ಅಧ್ಯಯನ ಲೇಖನ 24
ನಿಮ್ಮಿಂದ ಗುರಿ ಮುಟ್ಟೋಕೆ ಆಗುತ್ತೆ!
“ಹಾಗಾಗಿ ಒಳ್ಳೇದು ಮಾಡೋದನ್ನ ಬಿಡೋದು ಬೇಡ. ನಾವು ಸುಸ್ತಾಗದೆ ಇದ್ರೆ ತಕ್ಕ ಸಮಯಕ್ಕೆ ಫಲ ಕೊಯ್ತೀವಿ.”—ಗಲಾ. 6:9.
ಗೀತೆ 150 ಸಾರಲು ಹೋಗೋಣ
ಈ ಲೇಖನದಲ್ಲಿ ಏನಿದೆ?a
1. ಕೆಲವರಿಗೆ ಏನು ಕಷ್ಟ ಆಗ್ತಿದೆ?
ಯೆಹೋವನ ಆರಾಧನೆಗೆ ಸಂಬಂಧಪಟ್ಟ ಒಂದು ಗುರಿಯಿಟ್ಟು ಅದನ್ನ ಮುಟ್ಟೋಕೆ ಕಷ್ಟ ಪಡ್ತಿದ್ದೀರಾ?b ನಿಮ್ಮ ತರಾನೇ ಕೆಲವರಿಗೆ ಕಷ್ಟ ಆಗ್ತಿತ್ತು. ಉದಾಹರಣೆಗೆ ಫಿಲಿಪ್ ಚೆನ್ನಾಗಿ ಪ್ರಾರ್ಥನೆ ಮಾಡಬೇಕು, ತುಂಬ ಸಲ ಪ್ರಾರ್ಥಿಸಬೇಕು ಅನ್ನೋ ಗುರಿ ಇಟ್ಕೊಂಡಿದ್ದ. ಆದ್ರೆ ಪ್ರಾರ್ಥನೆ ಮಾಡೋಕೆ ಅವನಿಗೆ ಸಮಯನೇ ಸಿಕ್ತಾ ಇರಲಿಲ್ಲ. ಎರಿಕಾ ಕ್ಷೇತ್ರ ಸೇವಾ ಕೂಟಕ್ಕೆ ಯಾವಾಗ್ಲೂ ಬೇಗ ಬರಬೇಕು ಅನ್ನೋ ಗುರಿ ಇಟ್ಕೊಂಡಿದ್ದಳು. ಆದ್ರೆ ಯಾವಾಗ್ಲೂ ಲೇಟ್ ಆಗ್ತಿತ್ತು. ಥಾಮಸ್ಗೆ ಇಡೀ ಬೈಬಲನ್ನ ಓದಿ ಮುಗಿಸಬೇಕು ಅಂತ ಆಸೆ. ‘ಆದ್ರೆ ನಂಗೆ ಬೈಬಲ್ ಓದೋಕೇ ತುಂಬ ಬೋರ್ ಆಗ್ತಿತ್ತು. ಬೈಬಲ್ನ ಓದಿ ಮುಗಿಸೋಕೆ 3 ಸಲ ಪ್ರಯತ್ನ ಮಾಡಿದೆ. ಆದ್ರೆ ಪ್ರತೀ ಸಲನೂ ಯಾಜಕಕಾಂಡ ಪುಸ್ತಕದ ವರೆಗೂ ಓದೋಷ್ಟರಲ್ಲೇ ಸಾಕಾಗಿ ಹೋಗ್ತಿತ್ತು, ಆಮೇಲೆ ನಿಲ್ಲಿಸಿಬಿಡ್ತಿದ್ದೆ’ ಅಂತ ಥಾಮಸ್ ಹೇಳ್ತಾನೆ.
2. ನಮ್ಮಿಂದ ಒಂದು ಗುರಿನ ಮುಟ್ಟೋಕೆ ಆಗದೇ ಇದ್ದಾಗ ನಾವು ಸೋತುಹೋಗಿಬಿಟ್ವಿ ಅಂತ ಯಾಕೆ ಅಂದ್ಕೊಬಾರದು?
2 ನಿಮ್ಮಿಂದ ಒಂದು ಗುರಿನ ಮುಟ್ಟೋಕೆ ಆಗ್ತಿಲ್ಲ ಅಂದ್ರೆ ಅದರರ್ಥ ನೀವು ಕೈಲಾಗದವರು, ನೀವು ಸೋತುಹೋದ್ರಿ ಅಂತ ಅಲ್ಲ. ಯಾಕಂದ್ರೆ ಒಂದು ಚಿಕ್ಕ ಗುರಿನ ಮುಟ್ಟೋಕೂ ಸಮಯ ಕೊಡಬೇಕಾಗುತ್ತೆ, ತುಂಬ ಶ್ರಮ ಹಾಕಬೇಕಾಗುತ್ತೆ. ಹಾಗಾಗಿ ಕಷ್ಟ ಆದ್ರೂ ನೀವು ಪ್ರಯತ್ನ ಮಾಡಿದಾಗ ಯೆಹೋವನ ಮೇಲೆ ನಿಮಗೆ ತುಂಬ ಪ್ರೀತಿ ಇದೆ, ಆತನ ಸೇವೆನ ಇನ್ನೂ ಚೆನ್ನಾಗಿ ಮಾಡಬೇಕು ಅನ್ನೋ ಆಸೆ ಇದೆ ಅಂತ ನೀವು ತೋರಿಸ್ತೀರ. ಇದನ್ನ ನೋಡಿದಾಗ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ. ಹಾಗಂತ ನಿಮ್ಮಿಂದ ಮಾಡಕ್ಕಾಗದೆ ಇರೋದನ್ನ ಯೆಹೋವ ಯಾವತ್ತೂ ಕೇಳಲ್ಲ. (ಕೀರ್ತ. 103:14; ಮೀಕ 6:8) ಹಾಗಾಗಿ ನಿಮ್ಮ ಪರಿಸ್ಥಿತಿನ ನೋಡ್ಕೊಂಡು ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನ ಇಡಿ. ಆದ್ರೆ ಅಂಥ ಗುರಿಗಳನ್ನ ಮುಟ್ಟೋಕೂ ಕಷ್ಟ ಆದಾಗ ಏನ್ ಮಾಡೋದು ಅಂತ ಈಗ ನೋಡೋಣ.
ಛಲ ಇದ್ರೆ ಗುರಿ ಮುಟ್ಟೋಕಾಗುತ್ತೆ
3. ನಮ್ಮಲ್ಲಿ ಛಲ ಯಾಕೆ ಇರಬೇಕು?
