ಮೊದಲು ಈ ಸುವಾರ್ತೆಯು ಸಾರಲ್ಪಡಬೇಕು
“ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.”—ಮಾರ್ಕ 13:10.
1, 2. ಸಾಕ್ಷಿಗಳ ಒಂದು ಸರಕುಮುದ್ರೆ ಯಾವುದು, ಮತ್ತು ಯಾಕೆ?
ಯೆಹೋವನ ಸಾಕ್ಷಿಗಳು ಅಷ್ಟು ಪಟ್ಟುಹಿಡಿದು ಸಾರುವುದೇಕೆ? ನಿಶ್ಚಯವಾಗಿಯೂ ನಮ್ಮ ಸಾರ್ವಜನಿಕ ಶುಶ್ರೂಷೆಗಾಗಿ—ಅದು ಮನೆಯಿಂದ-ಮನೆಗೆ, ಬೀದಿಬದಿಯಲ್ಲಿ, ಅಥವಾ ಅನೌಪಚಾರಿಕ ಸಂಪರ್ಕಗಳಲ್ಲೇ ಆಗಿರಲಿ—ನಾವು ಲೋಕ ವ್ಯಾಪಕವಾಗಿ ಖ್ಯಾತರಾಗಿದ್ದೇವೆ. ಯುಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ, ನಾವು ನಮ್ಮನ್ನು ಸಾಕ್ಷಿಗಳಾಗಿ ಗುರುತಿಸಿಕೊಳ್ಳುತ್ತೇವೆ ಮತ್ತು ನಮ್ಮ ಮೆಚ್ಚಿನ ಸುವಾರ್ತೆಯನ್ನು ಜಾಣ್ಮೆಯಿಂದ ತಲಪಿಸಲು ಪ್ರಯತ್ನಿಸುತ್ತೇವೆ. ವಾಸ್ತವದಲ್ಲಿ, ಈ ಶುಶ್ರೂಷೆಯು ನಮ್ಮ ಸರಕುಮುದ್ರೆಯೆಂದು ನಾವು ಹೇಳಸಾಧ್ಯವಿದೆ!—ಕೊಲೊಸ್ಸೆ 4:6.
2 ಅದರ ಕುರಿತು ತುಸು ಯೋಚಿಸಿರಿ—ನೀಟಾದ ಉಡುಪು ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದಿರುವ ಪುರುಷರ, ಸ್ತ್ರೀಯರ ಮತ್ತು ಮಕ್ಕಳ ಒಂದು ಗುಂಪನ್ನು ತಮ್ಮ ನೆರೆಹೊರೆಯಲ್ಲಿ ಜನರು ಕಾಣುವಾಗಲೆಲ್ಲಾ, ಸಾಮಾನ್ಯವಾಗಿ ಅವರ ಮೊದಲ ಆಲೋಚನೆ ಏನು? ‘ಓ, ಅಗೋ, ಪುನಃ ಬಂದರು ಕ್ಯಾತೊಲಿಕರು (ಇಲ್ಲವೆ ಆರ್ತೊಡಾಕ್ಸ್ರು)!’ ಅಥವಾ ‘ಅಗೋ, ಪುನಃ ಬಂದರು ಪೆಂಟಿಕಾಸ್ಟ್ನವರು (ಇಲ್ಲವೆ ಬ್ಯಾಪ್ಟಿಸ್ಟ್ಗಳು)!’ ಎಂದೊ? ಇಲ್ಲ. ಅಂಥ ಧರ್ಮಗಳು ಮನೆಯಿಂದ ಮನೆಯ ಶುಶ್ರೂಷೆಯನ್ನು ನಡಿಸುವ ಇಡೀ ಕುಟುಂಬಗಳನ್ನು ಹೊಂದಿರುವುದಿಲ್ಲ. ಪ್ರಾಯಶಃ ಕೆಲವು ಧಾರ್ಮಿಕ ಗುಂಪುಗಳು ಕೆಲವು “ಮಿಷನೆರಿಗಳನ್ನು” ಎರಡು ವರ್ಷದ ಕೆಲಸಕ್ಕಾಗಿ ನಿರ್ದಿಷ್ಟ ಕ್ಷೇತ್ರಗಳಿಗೆ ಕಳುಹಿಸಬಹುದು, ಆದರೆ ಅವರ ಸರ್ವಸಾಮಾನ್ಯ ಸದಸ್ಯರು ಅಂಥ ಯಾವುದೇ ಶುಶ್ರೂಷೆಯಲ್ಲಿ ಭಾಗವಹಿಸುವುದಿಲ್ಲ. ಪ್ರತಿಯೊಂದು ಯುಕ್ತ ಸಂದರ್ಭದಲ್ಲಿ ಇತರರಿಗೆ ತಮ್ಮ ಸಂದೇಶವನ್ನು ತಲಪಿಸುವುದರಲ್ಲಿ ಲೋಕವ್ಯಾಪಕ ಅಂಗೀಕಾರವನ್ನು ಪಡೆದವರು ಯೆಹೋವನ ಸಾಕ್ಷಿಗಳು ಮಾತ್ರ. ಮತ್ತು ಅವರ ಪತ್ರಿಕೆಗಳಾದ ಕಾವಲಿನಬುರುಜು ಮತ್ತು ಎಚ್ಚರ! ಕ್ಕಾಗಿ ಅವರು ಖ್ಯಾತರಾಗಿದ್ದಾರೆ.—ಯೆಶಾಯ 43:10-12; ಅ. ಕೃತ್ಯಗಳು 1:8.
ಕ್ರೈಸ್ತಪ್ರಪಂಚದ ವೈದಿಕರೊಂದಿಗೆ ವೈದೃಶ್ಯ
3, 4. ವಾರ್ತಾ ಮಾಧ್ಯಮದಲ್ಲಿ ಕ್ರೈಸ್ತಪ್ರಪಂಚದ ವೈದಿಕರು ಕೆಲವೊಮ್ಮೆ ಹೇಗೆ ಚಿತ್ರಿಸಲ್ಪಡುತ್ತಾರೆ?
