಕಂಪ ತೋರಿಸೋದನ್ನ, ನಾವು ಮಾಡೋ ತ್ಯಾಗಗಳನ್ನ ಬೇರೆಯವರೂ ಗಮನಿಸ್ತಾರೆ. ಉದಾಹರಣೆಗೆ 2019ರಲ್ಲಿ ಡೊರಿಯನ್ ಅನ್ನೋ ಚಂಡಮಾರುತದಿಂದ ಬಹಾಮಾಸ್ನಲ್ಲಿದ್ದ ರಾಜ್ಯ ಸಭಾಗೃಹ ಬಿದ್ದು ಹೋಯ್ತು. ಅದನ್ನ ಮತ್ತೆ ಕಟ್ಟೋಕೆ ನಮ್ಮ ಸಹೋದರರು ಒಬ್ಬ ಕಾಂಟ್ರ್ಯಾಕ್ಟರ್ ಹತ್ರ ‘ಇದಕ್ಕೆ ಎಷ್ಟು ಖರ್ಚಾಗುತ್ತೆ?’ ಅಂತ ಕೇಳಿದ್ರು. ಅದಕ್ಕೆ ಅವನು ‘ನೀವು ಏನೂ ಖರ್ಚು ಮಾಡೋದು ಬೇಡ. ಎಲ್ಲಾ ನಾನೇ ನೋಡ್ಕೊಳ್ತೀನಿ. ವಸ್ತುಗಳನ್ನ ನಾನು ಫ್ರೀಯಾಗಿ ಕೊಡ್ತೀನಿ. ಕಾರ್ಮಿಕರಿಗೆ ನಾನೇ ಸಂಬಳ ಕೊಡ್ತೀನಿ. ನೀವು ತುಂಬ ಒಳ್ಳೇ ಕೆಲಸ ಮಾಡ್ತಾ ಇದ್ದೀರ, ನಿಮ್ಮ ಜನ್ರಿಗೆ ಇಷ್ಟು ಸಹಾಯ ಮಾಡ್ತಿರೋದನ್ನ ನೋಡಿ ನನಗೆ ತುಂಬ ಖುಷಿ ಆಗ್ತಿದೆ’ ಅಂದ. ಲೋಕದಲ್ಲಿರೋ ಎಷ್ಟೋ ಜನ್ರಿಗೆ ಯೆಹೋವ ಅಂದ್ರೆ ಯಾರಂತಾನೇ ಗೊತ್ತಿಲ್ಲ. ಆದ್ರೆ ಯೆಹೋವನ ಸಾಕ್ಷಿಗಳಾದ ನಾವು ತೋರಿಸೋ ಅನುಕಂಪ ನೋಡಿ ‘ಕರುಣಾಮಯಿಯಾದ’ ದೇವರ ಕಡೆಗೆ ಅವರು ಬರ್ತಿದ್ದಾರೆ.—ಎಫೆ. 2:4.
12. ನಾವೀಗ ಅನುಕಂಪ ತೋರಿಸೋದನ್ನ ಕಲಿತ್ರೆ ಮಹಾ ಸಂಕಟದ ಸಮಯದಲ್ಲಿ ಹೇಗೆ ಸಹಾಯ ಆಗುತ್ತೆ? (ಪ್ರಕಟನೆ 13:16, 17)
12 ಮಹಾ ಸಂಕಟದ ಸಮಯದಲ್ಲಿ ನಾವು ನಮ್ಮ ಸಹೋದರರಿಗೆ ಯಾಕೆ ಅನುಕಂಪ ತೋರಿಸಬೇಕು? ರಾಜಕೀಯ ವಿಷ್ಯಗಳಿಗೆ ಬೆಂಬಲ ಕೊಡದೆ ಇರುವವ್ರಿಗೆ ಈಗ್ಲೂ ಮುಂದಕ್ಕೂ ಕಷ್ಟಗಳು ಇರುತ್ತೆ ಅಂತ ಬೈಬಲ್ ಹೇಳುತ್ತೆ. (ಪ್ರಕಟನೆ 13:16, 17 ಓದಿ.) ಆ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ಜೀವನ ಸಾಗಿಸೋಕೂ ಕಷ್ಟ ಆಗಬಹುದು. ಆಗ ನಾವು ಅವ್ರಿಗೆ ಬೇಕಾದ ವಸ್ತುಗಳನ್ನ ಕೊಟ್ಟು ಸಹಾಯ ಮಾಡಬೇಕು. ಯೇಸು ಕ್ರಿಸ್ತ ನ್ಯಾಯತೀರ್ಪು ಮಾಡೋಕೆ ಬರುವಾಗ ನಾವು ಹೀಗೆ ಅನುಕಂಪ ತೋರಿಸೋದನ್ನ ನೋಡಿ “ದೇವರ ಆಳ್ವಿಕೆಯ ಆಶೀರ್ವಾದಗಳನ್ನ ಆಸ್ತಿಯಾಗಿ” ಕೊಡ್ತಾನೆ.—ಮತ್ತಾ. 25:34-40.
