ತಂದೆ ಮತ್ತು ಹಿರಿಯ—ಎರಡೂ ಪಾತ್ರಗಳನ್ನು ಪೂರೈಸುವುದು
“ಯಾವನೇ ಪುರುಷನಿಗೆ ತನ್ನ ಸ್ವಂತ ಮನೆವಾರ್ತೆಯ ಮೇಲೆ ಅಧ್ಯಕ್ಷತೆ ವಹಿಸಲು ನಿಶ್ಚಯವಾಗಿ ತಿಳಿಯದಿರುವಲ್ಲಿ, ಅವನು ದೇವರ ಸಭೆಯನ್ನು ಹೇಗೆ ಪರಾಮರಿಸಿಯಾನು?”—1 ತಿಮೊಥೆಯ 3:5, NW.
1, 2. (ಎ) ಒಂದನೆಯ ಶತಮಾನದಲ್ಲಿ, ಅವಿವಾಹಿತ ಮೇಲ್ವಿಚಾರಕರು ಮತ್ತು ಮಕ್ಕಳಿಲ್ಲದ ವಿವಾಹಿತ ಮೇಲ್ವಿಚಾರಕರು ತಮ್ಮ ಸಹೋದರರ ಸೇವೆಮಾಡಲು ಹೇಗೆ ಶಕ್ತರಾಗಿದ್ದರು? (ಬಿ) ಇಂದಿನ ಅನೇಕ ವಿವಾಹಿತ ದಂಪತಿಗಳಿಗೆ ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಹೇಗೆ ಮಾದರಿಯಾಗಿದ್ದಾರೆ?
ಆದಿ ಕ್ರೈಸ್ತ ಸಭೆಯಲ್ಲಿ, ಅವಿವಾಹಿತರು, ಅಥವಾ ಮಕ್ಕಳಿಲ್ಲದ ವಿವಾಹಿತ ಪುರುಷರು ಅಥವಾ ಮಕ್ಕಳಿರುವ ವಿವಾಹಿತರು ಮೇಲ್ವಿಚಾರಕರಾಗಿರಸಾಧ್ಯವಿತ್ತು. ಆ ಕ್ರೈಸ್ತರಲ್ಲಿ ಕೆಲವರು, ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ಪ್ರಥಮ ಪತ್ರಿಕೆಯ 7ನೆಯ ಅಧ್ಯಾಯದಲ್ಲಿ ಕೊಟ್ಟ ಸಲಹೆಯನ್ನು—ಅವಿವಾಹಿತರಾಗಿ ಉಳಿಯುವುದು—ಅನುಸರಿಸಲು ಶಕ್ತರಾಗಿದ್ದರೆಂಬುದರಲ್ಲಿ ಸಂಶಯವಿಲ್ಲ. ಯೇಸು ಹೀಗೆ ಹೇಳಿದ್ದನು: “ಪರಲೋಕರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡ ನಪುಂಸಕರಿದ್ದಾರೆ.” (ಮತ್ತಾಯ 19:12, NW) ಅಂತಹ ಅವಿವಾಹಿತರು, ಪೌಲನಂತೆ ಮತ್ತು ಪ್ರಾಯಶಃ ಅವನ ಕೆಲವು ಸಂಚರಣ ಸಂಗಾತಿಗಳಂತೆ, ತಮ್ಮ ಸಹೋದರರಿಗೆ ಸಹಾಯಮಾಡುವುದಕ್ಕಾಗಿ ಪ್ರಯಾಣಿಸಲು ಸ್ವತಂತ್ರರಾಗಿರುವರು.
2 ಬಾರ್ನಬ, ಮಾರ್ಕ, ಸೀಲ, ಲೂಕ, ತಿಮೊಥೆಯ ಮತ್ತು ತೀತ—ಇವರು ಅವಿವಾಹಿತ ಪುರುಷರಾಗಿದ್ದರೊ ಇಲ್ಲವೊ ಎಂಬುದನ್ನು ಬೈಬಲು ಹೇಳುವುದಿಲ್ಲ. ವಿವಾಹಿತರಾಗಿದ್ದರೆ, ವಿವಿಧ ನೇಮಕಗಳ ಮೇಲೆ ವ್ಯಾಪಕವಾಗಿ ಪ್ರಯಾಣಿಸುವಂತೆ ಅವರು ಕುಟುಂಬ ಜವಾಬ್ದಾರಿಗಳಿಂದ ಸಾಕಷ್ಟು ಮುಕ್ತರಾಗಿದ್ದರೆಂಬುದು ವ್ಯಕ್ತ. (ಅ. ಕೃತ್ಯಗಳು 13:2; 15:39-41; 2 ಕೊರಿಂಥ 8:16, 17; 2 ತಿಮೊಥೆಯ 4:9-11; ತೀತ 1:5) ಸ್ಥಳದಿಂದ ಸ್ಥಳಕ್ಕೆ ಹೋಗುತ್ತಿದ್ದಾಗ ತಮ್ಮ ಪತ್ನಿಯರನ್ನು ಸಂಗಡ ಒಯ್ದ ಪೇತ್ರ ಮತ್ತು “ಮಿಕ್ಕಾದ ಅಪೊಸ್ತಲರಂತೆ,” ಅವರು ತಮ್ಮ ಪತ್ನಿಯರ ಜೊತೆಯಲ್ಲಿದ್ದಿರಸಾಧ್ಯವಿತ್ತು. (1 ಕೊರಿಂಥ 9:5) ಅಕ್ವಿಲ ಮತ್ತು ಪ್ರಿಸ್ಕಿಲ್ಲರು ತಮ್ಮನ್ನು ಪುನರ್ನೆಲೆಸಲು ಸಿದ್ಧರಾಗಿದ್ದ ವಿವಾಹಿತ ದಂಪತಿಗಳ ಒಂದು ಆದರ್ಶವಾಗಿದ್ದಾರೆ. ಅವರು ಕೊರಿಂಥದಿಂದ ಎಫೆಸಕ್ಕೆ ಪೌಲನನ್ನು ಹಿಂಬಾಲಿಸಿದರು, ಬಳಿಕ ರೋಮಿಗೆ ಹೋದರು ಮತ್ತು ಪುನಃ ಎಫೆಸಕ್ಕೆ ಹಿಂದಿರುಗಿದರು. ಅವರಿಗೆ ಮಕ್ಕಳಿದ್ದರೊ ಇಲ್ಲವೊ ಎಂಬುದನ್ನು ಬೈಬಲು ಹೇಳುವುದಿಲ್ಲ. ಅವರು ತಮ್ಮ ಸಹೋದರರಿಗಾಗಿ ಮಾಡಿದ ನಿವೇದಿತ ಸೇವೆಯು, “ಅನ್ಯಜನರ ಸಭೆಗಳವರೆಲ್ಲರ” ಕೃತಜ್ಞತೆಯನ್ನು ಸಂಪಾದಿಸಿತು. (ರೋಮಾಪುರ 16:3-5; ಅ. ಕೃತ್ಯಗಳು 18:2, 18; 2 ತಿಮೊಥೆಯ 4:19) ಇಂದು, ಅಕ್ವಿಲ ಮತ್ತು ಪ್ರಿಸ್ಕಿಲ್ಲರಂತೆ, ಪ್ರಾಯಶಃ ಹೆಚ್ಚು ಅಗತ್ಯವಿದ್ದಲ್ಲಿಗೆ ಹೋಗಿ, ಇತರ ಸಭೆಗಳ ಸೇವೆಮಾಡುವ ಅನೇಕ ವಿವಾಹಿತ ದಂಪತಿಗಳಿದ್ದಾರೆಂಬುದು ನಿಸ್ಸಂಶಯ.
ತಂದೆ ಮತ್ತು ಹಿರಿಯ
3. ಪ್ರಥಮ ಶತಮಾನದ ಅನೇಕ ಮಂದಿ ಹಿರಿಯರು ಕುಟುಂಬಗಳಿದ್ದ ವಿವಾಹಿತ ಪುರುಷರಾಗಿದ್ದರೆಂಬುದನ್ನು ಯಾವುದು ಸೂಚಿಸುತ್ತದೆ?
