ಪುರಾತನ ಕಾಲದ ಕ್ರೀಡೆಗಳು ಮತ್ತು ಅವುಗಳಲ್ಲಿ ಜಯಿಸಲು ನೀಡಲಾದ ಪ್ರಮುಖತೆ
“ಹೋರಾಡುವವರೆಲ್ಲರು [“ಸ್ಪರ್ಧೆಯಲ್ಲಿ ಭಾಗವಹಿಸುವವರೆಲ್ಲರು,” NW] ಎಲ್ಲಾ ವಿಷಯಗಳಲ್ಲಿ ಮಿತವಾಗಿರುತ್ತಾರೆ.” “ಓಟದ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ, ಓಟಗಾರನು ಎಲ್ಲಾ ನಿಯಮಗಳನ್ನು ಪಾಲಿಸಬೇಕು.”—1 ಕೊರಿಂಥ 9:25; 2 ತಿಮೊಥೆಯ 2:5, ಪರಿಶುದ್ಧ ಬೈಬಲ್a.
ಇಲ್ಲಿ ಅಪೊಸ್ತಲ ಪೌಲನು ಸೂಚಿಸುತ್ತಿದ್ದ ಪಂದ್ಯಗಳು, ಪುರಾತನ ಗ್ರೀಕ್ ನಾಗರಿಕತೆಯಲ್ಲಿ ಒಂದು ಪ್ರಾಮುಖ್ಯ ಅಂಶವಾಗಿತ್ತು. ಅಂಥ ಸ್ಪರ್ಧೆಗಳ ಕುರಿತು ಮತ್ತು ಅವು ಜರಗುವಾಗ ಸುತ್ತಲೂ ಇದ್ದ ವಾತಾವರಣದ ಕುರಿತು ಇತಿಹಾಸವು ಏನನ್ನು ತಿಳಿಸುತ್ತದೆ?
ಇತ್ತೀಚೆಗೆ ರೋಮ್ನ ಕಾಲಸೀಯಮ್ನಲ್ಲಿ, ನೀಕೆ—ಈಲ್ ಜೋಕೋ ಏ ಲಾ ವೀಟೋರ್ಯಾ (“ನೀಕೆ—ಒಂದು ಪಂದ್ಯ ಮತ್ತು ವಿಜಯ”) ಎಂಬ ಗ್ರೀಕ್ ಪಂದ್ಯಗಳ ಕುರಿತಾದ ಒಂದು ವಸ್ತುಪ್ರದರ್ಶನವು ನಡೆಯಿತು.b ಈ ವಸ್ತುಪ್ರದರ್ಶನವು, ಮೇಲಿನ ಪ್ರಶ್ನೆಗೆ ಕೆಲವು ಉತ್ತರಗಳನ್ನು ನೀಡಿತು ಮತ್ತು ಇದು, ಕ್ರೀಡೆಗಳ ಕುರಿತು ಕ್ರೈಸ್ತರ ದೃಷ್ಟಿಕೋನದ ಬಗ್ಗೆ ನಮ್ಮನ್ನು ಆಲೋಚಿಸುವಂತೆ ಮಾಡುತ್ತದೆ.
ಒಂದು ಪುರಾತನ ಪದ್ಧತಿ
ಗ್ರೀಸ್, ಕ್ರೀಡೆಗಳಲ್ಲಿ ಭಾಗವಹಿಸಿದ ಮೊದಲ ನಾಗರಿಕತೆಯಲ್ಲ. ಹಾಗಿದ್ದರೂ ಅದನ್ನು, ಸುಮಾರು ಸಾ.ಶ.ಪೂ. ಎಂಟನೆಯ ಶತಮಾನದಷ್ಟಕ್ಕೆ ಗ್ರೀಕ್ ಕವಿಯಾದ ಹೋಮರ್, ವೀರ ಲಕ್ಷಣದ ಆದರ್ಶಗಳುಳ್ಳ ಮತ್ತು ಸ್ಪರ್ಧಾಮನೋಭಾವದಿಂದ ಪ್ರೇರೇಪಿಸಲ್ಪಟ್ಟ ಒಂದು ಸಮುದಾಯವಾಗಿ ವರ್ಣಿಸುತ್ತಾನೆ. ಇದರಲ್ಲಿ, ಮಿಲಿಟರಿ ಸಾಮರ್ಥ್ಯ ಮತ್ತು ಕ್ರೀಡೆಗಳು ಬಹಳ ಮಹತ್ವದ್ದಾಗಿದ್ದವು. ಗ್ರೀಕ್ ಉತ್ಸವಗಳ ಆರಂಭವು, ವೀರರ ಶವಸಂಸ್ಕಾರಗಳಲ್ಲಿ ದೇವತೆಗಳನ್ನು ಘನಪಡಿಸಲು ನಡೆಸಲಾದ ಧಾರ್ಮಿಕ ಘಟನೆಗಳಿಂದ ಆಯಿತು ಎಂದು ಆ ವಸ್ತುಪ್ರದರ್ಶನವು ವಿವರಿಸಿತು. ಉದಾಹರಣೆಗೆ, ಅಕಿಲೀಸ್ನ ಜೊತೆಗಾರರಾದ ವೀರ ಯೋಧರು, ಪಾಟ್ರೋಕ್ಲಾಸ್ನ ಅಂತ್ಯಸಂಸ್ಕಾರದಂದು ತಮ್ಮ ಆಯುಧಗಳನ್ನು ಕೆಳಗಿಟ್ಟು, ಮುಷ್ಟಿಕಾಳಗ, ಕುಸ್ತಿ, ಎಸೆಬಿಲ್ಲೆ ಹಾಗೂ ಭರ್ಜಿಯ ಎಸೆತ, ಮತ್ತು ರಥದೋಟ ಮುಂತಾದ ಕ್ರೀಡೆಗಳಲ್ಲಿ ಯಾವ ರೀತಿಯಲ್ಲಿ ಭಾಗವಹಿಸಿ ತಮ್ಮ ಧೈರ್ಯವನ್ನು ರುಜುಪಡಿಸುತ್ತಿದ್ದರು ಎಂಬುದನ್ನು ಇನ್ನೂ ಉಳಿದಿರುವ ಅತಿ ಹಳೆಯ ಗ್ರೀಕ್ ಸಾಹಿತ್ಯವಾದ ಹೋಮರನ ಇಲೀಯಡ್ ವರ್ಣಿಸುತ್ತದೆ.