ಪ್ರೀತಿ ತೋರಿಸಿ
13. ರೋಮನ್ನರಿಗೆ 15:7ರಲ್ಲಿ ಹೇಳೋ ಹಾಗೆ ಒಂದನೇ ಶತಮಾನದ ಕ್ರೈಸ್ತರು ಹೇಗೆ ಒಬ್ರಿಗೊಬ್ರು ಪ್ರೀತಿ ತೋರಿಸಿದ್ರು?
13 ಒಂದನೇ ಶತಮಾನದ ಕ್ರೈಸ್ತರಲ್ಲಿ ಪ್ರೀತಿ ಎದ್ದುಕಾಣ್ತಿತ್ತು. ಆದ್ರೆ ಒಬ್ರನ್ನೊಬ್ರು ಪ್ರೀತಿಸೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ರೋಮ್ನಲ್ಲಿದ್ದ ಸಭೆಯಲ್ಲಿ ಬೇರೆ ಬೇರೆ ಹಿನ್ನೆಲೆಯಿಂದ ಬಂದ ಜನ್ರಿದ್ರು. ಅವ್ರಲ್ಲಿ ಚಿಕ್ಕವಯಸ್ಸಿಂದ ಮೋಶೆಯ ನಿಯಮ ಪುಸ್ತಕನ ಪಾಲಿಸ್ಕೊಂಡು ಬಂದ ಯೆಹೂದ್ಯರೂ ಇದ್ರು. ಬೇರೆ ಬೇರೆ ಪದ್ಧತಿಗಳನ್ನ ಮಾಡ್ಕೊಂಡು ಬಂದ ಬೇರೆ ಜನಾಂಗದವರೂ ಇದ್ರು. ಅಲ್ಲಿದ್ದ ಕ್ರೈಸ್ತರಲ್ಲಿ ಕೆಲವರು ಆಳುಗಳಾಗಿದ್ರು. ಇನ್ನು ಕೆಲವರು ಯಜಮಾನರು ಆಗಿದ್ರು. ಹಾಗಿದ್ರೂ ಅವರು ಮೇಲು-ಕೀಳು ಅಂತ ನೋಡದೆ ಪ್ರೀತಿ ತೋರಿಸೋಕೆ ಯಾವುದು ಸಹಾಯ ಮಾಡ್ತು? ಅಪೊಸ್ತಲ ಪೌಲ ಅವ್ರಿಗೆ “ಒಬ್ರು ಇನ್ನೊಬ್ರನ್ನ ಸ್ವಾಗತಿಸಿ” ಅಂತ ಹೇಳಿದನು. (ರೋಮನ್ನರಿಗೆ 15:7 ಮತ್ತು ಪಾದಟಿಪ್ಪಣಿ ಓದಿ.) “ಸ್ವಾಗತಿಸಿ” ಅನ್ನೋ ಪದದ ಅರ್ಥ ಏನಂದ್ರೆ ಒಬ್ರನ್ನ ಪ್ರೀತಿಯಿಂದ ತಮ್ಮ ಮನೆಗೆ ಅಥವಾ ಸ್ನೇಹಿತರ ಜೊತೆಗೆ ಸೇರಿಸ್ಕೊಳ್ಳೋದು ಅಥವಾ ಅತಿಥಿಸತ್ಕಾರ ಮಾಡೋದು ಅಂತ ಆಗಿದೆ. ಉದಾಹರಣೆಗೆ ಫಿಲೆಮೋನನನ್ನ ಬಿಟ್ಟು ಓಡಿಹೋಗಿದ್ದ ಅವನ ಸೇವಕ ಓನೆಸೀಮನ ಬಗ್ಗೆ ಪೌಲ ಏನು ಹೇಳಿದ ನೋಡಿ. ಅವನು ಫಿಲೆಮೋನನ ಹತ್ರ “[ಓನೆಸೀಮನನ್ನ] ಸ್ವಾಗತಿಸು” ಅಂತ ಹೇಳಿದ. (ಫಿಲೆ. 17) ಅಪೊಲ್ಲೋಸನಿಗೆ ಕ್ರೈಸ್ತರ ಬಗ್ಗೆ ಜಾಸ್ತಿ ಏನೂ ಗೊತ್ತಿರಲಿಲ್ಲ. ಆದ್ರೂ ಅಕ್ವಿಲ ಮತ್ತು ಪ್ರಿಸ್ಕಿಲ್ಲ ‘ಅವನನ್ನ ತಮ್ಮ ಜೊತೆ ಕರ್ಕೊಂಡ್ರು.’ (ಅ. ಕಾ. 18:26) ಅವ್ರ ಹಿನ್ನೆಲೆಗಳಲ್ಲಿ ಇಷ್ಟೊಂದು ವ್ಯತ್ಯಾಸ ಇದ್ರೂ ಒಂದನೇ ಶತಮಾನದ ಕ್ರೈಸ್ತರು ಭೇದಭಾವ ತೋರಿಸದೆ ಒಗ್ಗಟ್ಟಿಂದ, ಪ್ರೀತಿಯಿಂದ ಇದ್ರು.
