ಅವಿವಾಹಿತರಿಗೂ ವಿವಾಹಿತರಿಗೂ ಬುದ್ಧಿಮಾತು
“ನಾನು ಇದನ್ನು . . . ಯೋಗ್ಯವಾದುದನ್ನು ಮಾಡುವಂತೆ ಮತ್ತು ಯಾವುದೇ ಅಪಕರ್ಷಣೆಯಿಲ್ಲದೆ ಸತತವಾಗಿ ಕರ್ತನ ಸೇವೆಮಾಡುವಂತೆ ನಿಮ್ಮನ್ನು ಪ್ರೇರೇಪಿಸುವ ಸಲುವಾಗಿ ಹೇಳುತ್ತಿದ್ದೇನೆ.”—1 ಕೊರಿಂ. 7:35.
1, 2. ಅವಿವಾಹಿತರಿಗೆ ಮತ್ತು ವಿವಾಹಿತರಿಗೆ ಬೈಬಲ್ ಕೊಡುವ ಸಲಹೆಗೆ ನಾವು ಗಮನಕೊಡಬೇಕು ಏಕೆ?
ವಿರುದ್ಧ ಲಿಂಗದವರೊಂದಿಗಿನ ನಮ್ಮ ಒಡನಾಟದಲ್ಲಿ ಸಂತೋಷದೊಂದಿಗೆ ಹತಾಶೆ, ಆತಂಕ, ಕಳವಳವನ್ನೂ ನಾವು ಅನುಭವಿಸುತ್ತೇವೆ. ಹಾಗಾಗಿ ದೇವರ ಮಾರ್ಗದರ್ಶನ ಕೋರಲು ನಮಗೆ ಅನೇಕ ಕಾರಣಗಳಿವೆ. ಉದಾಹರಣೆಗೆ, ಅವಿವಾಹಿತರಾಗಿ ಉಳಿಯಲು ಇಷ್ಟಪಡುವ ಕ್ರೈಸ್ತರನ್ನು ತೆಗೆದುಕೊಳ್ಳಿ. ಮದುವೆಯಾಗುವಂತೆ ಸ್ನೇಹಿತರಿಂದಲೂ ಕುಟುಂಬದವರಿಂದಲೂ ಅವರಿಗೆ ಒತ್ತಡ ಬರಬಹುದು. ಅಥವಾ ಮದುವೆಯ ಆಸೆ ಇದ್ದರೂ ಸರಿಯಾದ ಸಂಗಾತಿ ಸಿಕ್ಕಿರದೇ ಇರಬಹುದು. ಮದುವೆ ಕುರಿತು ಯೋಚಿಸುತ್ತಿರುವವರಿಗೆ ಉತ್ತಮ ಗಂಡನಾಗಲು ಅಥವಾ ಹೆಂಡತಿಯಾಗಲು ಸಲಹೆ ಬೇಕಿರಬಹುದು. ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ ನಮ್ಮೆಲ್ಲರಿಗೂ ಲೈಂಗಿಕ ನೈತಿಕತೆಯ ವಿಷಯದಲ್ಲಿ ಈ ಲೋಕ ಸವಾಲೊಡ್ಡುತ್ತದೆ. ಹಾಗಾಗಿ ದೇವರ ಮಾರ್ಗದರ್ಶನ ಎಲ್ಲರಿಗೂ ಬೇಕು.
2 ಸಂತೋಷದಿಂದ ಇರಬೇಕೆಂಬ ಕಾರಣಕ್ಕಾಗಿ ಮಾತ್ರವೇ ನಾವು ದೇವರ ಮಾರ್ಗದರ್ಶನ ಪಡೆದುಕೊಳ್ಳುವುದಿಲ್ಲ. ಯೆಹೋವ ದೇವರೊಂದಿಗಿರುವ ಸುಸಂಬಂಧವನ್ನು ಕಾಪಾಡಿಕೊಳ್ಳಲಿಕ್ಕಾಗಿ ಪಡೆದುಕೊಳ್ಳುತ್ತೇವೆ. ಹಾಗಾಗಿ ಕೊರಿಂಥದವರಿಗೆ ಪೌಲನು ಬರೆದ ಮೊದಲ ಪತ್ರದ 7ನೇ ಅಧ್ಯಾಯವನ್ನು ಪರಿಗಣಿಸುವುದು ಉತ್ತಮ. ಅಲ್ಲಿ ಅವನು ಅವಿವಾಹಿತರಿಗೆ ಹಾಗೂ ವಿವಾಹಿತರಿಗೆ ಅತ್ಯುತ್ತಮ ಸಲಹೆ ಕೊಟ್ಟಿದ್ದಾನೆ. “ಯೋಗ್ಯವಾದುದನ್ನು ಮಾಡುವಂತೆ ಮತ್ತು ಯಾವುದೇ ಅಪಕರ್ಷಣೆಯಿಲ್ಲದೆ ಸತತವಾಗಿ ಕರ್ತನ ಸೇವೆಮಾಡುವಂತೆ” ಕ್ರೈಸ್ತರನ್ನು ಪ್ರೇರೇಪಿಸುವುದೇ ಅವನ ಉದ್ದೇಶವಾಗಿತ್ತು. (1 ಕೊರಿಂ. 7:35) ನೀವು ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ ಪೌಲನ ಬುದ್ಧಿಮಾತನ್ನು ಅನ್ವಯಿಸಿ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವುದು ಹೇಗೆಂದು ಪರೀಕ್ಷಿಸಿಕೊಳ್ಳಿ.
ಅವರವರೇ ಮಾಡಬೇಕಾದ ಗಂಭೀರ ನಿರ್ಣಯ
3, 4. (ಎ) ಮದುವೆಯಾಗುವಂತೆ ಬಂಧುಮಿತ್ರರು ಒತ್ತಾಯ ಮಾಡುವುದಾದರೆ ಏನಾಗಬಹುದು? (ಬಿ) ಮದುವೆಯ ಬಗ್ಗೆ ಸರಿಯಾದ ದೃಷ್ಟಿಕೋನ ಹೊಂದಿರಲು ಪೌಲನ ಬುದ್ಧಿಮಾತು ಹೇಗೆ ಸಹಾಯಮಾಡುತ್ತದೆ?
