ಅಧ್ಯಯನ ಲೇಖನ 10
ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು
ದೀಕ್ಷಾಸ್ನಾನ ಆದ್ಮೇಲೂ ಯೇಸು ತರ ನಡ್ಕೊಳ್ತಾ ಇರಿ
“ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ಪ್ರತಿದಿನ ತನ್ನ ಹಿಂಸಾ ಕಂಬ ಹೊತ್ಕೊಂಡು ನನ್ನ ಹಿಂದೆನೇ ಬರಲಿ.”—ಲೂಕ 9:23.
ಈ ಲೇಖನದಲ್ಲಿ ಏನಿದೆ?
ಸಮರ್ಪಣೆಯ ಸಮಯದಲ್ಲಿ ಕೊಟ್ಟ ಮಾತಿಗೆ ತಕ್ಕ ಹಾಗೆ ಜೀವಿಸೋಕೆ ನಮ್ಮೆಲ್ರಿಗೂ ಈ ಲೇಖನ ಸಹಾಯ ಮಾಡುತ್ತೆ. ಅದ್ರಲ್ಲೂ ಇತ್ತೀಚಿಗೆ ದೀಕ್ಷಾಸ್ನಾನ ತಗೊಂಡವರು ಯೆಹೋವನಿಗೆ ನಿಯತ್ತಾಗಿ ಇರೋಕೆ ಇದು ಇನ್ನೂ ಸಹಾಯ ಮಾಡುತ್ತೆ.
1-2. ದೀಕ್ಷಾಸ್ನಾನ ತಗೊಂಡ ಮೇಲೆ ನಮಗೆ ಯಾವ ಆಶೀರ್ವಾದಗಳು ಸಿಗುತ್ತೆ?
ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಗಳ ಕುಟುಂಬದಲ್ಲಿ ನಾವೂ ಒಬ್ರಾದಾಗ ನಮಗೆ ತುಂಬ ಖುಷಿಯಾಗುತ್ತೆ. ನಾವು ಯೆಹೋವನ ಫ್ರೆಂಡ್ಸ್ ಅಂತ ಹೇಳ್ಕೊಳ್ಳೋಕೆ ಹೆಮ್ಮೆ ಆಗುತ್ತೆ. ಅದಕ್ಕೇ ದಾವೀದ ಯೆಹೋವನಿಗೆ “ನಿನ್ನ ಅಂಗಳದಲ್ಲಿ ವಾಸಿಸೋಕೆ ನೀನು ಯಾರನ್ನ ಆರಿಸಿಕೊಳ್ತೀಯೋ ನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ” ಅಂತ ಹೇಳಿದ. ಆ ಮಾತು ನೂರಕ್ಕೆ ನೂರು ಸತ್ಯ.—ಕೀರ್ತ. 65:4.
2 ಆದ್ರೆ ಯೆಹೋವ ಎಲ್ರನ್ನೂ ತನ್ನ ಅಂಗಳಕ್ಕೆ ಬನ್ನಿ ಅಂತ ಕರಿಯಲ್ಲ. ಹಿಂದಿನ ಲೇಖನದಲ್ಲಿ ಕಲಿತ ಹಾಗೆ ಯಾರಿಗೆ ಆತನ ಸ್ನೇಹಿತರಾಗೋ ಆಸೆ ಇದ್ಯೋ ಅವ್ರನ್ನ ಮಾತ್ರ ತನ್ನ ಹತ್ರ ಸೆಳಿತಾನೆ. (ಯಾಕೋ. 4:8) ನೀವು ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಂಡ್ರೆ ಆತನಿಗೆ ಇನ್ನೂ ಹತ್ರ ಆಗ್ತೀರ. ಆಗ ಯೆಹೋವ ‘ನಿಮಗೆ ಯಾವ ವಿಷ್ಯದಲ್ಲೂ ಕೊರತೆಯಾಗದ ಹಾಗೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತಾನೆ.’—ಮಲಾ. 3:10; ಯೆರೆ. 17:7, 8.
3. ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ಪಡ್ಕೊಂಡವರು ಏನು ಮಾಡಬೇಕು? (ಪ್ರಸಂಗಿ 5:4, 5)
3 ದೀಕ್ಷಾಸ್ನಾನ ಅನ್ನೋದು ಯೆಹೋವನ ಸೇವೆ ಮಾಡೋಕೆ ಇರೋ ಮೊದಲನೇ ಹೆಜ್ಜೆ. ನೀವು ಆ ಹೆಜ್ಜೆಯನ್ನ ತಗೊಂಡ ಮೇಲೆ ಸಮರ್ಪಣೆಯ ಸಮಯದಲ್ಲಿ ಯೆಹೋವನಿಗೆ ಕೊಟ್ಟ ಮಾತಿಗೆ ತಕ್ಕ ಹಾಗೆ ಜೀವಿಸಬೇಕು. ಎಷ್ಟೇ ಕಷ್ಟ ಪರೀಕ್ಷೆಗಳು ಬಂದ್ರೂ, ತಪ್ಪು ಮಾಡೋಕೆ ನಿಮ್ಮ ಮನಸ್ಸು ಎಳಿತಾ ಇದ್ರೂ ಆತನಿಗೆ ನಿಯತ್ತಾಗಿ ಇರಬೇಕು. (ಪ್ರಸಂಗಿ 5:4, 5 ಓದಿ.) ಅಷ್ಟೇ ಅಲ್ಲ ನೀವು ಯೇಸುವಿನ ಶಿಷ್ಯರಾಗಿ ಇರೋದ್ರಿಂದ ಆತನ ತರನೇ ಇರೋಕೆ, ಆತನು ಕೊಟ್ಟ ಆಜ್ಞೆಗಳನ್ನ ಪಾಲಿಸೋಕೆ ತುಂಬ ಪ್ರಯತ್ನ ಮಾಡಬೇಕು. (ಮತ್ತಾ. 28:19, 20; 1 ಪೇತ್ರ 2:21) ಅದಕ್ಕೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.