3 ಸಾ.ಶ. ಒಂದನೆಯ ಶತಮಾನದಲ್ಲಿ, ಕ್ರೈಸ್ತ ಹಿರಿಯರಲ್ಲಿ ಹೆಚ್ಚಿನವರು ಮಕ್ಕಳಿದ್ದ ವಿವಾಹಿತ ಪುರುಷರಾಗಿದ್ದರೆಂದು ತೋರಿಬರುತ್ತದೆ. “ಮೇಲ್ವಿಚಾರಕನ ಸ್ಥಾನಕ್ಕಾಗಿ ಪ್ರಯತ್ನಿಸುವ” ಪುರುಷನಲ್ಲಿರಬೇಕಾದ ಅರ್ಹತೆಗಳನ್ನು ಪೌಲನು ಬರೆದಾಗ, ಅಂತಹ ಕ್ರೈಸ್ತನು, “ತನ್ನ ಸ್ವಂತ ಮನೆವಾರ್ತೆಯ ಮೇಲೆ ಉತ್ತಮ ರೀತಿಯಲ್ಲಿ ಅಧ್ಯಕ್ಷತೆ ವಹಿಸಿ, ಪೂರ್ತಿ ಹೊಣೆಗಾರಿಕೆಯಿಂದ ಮಕ್ಕಳನ್ನು ಅಧೀನತೆಯಲ್ಲಿಟ್ಟುಕೊಳ್ಳುವ ಪುರುಷನೂ” ಆಗಿರಬೇಕೆಂದು ಹೇಳಿದನು.—1 ತಿಮೊಥೆಯ 3:1, 4, NW.
4. ಮಕ್ಕಳಿದ್ದ ವಿವಾಹಿತ ಹಿರಿಯರಿಂದ ಏನು ಅಗತ್ಯಪಡಿಸಲ್ಪಟ್ಟಿತ್ತು?
4 ನಾವು ನೋಡಿರುವಂತೆ, ಮೇಲ್ವಿಚಾರಕನಿಗೆ ಮಕ್ಕಳಿರಬೇಕೆಂಬ, ಅಥವಾ ವಿವಾಹವೂ ಆಗಿರಬೇಕೆಂಬ ನಿರ್ಬಂಧವಿರಲಿಲ್ಲ. ಆದರೆ ವಿವಾಹಿತನಾಗಿರುವಲ್ಲಿ, ಒಬ್ಬ ಹಿರಿಯನಾಗಿ ಅಥವಾ ಶುಶ್ರೂಷಾ ಸೇವಕನಾಗಿ ಅರ್ಹನಾಗಬೇಕಾದರೆ, ಒಬ್ಬ ಕ್ರೈಸ್ತನು ತನ್ನ ಪತ್ನಿಯ ಮೇಲೆ ಯೋಗ್ಯವೂ ಪ್ರೀತಿಪೂರ್ವಕವೂ ಆದ ತಲೆತನವನ್ನು ನಿರ್ವಹಿಸಿ, ತನ್ನ ಮಕ್ಕಳನ್ನು ಯೋಗ್ಯವಾದ ಅಧೀನತೆಯಲ್ಲಿಟ್ಟುಕೊಳ್ಳಲು ತಾನು ಶಕ್ತನೆಂದು ತೋರಿಸಿಕೊಳ್ಳಬೇಕಾಗಿತ್ತು. (1 ಕೊರಿಂಥ 11:3; 1 ತಿಮೊಥೆಯ 3:12, 13) ತನ್ನ ಮನೆವಾರ್ತೆಯನ್ನು ನಿರ್ವಹಿಸುವುದರಲ್ಲಿ ಯಾವುದೇ ಗಂಭೀರವಾದ ಬಲಹೀನತೆಯು ಒಬ್ಬ ಸಹೋದರನನ್ನು ಸಭೆಯಲ್ಲಿ ವಿಶೇಷ ಜವಾಬ್ದಾರಿಗಳಿಗಾಗಿ ಅನರ್ಹನನ್ನಾಗಿ ಮಾಡುವುದು. ಏಕೆ? ಪೌಲನು ವಿವರಿಸುವುದು: “ಯಾವನೇ ಪುರುಷನಿಗೆ ತನ್ನ ಸ್ವಂತ ಮನೆವಾರ್ತೆಯ ಮೇಲೆ ಅಧ್ಯಕ್ಷತೆ ವಹಿಸಲು ನಿಶ್ಚಯವಾಗಿ ತಿಳಿಯದಿರುವಲ್ಲಿ, ಅವನು ದೇವರ ಸಭೆಯನ್ನು ಹೇಗೆ ಪರಾಮರಿಸಿಯಾನು?” (1 ತಿಮೊಥೆಯ 3:5, NW) ಅವನ ಸ್ವಂತ ಕುಟುಂಬದವರು ಅವನ ಮೇಲ್ವಿಚಾರಣೆಗೆ ಅಧೀನರಾಗಲು ಅನಿಚ್ಛಿತರಾಗಿದ್ದಲ್ಲಿ, ಇತರರು ಹೇಗೆ ಪ್ರತಿಕ್ರಿಯೆ ತೋರಿಸುವರು?
“ವಿಶ್ವಾಸಿಗಳಾದ ಮಕ್ಕಳಿರುವವನು”
5, 6. (ಎ) ಮಕ್ಕಳ ವಿಷಯದ ಯಾವ ಆವಶ್ಯಕತೆಯನ್ನು ಪೌಲನು ತೀತನಿಗೆ ಹೇಳಿದನು? (ಬಿ) ಮಕ್ಕಳಿರುವ ಹಿರಿಯರಿಂದ ಏನು ಅಪೇಕ್ಷಿಸಲ್ಪಡುತ್ತದೆ?
5 ಕ್ರೇತ ಸಭೆಯಲ್ಲಿ ಮೇಲ್ವಿಚಾರಕರನ್ನು ನೇಮಿಸಲು ತೀತನಿಗೆ ವಿಧಿಸಿದಾಗ, ಪೌಲನು ನಮೂದಿಸಿದ್ದು: “ಆಪಾದನೆರಹಿತನೂ ಏಕಪತ್ನಿಯುಳ್ಳ ಪತಿಯೂ ವಿಷಯಲಂಪಟತನದ ಆಪಾದನೆಯಿಲ್ಲದ ಅಥವಾ ಸ್ವಚ್ಛಂದರಾಗಿರದ, ವಿಶ್ವಾಸಿಗಳಾದ ಮಕ್ಕಳಿರುವವನೂ ಆದ ಯಾವ ಪುರುಷನಾದರೂ ಇರುವುದಾದರೆ . . . ಏಕೆಂದರೆ ದೇವರ ಮನೆವಾರ್ತೆಗಾರನಾಗಿ ಮೇಲ್ವಿಚಾರಕನು ನಿಂದಾರಹಿತನಾಗಿರತಕ್ಕದ್ದು.” “ವಿಶ್ವಾಸಿಗಳಾದ ಮಕ್ಕಳಿರುವವನು” ಎಂಬ ಆವಶ್ಯಕತೆಯು ಅರ್ಥೈಸುವುದಾದರೂ ಏನು?—ತೀತ 1:6, 7, NW.