3 ಗುರಿಗಳನ್ನ ಮುಟ್ಟೋಕೆ ಛಲ ಇರಬೇಕು. ಈ ಛಲ ಇದ್ರೆ ಗುರಿಗಳನ್ನ ಬೇಗ ಮುಟ್ಟಬೇಕು ಅನ್ನೋ ಆಸೆ ಜಾಸ್ತಿ ಆಗುತ್ತೆ. ಈ ಛಲನ ನಾವು ಗಾಳಿಗೆ ಹೋಲಿಸಬಹುದು. ಹಾಯಿ ದೋಣಿ ಮುಂದೆ ಹೋಗಬೇಕು ಅಂದ್ರೆ ಅದಕ್ಕೆ ಗಾಳಿ ಬೇಕು. ಅದ್ರಲ್ಲೂ ಗಾಳಿ ಇನ್ನೂ ಜೋರಾಗಿ ಬೀಸಿದ್ರೆ ಅದು ತಲುಪಬೇಕಾಗಿರೋ ಜಾಗಕ್ಕೆ ಬೇಗ ಹೋಗಿ ಮುಟ್ಟುತ್ತೆ. ಅದೇ ತರ ನಮ್ಮಲ್ಲಿ ಛಲ ಇದ್ರೆ ನಾವು ಬೇಗ ಗುರಿ ಮುಟ್ಟೋಕೆ ಆಗುತ್ತೆ. ಎಲ್ ಸಾಲ್ವಡಾರ್ನಲ್ಲಿರೋ ಸಹೋದರ ಡೇವಿಡ್ ಏನ್ ಹೇಳ್ತಾರೆ ನೋಡಿ: “ನಿಮ್ಮಲ್ಲಿ ಛಲ ಇದ್ರೆ ಏನ್ ಬೇಕಾದ್ರೂ ಮಾಡೋಕೆ ರೆಡಿ ಇರ್ತೀರ. ಯಾವ ಅಡೆತಡೆ ಬಂದ್ರೂ ಬಿಟ್ಟುಕೊಡಲ್ಲ.” ಹಾಗಾಗಿ ನಮಗೆ ಛಲ ಬರಬೇಕಂದ್ರೆ ಏನ್ ಮಾಡಬೇಕು?
4. ನಾವು ಯಾವುದಕ್ಕೋಸ್ಕರ ಪ್ರಾರ್ಥನೆ ಮಾಡಬೇಕು? (ಫಿಲಿಪ್ಪಿ 2:13) (ಚಿತ್ರನೂ ನೋಡಿ.)
4 ಛಲ ಕೊಡಪ್ಪಾ ಅಂತ ಪ್ರಾರ್ಥನೆ ಮಾಡಿ. ಆಗ ಯೆಹೋವ ದೇವರು ಪವಿತ್ರಶಕ್ತಿ ಕೊಟ್ಟು ಛಲ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾನೆ. (ಫಿಲಿಪ್ಪಿ 2:13 ಓದಿ.) ಆದ್ರೆ ಕೆಲವೊಮ್ಮೆ ನಾವು ‘ಮನುಷ್ಯನಿಗೆ ಜೀವನದಲ್ಲಿ ಗುರಿ ಇರಬೇಕು’ ಅಂತ ಗುರಿ ಇಡ್ತೀವಿ. ಆದ್ರೆ ಅದನ್ನ ಮುಟ್ಟಬೇಕು ಅನ್ನೋ ಛಲ ನಮ್ಮಲ್ಲಿ ಇರಲ್ಲ. ಉಗಾಂಡದಲ್ಲಿರೋ ಸಹೋದರಿ ನೊರಿನಾ ಬೇರೆಯವ್ರಿಗೆ ಬೈಬಲ್ ಕಲಿಸಬೇಕು ಅನ್ನೋ ಗುರಿ ಇಟ್ರು. ಆದ್ರೆ ಆ ಗುರಿ ತಲುಪಬೇಕು ಅನ್ನೋ ಛಲ ಅವ್ರಲ್ಲಿ ಇರಲಿಲ್ಲ. ಯಾಕಂದ್ರೆ ತನ್ನಿಂದ ಬೇರೆಯವ್ರಿಗೆ ಬೈಬಲ್ ಕಲಿಸೋಕೆ ಆಗಲ್ವೇನೋ ಅಂತ ಅವ್ರಿಗೆ ಅನಿಸ್ತಿತ್ತು. ಆಗ ಅವ್ರೇನು ಮಾಡಿದ್ರು? “ಛಲ ಕೊಡಪ್ಪಾ ಅಂತ ಯೆಹೋವನ ಹತ್ರ ದಿನಾ ಬೇಡ್ಕೊಳ್ತಿದ್ದೆ. ಅದ್ರ ಜೊತೆಗೆ ಒಬ್ಬ ಒಳ್ಳೇ ಟೀಚರ್ ಆಗೋಕೆ ಬೇಕಾಗಿರೋ ಕೌಶಲಗಳನ್ನ ಬೆಳೆಸ್ಕೊಂಡೆ. ಕೆಲವು ತಿಂಗಳಲ್ಲೇ ಆ ಛಲ ಬಂತು. ಆ ವರ್ಷದಲ್ಲೇ ನಾನು ಇಬ್ರಿಗೆ ಬೈಬಲ್ ಕಲಿಸೋಕೆ ಶುರು ಮಾಡಿದೆ” ಅಂತ ಆ ಸಹೋದರಿ ಹೇಳ್ತಾರೆ.
5. ಛಲ ಬರಬೇಕಂದ್ರೆ ಯಾವುದರ ಬಗ್ಗೆ ಯೋಚ್ನೆ ಮಾಡಬೇಕು?
5 ಯೆಹೋವ ನಿಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. (ಕೀರ್ತ. 143:5) ಅಪೊಸ್ತಲ ಪೌಲನೂ ಅದನ್ನೇ ಮಾಡಿದ. ಯೆಹೋವ ದೇವರು ತನಗೆ ಅಪಾರ ಕೃಪೆ ತೋರಿಸಿದ್ದನ್ನ ಅಪೊಸ್ತಲ ಪೌಲ ಯಾವಾಗ್ಲೂ ನೆನಪಿಸ್ಕೊಳ್ತಿದ್ದ. ಇದ್ರಿಂದ ಯೆಹೋವನ ಸೇವೆ ಮಾಡಲೇಬೇಕು ಅನ್ನೋ ಛಲ ಅವನಿಗೆ ಬಂತು. (1 ಕೊರಿಂ. 15:9, 10; 1 ತಿಮೊ. 1:12-14) ಅದೇ ತರ ಯೆಹೋವ ನಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅಂತ ನೆನಪಿಸ್ಕೊಬೇಕು. ಆಗ ಗುರಿ ಮುಟ್ಟಬೇಕು ಅನ್ನೋ ಛಲ ಬರುತ್ತೆ. (ಕೀರ್ತ. 116:12) ಹೊಂಡುರಾಸ್ನಲ್ಲಿ ಇರೋ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಅವ್ರಿಗೆ ಪಯನೀಯರ್ ಆಗಬೇಕು ಅನ್ನೋ ಗುರಿ ಇತ್ತು. ಅದಕ್ಕೆ ಅವ್ರೇನು ಮಾಡಿದ್ರು? “ಯೆಹೋವ ನನ್ನನ್ನ ಎಷ್ಟು ಪ್ರೀತಿಸ್ತಾನೆ ಅಂತ ಆಗಾಗ ಯೋಚ್ನೆ ಮಾಡ್ತಿದ್ದೆ. ಆತನು ನನ್ನನ್ನ ಚೆನ್ನಾಗಿ ನೋಡ್ಕೊಂಡಿದ್ದಾನೆ, ಕಾಪಾಡಿದ್ದಾನೆ. ನನ್ನನ್ನ ತನ್ನ ಜನ್ರ ಜೊತೆ ಸೇರಿಸಿದ್ದಾನೆ. ಇದನ್ನೆಲ್ಲ ನೆನಸ್ಕೊಂಡಾಗ ಆತನ ಮೇಲಿರೋ ಪ್ರೀತಿ ಜಾಸ್ತಿ ಆಯ್ತು. ಗುರಿ ಮುಟ್ಟಲೇಬೇಕು ಅನ್ನೋ ಛಲ ಬಂತು” ಅಂತ ಆ ಸಹೋದರಿ ಹೇಳ್ತಾರೆ.