14. ಆ್ಯನ ಮತ್ತು ಅವ್ರ ಗಂಡ ಸಹೋದರ ಸಹೋದರಿಯರಿಗೆ ಹೇಗೆ ಪ್ರೀತಿ ತೋರಿಸಿದ್ರು?
14 ನಾವು ಸಭೆಯಲ್ಲಿ ಕೆಲವು ಸಹೋದರ ಸಹೋದರಿಯರನ್ನ ಫ್ರೆಂಡ್ಸ್ ಮಾಡ್ಕೊಂಡು ಬರೀ ಅವ್ರ ಜೊತೆನೇ ಮಾತಾಡೋದಲ್ಲ, ಬೇರೆಯವ್ರನ್ನೂ ಸೇರಿಸ್ಕೊಬೇಕು. ಹೀಗೆ ನಮ್ಮ ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಬೇಕು. ಆಗ ಅವರೂ ನಮಗೆ ಪ್ರೀತಿ ತೋರಿಸ್ತಾರೆ. (2 ಕೊರಿಂ. 6:11-13) ಆ್ಯನ ಮತ್ತು ಅವ್ರ ಗಂಡ ಏನು ಮಾಡಿದ್ರು ಅಂತ ನೋಡಿ. ಅವ್ರಿಗೆ ಪಶ್ಚಿಮ ಆಫ್ರಿಕಾದಲ್ಲಿ ಮಿಷನರಿ ಸೇವೆ ಮಾಡೋ ನೇಮಕ ಸಿಕ್ತು. ಅವರು ಅಲ್ಲಿಗೆ ಹೋಗಿ ಸ್ವಲ್ಪದ್ರಲ್ಲೇ ಕೊರೊನಾ ಕಾಯಿಲೆ ಶುರು ಆಯ್ತು. ಆಗ ಅವ್ರಿಗೆ ಕೂಟಗಳಿಗೆ ಹೋಗೋಕೆ ಆಗಲಿಲ್ಲ, ಸಹೋದರ ಸಹೋದರಿಯರ ಪರಿಚಯ ಮಾಡ್ಕೊಳ್ಳೋಕೆ ಆಗಲಿಲ್ಲ. ಆದ್ರೂ ಆ ದಂಪತಿ ಹೇಗೆ ಪ್ರೀತಿ ತೋರಿಸಿದ್ರು? ವಿಡಿಯೋ ಕಾಲ್ ಮಾಡಿ ಎಲ್ರನ್ನೂ ಮಾತಾಡಿಸಿದ್ರು. ಆಗ ಸಹೋದರ ಸಹೋದರಿಯರಿಗೆ ತುಂಬ ಖುಷಿ ಆಯ್ತು. ಅವರು ಕೂಡ ಈ ದಂಪತಿಗೆ ಆಗಾಗ ಫೋನ್, ಮೆಸೆಜ್ ಮಾಡ್ತಿದ್ರು. ಆ್ಯನ ಮತ್ತು ಅವ್ರ ಗಂಡ ಯಾಕೆ ಇಷ್ಟು ಪ್ರಯತ್ನ ಹಾಕಿದ್ರು? “ಯಾಕಂದ್ರೆ ನಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರು ನಂಗೂ ನನ್ನ ಕುಟುಂಬಕ್ಕೂ ತುಂಬ ಪ್ರೀತಿ ತೋರಿಸಿದ್ರು. ನಾವು ಚೆನ್ನಾಗಿರುವಾಗ, ಕಷ್ಟದಲ್ಲಿ ಇರುವಾಗ ನಮ್ಮ ಜೊತೆನೇ ಇದ್ರು. ಅದು ನಂಗೆ ತುಂಬ ಇಷ್ಟ ಆಯ್ತು. ಅದನ್ನೇ ನಾನೂ ಬೇರೆಯವ್ರಿಗೆ ಮಾಡಬೇಕು ಅಂತ ಅನಿಸ್ತು” ಅಂತ ಆ್ಯನ ಹೇಳ್ತಾರೆ.