6 “ವಿಶ್ವಾಸಿಗಳಾದ ಮಕ್ಕಳು” ಎಂಬ ಪದಗಳು ತಮ್ಮ ಜೀವಿತಗಳನ್ನು ಈಗಾಗಲೇ ಯೆಹೋವನಿಗೆ ಸಮರ್ಪಿಸಿಕೊಂಡು, ದೀಕ್ಷಾಸ್ನಾನಿತರಾಗಿರುವ ಎಳೆಯರಿಗೆ ಅಥವಾ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕಡೆಗೆ ಪ್ರಗತಿಹೊಂದುತ್ತಿರುವ ಚಿಕ್ಕವರಿಗೆ ಸೂಚಿಸುತ್ತವೆ. ಹಿರಿಯರ ಮಕ್ಕಳು ಸಾಮಾನ್ಯವಾಗಿ ಸುನಡತೆಯವರೂ ವಿಧೇಯರೂ ಆಗಿರಬೇಕೆಂದು ಸಭೆಯ ಸದಸ್ಯರು ನಿರೀಕ್ಷಿಸುತ್ತಾರೆ. ಒಬ್ಬ ಹಿರಿಯನು ತನ್ನ ಮಕ್ಕಳಲ್ಲಿ ನಂಬಿಕೆಯನ್ನು ಬೆಳೆಸಲು ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡುತ್ತಿದ್ದಾನೆಂಬುದು ವ್ಯಕ್ತವಾಗಬೇಕು. ರಾಜ ಸೊಲೊಮೋನನು ಬರೆದುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ಆದರೆ ಅಂತಹ ತರಬೇತನ್ನು ಪಡೆದಿರುವ ಯುವಕನು ಯೆಹೋವನನ್ನು ಸೇವಿಸಲು ನಿರಾಕರಿಸುವಲ್ಲಿ ಅಥವಾ ಮಹತ್ತರವಾದ ಒಂದು ತಪ್ಪನ್ನೂ ಮಾಡುವಲ್ಲಿ ಆಗೇನು?
7. (ಎ) ಜ್ಞಾನೋಕ್ತಿ 22:6 ಕಟ್ಟುನಿಟ್ಟಾದ ನಿಯಮವೊಂದನ್ನು ಹೇಳುತ್ತಿಲ್ಲವೆಂದು ಏಕೆ ವ್ಯಕ್ತವಾಗುತ್ತದೆ? (ಬಿ) ಹಿರಿಯನ ಮಗನು ಯೆಹೋವನನ್ನು ಸೇವಿಸಲು ಆಯ್ದುಕೊಳ್ಳದಿದ್ದರೆ, ಆ ಹಿರಿಯನು ಸ್ವಯಂಚಾಲಕವಾಗಿ ತನ್ನ ಸುಯೋಗಗಳನ್ನು ಕಳೆದುಕೊಳ್ಳುವುದಿಲ್ಲವೇಕೆ?
7 ಈ ಮೇಲೆ ಉಲ್ಲೇಖಿಸಿರುವ ಜ್ಞಾನೋಕ್ತಿಯು ಕಟ್ಟುನಿಟ್ಟಾದ ಒಂದು ನಿಯಮನ್ನು ಹೇಳುತ್ತಿಲ್ಲವೆಂಬುದು ವ್ಯಕ್ತ. ಸ್ವಇಚ್ಛೆಯ ಮೂಲಸೂತ್ರವನ್ನು ಅದು ರದ್ದುಗೊಳಿಸುವುದಿಲ್ಲ. (ಧರ್ಮೋಪದೇಶಕಾಂಡ 30:15, 16, 19) ಒಬ್ಬ ಮಗನೊ ಒಬ್ಬ ಮಗಳೊ ಜವಾಬ್ದಾರಿಯ ವಯಸ್ಸನ್ನು ತಲಪುವಾಗ, ಸಮರ್ಪಣೆ ಮತ್ತು ದೀಕ್ಷಾಸ್ನಾನದ ವಿಷಯದಲ್ಲಿ ಅವನೊ ಅವಳೊ ಒಂದು ವೈಯಕ್ತಿಕ ನಿರ್ಣಯವನ್ನು ಮಾಡಬೇಕು. ಒಬ್ಬ ಹಿರಿಯನು ಬೇಕಾಗಿದ್ದ ಆತ್ಮಿಕ ಸಹಾಯ, ಮಾರ್ಗದರ್ಶನ ಮತ್ತು ಶಿಸ್ತನ್ನು ಸ್ಪಷ್ಟವಾಗಿ ಕೊಟ್ಟಿರುವುದಾದರೂ, ಆ ಯುವಕನು ಯೆಹೋವನನ್ನು ಸೇವಿಸಲು ಆಯ್ದುಕೊಳ್ಳದಿದ್ದರೆ, ತಂದೆಯು ಮೇಲ್ವಿಚಾರಕನಾಗಿ ಸೇವೆಮಾಡುವುದರಿಂದ ಸ್ವಯಂಚಾಲಕವಾಗಿ ಅನರ್ಹನಾಗುವುದಿಲ್ಲ. ಮತ್ತೊಂದು ಕಡೆಯಲ್ಲಿ, ಮನೆಯಲ್ಲಿ ವಾಸಿಸುವ ಚಿಕ್ಕ ವಯಸ್ಸಿನ ಅನೇಕ ಮಂದಿ ಮಕ್ಕಳು ಒಬ್ಬ ಹಿರಿಯನಿಗೆ ಇರುವುದಾದರೆ ಮತ್ತು ಅವರಲ್ಲಿ ಒಬ್ಬರ ಹಿಂದೆ ಇನ್ನೊಬ್ಬರು ಆತ್ಮಿಕವಾಗಿ ಅಸ್ವಸ್ಥರಾಗಿ ತೊಂದರೆಯೊಳಗೆ ಸಿಕ್ಕಿಬೀಳುವುದಾದರೆ, ಅವನು “ತನ್ನ ಸ್ವಂತ ಮನೆವಾರ್ತೆಯ ಮೇಲೆ ಉತ್ತಮ ರೀತಿಯಲ್ಲಿ ಅಧ್ಯಕ್ಷತೆ” ವಹಿಸುವ “ಪುರುಷ”ನೆಂದು ಇನ್ನುಮುಂದೆ ಪರಿಗಣಿಸಲ್ಪಡದಿರಬಹುದು. (1 ತಿಮೊಥೆಯ 3:4, NW) ಮುಖ್ಯ ವಿಷಯವೇನಂದರೆ, ಒಬ್ಬ ಮೇಲ್ವಿಚಾರಕನು, ‘ವಿಷಯಲಂಪಟತನದ ಆಪಾದನೆಯಿಲ್ಲದ ಅಥವಾ ಸ್ವಚ್ಛಂದರಾಗಿರದ ವಿಶ್ವಾಸಿಗಳಾದ ಮಕ್ಕಳಿರಲು’ ತನಗೆ ಸಾಧ್ಯವಿರುವಷ್ಟನ್ನು ಮಾಡುತ್ತಿದ್ದಾನೆ ಎಂದು ತೋರಿಬರಬೇಕು.a
“ಅವಿಶ್ವಾಸಿಯಾಗಿರುವ ಪತ್ನಿ”ಯಿರುವವನು
8. ಅವಿಶ್ವಾಸಿಯಾಗಿರುವ ತನ್ನ ಪತ್ನಿಯ ಕಡೆಗೆ ಒಬ್ಬ ಹಿರಿಯನು ಹೇಗೆ ವರ್ತಿಸಬೇಕು?