6. ಇನ್ನೂ ಏನು ಮಾಡಿದ್ರೆ ಛಲ ಬರುತ್ತೆ?
6 ಗುರಿ ಮುಟ್ಟೋದ್ರಿಂದ ಏನೆಲ್ಲಾ ಪ್ರಯೋಜನ ಆಗುತ್ತೆ ಅಂತ ಯೋಚ್ನೆ ಮಾಡಿ. ಕ್ಷೇತ್ರ ಸೇವಾ ಕೂಟಕ್ಕೆ ಬೇಗ ಬರಬೇಕು ಅಂತ ಗುರಿ ಇಟ್ಟಿದ್ದ ಎರಿಕಾ ಕೂಡ ಇದನ್ನೇ ಮಾಡಿದಳು. “ನಾನು ಕೂಟಕ್ಕೆ ಲೇಟಾಗಿ ಬರ್ತಾ ಇದ್ದಿದ್ರಿಂದ, ಆ ಕೂಟದಿಂದ ಸಿಗೋ ಪ್ರಯೋಜನಗಳನ್ನೆಲ್ಲ ಕಳ್ಕೊಳ್ತಾ ಇದ್ದೆ. ಆದ್ರೆ ನಾನು ಕೂಟಕ್ಕೆ ಬೇಗ ಹೋದ್ರೆ ಸಹೋದರ ಸಹೋದರಿಯರನ್ನ ಮಾತಾಡಿಸೋಕೆ ಆಗುತ್ತೆ. ಸೇವೆನ ಚೆನ್ನಾಗಿ, ಖುಷಿಖುಷಿಯಾಗಿ ಮಾಡೋಕೆ ಟಿಪ್ಸ್ ಪಡ್ಕೊಳ್ಳೋಕೆ ಆಗುತ್ತೆ ಅಂತ ನಂಗೆ ಗೊತ್ತಾಯ್ತು” ಅಂತ ಎರಿಕಾ ಹೇಳ್ತಾಳೆ. ತನಗೆ ಸಿಗೋ ಪ್ರಯೋಜನದ ಬಗ್ಗೆ ಯೋಚನೆ ಮಾಡಿದ್ರಿಂದ ಎರಿಕಾಗೆ ತನ್ನ ಗುರಿನ ಮುಟ್ಟೋಕಾಯ್ತು. ನೀವು ಯಾವ ಗುರಿ ಇಟ್ಟಿದ್ದೀರಾ? ಬೈಬಲ್ ಓದಬೇಕು, ಪ್ರಾರ್ಥನೆ ಮಾಡಬೇಕು ಅನ್ನೋ ಗುರಿ ಇಟ್ಟಿದ್ದೀರಾ? ಹಾಗಾದ್ರೆ ಇದನ್ನ ಮಾಡೋದ್ರಿಂದ ಯೆಹೋವನ ಜೊತೆಗಿರೋ ನಿಮ್ಮ ಸ್ನೇಹ ಹೇಗೆ ಜಾಸ್ತಿಯಾಗುತ್ತೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. (ಕೀರ್ತ. 145:18, 19) ಒಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋ ಗುರಿ ಇಟ್ಟಿದ್ದೀರಾ? ಹಾಗಿದ್ರೆ ಅದ್ರಿಂದ ಜನ್ರ ಜೊತೆಗಿರೋ ನಿಮ್ಮ ಸ್ನೇಹ ಎಷ್ಟು ಚೆನ್ನಾಗಿ ಆಗುತ್ತೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. (ಕೊಲೊ. 3:14) ಈ ರೀತಿ ನೀವು ಏನೇ ಗುರಿ ಇಟ್ರೂ ಅದ್ರಿಂದ ಏನೇನ್ ಪ್ರಯೋಜನ ಸಿಗುತ್ತೆ ಅಂತ ಒಂದ್ ಕಡೆ ಬರೆದಿಡಿ. ಅದನ್ನ ಆಗಾಗ ನೋಡ್ತಾ ಇರಿ. “ಗುರಿನ ಮುಟ್ಟೋದ್ರಿಂದ ನನಗೆ ಏನೆಲ್ಲಾ ಪ್ರಯೋಜನ ಸಿಗುತ್ತೆ ಅನ್ನೋದನ್ನ ನೆನಸ್ಕೊಂಡಾಗ ಅದೆಷ್ಟೇ ಕಷ್ಟ ಆದ್ರೂ ಆ ಗುರಿ ಮುಟ್ಟಬೇಕು ಅನ್ನೋ ಛಲ ಬರುತ್ತೆ” ಅಂತ ಸಹೋದರ ಥಾಮಸ್ ಹೇಳ್ತಾನೆ.
7. ಜೂಲಿಯೋ ಮತ್ತು ಅವ್ರ ಹೆಂಡ್ತಿಗೆ ಗುರಿ ಮುಟ್ಟೋಕೆ ಯಾರು ಸಹಾಯ ಮಾಡಿದ್ರು?
7 ಗುರಿ ಮುಟ್ಟೋಕೆ ಸಹಾಯ ಮಾಡೋ ಫ್ರೆಂಡ್ಸ್ ಜೊತೆ ಸಮಯ ಕಳೀರಿ. (ಜ್ಞಾನೋ. 13:20) ಸಹೋದರ ಜೂಲಿಯೋ ಮತ್ತು ಅವ್ರ ಹೆಂಡ್ತಿ ಇದನ್ನೇ ಮಾಡಿದ್ರು. ಅವ್ರಿಗೆ ಯೆಹೋವನ ಸೇವೆನ ಜಾಸ್ತಿ ಮಾಡಬೇಕು ಅನ್ನೋ ಗುರಿ ಇತ್ತು. ಸಹೋದರ ಜೂಲಿಯೋ ಏನ್ ಹೇಳ್ತಾರೆ ಅಂದ್ರೆ, “ನಮ್ಮ ಗುರಿಗಳನ್ನ ಮುಟ್ಟೋಕೆ ಸಹಾಯ ಮಾಡೋ ಸ್ನೇಹಿತರನ್ನೇ ನಾವು ಮಾಡ್ಕೊಂಡ್ವಿ. ಅವ್ರ ಹತ್ರ ನಮ್ಮ ಗುರಿಗಳ ಬಗ್ಗೆ ಮಾತಾಡ್ತಿದ್ವಿ. ಅವ್ರಲ್ಲಿ ತುಂಬ ಜನ ನಮ್ಮ ತರದ ಗುರಿಗಳನ್ನೇ ಇಟ್ಟು ಮುಟ್ಟಿದ್ರು. ಹಾಗಾಗಿ ಅವರು ನಮಗೆ ಒಳ್ಳೇ ಸಲಹೆಗಳನ್ನ ಕೊಡ್ತಿದ್ರು. ಅಷ್ಟೇ ಅಲ್ಲ, ಗುರಿ ಮುಟ್ಟೋಕೆ ಏನೇನ್ ಮಾಡ್ತಾ ಇದ್ದೀರ ಅಂತನೂ ಕೇಳ್ತಿದ್ರು. ಸರಿಯಾದ ಸಮಯಕ್ಕೆ ಪ್ರೋತ್ಸಾಹನೂ ಕೊಡ್ತಿದ್ರು.”