ಎಷ್ಟೇ ಕಷ್ಟ ಪರೀಕ್ಷೆಗಳು ಬಂದ್ರೂ ಯೇಸು ತರ ನಡ್ಕೊಳ್ತಿರಿ
4. “ಹಿಂಸಾ ಕಂಬ” ಹೊತ್ಕೊಳ್ಳೋದು ಅಂದ್ರೇನು? (ಲೂಕ 9:23)
4 ದೀಕ್ಷಾಸ್ನಾನ ಆದ್ಮೇಲೆ ನಿಮ್ಮ ಜೀವನದಲ್ಲಿ ಕಷ್ಟಗಳೇ ಬರಲ್ಲ ಅಂತ ಹೇಳೋಕೆ ಆಗಲ್ಲ. ಯಾಕಂದ್ರೆ ಯೇಸು, ಯಾರೆಲ್ಲ ತನ್ನ ಶಿಷ್ಯರಾಗ್ತಾರೋ ಅವರು ತಮ್ಮ “ಹಿಂಸಾ ಕಂಬ” ಹೊತ್ಕೊಬೇಕು ಅಂತ ಹೇಳಿದನು. ಅದನ್ನ ಯಾವಾಗ್ಲೋ ಒಂದು ಸಲ ಅಲ್ಲ, “ಪ್ರತಿದಿನ” ಹೊತ್ಕೊಬೇಕು. (ಲೂಕ 9:23 ಓದಿ.) ಇದ್ರ ಅರ್ಥ, ಆತನ ಶಿಷ್ಯರು ಯಾವಾಗ್ಲೂ ಕಷ್ಟದಲ್ಲೇ ಇರ್ತಾರೆ ಅಂತಾನಾ? ಅಲ್ಲ. ಅವ್ರ ಜೀವನದಲ್ಲಿ ಆಶೀರ್ವಾದಗಳೂ ಇರುತ್ತೆ ಅದ್ರ ಜೊತೆಗೆ ಕಷ್ಟಗಳನ್ನೂ ಅನುಭವಿಸಬೇಕಾಗುತ್ತೆ. ಅದ್ರಲ್ಲೂ ಕೆಲವು ಕಷ್ಟಗಳನ್ನ ಸಹಿಸ್ಕೊಳ್ಳೋಕೇ ಆಗಲ್ಲ ಅಂತ ಅವ್ರಿಗೆ ಅನಿಸಿಬಿಡುತ್ತೆ.—2 ತಿಮೊ. 3:12.
5. ತ್ಯಾಗಗಳನ್ನ ಮಾಡಿದ್ರೆ ಯಾವ ಆಶೀರ್ವಾದಗಳು ಸಿಗುತ್ತೆ ಅಂತ ಯೇಸು ಹೇಳಿದನು?
5 ನಿಮ್ಮಲ್ಲಿ ಕೆಲವರು ಕುಟುಂಬದವ್ರಿಂದಾನೇ ಹಿಂಸೆ ಅನುಭವಿಸ್ತಾ ಇರಬಹುದು. ಇನ್ನು ಕೆಲವರು ಯೆಹೋವನ ಸೇವೆ ಜಾಸ್ತಿ ಮಾಡೋಕೆ ಹಣ, ಆಸ್ತಿನೆಲ್ಲ ಬಿಟ್ಟು ಬಂದಿರಬಹುದು. (ಮತ್ತಾ. 6:33) ನೀವು ಮಾಡೋ ಈ ತ್ಯಾಗಗಳನ್ನ ಯೆಹೋವ ನೋಡ್ತಿದ್ದಾನೆ ಅನ್ನೋದನ್ನ ಯಾವತ್ತೂ ಮರಿಬೇಡಿ. (ಇಬ್ರಿ. 6:10) ಯೇಸು ತನ್ನ ಶಿಷ್ಯರಿಗೆ, “ನನ್ನ ಶಿಷ್ಯರಾಗಿರೋ ಕಾರಣ ಮತ್ತು ಸಿಹಿಸುದ್ದಿಯ ಕಾರಣ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಪ್ಪಅಮ್ಮ, ಮಕ್ಕಳು, ಹೊಲಗದ್ದೆಯನ್ನ ಬಿಟ್ಟುಬಂದವನಿಗೆ ಈಗಿನ ಲೋಕದಲ್ಲಿ ಹಿಂಸೆಯ ಜೊತೆಗೆ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಮ್ಮ, ಮಕ್ಕಳು, ಹೊಲ ನೂರರಷ್ಟು ಸಿಗುತ್ತೆ ಮತ್ತು ಮುಂದೆ ಬರೋ ಹೊಸ ಲೋಕದಲ್ಲಿ ಶಾಶ್ವತ ಜೀವ ಸಿಗುತ್ತೆ” ಅಂತ ಹೇಳಿದನು. (ಮಾರ್ಕ 10:29, 30) ಈ ಮಾತು ನಿಮ್ಮ ಜೀವನದಲ್ಲೂ ನಿಜ ಆಗಿದೆ ಅಲ್ವಾ? ನಿಮಗೆ ಸಿಕ್ಕಿರೋ ಆಶೀರ್ವಾದಗಳಿಗೆ ಹೋಲಿಸಿದ್ರೆ ನೀವು ಮಾಡಿರೋ ತ್ಯಾಗಗಳು ಏನೇನೂ ಅಲ್ಲ ಅಂತ ನಿಮಗೆ ಅನಿಸಿರಬಹುದು.—ಕೀರ್ತ. 37:4.
6. ದೀಕ್ಷಾಸ್ನಾನ ಆದ್ಮೇಲೂ “ಕೆಟ್ಟ ವಿಷ್ಯಗಳ ಮೇಲೆ ಆಸೆ” ಬರದೇ ಇರೋ ತರ ನಾವ್ಯಾಕೆ ನೋಡ್ಕೋಬೇಕು?