8 ಅವಿಶ್ವಾಸಿಗಳಿಗೆ ವಿವಾಹಿತರಾಗಿರುವ ಕ್ರೈಸ್ತ ಪುರುಷರ ಕುರಿತು ಪೌಲನು ಬರೆದುದು: “ಯಾವ ಸಹೋದರನಿಗಾದರೂ ಅವಿಶ್ವಾಸಿಯಾಗಿರುವ ಪತ್ನಿಯಿರುವುದಾದರೆ, ಆದರೂ ಆಕೆಯು ಅವನೊಂದಿಗೆ ವಾಸಿಸುತ್ತಿರಲು ಸಮ್ಮತಿಸುವುದಾದರೆ, ಅವನು ಆಕೆಯನ್ನು ಬಿಟ್ಟುಬಿಡದಿರಲಿ. . . . ಏಕೆಂದರೆ . . . ಅವಿಶ್ವಾಸಿಯಾಗಿರುವ ಪತ್ನಿಯು ಆ ಸಹೋದರನ ಸಂಬಂಧದಲ್ಲಿ ಪವಿತ್ರೀಕರಿಸಲ್ಪಡುತ್ತಾಳೆ, ಇಲ್ಲವಾದರೆ, ನಿಮ್ಮ ಮಕ್ಕಳು ನಿಜವಾಗಿಯೂ ಅಶುದ್ಧರಾಗಿರುವರು, ಆದರೆ ಈಗ ಅವರು ಪರಿಶುದ್ಧರಾಗಿರುತ್ತಾರೆ. ಏಕೆಂದರೆ, . . . ಪತಿಯೇ, ನೀನು ನಿನ್ನ ಪತ್ನಿಯನ್ನು ರಕ್ಷಿಸುವಿ ಎಂದು ನಿನಗೆ ಹೇಗೆ ಗೊತ್ತು?” (1 ಕೊರಿಂಥ 7:12-14, 16, NW) ಇಲ್ಲಿ, “ಅವಿಶ್ವಾಸಿಯಾಗಿರುವ” ಎಂಬ ಪದವು ಯಾವ ಧಾರ್ಮಿಕ ನಂಬಿಕೆಗಳೂ ಇಲ್ಲದ ಪತ್ನಿಯನ್ನು ಸೂಚಿಸದೆ, ಯೆಹೋವನಿಗೆ ಸಮರ್ಪಣೆಮಾಡಿಕೊಂಡಿರದ ಒಬ್ಬ ಸ್ತ್ರೀಯನ್ನು ಸೂಚಿಸುತ್ತದೆ. ಆಕೆ ಯೆಹೂದ್ಯೆಯಾಗಿದ್ದಿರಸಾಧ್ಯವಿದೆ, ಅಥವಾ ವಿಧರ್ಮಿ ದೇವತೆಗಳ ವಿಶ್ವಾಸಿಯಾಗಿದ್ದಿರಸಾಧ್ಯವಿದೆ. ಇಂದು ಒಬ್ಬ ಹಿರಿಯನು ಭಿನ್ನ ಧರ್ಮವನ್ನು ಆಚರಿಸುವ, ಆಜ್ಞೇಯತಾ ವಾದಿಯಾಗಿರುವ, ಅಥವಾ ಒಬ್ಬಾಕೆ ನಾಸ್ತಿಕಳೂ ಆಗಿರುವ ಸ್ತ್ರೀಯನ್ನು ವಿವಾಹ ಮಾಡಿಕೊಂಡಿದ್ದಿರಬಹುದು. ಆಕೆ ಅವನೊಂದಿಗೆ ವಾಸಿಸಲು ಇಚ್ಛಿತಳಾಗಿರುವುದಾದರೆ, ಭಿನ್ನವಾದ ನಂಬಿಕೆಗಳ ಕಾರಣಮಾತ್ರವಾಗಿ ಅವನು ಆಕೆಯನ್ನು ಬಿಟ್ಟುಬಿಡಬಾರದು. ಅವನು ಇನ್ನೂ ‘ಅವಳೊಂದಿಗೆ ಜ್ಞಾನಾನುಸಾರವಾಗಿ ವಾಸಿಸುತ್ತ, ಸ್ತ್ರೀಸಹಜವಾದ ಅಬಲೆಗೆ ಎಂಬಂತೆ ಅವಳಿಗೆ ಗೌರವವನ್ನು ಕೊಡುತ್ತ’ ಅವಳನ್ನು ರಕ್ಷಿಸುವ ನಿರೀಕ್ಷೆಗಳಲ್ಲಿ ಜೀವಿಸುತ್ತಿರಬೇಕು.—1 ಪೇತ್ರ 3:7, NW; ಕೊಲೊಸ್ಸೆ 3:19.
9. ನಿಯಮವು ಪತಿಪತ್ನಿಯರಿಬ್ಬರಿಗೂ ತಮ್ಮ ಮಕ್ಕಳನ್ನು ತಮ್ಮತಮ್ಮ ಧಾರ್ಮಿಕ ನಂಬಿಕೆಗಳಿಗೆ ಒಡ್ಡುವ ಹಕ್ಕನ್ನು ಕೊಡುವ ದೇಶಗಳಲ್ಲಿ, ಒಬ್ಬ ಹಿರಿಯನು ಹೇಗೆ ವರ್ತಿಸಬೇಕು, ಮತ್ತು ಇದು ಅವನ ಸುಯೋಗಗಳನ್ನು ಹೇಗೆ ಬಾಧಿಸುವುದು?
9 ಒಬ್ಬ ಮೇಲ್ವಿಚಾರಕನಿಗೆ ಮಕ್ಕಳಿದ್ದರೆ, ಅವರನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸುವುದರಲ್ಲಿ ಅವನು ಯೋಗ್ಯವಾದ ಪತಿ ಮತ್ತು ಪಿತಪ್ರಾಯವಾದ ತಲೆತನವನ್ನು ನಿರ್ವಹಿಸುವನು. (ಎಫೆಸ 6:4) ಅನೇಕ ದೇಶಗಳಲ್ಲಿ, ವಿವಾಹ ಸಹಭಾಗಿಗಳಿಬ್ಬರೂ ತಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ಒದಗಿಸುವ ಹಕ್ಕನ್ನು ನಿಯಮವು ಅವರಿಗೆ ಕೊಡುತ್ತದೆ. ಈ ಪರಿಸ್ಥಿತಿಯಲ್ಲಿ, ಪತ್ನಿಯು ಮಕ್ಕಳನ್ನು ತನ್ನ ಧಾರ್ಮಿಕ ನಂಬಿಕೆಗಳಿಗೆ ಮತ್ತು ಆಚಾರಗಳಿಗೆ ಒಡ್ಡುವ ತನ್ನ ಹಕ್ಕನ್ನು—ತನ್ನ ಚರ್ಚಿಗೆ ಅವರನ್ನು ಒಯ್ಯುವುದು ಅದರಲ್ಲಿ ಸೇರಿರಬಹುದು—ನಿರ್ವಹಿಸಲು ಹಕ್ಕೊತ್ತಾಯ ಮಾಡಬಹುದು.b ಸುಳ್ಳು ಧಾರ್ಮಿಕ ಸಂಸ್ಕಾರಗಳಲ್ಲಿ ಭಾಗವಹಿಸದಿರುವ ಸಂಬಂಧದಲ್ಲಿ ಮಕ್ಕಳು ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗಳನ್ನು ಅನುಸರಿಸಬೇಕು ನಿಶ್ಚಯ. ಕುಟುಂಬ ತಲೆಯೋಪಾದಿ ತಂದೆಯು, ತನ್ನ ಮಕ್ಕಳೊಂದಿಗೆ ಅಭ್ಯಾಸಮಾಡಲು ತನಗಿರುವ ಸ್ವಂತ ಹಕ್ಕನ್ನು ನಿರ್ವಹಿಸಿ, ಸಾಧ್ಯವಿರುವಾಗ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಅವರನ್ನು ಕರೆದುಕೊಂಡು ಹೋಗುವನು. ಅವರು ತಮ್ಮ ಸ್ವಂತ ನಿರ್ಧಾರಗಳನ್ನು ಮಾಡಬಹುದಾದ ವಯಸ್ಸನ್ನು ಅವರು ತಲಪಿದಾಗ, ತಾವು ಯಾವ ಮಾರ್ಗದಲ್ಲಿ ಹೋಗುವೆವೆಂಬುದನ್ನು ಅವರು ತಾವಾಗಿಯೇ ನಿರ್ಧರಿಸುವರು. (ಯೆಹೋಶುವ 24:15) ಅವನ ಜೊತೆ ಹಿರಿಯರು ಮತ್ತು ಸಭಾಸದಸ್ಯರು, ಅವನು ಯೋಗ್ಯವಾಗಿ ಸತ್ಯಮಾರ್ಗದಲ್ಲಿ ತನ್ನ ಮಕ್ಕಳಿಗೆ ಶಿಕ್ಷಣಕೊಡಲು ನಿಯಮವು ಅನುಮತಿಸುವುದೆಲ್ಲವನ್ನೂ ಮಾಡುತ್ತಿದ್ದಾನೆಂದು ನೋಡಲು ಸಾಧ್ಯವಾಗುವಲ್ಲಿ, ಅವನು ಮೇಲ್ವಿಚಾರಕನಾಗಲು ಅನರ್ಹನಾಗುವುದಿಲ್ಲ.