ಇದೇ ರೀತಿಯ ಉತ್ಸವಗಳು ಗ್ರೀಸ್ನಾದ್ಯಂತ ಆಚರಿಸಲ್ಪಡುತ್ತಿದ್ದವು. ವಸ್ತುಪ್ರದರ್ಶನ ಕೈಪಿಡಿಯು ತಿಳಿಸುವುದು: “ಈ ಉತ್ಸವಗಳು ಗ್ರೀಕರಿಗೆ, ತಮ್ಮ ದೇವತೆಗಳಿಗೆ ಈ ಸಮಯದಲ್ಲಿ ಗೌರವ ತೋರಿಸಲಿಕ್ಕಾಗಿ ತಮ್ಮ ಮುಗಿಯದ ಮತ್ತು ಪದೇಪದೇ ಹಿಂಸಾತ್ಮಕವಾಗುತ್ತಿದ್ದ ವಾಗ್ವಾದಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಒಂದು ಮುಖ್ಯ ಅವಕಾಶವನ್ನು ಒದಗಿಸಿದವು. ಅಷ್ಟುಮಾತ್ರವಲ್ಲದೆ, ಅವರು ತಮ್ಮ ಲಾಕ್ಷಣಿಕ ಪ್ರತಿಸ್ಪರ್ಧಿ ಮನೋಭಾವವನ್ನು ಶಾಂತವಾದ, ಆದರೆ ಅಷ್ಟೇ ಯಥಾರ್ಥವಾದ ಸಾಧನೆಗಳಾಗಿ ಅಂದರೆ ಕ್ರೀಡಾ ಸ್ಪರ್ಧೆಗಳಾಗಿ ಬದಲಾಯಿಸುವುದರಲ್ಲಿ ಜಯಪಡೆದರು.”
ಅನೇಕ ಪುರರಾಜ್ಯಗಳು, ಕ್ರೀಡಾ ಸ್ಪರ್ಧೆಗಳ ಮೂಲಕ ತಮ್ಮ ದೇವತೆಗಳಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಆರಾಧನೆಯ ಸಾಮಾನ್ಯ ಕೇಂದ್ರ ಸ್ಥಳದಲ್ಲಿ ಕ್ರಮವಾಗಿ ಒಟ್ಟುಗೂಡುವ ಪದ್ಧತಿಯನ್ನು ಅನುಸರಿಸತೊಡಗಿದವು. ಕಾಲಕ್ರಮೇಣ, ಅಂಥ ಉತ್ಸವಗಳಲ್ಲಿ ನಾಲ್ಕು ಉತ್ಸವಗಳು—ಗ್ರೀಕರ ಸ್ಯೂಸ್ ದೇವತೆಗೆ ಸಮರ್ಪಿಸಲಾದ ಒಲಿಂಪಿಕ್ ಮತ್ತು ನೀಮಿಯನ್ ಉತ್ಸವ, ಅಪೊಲೋ ದೇವತೆಗೆ ಸಮರ್ಪಿಸಲಾದ ಪಿಥೀಯನ್ ಉತ್ಸವ, ಪೊಸಾಯ್ಡನ್ ದೇವತೆಗೆ ಸಮರ್ಪಿಸಲಾದ ಇಸ್ತ್ಮಿಅನ್ ಉತ್ಸವ—ಬಹಳ ಜನಪ್ರಿಯವಾದವು ಮತ್ತು ಎಲ್ಲಾ ಗ್ರೀಕರ ಉತ್ಸವಗಳಾಗಿ ಪರಿಣಮಿಸಿದವು. ಅಂದರೆ, ಎಲ್ಲಾ ಕಡೆಯಲ್ಲಿರುವ ಗ್ರೀಕರು ಈ ಉತ್ಸವಗಳಲ್ಲಿ ಭಾಗವಹಿಸಬಹುದಾಗಿತ್ತು. ಈ ಉತ್ಸವಗಳಲ್ಲಿ, ಬಲಿಗಳನ್ನು ಅರ್ಪಿಸುವುದು ಮತ್ತು ಪ್ರಾರ್ಥನೆಗಳು ಸೇರಿದ್ದವು ಹಾಗೂ ಅದರೊಂದಿಗೆ ಕ್ರೀಡಾ ಅಥವಾ ಕಲಾ ಸ್ಪರ್ಧೆಗಳ ಮೂಲಕವೂ ದೇವತೆಗಳನ್ನು ಘನಪಡಿಸಲಾಗುತ್ತಿತ್ತು.
ಅಂಥ ಉತ್ಸವಗಳಲ್ಲಿ ಅತಿ ಹಳೆಯ ಮತ್ತು ಅತಿ ಪ್ರಖ್ಯಾತ ಉತ್ಸವವು, ಸಾ.ಶ.ಪೂ. 776ಕ್ಕೆ ಆರಂಭವಾಯಿತು ಹಾಗೂ ಒಲಿಂಪಿಕ್ನಲ್ಲಿ ಸ್ಯೂಸ್ ದೇವತೆಯ ಗೌರವಾರ್ಥವಾಗಿ ಪ್ರತಿ ನಾಲ್ಕು ವರುಷಕ್ಕೊಮ್ಮೆ ನಡೆಸಲ್ಪಡುತ್ತಿತ್ತು. ಎರಡನೆಯ ಅತಿ ಪ್ರಖ್ಯಾತ ಉತ್ಸವವು ಪಿಥೀಯನ್ ಉತ್ಸವವಾಗಿತ್ತು. ಇದು ಡೆಲ್ಫೀಯ ದೇವತಾವಾಣಿ ಗುಡಿಯ ಸಮೀಪದಲ್ಲಿ ನಡೆಸಲ್ಪಡುತ್ತಿತ್ತು ಮತ್ತು ಇದರಲ್ಲಿ ಸಹ ಕ್ರೀಡಾ ಸ್ಪರ್ಧೆಗಳು ಒಳಗೊಂಡಿದ್ದವು. ಕವಿತೆ ಮತ್ತು ಸಂಗೀತದ ದೇವತೆಯಾದ ಅಪೊಲೋವಿನ ಗೌರವಾರ್ಥವಾಗಿ ನಡೆಸಲಾದ ಉತ್ಸವದಲ್ಲಿ, ಸಂಗೀತ ಹಾಗೂ ನೃತ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿತ್ತು.
ಕ್ರೀಡೆಗಳು
ಆಧುನಿಕ ಕ್ರೀಡೆಗಳಿಗೆ ಹೋಲಿಸುವಾಗ, ಹಿಂದೆ ಕ್ರೀಡೆಗಳ ಸಂಖ್ಯೆಯು ಬಹಳ ಸೀಮಿತವಾಗಿತ್ತು ಮತ್ತು ಕೇವಲ ಪುರುಷರು ಮಾತ್ರ ಭಾಗವಹಿಸುತ್ತಿದ್ದರು. ಪುರಾತನ ಒಲಿಂಪಿಕ್ನಲ್ಲಿ ಹತ್ತಕ್ಕಿಂತ ಹೆಚ್ಚು ಕ್ರೀಡೆಗಳಿರುತ್ತಿರಲಿಲ್ಲ. ಕಾಲಸೀಯಮ್ನಲ್ಲಿ ಪ್ರದರ್ಶಿಸಲ್ಪಟ್ಟ ಕೆತ್ತನೆ ಚಿತ್ರಗಳು, ಮೊಸೇಯಿಕ್ ಚಿತ್ರಕಲೆಗಳು, ಮತ್ತು ಮಣ್ಣಿನ ಪಾತ್ರೆಗಳ ಮೇಲೆ ಮಾಡಲ್ಪಟ್ಟ ವರ್ಣಚಿತ್ರಗಳು ಇದರ ಕುರಿತು ಸ್ವಲ್ಪ ಮಾಹಿತಿಯನ್ನು ಒದಗಿಸಿದವು.
