ತೆರ್ತ್ಯ ಪೌಲನ ನಂಬಿಗಸ್ತ ಕಾರ್ಯದರ್ಶಿ
ತೆರ್ತ್ಯನು ಒಂದು ಪಂಥಾಹ್ವಾನವನ್ನು ಎದುರಿಸಿದನು. ರೋಮಿನ ಜೊತೆ ಕ್ರೈಸ್ತರಿಗೆ ಒಂದು ದೀರ್ಘ ಪತ್ರವನ್ನು ಬರೆಯುವಾಗ ಅಪೊಸ್ತಲ ಪೌಲನು ಅವನನ್ನು ತನ್ನ ಕಾರ್ಯದರ್ಶಿಯಾಗಿ ಉಪಯೋಗಿಸಲು ಬಯಸಿದನು. ಇದು ಕಠಿನ ಕೆಲಸವಾಗಲಿತ್ತು.
ಸಾ.ಶ. ಒಂದನೆಯ ಶತಮಾನದಲ್ಲಿ ಒಬ್ಬ ಕಾರ್ಯದರ್ಶಿಯಾಗಿರುವುದು ಏಕೆ ಅಷ್ಟು ಕಠಿನವಾಗಿತ್ತು? ಅಂತಹ ಕೆಲಸವನ್ನು ಹೇಗೆ ಮಾಡಲಾಗುತ್ತಿತ್ತು? ಆಗ ಉಪಯೋಗಿಸಲಾಗುತ್ತಿದ್ದ ಲೇಖನ ಸಾಮಗ್ರಿಗಳಾವುವು?
ಪ್ರಾಚೀನತೆಯಲ್ಲಿ ಕಾರ್ಯದರ್ಶಿಗಳು
ಪ್ರಾಚೀನ ಗ್ರೀಕ್-ರೋಮನ್ ಸಮಾಜಗಳಲ್ಲಿ, ವಿವಿಧ ರೀತಿಯ ಕಾರ್ಯದರ್ಶಿಗಳಿದ್ದರು. ಕೆಲವರು ಸರಕಾರಿ ಕಾರ್ಯದರ್ಶಿಗಳು—ಸಾರ್ವಜನಿಕ ಆಫೀಸುಗಳಲ್ಲಿ ಕೆಲಸಮಾಡುತ್ತಿದ್ದರು. ನಾಗರಿಕರಿಗೆ ಮಾರುಕಟ್ಟೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಾರ್ವಜನಿಕ ಕಾರ್ಯದರ್ಶಿಗಳೂ ಇದ್ದರು. ಧನಿಕರು ಖಾಸಗಿ ಕಾರ್ಯದರ್ಶಿಗಳನ್ನು (ಅನೇಕ ವೇಳೆ ದಾಸರನ್ನು) ಇಟ್ಟುಕೊಳ್ಳುತ್ತಿದ್ದರು. ಅಲ್ಲದೆ, ಇತರರಿಗೆ ಪತ್ರ ಬರೆಯಲು ಇಷ್ಟಪಟ್ಟ ಸಿದ್ಧಮನಸ್ಸಿನ ಸ್ನೇಹಿತರೂ ಇದ್ದರು. ವಿದ್ವಾಂಸ ಇ. ರ್ಯಾಂಡಲ್ಫ್ ರಿಚರ್ಡ್ಸ್ ಅವರಿಗನುಸಾರ, ಈ ಅನಧಿಕೃತ ಕಾರ್ಯದರ್ಶಿಗಳ ಕೌಶಲಗಳು, “ಭಾಷೆ ಮತ್ತು/ಅಥವಾ ಬರವಣಿಗೆಯ ವಿಧಾನದ ಕನಿಷ್ಠ ರೀತಿಯ ಸಾಮರ್ಥ್ಯದಿಂದ ಹಿಡಿದು, ಒಂದು ನಿಷ್ಕೃಷ್ಟವಾದ, ಸರಿಯಾದ ಮತ್ತು ಮನ ಸೆಳೆಯುವ ಪತ್ರವನ್ನು ಶೀಘ್ರವಾಗಿ ತಯಾರಿಸುವುದರಲ್ಲಿ ಅತ್ಯುತ್ತಮ ನೈಪುಣ್ಯದ ವರೆಗೆ ವ್ಯಾಪಿಸಿರಸಾಧ್ಯವಿತ್ತು.”