‘ತನ್ನ ಮನೆವಾರ್ತೆಯ ಮೇಲೆ ಉತ್ತಮ ರೀತಿಯಲ್ಲಿ ಅಧ್ಯಕ್ಷತೆ ವಹಿಸುವುದು’
10. ಕುಟುಂಬಸ್ಥನೊಬ್ಬನು ಹಿರಿಯನಾಗಿರುವುದಾದರೆ, ಅವನ ಪ್ರಾಥಮಿಕ ಕರ್ತವ್ಯವು ಏನಾಗಿರುತ್ತದೆ?
10 ತಂದೆಯಾಗಿರುವ ಮತ್ತು ಅವನ ಪತ್ನಿ ಜೊತೆಕ್ರೈಸ್ತಳಾಗಿರುವ ಒಬ್ಬ ಹಿರಿಯನಿಗೆ ಸಹ, ತನ್ನ ಸಮಯ ಮತ್ತು ಗಮನವನ್ನು, ತನ್ನ ಪತ್ನಿ, ಮಕ್ಕಳು ಮತ್ತು ಸಭಾ ಜವಾಬ್ದಾರಿಗಳ ಮಧ್ಯೆ ಸೂಕ್ತವಾಗಿ ಹಂಚುವುದು ಸುಲಭವಾಗಿರುವುದಿಲ್ಲ. ಒಬ್ಬ ಕ್ರೈಸ್ತ ತಂದೆಗೆ, ತನ್ನ ಪತ್ನಿ ಮತ್ತು ಮಕ್ಕಳ ಪರಾಮರಿಕೆಮಾಡುವ ಒಂದು ಹಂಗು ಇದೆ ಎಂಬ ವಿಷಯದಲ್ಲಿ ಶಾಸ್ತ್ರಗಳು ತೀರ ಸ್ಪಷ್ಟವಾಗಿವೆ. ಪೌಲನು ಬರೆದುದು: “ನಿಶ್ಚಯವಾಗಿಯೂ ಯಾವನಾದರೂ ತನ್ನ ಸ್ವಂತದವರಾಗಿರುವವರಿಗೆ ಮತ್ತು ವಿಶೇಷವಾಗಿ, ತನ್ನ ಮನೆವಾರ್ತೆಯ ಸದಸ್ಯರಾಗಿರುವವರಿಗೆ ಒದಗಿಸದಿದ್ದರೆ, ಅವನು ನಂಬಿಕೆಯನ್ನು ತ್ಯಜಿಸಿದವನೂ ನಂಬಿಕೆಯಿಲ್ಲದ ವ್ಯಕ್ತಿಗಿಂತ ಹೀನನೂ ಆಗಿದ್ದಾನೆ.” (1 ತಿಮೊಥೆಯ 5:8, NW) ಅದೇ ಪತ್ರಿಕೆಯಲ್ಲಿ ಪೌಲನು, ಆಗಲೇ ಒಳ್ಳೆಯ ಪತಿಯರು ಮತ್ತು ತಂದೆಗಳಾಗಿದ್ದೇವೆಂದು ತೋರಿಸಿಕೊಟ್ಟ ವಿವಾಹಿತರು ಮಾತ್ರ ಮೇಲ್ವಿಚಾರಕರಾಗಿ ಸೇವೆಮಾಡಲು ಶಿಫಾರಸ್ಸು ಮಾಡಲ್ಪಡಬೇಕೆಂದು ಹೇಳಿದನು.—1 ತಿಮೊಥೆಯ 3:1-5.
11. (ಎ) ಒಬ್ಬ ಹಿರಿಯನು “ತನ್ನ ಸ್ವಂತದವರಾಗಿರುವವರಿಗೆ” ಯಾವ ವಿಧಗಳಲ್ಲಿ “ಒದಗಿಸ”ಬೇಕು? (ಬಿ) ಒಬ್ಬ ಹಿರಿಯನು ತನ್ನ ಸಭಾ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಇದು ಹೇಗೆ ಸಹಾಯಮಾಡಬಲ್ಲದು?
11 ಒಬ್ಬ ಹಿರಿಯನು ತನ್ನ ಸ್ವಂತದವರಿಗೆ ಪ್ರಾಪಂಚಿಕವಾಗಿ ಮಾತ್ರವಲ್ಲ, ಆತ್ಮಿಕವಾಗಿಯೂ ಭಾವಾತ್ಮಕವಾಗಿಯೂ “ಒದಗಿಸ”ಬೇಕು. ವಿವೇಕಿ ರಾಜ ಸೊಲೊಮೋನನು ಬರೆದುದು: “ನಿನ್ನ ಕೆಲಸದ ಸಾಮಾನುಗಳನ್ನು ಸುತ್ತಲು ಅಣಿಮಾಡು, ನಿವೇಶನದಲ್ಲಿ ಸಿದ್ಧಪಡಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು.” (ಜ್ಞಾನೋಕ್ತಿ 24:27) ಹೀಗೆ, ತನ್ನ ಪತ್ನಿ ಮತ್ತು ಮಕ್ಕಳ ಪ್ರಾಪಂಚಿಕ, ಭಾವಾತ್ಮಕ ಮತ್ತು ವಿನೋದಾತ್ಮಕ ಆವಶ್ಯಕತೆಗಳನ್ನು ಒದಗಿಸುವಾಗ, ಒಬ್ಬ ಮೇಲ್ವಿಚಾರಕನು ಅವರನ್ನು ಆತ್ಮಿಕವಾಗಿಯೂ ಭಕ್ತಿವೃದ್ಧಿಮಾಡಬೇಕು. ಇದಕ್ಕೆ ಸಮಯ—ಸಭಾ ವಿಷಯಗಳಿಗೆ ಮೀಸಲಾಗಿಡಲು ಅವನಿಗೆ ಸಾಧ್ಯವಾಗದ ಸಮಯವು ಹಿಡಿಯುತ್ತದೆ. ಆದರೆ ಕುಟುಂಬ ಸಂತೋಷ ಮತ್ತು ಆತ್ಮಿಕತೆಯ ಸಂಬಂಧದಲ್ಲಿ ಹೇರಳವಾದ ಲಾಭಾಂಶವನ್ನು ತೆರುವ ಸಮಯವದು. ಕಟ್ಟಕಡೆಗೆ, ಅವನ ಕುಟುಂಬವು ಆತ್ಮಿಕವಾಗಿ ಬಲಾಢ್ಯವಾಗಿರುವುದಾದರೆ, ಕುಟುಂಬ ಸಮಸ್ಯೆಗಳನ್ನು ಬಗೆಹರಿಸಲು ಹಿರಿಯನು ಕಡಮೆ ಸಮಯವನ್ನು ಕಳೆಯಬೇಕಾಗಿರಬಹುದು. ಇದು ಸಭಾ ವಿಷಯಗಳ ಜಾಗ್ರತೆ ವಹಿಸಲು ಅವನ ಮನಸ್ಸನ್ನು ಹೆಚ್ಚು ಸ್ವತಂತ್ರವಾಗಿಡುವುದು. ಒಳ್ಳೆಯ ಪತಿ ಮತ್ತು ಒಳ್ಳೆಯ ತಂದೆಯಾಗಿ ಅವನ ಮಾದರಿಯು ಸಭೆಗೆ ಆತ್ಮಿಕ ಪ್ರಯೋಜನದ್ದಾಗಿರುವುದು.—1 ಪೇತ್ರ 5:1-3.