3 ತೀರ ವೈದೃಶ್ಯದಲ್ಲಿ, ವಾರ್ತಾ ವರದಿಗಳು ಆಗಿಂದಾಗ್ಗೆ ಕೆಲವು ದೇಶಗಳಲ್ಲಿ ವೈದಿಕರನ್ನು ಮಕ್ಕಳ ಕಾಮಿಗಳು, ಅನೈತಿಕ ಠಕ್ಕರು, ಮತ್ತು ವಂಚಕರಾಗಿ ಬಯಲುಪಡಿಸಿವೆ. ಅವರ ಶರೀರಭಾವದ ಕರ್ಮಗಳು ಮತ್ತು ಅವರ ಅತಿರೇಕ ಸುಖಭೋಗದ ಜೀವನ ಶೈಲಿಗಳು ಎಲ್ಲರಿಗೂ ಕಾಣುವಂತೆ ತೋರಿಬಂದಿವೆ. ಒಬ್ಬ ಜನಪ್ರಿಯ ಸಂಗೀತಗಾರನು, “ಯೇಸು ತನ್ನ ಟೀವೀ ದೇಖಾವೆಯಲ್ಲಿ ರೋಲೆಕ್ಸ್ [ಬಹಳ ದುಬಾರಿಯಾದ ಒಂದು ಚಿನ್ನದ ವಾಚ್] ಧರಿಸುವನೊ?” ಎಂಬ ಶೀರ್ಷಿಕೆಯ ತನ್ನ ಹಾಡಿನಲ್ಲಿ ಅದನ್ನು ಚೆನ್ನಾಗಿ ವ್ಯಕ್ತಪಡಿಸಿದ್ದಾನೆ. ಅವನು ಪ್ರಶ್ನೆ ಕೇಳುತ್ತಾನೆ: “ಯೇಸು ಭೂಮಿಗೆ ಬರುವಲ್ಲಿ ರಾಜಕಾರಣಿಯಾಗುವನೊ? ಪಾಮ್ ಸ್ಪ್ರಿಂಗ್ಸ್ [ಕ್ಯಾಲಿಫೋರ್ನಿಯದ ಒಂದು ಶ್ರೀಮಂತ ಸಮುದಾಯ] ನಲ್ಲಿ ಎರಡನೆಯ ಮನೆಯುಳ್ಳವನಾಗಿ ತನ್ನ ಸಂಪತ್ತನ್ನು ಅಡಗಿಸಿಡುವನೊ?” ಯಾಕೋಬನ ಮಾತುಗಳು ಎಷ್ಟು ತಕ್ಕದ್ದಾಗಿವೆ: “ಭೂಲೋಕದಲ್ಲಿ ನೀವು ಅತಿಭೋಗಿಗಳಾಗಿ ಬದುಕಿ ಮನಸ್ಸು ಬಂದಂತೆ ನಡಕೊಂಡಿದ್ದೀರಿ. ವಧೆಯ ದಿವಸ ಬಂದರೂ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ.”—ಯಾಕೋಬ 5:5; ಗಲಾತ್ಯ 5:19-21.
4 ರಾಜಕಾರಣಿಗಳೊಂದಿಗೆ ವೈದಿಕರ ಅನ್ಯೋನ್ಯತೆ ಮತ್ತು ರಾಜಕೀಯ ಉಮೇದ್ವಾರರಾಗಿ ಚುನಾವಣೆಯಲ್ಲಿ ಭಾಗವಹಿಸುವುದು ಕೂಡ ಅವರನ್ನು ಆಧುನಿಕ-ದಿನದ ಶಾಸ್ತ್ರಿಗಳಾಗಿ ಮತ್ತು ಫರಿಸಾಯರಾಗಿ ಬಯಲುಪಡಿಸುತ್ತದೆ. ಅದೇ ಸಮಯದಲ್ಲಿ, ಅಮೆರಿಕ ಮತ್ತು ಕೆನಡದಂಥ ದೇಶಗಳಲ್ಲಿ, ಮಕ್ಕಳೊಂದಿಗೆ ಮತ್ತು ದೊಡ್ಡವರೊಂದಿಗೆ ಅವರ ವಿಷಯಲಂಪಟ ನಡವಳಿಕೆಯ ಪರಿಣಾಮವಾಗಿ ವೈದಿಕರ ವಿರುದ್ಧವಾದ ಮೊಕದ್ದಮೆ ಮತ್ತು ತೀರ್ಪುಗಳ ಅತಿ ವೆಚ್ಚದಿಂದಾಗಿ ಧರ್ಮದ ಬೊಕ್ಕಸಗಳು ಬರಿದಾಗುತ್ತಿವೆ.—ಮತ್ತಾಯ 23:1-3.
5. ಕ್ರೈಸ್ತಪ್ರಪಂಚದ ವೈದಿಕರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿ ಯಾಕೆ ಪರಿಣಮಿಸಿರುವುದಿಲ್ಲ?
5 ಸರಿಯಾಗಿಯೆ, ಯೇಸು ತನ್ನ ದಿನದ ವೈದಿಕರಿಗೆ ಹೀಗೆ ಹೇಳಶಕ್ತನಾದನು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಚಂದವಾಗಿ ಕಾಣುತ್ತವೆ, ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ. ಹಾಗೆಯೇ ನೀವು ಸಹ ಹೊರಗೆ ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳುತ್ತೀರಿ ಸರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.” ಹೀಗೆ, ಕ್ರೈಸ್ತಪ್ರಪಂಚದ ವೈದಿಕರಿಗೆ, ಅವರು ಕ್ಯಾತೊಲಿಕರು, ಪ್ರಾಟೆಸ್ಟಂಟರು, ಆರ್ತೊಡಾಕ್ಸ್ರು, ಅಥವಾ ಯಾವುದೇ ವಿಧಿವತ್ತಾದ ಧಾರ್ಮಿಕ ಸಂಘಟನೆಗೆ ಸೇರಿದವರಾಗಿರಲಿ, ಸುವಾರ್ತೆಯನ್ನು ಸಾರುವ ಆದೇಶವನ್ನು ದೇವರು ಅವರಿಗೆ ಕೊಟ್ಟಿರುವುದಿಲ್ಲ. ಅವರು ಮುಂತಿಳಿಸಲ್ಪಟ್ಟ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿ ಪರಿಣಮಿಸಿರುವುದಿಲ್ಲ.—ಮತ್ತಾಯ 23:27, 28; 24:45-47.
ಮೊದಲು ಸುವಾರ್ತೆಯನ್ನು ಸಾರಬೇಕು ಯಾಕೆ?
6. ಯಾವ ಘಟನಾವಳಿಗಳು ಶೀಘ್ರದಲ್ಲಿ ಸಂಭವಿಸಲಿಕ್ಕಿವೆ?