3 ಒಂದನೇ ಶತಮಾನದ ಯೆಹೂದಿಗಳು ಮದುವೆಗೆ ಒತ್ತುನೀಡುತ್ತಿದ್ದರು. ಅದೇ ರೀತಿ ಇಂದು ಸಹ ಮದುವೆ ಆದ್ರೆನೇ ಜೀವನದಲ್ಲಿ ಸಂತೋಷ ಎಂದು ಅನೇಕರು ನೆನಸುತ್ತಾರೆ. ಮದುವೆ ಪ್ರಾಯ ದಾಟಿದರಂತೂ ಬಂಧುಮಿತ್ರರು ಚಿಂತೆ ವ್ಯಕ್ತಪಡಿಸುತ್ತಾ ಮದುವೆಯಾಗುವಂತೆ ರಾಶಿ ರಾಶಿ ಸಲಹೆಗಳನ್ನು ಕೊಡುತ್ತಾರೆ. ಒಳ್ಳೇ ಜೋಡಿ ಹುಡುಕಿ ಬೇಗನೆ ಮದುವೆಯಾಗುವಂತೆ ಮತ್ತೆ ಮತ್ತೆ ಹೇಳುತ್ತಿರುತ್ತಾರೆ. ಅಥವಾ ಒಂದು ಹುಡುಗ/ಹುಡುಗಿಯನ್ನು ತೋರಿಸಿ ‘ನಿನಗೆ ಸರಿಯಾದ ಜೋಡಿ ಆಗ್ಬಹುದು, ಸ್ವಲ್ಪ ಯೋಚಿಸು’ ಎಂದೂ ಹೇಳಬಹುದು. ಅವರು ಕೆಲವೊಮ್ಮೆ ಒಂದು ಹೆಜ್ಜೆ ಮುಂದೆ ಹೋಗಿ ಹುಡುಗ ಹುಡುಗಿಗೆ ಏನನ್ನೂ ಹೇಳದೆ ಪರಸ್ಪರ ಭೇಟಿಯಾಗುವ ಸಂದರ್ಭವನ್ನು ಸೃಷ್ಟಿಸುವ ತಂತ್ರ ಹೂಡಬಹುದು. ಆದರೆ ಇವೆಲ್ಲ ಕೆಲವೊಮ್ಮೆ ಪೇಚಾಟಕ್ಕೆ ನಡೆಸುತ್ತದೆ. ಗೆಳೆತನವನ್ನು ಮುರಿಯುತ್ತದೆ ಮತ್ತು ಮನಸ್ಸಿಗೆ ಘಾಸಿ ಉಂಟುಮಾಡುತ್ತದೆ.
4 ಪೌಲನು ಯಾರಿಗೂ ಮದುವೆಯಾಗಿ ಅಥವಾ ಮದುವೆಯಾಗಬೇಡಿ ಎಂದು ಒತ್ತಾಯ ಮಾಡಲಿಲ್ಲ. (1 ಕೊರಿಂ. 7:7) ಅವನು ಒಂಟಿಯಾಗಿದ್ದುಕೊಂಡೇ ಯೆಹೋವನ ಸೇವೆಯಲ್ಲಿ ಸಂತೃಪ್ತನಾಗಿದ್ದನು. ಹಾಗಿದ್ದರೂ ಮದುವೆಯಾಗಲು ಬಯಸುವವರಿಗೆ ಛೀಮಾರಿ ಹಾಕಲಿಲ್ಲ. ಇಂದು ಕ್ರೈಸ್ತನೊಬ್ಬನು ಮದುವೆಯಾಗಬೇಕಾ ಬಾರದಾ ಎಂಬ ನಿರ್ಣಯವನ್ನು ಸ್ವತಃ ಮಾಡಬೇಕು. ಬೇರೆಯವರು ಒತ್ತಾಯ ಹೇರಬಾರದು.
ಅವಿವಾಹಿತರು ಯಶಸ್ಸು ಹೊಂದಲು . . .
5, 6. ಅವಿವಾಹಿತರಾಗಿ ಉಳಿಯುವಂತೆ ಕ್ರೈಸ್ತರನ್ನು ಪೌಲ ಪ್ರೋತ್ಸಾಹಿಸಿದ್ದೇಕೆ?
5 ಅವಿವಾಹಿತ ಕ್ರೈಸ್ತರು ದೇವರ ಸೇವೆಯಲ್ಲಿ ಹೆಚ್ಚನ್ನು ಮಾಡಬಲ್ಲರು ಎಂದು ಕೊರಿಂಥದವರಿಗೆ ಪೌಲ ಬರೆದ ಪತ್ರದಿಂದ ತಿಳಿಯುತ್ತದೆ. (1 ಕೊರಿಂಥ 7:8 ಓದಿ.) ಅವಿವಾಹಿತನಾಗಿದ್ದರೂ ಅವನು ಬ್ರಹ್ಮಚರ್ಯವನ್ನು ಪಾಲಿಸುವ ಕ್ರೈಸ್ತಪ್ರಪಂಚದ ಪಾದ್ರಿಗಳಂತೆ ತನ್ನನ್ನು ಇತರ ಜನರಿಗಿಂತ ಶ್ರೇಷ್ಠನೆಂದು ಹೆಚ್ಚಿಸಿಕೊಳ್ಳಲಿಲ್ಲ. ಬದಲಿಗೆ ಅವಿವಾಹಿತ ಕ್ರೈಸ್ತರಿಗೆ ಅನೇಕ ಸದವಕಾಶಗಳು ಸಿಗುತ್ತವೆಂದು ಅವನು ಹೇಳಿದನು. ಆ ಸದವಕಾಶಗಳು ಯಾವುವು?
6 ಅವಿವಾಹಿತ ಕ್ರೈಸ್ತರು ವಿವಾಹಿತ ಕ್ರೈಸ್ತರಿಗಿಂತ ಹೆಚ್ಚಿನ ಸೇವಾಸುಯೋಗಗಳಲ್ಲಿ ಆನಂದಿಸಬಲ್ಲರು. ಪೌಲನನ್ನೇ ತೆಗೆದುಕೊಳ್ಳಿ. “ಅನ್ಯಜನಾಂಗಗಳವರಿಗೆ ಅಪೊಸ್ತಲನಾಗಿ” ಸೇವೆ ಮಾಡುವ ವಿಶೇಷ ಸದವಕಾಶ ಅವನಿಗೆ ಸಿಕ್ಕಿತು. (ರೋಮ. 11:13) ಅಪೊಸ್ತಲರ ಕಾರ್ಯಗಳು 13ರಿಂದ 20ರ ವರೆಗಿನ ಅಧ್ಯಾಯಗಳನ್ನು ಓದಿನೋಡಿ. ಪೌಲ ಹಾಗೂ ಜೊತೆ ಮಿಷನೆರಿಗಳು ಎಲ್ಲೆಲ್ಲ ಸುವಾರ್ತೆ ಸಾರಿದರು, ಎಷ್ಟೆಲ್ಲ ಸಭೆಗಳನ್ನು ಸ್ಥಾಪಿಸಿದರು ಎಂದು ಗಮನಿಸಿ. ಪೌಲ ದೇವರ ಸೇವೆಯಲ್ಲಿ ಬಹಳ ಕಷ್ಟ ತೊಂದರೆಗಳನ್ನು ಅನುಭವಿಸಿದನು. ನಮ್ಮಲ್ಲಿ ಹೆಚ್ಚಿನವರು ಅಂಥದ್ದನ್ನು ಅನುಭವಿಸಿರಲಿಕ್ಕಿಲ್ಲ. (2 ಕೊರಿಂ. 11:23-27, 32, 33) ಅವನು ಕಷ್ಟಗಳನ್ನು ಅನುಭವಿಸಿದ್ದರೂ ಅದು ಸಾರ್ಥಕವಾಗಿತ್ತು. ಏಕೆಂದರೆ ಅನೇಕರನ್ನು ಯೇಸುವಿನ ಶಿಷ್ಯರನ್ನಾಗಿ ಮಾಡುವುದರಲ್ಲಿ ಅಪರಿಮಿತ ಆನಂದ ಪಡೆದುಕೊಂಡನು. (1 ಥೆಸ. 1:2-7, 9; 2:19) ಪೌಲ ಮದುವೆಯಾಗಿದ್ದರೆ, ಮಕ್ಕಳಿದ್ದಿದ್ದರೆ ಇಷ್ಟೆಲ್ಲಾ ಮಾಡಲು ಆಗುತ್ತಿತ್ತಾ? ಬಹುಶಃ ಇಲ್ಲವೇನೋ.