12. ಯಾವ ಕೌಟುಂಬಿಕ ವಿಷಯದಲ್ಲಿ ಹಿರಿಯರಾಗಿರುವ ತಂದೆಗಳು ಉತ್ತಮ ಮಾದರಿಯನ್ನಿಡಬೇಕು?
12 ಒಂದು ಮನೆವಾರ್ತೆಯ ಮೇಲೆ ಉತ್ತಮ ರೀತಿಯ ಅಧ್ಯಕ್ಷತೆ ವಹಿಸುವುದರಲ್ಲಿ ಒಂದು ಕುಟುಂಬ ಅಧ್ಯಯನದ ಅಧ್ಯಕ್ಷತೆ ವಹಿಸಲು ವೇಳಾಪಟ್ಟಿಯನ್ನು ಮಾಡುವುದು ಒಳಗೂಡುತ್ತದೆ. ಹಿರಿಯರು ಈ ಸಂಬಂಧದಲ್ಲಿ ಒಳ್ಳೆಯ ಮಾದರಿಯನ್ನಿಡುವುದು ವಿಶೇಷವಾಗಿ ಪ್ರಾಮುಖ್ಯ, ಏಕೆಂದರೆ ಬಲವಾದ ಕುಟುಂಬಗಳು ಬಲವುಳ್ಳ ಸಭೆಗಳನ್ನು ಉಂಟುಮಾಡುತ್ತವೆ. ಮೇಲ್ವಿಚಾರಕನೊಬ್ಬನ ಸಮಯವು, ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಅಭ್ಯಾಸ ಮಾಡಲು ಸಮಯವಿಲ್ಲದಷ್ಟರ ಮಟ್ಟಿಗೆ ಕ್ರಮವಾಗಿ ಇತರ ಸೇವಾ ಸುಯೋಗಗಳಲ್ಲಿ ಮಗ್ನವಾಗಿರಬಾರದು. ವಿಷಯವು ಹಾಗೆ ಇರುವುದಾದರೆ, ಅವನು ತನ್ನ ವೇಳಾಪಟ್ಟಿಯನ್ನು ಪುನಃ ಪರೀಕ್ಷಿಸಬೇಕು. ಅವನು ಇತರ ವಿಷಯಗಳಿಗೆ ಮೀಸಲಾಗಿಡುವ ಸಮಯವನ್ನು ಪುನಃ ಯೋಜಿಸಬೇಕಾಗಬಹುದು ಅಥವಾ ಕಡಿಮೆ ಮಾಡಬೇಕಾಗಬಹುದು, ಕೆಲವು ಸಂದರ್ಭದಲ್ಲಿ ನಿರ್ದಿಷ್ಟ ಸುಯೋಗಗಳನ್ನು ನಿರಾಕರಿಸಲೂಬೇಕಾಗಬಹುದು.
ಸಮತೆಯ ಮೇಲ್ವಿಚಾರಣೆ
13, 14. ಕುಟುಂಬಸ್ಥರಾಗಿರುವ ಹಿರಿಯರಿಗೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾವ ಸಲಹೆಯನ್ನು ಕೊಟ್ಟಿದ್ದಾನೆ?
13 ಕುಟುಂಬ ಮತ್ತು ಸಭಾ ಜವಾಬ್ದಾರಿಗಳನ್ನು ಸಮತೂಕವಾಗಿರಿಸಲು ಕೊಡಲ್ಪಡುತ್ತಿರುವ ಸಲಹೆಯು ಹೊಸದೇನೂ ಅಲ್ಲ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹಿರಿಯರಿಗೆ ಈ ವಿಷಯದಲ್ಲಿ ವರ್ಷಗಳಿಂದ ಸಲಹೆಯನ್ನು ಕೊಡುತ್ತಿದೆ. (ಮತ್ತಾಯ 24:45) 37 ವರ್ಷಗಳಿಗೂ ಹೆಚ್ಚು ಹಿಂದೆ, ಸೆಪ್ಟೆಂಬರ್ 15, 1959ರ ದ ವಾಚ್ಟವರ್ ಪತ್ರಿಕೆಯು, ಪುಟಗಳು 553 ಮತ್ತು 554ರಲ್ಲಿ ಬುದ್ಧಿಹೇಳಿದ್ದು: “ನಿಜವಾಗಿಯೂ, ನಮ್ಮ ಸಮಯದ ಮೇಲಿರುವ ಈ ಎಲ್ಲ ತಗಾದೆಗಳನ್ನು ಸಮತೂಕದಲ್ಲಿಡುವ ವಿಷಯವು ಇದಾಗಿರುವುದಿಲ್ಲವೊ? ಈ ಸಮತೋಲನದಲ್ಲಿ ನಿಮ್ಮ ಸ್ವಂತ ಕುಟುಂಬದ ಅಭಿರುಚಿಗಳಿಗೆ ಯೋಗ್ಯವಾದ ಒತ್ತು ಕೊಡಲ್ಪಡಲಿ. ಒಬ್ಬ ಪುರುಷನು ತನ್ನ ಸಮಯವನ್ನೆಲ್ಲ ಸಭಾ ಚಟುವಟಿಕೆಯಲ್ಲಿ, ತನ್ನ ಸಹೋದರರು ಮತ್ತು ನೆರೆಯವರು ರಕ್ಷಣೆ ಪಡೆಯುವಂತೆ ಸಹಾಯಮಾಡುತ್ತ ಕಳೆಯಬೇಕು, ಆದರೂ ತನ್ನ ಸ್ವಂತ ಮನೆವಾರ್ತೆಯ ರಕ್ಷಣೆಯ ಕುರಿತು ನೋಡಿಕೊಳ್ಳಬಾರದೆಂದು ಯೆಹೋವ ದೇವರು ನಿಶ್ಚಯವಾಗಿಯೂ ನಿರೀಕ್ಷಿಸನು. ಒಬ್ಬ ಪುರುಷನ ಪತ್ನಿ ಮತ್ತು ಮಕ್ಕಳು ಒಂದು ಪ್ರಧಾನ ಜವಾಬ್ದಾರಿಯಾಗಿದ್ದಾರೆ.”
14 ನವೆಂಬರ್ 1, 1986ರ ದ ವಾಚ್ಟವರ್, ಪುಟ 22ರಲ್ಲಿ ಸಲಹೆ ನೀಡಿದ್ದು: “ಕುಟುಂಬವಾಗಿ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದು ನಿಮ್ಮನ್ನು ಹತ್ತಿರಕ್ಕೆ ಸೆಳೆಯುವುದಾದರೂ ನಿಮ್ಮ ಮಕ್ಕಳ ಅಪೂರ್ವ ಆವಶ್ಯಕತೆಗಳು ನಿಮ್ಮ ಖಾಸಗಿ ಸಮಯ ಮತ್ತು ಭಾವನಾತ್ಮಕ ಶಕ್ತಿಯ ಬದ್ಧತೆಯನ್ನು ಕೇಳಿಕೊಳ್ಳುತ್ತವೆ. ಆದಕಾರಣ, ನೀವು ‘ನಿಮ್ಮ ಸ್ವಂತದವರನ್ನು’ ಸಹ ಆತ್ಮಿಕವಾಗಿ, ಭಾವಾತ್ಮಕವಾಗಿ ಮತ್ತು ಪ್ರಾಪಂಚಿಕವಾಗಿ ಪರಾಮರಿಸುವಾಗ, . . . ಸಭಾ ಕರ್ತವ್ಯಗಳಲ್ಲಿ ಎಷ್ಟು ಸಮಯವನ್ನು ಬಳಸಬಲ್ಲಿರೆಂದು ನಿರ್ಧರಿಸಲು ಸಮತೆಯು ಅವಶ್ಯ. [ಕ್ರೈಸ್ತನೊಬ್ಬನು] ‘ಮೊದಲು [ತನ್ನ] ಮನೆವಾರ್ತೆಯಲ್ಲಿ ದೇವಭಕ್ತಿಯನ್ನು ಆಚರಿಸಲು ಕಲಿಯ’ಬೇಕು. (1 ತಿಮೊಥೆಯ 5:4, 8)”
15. ಒಬ್ಬ ಪತ್ನಿ ಮತ್ತು ಮಕ್ಕಳಿರುವ ಒಬ್ಬ ಹಿರಿಯನಿಗೆ ವಿವೇಕ ಮತ್ತು ವಿವೇಚನಾ ಶಕ್ತಿಯು ಏಕೆ ಅಗತ್ಯ?