ಅಲ್ಲಿ ಮೂರು ಅಂತರಗಳ ಓಟದ ಪಂದ್ಯಗಳಿದ್ದವು. ಆ ಅಂತರಗಳು, ಸ್ಟೇಡಿಯಮ್ ದೂರ ಅಂದರೆ ಸುಮಾರು 200 ಮೀಟರ್ಗಳು; ಇನ್ನೊಂದು ಇಮ್ಮಡಿ ದೂರ ಅಂದರೆ ಇಂದಿನ 400 ಮೀಟರ್ಗಳು; ಮತ್ತು ಅತಿ ದೂರದ ಓಟ, ಅಂದರೆ ಸುಮಾರು 4,500 ಮೀಟರ್ಗಳಾಗಿದ್ದವು. ಸ್ಪರ್ಧಾಳುಗಳು ನಗ್ನವಾಗಿ ಓಡುತ್ತಿದ್ದರು. ಪಂಚಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಮೊದಲಾದ ಐದು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು: ಓಟದ ಪಂದ್ಯ, ಲಾಂಗ್ಜಂಪ್, ಎಸೆಬಿಲ್ಲೆ, ಭರ್ಜಿಯ ಎಸೆತ, ಮತ್ತು ಕುಸ್ತಿ. ಇತರ ಸ್ಪರ್ಧೆಗಳಲ್ಲಿ, ಮುಷ್ಟಿಕಾಳಗ ಮತ್ತು ಮಲ್ಲಮುಷ್ಟಿಯುದ್ಧವು ಸೇರಿರುತ್ತಿದ್ದವು. ಮಲ್ಲಮುಷ್ಟಿಯುದ್ಧವನ್ನು, ಮುಷ್ಟಿಕವಚವಿಲ್ಲದ ಮುಷ್ಟಿಕಾಳಗ ಹಾಗೂ ಕುಸ್ತಿ ಸೇರಿರುವ ಕ್ರೂರ ಕ್ರೀಡೆಯೆಂದು ವರ್ಣಿಸಲಾಗಿದೆ. ಇದಲ್ಲದೆ, ರಥದೋಟವೂ ಇತ್ತು. ಈ ಓಟದಲ್ಲಿ, ಎರಡು ಅಥವಾ ನಾಲ್ಕು ಕುದುರೆ ಮರಿಗಳು ಇಲ್ಲವೆ ದೊಡ್ಡ ಕುದುರೆಗಳಿಂದ ಎಳೆಯಲ್ಪಡುವ, ಚಿಕ್ಕ ಗಾತ್ರದ ಚಕ್ರಗಳ ಮೇಲೆ ಭದ್ರಪಡಿಸಲಾದ ಹಿಂಬದಿ ತೆರೆದಿರುವ ವಾಹನಗಳನ್ನು 1,600 ಮೀಟರ್ಗಳ ವರೆಗೆ ಓಡಿಸಲಾಗುತ್ತಿತ್ತು.
ಮುಷ್ಟಿಕಾಳಗವು ಬಹಳ ಹಿಂಸಾತ್ಮಕವಾಗಿಯೂ ಕೆಲವೊಮ್ಮೆ ಮಾರಕವಾಗಿಯೂ ಇರುತ್ತಿತ್ತು. ಅದರಲ್ಲಿ ಭಾಗವಹಿಸುವವರು, ಲೋಹದ ಗುಬ್ಬಿಮೊಳೆಗಳು ತೂರಿಸಲ್ಪಟ್ಟಿರುವ ಗಟ್ಟಿಯಾದ ಚರ್ಮದ ಪಟ್ಟಿಗಳನ್ನು ತಮ್ಮ ಮುಷ್ಟಿಗೆ ಸುತ್ತಿಕೊಂಡಿರುತ್ತಿದ್ದರು. ಸ್ಟ್ರಾಟೋಫಾನ್ಟೆ ಎಂಬ ಹೆಸರಿನ ಸ್ಪರ್ಧಿಗೆ ನಾಲ್ಕು ತಾಸಿನ ಮುಷ್ಟಿಕಾಳಗದ ನಂತರ ದರ್ಪಣದಲ್ಲಿ ತನ್ನ ಸ್ವಂತ ಮುಖವನ್ನು ಏಕೆ ಗುರುತಿಸಲಾಗಲಿಲ್ಲ ಎಂಬುದನ್ನು ಈಗ ನೀವು ಅರ್ಥಮಾಡಿಕೊಳ್ಳಬಲ್ಲಿರಿ. ಮುಷ್ಟಿಕಾಳಗದಲ್ಲಿ ಭಾಗವಹಿಸುವವರು ಭಯಂಕರವಾಗಿ ರೂಪುಗೆಡಿಸಲ್ಪಡುತ್ತಿದ್ದರು ಎಂಬುದನ್ನು ಪುರಾತನ ಪ್ರತಿಮೆಗಳು ಮತ್ತು ಮೊಸೇಯಿಕ್ ಚಿತ್ರಕಲೆಗಳು ರುಜುಪಡಿಸುತ್ತವೆ.
ಕುಸ್ತಿಯಲ್ಲಿ ನಿಯಮವೇನಾಗಿತ್ತೆಂದರೆ, ಅದರಲ್ಲಿ ಭಾಗವಹಿಸುವವನು ತನ್ನ ಎದುರಾಳಿಯ ದೇಹದ ಮೇಲ್ಭಾಗವನ್ನು ಮಾತ್ರ ಬಿಗಿಯಾಗಿ ಹಿಡಿಯಸಾಧ್ಯವಿತ್ತು, ಮತ್ತು ಯಾರು ತನ್ನ ಎದುರಾಳಿಯನ್ನು ಮೊದಲಾಗಿ ಮೂರು ಬಾರಿ ನೆಲಕಚ್ಚಿಸುತ್ತಾನೋ ಅವನು ಜಯಗಳಿಸುತ್ತಿದ್ದನು. ಇದಕ್ಕೆ ವ್ಯತಿರಿಕ್ತವಾಗಿ, ಮಲ್ಲಮುಷ್ಟಿಯುದ್ಧದಲ್ಲಿ ಹಿಡಿತದ ಮೇಲೆ ಯಾವ ನಿಷೇಧವೂ ಇರಲಿಲ್ಲ. ಭಾಗವಹಿಸುವವನು ತನ್ನ ಎದುರಾಳಿಯನ್ನು ಒದೆಯಲು, ಗುದ್ದಲು, ಮತ್ತು ಅವನ ಮೂಳೆ ಕೀಲುಗಳನ್ನು ತಿರುಚಲು ಸಹ ಸಾಧ್ಯವಿತ್ತು. ಆದರೆ, ಕಣ್ಣನ್ನು ಕುಕ್ಕುವುದು, ಪರಚುವುದು, ಮತ್ತು ಕಚ್ಚುವುದು ಈ ಮುಂತಾದದ್ದಕ್ಕೆ ನಿಷೇಧವಿತ್ತು. ಈ ಸ್ಪರ್ಧೆಯ ಮುಖ್ಯ ಹೇತು, ಒಬ್ಬನ ಎದುರಾಳಿಯನ್ನು ನೆಲಕ್ಕುರುಳಿಸಿ, ಅಲುಗಾಡಲು ಅಶಕ್ತನನ್ನಾಗಿ ಮಾಡಿ, ಒತ್ತಾಯಪೂರ್ವಕವಾಗಿ ಅವನು ಶರಣಾಗುವಂತೆ ಮಾಡುವುದೇ ಆಗಿತ್ತು. ಕೆಲವರು “ಇಡೀ ಒಲಿಂಪಿಯಾದಲ್ಲಿಯೇ ಇದನ್ನು ಅತ್ಯುತ್ತಮ ದೃಶ್ಯವಾಗಿ” ಪರಿಗಣಿಸುತ್ತಿದ್ದರು.