6 ಎಲ್ಲಾ ಜನಾಂಗಗಳಲ್ಲಿ ಸುವಾರ್ತೆಯನ್ನು ಸಾರುವ ಯೇಸುವಿನ ಆಜ್ಞೆಯ ತನ್ನ ಅಚ್ಚುಕಟ್ಟಿನ ಆವೃತ್ತಿಯಲ್ಲಿ, ಮಾರ್ಕನು ಮಾತ್ರ “ಮೊದಲು” ಎಂಬ ಶಬ್ದವನ್ನು ಉಪಯೋಗಿಸುತ್ತಾನೆ. (ಮಾರ್ಕ 13:10; ಹೋಲಿಸಿ ಮತ್ತಾಯ 24:14.) ಜೆ.ಬಿ. ಫಿಲಿಪ್ಸ್ರ ತರ್ಜುಮೆಯು ಓದುವುದು: “ಯಾಕಂದರೆ ಅಂತ್ಯವು ಬರುವ ಮುಂಚೆ ಸುವಾರ್ತೆಯು ಎಲ್ಲಾ ಜನಾಂಗಗಳಿಗೆ ಸಾರಲ್ಪಡಬೇಕು.” “ಮೊದಲು” ಎಂಬ ಕ್ರಿಯಾ ವಿಶೇಷಣದ ಉಪಯೋಗವು, ಲೋಕವ್ಯಾಪಕ ಸೌವಾರ್ತಿಕ ಕಾರ್ಯವನ್ನು ಬೇರೆ ಘಟನಾವಳಿಗಳು ಹಿಂಬಾಲಿಸುವುವೆಂಬ ಅಭಿಪ್ರಾಯವನ್ನು ಕೊಡುತ್ತದೆ. ಆ ಘಟನಾವಳಿಗಳಲ್ಲಿ, ವಾಗ್ದತ್ತ ಮಹಾ ಸಂಕಟ ಮತ್ತು ಹೊಸ ಲೋಕದ ಮೇಲೆ ಕ್ರಿಸ್ತನ ನೀತಿಯುಳ್ಳ ಆಡಳಿತವು ಸೇರಿರುವುವು.—ಮತ್ತಾಯ 24:21-31; ಪ್ರಕಟನೆ 16:14-16; 21:1-4.
7. ಮೊದಲು ಸುವಾರ್ತೆಯು ಸಾರಲ್ಪಡಬೇಕೆಂದು ದೇವರು ಅಪೇಕ್ಷಿಸುವುದೇಕೆ?
7 ಹೀಗೆ ಮೊದಲು ಸುವಾರ್ತೆಯು ಸಾರಲ್ಪಡಬೇಕೆಂದು ದೇವರು ಅಪೇಕ್ಷಿಸುವುದು ಏಕೆ? ಅದಕ್ಕೆ ಒಂದು ಕಾರಣವು ಆತನು ಪ್ರೀತಿ, ನ್ಯಾಯ, ವಿವೇಕ ಮತ್ತು ಶಕ್ತಿಯ ದೇವರಾಗಿದ್ದಾನೆ. ಮತ್ತಾಯ 24:14 ಮತ್ತು ಮಾರ್ಕ 13:10 ರಲ್ಲಿ ದಾಖಲೆಯಾದ ಯೇಸುವಿನ ಹೇಳಿಕೆಗಳ ನೆರವೇರಿಕೆಯಲ್ಲಿ, ಯೆಹೋವನ ಈ ಗುಣಗಳ ಒಂದು ಮನತಟ್ಟುವ ಪ್ರದರ್ಶನೆಯನ್ನು ನಾವು ಕಾಣಸಾಧ್ಯವಿದೆ. ನಾವು ಅವನ್ನು ಒಂದೊಂದಾಗಿ ಸಂಕ್ಷೇಪವಾಗಿ ಪರೀಕ್ಷಿಸೋಣ ಮತ್ತು ಅವು ಸುವಾರ್ತೆಯ ಸಾರುವಿಕೆಗೆ ಹೇಗೆ ಸಂಬಂಧಿಸುತ್ತವೆಂದು ನೋಡೋಣ.
ಸುವಾರ್ತೆ ಮತ್ತು ಯೆಹೋವನ ಪ್ರೀತಿ
8. ಸುವಾರ್ತೆಯ ಸಾರುವಿಕೆಯು ದೇವರ ಪ್ರೀತಿಯ ಒಂದು ಪ್ರದರ್ಶನೆಯಾಗಿದೆ ಹೇಗೆ? (1 ಯೋಹಾನ 4:7-16)
8 ಸುವಾರ್ತೆಯ ಸಾರುವಿಕೆಯು ದೇವರ ಪ್ರೀತಿ ಯನ್ನು ಪ್ರತಿಬಿಂಬಿಸುವುದು ಹೇಗೆ? ಮೊದಲಾಗಿ ಹೇಗಂದರೆ ಅದು ಕೇವಲ ಒಂದು ಜಾತಿಗಾಗಿ ಅಥವಾ ಗುಂಪಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟ ಒಂದು ಸಂದೇಶವಲ್ಲ. ಅದು “ಎಲ್ಲಾ ಜನಾಂಗಗಳಿ” ಗಾಗಿ ಇರುವ ಸುವಾರ್ತೆಯಾಗಿದೆ. ದೇವರು ಮಾನವ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾನೆಂದರೆ ಆತನು ಕೇವಲ ಒಂದು ಜಾತಿಗಾಗಿ ಅಲ್ಲ, ಮಾನವರೆಲ್ಲರ ಪಾಪಗಳಿಗಾಗಿ, ತನ್ನ ಏಕಜಾತ ಪುತ್ರನನ್ನು ಕಳುಹಿಸಿಕೊಟ್ಟನು. ಅಪೊಸ್ತಲ ಯೋಹಾನ ಬರೆದದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವ ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ.” (ಯೋಹಾನ 3:16, 17) ಶಾಂತಿ, ಸಾಮರಸ್ಯ ಮತ್ತು ನ್ಯಾಯವುಳ್ಳ ಒಂದು ಹೊಸ ಲೋಕವನ್ನು ವಾಗ್ದಾನಿಸುವ ಸುವಾರ್ತೆಯು ದೇವರ ಪ್ರೀತಿಯ ಪುರಾವೆಯಾಗಿದೆ ನಿಶ್ಚಯ.—2 ಪೇತ್ರ 3:13.
ಸುವಾರ್ತೆ ಮತ್ತು ಯೆಹೋವನ ಶಕ್ತಿ
9. ಸುವಾರ್ತೆಯನ್ನು ಸಾರಲು ಕ್ರೈಸ್ತಪ್ರಪಂಚದ ಬಲಾಢ್ಯ ಧರ್ಮಗಳನ್ನು ಯೆಹೋವನು ಉಪಯೋಗಿಸಲಿಲ್ಲವೇಕೆ?