7. ಇಬ್ಬರು ಅವಿವಾಹಿತ ಸಹೋದರಿಯರು ತಮ್ಮ ಸನ್ನಿವೇಶವನ್ನು ಸುವಾರ್ತೆ ಸಾರಲು ಹೇಗೆ ಉಪಯೋಗಿಸಿಕೊಂಡರು ಎಂದು ವಿವರಿಸಿ.
7 ಅನೇಕ ಅವಿವಾಹಿತ ಕ್ರೈಸ್ತರು ತಮ್ಮ ಸನ್ನಿವೇಶವನ್ನು ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಉಪಯೋಗಿಸುತ್ತಿದ್ದಾರೆ. ಉದಾಹರಣೆಗೆ, ಸಾರಾ ಮತ್ತು ಲಿಂಬಾನ್ಯ ಎಂಬ ಇಬ್ಬರು ಅವಿವಾಹಿತ ಪಯನೀಯರ್ ಸಹೋದರಿಯರನ್ನು ತಕ್ಕೊಳ್ಳಿ. ಬೊಲಿವಿಯದವರಾದ ಇವರು, ಅನೇಕ ವರ್ಷಗಳಿಂದ ಸುವಾರ್ತೆ ಸಾರಿರದ ಒಂದು ಹಳ್ಳಿಗೆ ವಾಸ ಬದಲಾಯಿಸಿದರು. ಆ ಹಳ್ಳಿಯಲ್ಲಿ ವಿದ್ಯುತ್ ಇರಲಿಲ್ಲ. ಇದು ಒಳ್ಳೇದೇ ಆಯಿತು. ಆ ಸಹೋದರಿಯರು ಹೇಳುವುದನ್ನು ಕೇಳಿ: “ಜನರ ಹತ್ತಿರ ಟೀವಿ, ರೇಡಿಯೋ ಇಲ್ಲದ ಕಾರಣ ಪುಸ್ತಕ ಓದಿಯೇ ಸಮಯ ಕಳೆಯುತ್ತಿದ್ದರು.” ಪಯನೀಯರ್ ಸಹೋದರಿಯರಿಗೆ ಹಳ್ಳಿಯ ಕೆಲವರು ನಮ್ಮ ಹಳೆಯ ಪ್ರಕಾಶನಗಳನ್ನು ತೋರಿಸಿದರು. ಈಗ ಮುದ್ರಣದಲ್ಲಿಲ್ಲದ ಆ ಹಳೆಯ ಪ್ರಕಾಶನಗಳನ್ನು ಅವರು ಇನ್ನೂ ಓದುತ್ತಿದ್ದರು. ಪ್ರತಿ ಮನೆಯಲ್ಲಿ ಆಸಕ್ತಿ ತೋರಿಸಿದ್ದರಿಂದ ಎಲ್ಲರನ್ನು ಪುನರ್ಭೇಟಿ ಮಾಡಲು ಸಹೋದರಿಯರಿಗೆ ಕಷ್ಟವಾಯಿತು. ಒಬ್ಬ ವೃದ್ಧೆಯಂತೂ, “ಯೆಹೋವನ ಸಾಕ್ಷಿಗಳು ಇಷ್ಟು ದೂರ ಬಂದಿದ್ದಾರೆ ಎಂದ ಮೇಲೆ ಅಂತ್ಯ ಬಹಳ ಹತ್ತಿರವಿದೆ ಅಂತಾಯ್ತು” ಎಂದು ಹೇಳಿದರು. ಹಳ್ಳಿಯ ಜನರು ಕೂಟಗಳಿಗೂ ಹಾಜರಾಗತೊಡಗಿದರು.
8, 9. (ಎ) ಅವಿವಾಹಿತರಾಗಿದ್ದು ದೇವರ ಸೇವೆ ಮಾಡುವುದು ಒಳ್ಳೇದೆಂದು ಪೌಲ ಹೇಳಿದ್ದೇಕೆ? (ಬಿ) ಅವಿವಾಹಿತ ಕ್ರೈಸ್ತರಿಗೆ ಯಾವ ಅವಕಾಶಗಳಿವೆ?
8 ವಿವಾಹಿತ ಕ್ರೈಸ್ತರಿಗೆ ಶುಶ್ರೂಷೆಯಲ್ಲಿ ಒಳ್ಳೇ ಪ್ರತಿಫಲ ಸಿಗುವುದಿಲ್ಲ ಎಂದೇನಿಲ್ಲ. ಅವರೂ ಕಷ್ಟಕರ ಟೆರಿಟೊರಿಗಳಲ್ಲಿ ಸಾರಿ ಒಳ್ಳೇ ಫಲಿತಾಂಶ ಪಡೆದಿದ್ದಾರೆ. ಆದರೆ ಅವಿವಾಹಿತ ಪಯನೀಯರರು ಸ್ವೀಕರಿಸಬಲ್ಲ ಕೆಲವು ನೇಮಕಗಳಿಗೆ ವಿವಾಹಿತರು ಅಥವಾ ಮಕ್ಕಳಿರುವವರು ತಮ್ಮನ್ನೇ ನೀಡಿಕೊಳ್ಳಲು ಕಷ್ಟವಾಗಬಹುದು. ಪೌಲ ಯಾರಿಗೆ ಪತ್ರ ಬರೆದನೋ ಆ ಸಭೆಗಳು ದೇವರ ಸೇವೆಯಲ್ಲಿ ಬಹಳಷ್ಟು ಸಾಧಿಸಬಲ್ಲವು ಎಂದು ಅವನಿಗೆ ಗೊತ್ತಿತ್ತು. ಸುವಾರ್ತೆ ಸಾರುವುದರಲ್ಲಿ ತಾನು ಪಡೆದ ಸಂತೋಷವನ್ನು ಇತರರೂ ಪಡೆಯಬೇಕೆಂದು ಅವನು ಬಯಸಿದನು. ಆದ್ದರಿಂದಲೇ ಅವಿವಾಹಿತರಾಗಿದ್ದು ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವಂತೆ ಪ್ರೋತ್ಸಾಹಿಸಿದನು.