ಛಲ ಕಮ್ಮಿ ಆದಾಗ
8. ನಮ್ಮಲ್ಲಿ ಛಲ ಇದ್ದಾಗ ಮಾತ್ರ ಗುರಿ ಮುಟ್ಟೋಕೆ ಪ್ರಯತ್ನ ಮಾಡಿದ್ರೆ ಏನಾಗುತ್ತೆ? (ಚಿತ್ರನೂ ನೋಡಿ.)
8 ಛಲ ಇದ್ದಾಗ ಮಾತ್ರ ಗುರಿ ಮುಟ್ಟೋಕೆ ನಾವು ಪ್ರಯತ್ನ ಹಾಕಿದ್ರೆ ಗುರಿ ಮುಟ್ಟೋಕೆ ಆಗೋದೇ ಇಲ್ಲ. ಆದ್ರೆ ಗುರಿ ಮುಟ್ಟೋ ತನಕ ನಮ್ಮಲ್ಲಿ ಯಾವಾಗ್ಲೂ ಛಲ ಇರುತ್ತೆ ಅಂತ ಹೇಳಕ್ಕಾಗಲ್ಲ. ಒಂದಿನ ಇರುತ್ತೆ, ಇನ್ನೊಂದಿನ ಇರಲ್ಲ. ಹಾಗಂತ ನಮ್ಮಿಂದ ಗುರಿ ಮುಟ್ಟೋಕೇ ಆಗಲ್ಲ ಅಂತಾನಾ? ಹಾಗೇನಿಲ್ಲ. ಸಮುದ್ರದಲ್ಲಿ ಗಾಳಿ ಯಾವಾಗ್ಲೂ ಜೋರಾಗಿ ಬೀಸುತ್ತೆ ಅಂತ ಹೇಳಕ್ಕಾಗಲ್ಲ. ಕೆಲವೊಮ್ಮೆ ನಿಧಾನವಾಗಿ ಬೀಸುತ್ತೆ, ಇನ್ನು ಕೆಲವೊಮ್ಮೆ ಗಾಳಿನೇ ಇರಲ್ಲ. ಹಾಗಂತ ಹಾಯಿ ದೋಣಿಯಲ್ಲಿ ದಡ ಸೇರೋಕೇ ಆಗಲ್ಲ ಅಂತೇನಿಲ್ಲ. ಗಾಳಿ ಇಲ್ಲದೇ ಇದ್ದಾಗ ಮೋಟಾರು ಅಥವಾ ಹುಟ್ಟನ್ನ ಬಳಸಿ ನಾವಿಕ ದಡಕ್ಕೆ ಹೋಗಿ ಸೇರ್ತಾನೆ. ಅದೇ ತರ ಛಲ ಕಮ್ಮಿ ಆದಾಗ್ಲೂ ನಮ್ಮಿಂದ ಗುರಿ ಮುಟ್ಟೋಕೆ ಆಗುತ್ತೆ. ಅದಕ್ಕೋಸ್ಕರ ನಾವು ಕೆಲವು ವಿಷ್ಯಗಳನ್ನ ಮಾಡಬೇಕು. ಅದು ನಮಗೆ ಇಷ್ಟ ಇಲ್ಲಾಂದ್ರೂ ಮಾಡಬೇಕು. ಅದೇನು ಅಂತ ತಿಳ್ಕೊಳ್ಳೋ ಮುಂಚೆ ನಮಗೆ ಬರೋ ಒಂದು ಸಂಶಯದ ಬಗ್ಗೆ ನೋಡೋಣ.
9. ಗುರಿ ಮುಟ್ಟೋಕೆ ಮನಸ್ಸಿಲ್ಲದೆ ಇದ್ದಾಗ್ಲೂ ನಾವು ಮಾಡೋ ಪ್ರಯತ್ನನ ಯೆಹೋವ ಮೆಚ್ಕೊಳ್ತಾನಾ? ವಿವರಿಸಿ.
9 ನಾವು ಯೆಹೋವನ ಸೇವೆಯನ್ನ ಖುಷಿಖುಷಿಯಾಗಿ ಮನಸ್ಸಾರೆ ಮಾಡಬೇಕು ಅಂತ ಆತನು ಆಸೆ ಪಡ್ತಾನೆ. (ಕೀರ್ತ. 100:2; 2 ಕೊರಿಂ. 9:7) ಆದ್ರೆ ಛಲ ಕಡಿಮೆ ಆದಾಗ ನಮಗೆ ಏನು ಮಾಡೋಕೂ ಮನಸ್ಸೇ ಆಗಲ್ಲ. ಅರೆಮನಸ್ಸಿಂದ ಗುರಿ ಮುಟ್ಟೋಕೆ ಪ್ರಯತ್ನ ಮಾಡ್ತೀವಿ. ಈ ತರ ಮನಸ್ಸಿಲ್ಲದೆ ಇದ್ದಾಗ್ಲೂ ನಾವು ಮಾಡೋ ಪ್ರಯತ್ನನ ಯೆಹೋವ ಮೆಚ್ಕೊಳ್ತಾನಾ ಅನ್ನೋ ಸಂಶಯ ನಮಗೆ ಬರಬಹುದು. ಅಪೊಸ್ತಲ ಪೌಲನಿಗೂ ಕೂಡ ಕೆಲವೊಮ್ಮೆ ಛಲ ಕಮ್ಮಿ ಆಗಿಬಿಡ್ತಿತ್ತು. ಮನಸ್ಸಿಲ್ಲದೆ ಇದ್ರೂ ಯೆಹೋವನ ಸೇವೆ ಮಾಡೋಕೆ ಅವನು ಪ್ರಯತ್ನ ಹಾಕ್ತಿದ್ದ. “ನನ್ನ ದೇಹವನ್ನೇ ಜಜ್ಜಿ ಜಜ್ಜಿ ದಾಸನ ತರ ಮಾಡ್ಕೊಳ್ತೀನಿ” ಅಂತ ಅವನು ಹೇಳಿದ. (1 ಕೊರಿಂ. 9:25-27) ಅವನು ಮಾಡಿದ ಸೇವೆಯನ್ನ ಯೆಹೋವ ಮೆಚ್ಕೊಂಡ್ನಾ? ಹೌದು, ಅವನನ್ನ ಆಶೀರ್ವದಿಸಿದನು.—2 ತಿಮೊ. 4:7, 8.