9 ಸುವಾರ್ತೆಯ ಸಾರುವಿಕೆಯಿಂದ ಯೆಹೋವನ ಶಕ್ತಿಯು ಹೇಗೆ ಪ್ರದರ್ಶಿಸಲ್ಪಟ್ಟಿದೆ? ಈ ಆದೇಶವನ್ನು ನಿರ್ವಹಿಸಲು ಆತನು ಯಾರನ್ನು ಉಪಯೋಗಿಸಿದ್ದಾನೆಂಬದನ್ನು ತುಸು ಪರಿಗಣಿಸಿರಿ. ರೋಮನ್ ಕ್ಯಾತೊಲಿಕ್ ಚರ್ಚ್ ಅಥವಾ ಪ್ರಧಾನ ಪ್ರಾಟೆಸ್ಟಂಟ್ ಪಂಗಡಗಳಂಥ ಕ್ರೈಸ್ತಪ್ರಪಂಚದ ಪ್ರಬಲ ಧಾರ್ಮಿಕ ಸಂಘಟನೆಗಳು ಅವಾಗಿರುತ್ತವೊ? ಇಲ್ಲ, ರಾಜಕಾರಣದಲ್ಲಿ ಒಳಗೂಡುವಿಕೆಯು ಅವರನ್ನು ಆ ನೇಮಕಕ್ಕೆ ಅಯೋಗ್ಯರನ್ನಾಗಿ ಮಾಡುತ್ತದೆ. (ಯೋಹಾನ 15:19; 17:14; ಯಾಕೋಬ 4:4) ಅವರ ಸಂಬಂಧೀ ಐಶ್ವರ್ಯ ಮತ್ತು ಕುಲೀನ ಆಡಳಿತ ವರ್ಗದೊಂದಿಗೆ ಅವರ ನೆಂಟತನ ಮತ್ತು ವರ್ಚಸ್ಸಾಗಲಿ, ಅವರ ಸಂಪ್ರದಾಯ-ಬದ್ಧ ದೇವತಾಶಾಸ್ತ್ರವಾಗಲಿ ಯೆಹೋವ ದೇವರನ್ನು ಪ್ರಭಾವಿಸಿರುವುದಿಲ್ಲ. ದೇವರ ಚಿತ್ತವನ್ನು ನಿರ್ವಹಿಸಲಿಕ್ಕಾಗಿ ಮಾನವ ಶಕ್ತಿಯು ಬೇಕಾಗಿರಲಿಲ್ಲ.—ಜೆಕರ್ಯ 4:6.
10. ಸಾರುವಿಕೆಯನ್ನು ನಡಿಸಲು ದೇವರು ಯಾರನ್ನು ಆರಿಸಿಕೊಂಡಿದ್ದಾನೆ?
10 ಅದು ಅಪೊಸ್ತಲ ಪೌಲನು ಕೊರಿಂಥದ ಸಭೆಗೆ ತನ್ನ ಪತ್ರದಲ್ಲಿ ಹೇಳಿದಂತೆಯೆ ಇದೆ: “ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ. ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.”—1 ಕೊರಿಂಥ 1:26-29.
11. ಸಾಕ್ಷಿಗಳ ಕುರಿತ ಯಾವ ನಿಜತ್ವಗಳು ಅವರನ್ನು ಅಸದೃಶರನ್ನಾಗಿ ಮಾಡಿವೆ?
11 ಯೆಹೋವನ ಸಾಕ್ಷಿಗಳಿಗೆ ಅವರ ಸಂಸ್ಥೆಯಲ್ಲಿ ಅತಿ ಕೊಂಚ ಧನಿಕ ಸದಸ್ಯರಿದ್ದಾರೆ ಮತ್ತು ನಿಶ್ಚಯವಾಗಿಯೂ ರಾಜಕೀಯವಾಗಿ ಪ್ರಬಲರಾಗಿರುವವರು ಯಾರೂ ಇಲ್ಲ. ರಾಜಕೀಯ ವಿಷಯಗಳಲ್ಲಿ ಅವರ ಕಟ್ಟುನಿಟ್ಟಿನ ತಾಟಸ್ಥ್ಯವು ಅವರು ಯಾವುದೇ ರಾಜಕೀಯ ಪ್ರಭಾವವನ್ನು ಹಾಕಶಕ್ತರಲ್ಲ ಎಂದರ್ಥ. ಇದಕ್ಕೆ ವೈದೃಶ್ಯದಲ್ಲಿ, ಈ ಇಪ್ಪತ್ತನೆಯ ಶತಮಾನದಲ್ಲಿ ಆಗಿಂದಾಗ್ಗೆ ಧಾರ್ಮಿಕ ಮತ್ತು ರಾಜಕೀಯ ಪುಡಾರಿಗಳ ಚಿತಾವಣೆಯಿಂದ ಅವರು ನೀಚ ಹಿಂಸೆಯ ಬಲಿಪಶುಗಳಾಗಿದ್ದಾರೆ. ಆದರೂ, ನಾಜೀವಾದ, ಫ್ಯಾಸಿಸ್ಟ್ವಾದ, ಸಮತಾವಾದ, ರಾಷ್ಟ್ರೀಯವಾದ ಮತ್ತು ಸುಳ್ಳು ಧರ್ಮದ ಅನುಯಾಯಿಗಳಿಂದ ಅವರ ವಿರುದ್ಧವಾಗಿ ಪ್ರೇರಿಸಲ್ಪಟ್ಟ ತೀವ್ರ ಹಿಂಸೆಯ ಮಧ್ಯದಲ್ಲೂ, ಸಾಕ್ಷಿಗಳು ಸುವಾರ್ತೆಯನ್ನು ಲೋಕದಲ್ಲೆಲ್ಲೂ ಸಾರುತ್ತಿದ್ದಾರೆ ಮಾತ್ರವಲ್ಲ ಸಂಖ್ಯೆಯಲ್ಲಿ ಕೂಡ ಅವರು ಅಚ್ಚರಿಯ ಅಭಿವೃದ್ಧಿಯನ್ನು ಹೊಂದಿರುತ್ತಾರೆ.—ಯೆಶಾಯ 60:22.
12. ಸಾಕ್ಷಿಗಳು ಸಾಫಲ್ಯವನ್ನು ಏಕೆ ಪಡೆದಿರುತ್ತಾರೆ?
12 ಅವರ ಸಾಫಲ್ಯವನ್ನು ಸಾಕ್ಷಿಗಳು ಯಾವುದಕ್ಕೆ ಅಧ್ಯಾರೋಪಿಸುತ್ತಾರೆ? ಯೇಸು ತನ್ನ ಶಿಷ್ಯರಿಗೆ ವಾಗ್ದಾನಿಸಿದ್ದು: “ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.” ಆದುದರಿಂದ ನಿಜವಾಗಿ ಅವರ ಸಾಫಲ್ಯದ ಮೂಲವು ಯಾವುದಾಗಿರುವುದು? “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು” ಹೊಂದುವಿರಿ ಎಂದು ಯೇಸು ಹೇಳಿದನು. ತದ್ರೀತಿಯಲ್ಲಿ ಇಂದು, ಮಾನುಷ ಸಾಮರ್ಥ್ಯವಲ್ಲ, ದೇವರ ಶಕ್ತಿಯು ಸಾಕ್ಷಿಗಳ ಲೋಕವ್ಯಾಪಕ ಶುಶ್ರೂಷೆಯ ಸಾಫಲ್ಯಕ್ಕೆ ಕೀಲಿಕೈಯಾಗಿದೆ. ಜನರಲ್ಲಿ ಅತ್ಯಂತ ಬಲಹೀನರೆಂದು ತೋರುವವರನ್ನು ಉಪಯೋಗಿಸುತ್ತಾ, ದೇವರು ಇತಿಹಾಸದಲ್ಲೇ ಅತ್ಯಂತ ಮಹತ್ತಾದ ಶೈಕ್ಷಣಿಕ ಕಾರ್ಯವನ್ನು ಪೂರೈಸುತ್ತಿದ್ದಾನೆ.—ಅ. ಕೃತ್ಯಗಳು 1:8; ಯೆಶಾಯ 54:13.