9 ಅಮೆರಿಕದಲ್ಲಿರುವ ಅವಿವಾಹಿತ ಪಯನೀಯರ್ ಸಹೋದರಿ ಹೀಗೆ ಬರೆದರು: “ಮದುವೆ ಆಗದಿದ್ದರೆ ಬಾಳು ಬರಡು, ಸಂತೋಷ ಅವರಿಗೆಲ್ಲಿ ಎಂಬ ಎಣಿಕೆ ಅನೇಕರಿಗಿದೆ. ಆದರೆ ಹಾಗಲ್ಲ, ಸಂತೋಷ ಸಿಗುವುದು ಯೆಹೋವನೊಂದಿಗೆ ನಮಗಿರುವ ಸ್ನೇಹದಿಂದ ಎನ್ನುವುದು ನನ್ನ ಅನುಭವ. ಅವಿವಾಹಿತರಾಗಿ ಉಳಿಯುವುದು ತ್ಯಾಗ ಹೌದು. ಆದರೆ ಚೆನ್ನಾಗಿ ಉಪಯೋಗಿಸಿಕೊಂಡರೆ ಅದೊಂದು ಕೊಡುಗೆಯೇ ಸರಿ.” ಅವಿವಾಹಿತ ಸ್ಥಿತಿ ಸಂತೋಷಕ್ಕೆ ತಡೆಯಲ್ಲ, ಜೀವನದಲ್ಲಿ ಹರ್ಷಾನಂದ ಪಡೆದುಕೊಳ್ಳಲು ಅವಕಾಶದ ಬಾಗಿಲಾಗಿದೆ ಎನ್ನುವುದು ಆಕೆಯ ಅಭಿಪ್ರಾಯ. “ಅವಿವಾಹಿತರಾಗಿರಲಿ ವಿವಾಹಿತರಾಗಿರಲಿ ಯೆಹೋವನು ಪ್ರತಿಯೊಬ್ಬರಿಗೆ ಕೋಮಲ ಪ್ರೀತಿ ತೋರಿಸುತ್ತಾನೆ” ಎಂದು ಆಕೆ ಹೇಳುತ್ತಾಳೆ. ಈ ಸಹೋದರಿ ಈಗ ಪ್ರಚಾರಕರ ಅಗತ್ಯ ಹೆಚ್ಚಿರುವ ಸ್ಥಳದಲ್ಲಿ ಸಂತೋಷದಿಂದ ಸೇವೆ ಮಾಡುತ್ತಿದ್ದಾರೆ. ನೀವು ಅವಿವಾಹಿತರಾ? ಈ ಸಹೋದರಿಯಂತೆ ಜನರಿಗೆ ಸತ್ಯ ಕಲಿಸಲು ಹೆಚ್ಚು ಸಮಯ ವ್ಯಯಿಸುವಿರಾ? ಹಾಗಿದ್ದಲ್ಲಿ ಅವಿವಾಹಿತ ಸ್ಥಿತಿ ಯೆಹೋವ ದೇವರ ಅಮೂಲ್ಯ ಕೊಡುಗೆ ಎಂದು ನೀವು ಕಂಡುಕೊಳ್ಳುವಿರಿ.
ವಿವಾಹವಾಗಲು ಇಚ್ಛಿಸುವಲ್ಲಿ . . .
10, 11. ತಕ್ಕ ಸಂಗಾತಿ ಸಿಗದಿರುವವರಿಗೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ?
10 ಯೆಹೋವನ ನಂಬಿಗಸ್ತ ಸೇವಕರಲ್ಲಿ ಅನೇಕರು ಒಂದಷ್ಟು ಸಮಯ ಅವಿವಾಹಿತರಾಗಿ ಉಳಿದ ನಂತರ ವಿವಾಹವಾಗುವ ಯೋಚನೆ ಮಾಡುತ್ತಾರೆ. ತಕ್ಕ ಸಂಗಾತಿಯನ್ನು ಕಂಡುಕೊಳ್ಳಲು ಅವರು ಸಹಾಯಕ್ಕಾಗಿ ಯೆಹೋವನ ಮಾರ್ಗದರ್ಶನ ಕೋರುತ್ತಾರೆ.—1 ಕೊರಿಂಥ 7:36 ಓದಿ.
11 ನಿಮ್ಮಂತೆಯೇ ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡುವ ಗುರಿಯಿರುವವರನ್ನೇ ಮದುವೆಯಾಗಲು ನೀವು ಬಯಸುವಲ್ಲಿ ಆ ಕುರಿತು ಯೆಹೋವ ದೇವರಲ್ಲಿ ಪ್ರಾರ್ಥಿಸಿ. (ಫಿಲಿ. 4:6, 7) ಅಂಥ ಸಂಗಾತಿ ಸಿಗಲು ತುಂಬ ಸಮಯ ಕಾಯಬೇಕಾದರೂ ಮನಗುಂದಬೇಡಿ. ಯೆಹೋವ ದೇವರಲ್ಲಿ ಭರವಸೆಯಿಡಿ. ಆತನಿಗೆ ನಿಮ್ಮ ಅಗತ್ಯ ತಿಳಿದಿದೆ. ಆತನು ಭಾವನಾತ್ಮಕವಾಗಿ ನಿಮಗೆ ಬೆಂಬಲ ನೀಡಿ ಸಹಾಯಕನಾಗಿರುವನು.—ಇಬ್ರಿ. 13:6.
12. ಮದುವೆ ಪ್ರಸ್ತಾಪ ಬಂದಾಗ ನೀವು ಸರಿಯಾಗಿ ಯೋಚಿಸಿ ನಿರ್ಧಾರ ತಕ್ಕೊಳ್ಳಬೇಕು ಏಕೆ?