10. ಮನಸ್ಸಿಲ್ಲದೆ ಇದ್ರೂ ಗುರಿ ಮುಟ್ಟೋಕೆ ನಾವು ಪ್ರಯತ್ನ ಹಾಕೋದ್ರಿಂದ ಏನು ಒಳ್ಳೇದಾಗುತ್ತೆ?
10 ಛಲ ಕಡಿಮೆ ಆದಾಗ್ಲೂ ನಾವು ಹಾಕೋ ಪ್ರಯತ್ನನ ಯೆಹೋವ ಮೆಚ್ಕೊಳ್ತಾನೆ. ಯಾಕಂದ್ರೆ ಗುರಿ ಮುಟ್ಟೋಕೆ ನಾವೇನು ಮಾಡ್ತಾ ಇದ್ದೀವೋ ಅದು ನಮಗೆ ಇಷ್ಟ ಇಲ್ಲದೆ ಇರಬಹುದು. ಆದ್ರೆ ಅದನ್ನ ಯೆಹೋವನ ಮೇಲಿರೋ ಪ್ರೀತಿಯಿಂದ ಮಾಡ್ತಾ ಇದ್ದೀವಿ. ಅದನ್ನ ಯೆಹೋವ ನೋಡ್ತಾನೆ. ಪೌಲನ ತರ ನಮ್ಮನ್ನೂ ಆಶೀರ್ವದಿಸ್ತಾನೆ. (ಕೀರ್ತ. 126:5) ನಾವು ಒಂದು ಸಲ ಯೆಹೋವನ ಆಶೀರ್ವಾದದ ರುಚಿ ನೋಡಿದ್ರೆ ಸಾಕು, ಆಮೇಲೆ ಛಲ ತನ್ನಿಂದ ತಾನೇ ಬಂದುಬಿಡುತ್ತೆ. ಪೋಲೆಂಡ್ನಲ್ಲಿರೋ ಸಹೋದರಿ ಲೂಸಿಯಾನಗೂ ಹೀಗೇ ಆಯ್ತು. “ಕೆಲವೊಮ್ಮೆ ಫೀಲ್ಡ್ಗೆ ಹೋಗೋಕೆ ಮನಸ್ಸೇ ಆಗಲ್ಲ. ಅದ್ರಲ್ಲೂ ಸುಸ್ತು ಆದಾಗಂತೂ ಹೋಗೋದೇ ಬೇಡ ಅನಿಸುತ್ತೆ. ಆದ್ರೂ ನಾನು ಹೋಗ್ತೀನಿ. ಆದ್ರೆ ಸೇವೆ ಮುಗಿಸ್ಕೊಂಡು ಮನೆಗೆ ಬರುವಾಗ ತುಂಬ ಖುಷಿಯಾಗಿ ಇರ್ತೀನಿ. ಈ ಸಂತೋಷ ಯೆಹೋವ ಕೊಟ್ಟಿರೋ ಆಶೀರ್ವಾದನೇ” ಅಂತ ಆ ಸಹೋದರಿ ಅಂದ್ರು. ಹಾಗಾದ್ರೆ ನಾವೀಗ, ಛಲ ಕಮ್ಮಿ ಆದಾಗ ಏನು ಮಾಡಬೇಕು ಅಂತ ನೋಡೋಣ.
11. ನಾವು ಸ್ವನಿಯಂತ್ರಣ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು?
11 ಸ್ವನಿಯಂತ್ರಣ ಬೆಳೆಸ್ಕೊಳ್ಳೋಕೆ ಯೆಹೋವನ ಸಹಾಯ ಕೇಳಿ. ಸ್ವನಿಯಂತ್ರಣ ಅಂದ್ರೆ ನಾವು ನಡ್ಕೊಳ್ಳೋ ರೀತಿಯನ್ನ, ನಮ್ಮ ಭಾವನೆಗಳನ್ನ ಹಿಡಿತದಲ್ಲಿ ಇಟ್ಕೊಂಡು ಇರೋದು. ಸಾಮಾನ್ಯವಾಗಿ, ಏನಾದ್ರೂ ಕೆಟ್ಟದು ಮಾಡಬೇಕು ಅಂತ ಅನಿಸಿದಾಗ ಅದನ್ನ ಮಾಡದೇ ಇರೋಕೆ ಸ್ವನಿಯಂತ್ರಣ ಬೇಕು ಅಂತ ಹೇಳ್ತೀವಿ. ಆದ್ರೆ ಒಂದು ಒಳ್ಳೇ ವಿಷ್ಯವನ್ನ ಮಾಡೋಕೆ ಮನಸ್ಸು ಇಲ್ಲದೆ ಇದ್ದಾಗ್ಲೂ ಅದನ್ನ ಮಾಡೋಕೆ ನಮಗೆ ಸ್ವನಿಯಂತ್ರಣ ಬೇಕು. ಸ್ವನಿಯಂತ್ರಣ ಪವಿತ್ರಶಕ್ತಿಯಿಂದ ಬರೋ ಒಂದು ಗುಣ. ಹಾಗಾಗಿ ಅದನ್ನ ಬೆಳೆಸ್ಕೊಳ್ಳೋಕೆ ನಮಗೆ ಯೆಹೋವನ ಸಹಾಯ ಬೇಕೇ ಬೇಕು. (ಲೂಕ 11:13; ಗಲಾ. 5:22, 23) ಡೇವಿಡ್ಗೆ ಬೈಬಲನ್ನ ತಪ್ಪದೆ ಓದೋಕೆ, ಅದನ್ನ ಓದಿ ಮುಗಿಸೋಕೆ ಕಷ್ಟ ಆಗ್ತಿತ್ತು. ಅದಕ್ಕೆ ಅವರು ಪ್ರಾರ್ಥನೆ ಮಾಡ್ತಿದ್ರು. “ನಂಗೆ ಸ್ವನಿಯಂತ್ರಣ ಬೆಳೆಸ್ಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಕೇಳಿದೆ. ಇದ್ರಿಂದ ಬೈಬಲನ್ನ ದಿನಾ ಓದೋ ಶೆಡ್ಯೂಲ್ ಹಾಕೊಂಡು ಅದ್ರಲ್ಲಿ ಇರೋ ತರಾನೇ ತಪ್ಪದೆ ಓದೋಕೆ ನಂಗೆ ಸಹಾಯ ಆಯ್ತು” ಅಂತ ಅವರು ಹೇಳ್ತಾರೆ.
12. ಪ್ರಸಂಗಿ 11:4ರಲ್ಲಿರೋ ತತ್ವ ನಮಗೆ ಗುರಿ ಮುಟ್ಟೋಕೆ ಹೇಗೆ ಸಹಾಯ ಮಾಡುತ್ತೆ?