ಪುರಾತನ ಕಾಲಗಳಲ್ಲಿನ ಅತಿ ಪ್ರಸಿದ್ಧ ಮಲ್ಲಮುಷ್ಟಿಯುದ್ಧವು, ಸಾ.ಶ.ಪೂ. 564ರಲ್ಲಿ ಒಲಿಂಪಿಕ್ನ ಅಂತಿಮ ಕ್ರೀಡೆಯಲ್ಲಿ ನಡೆಯಿತೆಂದು ಹೇಳಲಾಗಿದೆ. ಕುತ್ತಿಗೆ ಹಿಸುಕಿ ಕೊಲ್ಲಲ್ಪಡುತ್ತಿದ್ದ ಆರಾಹೀಓನ್ನಿಗೆ ತನ್ನ ಎದುರಾಳಿಯ ಕಾಲ್ಬೆರಳುಗಳಲ್ಲಿ ಒಂದರ ಕೀಲು ತಪ್ಪಿಸುವಷ್ಟರ ಮಟ್ಟಿಗೆ ಪ್ರಜ್ಞೆಯಿತ್ತು. ಅತಿಯಾದ ನೋವಿನ ಕಾರಣ ಅವನ ಎದುರಾಳಿಯು ಆ ಕ್ಷಣವೇ ಅಂದರೆ ಆರಾಹೀಓನ್ ಸಾಯುವ ಮುನ್ನ ಅವನಿಗೆ ಶರಣಾಗತನಾದನು. ನ್ಯಾಯನಿರ್ಣಾಯಕರು, ಆರಾಹೀಓನ್ನ ಹೆಣವನ್ನು ವಿಜಯಿ ಎಂದು ಘೋಷಿಸಿದರು!
ರಥದೋಟವು ಕ್ರೀಡೆಗಳಲ್ಲಿಯೇ ಅತಿ ಪ್ರತಿಷ್ಠಿತ ಕ್ರೀಡೆಯಾಗಿತ್ತು. ಇದು ಹೆಚ್ಚಾಗಿ ಶ್ರೀಮಂತ ಮನೆತನದವರಲ್ಲಿ ಜನಪ್ರಿಯವಾಗಿತ್ತು, ಏಕೆಂದರೆ ಈ ಕ್ರೀಡೆಯಲ್ಲಿ ಗೆಲ್ಲುತ್ತಿದ್ದವರು ರಥ ಸವಾರರಲ್ಲ ಬದಲಾಗಿ ಆ ಕುದುರೆಗಳ ಮಾಲಿಕರೇ ಆಗಿದ್ದರು. ಈ ಸ್ಪರ್ಧೆಯ ಕಠಿನ ಕ್ಷಣಗಳಲ್ಲಿ ಒಂದು ಅದರ ಆರಂಭದ ಕ್ಷಣವಾಗಿತ್ತು, ಏಕೆಂದರೆ ಆಗ ಸಾರಥಿಗಳು ತಮಗೆ ನೇಮಿಸಲ್ಪಟ್ಟ ಪಥದಲ್ಲಿಯೇ ಉಳಿಯಬೇಕಿತ್ತು, ಮತ್ತು ಇನ್ನೊಂದು, ಹಾದಿಯ ಎರಡು ಕೊನೆಗಳಲ್ಲಿಯೂ ಇದ್ದ ಕಂಬದ ಸುತ್ತಲೂ ಹೋಗಿಬರುವಾಗಲೂ ಅವರು ತಮ್ಮ ಪಥದಲ್ಲಿಯೇ ರಥವನ್ನು ಓಡಿಸಬೇಕಾಗಿತ್ತು. ಇದರಲ್ಲಿ ತಪ್ಪೋ ಅಕ್ರಮ ಸವಾರಿಯೋ ಸಂಭವಿಸುವಲ್ಲಿ, ಅದು ಅಪಘಾತಗಳನ್ನು ಉಂಟುಮಾಡುತ್ತಿದ್ದವು ಮತ್ತು ಇವು ಈ ಜನಪ್ರಿಯ ಓಟವನ್ನು ಇನ್ನೂ ಹೆಚ್ಚು ಪ್ರೇಕ್ಷಣೀಯವನ್ನಾಗಿ ಮಾಡುತ್ತಿದ್ದವು.
ವಿಜಯಿಗಳಿಗೆ ದೊರೆಯುತ್ತಿದ್ದ ಬಹುಮಾನ
“ಓಟದ ಸ್ಪರ್ಧೆಯಲ್ಲಿ ಎಲ್ಲಾ ಓಟಗಾರರು ಓಡುತ್ತಾರೆಂಬುದು ನಿಮಗೆ ಗೊತ್ತಿದೆ. ಆದರೆ ಅವರಲ್ಲಿ ಒಬ್ಬನು ಮಾತ್ರ ಬಹುಮಾನವನ್ನು ಪಡೆದುಕೊಳ್ಳುತ್ತಾನೆ” ಎಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂಥ 9:24, ಪರಿಶುದ್ಧ ಬೈಬಲ್) ಜಯಿಸುವುದು ತಾನೇ ಅತಿ ಪ್ರಾಮುಖ್ಯ ವಿಷಯವಾಗಿತ್ತು. ಬೆಳ್ಳಿ ಪದಕವೋ ಕಂಚಿನ ಪದಕವೋ ಅಲ್ಲಿರಲಿಲ್ಲ. ಎರಡನೇ ಬಹುಮಾನ ಅಥವಾ ಮೂರನೇ ಬಹುಮಾನ ಸಹ ಅಲ್ಲಿರಲಿಲ್ಲ. “ವಿಜೇತರಾಗುವುದು, ‘ನೀಕೆ,’ ಇದೇ ಸ್ಪರ್ಧಾಳುಗಳ ಅಂತಿಮ ಗುರಿಯಾಗಿತ್ತು,” ಎಂದು ವಸ್ತುಪ್ರದರ್ಶನವು ವಿವರಿಸುತ್ತದೆ. “ಕೇವಲ ಇದು ತಾನೇ ಅವರಿಗೆ ಬೇಕಿತ್ತು ಏಕೆಂದರೆ ಅವರ ವೈಯಕ್ತಿಕ ಮೌಲ್ಯದ—ಶಾರೀರಿಕ ಮತ್ತು ನೈತಿಕ—ನಿಜ ಪ್ರತಿಬಿಂಬವು ಇದು ಮಾತ್ರವೇ ಆಗಿತ್ತು, ಮತ್ತು ಇದು ಅವರ ಹುಟ್ಟೂರಿಗೆ ಅಭಿಮಾನವನ್ನು ತರುತ್ತಿತ್ತು.” ಹೋಮರನ ಇಲೀಯಡ್ನಲ್ಲಿನ ಒಂದು ಸಾಲಿನಲ್ಲಿ ಈ ಮನೋಭಾವವು ಸಾರಾಂಶಿಸಲ್ಪಟ್ಟಿದೆ. ಅದು ತಿಳಿಸುವುದು: “ಯಾವಾಗಲೂ ನಾನು ಮೊದಲಿಗನಾಗುವುದನ್ನು ಕಲಿತಿದ್ದೇನೆ.”