12 ಆಧ್ಯಾತ್ಮಿಕವಾಗಿ ಅಷ್ಟಕ್ಕಷ್ಟೇ ಇರುವ ಅಥವಾ ಸಾಕ್ಷಿಯಲ್ಲದ ವ್ಯಕ್ತಿಯಿಂದ ಮದುವೆ ಪ್ರಸ್ತಾಪ ಬರುವಲ್ಲಿ ನೀವೇನು ಮಾಡುವಿರಿ? ನಿರ್ಧಾರ ತೆಗೆದುಕೊಳ್ಳುವ ಮುಂಚೆ ಸರಿಯಾಗಿ ಯೋಚಿಸಿ. ತಪ್ಪು ನಿರ್ಣಯ ಮಾಡಿದರೆ ಜೀವನವಿಡೀ ನೋವು ಅನುಭವಿಸಬೇಕಾಗುತ್ತದೆ. ಅವಿವಾಹಿತರಾಗಿದ್ದಾಗ ನೀವು ಪಟ್ಟ ಒಂಟಿತನದ ಕಷ್ಟಕ್ಕಿಂತ ಬಾಳಿನುದ್ದಕ್ಕೂ ಸಂಕಟಪಡುವುದು ಹೆಚ್ಚು ಘೋರವಾಗಿರುತ್ತದೆ. ಒಮ್ಮೆ ಮದುವೆಯಾದಿರೆಂದರೆ ನಿಮ್ಮ ಸಂಗಾತಿ ಒಳ್ಳೆಯವರೇ ಇರಲಿ ಕೆಟ್ಟವರೇ ಇರಲಿ ಅವರ ಜೊತೆ ಜೀವನ ಸಾಗಿಸಲೇಬೇಕು. (1 ಕೊರಿಂ. 7:27) ‘ಅವಸರದಲ್ಲಿ ಮದುವೆ, ಪುರುಸೊತ್ತಿನಲ್ಲಿ ಚಿಂತೆ’ ಎಂಬ ನಾಣ್ಣುಡಿಯಿದೆ. ಗಡಿಬಿಡಿಯಲ್ಲಿ ನಿರ್ಣಯ ಮಾಡಬೇಡಿ.—1 ಕೊರಿಂಥ 7:39 ಓದಿ.
ವಿವಾಹವಾಗಲು ಸಿದ್ಧತೆ
13-15. ದಾಂಪತ್ಯದಲ್ಲಿ ಬರಬಹುದಾದ ಯಾವ ಸಂಕಟವನ್ನು ಮದುವೆಯ ಮುಂಚೆಯೇ ಮಾತಾಡಿ ಬಗೆಹರಿಸಿಕೊಳ್ಳಬೇಕು?
13 ಅವಿವಾಹಿತರಾಗಿದ್ದು ದೇವರ ಸೇವೆ ಮಾಡುವಂತೆ ಪೌಲ ಪ್ರೋತ್ಸಾಹಿಸಿದನಾದರೂ ವಿವಾಹವಾಗಲು ಬಯಸುವುದು ತಪ್ಪೆಂದು ಅವನು ಹೇಳಲಿಲ್ಲ. ಅವನು ಕ್ರೈಸ್ತ ದಂಪತಿಗಳಿಗೆ ನೀಡಿದ ಸಲಹೆಗಳು ದಾಂಪತ್ಯ ಜೀವನದ ವಾಸ್ತವಾಂಶಗಳನ್ನು ಅರಿತುಕೊಂಡು ಆ ಬಾಂಧವ್ಯವನ್ನು ಕೊನೆ ವರೆಗೆ ಕಾಪಾಡಲು ಸಹಾಯಮಾಡುತ್ತವೆ.
14 ಮದುವೆ ಬಳಿಕ ಜೀವನ ಸುಖದ ಸುಪ್ಪತ್ತಿಗೆ ಎಂದು ನೆನಸುವವರು ತಮ್ಮ ಯೋಚನಾರೀತಿಯನ್ನು ಬದಲಾಯಿಸಿಕೊಳ್ಳಬೇಕು. ಮದುವೆ ಉದ್ದೇಶದಿಂದ ಪ್ರೇಮಿಸುವ ಗಂಡುಹೆಣ್ಣು ತಮ್ಮಂಥ ಜೋಡಿ ಈ ಪ್ರಪಂಚದಲ್ಲೇ ಇಲ್ಲ ಎಂದು ನೆನಸಬಹುದು. ತಮ್ಮ ಬಾಳು ಹೂವಿನ ಹಾದಿಯಾಗಿರುತ್ತದೆ ಎಂದು ಕನಸಿನ ಗೋಪುರ ಕಟ್ಟಬಹುದು. ನಾನಾ ಕಲ್ಪನೆಗಳೊಂದಿಗೆ ಮದುವೆ ಜೀವನಕ್ಕೆ ಕಾಲಿಡುವ ಅವರು ತಮ್ಮ ಸಂತೋಷಕ್ಕೆ ಯಾವುದೂ ಮುಳ್ಳಾಗಿರದು ಎಂದು ನೆನಸುತ್ತಾರೆ. ಆದರೆ ಅದು ಕನಸು ಮಾತ್ರ, ನಿಜ ಜೀವನದ ವಾಸ್ತವಾಂಶವೇ ಬೇರೆ. ಪ್ರೇಮಲೋಕದಲ್ಲಿ ಕಾಣುವ ಕನಸುಗಳು ಮಧುರವಾಗಿರಬಹುದು. ಆದರೆ ದಾಂಪತ್ಯದಲ್ಲಿ ಬರುವ ಸಂಕಟವನ್ನು ನಿಭಾಯಿಸಿಕೊಂಡು ಹೋಗಲು ಆ ಕನಸುಗಳು ನೆರವಾಗಲಾರವು.—1 ಕೊರಿಂಥ 7:28 ಓದಿ.a
15 ಮದುವೆಯಾದ ಹೊಸದರಲ್ಲೇ ಕೆಲವೊಂದು ವಿಷಯಗಳಲ್ಲಿ ತಮ್ಮ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುವುದನ್ನು ಕಂಡು ನವದಂಪತಿಗಳಿಗೆ ಅಚ್ಚರಿಯಾಗಬಹುದು. ಕೆಲವೊಮ್ಮೆ ನಿರಾಶೆಯೂ ಆಗಬಹುದು. ಉದಾಹರಣೆಗೆ, ಯಾವುದಕ್ಕೆ ಹಣ ಖರ್ಚುಮಾಡಬೇಕು, ಬಿಡುವಿನ ಸಮಯದಲ್ಲಿ ಏನು ಮಾಡಬೇಕು, ವಾಸ್ತವ್ಯ ಎಲ್ಲಿರಬೇಕು, ಅತ್ತೆ-ಮಾವಂದಿರನ್ನು ಯಾವಾಗ ಭೇಟಿಯಾಗಬೇಕು, ಮುಂತಾದ ವಿಷಯಗಳಲ್ಲಿ ಇಬ್ಬರೂ ಒಮ್ಮತಕ್ಕೆ ಬರದಿರಬಹುದು. ದೋಷಗಳು ಕಣ್ಣಿಗೆ ರಾಚುವುದು ಮನಸ್ಸನ್ನು ಗೀರುವುದು ಮದುವೆಯಾಗಿ ಒಟ್ಟಿಗೆ ಬಾಳಲಾರಂಭಿಸಿದ ಮೇಲೆಯೇ. ಮದುವೆಯ ಮುಂಚೆ ಕ್ಷುಲ್ಲಕವೆಂದು ಕಣ್ಮುಚ್ಚಿದ್ದ ವಿಷಯಗಳೇ ಮದುವೆಯಾದ ಮೇಲೆ ಸಮಸ್ಯೆಯ ರೂಪದಲ್ಲಿ ಧುತ್ತೆಂದು ನಿಲ್ಲಬಹುದು. ಇಂಥ ವಿಷಯಗಳನ್ನು ಮದುವೆಯ ಮುಂಚೆಯೇ ಮಾತಾಡಿ ಬಗೆಹರಿಸಿಕೊಳ್ಳುವುದು ಉತ್ತಮ.