12 ಸರಿಯಾದ ಸಮಯ ಬರಲಿ ಅಂತ ಕಾಯ್ತಾ ಇರಬೇಡಿ. ನೀವು ಆ ತರ ಕಾಯ್ತಾ ಕೂತ್ರೆ ನಿಮ್ಮ ಗುರಿನ ಮುಟ್ಟೋಕೇ ಆಗಲ್ಲ. ಯಾಕಂದ್ರೆ ಈ ಲೋಕದಲ್ಲಿ ಪರಿಸ್ಥಿತಿ ಯಾವಾಗ್ಲೂ ನಾವು ಅಂದ್ಕೊಂಡ ಹಾಗೆ ಇರಲ್ಲ. (ಪ್ರಸಂಗಿ 11:4 ಓದಿ.) ಸಹೋದರ ಡ್ಯಾನಿಯಲ್ ಹೀಗೆ ಹೇಳ್ತಾರೆ: “ಸರಿಯಾದ ಸಮಯ ಅಂತ ಯಾವುದೂ ಇಲ್ಲ. ನಾವು ಮಾಡಬೇಕು ಅಂದ್ಕೊಂಡಿರೋ ಕೆಲಸನ ನಾವು ಮಾಡ್ತಾ ಮುಂದೆ ಹೋಗ್ತಾ ಇರಬೇಕು.” ಹಾಗಾಗಿ ನಾವು ಒಂದು ಕೆಲಸನ ‘ನಾಳೆ ಮಾಡೋಣ ನಾಡಿದ್ದು ಮಾಡೋಣ’ ಅಂತ ಯಾವತ್ತೂ ಅಂದ್ಕೊಬಾರದು. ಅದಕ್ಕಿರೋ ಇನ್ನೊಂದು ಕಾರಣ ಏನು ಅಂತ ಉಗಾಂಡದಲ್ಲಿರೋ ಸಹೋದರ ಪೌಲ್ ಹೇಳ್ತಾರೆ. ಅವರು ಹೇಳಿದ್ದು: “ಪರಿಸ್ಥಿತಿ ಕೈಕೊಟ್ರೂ ನಾವು ಪ್ರಯತ್ನ ಮಾಡಿದ್ರೇನೇ ಯೆಹೋವ ನಮ್ಮನ್ನ ಆಶೀರ್ವಾದಿಸೋದು.”—ಮಲಾ. 3:10.
13. ಚಿಕ್ಕಚಿಕ್ಕ ಗುರಿಗಳನ್ನ ಇಡೋದ್ರಿಂದ ಏನು ಪ್ರಯೋಜನ?
13 ಚಿಕ್ಕಚಿಕ್ಕ ಗುರಿಗಳನ್ನ ಇಟ್ಟು ಅದನ್ನ ಮುಟ್ಟೋಕೆ ಪ್ರಯತ್ನ ಮಾಡಿ. ಕೆಲವೊಮ್ಮೆ ನಾವು ತುಂಬ ದೊಡ್ಡ ಗುರಿಗಳನ್ನ ಇಟ್ಟಾಗ ಅದನ್ನ ಮುಟ್ಟೋಕೆ ಕಷ್ಟ ಅಂತ ಅನಿಸಬಹುದು. ಅದಕ್ಕೆ ಮೊದಲು ಚಿಕ್ಕಚಿಕ್ಕ ಗುರಿಗಳನ್ನ ಇಡಿ. ಉದಾಹರಣೆಗೆ ಒಂದು ಗುಣ ಬೆಳೆಸ್ಕೊಬೇಕು ಅಂತ ನೀವು ಗುರಿ ಇಟ್ಟಿದ್ರೆ, ಆ ಗುಣನ ಚಿಕ್ಕಚಿಕ್ಕ ವಿಷ್ಯಗಳಲ್ಲಿ ತೋರಿಸೋಕೆ ಪ್ರಯತ್ನ ಮಾಡಿ. ಒಂದುವೇಳೆ ನೀವು ಬೈಬಲನ್ನ ಓದಿ ಮುಗಿಸಬೇಕು ಅನ್ನೋ ಗುರಿ ಇಟ್ಟಿದ್ರೆ, ಮೊದ್ಲು ಸ್ವಲ್ಪ ಸ್ವಲ್ಪ ಸಮಯ ಮಾತ್ರ ಅದನ್ನ ಓದೋಕೆ ಶೆಡ್ಯೂಲ್ ಮಾಡ್ಕೊಳ್ಳಿ. ಒಂದು ವರ್ಷದಲ್ಲಿ ಬೈಬಲನ್ನ ಓದಿ ಮುಗಿಸೋಕೆ ಥಾಮಸ್ಗೆ ತುಂಬ ಕಷ್ಟ ಆಗ್ತಿತ್ತು. ಆಗ ಅವನು ಏನು ಮಾಡಿದನು? “ಮುಂಚೆ ನಾನು ಬೇಗ ಓದಿ ಮುಗಿಸಬೇಕು ಅಂತ ಅಂದ್ಕೊಂಡು ಓದ್ತಾ ಇದ್ದೆ. ಅದಕ್ಕೆ ನಂಗೆ ಆ ಗುರಿನ ಮುಟ್ಟೋಕೆ ಆಗ್ತಾ ಇರಲಿಲ್ಲ. ಆದ್ರೆ ಆಮೇಲೆ, ಪ್ರತಿದಿನ ಸ್ವಲ್ಪ ಸ್ವಲ್ಪ ಮಾತ್ರ ಓದಬೇಕು ಅಂತ ಗುರಿ ಇಟ್ಟೆ. ಓದಿದ್ರ ಬಗ್ಗೆ ಚೆನ್ನಾಗಿ ಯೋಚ್ನೆನೂ ಮಾಡ್ತಾ ಇದ್ದೆ. ಇದ್ರಿಂದ ಬೈಬಲ್ನ ಓದುವಾಗ ಬೋರ್ ಆಗ್ತಾ ಇರಲಿಲ್ಲ” ಅಂತ ಥಾಮಸ್ ಹೇಳ್ತಾನೆ. ಹೋಗ್ತಾ ಹೋಗ್ತಾ ಥಾಮಸ್ ಜಾಸ್ತಿ ಹೊತ್ತು ಓದೋಕೆ ರೂಢಿ ಮಾಡ್ಕೊಂಡ. ಬೈಬಲ್ ಓದೋದಂದ್ರೆ ಅವನಿಗೆ ತುಂಬ ಇಷ್ಟ ಆಯ್ತು. ಹೀಗೆ ಇಡೀ ಬೈಬಲನ್ನೇ ಓದಿ ಮುಗಿಸಿದ.c
ಗುರಿ ಮುಟ್ಟೋಕೆ ಆಗದಿದ್ದಾಗ ಬೇಜಾರ್ ಮಾಡ್ಕೊಬೇಡಿ
14. ಗುರಿ ಮುಟ್ಟೋಕೆ ನಮಗೆ ಯಾವಾಗೆಲ್ಲ ಕಷ್ಟ ಆಗಬಹುದು?