15 ಒಂದು ಶಾಸ್ತ್ರೀಯ ನಾಣ್ಣುಡಿ ಹೇಳುವುದು: “ಮನೆಯನ್ನು ಕಟ್ಟುವದಕ್ಕೆ ಜ್ಞಾನ [“ವಿವೇಕ,” NW]ವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕ [“ವಿವೇಚನಾ ಶಕ್ತಿ,” NW]ವೇ ಆಧಾರ.” (ಜ್ಞಾನೋಕ್ತಿ 24:3) ಹೌದು, ಒಬ್ಬ ಮೇಲ್ವಿಚಾರಕನು ತನ್ನ ದೇವಪ್ರಭುತ್ವ ಕರ್ತವ್ಯಗಳನ್ನು ನೆರವೇರಿಸಿ, ಅದೇ ಸಮಯದಲ್ಲಿ ತನ್ನ ಮನೆವಾರ್ತೆಯ ಆತ್ಮೋನ್ನತಿ ಮಾಡಬೇಕಾದರೆ, ಅವನಿಗೆ ವಿವೇಕ ಮತ್ತು ವಿವೇಚನಾ ಶಕ್ತಿಯ ಅಗತ್ಯವಿರುವುದು ಅತಿ ನಿಶ್ಚಯ. ಶಾಸ್ತ್ರೀಯವಾಗಿ, ಅವನಿಗೆ ಮೇಲ್ವಿಚಾರಣೆ ಮಾಡಲು ಒಂದಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಿವೆ. ಅವನ ಕುಟುಂಬ ಮತ್ತು ಸಭಾ ಜವಾಬ್ದಾರಿಗಳು ಅದರಲ್ಲಿ ಒಳಗೂಡಿರುತ್ತವೆ. ಈ ಕ್ಷೇತ್ರಗಳ ಮಧ್ಯೆ ಸಮತೂಕದಿಂದಿರಲು ಅವನಿಗೆ ವಿವೇಚನಾ ಶಕ್ತಿಯು ಅಗತ್ಯ. (ಫಿಲಿಪ್ಪಿ 1:9, 10) ಅವನ ಆದ್ಯತೆಗಳನ್ನು ಗೊತ್ತುಮಾಡಲು ಅವನಿಗೆ ವಿವೇಕವು ಅಗತ್ಯ. (ಜ್ಞಾನೋಕ್ತಿ 2:10, 11) ತನ್ನ ಸಭಾ ಸುಯೋಗಗಳನ್ನು ನೋಡಿಕೊಳ್ಳುವ ಜವಾಬ್ದಾರಿ ತನಗಿದೆ ಎಂದು ಅವನು ಎಷ್ಟೇ ಹೆಚ್ಚು ಭಾವಿಸುವುದಾದರೂ, ಪತಿಯೂ ತಂದೆಯೂ ಆದ ಅವನ ಪ್ರಧಾನ ದೇವದತ್ತ ಜವಾಬ್ದಾರಿಯು ತನ್ನ ಕುಟುಂಬದ ಪರಾಮರಿಕೆ ಮತ್ತು ರಕ್ಷಣೆಯಾಗಿದೆಯೆಂದು ಅವನು ಗ್ರಹಿಸಿಕೊಳ್ಳಬೇಕು.
ಒಳ್ಳೆಯ ತಂದೆಗಳು ಹಾಗೂ ಒಳ್ಳೆಯ ಹಿರಿಯರು
16. ಹಿರಿಯನು ಒಬ್ಬ ತಂದೆಯೂ ಆಗಿರುವಲ್ಲಿ, ಅವನಿಗೆ ಯಾವ ಪ್ರಯೋಜನವಿದೆ?
16 ಸುನಡತೆಯುಳ್ಳ ಮಕ್ಕಳಿರುವ ಒಬ್ಬ ಹಿರಿಯನು, ಒಂದು ನಿಜವಾದ ಆಸ್ತಿಯಾಗಿರಸಾಧ್ಯವಿದೆ. ಅವನು ತನ್ನ ಕುಟುಂಬವನ್ನು ಚೆನ್ನಾಗಿ ಪರಾಮರಿಸಲು ಕಲಿತಿರುವುದಾದರೆ, ಅವನು ಸಭೆಯ ಇತರ ಕುಟುಂಬಗಳಿಗೆ ಸಹಾಯಕೊಡುವ ಒಂದು ಸ್ಥಾನದಲ್ಲಿರುವನು. ಅವನು ಅವರ ಸಮಸ್ಯೆಗಳನ್ನು ಹೆಚ್ಚು ಒಳ್ಳೆಯದಾಗಿ ಅರ್ಥಮಾಡಿಕೊಂಡು, ತನ್ನ ಸ್ವಂತ ಅನುಭವವನ್ನು ಪ್ರತಿಬಿಂಬಿಸುವ ಸಲಹೆಯನ್ನು ಕೊಡಬಲ್ಲನು. ಸಂತೋಷಕರವಾಗಿ, ಲೋಕಾದ್ಯಂತವಾಗಿ ಸಾವಿರಾರು ಮಂದಿ ಹಿರಿಯರು, ಪತಿಗಳು, ತಂದೆಗಳು ಮತ್ತು ಮೇಲ್ವಿಚಾರಕರಾಗಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ.
17. (ಎ) ತಂದೆ ಮತ್ತು ಹಿರಿಯ ಇವೆರಡೂ ಆಗಿರುವ ಪುರುಷನು ಏನನ್ನು ಎಂದಿಗೂ ಮರೆಯಬಾರದು? (ಬಿ) ಸಭೆಯ ಇತರ ಸದಸ್ಯರು ಹೇಗೆ ಸಹಾನುಭೂತಿಯನ್ನು ತೋರಿಸಬೇಕು?
17 ಕುಟುಂಬಸ್ಥನೊಬ್ಬನು ಹಿರಿಯನಾಗಬೇಕಾದರೆ, ಅವನು ತನ್ನ ಪತ್ನಿ ಮತ್ತು ಮಕ್ಕಳನ್ನು ಪರಾಮರಿಸುತ್ತಿರುವಾಗ, ಸಭೆಯಲ್ಲಿರುವ ಇತರರಿಗೆ ಸಮಯವನ್ನು ಮತ್ತು ಗಮನವನ್ನು ಮೀಸಲಾಗಿಡಲು ಶಕ್ತನಾಗುವಂತೆ ತನ್ನ ವಿಚಾರಗಳನ್ನು ಸಂಘಟಿಸಲು ಸಾಧ್ಯವಿರುವ ಪಕ್ವತೆಯ ಕ್ರೈಸ್ತನಾಗಿರಬೇಕು. ತನ್ನ ಕುರಿಪಾಲನೆಯ ಕೆಲಸವು ಮನೆಯಿಂದ ಆರಂಭಗೊಳ್ಳುತ್ತದೆಂಬುದನ್ನು ಅವನು ಎಂದಿಗೂ ಮರೆಯಬಾರದು. ಒಬ್ಬ ಪತ್ನಿ ಮತ್ತು ಮಕ್ಕಳಿರುವ ಹಿರಿಯರಿಗೆ ಅವರ ಕುಟುಂಬದ ಮತ್ತು ಸಭಾ ಕರ್ತವ್ಯಗಳ—ಎರಡೂ—ಜವಾಬ್ದಾರಿಯಿದೆಯೆಂದು ತಿಳಿದವರಾಗಿ, ಸಭಾಸದಸ್ಯರು ಅವರ ಸಮಯವನ್ನು ಅನುಚಿತವಾಗಿ ಕೇಳಿಕೊಳ್ಳದಿರಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಮರುದಿನ ಬೆಳಗ್ಗೆ ಶಾಲೆಗೆ ಹೋಗಲೇಬೇಕಾಗಿರುವ ಮಕ್ಕಳಿರುವ ಹಿರಿಯನೊಬ್ಬನು, ಸಂಧ್ಯಾಕೂಟಗಳ ಬಳಿಕ ಸದಾ ಸ್ವಲ್ಪ ಹೊತ್ತು ಹಿಂದೆ ಉಳಿಯಲು ಶಕ್ತನಾಗಿರಲಿಕ್ಕಿಲ್ಲ. ಸಭೆಯ ಇತರ ಸದಸ್ಯರು ಇದನ್ನು ಅರ್ಥಮಾಡಿಕೊಂಡು ಸಹಾನುಭೂತಿಯನ್ನು ತೋರಿಸಬೇಕು.—ಫಿಲಿಪ್ಪಿ 4:5.