16. ದಂಪತಿಯು ಸಮಸ್ಯೆಗಳ ಬಗ್ಗೆ ಮಾತಾಡಿ ಒಮ್ಮತಕ್ಕೆ ಬರಬೇಕು ಏಕೆ?
16 ಸುಖೀ ದಂಪತಿಗಳಾಗಬೇಕಾದರೆ ಸಮಸ್ಯೆಗಳ ಬಗ್ಗೆ ಇಬ್ಬರೂ ಮಾತಾಡಿ ಒಮ್ಮತಕ್ಕೆ ಬರಬೇಕು. ಉದಾಹರಣೆಗೆ, ಮಕ್ಕಳಿಗೆ ಹೇಗೆ ತರಬೇತಿ ನೀಡಬೇಕು, ವೃದ್ಧ ಹೆತ್ತವರಿಗೆ ಹೇಗೆ ಆರೈಕೆ ಮಾಡಬೇಕು ಎಂಬುದನ್ನು ಒಟ್ಟಿಗೆ ನಿರ್ಧರಿಸಿರಿ. ಕುಟುಂಬ ಸಮಸ್ಯೆಗಳಿಂದ ತಲೆದೋರುವ ಒತ್ತಡ ಇಬ್ಬರ ಮಧ್ಯೆ ಕಂದಕ ಉಂಟುಮಾಡಬಾರದು. ಬೈಬಲ್ ಸಲಹೆಯನ್ನು ಅನ್ವಯಿಸುತ್ತಾ ಸಮಸ್ಯೆಗಳನ್ನು ಬಗೆಹರಿಸಬೇಕು. ಬಗೆಹರಿಸಲು ಸಾಧ್ಯವಿಲ್ಲದ್ದನ್ನು ಸಹಿಸಿಕೊಂಡು ಹೋಗಬೇಕು. ಹೀಗೆ ಇಬ್ಬರೂ ಸಂತೋಷದಿಂದ ಕೂಡಿ ಬಾಳ್ವೆ ಮಾಡಬೇಕು.—1 ಕೊರಿಂ. 7:10, 11.
17. ದಂಪತಿಗಳು “ಈ ಲೋಕದ ವಿಷಯಗಳ ಕುರಿತು” ಚಿಂತಿಸುವುದೇಕೆ?
17 ವಿವಾಹ ಜೀವನದ ಇನ್ನೊಂದು ವಾಸ್ತವಾಂಶವನ್ನು ಪೌಲ 1 ಕೊರಿಂಥ 7:32-34ರಲ್ಲಿ ಹೇಳಿದ್ದಾನೆ. (ಓದಿ.) ಮದುವೆಯಾದವರಿಗೆ “ಈ ಲೋಕದ ವಿಷಯಗಳ ಕುರಿತು” ಚಿಂತೆ ಇರುತ್ತದೆ. ಊಟ, ಬಟ್ಟೆ, ಮನೆ ಮತ್ತು ಇತರ ಶಾರೀರಿಕ ವಿಷಯಗಳ ಕುರಿತು ಯೋಚಿಸಬೇಕಾಗುತ್ತದೆ. ಸಹೋದರನೊಬ್ಬ ಅವಿವಾಹಿತನಾಗಿರುವಾಗ ತನ್ನ ಬಹುಪಾಲು ಸಮಯ ಮತ್ತು ಶಕ್ತಿಯನ್ನು ದೇವರ ಸೇವೆಯಲ್ಲಿ ವ್ಯಯಿಸಿರಬಹುದು. ಆದರೆ ಮದುವೆ ಬಳಿಕ ‘ಹೆಂಡತಿಯ ಮೆಚ್ಚುಗೆ ಪಡೆಯಲಿಕ್ಕಾಗಿಯೂ’ ಸಮಯ ವ್ಯಯಿಸಬೇಕಾಗುತ್ತದೆ. ಹೆಂಡತಿ ವಿಷಯದಲ್ಲೂ ಇದು ನಿಜ. ಪತಿಪತ್ನಿ ಸುಖೀ ದಂಪತಿಯಾಗಿರಲು ಹೀಗೆ ಮಾಡುವುದು ಅಗತ್ಯವೆಂದು ಯೆಹೋವ ದೇವರು ಅರ್ಥಮಾಡಿಕೊಳ್ಳುತ್ತಾನೆ. ಈ ಮುಂಚೆ ತನ್ನ ಸೇವೆಗಾಗಿ ಅವರು ಕೊಡುತ್ತಿದ್ದ ಸಮಯ ಮತ್ತು ಶಕ್ತಿಯಲ್ಲಿ ಕೊಂಚವನ್ನು ತಮ್ಮ ಸಂಗಾತಿಗಾಗಿ ನೀಡುವುದನ್ನು ಆತನು ಸಮ್ಮತಿಸುತ್ತಾನೆ.
18. ಮನರಂಜನೆಯಲ್ಲಿ ಇತರರೊಂದಿಗೆ ಸಮಯ ಕಳೆಯುವ ವಿಷಯದಲ್ಲಿ ದಂಪತಿ ಯಾವ ಹೊಂದಾಣಿಕೆ ಮಾಡಿಕೊಳ್ಳಬೇಕು?