ಗ್ರೀಕರ ಪಂದ್ಯಗಳಲ್ಲಿ ವಿಜೇತರಿಗೆ ದೊರಕುವ ಬಹುಮಾನವು ಸಂಪೂರ್ಣವಾಗಿ ಸಾಂಕೇತಿಕವಾಗಿತ್ತು. ಅವರಿಗೆ ಎಲೆಗಳಿಂದ ಮಾಡಲಾದ ಒಂದು ಕಿರೀಟವನ್ನು ನೀಡಲಾಗುತ್ತಿತ್ತು. ಪೌಲನು ಅದನ್ನು “ಬಾಡಿಹೋಗುವ ಜಯಮಾಲಿಕೆ” ಎಂದು ಕರೆದನು. (1 ಕೊರಿಂಥ 9:25) ಆದರೂ ಈ ಬಹುಮಾನವು ಬಹಳ ಅರ್ಥಗರ್ಭಿತವಾಗಿತ್ತು. ಅದು, ನಿಸರ್ಗ ದೇವತೆಯು ತನ್ನ ಶಕ್ತಿಯನ್ನು ವಿಜೇತನ ಮೇಲೆ ಸುರಿಸುವುದನ್ನು ಸೂಚಿಸಿತು. ಏಕ ಮನಸ್ಸಿನ ದೃಢನಿಶ್ಚಯದಿಂದ ಗಳಿಸಿದ ವಿಜಯವು, ದೈವಿಕ ಅನುಗ್ರಹದ ಕೊಡುಗೆಯನ್ನು ಸೂಚಿಸಿತ್ತು. ಪುರಾತನ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರು, ಗ್ರೀಕರ ರೆಕ್ಕೆಗಳುಳ್ಳ ವಿಜಯ ದೇವತೆಯಾದ ನೀಕೆಯನ್ನು ಹೇಗೆ ವೀಕ್ಷಿಸಿದರು ಎಂಬುದನ್ನು ವಸ್ತುಪ್ರದರ್ಶನದ ಒಂದು ಭಾಗವು ವರ್ಣಿಸಿದೆ. ಅವರು, ನೀಕೆಯು ವಿಜೇತನಿಗೆ ಒಂದು ಕಿರೀಟವನ್ನು ಧರಿಸುವಂತೆ ಚಿತ್ರಿಸಿದ್ದಾರೆ. ಒಲಿಂಪಿಯಾದಲ್ಲಿ ಜಯಗಳಿಸುವುದು, ಯಾವುದೇ ಕ್ರೀಡಾಪಟುವಿನ ವೃತ್ತಿಜೀವನದ ಪರಾಕಾಷ್ಠೆಯಾಗಿತ್ತು.
ಒಲಿಂಪಿಕ್ ಪಂದ್ಯಗಳ ಕಿರೀಟಗಳು ಆಲಿವ್ ಎಲೆಗಳಿಂದ, ಇಸ್ತ್ಮಿಅನ್ ಪಂದ್ಯಗಳ ಕಿರೀಟಗಳು ಪೈನ್ ಮರದ ಎಲೆಗಳಿಂದ, ಪಿಥೀಯನ್ ಪಂದ್ಯಗಳ ಕಿರೀಟಗಳು ಬೇ ಮರದ ಎಲೆಗಳಿಂದ, ಮತ್ತು ನೀಮಿಯನ್ ಪಂದ್ಯಗಳ ಕಿರೀಟಗಳು ಸೆಲರಿ ಗಿಡದ ಎಲೆಗಳಿಂದ ಮಾಡಲ್ಪಟ್ಟಿದ್ದವು. ಇತರ ಕಡೆಗಳಲ್ಲಿ, ಈ ಪಂದ್ಯಗಳನ್ನು ವ್ಯವಸ್ಥಾಪಿಸುವವರು ಅತಿ ಉತ್ತಮ ಸ್ಪರ್ಧಾಳುಗಳನ್ನು ಆಕರ್ಷಿಸುವ ಉದ್ದೇಶದಿಂದ ಹಣವನ್ನು ಇಲ್ಲವೆ ಇತರ ಬಹುಮಾನಗಳನ್ನು ನೀಡುತ್ತಿದ್ದರು. ವಸ್ತುಪ್ರದರ್ಶನದಲ್ಲಿನ ಅನೇಕ ಕಲಶಗಳು, ದೇವತೆಯಾದ ಅಥೀನಳ ಗೌರವಾರ್ಥವಾಗಿ ಅಥೇನೆಯಲ್ಲಿ ಆಚರಿಸಲಾದ ಪಂದ್ಯಗಳಲ್ಲಿ ದೊರಕಿದ ಬಹುಮಾನಗಳಾಗಿದ್ದವು. ಎರಡು ಹಿಡಿಗಳನ್ನು ಹೊಂದಿದ್ದ ಈ ಕಲಶಗಳು ನೀಡಲ್ಪಟ್ಟ ಸಮಯದಲ್ಲಿ ಅವು ಆ್ಯಟಿಕ ಪ್ರಾಂತದ ಅತ್ಯಮೂಲ್ಯ ಆಲಿವ್ ಎಣ್ಣೆಯಿಂದ ತುಂಬಿದ್ದವು. ಒಂದು ಕಲಶದ ಒಂದು ಬದಿಯಲ್ಲಿ ದೇವತೆಯ ಚಿತ್ರವಿತ್ತು ಮತ್ತು “ದೇವತೆಯಾದ ಅಥೀನಳ ಸ್ಪರ್ಧೆಗಳಿಗಾಗಿ ಬಹುಮಾನ” ಎಂಬ ಹೇಳಿಕೆಯನ್ನು ಹೊಂದಿತ್ತು. ಇನ್ನೊಂದು ಬದಿಯಲ್ಲಿ ನಿರ್ದಿಷ್ಟವಾದ ಕ್ರೀಡೆಯ, ಪ್ರಾಯಶಃ ಸ್ಪರ್ಧಾಳು ಯಾವ ಕ್ರೀಡೆಯಲ್ಲಿ ತನ್ನ ಜಯವನ್ನು ಹೊಂದಿದ್ದನೋ ಅದರ ಚಿತ್ರವಿತ್ತು.