ಕಾರ್ಯದರ್ಶಿಗಳನ್ನು ಯಾರು ಉಪಯೋಗಿಸುತ್ತಿದ್ದರು? ಒಂದನೆಯದಾಗಿ, ಓದುಬರಹ ಗೊತ್ತಿರದಿದ್ದವರು. ಅನೇಕ ಪ್ರಾಚೀನ ಕರಾರುಗಳು ಮತ್ತು ವ್ಯಾಪಾರ ಸಂಬಂಧವಾದ ಪತ್ರಗಳನ್ನು ಟಿಪ್ಪಣಿಗಳುಳ್ಳವುಗಳಾಗಿ ಮುಗಿಸಲಾಗುತ್ತಿತ್ತು. ಅದರಲ್ಲಿ ಕಾರ್ಯದರ್ಶಿಯು, ತನಗೆ ಕೆಲಸಕೊಟ್ಟವನ ಅಸಾಮರ್ಥ್ಯದ ಕಾರಣ ತಾನೇ ಪ್ರಮಾಣಪತ್ರವನ್ನು ಬರೆದೆನೆಂಬ ರುಜುವಾತನ್ನು ಕೊಡುತ್ತಿದ್ದನು. ಕಾರ್ಯದರ್ಶಿಯನ್ನು ಕೆಲಸಕ್ಕೆ ಇಟ್ಟುಕೊಳ್ಳುವುದಕ್ಕೆ ಎರಡನೆಯ ಕಾರಣವು, ಈಜಿಪ್ಟಿನ ಥೀಬ್ಸ್ನ ಒಂದು ಪುರಾತನ ಪತ್ರದಲ್ಲಿ ಚಿತ್ರಿತವಾಗಿದೆ. ಆಸ್ಕ್ಲೀಪೀಯಾಡೀಸ್ ಎಂಬ ಒಬ್ಬಾತನಿಗಾಗಿ ಬರೆಯಲ್ಪಟ್ಟ ಆ ಪತ್ರ ಕೊನೆಯಲ್ಲಿ ಹೇಳಿದ್ದು: “ಅರ್ಮಾನ ಮಗನಾದ ಎವ್ಮೆಲೀಸ್ ಅವನಿಗಾಗಿ ಬರೆದನು. . . . ಏಕೆಂದರೆ ಅವನು ನಿಧಾನವಾಗಿ ಬರೆಯುತ್ತಾನೆ.”
ಆದರೂ, ಓದುಬರಹ ಗೊತ್ತಿರುವುದು ಮಾತ್ರ ಕಾರ್ಯದರ್ಶಿಯ ಉಪಯೋಗವನ್ನು ನಿರ್ಧರಿಸುವ ಸಂಗತಿಯಾಗಿತ್ತೆಂದು ತೋರಿಬರುವುದಿಲ್ಲ. ಬೈಬಲ್ ವ್ಯಾಖ್ಯಾನಕಾರ ಜಾನ್ ಎಲ್. ಮೆಕೆನ್ಸಿ ಅವರಿಗನುಸಾರ, ಕಾರ್ಯದರ್ಶಿಯ ಸೇವೆ ಪಡೆಯಲು ಜನರನ್ನು ಪ್ರೇರಿಸಿದ್ದು, “ಪ್ರಾಯಶಃ ಸ್ಪಷ್ಟತೆಯ ಚಿಂತೆಯೂ ಅಲ್ಲ, ಬದಲಿಗೆ ಸೊಬಗಿನ, ಕಡಮೆಪಕ್ಷ ಅಚ್ಚುಕಟ್ಟಿನ ಕುರಿತ ಚಿಂತೆಯೇ.” ವಿದ್ಯಾವಂತರಿಗೂ, ಬರವಣಿಗೆಯು, ವಿಶೇಷವಾಗಿ ದೀರ್ಘವಾದ ಮತ್ತು ಸವಿವರವಾದ ಬರವಣಿಗೆಯು ಆಯಾಸಕರವಾಗಿತ್ತು. ವಿದ್ವಾಂಸ ಜೆ. ಎ. ಎಶ್ಲಿಮಾನ್ ಹೇಳುವುದು, ಸಾಧ್ಯವಿದ್ದವರು “ಈ ಕೆಲಸದಿಂದ ತಪ್ಪಿಸಿಕೊಳ್ಳುತ್ತ, ಅದನ್ನು ಸಂತೋಷದಿಂದ ತಮ್ಮ ದಾಸರಿಗೆ, ವೃತ್ತಿಪರ ಲಿಪಿಕಾರರಿಗೆ ವಹಿಸಿಕೊಟ್ಟರು.” ಅಲ್ಲದೆ, ಬರವಣಿಗೆಯ ಸಾಮಗ್ರಿಗಳನ್ನು ಮತ್ತು ಕೆಲಸದ ಪರಿಸ್ಥಿತಿಗಳನ್ನು ಪರಿಗಣಿಸುವಾಗ, ಜನರು ತಮ್ಮ ಸ್ವಂತ ಪತ್ರಗಳನ್ನು ಬರೆಯಲು ಏಕೆ ಇಷ್ಟಪಡುತ್ತಿರಲಿಲ್ಲವೆಂದು ತಿಳಿಯುವುದು ಸುಲಭವಾಗಿದೆ.