6 ನಾವು ಅಪರಿಪೂರ್ಣರಾಗಿರೋದ್ರಿಂದ ದೀಕ್ಷಾಸ್ನಾನ ಆದ್ಮೇಲೂ ಕೆಲಮೊಮ್ಮೆ “ಕೆಟ್ಟ ವಿಷ್ಯಗಳ ಮೇಲೆ ಆಸೆ” ಬಂದುಬಿಡುತ್ತೆ. (1 ಯೋಹಾ. 2:16) ಆದ್ರೆ ಅದ್ರ ವಿರುದ್ಧ ಹೋರಾಡ್ತಾ ಇರುವಾಗ ಕೆಲವೊಮ್ಮೆ ನಮಗೆ ಅಪೊಸ್ತಲ ಪೌಲನ ತರ ಅನಿಸಬಹುದು. ಅವನು, “ನಾನು ದೇವರ ನಿಯಮವನ್ನ ಮನಸಾರೆ ತುಂಬ ಇಷ್ಟಪಡ್ತೀನಿ. ಆದ್ರೆ ನನ್ನ ದೇಹದಲ್ಲಿ ಪಾಪದ ನಿಯಮ ಇದೆ. ಅದು ನನ್ನ ಮನಸ್ಸಿನ ನಿಯಮದ ವಿರುದ್ಧ ಹೋರಾಡುತ್ತೆ ಮತ್ತು ನನ್ನನ್ನ ನನ್ನ ದೇಹದಲ್ಲಿರೋ ಪಾಪಕ್ಕೆ ಕೈದಿಯಾಗಿ ಮಾಡುತ್ತೆ” ಅಂತ ಹೇಳಿದ. (ರೋಮ. 7:22, 23) ಅವನ ತರ ನಿಮಗೂ ಕೆಟ್ಟ ಆಸೆಗಳ ವಿರುದ್ಧ ಹೋರಾಡ್ತಾ ಹೋರಾಡ್ತಾ ಸಾಕಾಗಿ ಬಿಡಬಹುದು. ಆಗ ಏನು ಮಾಡೋದು? ಸಮರ್ಪಣೆಯ ಸಮಯದಲ್ಲಿ ನೀವು ಯೆಹೋವನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಳ್ಳಿ. ಆಗ ನಿಮಗೆ ಶಕ್ತಿ ಸಿಗುತ್ತೆ. ಅದು ಹೇಗೆ ಅಂತ ನೋಡೋಣ.
7. ಯೆಹೋವನಿಗೆ ನಿಮ್ಮನ್ನ ಸಮರ್ಪಿಸ್ಕೊಳ್ಳೋದು ಆತನಿಗೆ ನಿಯತ್ತಾಗಿ ಇರೋಕೆ ಹೇಗೆ ಸಹಾಯ ಮಾಡುತ್ತೆ?
7 ನೀವು ಯೆಹೋವನಿಗೆ ಸಮರ್ಪಿಸ್ಕೊಂಡ ಮೇಲೆ ಇನ್ಮುಂದೆ ನಿಮಗೋಸ್ಕರ ಜೀವಿಸಲ್ಲ. ಅಂದ್ರೆ, ನಿಮಗೆ ಇಷ್ಟ ಆಗಿರೋ ವಿಷ್ಯಗಳು ಅಥವಾ ಗುರಿಗಳು ಯೆಹೋವನಿಗೆ ಇಷ್ಟ ಇಲ್ಲಾಂದ್ರೆ ಅದನ್ನ ಬಿಟ್ಟುಬಿಡ್ತೀರ. (ಮತ್ತಾ. 16:24) ಯಾಕಂದ್ರೆ ‘ಏನೇ ಆದ್ರೂ ನಾನು ಯಾವಾಗ್ಲೂ ಯೆಹೋವನಿಗೆ ನಿಯತ್ತಾಗಿ ಇರ್ತೀನಿ, ಆತನಿಗಿಷ್ಟ ಆಗಿರೋದನ್ನೇ ಮಾಡ್ತೀನಿ’ ಅಂತ ನೀವು ಈಗಾಗ್ಲೆ ತೀರ್ಮಾನ ಮಾಡಿರ್ತೀರ. ಹಾಗಾಗಿ ಪರೀಕ್ಷೆಗಳು ಬಂದಾಗ ‘ನಾನೇನು ಮಾಡಬೇಕು’ ಅಂತ ಯೋಚ್ನೆ ಮಾಡ್ತಾ ಕೂರಲ್ಲ. ಬದ್ಲಿಗೆ ಎಷ್ಟೇ ಕಷ್ಟ ಬಂದ್ರೂ “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!” ಅಂತ ಯೋಬನ ತರ ಹೇಳ್ತೀರ.—ಯೋಬ 27:5.
8. ಸಮರ್ಪಣೆ ಸಮಯದಲ್ಲಿ ನೀವು ಮಾಡಿದ ಪ್ರಾರ್ಥನೆಯನ್ನ ಯಾಕೆ ನೆನಸ್ಕೊಬೇಕು?
8 ಸಮರ್ಪಣೆ ಸಮಯದಲ್ಲಿ ನೀವು ಮಾಡಿದ ಪ್ರಾರ್ಥನೆಯನ್ನ ನೆನಸ್ಕೊಂಡಾಗ್ಲೂ, ಕೆಟ್ಟ ಆಸೆಗಳು ನಿಮ್ಮ ಮನಸ್ಸಲ್ಲಿ ಬರದೇ ಇರೋ ತರ ನೋಡ್ಕೊಳ್ಳೋಕೆ ಆಗುತ್ತೆ. ಉದಾಹರಣೆಗೆ, ಮದುವೆ ಆಗಿರೋರ ಜೊತೆ ನೀವು ಚೆಲ್ಲಾಟ ಆಡೋಕೆ ಹೋಗಲ್ಲ. ಯಾಕಂದ್ರೆ ಇಂಥ ವಿಷ್ಯಗಳನ್ನ ಮಾಡಲ್ಲ ಅಂತ ಈಗಾಗ್ಲೆ ನೀವು ಯೆಹೋವನಿಗೆ ಮಾತು ಕೊಟ್ಟಿದ್ದೀರ. ಇಂಥ ಕೆಟ್ಟ ಆಸೆಗಳು ನಿಮ್ಮ ಹೃದಯದಲ್ಲಿ ಬೆಳಿದೇ ಇರೋ ತರ ನೋಡ್ಕೊಂಡ್ರೆ, ಅದ್ರಿಂದ ಹೊರಗೆ ಬರೋಕೆ ಆಮೇಲೆ ನೀವು ಕಷ್ಟ ಪಡಬೇಕಾದ ಪರಿಸ್ಥಿತಿ ಬರಲ್ಲ. ಹೀಗೆ “ಕೆಟ್ಟವರ ದಾರಿಯಲ್ಲಿ” ಕಾಲು ಇಡದೆ ನೀವು “ದೂರ” ಇರ್ತೀರ.—ಜ್ಞಾನೋ. 4:14, 15.