ಈ ಸ್ಪರ್ಧಾಳುಗಳ ಕೀರ್ತಿಯಲ್ಲಿ ಗ್ರೀಕ್ ಪಟ್ಟಣಗಳು ಆನಂದಿಸುತ್ತಿದ್ದವು. ಅವರ ವಿಜಯಗಳು ಅವರನ್ನು ಆ ಸಮುದಾಯದಲ್ಲಿ ವೀರ ಪುರುಷರನ್ನಾಗಿ ಮಾಡಿದವು. ವಿಜಯಿಗಳ ಹಿಂದಿರುಗುವಿಕೆಗಳನ್ನು ವಿಜಯ ಮೆರವಣಿಗೆಯೊಂದಿಗೆ ಆಚರಿಸಲಾಗುತ್ತಿತ್ತು. ದೇವತೆಗಳಿಗೆ ಉಪಕಾರ ಸಲ್ಲಿಸುವ ಸಲುವಾಗಿ ವಿಜಯಿಗಳ ಗೌರವಾರ್ಥವಾಗಿ ಅವರ ಪ್ರತಿಮೆಗಳನ್ನು ನಿಲ್ಲಿಸಲಾಗುತ್ತಿತ್ತು. ಸಾಮಾನ್ಯ ಮನುಷ್ಯರಿಗೆ ಈ ರೀತಿಯಲ್ಲಿ ಗೌರವವನ್ನು ಸಲ್ಲಿಸಲಾಗುತ್ತಿರಲಿಲ್ಲ. ಕವಿಗಳು ಅವರ ಪರಾಕ್ರಮವನ್ನು ಕೊಂಡಾಡುತ್ತಿದ್ದರು. ನಂತರ, ಸಾರ್ವಜನಿಕ ಸಮಾರಂಭಗಳಲ್ಲಿ ಈ ಜಯಶಾಲಿಗಳಿಗೆ ಪ್ರಥಮ ಸ್ಥಾನಗಳನ್ನು ನೀಡಲಾಗುತ್ತಿತ್ತು ಮತ್ತು ಅವರು ಸಾರ್ವಜನಿಕರ ವೆಚ್ಚದಲ್ಲಿ ನಿವೃತ್ತಿ ವೇತನಗಳನ್ನು ಪಡೆಯುತ್ತಿದ್ದರು.
ವ್ಯಾಯಾಮ ಶಾಲೆಗಳು ಮತ್ತು ಅವುಗಳ ಸ್ಪರ್ಧಾಳುಗಳು
ಕ್ರೀಡಾ ಸ್ಪರ್ಧೆಯು ಪೌರ-ಸೈನಿಕ ಬೆಳವಣಿಗೆಯಲ್ಲಿ ಒಂದು ಪ್ರಾಮುಖ್ಯ ಅಂಶವೆಂದು ಪರಿಗಣಿಸಲಾಗುತ್ತಿತ್ತು. ಎಲ್ಲಾ ಗ್ರೀಕ್ ಪಟ್ಟಣಗಳಲ್ಲಿ ವ್ಯಾಯಾಮ ಶಾಲೆಗಳಿದ್ದವು. ಅಲ್ಲಿ ಯುವ ಪುರುಷರಿಗೆ ಶಾರೀರಿಕ ಶಿಕ್ಷಣ ಮತ್ತು ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಿಸ್ತುಪಡಿಸುವಿಕೆಯನ್ನು ನೀಡಲಾಗುತ್ತಿತ್ತು. ವ್ಯಾಯಾಮ ಶಾಲೆಗಳ ಕಟ್ಟಡಗಳು, ಕಂಬಸಾಲುಗಳಿಂದ ಸುತ್ತಲ್ಪಟ್ಟ ವ್ಯಾಯಾಮಕ್ಕಾಗಿನ ದೊಡ್ಡ ತೆರೆದ ಜಾಗ ಮತ್ತು ಗ್ರಂಥಾಲಯ ಹಾಗೂ ಕ್ಲಾಸ್ರೂಮ್ಗಳಾಗಿ ಉಪಯೋಗಿಸಲ್ಪಡುವ ಇತರ ಮುಚ್ಚಿದ ಸ್ಥಳಗಳಾಗಿ ಏರ್ಪಡಿಸಲ್ಪಟ್ಟಿದ್ದವು. ಇಂಥ ವ್ಯಾಯಾಮ ಶಾಲೆಗಳಿಗೆ ಎಲ್ಲರಿಗಿಂತಲೂ ಹೆಚ್ಚಾಗಿ ಐಶ್ವರ್ಯವಂತ ಕುಟುಂಬಗಳಲ್ಲಿರುವ ಯುವ ಪುರುಷರು ಭೇಟಿನೀಡುತ್ತಿದ್ದರು, ಏಕೆಂದರೆ ಅವರು ತಮ್ಮ ಸಮಯವನ್ನು ಕೆಲಸದ ಬದಲಿಗೆ ವಿದ್ಯಾಭ್ಯಾಸಕ್ಕೆ ಸಮರ್ಪಿಸಲು ಸಮರ್ಥರಾಗಿದ್ದರು. ಇಲ್ಲಿ, ಸ್ಪರ್ಧಾಳುಗಳು ತಮ್ಮ ತರಬೇತಿಗಾರರ ಸಹಾಯದಿಂದ ಪಂದ್ಯಕ್ಕಾಗಿ ದೀರ್ಘ ಸಮಯದ ತೀಕ್ಷ್ಣ ತಯಾರಿಯನ್ನು ಮಾಡುತ್ತಿದ್ದರು. ಅವರ ತರಬೇತಿಗಾರರು ಅವರಿಗೆ ಆಹಾರಪಥ್ಯದ ಸಲಹೆಯನ್ನು ನೀಡಿ, ಅವರು ಲೈಂಗಿಕ ಸಂಭೋಗದಿಂದ ದೂರವಿರುವಂತೆ ಸಹ ನೋಡಿಕೊಳ್ಳುತ್ತಿದ್ದರು.
ಕಾಲಸೀಯಮ್ ವಸ್ತುಪ್ರದರ್ಶನವು ಸಂದರ್ಶಕರಿಗೆ ಪುರಾತನ ಸ್ಪರ್ಧಾಳುಗಳ ಉತ್ತಮ ಚಿತ್ರಗಳನ್ನು ನೋಡಿ ಶ್ಲಾಘಿಸಲು ಒಂದು ಸಂದರ್ಭವನ್ನು ನೀಡಿತು. ಈ ಚಿತ್ರಗಳಲ್ಲಿ ಹೆಚ್ಚಿನವು, ಮೂಲ ಗ್ರೀಕ್ ಶಿಲ್ಪಕೃತಿಯಿಂದ ರೋಮನ್ ಸಾಮ್ರಾಜ್ಯದ ಸಮಯದಲ್ಲಿ ಮಾಡಲ್ಪಟ್ಟಿದ್ದ ನಕಲುಪ್ರತಿಗಳಾಗಿದ್ದವು. ಪುರಾತನ ಗ್ರೀಕ್ ಸಿದ್ಧಾಂತದಲ್ಲಿ, ಶಾರೀರಿಕ ಪರಿಪೂರ್ಣತೆಯನ್ನು ನೈತಿಕ ಪರಿಪೂರ್ಣತೆಗೆ ಸಮಾನವಾಗಿ ಪರಿಗಣಿಸಲಾಗುತ್ತಿತ್ತು, ಮತ್ತು ಇದು ಕೇವಲ ಶ್ರೀಮಂತರ ಆಸ್ತಿಯಾಗಿತ್ತು. ವಿಜಯಿಗಳಾದ ಸ್ಪರ್ಧಾಳುಗಳ ತಕ್ಕಮಟ್ಟಿನ ದೃಢಕಾಯ ಶರೀರಗಳು, ಒಂದು ತತ್ತ್ವಜ್ಞಾನಕ್ಕೆ ಸಂಬಂಧಿಸಿದ ಆದರ್ಶವನ್ನು ಪ್ರತಿನಿಧಿಸಿತು. ರೋಮನರು ಶಿಲ್ಪಕೃತಿಗಳನ್ನು ಬಹಳ ಗಣ್ಯಮಾಡಿದರು ಮತ್ತು ಅವರ ಕ್ರೀಡಾ ರಂಗಗಳು, ಸ್ನಾನಗೃಹಗಳು, ಆರಾಮಗೃಹಗಳು, ಮತ್ತು ಅರಮನೆಗಳು ಅನೇಕ ಶಿಲ್ಪಕೃತಿಗಳಿಂದ ಅಲಂಕರಿಸಲ್ಪಟ್ಟಿದ್ದವು.