15. ಸಹೋದರಿ ವೆನೆಸಾ ಅವ್ರಿಂದ ನಾವೇನು ಕಲಿತೀವಿ? (ಚಿತ್ರನೂ ನೋಡಿ.)
15 ನಮ್ಮ ಸಭೆಗಳಲ್ಲೂ ಕೆಲವು ಸಹೋದರ ಸಹೋದರಿಯರ ಹಿನ್ನೆಲೆ, ಸ್ವಭಾವ ಬೇರೆ ಬೇರೆ ಇರುತ್ತೆ. ಆದ್ರೂ ನಾವು ಅವ್ರಿಗೆ ಪ್ರೀತಿ ತೋರಿಸಬೇಕು. ಅದಕ್ಕೆ ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡಬೇಕು. ನ್ಯೂಜಿಲೆಂಡ್ನಲ್ಲಿ ಸೇವೆ ಮಾಡ್ತಿರೋ ಸಹೋದರಿ ವೆನೆಸಾಗೂ ಮುಂಚೆ ತಮ್ಮ ಸಭೆಯಲ್ಲಿದ್ದ ಕೆಲವ್ರ ಜೊತೆ ಹೊಂದ್ಕೊಳ್ಳೋಕೆ ಕಷ್ಟ ಆಗ್ತಿತ್ತು. ಯಾಕಂದ್ರೆ ಅವ್ರ ಸ್ವಭಾವ ಇವ್ರಿಗೆ ಇಷ್ಟ ಆಗ್ತಿರಲಿಲ್ಲ. ಹಾಗಂತ ಈ ಸಹೋದರಿ ಅವ್ರಿಂದ ದೂರ ಹೋಗಲಿಲ್ಲ. ಅದ್ರ ಬದ್ಲು ಅವ್ರ ಜೊತೆ ಇನ್ನೂ ಸಮಯ ಕಳೆದ್ರು. ಇದ್ರಿಂದ ಅವ್ರಲ್ಲಿ ಯೆಹೋವ ದೇವರಿಗೆ ಯಾವ ಗುಣಗಳು ಇಷ್ಟ ಆಗಿದೆ ಅಂತ ಈ ಸಹೋದರಿಗೆ ತಿಳ್ಕೊಳ್ಳೋಕೆ ಆಯ್ತು. ಈ ಸಹೋದರಿ ಏನು ಹೇಳ್ತಾರಂದ್ರೆ “ನನ್ನ ಗಂಡ ಸರ್ಕಿಟ್ ಮೇಲ್ವಿಚಾರಕ ಆಗಿರೋದ್ರಿಂದ ಬೇರೆ ಬೇರೆ ಸ್ವಭಾವದ ಸಹೋದರ ಸಹೋದರಿಯರನ್ನ ನಾವು ಭೇಟಿ ಮಾಡ್ತಾ ಇರ್ತೀವಿ. ಈಗ ನನಗೆ ಅವ್ರ ಜೊತೆ ಹೊಂದ್ಕೊಂಡು ಹೋಗೋಕೆ ಸುಲಭ ಆಗಿದೆ. ಈ ರೀತಿ ಬೇರೆ ಬೇರೆ ಸ್ವಭಾವ ಇರೋದು ಒಂಥರ ಚೆಂದಾನೇ. ಯೆಹೋವ ದೇವರೂ ಇದನ್ನ ಇಷ್ಟ ಪಡ್ತಾನೆ. ಅದಕ್ಕೆ ಎಲ್ಲಾ ತರದ ಜನ್ರಿಗೂ ತನ್ನನ್ನ ಆರಾಧಿಸೋಕೆ ಅವಕಾಶ ಕೊಟ್ಟಿದ್ದಾನೆ.” ನಾವು ಕೂಡ ಸಹೋದರ ಸಹೋದರಿಯರನ್ನ ಪ್ರೀತಿಸಬೇಕಂದ್ರೆ ಯೆಹೋವನ ತರ ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡಬೇಕು. —2 ಕೊರಿಂ. 8:24.