ಸುವಾರ್ತೆ ಮತ್ತು ಯೆಹೋವನ ವಿವೇಕ
13. (ಎ) ಸಾಕ್ಷಿಗಳು ಸ್ವಇಚ್ಛೆಯಿಂದ ಮತ್ತು ಸಂಬಳವಿಲ್ಲದೆ ಸೇವೆ ಮಾಡುವುದೇಕೆ? (ಬಿ) ಸೈತಾನನ ದೂರಿಗೆ ಯೆಹೋವನು ಹೇಗೆ ಉತ್ತರಕೊಟ್ಟಿದ್ದಾನೆ?
13 ಸುವಾರ್ತೆಯು ಸ್ವಯಂ ಸೇವಕರಿಂದ ಸಾರಲ್ಪಡುತ್ತಿದೆ. “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ,” ಎಂದು ಯೇಸು ಹೇಳಿದನು. (ಮತ್ತಾಯ 10:8) ಆದುದರಿಂದ, ಯೆಹೋವನ ಸಾಕ್ಷಿಗಳಲ್ಲಿ ಯಾರೂ ದೇವರ ಸೇವೆಗಾಗಿ ಸಂಬಳವನ್ನು ಪಡೆಯುವುದಿಲ್ಲ, ಅವರು ಅದಕ್ಕಾಗಿ ಕೋರುವುದೂ ಇಲ್ಲ. ವಾಸ್ತವದಲ್ಲಿ, ಅವರ ಕೂಟಗಳಲ್ಲಿ ಹಣವೆತ್ತುವಿಕೆ ಕೂಡ ಇರುವುದಿಲ್ಲ. ತಮ್ಮ ದೇವಭಕ್ತಿಯ ನಿಸ್ವಾರ್ಥ ಸೇವೆಯ ಮೂಲಕ, ದೇವರು ತನ್ನನ್ನು ದೂರುವವನಾದ ಪಿಶಾಚ ಸೈತಾನನಿಗೆ ಉತ್ತರಕೊಡಲಾಗುವಂತೆ ಮಾಡಲು ಅವರು ಸಂತೋಷಪಡುತ್ತಾರೆ. ದೇವರ ಈ ಆತ್ಮ ವಿರೋಧಿಯು ಕಾರ್ಯತಃ ಮಾನವರು ನಿಸ್ವಾರ್ಥ ಹೇತುವಿನಿಂದ ದೇವರ ಸೇವೆಯನ್ನು ಮಾಡುವುದಿಲ್ಲವೆಂದು ಸೂಚಿಸಿ ಹೇಳಿದ್ದಾನೆ. ಯೆಹೋವನು ತನ್ನ ವಿವೇಕ ದಲ್ಲಿ ಸೈತಾನನ ದೂರಿಗೆ ಒಂದು ನಿರ್ವಿವಾದದ ಉತ್ತರವನ್ನು—ಲಕ್ಷಾಂತರ ನಿಷ್ಠೆಯುಳ್ಳ ಸಾಕ್ಷಿಗಳು ಮನೆಯಿಂದ ಮನೆಗೆ, ಬೀದಿಪಕ್ಕದಲ್ಲಿ, ಮತ್ತು ಅನೌಪಚಾರಿಕವಾಗಿ ಸುವಾರ್ತೆಯನ್ನು ಸಾರುವ ಮೂಲಕ ಒದಗಿಸಿರುತ್ತಾನೆ.—ಯೋಬ 1:8-11; 2:3-5; ಜ್ಞಾನೋಕ್ತಿ 27:11.
14. ಪೌಲನು ಯಾವುದಕ್ಕೆ ನಿರ್ದೇಶಿಸಿದ್ದಾನೊ ಆ “ಮರೆಮಾಡಿದ ವಿವೇಕ” ಯಾವುದು?
14 ಸುವಾರ್ತೆಯನ್ನು ಸಾರುವಂತೆ ಮಾಡುವುದರಲ್ಲಿ ದೇವರ ವಿವೇಕದ ಇನ್ನೊಂದು ರುಜುವಾತು ಏನಂದರೆ ರಾಜ್ಯದ ವಾಗ್ದಾನವು ತಾನೇ ದೇವರ ವಿವೇಕದ ಒಂದು ಪ್ರದರ್ಶನೆಯಾಗಿದೆ. ಅಪೊಸ್ತಲ ಪೌಲನು ಬರೆದದ್ದು: “ಆದರೂ ಪ್ರವೀಣರಲ್ಲಿ ಜ್ಞಾನ [ವಿವೇಕ, NW] ವನ್ನೇ ಹೇಳುತ್ತೇವೆ. ಅದು ಇಹಲೋಕದ ಜ್ಞಾನ [ವಿವೇಕ] ವಲ್ಲ, ಇಲ್ಲದೆ ಹೋಗುವ ಇಹಲೋಕಾಧಿಕಾರಿಗಳ ಜ್ಞಾನವೂ [ವಿವೇಕವೂ] ಅಲ್ಲ. ಇದು ವರೆಗೆ ಗುಪ್ತವಾಗಿದ್ದ ಸತ್ಯಾರ್ಥ [ಪವಿತ್ರ ರಹಸ್ಯ, NW] ವನ್ನು ತಿಳಿಸುವದರಲ್ಲಿ ದೇವರ ಜ್ಞಾನ [ವಿವೇಕ] ವನ್ನೇ ಹೇಳುತ್ತೇವೆ. ಅದು ಯಾವದಂದರೆ ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತಿಗ್ತಿಂತ ಮೊದಲೇ ನೇಮಿಸಿ ಇದು ವರೆಗೆ ಮರೆಮಾಡಿದ ಜ್ಞಾನ [ವಿವೇಕ]ವೇ.” ಆ “ಮರೆಮಾಡಿದ ವಿವೇಕವು,” ಏದೆನ್ನಲ್ಲಿ ಪ್ರಾರಂಭಿಸಿದ ದಂಗೆಯನ್ನು ನಿಲ್ಲಿಸಲು ದೇವರ ವಿವೇಕದ ಸಾಧನಕ್ಕೆ ಸೂಚಿಸುತ್ತದೆ. ಆ ಪವಿತ್ರ ರಹಸ್ಯದ ವಿವೇಕವು ದೇವರ ರಾಜ್ಯದ ಸುವಾರ್ತೆಯ ಮಧ್ಯವರ್ತಿಯಾದ ಯೇಸು ಕ್ರಿಸ್ತನಲ್ಲಿ ಪ್ರಕಟಿಸಲ್ಪಟ್ಟಿತು.a—1 ಕೊರಿಂಥ 2:6, 7; ಕೊಲೊಸ್ಸೆ 1:26-28.