ಸಾ.ಶ. ಒಂದನೆಯ ಶತಮಾನದಲ್ಲಿ ಬರೆಯಲು ಉಪಯೋಗಿಸಲ್ಪಡುತ್ತಿದ್ದ ಸಾಮಾನ್ಯ ವಸ್ತು ಪಪೈರಸ್ ಜಂಬು ಕಾಗದ. ಆ ಸಸ್ಯದ ತಾಳುಗಳ ತಿರುಳು ದಿಂಡನ್ನು ಉದ್ದಕ್ಕೆ ಕತ್ತರಿಸಿ, ಅದರಿಂದ ತೆಳ್ಳಗಿನ ಪಟ್ಟಿಗಳನ್ನು ಪಡೆಯಲಾಗುತ್ತಿತ್ತು. ಪಟ್ಟಿಗಳ ಒಂದು ಪದರವನ್ನು ಇಟ್ಟು ಆ ಮೊದಲನೆಯ ಪದರದ ಮೇಲೆ ಇನ್ನೊಂದು ಪದರವನ್ನು ಸಮಕೋನದಲ್ಲಿ ಇಡಲಾಗುತ್ತಿತ್ತು. ಇವೆರಡನ್ನು ಒತ್ತಡ ಹಾಕಿ ಅಂಟಿಸಿದಾಗ ಅದರಿಂದ ಒಂದು “ಕಾಗದ”ದ ಹಾಳೆ ದೊರೆಯುತ್ತಿತ್ತು.
ಈ ಮೇಲ್ಮೈಯ ಮೇಲೆ ಬರೆಯುವುದು ಸುಲಭವಾಗಿರಲಿಲ್ಲ. ಅದು ಒರಟಾದದ್ದೂ ನಾರು ಕೂಡಿದ್ದೂ ಆಗಿತ್ತು. ವಿದ್ವಾಂಸ ಏಂಜಲೊ ಪೆನ್ನಾ ಅವರಿಗನುಸಾರ, “ಪಪೈರಸ್ನ ಸ್ಪಂಜಿನಂತಹ ನಾರುಗಳು, ವಿಶೇಷವಾಗಿ ಆ ತೆಳ್ಳಗಿನ ಪಟ್ಟಿಗಳ ಮಧ್ಯೆ ಇದ್ದ ಸೂಕ್ಷ್ಮ ನಾಳಮಾರ್ಗಗಳ ಉದ್ದಕ್ಕೂ ಶಾಯಿ ಹರಡುವಂತೆ ಸಹಾಯಮಾಡುತ್ತಿತ್ತು.” ಕಾರ್ಯದರ್ಶಿಯು ನೆಲದ ಮೇಲೆ ಚಕ್ಕಳ ಬಕ್ಕಳ ಹಾಕಿಕೊಂಡು ಕೂತು, ಒಂದು ಕೈಯಲ್ಲಿ ಹಲಗೆಯ ಮೇಲೆ ಹಾಳೆಯನ್ನು ಹಿಡಿಯುತ್ತಿದ್ದಿರಬಹುದು. ಅವನು ಅನನುಭವಿಯಾಗಿದ್ದರೆ ಇಲ್ಲವೆ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಾಗಿಲ್ಲದಿದ್ದರೆ, ಅವನ ಗರಿ ಲೇಖನಿ ಅಥವಾ ಜೊಂಡು ಲೇಖನಿಯನ್ನು ಅದು ತಡೆದು, ಹಾಳೆಯನ್ನು ಹರಿಯಸಾಧ್ಯವಿತ್ತು, ಅಥವಾ ಬರಹವು ಅಸ್ಪಷ್ಟವಾಗಿ ತೋರಸಾಧ್ಯವಿತ್ತು.