18 ದಂಪತಿ ಈ ಮುಂಚೆ ಯೆಹೋವನ ಸೇವೆಗಾಗಿ ಕೊಡುತ್ತಿದ್ದ ಸಮಯ ಮತ್ತು ಶಕ್ತಿಯಲ್ಲಿ ಸ್ವಲ್ಪವನ್ನು ತಮಗಾಗಿ ಬಳಸುತ್ತಾರೆ ನಿಜ. ಅಂದ ಮೇಲೆ ಇತರರೊಂದಿಗೆ ಕಳೆಯುವ ಸಮಯದಲ್ಲೂ ಸ್ವಲ್ಪವನ್ನು ಸಂಗಾತಿಗಾಗಿ ಬಳಸಬೇಕಲ್ಲವೆ? ಗಂಡನು ಯಾವಾಗಲೂ ಕ್ರೀಡೆ ಮನರಂಜನೆಯೆಂದು ಸ್ನೇಹಿತರೊಟ್ಟಿಗೆ ಸಮಯ ಕಳೆದರೆ ಹೆಂಡತಿಯ ಪಾಡು? ಅಥವಾ ಹೆಂಡತಿ ಗೆಳತಿಯರೊಂದಿಗೇ ಕಾಲ ಕಳೆದರೆ ಗಂಡನಿಗೆ ಹೇಗನಿಸಬಹುದು? ಒಬ್ಬರು ಹೀಗೆ ಮಾಡುವಾಗ ಇನ್ನೊಬ್ಬರಿಗೆ ಒಂಟಿತನ ಕಾಡಬಹುದು. ಅವರು ಅಸಂತೋಷಿಗಳೂ ಪ್ರೀತಿವಂಚಿತರೂ ಆಗಬಹುದು. ಇಂಥ ಸಮಸ್ಯೆಯನ್ನು ತಡೆಯಲಿಕ್ಕಾಗಿ ದಂಪತಿ ತಮ್ಮ ಬಾಂಧವ್ಯವನ್ನು ಇನ್ನಷ್ಟು ಬೆಸೆಯಲು ಜೊತೆಯಾಗಿ ಶ್ರಮಿಸಬೇಕು.—ಎಫೆ. 5:31.
ನೈತಿಕ ಶುದ್ಧತೆಯನ್ನು ಯೆಹೋವನು ಅಪೇಕ್ಷಿಸುತ್ತಾನೆ
19, 20. (ಎ) ಮದುವೆಯಾಗಿದೆ ಎಂದ ಮಾತ್ರಕ್ಕೆ ಅನೈತಿಕತೆಗೆ ಬಲಿಯಾಗುವ ಅಪಾಯ ಇಲ್ಲವೆಂದಲ್ಲ ಏಕೆ? (ಬಿ) ವಿವಾಹ ಸಂಗಾತಿಗಳು ತುಂಬ ಸಮಯ ಒಬ್ಬರಿಂದೊಬ್ಬರು ದೂರವಿರುವಲ್ಲಿ ಯಾವ ಅಪಾಯವಿದೆ?
19 ಯೆಹೋವ ದೇವರ ಸೇವಕರು ನೈತಿಕವಾಗಿ ಶುದ್ಧರಾಗಿರುವ ದೃಢಸಂಕಲ್ಪ ತೊಟ್ಟಿರುತ್ತಾರೆ. ಹಾಗಾಗಿ ಕೆಲವರು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಾರದೆಂದು ಮದುವೆಯಾಗುವ ನಿರ್ಧಾರ ಮಾಡುತ್ತಾರೆ. ಆದರೆ ಮದುವೆ ಎನ್ನುವುದು ಲೈಂಗಿಕ ಅಶುದ್ಧತೆಗೆ ತುತ್ತಾಗದಂತೆ ನಮ್ಮನ್ನು ಕಾಪಾಡುವ ತಡೆಗೋಡೆಯಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಉದಾಹರಣೆಯೊಂದನ್ನು ಪರಿಗಣಿಸಿ. ಬೈಬಲ್ ಕಾಲದಲ್ಲಿ ಒಂದು ಪಟ್ಟಣದ ಭದ್ರತೆಗಾಗಿ ಬಲವಾದ ಕೋಟೆ ಕಟ್ಟುತ್ತಿದ್ದರು. ಜನರು ಸುರಕ್ಷಿತರಾಗಿರಬೇಕಾದರೆ ಅವರು ಆ ಕೋಟೆಯ ಒಳಗಿರಬೇಕಿತ್ತು. ಕಳ್ಳಕಾಕರು ತಿರುಗಾಡುವ ಸಮಯದಲ್ಲಿ ಯಾರಾದರೂ ಅಪ್ಪಿತಪ್ಪಿ ಕೋಟೆಯಿಂದ ಆಚೆ ಬಂದರೆ ಅವರು ಸುಲಿಗೆಯಾಗಿ ಜೀವ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಹಾಗೆಯೇ ಲೈಂಗಿಕ ವಿಷಯ ವಿವಾಹ ದಂಪತಿ ಮಧ್ಯೆ ಮಾತ್ರ ಇರಬೇಕೆಂಬ ಮೇರೆಯನ್ನು ಯೆಹೋವನು ಇಟ್ಟಿದ್ದಾನೆ. ಆ ಮೇರೆಯೊಳಗೆ ಇರುವಲ್ಲಿ ಮಾತ್ರ ಅನೈತಿಕತೆಗೆ ಬಲಿಯಾಗದಂತೆ ಸಂರಕ್ಷಣೆ ಸಿಗುವುದು.
20 ದೇವರು ಇಟ್ಟಿರುವ ಈ ಮೇರೆಯ ಕುರಿತು ಪೌಲ 1 ಕೊರಿಂಥ 7:2-5ರಲ್ಲಿ ತಿಳಿಸಿದ್ದಾನೆ. ಗಂಡನೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಹಕ್ಕು ಹೆಂಡತಿಗೆ ಮಾತ್ರ ಇದೆ. ಹಾಗೆಯೇ ಗಂಡನಿಗೆ ತನ್ನ ಹೆಂಡತಿಯ ವಿಷಯದಲ್ಲಿ ಮಾತ್ರ ಈ ಹಕ್ಕಿದೆ. ಪತಿಪತ್ನಿ ತಮ್ಮ ಸಂಗಾತಿಗೆ “ಸಲ್ಲತಕ್ಕದ್ದನ್ನು” ಸಲ್ಲಿಸಬೇಕು. ಅಂದರೆ ಲೈಂಗಿಕ ವಿಷಯದಲ್ಲಿ ಪರಸ್ಪರ ಪಡೆದುಕೊಳ್ಳುವ ಹಕ್ಕು ಇಬ್ಬರಿಗೂ ಇದೆ. ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಗಂಡ ಹೆಂಡತಿ ತುಂಬ ಸಮಯದ ವರೆಗೆ ಒಬ್ಬರಿಂದೊಬ್ಬರು ದೂರವಿರುತ್ತಾರೆ. ಉದ್ಯೋಗದ ನಿಮಿತ್ತ ಇರಬಹುದು. ರಜಾದಿನಗಳನ್ನು ಬೇರೆ ಬೇರೆಯಾಗಿ ಕಳೆಯುವ ಕಾರಣ ಇರಬಹುದು. ಅಂಥ ಸಂದರ್ಭದಲ್ಲಿ ಪರಸ್ಪರ “ಸಲ್ಲತಕ್ಕದ್ದನ್ನು” ಸಲ್ಲಿಸಲು ಅವರು ತಪ್ಪಿಹೋಗುತ್ತಾರೆ. “ಸ್ವನಿಯಂತ್ರಣದ” ಕೊರತೆಯಿಂದ ಒಬ್ಬ ಸಂಗಾತಿ ಸೈತಾನನ ಪಾಶದ ಒತ್ತಡಕ್ಕೊಳಗಾಗಿ ವ್ಯಭಿಚಾರಗೈದಲ್ಲಿ ಆಗುವ ದುರಂತವನ್ನು ಊಹಿಸಿಕೊಳ್ಳಿ. ವಿವಾಹಬಂಧವನ್ನು ಅಪಾಯಕ್ಕೊಡ್ಡದೆ ಕುಟುಂಬದ ಅಗತ್ಯಗಳನ್ನು ಪೂರೈಸಲು ಶ್ರಮಪಡುವ ಕುಟುಂಬ ಶಿರಸ್ಸುಗಳನ್ನು ಯೆಹೋವ ದೇವರು ಖಂಡಿತ ಆಶೀರ್ವದಿಸುತ್ತಾನೆ.—ಕೀರ್ತ. 37:25.