9. ಸಮರ್ಪಣೆಯ ಸಮಯದಲ್ಲಿ ಮಾಡಿದ ಪ್ರಾರ್ಥನೆ ನೆನಸ್ಕೊಂಡ್ರೆ ಯೆಹೋವನಿಗೆ ಮೊದಲ ಸ್ಥಾನ ಕೊಡೋಕೆ ಹೇಗೆ ಸಹಾಯ ಆಗುತ್ತೆ?
9 ಕೂಟಗಳಿಗೆ ಹೋಗೋಕೆ ಕಷ್ಟ ಆಗೋ ತರ ಕೆಲಸ ಸಿಕ್ಕಿದ್ರೆ ನೀವೇನು ಮಾಡ್ತೀರ? ತಕ್ಷಣ ಅದನ್ನ ಬೇಡ ಅಂತ ಹೇಳ್ತೀರ ಅಲ್ವಾ? ಯಾಕಂದ್ರೆ, ‘ಅಂಥ ಕೆಲಸ ಸಿಕ್ಕಿದ್ರೆ ಅದಕ್ಕೆ ನಾನು ಹೋಗಲ್ಲ’ ಅಂತ ಮುಂಚೆನೇ ನೀವು ತೀರ್ಮಾನ ಮಾಡಿರ್ತೀರ. ಇದ್ರಿಂದ ನೀವು ಆ ಕೆಲಸಕ್ಕೆ ಸೇರ್ಕೊಂಡ ಮೇಲೆ ಯೆಹೋವನಿಗೆ ಇಷ್ಟ ಆಗಿರೋದನ್ನ ಮಾಡೋಕೆ ಒದ್ದಾಡಬೇಕಾಗಿ ಬರಲ್ಲ. ಯೇಸು ಕೂಡ ಯಾವಾಗ್ಲೂ ಯೆಹೋವನಿಗೆ ಏನಿಷ್ಟಾನೋ ಅದನ್ನೇ ಮಾಡಬೇಕು ಅಂತ ತೀರ್ಮಾನ ಮಾಡಿದ್ದನು. ನೀವೂ ಯೇಸು ತರ ಇದ್ರೆ ಯೆಹೋವನಿಗೆ ಇಷ್ಟ ಆಗದೇ ಇರೋ ವಿಷ್ಯಗಳನ್ನ ಯಾವತ್ತೂ ಮಾಡೋಕೆ ಹೋಗಲ್ಲ, ತಕ್ಷಣ ಅದನ್ನ ‘ಬೇಡ’ ಅಂತ ಹೇಳ್ತೀರ.—ಮತ್ತಾ. 4:10; ಯೋಹಾ. 8:29.
10. ದೀಕ್ಷಾಸ್ನಾನ ಆದ್ಮೇಲೂ ಯೇಸು ತರ ನಡ್ಕೊಳ್ಳೋಕೆ ಯೆಹೋವ ಹೇಗೆ ಸಹಾಯ ಮಾಡ್ತಾನೆ?
10 ನಿಜ ಹೇಳಬೇಕಂದ್ರೆ ಕಷ್ಟ ಪರೀಕ್ಷೆಗಳು ಬಂದಾಗ್ಲೇ ನಾವು ಯೇಸು ತರ ನಡ್ಕೊಳ್ಳೋಕೆ ತೀರ್ಮಾನ ಮಾಡಿದ್ದೀವಿ ಅಂತ ತೋರಿಸೋಕೆ ಆಗೋದು. ಯೇಸು ತರ ನಡ್ಕೊಳ್ಳೋಕೆ ಯೆಹೋವನೂ ನಿಮಗೆ ಸಹಾಯ ಮಾಡ್ತಾನೆ. ಅದಕ್ಕೇ ಬೈಬಲ್ “ದೇವರು ನಂಬಿಗಸ್ತನು, ನಿಮಗೆ ಸಹಿಸ್ಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ. ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ” ಅಂತ ಹೇಳುತ್ತೆ.—1 ಕೊರಿಂ. 10:13.
ಯೇಸು ತರ ನಡ್ಕೊಳ್ತಾ ಇರೋಕೆ ನಾವೇನು ಮಾಡಬೇಕು?
11. ಯೇಸು ತರ ನಡ್ಕೊಳ್ತಾ ಇರೋಕೆ ನಾವೇನು ಮಾಡಬೇಕು? (ಚಿತ್ರನೂ ನೋಡಿ.)