16. ಮಹಾ ಸಂಕಟದ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರನ್ನ ಯಾಕೆ ಪ್ರೀತಿಸಬೇಕು? (ಚಿತ್ರನೂ ನೋಡಿ.)
16 ಮಹಾ ಸಂಕಟದ ಸಮಯದಲ್ಲಿ ನಾವು ಸಹೋದರ ಸಹೋದರಿಯರನ್ನ ಪ್ರೀತಿಸಬೇಕು. ಆ ಸಮಯದಲ್ಲಿ ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ? ಹಿಂದಿನ ಕಾಲದಲ್ಲಿ ಬಾಬೆಲ್ ಮೇಲೆ ದಾಳಿ ಆದಾಗ ಯೆಹೋವ ತನ್ನ ಜನ್ರಿಗೆ ಏನು ಹೇಳಿದನು ನೋಡಿ: “ನನ್ನ ಜನ್ರೇ, ನಿಮ್ಮನಿಮ್ಮ ಒಳಗಿನ ಕೋಣೆಗಳಿಗೆ ಹೋಗಿ, ಬಾಗಿಲು ಹಾಕೊಳ್ಳಿ, ಸ್ವಲ್ಪಹೊತ್ತು ಬಚ್ಚಿಟ್ಕೊಳ್ಳಿ. ನನ್ನ ಕೋಪ ತೀರೋ ತನಕ ಅಲ್ಲೇ ಇರಿ.” (ಯೆಶಾ. 26:20) ಮಹಾ ಸಂಕಟದಲ್ಲಿ ನಮಗೆ ಇದೇ ತರದ ನಿರ್ದೇಶನ ಸಿಗಬಹುದು. ಇಲ್ಲಿ ಹೇಳ್ತಿರೋ ಒಳಗಿನ ಕೋಣೆಗಳು ಸಭೆಗಳನ್ನ ಸೂಚಿಸ್ತಾ ಇರಬಹುದು. ಮಹಾ ಸಂಕಟದ ಸಮಯದಲ್ಲಿ ನಾವು ಸಹೋದರ ಸಹೋದರಿಯರ ಜೊತೆ ಒಗ್ಗಟ್ಟಾಗಿದ್ದು ಯೆಹೋವನನ್ನ ಆರಾಧಿಸ್ತಾ ಇದ್ರೆ ಆತನು ನಮ್ಮನ್ನ ಕಾಪಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಹಾಗಾಗಿ ಈಗ ನಾವು ನಮ್ಮ ಸಹೋದರ ಸಹೋದರಿಯರ ಜೊತೆ ಹೊಂದ್ಕೊಳ್ಳೋದು ಮಾತ್ರ ಅಲ್ಲ ಅವ್ರನ್ನ ಪ್ರೀತಿಸೋಕೂ ಕಲಿಬೇಕು. ಆಗ ಮಾತ್ರ ನಮ್ಮ ಜೀವ ಉಳಿಯುತ್ತೆ.
ಈಗಿಂದಾನೇ ತಯಾರಾಗಿ
17. ಮಹಾ ಸಂಕಟಕ್ಕೆ ನಾವು ಈಗಿಂದಾನೇ ತಯಾರಿ ಮಾಡ್ಕೊಳ್ಳೋದು ಯಾಕೆ ಒಳ್ಳೇದು?