ರೋಮನರ ಮಧ್ಯೆ, ಹಿಂಸಾತ್ಮಕ ದೃಶ್ಯಗಳು ಯಾವಾಗಲೂ ಜನಪ್ರಿಯವಾಗಿದ್ದವು. ರೋಮ್ನಲ್ಲಿ ನಡೆಸಲಾದ ಎಲ್ಲಾ ಗ್ರೀಕ್ ಪಂದ್ಯಗಳಲ್ಲಿ ಮುಷ್ಟಿಕಾಳಗ, ಕುಸ್ತಿ, ಮತ್ತು ಮಲ್ಲಮುಷ್ಟಿಯುದ್ಧ ಅತಿ ಹೆಚ್ಚಿನ ಮಾನ್ಯತೆಯನ್ನು ಪಡೆಯಿತು. ಇಂಥ ಕ್ರೀಡೆಗಳನ್ನು ರೋಮನರು ಸಮಾನರ ಮಧ್ಯೆ ನಡೆಯುವ ಸ್ಪರ್ಧೆಯಾಗಿ ವೀಕ್ಷಿಸಲಿಲ್ಲ, ಬದಲಾಗಿ ಒಂದು ಮನೋರಂಜನೆಯಾಗಿ ವೀಕ್ಷಿಸುತ್ತಿದ್ದರು. ಆರಂಭದಲ್ಲಿ ಸೈನಿಕ-ಸ್ಪರ್ಧಾಳುಗಳು ತಮ್ಮ ವಿದ್ಯಾಭ್ಯಾಸದ ಭಾಗವಾಗಿ ಒಟ್ಟಾಗಿ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ನಂತರ ಆ ಮೂಲ ಧ್ಯೇಯವು ತೆಗೆದುಹಾಕಲ್ಪಟ್ಟಿತು. ಅದಕ್ಕೆ ಬದಲಾಗಿ, ರೋಮನರು ಈ ಗ್ರೀಕ್ ಪಂದ್ಯಗಳನ್ನು ಸ್ನಾನಕ್ಕೆ ಮುಂಚಿತವಾಗಿ ಮಾಡುವ ಆರೋಗ್ಯ ವ್ಯಾಯಾಮವಾಗಿ ಇಲ್ಲವೆ ಸಮಾಜದ ಕೆಳಅಂತಸ್ತಿನ ಜನರಿಂದ ನಡೆಸಲ್ಪಟ್ಟ ವೀಕ್ಷಣೀಯ ಕ್ರೀಡೆಯಾಗಿ—ಹೆಚ್ಚುಕಡಿಮೆ ಕತ್ತಿಮಲ್ಲರ ಹೋರಾಟಗಳಂತೆ—ಪರಿಗಣಿಸಲಾರಂಭಿಸಿದರು.
ಕ್ರೈಸ್ತರು ಮತ್ತು ಪಂದ್ಯಗಳು
ಆರಂಭದ ಕ್ರೈಸ್ತರು ಈ ಪಂದ್ಯಗಳಲ್ಲಿ ಭಾಗವಹಿಸಲು ನಿರಾಕರಿಸಿದಕ್ಕೆ ಒಂದು ಕಾರಣವು ಅವುಗಳ ಧಾರ್ಮಿಕ ಸ್ವರೂಪವೇ ಆಗಿತ್ತು. “ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು?” (2 ಕೊರಿಂಥ 6:14, 16) ಇಂದಿನ ಕ್ರೀಡೆಗಳ ವಿಷಯದಲ್ಲೇನು?
ನಿಶ್ಚಯವಾಗಿಯೂ, ಆಧುನಿಕ ಕ್ರೀಡೆಗಳು ವಿಧರ್ಮಿ ದೇವತೆಗಳನ್ನು ಘನಪಡಿಸುವುದಿಲ್ಲ. ಆದರೂ, ಪುರಾತನ ಕಾಲದ ಜನರ ಮಧ್ಯೆ ಇದ್ದಂತೆ ಇಂದು ಸಹ ಕೆಲವು ಕ್ರೀಡೆಗಳ ವಿಷಯದಲ್ಲಿ ಜನರಲ್ಲಿ ಹೆಚ್ಚುಕಡಿಮೆ ಧರ್ಮಭ್ರಾಂತ ಉತ್ಸಾಹವನ್ನು ನಾವು ನೋಡಸಾಧ್ಯವಿದೆ ಎಂಬುದು ನಿಜವಲ್ಲವೇ? ಅದಕ್ಕಿಂತ ಹೆಚ್ಚಾಗಿ, ಇತ್ತೀಚಿನ ವರುಷಗಳಲ್ಲಿನ ವರದಿಗಳು ತೋರಿಸಿರುವಂತೆ, ಗೆಲ್ಲಲಿಕ್ಕಾಗಿ ಕೆಲವು ಸ್ಪರ್ಧಾಳುಗಳು ತಮ್ಮ ಆರೋಗ್ಯವನ್ನು ಮತ್ತು ಜೀವವನ್ನು ಗಂಡಾಂತರಕ್ಕೆ ಒಳಪಡಿಸುವ ಮಾದಕವಸ್ತುಗಳನ್ನು ಸೇವಿಸಲು ಸಹ ಸಿದ್ಧರಿರುತ್ತಾರೆ.