ನಮ್ಮ ಹಿರಿಯರು ನಮಗೆ ಪ್ರಿಯರಾಗಿರಬೇಕು
18, 19. (ಎ) 1 ಕೊರಿಂಥ 7ನೆಯ ಅಧ್ಯಾಯದ ನಮ್ಮ ಪರೀಕ್ಷೆಯು ನಾವು ಏನನ್ನು ಗ್ರಹಿಸುವಂತೆ ಸಾಧ್ಯಮಾಡಿದೆ? (ಬಿ) ಇಂತಹ ಕ್ರೈಸ್ತ ಪುರುಷರನ್ನು ನಾವು ಹೇಗೆ ಪರಿಗಣಿಸಬೇಕು?
18 ಕೊರಿಂಥದವರಿಗೆ ಪೌಲನು ಬರೆದ ಒಂದನೆಯ ಪತ್ರಿಕೆಯ 7ನೆಯ ಅಧ್ಯಾಯದ ನಮ್ಮ ಪರೀಕ್ಷೆಯು, ಪೌಲನ ಬುದ್ಧಿವಾದವನ್ನನುಸರಿಸಿ, ತಮ್ಮ ಸ್ವಾತಂತ್ರ್ಯವನ್ನು ರಾಜ್ಯಾಭಿರುಚಿಗಳನ್ನು ಕಾರ್ಯಗತಮಾಡಲು ಉಪಯೋಗಿಸುತ್ತಿರುವ ಅನೇಕ ಅವಿವಾಹಿತ ಪುರುಷರು ಇದ್ದಾರೆಂದು ನೋಡಲು ಶಕ್ತರನ್ನಾಗಿ ಮಾಡಿದೆ. ಮಕ್ಕಳಿಲ್ಲದ ಸಾವಿರಾರು ಮಂದಿ ವಿವಾಹಿತ ಸಹೋದರರು, ತಮ್ಮ ಪತ್ನಿಯರಿಗೆ ಉಚಿತವಾದ ಗಮನವನ್ನು ಕೊಡುತ್ತಿರುವಾಗ, ತಮ್ಮ ಪತ್ನಿಯರ ಪ್ರಶಂಸಾರ್ಹವಾದ ಸಹಕಾರದಿಂದ, ಡಿಸ್ಟ್ರಿಕ್ಟ್ಗಳು, ಸರ್ಕಿಟ್ಗಳು, ಸಭೆಗಳು ಮತ್ತು ವಾಚ್ ಟವರ್ ಬ್ರಾಂಚ್ಗಳಲ್ಲಿ ಉತ್ತಮ ಮೇಲ್ವಿಚಾರಕರಾಗಿ ಸೇವೆಮಾಡುತ್ತಾರೆ. ಕೊನೆಯದಾಗಿ, ಯೆಹೋವನ ಜನರ ಸುಮಾರು 80,000 ಸಭೆಗಳಲ್ಲಿ, ತಮ್ಮ ಪತ್ನಿಯರು ಮತ್ತು ಮಕ್ಕಳನ್ನು ಪ್ರೀತಿಯಿಂದ ಪರಾಮರಿಸುವುದು ಮಾತ್ರವಲ್ಲ, ಲಕ್ಷ್ಯಕೊಡುವ ಕುರಿಪಾಲಕರಾಗಿ, ತಮ್ಮ ಸಹೋದರರ ಸೇವೆಮಾಡಲೂ ಸಮಯವನ್ನು ತೆಗೆದುಕೊಳ್ಳುವ ಅನೇಕ ತಂದೆಗಳಿದ್ದಾರೆ.—ಅ. ಕೃತ್ಯಗಳು 20:28.
19 ಅಪೊಸ್ತಲ ಪೌಲನು ಬರೆದುದು: “ಉತ್ತಮ ರೀತಿಯಲ್ಲಿ ಅಧ್ಯಕ್ಷತೆ ವಹಿಸುವ ಹಿರೀ ಪುರುಷರು, ವಿಶೇಷವಾಗಿ, ಮಾತಾಡುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಯಾಸಪಟ್ಟು ಕೆಲಸಮಾಡುವವರು, ಇಮ್ಮಡಿಯಾದ ಗೌರವಕ್ಕೆ ಪಾತ್ರರೆಂದು ಎಣಿಸಲ್ಪಡಲಿ.” (1 ತಿಮೊಥೆಯ 5:17, NW) ಹೌದು, ತಮ್ಮ ಮನೆಗಳಲ್ಲಿ ಮತ್ತು ಸಭೆಯಲ್ಲಿ ಉತ್ತಮ ರೀತಿಯಲ್ಲಿ ಅಧ್ಯಕ್ಷತೆ ವಹಿಸುವ ಹಿರಿಯರು ನಮ್ಮ ಪ್ರೀತಿ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ನಾವು ನಿಶ್ಚಯವಾಗಿಯೂ, “ಆ ಪ್ರಕಾರದ ಪುರುಷರನ್ನು ಪ್ರಿಯರೆಂದು ಭಾವಿಸುತ್ತಿರಬೇಕು.”—ಫಿಲಿಪ್ಪಿ 2:29, NW.
[ಅಧ್ಯಯನ ಪ್ರಶ್ನೆಗಳು]
ಪುನರ್ವಿಮರ್ಶೆಯ ರೀತಿಯಲ್ಲಿ
◻ ಸಾ.ಶ. ಒಂದನೆಯ ಶತಮಾನದಲ್ಲಿ ಅನೇಕ ಹಿರಿಯರು ಕುಟುಂಬಸ್ಥರಾಗಿದ್ದರೆಂದು ನಮಗೆ ಹೇಗೆ ಗೊತ್ತು?
◻ ಮಕ್ಕಳಿರುವ ವಿವಾಹಿತ ಹಿರಿಯರಿಂದ ಏನು ಅಪೇಕ್ಷಿಸಲ್ಪಡುತ್ತದೆ, ಮತ್ತು ಏಕೆ?
◻ “ವಿಶ್ವಾಸಿಗಳಾದ ಮಕ್ಕಳು” ಇರುವುದು ಅಂದರೆ ಏನರ್ಥ, ಆದರೆ ಒಬ್ಬ ಹಿರಿಯನ ಮಗನು ಯೆಹೋವನನ್ನು ಸೇವಿಸಲು ಆಯ್ದುಕೊಳ್ಳದಿದ್ದರೆ ಆಗೇನು?
◻ “ತನ್ನ ಸ್ವಂತದವರಾಗಿರುವವರಿಗೆ” ಒಬ್ಬ ಹಿರಿಯನು ಯಾವ ವಿಧಗಳಲ್ಲಿ “ಒದಗಿಸ”ಬೇಕು?
[ಪುಟ 23 ರಲ್ಲಿರುವ ಚಿತ್ರ]
ಪ್ರಬಲವಾದ ಕುಟುಂಬಗಳು ಪ್ರಬಲವಾದ ಸಭೆಗಳನ್ನು ರಚಿಸುತ್ತವೆ