14 ಕೆಲವೊಮ್ಮೆ ನಮಗೆ ಎಷ್ಟೇ ಛಲ ಇದ್ರೂ, ಶಿಸ್ತು ಬೆಳೆಸ್ಕೊಂಡಿದ್ರೂ ಗುರಿ ಮುಟ್ಟೋಕೆ ಕಷ್ಟ ಆಗುತ್ತೆ. ಉದಾಹರಣೆಗೆ ನಮ್ಮ ಜೀವನದಲ್ಲಿ “ಅನಿರೀಕ್ಷಿತ ಘಟನೆಗಳು” ನಡೆದಾಗ ಗುರಿ ಮುಟ್ಟೋಕೆ ಸಮಯನೇ ಸಿಗಲ್ಲ. (ಪ್ರಸಂ. 9:11) ಇನ್ನು ಕೆಲವೊಮ್ಮೆ ನಮ್ಮ ಜೀವನದಲ್ಲಿ ಕಷ್ಟ ಬಂದಾಗ ನಾವು ಬೇಜಾರಲ್ಲಿ ಕುಗ್ಗಿಹೋಗ್ತೀವಿ. ಆಗ ನಮಗೆ ಗುರಿ ಮುಟ್ಟೋಕೆ ಶಕ್ತಿನೇ ಇಲ್ಲದೆ ಹೋಗಿಬಿಡುತ್ತೆ. (ಜ್ಞಾನೋ. 24:10) ಇನ್ನೂ ಕೆಲವೊಮ್ಮೆ ನಮ್ಮಲ್ಲಿರೋ ಅಪರಿಪೂರ್ಣತೆಯಿಂದ ಏನಾದ್ರೂ ತಪ್ಪು ಮಾಡಿಬಿಡ್ತೀವಿ. (ರೋಮ. 7:23) ಅಥವಾ ನಮಗೆ ತುಂಬ ಸುಸ್ತಾಗಿ ಬಿಡುತ್ತೆ. (ಮತ್ತಾ. 26:43) ಆಗ ನಮಗೆ ಗುರಿ ಮುಟ್ಟೋಕೆ ಕಷ್ಟ ಆಗುತ್ತೆ. ಹೀಗಾದಾಗ ಏನು ಮಾಡೋದು?
15. ಅಡೆತಡೆಗಳು ಬಂದಾಗ ಏನು ಮಾಡಬೇಕು? ವಿವರಿಸಿ. (ಕೀರ್ತನೆ 145:14)
15 ಏನೇ ಅಡೆತಡೆ ಬಂದ್ರೂ ಸೋತು ಹೋಗಬೇಡಿ. ಬೈಬಲ್ ಹೇಳೋ ತರ ನಮಗೆ ಜೀವನದಲ್ಲಿ ಒಂದಲ್ಲ ಒಂದು ಕಷ್ಟ ಬಂದೇ ಬರುತ್ತೆ. ಆದ್ರೆ ಯೆಹೋವನ ಸಹಾಯ ಇದ್ರೆ ಅದನ್ನೆಲ್ಲ ಗೆಲ್ಲಕ್ಕಾಗುತ್ತೆ. (ಕೀರ್ತನೆ 145:14 ಓದಿ.) ಸಹೋದರ ಫಿಲಿಪ್ ಹೇಳೋದು ಏನಂದ್ರೆ, “ಗುರಿ ಮುಟ್ಟುವಾಗ ನಾನು ಎಷ್ಟು ಸಲ ಬಿದ್ದೆ ಅಂತ ತಲೆ ಕೆಡಿಸ್ಕೊಳ್ಳಲ್ಲ. ನಾನು ಮತ್ತೆ ಎಷ್ಟು ಸಾರಿ ಎದ್ದೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡ್ತೀನಿ.” ಸಹೋದರ ಡೇವಿಡ್ ಕೂಡ “ನನಗೆ ಬರೋ ಸಮಸ್ಯೆಗಳನ್ನ ನಾನು ಅಡೆತಡೆಯಾಗಿ ನೋಡಲ್ಲ. ಬದಲಿಗೆ ಯೆಹೋವನನ್ನ ನಾನೆಷ್ಟು ಪ್ರೀತಿಸ್ತೀನಿ ಅಂತ ತೋರಿಸೋ ಅವಕಾಶವಾಗಿ ನೋಡ್ತೀನಿ” ಅಂತ ಹೇಳ್ತಾರೆ. ನಿಮಗೂ ಏನೇ ಅಡೆತಡೆ ಬಂದ್ರೂ ಗುರಿ ಮುಟ್ಟೋದನ್ನ ಬಿಡಬೇಡಿ. ಆಗ ನೀವು ಯೆಹೋವನನ್ನ ಎಷ್ಟು ಪ್ರೀತಿಸ್ತೀರ ಅಂತ ತೋರಿಸ್ತೀರ. ನೀವು ಮಾಡೋ ಪ್ರಯತ್ನನ ನೋಡಿದಾಗ ಆತನಿಗೆ ಎಷ್ಟು ಸಂತೋಷ ಆಗುತ್ತಲ್ವಾ!
16. ಅಡೆತಡೆಗಳು ಬಂದಾಗ ನಮಗೆ ಏನು ಗೊತ್ತಾಗುತ್ತೆ?
16 ಎಲ್ಲಿ, ಏನು ಬದಲಾಯಿಸ್ಕೊಬೇಕು ಅಂತ ಯೋಚ್ನೆ ಮಾಡಿ. ‘ಈ ಅಡೆತಡೆ ಯಾಕೆ ಬಂತು? ಮುಂದೆ ಈ ತರ ಅಡೆತಡೆ ಬರದೇ ಇರೋಕೆ ನಾನು ಏನು ಮಾಡಬೇಕು?’ ಅಂತ ಯೋಚ್ನೆ ಮಾಡಿ. (ಜ್ಞಾನೋ. 27:12) ಆಗ ಕೆಲವು ಬದಲಾವಣೆ ಮಾಡ್ಕೊಬೇಕು ಅಂತ ನಿಮಗೆ ಗೊತ್ತಾಗಬಹುದು. ಅಥವಾ ಆ ಗುರಿಯನ್ನೇ ಬದಲಾಯಿಸ್ಕೊಬೇಕು ಅಂತ ಗೊತ್ತಾಗಬಹುದು. ಒಂದುವೇಳೆ ನಿಮ್ಮಿಂದ ಮುಟ್ಟೋಕೆ ಆಗದಿರೋ ಗುರಿಗಳನ್ನ ನೀವು ಇಟ್ಟಿದ್ದೀರ ಅಂತ ಗೊತ್ತಾದ್ರೆ ನಿಮ್ಮ ಗುರಿನ ಬದಲಾಯಿಸ್ಕೊಳ್ಳಿ.d ಹೀಗೆ ಮಾಡಿದ್ರೆ ಯೆಹೋವ ದೇವರು ನೀವು ಸೋತುಹೋಗಿಬಿಟ್ರಿ ಅಂತ ಅಂದ್ಕೊಳ್ಳಲ್ಲ. ಯಾಕಂದ್ರೆ ನಿಮ್ಮಿಂದ ಮಾಡೋಕೆ ಆಗದೇ ಇರೋದನ್ನ ಯಾವತ್ತೂ ಕೇಳಲ್ಲ.—2 ಕೊರಿಂ. 8:12.