ಸುವಾರ್ತೆ ಮತ್ತು ದೇವರ ನ್ಯಾಯ
15. ಯೆಹೋವನು ಒಬ್ಬ ನ್ಯಾಯವಂತ ದೇವರೆಂದು ನಮಗೆ ತಿಳಿದಿರುವುದು ಹೇಗೆ? (ಧರ್ಮೋಪದೇಶಕಾಂಡ 32:4; ಕೀರ್ತನೆ 33:5)
15 ವಿಶಿಷ್ಟವಾಗಿ ನ್ಯಾಯದ ಸಂಬಂಧದಲ್ಲಿ ಮಾರ್ಕ 13:10ರ “ಮೊದಲು” ಶಬ್ದದ ಮಹತ್ವವನ್ನು ನಾವು ಕಾಣುತ್ತೇವೆ. ಪ್ರೀತಿ-ಕರುಣೆಯಿಂದ ಮೃದುಮಾಡಲ್ಪಟ್ಟಿರುವ ನ್ಯಾಯದ ದೇವರು ಯೆಹೋವನಾಗಿದ್ದಾನೆ. ಅವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕವಾಗಿ ಹೇಳುವುದು: “ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು ನಾನು ಲೋಕದಲ್ಲಿ ಪ್ರೀತಿ [ಪ್ರೀತಿ-ದಯೆ, NW] ನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬದಕ್ಕೇ ಹೆಚ್ಚಳಪಡಲಿ; ಪ್ರೀತಿ [ಪ್ರೀತಿ-ದಯೆ] ನೀತಿನ್ಯಾಯಗಳೇ ನನಗೆ ಆನಂದವೆಂದು ಯೆಹೋವನು ಅನ್ನುತ್ತಾನೆ.”—ಯೆರೆಮೀಯ 9:24.
16. ಮೊದಲು ಎಚ್ಚರಿಕೆಯನ್ನು ಕೊಡುವುದನ್ನು ನ್ಯಾಯವು ಅವಶ್ಯಪಡಿಸುತ್ತದೆ ಎಂಬದನ್ನು ಹೇಗೆ ಉದಾಹರಿಸಬಹುದು?
16 ಸುವಾರ್ತೆ ಸಾರುವ ವಿಷಯದಲ್ಲಿ ನ್ಯಾಯವು ಹೇಗೆ ತೋರಿಸಲ್ಪಟ್ಟಿದೆ? ದಿನದಲ್ಲಿ ಹೊತ್ತಾಗಿ ಭೇಟಿಕಾರರು ಬರುವಾಗ ತಿನ್ನುವಂತೆ ಒಂದು ರುಚಿಯಾದ ಚಾಕಲೆಟ್ ಕೇಕನ್ನು ತಯಾರಿಸಿದ ಒಬ್ಬ ತಾಯಿಯೊಂದಿಗೆ ನಾವದನ್ನು ಉದಾಹರಿಸೋಣ. ಅದನ್ನು ಯಾವಾಗ ತಿನ್ನಬೇಕೆಂಬುದರ ಕುರಿತು ತನ್ನ ಮಕ್ಕಳಿಗೆ ಏನೂ ಹೇಳದೆ ಅಡಿಗೆ ಮನೆಯ ಮೇಜಿನ ಮೇಲೆ ಆಕೆ ಅದನ್ನು ಬಿಟ್ಟು ಹೋಗುವಲ್ಲಿ, ಮಕ್ಕಳ ಸಹಜವಾದ ಪ್ರವೃತ್ತಿಯು ಏನಾಗಿರುವುದು? ನಾವೆಲ್ಲರೂ ಒಂದಾನೊಂದು ಸಮಯದಲ್ಲಿ ಮಕ್ಕಳಾಗಿದ್ದೆವು! ಯಾವುದೊ ಚಿಕ್ಕ ಕೈಬೆರಳು ಆ ಕೇಕನ್ನು ಕುಕ್ಕಿ ಪರೀಕ್ಷಿಸಬಯಸುತ್ತದೆ! ತಾಯಿ ತಕ್ಕದಾದ ಎಚ್ಚರಿಕೆಯನ್ನು ಕೊಡಲು ತಪ್ಪಿದ್ದಲ್ಲಿ, ಶಿಕ್ಷೆನೀಡಲು ಬಲವಾದ ಆಧಾರವು ಆಕೆಗಿರುವುದಿಲ್ಲ. ಇನ್ನೊಂದು ಕಡೆ, ಅನಂತರ ಭೇಟಿಕಾರರು ಬರುವಾಗ ತಿನ್ನಲಿಕ್ಕಾಗಿ ಆ ಕೇಕು ಇದೆಯೆಂದೂ, ಆದುದರಿಂದ ಅದನ್ನು ಮುಟ್ಟಬಾರದೆಂದೂ ಸ್ಪಷ್ಟವಾಗಿಗಿ ಆಕೆ ಹೇಳಿದ್ದಲ್ಲ, ಆಗ ಆಕೆ ಸ್ಪಷ್ಟವಾಗಿದ ಎಚ್ಚರಿಕೆಯನ್ನು ಕೊಟ್ಟಿದ್ದಾಳೆ. ಅಲ್ಲಿ ಅವಿಧೇಯತೆ ತೋರಿಬಂದರೆ, ದೃಢವಾದ ಮತ್ತು ನ್ಯಾಯಸಮ್ಮತ ಕ್ರಮವನ್ನು ಕೈಕೊಳ್ಳುವ ಹಕ್ಕು ಅವಳಿಗಿದೆ.—ಜ್ಞಾನೋಕ್ತಿ 29:15.
17. ಒಂದು ವಿಶೇಷ ರೀತಿಯಲ್ಲಿ 1919 ರಿಂದ ಯೆಹೋವನು ನ್ಯಾಯವನ್ನು ಹೇಗೆ ಪ್ರದರ್ಶಿಸಿರುತ್ತಾನೆ?