ಬೈಬಲ್ ಸಲಹೆ ಪಾಲಿಸಿ
21. (ಎ) ಮದುವೆಯಾಗಬೇಕಾ ಬೇಡವಾ ಎಂದು ನಿರ್ಧರಿಸುವುದು ಸುಲಭವಲ್ಲ ಏಕೆ? (ಬಿ) 1 ಕೊರಿಂಥ ಪುಸ್ತಕದ 7ನೇ ಅಧ್ಯಾಯದಲ್ಲಿರುವ ಬುದ್ಧಿಮಾತು ನಮಗೇಕೆ ಉಪಯುಕ್ತ?
21 ಮದುವೆ ಆಗಬೇಕಾ ಬೇಡವಾ ಎಂದು ನಿರ್ಣಯಿಸುವುದು ಹೇಳಿದಷ್ಟು ಸುಲಭವಲ್ಲ. ನಾವೆಲ್ಲರೂ ಅಪರಿಪೂರ್ಣರು ಮತ್ತು ಪರಸ್ಪರ ಸಂಬಂಧದಲ್ಲಿ ಸಮಸ್ಯೆ ಬರಲು ಇದುವೇ ಮುಖ್ಯ ಕಾರಣ. ಯೆಹೋವನ ಮೆಚ್ಚಿಕೆ ಮತ್ತು ಆಶೀರ್ವಾದ ಪಡೆದಿರುವ ಜನರು ವಿವಾಹಿತರೇ ಇರಲಿ ಅವಿವಾಹಿತರೇ ಇರಲಿ ಕೆಲವೊಮ್ಮೆ ನಿರಾಶೆಯ ಕಹಿಯನ್ನು ಅನುಭವಿಸುತ್ತಾರೆ. ಆದರೆ 1 ಕೊರಿಂಥ 7ನೇ ಅಧ್ಯಾಯದಲ್ಲಿರುವ ಬುದ್ಧಿಮಾತನ್ನು ಅನ್ವಯಿಸುವುದಾದರೆ ಆದಷ್ಟು ಮಟ್ಟಿಗೆ ಇಂಥ ಸಮಸ್ಯೆಗಳಿಂದ ಮುಕ್ತರಾಗಬಹುದು. ಮಾತ್ರವಲ್ಲ ಯೆಹೋವನ ಮುಂದೆ “ಒಳ್ಳೇದನ್ನೇ” ಮಾಡುವವರಾಗಿರುತ್ತೇವೆ. (1 ಕೊರಿಂಥ 7:37, 38 ಓದಿ.) ಅವಿವಾಹಿತರೇ ಆಗಿರಲಿ ವಿವಾಹಿತರೇ ಆಗಿರಲಿ ದೇವರ ಮೆಚ್ಚಿಕೆ ಗಳಿಸುವುದು ನಮ್ಮ ಆದ್ಯ ಗುರಿಯಾಗಿರಬೇಕು. ಆತನ ಮೆಚ್ಚಿಕೆಯೊಂದಿಗೆ ಹೊಸ ಲೋಕದೆಡೆಗೆ ಹೆಜ್ಜೆ ಹಾಕುತ್ತಾ ಸಾಗೋಣ. ಪುರುಷರು ಮತ್ತು ಸ್ತ್ರೀಯರ ನಡುವಿನ ಒಡನಾಟದಲ್ಲಿ ಈಗ ಇರುವ ಒತ್ತಡ-ಸಮಸ್ಯೆ ಹೊಸ ಲೋಕದಲ್ಲಿರದು!
[ಪಾದಟಿಪ್ಪಣಿ]
a ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಅಧ್ಯಾಯ 2, ಪ್ಯಾರ 16ರಿಂದ 19 ನೋಡಿ.
ಉತ್ತರಿಸುವಿರಾ?
• ಮದುವೆಯಾಗುವಂತೆ ಯಾರ ಮೇಲೂ ಒತ್ತಡ ಹಾಕಬಾರದು ಏಕೆ?
• ಅವಿವಾಹಿತ ಕ್ರೈಸ್ತರೇ, ನಿಮ್ಮ ಸಮಯವನ್ನು ಹೇಗೆ ಅತ್ಯುತ್ತಮವಾಗಿ ಬಳಸುವಿರಿ?
• ವಿವಾಹವಾಗಲಿರುವ ಜೋಡಿ ಮದುವೆ ನಂತರ ಬರಬಹುದಾದ ಸಮಸ್ಯೆಗಳನ್ನು ನಿಭಾಯಿಸಲು ಹೇಗೆ ಸಿದ್ಧರಾಗಬಹುದು?
• ಮದುವೆ ಎನ್ನುವುದು ಲೈಂಗಿಕ ಅನೈತಿಕತೆಯ ಅಪಾಯಕ್ಕೆ ತುತ್ತಾಗದಂತೆ ಕಾಪಾಡುವ ತಡೆಗೋಡೆಯಲ್ಲ ಏಕೆ?
[ಪುಟ 14ರಲ್ಲಿರುವ ಚಿತ್ರ]
ಯೆಹೋವನ ಸೇವೆಗಾಗಿ ತಮ್ಮ ಸಮಯವನ್ನು ನೀಡುವ ಅವಿವಾಹಿತ ಕ್ರೈಸ್ತರು ಬಲು ಸಂತೋಷಿತರು
[ಪುಟ 16ರಲ್ಲಿರುವ ಚಿತ್ರ]
ಮದುವೆ ಬಳಿಕ ಕೆಲವರು ಯಾವ ಹೊಂದಾಣಿಕೆ ಮಾಡಬೇಕಾಗುತ್ತದೆ?