17 ‘ಯೆಹೋವನ ಮಹಾ ದಿನದಲ್ಲಿ’ ತುಂಬ ಕಷ್ಟಗಳು ಬರುತ್ತೆ. (ಚೆಫ. 1:14, 15) ಆಗ ಯೆಹೋವನ ಜನ್ರು ಕೂಡ ಕಷ್ಟಗಳನ್ನ ಅನುಭವಿಸಬೇಕಾಗುತ್ತೆ. ಅದಕ್ಕೆ ಈಗಿಂದಾನೇ ತಯಾರಾಗಿ ಇದ್ರೆ ಆ ದಿನ ಬಂದಾಗ ನಾವು ಗಾಬರಿ ಆಗಲ್ಲ. ಇವಾಗ ಬರೋ ಕಷ್ಟಗಳನ್ನ ಸಹಿಸ್ಕೊಂಡ್ರೆ ಆ ದಿನದಲ್ಲಿ ಬರೋ ಕಷ್ಟಗಳನ್ನೂ ನಾವು ತಾಳ್ಕೊಳ್ತೀವಿ. ಈಗ ನಾವು ಸಹೋದರ ಸಹೋದರಿಯರಿಗೆ ಅನುಕಂಪ ತೋರಿಸೋಕೆ ಕಲಿತ್ರೆ ಮುಂದೆ ಅವ್ರಿಗೆ ಕಷ್ಟ ಬಂದಾಗ ಸಹಾಯ ಮಾಡ್ತೀವಿ. ಈಗ ನಾವು ಅವ್ರಿಗೆ ಪ್ರೀತಿ ತೋರಿಸೋಕೆ ಕಲಿತ್ರೆ ಮುಂದೆ ಎಷ್ಟೇ ಕಷ್ಟ ಬಂದ್ರೂ ಅವ್ರ ಜೊತೆನೇ ಇರ್ತೀವಿ. ಇದನ್ನೆಲ್ಲ ನಾವು ಮಾಡಿದ್ರೆ ಕಷ್ಟ, ನೋವು ಇಲ್ಲದ ಲೋಕದಲ್ಲಿ ಯೆಹೋವ ನಮಗೆ ಶಾಶ್ವತ ಜೀವ ಕೊಡ್ತಾನೆ.—ಯೆಶಾ. 65:17.
ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!
a ಮಹಾ ಸಂಕಟ ಇನ್ನೇನು ಬಂದುಬಿಡುತ್ತೆ. ಇವಾಗ ಇರೋದಕ್ಕಿಂತ ತುಂಬ ಕಷ್ಟಗಳನ್ನ ಆಗ ನಾವು ಅನುಭವಿಸಬೇಕಾಗುತ್ತೆ. ಅದನ್ನೆಲ್ಲ ಸಹಿಸ್ಕೊಳ್ಳೋಕೆ ನಮಗೆ ತಾಳ್ಮೆ, ಅನುಕಂಪ, ಪ್ರೀತಿ ಸಹಾಯ ಮಾಡುತ್ತೆ. ಈ ಗುಣಗಳನ್ನ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಹೇಗೆ ತೋರಿಸಿದ್ರು? ಇವತ್ತು ನಾವು ಹೇಗೆ ತೋರಿಸಬಹುದು? ಮಹಾ ಸಂಕಟಕ್ಕೆ ಈ ಗುಣಗಳು ನಮ್ಮನ್ನ ಹೇಗೆ ರೆಡಿ ಮಾಡುತ್ತೆ?
b ವಿಪತ್ತು ಪರಿಹಾರ ಪ್ರಾಜೆಕ್ಟಲ್ಲಿ ಯಾರಿಗಾದ್ರೂ ಸಹಾಯ ಮಾಡೋಕೆ ಆಸೆ ಇದ್ರೆ ಲೋಕಲ್ ಡಿಸೈನ್/ಕನ್ಸ್ಟ್ರಕ್ಷನ್ ವಾಲಂಟಿಯರ್ ಅಪ್ಲಿಕೇಷನ್ (DC-50) ಅಥವಾ ಅಪ್ಲಿಕೇಷನ್ ಫಾರ್ ವಾಲಂಟಿಯರ್ ಪ್ರೋಗ್ರಾಮ್ (A-19) ಅನ್ನೋ ಫಾರ್ಮನ್ನ ತುಂಬಿಸಬೇಕು. ಆಮೇಲೆ ಕರೆಯೋ ವರೆಗೂ ಕಾಯಬೇಕು.