17 ಯೆಹೋವನು ತನ್ನ ನ್ಯಾಯಪರತೆಯಲ್ಲಿ, ಮೊದಲು ಬೇಕಾಗಿರುವ ಎಚ್ಚರಿಕೆಯನ್ನು ಕೊಡದೆ ಈ ದುಷ್ಟ ವಿಷಯಗಳ ವ್ಯವಸ್ಥೆಯ ವಿರುದ್ಧ ನ್ಯಾಯ ನಿರ್ಣಾಯಕ ಶಿಕ್ಷೆಯನ್ನು ತಾರನು. ಆದುದರಿಂದ, ವಿಶೇಷವಾಗಿ 1919 ರಿಂದ, ಮೊದಲನೆಯ ಲೋಕ ಯುದ್ಧವು “ಪ್ರಸವವೇದನೆಯನ್ನು” ತಂದ ಮೇಲೆ, ಯೆಹೋವನು ತನ್ನ ಸಾಕ್ಷಿಗಳನ್ನು ಭೂಮಿಯಲ್ಲೆಲ್ಲೂ ಹೋಗಿ ಹುರುಪಿನಿಂದ ಸುವಾರ್ತೆಯನ್ನು ಸಾರುವಂತೆ ಮಾಡಿರುತ್ತಾನೆ. (ಮತ್ತಾಯ 24:7, 8, 14) ಈ ಅಸದೃಶ ಎಚ್ಚರಿಕೆಯ ಕುರಿತು ಜನಾಂಗಗಳು ಯೋಗ್ಯವಾಗಿ ಅಜ್ಞಾನವನ್ನು ಪ್ರತಿಪಾದಿಸಸಾಧ್ಯವಿಲ್ಲ.
ಲೋಕವು ಎಷ್ಟು ವಿಸ್ತಾರವಾಗಿ ಆವರಿಸಲ್ಪಟ್ಟಿದೆ?
18. (ಎ) ಬಹು ದೂರದ ಪ್ರದೇಶಗಳಲ್ಲಿ ಸಾಕ್ಷಿಗಳ ಚಟುವಟಿಕೆಯ ಯಾವ ಪುರಾವೆಯು ಇದೆ? (ಬಿ) ಬೇರೆ ಯಾವ ಉದಾಹರಣೆಗಳು ನಿಮಗೆ ತಿಳಿದಿವೆ?
18 ಈ ಲೋಕವ್ಯಾಪಕ ಶೈಕ್ಷಣಿಕ ಕೆಲಸದ ಪರಿಣಾಮಕಾರತೆಯ ಒಂದು ಸೂಚನೆಯು ಲಾಸ್ಟ್ ಪೇಸ್ಲಸ್—ಎ ಜರ್ನಿ ಇನ್ ದ ನಾರ್ತ್ ಪುಸ್ತಕದಿಂದ ಕಾಣಸಾಧ್ಯವಿದೆ. ಗ್ರಂಥಕರ್ತನು ತಿಳಿಸುವುದೇನಂದರೆ ಸ್ಕಾಟ್ಲೆಂಡ್ನ ಉತ್ತರದ ಶೆಟ್ಲೆಂಡ್ ದ್ವೀಪಗಳಲ್ಲಿ ಒಂದಾದ ಫೂಲ ಎಂಬ ಒಂಟಿಗ ದ್ವೀಪದ ಸಮುದ್ರಯಾನ ತಖ್ತೆಯನ್ನು ಅವನು ಪರೀಕ್ಷಿಸಿದಾಗ, “ದ್ವೀಪದ ಸುತ್ತಲೆಲ್ಲಾ WKS (ರೆಕ್ಸ್) ನೌಕಾಭಂಗ, RKS (ರಾಕ್ಸ್) ಬಂಡೆಗಳು, LDGS (ಲೆಡ್ಜ್ಸ್) ಉಬ್ಬುಸಾಲುಗಳನ್ನು ತಖ್ತೆಗಳು ಸೂಚಿಸಿದವು. ಈ ಸೂಚನೆಗಳು “ಭಾವೀ ನಾವಿಕನನ್ನು ಹತ್ತಿರ ಬರದಂತೆ ಎಚ್ಚರಿಸಿದವು. ಫೂಲದ ಸುತ್ತಲಿನ ಸಾಗರವು ಅತ್ಯಂತ ಹಿಮ್ಮೆಟ್ಟಿಸುವ ಸಿಡಿಮದ್ದಿನ ಪಾತ್ರೆಗಳನ್ನು ಹರಡಿಸಿರುವ ಸಮುದ್ರ ಪ್ರದೇಶವಾಗಿದ್ದು, ನೌಕಾವಿಹಾರಿಗಳಿಗೆ, ಲಘು ಪ್ರವಾಸಿಗಳಿಗೆ, ಮತ್ತು ಇಂಗ್ಲೆಂಡಿನ ಮಹಾರಾಣಿಯ ಸಾರ್ವಜನಿಕ ಕೆಲಸಗಾರ ತಂಡಕ್ಕೆ ದ್ವೀಪವನ್ನು ನಿಷೇಧಿತವನ್ನಾಗಿ ಮಾಡಿದಾಗ್ಯೂ, ಈ ಅಡಚಣೆಗಳು ಯೆಹೋವನ ಸಾಕ್ಷಿಗಳನ್ನು ತಡೆಯಲಿಲ್ಲವೆಂದು ನನಗೆ ಕೆಲವೇ ದಿನಗಳಲ್ಲಿ ತಿಳಿದುಬಂತು.” ಅವರು ಮುಂದರಿಸಿದ್ದು: “ಅವರು ಮತಾಂತರಿಗಳಿಗಾಗಿ ಮಹಾ ನಗರದ ಹೊಲಸುಕೇರಿಗಳನ್ನೂ ಪ್ರಗತಿಶೀಲ ರಾಷ್ಟ್ರಗಳನ್ನೂ ಪೂರ್ತಿಯಾಗಿ ಹುಡುಕಿದಂತೆ ಅತಿದೂರದ ಫೂಲದಲ್ಲೂ ತಮ್ಮ ನಂಬಿಕೆಗಾಗಿ ಮತಾಂತರಿಸಿದರು.” ಕೆಲವು ತಿಂಗಳ ಹಿಂದೆ ತನ್ನ ಮನೆಬಾಗಿಲಲ್ಲಿ ಬಿಟ್ಟಿದ್ದ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿ ಒಬ್ಬ ಸ್ಥಳಿಕ ನಿವಾಸಿಯಾದ ಆ್ಯಂಡ್ರುವಿಗೆ ಸಿಕ್ಕಿತು ಎಂದವರು ಅಂಗೀಕರಿಸಿದರು. ಅನಂತರ ಅವರು ಕೂಡಿಸಿದ್ದು: “ಒಂದು ವಾರದ ತರುವಾಯ [ಡೇನಿಷ್ನಲ್ಲಿ ಎಚ್ಚರ!] ಪತ್ರಿಕೆಯ ಒಂದು ಪ್ರತಿಯನ್ನು [ಉತ್ತರ ಸಾಗರ ದ್ವೀಪಗಳಾದ] ಫೆರೊಸ್ನಲ್ಲಿ ಮತ್ತು ಎರಡು ತಿಂಗಳ ಮೇಲೆ ಗ್ರೀನ್ಲೆಂಡ್ನ ನುಕ್ ಶಹರದಲ್ಲಿ [ಡೇನಿಷ್ ಕಾವಲಿನಬುರುಜು] ಪತ್ರಿಕೆಯ ಒಂದು ಪ್ರತಿಯನ್ನು ನಾನು ಕಂಡೆನು.” ಆ ಉತ್ತರಾರ್ಧ ಪ್ರದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಹುರುಪಿನ ಚಟುವಟಿಕೆಗೆ ಎಂತಹ ನಿರರ್ಗಳವಾದ ಸಾಕ್ಷ್ಯವು!