11 ಯೇಸು ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡ್ತಿದ್ದನು, ಆತನಿಗೆ ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ದನು. ಇದ್ರಿಂದ ಯೆಹೋವನ ಜೊತೆ ಆತನಿಗೆ ಒಳ್ಳೇ ಫ್ರೆಂಡ್ಶಿಪ್ ಬೆಳೆಸ್ಕೊಳ್ಳೋಕೆ ಆಯ್ತು. (ಲೂಕ 6:12) ನಾವೂ ಯೇಸು ತರ ನಡ್ಕೊಬೇಕಂದ್ರೆ, ಯೆಹೋವನಿಗೆ ಹತ್ರ ಆಗೋಕೆ ಸಹಾಯ ಮಾಡೋ ಎಲ್ಲಾ ವಿಷ್ಯಗಳನ್ನ ಮಾಡ್ತಾ ಇರಬೇಕು. ಅದಕ್ಕೇ ಬೈಬಲ್ ನಮಗೆ, “ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ” ಅಂತ ಹೇಳುತ್ತೆ. (ಫಿಲಿ. 3:16) ಕೆಲವರು ಯೆಹೋವನ ಸೇವೆ ಜಾಸ್ತಿ ಮಾಡೋಕೆ ರಾಜ್ಯ ಪ್ರಚಾರಕರ ಶಾಲೆಗೆ ಹೋಗಿರಬಹುದು. ಇನ್ನು ಕೆಲವರು ಅಗತ್ಯ ಇರೋ ಕಡೆ ಹೋಗಿರಬಹುದು. ಅವ್ರ ಅನುಭವಗಳನ್ನ ಕೇಳಿ ನಿಮಗೂ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅಂತ ಅನಿಸಿರಬಹುದು. ಹಾಗಾಗಿ, ನೀವು ಆ ಗುರಿಗಳನ್ನ ಇಡೋಕೆ ಆಗುತ್ತಾ ಅಂತ ಯೋಚಿಸಿ. (ಅ. ಕಾ. 16:9) ಆದ್ರೆ ಈಗ, ನೀವಿರೋ ಪರಿಸ್ಥಿತಿಯಲ್ಲಿ ಯೆಹೋವನ ಸೇವೆ ಜಾಸ್ತಿ ಮಾಡೋಕೆ ಆಗ್ತಿಲ್ಲ ಅಂದ್ರೆ ಬೇಜಾರ್ ಮಾಡ್ಕೊಬೇಡಿ. ನೀವು ಬೇರೆಯವ್ರಿಗಿಂತ ಕೀಳು ಅಂತ ಅಂದ್ಕೊಬೇಡಿ. ಕೊನೆವರೆಗೂ ತಾಳ್ಕೊಳ್ಳೋದೇ ಎಲ್ಲಕ್ಕಿಂತ ಮುಖ್ಯ ಅನ್ನೋದನ್ನ ನೆನಪಿಡಿ. (ಮತ್ತಾ. 10:22) ಹಾಗಾಗಿ ನಿಮ್ಮ ಪರಿಸ್ಥಿತಿ ಹೇಗೆ ಇದ್ರೂ ನಿಮ್ಮಿಂದ ಎಷ್ಟಾಗುತ್ತೋ ಅಷ್ಟು ಸೇವೆ ಮಾಡಿ. ಆಗ ಯೆಹೋವನ ಮನಸ್ಸನ್ನ ಖುಷಿಪಡಿಸ್ತೀರ ಮತ್ತು ಯೇಸು ತರ ನಡ್ಕೊಳ್ತಾ ಇದ್ದೀರ ಅಂತಾನೂ ತೋರಿಸ್ತೀರ.—ಕೀರ್ತ. 26:1.
12-13. ನಿಮಗೆ ಯೆಹೋವನ ಸೇವೆ ಮಾಡೋಕೆ ಉತ್ಸಾಹ ಕಮ್ಮಿ ಆಗ್ತಿದೆ ಅನಿಸಿದ್ರೆ ಏನು ಮಾಡಬೇಕು? (1 ಕೊರಿಂಥ 9:16, 17) (“ಓಡ್ತಾ ಇರಿ” ಅನ್ನೋ ಚೌಕ ನೋಡಿ.)
12 ನೀವು ದೇವರಿಗೆ ಮನಸಾರೆ ಪ್ರಾರ್ಥನೆ ಮಾಡ್ತಿಲ್ಲ, ಸೇವೆ ಮಾಡ್ತಿಲ್ಲ ಅಂತ ಅನಿಸ್ತಾ ಇದ್ಯಾ? ಬೈಬಲನ್ನ ಮುಂಚಿನ ತರ ಇಷ್ಟಪಟ್ಟು ಓದೋಕೆ ಆಗ್ತಾ ಇಲ್ಲ ಅಂತ ಅನಿಸ್ತಾ ಇದ್ಯಾ? ಒಂದುವೇಳೆ ದೀಕ್ಷಾಸ್ನಾನ ಆದ್ಮೇಲೂ ನಿಮಗೆ ಈ ತರ ಅನಿಸ್ತಿದ್ರೆ, ಯೆಹೋವ ನಿಮಗೆ ಸಹಾಯ ಮಾಡ್ತಿಲ್ಲ ಅಂತ ಅಂದ್ಕೊಬೇಡಿ. ನಾವು ಅಪರಿಪೂರ್ಣರಾಗಿರೋದ್ರಿಂದ ಆಗಾಗ ಈ ತರ ಅನಿಸುತ್ತೆ. ಹಾಗಾಗಿ ನಿಮಗೆ ಉತ್ಸಾಹ ಕಡಿಮೆ ಆಗ್ತಿದೆ ಅಂತ ಅನಿಸಿದ್ರೆ ಅಪೊಸ್ತಲ ಪೌಲನನ್ನ ನೆನಪಿಸ್ಕೊಳ್ಳಿ. ಅವನಿಗೂ ಯೇಸು ತರ ಇರೋಕೆ ತುಂಬ ಇಷ್ಟ ಇತ್ತು. ಆದ್ರೆ ಕೆಲವೊಮ್ಮೆ ಆ ತರ ನಡ್ಕೊಳ್ಳೋಕೆ ಕಷ್ಟ ಆಗ್ತಿತ್ತು. (1 ಕೊರಿಂಥ 9:16, 17 ಓದಿ.) ಅದಕ್ಕೇ ಅವನು, “ಒಂದುವೇಳೆ ಇಷ್ಟ ಇಲ್ದೆ [ಸಿಹಿಸುದ್ದಿ ಸಾರಿದ್ರೂ] ದೇವರು ನನಗೆ ಕೊಟ್ಟಿರೋ ಜವಾಬ್ದಾರಿಯನ್ನೇ ಮಾಡ್ತಾ ಇದ್ದೀನಿ” ಅಂತ ಹೇಳಿದ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ, ಅಪೊಸ್ತಲ ಪೌಲನಿಗೆ ಸೇವೆ ಮಾಡೋಕೆ ಕೆಲವೊಂದು ಸಲ ಮನಸ್ಸಿಲ್ಲ ಅಂತ ಅನಿಸಿದ್ರೂ ಅದನ್ನ ಮಾಡಿ ಮುಗಿಸಿದ.