ಕ್ರೈಸ್ತರಿಗಾದರೋ, ಶಾರೀರಿಕ ಸಾಧನೆಗಳು ಕೇವಲ ಕೊಂಚವೇ ಮೌಲ್ಯವನ್ನು ಹೊಂದಿವೆ. ಆದರೆ, ಆಧ್ಯಾತ್ಮಿಕ ಗುಣಗಳನ್ನು ಹೊಂದಿದ ‘ಒಳಗಣ ಭೂಷಣವು’ ನಮ್ಮನ್ನು ದೇವರ ದೃಷ್ಟಿಯಲ್ಲಿ ಅತಿ ಸುಂದರರನ್ನಾಗಿ ಮಾಡುತ್ತದೆ. (1 ಪೇತ್ರ 3:3, 4) ಇಂದು ಕ್ರೀಡೆಗಳಲ್ಲಿ ಭಾಗವಹಿಸುವ ಎಲ್ಲರಲ್ಲಿಯೂ ಸ್ಪರ್ಧಾಮನೋಭಾವವು ಇಲ್ಲವೆಂಬುದನ್ನು ನಾವು ಅಂಗೀಕರಿಸುತ್ತೇವೆ, ಆದರೆ ಅನೇಕರಲ್ಲಿ ಆ ಮನೋಭಾವವಿದೆ. ಅಂಥ ಜನರೊಂದಿಗೆ ಸಹವಾಸಿಸುವುದು, ‘ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ದೀನಭಾವ’ವುಳ್ಳವರಾಗಿರಿ ಎಂಬ ಶಾಸ್ತ್ರೀಯ ಬುದ್ಧಿವಾದವನ್ನು ಅನುಕರಿಸಲು ನಮಗೆ ಸಹಾಯಮಾಡುತ್ತದೋ? ಇಲ್ಲವೆ ಅಂಥ ಸಹವಾಸದಿಂದಾಗಿ, “ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ” ಮುಂತಾದ ಗುಣಗಳು ಫಲಿಸುವುದಿಲ್ಲವೋ?—ಫಿಲಿಪ್ಪಿ 2:3; ಗಲಾತ್ಯ 5:19-21.
ಆಟಗಾರರ ಮಧ್ಯೆ ದೇಹಸ್ಪರ್ಶವನ್ನು ಒಳಗೊಂಡಿರುವಂಥ ಕಾಲ್ಚೆಂಡಾಟ, ಹಾಕಿ, ಅಥವಾ ಮುಷ್ಟಿಕಾಳಗ ಮುಂತಾದ ಆಧುನಿಕ ಕ್ರೀಡೆಗಳಲ್ಲಿ, ಹಿಂಸಾತ್ಮಕ ಮನೋಭಾವವು ಒಳಗೊಂಡಿದೆ. ಅಂಥ ಕ್ರೀಡೆಗಳಿಗೆ ಆಕರ್ಷಿಸಲ್ಪಡುವ ಯಾವನೇ ಒಬ್ಬನು ಕೀರ್ತನೆ 11:5ರ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಅದು ತಿಳಿಸುವುದು: “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.”
ಸರಿಯಾದ ಸ್ಥಾನದಲ್ಲಿ ಇಡಲ್ಪಟ್ಟಾಗ ವ್ಯಾಯಾಮವು ಆನಂದಕರವಾಗಿದೆ, ಮತ್ತು “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ” ಎಂದು ಅಪೊಸ್ತಲ ಪೌಲನು ಸಹ ಹೇಳಿದನು. (1 ತಿಮೊಥೆಯ 4:7-10) ಹಾಗಿದ್ದರೂ, ಪೌಲನು ಗ್ರೀಕ್ ಪಂದ್ಯಗಳ ಕುರಿತಾಗಿ ಮಾತನಾಡುವಾಗ, ದಮೆ ಮತ್ತು ತಾಳ್ಮೆ ಎಂಬ ಗುಣಗಳು ಕ್ರೈಸ್ತರಿಗೆ ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ದೃಷ್ಟಾಂತಿಸುವ ಉದ್ದೇಶದಿಂದ ಮಾತ್ರ ಅವುಗಳಿಗೆ ಸೂಕ್ತವಾಗಿಯೇ ಸೂಚಿಸಿ ಮಾತನಾಡಿದನು. ನಿತ್ಯಜೀವವೆಂಬ ದೇವದತ್ತ “ಜಯಮಾಲಿಕೆಯನ್ನು” ಹೊಂದುವುದೇ ಪೌಲನ ಗುರಿಯಾಗಿತ್ತು ಮತ್ತು ಅದನ್ನು ಹೊಂದುವುದಕ್ಕಾಗಿಯೇ ಅವನು ಸತತವಾಗಿ ಪ್ರಯತ್ನಿಸಿದನು. (1 ಕೊರಿಂಥ 9:24-27; 1 ತಿಮೊಥೆಯ 6:12) ಇದರಲ್ಲಿ ಅವನು ನಮಗೊಂದು ಮಾದರಿಯನ್ನಿಟ್ಟನು.
[ಪಾದಟಿಪ್ಪಣಿಗಳು]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
b ನೀಕೆ ಎಂಬುದು “ವಿಜಯ” ಎಂಬುದಕ್ಕಾಗಿರುವ ಗ್ರೀಕ್ ಪದವಾಗಿದೆ.
[ಪುಟ 31ರಲ್ಲಿರುವ ಚೌಕ/ಚಿತ್ರಗಳು]
ಮುಷ್ಟಿಕಾಳಗ ಮುಗಿಸಿದ ಜಟ್ಟಿ
ಸಾ.ಶ.ಪೂ. ನಾಲ್ಕನೆಯ ಶತಮಾನದ ಈ ಕಂಚಿನ ಶಿಲ್ಪವು, ಪುರಾತನ ಮುಷ್ಟಿಕಾಳಗದ ಧ್ವಂಸಕಾರಿ ಪ್ರಭಾವಗಳನ್ನು ತೋರಿಸುತ್ತದೆ. ಅದರಲ್ಲಿ, ರೋಮ್ ವಸ್ತುಪ್ರದರ್ಶನ ಕೈಪಿಡಿಗನುಸಾರ, “ಬಳಲಿಸುವಂತಹ ಕಾಳಗದಲ್ಲಿ ತೊಡಗಿರುವ . . . ಮುಷ್ಟಿಕಾಳಗದ ಜಟ್ಟಿಯು ಪ್ರತಿಭಟನೆಯನ್ನು ಮಾಡುವಾಗ ‘ಗಾಯಕ್ಕೆ ಪ್ರತಿಯಾಗಿ ಗಾಯ’ ಎಂಬ ತತ್ತ್ವವನ್ನು ಒಂದು ಉತ್ತಮ ಉದಾಹರಣೆ ಎಂಬುದಾಗಿ ಹೊಗಳಲಾಯಿತು.” “ಈಗ ತಾನೇ ಮುಗಿದ ಕಾಳಗವು ಹಿಂದಿನ ಕಾಳಗಗಳ ಗಾಯದ ಕಲೆಗಳಿಗೆ ಕೂಡಿಸುತ್ತದೆ,” ಎಂದು ವರ್ಣನೆಯು ಮುಂದುವರಿಯುತ್ತದೆ.
[ಪುಟ 29ರಲ್ಲಿರುವ ಚಿತ್ರ]
ಪುರಾತನ ಸ್ಪರ್ಧೆಗಳಲ್ಲಿ ರಥದೋಟವು ಅತಿ ಪ್ರತಿಷ್ಠಿತವಾದ ಕ್ರೀಡೆಯಾಗಿತ್ತು
[ಪುಟ 30ರಲ್ಲಿರುವ ಚಿತ್ರ]
ಪುರಾತನ ಕುಶಲ ಕಲಾಕಾರರು, ಗ್ರೀಕರ ರೆಕ್ಕೆಗಳುಳ್ಳ ವಿಜಯ ದೇವತೆಯಾದ ನೀಕೆಯು ವಿಜೇತನಿಗೆ ಒಂದು ಕಿರೀಟವನ್ನು ಧರಿಸುವಂತೆ ಚಿತ್ರಿಸಿದ್ದಾರೆ