ಶಾಯಿಯು ಹೊಗೆಮಸಿ ಮತ್ತು ಗೋಂದಿನ ಮಿಶ್ರಣದಿಂದ ಮಾಡಲ್ಪಡುತ್ತಿತ್ತು. ಉದ್ದನೆಯ ಪಟ್ಟಿಗಳ ಆಕೃತಿಯಲ್ಲಿ ಮಾರಲ್ಪಡುತ್ತಿದ್ದ ಇದನ್ನು, ಬರೆಯಲು ಉಪಯೋಗಿಸುವ ಮೊದಲು ಶಾಯಿಕುಡಿಕೆಯಲ್ಲಿ ನೀರಿನಿಂದ ತೆಳ್ಳಗೆ ಮಾಡಿಕೊಳ್ಳಬೇಕಾಗಿತ್ತು. ತೆರ್ತ್ಯನಂತಹ ಕಾರ್ಯದರ್ಶಿಯೊಡನೆ ಪ್ರಾಯಶಃ ಇದ್ದ ಇತರ ಉಪಕರಣಗಳಲ್ಲಿ ಒಂದು, ಜೊಂಡು ಲೇಖನಿಯನ್ನು ಹರಿತಗೊಳಿಸಲು ಬೇಕಾಗಿದ್ದ ಒಂದು ಚೂರಿ ಹಾಗೂ ತಪ್ಪುಗಳನ್ನು ಅಳಿಸಲು ಒಂದು ಒದ್ದೆ ಸ್ಪಂಜು. ಪ್ರತಿಯೊಂದು ಅಕ್ಷರವನ್ನು ಜಾಗರೂಕತೆಯಿಂದ ಬರೆಯಬೇಕಾಗಿತ್ತು. ಆದಕಾರಣ ಬರವಣಿಗೆಯು ನಿಧಾನವಾಗಿ ಮತ್ತು ಸ್ವಲ್ಪ ಕಷ್ಟದಿಂದ ಮುಂದುವರಿಯಿತು.
‘ತೆರ್ತ್ಯನೆಂಬ ನಾನು ವಂದಿಸುತ್ತೇನೆ’
ರೋಮಾಪುರದವರಿಗೆ ಬರೆದ ಪತ್ರದ ಅಂತ್ಯದಲ್ಲಿ ಸೇರಿಸಲಾಗಿರುವ ವಂದನೆಗಳಲ್ಲಿ, ಪೌಲನ ಕಾರ್ಯದರ್ಶಿಯದ್ದೂ ಸೇರಿದೆ. ಅವನು ಬರೆದುದು: “ಈ ಪತ್ರಿಕೆಯನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ.” (ರೋಮಾಪುರ 16:22) ಪೌಲನ ಲೇಖನಗಳಲ್ಲಿ ಅವನ ಕಾರ್ಯದರ್ಶಿಗಳಲ್ಲಿ ಒಬ್ಬನಿಗೆ ಸುವ್ಯಕ್ತವಾಗಿ ಸೂಚಿಸಲ್ಪಟ್ಟಿರುವ ಸಂಭವವು ಇದೊಂದೇ ಆಗಿದೆ.