13 ಅಪರಿಪೂರ್ಣರಾಗಿರೋದ್ರಿಂದ ನಮಗೆ ಕೆಲವೊಮ್ಮೆ ಯೆಹೋವನ ಸೇವೆ ಮಾಡೋಕೆ ಉತ್ಸಾಹ ಕಮ್ಮಿ ಆಗಿಬಿಡುತ್ತೆ. ಆಗ ಅದನ್ನೇ ಮನಸ್ಸಲ್ಲಿ ಇಟ್ಕೊಂಡು ಒಂದು ತೀರ್ಮಾನಕ್ಕೆ ಬಂದುಬಿಡಬೇಡಿ. ಉತ್ಸಾಹ ಕಮ್ಮಿ ಆದ್ರೂ ಯಾವುದು ಸರಿನೋ ಅದನ್ನೇ ಮಾಡ್ತಾ ಇರಿ. ಈ ತರ ಮಾಡಿದ್ರೆ, ಸಮಯ ಹೋದ ಹಾಗೆ ನಿಮ್ಮ ಯೋಚ್ನೆನೂ ಬದಲಾಗುತ್ತೆ. ಬೈಬಲ್ ಓದೋದನ್ನ, ಪ್ರಾರ್ಥನೆ ಮಾಡೋದನ್ನ, ಕೂಟಗಳಿಗೆ ಹೋಗೋದನ್ನ, ಸಿಹಿಸುದ್ದಿ ಸಾರೋದನ್ನ ಬಿಟ್ಟುಬಿಡಬೇಡಿ. ಆಗ ನೀವು ಯೇಸು ತರ ನಡ್ಕೊಳ್ತಾ ಇರೋಕೆ ಆಗುತ್ತೆ ಮತ್ತು ನಿಮ್ಮನ್ನ ನೋಡಿ ಬೇರೆಯವ್ರಿಗೂ ಪ್ರೋತ್ಸಾಹ ಸಿಗುತ್ತೆ.—1 ಥೆಸ. 5:11.
ನಿಮ್ಮನ್ನ “ಪರೀಕ್ಷಿಸ್ಕೊಳ್ತಾ ಇರಿ”
14. ನೀವು ಆಗಾಗ ಏನಂತ ಪರೀಕ್ಷಿಸ್ಕೊಬೇಕು ಮತ್ತು ಯಾಕೆ? (2 ಕೊರಿಂಥ 13:5)
14 ದೀಕ್ಷಾಸ್ನಾನ ಆದ್ಮೇಲೂ ನೀವು ನಿಮ್ಮನ್ನ ಪರೀಕ್ಷಿಸ್ಕೊಳ್ತಾ ಇರಬೇಕು. (2 ಕೊರಿಂಥ 13:5 ಓದಿ.) ನೀವು ದಿನಾ ಪ್ರಾರ್ಥನೆ ಮಾಡ್ತಿದ್ದೀರಾ? ಬೈಬಲ್ ಓದ್ತಾ ಇದ್ದೀರಾ? ಯಾವಾಗ್ಲೂ ಕೂಟಗಳಿಗೆ ಹೋಗ್ತಾ ಇದ್ದೀರಾ? ಸಿಹಿಸುದ್ದಿ ಸಾರುತ್ತಾ ಇದ್ದೀರಾ? ಅಂತ ಆಗಾಗ ಯೋಚ್ನೆ ಮಾಡಿ. ಆಗ ಖುಷಿಖುಷಿಯಾಗಿ ನಿಮಗೆ ಯೆಹೋವನ ಸೇವೆ ಮಾಡೋಕೆ ಆಗುತ್ತೆ. ನಿಮಗೆ ಇನ್ನೂ ಕೆಲವು ಪ್ರಶ್ನೆಗಳು ಸಹಾಯ ಮಾಡುತ್ತೆ. ‘ನನಗೆ ಬೈಬಲಲ್ಲಿರೋ ಮುಖ್ಯ ವಿಷ್ಯಗಳನ್ನ ಬೇರೆಯವ್ರಿಗೆ ವಿವರಿಸೋಕೆ ಆಗ್ತಾ ಇದ್ಯಾ? ನಾನು ಇನ್ನೂ ಚೆನ್ನಾಗಿ ಸೇವೆ ಮಾಡೋಕೆ ಏನೆಲ್ಲಾ ಮಾಡಬೇಕು? ನನಗೇನು ಬೇಕೋ ಆ ವಿಷ್ಯ ಹೇಳಿ ಯೆಹೋವನ ಹತ್ರ ಪ್ರಾರ್ಥಿಸ್ತೀನಾ? ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದೀನಿ ಅಂತ ನನ್ನ ಪ್ರಾರ್ಥನೆ ತೋರಿಸ್ಕೊಡುತ್ತಾ? ನಾನು ಯಾವಾಗ್ಲೂ ಕೂಟಗಳಿಗೆ ಹೋಗ್ತೀನಾ? ಅಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ತೀನಾ ಮತ್ತು ಉತ್ರ ಕೊಡ್ತೀನಾ?’ ಅಂತ ಕೇಳ್ಕೊಳ್ಳಿ.
15-16. ಸಹೋದರ ರಾಬರ್ಟ್ನಿಂದ ನೀವೇನು ಕಲಿತ್ರಿ?