ಸಾಕ್ಷಿಗಳು ಮುಂದುವರಿಯುವಂತೆ ಯಾವುದು ಮಾಡುತ್ತದೆ?
19, 20. (ಎ) ಯೆಹೋವನ ಸಾಕ್ಷಿಗಳನ್ನು ಸಾರುತ್ತಾ ಇರುವಂತೆ ಯಾವುದು ಪ್ರಚೋದಿಸುತ್ತದೆ? (ಬಿ) ಯಾವ ಪ್ರಶ್ನೆಗಳು ಮುಂದೆ ಉತ್ತರಿಸಲ್ಪಡುವವು?
19 ಒಬ್ಬನು ಎಷ್ಟೇ ವರ್ಷಗಳಿಂದ ಒಬ್ಬ ಸಾಕ್ಷಿಯಾಗಿದ್ದಿರಲಿ, ಮನೆಯಿಂದ ಮನೆಗೆ ಹೋಗಿ ಅಪರಿಚಿತರೊಂದಿಗೆ ಮಾತನಾಡುವುದು ಏನೂ ಸುಲಭ ವಿಷಯವಲ್ಲ ನಿಶ್ಚಯ. ಹೀಗಿರಲಾಗಿ ಈ ಕ್ರೈಸ್ತರನ್ನು ಸಾರುತ್ತಾ ಮುಂದರಿಯುವಂತೆ ಮಾಡುವುದು ಯಾವುದು? ಅವರ ಕ್ರೈಸ್ತ ಸಮರ್ಪಣೆ ಮತ್ತು ಹೊಣೆಗಾರಿಕೆಯ ಒಂದು ಭಾವವೇ ಅದು. ಪೌಲನು ಬರೆದದ್ದು: “ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ.” ಜೀವದ ಅರ್ಥದಲ್ಲಿರುವ ಒಂದು ಸಂದೇಶವು ನಿಜ ಕ್ರೈಸ್ತರಲ್ಲಿದೆ, ಆದುದರಿಂದ ಅದನ್ನು ಅವರು ತಮಗಾಗಿಯೆ ಇಟ್ಟುಕೊಳ್ಳುವುದಾದರೂ ಹೇಗೆ ಸಾಧ್ಯ? ಅಪಾಯದ ಸಮಯದಲ್ಲಿ ಒಂದು ಎಚ್ಚರಿಕೆಯನ್ನು ಕೊಡುವುದಕ್ಕೆ ತಪ್ಪುವ ರಕ್ತಾಪರಾಧ ದೋಷದ ತತ್ವವು ತಾನೇ ಸುವಾರ್ತೆಯನ್ನು ಸಾರಲು ಒತ್ತಾಯಪಡಿಸುವ ಒಂದು ಕಾರಣವಾಗಿರುತ್ತದೆ.—1 ಕೊರಿಂಥ 9:16; ಯೆಹೆಜ್ಕೇಲ 3:17-21.
20 ಹಾಗಾದರೆ, ಸುವಾರ್ತೆಯು ಹೇಗೆ ಸಾರಲ್ಪಡುತ್ತಿದೆ? ಸಾಕ್ಷಿಗಳ ಸಾಫಲ್ಯಕ್ಕೆ ಕೀಲಿಕೈ ಯಾವುದು? ಅವರ ಶುಶ್ರೂಷೆಯ ಮತ್ತು ಸಂಘಟನೆಯ ಯಾವ ವೈಶಿಷ್ಟ್ಯಗಳು ಅವರನ್ನು ಸತ್ಯ ಧರ್ಮವಾಗಿ ಗುರುತಿಸಲು ಸಹಾಯ ಮಾಡುತ್ತವೆ? ನಮ್ಮ ಹಿಂಬಾಲಿಸುವ ಲೇಖನವು ಆ ಪ್ರಶ್ನೆಗಳನ್ನು ಉತ್ತರಿಸುವುದು.
[ಅಧ್ಯಯನ ಪ್ರಶ್ನೆಗಳು]
a ದೇವರ ವಿವೇಕ ಮತ್ತು “ಪವಿತ್ರ ರಹಸ್ಯ”ದ ಅಧಿಕ ವಿವರಣೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇವರಿಂದ ಪ್ರಕಾಶಿಸಲ್ಪಟ್ಟ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ II, ಪುಟ 1190ನ್ನು ನೋಡಿರಿ.
ನಿಮಗೆ ನೆನಪಿದೆಯೆ?
▫ ವೈದಿಕರಿಂದ ಯೆಹೋವನ ಸಾಕ್ಷಿಗಳನ್ನು ಪ್ರತ್ಯೇಕಿಸುವಂಥಾದ್ದು ಯಾವುದು?
▫ ಸಾರುವಿಕೆಯು ಹೇಗೆ ದೇವರ ಪ್ರೀತಿ, ಶಕ್ತಿ, ಮತ್ತು ವಿವೇಕವನ್ನು ಪ್ರತಿಬಿಂಬಿಸುತ್ತದೆ?
▫ ಸುವಾರ್ತೆ ಸಾರುವಿಕೆಯು ದೇವರ ನ್ಯಾಯವನ್ನು ಹೇಗೆ ಪ್ರತಿಬಿಂಬಿಸುತ್ತದೆ?
▫ ಯೆಹೋವನ ಸಾಕ್ಷಿಗಳನ್ನು ಅವರ ಶುಶ್ರೂಷೆಯಲ್ಲಿ ಸಾರುತ್ತಾ ಇರುವಂತೆ ಯಾವುದು ಪ್ರಚೋದಿಸುತ್ತದೆ?
[ಪುಟ 15 ರಲ್ಲಿರುವ ಚಿತ್ರಗಳು]
ಜನರು ಎಷ್ಟೇ ದೂರದಲ್ಲಿ ಪ್ರತ್ಯೇಕವಾಗಿರಲಿ, ಯೆಹೋವನ ಸಾಕ್ಷಿಗಳು ಅವರನ್ನು ತಲಪಲು ಬಯಸುತ್ತಾರೆ