ತೆರ್ತ್ಯನ ಕುರಿತು ನಮಗೆ ತಿಳಿದಿರುವುದು ಕೊಂಚ. ಅವನು “ಕರ್ತನಲ್ಲಿ” ವಂದಿಸುವುದರಿಂದ, ಅವನು ಒಬ್ಬ ನಂಬಿಗಸ್ತ ಕ್ರೈಸ್ತನಾಗಿದ್ದನೆಂದು ನಾವು ತೀರ್ಮಾನಿಸಬಹುದು. ಅವನು ಪ್ರಾಯಶಃ ಕೊರಿಂಥ ಸಭೆಯ ಸದಸ್ಯನಾಗಿದ್ದು, ರೋಮಿನ ಅನೇಕ ಕ್ರೈಸ್ತರನ್ನು ಬಲ್ಲವನಾಗಿದ್ದಿರಬಹುದು. ಬೈಬಲ್ ವಿದ್ವಾಂಸನಾದ ಜೂಸೆಪೆ ಬಾರ್ಬಾಲ್ಯೋ, ತೆರ್ತ್ಯನು ಒಂದೇ ದಾಸನು ಇಲ್ಲವೆ ಬಿಡುಗಡೆಹೊಂದಿದ ಒಬ್ಬ ದಾಸನಾಗಿದ್ದನೆಂದು ಸೂಚಿಸುತ್ತಾರೆ. ಏಕೆ? ಏಕೆಂದರೆ, ಒಂದನೆಯದಾಗಿ, “ಲಿಪಿಕಾರರು ಸಾಮಾನ್ಯವಾಗಿ ಈ ವರ್ಗಕ್ಕೆ ಸೇರಿದವರಾಗಿದ್ದರು; ಮತ್ತು ಅವನ ಲ್ಯಾಟಿನ್ ಹೆಸರು . . . ದಾಸರು ಅಥವಾ ಬಿಡುಗಡೆಹೊಂದಿದ ದಾಸರಲ್ಲಿ ತೀರ ಸಾಮಾನ್ಯವಾಗಿತ್ತು.” ಬಾರ್ಬಾಲ್ಯೋ ಹೇಳುವುದು: “ಆದಕಾರಣ ಅವನೊಬ್ಬ ‘ತಟಸ್ಥ’ ವೃತ್ತಿಪರ ಲೇಖಕನಾಗಿರಲಿಲ್ಲ, ಅವನು ಒಬ್ಬ ಜೊತೆ ಕೆಲಸಗಾರನಾಗಿದ್ದು, ಈ ರೀತಿಯಲ್ಲಿ ಪೌಲನು ತನ್ನ ಅತಿ ಉದ್ದವಾದ ಮತ್ತು ಅತಿ ಸ್ಫುಟವಾಗಿ ವ್ಯಕ್ತಪಡಿಸಲ್ಪಟ್ಟ ಲೇಖನವನ್ನು ಸಂಕಲಿಸಲು ಸಹಾಯಮಾಡಿದನು: ಪೌಲನು ಸಮಯವನ್ನೂ ಬಳಲಿಕೆಯನ್ನೂ ಉಳಿಸುವಂತೆ ಮಾಡಿದ ಒಂದು ಅಮೂಲ್ಯ ಸೇವೆ.”
ತೆರ್ತ್ಯನ ಈ ಕೆಲಸವು ನಿಶ್ಚಯಕ್ಕೂ ಅಮೂಲ್ಯ. ಬಾರೂಕನು ಯೆರೆಮೀಯನಿಗೆ ಹಾಗೂ ಸಿಲ್ವಾನನು ಪೇತ್ರನಿಗೆ ಅದೇ ರೀತಿಯ ಕೆಲಸವನ್ನು ಮಾಡಿದರು. (ಯೆರೆಮೀಯ 36:4; 1 ಪೇತ್ರ 5:12) ಅಂತಹ ಜೊತೆ ಕೆಲಸಗಾರರಿಗೆ ಅದು ಎಂತಹ ಸುಯೋಗವಾಗಿತ್ತು!