15 ನಿಮ್ಮಲ್ಲಿ ಯಾವ ಕೊರತೆ ಇದೆ ಅಂತ ಪರೀಕ್ಷಿಸ್ಕೊಬೇಕು. ಇದನ್ನೇ ಸಹೋದರ ರಾಬರ್ಟ್ ಮಾಡಿದ್ರು. “ನಾನು 20 ವಯಸ್ಸಲ್ಲಿ ಇದ್ದಾಗ ಒಂದು ಪಾರ್ಟ್ ಟೈಮ್ ಕೆಲಸ ಮಾಡ್ತಿದ್ದೆ. ಒಂದಿನ ಕೆಲಸ ಮುಗಿದ್ಮೇಲೆ ನಮ್ಮ ಆಫಿಸ್ನಲ್ಲಿದ್ದ ಒಬ್ಬ ಹುಡುಗಿ ಬಂದು ‘ನಾನು ಮನೆಯಲ್ಲಿ ಒಬ್ಬಳೇ ಇರ್ತೀನಿ, ನೀನು ಬಾ’ ಅಂತ ಕರೆದಳು. ಮೊದಮೊದ್ಲು ನಾನು ಏನಾದ್ರೂ ಒಂದು ನೆಪ ಕೊಟ್ಟು ನಂಗೆ ಬರೋಕಾಗಲ್ಲ ಅಂತ ಹೇಳ್ತಿದ್ದೆ. ಆದ್ರೆ ಕೊನೆಗೆ ಒಂದಿನ ನೆರವಾಗಿ ಅವಳ ಹತ್ರ ‘ಬರಲ್ಲ’ ಅಂತ ಹೇಳಿದೆ. ಅಷ್ಟೇ ಅಲ್ಲ ಯಾಕೆ ಬರಲ್ಲ ಅಂತಾನೂ ಹೇಳಿದೆ” ಅಂತ ರಾಬರ್ಟ್ ಹೇಳ್ತಾರೆ. ರಾಬರ್ಟ್ ತಪ್ಪಾದ ವಿಷ್ಯಗಳನ್ನ ಮಾಡ್ದೇ ಇದ್ದಿದ್ದು ಒಳ್ಳೆದೇ ಆಯ್ತು. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ಆ ಸಮಸ್ಯೆನ ಹೇಗೆ ನಿಭಾಯಿಸಬಹುದಿತ್ತು ಅಂತ ಯೋಚ್ನೆ ಮಾಡಿದ್ರು. ಅವರು ಅದ್ರ ಬಗ್ಗೆ ಹೀಗೆ ಹೇಳ್ತಾರೆ: “ಫೋಟೀಫರನ ಹೆಂಡತಿ ಯೋಸೇಫನಿಗೆ ಲೈಂಗಿಕ ಅನೈತಿಕತೆ ಮಾಡೋಕೆ ಕರೆದಾಗ ಅವನು ತಕ್ಷಣ ‘ನಾನು ಮಾಡಲ್ಲ’ ಅಂತ ಹೇಳಿದ. ನಾನೂ ಅವನ ತರ ತಕ್ಷಣ ಬರಲ್ಲ ಅಂತ ಹೇಳಬೇಕಿತ್ತು. (ಆದಿ. 39:7-9) ಆದ್ರೆ ಅದನ್ನ ಹೇಳೋಕೆ ನಾನೆಷ್ಟು ಕಷ್ಟಪಟ್ಟೆ ಅಂತ ಗೊತ್ತಾದಾಗ ನನಗೇ ಆಶ್ಚರ್ಯ ಆಯ್ತು. ಆಗ ಯೆಹೋವನ ಜೊತೆಗಿರೋ ನನ್ನ ಸ್ನೇಹನ ಇನ್ನೂ ಗಟ್ಟಿ ಮಾಡ್ಕೊಬೇಕು ಅಂತ ಅರ್ಥ ಆಯ್ತು.”
16 ನೀವೂ ಆಗಾಗ ರಾಬರ್ಟ್ ತರ ಪರೀಕ್ಷೆ ಮಾಡ್ಕೊಂಡ್ರೆ ತುಂಬ ಪ್ರಯೋಜನ ಸಿಗುತ್ತೆ. ತಪ್ಪಾದ ವಿಷ್ಯಗಳನ್ನ ಮಾಡೋಕೆ ಬೇರೆಯವರು ಒತ್ತಾಯ ಮಾಡಿದಾಗ ನೀವು ಮಾಡಲ್ಲ ಅಂತ ಹೇಳಿರಬಹುದು. ಆದ್ರೆ ಅದನ್ನ ಮಾಡಲ್ಲ ಅಂತ ಹೇಳೋಕೆ ಎಷ್ಟು ಸಮಯ ತಗೊಂಡ್ರಿ ಅಂತ ಯೋಚ್ನೆ ಮಾಡಿ. ಈ ವಿಷ್ಯದಲ್ಲಿ ನೀವು ಸರಿ ಮಾಡ್ಕೊಬೇಕು ಅಂತ ನಿಮಗೆ ಗೊತ್ತಾದ್ರೆ ಬೇಜಾರ್ ಮಾಡ್ಕೊಬೇಡಿ. ಯಾಕಂದ್ರೆ ನಿಮ್ಮಲ್ಲಿ ಯಾವ ಕೊರತೆ ಇದೆ ಅಂತ ನೀವೀಗ ಕಂಡು ಹಿಡಿದಿದ್ದೀರ, ಅದಕ್ಕೆ ಖುಷಿಪಡಿ. ಅಷ್ಟೇ ಅಲ್ಲ ‘ಇದನ್ನ ಸರಿ ಮಾಡ್ಕೊಳ್ಳೋಕೆ ಸಹಾಯ ಮಾಡಪ್ಪ’ ಅಂತ ನೀವು ಪ್ರಾರ್ಥಿಸಿ. ಯೆಹೋವ ನಿಮಗೆ ಸಹಾಯ ಮಾಡ್ತಾನೆ. ಅದ್ರ ಜೊತೆಗೆ ಯೆಹೋವನ ನೀತಿ ನಿಯಮಗಳ ಪ್ರಕಾರ ನಡೆಯೋಕೆ ನಿಮ್ಮ ಕೈಯಲ್ಲಿ ಆಗೋದನ್ನೆಲ್ಲ ಮಾಡಿ.—ಕೀರ್ತ. 139:23, 24.