17. ನಾವು ಈಗಾಗ್ಲೇ ಮುಟ್ಟಿರೋ ಗುರಿಗಳನ್ನ ಯಾಕೆ ನೆನಪಿಸ್ಕೊಳ್ತಾ ಇರಬೇಕು?
17 ಈಗಾಗ್ಲೇ ನೀವು ಯಾವೆಲ್ಲ ಗುರಿಗಳನ್ನ ಮುಟ್ಟಿದ್ದೀರ ಅಂತ ನೆನಪಿಸ್ಕೊಳ್ಳಿ. ಯೆಹೋವನಿಗೋಸ್ಕರ ‘ನೀವು ಮಾಡಿರೋ ಕೆಲಸನ ಆತನು ಮರಿಯಲ್ಲ. ಯಾಕಂದ್ರೆ ಆತನು ಅನ್ಯಾಯ ಮಾಡಲ್ಲ’ ಅಂತ ಬೈಬಲ್ ಹೇಳುತ್ತೆ. (ಇಬ್ರಿ. 6:10) ಆತನಿಗೋಸ್ಕರ ಏನೆಲ್ಲ ಮಾಡಿದ್ದೀರ ಅನ್ನೋದನ್ನ ನೀವೂ ಮರಿಬೇಡಿ. ಅದನ್ನ ಆಗಾಗ ನೆನಪಿಸ್ಕೊಳ್ಳಿ. ಉದಾಹರಣೆಗೆ, ಆತನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಂಡ್ರಿ, ಆತನ ಬಗ್ಗೆ ಬೇರೆಯವ್ರ ಹತ್ರ ಹೇಳಿದ್ರಿ, ದೀಕ್ಷಾಸ್ನಾನ ತಗೊಂಡ್ರಿ. ಈ ಗುರಿಗಳನ್ನ ಮುಟ್ಟಿದ್ದೀರ ಅಂದ್ಮೇಲೆ ಈಗ ಇಟ್ಟಿರೋ ಗುರಿಯನ್ನೂ ಮುಟ್ಟಕ್ಕಾಗುತ್ತೆ. ಅದಕ್ಕೆ ಪ್ರಯತ್ನ ಮಾಡ್ತಾ ಇರಿ.—ಫಿಲಿ. 3:16.
18. ನಾವು ಗುರಿ ಮುಟ್ಟೋಕೆ ಪ್ರಯತ್ನ ಹಾಕುವಾಗ ಏನನ್ನ ಗಮನಿಸಬೇಕು? (ಚಿತ್ರನೂ ನೋಡಿ.)
18 ಒಬ್ಬ ನಾವಿಕ ಏನೇ ಅಡೆತಡೆ ಬಂದ್ರೂ ಅದನ್ನ ಜಯಿಸಿ ದಡ ಸೇರೋ ಹಾಗೆನೇ ನಾವು ಕೂಡ ಯೆಹೋವ ದೇವರ ಸಹಾಯದಿಂದ ಏನೇ ಅಡೆತಡೆ ಬಂದ್ರೂ ನಮ್ಮ ಗುರಿನ ಮುಟ್ಟೋಕೆ ಆಗುತ್ತೆ. ಆದ್ರೆ ಎಷ್ಟೋ ನಾವಿಕರು ಈ ತರ ಅಡೆತಡೆಗಳನ್ನ ಜಯಿಸುವಾಗ್ಲೂ ತಮ್ಮ ಸುತ್ತಮುತ್ತ ಇರೋ ಸೃಷ್ಟಿನ ನೋಡಿ ಎಂಜಾಯ್ ಮಾಡ್ತಾರೆ. ಅದೇ ತರ ನೀವು ಕೂಡ ನಿಮ್ಮ ಗುರಿನ ಮುಟ್ಟೋಕೆ ಪ್ರಯತ್ನ ಹಾಕುವಾಗ ಯೆಹೋವ ನಿಮಗೆ ಹೇಗೆಲ್ಲ ಸಹಾಯ ಮಾಡ್ತಿದ್ದಾನೆ, ಹೇಗೆಲ್ಲ ಆಶೀರ್ವದಿಸ್ತಾ ಇದ್ದಾನೆ ಅನ್ನೋದಕ್ಕೆ ಗಮನ ಕೊಡಿ, ಖುಷಿ ಪಡಿ. (2 ಕೊರಿಂ. 4:7) ಏನೇ ಆದ್ರೂ ಪ್ರಯತ್ನ ಬಿಡಬೇಡಿ. ಆಗ ಯೆಹೋವ ನಿಮ್ಮನ್ನ ಇನ್ನೂ ಆಶೀರ್ವದಿಸ್ತಾನೆ.—ಗಲಾ. 6:9.
ಗೀತೆ 43 ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ
a ಯೆಹೋವನ ಸೇವೆನ ಜಾಸ್ತಿ ಮಾಡೋಕೆ ಕೆಲವು ಗುರಿಗಳನ್ನ ಇಡಿ ಅಂತ ನಮ್ಮ ಸಂಘಟನೆ ಹೇಳುತ್ತೆ. ಅದೇ ತರ ನಾವು ಕೆಲವು ಗುರಿಗಳನ್ನ ಇಟ್ಟಿರ್ತೀವಿ. ಆದ್ರೆ ಆ ಗುರಿಗಳನ್ನ ಮುಟ್ಟೋಕೆ ನಮಗೆ ಕಷ್ಟ ಆದಾಗ ಏನ್ ಮಾಡೋದು?
b ಪದ ವಿವರಣೆ: ಆರಾಧನೆಗೆ ಸಂಬಂಧಪಟ್ಟ ಗುರಿಗಳು ಅಂದ್ರೆ ಯೆಹೋವನ ಸೇವೆನ ಇನ್ನೂ ಚೆನ್ನಾಗಿ ಮಾಡೋಕೆ, ಆತನ ಮನಸ್ಸನ್ನ ಖುಷಿಪಡಿಸೋಕೆ ನಾವಿಡೋ ಗುರಿಗಳು. ಉದಾಹರಣೆಗೆ ಅದ್ರಲ್ಲಿ, ಯೆಹೋವನಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸ್ಕೊಳ್ಳೋದು, ಬೈಬಲ್ ಓದೋದು, ಸಿಹಿಸುದ್ದಿನ ಇನ್ನೂ ಚೆನ್ನಾಗಿ ಸಾರೋದೂ ಸೇರಿದೆ.
c ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ ಪುಟ 10-11ರಲ್ಲಿರೋ ಪ್ಯಾರ 5 ನೋಡಿ.
d ಈ ವಿಷ್ಯದ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಜುಲೈ 15, 2008ರ ಕಾವಲಿನಬುರುಜುವಿನಲ್ಲಿ ಇರೋ “ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಟ್ಟು ಸಂತೋಷದಿಂದಿರ್ರಿ” ಅನ್ನೋ ಲೇಖನ ನೋಡಿ.