ರೋಮಾಪುರದವರಿಗೆ ಬರೆಯುವುದು
ಆ ಪತ್ರವು ರೋಮಾಪುರದವರಿಗೆ, ಪ್ರಾಯಶಃ ಕೊರಿಂಥದಲ್ಲಿ, ಪೌಲನು ಗಾಯನ ಅತಿಥಿಯಾಗಿದ್ದಾಗ ಬರೆಯಲ್ಪಟ್ಟಿತು. ಅದು ಸುಮಾರು ಸಾ.ಶ. 56ರಲ್ಲಿ, ಅಪೊಸ್ತಲನ ಮೂರನೆಯ ಮಿಷನೆರಿ ಯಾತ್ರೆಯ ಸಮಯದಲ್ಲಿ. (ರೋಮಾಪುರ 16:23) ಈ ಪತ್ರವನ್ನು ಬರೆಯಲು ಪೌಲನು ತೆರ್ತ್ಯನನ್ನು ತನ್ನ ಕಾರ್ಯದರ್ಶಿಯಾಗಿ ಉಪಯೋಗಿಸಿದ್ದು ನಿಶ್ಚಯವೆಂದು ನಮಗೆ ಗೊತ್ತಿದೆಯಾದರೂ, ಅವನನ್ನು ನಿಖರವಾಗಿ ಹೇಗೆ ಉಪಯೋಗಿಸಿದನೆಂಬುದು ನಮಗೆ ತಿಳಿಯದು. ಯಾವುದೇ ವಿಧಾನವನ್ನು ಉಪಯೋಗಿಸಿರಲಿ, ಕೆಲಸವು ಸುಲಭವಾಗಿದ್ದಿರಸಾಧ್ಯವಿಲ್ಲ. ಆದರೆ ಈ ವಿಷಯದಲ್ಲಿ ನಮಗೆ ಖಾತರಿಯಿರಬಲ್ಲದು: ಬೈಬಲಿನ ಮಿಕ್ಕ ಭಾಗದಂತೆ, ರೋಮಾಪುರದವರಿಗೆ ಬರೆದ ಪೌಲನ ಪತ್ರಿಕೆಯು “ದೈವಪ್ರೇರಿತ”ವಾಗಿದೆ.—2 ತಿಮೊಥೆಯ 3:16, 17.
ಈ ಪತ್ರವು ಮುಕ್ತಾಯಗೊಂಡಾಗ, ತೆರ್ತ್ಯ ಮತ್ತು ಪೌಲರು ಪಪೈರಸ್ನ ಅನೇಕ ಹಾಳೆಗಳನ್ನು ಉಪಯೋಗಿಸುತ್ತ, ಸಾವಿರಾರು ಪದಗಳನ್ನು ಬರೆದಿದ್ದರು. ಅಂಚಿಗೆ ಗೋಂದು ಹಚ್ಚಿ ಒಂದಕ್ಕೊಂದು ಜೋಡಿಸಲ್ಪಟ್ಟಾಗ, ಈ ಹಾಳೆಗಳು ಪ್ರಾಯಶಃ ಮೂರರಿಂದ ನಾಲ್ಕು ಮೀಟರುಗಳಷ್ಟು ಉದ್ದದ ಒಂದು ಸುರುಳಿಯನ್ನು ರಚಿಸಿದವು. ಈ ಪತ್ರವನ್ನು ಜಾಗರೂಕತೆಯಿಂದ ಸುತ್ತಿ ಮುಚ್ಚಲಾಯಿತು. ಬಳಿಕ ಪೌಲನು ಅದನ್ನು ರೋಮಿಗೆ ಆಗಲೇ ಪ್ರಯಾಣ ಬೆಳೆಸಲಿಕ್ಕಿದ್ದ ಕೆಂಕ್ರೆಯದ ಸಹೋದರಿ ಫೊಯಿಬೆಗೆ ವಹಿಸಿಕೊಟ್ಟನೆಂದು ಕಾಣುತ್ತದೆ.—ರೋಮಾಪುರ 16:1, 2.
ಒಂದನೆಯ ಶತಮಾನದಿಂದ ಹಿಡಿದು, ಬರೆಯುವ ವಸ್ತುಗಳನ್ನು ತಯಾರಿಸುವ ವಿಧಾನಗಳಲ್ಲಿ ಭಾರೀ ಬದಲಾವಣೆಯಾಗಿದೆ. ಆದರೆ ರೋಮನ್ ಕ್ರೈಸ್ತರಿಗೆ ಬರೆದ ಪತ್ರವು ಶತಮಾನಗಳಲ್ಲಿ ದೇವರಿಂದ ಉಳಿಸಲ್ಪಟ್ಟಿದೆ. ಪೌಲನ ನಂಬಿಗಸ್ತನಾದ ಮತ್ತು ಕಷ್ಟಪಟ್ಟು ಕೆಲಸಮಾಡುತ್ತಿದ್ದ ಕಾರ್ಯದರ್ಶಿ ತೆರ್ತ್ಯನ ಸಹಾಯದಿಂದ ಬರೆಯಲ್ಪಟ್ಟ ಯೆಹೋವನ ವಾಕ್ಯದ ಈ ಭಾಗಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬಲ್ಲೆವು!