17. ರಾಬರ್ಟ್ ಹೇಗೆ ಯೆಹೋವನ ಹೆಸ್ರಿಗೆ ಮಹಿಮೆ ಸಿಗೋ ಹಾಗೆ ಮಾಡಿದ್ರು?
17 ನಾವು ರಾಬರ್ಟ್ನಿಂದ ಇನ್ನೂ ಒಂದು ವಿಷ್ಯ ಕಲಿಬಹುದು. ಅದೇನು ಅಂತ ಅವ್ರೇ ಹೇಳ್ತಾರೆ: “ಆ ಹುಡುಗಿಗೆ ನಾನು ಬರಲ್ಲ ಅಂತ ಹೇಳಿದ ಮೇಲೆ ‘ನೀನು ಟೆಸ್ಟ್ನಲ್ಲಿ ಪಾಸ್ ಆಗಿಬಿಟ್ಟೆ’ ಅಂತ ಹೇಳಿದಳು. ನೀನು ಹೇಳ್ತಿರೋದು ನನಗೆ ಅರ್ಥ ಆಗ್ತಿಲ್ಲ ಅಂತ ಹೇಳಿದೆ. ಆಗ ಅವಳು, ‘ನಂಗೆ ಮುಂಚೆ ಒಬ್ಬ ಫ್ರೆಂಡ್ ಇದ್ದ. ಅವನು ಯೆಹೋವನ ಸಾಕ್ಷಿಯಾಗಿದ್ದ. ಅವನು ನನ್ನ ಹತ್ರ, ಯೆಹೋವನ ಸಾಕ್ಷಿಗಳಲ್ಲಿ ಎಲ್ಲ ಯುವ ಜನ್ರು ಹೊರಗಡೆ ಒಂಥರ, ಒಳಗಡೆ ಇನ್ನೊಂದು ಥರ ಇರ್ತಾರೆ. ಅವಕಾಶ ಸಿಕ್ಕಿದಾಗ ತಮ್ಮ ಬಣ್ಣ ತೋರಿಸ್ತಾರೆ ಅಂತ ಹೇಳಿದ್ದ. ಅದಕ್ಕೇ ನಾನು ನಿನ್ನ ಮೇಲೆ ಪ್ರಯೋಗ ಮಾಡ್ದೆ’ ಅಂದಳು. ಆಗ ನಂಗೆ ಯೆಹೋವ ದೇವರ ಹೆಸ್ರಿಗೆ ಮಹಿಮೆ ತಂದಿದ್ದಕ್ಕೆ ತುಂಬ ಖುಷಿ ಆಯ್ತು” ಅಂತ ರಾಬರ್ಟ್ ಹೇಳ್ತಾರೆ.
18. ದೀಕ್ಷಾಸ್ನಾನ ಆದ್ಮೇಲೂ ನೀವು ಏನು ಮಾಡ್ತಾ ಇರಬೇಕು? (“ಈ ಸರಣಿ ಲೇಖನಗಳು ನಿಮಗೆ ತುಂಬ ಇಷ್ಟ ಆಗುತ್ತೆ” ಅನ್ನೋ ಚೌಕ ನೋಡಿ.)
18 ನೀವು ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಂಡಾಗ ಆತನ ಹೆಸ್ರಿಗೆ ಬಂದಿರೋ ಕಳಂಕ ತೆಗೆದುಹಾಕೋಕೆ ಎಷ್ಟು ಆಸೆಯಿದೆ ಅಂತ ತೋರಿಸ್ಕೊಡ್ತೀರ. ಏನೇ ಕಷ್ಟ ಪರೀಕ್ಷೆಗಳು ಬಂದ್ರೂ ನೀವು ಆತನ ಕಡೆ ನಿಲ್ತೀರ. ನಿಮಗೆ ಬರ್ತಿರೋ ಕಷ್ಟ ಪರೀಕ್ಷೆಗಳನ್ನ ಎದುರಿಸೋಕೆ ಎಷ್ಟೆಲ್ಲ ಪ್ರಯತ್ನ ಮಾಡ್ತಿದ್ದೀರ ಅಂತ ಆತನು ನೋಡ್ತಿದ್ದಾನೆ ಮತ್ತು ನಿಮ್ಮನ್ನ ಆಶೀರ್ವದಿಸ್ತಾನೆ. ತನಗೆ ನಿಯತ್ತಾಗಿರೋಕೆ ಸಹಾಯನೂ ಮಾಡ್ತಾನೆ, ಪವಿತ್ರಶಕ್ತಿನೂ ಕೊಡ್ತಾನೆ. (ಲೂಕ 11:11-13) ಆಗ ನಿಮಗೆ ದೀಕ್ಷಾಸ್ನಾನ ಆದ್ಮೇಲೂ ಯೇಸು ತರ ನಡ್ಕೊಳ್ಳೋಕೆ ಖಂಡಿತ ಆಗುತ್ತೆ.
ನೀವೇನು ಹೇಳ್ತಿರಾ?
“ಪ್ರತಿದಿನ . . . ಹಿಂಸಾ ಕಂಬ” ಹೊತ್ಕೊಳ್ಳೋದು ಅಂದ್ರೇನು?
ದೀಕ್ಷಾಸ್ನಾನ ಆದ್ಮೇಲೂ ಯೇಸು ತರ ನಡ್ಕೊಳ್ತಾ ಇರೋಕೆ ಏನು ಮಾಡಬೇಕು?
ಸಮರ್ಪಣೆ ಸಮಯದಲ್ಲಿ ಮಾಡಿದ ಪ್ರಾರ್ಥನೆಯನ್ನ ನೆನಸ್ಕೊಳ್ಳೋದು, ನಿಯತ್ತಾಗಿ ಇರೋಕೆ ನಿಮಗೆ ಹೇಗೆ ಸಹಾಯ ಮಾಡುತ್ತೆ?
ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